ಪುಂಸ್ತ್ರೀ – ೧೮

ಪುಂಸ್ತ್ರೀ – ೧೮

ವಿಲೀನನಾದನು ವೇಣುನಾದದಲಿ

ಭೀಷ್ಮ

ಇದು ಅವಳೇ ಇರಬಹುದೆ? ಹಾಗೆ ಅಂದು ನನ್ನೆದುರು ನಿಂತು ಮೊದಲ ಬಾರಿಗೆ ನನ್ನನ್ನು ಏಕವಚನದಲ್ಲಿ ಕರೆದು ಪ್ರತಿಜ್ಞೆಯಂತಹ ಮಾತುಗಳನ್ನಾಡಿ ಧಗಧಗನೆ ಉರಿಯುತ್ತಿದ್ದ ಚಿತೆಯನ್ನು ಪ್ರವೇಶಿಸಿದಳಲ್ಲಾ, ಆ ಅಂಬೆಯೇ ಹೀಗೆ ಶಿಖಂಡಿಯಾಗಿ ಹುಟ್ಟಿರಬಹುದೆ?

‘ಜಾತಸ್ಯಹಿ ಧ್ರುವೋ ಮೃತ್ಯು | ದ್ರುವಂ ಜನ್ಮ ಮೃತಸ್ಯಚ |’

ಹುಟ್ಟಿದವರಿಗೆ ಸಾವಿರುವುದು ನಿಜ. ಸತ್ತವರು ಮತ್ತೆ ಹುಟ್ಟುತ್ತಾರೆಯೆ? ಯಾರಿಗೆ ಗೊತ್ತು? ಅಂಬೆಯೇ ಶಿಖಂಡಿಯಾಗಿ ಹುಟ್ಟಿದ್ದರೆ, ಅಮ್ಮ ಗಂಗಾದೇವಿ, ಅಪ್ಪ ಶಂತನು ಚಕ್ರವರ್ತಿಗಳು, ರಾಜಮಾತೆ ಸತ್ಯವತೀದೇವಿ ಎಲ್ಲಾದರೂ ಹುಟ್ಟಿರಲೇಬೇಕಲ್ಲಾ? ಎಲ್ಲಿ ಹುಟ್ಟಿರಬಹುದು, ಏನಾಗಿರಬಹುದು? ಮರುಹುಟ್ಟು ಇದೆ ಎಂದಾದರೆ ನಾವು ಬಯಸಿದಲ್ಲಿ, ಬಯಸಿದ ರೂಪದಲ್ಲಿ ಜನಿಸಲು ಸಾಧ್ಯವೆ? ಒಂದೂ ಅರ್ಥವಾಗುತ್ತಿಲ್ಲ.

ಹುಟ್ಟಿಗೆ ಕಾರಣ ಮಿಲನ. ಸಾವಿಗೋ ಸಾವಿರ ಕಾರಣಗಳು. ಹುಟ್ಟಿದಂದಿನಿಂದಲೇ ಸಾವಿನ ಕಾರಣಗಳು ಸಂಚಯವಾಗುತ್ತಾ ಹೋಗುತ್ತವೆ. ಅಮ್ಮ ಗಂಗಾದೇವಿ ನನ್ನನ್ನು ಪರಿತ್ಯಜಿಸಿ ಹೋದಲ್ಲಿಂದ ಆರಂಭವಾಯಿತು ನನ್ನ ಮರಣದ ಮುನ್ನುಡಿ. ಶಂತನು ಚಕ್ರವರ್ತಿಗಳಿಗಾಗಿ ನಾನು ಮಾಡಿದ ಪ್ರತಿಜ್ಞೆ, ಕಾಶೀರಾಜ ಪ್ರತಾಪ ಸೇನನ ವಿಚಿತ್ರ ಸ್ವಯಂವರ ಪಣ, ಅಂಬೆಯ ದುರಂತ, ಕೌರವಪಾಂಡವ ವೈಮನಸ್ಸು-ಕುರು ಸಾಮ್ರಾಜ್ಯದ ಭದ್ರ ಪಂಚಾಂಗದ ಒಂದೊಂದೇ ಕಲ್ಲುಗಳನ್ನು ಕಿತ್ತೆಸೆಯುತ್ತಾ ಹೋದವು. ಒಳಗಿನಿಂದಲೇ ಸಾಮ್ರಾಜ್ಯ ಛಿದ್ರವಾಗುತ್ತಾ ಹೋಯಿತು, ಗೆದ್ದಲು ಹಿಡಿದ ಮರದಂತೆ.

ಸಾವೆಂದರೇನು? ದೇಹದಿಂದ ಆತ್ಮನ ಬಿಡುಗಡೆಯೆ? ಉರಿಯುತ್ತಿರುವ ಚಿತೆಯನ್ನು ಅಂಬೆ ಪ್ರವೇಶಿಸಿದಾಗ ದೇಹ ಉರಿದು ಹೋಯಿತಲ್ಲಾ? ಆಗ ಅವಳ ಆತ್ಮಕ್ಕೇನಾಯಿತು? ನೈನಂ ಛಿಂದಂತಿ ಶಸ್ತ್ರಾಣಿ, ಶಸ್ತ್ರಾಸ್ತ್ರಗಳು ತುಂಡರಿಸಲಾರವು. ನೈನಂ ದಹತಿ ಪಾವಕ; ಬೆಂಕಿ ಸುಡಲಾರದು. ನ ಚೈನಂ ಕ್ಲೇದಯಂತ್ಯಾಪೋ, ಜಲ ಒದ್ದೆಯಾಗಿಸದು. ನ ಶೋಪಯತಿ ಮಾರುತಃ ಗಾಳಿ ಹಾರಿಸಲಾರದು. ಹಾಗಾದರೆ ಅಂಬೆಯ ಆತ್ಮ ಈ ಶಿಖಂಡಿಯಾಗಿ ಜನಿಸಿತೆ? ಶಿಖಂಡಿಯ ದೇಹದಲ್ಲಿರುವುದು ಅಂಬೆಯ ಆತ್ಮವೆಂದಾದರೆ ಇಷ್ಟು ದಿನಗಳ ಯುದ್ಧದಲ್ಲಿ ಮಡಿದರಲ್ಲಾ, ಅವರ ಆತ್ಮಗಳು ಎಲ್ಲಿ ಹೋದವು? ಅಭಿಮನ್ಯು, ಘಟೋತ್ಕಚ, ದ್ರೋಣ, ದುಶ್ಯಾಶನ, ಕರ್ಣರ ಆತ್ಮಗಳು ಯಾರ ಗರ್ಭಸ್ಥ ದೇಹಗಳೊಳಕ್ಕೆ ಸೇರಿಕೊಂಡಿರಬಹುದು? ಛೆ! ಎಲ್ಲವೂ ಉತ್ತರ ಸಿಗದ ಪ್ರಶ್ನೆಗಳು. ಆತ್ಮ, ಪರಮಾತ್ಮ ಮತ್ತು ಪುನರ್ಜನ್ಮವೆಂಬುದು ಕೇವಲ ನಂಬಿಕೆಯೇ ಆಗಿರಬಹುದು. ಆದರೆ ಅಂಬೆಯಾಡಿದ ಕೊನೆಯ ಮಾತುಗಳು ನಿಜವಾಗುತ್ತಿವೆ. ನಾನು ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಶಿಖಂಡಿಯಿಂದಾಗಿ ಸಾಯುತ್ತಿದ್ದೇನೆ.

ಸಾಕು ಈ ಉತ್ತರ ಸಿಗದ ಆಧ್ಯಾತ್ಮ. ಯುದ್ಧದ ಕೊನೆ ಹೇಗಾಗುತ್ತದೆಯೊ? ಶಲ್ಯ ಮತ್ತು ದುರ್ಯೋಧನ ಹೊರಟು ಹೋದ ಮೇಲೆ ಎಲ್ಲಾ ಕಡೆ ನಿರ್ವಾತ ಸೃಷ್ಟಿಯಾದಂತೆನ್ನಿಸುತ್ತದೆ. ಕರ್ಣನಿಂದ ಸಾಧ್ಯವಾಗಲಾರದ್ದನ್ನು ಶಲ್ಯಭೂಪತಿ ಎಂದಿಗೂ ಸಾಧಿಸಲಾರ. ಒಂದು ವೇಳೆ ಸಮಯಕ್ಕೆ ಸರಿಯಾಗಿ ಬಲರಾಮ ಬಂದು ಯುದ್ಧವು ಧರ್ಮ ಪ್ರಕಾರವೇ ನಡೆದರೂ ದುರ್ಯೋಧನ ಗೆಲ್ಲುವುದಿಲ್ಲ. ಭೀಮಸೇನನನ್ನು ಈ ಹಿಂದೆ ಒಂದೇ ಒಂದು ಬಾರಿಯೂ ದುರ್ಯೋಧನನಿಂದ ಸೋಲಿಸಲಾಗಿರಲಿಲ್ಲ. ಈಗ ದುಶ್ಯಾಸನನ, ಕರ್ಣನ ಮರಣದಿಂದ ನೈತಿಕವಾಗಿ ಉಡುಗಿ ಹೋಗಿರುವ ದುರ್ಯೋಧನ ಆ ಭೀಮನನ್ನು ಗೆಲ್ಲುವುದುಂಟೆ?

ಆ ಶಲ್ಯ ತಾನಾಗಿಯೇ ದುರಂತವನ್ನು ಆಹ್ವಾನಿಸಿಕೊಂಡವ. ಅವ ಪಾಂಡವರ ಪಕ್ಷದಲ್ಲಿರಬೇಕಾಗಿದ್ದವ. ದುರ್ಯೋಧನನ ಮಾತಿಗೆ ಬೋಳನಂತೆ ತಲೆಯಾಡಿಸಿ ಪಕ್ಷನಿಷ್ಠೆ ಬದಲಾಯಿಸಿ ಹಾಸ್ಯದ ವಸ್ತುವಾದ. ಆದರೆ ಅವನನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಒಮ್ಮೆ ದುರ್ಯೋಧನನ ಪಕ್ಷ ವಹಿಸಿದ ಮೇಲೆ ಅವನು ನಿಷ್ಠೆ ಬದಲಾಯಿಸಲಿಲ್ಲ. ಸರ್ಪಮುಖೀ ಬಾಣದಿಂದ ಅರ್ಜುನ ಸತ್ತು ದುರ್ಯೋಧನನಿಗೆ ಗೆಲುವಾಗಲೆಂದು ಪ್ರಾಮಾಣಿಕವಾಗಿ ಬಯಸಿದವನು ಅವನು. ಮಹಾವೀರನೇನಲ್ಲದಿದ್ದರೂ ಒಳ್ಳೆಯ ಸಾರಥಿ. ನಾಳೆ ತಾನು ಬದುಕುಳಿಯಲಾರೆನೆನ್ನುವುದು ಗೊತ್ತಿದ್ದೂ ಯುದ್ಧಕ್ಕೆ ಹೊರಟಿದ್ದಾನೆ. ಈ ರಾತ್ರಿ ಅವನು ಮದ್ರ ದೇಶಕ್ಕೆ ಹಿಂದಿರುಗಿ ಬಿಡಬಹುದಿತ್ತು. ಅಥವಾ ಪಾಂಡವ ಪಾಳಯ ಸೇರಿ ಬದುಕಿಕೊಳ್ಳಬಹುದಿತ್ತು. ಅವನ ಸೇನೆ ಸಂಪೂರ್ಣವಾಗಿ ನಾಶವಾಗಿ ಹೋಗಿದೆ. ಅವನು ಮರಣ ಮುಖದಲ್ಲೂ ಕ್ಷಾತ್ರತ್ವಕ್ಕೆ ಬದ್ಧನಾಗಿದ್ದಾನೆ. ಅವನ ಮಟ್ಟಿಗೆ ಅವನದೊಂದು ಆದರ್ಶ ಗುಣವೇ ಹೌದು. ಆದರೆ ಸದ್ಗುಣಗಳು ಮಾತ್ರವೇ ಯುದ್ಧ ಗೆಲ್ಲಲು ಸಾಕಾಗುವುದಿಲ್ಲ.

ಹಾಗಾದರೆ ಕರ್ಣನ ಮರಣದೊಂದಿಗೆ ಯುದ್ಧ ಮುಕ್ತಾಯವಾದ ಹಾಗೆಯೇ. ಅಲ್ಲಿಗೆ ಧೃತರಾಷ್ಟ್ರನ ಬಳಿಕ ಪಟ್ಟವೇರುವುದು ಯುಧಿಷ್ಠಿರನೆಂಬುದು ನಿಶ್ಚಯವಾದಂತಾಯಿತು. ಹಸ್ತಿನಾವತಿಯ ಸಿಂಹಾಸನಕ್ಕೆ ಮಾನವ ರಕ್ತ ಸಿಂಚನವಾಗಿದೆ. ಅದರಲ್ಲಿ ಕುಳಿತವನು ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ಅವನನ್ನು ಅಶಾಂತಿ, ದುಸ್ವಪ್ನಗಳು ಕಾಡಲಿವೆ.

ಯುದ್ಧ ಆರಂಭವಾಗಿ ಹದಿನೇಳು ದಿನಗಳು ಸಂದು ಹೋದವು. ಹತ್ತನೆಯ ದಿನ ಶಿಖಂಡಿಯ ಬಿಲ್ಲಿನಿಂದ ಹೊರಟ ಈ ಬಾಣ ಎದೆಗೇ ಚುಚ್ಚಿತು. ಈಗ ಸ್ವಲ್ಪ ಅಲುಗಾಡಲು ಪ್ರಾರಂಭಿಸಿದೆ. ಇದು ಬಿದ್ದು ಹೋಗುವಾಗ ನನ್ನ ಪ್ರಾಣ ಹಾರಿ ಹೋಗುತ್ತದೆ. ಪ್ರಾಣವೇ ಆತ್ಮವೆ? ಹಾಳಾಗಿ ಹೋಗಲಿ. ಒಂದು ಕ್ಷಣದ ವಿಸ್ಮೃತಿಯದು. ಎದುರಿಗೆ ಬಂದು ನಿಂತ ವಿಚಿತ್ರಾ ಕೃತಿಯನ್ನು ಕಂಡಾಗಿನ ಮೈಮರೆವು ಯುದ್ಧದ ಹಣೆಬರಹವನ್ನೇ ಬದಲಾಯಿಸಿಬಿಟ್ಟಿದೆ. ಶಂತನು ಚಕ್ರವರ್ತಿಗಳು ಸತ್ಯವತಿಯನ್ನು ಕಂಡಾಗಿನ ವಿಸ್ಮೃತಿ ಕುರು ಸಾಮ್ರ್‍ಆಜ್ಯದ ಭವಿಷ್ಯವನ್ನೇ ಪರಿವರ್ತಿಸಿದಂತೆ.

ನಾನೇ ಈ ಹದಿನೇಳು ದಿನ ಸೇನಾನಾಯಕನಾಗಿ ಹೋರಾಡುತ್ತಿದ್ದರೆ ದುರ್ಯೋಧನ ವಿಜಯಶಾಲಿಯಾಗುತ್ತಿದ್ದನೆ? ಹತ್ತು ದಿನ ದುರ್ಯೋಧನನ ಕಡೆಯ ಪ್ರಮುಖರ ಪ್ರಾಣ ರಕ್ಷಿಸಲು ನನ್ನಿಂದ ಸಾಧ್ಯವಾಯಿತು. ಆದರೆ ಪಾಂಡವರ ಪಕ್ಷದ ಯಾವ ಮಹಾ ವಿಕ್ರಮಿಗಳನ್ನು ನಾನು ವಧಿಸಿದೆ? ನಾನೇ ಈಗಲೂ ಸೇನಾ ನಾಯಕನಾಗಿರುತ್ತಿದ್ದರೆ ಅಭಿಮನ್ಯು, ಲಕ್ಷಣಕುಮಾರ, ಜಯದ್ರಥ, ಘಟೋತ್ಕಚ, ದ್ರೋಣ, ಕರ್ಣರು ಉಳಿದುಕೊಳ್ಳುತ್ತಿದ್ದರೇನೊ? ದ್ರೋಣನನ್ನು ಉಳಿಸುವುದು ಕಷ್ಟವಿತ್ತು. ದ್ರೋಣವಧೆಗಾಗಿಯೇ ದ್ರುಪದನಿಂದ ಸಿದ್ಧಗೊಂಡ ಧೃಷ್ಟದ್ಯುಮ್ನ ದ್ರೋಣನನ್ನು ವಧಿಸದೆ ಬಿಡುತ್ತಿರಲಿಲ್ಲ. ಅವ ದ್ರೋಣನನ್ನು ಕ್ಷಮಿಸುತ್ತಿದ್ದರೂ ಭೀಮ ದುಶ್ಯಾಸನನನ್ನು ಉಳಿಯಗೊಡುತ್ತಿರಲಿಲ್ಲ. ನಾಳೆ ದುರ್ಯೋಧನನಿಗೆ ಎಂತಹ ಸಾವು ಕಾದಿದೆಯೊ? ಅವನನ್ನು ಭೀಮನಿಂದ ರಕ್ಷಿಸುವವರು ಯಾರು? ಪ್ರತಿಜ್ಞೆಗೆ ಬದ್ಧರಾಗಿರುವವರು ನ್ಯಾಯ-ಅನ್ಯಾಯ, ಧರ್ಮ-ಅಧರ್ಮಗಳ ವಿವೇಚನೆ ಮಾಡುವುದುಂಟೆ?

ಇಂದಿನ ಈ ಸ್ಥಿತಿಗೆ ನನ್ನ ಪ್ರತಿಜ್ಞೆಯೇ ಕಾರಣವಾಯಿತೆ? ನನ್ನ ಪ್ರತಿಜ್ಞೆಗೆ ಕಾರಣರು ಯಾರು? ನನ್ನ ಅಮ್ಮ! ಅವಳು ಗಂಗಾತಟದಲ್ಲಿ ಅಪ್ಪನಿಗೆ ಕಾಣ ಸಿಕ್ಕಿದವಳು. ನಿಜ ಹೆಸರೇನೊ? ಗಂಗಾದೇವಿ ಎಂದು ಅಪ್ಪ ಕರೆಯುತ್ತಿದ್ದ. ಯಾವ ದೇಶದವಳೊ? ಯಾವ ಕುಲದವಳೊಲ? ಅಪ್ಪ ಮೋಹಿತನಾಗಿ ಮದುವೆಯಾದ. ನನ್ನನ್ನು ಹೆತ್ತು ಸ್ವಲ್ಪ ವರ್ಷ ಸಲಹಿದಳು. ಒಂದು ದಿನ ಇದ್ದಕ್ಕಿದ್ದ ಹಾಗೆ ವೈರಾಗ್ಯ ಬಂದು ನನ್ನನ್ನು, ಅಪ್ಪನನ್ನು ಬಿಟ್ಟು ಯೋಗಿನಿಯಾಗಿ ಹಿಮಾಲಯದತ್ತ ನಡೆದು ಹೋದಳು. ನನ್ನ ಅಳು, ಅಪ್ಪನ ಯಾಚನೆಗಳಿಗೆ ಅವಳ ವೈರಾಗ್ಯವನ್ನು ಗೆಲ್ಲುವ ಶಕ್ತಿಯಿರಲಿಲ್ಲ. ಬಹುಶಃ ಅವಳಿಗೆ ಸಂಸಾರ ಬಂಧನ ಇಷ್ಟವಿರಲಿಲ್ಲ. ಅಪ್ಪನ ಒತ್ತಾಯಕ್ಕೆ ಕಟ್ಟು ಬಿದ್ದವಳಿಗೆ ತಡವಾಗಿ ಜ್ಞಾನೋದಯವಾಗಿರಬೇಕು. ಯೋಗಿನಿಯಾಗಿ ಏನು ಸಾಧನೆ ಮಾಡಿದಳೊ? ಅವಳಿಗೆ ಹಸ್ತಿನಾವತಿಯ ಸಾಮ್ರಾಜ್ಞಿ ಪಟ್ಟ ಸುಖ ಕೊಟ್ಟಿರಲಿಕ್ಕಿಲ್ಲ. ಆದರೂ ಅವಳದು ತಪ್ಪೇ. ಅವಳು ಪಟ್ಟ ಮಹಿಷಿಯಾಗಿ ಉಳಿಯುತ್ತಿದ್ದರೆ ಅಪ್ಪ ಬೆಸ್ತರ ಹುಡುಗಿ ಸತ್ಯವತಿಗೆ ಮನ ಸೋಲುವ ಸಂದರ್ಭವೇ ಉದ್ಭವವಾಗುತ್ತಿರಲಿಲ್ಲ.

ಸತ್ಯವತಿ ಅಪ್ಪನಿಗೆ ದೊರೆಯಬೇಕಿದ್ದರೆ ನಾನು ಪ್ರತಿಜ್ಞೆ ಮಾಡಲೇಬೇಕಿತ್ತು. ಅಮ್ಮ ಯೋಗಿನಿಯಾಗಿ ಹಸ್ತಿನಾವತಿ ತ್ಯಜಿಸಿ ಹೋದ ಮೇಲೆ ಅಪ್ಪ ನನ್ನನ್ನು ಎಷ್ಟು ಚೆನ್ನಾಗಿ ಬೆಳೆಸಿದ! ಅಮ್ಮನಿಲ್ಲದ ದುಃಖವನ್ನು ಮರೆಯುವಂತೆ ಮಾಡಿದ. ಅವನು ನನಗೆ ಅಮ್ಮನೂ ಆದ. ಅವನಲ್ಲಿ ರೂಪ, ಯೌವ್ವನ, ಶಕ್ತಿಯಿತ್ತು. ಯಾರನ್ನು ಬೇಕಾದರೂ ಅಂತಃಪುರಕ್ಕೆ ಸೇರಿಸಬಲ್ಲ ಅಧಿಕಾರವಿತ್ತು. ಅವನು ಅಧಿಕಾರದ ದುರುಪಯೋಗ ಮಾಡಲಿಲ್ಲ. ಆದರೆ ಒಬ್ಬಳು ಸತ್ಯವತಿಗೆ ಮನ ಸೋತುಬಿಟ್ಟ! ಅವಳು ಪರಾಶರ ಮುನಿಯಿಂದ ಒಬ್ಬ ಮಗನನ್ನು ಪಡೆದವಳು ಎನ್ನುವುದನ್ನು ಅರಿತಮೇಲೂ ಅವಳನ್ನು ಬಯಸಿದ. ಅದುವರೆಗಿನ ಅವನ ಮನೋನಿಗ್ರಹ ಭಂಗವಾಯಿತು. ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ ಎಂದು ಗುರು ಪರಶುರಾಮರು ಹೇಳುತ್ತಿದ್ದರು. ಮನುಷ್ಯನ ಸುಖಕ್ಕೂ ದುಃಖಕ್ಕೂ ಅವನ ಮನಸ್ಸೇ ಕಾರಣ. ಮನೋವ್ಯಾಧಿಗೆ ತುತ್ತಾಗಿ ಶಂತನು ಚಕ್ರವರ್ತಿ ಸತ್ತು ಹೋಗುವುದು ನನ್ನಿಂದ ಸಹಿಸಲಸಾಧ್ಯವಾದ ವಿಷಯವಾಗಿತ್ತು. ನನ್ನನ್ನು ಅಮ್ಮನಂತೆ ನೋಡಿಕೊಂಡ ಅಪ್ಪನಿಗಾಗಿ ನಾನು ಪ್ರತಿಜ್ಞೆ ಮಾಡಿದೆ. ಬ್ರಹ್ಮಚಾರಿಯಾಗಿಯೇ ಸಾಯುತ್ತಿದ್ದೇನೆ.

ಸತ್ಯವತಿ ಒಳ್ಳೆಯವಳು. ಶಂತನು ಚಕ್ರವರ್ತಿಗಳಿಂದಾಗಿ ತನ್ನ ಉದರದಲ್ಲಿ ಜನಿಸಿದವನೇ ಹಸ್ತಿನಾವತಿಯ ಪಟ್ಟವೇರಬೇಕೆಂಬ ಹಠ ಅವಳಿಗಿರಲಿಲ್ಲ. ಅವಳು “ಅಪ್ಪ ದಾಶರಾಜನಿಂದಾಗಿ ನಿನಗೆ ಜೀವನಾನುಭವಗಳು ನಷ್ಟವಾದುವಲ್ಲ ಮಗೂ” ಎಂದು ಎಷ್ಟೋ ಸಲ ಪ್ರಲಾಪಿಸಿದ್ದಳು. ಶಂತನು ಚಕ್ರವರ್ತಿಯಿಂದ ಚಿತ್ರಾಂಗದ, ವಿಚಿತ್ರವೀರ್ಯರನ್ನು ಪಡೆದಳು. ಕುರು ಸಾಮ್ರಾಜ್ಯದ ದುರದೃಷ್ಟ. ಚಿತ್ರಾಂಗದ ತನಗಿಂತ ಬಲಶಾಲಿಗಳಾದ ಗಂಧರ್ವರೊಡನೆ ಕಾಲು ಕೆರೆದು ಯುದ್ಧ ಮಾಡಿ ಸತ್ತು ಹೋದ. ರೋಗಗ್ರಸ್ತ ವಿಚಿತ್ರವೀರ್ಯ ಬದುಕಿದ್ದೂ ಪ್ರಯೋಜನವಿಲ್ಲದವನಾದ. ದೋಷ ಯಾವುದರದು, ಬೀಜದ್ದೇ ಅಥವಾ ಕ್ಷೇತ್ರದ್ದೆ? ಬೀಜದ ದೋಷವೆಂದಾಗುತ್ತಿದ್ದರೆ ನನ್ನಂತಹ ಮಗ ಶಂತನು ಚಕ್ರವರ್ತಿಗೆ ಜನಿಸುತ್ತಿರಲಿಲ್ಲ. ಕ್ಷೇತ್ರದ ದೋಷವೆಂದಾಗುತ್ತಿದ್ದರೆ ಸತ್ಯವತಿಗೆ ದ್ವೈಪಾಯನನಂತಹ ಮಹಾಮೇಧಾವಿ ಪುತ್ರ ವಿವಾಹ ಪೂರ್ವದಲ್ಲಿ ಹುಟ್ಟುತ್ತಿರಲಿಲ್ಲ.

ಹಾಗಾದರೆ ಹೀಗೇಕಾಯಿತು? ವಿಚಿತ್ರ ವೀರ್ಯನೇಕೆ ಷಂಡನಾದ? ಸತ್ಯವತಿ ಮಾನಸಿಕವಾಗಿ ಶಂತನು ಚಕ್ರವರ್ತಿಯನ್ನು ಪತಿಯೆಂದು ಒಪ್ಪಿಕೊಂಡಿರಲಿಲ್ಲವೆ? ಮಹಾ ಬುದ್ಧಿವಂತ ಪರಾಶರ ಮುನಿಗೆ ತನುಮನ ಅರ್ಪಿಸಿದವಳು ಅವಳು. ಅವರಿಂದ ಶಸ್ತ್ರಾಭ್ಯಾಸ ಮಾಡಿಸಿಕೊಂಡವಳು. ಮುನಿಯ ಪ್ರೋತ್ಸಾಹದಿಂದ ಕಾವ್ಯ ರಚಿಸುವ ಹಂತಕ್ಕೆ ಏರಿದವಳು. ಪರಾಶರ ಮುನಿಗೆ ಕಾವ್ಯಸ್ಫೂರ್ತಿಯಾಗಿದ್ದವಳು. ಬೇಕೆಂದಾಗಲೆಲ್ಲಾ ಯಮುನೆಯ ಕೃಷ್ಣದ್ವೀಪದಲ್ಲಿ ಅವರಿಬ್ಬರು ಒಂದಾಗುತ್ತಿದ್ದರಂತೆ. ಸತ್ಯವತಿ ನನ್ನಿಂದ ಯಾವುದನ್ನೂ ಬಚ್ಚಿಡಲಿಲ್ಲ. ಈಗ ನಾನು ಸಾವಿನ ಸಮೀಪದಲ್ಲಿದ್ದೇನೆ. ಪರಶುರಾಮರನ್ನು ಬಿಟ್ಟರೆ ಆರ್ಯಾವರ್ತದಲ್ಲಿ ಅತ್ಯಂತ ದೀರ್ಘಾ ಯುಷಿ ನಾನೇ. ಇಷ್ಟು ದೀರ್ಘ ಕಾಲದ ಜೀವಿತದಲ್ಲಿ ಒಂದೇ ಒಂದು ಕಾವ್ಯ ರಚಿಸಲು ಗುರುಗಳಿಂದಲೂ ಆಗಲಿಲ್ಲ. ನನ್ನಿಂದಲೂ ಆಗಲಿಲ್ಲ. ಪರಾಶರ ಮುನಿಗೆ ಸತ್ಯವತಿ ಕಾವ್ಯವಾದಳು. ದ್ವೈಪಾಯನರ ಪ್ರತಿಭೆ ಮೂವರು ಹೆಣ್ಣುಗಳಿಂದಾಗಿ ವಿಕಸಿಸಿತು. ಗುರುಗಳದ್ದು ಮತ್ತು ನನ್ನದು ಕಾವ್ಯ ಸೃಷ್ಟಿಯ ಮಟ್ಟಿಗೆ ಷಂಡ ಬಾಳಾಗಿಬಿಟ್ಟಿತು. ಗಂಡು ಹೆಣ್ಣಿನಲ್ಲಿ ಕಾವ್ಯ ಅರಳಿಸುತ್ತಾನೆ. ಹೆಣ್ಣು ಗಂಡಿಗೆ ಕಾವ್ಯವಾಗುತ್ತಾಳೆ. ಗಂಡು ಹೆಣ್ಣಿನಿಂದ ಸ್ಫೂರ್ತಿ ಪಡೆದು, ಅವಳನ್ನು ಬದಲಾಯಿಸುತ್ತಾನೆ. ಬ್ರಹ್ಮಚಾರಿತ್ವದ ಪರಿಣಾಮವಿರಬಹುದು. ನನ್ನಿಂದ, ಗುರುಗಳಿಂದ ಅದಾಗಲಿಲ್ಲ.

ಪಾಪ. ಸತ್ಯವತಿಗೆ ಹಸ್ತಿನಾವತಿಯ ಅಂತಃಪುರ ಕಾರಾಗೃಹದಂತಾಗಿರಬೇಕು. ಎಷ್ಟೆಂದರೂ ಯಮುನೆಯ ಮಧ್ಯದ ಕೃಷ್ಣದ್ವೀಪದಲ್ಲಿ, ತಾನೇ ಪ್ರಕೃತಿಯಾಗಿ ಪುರುಷನನ್ನು ಸಮಾಗಮಿಸುತ್ತಿದ್ದವಳು! ಪರಾಶರ ಮುನಿಯ ಕವಿ ಹೃದಯಕ್ಕೆ ಅರಳಿಕೊಂಡವಳು ಅರಮನೆಯ ಏಕತಾನತೆಗೆ ಮುದುಡಿರಬೇಕು. ಮುನಿ ಅವಳ ಭಾವಕ್ಕೂ ದೇಹಕ್ಕೂ ಪತಿಯಾಗಿದ್ದ. ಅಪ್ಪ ದೇಹವನ್ನು ಮಾತ್ರ ಬಯಸಿರಬೇಕು. ನಾನು ಮಾಡಿದ ಪ್ರತಿಜ್ಞೆಯ ವಿಷಯ ಅವನಿಗೆ ತಿಳಿದ ಮೇಲೆ ಅವನ ಮನಸ್ಸೂ ಅರಳಿಕೊಳ್ಳಲಿಲ್ಲವೆನಿಸುತ್ತದೆ. ಮಗನ ಸುಖಕ್ಕೆ ತಾನು ಶಾಶ್ವತವಾಗಿ ಅಡ್ಡಿಯಾದೆ ಎಂಬ ಪಾಪಪ್ರಜ್ಞೆ ಅವನನ್ನು ಕಾಡಿತೆ? ಅಥವಾ ಅಪ್ಪನ ಮನಸ್ಸಿನ ತುಂಬಾ ಗಂಗಾದೇವಿಯೇ ತುಂಬಿಕೊಂಡಿರಬೇಕು. ಸತ್ಯವತಿಗೆ ತನ್ನಲ್ಲಿ ಕಾವ್ಯ ಅರಳಿಸಿದ ಪರಾಶರ ಮುನಿಗಳದ್ದೇ ಧ್ಯಾನವಾಗಿರಬೇಕು. ದೇಹ ಮತ್ತು ಭಾವ ಒಂದಾಗದಿದ್ದರೆ ಒಳ್ಳೆಯ ಸಂತಾನ ಹುಟ್ಟಲು ಹೇಗೆ ಸಾಧ್ಯ? ಅದಕ್ಕೇ ವಿಚಿತ್ರವೀರ್ಯ ಹಾಗಾಗಿ ಬಿಟ್ಟ. ಸತ್ಯವತಿಯನ್ನು ಆಡಿಕೊಂಡು ಪ್ರಯೋಜನವೇನಿಲ್ಲ. ಕುರು ಸಾಮ್ರಾಜ್ಯದ ಸಮ್ರಾಜ್ಞಿಯಾಗಲು ಮೆರವಣಿಗೆಯಲ್ಲಿ ಬರುವಾಗ ಅವಳ ಮುಖದಲ್ಲಿ ಸಂಭ್ರಮವೇ ಇರಲಿಲ್ಲ.

ಸತ್ಯವತಿಯ ವಿಷಯದಲ್ಲಿ ಅಪ್ಪ ದುಡುಕಿದ. ಮನಸ್ಸಿನ ಕೈಗೆ ಬುದ್ಧಿಯನ್ನು ಕೊಟ್ಟು ಬಿಟ್ಟ. ಅವಳು ಮದುವೆಯ ಬಂಧನವೇ ಬೇಡವೆಂದು ತೀರ್ಮಾನಿಸಿದ್ದವಳು. ಸ್ವತಂತ್ರಳಾಗಿ ಪರಾಶರ ಮುನಿಗೆ ಸ್ಫೂರ್ತಿಯಾಗಿ, ತಾನೂ ಕಾವ್ಯ ರಚಿಸುತ್ತಾ ಸುಖವಾಗಿದ್ದವಳು. ಅಪ್ಪನ ಏಕಮುಖ ಪ್ರೇಮ, ದಾಶರಾಜನ ಏಕಪಕ್ಷೀಯ ನಿರ್ಧಾರ, ನನ್ನ ಏಕವ್ಯಕ್ತಿ ಪ್ರತಿಜ್ಞೆ. ಕ್ಷಣದ ಆವೇಶದಲ್ಲಿ ನನ್ನದು ಮಹಾನ್‌ ಆದರ್ಶವೆಂದು ಭ್ರಮಿಸಿ ಪ್ರತಿಜ್ಞೆ ಮಾಡಿಬಿಟ್ಟೆ. ಅಮ್ಮ ಗಂಗಾದೇವಿ ಯೋಗಿನಿಯಾಗಿ ಹಿಮಾಲಯದತ್ತ ನಡೆದು ಹೋಗದಿರುತ್ತಿದ್ದರೆ ಇದಾವುದೂ ನಡೆಯುತ್ತಲೇ ಇರಲಿಲ್ಲ.

ಅಪ್ಪನ ದೇಹಾಂತ್ಯವಾದಾಗ ರಾಜಮಾತೆ ಸತ್ಯವತಿ ಅವರೊಂದಿಗೆ ನಿನ್ನ ಅರ್ಥಹೀನ ಪ್ರತಿಜ್ಞೆಯೂ ಅಂತ್ಯಗೊಳ್ಳಲಿ ಮಗೂ. ಇನ್ನು ಅದನ್ನು ಪಾಲಿಸುವುದರಲ್ಲಿಯಾವ ಅರ್ಥವೂ ಇಲ್ಲ. ಸಿಂಹಾಸನವೇ ಕಂಪಿಸುತ್ತಿರುವಾಗ ವೈಯಕ್ತಿಕ ಪ್ರತಿಜ್ಞೆ ಮುಖ್ಯವಾಗಬಾರದು. ನೀನು ಪಟ್ಟವೇರು ಎಂದಿದ್ದಳು. ಚಿತ್ರಾಂಗದ ಹತನಾದಾಗಲೂ ಸಿಂಹಾಸನವೇರಲು ನನಗೆ ಸೂಚಿಸಿದ್ದಳು. ಅಂಬೆಯನ್ನು ವಿವಾಹವಾಗಿ ಒಂದು ಪ್ರಕರಣವನ್ನು ಸುಖಾಂತ್ಯಗೊಳಿಸುವಂತೆ ಯಾಚಿಸಿದ್ದಳು. ವಿಚಿತ್ರವೀರ್ಯನಲ್ಲಿ ಸಂತಾನಶಕ್ತಿ ಇಲ್ಲವೆನ್ನುವುದು ಖಚಿತವಾದ ಮೇಲೆ ಅಂಬಿಕೆ, ಅಂಬಾಲಿಕೆಯರಲ್ಲಿ ನಿಯೋಗದ ಮೂಲಕ ಮಕ್ಕಳನ್ನು ಪಡೆಯುವಂತೆ ನನ್ನನ್ನು ಪ್ರೇರೇಪಿಸಿದ್ದಳು.

ಅವಳ ಮಾತನ್ನು ನಾನು ಕೇಳುತ್ತಿದ್ದರೆ ಧೃತರಾಷ್ಟ್ರನಂತಹ ಕುರುಡ, ಪಾಂಡುವಿನಂತಹ ನಿವೀರ್‍ಯ ಸಂತಾನ ಅಂಬಿಕೆ, ಅಂಬಾಲಿಕೆಯರ ಉದರಗಳಲ್ಲಿ ಜನಿಸುತ್ತಿರಲಿಲ್ಲ. ನಾನು ನಿಯೋಗಕ್ಕೆ ಒಪ್ಪಿಗೆ ಸೂಚಿಸದೆ ಹೋದಾಗ ರಾಜಮಾತೆ ಸತ್ಯವತಿ ಅನ್ಯದಾರಿ ಕಾಣದೆ ದ್ವೈಪಾಯನರನ್ನು ಕರೆಸಿದ್ದಳು. ಕುರು ಸಾಮ್ರಾಜ್ಯ ವಿನಾಶ ಹೊಂದುವುದನ್ನು ಅವಳಿಂದ ಸಹಿಸಲಾಗಿರಲಿಲ್ಲ. ದ್ವೈಪಾಯನ ಆರಂಭದಲ್ಲಿ ನಿಯೋಗಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ತಾಯ ಕಣ್ಣೀರಿಗೆ ಕರಗಿದ. ಅವನ ನೀಳ ಜಟೆ, ಉದ್ದನೆಯ ಗಡ್ಡ, ದೊಡ್ಡ ಮೂಗು, ಭೀತಿ ಹುಟ್ಟಿಸುವ ಕೆಂಪು ಕಣ್ಣುಗಳಿಂದಾಗಿ ಅಂಬಿಕೆ, ಅಂಬಾಲಿಕೆಯರಿಗೆ ನಿಯೋಗವೊಂದು ಭೀತಿಯ ಆಚರಣೆಯಾಯಿತು. ನನ್ನನ್ನಾಗಿರುತ್ತಿದ್ದರೆ ಅವರು ಚಕಾರವಿಲ್ಲದೆ ಒಪ್ಪಿಕೊಳ್ಳುತ್ತಿದ್ದರು! ಇಷ್ಟವಿಲ್ಲದೆ ನಡೆದ ನಿಯೋಗದಲ್ಲಿ ಬೀಜವೂ ಮುಖ್ಯವಾಗಲಿಲ್ಲ, ಕ್ಷೇತ್ರವೂ ಮುಖ್ಯವಾಗಲಿಲ್ಲ. ದೇಹ ಮತ್ತು ಭಾವ ಒಂದಾಗದ ಗೊಡ್ಡು ಆಚರಣೆಯಿಂದಾಗಿ ಇಂತಹ ಸಂತತಿ ಜನಿಸಿತು! ಹಸ್ತಿನಾವತಿಯ ಸಿಂಹಾಸನದಲ್ಲಿ ಕುಳಿತು ಅಪ್ಪ ಸುಖ ಪಡಲಿಲ್ಲ. ವಿಚಿತ್ರವೀರ್ಯನಿಗೆ ಸುಖ ಪಡಲು ಸಾಧ್ಯವಾಗಲಿಲ್ಲ. ಕಣ್ಣು ಕಾಣದ ಧೃತರಾಷ್ಟ್ರನಿಗೆ ಸಾಮ್ರಾಜ್ಯಸುಖ ಮರೀಚಿಕೆಯಾಯಿತು. ಇನ್ನು ಯುಧಿಷ್ಟಿರ ಇದನ್ನೇರಿ ಏನು ಸುಖ ಪಡುತ್ತಾನೊ? ದಾಯಾದಿಗಳನ್ನು ಸಂಹರಿಸಿ ಸಿಂಹಾಸನವೇರಬೇಕಾದ ಪರಮ ದೌರ್ಭಾಗ್ಯ ಯುಧಿಷ್ಟಿರನದು. ವಿಚಿತ್ರವೀರ್ಯ ಹೆಸರಿಗೆ ಮಾತ್ರ ಚಕ್ರವರ್ತಿಯಾಗಿದ್ದ. ಧೃತರಾಷ್ಟ್ರ ಚಕ್ರವರ್ತಿಯಾದರೂ ಅಧಿಕಾರ ಅವನ ಕೈಯಲ್ಲಿರಲಿಲ್ಲ. ದ್ಯೂತವ್ಯಸನಿ ಯುಧಿಷ್ಠಿರನೂ ಅಷ್ಟೇ. ಹೆಸರಿಗೆ ಮಾತ್ರ ಸಮ್ರಾಟನಾಗಿರುತ್ತಾನೆ. ಇದು ಕುರು ಸಾಮ್ರಾಜ್ಯದ ಪತನ. ಹೀಗಾಗಲು ನನ್ನಮ್ಮ ಗಂಗಾದೇವಿ ಕಾರಣಳಾಗಿಬಿಟ್ಟಳು.

ರಾತ್ರಿ ಎಷ್ಟೋ ಹೊತ್ತಿನವರೆಗೆ ನಿದ್ದೆ ಬಾರದೆ ತೊಳಲಿದೆ. ಬೆಳಗಿನ ಜಾವ ನಿದ್ದೆ ಬಂತು. ಅಮ್ಮ ಕಾಣಿಸಿಕೊಂಡಳು. ದೂರದಲ್ಲೇ ನಿಂತು ಹೇಳಿದಳು: “ಕುರು ಸಾಮ್ರಾಜ್ಯದ ಪತನಕ್ಕೆ ನನ್ನನ್ನು ಕಾರಣಳನ್ನಾಗಿಸಬೇಡ ಮಗೂ. ಅದು ನೀನಾಗಿ ತಂದುಕೊಂಡ ದುರಂತ. ಅಂತಃಪುರದ ಉಸಿರುಗಟ್ಟಿಸುವ ವಾತಾವರಣದಲ್ಲಿ ನಾನಾರೆಂಬ ಆತ್ಮಶೋಧನೆ ಸಾಧ್ಯವಾಗದ್ದಕ್ಕೆ ನಾನು ಹಸ್ತಿನಾವತಿಯನ್ನು ತೊರೆಯಬೇಕಾಯಿತು. ಮಾನವನಿಗಿರುವುದು ಒಂದೇ ಒಂದು ಜನ್ಮ. ಅಂತಃಪುರದಲ್ಲೇ ಇರುತ್ತಿದ್ದರೆ ಇರುವ ಒಂದು ಜನ್ಮದಲ್ಲಿ ಏನನ್ನೂ ಸಾಧಿಸಲಾಗುತ್ತಿರಲಿಲ್ಲ. ಮಹಾರಾಜನ ಮೋಹ, ನಿನ್ನ ಮೇಲಣ ವಾತ್ಸಲ್ಯ, ವಯಸ್ಸಾದ ಮೇಲೆ ನಿನ್ನ ಮಕ್ಕಳ, ಮೊಮ್ಮಕ್ಕಳ ಲಾಲನೆ ಪಾಲನೆ, ಹೀಗೆ ಗೋಡೆ ಕಟ್ಟಿಕೊಂಡ ಪೂರ್ವ ನಿರ್ಧರಿತ ಅರ್ಥಹೀನ ಏಕತಾನತೆಯ ಬದುಕನ್ನು ನನ್ನ ಮನಸ್ಸು ನಿರಾಕರಿಸಿತು. ನನಗೂ ಒಂದು ಮನಸ್ಸಿತ್ತು. ಬದುಕಿನಲ್ಲಿ ಏನನ್ನಾದರೂ ಸಾಧಿಸ ಬೇಕೆಂಬ ಕನಸುಗಳಿದ್ದವು. ಅದಕ್ಕಾಗಿ ಹೊರಟು ಬಂದೆ. ದೊಡ್ಡ ಸಾಧಕಳಾಗಿ ಬಾಳನ್ನು ಸಾರ್ಥಕ ಪಡಿಸಿಕೊಂಡೆ. ನಿನ್ನ ಅಪ್ಪ ಶಂತನು ಚಕ್ರವರ್ತಿಗಳು ಸತ್ಯವತಿಯನ್ನು ಮೆಚ್ಚಿಕೊಂಡದ್ದು ತಪ್ಪಲ್ಲ. ನೀನು ಚಕ್ರವರ್ತಿಗಳಿಗೆ ಒಂದು ಮಾತು ಹೇಳದೆ, ಸತ್ಯವತಿಯಲ್ಲಿ ಒಂದು ಮಾತು ಕೇಳದೆ, ಅವಳಪ್ಪ ಏನೋ ಹೇಳಿದನೆಂದು ದುಡುಕಿ ಎಂತಹ ಅನಾಹುತಕಾರಿ ಪ್ರತಿಜ್ಞೆ ಮಾಡಿಬಿಟ್ಟೆ! ಯಾರಿಗೆ ಸುಖ ಸಿಕ್ಕಿತು ನಿನ್ನ ಪ್ರತಿಜ್ಞೆಯಿಂದ? ಕಡ್ಡಾಯ ಬ್ರಹ್ಮಚರ್ಯವನ್ನು ಸಾಧನೆಯೆಂದು ಕೊಂಡಿದ್ದಿ. ಪ್ರಕೃತಿಯ ನಿಯಮಕ್ಕೆ ಅದು ವಿರುದ್ಧವಾದುದು. ಅದಕ್ಕೇ ನಿನ್ನದು ಕೃತ್ರಿಮ ಬದುಕಾಗಿ ಹೋಯಿತು. ನೀನು ತಪ್ಪು ಮಾಡಿಬಿಟ್ಟೆ. ನೀನು ಪ್ರತಿಜ್ಞೆ ಮಾಡದಿರುತ್ತಿದ್ದರೆ ಪ್ರಪಂಚವೇನು ಮುಳುಗಿ ಹೋಗುತ್ತಿರಲಿಲ್ಲ. ಕ್ಷತ್ರಿಯನೆಂಬ ಅಹಂ ನಿನ್ನಿಂದ ಪ್ರತಿಜ್ಞೆ ಮಾಡಿಸಿತು. ಮಹಾನ್‌ ಕುರು ಸಾಮ್ರಾಜ್ಯದ ಪತನಕ್ಕೆ ನೀನೇ ಕಾರಣನಾದೆ”.

ಅಮ್ಮ ಮರೆಯಾಗಿ ಹೋದಳು. ರಾಜಮಾತೆ ಸತ್ಯವತೀದೇವಿ ಕಾಣಿಸಿಕೊಂಡಳು. ಮಗೂ, ಇಂದಿನ ನಿನ್ನ ದುರವಸ್ಥೆಗೆ ನಿನ್ನ ಪ್ರತಿಜ್ಞೆಯೇ ಕಾರಣ. ನೀನು ಪ್ರತಿಜ್ಞೆ ಮಾಡದಿರುತ್ತಿದ್ದರೂ ನಾನು ಅನಿವಾರ್ಯವಾಗಿ ನಿನ್ನಪ್ಪನ ಕೈ ಹಿಡಿಯಲೇಬೇಕಾಗಿತ್ತು. ಚಕ್ರವರ್ತಿಗಳು ಒಂದು ಆಜ್ಞೆ ಮಾಡುತ್ತಿದ್ದರೆ ಅದನ್ನು ಉಲ್ಲಂಘಿಸಲು ನನ್ನಪ್ಪ ದಾಶರಾಜನಿಂದ ಸಾಧ್ಯವಿರುತ್ತಿರಲಿಲ್ಲ. ಈ ಆರ್ಯಾವರ್ತದಲ್ಲಿ ವಿವಾಹಕ್ಕೆ ಹೆಣ್ಣಿನ ಅಭಿಪ್ರಾಯವನ್ನು ಯಾರು ಕೇಳುತ್ತಾರೆ? ಮದುವೆಗೆ ಹೆಣ್ಣಿನ ಒಪ್ಪಿಗೆಯ ಅಗತ್ಯವೇ ಇಲ್ಲದಿರುವಾಗ ನಿನ್ನ ಅರ್ಥಹೀನ ಪ್ರತಿಜ್ಞೆ ಯಾಕೆ ಬೇಕಿತ್ತು? ಸಮ್ರಾಜ್ಞಿಯಾಗಿ, ರಾಜಮಾತೆಯಾಗಿ ಹಸ್ತಿನಾವತಿಯಲ್ಲಿ ಒಂದೇ ಒಂದು ದಿನ ನಾನು ಸುಖವುಣ್ಣಲಿಲ್ಲ. ಯಾಕೆಂದರೆ ಇಲ್ಲಿ ಹೃದಯದ ಭಾಷೆ ಅರ್ಥ ಮಾಡಿಕೊಳ್ಳುವವರಿಲ್ಲ. ಮಾತೆತ್ತಿದರೆ ಕ್ಷಾತ್ರತ್ವ, ಪ್ರತಿಷ್ಠೆ, ಪ್ರತಿಜ್ಞೆ, ವೀರ ಸ್ವರ್ಗ-ಈ ಸೋಗಲಾಡಿತನದ ಚೌಕಟ್ಟಿನ ನಡುವಣ ಕೃತ್ರಿಮ ಬದುಕು. ನಿನ್ನ ಪ್ರತಿಜ್ಞೆಯಿಂದಾಗಿ ಅನಿವಾರ್ಯವಾಗಿ ನಾನು ಕುರು ಸಮ್ರಾಜ್ಞಿಯಾಗಿ ಹೋದೆ. ಪರಿಣಾಮವೇನಾಯಿತು ಗೊತ್ತಿದೆಯಾ? ಆ ಬಳಿಕ ಒಂದೇ ಒಂದು ಕಾವ್ಯ ರಚಿಸಲು ನನ್ನಿಂದಾಗಲಿಲ್ಲ. ಪರಾಶರ ಮುನಿಗಳು ನನ್ನಲ್ಲಿ ಕಾವ್ಯ ಅರಳಿಸಿದವರು. ನಾನು ಅವರ ಕಾವ್ಯವಾಗಿದ್ದವಳು. ದಾಂಪತ್ಯವೆಂದರೆ ಅದು! ಹೆಣ್ಣಲ್ಲಿ ಕಾವ್ಯ ಅರಳಿಸಬಲ್ಲವನು ನಿಜವಾದ ಗಂಡು. ಅಂತಹ ಗಂಡಿಗೆ ಮಾತ್ರ ಹೆಣ್ಣು ಪೂರ್ತಿಯಾಗಿ ತೆರೆದುಕೊಳ್ಳುತ್ತಾಳೆ. ಹಾಗೆ ಹೆಣ್ಣನ್ನು ತೆರೆಯಿಸಿಕೊಳ್ಳಬಲ್ಲವನೇ ಅವಳ ನಿಜವಾದ ಗಂಡ. ಮದುವೆ ಮಾಡಿಬಿಟ್ಟರೆ ಸಾಕು. ಹೆಣ್ಣು ಗಂಡಿಗೆ ತೆರೆದುಕೊಳ್ಳಲೇಬೇಕು ಎಂಬುದು ಮೂರ್ಖತನ. ನೀವು ಕ್ಷತ್ರಿಯರು ಹೇಗಾದರೂ ಮದುವೆಯಾಗುವುದನ್ನು, ಹೆಣ್ಣಿನ ಗರ್ಭಕೋಶವನ್ನು ವೀರ್ಯದಿಂದ ತುಂಬುವುದನ್ನು, ಮಾತೆತ್ತಿದರೆ ಪ್ರತಿಜ್ಞೆ ಮಾಡುವುದನ್ನು, ಆ ಪ್ರತಿಜ್ಞೆ ಈಡೇರಿಸಲು ರಕ್ತ ಹರಿಸುವುದನ್ನು ಪುಂಸ್ತ್ವ ಎಂದುಕೊಳ್ಳುತ್ತೀರಿ. ನಿನ್ನ ಅನವಶ್ಯಕ ಪ್ರತಿಜ್ಞೆ ಯಿಂದಾಗಿ ನಿನಗೂ ಸುಖ ಸಿಗಲಿಲ್ಲ. ಕುರು ಸಾಮ್ರಾಜ್ಯಕ್ಕೂ ನೆಮ್ಮದಿ ದಕ್ಕಲಿಲ್ಲ. ನಿನ್ನ ವಿವೇಕಶೂನ್ಯತೆಯಿಂದ ಕುರು ಸಾಮ್ರಾಜ್ಯದ ಪತನಕ್ಕೆ ನೀನೇ ಕಾರಣನಾದೆ”.

ರಾಜಮಾತೆ ಸತ್ಯವತೀದೇವಿ ಕಣ್ಮರೆಯಾಗಿ ಕಾಶೀ ರಾಜಕುಮಾರಿ ಅಂಬೆ ಕಾಣಿಸಿಕೊಂಡಳು: “ಕುರು ಸಾಮ್ರಾಜ್ಯದ ಪತನಕ್ಕೆ ಬೇರೆಯವರನ್ನು ಹೊಣೆಗಾರರನ್ನಾಗಿ ಮಾಡಬೇಡ. ಅದಕ್ಕೆ ನೀನೇ ಕಾರಣ. ನೀನು ಹೇಡಿ. ಭಾವನೆಗಳನ್ನು ಪ್ರತಿಜ್ಞೆಯ ಪ್ರತಿಷ್ಠೆಗೆ ಬಲಿಕೊಟ್ಟ ಷಂಡ. ನಿನ್ನ ಪ್ರತಿಜ್ಞೆ ಕಾಶೀರಾಜಕುವರಿಯರ ಬದುಕನ್ನು ಸರ್ವನಾಶಗೊಳಿಸಿತು. ನಾನು ಅಗ್ನಿಪ್ರವೇಶ ಮಾಡಿ, ಒಂದೇ ಬಾರಿಗೆ ಸತ್ತು ಹೋದೆ. ಅಂಬಿಕೆ, ಅಂಬಾಲಿಕೆಯರು ಪ್ರತಿದಿನ ವಿಚಿತ್ರವೀರ್ಯನ ಅಂತಃಪುರದಲ್ಲಿ ಸಾಯುತ್ತಲೇ ಹೋದರು. ನೀನು ನಮ್ಮನ್ನು ವಿವಾಹವಾಗುತ್ತಿದ್ದರೆ ಕುರು ಸಾಮ್ರಾಜ್ಯ ಉಳಿಯುತ್ತಿತ್ತು. ನಿನ್ನ ಪ್ರತಿಜ್ಞೆಯನ್ನು ಮಹಾನ್‌ ಸಾಧನೆಯೆಂದುಕೊಂಡಿರುವೆ. ಸ್ತ್ರೀಯರಿಗೊಂದು ಸಂತೃಪ್ತಿಯ ಬದುಕನ್ನು ಕಲ್ಪಿಸಿಕೊಡಲಾಗದ ಪ್ರತಿಜ್ಞೆಗಳು, ಕುಲ ಪ್ರತಿಷ್ಠೆಗಳು, ಸಂಪ್ರದಾಯಗಳು, ಕೇವಲ ಆತ್ಮವಂಚನೆ. ಕ್ಷತ್ರಿಯನೆಂಬ ಪೊಳ್ಳು ಪ್ರತಿಷ್ಠೆಯ ಅಹಮ್ಮಮಿನಲ್ಲಿ, ಪ್ರತಿಜ್ಞೆಯ ನೆಪದಲ್ಲಿ ಹೆಣ್ಣುಗಳ ಬಾಳನ್ನು ಬಲಿಕೊಟ್ಟ ನಿನ್ನ ಆತ್ಮವಂಚನೆಯೇ ಕುರು ಸಾಮ್ರಾಜ್ಯದ ಪತನಕ್ಕೆ ಕಾರಣ”.

ಅಂಬೆಯೂ ಮರೆಯಾದಳು. ಇನ್ನೂ ಒಬ್ಬಾಕೆಯ ಮುಖ ಕಾಣಿಸಿಕೊಂಡಿತು. ಅದು ದ್ರೌಪದಿಯ ಮುಖ! ಅವಳೆಂದಳು: “ಕುರು ಸಾಮ್ರಾಜ್ಯವನ್ನು ಪತನದತ್ತ ಕೊಂಡೊಯ್ದವರು ನೀವೇ ತಾತಾ. ನಿಮ್ಮ ಸಮ್ಮುಖದಲ್ಲಿ ಕಪಟದ್ಯೂತ ನಡೆಯಿತು. ನೀವು ಅದನ್ನು ಯಾಕೆ ತಡೆಯಲಿಲ್ಲ? ಯುಧಿಷ್ಠಿರ ಇಂದ್ರಪ್ರಸ್ಥವನ್ನು, ನಾಲ್ವರು ತಮ್ಮಂದಿರನ್ನು, ಸ್ವಯಂ ಅವನನ್ನು ಸೋತ ಬಳಿಕ ನನ್ನನ್ನು ಪಣಕ್ಕೊಡ್ಡಿದ. ನಾನೇನು ಅವನೊಬ್ಬನ ಪತ್ನಿಯೇ? ಅವನೇನು ಸ್ವಯಂವರ ಮಂಟಪದಲ್ಲಿ ಮತ್ಸ್ಯಯಂತ್ರವನ್ನು ಭೇದಿಸಿ ನನ್ನನ್ನು ಗೆದ್ದವನೆ? ನಿನ್ನದು ಅಧರ್ಮವೆಂದು ಹೇಳಿ ಅವನನ್ನು ಆಗ ತಡೆಯಲು ನಿಮ್ಮಿಂದ ಯಾಕಾಗಲಿಲ್ಲ? ತುಂಬಿದ ಸಭೆಗೆ ಅನ್ಯರ ಮಡದಿಯನ್ನು ಅಪಮಾನಕಾರಿಯಾಗಿ ಎಳೆ ತರುವಂತೆ ದುರ್ಯೋಧನ ದುಶ್ಯಾಸನನಿಗೆ ಆಜ್ಞೆ ಮಾಡಿದಾಗ ಇದು ತಪ್ಪು ಎಂದು ನೀವೇಕೆ ತಡೆಯಲಿಲ್ಲ? ದ್ಯೂತದಲ್ಲಿ ತನ್ನನ್ನು ಸೋತ ವ್ಯಕ್ತಿಗೆ ತನ್ನ ಹೆಂಡತಿಯನ್ನು ಪಣಕ್ಕೊಡ್ಡುವ ಹಕ್ಕುಂಟೇ ಎಂದು ನಾನು ಪ್ರಶ್ನಿಸಿದಾಗ ದುರ್ಯೋಧನನ ದುಷ್ಟಕೂಟ ನನ್ನ ಮೇಲೆ ಆಕ್ರಮಣಕ್ಕೆ ಮುಂದಾಯಿತು. ಒಬ್ಬ ವಿಕರ್ಣ ಮಾತ್ರ ನನ್ನ ಪರವಾಗಿ ವಾದಿಸಿದ. ಆಗಲಾದರೂ ನೀವು ದುರ್ಯೋಧನನ ದುಷ್ಟತನವನ್ನು ಖಂಡಿಸುವ ಧೈರ್ಯ ಯಾಕೆ ತೊರಲಿಲ್ಲ? ದುಶ್ಯಾಸನ ತುಂಬಿದ ಸಭೆಯಲ್ಲಿ ಅನಾಗರಿಕನಂತೆ ಮದೋನ್ಮತ್ತನಾಗಿ ನನ್ನ ಸೆರಗಿಗೇ ಕೈ ಹಾಕಿ ಅಪಮಾನ ಮಾಡಿದ. ಆಗ ಅದನ್ನು ಪ್ರತಿಭಟಿಸಲು ನಿಮ್ಮಿಂದ ಏಕಾಗಲಿಲ್ಲ? ಹೇಳಿ ತಾತಾ, ನಾನು ನಿಮ್ಮ ಮಗಳಾಗಿರುತ್ತಿದ್ದರೆ ನೀವು ನಿರ್‍ವೀರ್‍ಯ ನಂತೆ ನಿಮ್ಮ ಕಣ್ಣೆದುರೇ ನಡೆಯುತ್ತಿದ್ದ ಅನರ್ಥ ಪರಂಪರೆಗಳನ್ನು ಸಹಿಸಿಕೊಂಡು ಸುಮ್ಮನಿರುತ್ತಿದ್ದಿರಾ? ಅಂದು ನೀವು ನನಗೆ ಅಪಮಾನವಾಗದಂತೆ ನೋಡಿಕೊಳ್ಳುತ್ತಿದ್ದರೆ ಈ ಮಹಾಯುದ್ಧ ಸಂಭವಿಸುತ್ತಿರಲಿಲ್ಲ. ಅನ್ಯಾಯ, ಅಧರ್ಮಗಳನ್ನು ಕಂಡೂ ಸಹಿಸುತ್ತಾ ಸುಮ್ಮನಾಗುವವ ಗಂಡು ಎನಿಸಲಾರ. ನೀವು ಆಜೀವ ಪರ್ಯಂತ ಬ್ರಹ್ಮಚಾರಿಯಾಗಿರುತ್ತೇನೆಂದು ಪ್ರತಿಜ್ಞೆ ಮಾಡಿದ ಮಹಾನುಭಾವರೆಂದು ಇಡೀ ಆರ್ಯಾವರ್ತ ಕೊಂಡಾಡುತ್ತಿದೆ. ಆದರೆ ನಿಮ್ಮ ವರ್ತನೆಗಳು ನಿಮ್ಮನ್ನು ಷಂಡನೆಂದು ಸಾರುತ್ತಲಿವೆ. ಕಪಟದ್ಯೂತ ಮತ್ತು ವಸ್ತ್ರಾಪಹರಣ ಪ್ರಕರಣಗಳಲ್ಲಿ ನೀವು ಗಂಡು ಅಲ್ಲವೆಂಬುದು ಆರ್ಯಾವರ್ತಕ್ಕೇ ಗೊತ್ತಾಗಿ ಹೋಯಿತು. ಸಾಲದೆಂಬಂತೆ ದುರ್ಯೋಧನ ಅಧರ್ಮಿ ಎಂದು ತಿಳಿದೂ ಅವನ ಪಕ್ಷ ವಹಿಸಿ ನೀವೇ ವಿಪತ್ತನ್ನು ಆಮಂತ್ರಿಸಿ ಕೊಂಡಿರಿ. ಕುರು ಸಾಮ್ರಾಜ್ಯದ ಪತನಕ್ಕೆ ನೀವೇ ಕಾರಣರಾದಿರಿ.

ನಾನು ಗಾಬರಿಯಿಂದ ಕಣ್ಣು ತೆರೆದು ನೋಡಿದೆ. ಚೆನ್ನಾಗಿ ಬೆಳಕಾಗಿತ್ತು. ಹಣೆ ಮುಟ್ಟಿ ನೋಡಿದೆ. ಬೆವರ ಹನಿಗಳು ಮೂಡಿದ್ದವು. ಕನಸಲ್ಲಿ ಕಂಡ ನಾಲ್ಕು ಮುಖಗಳು ಹೇಳಿದ ಮಾತುಗಳಿಂದ ಪಾಪಪ್ರಜ್ಞೆ ಕಾಡತೊಡಗಿತು. ಕುರು ಸಾಮ್ರಾಜ್ಯದ ಸಂರಕ್ಷಕ ನಾನು ಎಂದು ನಾನಂದುಕೊಂಡರೆ ಕುರು ಸಾಮ್ರಾಜ್ಯದ ಪತನಕ್ಕೆ ಕಾರಣನೆಂದು ಇತಿಹಾಸ ನನ್ನನ್ನು ಗುರುತಿಸಬಹುದಾದ ಸಾಧ್ಯತೆಯನ್ನು ನೆನೆದು ಖಿನ್ನತೆ ಮೂಡಿತು. ಉನ್ನತ ಮೌಲ್ಯವೊಂದಕ್ಕೆ ಬದ್ಧನಾಗಿ ಬದುಕಿನ ಸಮಸ್ತ ಸುಖ ಸಂತೋಷಗಳಿಗೆ ಎರವಾದವನಿಗೆ ಸಿಗುತ್ತಿರುವುದು ಇಂತಹ ಪ್ರಶಸ್ತಿಯೆ?

ತಳಮಳದಿಂದಾಗಿ ದಿನವಿಡೀ ಏನನ್ನು ತಿನ್ನಲೂ ಮನಸ್ಸಾಗಲಿಲ್ಲ. ಪ್ರತೀ ಹಾರಿಯ ಒತ್ತಾಯಕ್ಕೆ ಸ್ವಲ್ಪ ದ್ರವಾಹಾರ ಸೇವಿಸಿದೆ. ಎದೆಗೆ ಚುಚ್ಚಿಕೊಂಡ ಬಾಣದ ನೋವು ಮೇಲೆ ಗಂಟಲಿನಿಂದ ಕೆಳಗೆ ಹೊಟ್ಟೆಯವರೆಗೂ ವ್ಯಾಪಿಸಿಕೊಂಡಿದೆ. ಹೆಚ್ಚೆಂದರೆ ಇನ್ನೆರಡು ದಿನ ನಾನು ಬದುಕಬಹುದು. ಕುರು ಸಾಮ್ರಾಜ್ಯದ ಮುಂದಿನ ಚಕ್ರವರ್ತಿ ಯಾರೆಂಬುದನ್ನು ತಿಳಿಯದೆ ಸತ್ತು ಹೋಗಿ ಬಿಡುತ್ತೇನೆಯೆ? ಅಲ್ಲಿ ಕುರು ಕ್ಷೇತ್ರದಲ್ಲೀಗ ಏನಾಗುತ್ತಿರಬಹುದು? ನನಗದು ತಿಳಿಯುವ ಬಗೆ ಹೇಗೆ? ಇಷ್ಟು ದಿನ ಕರ್ಣನಿಂದ, ದುರ್ಯೋಧನನಿಂದ ತಿಳಿಯುತ್ತಿತ್ತು. ಕರ್ಣ ನಿನ್ನೆ ಹೋಗಿಬಿಟ್ಟ. ದುರ್ಯೋಧನ ದೊಡ್ಡ ಜವಾಬ್ದಾರಿಯನ್ನು ನನ್ನ ಮೇಲೆ ಹೊರಿಸಿ ರಣರಂಗಕ್ಕೆ ತೆರಳಿದ್ದಾನೆ. ಅವನು ಬರುತ್ತಾನಾ? ಮತ್ತೆ ನಾನವನನ್ನು ನೋಡುತ್ತೇನಾ?

ದುರ್ಯೋಧನನ ಕತೆ ಇಂದು ಮುಗಿದು ಹೋದರೆ ಯುಧಿಷ್ಠಿರನೇ ಹಸ್ತಿನಾವತಿಯ ಸಿಂಹಾಸನಕ್ಕೆ ಧರ್ಮಬದ್ಧ ಉತ್ತರಾಧಿಕಾರಿಯಾಗುತ್ತಾನೆ. ಆದರೆ ಧೃತರಾಷ್ಟ್ರ ಅಷ್ಟು ಸುಲಭವಾಗಿ ಸಿಂಹಾಸನ ಬಿಟ್ಟು ಕೊಡುತ್ತಾನೆಯೆ? ಆಗ ನಾನು ಧರ್ಮದ ಪರ ವಹಿಸಿ ಮಾತಾಡಬೇಕಾಗುತ್ತದೆ. ಅದಕ್ಕೆ ಧೃತರಾಷ್ಟ್ರನ ಪ್ರತಿಕ್ರಿಯೆ ಹೇಗಿರುತ್ತದೊ? ಆದರೆ ಎಷ್ಟು ದಿನವೆಂದು ಅಂಧ ದೊರೆ ಪ್ರತಿರೋಧ ತೋರಿಯಾನು? ತೋರಿದರೆ ನಾಳೆ ಇವನ ಚಿತೆಗೆ ಅಗ್ನಿಸ್ಪರ್ಶ ಮಾಡುವವರು ಯಾರು? ಧೃತರಾಷ್ಟ್ರ ಅನಿವಾರ್ಯವಾಗಿ ಯುಧಿಷ್ಠಿರನನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ನನ್ನೆದೆಗೆ ಬಾಣ ಹೊಕ್ಕಂದು ಪಾಂಡವರು ಈ ಬಿಡದಿಗೆ ಬಂದವರು ಮತ್ತೆ ಕಾಲಿಟ್ಟಿಲ್ಲ. ನನ್ನ ಬಗ್ಗೆ ತಾತ್ಸಾರ ಭಾವನೆಯೆ? ನನ್ನನ್ನು ಶತ್ರುಪಾಳಯದವನೆಂದು ಬಗೆದು ದೂರವೇ ಇಟ್ಟರೆ? ನನಗೆ ಪಕ್ಷವಿಲ್ಲ. ಸಿಂಹಾಸನಕ್ಕೆ ಮಾತ್ರ ನನ್ನ ನಿಷ್ಠೆ. ಯುಧಿಷ್ಠಿರನಿಗಾದರೂ ಅದು ಅರ್ಥವಾದರೆ ಸಾಕು.

ಪ್ರತೀಹಾರಿ ದಡಬಡಿಸಿ ಓಡಿಕೊಂಡು ಬಂದ. ಕೃಷ್ಣನೊಡನೆ ಪಾಂಡವರು ಬಿಡದಿಗೆ ಆಗಮಿಸುತ್ತಿರುವ ವರ್ತಮಾನ ತಿಳಿಸಿದ. ಕೃಷ್ಣ ಕೈ ಮುಗಿಯುತ್ತಾ ಬಂದು ಆಸನದಲ್ಲಿ ಕುಳಿತ. ಪಾಂಡವರು ಪಾದಸ್ಪರ್ಶ ಮಾಡಿ ನಿಂತುಕೊಂಡರು. ದ್ರೌಪದಿ ನನ್ನನ್ನು ಸ್ಪರ್ಶಿಸಲಿಲ್ಲ. ಅವಳೊಟ್ಟಿಗೆ ಇರುವ ಅದು ಯಾರು? ಗುರುತು ಸಿಕ್ಕಿತು. ಶಿಖಂಡಿ! ನನ್ನ ಈ ದುರವಸ್ಥೆಗೆ ಕಾರಣನಾಗಿ ಯುದ್ಧದ ಗತಿಯನ್ನೇ ಬದಲಾಯಿಸಿದ ಶಿಖಂಡಿ.

ಕೃಷ್ಣ ಮಾತು ಆರಂಭಿಸಿದ: “ಎಂಟು ದಿನಗಳಾದವಲ್ಲಾ ಆಚಾರ್ಯರೇ ನೀವು ಹೀಗೆ ಮಲಗಿ? ಯುದ್ಧರಂಗದಲ್ಲಿ ನೀವಿಲ್ಲದೆ ಒಂದು ಬಗೆಯ ಶೂನ್ಯತೆ ಆವರಿಸಿತ್ತು. ಪದೇ ಪದೇ ನಿಮ್ಮ ನೆನಪಾಗುತ್ತಿತ್ತು. ಅಂದು ನಿಮ್ಮನ್ನು ಬಿಡದಿಯಲ್ಲಿ ನೋಡಿದವರು ಇಂದು ಬರುತ್ತಿದ್ದೇವೆ. ಯುದ್ಧ ನಿಲುಗಡೆಯಾಗದೆ ನಾವು ನಿಮ್ಮಲ್ಲಿಗೆ ಬರುವಂತಿರಲಿಲ್ಲ. ಸರಿಯಾಗಿ ಹದಿನೆಂಟನೆಯ ದಿನಕ್ಕೆ ಯುದ್ಧ ಮುಕ್ತಾಯವಾಯಿತು. ಈ ಭೀಮಸೇನನಿಂದ ತೊಡೆ ಮುರಿಸಿಕೊಂಡು ಬಿದ್ದಿರುವ ದುರ್ಯೋಧನ ಕೊನೆಯುಸಿರು ಎಳೆಯುತ್ತಿದ್ದಾನೆ. ನಿಮ್ಮ ಆಶೀರ್ವಾದ ನಿಜವಾಗಿದೆ. ಧರ್ಮಕ್ಕೆ ಜಯವಾಗಿದೆ”.

ಕೃಷ್ಣ ನಯವಾಗಿ ನನ್ನನ್ನು ಅಧರ್ಮ ಪಕ್ಷಪಾತಿಯೆಂದು ಚುಚ್ಚುತ್ತಿದ್ದಾನೆ. ವರ್ಣದಲ್ಲಿ ಶೂದ್ರನಾದರೇನಂತೆ? ಯಾವ ಕ್ಷತ್ರಿಯ ಅಥವಾ ಬ್ರಾಹ್ಮಣ ಇವನಿಗೆ ಕುಶಾಗ್ರ ಮತಿತ್ವದಲ್ಲಿ, ತಂತ್ರಗಾರಿಕೆಯಲ್ಲಿ, ಮುತ್ಸದ್ಧಿತನದಲ್ಲಿ ಸಾಟಿಯಾಗಬಲ್ಲ? ಜಾತಿ-ವರ್ಣ ವ್ಯವಸ್ಥೆಯ ನಾಶಕ್ಕಾಗಿ ಇವನು ಆಗಾಗ ಉದ್ಧರಿಸುತ್ತಿದ್ದ: “ಚಾತುವಣ್ರ್ಯ ಮಯಾಂ ಸೃಷ್ಟಾಂ, ಗುಣಕರ್ಮ ವಿಭಾಗಶಃ ಎನ್ನುವುದು ಭಗವಂತನ ವಾಣಿಯೆಂದು”. ನಾಲ್ಕು ವರ್ಣಗಳು ಗುಣವನ್ನು ಸೂಚಿಸುತ್ತವೆ. ಹುಟ್ಟಿನಿಂದ ವರ್ಣ ನಿರ್ಣಯವಾಗುವುದಿಲ್ಲವೆಂದು ಇವನು ಸಾರಿ ಸಾರಿ ಹೇಳುತ್ತಲೇ ಬಂದಿದ್ದಾನೆ. ವರ್ಣ ವ್ಯವಸ್ಥೆಯ ಸಂಪೂರ್ಣ ಪ್ರಯೋಜನವನ್ನು ಒಟ್ಟಾಗಿ ದಕ್ಕಿಸಿಕೊಳ್ಳುತ್ತಿರುವ ಸ್ವಾರ್ಥಿ ಬ್ರಾಹ್ಮಣರು ಮತ್ತು ದುಷ್ಟ ಕ್ಷತ್ರಿಯರು ಹುಟ್ಟನ್ನೇ ವರ್ಣಕ್ಕೆ ಆಧಾರವೆನ್ನುತ್ತಿದ್ದಾರೆ. ಇದು ಆರ್ಯಾವರ್ತದ ದುರಂತ. ಇವನು ಗುರು ಪರಶುರಾಮರಂತೆ ಜಾತಿವರ್ಣಗಳಿಲ್ಲದ ಮಾನವ ಸಮುದಾಯ ನಿರ್ಮಾಣಕ್ಕೆ ಯತ್ನಿಸುವ ಸಮಾನತೆಯ ಹರಿಕಾರ. ವರ್ತಮಾನದ ಮಹಾನ್‌ ಸಾಧಕರು ಭವಿಷ್ಯತ್ತಿನಲ್ಲಿ ಆರಾಧನೆಗೆ ಒಳಗಾಗುತ್ತಾರೆ ಎಂದಾದರೆ ಮುಂದೊಂದು ದಿನ ಇವನನ್ನು ಜನರು ದೇವರೆಂದು ಪೂಜಿಸಬಹುದು. ಆರ್ಯಾವರ್ತದಲ್ಲಿ ಮಾತ್ರವಲ್ಲ, ಎಲ್ಲೆಲ್ಲೂ!

ನಾನು ಭಾವನೆಗಳನ್ನು ನಿಯಂತ್ರಿಸುತ್ತಾ ಶಾಂತಸ್ವರದಲ್ಲಿ ಕೇಳಿದೆ: “ಕೃಷ್ಣಾ, ನೀನಿರುವವರೆಗೆ ಪಾಂಡವರು ಸೋಲಲು ಹೇಗೆ ಸಾಧ್ಯ ಹೇಳು? ಧರ್ಮಕ್ಕೆ ಸೋಲಾಗಲು ಸಾಧ್ಯವಿಲ್ಲ ಎಂದು ನಂಬಿದವನು ನಾನು. ಪಾಂಡವರು ಈಗ ಕುರು ಸಾಮ್ರಾಜ್ಯದ ಅಧಿಪತಿಗಳಾದರು. ನಿನ್ನ ನೇತೃತ್ವದಲ್ಲಿ ಇನ್ನಾದರೂ ಆರ್ಯಾವರ್ತ ಧರ್ಮ ಸಾಮ್ರಾಜ್ಯವಾಗಲಿ. ಇಷ್ಟು ದಿನ ಯುದ್ಧ ರಂಗದ ವಾರ್ತೆಯನ್ನು ಕರ್ಣನೋ, ದುರ್ಯೋಧನನೋ ತಿಳಿಸುತ್ತಿದ್ದರು. ಈಗ ನೀನೇ ತಿಳಿಸ ಬೇಕಾಗಿದೆ. ಇಂದು ಏನು ನಡೆಯಿತೆಂಬುದನ್ನು ಸ್ಪಷ್ಟವಾಗಿ ತಿಳಿಸುತ್ತೀಯಾ?”

ಕೃಷ್ಣನೆಂದ: ಆಚಾರ್ಯರೇ, ಇಂದು ಬೆಳಿಗ್ಗೆ, ಅಳಿದುಳಿದ ಬಲದೊಡನೆ ನಮ್ಮನ್ನು ಎದುರಿಸಲು ಶಲ್ಯಭೂಪತಿ ಬಂದ. ಎಷ್ಟು ಹೊತ್ತು? ಅವನ ಕತೆಯನ್ನು ನಮ್ಮ ಯುಧಿಷ್ಟಿರ ಬಹಳ ಸುಲಭವಾಗಿ ಮುಗಿಸಿದ. ಭಯಭೀತನಾದ ದುರ್ಯೋಧನ ಯುದ್ಧರಂಗದಿಂದ ಪಲಾಯನ ಮಾಡುವುದರಲ್ಲಿದ್ದ. ಆಗ ಅಣ್ಣ ಬಲರಾಮ ದೇವನ ಆಗಮನವಾಯಿತು. ಅವನ ಸಮ್ಮುಖದಲ್ಲಿ ಭೀಮ ದುರ್ಯೋಧನರ ನಡುವೆ ಗದಾಯುದ್ಧ ನಡೆಯಿತು. ದುರ್ಯೋಧನ ನಿಯಮಕ್ಕೆ ವಿರುದ್ಧವಾಗಿ ಭೀಮನ ತಲೆಗೆ ಗದಾಪ್ರಹಾರ ಮಾಡಿದ. ಭೀಮ ಮೂರ್ಛೆ ತಪ್ಪಿಬಿದ್ದ. ನಮಗೆ ತೀವ್ರ ಕಳವಳವಾಯಿತು. ಸ್ವಲ್ಪ ಹೊತ್ತಲ್ಲಿ ಮೂರ್ಛೆ ತಿಳಿದೆದ್ದ ಭೀಮ ಒಂದೇ ಸವನೆ ದುರ್ಯೋಧನನ ತೊಡೆಗಳಿಗೆ ಪ್ರಹಾರ ಮಾಡಿದ. ದುರ್ಯೋಧನನ ತೊಡೆಗಳು ಮುರಿದು ಹೋಗಿ ಅವನು ಬಿದ್ದು ಬಿಟ್ಟ. ಈಗ ಕೊನೆಯುಸಿರೆಳೆಯುತ್ತಿರಬಹುದು”.

ಕೃಷ್ಣ ನಿರ್ವಿಕಾರನಾಗಿ ವರದಿಯೊಪ್ಪಿಸಿದ. ಒಂದು ಜೀವ, ಅದು ಯಾರದೇ ಆಗಿರಲಿ, ನೋವಿನಿಂದ ಒದ್ದಾಡುತ್ತಾ ಕೊನೆಯುಸಿರು ಎಳೆಯುವ ಹಂತದಲ್ಲಿರುವಾಗ ಆ ಸ್ಥತಿಯಲ್ಲಿ ಕುರುಕ್ಷೇತ್ರದಲ್ಲಿ ಹಾಗೇ ಬಿಟ್ಟುಬಂದರಲ್ಲಾ ಇವರು? ಅದನ್ನು ತಿಳಿಸುವಾಗ ಕೃಷ್ಣನಲ್ಲಿ ನೋವಿಲ್ಲ, ವಿಷಾದವಿಲ್ಲ. “ದುಃಖೇಷುನುದ್ವಿಗ್ನ ಮನಾಃ ಸುಖೇಷು ವಿಗತಸ್ಪೃಹಃ, ವೀತರಾಗ ಭಯ ಕ್ರೋಧ, ಸ್ಥತಧೀರ್ಮುನಿರುಚ್ಯತೇ”. ಇವನು ಸುಖ ದುಃಖಗಳಿಗೆ ಸ್ಪಂದಿಸುವುದಿಲ್ಲ. ಇವನನ್ನು ಯಾವ ಭಾವಗಳೂ ಕಾಡಲಾರವು. ಇವನು ಸ್ಥಿತಪ್ರಜ್ಞ! ಪದ್ಮಪತ್ರ ಮಿವಾಂಭಸಿ. ನೀರಲ್ಲಿದ್ದರೂ ತಾವರೆ ಯೆಲೆ ಎಲ್ಲಿ ಒದ್ದೆಯಾಗುತ್ತದೆ? ಹಸ್ತಿನಾವತಿಯ ಚಕ್ರವರ್ತಿಯಾಗಬೇಕಾದವ, ಅಲ್ಲಿ ಕುರು ಕ್ಷೇತ್ರದ ರಣಧಾರಿಣಿಯಲ್ಲಿ, ಬಾಯಿಗೆ ನೀರಿಲ್ಲದೆ ಸಾಯುತ್ತಿದ್ದಾನೆ. ದುರ್ಯೋಧನ ಮಾಡಿದ್ದು ತಪ್ಪೇ ಇರಬಹುದು. ಆದರೆ ಅವನನ್ನು ಹಾಗೆ ಸಾಯಗೊಡುವುದು ಯಾವ ಧರ್ಮ?”

ನನ್ನ ಮನಸ್ಸನ್ನು ಓದಿಕೊಂಡವನಂತೆ ಯುಧಿಷ್ಠಿರ ಉತ್ತರವಿತ್ತ: “ತಾತಾ, ದುರ್ಯೋಧನ ಅಲ್ಲಿ ಒಬ್ಬಂಟಿಯಾಗಿಲ್ಲ. ಅಲ್ಲೀಗ ಕೃತವರ್ಮ ಕೃಪಾಚಾರ್ಯ ಮತ್ತು ಗುರುಪುತ್ರ ಅಶ್ವತ್ಥಾಮರಿದ್ದಾರೆ. ಸಂಜಯ ಯುದ್ಧದ ವಾರ್ತೆ ತಿಳಿಸಲು ಅರಮನೆಯತ್ತ ಹೋಗಿದ್ದಾನೆ. ದುರ್ಯೋಧನನ ಚಿಂತೆಯನ್ನು ಬಿಡಿ. ನಿಮ್ಮ ದೇಹಸ್ಥತಿ ಈಗ ಹೇಗಿದೆ ತಾತಾ?”

“ನನ್ನ ದೇಹದ ಬಗ್ಗೆ ಚಿಂತಿಸುವುದನ್ನು ನಾನೆಂದೋ ಬಿಟ್ಟಿದ್ದೇನೆ. ನನ್ನನೀಗ ಕಾಡುವುದು ಭಾವಗಳು ಮಾತ್ರ ಮಗೂ. ಕರ್ಣ ನನ್ನಲ್ಲಿ ಅವನ ಕೊನೆಯಾಸೆಯನ್ನು ಹೇಳಿದ್ದಾನೆ. ಅವನ ದೇಹಕ್ಕೆ ಅವನ ಮಗ ವೃಷಕೇತುವೇ ಅಂತ್ಯಸಂಸ್ಕಾರ ನಡೆಸಬೇಕಂತೆ. ನೀನು ಇದೊಂದನ್ನು ನಡೆಸಿಕೊಟ್ಟರೆ ಸಾಕು. ನನ್ನನ್ನೀಗ ಪ್ರಶ್ನೆಯೊಂದು ಬಾಧಿಸುತ್ತಿದೆ. ನನ್ನ ಎದೆಗೆ ಬಾಣ ಹೂಡಿ ಏಳಲಾಗದ ಸ್ಥತಿಗೆ ತಂದವನು ನಿಮ್ಮೊಡನೆ ಯಾಕೆ ಬಂದ?”

ಯುಧಿಷ್ಠಿರ ನನ್ನ ಕೈ ಹಿಡಿದುಕೊಂಡು ಹೇಳಿದ: “ತಾತಾ, ಇವನು ದ್ರುಪದ ಪುತ್ರ ಶಿಖಂಡಿ. ದೈಹಿಕ ನ್ಯೂನತೆಗಾಗಿ ಎಳವೆಯಿಂದಲೇ ಎಲ್ಲರಿಂದಲೂ ತುಚ್ಛೀಕಾರಕ್ಕೆ ಒಳಗಾಗುತ್ತಿದ್ದವನು. ಜೀವನದಲ್ಲಿ ಮಹತ್ತಾದುದನ್ನೇನಾದರೂ ಸಾಧಿಸಿ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯ ಬೇಕೆಂದು ಕೊಂಡೇ ಬೆಳೆದನಂತೆ. ಯುದ್ಧರಂಗದಲ್ಲಿ ಇದ್ದಕ್ಕಿದ್ದಂತೆ ನಿಮ್ಮೆದುರು ಕಾಣಿಸಿಕೊಂಡು ಊಹೆಗೂ ನಿಲುಕದ ವೇಗದಲ್ಲಿ ಬಾಣ ಪ್ರಯೋಗಿಸಿ ನಿಮ್ಮನ್ನು ಈ ಸ್ಥತಿಗೆ ತಂದುದಕ್ಕೆ ಅಂದು ಹೆಮ್ಮೆ ಪಟ್ಟಿದ್ದ. ಕುರು ಸಾಮ್ರಾಜ್ಯದ ನೈತಿಕ ನೆಲೆಗಟ್ಟನ್ನು ಪುಡಿ ಮಾಡಿದೆನೆಂದು ಈಗ ಪಶ್ಚಾತ್ತಾಪ ಪಡುತ್ತಿದ್ದಾನೆ. ಅವನು ಬಿಟ್ಟ ಬಾಣವನ್ನು ಅವನೇ ಹಿಂದಕ್ಕೆಳೆದು ನಿಮ್ಮ ಪಾದಸ್ಪರ್ಶ ಮಾಡಿ, ಕ್ಷಮೆ ಕೇಳಿ, ಪಾಪ ಪರಿಮಾರ್ಜನೆ ಮಾಡಿಕೊಳ್ಳಲು ಬಂದಿದ್ದಾನೆ”.

ನನಗೆ ಗಾಬರಿಯಾಯಿತು. ಎಂಟು ದಿನಗಳಿಂದ ನಾನು ಹೀಗಿದ್ದೇನೆ. ಕ್ಷಮೆ! ಈಗ! ಶಿಖಂಡಿ ಎಲ್ಲಾದರೂ ಈ ಬಾಣವನ್ನು ಎಳೆದು ತೆಗೆದರೆ ನಾನು ಸತ್ತೇ ಹೋಗುತ್ತೇನೆ. ಅಂಬೆ ಅಗ್ನಿ ಪ್ರವೇಶಕ್ಕೆ ಮುನ್ನ ಹೇಳಿದ ಮಾತುಗಳು ನೆನಪಾದವು: “ಮುಂದಿನ ಜನ್ಮವೆಂಬುದೊಂದಿದ್ದರೆ ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಜೀವಿಯಾಗಿ ನಿನ್ನನ್ನು ಕೊಲ್ಲುತ್ತೇನೆ”. ಆ ಅಂಬೆ ಈಗ ಶಿಖಂಡಿಯಾಗಿ ಮರುಹುಟ್ಟು ಪಡೆದಳೆ? ನಾನು ಶಿಖಂಡಿಯನ್ನು ದಿಟ್ಟಿಸಿದೆ. ಸ್ತ್ರೀಯರ ವೇಷ ಭೂಷಣಗಳಿವೆ. ಎದೆಗವಚ, ಶಿರಸ್ತ್ರಾಣಗಳಿವೆ. ಮುಖ ಸ್ತ್ರೀಯಂತಿದೆ. ಮೂಗಿನ ಕೆಳಗೆ ತೆಳುವಾದ ಮೀಸೆಯಿದೆ. ಒರಟೊರಟಾದ ಕೈಗಳಲ್ಲಿ ಬಳೆಗಳಿವೆ. ಹಣೆಯಲ್ಲಿ ಬೊಟ್ಟಿನ ಬದಲು ಮೂಗಿನ ಮೇಲ್ತುದಿಯಿಂದಲೇ ಆರಂಭವಾದ ಕುಂಕುಮದ ಉದ್ದನೆಯ ನಾಮವಿದೆ. ಇದು ಅಂಬೆಯಾಗಿರಲು ಸಾಧ್ಯವಿಲ್ಲ. ಪುನರ್ಜನ್ಮವೆಂಬುದು ನಂಬಿಕೆ ಮಾತ್ರ. ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯಚ’ ಲೋಕದ ಒಳಿತನ್ನು ಗಮನದಲ್ಲಿಟ್ಟುಕೊಂಡು ವೈಯಕ್ತಿಕ ಸಾಧನೆ ಮಾಡಬೇಕೆಂಬ ಸದುದ್ದೇಶದಿಂದ ಯಾವನೋ ಮಹಾತ್ಮ ಪುನರ್ಜನ್ಮದ ಕಲ್ಪನೆಗೆ ಕಾರಣನಾಗಿದ್ದಾನೆ.

‘ಧ್ರುವೋ ಜನ್ಮ ಮೃತಸ್ಯಚ’. ಸತ್ತವರಿಗೆ ಮರುಹುಟ್ಟು ಇದೆಯೆನ್ನುವುದು ಮರಣ ದುಃಖ ಭರಿಸಿಕೊಳ್ಳಲು ಮನುಜ ಸಂಕುಲಕ್ಕೆ ಮಹಾತ್ಮನೊಬ್ಬ ನೀಡಿದ ಸಾಂತ್ವನ ವಾಕ್ಯ. ನಮ್ಮ ಹೃದಯಕ್ಕೆ ಹತ್ತಿರವಾದವರು ಸತ್ತಾಗ ನಾವು ಹಾಗಂದುಕೊಂಡು ಸಮಾಧಾನಪಟ್ಟುಕೊಳ್ಳಬೇಕು. ಬೇರೇನನ್ನು ಮಾಡಲು ಸಾಧ್ಯ? ಹುಟ್ಟಿದವರು ಸತ್ತರೆ ಅಲ್ಲಿಗೆ ಮುಗಿದೇ ಹೋಯಿತು. ಸತ್ತವರು ಮತ್ತೆ ಹುಟ್ಟುವುದಿಲ್ಲ. ಮಾನವ ಸಂಕುಲ ಎಷ್ಟೊಂದು ಮಿತಿಗಳ ನಡುವೆ ಬದುಕಬೇಕಾಗಿದೆ! ನಮ್ಮಿಷ್ಟದಂತೆ ಹುಟ್ಟಲು ಸಾಧ್ಯವಿಲ್ಲ. ಆತ್ಮಹತ್ಯೆಯ ಹೊರತಾಗಿ ನಮ್ಮಮಿಷ್ಟದಂತೆ ಸಾಯಲೂ ಸಾಧ್ಯವಿಲ್ಲ. ಹಾಗೆ ನೋಡಿದರೆ ಬೇಕೆಂದಾಗ ಸಾಯಲು ನನ್ನಿಂದ ಸಾಧ್ಯವಿದೆ. ಅದು ಶಿಖಂಡಿಯ ಕೃಪೆಯಿಂದಾಗಿ. ಆದರೆ ಈ ಶಿಖಂಡಿಯ ಕೈಯಿಂದಲೇ ನನಗೆ ಸಾವು ಬರಬಾರದು. ಅಂಬೆಯ ಮಾತು ನಿಜವಾಗಬಾರದು.

ಶಿಖಂಡಿಯನ್ನು ಹೊರತುಪಡಿಸಿ ಇಲ್ಲಿರುವವರಲ್ಲಿ ಯಾರಾದರೊಬ್ಬನನ್ನು ನಾನು ಆಯ್ಕೆ ಮಾಡಿಕೊಳ್ಳಬೇಕು. ಯಾರನ್ನು? ಈ ಕೃಷ್ಣನಿಂದ ಬಾಣವನ್ನು ಕೀಳಿಸಲೆ? ಇವನು ಮಹಾವ್ಯಕ್ತಿ. ಇವನಿಂದಾಗಿ ಪಾಂಡವರು ಯುದ್ಧ ವಿಜಯಿಗಳಾಗಿದ್ದಾರೆ. ಇವನು ಕಂಸನ ಸರ್ವಾಧಿಕಾರವನ್ನು ಪ್ರಶ್ನಿಸಿದವನು. ಸ್ತ್ರೀಯರಿರುವುದೇ ಭೋಗಕ್ಕೆಂದು ಕಾರಾಗೃಹದಲ್ಲಿ ನರಕಾಸುರ ಕೂಡಿಟ್ಟಿದ್ದ ಸ್ತ್ರೀಯರಿಗೆ ವಿಮೋಚನೆಯ ಹಾದಿಯನ್ನು ತೋರಿಸಿಕೊಟ್ಟವನು. ವರ್ಣ, ಜಾತಿಗಳಿಲ್ಲದ ಮಾನವ ಕುಲ ರೂಪುಗೊಳ್ಳಬೇಕೆಂಬ ಮಹಾಮಹಿಮನು. ಉದಾರ ಚರಿತಾನಾಂತು ವಸುಧೈವ ಕುಟುಂಬಕಂ. ಇಡೀ ವಿಶ್ವವನ್ನೇ ತನ್ನ ಕುಟುಂಬವೆಂದು ಭಾವಿಸಿಕೊಂಡಿರುವ ವಿಶ್ವ ಮಾನವನು. ಯದುವಂಶೀಯ ನಾದ ಕೃಷ್ಣ ತನ್ನದೇ ವಂಶದ ಕುಂತೀಪುತ್ರರ ಪಕ್ಷ ವಹಿಸಿದ್ದು ಸ್ವಜನ ಪಕ್ಷಪಾತವಾಗುವುದಿಲ್ಲ. ಅವನು ಧರ್ಮ ಪಕ್ಷಪಾತಿ. ಅವನ ಪಾಂಡವ ಪ್ರೇಮ ಜಾತ್ಯತೀತತೆಯ ಸಂಕೇತ. ಆದರೂ ಅವನಿಗೆ ಯುದ್ಧ ತಪ್ಪಿಸಲು ಸಾಧ್ಯವಿತ್ತು. ಅಂದು ಸಂಧಾನಕ್ಕೆಂದು ಹಸ್ತಿನಾವತಿಗೆ ಬಂದವನು ಮಾತುಕತೆಗಳು ವಿಫಲವಾದಾಗ ತುಂಬಿದ ಸಭೆಯಲ್ಲಿ ಅವನು ಕರ್ಣನ ಜನ್ಮರಹಸ್ಯವನ್ನು ಬಯಲು ಮಾಡಬೇಕಿತ್ತು. ಕರ್ಣನನ್ನು ಚಕ್ರವರ್ತಿಯನ್ನಾಗಿಸುವ ಸಲಹೆ ಮಂಡಿಸಬೇಕಿತ್ತು. ಆಗ ದುರ್ಯೋಧನ ಅದನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತಿದ್ದ. ಹಾಗೆ ಮಾಡದ ಕೃಷ್ಣ ಹದಿನೆಂಟು ದಿನಗಳ ರಕ್ತಪಾತಕ್ಕೆ ಕಾರಣನಾದ. ದೊಡ್ಡವನ ಸಣ್ಣತನ! ಇವನ ಕೈಯಲ್ಲಿ ನಾನು ಸಾಯಬಾರದು.

ಯುಧಿಷ್ಠಿರನ ಕೈಯಲ್ಲಿ ಸಾಯಲೆ? ಅವನು ಮುಂದಿನ ಸಮ್ರಾಟನಾಗಲಿರುವವನು. ವೇದಶಾಸ್ತ್ರ ಸಂಪನ್ನನಾಗಿ ಧರ್ಮರಾಯನೆಂದು ಖ್ಯಾತನಾದವನು. ಆದರೆ ಕಾರಣ ಏನೇ ಇರಲಿ, ಮೊನ್ನೆ ಸುಳ್ಳು ಹೇಳಿ ಗುರು ದ್ರೋಣರ ಮರಣಕ್ಕೆ ಕಾರಣನಾಗಿಬಿಟ್ಟ. ಗುರುಹತ್ಯಾ ಪಾತಕದಲ್ಲಿ ಅವನಿಗೂ ಪಾಲಿದೆ. ಅವನದು ದ್ಯೂತವನ್ನಾಡಿ ಇಂದ್ರಪ್ರಸ್ಥವನ್ನು ಕಳೆದುಕೊಂಡ ಕೈ. ದ್ರೌಪದಿಯ ವಸ್ತ್ರಾಪಹರಣಕ್ಕೆ ಕಾರಣವೊದಗಿಸಿದ ಕೈ. ಪಾಂಡವರ ಅರ್ಥಹೀನ ವನವಾಸ, ಅಜ್ಞಾತವಾಸಗಳಿಗೆ ಕಾರಣವಾದ ಕೈ. ಅವನ ಚಟವೇ ಮಹಾಭಾರತ ಯುದ್ಧಕ್ಕೆ ಕಾರಣ. ಅವನ ದ್ಯೂತವ್ಯಸನ ಪಾಪಲೇಪಿತ ಹಸ್ತದಿಂದ ನಾನು ಸಾಯಬಾರದು.

ಆರ್ಯಾವರ್ತದ ಮಹಾಮಲ್ಲ ಭೀಮಸೇನನ ಕೈಯಿಂದ ಈ ಬಾಣವನ್ನು ಕೀಳಿಸಲೆ? ಜಗಜಟ್ಟಿಯಾದರೂ ಯುಧಿಷ್ಠಿರನ ಅಕೃತ್ಯಗಳನ್ನು ಖಂಡಿಸದೆ ಷಂಡ ಬದುಕು ಸಾಗಿಸಿದವ. ಅಂದು ಕಪಟದ್ಯೂತ ನಡೆಯದಂತೆ ಇವನಿಗೆ ತಡೆಯಲು ಸಾಧ್ಯವಿತ್ತು. ಅಣ್ಣ ದ್ಯೂತದಲ್ಲಿ ಇಂದ್ರಪ್ರಸ್ಥವನ್ನು, ತಮ್ಮಂದಿರನ್ನು, ಸ್ವಯಂ ಅವನನ್ನು ಮತ್ತು ಐವರ ಅರಸಿ ದ್ರೌಪದಿಯನ್ನು ಪಣಕ್ಕೊಡ್ಡಿದಾಗ ಅದನ್ನು ಪ್ರಶ್ನಿಸದವನು. ನೀನೂ, ನಿನ್ನ ದ್ಯೂತವೂ ಹಾಳಾಗಿ ಹೋಗಲಿ. ನಾನು ನಿನ್ನ ಪಣಕ್ಕೆ ಬದ್ಧನಲ್ಲ ಎಂದು ಇವನು ತಮ್ಮಂದಿರೊಡನೆ ದ್ರೌಪದೀ ಸಹಿತನಾಗಿ ಇಂದ್ರಪ್ರಸ್ಥಕ್ಕೆ ಬಂದುಬಿಡುತ್ತಿದ್ದರೆ ಈ ಯುದ್ಧ ಸಂಭವಿಸುತ್ತಿರಲಿಲ್ಲ. ಹೆಂಡತಿಯ ಸೀರೆಯನ್ನು ಪರ ಪುರುಷನೊಬ್ಬ ತನ್ನ ಕಣ್ಣೆದುರೇ ಸೆಳೆಯುವಾಗ ಸುಮ್ಮನಿದ್ದ ಇವನು ಷಂಡನಲ್ಲದೆ ಇನ್ನೇನು? ಎಂದೋ ಮಾಡಿದ ಪ್ರತಿಜ್ಞೆಯನ್ನು ಅನಾಗರಿಕವಾಗಿ ಈಡೇರಿಸಿಕೊಂಡವನು. ಇವನದು ದುಶ್ಯಾಸನನ ರಕ್ತವನ್ನು ಪಾನ ಮಾಡಿದ ಕೈ. ದುಶ್ಯಾಸನನ ಕರುಳನ್ನು ಎಳೆದೆಳೆದು ಬೀಭತ್ಸವಾಗಿ ದ್ರೌಪದಿಗೆ ಮುಡಿಸಿದ ಕೈ. ದುರ್ಯೋಧನನ ಊರುಭಂಗ ಮಾಡಿದ ಕೈ. ಇವನ ಕೈಯಿಂದ ನಾನು ಸಾಯಬಾರದು.

ಧನುರ್ವಿದ್ಯಾ ಧುರಂಧರ ಅರ್ಜುನನ ಕೈಯಿಂದ ಸಾವನ್ನು ಆಹ್ವಾನಿಸಲೆ? ಇವನೂ ಭೀಮನ ಹಾಗೇ. ಕಣ್ಣೆದುರು ನಡೆಯುತ್ತಿದ್ದ ಅನ್ಯಾಯವನ್ನು ಪ್ರತಿಭಟಿಸದೆ ಸುಮ್ಮನಿದ್ದವನು. ಅಂದು ದ್ರೌಪದಿ ವಸ್ತ್ರಾಪಹರಣದ ಸಂದರ್ಭದಲ್ಲಿ ಇವನ ಧನುರ್ವೇದ ಉಪಯೋಗಕ್ಕೇ ಬರಲಿಲ್ಲ. ಒಂದರ್ಥದಲ್ಲಿ ಇವನು ಷಂಡನೇ. ಒಂದು ವರ್ಷ ಪೂರ್ತಿ ಬೃಹನ್ನಳೆ ವೇಷಧಾರಿಯಾಗಿ ವಿರಾಟ ನಗರಿಯ ಗಣಿಕೆಯರ ಸಮೂಹದಲ್ಲಿ ಷಂಡ ಬಾಳನ್ನು ಸಾಕ್ಷಾತ್ಕರಿಸಿಕೊಂಡವನು. ಶಿಖಂಡಿಯ ಛಾಯೆಯಿರುವ ಇವನ ಕೈಯಿಂದಲೂ ನನಗೆ ಸಾವು ಬರಬಾರದು.

ನಕುಲ ಸಹದೇವರಿದ್ದಾರೆ. ಇವರಲ್ಲೊಬ್ಬನಿಂದ ಬಾಣ ಕೀಳಿಸಲೇ? ಇವರೂ ನಿರುಪಯುಕ್ತರು. ದ್ರೌಪದೀ ವಸ್ತ್ರಾಪಹರಣಕ್ಕೆ ಮೌನಪ್ರೇಕ್ಷಕರಾದವರು. ಹನ್ನೆರಡು ವರ್ಷದ ವನವಾಸ, ಒಂದು ವರ್ಷ ಅಜ್ಞಾತವಾಸವನ್ನು ತುಟಿ ಪಿಟಕ್ಕೆನ್ನದೆ ಸಹಿಸಿಕೊಂಡವರು. ಏನು ಪುರುಷಾರ್ಥ ಸಾಧಿಸಿದರು? ಸ್ವತಂತ್ರ ವ್ಯಕ್ತಿತ್ವವೇ ಇಲ್ಲದ ಷಂಡ ಬಾಳು ಇವರದು. ಇವರ ಕೈಯಲ್ಲಿ ನಾನು ಸಾಯುವುದಿಲ್ಲ.

ಇನ್ನುಳಿದಿರುವುದು ಅವಳು ಮಾತ್ರ. ದ್ರೌಪದಿ! ಕುರು ಸಾಮ್ರಾಜ್ಯದಿಂದ ಅತ್ಯಂತ ಅನ್ಯಾಯಕ್ಕೆ ಒಳಗಾದವಳು. ನನ್ನಮ್ಮ ಗಂಗಾದೇವಿ ಅರಸೊತ್ತಿಗೆಯ ಭಾವರಹಿತ ಜೀವನಕ್ಕೆ ವಿಮುಖಳಾಗಿ ಹಿಮಾಲಯದತ್ತ ನಡೆದಳು. ಕುರು ಸಾಮ್ರಾಜ್ಯದ ಪತನಕ್ಕೆ ನಾಂದಿಯಾದ ಘಳಿಗೆಯದು. ಅವಳನ್ನು, ಯೋಗಿನಿಯಾಗಬೇಕೆಂದಿದ್ದವಳನ್ನು ಅಪ್ಪ ಮದುವೆಯಾದದ್ದೇ ತಪ್ಪು. ಅಪ್ಪ ಸತ್ಯವತಿಯನ್ನು ಇಷ್ಟಪಟ್ಟ. ನಾನು ಪ್ರತಿಜ್ಞಾಬದ್ಧನಾಗಿ ಅವಳನ್ನು ಕರೆತಂದು ಅಪ್ಪನಿಗೆ ಮದುವೆ ಮಾಡಿಸಿದೆ. ಅವಳು, ಪರಾಶರ ಮುನಿಗಳಿಗೆ ಸಕಲವನ್ನೂ ಸಮರ್ಪಿಸಿದವಳು, ಹಸ್ತಿನಾವತಿಯ ಸಮ್ರಾಜ್ಞಿಯಾಗಲು ಒಪ್ಪಿ ಬಂದಳಲ್ಲಾ, ಅವಳದೂ ತಪ್ಪೇ. ಸಾಲದೆಂಬಂತೆ ನನ್ನನ್ನು ಕಾಶಿಗೆ ಕಳುಹಿಸಿ ಮೂವರು ಅರಗುವರಿಯರನ್ನು ಅವಳ ಮಗನಿಗಾಗಿ ತರುವಂತೆ ಪ್ರೇರೇಪಿಸಿ ಅನರ್ಥ ಪರಂಪರೆಗೆ ಕಾರಣಳಾದಳು. ಅಂಬೆ ಕಾಶಿಯಲ್ಲೇ ಸಾಲ್ವ ಭೂಪತಿಯ ಬಗೆಗಿನ ಒಲವನ್ನು ನನ್ನಲ್ಲಿ ತಿಳಿಸುತ್ತಿದ್ದರೆ ನಾನವಳನ್ನು ಬಿಟ್ಟು ಬಿಡುತ್ತಿದ್ದೆ. ಅವಳೂ ತಪ್ಪು ಮಾಡಿದಳು. ಈ ಮೂವರ ತಪ್ಪುಗಳು ಕುರು ಸಾಮ್ರಾಜ್ಯದ ಪತನಕ್ಕೆ ಕಾರಣಗಳಾದವು.

ಆದರೆ ಕುರು ಸಾಮ್ರಾಜ್ಯದ ಪತನಕ್ಕೆ ನೇರವಾಗಿ ಕಾರಣಳಾದವಳು ಇವಳು, ಈ ದ್ರೌಪದಿ. ಇವಳ ವಸ್ತ್ರಾಪಹರಣ ಪ್ರಕರಣವಲ್ಲದಿದ್ದರೆ ಯುದ್ಧವೇ ನಡೆಯುತ್ತಿರಲಿಲ್ಲ. ಇವಳು ಪಂಚಪಾಂಡವರ ಪತ್ನಿ. ಯುಧಿಷ್ಠಿರ ಶಿಬಿರಾಜನ ಮಗಳು ದೇವಕಿಯನ್ನು ವಿವಾಹವಾದವ. ಹಿಡಿಂಬೆ ಮತ್ತು ಜಲಂಧರೆ ಭೀಮಸೇನನ ಮಡದಿಯರು. ಅರ್ಜುನ ಉಲೂಪಿ, ಚಿತ್ರಾಂಗದೆ ಮತ್ತು ಸುಭದ್ರೆಯರ ಪತಿ. ಶಿಶುಪಾಲನ ಮಗಳು ರೇಣುಮತಿ ನಕುಲನ ಪತ್ನಿ. ಸಹದೇವ ಶಲ್ಯನ ಮಗಳು ವಿಜಯೆಯ ಮತ್ತು ಭಾನುರಾಜನ ಮಗಳು ಭಾನುಮತಿಯ ಗಂಡ. ಇಂಥಾ ಬಹುಪತ್ನೀ ವಲ್ಲಭರಾದ ಪಾಂಡವರನ್ನು ಏಕಸೂತ್ರದಲ್ಲಿ ಬಂಧಿಸಿದ ಶಕ್ತಿಯೇ ದ್ರೌಪದಿ.

ಕುಂತಿ ಬುದ್ಧಿವಂತೆ. ಈ ಅಪೂರ್ವ ರೂಪರಾಶಿ ಅರ್ಜುನನೊಬ್ಬನ ಮಡದಿಯಾದರೆ ಪಾಂಡವರು ಅವಳಿಗಾಗಿ ಕಚ್ಚಾಡಬಹುದೆಂದು ಅವಳನ್ನು ಐವರಿಗೂ ರಾಣಿಯನ್ನಾಗಿಸಿದಳು! ಅವಳೊಬ್ಬಳಿಲ್ಲದಿರುತ್ತಿದ್ದರೆ ಈ ಪಾಂಡವರು ತಮ್ಮ ತಮ್ಮ ರಾಣಿಯರೊಂದಿಗೆ ಮೈಮರೆತು ಸುಖ ಭೋಗಗಳಲ್ಲಿ ಸಂತೃಪ್ತರಾಗಿರುತ್ತಿದ್ದರು. ದ್ಯೂತದಲ್ಲೋ, ಮೃಗಯಾ ವಿಹಾರದಲ್ಲೋ ಹಾಯಾಗಿ ಕಾಲ ಕಳೆಯುತ್ತಿದ್ದರು. ದ್ರೌಪದಿ ಐವರ ಮಡದಿಯಾಗಿ ಸದಾ ಅವರಿಗೆ ನೆರಳಾದಳು. ಅವರಲ್ಲಿ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರ ವಹಿಸಿದಳು. ಕೌರವ ದ್ವೇಷಾಗ್ನಿಗೆ ಘೃತವನ್ನೆರೆಯುತ್ತಾ ಅದು ನಂದದಂತೆ ನೋಡಿಕೊಂಡಳು. ನನ್ನಮ್ಮ ಗಂಗಾದೇವಿಯಂತೆ ಪರಿಸ್ಥತಿಗೆ ಬೆನ್ನು ಹಾಕಿ ಓಡಿ ಹೋಗಲಿಲ್ಲ. ಸತ್ಯವತಿಯಂತೆ ಪರಿಸ್ಥತಿಯೊಡನೆ ರಾಜಿ ಮಾಡಿಕೊಳ್ಳಲಿಲ್ಲ. ಅಂಬೆಯಂತೆ ಯಾರನ್ನೂ ಸಂಕೀರ್ಣ ಸಮಸ್ಯೆಯಲ್ಲಿ ಸಿಲುಕಿಸಲಿಲ್ಲ. ಧರ್ಮ ಮಾರ್ಗದಲ್ಲೇ ನಡೆದು ಗುರಿ ಸಾಧಿಸಿದಳು. ಇವಳು ನಿಜವಾದ ಪತಿವ್ರತೆ. ಇವಳು ಲೋಕದ ಸಮಸ್ತ ನಾರೀಕುಲಕ್ಕೆ ಆದರ್ಶಪ್ರಾಯಳು. ಇವಳ ವಸ್ತ್ರಾಪಹರಣ ಕಾಲದಲ್ಲಿ ಸುಮ್ಮನಿದ್ದ ನಾನು ಈ ಮಹಾಯುದ್ಧಕ್ಕೆ ಕಾರಣನಾದೆ. ನನ್ನ ಪಾಪಕ್ಕೆ ಈಗ ಪ್ರಾಯಶ್ಚಿತ್ತವಾಗ ಬೇಕು.

ನಾನು ದೃಢ ನಿರ್ಧಾರದಲ್ಲಿ, ಮೃದುವಾದ ದನಿಯಲ್ಲಿ ಕರೆದೆ: “ಅಮ್ಮಾ ದ್ರೌಪದೀ, ಒಮ್ಮೆ ಇಲ್ಲಿಗೆ ಬರುತ್ತೀಯಾ ತಾಯಿ? ಎದೆ ತುಂಬಾ ನೋಯುತ್ತಿದೆ. ಈ ಬಾಣವನ್ನು ನಿಧಾನವಾಗಿ ಕಿತ್ತು ತೆಗೆಯುತ್ತೀಯಾ? ಗಂಡಸರಲ್ಲಿ ಹೇಳಿದರೆ ಅವರು ಒರಟಾಗಿ ಕಿತ್ತು ನೋವು ಹೆಚ್ಚಿಸಿಯಾರು. ಅದಕ್ಕೇ ನಿನ್ನಲ್ಲಿ ಹೇಳುತ್ತಿದ್ದೇನೆ. ನಿಧಾನವಾಗಿ ಬಾಣವನ್ನು ಕಿತ್ತು ನನ್ನನ್ನು ನೋವಿನಿಂದ ಪಾರು ಮಾಡುತ್ತೀಯಾ?”

ದ್ರೌಪದಿ ಸನಿಹಕ್ಕೆ ಬಂದಳು. ಒಂದು ನಿಮಿಷ ತಾಳು ತಾಯಿ. ಇಷ್ಟು ದಿನ ರಣಭೇರಿ, ಸಾವು ನೋವಿನ ವಿಷಾದ ಕೇಳಿ ಕೇಳಿ ವೃದ್ಧಜೀವ ನೆಮ್ಮದಿ ಕಳೆದುಕೊಂಡಿದೆ. ಈಗ ಮಧುರವಾದದ್ದನ್ನು ಕೇಳಬೇಕೆನಿಸುತ್ತದೆ. ಕೃಷ್ಣಾ, ಒಂದು ಮುರಳೀಗಾನ ನುಡಿಸುತ್ತೀಯಾ? ಮಧುರ ನಾದದಲ್ಲಿ ಮೈಮರೆಯಬೇಕೆನ್ನಿಸಿದೆ. ಒಂದೇ ಒಂದು. ದಯವಿಟ್ಟು ಇಲ್ಲವೆನ್ನಬೇಡ”.

ಕೃಷ್ಣನಿಗೆ ನನ್ನ ಭಾವ ಅರ್ಥವಾಯಿತು. ಅವನು ಕೊಳಲನ್ನು ಹೊರತೆಗೆದ. ಮೋಹನ ರಾಗದಲ್ಲಿ, ಮಂದ್ರಸ್ಥಾಯಿಯಲ್ಲಿ ಮುರಳಿಯನ್ನು ನುಡಿಸತೊಡಗಿದ. ನನ್ನ ಮೆಚ್ಚಿನ ರಾಗವದು. ನಾನು ಕಣ್ಣುಗಳನ್ನು ಮುಚ್ಚಿಕೊಂಡು ಮಧುರ ರಾಗಾಮೃತ ಪಾನ ಮಾಡತೊಡಗಿದೆ. ಕಣ್ಣ ಮುಂದೆ ಅಚ್ಚ ಹಿಮಚ್ಚಾದಿತ ಪ್ರದೇಶವೊಂದು ಕಾಣಿಸಿತು. ಅಲ್ಲಿಂದ ಅಲೆಮಾರಿಗಳಾಗಿ ತಂಡಗಳು ಹೊರಟವು. ಕೆಲವು ಪಶ್ಚಿಮಾಭಿಮುಖವಾಗಿ, ಇನ್ನು ಕೆಲವು ದಕ್ಷಿಣದತ್ತ. ನದೀ ಬಯಲಲ್ಲಿವಾಸ. ವೃತ್ತಿ ದನಗಾಹಿತನ. ಏಕತಾನತೆ ಕಳೆಯಲೆಂದು ಹಾಡುಗಳು, ಕುಣಿತಗಳು. ಯಾರು ಕಂಡು ಹಿಡಿದರೋ ಕೊಳಲನ್ನು? ಯಾರು ನುಡಿಸಿದರೋ ಅದರಲ್ಲಿ ಸಪ್ತ ಸ್ವರಗಳನ್ನು? ಉತ್ತರದಿಂದ ದಕ್ಷಿಣಕ್ಕೆ ಬಂದವರು ಸಿಂಧೂ ನದಿ ಬಯಲಿನ ದಸ್ಯುಗಳನ್ನು ಗೆದ್ದರು. ಗಂಗಾನದಿ ಬಯಲಿನುದ್ದಕ್ಕೂ ಹಬ್ಬಿಕೊಂಡರು. ದನಗಾಹಿತನದೊಡನೆ ಕೃಷಿಯನ್ನೂ ಕೈಗೊಂಡು ಸ್ಥಾವರರಾದರು. ಆಚೆ ಪಶ್ಚಿಮದತ್ತ ಹೋದವರು ಏನು ಮಾಡುತ್ತಾರೊ? ಆರ್ಯಕುಲವೇ ಶ್ರೇಷ್ಠವೆಂಬ ಭ್ರಮೆಯಲ್ಲಿ ಯಾವ ಮಹಾ ಯುದ್ಧಕ್ಕೆ, ಯಾರ ಮಾರಣ ಹೋಮಕ್ಕೆ ಯಾವಾಗ ಕಾರಣರಾಗುತ್ತಾರೊ?

ಅಲೆಮಾರಿ ಆರ್ಯರು ಗಂಗಾನದಿಯುದ್ದಕ್ಕೂ ತಳವೂರಿದಂತೆ ವರ್ಣ ವ್ಯವಸ್ಥೆ ಗಟ್ಟಿಯಾಯಿತು. ಜಾತಿಗಳು ಹುಟ್ಟಿಕೊಂಡವು. ಆಡಳಿತಕ್ಕಾಗಿ ಅರಸೊತ್ತಿಗೆ. ಆರ್ಯರನ್ನು ಸಮಾಜ ಕಂಟಕರನ್ನಾಗಿ ಮಾಡಿದ್ದೇ ಇವು. ಇವೀಗ ಮಹಾಯುದ್ಧಕ್ಕೂ ಕಾರಣವಾದವು. ಕುಲವರ್ಣ ಶ್ರೇಷ್ಠತೆಯ ಅಜ್ಞಾನ, ಜಾತಿ ಶ್ರೇಷ್ಠತೆಯ ಅಹಂಕಾರ, ಅರಸೊತ್ತಿಗೆಯ ಅಧಿಕಾರದ ಮದದಿಂದಾಗಿ ದುರ್ಯೋಧನ ತಾನೂ ನಾಶವಾದ, ಕುರು ಸಾಮ್ರಾಜ್ಯದ ಪತನಕ್ಕೂ ಕಾರಣನಾದ. ಆದರೆ ಈ ಕೃಷ್ಣ? ಇವನು ಆರ್ಯರ ಬೇರುಗಳ ಸಂಕೇತವಾದ ಕೊಳಲನ್ನು ಎಂದಿಗೂ ಕೈಬಿಡಲಿಲ್ಲ.

ನಾನೇಕೆ ಈ ಹೊತ್ತಲ್ಲಿ ಕೃಷ್ಣನ ಕೊಳಲಗಾನ ಕೇಳ ಬಯಸಿದೆ? ಅದು ಅಮ್ಮನ ಜೋಗುಳ ದಂತಿದೆ. ದೇಶ ಕಾಲಗಳನ್ನು ಮರೆಯಿಸಿ, ಅಸಮಾನತೆಗಳನ್ನು ತೊಡೆದು ಹಾಕಿ ನನ್ನನ್ನು ಮೂಲ ದತ್ತ ಒಯ್ಯುತ್ತಿದೆ. ವರ್ಣ, ಜಾತಿ, ಅರಸೊತ್ತಿಗೆಗಳಿಲ್ಲದ ದನಗಾಹಿತನಕ್ಕೆ. ಬೇರುಗಳ ಹುಡುಕಾಟಕ್ಕೆ. ಈ ಭಾಗ್ಯ ಯಾರಿಗಿದೆ? ಮರಣ ಮುಖದಲ್ಲಿ ಬೇರುಗಳ ದರ್ಶನ ಮತ್ತು ಇಚ್ಚಾಮರಣ!

ಏನು ಶಕ್ತಿಯಿದೆ ಈ ನಾದಕ್ಕೆ! ಜೀವನದ ಅಷ್ಟೂ ನೋವುಗಳನ್ನು ಈ ಗೊಲ್ಲರ ಕೃಷ್ಣ ತನ್ನ ಮುರಳೀನಾದದಿಂದ ಕಳೆಯುತ್ತಿದ್ದಾನೆ. ದ್ರೌಪದಿಯ ಮಾನ ರಕ್ಷಣೆ ಮಾಡಿದವನು. ನಾದವನ್ನು ಆಸ್ವಾದಿಸಲಾಗದವರು ನೋವನ್ನು ಎಂತು ಕಳೆಯಬಲ್ಲರು? ವಿಶ್ವದಲ್ಲಿರುವ ಶಾಶ್ವತ ಸತ್ಯಗಳು ಮೂರು: ಶಕ್ತಿ, ಬೆಳಕು ಮತ್ತು ನಾದ. ಇವನ್ನು ಗುರುತಿಸಿ ನಮ್ಮ ಉನ್ನತಿಗಾಗಿ ಬಳಸಿಕೊಳ್ಳುವುದೇ ಮೋಕ್ಷ. ಇರಲಿ. ಈ ಮಧುರ ನಾದ ಇದು ಹೀಗೆಯೇ ಇರಲಿ. ಇನ್ನಷ್ಟು, ಮತ್ತಷ್ಟು.

ಎಷ್ಟು ಹೊತ್ತಾಯಿತೊ? ಕೃಷ್ಣ ನಿಧಾನವಾಗಿ ಕೊಳಲಗಾನ ನಿಲ್ಲಿಸಿದ. ಮಧುರ ನಾದದ ಲೋಕ ಕಣ್ಮರೆಯಾಗಿ ನಾನು ಕಣ್ಣು ತೆರೆದು ಕೃಷ್ಣನನ್ನು ನೋಡಿದೆ. ಕೊನೆಯಾಸೆ ಈಡೇರಿಸಿದ್ದಕ್ಕೆ ಕಣ್ಣುಗಳಲ್ಲೇ ಅವನಿಗೆ ವಂದಿಸಿದೆ. ಕೃಷ್ಣ ಮಂದಹಾಸ ಬೀರಿದ. ನಾನು ದ್ರೌಪದಿಯನ್ನು ಹತ್ತಿರಕ್ಕೆ ಬರುವಂತೆ ಸಂಜ್ಞೆ ಮಾಡಿದೆ. ದ್ರೌಪದಿ ನಿಧಾನವಾಗಿ ನಡೆದು ಬಂದು ಪಾದಸ್ಪರ್ಶ ಮಾಡಿದಳು. ಅಲುಗಾಡತೊಡಗಿದ್ದ ಬಾಣವನ್ನು ಎಳೆದು ತೆಗೆಯಲು ಕೈ ಹಾಕಿದಳು.
*****
ಮುಗಿಯಿತು

ನೂರು ಮಂದಿ ಕೌರವರು

ದುರ್ಯೋಧನ, ಯುಯುತ್ಸು, ದುಶ್ಶಾಸನ, ದುಸ್ಸಹ, ದುಶ್ಶಲ, ಜಲಸಂಧ, ಸಮ, ಸಹ, ವಿಂದ, ಅನುವಿಂದ, ದುರ್ಧರ್ಷ, ಸುಬಾಹು, ದುಷ್ಟ್ರದರ್ಷಣ, ದುರ್ಮುಖ, ದುಷ್ಕರ್ಣ, ಕರ್ಣ, ವಿವಿಂಶತಿ, ವಿಕರ್ಣ, ಶಲ, ಸತ್ತ್ವ, ಸುಲೋಚನ, ಚಿತ್ರ, ಉಪಚಿತ್ರ, ಚಿತ್ರಾಕ್ಷ, ಚಾರುಚಿತ್ರ ಚರಾಶನ, ದುರ್ಮದ, ದುರ್ವಿಗಾಹ, ವಿವಿತ್ಸು, ವಿಕಟಾನನ, ಊರ್ಣನಾಭ, ಸುನಾಭ, ನಂದ, ಉಪನಂದ, ಚಿತ್ರಬಾಣ, ಚಿತ್ರವರ್ಮಾ, ಸುವರ್ಮಾ, ದುರ್ವಿರೋಚನ, ಆಯೋಬಾಹು, ಚಿತ್ರಾಂಗ, ಚಿತ್ರಕುಂಡಲ, ಭೀಮವೇಗ, ಭೀಮಬಲ, ಬಲಾಕೀ, ಬಲವರ್ಧನ, ಉಗ್ರಾಯುಧ, ಸುಶೇಷ, ಕುಂಡೋದರ, ಮಹೋದರ, ಚಿತ್ರಾಯುಧ, ನಿಷಂಗೀ, ಪಾಶೀ, ವೃಂದಾರಕ, ದೃಢವರ್ಮ, ದೃಢಕ್ಷತ್ರ, ಸೋಮಕೀರ್ತಿ, ಅನೂದರ, ದೃಢಸಂಧ, ಜರಾಸಂಧ, ಸತ್ಯಸಂಧ, ಸದಃಸುವಾಕ್, ಉಗ್ರಶ್ರವಸ, ಉಗ್ರಸೇನ, ಸೇನಾನಿ, ದುಷ್ಟರಾಜಯ, ಅಪರಾಜಿತ, ಪಂಡಿತಕ, ವಿಶಾಲಾಕ್ಷ, ದುರಾಧರ, ದೃಢಹಸ್ತ, ಸುಹಸ್ತ, ವಾತವೇಗ, ಸುರ್ವಚಸ, ಆದಿತ್ಯಕೇತು, ಬಹ್ವಾಶೀ, ನಾಗದತ್ತ, ಅಗ್ರಯಾಯೀ, ಕವಚೀ, ಕ್ರಥನ, ದಂಡೀ, ದಂಡಧಾರ, ಧನುರ್ಗೃಹ, ಉಗ್ರ, ಭೀಮರಥ, ವೀರಬಾಹು, ಅಲೋಲುಪ, ಅಭಯ, ರೌದ್ರಕರ್ಮ, ದೃಢರಥಾಶ್ರಯ, ಅನಾದೃಷ್ಯ, ಕುಂಡಭೇದೀ, ವಿರಾಮೀ, ಪ್ರಮಥ, ಪ್ರಮಾಥೀ, ದೀರ್ಘರೋಮ, ದೀರ್ಘಬಾಹು, ವ್ಯೂಢೋರು, ಕನಕಧ್ವಜ, ಕುಂಡಾಶೀ, ವಿರಜಸ.
————————–
ಆಧಾರ: ಕೆ. ಅನಂತರಾಮರಾವ್; ಸಂಪೂರ್ಣ ಮಹಾಭಾರತ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಿವಾರ
Next post ಹೊರಬರುವಾಗ ನಾನು ಬಹಳ ಎಚ್ಚರದಲ್ಲಿ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…