ಸ್ವಪ್ನ ಮಂಟಪ – ೭

ಸ್ವಪ್ನ ಮಂಟಪ – ೭

ಮಾರನೆಯ ದಿನ ಶಿವಕುಮಾರ್ ಹೈಸ್ಕೂಲಿನ ಬಳಿಗೆ ಹೋದ. ಹೆಡ್‌ಮಾಸ್ಟರಿಗೆ ಆಶ್ಚರ್ಯವಾಯಿತು.

‘ಏನ್ ಕುಮಾರ್? ಬಹಳ ದಿನಗಳ ಮೇಲೆ ಈ ಕಡೆ ಸವಾರಿ ಬಂತಲ್ಲ’ ಎಂದರು. ಕುಮಾರನಿಗೆ ಒಂದು ಕ್ಷಣ ಅಳುಕೆನ್ನಿಸಿದರೂ ಚೇತರಿಸಿಕೊಂಡು ಹೇಳಿದ:

‘ಯಾಕ್ ಸಾರ್ ನಮ್ಮೂರ್ ಹೈಸ್ಕೂಲ್ ಹತ್ರ ನಾನ್ ಬರಬಾರ್‍ದ?’

‘ಛೇ! ಛೇ! ಎಲ್ಲಾದ್ರೂ ಉಂಟಾ? ನಿನಗೆ ಈ ಊರು ಅಂದ್ರೆ ಎಷ್ಟು ಅಭಿಮಾನ ಅಂತ ನನಗೆ ಗೊತ್ತಿಲ್ವ? ಆದ್ರೆ ಊರಿನ ಅಭಿಮಾನ ಬರೀ ಕೋಟೆ ಕೊತ್ತಲಗಳಿಗೆ ಸೀಮಿತವಾಗದೆ ಇರ್‍ಲಿ ಅಂತ ನನ್ನಾಸೆ.’

‘ಏನ್ಸಾರ್ ನೀವೂ ಹೀಗಂತೀರ?’ ಎನ್ನುತ್ತ ಕುಮಾರ್ ಕೂತುಕೊಂಡು.

‘ನಾನೂ ಹೀಗಂತೀನಿ ಅನ್ನೊ ಮಾತ್ನಲ್ಲಿ, ಇತರೆಯವರೂ ಯಾರೊ ಹೀಗಂತಿದ್ದಾರೆ ಅನ್ನೋ ಅಭಿಪ್ರಾಯ ಹೊರಡುತ್ತಲ್ಲ?’ ಎಂದು ಹೆಡ್ ಮಾಸ್ಟರ್ ಕೆಣಕಿದರು.

‘ನಿಮ್ಮ ಮೇಲೂ ಮಂಜುಳ ಮೇಡಂ ಪ್ರಭಾವ ಆಗ್ಬಿಡ್ತೇನೊ ಅಂತ ಅನ್ಮಾನ ಬಂತು. ಅದಕ್ಕೆ ‘ನೀವೂ’ ಅಂತ ದೀರ್ಘ ಎಳೆದೆ.’

‘ಎರಡೇ ದಿನದಲ್ಲಿ ಎಂಥ ಪ್ರಭಾವ ಸಾಧ್ಯ ಕುಮಾರ್? ಆದ್ರೆ ಒಂದು ಮಾತು ನಿಜ. ಆಕೆ ವಿಶೇಷವಾದ ದೃಷ್ಟಿಕೋನ ಇರೊ ವ್ಯಕ್ತಿ.’

‘ನನಗೂ ಹಾಗೇ ಅನ್ಸುತ್ತೆ ಸಾರ್. ಅವರ ಮಾತೇ ಒಂದು ರೀತಿ ಹೊಸದಾಗಿರುತ್ತೆ. ವಿಚಾರದಲ್ಲಿ ಏನೋ ಒಂದು ಹೊಳಪು ಕಾಣುತ್ತೆ.’

‘ಅಂತೂ ಪ್ರಭಾವ ತುಂಬಾನೇ ಜಾಸ್ತಿ ಆದ ಹಾಗಿದೆ.’

‘ಛೇ! ಛೇ! ಎಲ್ಲಾದ್ರು ಉಂಟಾ ಸಾರ್, ನಾನು ನಾನೇ. ಅವರು ಅವರೇ.’

‘ನೀನು ನೀನೇನ, ಅವರು ಅವರೇ! ಯಾರ್ ಇಲ್ಲ ಅಂದ್ರು? ಆದ್ರೆ ವಿಚಾರ ವಿನಿಮಯ ನಡೆದಾಗ ನೀನು ಅವರಾಗೋದು, ಅವರು ನೀನಾಗೋದು ಯಾಕ್ ಆಗಬಾರದು?’

‘ಆಗಬಹುದು ಯಾರ್ ಇಲ್ಲ ಅಂದ್ರು?’

‘ಅದನ್ನೇ ನಾನ್ ಹೇಳ್ತಾ ಇರೋದು. ಪ್ರಭಾವ ಜಾಸ್ತಿ ಆಗಿದೆ ಅಂತ.’

‘ನಾನು ಹಾಗೆಲ್ಲ ಪ್ರಭಾವಕ್ಕೆ ಸಿಕ್ಕೋದಿಲ್ಲ ಸಾರ್.’

‘ಎಷ್ಟೋ ದಿನಗಳ ಮೇಲೆ ನೀನಾಗಿ ನಮ್ ಸ್ಕೂಲ್ ಹತ್ರ ಬಂದಿದ್ದೀಯ ಅಂದ್ಮೇಲೆ ಪ್ರಭಾವ ಯಾರದು ಅಂತ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಕುಮಾರ್.

ಶಿವಕುಮಾರನಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಅವನು ಇಲ್ಲಿಗೆ ಬರುವುದರಲ್ಲಿ ಮಂಜುಳಾ ಸೆಳೆತ ಇಲ್ಲದೆ ಇರಲಿಲ್ಲ. ಆದರೆ ಅದೊಂದೇ ಕಾರಣದಿಂದ ತಾನು ಬಂದಿಲ್ಲ ಎಂಬುದು ಆತನ ಅಭಿಪ್ರಾಯವಾಗಿತ್ತು.

‘ನಾನ್ ಬಂದಿದ್ದು ನಿಮ್ಮನ್ನ ನೋಡೋಕೆ ಸಾರ್’

‘ಹೌದಾ? ವೆರಿ ಗುಡ್, ನನ್ನನ್ನೂ ನೋಡೋರ್ ಇದಾರಲ್ಲ ಅದೇ ಅದೃಷ್ಟ ಬಿಡು.’

‘ಹೀಗೇ ಮಂಜುಳ ಮೇಡಂ ಅವರನ್ನೂ ನೋಡ್ದಂಗಾಗುತ್ತೆ ನೋಡಿ.’

ಹೆಡ್‌ಮಾಸ್ಟರ್ ದಿಟ್ಟಿಸಿ ನೋಡಿದರು. ಆನಂತರ ‘ಕ್ಲಾಸ್ ಮುಗಿಸ್ಕೊಂಡ್ ಬಾರ್‍ತಾರೆ ಕಾಯ್ತಾ ಇರು’ ಎಂದರು. ಕುಮಾರ ನಸು ನಗುತ್ತ ‘ಮುನಿಸ್ಕೊಬೇಡಿ ಸಾರ್. ನಾನು ಬಂದದ್ದೇ ನಿಮ್ ಜೊತೆ ಮಾತಾಡೋಕೆ. ಆದ್ರೆ ಬರೋಹಾಗ್ ಮಾಡಿದ್ದು ಮಂಜುಳ ಮೇಡಂ ಅಷ್ಟೆ’ ಎಂದ. ಹೆಡ್ ಮಾಸ್ಟರಿಗೆ ಒಗಟಿನ ಅನುಭವವಾಗತೊಡಗಿ ‘ಯಾಕಪ್ಪ ಏನಾದ್ರು ವಿಶೇಷ ಇದೆಯಾ? ಮದುವೆ ಗಿದುವೆ ವಿಷಯಾನ ನಿಮ್ಮಪ್ಪನ ಹತ್ರ ಮಾತಾಡ್ಬೇಕ?’ ಎಂದು ನೇರವಾಗಿ ಕೇಳಿಯೇ ಬಿಟ್ಟರು.

ಕುಮಾರ್ ತಲೆ ಮೇಲೆ ಕೈ ಹೊತ್ತು ಕೂತ. ಹೆಡ್ ಮಾಸ್ಟರ್ ಮತ್ತೆ ಹೇಳಿದರು.

‘ಚಿಂತೆ ಮಾಡ್ ಬೇಡಪ್ಪ, ಈಕೆ ಅಣ್ಣ ನನಗೆ ಚೆನ್ನಾಗ್ ಗೊತ್ತು. ನಿನಗೆ ಗೊತ್ತಿರೊ ಹಾಗೆ ನಿಮ್ಮಪ್ಪಾನೂ ಗೊತ್ತು ಕದ್ದುಮುಚ್ಚಿ ಏನೂ ಮಾಡ್ ಬೇಡಪ್ಪ. ಎಲ್ಲಾ ಸಾಫ್‌ಸೀದಾ ಇರು. ಬೇಕಾದ್ರೆ ನಾನೇ ರಾಯಭಾರ ವಹಿಸ್ತೀನಿ.’

ಕುಮಾರನಿಗೆ ಇರಿಸುಮುರಿಸಾಯಿತು. ‘ದಯವಿಟ್ಟು ನನ್ನ ಮಾತು ಕೇಳಿ ಸಾರ್, ನಾನ್ ಬಂದಿರೋದು ಚರಿತ್ರೆ ವಿಷಯ ಮಾತಾಡೋಕೆ ನೀವು ಚಾರಿತ್ರ್ಯದ ವಿಷಯ ತೆಗೀತಾ ಇದೀರ’ ಎಂದು ಮುಖ್ಯ ವಿಷಯಕ್ಕೆ ಬರಲು ಪ್ರಯತ್ನಿಸಿದ. ಆದರೆ ಹೆಡ್ ಮಾಸ್ಟರ್ ಮಾತಿನ ಧಾಟಿ ಬದಲಾಗಲಿಲ್ಲ. ‘ಇಷ್ಟು ದಿನ ಊರಿನ ಚರಿತ್ರೆ ಹೇಳ್ಕೊಂಡು ಹೆಮ್ಮೆ ಪಡ್ತಿದ್ದ ನೀನು ಸ್ವಂತ ಚರಿತ್ರೆ ನಿರ್ಮಾಣ ಮಾಡೋಕ್ ಹೊರಿಟಿದ್ದೀಯ ನಿಜತಾನೆ?’ ಎಂದು ಕೇಳಿದರು.

‘ಸಾರ್, ದಯವಿಟ್ಟು ನನ್ನ ಮಾತು ಸ್ವಲ್ಪ ಕೇಳಿ’ ಕುಮಾರ್‌ ಒತ್ತಾಯಪೂರ್ವಕವಾಗಿ ಹೇಳತೊಡಗಿದ. ‘ನಾನು ನಿಜವಾಗಿಯೂ ಚರಿತ್ರೆ ವಿಷಯ ಮಾತಾಡೋಕ್ ಬಂದಿದ್ದೀನಿ. ಮಂಜುಳ ಮೇಡಂ ಮಾತಾಡೊ ಧಾಟೀಲಿ, ನಾನು ಚರಿತ್ರೇನ ನೋಡೊ ದೃಷ್ಟಿ ಸರಿಯಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತೆ, ಚರಿತ್ರೆಯನ್ನು ಗಂಭೀರವಾಗಿ ತಗೊಂಡಿರೋದೇ ತಪ್ಪ? ನಮ್ಮ ಚರಿತ್ರೆ ಬಗ್ಗೆ ನಮಗೆ ಹೆಮ್ಮೆ ಇರಬಾರದ? ಈ ಪ್ರಶ್ನೆಗಳನ್ನ ನಿಮ್ಮ ಮುಂದೆ ಇಡೋಣ ಅಂತ ಬಂದೆ, ಅಷ್ಟೆ.’

‘ನನ್ನ ಮುಂದೆ ಇಡೊ ಬದಲು ಮಂಜುಳ ಮುಂದೇನೇ ಇಡಬಹುದಿತ್ತಲ್ಲ?’ ಹೆಡ್‌ಮಾಸ್ಟರ್ ಕೆಣಕಿದರು.

‘ಹಿರಿಯರಿಂದ ಪ್ರಾರಂಭವಾಗಲಿ ಅಂತ ನಿಮ್ಮ ಮುಂದೆ ಇಟ್ಟಿದ್ದೀನಿ’ ಎಂದು ನಸುನಗುತ್ತ ಕುಮಾರ್‌ ಹೇಳುವ ವೇಳೆಗೆ ಬೆಲ್ ಬಾರಿಸಿತು. ಆಗ ಹೆಡ್ ಮಾಸ್ಟರ್ ‘ಒಂದ್ ನಿಮಿಷ ಮಂಜುಳಾ ಬಂದೇ ಬಿಡ್ತಾರೆ. ಅವರ ಎದುರೇ ಎಲ್ಲಾ ಪೈಸಲಾಗ್ ಬಿಡ್ಲಿ’ ಎಂದರು.

ಒಂದೆರಡು ನಿಮಿಷಗಳಲ್ಲೇ ಮಂಜುಳ ಮೇಡಂ ಒಳಬಂದರು. ಅಲ್ಲಿ ಕುಮಾರನನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು. ಹೆಡ್‌ಮಾಸ್ಟರ್ ಇಬ್ಬರನ್ನು ಒಮ್ಮೆ ದಿಟ್ಟಿಸಿ ನಮ್ಮ ಕುಮಾರ್ ನಿಮ್ಮನ್ನೇ ಹುಡಿಕ್ಕೊಂಡ್ ಬಂದಿದಾನೆ’ ಎಂದರು. ಕುಮಾರನಿಗೆ ಮುಜುಗರವಾಯಿತು. ‘ಛೇ! ಛೇ! ಹಾಗೇನಿಲ್ಲ’ ಎಂದ. ‘ಸಂಕೋಚ ಯಾಕಪ್ಪ? ಪ್ರಶ್ನೆ ಕೇಳಿಬಿಡು. ಎಲ್ಲಾ ಇಲ್ಲೇ ತೀರ್ಮಾನ ಮಾಡೋಣ’ ಎಂದು ಹೆಡ್ ಮಾಸ್ಟರ್ ಹೇಳಿದಾಗ ಮಂಜುಳಾಗೆ ಕುತೂಹಲ.

‘ಏನ್ ಪ್ರಶ್ನೆ ಸಾರ್? ಏನ್ ತೀರ್ಮಾನ ಮಾಡೋದು ಸಾರ್‌?’ ಅದೇ ಕುತೂಹಲದಲ್ಲಿ ಕೇಳಿದಳು.

‘ಹೀಗೇ ಪರ್ಸನಲ್ ಪ್ರಶ್ನೆ’ ಎಂದರು ಹೆಡ್‌ಮಾಸ್ಟರ್. ಮಂಜುಳಾಗೆ ವಿಚಿತ್ರವೆನ್ನಿಸಿತು. ಪರ್ಸನಲ್ ಪ್ರಶ್ನೆಯನ್ನು ತನಗೆ ಯಾಕೆ ಕೇಳುತ್ತಾನೆ. ಹಾಗಾದರೆ ಈ ಪ್ರಶ್ನೆ ತನಗೇ ಸಂಬಂಧ ಪಟ್ಟಿರಬಹುದೆ? ಕುಮಾರನ ಮನಸ್ಸಿನಲ್ಲಿ ತನ್ನ ಬಗ್ಗೆ ಪ್ರೇಮ ಹುಟ್ಟಿರಬಹುದೆ?

‘ಪರ್ಸನಲ್ ಪ್ರಶ್ನೆ ಅಂದ್ರೆ ಈತನಿಗೆ ಪರ್ಸನಲ್ಲಾಗಿ ಉದ್ಭವವಾಗಿರೋ ಪ್ರಶ್ನೆ’ ಎಂದು ಹೆಡ್‌ಮಾಸ್ಟರ್ ಸಮಜಾಯಿಷಿ ನೀಡಿದಾಗ ಎದೆ ಬಡಿತ ಕಡಿಮೆಯಾಯಿತು. ಆನಂತರ ಕುಮಾರ್‌ ತನ್ನ ಅನುಮಾನವನ್ನು ಈಕೆಯ ಮುಂದಿಟ್ಟ, ಮಂಜುಳ ಸ್ಪಷ್ಟವಾಗಿ ಹೇಳಿದಳು:

‘ಚರಿತ್ರೆ, ಐತಿಹ್ಯ ಮತ್ತು ಪುರಾಣಗಳಿಗೆ ಇರೊ ವ್ಯತ್ಯಾಸ ಗೊತ್ತಿರಬೇಕು ಅನ್ನೋದು ನನ್ನ ಅಭಿಪ್ರಾಯ. ಜೊತೆಗೆ ಚರಿತ್ರೆ ಅನ್ನೋದು ಕೇವಲ ರಾಜರ ಬದುಕಿನ ಕಾಲಾನುಕ್ರಮಣಿಕೆಯಲ್ಲ. ರಾಜರನ್ನೂ ಒಳಗೊಂಡಂತೆ ಒಟ್ಟು ಜನರ ಬದುಕಿನ ನೆಲೆಯಲ್ಲಿ ಚರಿತ್ರೆಯನ್ನು ಕಟ್ಟಿಕೊಡಬೇಕು ಅನ್ನೋದು ನನ್ನ ದೃಷ್ಟಿ. ಚರಿತ್ರೆ ವಿಷಯ ಆಗಲಿ, ಸಾಹಿತ್ಯದ ವಿಷಯ ಆಗಲಿ ಇದೇ ನನ್ನ ಅಭಿಪ್ರಾಯ.’

‘ಕುಮಾರ್‌ ಸುಮ್ಮನಾಗಲಿಲ್ಲ, ಆಕೆಯ ಸ್ವಷ್ಟ ಅಭಿಪ್ರಾಯ ಕೇಳಿದ ಮೇಲೂ ಮತ್ತೊಂದು ಪ್ರಶ್ನೆ ಹಾಕಿದ.

‘ಚರಿತ್ರೆಯನ್ನು ಓದಿದ ನನ್ನಂಥೋರ ಬಗ್ಗೆ, ಅಷ್ಟೇ ಅಲ್ಲ ಚರಿತ್ರೆ ಬಗ್ಗೆ ನಿಮಗೆ ಅಭಿಮಾನ ಇದೆಯಾ?’

‘ಯಾಕಿಲ್ಲ? ಇದ್ದೇ ಇದೆ. ಆದರೆ ಚರಿತ್ರೆ ಅನ್ನೋದು ಒಣಹೆಮ್ಮೆ ಆಗಬಾರದು. ಗತ ವೈಭವದ ಕನವರಿಕೇಲಿ ಮುಳುಗಿಸೊ ಒಂದು ಭ್ರಮೆ ಆಗಬಾರದು.’

‘ನಿಮ್ಮ ಮನಸ್ನಲ್ಲಿ ಸಾಹಿತ್ಯವೇ ಚರಿತ್ರೆಗಿಂತ ಶ್ರೇಷ್ಠ ಅನ್ನೋ ಭಾವನೆ ಇದ್ದಂತಿದೆ’ – ಮತ್ತೆ ಕುಮಾರ್ ತನ್ನ ಅನುಮಾನವನ್ನು ಮುಂದಿಟ್ಟ.

‘ಅದು ನಿಮ್ಮ ಅನುಮಾನ ಅಷ್ಟೆ, ಸಾಹಿತ್ಯದ ಬಗ್ಗೆಯೂ ನನಗೆ ಸ್ಪಷ್ಟವಾದ ಕಲ್ಪನೆ ಇದೆ. ಸಾಹಿತ್ಯ – ಚರಿತ್ರೆ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡೋಕ್ ಸಾಧ್ಯ ಇರುವಾಗ ಶ್ರೇಷ್ಠ ಕನಿಷ್ಠ ಅನ್ನೋ ಪ್ರಶ್ನೆಯೇ ಇಲ್ಲ.’

ಆಗ ಹೆಡ್ ಮಾಸ್ಟರ್ ಥಟ್ಟನೆ ಹೇಳಿದರು. ಇನ್ನೇನಪ್ಪ ಎಲ್ಲಾ ಮುಗೀತಲ್ಲ? ಏನೇನೋ ತಲೇಲ್ ಇಟ್ಕೊಂಡು ಸೊರಗಿ ಸುಣ್ಣ ಆಗ್ಬೇಡ. ಮೊದ್ಲು ಈ ಊರಿಗೆ ನೀನೇ ಬುದ್ಧಿವಂತ ಈಗ ಇನ್ನೊಬ್ರು ಬಂದಿದ್ದಾರೆ! ಸ್ವಲ್ಪ ದಿನ ಮನಸ್ಸಲ್ಲಿ ಅಲ್ಲೋಲ ಕಲ್ಲೋಲ ಇರುತ್ತೆ. ಆಮೇಲೆಲ್ಲ ಸರಿಹೋಗುತ್ತೆ ಬಿಡು.’

‘ನೀವು ನನ್ನ ತಪ್ಪು ತಿಳ್ಕೊಂಡಿದ್ದೀರಿ’ ಎಂದ ಕುಮಾರ್.

‘ಎಲ್ಲಾದ್ರು ಉಂಟೇನಯ್ಯ? ಎಷ್ಟು ವರ್ಷದಿಂದ ನಾನು ನೋಡ್ತಾ ಇದ್ದೀನಿ ನಿನ್ನನ್ನ! ಒಳ್ಳೆ ಅಪರಂಜಿ ಥರಾ ಹುಡ್ಗುನ್ನ ತಪ್ಪು ತಿಳ್ಕೊಳ್ಳೋದುಂಟಾ? ಸ್ವಲ್ಪ ದಿನ ಅಲ್ಲೋಲ ಕಲ್ಲೋಲ ಇರುತ್ತೆ ತಡ್ಕೊಬೇಕಪ್ಪ’ ಎಂದು ಮತ್ತೆ ಅಲ್ಲಿಗೆ ಬಂದರು ಹೆಡ್ ಮಾಸ್ಟರು.

ಇನ್ನು ಎಷ್ಟು ಹೇಳಿದರೂ ಇಷ್ಟೇ ಎನ್ನಿಸಿ ಕುಮಾರ್ ಮೇಲೆದ್ದ. ಹೆಡ್ ಮಾಸ್ಟರ್‌ ಒತ್ತಾಯ ಮಾಡಿ ಕೂಡಿಸಿ ಕಾಫಿಗೆ ಹೇಳಿಕಳಿಸಿದರು. ಮಂಜುಳಾ ತಾನು ಊರಿಗೆ ಹೊರಟಿರುವುದರಿಂದ ಬೇಗ ಹೋಗುವುದಾಗಿ ತಿಳಿಸಿ ಅನುಮತಿ ಪಡೆದು ಹೊರಟಳು. ಆಕೆ ಹೋದ ಮೇಲೆ ಕುಮಾರನಿಗೆ ಕೂತುಕೊಳ್ಳಲು ಆಗಲಿಲ್ಲ. ಆದರೆ ಎದ್ದು ಹೋಗುವಂತೆಯೂ ಇರಲಿಲ್ಲ. ಚಡಪಡಿಕೆ ಪ್ರಾರಂಭವಾಯಿತು. ಇದನ್ನು ಗಮನಿಸಿದ ಹೆಡ್ ಮಾಸ್ಟರ್ ತಮಾಷೆ ಮಾಡಬೇಕೆಂದುಕೊಂಡರಾದರೂ, ಕುಮಾರ್ ಅದರಲ್ಲೇ ಕೊರಗತೊಡಗಿದರೆ ಕಷ್ಟವೆಂಬ ಭಾವನೆ ಮೂಡಿ ಸುಮ್ಮನಾದರು.

ಕಾಫಿ ಬಂತು. ಕುಡಿಯುತ್ತ ಕೂತಾಗ ಪಟೇಲರ ಮನೆಯ ಆಳು ಕುಮಾರನನ್ನು ಹುಡುಕಿಕೊಂಡುಬಂದ. ‘ಸಿದ್ದಣ್ಣ ಪಟೇಲರು ಮನೇತಾವ ಕುಂತವ್ರೆ. ಹಂಗೇ ನಿನ್ನೂ ಹೆಡ್ ಮಾಸ್ತನ್ನೂ ಕರ್‍ಕಂಡ್ ಬಾ ಅಂದ್ರು’ ಎಂದು ಹೇಳಿದ. ಇಬ್ಬರಿಗೂ ಕುತೂಹಲ ‘ಯಾಕೆ? ಏನ್ ವಿಷ್ಯ?’ ಎಂದು ಕೇಳಿದರು. ‘ಯಾರೋ ಪಟ್ಟಣದಿಂದ ಆಪೀಸರ್‍ಗಳ್ ಬಂದವ್ರೆ. ಅದುಕ್ಕೆ’ ಎಂದು ಆಳು ಹೇಳಿದಾಗ ಏನೋ ಮುಖ್ಯ ವಿಷಯ ಇರಬೇಕೆಂದು ಭಾವಿಸಿ ಇಬ್ಬರೂ ಕೂಡಲೇ ಹೊರಟರು.

ಇವರಿಬ್ಬರೂ ಪಟೇಲರ ಮನೆಯ ಬಳಿ ಬರುವ ವೇಳೆಗೆ ಸಾಕಷ್ಟು ಚರ್ಚೆಯಾದಂತೆ ಭಾಸವಾಯಿತು. ಬಂದವರೇ ಪಟೇಲರ ಮುಖ ನೋಡಿದರು. ಪಟೇಲರು ವಿಷಯ ತಿಳಿಸಿದರು.

‘ಈಗ ಆಪೀಸರ್‍ಗಳು ಪಟ್ಟಣದಾಗಿಂದ ಬಂದವ್ರೆ. ಇವರೇ ಅವ್ರೆಲ್ಲ ನೋಡ್ರಿ. ವಿಷ್ಯ ಏನಪ್ಪ ಅಂದ್ರೆ ನಮ್ಮೂರಾಗೆ ಸರ್‍ಯಾದ್ ಜಾಗ ಕೊಟ್ರೆ ಒಂದು ಆಸ್ಪತ್ರೆ ತಗೀತಾರೆ. ಯಾವಾನ ಗೋಮಾಳದ ಜಮೀನ್ ಕೊಡಾನ ಅಂದ್ರೆ ಯಾವ್ದೂ ಉಳ್ಕಂಡಿಲ್ಲ. ಯಾರಾನ ಒಸಿ ಜಮೀನ್ನ ಸುಮ್ಕೆ ಬಿಟ್ ಕೊಡ್ತಾರ ಅಂದ್ರೆ ನಮ್ಮ ಮೈತುಂಬ ಕಷ್ಟಗಳು ಕಚ್ಚಂಡವೆ. ಇನ್ನುಳ್ದಿರಾದು ಇಸ್ಕೂಲ್ ಅಂಬ್ತ ಬಿಟ್ ಕೊಟ್ಟಿದ್ದೀವಲ್ಲ ಜಮೀನು, ಅದ್ರಾಗೇ ಏನಾರ ಒಸಿ ಬಿಡಾಕುಂಟಾ ಅಂಬ್ತ? ಇಲ್ದಿದ್ರೆ ಆ ಸ್ವಪ್ನ ಮಂಟಪಾನೇ ಕೆಡವಿ ಅಲ್ಲೇ ಆಸ್ಪತ್ರೆ ಕಟ್ಟಿದ್ರೆ ಹೆಂಗೆ ಅಂಬ್ತ?’

ತಕ್ಷಣ ಶಿವಕುಮಾರ್ ಕೆರಳಿದ.

‘ಎಲ್ಲಾದ್ರು ಉಂಟಾ ಪಟೇಲ್ರೆ? ಸ್ವಪ್ನ ಮಂಟಪಾನ ಕೆಡವೋದು ಅಂದ್ರೇನು? ಅದು ಒಂದು ಐತಿಹಾಸಿಕ ಸ್ಮಾರಕ, ಅದನ್ನ ಕೆಡವೋದು ಸಾಧ್ಯವೇ ಇಲ್ಲ’ ಎಂದು ದೃಢವಾಗಿ ಹೇಳಿದ.

ಆಗ ಅಲ್ಲೇ ಇದ್ದ ಒಬ್ಬ ಅಧಿಕಾರಿ ಮಾತನಾಡಿದ.

‘ನೋಡಿ ಇವರೇ, ಅದು ಐತಿಹಾಸಿಕ ಸ್ಥಳ ಅನ್ನೋದಕ್ಕೆ ಯಾವುದೇ ಆಧಾರವಿಲ್ಲ. ನಿಜ ಹೇಳ್ಬೇಕು ಅಂದ್ರೆ ನಿಮ್ಮ ಊರಿನ ಇತಿಹಾಸದಲ್ಲಿ ಅದಕ್ಕೆ ಜಾಗವೇ ಇಲ್ಲ. ಚಂಡೇ ರಾಯನ ಕೋಟೆ ಬಗ್ಗೆ ಮಾತ್ರ ಉಲ್ಲೇಖವಿದೆ. ಇದು ಯಾವುದೊ ಮಂಟಪವಾಗಿದ್ದು ಆಮೇಲೆ ಐತಿಹ್ಯಗಳು ಹುಟ್ಟಿರಬಹುದು.’

‘ಅದು ಹೇಗೆ ಹೇಳ್ತೀರಿ? ನಿಮ್ಮ ಮಾತಿಗೆ ಏನು ಆಧಾರ?’ – ಕುಮಾರ್ ಕೆರಳಿ ಕೇಳಿದ.

‘ನಾನ್ ಹೇಳೋದೇನು ಇಲ್ಲ ಇವರೇ. ಸರ್ಕಾರಿ ದಾಖಲೆಗಳು ಹೇಳುತ್ತೆ, ಗೆಜೆಟಿಯರ್ ಹೇಳುತ್ತೆ. ಚರಿತ್ರೆಯ ಪುಸ್ತಕಗಳು ಹೇಳುತ್ತೆ. ಹಾಗಂತ ಸ್ವಪ್ನ ಮಂಟಪಾನ ಕೆಡವಿ ಹಾಕು ಅಂತ ನಾನು ವಾದ ಮಾಡ್ತಾ ಇಲ್ಲ. ನಿಮ್ಮ ಊರಿನವರೇ ಅದನ್ನ ಮುಂದಿಟ್ರು’ ಎಂದು ಅಧಿಕಾರಿ ಹೇಳಿದಾಗ ಪಟೇಲರು ಮಧ್ಯೆ ಪ್ರವೇಶಿಸಿ ಮಾತನಾಡಿದರು.

‘ಹೂಂಕಣಯ್ಯ, ನಾವೇ ಹೇಳಿದ್ವಿ. ಅದೇನ್ ಸ್ವಪ್ನ ಮಂಟಪಾನೋ ಏನ್ಕತೆಯೊ! ಅದು ಬ್ಯಾರೆ ಬರೀ ಕೇಡು ತಂದ್ ಕೊಡೊ ಮಂಟಪ. ಜನರು ಮಂಟಪದ ಹತ್ರ ಹೋಗಾಕೆ ಹೆದ್ರುತಾರೆ. ಅದು ಯಾಕಪ ಇದೆ ಅಂತ ಒಳಗೇ ಉಗೀತಾರೆ. ವಯಸಿಗ್ ಬಂದ ಹೆಣ್ಮಕ್ಕಳಿಗೆ ಕಾವಲಿರ್‍ತಾರೆ. ಇಷ್ಟೆಲ್ಲ ಇರುವಾಗ ಯಾಕಪ್ಪ ಬೇಕು?’

‘ಒಂದು ನಂಬಿಕೆ ಅಂತ ಇರುತ್ತಲ್ಲ?’ – ಎಂದು ಪ್ರಶ್ನಿಸಿದ ಕುಮಾರ್.

‘ನಮ್ಮಂಥ ಹಳ್ಳಿಮುಕ್ರಿಗೆ ನಂಬಿಕೆ ಇಲ್ಲ. ಇನ್ನು ನಿಂದೆಂಥ ನಂಬಿಕೆ? ಅದು ಬ್ಯಾರೆ ಕೇಡುಗಾಲದ ಕಲ್ಲಿನ್ ಮಂಟಪ’ – ಎಂದು ಪಟೇಲ ಮತ್ತೆ ಹೇಳಿದ.

ಆಗ ಅಧಿಕಾರಿಯೇ ಸಮಾಧಾನ ಮಾಡಿದ.

‘ಒಂದೊಂದು ಸ್ಥಳದ ಬಗ್ಗೆ ಒಬ್ಬೊಬ್ಬರಿಗೆ ಏನೇನೋ ಸಂಬಂಧ ಇರುತ್ತೆ. ಇರ್‍ಲಿ ಬಿಟ್ಬಿಡಿ ಅದುನ್ನ.’

‘ಆಗ್ಲೊ ಈಗ್ಲೋ ಅದೇ ಬಿದ್ದೋಗ್ತೈತೆ. ಈಗಾಗ್ಲೆ ಹಾಳ್ ಸುರೀತಾ ಐತೇ? ನಾವಂಗೇ ಬಿಟ್ರೇನ್ ಉಳ್ಕಂಡ್ ಬರ್‍ತೈತಾ?’ ಎಂದ ಪಟೇಲ.

ಕುಮಾರ್ ಸುಮ್ಮನಿರಲಿಲ್ಲ. ‘ಸ್ವಪ್ನ ಮಂಟಪದ ಸುತ್ತ ನಿಮ್ದೂ ಸೇರ್‍ದಂಗೆ ಯಾರ್‍ಯಾರ್ದೊ ಜಮೀನ್ ಇದೆಯಲ್ಲ. ಸ್ವಲ್ಪ ಬಿಟ್ಕೊಡಿ.’ ಎಂದ. ಆಗ ಪಟೇಲ ಸಮಾಧಾನ ಮಾಡತೊಡಗಿದ.

‘ಹೋಗ್ಲಿ ಬಿಡಯ್ಯ, ಆ ಮಂಟಪ ಅಲ್ಲೇ ಇರ್‍ಲಿ, ಇಸ್ಕೂಲಿಗೆ ಕೊಟ್ಟಿರೋ ಜಾಗಾನೇ ಒಸಿ ಬಿಡಿಸ್ಕಂಡ್ರಾಯ್ತು.’

ಆಗ ಹೆಡ್‌ಮಾಸ್ಟರ್‌ ವಿರೋಧಿಸಿದರು.

‘ಎಲ್ಲಾದ್ರೂ ಉಂಟಾ ಸ್ವಾಮಿ. ನಮ್ಮ ಶಾಲೆಗೇ ಸಾಲ್ದೆ ಬರುತ್ತೆ ಆ ಜಾಗ. ಇಷ್ಟಕ್ಕೂ ಅದರ ರಿಜಿಸ್ಟ್ರೇಷನ್ ಆಗಿದೆ. ಪ್ಲಾನ್ ಆಗಿದೆ, ಶಂಕುಸ್ಥಾಪನೆ ಆಗಿದೆ. ಇಷ್ಟೆಲ್ಲ ಆಗಿರ್‌ವಾಗ ಯಾರಾದ್ರು ಬೇರೆ ಜಮೀನ್ ಬಿಟ್ಟುಕೊಡೋದೇ ವಾಸಿ’ ಎಂದರು.

ಒಂದೆರಡು ನಿಮಿಷ ಮೌನ ಆವರಿಸಿತು. ಯಾರೂ ಮಾತನಾಡಲಿಲ್ಲ. ಊರಿನ ಇತರರ ಬಾಯಲ್ಲೂ ಮಾತು ಬರಲಿಲ್ಲ. ಕಡೆಗೆ ಅಧಿಕಾರಿಯೇ ತಮ್ಮ ಅಭಿಪ್ರಾಯ ಹೇಳಿದರು.

‘ವಸ್ತುಸ್ಥಿತಿ ಹೀಗಿರುವಾಗ ಯಾರೇನ್ ಮಾಡೋಕಾಗುತ್ತೆ. ನಾವು ಇದನ್ನೇ ಸರ್ಕಾರಕ್ಕೆ ರಿಪೋರ್ಟ್ ಮಾಡ್ತೀವಿ. ನೀವು ಜಾಗ ಕೊಟ್ಟರೆ ನಾಳೇನೇ ಆಸ್ಪತ್ರೆ ಸ್ಯಾಂಕ್ಷನ್ ಆಗುತ್ತೆ. ಮುಂದಿನ ವಾರವೇ ಯಾವ್ದಾದ್ರೂ ಒಂದು ರೂಮಲ್ಲಿ ಆಸ್ಪತ್ರೆ ಶುರುವಾಗುತ್ತೆ. ಅದಕ್ಕೆ ಮುಂಚೆ ನಿಮ್ಕಡೆಯಿಂದ ನಮಗೆ ಸೌಲಭ್ಯ ಕೊಡೊ ಖಾತರಿ ಬೇಕು, ಅಷ್ಟೆ.’ ಮತ್ತೆ ಯಾರೂ ಮಾತನಾಡಲಿಲ್ಲ. ಎಲ್ಲರ ಕಡೆಗೂ ನೋಡಿ ಮತ್ತೆ ಅಧಿಕಾರಿಯೇ ಮಾತನಾಡಿದರು.

‘ಸರಿ, ಬಿಡಿ. ಸದ್ಯಕ್ಕೆ ಇಲ್ಲಿ ಸೌಲಭ್ಯ ಸಿಗೊಲ್ಲ ಅಂತ ಗೊತ್ತಾಯ್ತು. ಇಲ್ಲಿಗೆ ಹತ್ತು ಕಿಲೋಮೀಟರ್ ದೂರಲ್ಲಿರೊ ಮಲ್ಲಸಂದ್ರದಲ್ಲಿ ಸ್ಥಳ ಪರೀಕ್ಷೆ ಮಾಡ್ತೇವೆ. ನಮಗೆ ಬರಡುಸಂದ್ರ ಆದ್ರೇನು ಮಲ್ಲಸಂದ್ರ ಆದ್ರೇನು. ಏನೊ ಸುತ್ತಮುತ್ತ ಆಸ್ಪತ್ರೆ ಇಲ್ಲ ಅಂತ ಸರ್ಕಾರ ಸೂಚನೆ ಕೊಟ್ಟಿದೆ. ಇಲ್ಲಿ ಅಲ್ದಿದ್ರೆ ಅಲ್ಲಿ ಶುರು ಮಾಡಿದ್ರಾಯ್ತು, ಬರ್‍ತೀವಿ.’

ಊರಿನವರ ಮೌನದ ಮಧ್ಯೆ ಕಾರಿನ ಶಬ್ದ ಸೀಳಿಕೊಂಡು ಹೋಯಿತು. ಎಲ್ಲರೂ ತಮ್ಮಾರಕ್ಕೆ ತಾವು ಎದ್ದು ಹೋದರು. ಕುಮಾರನಿಗಂತೂ ಅಲ್ಲೋಲ ಕಲ್ಲೋಲವಾಗಿತ್ತು. ಕೂಡಲೇ ಮಂಜುಳ ಜೊತೆ ಮಾತನಾಡಬೇಕೆನ್ನಿಸಿತು. ರಭಸವಾಗಿ ಮನೆಯಕಡೆ ಬಂದ. ಮನೆಯ ಬಳಿಗೆ ಬಂದವನೇ ಒಳಹೋದ. ಎಲ್ಲಾಕಡೆ ನೋಡಿದ. ಮಂಜುಳ ಕಾಣಲಿಲ್ಲ. ಈತನ ಓಡಾಟವನ್ನು ಗಮಿನಿಸಿದ ಕರಿಯಮ್ಮ ‘ಏನ್ ಹುಡುಕ್ತಾ ಇದ್ದೀಯಪ್ಪ?’ ಎಂದು ಕೇಳಿದಳು. ‘ಏನೂ ಇಲ್ಲಮ್ಮ’ ಎಂದು ಹೊರಬಂದ. ಅಷ್ಟರಲ್ಲಿ ಲಕ್ಷ್ಮಿ ಬಂದಳು.

‘ಇದೇನು ಇಷ್ಟು ಬೇಗ ಬಂದಿದ್ದೀಯ? ಸ್ಕೂಲ್ ಇರ್‍ಲಿಲ್ವ?’ ಎಂದು ಕೇಳಿದ.

‘ಸ್ಕೂಲ್ ಎತ್ತೋಗ್ತೈತೆ? ಇರಾ ಕಡೇನೇ ಐತೆ.’ – ಲಕ್ಷ್ಮಿ ಚುರುಕಾಗಿ ಉತ್ತರಿಸಿದಳು.

‘ಅದು ನಂಗೂ ಗೊತ್ತಿದೆ. ಬೇಗ ಯಾಕ್ ಬಂದೆ ಅದನ್ನ ಹೇಳು.’

‘ಮಂಜುಳ ಮೇಡಮ್ಮು ಊರಿಗೆ ಹೊರಟಿದ್ರಲ್ಲ, ಅದುಕ್ಕೇ ಮದ್ಲೇ ಕೇಳ್ಕಂಡ್ ಬಂದೆ.’

‘ಮೇಡಂ ಎಲ್ಲಿದಾರೆ?’

‘ಬಾಸ್ನಾಗ್ ಹೋಗ್ತಾ ಅವ್ರೆ.’

ಶಿವಕುಮಾರ್‌ಗೆ ನಿರಾಶೆಯಾಯಿತು. ಸುಮ್ಮನೆ ನಿಂತುಕೊಂಡ. ನಿಂತುಕೊಳ್ಳಲಾಗಲಿಲ್ಲ. ಒಳಹೋದ. ಕೂತ, ತಲೆ ಸಿಡಿಯುತ್ತಿರುವ ಅನುಭವವಾಗಿ ಭದ್ರವಾಗಿ ಹಿಡಿದುಕೊಂಡ ಇದೆಲ್ಲವನ್ನೂ ಗಮನಿಸುತ್ತಿದ್ದ ಲಕ್ಷ್ಮಿ ಆತನ ಬಳಿಗೆ ಬಂದು ‘ಯಾಕಣ್ಣ ಏನಾಗೈತೆ?’ ಎಂದು ಕೇಳಿದಳು.

‘ಇನ್ನೂ ಏನೂ ಆಗಿಲ್ಲ.’ ಎಂದ.

‘ಏನಾರ ಕಾಯ್ಲೆ ಗೀಯ್ಲೆ ಆಗೈತೇನಣ್ಣ? ಕಾಯ್ಲೆ ಬಂದ್ರೆ ಈ ಊರಾಗೆ ಒಂದ್ ಆಸ್ಪತ್ರೆನೂ ಗತಿಯಿಲ್ಲ’ ಎಂದು ಸಹಜವಾಗಿ ಹೇಳಿದಳು ಲಕ್ಷ್ಮಿ.

ಶಿವಕುಮಾರ್ ಅವಳನ್ನು ದಿಟ್ಟಿಸಿದ. ತಳಮಳಿಸಿದ. ಮೇಲೆದ್ದು ಹೊರಟ. ಲಕ್ಷ್ಮಿಗೆ ಏನೂ ಅರ್ಥವಾಗದೆ ಸುಮ್ಮನೆ ನೋಡುತ್ತಿದ್ದಳು.

ಶಿವಕುಮಾರ್ ಸೀದಾ ಸ್ವಪ್ನಮಂಟಪದ ಬಳಿಗೆ ಬಂದ. ಅದರ ಆವರಣವನ್ನು ಪ್ರವೇಶಿಸಿದ. ಸಂಕಟವೊ ಸಂತೋಷವೋ ಹೇಳಲಾಗದ ಅನುಭವ, ಕಂಡುಕೊಳ್ಳಲಾಗದೆ ಖಿನ್ನತೆ.

ಅಲ್ಲಿಂದ ಬೆಟ್ಟದ ಕಡೆಗೆ ಹೋದ. ಮೆಟ್ಟಲುಗಳನ್ನು ಹತ್ತುತ್ತ ತಲೆಭಾರ ಜಾಸ್ತಿಯಾಗುತ್ತಾ ಬಂತು. ಬೆಟ್ಟದ ಮೇಲೆ ಒಂದು ಕಡೆ ಕೂತ. ಎಲ್ಲವೂ ಅಲ್ಲೋಲಕಲ್ಲೋಲವಾದಂಥ ಮನಸ್ಥಿತಿಯನ್ನು ಸ್ಥಿಮಿತಕ್ಕೆ ತಂದುಕೊಳ್ಳಲು ಪ್ರಯತ್ನಿಸಿದ. ಕೋಟೆ ಕೊತ್ತಲಗಳು ಅವನ ಮನಸ್ಸನ್ನು ಆವರಿಸಿಕೊಳ್ಳತೊಡಗಿದವು.

‘ಶಿವಕುಮಾರ್’ – ಯಾರೋ ಕೂಗಿದಂತಾಯಿತು.

ಅತ್ತಿತ್ತ ನೋಡಿದ.

ಮತ್ತದೇ ಕರೆ.

‘ಶಿವಕುಮಾರ್’

ಶಿವಕುಮಾರ್ ಮೇಲೆದ್ದ, ಮುಂದಡಿಯಿಟ್ಟ, ನಿಂತ, ನೋಡಿದ. ಯಾರೂ ಕಾಣಲಿಲ್ಲ.

‘ಯಾರದು?’ ಎಂದು ಕೇಳಿದ.

‘ನಾನು ಚಂಡೇರಾಯ.’

ಮಾರುತ್ತರ ಬಂತು. ವಿಚಲಿತನಾದ.

‘ಯಾಕೆ ಅನುಮಾನವೇ? ನಾನೇ! ಚಂಡೇರಾಯ!’

ರೋಮಾಂಚನವೂ ಆಯಿತು. ಅಳುಕೂ ಆಯಿತು. ಬರಬರುತ್ತ ಇಡೀ ಕೋಟೆಯೇ ಚಂಡೇರಾಯನ ನಾಮಸ್ಮರಣೆ ಮಾಡಿದ ಅನುಭವವಾಯಿತು. ಅಷ್ಟೇ ಅಲ್ಲ. ಚಂಡೇರಾಯನೇ ಬಂದು
ನಿಂತಂತಾಯಿತು.

‘ನನ್ನ ಕೋಟೇನ ಕೈ ಬಿಡಬೇಡ ಶಿವಕುಮಾರ್.’

‘ಇಲ್ಲ ಅದೆಂದಿಗೂ ಸಾಧ್ಯವಿಲ್ಲ. ನನಗೆ ಈ ಕೋಟೆ ಇಲ್ಲದೆ ಕಲ್ಪನೆ ಸಾಧ್ಯವಿಲ್ಲ. ನಾನು ಇದನ್ನೆಲ್ಲ ಬಿಟ್ಟು ಬದುಕಲಾರೆ.’

‘ಆದರೆ ಆ ಸ್ವಪ್ನಮಂಟಪ ಧ್ವಂಸವಾಗಲಿ.’

ಶಿವಕುಮಾರ್ ಬೆಚ್ಚಿದ, ಕಣ್ಣಿಟ್ಟು ನೋಡಿದ.

ಚಂಡೇರಾಯ ಕಾಣಲಿಲ್ಲ. ಎಲ್ಲಾ ಕಡೆ ಓಡಾಡಿದ. ಇಲ್ಲ ಕಾಣಲಿಲ್ಲ. ಮತ್ತೆ ಮೊದಲಿನ ಸ್ಥಿತಿಗೆ ಬಂದ. ಮರುಕ್ಷಣದಲ್ಲೇ ಚಂಡೇರಾಯನ ದನಿ ಕೇಳಿಸಿತು.

‘ಶಿವಕುಮಾರ್, ನನ್ನ ಒಂದು ಕೋರಿಕೆ ಈಡೇರುಸ್ತೀಯಾ?’

ಶಿವಕುಮಾರ ತಬ್ಬಿಬ್ಬಾದ.

‘ಹೌದು, ನಾನೇ, ಚಂಡೇರಾಯ ಕೇಳಿದ್ದೀನಿ. ಈಡೇರುಸ್ತೀಯಾ?’

‘ಆಗಲಿ, ಅದೇನ್ ಹೇಳು ಚಂಡೇರಾಯ.’ ಶಿವಕುಮಾರನ ಬಾಯಿಂದ ತಾನೇ ತಾನಾಗಿ ಮಾತು ಬಂತು.

‘ನನ್ನ ಮಗಳು ಮದಾಲಸೆ – ಅದೇ ರಾಜಕುಮಾರಿ ಇದಾಳಲ್ಲ – ಅವಳನ್ನ ಮದುವೆ ಆಗು’ – ಚಂಡೇರಾಯ ಕೇಳಿದ.

‘ಇಲ್ಲದ ರಾಜಕುಮಾರೀನ ಮದುವೆ ಆಗೋದು ಹೇಗೆ? ನನಗೂ ಅವಳನ್ನ ನೋಡೋ ಆಸೆ, ಆದ್ರೆ ಇರಬೇಕಲ್ಲ?’

‘ರಾಜಕುಮಾರಿ ಇಲ್ಲ ಅಂತ ನಿನಗೆ ಯಾರು ಹೇಳಿದ್ರು? ಇದಾಳೆ. ಇಲ್ಲೇ ಸುತ್ತಾಡ್ತಾ ಇದಾಳೆ. ನನ್ನ ಕಾರಣದಿಂದ ಸಾಯದೆ ಬದುಕದೆ ಓಡಾಡ್ತಾ ಇದಾಳೆ.’

‘ರಾಜಕುಮಾರಿಯ ಪ್ರೇತ ಇಲ್ಲೇ ಅಲೀತಾ ಇದೆ ಅಂತ ಪ್ರತೀತಿ ಇದೆ. ಆದ್ರೆ ಆಕೇನ ನೋಡಬಹುದು ಅನ್ನೋ ಕಲ್ಪನೆ ….’

‘ನಿಲ್ಸು. ನೀನು ಬೇಕೆಂದಾಗ ನನ್ನನ್ನ ಕಲ್ಪಿಸ್ಕೊಳ್ಳಬಲ್ಲೆ. ಅದೇ ರೀತಿ ನಮ್ಮ ರಾಜಕುಮಾರಿ. ಈಗ ವಿಷಯಕ್ಕೆ ಬಾ. ನಿನಗೆ ಇಷ್ಟ ಇದ್ರೆ ನಾಳೆ ಮಧ್ಯರಾತ್ರೀಲಿ ರಾಜಕುಮಾರಿಯನ್ನ ಇಲ್ಲೇ ನೋಡಬಹುದು.’

‘ಮಧ್ಯರಾತ್ರೀಲಿ?’ – ಕುಮಾರ್ ಭಯಗೊಂಡು ಕೇಳಿದ.

‘ಹೌದು! ಮಧ್ಯರಾತ್ರೀಲಿ! ಯಾಕೆ ಭಯಾನ?’

‘ಛೇ! ಛೇ! ಹಾಗೇನಿಲ್ಲ. ನನಗೆಂಥ ಭಯ? ಆದ್ರೂ ಮಧ್ಯರಾತ್ರೀಲಿ ನೋಡೋದೂ ಅಂದ್ರೆ?’

‘ಗೊತ್ತಾಯ್ತು ಬಿಡು. ನಿನ್ನ ಧೈರ್ಯ ಏನೂ ಅಂತ ಗೊತ್ತಾಯ್ತು. ಒಂದು ಕೆಲಸ ಮಾಡು, ಮಧ್ಯರಾತ್ರಿಯ ಬದಲು ನಾಳೆ ಮಟ ಮಟ ಮಧ್ಯಾಹ್ನ ಇಲ್ಲಿಗೆ ಬಾ. ರಾಜಕುಮಾರೀನ ನೋಡಬಹುದು. ಮಾತಾಡ ಬಹುದು.’

‘ಆಗಲಿ.’

ಅಲ್ಲಿಗೆ ಮಾತು ನಿಂತಿತು. ಆದರೆ ಮೌನ ಭೀಕರವೆನಿಸಿತು. ತಾನು ಇಲ್ಲಿವರೆಗೆ ನಿಜಕ್ಕೂ ಚಂಡೇರಾಯನ ಜೊತೆ ಮಾತಾಡಿದೆನೇ ಅಂತ ಅವನಿಗೇ ಅನುಮಾನವೆನ್ನಿಸಿತು. ಹೀಗಾಗಿ ಚಡಪಡಿಸಿದ.

‘ಅನುಮಾನ ಬೇಡ. ನಾನು ಚಂಡೇರಾಯನೇ ಮಾತಾಡಿದ್ದು.’

ಮತ್ತೆ ದನಿ ಕೇಳಿಸಿ ಬೆಚ್ಚಿದ. ಮೇಲೆದ್ದ. ದನಿ ಬಂದೆಡೆಗೆ ಓಡಿದ, ನೋಡಿದ. ಯಾರೂ ಕಾಣಲಿಲ್ಲ. ಮತ್ತೊಂದೆಡೆಗೆ ಓಡಿದ, ನೋಡಿದ, ಅಲ್ಲೂ ಕಾಣಲಿಲ್ಲ. ಮತ್ತೆ ಎರಡು ಮೂರು ಕಡೆ ಹುಡುಕಿದ. ಕಾಣಲಿಲ್ಲ. ಕಡೆಗೆ ಸಾಕಾಗಿ ಊರ ಕಡೆಗೆ ಹೊರಟ.

ಊರಹಾದಿ ತುಳಿಯುತ್ತ ತರಂಗಗಳು ಎದ್ದವು. ಯಾರಾದರೂ ಕೋಟೆಯಲ್ಲಿ ಅವಿತು ಅವಾಂತರ ಮಾಡುತ್ತಿರಬಹುದೆ ಎನ್ನಿಸಿತು. ಈ ಬಗ್ಗೆ ಮಾತನಾಡಬೇಕೆಂದು ಹೆಡ್‌ಮಾಸ್ಟರ ಮನೆಗೆ ಹೋದ. ಹೆಡ್‌ಮಾಸ್ಟರು ಆಸ್ಪತ್ರೆಯ ವಿಷಯ ಎತ್ತಿದರು. ‘ಈ ಊರಿಗೆ ಆಸ್ಪತ್ರೆ ಬರೋದು ಒಳ್ಳೇದು. ಆದ್ರೆ ಜಾಗದ್ದೇ ಸಮಸ್ಯೆ, ಅಲ್ಲ, ಆ ಸ್ವಪ್ನ ಮಂಟಪ ಅಷ್ಟೊಂದು ಮಹತ್ವದ್ದಾ?’ ಎಂದರು.

’ಏನ್ ಸಾರ್ ನೀವೂ ಹೀಗಂತೀರಾ?’ ಕುಮಾರ್ ಕೇಳಿದ.

‘ಅಲ್ಲಪ್ಪ, ಹೇಳಿ ಕೇಳಿ ಅದಕ್ಕೆ ಕೆಟ್ಟ ಹೆಸರಿದೆ. ಅಲ್ವಾ?’ ಶಿವಕುಮಾರನಿಗೆ ತಕ್ಷಣ ಕೋಟೆಯಲ್ಲಿ ಕೇಳಿಸಿದ ಚಂಡೇರಾಯನ ಮಾತು ನೆನಪಿಗೆ ಬಂತು – ‘ಸ್ವಪ್ನ ಮಂಟಪ ಧ್ವಂಸವಾಗಲಿ?’

ಒಂದು ಕ್ಷಣ ಮೌನ ವಹಿಸಿದ, ತಳಮಳಿಸಿದ. ಕಡೆಗೆ ಹೆಡ್‌ಮಾಸ್ಟರೇ ಸಾಂತ್ವನ ಮಾಡಿದರು.

‘ಈಗ ಆಸ್ಪತ್ರೆ ವಿಷಯ ಕೈಬಿಟ್ಟಾಯ್ತಲ್ಲ ಬಿಡು. ಯಾಕ್ ಚಿಂತೆ ಮಾಡ್ತೀಯ?’

‘ಅಲ್ಲ ಸಾರ್, ಅಲ್ಲೇ ಯಾರಾದ್ರು ಜಮೀನಿನಲ್ಲಿ ಒಂದಷ್ಟು ಜಾಗ ಬಿಟ್ಟುಕೊಟ್ರೆ ಆಗುತ್ತೆ ಅಲ್ವ? ಅದಕ್ಕೆ ಮಾತ್ರ ಯಾರೂ ತಯಾರಿಲ್ಲ. ಎಷ್ಟು ಸ್ವಾರ್ಥಿಗಳು ನೋಡಿ ಸಾರ್’

‘ಸ್ವಾರ್ಥ ಅನ್ನೋದು ಮೌಲ್ಯ ಆಗ್ತಾ ಇದೆ ಕುಮಾರ್. ನಮ್ಮಂಥೋರ್ ಏನ್ ಮಾಡೋಕ್ ಸಾಧ್ಯ ಹೇಳು. ನಾವು ಒಂದಲ್ಲ ಒಂದು ಕಾರಣಕ್ಕೆ ನಮನಮಗೆ ಇಷ್ಟವಾದ ಜಾಗ ಬಿಟ್ಟು ಕೊಡ್ಲಿಲ್ಲವಲ್ಲ. ಏನೋ ಎಲ್ಲ ವಿಚಿತ್ರ ಅನ್ಸುತ್ತೆ.’

‘ಒಂದು ವಿಚಿತ್ರದ ಬಗ್ಗೆ ಕೇಳ್ಬೇಕು ಅಂಡ್ಕೊಂಡ್ ಬಂದೆ ಸಾರ್’ – ಕುಮಾರ್‌ ಪೀಠಿಕೆ ಹಾಕಿದ.

‘ಏನು ವಿಚಿತ್ರ?’ – ಹೆಡ್‌ಮಾಸ್ಟರು ಕೇಳಿದರು.

‘ಹಿಂದಿನ ಆತ್ಮಗಳ ಜೊತೆ ನಾವು ಮಾತನಾಡಬಹುದಾ?’

‘ಮಾತಾಡಬಹುದು ಅಂತ ಕೆಲವರು ಹೇಳ್ತಾರೆ. ಅದೆಲ್ಲ ಅವರವರ ನಂಬಿಕೆ ಪ್ರಶ್ನೆ.’

‘ನಂಬಿಕೆ ಪ್ರಶ್ನೆನೇ ಇರಲಿ, ಆತ್ಮಗಳ ಜೊತೆ ಮಾತಾಡೋಕೆ ನಿಜವಾಗೂ ಸಾಧ್ಯ ಇದೆ ಅಲ್ವ ಸಾರ್?’

‘ಯಾಕ್ ಹೀಗೆ ಕೇಳ್ತಾ ಇದ್ದೀಯ? ಏನಾಯ್ತು? ಚಂಡೇರಾಯ ಮೈಮೇಲ್ ಬಂದಿದಾನ ಹೇಗೆ?’ -ಹೆಡ್‌ಮಾಸ್ಟರು ಲಘುವಾಗಿ ಛೇಡಿಸಿದರು.

‘ಛೇ! ಛೇ! ಹಾಗಲ್ಲ ಸಾರ್. ಹೀಗೇ ಏನೋ ಯೋಚುಸ್ತಾ ಇದ್ದೆ. ಕೇಳಿದೆ. ಅಷ್ಟೆ, ನಾನಿನ್ ಬರ್‍ತೀನಿ’ ಎಂದು ಹೊರಟ.

ರಾತ್ರಿಯೆಲ್ಲ ಅವನಿಗೆ ಅದೇ ಚಿಂತೆ. ನಾಳೆಯ ನಿರೀಕ್ಷೆ. ಈ ಸಾರಿ ಪರೀಕ್ಷೆ ಆಗಿ ಬಿಡಲಿ ಎಂಬ ತೀರ್ಮಾನದ ಜೊತೆಗೆ ಹೇಳಿಕೊಳ್ಳಲಾಗದ ತಳಮಳ ಆತಂಕ. ಆದರೂ ಧೈರ್ಯ ತೆಗೆದುಕೊಳ್ಳತೊಡಗಿದ. ಮಧ್ಯರಾತ್ರಿಯ ನಂತರ ಮಲಗಿದ.

ಬೆಳಗ್ಗೆ ಎದ್ದಾಗ ಶಿವಕುಮಾರ ಸಂಭ್ರಮದಲ್ಲಿದ್ದ. ತಿಂಡಿ ತಿಂದ ತನ್ನ ಸೂಟ್ ಕೇಸ್ ತೆಗೆದು ಬಟ್ಟೆಗಳನ್ನು ಹರಡಿಕೊಂಡ. ಮೇಲೆ ಯಾವುದನ್ನು ಹಾಕಿಕೊಳ್ಳಲಿ ಎಂದು ಯೋಚಿಸಿದ. ಬಣ್ಣ ಬಣ್ಣದ ಷರಟು ಮತ್ತು ಒಂದು ಪ್ಯಾಂಟನ್ನು ಆರಿಸಿ ಇಸ್ತ್ರಿ ಮಾಡತೊಡಗಿದ.

ಎಲ್ಲವನ್ನೂ ಕುತೂಹಲದಿಂದ ನೋಡುತ್ತಿದ್ದ ಲಕ್ಷ್ಮಿ ‘ಯಾವದಾದ್ರು ಊರಿಗೆ ಹೊರಟಿದ್ದೀಯೇನಣ್ಣ?’ ಕೇಳಿದಳು.

‘ಇಲ್ಲ. ಯಾವ ಊರ್‍ಗೂ ಹೋಗ್ತಿಲ್ಲ.’

‘ಮತ್ತೆ ಪ್ಯಾಂಟ್ ಇಸ್ತ್ರಿ ಮಾಡ್ತಿದ್ದೀಯ?’ – ಮತ್ತೆ ಕೇಳಿದಳು.

‘ಯಾಕೆ? ಈ ಊರ್‍ನಲ್ಲಿ ನಾನು ಪ್ಯಾಂಟ್ ಹಾಕ್ಕೋಬಾರ್‍ದ?’ – ಕುಮಾರ್ ಪ್ರಶ್ನಿಸಿದ.

‘ಹಾಗಲ್ಲಣ್ಣ, ನೀನು ಊರ್‍ನಾಗೆ ಬರೀ ಲುಂಗಿ ಹಾಕ್ಕಂತೀಯ ಅಲ್ವ? ಅದುಕ್ಕೆ ಕೇಳ್ದೆ.’

‘ನಾನ್ ಪ್ಯಾಂಟ್ ಹಾಕ್ಕೊಂಡ್ರೆ ನಿನಗೇನ್ ಕಷ್ಟ?’

‘ನಂಗೇನು ಕಷ್ಟ ಇಲ್ಲ. ನಿನಗೇ ಕಷ್ಟ.’

’ಯಾಕೆ?’

‘ನೀನು ಪ್ಯಾಂಟ್ ಹಾಕ್ಕಂಡ್ರೆ ಊರ್‍ನಾರೆಲ್ಲ ಏನಂದ್ಕಂತಾರೆ ಗೊತ್ತಾ? ಯಾರೊ ಹೆಣ್ ತೋರ್‍ಸಾಕ್ ಬಾರ್‍ತಾ ಅವ್ರೆ ಅಂಬ್ತ ತಿಳ್ಕಂತಾರೆ.’

‘ಏನು ಹೆಣ್ಣು ಅಂದ್ಯಾ?’

‘ಮತ್ತಿನ್ನೇನಂಬ್ಲಿ? ಗಂಡು ಅಂಬ್ತ ಹೇಳಾಕಾಗ್‌ತೈತ?’ – ಎಂದು ಲಕ್ಷ್ಮಿ ಹೊರಹೋದಳು.

ಕುಮಾರ್ ಆಕೆಯನ್ನು ಸಿಡುಕಿನಿಂದ ನೋಡಿ ಇಸ್ತ್ರಿ ಮಾಡ ತೊಡಗಿದ. ಆನಂತರ ಸರಿಯಾಗಿ ಜೋಡಿಸಿಟ್ಟ.

ಮಧ್ಯಾಹ್ನ ಸಮೀಪಿಸುವುದನ್ನೇ ಕಾಯುತ್ತಿದ್ದ ಕುಮಾರ್ ಬಚ್ಚಲಿಗೆ ಹೋಗಿ ಸೋಪಿನಲ್ಲಿ ಮುಖ ತೊಳೆದುಕೊಂಡು ಚನ್ನಾಗಿ ಒರೆಸಿಕೊಂಡು ಕನ್ನಡಿಯಲ್ಲಿ ಮುಖ ನೋಡಿಕೊಂಡ. ಕೆನ್ನೆ ಮೇಲೆ ಸ್ವಲ್ಪ ಕೂದಲು ಚಿಗುರಿರುವುದು ಕಾಣಿಸಿತು. ಸರಿಕಾಣದೆ ಶೇವಿಂಗ್ ಸೆಟ್ ತೆಗೆದುಕೊಂಡ. ಶೇವ್ ಮಾಡಿಕೊಂಡು ಮತ್ತೆ ಮುಖ ತೊಳೆದು ಒರೆಸಿಕೊಂಡು ಕನ್ನಡಿ ಮುಂದೆ ನಿಂತ.

‘ಅಮ್ಮ, ಆ ಮೇಡಂ ಸ್ನೋ ಪೌಡರ್ ಎಲ್ಲಾ ತಂದಿದ್ರಲ್ಲ. ತಗಂಡ್ ಹೋಗಿದಾರ?’ ಎಂದು ಕೇಳಿದ.

‘ಅವ್ರ ಪೋಡ್ರು ಗೀಡ್ರು ವಿಷ್ಯ ನಂಗೇನಪ್ಪ ಗೊತ್ತು’ ಎಂದಳು ಕರಿಯಮ್ಮ. ಕುಮಾರ್ ಬಿಡಲಿಲ್ಲ. ಎಲ್ಲಾ ಕಡೆ ಹುಡುಕಿದ. ಲಕ್ಷ್ಮಿಗೆಂದು ಸ್ನೋ ಮತ್ತು ಪೌಡರ್ ಡಬ್ಬಿಯನ್ನು ಮೇಡಂ ಬಿಟ್ಟುಹೋಗಿದ್ದರಿಂದ ಅನುಕೂಲವಾಯಿತು. ಬೇಗ ಬೇಗ ಮುಖಕ್ಕೆ ಸ್ನೋ ಹಚ್ಚಿದ; ಪೌಡರ್ ಬಳಿದ. ಮತ್ತೊಮ್ಮೆ ಚನ್ನಾಗಿ ನೋಡಿಕೊಂಡ. ಧಿರಿಸು ಧರಿಸಿ ಹೊರಬಿದ್ದ.

ಕೋಟೆಯ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ಕುಮಾರನಿಗೆ ಹೇಳಿ ಕೊಳ್ಳಲಾಗದ ಉದ್ವಿಗ್ನತೆ ತಲೆದೋರಿತು; ಎದೆಬಡಿತ ಪ್ರಾರಂಭ ವಾಯಿತು. ತಡೆದುಕೊಳ್ಳಲು ಪ್ರಯತ್ನಿಸಿದ.

ಕೋಟೆಯ ಮಧ್ಯಭಾಗಕ್ಕೆ ಬಂದು ನಿಂತ. ಅತ್ತಿತ್ತ ನೋಡಿದ.

ಎಲ್ಲೂ ಯಾರೂ ಕಾಣಲಿಲ್ಲ. ಸುಮ್ಮನಿರಲಾಗಲಿಲ್ಲ. ಅಲ್ಲೇ ಸಮೀಪದಲ್ಲಿ ಸುತ್ತು ಹಾಕಿದೆ. ಎಲ್ಲಾ ಕಡೆ ಹುಡುಕಲು ಯಾಕೋ ಧೈರ್ಯವಾಗಲಿಲ್ಲ. ಗಡಿಯಾರದಲ್ಲಿ ಗಂಟೆ ನೋಡಿಕೊಂಡ. ಒಂದು ಗಂಟೆಯನ್ನು ದಾಟಿ ಮುಳ್ಳು ಹೋಗುತ್ತಿತ್ತು. ಮುಖದಲ್ಲಿ ಬೆವರೊಡೆಯಿತು.

ಮತ್ತೆ ಮೊದಲಿನ ಜಾಗಕ್ಕೆ ಬಂದು ಕೂತ. ತಲೆ ಮೇಲೆ ಕೈ ಇಟ್ಟುಕೊಂಡು ಚಿಂತಿಸಿದ. ಇದ್ದಕ್ಕಿದ್ದಂತೆ ದನಿಯೊಂದು ಕೇಳಿಸಿತು. ಅದು ಹೆಣ್ಣು ದನಿ! ‘ಶಿವಕುಮಾರ್‌!’

ಈತ ಬೆಚ್ಚಿದ; ಕೂಡಲೇ ಎದ್ದು ನಿಂತ.

‘ನಾನು, ರಾಜಕುಮಾರಿ ಮಾತಾಡ್ತಾ ಇದ್ದೀನಿ.’

ಶಿವಕುಮಾರ್ ಮುಂದೆ ಬಂದ.

‘ಚಂಡೇರಾಯರು ಇಲ್ಲೇ ನಿನ್ನನ್ನ ಭೇಟಿಯಾಗೋದಕ್ಕೆ ಹೇಳಿದ್ರೂ ನಾನು ಮಾತ್ರ ನಿಮ್ಮನ್ನ ಭೇಟಿ ಮಾಡೋದು ಸ್ವಪ್ನ ಮಂಟಪದಲ್ಲೇ ಅಲ್ಲಿಗೇ ಬರ್‍ತೀರಲ್ವ?’ ಶಿವಕುಮಾರ್‌ ಮತ್ತೆ ಮುಂದೆ ಬಂದ.

‘ರಾಜಕುಮಾರಿ ಜೊತೆ ಮಾತಾಡ್ಬೇಕು ಅನ್ನೋ ಆಸೆ ಇರೋದಾದ್ರೆ ಇವತ್ತು ರಾತ್ರಿ ಸ್ವಪ್ನ ಮಂಟಪಕ್ಕೆ ಬನ್ನಿ.’

‘ಮಧ್ಯ ರಾತ್ರೀಲ್ ಬರ್‍ಬೇಕಾ?’ – ಶಿವಕುಮಾರ್‌ ಥಟ್ಟನೆ ಕೇಳಿದ.

‘ನಿಮ್ಮ ಧೈರ್ಯ ನೋಡಿದ್ರೆ ಮಧ್ಯರಾತ್ರೀಲ್ ಬರೋದ್ ಬೇಡ ಅನ್ಸುತ್ತೆ. ಎಲ್ರೂ ಊಟ ಮಾಡಿ ಮಲಗೊ ಹೊತ್ನಲ್ಲಿ ಬಂದ್ರೆ ಸಾಕು. ಇನ್ನು ಹೆಚ್ಚು ಮಾತು ಬೇಡ. ರಾತ್ರಿ, ಸ್ವಪ್ನಮಂಟಪದಲ್ಲಿ ಕಾಯ್ತಿನಿ. ಈಗ ಹೇಗ್ ಬಂದಿದ್ದೀರೋ ಹಾಗೇ ಬರ್‍ಬೇಕು. ಇದೇ ಬಟ್ಟೆ ಹಾಕ್ಕೊಂಡಿರ್‍ಬೇಕು. ಕಾಯ್ತಾ ಇರ್‍ತೀನಿ?’

ಮತ್ತೆ ರಾಜಕುಮಾರಿಯ ದನಿ ಕೇಳಿಸಲಿಲ್ಲ. ಆದರೂ ಶಿವಕುಮಾರ್‌ ದನಿ ಬಂದ ಕಡೆಗೆ ಹೋಗಿ ಹುಡುಕಬೇಕೆಂದುಕೊಂಡು ಮುಂದಡಿ ಇಟ್ಟ.

ಆಮೇಲೆ ಬೇಡವೆಂದು ತೀರ್ಮಾನಿಸಿ ಮನೆಯ ಕಡೆಗೆ ಹೊರಟ.

ರಾತ್ರಿ ಊಟವಾದ ಮೇಲೆ, ಮಧ್ಯಾಹ್ನ ಹಾಕಿದ್ದ ಬಟ್ಟೆಗಳನ್ನು ಮತ್ತೆ ಇಸ್ತ್ರಿ ಮಾಡತೊಡಗಿದ. ಇದನ್ನು ಗಮನಿಸಿದ ಲಕ್ಷ್ಮಿಗೆ ವಿಚಿತ್ರವೆನಿಸಿ ಮತ್ತೆ ಕೇಳಿದಳು.

‘ಹೊತ್ತಾರೆ ಯಾವ್ದಾನ ಊರ್‍ಗೋಗೀಯೇನಣ್ಣ?’

‘ಯಾವ್ ಸುಡಗಾಡಿಗೂ ಹೋಗಲ್ಲ. ಸುಮ್ಮೆ ಬಿದ್ಕೊ ಹೋಗು.’ ಎಂದು ಗದರಿದ.

ಎಲ್ಲರೂ ಮಲಗಿದ ಮೇಲೆ ಮೆಲ್ಲನೆ ಎದ್ದ; ಮುಖ ತೊಳೆದ. ಯಥಾಪ್ರಕಾರ ಸ್ನೋ ಪೌಡರ್ ಹಚ್ಚಿದ. ಬಟ್ಟೆ ಹಾಕಿಕೊಂಡ. ಎಲ್ಲರೂ ಮಲಗಿರುವುದನ್ನು ಖಾತರಿ ಮಾಡಿಕೊಂಡು ಹೊರಟ. ಆದರೆ ಲಕ್ಷ್ಮಿ ಎಚ್ಚರವಾಗಿಯೇ ಇದ್ದು ಈತ ಹೋದದ್ದನ್ನು ನೋಡಿದಳು. ಬೆಳಗ್ಗೆಯಿಂದ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ್ದ ಆಕೆಗೆ ಇದು ಇನ್ನೂ ವಿಚಿತ್ರವೆನ್ನಿಸಿತು. ಎದ್ದು ಹಿಂಬಾಲಿಸಲೇ ಎಂದುಕೊಂಡರೂ ಧೈರ್ಯ ಬರಲಿಲ್ಲ. ಸುಮ್ಮನಾದಳು.

ಕುಮಾರ್ ಊರಿನ ಸಂದಿಗೊಂದಿಗಳನ್ನು ಹಾದು ಬಂದ. ಯಾರಾದರೂ ತನ್ನ ಉಡುಪನ್ನು ನೋಡಿ ಎಲ್ಲಿಗೆ ಎಂದು ಕೇಳಿದರೆ ಏನುತ್ತರ ಕೊಡುವುದೆಂದು ಅಳುಕಿ, ಅವರಿವರ ಕಣ್ಣು ತಪ್ಪಿಸಿ ಬಂದ. ಯಾಕೆಂದರೆ ಕೆಲವರು ಹಜಾರದಲ್ಲಿ ಹರಟೆ ಹೊಡೆಯುತ್ತ ಕೂತಿದ್ದರು. ಕೆಲವರು ಕೆರೆಯ ಕಡೆಯಿಂದ ಬರುತ್ತಿದ್ದರು. ಹೀಗೆ ಎಚ್ಚರವಾಗಿದ್ದವರ ಕಣ್ಣು ತಪ್ಪಿಸುವುದು ಅನಿವಾರ್ಯವಾಗಿತ್ತು.

ಸ್ವಪ್ನ ಮಂಟಪ ಸ್ವಲ್ಪ ದೂರವಿರುವಂತೆ ಶಿವಕುಮಾರ್ ನಿಂತು ನೋಡಿದ.

ಮಂಟಪದ ಮಧ್ಯಭಾಗದಲ್ಲಿ ಯಾರೊ ನಿಂತಿರುವುದು ಅಸ್ಪಷ್ಟವಾಗಿ ಕಾಣಿಸಿತು. ಅಲ್ಲಿಂದಲೇ ಅವನಲ್ಲಿ ಉದ್ವಿಗ್ನತೆ ಹುಟ್ಟಿತು. ಮೆಲ್ಲಗೆ ಹೆಜ್ಜೆಯಿಡುತ್ತ ಮುಂದೆ ಬಂದ. ಹತ್ತಾರು ಹೆಜ್ಜೆಗಳ ನಂತರ ಮತ್ತೆ ದಿಟ್ಟಿಸಿದ.

ಹೌದು! ಮಂಟಪ ಮಧ್ಯದಲ್ಲಿ ರಾಜಕುಮಾರಿ! ಮುಖ ಮಾತ್ರ ಕಾಣುತ್ತಿಲ್ಲ! ಮತ್ತೆ ಮುಂದೆ ಬಂದು ಹತ್ತಾರು ಮೀಟರುಗಳ ದೂರದಲ್ಲಿ ನಿಂತು ನೋಡಿದ.

ಹೌದು! ಆಕೆಯೇ ಸರಿ! ಆದರೆ ಮುಖವೇ ಕಾಣುತ್ತಿಲ್ಲವಲ್ಲ? ಮುಖವನ್ನು ಆ ಕಡೆ ಮಾಡಿಕೊಂಡು ನಿಂತಿದ್ದಾಳೆ. ಮೈತುಂಬ ಸರಳ ಆಭರಣ. ತಲೆಯ ಮೇಲೆ ಚಿಕ್ಕದಾದ ಕಿರೀಟ! ಆಕೆ ರಾಜಕುಮಾರಿಯೇ ಹೌದು!

ಶಿವಕುಮಾರನ ಎದೆ ಬಡಿತ ಹೆಚ್ಚಾಯಿತು. ಮುಖದಲ್ಲಿ ಬೆವರೊಡೆಯಿತು. ಕಾಲಲ್ಲಿ ನಡುಕ ಹುಟ್ಟಿತು.

‘ಶಿವಕುಮಾರ್‌! ಯಾಕ್ ನಿಂತ್ಕೊಂಡೆ? ಬಾ ಬೇಗ. ರಾಜಕುಮಾರಿಯ ದನಿ ಕೇಳಿಸಿತು.’

ಶಿವಕುಮಾರ್ ಮೆಲ್ಲನೆ ಮುಂದಡಿಯಿಟ್ಟ, ವಿಚಿತ್ರ ಅನುಭವ! ಆತಂಕ! ಆನಂದ!

ಹತ್ತಿರಕ್ಕೆ ಬಂದ. ಆಕೆಯ ಹಿಂದೆ ನಿಂತ. ನಡುಗುವ ಕೈಗಳನ್ನು ಆಕೆಯ ಭುಜದ ಮೇಲೆ ಇಟ್ಟು ‘ರಾಜಕುಮಾರಿ’ ಎಂದ.

ಆಕೆ ತಿರುಗಿದಳು! ಶಿವಕುಮಾರ್ ಬೆಚ್ಚಿದ! ಕೋಟೆ ಪ್ರದೇಶದಲ್ಲಿ ಗಂಟು ಕಂಕುಳಲ್ಲಿಟ್ಟುಕೊಂಡು ಓಡಾಡುತ್ತಿದ್ದ ಹುಚ್ಚಿ ನಿಂತಿದ್ದಾಳೆ! ಅವಳೇ ರಾಜಕುಮಾರಿಯಾಗಿದ್ದಾಳೆ! ಮತ್ತೆ ನೋಡಿದ. ರಾಜಕುಮಾರಿಯ ಕಿರೀಟ, ಒಡವೆ ಎಲ್ಲವೂ ಇವೆ!

ಶಿವಕುಮಾರನಿಗೆ ಮಾತನಾಡಲಾಗಲಿಲ್ಲ. ಈಕೆಯ ಹುಚ್ಚಿ ರೂಪವನ್ನು ತಪ್ಪಿಸಿಕೊಂಡು ಹಿಂದೆ ಸರಿಯತೊಡಗಿದ.

‘ಬೇಡ, ಹೋಗಬೇಡ, ಈ ರಾಜಕುಮಾರೀನ ಕೈ ಬಿಡಬೇಡ.’

ಆಕೆ ಅಂಗಲಾಚತೊಡಗಿದಳು.

‘ಇಲ್ಲ, ನೀನು ರಾಜಕುಮಾರಿ ಅಲ್ಲ. ಹುಚ್ಚಿ, ನೀನ್ ಹುಚ್ಚಿ!’

ಶಿವಕುಮಾರ್‌ ಬಡಬಡಿಸಿದ.

‘ಹೌದು ನಾನು ಹುಚ್ಚಿ! ರಾಜಕುಮಾರಿ ಹುಚ್ಚಿ ಆಗಬಾರ್‍ದ? ನೋಡು, ನಾನು ಈ ಕ್ಷಣಕ್ಕಾಗಿ ಕಾದೂ ಕಾದೂ ಕನಸು ಕಟ್ತಾ ಕೂತಿದ್ದೆ. ಇವತ್ತು ಕನಸಿಗೆ ಕಣ್ಣು ಬಂದಿದೆ. ಸುಮ್‌ಸುಮ್ಮೆ ಸುಣ್ಣ ಎರಚಿ ಕನಸಿನ ಕಣ್ಣನ್ನ ಕಳೀಬೇಡ.’

ಶಿವಕುಮಾರ್, ಇದಾವುದನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ‘ಇಲ್ಲ, ನೀನು ರಾಜಕುಮಾರಿ ಅಲ್ಲ. ನೀನು ಹುಚ್ಚಿ! ಹುಚ್ಚಿ!’ ಎಂದು ಹೇಳುತ್ತಾ ಹಿಂದಹಿಂದಕ್ಕೆ ಹೋಗಿ ಆನಂತರ ಅಲ್ಲಿಂದ ಓಡಿಬಿಟ್ಟ.

ಈಕೆಗೆ ದುಃಖವುಕ್ಕಿ ಬಂತು. ‘ಹೋಗ್ಬೇಡ. ನಾನು ನಿಜವಾಗ್ಲೂ ರಾಜಕುಮಾರಿ! ನಿಜವಾಗ್ಲೂ ನಿನ್ನ ರಾಜುಕಮಾರಿ!’ ಎಂದು ಕೂಗುತ್ತಾ ಕೂಗುತ್ತಾ ಮೌನವಾದಳು. ಹಾಗೇ ಕುಸಿದು ಬಿದ್ದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಲೆ
Next post ಈ ನಿರಂಕುಶ ಕ್ರೂರ ಕಾಲನನು ಇದಕಿಂತ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

cheap jordans|wholesale air max|wholesale jordans|wholesale jewelry|wholesale jerseys