ಮೂಲ: ಮಣೀಂದ್ರ ಗುಪ್ತ

“ವಿಶ್ವಪ್ರಳಯದ ಬಳಿಕ ಹೊಸ ಜಗತ್ತಿನ ಸೃಷ್ಟಿ
ಆಗಬೇಕಿದೆ ಅಂತ ಇಟ್ಟುಕೊ
ಭಾರಿ ತೇಜೋಗೋಲ ಕಾಣಿಸುತ್ತಿದೆ ಅಗೋ ಆಕಾಶದಲ್ಲಿ
ಹೇಳು ನೋಡೋಣ ಆ ಹೊಸಗೋಲದಲ್ಲಿ
ಏನೇನಿರಬೇಕು ಅಂತ ಬಯಸುತ್ತೀಯೆ ನೀನು?”

“ಸೂರ್ಯ, ಚಂದ್ರ, ಗಾಳಿ, ನದಿ ಸರೋವರಗಳು.
ಅಂದ ಹಾಗೇ ಮರೆತೆ
ಚಿಗುರು, ಹೂ ಮರಗಳು”

“ನೀನಿರುವುದಿಲ್ಲವೇ ?”

“ಎಲ್ಲಾದರೂ ಉಂಟೆ? ಹೇಳುವ ಅಗತ್ಯವಿದೆಯೆ?
ನಾನು ಇದ್ದೇ ಇರುವೆ”

“ಇನ್ನೂ ಏನಾದರೂ?”

“ಮುಗಿಲು ಅವಕ್ಕೆ ಬಣ್ಣ
ನೀರಲ್ಲಿ ಮೀನುಗಳು, ಗಾಳಿಯಲ್ಲಿ ಹಕ್ಕಿಗಳು”

“ಋತುಗಳು ಸ್ವಪ್ನಗಳು ನೆನಪುಗಳು ಮರವೆಗಳು
ಬೇಡವೆ ಇವೆಲ್ಲ?”

“ಸ್ವಲ್ಪ ಯೋಚಿಸಿ ಎಲ್ಲ ಮತ್ತೆ ಹೇಳುವೆ ತಾಳು
ತಪ್ಪಾಗಬಾರದಲ್ಲ”

“ಮೋಹಕ ಬೆಳಗಿನ ದೃಶ್ಯ, ಮಧ್ಯಾಹ್ನ, ಸಂಜೆ?
ನವಿಲಗರಿ ಕಾಂತಿಯ ಮುಗಿಲಮರೆ ಶಿಖರ?
ಹಣ್ಣುಗಳು, ಮಗುವಿಗೆ ಬಾಯ್ಬಿಡುವ ಹೆಣ್ಣುಗಳು?
ಹಬ್ಬ ಹರಿದಿನಗಳು, ಮದ್ದುಗುಂಡುಗಳು,
ಯುದ್ಧ ಜಯ ಸೋಲುಗಳು?
ಬೇಡವೆ ಹೊಟೇಲುಗಳು, ಜಿಂಕೆಗಳು ಕುದುರೆಗಳು,
ರೈಲು ಕಾರುಗಳು?”

“ಆಹ! ಬೇಡದೆ ಉಂಟೆ?”

“ನೃತ್ಯ ಸಂಗೀತ ಚಿತ್ರ, ಕಟು ತೀಕ್ಷ್ಯ ಮಧುಗಳು?
ಜೇನಿನ ರುಚಿ ಮರೆಸುವ ಸಲ್ಲಾಪ ಸುರತಗಳು?
ಹಕ್ಕಿಗಳ ಸಿಕ್ಕಿಸಿ ನೆಲಕ್ಕೆಳೆವ ಬಲೆಗಳು?”

“ಎಂಥದೋ ತೊಡಕಾದ ಬಲೆಯೊಳಗೆ ನನ್ನನ್ನು
ಸಿಕ್ಕಿಸುತ್ತಿರುವೆ.
ದಟ್ಟಮಾವಿನ ಮರದ ಹಚ್ಚನೆಯ ತೋಪಿನಲ್ಲಿ
ದಿಕ್ಕುಕಾಣದೆ ನಾನು ನಿಂತಿದ್ದೇನೆ.
ಸತ್ತ ಹುಡುಗನನ್ನು ಸುಡಲು ಒಯ್ಯುತ್ತಿರುವೆ
ಸುತ್ತಲೂ ಸಂಜೆಕಾಂತಿಯ ತೊಯಿಸಿ ಸುರಿವ ಮಳೆ
ಮೋಹಕ ಭಯಾನಕ!
ಕಾಪಾಡು ದೇವರೇ
ಹೋಗಬೇಕಿದೆ ನಾನು ಸುಡುವ ಜಾಗಕ್ಕೆ, ನನ್ನ ಕೆಲಸಕ್ಕೆ”

“ಸರಿ, ಹೋಗು, ಯೋಚಿಸು
ವಿಶ್ವವನು ಸೃಷ್ಟಿಸಿದ ದೈವ ನಿನಗಿಂತ ಎಷ್ಟು
ಎತ್ತರದ ಕವಿಯೆಂದು”
*****