ಮುಸ್ಸಂಜೆಯ ಮಿಂಚು – ೮

ಮುಸ್ಸಂಜೆಯ ಮಿಂಚು – ೮

ಅಧ್ಯಾಯ ೮ ‘ನಮ್ಮ ಮನೆ’ಯ ಕಥೆ

ಸ್ವಾರ್ಥವಿಲ್ಲದ ಜೀವನ ಇಷ್ಟೊಂದು ನೆಮ್ಮದಿ ತರಬಹುದೇ ಎಂಬ ಪ್ರಶ್ನೆ ಹಲವಾರು ಬಾರಿ ವಸುವಿನಲ್ಲಿ ಮೂಡಿ ಮರೆಯಾಗುತ್ತಿತ್ತು. ಆದರೆ ವೆಂಕಟೇಶನ ವರ್ತನೆ ಅವಳನ್ನು ಸಾಕಷ್ಟು ಕುಗ್ಗಿಸುತ್ತಿತ್ತು. ಎಂಥ ಉದಾತ್ತ ವ್ಯಕ್ತಿ ವೆಂಕಟೇಶ್, ಯಾಕೆ ಹಾಗೆ ಬದಲಾಗಿಬಿಟ್ಟರು? ನನಗಾಗಿ ಸಹಿಸಬೇಕಿತ್ತು, ವೆಂಕಟೇಶ್ ಆರದ ಗಾಯ ಮಾಡಿಬಿಟ್ಟರು. ಈ ಗಾಯ ಕೊನೆವರೆಗೂ ನನ್ನ ನೋಯಿಸುತ್ತಲೇ ಇರುತ್ತದೆ, ಇದು ಖಂಡಿತ, ಅಳಿಯ ಮನೆಯಲ್ಲಿ ಇಲ್ಲದಿರುವುದು ಅಪ್ಪನ ಅರಿವಿಗೆ ಬಂದಿದೆ. ಮಗನ ಮನೆಗೆ ಹೋಗಿದ್ದಾರೆ ಒಂದಿಷ್ಟು ದಿನ ಇದ್ದು ಬರುತ್ತಾರೆ ಎಂಬ ತನ್ನ ಮಾತುಗಳನ್ನು ಮೊದಮೊದಲು ನಂಬಿದರೂ ಯಾಕೋ ಅಳಿಯನನ್ನು ಪದೇ ಪದೇ ಕೇಳುತ್ತಿದ್ದಾರೆ. ಇನ್ನೂ ಯಾಕೆ ಬಂದಿಲ್ಲ? ನಿನ್ನ ಬಿಟ್ಟು ಅವರು ಇಷ್ಟೊಂದು ದಿನ ಇರೋರಲ್ಲವಲ್ಲ? ಯಾಕಿನ್ನೂ ಬಂದಿಲ್ಲ? ಕಾಗದ ಬರೆ, ಬೇಗ ಬರ್‍ಲಿ ಅಂತ ಕಾಡೋಕೆ ಶುರು ಮಾಡಿದ ಮೇಲೆ ಧರ್ಮಸಂಕಟವಾಗಹತ್ತಿತ್ತು ವಸುವಿಗೆ.

ಕೊನೆಗೂ ಅಳಿಯ ಬರ್ಲಿಲ್ಲ ಅನ್ನೋ ನೋವಿನಿಂದಲೇ ಪ್ರಾಣಬಿಟ್ಟಾಗ, ಈ ಭಾಗ್ಯಕ್ಕಾಗಿಯೇ ತಾನು ಗಂಡನನ್ನು, ಮಗನನ್ನು ಎದುರಿಸಿ ನಿಂತದ್ದು? ಅಪ್ಪ ಇನ್ನೊಂದಷ್ಟು ದಿನ ತನ್ನೊಂದಿಗಿರಬಾರದಿತ್ತೇ ಎಂದು ರೋದಿಸಿದಳು. ಒಟ್ಟಿನಲ್ಲಿ ಅಳಿಯ ಬರ್‍ಲಿಲ್ಲ ಅನ್ನೋ ಕೊರಗೊಂದನ್ನು ಬಿಟ್ಟರೆ, ಸಾಯುವ ಕ್ಷಣಗಳಲ್ಲೂ ಮಗಳ ಪ್ರೀತಿಯಲ್ಲಿ ಮಿಂದಿರುವ ಸಂತೋಷ ಅಪ್ಪನಿಗೆ ನೀಡಿದ್ದೆ ಎಂಬ ಸಂತೃಪ್ತಭಾವವೊಂದೇ ಕೊನೆಗೆ ಅವಳಿಗುಳಿದದ್ದು.

ಅಪ್ಪನ ಅಂತ್ಯಕ್ರಿಯೆ ಎಲ್ಲಾ ಮುಗಿದು ಅಪ್ಪನ ಋಣ ತೀರಿತೆಂದು ಎಲ್ಲರೂ ಅವರವರ ಹಾದಿ ಹಿಡಿದು ಹೊರಟಾಗ ವಸುವಿನ ಮನಸ್ಸು ಸ್ಪಷ್ಟವಾದ ನಿಲುವು ಕಂಡುಕೊಂಡಿತ್ತು.

ಇನ್ನೇನು ಅಮ್ಮ ತನ್ನೊಂದಿಗೆ ಬಂದೇ ಬರುತ್ತಾಳೆ. ಇಷ್ಟು ದಿನ ‘ಅಪ್ಪಾ ಅಪ್ಪಾ’ ಅಂತ ತಮ್ಮನ್ನು ದೂರ ಮಾಡಿಕೊಂಡಿದ್ದ ಅಮ್ಮ ಈಗ ಹೊರಟೇ ಹೊರಡುತ್ತಾಳೆ ಅನ್ನೋ ನಂಬಿಕೆಯಿಂದಲೇ ವಿಕ್ರಮ್ “ಇನ್ನೇನಮ್ಮ, ತಾತನನ್ನು ಸ್ವರ್ಗಕ್ಕೆ ಕಳಿಸಿ ಆಯ್ತಲ್ಲ, ನಾಳೆ ಮನೆ ಖಾಲಿ ಮಾಡೋದು ತಾನೇ? ಆಳುಗಳು ಬಂದ್ರೆ ಸಾಮಾನೆಲ್ಲ ಪ್ಯಾಕ್ ಮಾಡ್ತಾರೆ. ನೀನು ಶ್ರಮ ತಗೊಳ್ಳೋದಕ್ಕೆ ಹೋಗಬೇಡ.”

“ಬೇಡ ವಿಕ್ರಮ್, ನಾನು ಮನೆ ಖಾಲಿ ಮಾಡಲ್ಲ.”

“ಒಬ್ಳೆ ಹೇಗಮ್ಮಾ ಇರ್ತಿಯಾ? ಇಷ್ಟು ದೊಡ್ಡ ಮನೆಯಲ್ಲಿ ಅಪ್ಪನೂ ಇಲ್ದೆ ನೀನೊಬ್ಳೆ ಇರ್ತಿಯಾ? ತಾತಾನೂ ಇಲ್ಲವಲ್ಲ ಈಗ” ಗೊಂದಲದಲ್ಲಿ ಮುಳುಗೇಳುತ್ತಾ ಹೇಳಿದ ವಿಕ್ರಮ್.

“ಯಾಕಪ್ಪಾ, ಅಪ್ಪ ಇಲ್ಲೆ ಹೋದ್ರೆ ಏನು? ಅಪ್ಪನಂಥ ಸ್ಥಿತಿಯಲ್ಲಿ ಎಷ್ಟು ಜೀವಗಳು ಪ್ರೀತಿಗಾಗಿ, ಹಿಡಿ ಕೂಳಿಗಾಗಿ ಹಂಬಲಿಸುತ್ತ ಇದೆ. ಅವರ ಸೇವೆ ಮಾಡ್ತಾ ನನ್ನ ಬಯಕೆನಾ ತೀರಿಸಿಕೊಳ್ಳುತ್ತೇನೆ. ಈ ಮನೆ ಇನ್ನು ಮುಂದೆ ಅಸಹಾಯಕ ವೃದ್ದರಿಗಾಗಿ ಇರುವ ‘ನಮ್ಮ ಮನೆ’. ಇದನ್ನು ವೃದ್ದಾಶ್ರಮ ಅಂತಾನೂ ಕರೆಯಲಾರೆ. ಇಲ್ಲಿ ಯಾರಿದ್ದರೂ ಅವರಿಗೆ ನಮ್ಮ ಮನೆಯಲ್ಲಿಯೇ ಇದ್ದೇವೆ ಎಂಬ ಭಾವನೆ ಬರಬೇಕು. ಇದನ್ನು ನಡೆಸಿಕೊಂಡು ಹೋಗೋದೇ ನನ್ನ ಕೊನೆ ಆಸೆ, ಈ ಉಸಿರು ಈ ದೇಹದ ಮೇಲೆ ಇರೋತನಕ ನಿಮ್ಮ ತಾತನಂಥವರಿಗೆ ಆಸರೆ ಆಗಿ ನಿಲ್ತೀನೆ. ಇನ್ನು ನೀನು ನಿಮ್ಮಪ್ಪನ್ನ ಕರ್ಕೊಂಡು ಹೋಗಬಹುದು” ದೃಢವಾಗಿ, ನಿಶ್ಚಯವಾಗಿ, ನಿರ್ಭಯವಾಗಿ ಹೇಳಿದ್ದನ್ನೇ ಕೇಳುತ್ತಾ ವಿಕ್ರಮ್ ದಂಗಾಗಿ ನಿಂತುಬಿಟ್ಟ.

“ನನ್ನ ಆನಂತರ ಇದನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿ ನಿಂದು, ಹೆತ್ತ ತಾಯಿಯ ಋಣ ತೀರಿಸಬೇಕು ಅನ್ನುವುದಾದರೆ ನನ್ನ ಈ ಆಸೆನಾ ನೀನು ನೆರವೇರಿಸಿ ಕೊಡುತ್ತೀಯಾ?”

ವೆಂಕಟೇಶ್‌ ಕುಗ್ಗಿಹೋದ. ತನ್ನ ಇರವು ಇಲ್ಲದಂತೆ, ತನ್ನನ್ನು ಸಂಪೂರ್ಣವಾಗಿ ವಸು ಅಲಕ್ಷಿಸುವುದನ್ನು ಸಹಿಸದಾದ. ತನಗಿಂತಲೂ ಅಪ್ಪಾನೇ ಹೆಚ್ಚು ಎಂದ ಹೆಂಡತಿಯ ಮೇಲೆ ಕೋಪಗೊಂಡು, ಹೆಂಡತಿಯಿಂದ ದೂರ ಹೋದದ್ದು ನಿಜವೇ ಆದರೂ, ಹೆಂಡತಿಯನ್ನು ಸುಲಭವಾಗಿ ಅವನಿಂದ ಮರೆಯಲಾಗಿರಲಿಲ್ಲ. ಪ್ರತಿ ಕ್ಷಣ ನೆನಪಾಗಿ ತಳಮಳಿಸುತ್ತಿದ್ದ. ಪ್ರೀತಿಯ ಹೆಂಡತಿಯ ಅಗಲಿಕೆ ಅವನಿಂದ ಸಹಿಸಲಸಾಧ್ಯವೆನಿಸುತ್ತಿದ್ದರೂ ಹಟದಿಂದ ಹೆಂಡತಿಗೆ ಬುದ್ದಿ ಕಲಿಸುವ ತವಕದಿಂದ ದೂರವೇ ಇದ್ದುಬಿಟ್ಟ. ಆದರೆ ವಸುವಿನ ಮೇರು ವ್ಯಕ್ತಿತ್ವ ಈಗ ಅವನಿಗೆ ಸಾಕ್ಷಾತ್ಕಾರವಾಗುತ್ತದೆ. ಆ ಹೃದಯವಂತಿಕೆಯ ಎದುರು ಕುಬ್ಬನಾದ ಭಾವದಿಂದ-

“ವಸು, ನನ್ನ ಕ್ಷಮ್ಸು, ನಿನ್ನ ಅರ್ಥಮಾಡಿಕೊಳ್ಳದೆ ಹೋದೆ. ನಿನ್ನ ಭಾವನೆಗಳನ್ನು ನಿರ್ಲಕ್ಷಿಸಿಬಿಟ್ಟೆ. ನನ್ನಿಂದ ದೊಡ್ಡತಪ್ಪು ನಡೆದುಹೋಗಿದೆ. ನನ್ನ ಹೆತ್ತವರನ್ನು ಇದೇ ಅಂತಃಕರಣದಿಂದ ನೀನು ಕಂಡದ್ದನ್ನು ನಿನ್ನ ಕರ್ತವ್ಯ ಎಂದು ಭಾವಿಸಿದೆ. ಆದರೆ ಅದೇ ಅಂತಃಕರಣ ನೀನು ಎಲ್ಲರ ಬಗ್ಗೆಯೂ ಹೊಂದಿದ್ದೀಯಾ ಅನ್ನೋ ಸತ್ಯವನ್ನು ತಿಳಿಯದೆ ಹೋದೆ. ನಾನು ಮೂರ್ಖ ವಸು, ನಿನ್ನಂಥ ಅಮೂಲ್ಯವಾದ ವಜ್ರಕ್ಕೆ ಬರೀ ಚಿನ್ನದ ಸರಿಗೆ ಮಾತ್ರ ಇದುವರೆಗೆ ನಾನಾಗಿದ್ದೆ. ನಾನೇ ವಜ್ರವಾಗಿದ್ದೆ ಎಂಬ ಭ್ರಮೆ ಇಂದು ನನ್ನಿಂದ ದೂರವಾಗ್ತಾ ಇದೆ. ನನ್ನ ತಪ್ಪನ್ನು ಸರಿಪಡಿಸೋ ಅವಕಾಶ ಕೊಡು ವಸು. ನಿನ್ನ ಜತೆಯಲ್ಲಿ ನಡೆದು ಬರುವ ಅದೃಷ್ಟ ನನಗಿದೆಯಾ ವಸು” ಪಶ್ಚಾತ್ತಾಪ ತುಂಬಿ ತುಳುಕುತ್ತಿತ್ತು.

ಕೊನೆಗೂ ತನ್ನ ವೆಂಕಟೇಶ್ ತನ್ನ ಭಾವನೆಗಳಿಗೆ ಸ್ಪಂದಿಸಿ, ತನ್ನೊಂದಿಗೆ ಹೆಜ್ಜೆ ಇಡಲು ಸಿದ್ಧನಾಗಿದ್ದು ವಸುವಿಗೆ ತನ್ನ ನಂಬಿಕೆ ಸುಳ್ಳಾಗದೆ ತನ್ನವನು ಚೊಕ್ಕ ಚಿನ್ನವಾಗಿಯೇ ಉಳಿದುಬಿಟ್ಟ ಸಂತೋಷದಿಂದ ಹಿಗ್ಗಿದಳು.

ಅಂದು ಪ್ರಾರಂಭವಾದ ‘ನಮ್ಮ ಮನೆ’ ಇವತ್ತಿನವರೆಗೂ ನೊಂದವರ ನೋವಿಗೆ ಸ್ಪಂದಿಸಿ ನೆಲೆ ನೀಡುತ್ತಿದೆ. ಆದರೆ ಇದೆಲ್ಲವನ್ನೂ ನೋಡುವ ಸೌಭಾಗ್ಯ ಪಡೆದು ಬಾರದ ವಸು ‘ನಮ್ಮ ಮನೆ’ ಪ್ರಾರಂಭವಾಗಿ ಕೆಲವೇ ವರ್ಷಗಳಲ್ಲಿ ಈ ಲೋಕವನ್ನೇ ಬಿಟ್ಟು ನಡೆದುಬಿಟ್ಟಳು. ಒಂಟಿಯಾಗಿ ಅವಳನ್ನು ತಾನು ಬಿಟ್ಟು ಹೋಗಿದ್ದರ ಸೇಡು ತೀರಿಸಿಕೊಂಡುಬಿಟ್ಟಳು.

ಹನಿಗಣ್ಣಾಗಿ ಹಿಂದಿನದನ್ನೆಲ್ಲ ಹೇಳುತ್ತಿದ್ದರೆ ರಿತು ಮಂತ್ರಮುಗ್ಧಳಾಗಿ ಹೋಗಿದ್ದಳು. ಆ ದೇವತೆ ಅಂದು ಮಾನವೀಯತೆ ಮೆರೆದು, ತನ್ನದೆಲ್ಲವನ್ನೂ ‘ನಮ್ಮ ಮನೆ’ಗೆ ಧಾರೆ ಎರೆದು, ತನು-ಮನ-ಧನ ಎಲ್ಲವೂ ಈ ಆಶ್ರಮಕ್ಕೆ ಸಮರ್ಪಣೆಯಾಗಿ, ತನ್ನದು ಎಂಬ ಸಾರ್ಥ ಮರೆತು ಪರೋಪಕಾರಕ್ಕೆ ಜೀವ ಮುಡಿಪಾಗಿಟ್ಟು, ತನ್ನವರನ್ನೂ ತನ್ನತ್ತ ಸೆಳೆದುಕೊಂಡು ಇಡೀ ಸಂಸಾರವೇ ‘ನಮ್ಮ ಮನೆ’ಗಾಗಿ ಜೀವ ತೇಯುವಂತೆ ಮಾಡಿದ ಆ ಕಾಣದ ದೇವತೆಗೆ ಮನದಲ್ಲಿಯೇ ನಮಸ್ಕರಿಸಿದಳು. ಆ ತಾಯಿಯ ಗುಣದ ಒಂದಂಶವಾದರೂ ತನ್ನಲ್ಲಿ ಮೂಡುವಂತೆ ಮಾಡು ದೇವಾ ಎಂದು ದೇವರನ್ನು ಬೇಡಿಕೊಂಡಳು.

“ರಿತು, ಅವಳ ಕನಸಿನ ಕೂಸು ಈ ‘ನಮ ಮನೆ’, ಇದನ್ನು ಕಟ್ಟಿ, ಬೆಳೆಸುವಾಗ ಅದೆಷ್ಟು ಶ್ರಮಪಟ್ಟಿದ್ದಾಳೆ ಗೊತ್ತಾ? ಬರೀ ಸೇವೆ ಮಾಡುವ ಮನಸ್ಸಿದ್ದರೆ ಸಾಲದು ರಿತು, ಇಂಥದನ್ನೆಲ್ಲ ನಡೆಸಬೇಕಾದರೆ ಒಂದು ಹೋರಾಟವೇ ಮಾಡಬೇಕಾಯ್ತು. ಒಂದು ಒಳ್ಳೆಯ ಕೆಲಸ ಮಾಡಬೇಕಾದರೆ ನೂರಾರು ವಿಘ್ನಗಳು ಅನ್ನೋ ಹಾಗೆ ಇದನ್ನು ಪ್ರಾರಂಭಿಸಿದ ವರ್ಷದಲ್ಲಿಯೇ ‘ನಮ್ಮ ಮನೆ’ ಬಗ್ಗೆ ಅಪಪ್ರಚಾರ ಶುರುವಾಗಿಬಿಡ್ತು. ‘ಇಲ್ಲಿನ ವೃದ್ದರನ್ನು ಶೋಷಣೆ ಮಾಡ್ತಾ ಇದ್ದಾರೆ, ಹಣಕ್ಕಾಗಿ ವೃದರ ಆಶ್ರಮ ಮಾಡ್ತಾ ಇದ್ದಾರೆ…’ ಇನ್ನೂ ಏನೇನೋ… ಪಾಪ, ವಸು ಈ ಆಪಾದನೆಗಳಿಂದ ಭೂಮಿಗಿಳಿದು ಹೋದಳು. ತನ್ನದೆಲ್ಲವನ್ನೂ ಅರ್ಪಿಸಿ, ವೃದ್ದಾಪ್ಯ ಶಾಪವಲ್ಲ ಅದು ಬದುಕಿನ ಒಂದು ಭಾಗ, ಆ ಭಾಗದಲ್ಲಿ ವೇದನೆ, ನೋವು ಇರಬಾರದು. ಅನುಭವದಲ್ಲಿ ಮಾಗಿ ಹಣ್ಣಾಗಿರುವ ಜೀವ ತನ್ನ ಕೊನೆಯ ಅವಧಿಯನ್ನು ಸಂತೋಷವಾಗಿ, ನೆಮ್ಮದಿಯಾಗಿ ಕಳೆಯಬೇಕು ಅನ್ನೋದೇ ವಸುವಿನ ಉದ್ದೇಶವಾಗಿತ್ತು. ಆದರೆ ಏನಾಗಿಹೋಯ್ತು ರಿತು, ಅದನ್ನೆಲ್ಲ ಹೇಗೆ ಫೇಸ್ ಮಾಡಿದ್ಲೋ? ದಿಟ್ಟವಾಗಿ ನಿಂತಳು. ಪ್ರಶ್ನಿಸಿದವರಿಗೆಲ್ಲ ಉತ್ತರ ಕೊಟ್ಟು ಸಮರ್ಥಿಸಿಕೊಂಡಳು. ಹೆತ್ತ ಮಕ್ಕಳಿಂದ ನಿರ್ಲಕ್ಷಿಸಲ್ಪಟ್ಟವರು, ಬದುಕಿನಲ್ಲಿ ಭರವಸೆ ಕಳೆದುಕೊಂಡವರು, ತನ್ನವರಿಂದ ಬಯಸುವ ಸುರಕ್ಷತಾ ಭಾವನೆ ಬಯಸುವವರು ಈ ಮನೆಯ ಆಶ್ರಯಕ್ಕೆ ಬರುತ್ತಾರೆ. ಹಾಗೆ ಬಂದವರ ಭಾವನೆಗಳಿಗೆ ಯಾವ ಕ್ಷಣದಲ್ಲಿಯೂ ಧಕ್ಕೆಯಾಗಿಲ್ಲ. ‘ನಮ್ಮ ಮನೆ’ ಎಂದರೆ ಅದು ಇಲ್ಲಿರುವವರಿಗೆಲ್ಲ ನಮ್ಮ ಮನೆಯೇ ಆಗಿದೆ ಎಂಬುದನ್ನು ನಿರೂಪಿಸಬೇಕಾದರೆ ವಸು ಅದೆಷ್ಟು ಹೋರಾಟ ನಡೆಸಿದಳು. ಭೂಮಿಗಿಳಿದು ಹೋಗಿದ್ದವಳು ಫೀನಿಕ್ಸ್‍ನಂತೆ ಎದ್ದು ನಿಂತಳು. ಅದೆಲ್ಲಿತ್ತೋ ಸ್ಥೈರ್ಯ, ಎಲ್ಲಿತ್ತೋ ಆ ಧೈರ್ಯ, ಆ ದಿಟ್ಟತನ… ಪತ್ರಿಕೆಯವರೊಡನೆ ಹೋರಾಟಕ್ಕಿಳಿದಳು, ಕೋರ್ಟಿನ ಕಟಕಟೆ ಹತ್ತಿದಳು. ಆದರೆ ಅವಳ ಹೋರಾಟಕೆ ಜಯ ಸಿಕ್ಕಿತು. ಒಳ್ಳೆತನಕ್ಕೆ ಎಂದೂ ಸೋಲಿಲ್ಲ ಅನ್ನುವ ಹಾಗೆ ಕೋರ್ಟಿನಲ್ಲಿಯೂ ಆರೋಪ ಸುಳ್ಳು ಎಂದಾಯಿತು. ಇಷ್ಟಾಗುವ ಹೊತ್ತಿಗೆ ಸಾಕಷ್ಟು ಬಳಲಿ ಬಿಟ್ಟಿದ್ದಳು ವಸು. ಬಾಹ್ಯವಾಗಿ ದಿಟ್ಟತನದಿಂದಿದ್ದ, ಎದೆಗಾರಿಕೆ ತೋರುತ್ತಿದ್ದ ವಸು ಆಂತರಿಕವಾಗಿ ಕುಗ್ಗಿ ಹೋಗಿದ್ದಳು. ಅವಳ ಹೃದಯ ಇದೆಲ್ಲ ತಾಳಲಾರದಷ್ಟು ದುರ್ಬಲವಾಗಿ ಬಿಟ್ಟಿತು. ಒಂದು ದಿನ ನಗ್ತಾ ನಗ್ತಾ ಎಲ್ಲರೊಂದಿಗೆ ಮಾತಾಡ್ತಾ ಮಾತಾಡ್ತಾ ಹೋಗಿಯೇಬಿಟ್ಟಳು. ಇದೆಲ್ಲವನ್ನು ನನ್ನ ತಲೆಗೆ ಕಟ್ಟಿ, ಸಂಸಾರವಿಲ್ಲದಿದ್ದರೂ ಸಂಸಾರಸ್ತನನ್ನಾಗಿ ಮಾಡಿ ನನ್ನ ಒಂಟಿ ಮಾಡಿಬಿಟ್ಟಳು” ವಸುವಿನ ನೆನಪಿನಿಂದ ಅತ್ತೇಬಿಟ್ಟರು ವೆಂಕಟೇಶ್.

“ಸಮಾಧಾನ ಮಾಡ್ಕೊಳ್ಳಿ ಸಾರ್, ವಸು ಮೇಡಮ್ ಜೀವಂತವಾಗಿಲ್ಲದೆ ಇದ್ದರೂ ಈ ಮನೆಯಲ್ಲಿ ಎಲ್ಲರ ರೂಪದಲ್ಲಿ ಜೀವಂತವಾಗಿ ಕಾಯ್ತಾ ಇದ್ದಾರೆ. ಅವರು ಸತ್ತಿಲ್ಲ ಸಾರ್, ನಿಮ್ಮ ನೆನಪಿನಲ್ಲಿ ಸೇವೆ ಮಾಡುವವರ ಹೃದಯದಲ್ಲಿ ಬದುಕಿಯೇ ಇದ್ದಾರೆ. ನೀವು ಒಂಟಿ ಅಲ್ಲ ಸಾರ್, ನಿಮ್ಮೊಂದಿಗೆ ನಾವಿದ್ದೇವೆ. ಇಲ್ಲಿರುವವರೆಲ್ಲರೂ ನಿಮ್ಮವರೇ ಅಲ್ಲವೇ ಸಾರ್” ಸಮಾಧಾನಿಸಿದಳು.

“ಹೌದಮ್ಮ ನಾನು ಒಂಟಿಯಲ್ಲ. ವಸುವಿನ ನೆನಪಿನಲ್ಲಿ ಒಂದು ಘಳಿಗೆ ಅನಾಥ ಅನ್ನಿಸಿಬಿಟ್ಟಿತು. ವಸು ನಿನ್ನ ರೂಪ ಧರಿಸಿ ಮತ್ತೆಹುಟ್ಟಿ ಬಂದಿದ್ದಾಳೆ. ನನ್ನ ಜತೆ ನೀನಿದ್ದೀಯಾ. ಇಲ್ಲಿರುವವರೆಲ್ಲಾ ನನ್ನೊಂದಿಗಿದ್ದಾರೆ. ವಸುವಿನ ಸಾವು ನನ್ನನ್ನು ಸಂಕುಚಿತವಾಗಿ ಯೋಚಿಸುವಂತೆ ಮಾಡಿಬಿಟ್ಟಿತು. ಇನ್ನೇನು ನಮ್ಮ ವಿಕ್ರಮನು ಬಂದುಬಿಡುತ್ತಾನೆ. ನನ್ನ ಮೊಮ್ಮಗನ ನೋಡಿಲ್ಲ ಅಲ್ವ ನೀನು? ಬರುತ್ತಾನೆ, ಬಹದ್ದೂರ್ ಗಂಡು. ಅವನು ಬಂದುಬಿಟ್ರೆ ಈ ಭಾರವನ್ನೆಲ್ಲ ಅವನಿಗೊಪ್ಪಿಸಿ ಹಾಯಾಗಿದ್ದುಬಿಡುತ್ತೇನೆ. ಅವನಿಗೂ ಅಜ್ಜಿಯ ಮನಸ್ಸು ಕಣಮ್ಮ ಅಪ್ಪನಂತಲ್ಲ ಅವನು. ಬೇರೆಯವರ ಸಂಕಟಕ್ಕೆ ಬೇಗ ಮರುಗಿಬಿಡುತ್ತಾನೆ. ಅವನದೇ ಒತ್ತಡ ಇಲ್ಲಿ ಬರೋಕೆ. ವಿಕ್ರಮ್ಗೇನೂ ಅಷ್ಟೊಂದು ಇಷ್ಟ ಇಲ್ಲ ಅಂತ ಕಾಣುತ್ತೆ. ಆದ್ರೆ ಮಗನ ಬಲವಂತಕ್ಕೆ ಇಲ್ಲೇ ಬಂದು ಸೆಟ್ಲ್ ಆಗ್ತಾ ಇದ್ದಾನೆ. ಕೊನೆಗಾಲದಲ್ಲಿ ನಂಗೂ ಒಂದಿಷ್ಟು ನೆಮ್ಮದಿ ಕೊಡ್ತಾ ಇದ್ದಾನೆ” ನಿಟ್ಟುಸಿರುಬಿಟ್ಟರು ವೆಂಕಟೇಶ್. ಅವರ ಮೊಗದಲ್ಲಿ ಸ್ವಲ್ಪ ಸಮಾಧಾನ ಮೂಡಿದ್ದನ್ನು ಕಂಡ ರಿತು, “ಸರಿ, ನಾನು ಒಳಗಡೆ ಹೋಗಿ ನೋಡ್ತೀನಿ ಸರ್, ಸರೂ ಅಜ್ಜಿಗೆ ನಿನ್ನ ಹುಷಾರಿರಲಿಲ್ಲವಲ್ಲ. ಈಗ ಹೇಗಿದ್ದಾರೋ ನೋಡ್ಕೊಂಡು, ಜ್ವರ ಕಡಿಮೆ ಆಗದೆ ಇದ್ರೆ ಡಾಕ್ಟರಿಗೆ ಫೋನ್ ಮಾಡೇಕು.”

“ನೀ ಹೋಗು ರಿತು, ನನ್ನ ಕಥೆ ಕೇಳ್ತಾ ಇದ್ರೆ ಇವತ್ತೆಲ್ಲ ಮುಗಿಯೋದೇ ಇಲ್ಲ” ಎಂದು ತಾವು ಎದ್ದು ನಿಂತರು.

ನಿನ್ನೆಯಿಂದ ಮಲಗಿದ್ದ ಸರೋಜಮ್ಮ ಎದ್ದೇ ಇಲ್ಲ. ನಿನ್ನೆ ಡಾಕ್ಟರ್ ಪರೀಕ್ಷಿಸಿ ಇಂಜೆಕ್ಷನ್ ಕೊಟ್ಟು, ಮಾತ್ರೆ ನೀಡಿದ್ದರು. ಜ್ವರ ಕಡಿಮೆಯಾಗದಿದ್ದರೆ ಮತ್ತೆ ಬರುವುದಾಗಿ ತಿಳಿಸಿದ್ದರು. ಇಲ್ಲಿರುವವರಿಗಾಗಿಯೇ ಡಾಕ್ಟರ್ ಪ್ರತಿದಿನ ಬಂದು, ಪ್ರತಿಯೊಬ್ಬರನ್ನೂ ಪರೀಕ್ಷಿಸುತ್ತಿದ್ದರು. ವಾರಕ್ಕೊಮ್ಮೆ ತಮ್ಮ ನರ್ಸಿಂಗ್ ಹೋಮ್‌ಗೆ ಕರೆಸಿ, ಬಿ.ಪಿ., ಶುಗರ್ ಮುಂತಾದ ಪ್ರಾಥಮಿಕ ಪರೀಕ್ಷೆಗಳನ್ನು ನಡೆಸಿ, ಅವರ ಆರೋಗ್ಯಕ್ಕಾಗಿ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದ್ದರು. ವಯಸ್ಸಾಗಿರುವುದರಿಂದ ಏನಾದರೂ ಸಮಸ್ಯೆಗಳು ಇದ್ದೇ ಇರುತ್ತಿದ್ದವು. ಡಾಕ್ಟರ್ ತಮ್ಮ ಅಮೂಲ್ಯವಾದ ಒಂದೆರಡು ಗಂಟೆಗಳನ್ನು ಈ ಆಶ್ರಮಕ್ಕಾಗಿಯೇ ಮೀಸಲಿಟ್ಟಿದ್ದರು. ಉಚಿತವಾಗಿಯೇ ಬಂದು ಪರೀಕ್ಷಿಸುತ್ತಿದ್ದ ರಾಮದಾಸ್‌ರವರು ಇತರ ವೆಚ್ಚವನ್ನು ಅತ್ಯಂತ ಕಡಿಮೆ ಬೆಲೆಯಲ್ಲಿಯೇ ಭರಿಸುತ್ತಿದ್ದರು. ಈ ರೀತಿಯಲ್ಲಿ ಸಮಾಜ ಸೇವೆಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು ರಾಮದಾಸರು. ವಯಸ್ಸಾದವರ ಬಗ್ಗೆ ಅತ್ಯಂತ ಕಳಕಳಿ ಹೊಂದಿದ್ದ ಡಾಕ್ಟರ್ ಇಲ್ಲಿರುವ ಎಲ್ಲರ ನೆಚ್ಚಿನ ವೈದ್ಯರಾಗಿದ್ದರು.

ರಾಮದಾಸ್‌ರವರದು ಒಂದು ವಿಷಾದಭರಿತ ಕಥೆಯೇ ಈ ರೀತಿಯ ಸ್ಪಂದನಕ್ಕೆ ಕಾರಣವಾಗಿತ್ತು.

ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಂಡಿದ್ದ ರಾಮದಾಸರು ತಂದೆಯ ಆರೈಕೆಯಲ್ಲಿಯೇ ಬೆಳೆದಿದ್ದರು. ಮಗನಿಗಾಗಿ ಎರಡನೆಯ ಮದುವೆಯಾಗದೆ, ಮಗನ ಬೆಳೆಸುವಿಕೆಯಲ್ಲಿಯೇ ಸರ್ವ ಸುಖ ಕಾಣುತ್ತಿದ್ದರು. ಒಳಗೂ-ಹೊರಗೂ ದುಡಿಯುತ್ತ ಮಗ ಒಬ್ಬ ಪರಿಪೂರ್ಣ ವ್ಯಕ್ತಿಯಾಗುವಂತೆ ಶ್ರಮಿಸುತ್ತಿದ್ದರು. ಅತ್ಯಂತ ಬುದ್ದಿವಂತನಾದ ರಾಮದಾಸ್ ಸದಾ ಓದಿನಲ್ಲಿ ಮುಂದೆ, ವೈದ್ಯನಾಗಬೇಕೆಂಬ ಹಂಬಲವನ್ನು ಈಡೇರಿಸಿಕೊಳ್ಳಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದ ಮಗನ ಆಸೆಯನ್ನು ನಿರಾಸೆ ಮಾಡಬಾರದೆಂದು ಇದ್ದ ಆಸ್ತಿ-ಪಾಸ್ತಿ ಉಳಿತಾಯ ಎಲ್ಲವನ್ನೂ ಮಗನ ಓದಿಗೆ ಸುರಿದು ಬರಿಗೈಯಾಗಿ ನಿಂತರು. ಶಕ್ತಿಮೀರಿ ದುಡಿದದ್ದರಿಂದ ಆರೋಗ್ಯವನ್ನೂ ಕಳೆದುಕೊಂಡರು. ಅಪ್ಪ ತನಗಾಗಿ ಕಷ್ಟಪಡುತ್ತಿರುವುದನ್ನು ನೋಡಿ ನೊಂದುಕೊಳ್ಳುತ್ತಲೇ ಗುರಿ ಸಾಧಿಸುವ ಛಲದಿಂದ ಓದಿ ರ್‍ಯಾಂಕ್ ಪಡೆದ ರಾಮದಾಸ್ ಚೆನ್ನಾಗಿ ದುಡಿದು ಅಪ್ಪನನ್ನು ಸುಖವಾಗಿಟ್ಟುಕೊಳ್ಳಬೇಕೆಂದು ಶಪಥ ಮಾಡಿದರು. ಪ್ರತಿಭಾವಂತ ರಾಮದಾಸ್ ಕಾಲೇಜಿಗೆ ಮೊದಲನೆಯವನಾಗಿ ಉತ್ತೀರ್ಣನಾದಾಗ ವಿದೇಶ ಕೈಬೀಸಿ ಕರೆಯಿತು. ವಿದೇಶದಲ್ಲಿ ದುಡಿದರೆ ಬೇಗ ಹಣ ಗಳಿಸಬಹುದು. ಹಾಗೆ ಗಳಿಸಿದ ಹಣದಲ್ಲಿ ಅಪ್ಪನನ್ನು ಮಹಾರಾಜನಂತೆ ಮೆರೆಸಬಹುದು ಅನ್ನೋ ಆಸೆಯಿಂದ, ಅಪ್ಪ ಎಷ್ಟೇ ಬೇಡ ಎಂದರೂ ಕೇಳದೆ, ನನ್ನ ಒಂಟಿಯಾಗಿ ಮಾಡಿ ಹೋಗಬೇಡ ಎಂದು ಅಂಗಲಾಚಿದರೂ ಕರಗದೆ, ನಿನಗಾಗಿಯೇ ನಾನು ಅಲ್ಲಿಗೆ ಹೋಗುತ್ತಿರುವುದು, ಕೈತುಂಬಾ ಸಂಪಾದಿಸಿ ಬೇಗ ಬಂದುಬಿಡುತ್ತೇನೆ ಎಂದು ಹೊರಟೇಬಿಟ್ಟ ರಾಮದಾಸ್.

ಅಲ್ಲಿ ಸಂಪಾದಿಸಿ ಸಂಪಾದಿಸಿ, ಕೂಡಿಟ್ಟುಕೊಂಡ, ಕೂಡಿದಷ್ಟೂ ಸಾಲದು ಎಂಬಂಥ ಭಾವ. ಇನ್ನಷ್ಟು-ಮತ್ತಷ್ಟು ದುಡ್ಡಿನ ದಾಹದಲ್ಲಿ ಅಪ್ಪ ಮಗನಿಗಾಗಿ ಹಂಬಲಿಸುತ್ತಿರುವ ಸತ್ಯ ತಿಳಿಯದೇ ಹೋದ. ಬದುಕಿನ ಸಂಜೆಯಲ್ಲಿರುವ ಅವನಿಗೆ ಬೇಕಾಗಿರುವುದು ಮಹಾರಾಜನಂತೆ ಬದುಕುವ ಬದುಕಲ್ಲಿ ಕರುಳ ಕುಡಿಯ ಸಾಮೀಪ್ಯ. ತಾನೀಗ ಅಪ್ಪನ ಕಣ್ಮುಂದೆ ಇದ್ದು, ಅವರ ಒಂಟಿತನ ನೀಗಿಸಿ, ಮಗ-ಸೊಸೆ, ಮೊಮ್ಮಕ್ಕಳು ಎಂಬ ತುಂಬು ಸಂಸಾರದ ಸವಿ ನೀಡಬೇಕಾದುದು ಕರ್ತವ್ಯ ಎಂಬುದನ್ನು ಮರೆತುಬಿಟ್ಟು ದುಡಿಯುವ ಯಂತ್ರವಾಗಿ ಹೋದ ರಾಮದಾಸ್, ಅಪ್ಪನ ಕರೆಗೆ ಓಗೊಡದೆ ಹೋದ.

ಪ್ರತೀ ಬಾರಿ ಪತ್ರ ಬರೆದಾಗಲೂ “ನೀನು ಬಂದುಬಿಡು ಮಗು. ನೀನು ದುಡಿದದು ಸಾಕು, ನಿನ್ನ ಅಗಲಿಕೆ ಸಹಿಸುವ ಶಕ್ತಿ ನನಗಿಲ್ಲ. ನೀನೆಷ್ಟೇ ಹಣ ಕಳುಹಿಸಿದರೂ ಮೂರು ಹೊತ್ತು ಊಟವನ್ನೇ ಮಾಡಲಾಗುವುದು, ಒಂದು ಜತೆ ಬಟ್ಟೆ ಅಷ್ಟೇ ಧರಿಸಲು ಸಾಧ್ಯ. ಹಣ ಇದೆ ಎಂದು ಚಿನ್ನ ತಿನ್ನಲು ಸಾಧ್ಯವೇ? ಈ ವಯಸ್ಸಿನಲ್ಲಿ ನನಗಿನ್ಯಾವ ಆಸೆಯೂ
ಇಲ್ಲ. ಬದುಕಿನ ಕೊನೆ ದಿನಗಳನ್ನು ನಿನ್ನೊಂದಿಗೆ ಕಳೆಯಬೇಕು” ಎಂದೇ ಪರಿತಪಿಸುವ ಅಪ್ಪನ ಮನದಾಳದ ನೋವು ರಾಮದಾಸನಿಗೆ ಅರಿವಾಗಲೇ ಇಲ್ಲ.

“ನಿನ್ನಂಥ ಬುದ್ದಿವಂತ ಮಗ ನನಗೆ ಬೇಕಿರಲಿಲ್ಲ ರಾಮು, ಸಾಧಾರಣ ಬುದ್ದಿಯವನಾಗಿದ್ದರೆ ಇಲ್ಲೇ, ನನ್ನ ಕಣ್ಣ ಮುಂದೆಯೇ ಇರುತ್ತಿದ್ದ. ನೀನು ಅಸಾಧಾರಣ ಬುದ್ದಿವಂತನಾದದ್ದೇ ನನ್ನಿಂದ ನೀನು ದೂರವಾಗುವಂತೆ ಮಾಡಿದೆ. ನನಗಾದರೂ ಇನ್ಯಾರಿದ್ದಾರೆ ನಿನ್ನನ್ನು ಬಿಟ್ಟರೆ? ಹಣದ ಹುಚ್ಚು ಹಿಡಿದಿದೆ ನಿನಗೆ. ನನ್ನ ನೋವು, ಬೇಸರ ನಿನಗ್ಯಾವಾಗ ಅರ್ಥವಾಗುತ್ತೋ? ಅರ್ಥವಾಗುವ ವೇಳೆಗೆ ನಾನು ಈ ಲೋಕದಲ್ಲಿಯೇ ಇರುತ್ತೇನೋ ಇಲ್ಲವೋ?” ಎನ್ನುತ್ತಿದ್ದ ಅವರ ಮಾತುಗಳು ನಿಜವೇ ಆಗಿಬಿಟ್ಟಿತು.

ಮಗನ ಅಗಲಿಕೆ ಸಹಿಸದ ಆ ಜೀವ ಅವನ ಕೊರಗಿನಲ್ಲಿಯೇ ಪ್ರಾಣಬಿಟ್ಟಿತು. ಮಗನಾಗಿ ಹುಟ್ಟಿ ಅಪ್ಪನ ಕೊನೆಕಾಲದಲ್ಲಿ ನೋಡಿಕೊಳ್ಳಲಾರದ, ಅಪ್ಪನ ಅಂತ್ಯ ಸಂಸ್ಕಾರವನ್ನು ಮಗನಾಗಿ ಮಾಡಲಾರದ ದುರ್ದೈವ ತಂದುಕೊಂಡ ತನ್ನ ಬಗ್ಗೆಯೇ ಜುಗುಪ್ಸೆ ಪಟ್ಟುಕೊಂಡ ರಾಮದಾಸ್ ವಿದೇಶದಿಂದ ಬಂದು ಭಾರತದಲ್ಲಿಯೇ ಸೆಟ್ಲ್ ಆದರು.

ತಾನು ಅಷ್ಟೆಲ್ಲ ದುಡಿದು ಕಳುಹಿಸಿದ್ದ ಹಣವೆಲ್ಲವನ್ನೂ ಮಗನ ಹೆಸರಿನಲ್ಲಿಯೇ ಇಟ್ಟು, ತಾನು ಮೊದಲಿನಂತೆಯೇ ಬದುಕುತ್ತಿದ್ದು, ಹಾಗೆಯೇ ಕಣ್ಮುಚ್ಚಿದ ಅಪ್ಪನ ಅಂತರಂಗದ ಅರಿವು, ತನ್ನ ಹಣ ಮುಟ್ಟದೆ, ತನ್ನ ಮೇಲಿನ ಕೋಪವನ್ನು ಕೊನೆಯವರೆಗೂ ಸಾಧಿಸಿದ ಅಪ್ಪನ ಸ್ವಾಭಿಮಾನ ರಾಮದಾಸನ ಕಣ್ತೆರೆಸಿತು. ತಾನು ವಿದೇಶಕ್ಕೆ ಹೊರಟು ನಿಂತಾಗಲೂ ಮೌನವಾಗಿಯೇ ಕಳುಹಿಸಿದ ಅವರ ನೋವು ತನಗ್ಯಾಕೆ ಅರ್ಥವಾಗಲಿಲ್ಲ? ಅವರಿಗೆ ಬೇಕಾದದ್ದು ನಾನು, ನನ್ನ ಸಾನಿಧ್ಯ, ನನ ಜತೆ. ಛೇ! ನಾನೆಂಥ ಕಟುಕನಾಗಿಬಿಟ್ಟೆ? ಹಣದ ದಾಸ ನನ್ನಿಂದ ಎಂಥ ತಪ್ಪು ಮಾಡಿಸಿಬಿಟ್ಟಿತು? ಅಪ್ಪ ಅಷ್ಟೆಲ್ಲ ಆಂಗಲಾಚುತ್ತಿದ್ದರೂ ಶ್ರೀಮಂತಿಕೆಯ ಮೋಹ ನನ್ನಿಂದ, ಅಲ್ಲಿಂದ ಹೊರಟುಬರುವ ಮನಸ್ಸೇ ಬಾರದಂತೆ ತಡೆದಿತ್ತು. ತಾನೀಗ ಏನು ಮಾಡಿದರೆ ತನ್ನ ತಪ್ಪು ಸರಿಪಡಿಸಲು ಸಾಧ್ಯ? ಅಪ್ಪನ ಚಿತೆಗೆ ಬೆಂಕಿ ಇಡಲೂ ನನಗೆ ಯೋಗ್ಯತೆ ಉಳಿಯಲಿಲ್ಲ. ನಾನು ಪಾಪಿ, ಕೊರಗಿ ಕೊರಗಿ, ಅಪ್ಪನ ಸಾಯುವಂತೆ ಮಾಡಿದ ದುಷ್ಟ, ಅಪ್ಪ ನನಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ, ಗಂಧದಂತೆ ಜೀವ ತೇಯ್ದ, ನಿಸ್ವಾರ್ಥ ಜೀವಕ್ಕೆ, ಆತ ಬಯಸಿದ ಒಂದೇ ಒಂದು ಆಸೆ, ಮಗ ತನ್ನ ಜತೆ ಇರಬೇಕು ಅನ್ನೋ ಬಯಕೆನಾ ಅಲಕ್ಷ್ಯ ಮಾಡಿದ ನನ್ನ ಪಾಪಕ್ಕೆ ಏನು ಶಿಕ್ಷೆ? ಮಗ ಮದುವೆಯಾಗಬೇಕು, ಸೊಸೆ, ಮೊಮ್ಮಕ್ಕಳನ್ನು ನೋಡಬೇಕು ಎಂಬ ಅಪ್ಪನ ಆಸೆಯನ್ನು ಲೆಕ್ಕಿಸದೆ ನನ್ನ ಪ್ರಪಂಚದಲ್ಲಿಯೇ ಇದ್ದುಬಿಟ್ಟೆನಲ್ಲ. ಕೊನೆ ಘಳಿಗೆಯಲ್ಲಿ ಅಪ್ಪ ಅದೆಷ್ಟು ನೋವನ್ನುಂಡನೋ? ಆದೆಷ್ಟು ನರಳಿದನೋ? ಬಾಯಿಗೆ ನೀರು ಬಿಡುವವರಿಲ್ಲದೆ ಅನಾಥವಾಗಿ ಸತ್ತನಲ್ಲ ಯಾರೂ ಗತಿ ಇಲ್ಲದವನಂತೆ. ಯಾರಿಂದಲೋ ಸಂಸ್ಕಾರ ಕಂಡನಲ್ಲ. ತನ್ನಂಥ ಪಾಪಿ ಮಗ ಈ ಪ್ರಪಂಚದಲ್ಲಿಯೇ ಇಲ್ಲ. ಹೀಗೆ ಕೊರಗಿ ಕೊರಗಿ, ಪಶ್ಚಾತ್ತಾಪದ ಉರಿಯಲ್ಲಿ ಬೇಯತೊಡಗಿದ ರಾಮದಾಸ್, ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ, ವೃದ್ದರ ಸೇವೆ ಮಾಡಿ ಸ್ವರ್ಗದಲ್ಲಿರುವ ಅಪ್ಪನ ಆತ್ಮಕ್ಕೆ ಶಾಂತಿತರಲು ಬಯಸಿದ ರಾಮದಾಸ್, ‘ನಮ್ಮ ಮನೆ’ಯ ಬಂಧುಗಳಿಗೆಲ್ಲ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು. ಆ ವೃದ್ದರಲ್ಲಿ ತನ್ನ ತಂದೆಯನ್ನು ಕಾಣುತ್ತಾ ಅವರ ಯೋಗಕ್ಷೇಮ ವಿಚಾರಿಸುತ್ತಾ ತಮ್ಮ ನೋವನ್ನು ಮರೆಯುತ್ತಿದ್ದರು. ತಮ್ಮ ದುಡಿಮೆಯನ್ನೆಲ್ಲ ತಂದು ದೊಡ್ಡ ನರ್ಸಿಂಗ್ ಹೋಮ್ ಕಟ್ಟಿಸಿದ್ದು, ದಿನಕ್ಕೆ ಎರಡು ಗಂಟೆ ಬಿಡುವು ಮಾಡಿಕೊಂಡು, ಎಂಥ ಕೆಲಸವಿದ್ದರೂ ‘ನಮ್ಮ ಮನೆ’ಯ ವೃದ್ದರ ಭೇಟಿ ಮಾಡುವುದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಇಲ್ಲಿ ಬಂದಾಗಲೇ ಅವರಿಗೆ ಮನಶ್ಯಾಂತಿ ದೊರೆಯುತ್ತಿದ್ದುದು. ಆರ್ಥಿಕವಾಗಿಯೂ ಈ ಆಶ್ರಮಕ್ಕೆ ನೆರವು ನೀಡುತ್ತಿದ್ದರು. ಬಡತನದಲ್ಲಿರುವ ಅನಾಥರಾದ, ನಿರ್ಗತಿಕರಾದ ವೃದ್ದರಿಂದ ಯಾವ ಹಣವನ್ನೂ ಪಡೆಯದೆ ಉಚಿತ ಚಿಕಿತ್ಸೆ ನೀಡುತ್ತಿದ್ದರು. ಅಂಥವರಿಗಾಗಿಯೇ ತಮ್ಮ ನರ್ಸಿಂಗ್ ಹೋಮ್‌ನಲ್ಲಿ ಕೆಲವು ಬೆಡ್ ಗಳನ್ನು ಮೀಸಲಾಗಿಟ್ಟಿದ್ದರು. ಇಷ್ಟೆಲ್ಲ ಮಾಡಿದರೂ ಅಪ್ಪನ ಅಂತ್ಯಕಾಲ ಸದಾ ಕಣ್ಮುಂದೆ ಬಂದು ಕಾಡುತ್ತಿತ್ತು. ಹಾಗೆ ಕಾಡಿದಾಗಲೆಲ್ಲ ಇಲ್ಲಿಗೆ ಓಡಿ ಬಂದುಬಿಡುತ್ತಿದ್ದರು. ವೆಂಕಟೇಶ್‌ರವರೇ ಎಷ್ಟೋ ಬಾರಿ ಸಮಾಧಾನಿಸಿ, ಸಂತೈಸಿ ಕಳುಹಿಸಿಕೊಡುತ್ತಿದ್ದರು. ರಿತುವಿನ ಮುಂದೆ ಕೂಡ ತಮ್ಮನೋವನ್ನು ಯಾವುದೇ ಸಂಕೋಚವಿಲ್ಲದೆ ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಿದ್ದರು.

ಅಷ್ಟು ದೊಡ್ಡ ಡಾಕ್ಟರ್, ವಿದೇಶದಲ್ಲಿ ಇದ್ದು ಬಂದವರು, ದೊಡ್ಡ ನರ್ಸಿಂಗ್ ಹೋಮ್‌ನ ಒಡೆಯರು ಎಂಬ ಯಾವ ಭಾವವೂ ಇಲ್ಲದೆ ಸರಳವಾಗಿ ಎಲ್ಲರೊಡನೆ ಬೆರೆತು, ಆತ್ಮೀಯತೆಯಿಂದ, ಸ್ನೇಹದಿಂದ, ಪ್ರೀತಿಯಿಂದ ಎಲ್ಲರನ್ನೂ ಮಾತನಾಡಿಸುತ್ತಾ ಆ ಮಾತಿನಲ್ಲಿಯೇ ಅರ್ಧ ಕಾಯಿಲೆ ವಾಸಿ ಮಾಡುವಂಥ ಅಪರೂಪ ಗುಣ ಹೊಂದಿದ ರಾಮದಾಸರ ಬಗ್ಗೆ ರಿತುವಿಗಂತೂ ಅಪಾರ ಅಭಿಮಾನ. ದಿನಕ್ಕೊಂದು ಬಾರಿಯಾದರೂ ಅವರ ಗುಣಗಾನ ಮಾಡದೆ ಇರಳು. ವೆಂಕಟೇಶ್, ವಸುಧಾ, ರಾಮದಾಸರಂಥ ಸಜ್ಜನರು ಇರುವುದರಿಂದಲೇ ಈ ಭೂಮಿ ಮೇಲೆ ಮಾನವೀಯತೆ, ಒಳ್ಳೆಯತನ ಇನ್ನೂ ಉಳಿದಿವೆ ಎಂದುಕೊಳ್ಳುತ್ತಿದ್ದಳು. ತಮ್ಮ ಆದರ್ಶಗಳಿಗಾಗಿ ಬದುಕಿನ ಮೌಲ್ಯಗಳಿಗಾಗಿಯೇ ಬದುಕುತ್ತಿರುವ ಈ ನಿಸ್ವಾರ್ಥ ಜೀವಿಗಳಂತೆ ತನ್ನಿಂದ ಇರಲು ಸಾಧ್ಯವೇ? ತಾನು ಕೂಡ ಆ ಮಟ್ಟಕ್ಕೇರಿ ಅವರಂತಾಗಲು ಸಾಧ್ಯವಿದೆಯೇ ಎಂದು ಸದಾ ಪ್ರಶ್ನಿಸುವಂತೆ ಮಾಡುತ್ತಿತ್ತು ಅವರ ಬದುಕು.

“ಏನಮ್ಮಾ ರಿತು, ಯಾವ ಲೋಕಕ್ಕೆ ಹೋಗಿದ್ದೀಯಾ? ನಾನು ಬಂದು ಎಷ್ಟು ಹೊತ್ತಾಯಿತು… ಹಗಲುಕನಸು ಕಾಣ್ತಾ ಇದ್ದಿಯಾ ಅಂತ ಡಿಸ್ಟರ್ಬ್ ಮಾಡದೆ ಹೊರಟುಹೋದೆ. ನಾನು ಅಲ್ಲಿಗೆ ಹೋಗಿ ಬಂದ ಮೇಲೂ ಹೀಗೇ ಕೂತಿದೀಯಾ ಅಂತ ಅಂದ್ರ ಸಮ್‌ಥಿಂಗ್ ರಾಂಗ್ ಇರಬೇಕು” ರಾಮದಾಸರು ಪ್ರಶ್ನಿಸುವವರೆಗೂ ರಿತು ಹಾಗೇ ಕುಳಿತುಬಿಟ್ಟಿದ್ದಳು.

“ಓ, ಬನ್ನಿ ಸಾರ್, ನಾನೇ ನಿಮ್ಗೆ ಫೋನ್ ಮಾಡೋಣ ಅಂತ ಇದ್ದೆ. ಇವತ್ತು ಬರಲ್ಲ ಅಂದಿದ್ರಿ, ಸರೂ ಅಜ್ಜಿಗೆ ಜ್ವರ ಜಾಸ್ತಿ ಆಗಿದೆ. ಏನು ಮಾಡೋದು ಅಂತ ಯೋಚಿಸುತ್ತಾ ಇದ್ದೆ.”

“ಇವತ್ತು ಬರೋ ಹಾಗೆ ಇರ್ಲಿಲ್ಲ ರಿತು. ಆದ್ರೆ ಒಂದು ದಿನ ಈ ಕಡೆ ಬಾರದೆ ಹೋದ್ರೆ ಮನಸ್ಸು ಏನೋ ಕಳ್ಕೊಂಡ ಹಾಗೆ ಆಗುತ್ತೆ. ಅದಕ್ಕೆ ಸ್ವಲ್ಪ ಹೊತ್ತು ಪುರುಸೊತ್ತು ಮಾಡ್ಕೊಂಡು ಬಂದುಬಿಟ್ಟೆ. ಅದೂ ಅಲ್ದೆ ಸರೋಜಮ್ಮ ಬೇರೆ ಜ್ವರದಿಂದ ನರಳ್ತಾ ಇದ್ರಲ್ಲ, ಈಗ ಹೇಗಿದ್ದಾರೆ ಅನ್ನೋ ಆತಂಕ ಕೂಡ ಕಾಡ್ತಾ ಇತ್ತು. ಹೇಗಾದರೂ ಆಗಲಿ, ಬಂದು ನೋಡ್ಕೊಂಡೇ ಮನೆಗೆ ಹೋದ್ರಾಯ್ತು ಅಂತ ಬಂದ್ರೆ ಸರೋಜಮ್ಮಂಗೆ ಜ್ವರ ಜಾಸ್ತಿ ಆಗಿಬಿಟ್ಟಿದೆ. ಮೈಮೇಲೆ ಪ್ರಜ್ಞೆನೇ ಇಲ್ಲ. ತತ್‌ಕ್ಷಣ ಅಡ್ಮಿಟ್ ಮಾಡ್ಕೊಬೇಕು. ಆಸ್ಪತ್ರೆಗೆ ಫೋನ್ ಮಾಡಿದ್ದೀನಿ. ನನ್ನ ಅಸಿಸ್ಟೆಂಟ್ ಡ್ರಿಪ್ ಹಾಕ್ತಾರೆ. ಸರೋಜಮ್ಮಂಗೆ ಶರೀರಕ್ಕಿಂತ ಮನಸ್ಸಿಗೆ ಏನೋ ಆಗಿದೆ. ತುಂಬಾ ಸಫರ್ ಮಾಡ್ತಾ ಇದ್ದಾರೆ. ಅನ್ಕಾನ್ಶಿಯಸ್ ಆಗಿದ್ದರೂ ಏನೇನೋ ಬಡಬಡಿಸುತ್ತಾ ಇದ್ದಾರೆ. ಅವರನ್ನು ಡೀಪಾಗಿ ಸ್ಟಡಿ ಮಾಡಬೇಕು. ಒಂದೆರಡು ದಿನ ಅವರು ನರ್ಸಿಂಗ್ ಹೋಮ್ನಲ್ಲಿರಲಿ, ವೆಂಕಟೇಶ್‌ರವರಿಗೂ ತಿಳಿಸು ರಿತು. ನಾ ಬರ್ತಿನಿ” ಎಂದವರೇ ಹೊರಟುನಿಂತರು.

ಆಸ್ಪತ್ರೆಯ ವ್ಯಾನ್ ಬಂದೊಡನೆ ಸರೂ ಅಜ್ಜಿಯನ್ನು ಕರೆದುಕೊಂಡು ವ್ಯಾನಿನಲ್ಲಿ ಕೂರಿಸಿ, “ಸರೂ ಅಜ್ಜಿ, ನಾನು ಮಧ್ಯಾಹ್ನದ ಮೇಲೆ ಆಸ್ಪತ್ರೆಗೆ ಬರ್ತಿನಿ. ನೀವು ಈವಾಗ ಇವರ ಜತೆ ಹೋಗಿರಿ” ಎಂದೊಡನೆ ಸರೋಜಮ್ಮನ ಕಣ್ಣಲ್ಲಿ ಪುಳಕ್ಕನೇ ನೀರು ಚಿಮ್ಮಿತು. ಅನಾಥ ಭಾವ ಕಾಡಿ ಮೌನವಾಗಿ ಕಾರೊಳಗೆ ಕುಳಿತರು. ಒಂಟಿತನದ ಕಾವು ಹೆಚ್ಚಾಗಿ ಅದು ಇಡೀ ಮೈಯನ್ನೇ ಸುಡುತ್ತಿದೆ ಎನಿಸಿ ಬವಳಿ ಬಂದಂತೆ ಸೀಟಿಗೊರಗಿದರು. ಏಕೊ ಮಗನ ನೆನಪು ಬಲವಾಗಿ ಕಾಡಲಾರಂಭಿಸಿತು. ತಾನು ತಪ್ಪು ಮಾಡಿಬಿಟ್ಟೆ ನೋವು ಉಮ್ಮಳಿಸಿ ಬಂದಿತು. ಮಗನ ನೆನಪು, ತಪ್ಪಾಗಿ ಬಿಟ್ಟಿತು ಎಂಬ ಪಶ್ಚಾತ್ತಾಪ, ಒಂಟಿತನದ ಬಾಳು ಇವೆಲ್ಲವೂ ಸರೋಜಮ್ಮನನ್ನು ಹಣ್ಣುಹಣ್ಣು ಮಾಡಹತ್ತಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಲ್ಲಿಗೆಯೆಂಬ ಪರಿಮಳ ಸಾಲೆ
Next post ಕೋವಿಯಲಿ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…