ಹೊರಬರುವಾಗ ನಾನು ಬಹಳ ಎಚ್ಚರದಲ್ಲಿ
ನನ್ನೆಲ್ಲ ವಸ್ತುವೂ ನನಗಷ್ಟೆ ದೊರೆವಂತೆ
ಸುಳ್ಳು ಕೈಗಳಿಗೆ ಸಿಗದಂತೆ ಪೆಟ್ಟಿಗೆಯಲ್ಲಿ
ಇಡುತಿದ್ದೆ ಎಷ್ಟೊಂದು ಭದ್ರವಾಗಿರುವಂತೆ ?
ನೀನು ನನ್ನೆಲ್ಲ ಆಭರಣಕ್ಕೂ ಮೀರಿದವ
ಅತಿ ಮೂಲ್ಯ ನೆಮ್ಮದಿ, ಹಿರಿಯ ಕಾಳಜಿ, ನಾನು
ನೆಚ್ಚಿರುವ ಪ್ರಿಯಗಳೊಳೆ ಶ್ರೇಷ್ಠ, ನನ್ನದು ಎನುವ
ಒಂದೇ ಒಂದು ಲಕ್ಷ್ಯ. ಹಾಗಿದ್ದರೂ ಏನು
ನೀ ಸದಾ ಇರುವ, ನೀ ಬಯಸಿದಂತಿರಗೊಡುವ
ನನ್ನ ಮೃದು ಹೃದಯದಾವರಣವೊಂದರ ಹೊರತು
ಅತಿಹೀನ ಕಳ್ಳ ವ್ಯಕ್ತಿಗು ಯಾವುದೇ ಹೊತ್ತು
ಕೈಗೆ ಸಿಗುವಂತೆ ರಕ್ಷಣೆಯ ಹೊರಗುಳಿದಿರುವೆ.
ನನ್ನಿಂದಲೂ ನಿನ್ನ ಕದಿವವರು ಇರಬಹುದು
ಇಂಥ ರತ್ನಕ್ಕಾಗಿ ಎಂಥವರೂ ಕೆಡಬಹುದು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 48
How careful was I when I took my way