ಸ್ವಪ್ನ ಮಂಟಪ – ೧೦

ಸ್ವಪ್ನ ಮಂಟಪ – ೧೦

ಕೆಲದಿನಗಳ ಕಾಲ ಮಂಜುಳಾ ಮೌನ ಮುಂದುವರೆಯಿತು. ಶಿವಕುಮಾರ್‌ ಹೆಚ್ಚು ಮಾತನಾಡುವ ಆಸಕ್ತಿ ತೋರಿಸಿದರೂ ಆಕೆ ಅಷ್ಟು ಉತ್ಸಾಹ ತೋರಲಿಲ್ಲ. ಅವಳಲ್ಲಿ ಒಂದು ಬಗೆಯ ಖಿನ್ನತೆ ಆವರಿಸಿತ್ತು. ರಾಜಕುಮಾರಿಯ ಹುಚ್ಚು ಮುಖದ ಹಿಂದಿನ ಮುಖಗಳ ಪರಿಚಯವಾದ ಮೇಲೆ ಮಾತು ಮುಜುಗರದ ಮನೆಯಾಗಿತ್ತು. ಮುಖಗಳು ಯಾವುವು, ಮುಖವಾಡಗಳು ಯಾವುವು ಎಂಬ ಪ್ರಶ್ನೆ ಸೆಟೆದು ನಿಲ್ಲುತ್ತಿತ್ತು. ಶಿವಕುಮಾರನಂಥವರೂ ಪರಿಸ್ಥಿತಿಯ ಪಟ್ಟುಗಳಿಗೆ ಮರುಪಟ್ಟು ಹಾಕಿ ಪ್ರಬುದ್ಧ ಪ್ರತಿಭಟನೆ ತೋರಿಸುವ ಬದಲು, ಉಪಾಯದ ಹಾದಿ ಹಿಡಿದದ್ದು ಸಾಮಾಜಿಕವಾಗಿ ಅಪಾಯಕಾರಿ ನಿಲುವು ಎನಿಸಿತ್ತು. ಹೀಗಾಗಿ ಅವಳಲ್ಲಿ ಮಾತಿನ ಉತ್ಸಾಹ ಕುಗ್ಗಿತ್ತು. ಆದರೆ ಶಿವಕುಮಾರನ ವಿಷಯದಲ್ಲಿ ವಹಿಸಿದ ಮೌನ ಸಾಮಾನ್ಯ ಜನರ ವಿಷಯದಲ್ಲಿ ಮಾತಾಗಿ ಪರಿಣಮಿಸಿದ್ದು ಒಂದು ವಿಶೇಷ. ಪಟೇಲನ ಬೆದರಿಕೆ, ರಾಜಕುಮಾರಿಯ ಬದುಕಿನ ವಿವರಗಳನ್ನು ಅರಗಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಮಂಜುಳ ಗಟ್ಟಿಯಾದಳು. ಬೆದರಿಕೆಗೆ ಬಗ್ಗದೆ, ರಾಜಕುಮಾರಿಯ ಕನಸಿಗೆ ವಿಮುಖವಾಗದೆ ಸತ್ಯಸಂಗತಿಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕೆಂದುಕೊಂಡಳು. ಆದರೆ ತಾನಿನ್ನೂ ಊರಿಗೆ ಹೊಸಬಳು; ಶಿವಕುಮಾರ್ ಸಹಕಾರ ತೀರಾ ಅಗತ್ಯ. ಆತನೊಂದಿಗೆ ಹೆಚ್ಚು ಮಾತನಾಡುವ ಮನಸ್ಸಾಗುತ್ತಿಲ್ಲ. ಇಂಥ ಸ್ಥಿತಿಯಲ್ಲಿ ಸಮಯ ಬಂದಾಗಲೆಲ್ಲ ತಾನೇ ಮಾತನಾಡತೊಡಗಿದಳು. ಕೆಲವರಿಗಾದರೂ ವಿದೇಶಿ ಕಂಪನಿಗಳ ವಹಿವಾಟಿನ ಬಗ್ಗೆ, ಅವರಿಗೆ ರತ್ನಗಂಬಳಿ ಹಾಸುವ ನೀತಿ ರೀತಿಗಳ ಬಗ್ಗೆ ಅರ್ಥಮಾಡಿಸಿದಳು.

ಬೇಸರವಾದಾಗಲೆಲ್ಲ ಬೆಟ್ಟಕ್ಕೆ ಹೋದಳು. ಸ್ವಪ್ನ ಮಂಟಪದ ಬಳಿ ಬಂದಳು. ರಾಜಕುಮಾರಿಯ ಸಂಕಟವನ್ನು ಮೌನದಲ್ಲೇ ಅನುಭವಿಸಿದಳು.

ಮಂಜುಳ ತನ್ನ ಬಗ್ಗೆ ಆಸ್ಥೆ ವಹಿಸದೆ ಇರುವುದು ಶಿವಕುಮಾರನ ಅನುಭವಕ್ಕೆ ಬರಲು ತಡವಾಗಲಿಲ್ಲ. ಇದು ಯಾಕೆಂದು ಅವನಿಗೆ ಅರ್ಥವಾಗಲಿಲ್ಲ. ಸ್ವಪ್ನ ಮಂಟಪವನ್ನು ಉಳಿಸಿ ವಿದೇಶಿ ಬಹುರಾಷ್ಟ್ರೀಯ ಕಂಪನಿಗಳನ್ನು ತೊಲಗಿಸುವ ಬಗ್ಗೆ ಆಸಕ್ತಿ ವಹಿಸಿ ಒಂದೆರಡು ಸಾರಿ ಮಾತನಾಡಲು ಪ್ರಯತ್ನಿಸಿದಾಗ, ಮಂಜುಳ ‘ಈ ವಿಷಯಾನ ನನಗೆ ಹೇಳೋ ಬದಲು ಜನಕ್ಕೆ ಹೇಳಿ’ ಎಂದು ಚುಟುಕಾಗಿ ಉತ್ತರಿಸಿದಳು. ಜೊತೆಗೆ ಇದನ್ನು ಕೇವಲ ಬಾವುಕವಾಗಿ ತಗಂಡು ತತ್ವಕ್ಕೆ ತಿಲಾಂಜಲಿ ಕೊಡಬೇಡಿ’ ಎಂದು ಎಚ್ಚರಿಸಿದಳು. `ಅಂದ್ರೆ? ನಿಮ್ಮ ಮಾತಿನ ಅರ್ಥ ಏನು?’ ಎಂದು ಕೇಳಿದ. ನಮ್ಮ ಚರಿತ್ರೆ ಪುರಾತನ ಅಂತ ಪುರಾಣ ಹೇಳೊ ಬದ್ಲು ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಗಟ್ಟಿ ನೆಲೇಲಿ ನಿಮ್ಮ ನಿಲುವು ರೂಪಿಸ್ಕೊಳ್ಳಿ’ ಎಂದು ವಿವರಿಸಿದಳು. `ಅದಕ್ಕಾಗಿಯೇ ನಿಮ್ಮ ಹತ್ರ ಬಂದಿದ್ದೀನಿ’ ಎಂದ. `ನಾನು ಹೆಣ್ಣು ಅಂತ ಬಂದಿಲ್ಲ ತಾನೆ?’ ಎಂದು ಚುಚ್ಚಿದಳು. ಅವನಿಗೆ ಅವಮಾನವಾದಂತಾಯಿತು. `ಜಗತ್ತಿನಲ್ಲಿ ನೀವೊಬ್ರೇ ಸಾಚ ಅಂತ ತಿಳ್ಕೊಬೇಡಿ’ ಎಂದು ತಾನೂ ಚುಚ್ಚು ಮಾತಾಡಿದ. `ಅಂಥ ಭ್ರಮೆ ಏನಿದ್ದರೂ ನಿಮ್ಮಂಥೋರೆ’ ಎಂದಳು. ಶಿವಕುಮಾರ್ ಸಿಟ್ಟಿನಿಂದ ಎದ್ದು ಹೋಗಿದ್ದ.

ಇಷ್ಟೆಲ್ಲ ಜರುಗಿದ ಮೇಲೆ ಆತನ ಮನಸ್ಸು ಸಿಟ್ಟಿನಿಂದ ಸಂಕಟಕ್ಕೆ ಸುಳಿಯತೊಡಗಿತು. ಸುಳಿಯಲ್ಲಿ ಸಿಕ್ಕಿದ ಮನಸ್ಸು ಮಲಿನತೆಯನ್ನು ಕಳೆದುಕೊಳ್ಳುತ್ತ ಕಣ್ಣಿನ ಹೊಳಪು ಹೆಚ್ಚಿಸಿಕೊಳ್ಳತೊಡಗಿತು.

ಮಂಜುಳಾ ಜೊತೆಗೆ ವಿವರವಾಗಿ ಮಾತನಾಡಿ ತಪ್ಪು ಗ್ರಹಿಕೆಗಳಿಗೆ ತೆರೆಯೆಳೆಯಬೇಕೆಂದು ಕಾದು ಆಕೆಯ ಹಿಂದೆಯೇ ಬೆಟ್ಟಕ್ಕೆ ಬಂದ. ಬೆಟ್ಟದ ಬುಡದಲ್ಲಿ ಒಂದು ಬಂಡೆಯ ಮೇಲೆ ಕೂತು ಯೋಚಿಸುತ್ತಿದ್ದ ಆಕೆಯನ್ನು ಮಾತನಾಡಿಸಿದ.

`ಇವತ್ತು ಯಾವ್ದೂ ತೀರ್ಮಾನವಾಗ್ಬೇಕು ಮಂಜುಳಾ ಅವರೆ’ ಎಂದ.

ಆಕೆ ಮಾತನಾಡಲಿಲ್ಲ. ಒಮ್ಮೆ ನೋಡಿ ತನ್ನ ದೃಷ್ಟಿಯನ್ನು ಬೇರೆಡೆ ತಿರುಗಿಸಿದಳು.

`ನೀವು ಯಾಕ್ ಹೀಗಿದ್ದೀರಿ? ನನ್ನನ್ನ ಯಾಕ್ ಹೀಗೆ ದೂರ ಮಾಡ್ತಿದ್ದೀರ?’ – ಮತ್ತೆ ಕೇಳಿದ.

ಆಗ ಚಂಡೇರಾಯನ ದನಿ ಕೇಳಿಸಿತು: `ಈ ಚಂಡೇರಾಯನ ಮಾತು ಕೇಳಿ ರಾಜಕುಮಾರಿಯನ್ನ ವರಿಸುವ ಬದಲು ಬೇರೆಯವರ ಬೆನ್ನು ಬಿದ್ದು ಬಾಯಿ ಬಿಡುತ್ತಿದ್ದರೆ ಇನ್ನೇನಾಗುತ್ತೆ?’

ಇಬ್ಬರಿಗೂ ಆಶ್ಚರ್ಯವಾಯಿತು.

ಶಿವಕುಮಾರ್‌ ಕೂಡಲೇ ಬಂಡೆಗಳನ್ನು ಸುತ್ತು ಹಾಕಿದ. ಹುಡುಕಿದ. ಯಾರೂ ಕಾಣಿಸಲಿಲ್ಲ. ಈ ಮಧ್ಯೆ ಮಂಜುಳ ಕೂಡ ಅತ್ತಿತ್ತ ನೋಡಿದಳು. ಶಿವಕುಮಾರ್‌ ವಾಪಸ್ ಬಂದು ಕೇಳಿದ.

`ನೋಡಿ, ನಾನ್ ಹೇಳಿದ್ರೆ ನೀವು ನಂಬೋದಿಲ್ಲ. ಈಗ ಚಂಡೇರಾಯನ ದನಿ ಕೇಳಿದ್ರಿ; ಅಲ್ವಾ?’

`ಕೇಳಿದೆ. ಅದ್ರೆ ಅದು ಚಂಡೇರಾಯನ ದನಿ ಅಂತ ತೀರ್ಮಾನ ತಗಳ್ಳೋಕೆ, ನಾನು ಆ ರಾಜನ ಕಾಲ್ದಲ್ಲಿ ಬದುಕಿರಲಿಲ್ಲ. ಆತನ ದನಿ ಕೇಳಿರಲಿಲ್ಲ.’

`ನಿಮ್ಮದು ಯಾವಾಗ್ಲೋ ಇದೇ ಥರಾ ಮಾತು. ಸದ್ಯ ಈಗ ಇಷ್ಟಾದ್ರು ಮಾತಾಡ್ತಾ ಇದ್ದೀರಲ್ಲ. ಮೌನವೇ ಆಭರಣ ಅಂತ ಸುಮ್ನೆ ಇಲ್ವಲ್ಲ.’

`ತಮಾಷೆ ಬೇಡ; ನನ್ನ ಬೆನ್ನು ಬಿದ್ದು ಯಾಕ್ ಬಂದದ್ದು ಹೇಳಿ.’ ಮಂಜುಳಾ ನೇರವಾಗಿ ಪ್ರಶ್ನಿಸಿದಳು.

`ನಿಮ್ಮ ಮೌನ ನನ್ನನ್ನ ಇಷ್ಟಿಷ್ಟೇ ಕೊಲ್ತಾ ಇದೆ. ನಿಮ್ಮ ಜೊತೆ ಮಾತಾಡ್ದೆ ಇದ್ರೆ ನನ್ನ ಚೈತನ್ಯ ನಾಶವಾಗುತ್ತೆ.’

ಶಿವಕುಮಾರನ ಮಾತು ಮುಗಿದ ಕೂಡಲೆ ಮತ್ತೆ ಅದೇ `ಚಂಡೇರಾಯನ ದನಿ’ ಕೇಳಿಸಿತು.

`ಇವನ ಮಾತನ್ನ ನಂಬಬೇಡ, ಚಂಡೇರಾಯನ ಮಾತಿಗೇ ಬೆಲೆ ಕೊಡದ ಈ ಚರಿತ್ರೆವೀರನ ಚೈತನ್ಯ ಅಷ್ಟೇ ಅಲ್ಲ ಸತ್ಯದ ನೆಲೇನೂ ನಾಶವಾಗಿದೆ.’

ತಕ್ಷಣ ಶಿವಕುಮಾರ್‌ ಹೇಳಿದ: `ನೋಡಿ, ಮತ್ತೆ ಮಾತಾಡ್ತಾ ಇದಾನೆ. ಅದಕ್ಕೆ ನಮ್ಮ ಊರೋರು ಹೇಳೋದು – ಇಲ್ಲಿ ಚಂಡೇರಾನ ಪ್ರೇತ, ರಾಜಕುಮಾರಿ ಪ್ರೇತ ಎರಡೂ ಸುತ್ತುತ್ತಾ ಇದೆ ಅಂತ.’

`ಮೂರನೆಯದು ನಿಮ್ಮ ಪ್ರೇತ ಸುತ್ತುತ್ತಾ ಇದೆ.’ – ಮಂಜುಳಾ ರಾಚಿದಳು.

`ಮಂಜುಳಾ’ – ಶಿವಕುಮಾರ್ ಸಿಟ್ಟಿಗೆದ್ದ – `ಬಾಯಿಗೆ ಬಂದಂತೆ ಮಾತಾಡ್ಬೇಡಿ, ನನ್ನ ತಾಳ್ಮೆಗೂ ಒಂದು ಮಿತಿ ಇದೆ.’ ಅದು ನನಗೂ ಗೊತ್ತಿದೆ. ಆದ್ರೆ ಬೇರೆಯವರ ಜೀವನದ ಚೈತನ್ಯಕ್ಕೆ ಬೆಂಕಿ ಇಟ್ಟವರಿಗೆ ಚರಿತ್ರೆ ಜ್ಞಾನವೂ ಇರಲ್ಲ. ಚಾರಿತ್ರ್ಯದ ಬಲವೂ ಇರಲ್ಲ.’

ಮಂಜುಳ ಅದೇ ಧಾಟಿಯಲ್ಲಿ ದೃಢವಾಗಿ ಹೇಳಿದಳು.

`ನೀವು ಹೀಗೆಲ್ಲ ಮಾತಾಡೋದು ನಿಮ್ಮ ಮರ‌್ಯಾದೆಗೆ ತಕ್ಕ ರೀತಿ ಆಗೋಲ್ಲ. ನಾನು ಈ ಬಹುರಾಷ್ಟ್ರೀಯ ಕಂಪನಿಗಳ ಹುನ್ನಾರ ಕುರಿತು ಮಾತಾಡೋಕ್ ಬಂದಿದ್ದೀನಿ.’

`ನಾನು ಆ ಮಾತಿಗೆ ಯಾವಾಗ್ಲೂ ಸಿದ್ಧ. ಆದ್ರೆ ನೀವು ನಿಮ್ಮ ಅಮ್ಮನ ಅನುಮತಿ ತಗಂಡ್ ಬಂದಿದ್ದೀರಾ ಹೇಗೆ ಅದನ್ನ ಮೊದ್ಲು ಹೇಳಿ.’

`ನನ್ನ ನಿಲುವಿಗೆ ಯಾರ ಅನುಮತೀನೂ ಬೇಕಾಗಿಲ್ಲ.’

`ನಿಮ್ಮ ಮತಿ ನಿಮ್ಮ ಕೈಯ್ಯಲ್ಲೇ ಇದ್ರೆ ಕಂಡವರ ಅನುಮತಿ ಅಗತ್ಯ ಇರೋಲ್ಲ. ಆದ್ರೆ ನಿಮ್ಮದು ಯಾವಾಗ್ಲು ಒಂದು ವಿಶೇಷ ತಾನೆ?’

`ಹೌದು. ನಾನು ವಿಶೇಷ ಅಂತ್ತೇ ನಮ್ಮೂರಲ್ಲಿ ನನಗೆ ಮರ್ಯಾದೆ ಇದೆ.’

`ಆದ್ರೆ ನಿಮ್ಮ ಊರೇ ವಿಶ್ವ ಅಲ್ವಲ್ಲ!’

`ನೀವು ಹೇಳೋದು ನಿಜ. ಮೊದಮೊದಲು ನನಗೆ ನನ್ನೂರೇ ವಿಶ್ವ ಆಗಿತ್ತು. ಈಗ ವಿಶ್ವದಲ್ಲಿ ನಮ್ಮದೂ ಒಂದು ಊರು ಅಂತ ಅರ್ಥವಾಗಿದೆ.’

`ಆದ್ರೆ ಇಲ್ಲಿ ನನ್ನ ತಾಯಿ ವಿಷ್ಯ ತರೋ ಅಗತ್ಯ ಇಲ್ಲ.’

`ನಿಮ್ಮ ತಾಯಿ ಬಗ್ಗೆ ನನಗೆ ದ್ವೇಷ ಇಲ್ಲ. ತಾಯಿ ಮಾತನ್ನೇ ತಂದೆ ಅಂತ ತಿಳ್ಕೊಂಡ ಮಗ ತಾನು ಮೆಚ್ಚಿದ ಹುಡುಗೀನ ಹುಚ್ಚಿ ಮಾಡಿದ್ದರ ಬಗ್ಗೆ ಅಸಹ್ಯ ಆಗುತ್ತೆ. ಸಂಕಟ ಆಗುತ್ತೆ.’

ಥಟ್ಟನೆ ಎರಗಿದ ಬಾಣದಿಂದ ಬೆಪ್ಪಾದ ಶಿವಕುಮಾರ್ ಬೆವರಿದ. ಮೌನವಾದ. `ಯಾಕ್ ಸುಮ್ಮನಾದ್ರಿ? ಈಗ ಮಾತಾಡಿ?’ – ಮಂಜುಳ ಒತ್ತಾಯಿಸಿದಳು.

`ನೀವು ಮಾತಾಡ್ತಾ ಇರೋದು ಯಾರ ಬಗ್ಗೆ?’ – ಶಿವಕುಮಾರ್‌ ಕೇಳಿದ.

`ನಿಮ್ಮ ಬಗ್ಗೆ, ನಿಮ್ಮ ರಾಜಕುಮಾರಿ ಬಗ್ಗೆ’ – ಮಂಜುಳ ಉತ್ತರಿಸಿದಳು.

ಶಿವಕುಮಾರ್ ತಲೆಮೇಲೆ ಕೈಹೊತ್ತು ನಿಂತ; ನಿಂತಲ್ಲೇ ನರಳಿದ. ಅವನ ಮುಖದಲ್ಲಿ ಸಂಕಟದ ಸುಳಿ ಕಾಣತೊಡಗಿತು. ಕಣ್ಣಲ್ಲಿ ಇಣಕುವ ನೀರು ಮಿತಿಗಳನ್ನು ಮೀರುವ ಪ್ರಕ್ರಿಯೆಯಾಗತೊಡಗಿತ್ತು.

`ಯಾಕ್ ಸುಮ್ಮನಾದ್ರಿ? ಮಾತಾಡಿ.’

ಮತ್ತೆ ಮಂಜುಳ ಒತ್ತಾಯಿಸಿದಳು.

`ಏನ್ ಮಾತಾಡ್ಲಿ ಮಂಜುಳ’ – ಶಿವಕುಮಾರ್ ಹೇಳಲಾರಂಭಿಸಿದ – ‘ರಾಜಕುಮಾರಿ ನನ್ನನ್ನ ಬಯಸಿದ್ದು ನಿಜ; ನಾನು ಆಕೆ ಜೊತೆ ಮಾತಾಡ್ತ ಇದ್ದದ್ದು ನಿಜ. ಆದ್ರೆ ಆಕೆಗೆ ಎಷ್ಟು ಮನಸ್ಸಿತ್ತೊ ಅಷ್ಟು ಮನಸ್ಸು ನನಗಿರಲಿಲ್ಲ….’

`ಅವಳಂಥ ಮನಸ್ಸು ನಿಮಗಿಲ್ಲ ಅಂತ ನಂಗೊತ್ತು’ – ಮಂಜುಳ ಮಧ್ಯದಲ್ಲೇ ಪ್ರತಿಕ್ರಿಯಿಸಿದಳು.

`ಮತ್ತೆ ಚುಚ್ಚಿ ಮಾತಾಡ್ಬೇಡಿ ಮಂಜುಳ, ಅವಳು ನನ್ನನ್ನು ಹಚ್ಚಿಕೊಂಡಷ್ಟು ನಾನು ಹಚ್ಚಿಕೊಂಡಿರಲಿಲ್ಲ ಅನ್ನೋದು ಖಂಡಿತ ನಿಜ. ಹಾಗಂತ ನನಗೆ ಪೂರ್ತಿ ಮನಸ್ಸೇ ಇರ್ಲಿಲ್ಲ ಅಂತೂ ಹೇಳಲಾರೆ. ಹೀಗೆ ತುಮುಲದಲ್ಲಿದ್ದು ಅವಳಲ್ಲಿ ಆಸೆ ಹುಟ್ಟಿಸಿದ್ದು ನನ್ನ ತಪ್ಪು ಅಂತ ಒಪ್ಕೊಳ್ತೇನೆ. ನನ್ನ ಅಮ್ಮನ ಮಾತಿಗೆ ಕಟ್ಟುಬಿದ್ದು ಆಕೆ ಆಸೆಯನ್ನು ಹತ್ತಿಕ್ಕಿದ್ದು ಸರಿಯಾಗ್ಲಿಲ್ಲ ಅಂತ ನನಗೂ ಅನ್ನಿಸಿದೆ.’

`ನಿಮಗೆ ಎಲ್ಲಾ ಅನ್ಸುತ್ತೆ. ಎಲ್ಲಾ ಮರ್ತು ಹೋಗುತ್ತೆ. ಆದ್ರಿಂದ್ ನಾನು ನಿಮ್ಮಿಂದ ದೂರ ಆಗ್ಬೇಕು ಅಂತ ತೀರ್ಮಾನಿಸಿದ್ದೇನೆ.’

ಮಂಜುಳ ನಿರ್ಧಾರಕವಾಗಿ ನುಡಿದಾಗ ಶಿವಕುಮಾರ್ ಮನಸ್ಸು ಕುಸಿದು ಕುಪ್ಪೆಯಾಯಿತು.

`ದಯವಿಟ್ಟು ಹಾಗ್ ಮಾಡ್ಬೇಡಿ, ನಾನು ಈಗ ಹೊಸ ಮನುಷ್ಯ ಆಗ್ತಿದ್ದೇನೆ. ನನ್ನನ್ನ ನಂಬಿ. ದಯವಿಟ್ಟು ನನ್ನನ್ನ ನಂಬಿ’ ಎಂದು ಆಪ್ತವಾಗಿ, ಆದ್ರವಾಗಿ ಕೋರಿದ.

`ಹೆಣ್ಣಿನ ಎದುರಿಗೆ ಮಾತ್ರ ಹೇಳೊ ಮಾತಲ್ಲ ತಾನೆ ಇದು?’ – ಮಂಜುಳ ತೀಕ್ಷ್ಣವಾಗಿ ಪ್ರಶ್ನಿಸಿದಳು.

`ಮತ್ತೆ ನನ್ನನ್ನ ಚುಚ್ಚಬೇಡಿ. ನಿಮ್ಮನ್ನ ಮದುವೆ ಆಗಿ ನನ್ನ ನಿರ್ಧಾರ ಎಷ್ಟು ಅಚಲ ಅಂತ ತೋರುಸ್ತೀನಿ.’

ಮಂಜುಳ ಫಕ್ಕನೆ ನಕ್ಕಳು.

`ನಿಮ್ಮ ಅಚಲತೇನ ತೋರ್ಸೋದಿಕ್ಕಾಗಿ ನನ್ನ ಮದ್ವೇ ಆಗ್ತಿರಾ?’ – ಮಂಜುಳ ಕೆಣಕಿ ಕೇಳಿದಳು – `ಅಥವಾ ನನ್ನನ್ನ ಇನ್ನೊಬ್ಬ ರಾಜಕುಮಾರಿ ಮಾಡೋದಿಕ್ಕಾಗಿ ಈ ಮಾತು ಹೇಳ್ತಿದ್ದೀರ?’

`ಎರಡೂ ಅಲ್ಲ, ನಾನು ನಾನಾಗೋದಿಕ್ಕಾಗಿ ಈ ಮಾತಾಡ್ತಿದ್ದೀನಿ.’

ಅಷ್ಟರಲ್ಲಿ `ಮಂಜುಳಾ’ ಅಂತ ರಾಜಕುಮಾರಿ ಕರೆದದ್ದು ಕೇಳಿಸಿ ಇಬ್ಬರೂ ನೋಡಿದರು. ಬಂಡೆಯೊಂದರ ಮರೆಯಿಂದ ರಾಜಕುಮಾರಿ ಬಂದು ನಿಂತಳು. ಇವರಿಬ್ಬರಿಗೂ ಏನು ಮಾತನಾಡುವುದೆಂದು ತಕ್ಷಣ ತೋಚಲಿಲ್ಲ.

`ನಾನು ಚಂಡೇರಾಯ ಆಜ್ಞಾಪಿಸುತ್ತಿದ್ದೇನೆ. ನೀವಿಬ್ಬರೂ ಮದುವೆಯಾಗಲೇಬೇಕು.’

– ರಾಜಕುಮಾರಿ ಗಂಡಸಿನ ದನಿಯಲ್ಲಿ ಹೇಳಿದಳು.

ಮಂಜುಳ ಮತ್ತು ಶಿವಕುಮಾರ್‌ ಮುಖ ಮುಖ ನೋಡಿಕೊಂಡರು. ಇದೇ ದನಿ ಸ್ವಲ್ಪ ಹೊತ್ತಿನ ಮುಂಚೆ ಕೇಳಿದ್ದು, ಇದೇ ದನಿ ತುಂಬಾ ಹಿಂದೆ ಕೇಳಿದ್ದು ಎಂದು ಶಿವಕುಮಾರ್‌ಗೆ ಅನ್ನಿಸಿತು. ಆಕೆ ಕಲಾವಿದ ಕುಟುಂಬದವಳೆಂಬ ನೆನಪು ನೆಲೆಯೂರಿತು.

`ಯಾಕೆ ಮೌನ? ರಾಜಾಜ್ಞೆಯನ್ನು ಯಾರೂ ಮೀರುವಂತಿಲ್ಲ’ – ಮತ್ತೆ ರಾಜಕುಮಾರಿ ಚಂಡೇರಾಯನಾಗಿ ಹೇಳಿದಳು. ಇವರಿಬ್ಬರಿಗೆ ಮಾತು ಹೊರಡಲಿಲ್ಲ.

ರಾಜಕುಮಾರಿ ನಗತೊಡಗಿದಳು. ತನ್ನ ಕಂಕುಳಲ್ಲಿದ್ದ ಗಂಟನ್ನು ಮುಂದೆ ಹಿಡಿದುಕೊಂಡು ಅದನ್ನು ನೋಡುತ್ತಾ ನಗುತ್ತಾ ಹಾಗೇ ಅಳತೊಡಗಿದಳು. ಮರುಕ್ಷಣದಲ್ಲಿ ಮೌನವಾದಳು. ಕಣ್ಣೀರು ಒರೆಸಿಕೊಳ್ಳುತ್ತ ಮಂಜುಳ ಬಳಿಗೆ ಬಂದಳು.

`ಮಂಜುಳ ಮೇಡಮ್ನಾರೇ, ನೀವು ಮಾತ್ರ ನನ್ ಥರಾ ರಾಜಕುಮಾರಿ ಆಗ್ ಬ್ಯಾಡ್ರಿ, ನಿಜವಾಗು ರಾಜಕುಮಾರಿ ಆಗ್ ಬ್ಯಾಡ್ರಿ.’ ಎಂದು ದುಃಖದಿಂದ ನುಡಿದಳು. ಅಲ್ಲಿಂದ ಶಿವಕುಮಾರನ ಬಳಿಗೆ ಬಂದಳು

`ನೀನೂ ಅಷ್ಟೆ. ಆ ಮಂಜುಳ ಮೇಡಮ್ಮಾರ್ನ ರಾಜಕುಮಾರಿ ಮಾಡ್ಬ್ಯಾಡ ಮಾತು ಕೊಟ್ಟಂಗೆ ಮದ್ವೆ ಆಗಿ ಮನುಷ್ಯ ಆಗು’ ಎಂದಳು.

ಇವರಿಬ್ಬರೂ ನೋಡುತ್ತಿದ್ದಂತೆಯೇ `ಎಷ್ಟು ಮಾತಾಡ್ಲಿ ನಾನು. ಮಾತ್ ಬ್ಯಾಡ, ಮದ್ವ ಆಗಿ, ಆದ್ರೆ ಮದ್ವೆ ಆಗಿ ಮಂಟಪ ಮರೀಬ್ಯಾಡ್ರಿ. ನಾನ್ ಬತ್ತೀನಿ. ನನ್ ಮಂಟಪಕ್ಕೆ ಕಳ್ಳರು ನುಗ್ತಾ ಅವ್ರೆ. ಹೊರ್ಗಡೆ ಕಳ್ಳರು ಒಳ್ಗಡೆ ಕಳ್ಳರು ಕೈ ಕೈ ಹಿಡ್ಕಂಡು ನನ್ನ ಕರುಳು ಕಿತ್ತು ಹಾರ ಹಾಕ್ಕಂಡು ಮಂಟಪದ ಸುತ್ತ ಕೇಕೆ ಹೊಡ್ಕಂಡು ಕುಣೀತಾ ಅವ್ರೆ. ನಿಮಿಗ್ ಗೊತ್ತಾ? ಹೊರ್ಗಡೆ ಕಳ್ಳರು ಗೊತ್ತಾದಂಗೆ ಒಳ್ಗಡೆ ಕಳ್ಳರು ಗೊತ್ತಾಗಕಿಲ್ಲ. ಒಳ್ಗಡೆ ಕಳ್ಳರು ಊಸರವಳ್ಳಿಗೆ ಹುಟ್‌ದೋರು. ಅದಕ್ಕೇ ನನ್ ಮಂಟಪ ನಾನ್ ಜೋಪಾನ ಮಾಡಬೇಕು. ಬತ್ತೀನಿ ನಾನು’ ಎಂದು ಹೇಳುತ್ತಾ ಗಂಟನ್ನು ಭದ್ರ ಮಾಡಿಕೊಳ್ಳುತ್ತ ಕಣ್ತುಂಬಿ ಹೊರಟಳು.

ಮಂಜುಳ ಮಾತಾಡಲಿಲ್ಲ ಮಾತಾಡಲು ಆಗಲಿಲ್ಲ. ಆಕೆಯ ಕಣ್ಣು ತುಂಬಿ ಬಂತು. ಎಷ್ಟು ತಡೆದುಕೊಂಡರೂ ಅಳು ಉಕ್ಕಿ ಬಂತು. ಗಳ ಗಳನೆ ಅಳತೊಡಗಿದಳು.

ಆಗ ಶಿವಕುಮಾರ್‌ ನೋವಿನಲ್ಲಿ ನೆನೆಯುತ್ತ ಹತ್ತಿರ ಬಂದ. ಮಂಜುಳಾಳ ಕೈಗಳನ್ನು ಹಿಡಿದುಕೊಂಡ. ಆಕೆ ಆತನ ಕಡೆಗೆ ನೋಡಿದಳು. ಕೆನ್ನೆ ಮೇಲಿನ ಕಣ್ಣೀರು ಒರೆಸಿದ. ಕೈಹಿಡಿತವನ್ನು ಬಿಗಿ ಮಾಡಿದ. ಮಂಜುಳ ವಿರೋಧಿಸಲಿಲ್ಲ.
* * *

ಎರಡು ದಿನಗಳ ನಂತರ ಬರಡುಸಂದ್ರಕ್ಕೆ ಶಾಸಕರ ಸವಾರಿ ಚಿತ್ರೈಸಿತು. ಒಂದು ಚಿಕ್ಕ ಸಭೆಯೂ ನಡೆಯಿತು. ಸಭೆಯ ನೇತೃತ್ವ ಪಟೇಲರದು. ಶಾಸಕರದು ಬಹುರಾಷ್ಟ್ರೀಯ ಕಂಪನಿಗಳ ಆಗಮನದಿಂದ ಊರು ಉದ್ಧಾರವಾಗುವ ಬಗೆಯನ್ನು ಕುರಿತ ಭಾಷಣ. ಎದ್ದು ಎದುರಿಗೆ ಮಾತಾಡಲಾಗದ ಸ್ಥಿತಿಯಲ್ಲಿ ಕೂತಿದ್ದ ಜನಕ್ಕೆ ಶಿವಕುಮಾರ್‌ ಮಾತಾಗಿ ಪರಿಣಮಿಸಿದ.

`ನಿಮ್ಮ ಕಂತೆ ಪುರಾಣ ಬಿಚ್ಬೇಡಿ. ನಮ್ಮೂರನ್ನ ಹಾಳ್ ಮಾಡ್ ಬೇಡಿ. ಬೇಕಿದ್ರೆ ಇಲ್ಲಿ ನಮ್ಮ ಶ್ರಮಶಕ್ತಿ ಬಳಸಿ ಗುಡಿ ಕೈಗಾರಿಕೆ ಮಾಡಿ; ನಮ್ಮದೇ ಕಾರ್ಖಾನೆ ಮಾಡಿ, ಸ್ವಪ್ನ ಮಂಟಪ ಮಣ್ಣು ಮಾಡಿ ಇಲ್ಲಿ ಏನ್ ಮಾಡೋಕೂ ನಾವ್ ಬಿಡೋದಿಲ್ಲ’ ಎಂದು ಸಾರಿದ.

ಶಾಸಕ ಸುಮ್ಮನಿರಲಿಲ್ಲ.

`ಬುದ್ಧಿ ಇಲ್ದೆ ಇರೋರ್ ಮಾತು ಇದು. ಊರು ಉದ್ಧಾರ ಆಗಬಾರದು ಆನ್ನೋ ಮನೋಭಾವ ಇದು. ಇದನ್ನ ಮಹಾಜನತೆ ಅರ್ಥ ಮಾಡಿಕೊಳ್ಳಬೇಕು.’

`ನಮ್ಗೆಲ್ಲ ಅರ್ಥ ಆಗಯ್ತೆ ಕಣ್ರೀ. ಇದೆಲ್ಲ ಉಳ್ಳೋರ್ ವ್ಯವಹಾರ. ಅಷ್ಟೆ’ ಎಂದು ಒಬ್ಬ ವ್ಯಕ್ತಿ ಕುಂತಲ್ಲೇ ಗೊಣಗಿದ. ಇದ್ದಕ್ಕಿದ್ದಂತೆ `ಹೌದೌದು’ ಎಂದು ಹತ್ತಾರು ಜನ ಹೇಳಿದರು.

`ಈಗ ಯಾರು ಏನೇ ಹೇಳಿದ್ರು ಹಿಂದೆ ಸರಿಯೊ ಪ್ರಶ್ನೆ ಇಲ್ಲ. ಇಲ್ಲಿ ನೋಡಿ ಸರ್ಕಾರದ ಆಜ್ಞೆ ಹೊರಟಿದೆ. ಕಂಪನಿಯವರು ಇನ್ನೇನು ಬಂದು ಕೆಲ್ಸ ಶುರು ಮಾಡ್ತಾರೆ ಅವ್ರ ಬುಲ್ಡೋಜರ್ ಬಂದು ಎಲ್ಲಾ ಸಮತಟ್ಟು ಮಾಡುತ್ತೆ. ಅದಕ್ಕೆ ನಿಮ್ಮ ಸಹಕಾರ ಕೇಳೋಕೆ ಅಂತ ನಾನು ಬಂದಿದ್ದೀನಿ’ ಎಂದು ಶಾಸಕರು ಸರ್ಕಾರಿ ಆದೇಶದ ಪ್ರತಿಯನ್ನು ಎತ್ತಿ ಹಿಡಿದು ಹೇಳಿದರು.

`ಸಾಕಾರ ಕೇಳಿದ್ದಾತಲ್ಲ; ಇನ್ ಯಾಕ್ ನಿಂತಿದ್ದೀರ ಹೋಗಿ’ ಎಂದು ಗುಂಪಿನಲ್ಲಿ ಒಬ್ಬ ಹೇಳಿದ.

`ಯಾರೊ ಅವ್ನು?’ – ಪಟೇಲ ಕೆಂಗಣ್ಣಿನಲ್ಲೇ ಮಾತಾಡಿದ.

ಒಂದು ಕ್ಷಣ ಮೌನ ಆವರಿಸಿತು. ಪಟೇಲ ಸ್ವಲ್ಪ ಮೃದುವಾಗಿ ಹೇಳತೊಡಗಿದ.

`ಸರ್ಕಾರವೇ ಸಹಕಾರ ಕೇಳ್ತಾ ಇದ್ದಾಗ ಪೊಗರು ಮಾಡಾದ್ ಯಾಕ್ರಪ್ಪ? ಏನೋ ನಮ್ಮೂರ್ಗೆ ಒಳ್ಳೇದಾಗ್ಲಿ ಅಂತ ನಾನೂ ನನ್ನ ಜಮೀನ್ ಬಿಟ್ಟುಕೊಟ್ಟೆ….’

`ಏನ್ ಪುಗಸಟ್ಟೆ ಬಿಟ್ಕೊಟ್ಟಿದ್ದೀರ? ಒಂದಕ್ಕೆಲ್ಡ್ ಬೆಲೆ ತಗಂಡ್ ಬಿಟ್ಟು ಕೊಟ್ಟಿದ್ದೀರ. ಅಷ್ಟೆ’ ಅಂತ ಗುಂಪಿನಲ್ಲಿ ಮತ್ತೊಂದು ದನಿ ಕೇಳಿತು.

`ಇದೊಳ್ಳೆ ತಮಾಸೆ ಆಯ್ತಲ್ಲ. ನಾನೂ ಜೀವನ ಮಾಡ್ಬೇಕು ತಾನೆ? ಅದಕ್ಕೆ ಏನೋ ವಸಿ ದುಡ್ಡು ತಗಂಡೆ, ಅದ್ರಾಗ್ ತಪ್ಪೇನೈತೆ! ನೋಡ್ರಿ, ಇವಾಗ ದೂಸರ ಮಾತ್ ಬ್ಯಾಡ, ಏನಾರ ಗಲಾಟೆ ಗಿಲಾಟೆ ಮಾಡಿ ಊರ್ ಹೆಸ್ರು ಹಾಳ್ ಮಾಡ್ ಬ್ಯಾಡ್ರಿ ಅಷ್ಟೆ’ – ಎಂದು ಪಟೇಲ ವಿನಂತಿಸಿದ.

`ಒಂದು ಮಾತು ಹೇಳ್ತಾ ಇದೀನಿ. ಬಹುರಾಷ್ಟ್ರೀಯ ಕಂಪನಿ ಬುಲ್ಡೋಜರ್ನ ಈ ಊರ್ನಲ್ಲಿ ಬದುಕೋಕ್ ಬಿಡೋದಿಲ್ಲ. ಇದೇ ಕೊನೇ ಮಾತು’ ಎಂದು ಘೋಷಿಸಿದ ಶಿವಕುಮಾರ್‌ ಅಲ್ಲಿಂದ ಹೊರಟುಬಿಟ್ಟ. ಉಳಿದವರೂ ಎದ್ದರು. `ಇದಕ್ಕೆಲ್ಲಾ ಹೆದ್ರಿಕಂಡ್ರಾಗ್ತೈತಾ? ಎಲ್ಲಾ ಬಂದೋಬಸ್ತ್ ಮಾಡಿದ್ರಾಯ್ತು ಬರ್ರೀ ಪಟೇಲ್ರೆ’ ಎಂದು ಶಾಸಕ ಹೊರಟುನಿಂತ. ಜನರು ಗುಂಪುಗುಂಪಾಗಿ ಮಾತನಾಡತೊಡಗಿದರು.

ಇದೆಲ್ಲವನ್ನೂ ಸಿದ್ದಣ್ಣ ಸುಮ್ಮನೆ ನೋಡುತ್ತಿದ್ದ. ಲಕ್ಷ್ಮಿ ಸ್ವಲ್ಪ ದೂರದಲ್ಲಿ ನಿಂತು ಆಲಿಸುತ್ತಿದ್ದಳು. ಶಿವಕುಮಾರ್ ಆಕೆಯ ಬಳಿಗೆ ಬಂದು `ಮೇಡಂ ಎಲ್ಲಿದಾರೆ’ ಎಂದ. ಆಕೆ `ಮನೇಲಿ’ ಎಂದಳು. `ಬಾ’ ಎಂದು ಜೊತೆಯಲ್ಲಿ ಹೊರಟ.

ಅಲ್ಲೇ ಮರೆಯಲ್ಲಿ ನಿಂತು ಎಲ್ಲವನ್ನೂ ಗಮನಿಸಿದ ರಾಜಕುಮಾರಿ ದುಗುಡ ತುಂಬಿಕೊಂಡು ಮೆಲ್ಲನೆ ಹೆಜ್ಜೆ ಹಾಕಿದಳು. ಅವಳು ಮುಂದೆ ಮುಂದೆ ಹೋದಂತೆ, ಊರು ಹಿಂದೆ ಹಿಂದೆ ಸರಿಯುತ್ತಿರುವ ಅನುಭವದ ಉರಿಯಲ್ಲಿ ಹೋಗುತ್ತಾ ಇದ್ದಳು.

ಕೆಲದಿನಗಳವರೆಗೆ ಈ ಸುದ್ದಿಯೇ ಇರಲಿಲ್ಲ. ಎಲ್ಲವೂ ತಣ್ಣಗಾಯಿತೇನೊ ಎಂಬ ಭಾವನೆ ಬೆಳೆಯಲಾರಂಭಿಸಿತು. ಆದರೆ ಶಿವಕುಮಾರನ ಮನೆಯಲ್ಲಿ ಬಿಸಿಯೇರಿತು. ಕರಿಯಮ್ಮ ಶಿವಕುಮಾರನನ್ನು ತರಾಟೆಗೆ ತೆಗೆದುಕೊಂಡಳು. `ನೀನು ಆ ಮೇಡಮ್ಮನ ಮಾತ್ ಕಟ್ಕಂಡು ಏನೇನೊ ಮಾಡ್ತೀಯ. ಅವಿಗೇನೂ ಇವತ್ತು ಬಂದು ನಾಳೆ ಹೋಗ್ತಾಳೆ’ ಎಂದಳು. ಶಿವಕುಮಾರ ದಿಟ್ಟವಾಗಿ ಉತ್ತರಿಸಿದ.

`ಹೋಗೋ ಪ್ರಶ್ನೆನೆ ಇಲ್ಲ ಕಣಮ್ಮ. ಇಲ್ಲೇ ಇರ್ತಾಳೆ. ನಾನು ಅವ್ಳನ್ನ ಮದುವೆ ಆಗ್ತಿನಿ.’

ಕರಿಯಮ್ಮ ಹೌಹಾರಿದಳು.

`ಅವಳು ಯಾರೊ ಏನೊ, ಹಿಂದೆ ಮುಂದೆ ನೋಡ್ದೆ ಮದ್ವೆ ಆಗ್ತೀಯ? ನಾನ್ ಹೇಳ್ದೆ ಒಂದ್ ಹುಲ್ಲು ಕಡ್ಡಿನೂ ಅಲುಗಾಡಾಕಿಲ್ಲ. ಚಂದಾಕ್ ತಿಳ್ಳಾ’ ಎಂದು ಯಥಾಪ್ರಕಾರ ಎಚ್ಚರಿಸಿದಳು.

`ಅದೆಲ್ಲ ಹಳೇಕತೆ. ಯಾರು ಏನೇ ಹೇಳಿದ್ರು ನನ್ನ ತೀರ್ಮಾನ ಬದಲಾಯ್ಸಲ್ಲ. ನೀನು ಸುಮ್ನೆ ಬಾಯ್ ಮಾಡಿ ನಾಲ್ಗೆ ನೋಯಿಸ್ಕಬೇಡ’ ಎಂದ ಕುಮಾರ್.

`ಎಲಾ ಇವ್ನ! ಅಗ್ಲೇ ಈಟೊಂದು ಬೆಳುದ್ ಬಿಟ್ಟೇನೊ. ಆ ಮಾಟಗಾತಿ ಏನೊ ಮಾಡ್ ಬಿಟ್ಟವ್ಳೆ. ಇರು ಇವತ್ತೆ ವಿಚಾರಿಸ್ಕಂಬ್ತೀನಿ’ ಎಂದು ಕರಿಯಮ್ಮ ಮುಂದಿನ ಕ್ರಿಯೆಯ ಮುನ್ಸೂಚನೆ ನೀಡಿದ ಕೂಡಲೆ ಕುಮಾರ್ ಖಡಾ ಖಂಡಿತವಾಗಿ ಹೇಳಿದ.

`ನೀನು ಆ ಕಣ್ಣಪ್ಪನ ಮಗಳು ರಾಜಕುಮಾರೀನ ಬಾಯಿಗ್ ಬಂದಂಗ್ ಅಂದು ರಂಪ ಮಾಡಿದ್ಯಲ್ಲ, ಅದೆಲ್ಲ ಇಲ್ಲಿ ನಡ್ಯಲ್ಲ. ನೀನೇನಾರ ಆ ಮಂಜುಳಾ ಮೇಡಂನ ಒಂದ್ ಮಾತು ಅಂದ್ರೆ ನಾನು ಸುಮ್ಮೆ ಇರೊಲ್ಲ. ಮನೆ ಮಾರ್ಯಾದೇನ ಬೀದೀಗ್ ತರದೆ ಸುಮ್ಮೆ ಇರೋದ್ ಕಲಿ.’

ಇಲ್ಲೀವರೆಗೆ ಸುಮ್ಮನಿದ್ದ ಸಿದ್ದಣ್ಣ ಮಧ್ಯೆ ಮಾತನಾಡಿದ. `ಲೇ ನಿನ್ನ ಮಗ ಹೇಳಿದ್ದು ಕೇಳ್ದೇನೆ? ಕೇಳಿ ಚಂದಾಗ್ ತಿಳ್ಕಾ, ಬೆಳೆದ್ ಹುಡ್‌ಗುರತ್ರ ಹೆಂಗ್ ನಡ್ಕಬೇಕು ಅಂಬ್ತ ಒಸಿ ಅಭ್ಯಾಸ ಮಾಡ್ಕ. ಸುಮ್ಕೆ ಬೀದಿ ರಂಪ ಮಾಡಿ ಮಾನ ಮರ್ವಾದೆ ಹರಾಜ್ ಹಾಕ್ಕಬ್ಯಾಡ.’

ಕರಿಯಮ್ಮ ತಬ್ಬಿಬ್ಬಾದಳು.

`ಏನು? ಏನ್ ಮಾತಾಡ್ತಿದ್ದೀರ್ರಿ ನೀವು?’

`ಮಾತಾಡ್ ಬೇಕಾದ್ದನ್ನೇ ಮಾತಾಡ್ತಿದ್ದೀನಿ. ಆ ರಾಜಕುಮಾರಿ ಹುಚ್ಚಿ ಆಗಿದ್ದನ್ನ ನೋಡಿ ನಮ್ಮ ಚರಿತ್ರೇನ ಚನ್ನಾಗ್ ಬರ್ದಂಗಾಗೈತೆ. ಇವಾಗ ಇನ್ನೊಂದು ಬರ್ಯಾದ್ ಬ್ಯಾಡ. ಬರ್ಯಂಗಿದ್ರೆ ಬ್ಯಾರೆ ಥರಾ ಬರ್ಯಾನ. ನಾನ್ ಹೇಳ್ತಾ ಇವ್ನಿ. ನೀನು ಸುಮ್ಕೆ ಬಾಯ್ ಮುಚ್ಚಂಡಿರು. ಕೈಯ್ಯಗ್ ಬಂದ್ ಮಗನ್ನೂ ಕಳ್ಕಂಡು ನಾವು ತಿಕ್ಕಲಿಡಿಸ್ಕಮಾದ್ ಬ್ಯಾಡ.

ಕರಿಯಮ್ಮ ಮತ್ತೆ ಈ ವಿಷಯ ಮಾತನಾಡಲಿಲ್ಲ. ಈ ಮಾತುಕತೆಯಾಗುತ್ತಿರುವಾಗಲೇ ಕಂಡಕ್ಟರ್ ಕೆಂಚಪ್ಪ ಬಂದ. `ಇವತ್ತು ಇಲ್ಲೇ ಉಂಡು ಇಲ್ಲೇ ಮಲ್ಗಾನ ಅಂಬ್ತ ಬಂದಿದ್ದೀನಿ’ ಎಂದು ಎಂದಿನ ಸಲಿಗೆಯಲ್ಲೇ ಹೇಳಿದ. ಆ ವೇಳೆಗೆ ಶಿವಕುಮಾರನ ಮದುವೆ ಪ್ರಸ್ತಾಪ ಒಂದು ಹಂತಕ್ಕೆ ಬಂದಿತ್ತು. ಸಿದ್ದಣ್ಣ ಕರಿಯಮ್ಮನ ಮುಖ ನೋಡ್ತಾ ಘೋಷಿಸಿಯೇ ಬಿಟ್ಟ.

`ಇವತ್ತು ಚಂದಾಗೇ ಉಂಡುಬಿಡು ಕೆಂಚಪ್ಪ, ನಮ್ಮ ಕುಮಾರನ ಮದ್ವ ತೀರ್ಮಾನ ಆಗ್ಬಿಟ್ಟಿದೆ.’

`ಹೆಣ್ಣು ಯಾರು ಸಿದ್ದಣ್ಣೂರೆ’ – ಕೆಂಚಪ್ಪ ಕೇಳಿದ.

`ಇನ್ನು ಯಾರು, ನಮ್ಮ ಮಂಜುಳ ಮೇಡಮ್ಮ.’ ಉತ್ತರ ಕೇಳಿ ಕೆಂಚಪ್ಪ ರೋಮಾಂಚಿತನಾದ.

`ಒಳ್ಳೇ ಜೋಡಿ ಸಿದ್ದಣ್ಣೋರೆ, ಇಬ್ರುನ್ನು ಮೊಟ್ಟಮೊದ್ಲು ನಮ್ ಬಸ್ಸಾಗೇ ಕರ್ಕಂಡ್ ಬಂದಿದ್ದು ಸಾರ್ಥಕ ಆತು ಬಿಡಿ ಮತ್ತೆ.’

ಸಿದ್ದಣ್ಣ ತಕ್ಷಣ ಹೇಳಿದ – `ಆ ಮೇಡಮ್ಮನ್ನೇ ಕೇಳೆ ನಾವೇ ಎಲ್ಲಾ ಮಾತಾಡ್ ಬಿಟ್ಟಿದ್ದೀವಿ.’

ಆಗ ಕಂಡಕ್ಟರ್ ಕೆಂಚಪ್ಪ `ಆ ಕೆಲ್ಸ ಶಿವಕುಮಾರಣ್ಣ ಮಾಡ್ತಾರೆ ಬಿಡಿ’ ಎಂದು ನಕ್ಕ.

ಊಟವಾದ ಮೇಲೆ ಸಿದ್ದಣ್ಣ ಶಿವಕುಮಾರನನ್ನು ಕರೆದ.

`ಕುಂತ್ಕ’ ಎಂದ. ಮಾತಿಗೆ ಪ್ರಾರಂಭಿಸಿದ. `ಅಲ್ಲ ಕಣೋ, ನಿನ್ನ ಮದ್ವೆ ವಿಷ್ಯಕ್ಕೆ ನಾನೇನೊ ಒಪ್ಕಂಡೆ. ಆದ್ರೆ ಇನ್ನೊಂದ್ ವಿಷ್ಯ ಐತೆ. ನೀನು ಊರಾಗೆ ಆ ಪಟೇಲನ್ನ ವಿರೋಧ ಮಾಡ್ಕಂಡ್ರೆ ನಾವ್ ಹೆಂಗಪ್ಪ ಬಾದ್ಕಾದು? ಅದು ಮಾತ್ರ ನಂಗ್ ಸರಿ ಬರಾಕಿಲ್ಲ, ನಿನ್ ಮದ್ವೆ ವಿಷ್ಯಕ್ಕೆ ನಾನ್ ಒಪ್ಪಿವ್ನಿ, ಈ ವಿಷ್ಯಕ್ಕೆ ನೀನ್ ಒಪ್ಕಬೇಕು.’

`ಇದು ಅದ್ದು ಬದ್ಲು ವ್ಯವಹಾರ ಅಲ್ಲ ಕಣಪ್ಪ.’ ಎಂದು ಶಿವಕುಮಾರ್‌ ನೇರವಾಗಿ ಹೇಳಿದ.

`ನಾನು ಹಂಗ್ ಮಾಡ್ತಿಲ್ಲ ಕಣೋ. ಹಿಂಗೆ ಊರಾಗಿರೋ ದೊಡ್ಡರ್ಗೆ ಸೆಡ್ಡು ಹೊಡುದ್ರೆ ಬಡವ್ರು, ಬಾದ್ಕಾದೆಂಗೆ ಅಂಬ್ತ ಅಷ್ಟೆ.’

`ಬಡವ್ರು ಒಗ್ಗಟ್ಟಾದ್ರೆ ಈ ದೊಡ್ಡೊರೆಲ್ಲ ಧೂಳೀಪಟ ಆಗ್ತಾರೆ.’

`ಅದೇನೊಪ್ಪ, ಆ ಪಟೇಲ ನನ್ನ ಕರಿಸ್ಕಂಡು ಹಿಗ್ಗಾಮುಗ್ಗ ಅಂದ್ ಬಿಟ್ಟ.’

`ಅವ್ನಿಗೆ ನನ್ ಎದ್ರೀಗ್ ಮಾತಾಡಾಕಾಗಲ್ಲ. ಅದ್ಕೇ ನಿನ್ನ ಮುಖಾಂತರ ನನ್ನನ್ನ ಕಂಟ್ರೋಲ್ ಮಾಡಾಕ್ ನೋಡ್ತಾ ಅವ್ನೆ. ನೋಡಪ್ಪ ಇನ್ನು ಯಾರೂ ನನಗೆ ಅಡ್ಡ ಬರಬೇಡಿ. ನಿಮಗೆ ತೊಂದ್ರೆ ಆಗುತ್ತೆ ಅನ್ನೋದಾದ್ರೆ ನಾನು ಬೇರೆ ಮನೆ ಮಾಡ್ಕಂಡಿರ್ತೀನಿ.’ ಶಿವಕುಮಾರ್‌ ಮತ್ತಷ್ಟು ದೃಢವಾಗಿ ಹೇಳಿದ.

`ಎಲ್ಲಾನ ಉಂಟೇನೊ! ಒಂದೇ ಊರಾಗೆ ನಾವು ಎಲ್ಡ್ ಮನ್ಯಾಗ್ ಬಾಳ್ವೆ ಮಾಡಾದು ಅಂದ್ರೆ ಮರ್ವಾದೆ ಉಳೀತೈತಾ?’

`ಹಾಗಾದ್ರೆ ಸುಮ್ನೆ ಇರಿ. ನಾನು ನಿಮ್ಮ ಮರ್ಯದೆ ಕಳೀತಾ ಇಲ್ಲಪ್ಪ. ಹೆಚ್ಚುಸ್ತಾ ಇದ್ದೀನಿ.’

ಆಗ ಕೆಂಚಪ್ಪನೂ ಹೇಳಿದ. `ಹೊಸಾ ಹೊಸ ಲೀಡರು ಬರ್ಬೇಕು ಸಿದ್ಧಣ್ಣೋರೆ. ನಮ್ಮ ಶಿವಕುಮಾರಣ್ಣ ಮುಂದೆ ಲೀಡರ್ ಆಗ್ಬೇಕು. ಏನ್ ಯಾವಾಗ್ಲು ಈ ಪಟೇಲನ ಪಂಚಾಯ್ತಿನೇ ನಡೀಬೇಕ. ಸುಮ್ಕೆ ಇರ್ರಿ.’

ಸಿದ್ದಣ್ಣನಿಗೆ ತನ್ನ ಮಾತು ನಡೆಯದೆಂದು ತಿಳಿಯಿತು. ಆದರೆ ಇಷ್ಟು ಮಾತಾಡಿದ್ದರಿಂದ ಮನಸ್ಸು ಹಗುರವಾಯಿತು. ನಿಟ್ಟುಸಿರು ಬಿಟ್ಟು ಮೇಲೆದ್ದ. `ಎಷ್ಟು ಮಾತಾಡಿದ್ರು ಇಷ್ಟೇನೇ. ಏನಾಗ್ತೈತೊ ಎಲ್ಲಾ ಆಗ್ಲಿ’ ಎಂದು ಮಲಗಲು ಹೊರಟ.

ಎಲ್ಲರೂ ಮಲಗಿದ್ದಾರೆ. ಮಧ್ಯರಾತ್ರಿ ಸಮಯ. ಇದ್ದಕ್ಕಿದ್ದಂತೆ ರಾಜಕುಮಾರಿ ಊರೊಳಗೆ ಓಡೋಡಿ ಬಂದಳು. ಶಿವಕುಮಾರನ ಮನೆಯ ಮುಂದೆ ನಿಂತು ಕೂಗಿದಳು.

`ಕುಮಾರ, ಎದ್ ಬಾ ಕುಮಾರ, ಯಾವ್ದೊ ಬುಲ್ಡೋಜ್ರು ಬಂದೈತೆ. ಮಂಟಪದ್ ಮ್ಯಾಲೆ ಬುಲ್ಡೋಜ್ರು ಹರೀತೈತೆ.’

ಕಂಡಕ್ಟರ್ ಕೆಂಚಪ್ಪ ಮೊದಲು ಎದ್ದ. ಕೂಡಲೇ ಹಜಾರದಲ್ಲಿ ಮಲಗಿದ್ದ ಶಿವಕುಮಾರನನ್ನು ಏಳಿಸಿದ. ರಾಜಕುಮಾರಿ `ಬುಲ್ಡೋಜ್ರು ಬಂದೈತೆ ಎದ್ ಬರಿ; ಎಲ್ಲಾರು ಎದ್ ಬರ್ರಿ’ ಎಂದು ಕೂಗುತ್ತ ಹೋದಳು. ಮಂಜುಳಾಗೆ ಕೇಳಿಸಿ ಆಕೆಯೂ ಹೊರಬಂದಳು.

ರಾಜಕುಮಾರಿ ಊರಿನ ಬೀದಿ ಬೀದಿಗಳಲ್ಲಿ ಓಡಿದಳು.

`ಬುಲ್ಡೋಜ್ರು ಬಂದೈತೆ, ಎದ್ ಬರಿ. ಎಲ್ಲಾರು ಎದ್ ಬರಿ’ ಎಂದು ಕೂಗಿದಳು. ಹೀಗೆ ಕೂಗುತ್ತ ಸ್ವಪ್ನ ಮಂಟಪದ ಕಡೆಗೆ ಮತ್ತೆ ಓಡಿದಳು.

ಊರಿನ ಅನೇಕರು ಎದ್ದು ಬಂದರು. ಶಿವಕುಮಾರ್ ಆವೇಶಗೊಂಡವನಂತೆ ಕೂಗಿ ಕೂಗಿ ಹೇಳಿದ `ಇವತ್ತು ಎರಡಲ್ಲೊಂದು ಆಗ್ಲಬೇಕು. ಬರ್ರಿ ಎಲ್ಲಾರು’ ಎಂದು ಕರೆದ.

ಇತ್ತ ರಾಜಕುಮಾರಿ ಸ್ವಪ್ನ ಮಂಟಪದ ಬಳಿಗೆ ಓಡೋಡಿ ಬಂದಳು. ಅವಳು ಬರುವ ವೇಳೆಗೆ ಬುಲ್ಲೋಜರ್ ಚಾಲಕನಿಗೆ ಶಾಸಕ ಮತ್ತು ಪಟೇಲ ಸೂಚನೆ ಕೊಡುತ್ತಿದ್ದರು.

`ಯಾರೇ ಅಡ್ಡ ಬಂದ್ರು ಸುಮ್ಕೆ ಇರಬ್ಯಾಡ. ಈ ಮಂಟಪಾನ ಮಣ್ಣು ಮಾಡು ಹೆಚ್ಚು ಕಮ್ಮಿ ಆದ್ರೆ ಪೋಲೀಸ್ನೋರ್ ನೋಡ್ಕೊತಾರೆ.’

ಪೋಲೀಸರ ಒಂದು ದಂಡೇ ನೆರೆದಿತ್ತು. ಅದರ ಕಾವಲಿನಲ್ಲಿ ‘Sky Mark Multinational’ ಎಂದು ಬರೆದಿದ್ದ ಬುಲ್ಡೋಜರ್ ಮುಂದೆ ಹೋಗತೊಡಗಿತು.

ಅಷ್ಟರಲ್ಲಿ ರಾಜಕುಮಾರಿ ಅರಚುತ್ತಾ ಬಂದಳು. `ನನ್ನ ಮಂಟಪಾನ ಮಣ್ಣು ಮಾಡ್ ಬ್ಯಾಡ್ರಿ, ಬೇಕಾದ್ರೆ ನನ್ನ ಜೀವ ತಗಳಿ’ ಎಂದು ಅಡ್ಡ ಬಂದಳು. ಪೋಲೀಸರು ಅವಳ ರಟ್ಟೆ ಹಿಡಿದು ಎಳೆದೊಯ್ಯತೊಡಗಿದರು. ಆಕೆಗೆ ಅದೆಷ್ಟು ಶಕ್ತಿ ಬಂದಿತ್ತೆಂದರೆ ಅವರನ್ನು ಒಟ್ಟಿಗೇ ದೂಡಿದಳು. ಆದರೆ ಅವರು ಬಿಡಲಿಲ್ಲ. ಮತ್ತೆ ಹಿಡಿದರು. ಹಿಂದಕ್ಕೆ ನೂಕಿದರು. ರಾಜಕುಮಾರಿ `ಅಯ್ಯೋ, ನನ್ ಮಂಟಪ ನನ್ನ ಮಂಟಪಾನ ಕೊಲೆ ಮಾಡ್ ಬ್ಯಾಡ್ರಿ.’ ಎಂದು ಅರಚುತ್ತಲೇ ಇದ್ದಳು. ಪೋಲೀಸರನ್ನು ತಳ್ಳಿ ಮತ್ತೆ ಬುಲ್ನೋಜರ್‌ಗೆ ಅಡ್ಡವಾದಳು. ಬುಲ್ಡೋಜರ್ ಮುಂದೆ ಬರುತ್ತಿತ್ತು. ಪೋಲೀಸರು ಈಕೆಯನ್ನು ಹಿಂದೆ ಕರೆದೊಯ್ಯುತ್ತಿದ್ದರು. ನೂಕಾಟದಲ್ಲಿ ಗಂಟು ಕೆಳಗೆ ಬಿದ್ದಾಗ, ಪೋಲೀಸರನ್ನು ನೂಕಿ ಓಡಿ ಹೋಗಿ ಗಂಟನ್ನು ತೆಗೆದುಕೊಂಡು ಎದೆಗೆ ಅವಚಿಕೊಂಡಳು.

ಈ ವೇಳೆಗೆ ಶಿವಕುಮಾರ್ ಮತ್ತು ಮಂಜುಳಾ ನೇತೃತ್ವದಲ್ಲಿ ನೂರಾರು ಜನ ಬರತೊಡಗಿದರು. ದೂರದಿಂದಲೇ ಇದನ್ನು ಗಮನಿಸಿದ ಪಟೇಲ ಮತ್ತು ಶಾಸಕ ಆತುರಪಡಿಸಿದರು.

`ಅವು ಬರಾದ್ರಾಗೆ ಎಲ್ಲಾ ಮುಗೀಬೇಕು. ಈ ಹುಚ್ಚೀನ ಎಳ್ದು ಈ ಕಡೆ ಹಾಕ್ರಿ’ ಎಂದು ಶಾಸಕ ಶಾಸನ ಮಾಡಿದ.

ರಾಜಕುಮಾರಿಯನ್ನು ಭದ್ರವಾಗಿ ಹಿಡಿದುಕೊಂಡರು. ಆಕೆ ಬಿಡಿಸಿಕೊಳ್ಳಲು ಒದ್ದಾಡಿದಳು. `ಕೊಲೆ ಮಾಡ್ ಬ್ಯಾಡ್ರಿ. ನನ್ ಮಂಟಪಾನ, ಕೊಲೆ ಮಾಡ್ ಬ್ಯಾಡ್ರಿ’ ಎಂದು ಕಿರುಚುತ್ತಲೇ ಇದ್ದಳು. `ನೀವು ಕೊಲೆಗಾರರು, ಕೊಲೆಗಡುಕ್ರು…’ ಎಂದು ಅಲ್ಲಿದ್ದವರ ಮುಖಕ್ಕೆ ರಾಚುತ್ತಿದ್ದಳು. ದೂರದಲ್ಲಿ ಬರುತ್ತಿದ್ದ ಜನರನ್ನು ಕುರಿತು `ಕೊಲೆ ಆಗಾಕ್ ಮುಂಚೆ ಬರ್ರಿ, ಓಡ್ ಬರ್ರಿ’ ಎಂದು ಏರಿಸಿದ ಕಂಠದಲ್ಲಿ ಕರೆದಳು. ಶಿವಕುಮಾರ್‌ ಮಂಜುಳ ಕಂಡಕ್ಟರ್ ಕೆಂಚಪ್ಪ, ಹೆಡ್ ಮಾಸ್ಟರ್ ಎಲ್ಲರನ್ನೂ ಒಳಗೊಂಡಂತೆ ಜನರೆಲ್ಲ ಓಡೋಡಿ ಬರತೊಡಗಿದರು.

ಬುಲ್ಡೋಜರ್ ಬಂದೇಬಿಟ್ಟಿತು. ಸ್ವಪ್ನ ಮಂಟಪಕ್ಕೆ ಬುಲ್ಡೋಜರ್ ಬಡಿಯುವ ವೇಳೆಗೆ ರಾಜಕುಮಾರಿ ಪೋಲೀಸರನ್ನು ನೂಕಿ ನುಗ್ಗಿದಳು. ಬುಲ್ಲೋಜರ್‌ಗೆ ಅಡ್ಡಬರತೊಡಗಿದಳು. ಬುಲ್ಡೋಜರ್ ಚಾಲಕ ತನ್ನ ರಭಸವನ್ನು ಕಡಿಮೆ ಮಾಡಿದರೂ ಅದು ಮಂಟಪಕ್ಕೆ ಬಡಿದೇಬಿಟ್ಟಿತು.

ಬುಲ್ಡೋಜರ್‌ಗೆ ಬಲಿಯಾಗಬೇಕಾಗಿದ್ದುದು ಮಂಟಪ! ಆದ್ದರಿಂದ ಚಾಲಕ ರಾಜಕುಮಾರಿಗೆ ಅಪಾಯವಾಗದಿರಲೆಂದು ನಿಧಾನಿಸಿದ್ದ! ಆದರೆ ಬಂದ ರಭಸದಲ್ಲಿ ಮಂಟಪಕ್ಕೆ ನುಗ್ಗೇಬಿಟ್ಟಿತು. ಮಂಟಪ ಅರ್ಧಂಬರ್ಧ ಕುಸಿಯಿತು.

ತಡೆಯಲು ಮುನ್ನುಗ್ಗುತ್ತಿದ್ದ ರಾಜಕುಮಾರಿಯ ಮೇಲೆ ಮಂಟಪದ ಒಂದು ಭಾಗ ಬಿದ್ದಿತು.

ಈ ದೃಶ್ಯವನ್ನು ನೋಡುತ್ತ ಶಿವಕುಮರ್, ಮಂಜುಳ ಮತ್ತಿತರರು ಓಡೋಡಿ ಬಂದರು.

ಅವರು ಬರುವ ವೇಳೆಗೆ ರಾಜಕುಮಾರಿ ನೆಲಕಚ್ಚಿದ್ದಳು; ಗುಟುಕು ಜೀವದಿಂದ ನರಳುತ್ತಿದ್ದಳು.

ಜನರ ದಂಡು ಬಂದದ್ದು ಕಂಡು ಬುಲ್ಡೋಜರ್ ಚಾಲಕ ಕೆಳಗಿಳಿದು ಓಡಿದ. ಶಾಸಕ ಮತ್ತು ಪಟೇಲ ಮರಗಳ ಮಧ್ಯೆ ಮರೆ ಯಾದರು. ಪೋಲೀಸರು ಜನರನ್ನು ತಡೆಯಹೋದರು.

ಆದರೆ ಜನರು ನಿಲ್ಲುವಂತಿರಲಿಲ್ಲ. ಪೋಲೀಸರನ್ನು ನೂಕಿ ನುಗ್ಗಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಪೋಲೀಸ್ ಅಧಿಕಾರಿ ತಮ್ಮವರಿಗೆ ಸುಮ್ಮನಿರಲು ಹೇಳಲೇಬೇಕಾಯಿತು. ಚಾಲಕ ಮತ್ತು ಪ್ರೇರಕರಿಲ್ಲದ ಬುಲ್ಲೋಜರ್ ಇಟ್ಟುಕೊಂಡು ತಾವೇನು ಮಾಡುವುದೆಂದು ಆತ ಲೆಕ್ಕ ಹಾಕಿದಂತಿತ್ತು.

ಜನರು ರಾಜಕುಮಾರಿ ಬಿದ್ದಿದ್ದ ಸ್ಥಳಕ್ಕೆ ಬಂದರು. ಶಿವಕುಮಾರ್ `ಕೊಲೆಗಡುಕರಿಗೆ ಧಿಕ್ಕಾರ’ ಎಂದು ಕೂಗುತ್ತ ಕೂಗಿಸುತ್ತ ಬಂದ. ರಾಜಕುಮಾರಿಯ ಸ್ಥಿತಿಯನ್ನು ನೋಡಿದಾಗ ನಿಜವಾಗಿಯೂ ಕೊಲೆ ಯಾಗಿರುವುದು ಕಂಡು ಘೋಷಣೆಯನ್ನು ನುಂಗಿಕೊಂಡ. ಗುಟುಕು ಜೀವದ ರಾಜಕುಮಾರಿ ಕೊನೆಯುಸಿರು ಎಳೆದೇ ಬಿಟ್ಟಿದ್ದಳು. ಆಗ ಘೋಷಣೆಗಳು ಉಸಿರು ಕಟ್ಟಿದವು.

ಕತ್ತಲಲ್ಲಿ ಕರುಳು ಕೊಯ್ಯುವ ಮೌನ ಮಾತ್ರ ಜಾಗೃತವಾಗಿತ್ತು. ಅದೇ ಸಾವಿರ ಸಾವಿರ ಸಂಕಟಗಳಿಗೆ ದನಿಯಾಗಿತ್ತು.

ಮಂಜುಳ ರಾಜಕುಮಾರಿಯ ಸಾವಿನ ಸ್ಥಿತಿ ನೋಡಿ ಸಂಕಟದಲ್ಲಿ ಸುಡತೊಡಗಿದಳು. ಕೆನ್ನೆ ಮೇಲೆ ಕಂಬನಿ ಬರೆದಳು. ಗಂಟನ್ನು ಎದೆಗವಚಿಕೊಂಡೇ ಸತ್ತು ಬಿದ್ದಿದ್ದ ರಾಜಕುಮಾರಿಯ ಬಳಿಗೆ ಬಂದು ಮೆಲ್ಲನೆ ಗಂಟನ್ನು ಹೊರತೆಗೆದು ಬಿಚ್ಚಿ ನೋಡಿದಳು.

ಗಂಟಿನಲ್ಲಿ `ರಾಜಕುಮಾರಿ’ ಯ ಕಿರೀಟ, ಆಭರಣ, ಉಡುಪು ಎಲ್ಲವೂ ಇದ್ದವು!

ಅವುಗಳನ್ನು ಕಂಡು ಮಂಜುಳ ಶಿವಕುಮಾರನ ಕಡೆಗೆ ನೋಡಿದಳು. ಅವನಿಗೆ ಆ ಉಡುಪು, ಕಿರೀಟಾದಿ ಆಭರಣಗಳನ್ನು ಕಂಡಕೂಡಲೆ ರಾಜಕುಮಾರಿ ವೇಷದಲ್ಲಿ ಅಂದು ಕಾಣಿಸಿದ ರೂಪ ಕಣ್ಮುಂದೆ ಬಂತು. ಎದೆ ಕಡೆದ ಅನುಭವವಾಯ್ತು. ಕೂಡಲೇ ಮೇಲೆದ್ದ: ಒತ್ತಿ ಬರುವ ಕಣ್ಣೀರನ್ನು ಒರೆಸಿಕೊಂಡ.

ಸೀದಾ ಬುಲ್ಡೋಜರ್ ಮೇಲೆ ಹತ್ತಿದ. ಕೂಗಿ ಹೇಳತೊಡಗಿದ. `ಇನ್ನು ಮೇಲೆ ಈ ಕಂಪ್ನಿ ಜನ ಇಲ್ಲಿ ಕಾಲಿಡೊ ಹಾಗಿಲ್ಲ. ಇವತ್ತು ಈ ಬುಲ್ಡೋಜರ್ ನಮ್ಮ ರಾಜಕುಮಾರೀನ ಬಲಿ ತಗಂಡಿದೆ. ಆದ್ರೆ ಈ ಮಂಟಪಕ್ಕೆ ನಾವು ಮರು ಜೀವ ಕೊಟ್ಟೇ ಕೊಡ್ತವೆ. ಈ ಬುಲ್ಲೋಜರ್ ಜನಾನ ಹೊರ್ಗಡೆ ಹಾಕ್ತೇವೆ.’

ಆಗ. ಇದ್ದಕ್ಕಿದ್ದಂತೆ ಗುಂಪಿನ ಮಧ್ಯದಿಂದ ಹೆಡ್ ಮಾಸ್ಟರ್ ಮುಂದೆ ಬಂದರು. ಇಂಥ ಸಂದರ್ಭದಲ್ಲಿ ನನ್ನಂತೋರು ಸುಮ್ನೆ ಇರಾಕಾಗ್ತ ಇಲ್ಲ. ಇವತ್ತು ಇಲ್ಲಿ ಆಗಿರೋ ಬಲೀನೇ ಕೊನೇದಾಗ್ಬೇಕು. ಈ ಬುಲ್ಡೋಜರ್ನ ಹೊರ್ಗಡೆ ಹಾಕ್ಬೇಕು’ ಎಂದು ಅವರು ಹೇಳಿದಾಗ ಅನಿರೀಕ್ಷಿತ ವಿದ್ಯುತ್ ಸಂಚಾರವಾದಂತಾಯಿತು. ಉತ್ಸಾಹ ಉಕ್ಕಿತು. `ನಂಗೂ ಹಂಗೇ ಅನ್ನುಸ್ತೈತೆ. ನಾವು ಕೈ ಕಟ್ಕಂಡ್ ಕುಂತಿರಾಕಾಗಲ್ಲ’ ಎಂದು ಸಿದ್ದಣ್ಣನೂ ತನ್ನ ಮಾತು ಸೇರಿಸಿದಾಗ ಮತ್ತಷ್ಟು ಗೆಲುವು ಮೂಡತೊಡಗಿತು. ಜನರೆಲ್ಲ `ಓ’ ಎಂದು ಒಂದೇ ಉಸಿರಲ್ಲಿ ಕೂಗಿದರು.

ಮಂಜುಳ ಬುಲ್ಡೋಜರ್ ಮೇಲೆ ಹತ್ತಿದಳು. ಹೆಂಗಸರು ಯಾವುದ್ರಲ್ಲೂ ಹಿಂದೆ ಇಲ್ಲ. ಇವತ್ತು ನಮ್ಮ ಹೆಣ್ಮಗಳು ಈ ಬುಲ್ಡೋಜರ್ಗೆ ಬಲಿ ಆಗಿದಾಳೆ. ಇದನ್ನ ನಮ್ಮೆಲ್ಲರ ಮೇಲೆ ನಡೆದ ಹಲ್ಲೆ ಅಂತ ತಿಳ್ಕೊಬೇಕು. ಈ ಬುಲ್ಡೋಜರ್ನ ನಾವ್ ಬಲಿ ತಗೋಬೇಕು’. ಎಂದು ಕರೆಕೊಟ್ಟಳು.

ಜನರೆಲ್ಲ ಮತ್ತೊಮ್ಮೆ `ಓ’ ಎನ್ನುತ್ತ ಬುಲ್ಲೋಜರ್ ಕಡೆಗೆ ನುಗ್ಗಿದರು. ಈಗ ಮಾತ್ರ ಪೊಲೀಸರು ಸುಮ್ಮನಿರಲಿಲ್ಲ. ಲಾಠಿಗಳ ಸಮೇತ ಮೇಲೆರಗಿದರು. ಆದರೆ ಜನರು ಜಗ್ಗಲಿಲ್ಲ. ಬುಲ್ಡೋಜರನ್ನು ಗುದ್ದಿದರು ಕಲ್ಲಿನಲ್ಲಿ ಚಚ್ಚಿದರು. ಅದರ ಮೇಲೆ ಹತ್ತಿ ಕೇಕೆ ಹಾಕಿದರು. ಪೋಲೀಸರು ಎಳೆಯುತ್ತಿದ್ದರೂ ಲೆಕ್ಕಿಸದೆ ಅನೇಕ ಹೆಂಗಸರು ಬುಲ್ಡೋಜರ್ ಮೇಲೆ ಹತ್ತಿದರು. ಲಕ್ಷ್ಮಿಯೂ ಸೇರಿದಂತೆ ಅನೇಕ ಮಕ್ಕಳು ಮೇಲತ್ತಿ ಕುಣಿದಾಡಿದರು. ಪೋಲೀಸರು ಕಕ್ಕಾಬಿಕ್ಕಿಯಾದರು.

ಆಗ ಶಿವಕುಮಾರ್ ಕೂಗಿ ಹೇಳಿದ. `ನಮ್ಮ ಶಕ್ತಿ ಏನು ಅಂತ ತೋರ್ಸಿದ್ದೀವಿ. ಇನ್ನು ಇವರು ಯಾರಾದ್ರು ಇಲ್ಲಿಗೆ ಕಾಲಿಟ್ರೆ ನಾವ್ ಸುಮ್ಮಿರೊಲ್ಲ ಅಂತ ಎಚ್ಚರಿಕೆ ಕೊಟ್ಟಿದ್ದೀವಿ. ನಾಳೇನೇ ಸರ್ಕಾರದ ಆದೇಶ ವಾಪಸ್ ಆಗದೆ ಇದ್ರೆ ಉಪವಾಸ ಸತ್ಯಾಗ್ರಹ ಮಾಡ್ತೀವಿ. ಈಗ ಮೊದ್ಲು ರಾಜಕುಮಾರಿ ಶವಸಂಸ್ಕಾರ ಮಾಡೋಣ. ಇದೇ ಮಂಟಪದಲ್ಲಿ ಆಕೆ ಸಮಾಧಿ ಮಾಡಿ ನಿಜವಾದ ಸ್ವಪ್ನ ಮಂಟಪ ಕಟ್ಟೋಣ.’

ಆಗ ಕಂಡಕ್ಟರ್ ಕೆಂಚಪ್ಪ ಹೇಳಿದ: `ಇಷ್ಟಕ್ಕೇ ನಮ್ ಕೆಲ್ಸ ಮುಗೀಲಿಲ್ಲ.’

ಶಿವಕುಮಾರ್-ಮಂಜುಳ ಮತ್ತಿತರರೆಲ್ಲ ಕುತೂಹಲದಿಂದ ಕೆಂಚಪ್ಪನ ಕಡೆ ನೋಡಿದರು. ಕೆಂಚಪ್ಪ ಮುಂದುವರೆಸಿದ: `ಈ ಮಂಜುಳ ಮೇಡಂ ಈ ಊರಿಗೆ ಬಂದ ಗಳಿಗೆಯಿಂದ ಹಿಡ್ದು ಇಲ್ಲೀತನಕ ನೋಡ್ತಾ ಬಂದಿದ್ದೀನಿ. ಈ ಸ್ವಪ್ನ ಮಂಟಪದಾಗೆ ನಮ್ ಶಿವಕುಮಾರು-ಮಂಜುಳಾ ಮೇಡಂಗೆ ನಾವೆಲ್ಲ ಸೇರಿ ಮದ್ವೆ ಮಾಡ್ಬೇಕು.’

ಈ ಮಾತು ಮಂಜುಳಾ ಮತ್ತು ಶಿವಕುಮಾರ್‌ಗೇ ಅನಿರೀಕ್ಷಿತ ಆನಂದವೊ ಆತಂಕವೊ ಹೇಳಲಾಗದ ಅನುಭವ. ಶಿವಕುಮಾರನ ಅಪ್ಪ ಅಮ್ಮ ಒಂದು ಕ್ಷಣ ದಿಗ್ಭ್ರಂತರಾಗಿ ನಿಂತರು. ಎಲ್ಲಾ ಕಡೆ ಮೌನ.

ಕೆಂಚಪ್ಪ ಮತ್ತೆ ಮೌನ ಮುರಿದ: `ಅವ್ರ್ ಯಾವ್ ಜಾತಿ ಇವ್ರ್ ಯಾವ್ ಜಾತಿ ಅಂತ ಯೋಚನೆ ಮಾಡೀರ್ ಆಗಾದಿಲ್ಲ. ಮನುಷ್ಯರು ಜಾತಿ ಜಾತಿ ಅಂತ ಸಾಯಾ ಬದ್ಲು ನಮ್ ಮನಸ್ಗೆ ಯಾವ್ ಜಾತಿ ಐತೆ ಅಂತ ಎಲ್ಲಾ ಕೇಳ್ಕಾಬೇಕು. ಇಬ್ಬರ ಮನ್ಸೂ ಒಂದಾದ್ ಮೇಲೆ ಜಾತಿಗೀತಿ ಎಲ್ಲಾ ಚಟಾಪಟ್, ಎಲ್ಲಾರೂ ಏನಂತೀರ?’

ಆಗ ಹೆಡ್ ಮಾಸ್ಟರ್ ಬಾಯಿಬಿಟ್ಟರು: `ವಾತಾವರಣ ನೋಡಿದ್ರೆ ಕಂಡಕ್ಟರ್ ಕೆಂಚಪ್ಪನ್ ಮಾತೇ ಸರಿ ಅನ್ಸುತ್ತೆ, ತಾಯಿ ತಂದೆ ಒಪ್ಗೆ ಕೊಟ್ಟು ಕಾರ್ಯ ನಡ್ಸೋಕ್ ಮುಂದಾದ್ರೆ ನಮ್ಮೂರೇ ಒಂದು ಮಾದರಿ ಆದಂಗಾಗುತ್ತೆ.’

ಅದೇನು ಉತ್ಸಾಹವೋ! ಜನರೆಲ್ಲ ಓ ಎಂದು ಒಪ್ಪಿಗೆ ಸೂಚಿಸಿದರು. ಶಿವಕುಮಾರನ ಅಪ್ಪ-ಅಮ್ಮ ನಸುನಗುವಿನಲ್ಲೇ ಓಗೊಟ್ಟರು. ಮಂಜುಳ- ಶಿವಕುಮಾರ್ ಮನಸ್ಸಿನಲ್ಲಿ ಈಗ ನಿಜಕ್ಕೂ ರೋಮಾಂಚನ.

`ರಾಜಕುಮಾರಿ’ ಯ ಶವದ ಎದುರು ಸಂತೋಷದ ತೀರ್ಮಾನ! ಸಾವಿನಲ್ಲೂ ಹುಟ್ಟಿನ ಉತ್ಸಾಹ! ಸ್ವಪ್ನ ಮಂಟಪ!
*****
ಮುಗಿಯಿತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನಸು
Next post ಏ ಬಕಾಸುರ ಕಾಲ! ಸಿಂಹದುಗುರುಗಳನ್ನು

ಸಣ್ಣ ಕತೆ

 • ಏಕಾಂತದ ಆಲಾಪ

  ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

 • ಮಾದಿತನ

  ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

 • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

  ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

 • ಯಾರು ಹೊಣೆ?

  "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

 • ಡಿಪೋದೊಳಗಣ ಕಿಚ್ಚು…

  ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

cheap jordans|wholesale air max|wholesale jordans|wholesale jewelry|wholesale jerseys