ಮತ್ತೆ ಸೀತಾಯಣದ ನೆನಪು ಕೆದಕಿ

ಮತ್ತೆ ಸೀತಾಯಣದ ನೆನಪು ಕೆದಕಿ

ರಾಮಾಯಣದ ಓದುಗಳು ಹಲವಾರು. ‘ತಿಣುಕಿದನು ಫಣಿರಾಯ ರಾಮಾಯಣದ ತಿಂತಿಣಿಯ ಭಾರದಲಿ’ ಎಂದ ಕುಮಾರವ್ಯಾಸನ ಮಾತು ಅಕ್ಷರಶಃ ನಿಜವೆನ್ನುವಂತೆ ರಾಮಾಯಣಗಳು ಹಲವಾರು ಭಾಷೆಗಳಲ್ಲಿ ಹಲವಾರು ಭಾವಗಳೊಡನೆ ರಾಮಾಯಣಗಳು ಸೃಷ್ಟಿಯಾಗುತ್ತಲೇ ಬಂದಿದ್ದಾವೆ. ರಾಮಾನುಜನ್ ಅವರು ಬರೆದ ಜನಪ್ರಿಯ ಲೇಖನ-ಮುನ್ನೂರು ರಾಮಾಯಣಗಳು-ಜಗತ್ತಿನಲ್ಲಿ ಇರುವ ಅನೇಕ ರಾಮಾಯಣಗಳನ್ನು ಗುರುತಿಸಿ ಅವು ಪಡೆದುಕೊಂಡ ರೂಪಾಂತರಗಳನ್ನು ಗುರುತಿಸುತ್ತದೆ.

ರಾಮಾಯಣವು ರಾಮನನ್ನು ಕೇಂದ್ರೀಕರಿಸಿದ ಆಖ್ಯಾನವಾದರೂ ಜಗತ್ತಿನ ಅನೇಕ ಮಹಾಕಾವ್ಯಗಳಂತೆ ಸಾರ್‍ವತ್ರಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ, ಋಜುಮಾರ್‍ಗವನ್ನು ಅಂತರ್‍ಗತವಾಗಿಸಿಕೊಂಡ ಕಥೆಯಾಗಿ ಪ್ರಸಿದ್ಧ. ರಾಮಾಯಣವು ಒಂದು ಯುಗದ ಮೌಲ್ಯವನ್ನು ಹೇಳುತ್ತದೆ ಎನ್ನುವುದು ಈ ಅರ್‍ಥದಲ್ಲಿಯೇ. ಮಹಾಕಾವ್ಯಗಳು ಪ್ರಚುರಗೊಳಿಸಿದ ಜೀವನ ಮೌಲ್ಯಗಳ ವ್ಯಾಖ್ಯಾನವು ನಿರ್‍ದಿಷ್ಟ ದೇಶಕಾಲಗಳಿಗೆ ಮೀರಿದ್ದಾದರೂ ಅದರ ಓದುಗಳು ಅದೇ ದೇಶಕಾಲಗಳಿಗೆ ಅನುಗುಣವಾಗಿ ಪುನಾರಚನೆಗೊಳ್ಳುತ್ತವೆ. ಒಂದು ಓದು ಯಾವಾಗಲೂ ಕೃತಿಯನ್ನು ನಿರಚನೆ ಮಾಡುತ್ತಾ ತನಗೆ ಬೇಕಾದ ಅನೇಕ ಮೌಲ್ಯಗಳ ಮೂಲಕ ಒರೆಗೆ ಹಚ್ಚಿ ತನ್ನ ಸಮಾಜದ ಜೊತೆಗೆ ಅದನ್ನು ಇಟ್ಟು ನೋಡಲು ಬಯಸುತ್ತಿರುತ್ತದೆ. ಹಾಗೆ ನೋಡಿದರೆ ರಾಮಾಯಣದ ಓದುಗಳಿಗೇ ಒಂದು ಇತಿಹಾಸವಿದೆ. ರಾಮಾಯಣಗಳು ಗಡಿ ದಾಟಿ ದೇಶಾಂತರ ಹೋಗಿದ್ದು ಆಯಾ ಪ್ರದೇಶಗಳಿಗನುಗುಣವಾಗಿ ರಾಮಾಯಣಗಳು ಪುನರ್‌ಸೃಜಿಸಲ್ಪಟ್ಟಿವೆ. ಇವುಗಳಲ್ಲಿ ರಾಮಾಯಣದ ಕಥೆ ಹೇಳಲಸದಳವಾದ ರೀತಿಯಲ್ಲಿ ಮಾರ್‍ಪಾಡಾಗಿ ರಾಮ ಸೀತೆ ಲಕ್ಷ್ಮಣರ ಹೆಸರುಗಳು ಮಾತ್ರವೇ ಉಳಿದು ಹೋಗಿಬಿಟ್ಟಿರುತ್ತವೆ. ಬೌದ್ಧ ರಾಮಾಯಣದಲ್ಲಿ ಸೀತೆ ರಾಮ, ಲಕ್ಷ್ಮಣರಿಗೆ ತಂಗಿಯಾಗಿ ಆನಂತರ ರಾಮನಿಗೆ ಹೆಂಡತಿಯಾಗುತ್ತಾಳಾದರೆ, ಜೈನ ರಾಮಾಯಣದಲ್ಲಿ ಅಹಿಂಸೆಯೇ ಮೈದಳೆದ ರಾವಣ ಬರುತ್ತಾನೆ. ಹೆಳವನಕಟ್ಟೆ ಗಿರಿಯಮ್ಮನ ‘ಲವಕುಶರ ಕಾಳಗ’ದಲ್ಲಿನ ಕಥೆಯು ಸೀತೆಯಲ್ಲಿರುವ ಸುಪ್ತಕಾಮವನ್ನು ತೋರುವ ಕಥೆಯನ್ನು ಹೇಳುತ್ತದೆ. ಕೊರವಂಜಿಯು ಬರೆಯಿಸಿದ ಚಿತ್ರವು ಸೀತೆಯ ಜೀವನವನ್ನೇ ತಲ್ಲಣಿಸುವ ಹಾಗೆ ಮಾಡುತ್ತದೆ. ಹೀಗೆ ಅನೇಕ ಓದುಗಳು ವೈವಿಧ್ಯಮಯ ಪಠ್ಯರಚನೆಗಳನ್ನು ಉಂಟುಮಾಡುತ್ತವಲ್ಲದೆ ಪ್ರತಿ ಓದುಗನ ಓದುವಿಕೆಯನ್ನು ಅನನ್ಯಗೊಳಿಸುತ್ತವೆ.

ಎಂಬತ್ತರ ದಶಕದಲ್ಲಿ ಸಂಚಲನವನ್ನು ಉಂಟುಮಾಡಿದ ಪೋಲಂಕಿಯವರ ಓದು ರಾಮಾಯಣದ ಸೀತೆಯನ್ನು ಕಂಡುಕೊಳ್ಳುವಂತದ್ದಾಗಿದೆ. ಪೋಲಂಕಿ ರಾಮಮೂರ್‍ತಿಯವರ ‘ಸೀತಾಯಣ’ವು ರಾಮಾಯಣದ ಓದು ಎನ್ನುವುದು ನಿಜವಾದರೂ ಅದರಲ್ಲಿ ಸೀತೆಯನ್ನು ಅನಾವರಣಗೊಳಿಸುವ ರೀತಿಯು ಸಂಪ್ರದಾಯಸ್ಥರಿಗೆ ಕಿರಿಕಿರಿ ಉಂಟುಮಾಡಿತ್ತು. ಪೋಲಂಕಿಯವರ ಕೃತಿಗೆ ಸಾಕಷ್ಟು ಪ್ರತಿರೋಧಗಳು ಬಂದಿದ್ದವು. ಆದರೆ ಪೋಲಂಕಿ ಸೀತಾಯಣ ಬರೆದ ಕಾಲವನ್ನು ನೋಡಿದರೆ ಅದು ಸ್ತ್ರೀವಾದ ಕನ್ನಡದಲ್ಲಿ ಮೊಳೆಯುತ್ತಿದ್ದ ಕಾಲ. ಸ್ತ್ರೀದೃಷ್ಟಿಕೋನದಿಂದ ತಲತಲಾಂತರದಿಂದ ಬಂದ ಪಠ್ಯಗಳನ್ನು ಅಳೆಯಬೇಕಾದ ಅನಿವಾರ್‍ಯತೆಯನ್ನು ಆಗ ತಾನೇ ಕಂಡುಕೊಳ್ಳುತ್ತಿದ್ದ ಕಾಲವೂ ಅದಾಗಿತ್ತು. ಆ ಸಂದರ್‍ಭದಲ್ಲಿ ಬಂದ ಸೀತಾಯಣವು ರಾಮಾಯಣದಲ್ಲಿ ಸೀತೆಯ ಪಾತ್ರವೇನು? ಅವಳು ಎಲ್ಲೆಲ್ಲಿ ಅಂಚಿಗೆ ದೂಡಲ್ಪಟ್ಟಿದ್ದಾಳೆ? ಅವಳಿಗೂ ಲಕ್ಷ್ಮಣನಿಗೂ ಇರುವ ಸಂಬಂಧದ ಸ್ವರೂಪವೇನು? ಇತ್ಯಾದಿ ಪ್ರಶ್ನೆಗಳನ್ನು ಸ್ತ್ರೀವಾದಿ ನೆಲೆಯಲ್ಲಿ ಎತ್ತಿದ್ದಾರೆ. ಇಲ್ಲಿ ಅವರು ಮುಖಾಮುಖಿಯಾಗುವುದು ಸ್ತ್ರೀ ಮತ್ತು ಪುರುಷ ಸಂಬಂಧಗಳ ಅಧಿಕಾರ ಪರಿಧಿಗಳನ್ನು: ಜೊತೆಗೆ ವರ್‍ಣಾಶ್ರಮಧರ್ಮದ ಪಾಲನೆಯನ್ನು ಮಾಡಲೆಂದೇ ಸ್ತುತವಾಗಿರುವ ಕೆಲವು ಸಂಹಿತೆಗಳಂತಿರುವ ರಾಮಾಯಣವೆಂಬ ಮಹಾಕಾವ್ಯವನ್ನು. ಕನ್ನಡದ ಮಟ್ಟಿಗೆ ಈ ಚರ್‍ಚೆ ಹಳೆಯದೇ (ಕುವೆಂಪು ಶಂಭೂಕ ವಧೆ ಪ್ರಸಂಗವನ್ನು ಎತ್ತಿಕೊಂಡು ‘ಶೂದ್ರತಪಸ್ವಿ’ ಮಾಡಿದ್ದು, ಅದರ ಸಾಧಕ ಬಾಧಕಗಳನ್ನು ಕುರಿತು ಮಾಸ್ತಿ ಪ್ರಶ್ನೆ ಎತ್ತಿದ್ದು ಕನ್ನಡದ ಮುಖ್ಯ ವಾಗ್ವಾದಗಳಲ್ಲಿ ಒಂದಾಗಿದೆ). ಪೋಲಂಕಿಯವರ ಸೀತಾಯಣವು ಇದೇ ಜಾಡಿನದು. ಪರ್‍ಯಾಯವಾದೀ ಪ್ರಶ್ನೆಗಳನ್ನು ಎತ್ತುವ ನೆಲೆಯಲ್ಲಿಯೇ ಸೀತಾಯಣದ ಲೇಖನಗಳೂ ಮೂಡಿವೆ.

ಪೋಲಂಕಿ ಎತ್ತಿಕೊಳ್ಳುವ ಅತಿಮುಖ್ಯ ಸಂಗತಿಯೆಂದರೆ ಸೀತೆ ಮತ್ತು ಲಕ್ಷ್ಮಣನಿಗಿರಬಹುದಾದ ಆಪ್ತ ಮತ್ತು ಸುಪ್ತಸಂಬಂಧದ್ದು. ಅವರ ವಾದದಂತೆ ರಾಮನು ಅತಿಮಾನುಷನಲ್ಲವೇ ಅಲ್ಲ; ಬದಲಾಗಿ ಅವನು ಮನುಷ್ಯಮಾತ್ರದ ಘನತೆಯನ್ನೂ ಸೀತೆಯ ವಿಷಯದಲ್ಲಿ ತೋರಲಾರದೆ ಹೋಗುತ್ತಾನೆ. ಇದಕ್ಕಾಗಿ ಅವರು ಕಾಕಾಸುರನ ಪ್ರಸಂಗ ಹಾಗು ಕಬಂಧನ ವಧಾ ಪ್ರಸಂಗವನ್ನು ಉದಾಹರಿಸುತ್ತಾರೆ. ಪೋಲಂಕಿಯವರ ಇನ್ನೊಂದು ವಾದವೆಂದರೆ ರಾಮನು ಸನಾತನ ಮೌಲ್ಯಗಳನ್ನು ಪಾಲಿಸಲು ಅನುವಾಗುವಂತಹ ರಾಜಕುವರ, ಈ ಎರಡೂ ಸಂಗತಿಗಳು ಅವರ ಪ್ರಕಾರ ಸಂಬಂಧ ಹೊಂದಿವೆ. ಆರ್‍ಯ ಸಂಸ್ಕೃತಿಯು ಇತರ ಸಂಸ್ಕೃತಿಗಳನ್ನು ಮೆಟ್ಟಿನಿಲ್ಲುವ ಪ್ರಧಾನ ಸಂಸ್ಕೃತಿಯಾಗುವುದು ಹಾಗು ಹೆಣ್ಣಿನ ಹಕ್ಕುಗಳನ್ನೂ ಅವಳ ಆಸೆಗಳನ್ನೂ ಹೊಸಕಿ ಹಾಕುವುದು ಸಮಾನ ಕಾರ್‍ಯಕ್ರಮವೇ ಎನ್ನುವ ಪೋಲಂಕಿಯವರ ದೃಷ್ಟಿಯು ರೂಪುಗೊಳ್ಳುವುದು ಪಠ್ಯದ ಓದಿನಿಂದ. ಅರ್‍ಥವನ್ನು ಸಾಂದರ್‍ಭಿಕವಾಗಿ ಅರ್‍ಥ ಮಾಡಿಕೊಳ್ಳಬೇಕೆನ್ನುವ ಓದುಗ ಕೇಂದ್ರಿತ ವಿಮರ್‍ಶೆಯನ್ನು ನೆಚ್ಚಿ ಅವರು ಹೊರಟು ರಾಮಾಯಣದ ಅನೇಕ ಪ್ರಸಂಗಗಳನ್ನು ಅರ್‍ಥೈಸಲು ಯತ್ನಿಸಿದ್ದಾರೆ. ಅವರ ಪ್ರಕಾರ ಪಠ್ಯದ ಓದು ಮಾತ್ರವೇ ನಿಜವಾದ ರಾಮ ಮತ್ತು ಸೀತೆಯರನ್ನು ಕಾಣಿಸಬಲ್ಲುದು. ಸೋಲಂಕಿಯವರು ಇಂಗ್ಲಿಷ್ ವಿಮರ್‍ಶೆಯ ಆಯಗಳಾದ ಮನೋವಿಶ್ಲೇಷಣೆ ಮತ್ತು ಪಠ್ಯಕೇಂದ್ರಿತ ಓದುಗಳನ್ನು ಈ ಕೃತಿಯಲ್ಲಿ ಧಾರಾಳವಾಗಿ ಬಳಸಿದ್ದಾರೆ. ರಾಮಾಯಣವನ್ನು ಆಧುನಿಕ ವಿಶ್ಲೇಷಣೆಯಲ್ಲಿ ನಿಲ್ಲಿಸುವ ಹೊಸ ಬಗೆಯನ್ನು ಹುಡುಕಿದ್ದೇನೆ ಎನ್ನುವ ಆತ್ಮವಿಶ್ವಾಸ ಅವರ ಕೃತಿಯಲ್ಲಿ ಎದ್ದು ಕಾಣುತ್ತದೆ. ಆದರೆ ಅವರ ನಿಲುವು ಕೆಲವೊಮ್ಮೆ ಅತಿರೇಕದ್ದು ಎನ್ನಿಸುತ್ತದೆ. ಸಂದರ್‍ಭವನ್ನು ಅರ್‍ಥದ ಮೂಲಕವೇ ಅರಿಯುವ ಅತಿವಿಶ್ವಾಸವು ಅವರನ್ನು ಪಠ್ಯದ ಆಚೆಗೂ ಒಯ್ದು ಆಭಾಸವನ್ನುಂಟು ಮಾಡುತ್ತದೆ. ಸಂದರ್‍ಭ ಎನ್ನುವುದು ಸ್ವಯಂಪೂರ್‍ಣವೇ? ಎನ್ನುವ ಪ್ರಶ್ನೆ ಹುಟ್ಟಿಸುತ್ತದೆ. ಈ ಲೆಕ್ಕದಲ್ಲಿ ಅವರೊಬ್ಬ ‘ಉತ್ಪ್ರೇಕ್ಷಿತ ಓದುಗ’.

ವಾಕ್ಯಾರ್‍ಥಗಳನ್ನು ಹಿಂಜಿ ನೋಡುವ ಪೋಲಂಕಿ ಅವರ ವಿಧಾನವು ಅವರ ಕಾಲದ ರ್‍ಯಾಶನಲ್ ಮನೋಭಾವವನ್ನು ಚೆನ್ನಾಗಿ ದುಡಿಸಿಕೊಳ್ಳುತ್ತದೆ. ವಿಚಾರವಾದವೆನ್ನುವುದು ನಾಸ್ತಿಕವಾದೀ ಪರಂಪರೆಗಳಲ್ಲಿ ಪುಷ್ಟವಾಗಿ ಬೆಳೆಯುತ್ತಿದ್ದ ಸಂದರ್‍ಭದಲ್ಲಿ ಪೋಲಂಕಿಯವರ ವೈಚಾರಿಕತೆಯು ದ್ರಾವಿಡ ಸಂಸ್ಕೃತಿಯನ್ನು ಎತ್ತಿಹಿಡಿಯಲೆಂದು ವೈದಿಕ ದೇವರುಗಳನ್ನು ಅವಮಾನಿಸುವ ಪ್ರವೃತ್ತಿಯುಳ್ಳ ಪೆರಿಯಾರ್ ವೈಚಾರಿಕತೆಯನ್ನು ನೆನಪಿಸುತ್ತದೆ. ಹಾಗೆ ನೋಡಿದರೆ ಶೂದ್ರಸಂಸ್ಕೃತಿಯನ್ನು ಶೋಧಿಸಿಕೊಳ್ಳುವ ಕ್ರಾಂತಿಕಾರಕ ಚೈತನ್ಯವು ಕನ್ನಡದ ಜಾಯಮಾನಕ್ಕೆ ಒಗ್ಗಿ ಬರಲೇ ಇಲ್ಲ. ವರ್‍ಣಾಶ್ರಮದ ವಿರುದ್ಧ ದನಿಯೆತ್ತಿದ ಕುವೆಂಪು ಮುಂದೆ ತಮ್ಮ ಮಹಾಕಾವ್ಯಕ್ಕಾಗಿ ಆರಿಸಿಕೊಂಡಿದ್ದು ರಾಮಾಯಣದ ಕಥನವನ್ನೇ. ರಾಮಾಯಣವು ಅವರಲ್ಲಿ ಹೊಸ ಯುಗದ ಸಾಮಾನ್ಯತಾ ಪ್ರಜ್ಞೆಯಾಗಿ ಮೂಡಿಬಂತು, ರಾಷ್ಟ್ರೀಯತೆಯ ಸಂದರ್‍ಭದಲ್ಲಿ ಸೃಷ್ಟಿಸಿಕೊಂಡ ರಾಮಾಯಣಗಳು ಯುಗದ ನೈತಿಕತೆಯನ್ನು ಸಾಣೆ ಹಿಡಿದುಕೊಟ್ಟಂತೆ. ಆಸ್ತಿಕಜನಕ್ಕೆ ದೂರವೆನಿಸುವ ಸೀತಾಯಣವನ್ನು ರಾಮಾಯಣದಲ್ಲಿ ಹುಡುಕಿದ ದಿಟ್ಟತನ ಪೋಲಂಕಿಯವರದು. ಈಗ ಮೂವತ್ತು ವರ್‍ಷಗಳ ಅಂತರದಲ್ಲಿ(ಸೀತಾಯಣ ಬಂದಿದ್ದು ೧೯೮೪ ರಲ್ಲಿ) ಅವರ ಸೀತಾಯಣ ಓದುವಾಗ ಅವರು ಎತ್ತಿದ ಕೆಲವು ಪ್ರಶ್ನೆಗಳು ಸ್ತ್ರೀವಾದವನ್ನು ಬೆಳೆಸಿವೆ ಎನ್ನಿಸುತ್ತದೆ. ಕೆಲವು ಪ್ರಶ್ನೆಗಳು ಕುಚೋದ್ಯದಿಂದ ಕೂಡಿದ್ದು, ಎನ್ನಿಸುತ್ತದೆ. ಕಾಲದ ಬದಲಾವಣೆಗೆ ಪೋಲಂಕಿಯವರ ಓದು ಕೂಡ ಭಿನ್ನವಲ್ಲವಲ್ಲ. ಹಾಗಾಗಿ ಅವರ ಸೀತಾಯಣವೂ ಇಂದು ಹಸಿಹಸಿ ಓದು ಎನ್ನಿಸುತ್ತಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಡತೆ
Next post ಮುದ್ದು ಕಂದನ ವಚನಗಳು: ಎರಡು

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys