ಕಾಣದ ಕೈಯೆಂದು ಕಾಣದಕೆ ಹಂಬಲಿಸಿ
ಹುಡುಕುವಿಯೇತಕೆ
ಕಾಣುವ ಕೈ ಕೈಯಲ್ಲವೇ?

ತೊಟ್ಟಿಲು ತೂಗಿದ ಕೈ ಅಟ್ಟುಣಿಸಿದ ಕೈ
ಮೀಯಿಸಿದ ಕೈ ಬಟ್ಟೆಯುಡಿಸಿದ ಕೈ
ತೊಡೆ ಮೇಲೆ ಕೂಡಿಸಿದ ಕೈ ಹಾಲೂಡಿದ ಕೈ

ಒರೆಸಿದ ಕೈ ಬರೆಸಿದ ಕೈ
ಕರೆದ ಕೈ ಚಾಚಿದ ಕೈ
ಅಕ್ಕರೆಯಿಂದ ಎತ್ತಿಕೊಂಡ ಕೈ
ತಡವಿದ ಕೈ

ದಾರಿ ತೋರಿಸಿದ ಕೈ
ದಾಟಿಸಿದ ಕೈ
ಕೈಹಿಡಿದ ಕೈ ಬಿಡದ ಕೈ
ಮೆಚ್ಚುಗೆಯ ಚಪ್ಪಾಳೆ ಬಾರಿಸಿದ ಕೈ

ಕಾಲಿಗೆರಗಿದ ಕೈ
ಆಶೀರ್ವದಿಸಿದ ಕೈ
ಗುರುಪಾದ ತೊಳೆದ ಕೈ
ಪವಿತ್ರ ತೀರ್ಥವ ಮೊಗೆದ ಕೈ

ಕೋಟೆಕೊತ್ತಲಗಳ ಕಟ್ಟಿದ ಕೈ
ಕೋಟೆಕೊತ್ತಲಗಳ ಮುರಿದ ಕೈ
ಕಲ್ಲಮೂರ್ತಿಗಳ ಕಡೆದ ಕೈ
ಕವಿತೆ ರಚಿಸಿದ ಕೈ
ಚಿತ್ರ ಮೂಡಿಸಿದ ಕೈ
ಉತ್ತ ಕೈ ಬಿತ್ತಿದ ಕೈ
ಬೆಳೆದ ಕೈ ನೀಡಿದ ಕೈ

ಎದೆಗಪ್ಪಿಕೊಂಡ ಕೈ
ಮುಟ್ಟಿದ ಕೈ
ತಡೆದ ಕೈ
ಕೈ ಮುಗಿದ ಕೈ
ಸೇವೆಯಲಿ ತಾನೆ ಮುಗಿದ ಕೈ

ಕಾಣದ ಕೈಯೆಂದು ಕಾಣದಕೆ ಹಂಬಲಿಸಿ
ಹುಡುಕುವಿಯೇತಕೆ
ಕಾಣುವ ಕೈ ಕೈಯಲ್ಲವೇ
*****