ಮುಂದೇನು? ಮುಂದೇನು? ಓ! ಹಸುಳ ಜೀವವೇ !
ನಿನ್ನ ಹಾರಿಕೆಯಲ್ಲಿ? ಕತ್ತಲೆಯು ಕವಿದಿರಲು
ಮುಳ್ಳುಗಾಡನು ಸೇರಿ ಕಾಲೆಲ್ಲ ನವೆದಿರಲು
ನಿನ್ನ ನಂಬಿಕೆಯೆಲ್ಲಿ? ಆಧಾರ? ಭಾವವೇ
ನಿನ್ನನ್ನು ತಿನ್ನುತಿದೆ. ನಿನಗಾಗದಾದವೇ
ನಿನ್ನ ರಕ್ತವನುಂಡು ಬೆಳೆದ ತತ್ತ್ವಗಳಿರಲು
ಜಿಪುಣ ಜಿಗಳೆಗಳಂತೆ? ವಿಷಲವಿರೆ ಕೊರಲು
ಬುವಿಯ ವಿಷಮವ ನುಂಗಿ ಕನಸೆಲ್ಲ ಕಳೆದವೇ?
ಅರ್‍ಪಣವೆ ದೇವನನು ಬಿಂಬಿಸುವ ದರ್‍ಪಣವು.
ಸಹನಶೀಲತೆ ವಜ್ರದೆದೆಯ ಕರಗಿಪ ಜ್ವಾಲೆ.
ಸತ್ಯಪ್ರಿಯತೆಯು ನಿತ್ಯ ಬೆನ್ನಿಗಿರುತಿಹ ಬಲವು.
ಕಾಯುತಿರು, ಓ ಜೀವ! ಮಾಯಬಹುದೀ ವ್ರಣವು.
ಆಗಬಹುದೀ ಬಾಳು ಧ್ಯೇಯಗಳ ಮೊಗಸಾಲೆ,
ಇಳೆಯ, ಮನೆ-ಮನವ ತುಂಬುತ್ತ ಬರಬಹುದೊಲವು.
*****



















