ಚಿಕ್ಕದೇವರಾಜ ಒಡೆಯರು ರಾಜ್ಯವನ್ನಾಳುತ್ತಿದ್ದಾಗ ತಂಜಾವೂರಿನಲ್ಲಿ ವೆಂಕೋಜಿಯ ಮಗ ಸಾಹುಜಿ ಎಂಬಾತನು ಆಳುತ್ತಿದ್ದನು. ಒಂದು ದಿನ ಈ ಸಾಹುಜಿಯು “ಈ ಚಿಕ್ಕದೇವರಾಜನದು ಎಷ್ಟು ಗರ್ವ! ಅವನ ಸಂಸ್ಥಾನದಲ್ಲಿ ಮೇಲುಕೋಟೆಯೊಂದು ವಿನಾ ಪ್ರಸಿದ್ದ ವಿಷ್ಣು ಕ್ಷೇತ್ರವನ್ನಾವುದೂ ಇಲ್ಲ. ನಮ್ಮ ದೇಶದಲ್ಲಾದರೋ ಶ್ರೀರಂಗ, ಶ್ರೀಮುಷ್ಟ, ಕುಂಭಕೋಣ, ಕಂಚಿ, ಮನ್ನಾರಗುಡಿ ಮುಂತಾದ ವಿಷ್ಟು ಕ್ಷೇತ್ರಗಳೇ ಅಲ್ಲದೆ ಚಿದಂಬರ, ಮಧ್ಯಾರ್ಜುನ, ಮಧುರೆ, ರಾಮೇಶ್ವರ ಮುಂತಾದ ಶಿವಕ್ಷೇತ್ರಗಳೂ ಇನ್ನೂ ಅನೇಕ ಪುಣ್ಯಸ್ಥಳಗಳೂ ಇವೆ. ಇವನದೇನು ಹೆಚ್ಚು-ಇವನ ಸಣ್ಣ ರಾಜ್ಯದ್ದೇನು ದೊಡ್ಡಸ್ತಿಕೆ?” ಎಂದು ಹಂಗಿಸಿ ಮಾತನಾಡಿದನು. ಈ ವರ್ತಮಾನವನ್ನು ಕೇಳಿ ಚಿಕ್ಕದೇವ ರಾಜಒಡೆಯರು ಖಿನ್ನತೆಯನ್ನೂ ಕೋಪವನ್ನೂ ಧರಿಸಿ ಯೋಚಿಸಿ, ಕಡೆಗೆ ಉಪಾಯದಿಂದ ಶ್ರೀಮುಷ್ಟದಲ್ಲಿದ್ದ ಶ್ವೇತವರಾಹಸ್ವಾಮಿಯ ಮೂರ್ತಿಯನ್ನು ತರಿಸಿಕೊಳ್ಳಬೇಕೆಂದು ನಿಶ್ಚಯಿಸಿದರು. ಕೂಡಲೆ ಜಾಣರೂ ಯುಕ್ತಿವಂತರೂ ಆಗಿದ್ದ ಜನರು ಕೆಲವರನ್ನು ಕರೆಯಿಸಿ, ಅವರಿಗೆ ದ್ರವ್ಯವನ್ನು ಕೊಟ್ಟು, ರಹಸ್ಯವಾಗಿ ಆ ವಿಗ್ರಹವನ್ನು ತರಲು ಕೊಟ್ಟು ಕಳುಹಿಸಿದರು. ಅವರು ಶ್ರೀಮುಷ್ಟಕ್ಕೆ ಹೋಗಿ ಅಲ್ಲಿಯ ಅರ್ಚಕ ಮುಂತಾದವರಿಗೆ ಹಣವನ್ನು ಕೊಟ್ಟು, ರಾತ್ರಿ ವೇಳೆಯಲ್ಲಿ ಯಾರೂ ಅರಿಯದಂತೆ ಆ ಶ್ವೇತವರಾಹಸ್ವಾಮಿಯ ಪ್ರತಿಮೆಯನ್ನು ಬಿಜಮಾಡಿಸಿಕೊಂಡು ಶ್ರೀರಂಗಪಟ್ಟಣವನ್ನು ಸೇರಿದರು. ಆಗ ದೊರೆಗಳು ಆನಂದಪಟ್ಟು ಅರಮನೆಯ ಬಲಗಡೆಯಲ್ಲಿ ವಿಚಿತ್ರವಾದ ಒಂದು ಗುಡಿಯನ್ನು ಕಟ್ಟಿಸಿ ಅಲ್ಲಿ ಅದನ್ನು ಪ್ರತಿಷ್ಠೆ ಮಾಡಿಸಿದರು.
*****
[ವಂಶರತ್ನಾಕರ ೧೧೦-೧೧೧, ಮತ್ತು ವಂಶಾವಳಿ ಪುಟ ೧೩೯-೧೪೦. ವಿಚಾರಕ್ಕೆ ಹೊಸ ಗೆಜಟಿಯರ್ ಸಂ. ೨, ಭಾಗ ೪ ಮತ್ತು ಡಾ|| ಯಸ್. ಕೃಷ್ಣ ಸ್ವಾಮಯ್ಯ೦ಗಾರ್ಯರು ಬರೆದ ಲೇಖನಗಳನ್ನು ನೋಡಬೇಕು.]


















