ವಾಗ್ದೇವಿ – ೧೦

ವಾಗ್ದೇವಿ – ೧೦

ವಾಗ್ದೇವಿಯ ಮನೆಯಿಂದ ಚಂಚಲನೇತ್ರರ ಮಠಕ್ಕೆ ಹೆಚ್ಚು ದೂರ ವಿರಲಿಲ್ಲ. ಹೆಚ್ಚು ಕಡಿಮೆ ಒಂದುವರೆ ಹರದಾರಿಯೆನ್ನಬಹುದು. ಚಂಚಲ ನೇತ್ರರು ವಾಗ್ದೇವಿಯ ಬರುವಿಕೆಯನ್ನು ಕಾಯುತ್ತಾ, ಒಮ್ಮೆ ಆ ಗವಾಕ್ಷದಿಂದ ಒಮ್ಮೆ ಈ ಗವಾಕ್ಷದಿಂದ ಬೀದಿಕಡೆಗೆ ನೋಡುತ್ತಾ, ಬೀದಿಯಲ್ಲಿ ಯಾರನ್ನೂ ಕಾಣದೆ ಖಿನ್ನರಾಗಿ ತಮ್ಮ ಕೋಣೆಗೆ ತಿರುಗಿ ಒಂದು ರವಷ್ಟು ತಡೆದು ಪುನಃ ಹಾಗೆಯೇ ಗವಾಕ್ಷಗಳ ಬಳಿಗೆ ಹೋಗಿ ಸಮಯವನ್ನು ಕಳೆದು ಸಿಟ್ಟಿನಿಂದ. “ವೆಂಕಟಪತಿಗೆ ದಾರಿಯಲ್ಲಿ ಹುಲಿಹಿಡಿಯಲಿಲ್ಲವಷ್ಟೆೇ ಎಂಬ ಅನುಮಾನದ ಮಾತನ್ನು ತಮ್ಮಷ್ಟಕ್ಕೆ ಅಂದುಕೊಂಡರು. ಈ ರೀತಿಯಲ್ಲಿ ಚಂಚಲನೇತ್ರರು ಅವಸರಪಟ್ಟು ಸಿಟ್ಟು ತಡೆಯಲಾರದೆ ಎದುರಿಗೆ ಸಿಕ್ಕಿದ ಸೇವಕರಿಗೆಲ್ಲಾ ಒಂದಲ್ಲ ಒಂದು ನೆವನ ಹುಡುಕಿ ಯದ್ವಾತದ್ವ ಬಯ್ಯುತ್ತಾ ಕೋಲಿನಿಂದಲೂ ಕೈಯಿಂದಲೂ ಹೊಡಿಯುತ್ತಾ ಕಾಲಿನಿಂದ ಒದೆಯುತ್ತ ಪಿತ್ತೋವದ್ರವದಿಂದ ಬುದ್ಧಿ ಭ್ರಂಶವಾದವರಂತೆ ಮಾಡುವ ಚರ್ಯಗಳು ಕೆಲವರಿಗೆ ವಿನೋದ ಕರವಾದವು ಬೇರೆ ಕೆಲವರಿಗೆ ನೋವು ಉಂಟುಮಾಡಿದುವು; ಒಟ್ಟಿನ ಮೇಲೆ ಈ ಸನ್ಯಾಸಿಗೆ ಒಂದು ಕೆಟ್ಟ ಕಾಲವು ಸಮೀಪಿಸಿದ ಹಂಗೆ ತೋರುವದಾಗಿ ಕೆಲವು ವೃದ್ಧ ನೌಕರರು ಪ್ರಕಟವಾಗಿ ಹೇಳಲಾರಂಭಿಸಿದರು.

ಕೆಪ್ಟಮಾಣಿಯು ಏನೂ ತಿಳಿಯದವನ ಹಾಗೆ ಅತ್ತಿತ್ತ ನೋಡುತ ಫಕ್ಕನೆ ಒಂದು ಗವಾಕ್ಷದಿಂದ ನೋಡಿ ಬೀದಿಯಲ್ಲಿ ಏನೋ ವಿಶೇಷವಿದೆ ಎಂಬ ತಿಳುವಳಿಕೆ ಹುಟ್ಟುವ ರೀತಿಯಲ್ಲಿ ಹಾಸ್ಯ ವದನವನ್ನು ಮಾಡಿದನು ಚಂಚಲನೇತ್ರರು ಅದೇ ಗವಾಕ್ಷದ ಎಡೆಗಳಿಂದ ಈಕ್ಷಿಸಿದರೂ ಸಾಮಾನು ಗಳು ತುಂಬಿದ ಬಂಡಿಗಳ ಸಂಗಡ ವೆಂಕಟಪತಿ ಆಚಾರ್ಯನು ಬರುವದು ತೋರಿಬಂತು. ಸ್ವಲ್ಪಹಿಂದೆ ಸಾರಟುಬಂಡಿಯಲ್ಲಿ ಪೌರ್ಣಮಿ ಚಂದ್ರನಂತೆ ಮುಖವುಳ, ಹಸನ್ಮುಖಿ ವಾಗ್ದೇವಿಯು ತನ್ನ ಹೆತ್ತವರ ಮತ್ತು ಗಂಡನ ಒಟ್ಟಿನಲ್ಲಿ ಕೂತುಕೊಂಡಿರುವುದು ಯತಿಗಳ ಕಣ್ಣಿಗೆ ಬಿತ್ತು. ಆಗಲೆ ಅವರಿಗೆ ಉಂಟಾದ ಹರುಷವು ಇನ್ನೆಷ್ಟೆಂದು ಹೇಳಬಹುದು! “ವಾಗ್ದೇವಿ ಬಂದಳು ದಗಡಿ” ಎಂದು ಘಟ್ಟಿಯಾಗಿ ಉಚ್ಚರಿಸುತ್ತ ಉಕ್ತಿ ಬರುವ ಸಂತೋಷವನ್ನು ತಡಕೊಳ್ಳಲಾರದೆ ಥೊಪ್ಪನೆ ನೆಲದಮೇಲೆ ಬಿದ್ದು ಹೊರಳಿದರು.

ಕೆಪ್ಟಮಾಣಿಯು ತನ್ನ ಧನಿಗಳ ಹುಚ್ಚುತನವನ್ನು ಕಂಡು ತುಸು ನಕ್ಕನು. ಅದು ಚಂಚಲನೇತ್ರರ ದೃಷ್ಟಿಗೆಬಿತ್ತು. ಅವರು ಈಗಲೇ ಸಿಟ್ಟಿನಿಂದ ಎದ್ದು ಭಡಿಯಿಂದ “ಛಟಛಟ’ ಬೆನ್ನಿನಮೇಲೆ ಅಸಂಖ್ಯಾತ ಏಟುಗಳನ್ನು ಕೊಟ್ಟಭರಕ್ಕೆ ಬಡಹುಡುಗನು ಮೂರ್ಛೆಹೊಂದಿದನು. ಸಮೀಪವಿದ್ದ ಬೇರೆ ಸೇವಕನೊಬ್ಬನು ಬೇಗನೇ ಅವನ ಕಣ್ಣುಗಳಿಗೂ ಮುಖಕ್ಕೂ ನೀರನ್ನು ಚಿಮುಕಿಸಿ, ಅವನನ್ನು ಅಲ್ಲಿಂದ ಎತ್ತಿ ಇನ್ನೊಂದು ಠಾವಿನಲ್ಲಿ ಕುಳ್ಳಿರಿಸಿ ಬಹು ಕನಿಕರದಿಂದ ಅವನ ಜಾಗ್ರತೆ ತೆಕ್ಕೊಳ್ಳಲು ಅವನು ಚೇತರಿಸಿ ತನ ಗಾದಶಿಕ್ಷೆಯ ಜ್ಞಾಪಕದಿಂದ ಕಣ್ಣೀರಿಡುತ್ತ ಒಂದು ಮೂಲೆಯಲ್ಲಿ ಕೂತನು. ಮಠದಲ್ಲಿರುವ ಹಲವರು ಹೆಚ್ಚು ಪಶ್ಚಾತ್ತಾಪಪಟ್ಟು ಯತಿಗಳ ಚಿತ್ತವೇ ಇತ್ತಲಾಗೆ ಭೇದವಾದ ಕಾರಣವೇನೆಂದು ತಿಳಿಯದೆ ಬೆರಗಾಗಿ ಇನ್ನು ಮುಂದೆ ತಮ್ಮ ಸ್ಥಿತಿ ಹ್ಯಾಗೆಲ್ಲಾ ಆಗುವದೋ ಎಂಬ ಅನುಮಾನದಲ್ಲಿ ಬಿದ್ದರು. ಚಂಚಲನೇತ್ರರ ಮನಸ್ಸಿಗೆ ಅದ್ಯಾವದೂ ಹೋಗದು. ಅವರ ಚಿತ್ತವು ದೃಢವಾಗಿ ವಾಗ್ದೇವಿಯ ಮೇಲೆ ಬಿದ್ದುಹೋದ ದೆಸೆಯಿಂದ ಅದೊಂದು ವಿಷಯ ತೀರುವ ಮೊದಲು ಇನ್ನೊಂದು ಎಷ್ಟು ದೊಡ್ಡ ಪ್ರಸಕ್ತಿ ಯಾದರೂ ಅವರಿಗೆ ನಾಟದು.

ಸಾಮಾನು ತುಂಬಿದ ಬಂಡಿಗಳ ಎತ್ತುಗಳು ಮೆಲ್ಲಮೆಲ್ಲನೆ ಬರುವುದು ಸಹಜ. ವಾಗ್ದೇವಿಯು ಕೂತುಕೊಂಡಿರುವ ಸಾರಟಿನ ಎತ್ತುಗಳು ಕಾಣ ಲಿಕ್ಕೆ ಪುಷ್ಟಿ ಯಾಗಿದ್ದರೂ ಸಾರಟು ಮೆಲ್ಲಗೆ ಎಳೆಯುವ ದೆಸೆಯಿಂದ ಚಂಚಲ ನೇತ್ರರ ಅವಸರವು ಹದಮೀರಿತು. “ಈ ಕತ್ತೆ ವೆಂಕಟಪತಿಯು ಒಂದೆರಡು ಕಾಸಿನ ಆಸೆಯಿಂದ ಒಂದು ಹಳೇ ಸಾರಟು ಮತ್ತು ಕೆಲಸಕ್ಕೂ ಬೇಡದ ಎತ್ತುಗಳ ಜೋಡಿಯನ್ನು ಎಲ್ಲಿಂದ ಹೊರಕಿಸಿಕೊಂಡನೋ ಕಾಣೆ; ತಾನಾ ದರೂ ಒಂದು ಬಂಡಿಯನ್ನೇರಿದನೇ! ದ್ವಾದಶಿಯ ನೆವದಿಂದ ಭೀಮನಂತಿ ಅನ್ನದ ಮುದ್ದೆ ಮುದ್ದೆಗಳನ್ನು ನುಂಗಿಬಿಟ್ಟು ಹೊಟ್ಟೆಯನ್ನು ಹರಿವಿಯಂತೆ ಉಬ್ಬಿಸಿಕೊಂಡು ಬಂಗಿ ಮೆದ್ದೆವನಂತೆ ಬಹುಮೆಲ್ಲಗೆ ನಡಕೊಂಡು ಬರುತ್ತಾ ನಲ್ಲ. ಮುಂದಿನಿಂದ ಬರುವವನ ಚುರುಕುತನವೇ ಹೀಗಾದಮೇಲೆ ಹಿಂದಿನಿಂದ ಬರುವವರ ಸ್ಥಿತಿಯನ್ನು ಕುರಿತು ಮಾತಾಡಿ ಏನುಪ್ರಯೋಜನ? ಇನ್ನೊಂದು ಸಾರಟಾದರೂ ಮಾಡಿ ವಾಗ್ದೇವಿ ಒಬ್ಬಳನ್ನೇ ಕೂರಿಸಿತರಬಹು ದಿತ್ತು ಹಾಗೂ ಮಾಡಡೆ ಅವಳ ಮನೆಯಲ್ಲಿದ್ದ ನಾಯಿ ಬೆಕ್ಕುಗಳನ್ನು ಒಂದೇ ಸಾರಟಿನಲ್ಲಿ ತುರುಬಿಬಿಟ್ಟವನೇ ಇಂಥ ಬುದ್ಧಿಹೀನನನ್ನು ಮಠದಲ್ಲಿ ಪಾರುಪತ್ಯಕ್ಕೆ ನೇಮಿಸಿದ ನನ್ನ ಹಲ್ಲುಗಳನ್ನು ಮೊದಲು ಕಳಚಿ ಬಿಡುವವ ರ್ಯಾರಿಲ್ಲವಷ್ಟೆ” ಇಂತಹ ನುಡಿಗಳಿಂದ ಹಲವು ಪರಿಯಲ್ಲಿ ಚಂಚಲನೇತ್ರರು ಅವಸರದಿಂದ ಸಿಟ್ಟನ್ನು ಸಹಿಸಕೂಡದೆ ಒಮ್ಮೆ ಒಳಗೆ ಒಮ್ಮೆ ಹೊರಗೆ ಹೋಗುತ್ತ ಬರುತ್ತ ಇರುವುದನ್ನು ಕೆಪ್ಪಮಾಣಿಯು ನೋಡಿ ದಂಡ ಸನ್ಯಾಸಿಯ ಪಕ್ಕೆಯ ಎಲುಬುಗಳನ್ನು ಮುರಿದು ಬಿಡಲೋ ಎಂಬಂತೆ ಕ್ರೋಧವನ್ನು ತಾಳಿಕೊಂಡರೂ ಮುಯ್ಯಿಗೆ ಮುಯ್ಯಿ ತೀರಿಸುವ ಕಾಲವು ಮುಂದೆ ದೊರಕದಿರದೆಂದು ಎಣಿಸಿ ಪೆಟ್ಟಿನ ವೇದನೆಯನ್ನೂ ಆ ಸಂಬಂಧ ಉಂಟಾದ ನಾಚಿಕೆಯನ್ನೂ ಸೈರಿಸಲಾರದೆ ವ್ಯಸನಸಡುತ್ತ ಒಂದು ಮೂಲೆಗೆ ಸೇರಿಕೊಂಡನು.

ಹಾಗೂ ಹೀಗೂ ಸಾಮಾನಿನ ಬಂಡಿಗಳು ಮಠದ ಮುಂಬಾಗಿಲಿನ ಎದುರು ನಿಂತವು. ವೆಂಕಟಪತಿ ಆಚಾರ್ಯನು ಅವುಗಳಲ್ಲಿ ಇದ್ದ ಸಾಮಾನು ಗಳನ್ನೆಲ್ಲ ಜೋಕೆಯಿಂದ ಕೆಳಗೆ ಇಳಿಸಿ ನೇಮಿಸಿದ ಕೋಣೆಯಲ್ಲಿ ಇಡುವಂತೆ ಆಯಾ ಸೇವಕರಿಗೆ ಅಜ್ಞಾಪಿಸಿ ಸಾರಟುಬಂಡಿಯಲ್ಲಿ ಕುಂತಿರುವ ವಾಗ್ದೇವಿ ಯನ್ನೂ ಅವಳ ಬಳಗವನ್ನೂ ಅವರಿಗೋಸ್ಟರ ಆರಿಸಿರುವ ಕೋಣೆಗಳಲ್ಲಿ ಪ್ರವೇಶ ಮಾಡಿಸಿಬಿಟ್ಟು ಬಿಸಿಲಲ್ಲಿ ಒರಲಿಬಂದವರಾದ ಕಾರಣ ತೃಷನಿವಾರ ಣಾರ್ಥವಾಗಿ ಉತ್ಕೃಷ್ಟವಾದ ಪಾನಕವನ್ನೂ ಸಕ್ರೆ ಪಂಚಕಜ್ಜಾಯ ಲಾಡು ಚಿರೋಟಿ ಮೊದಲಾದ ತಿಂಡಿಗಳನ್ನೂ ಒದಗಿಸಿಕೊಟ್ಟು ತಾನೂ ಅವರ ಸಂಗ ಡಲೇ ಫಲಾಹಾರಮಾಡಿದ ಬಳಿಕ ಚಲೋ ವೀಳ್ಯದೆಲೆ, ಗೋಟಡಿಕೆ, ಖೊಬರಿ ಚೂರು, ಮುತ್ತಿನಚಿಪ್ಪುಗಳಿಂದ ಮಾಡಿದ ಸುಣ್ಣಸಹಿತ ಸರ್ವೋಪಚಾರ ಗಳಿಂದ ಮುಂದಿನ ಒಡತಿಯನ್ನೂ ಅವಳ ಬಳಗವನ್ನೂ ಸಂತೋಷಪಡಿಸಿ ಈ ಶುಭವಾರ್ತೆಯನ್ನು ಯಜಮಾನರಿಗೆ ತಿಳಿಸುವುದಕ್ಕೋಸ್ಕರ ಚಂಚಲನೇತ್ರರ ಸನ್ನಿಧಿಯಲ್ಲಿ ಪ್ರಣಾಮಮಾಡಿ ಬಾಯಿಗೆ ಕೈಯಿಟ್ಟು ನಿಂತುಕೊಂಡನು.

“ವೆಂಕಟಪತಿ! ನಿನ್ನಷ್ಟು ಆಪ್ತ ನಮಗಿನ್ಯಾರು ದೊರಕುವನು! ನೀನು ಲೇಶವಾದರೂ ಸಾವಕಾಶವಿಲ್ಲದೆ ಮಾಡಿದ ಉಪಕಾರವನ್ನು ನಾವು ಸರ್ವಥಾ ಮರೆಯಲಾರವು. ಇನ್ನು ಮುಂದೆ ಸಕಲ ವಿಷಯಗಳಲ್ಲಿಯೂ ನೀನೇ ನಮ್ಮ ಮಠದ ವೃದ್ಧಿಯ ಮೇಲೆ ದೃಷ್ಟಿಇಡಬೇಕಪ್ಪಾ” ಎಂಬ ಉಪಚಾರದ ಮಾತು ಗಳಿಂದ ಚಂಚಲನೇತ್ರರು ಪಾರುಪತ್ಯಗಾರನ ಮನಸ್ಸಿಗೆ ಹರುಷವನ್ನುಂಟು ಮಾಡಿದರು.

ವೆಂಕಟಪತಿ–“ಪರಾಕೆ! ನಾನು ಸರ್ವದಾ ಶ್ರೀಪಾದಂಗಳವರ ಉಪ್ಪ ನ್ನುತಿಂದುಕೊಂಡಿರುವ ಸೇವಾನುಸೇವಕನೇ, ಇಷ್ಟು ದಿವಸಗಳವರಿಗೂ ಶ್ರೀಪಾದಂಗಳವರ ಕೃಪೆಯು ನನ್ನಮೇಲೆ ಪೂರ್ಣವಾಗಿ ಇದ್ದುದರಿಂದ ನನಗೆ ಯಾವ ತರದ ಹೆದರಿಕೆಯೂ ಇರಲಿಲ್ಲ. ಮುಂದಿನಗತಿ ಹ್ಯಾಗಾಗುವದೋ ನೋಡಲಿಕ್ಕುಂಟು.

ಚಂಚಲನೇ-“ವೆಂಕಟಪತಿ! ಹಾಗ್ಯಾಕೆ ಹೇಳುತ್ತಿ? ನಿನ್ನ ಮನಸ್ಸಿನಲ್ಲಿ ವಿಕಲ್ಪ ಯಾಕೆ ಹುಟ್ಟಿತು?”

ವೆಂಕಟಪತಿ “ನನ್ನ ಮನಸ್ಸು ಸ್ವಚ್ಛವಾಗಿಯೇ ಉಂಟು. ಇದುವರೆಗೆ ಶ್ರೀಪಾದಂಗಳವರ ಪಾರುಪತ್ಯಗಾರನಾಗಿ ಸಂಸ್ಥಾನದ ವಿಶಿಷ್ಟ ಕಾರ್ಯಗಳಲ್ಲಿ ಶಕ್ತಿಮೀರಿ ಕಷ್ಟಸಟ್ಟು ಸನ್ನಿಧಿಯ ಮಮತೆಯನ್ನು ಪೂರ್ಣವಾಗಿ ಗಳಸಿ ಕೊಂಡೆನು. ಅಂಧ ಮಮತೆಗೆ ಇನ್ನು ಮುಂದೆ ಒಬ್ಬ ಸ್ತ್ರೀಯು ಭಾಗಿಯಾ ಗುವ ಪ್ರಯುಕ್ತ ನಾನು ಒಡೆಯ ಒಡತಿ ಇವರಿಬ್ಬರ ಮನಸ್ಸಿಗನಸರಿಸಿ ನಡೆಯಬೇಕಾಗುವುದು. ಇಬ್ಬರು ಧನಿಗಳ ಸೇವೆಯು ಕಷ್ಟಕರದ್ದು ಮತ್ತು ಗಂಡಾಂತರಕ್ಕೆ ಆಸ್ಪದ ಕೊಡುವ ಹಾಗಿನದು’`

ಚಂಚಲನೇ–“ನಿನ್ನ ಮಾತಿನ ತಾತ್ಚರ್ಯ ಈಗ ನಮ್ಮ ಮನಸ್ಸಿಗೆ ಹೊಕ್ಕಿತು. ಇನ್ನು ಮುಂದಿ ನಮ್ಮ ಪ್ರೀತಿಯು ಪೂರ್ಣವಾಗಿ ವಾಗ್ದೇವಿಯ ಮೇಲೆ ಸ್ಥಿರಪಟ್ಟು ಅವಳ ಮನಸ್ಸಿನಂತೆ ನಾವು ನಡಿಯುವ ಸಂಭವವಿರುವದ ರಿಂದ ನಿನ್ನ ಗೊಡವೆ ನಮಗಿರಲಾರದೆಂಬ ಹಾಗೆ ನಿನಗೆ ಸಂಶಯಹುಟ್ಟಿ ತಲ್ಲವೇ? ಆಹಾ ನೀನೆಂಥ ಬುದ್ಧಿ ಹೀನ! ಕಾಲಿನ ಪಾದರಕ್ಷೆಯನ್ನು ಯಾವ ನೊಬ್ಬನು ತಲೆಯ ಮೇಲೆ ಇಟ್ಟುಕೊಳ್ಳುವನೇ? ಸ್ತ್ರೀಯು ಎಷ್ಟು ಮೋಹಿತ ಳಾದರೂ ಅವಳ ಮೇಲೆ ಒಬ್ಬನಿಗಿರುವ ಪ್ರೀತಿಗೂ ಸಕಲ ಕಾರ್ಯಗಳನ್ನು ವಿಶ್ವಾಸದಿಂದ ನಡಿಸುವ ಕಾರ್ಯಸ್ಥನ ಮೇಲೆ ಇರುವ ನಂಬಿಕೆಗೂ ಏನೂ ಭೇದವಿಲ್ಲವೇ? ಇಷ್ಟು ನೀನು ತಿಳಿಯದೆ ಹೋದೆಯಲ್ಲ!”

ವೆಂಕಟಪತಿ–“ ಅಪ್ಪಣೆಯಾಗುವುದು ನ್ಯಾಯವೇ ಸನ್ನಿಧಿಯ ಪ್ರೀತಿಯು ನನ್ನ ಮೇಲೆ ನಿರಂತರನಾಗಿರುವುದೆಂದು ಕೋರುತ್ತೇನೆ. ಅದು ಹಾಗಿರಲಿ, ಈಗ ಮಠಪ್ರವೇಶವಾದ ವಾಗ್ದೇವಿಗೂ ಅವಳ ಗಂಡಗೂ ತಂದೆ ತಾಯಿಗಳಿಗೂ ಸನ್ನಿಧಿಯ ಬಳಿಗೆ ಕರಿಸಿಕೊಂಡು ಅವರಿಗೆ ಮಠದಲ್ಲಿ ವಾಸ ವಾಗಿರುವದಕ್ಕೆ ಕಂಠೋಕ್ತವಾದ ಒಂದು ಅಪ್ಪಣೆ ಫಲಮಂತ್ರಾಕ್ಷತೆ ಸಮೇತ ವಾಗಲಿ.”

ಪಾರುಪತ್ಯಗಾರನ ಈ ಮಾತು ಚಂಚಲನೇತ್ರರಿಗೆ ಸರಿಯಾಗಿ ತೋಚಿತು. ಹಾಗಾಗಲೆಂದು ಅವರ ಅಜ್ಞೆಯಾಗೋಣ, ವೆಂಕಟಪತಿ ಆಚಾರ್ಯನು ತಮ್ಮಣ್ಣಭಟ್ಟಗೂ ಆಚಾರ್ಯಗೂ ಭಾಗೀರಧಿಗೂ ವಾಗ್ದೇವಿ ಗೂ ಕರಕೊಂಡು ಶ್ರೀಪಾದಂಗಳವರ ಸಿಂಹಾಸನದ ಕೋಣೆಗೆ ಬಂದನು. ಅವರೆಲ್ಲರೂ ಶ್ರೀಪಾದಂಗಳವರಿಗೆ ದಂಡ ಪ್ರಣಾಮಮಾಡಿ ನಿಂತು ಕೊಂಡಾಗ ಕೂರಬೇಕೆಂದಾಜ್ಞೆಯಾಯಿತು.

ಇಷ್ಟುದಿನ ಸರಿಯಾದ ಒಂದು ಮನೆಯಿಲ್ಲದೆ, ಹೆಚ್ಚು ಪ್ರಯಾಸ ಪಟ್ಟೆವು. ಶ್ರೀಪಾದಂಗಳವರ ಕೃಪೆಯಿಂದ ತಮಗೆ ಮಠದಲ್ಲಿ ವಾಸ್ತವ್ಯಕ್ಕೆ ಸ್ಥಳಸಿಕ್ಕಿದ್ದು ತಮ್ಮ ಪೂರ್ವಪುಣ್ಯ; ಸನ್ನಿಧಿಯ ಅಜ್ಞಾಧಾರಕರಾಗಿ ವಾಸ ಮಾಡಿಕೊಂಡಿರಲಿಕ್ಕೆ ಅಪ್ಬಣೆಯಾಗಲೆಂದು ತಮ್ಮಣ್ಣ ಭಟ್ಟನು ಕೈಮುಗಿದು ಹೇಳಿಕೊಂಡನು. ತಮ್ಮಣ್ಣ ಭಟ್ಟನ ಅಪೇಕ್ಷೆಯಂತೆ ಅವನು ಸಕುಟುಂಬ ನಾಗಿಮಠದಲ್ಲಿ ವಾಸ್ತವಿಸಿಕೊಂಡಿರುವುದು ತನ್ನ ಮನಸ್ಸಿಗೆ ಅತಿಹಿತಕರವಾಗಿ ರುವದೆಂದು ಸನ್ಯಾಸಿಗಳ ಪ್ರತ್ಯುತ್ತರವಾಯಿತು. ತಾನೂ ತನ್ನ ಅಳಿಯ ಆಬಾ ಚಾರ್ಯನೂ ನಿರುದ್ಯೋಗಿಗಳಾಗಿ ಹೊಟ್ಟೆಹೊರುವುದೇ ಅತಿ ಪ್ರಯಾಸವಾದ ದೆಸೆಯಿಂದ ಸನ್ನಿಧಿಯ ಮರೆಹೊಕ್ಕ ಮಾತ್ರದಿಂದ ದಾರಿದ್ರ್ಯವು ಇನ್ನು ಮುಂದೆ ತಮ್ಮನ್ನಗಲಿತೆಂಬ ಕೋರಿಕೆ ಹುಟ್ಟಿಯದೆ. ಎಂದು ತಮ್ಮಣ್ಣ ಭಟ್ಟನು ಅರಿಕೆ ಮಾಡಿಕೊಂಡನು. ಮುಗುಳುನಗೆಯಿಂದ ಶ್ರೀಪಾದಂಗಳು ತಮ್ಮ ಆಶ್ರಿತರ್ಯಾರಿಗೂ ಬಡತನ ಸೋಕದೆಂದರು.” ಹಲವು ಮಾತುಗಳಾಡ ಬೇಕ್ಯಾಕೆ? ಚರಣಕಿಂಕರರಾದ ನಮ್ಮೆಲ್ಲರನ್ನು ಕರುಣದಿಂದ ಪಾಲಿಸಬೇಕು? ಎಂದು ಮಾವ ಅಳಿಯಂದಿರು ತಮ್ಮ ಮಡದಿಯರ ಸಮೇತ ಸಾಷ್ಟಾಂಗ ವೆರಗಿದರು. ಸಂಸ್ಥಾನದ ಮೇಲೆ ವಿಶ್ವಾಸವಿಟ್ಟು ನಡಕೊಂಡರೆ ದೇವರು ಬಿಟ್ಟುಹಾಕಲಿಕ್ಕಿಲ್ಲವಾಗಿ ಚಂಚಲನೇತ್ರರು ಅಭಯ ವಚನವನ್ನು ದಯ ಪಾಲಿಸಿ, ಫಲಮಂತ್ರಾಕ್ಷತೆಯನ್ನು ಕೊಡಲಿಕ್ಕೆ ಹವಣಿಸಿದರು. ಮಂತ್ರಾಕ್ಷತೆ ಕೊಡುವ ವೇಳೆಯಲ್ಲಿಯೇ ತಮ್ಮಣ್ಣಭಟ್ಟಗೆ ಜರಿಕಂಬಿಯ ಪಟ್ಟೆಮಡಿ, ಆಬಾಚಾರ್ಯರಿಗೆ ಉತ್ತಮವಾದ ಕಾಶ್ಮೀರ ಶಾಲುಜೋಡಿ, ಭಾಗೀರಥಿಗೆ ಉತ್ಕೃಷ್ಟವಾದ ಕಲಾಬತ್ತಿನ ಶಾಲೆ ಉಡುಗೊರೆ ಆಯಿತು.

ಮದದಾನೆಯಂತೆ ಮೆಲ್ಲಮೆಲ್ಲನೆ ಅಡಿ ಇಡುತ್ತಾ ಮುಂದೆಬಂದು, ಅಧೋಮುಖಿಯಾಗಿ ನಿಂತುಕೊಂಡಿರುವ ವಾಗ್ದೇವಿಯನ್ನು ಚಂಚಲ ನೇತ್ರರು ಆಪಾದಮಸ್ತಕಪರಿಯಂತ ಸಂಪೂರ್ಣಕಟಾಕ್ಷದಿಂದ ನೋಡಿ ಬಿಟ್ಟು, ಉಕ್ಕಿಬರುವ ಪ್ರಮಾದದಿಂದ ಫಲಮಂತ್ರಾಕ್ಷತೆಯನ್ನು ಅನುಗ್ರಹಿಸಿ ತಾರಾಮಂಡಲದ ಚಿತ್ರವನ್ನು ಜರಿಯ ನೂಲಿನಿಂದ ಬಹು ಸೂಕ್ಷ್ಮವಾಗಿ ಬಿಡಿಸಿರುವ ಸೆರಗುಳ್ಳ ಆಕಾಶವರ್ಣದ ಬುಗುಡಿ ಅಂಚಿನ ಸೀರೆಯನ್ನು ದಾಳಿಂಬ ಬಣ್ಣದ ಕಂಚುಕಿ ಸಹಿತ ಉಚಿತವಾಗಿ ಕೊಟ್ಟರು. “ರಾತ್ರೆ ಪೂಜೆ ಯು ಬೇಗವಾಗುವದು; ಎಲ್ಲರೂ ಬಂದು ಪ್ರಸಾದ ಪಡಕೊಂಡು ಹೋಗ ಬೇಕು” ಎಂದು ಶ್ರೀಪಾದಂಗಳವರ ಅನುಜ್ಞೆಯಾಯಿತು. ಹಾಗೆಯೇ ತಮ್ಮಣ್ಣಭಟ್ಟನು ಆದಿಯಾಗಿ ಎಲ್ಲರೂ ಅವರ ವಾಸಸ್ಟಾನಕ್ಟೋಸ್ಟರ ನೇಮಿಸಲ್ಪಟ್ಟ ಕಟ್ಟೋಣದ ಭಾಗವನ್ನು ಸೇರಿಕೊಂಡರು.

ಚಂಚಲನೇತ್ರರು ವೆಂಕಟಪತಿಯನ್ನು ಸಮೀಪ ಕರೆದು, ಪ್ರಮಾಣ ಪಡಿಸಿ, ವಾಗ್ದಾನ ಕೊಡಬೇಕೆಂಬ ಹಟವನ್ನು ವಾಗ್ದೇವಿಯು ಇನ್ನೂ ಮರಿಯಲಿಲ್ಲವೇ ಎಂದು ವಿಚಾರಿಸಲಾಗಿ ಜೀವ ಹೋದರೂ ಅವಳು ಹಟ ಬಿಡುವವಳಲ್ಲ. ಈ ವಿಷಯದಲ್ಲಿ ತಾನು ಮಾಡಿದ ಪ್ರಯತ್ನವು ನಿಷ್ಫಲ ವಾಯಿತು; ಬೇರೆ ನಿವೃತ್ತಿ ಕಾಣದೆಂದು ವೆಂಕಟಪತಿಯು ಉತ್ತರಕೊಟ್ಟನು. ಇಂಥ ಇಕ್ಕಟ್ಟಿನಲ್ಲಿ ಈಗ ಆಲೋಚನೆ ಮಾಡುವಂಥಾದ್ದೇನೂ ಇಲ್ಲ. ಮೊದಲೇ ನೋಡಬೇಕಿತ್ತು ಎಂಬ ಪಾಶ್ಚಾತ್ತಾಪದ ಮಾತು ನಿಟ್ಟುಸಿರ ನೊಡನೆ ಚಂಚಲನೇತ್ರರ ಬಾಯಿಯಿಂದ ಬಂದು ಹೋಯಿತು. ವೆಂಕಟ ಪತಿಯ ಕಣ್ಣಿಗೆ ನೀರು ಬಂತು. “ಪರಾಕೆ! ದೊಡ್ಡ ದೊಡ್ಡ ಆಲೋಚನೆಯು ಮನಸ್ಸಿಗೆ ಹತ್ತುವ ಸಮಯವು ಇದಲ್ಲ. ಉಪಯೋಗಿಸಿಕೊಳ್ಳುವ ಉದ್ದಿಶ್ಯ ಸಾಹಸಪಟ್ಟು ತರಿಸಿಕೊಂಡಿರುವ ವಸ್ತುವನ್ನು ಸಂತೋಷಚಿತ್ತದಿಂದ ಸ್ವೀಕರಿಸುವದೇ ಕರ್ತವ್ಯ; ಅನ್ಯಥಾ ಯೋಜನೆ ಮಾಡುವದು ಯೋಗ್ಯವಲ್ಲ ವೆಂದು ನಾನು ಪ್ರತ್ಯೇಕ ಹೇಳಬೇಕ್ಯಾಕೆ? ಸರ್ವವು ಬಲ್ಲ ಚರಣಾರವಿಂದ ಗಳಿಗೆ ಪೂರ್ಣ ಪರಾಂಬರಿಕೆ ಇದೆಯಷ್ಟೇ” ಎಂದು ಚಾತುರ್ಯದ ಮಾತಿ ನಿಂದ ವೆಂಕಟಪತಿ ಆಚಾರ್ಯನು ತನ್ನ ಧನಿಯ ಮನಸ್ಸಿಗೆ ಹತ್ತಿದ ಅನಿತ್ಯ ವ್ಯಾಕುಲವನ್ನು ವರಿಹರಿಸಿಬಿಟ್ಟನು.

ಚಂಚಲನೇತ್ರರ ಹೃದಯದಲ್ಲಿ ಕೂಡಲೇ ಆಹ್ಲಾದವು ಪುನಃ ಸ್ಥಾಪನೆಯಾಯಿತು. ರಾತ್ರಿ ಪೂಜೆಯೊಂದು ಶೀಘ್ರಮಾಡಿಬಿಟ್ಟರೆ ತನ್ನ ಮನೋರಥ ಪೂರ್ಣವಾಗಲಿಕ್ಕೆ ಬೇರೊಂದು ಅಭ್ಯಂತರವಿರಲಾರದು; ಭವಿಷ್ಯ ವಿಚಾರ, ಕ್ರಮೇಣ ನೋಡೋಣ; ಆ ಚಿಂತೆ ಈವಾಗ್ಯಾಕೆಂದು ಯತಿಗಳು ದೃಢಚಿತ್ತರಾಗಿ ಸೂರ್ಯಾಸ್ತಮಯದ ನಿರೀಕ್ಷಣೆಯಲ್ಲಿದ್ದುಕೊಂಡರು. ರಾತ್ರಿ ಸಾವಕಾಶವಿಲ್ಲದೆ ಸ್ನಾನತೀರಿಸಿ, ಪೂಜೆಗೆ ಕೂತರು. ಅಂದು ದ್ವಾದಶಿ ಯಾದ ಕಾರಣ ಪುರಾಣವಿರಲಿಲ್ಲ. ಇದು ಬಹು ಅನುಕೂಲವಾಯಿತು. ಇಲ್ಲವೇ ಮುದ್ದಣ್ಣಾಚಾರ್ಯನ ಉಗ್ಗುವಾಚಕಕ್ಕೆ ಸನ್ಯಾಸಿಗೆ ಇಲ್ಲದ ಕೋಪ ಬಂದು ವಿಪರೀತವಾಗುತ್ತಿತು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಧಾರ
Next post ಕಾಣದ ಕೈಯೆಂದು

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys