ಹೀಗೊಂದು ನಾಯೀಕತೆ

ಹೀಗೊಂದು ನಾಯೀಕತೆ

ಅದೊಂದು ನಿರ್ಜೀವ ಊರು. ಸಂಜೆ ಯಾಗುವಾಗ ಆ ಊರಿಗೆ ರಂಗೇರುತ್ತದೆ. ಶಾಲೆಯ ಹತ್ತಿರದಲ್ಲೇ ಇರುವ ಕಳ್ಳು ಮತ್ತು ಸಾರಾಯಿ ಗಡಂಗುಗಳು ಆಗ ತುಂಬಿ ತುಳುಕುತ್ತವೆ. ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂದೆ ಮುಂದೆ ನೋಡುವವರೂ ಕೂಡ ಸಂಜೆ ಎಗ್ಗಿಲ್ಲದೆ ಗಡಂಗಿಗೆ ನುಗ್ಗುತ್ತಾರೆ. ಭಾನುವಾರ ಮತ್ತು ಸೋಮವಾರ ಅಲ್ಲೇ ಬಿದ್ಕೂಂಡಿರ್ತಾರೆ.

ಶಾಲೆಯ ಸುತ್ತಮುತ್ತ ಮನೆಗಳು ತಲೆ ಎತ್ತಿವೆ. ಅಲ್ಲಿರುವ ಖಾಲಿ ಸರಕಾರೀ ಜಾಗಗಳು ಊರ ಶ್ರೀಮಂತರಿಗೆ ದರಕಾಸ್ತಾಗಿ ದೊರೆತಿವೆ. ಶಾಲಾ ಮಕ್ಕಳಿಗೆ ಆಟದ ಮೈದಾನವಿಲ್ಲ. ಮಕ್ಕಳಿಗೆ ಗಡಂಗುಗಳೇ ಮನರಂಜನಾ ಸ್ಥಳಗಳಾಗಿವೆ. ಹಗಲ ದುಡಿತದಿಂದ ಬಳಲಿದ ಜನ, ದುಡಿತವೇ ಇಲ್ಲದೆ ದಿನಕಳೆದ ಜನ, ಸ್ವರ್ಗ ಕಾಣಲು ಸಂಜೆ ಅಲ್ಲಿಗೆ ಬರುತ್ತಾರೆ. ಪರಮಾತ್ಮ ಒಳಗಿಳಿಯುತ್ತಿರುವಂತೆ ಊರ ಪಾಲಿಟಿಕ್ಸು, ಕಚ್ಚೆ ಹರಕುತನದ ಕತೆಗಳೆಲ್ಲಾ ಬಿಚ್ಚಿಕೊಳ್ಳುತ್ತವೆ. ಮಾತುಕತೆ ಅದರೊಂದಿಗೆ ರಂಗೇರುತ್ತಾ ಹೋಗುತ್ತದೆ.

ಊರ ನಾಯಿಗಳಲ್ಲಿ ಹೆಚ್ಚಿನವು ಗಡಂಗುಗಳ ಎದುರೇ ಬಿದ್ದುಕೊಂಡಿರುತ್ತವೆ. ಅಂತಹ ನಾಯಿಗಳಲ್ಲಿ ಅದೂ ಒಂದು. ಅದರ ಮೈ ಬಣ್ಣ ಕಪ್ಪು ಬಿಳುಪು ಎರಕ ಹೊಯ್ದಂತೆ ಕಾಣುತ್ತದೆ. ಮುಂದಕ್ಕೆ ಬಾಗಿದ ಉದ್ದನೆಯ ಕಿವಿಗಳು ಅದಕ್ಕೊಂದು ವಿಶೇಷ ಆಕರ್ಷಣೆ ನೀಡಿವೆ. ಕಪ್ಪನೆ ಹಣೆಯ ಮಧ್ಯಭಾಗದಲ್ಲಿನ ಬಿಳಿ ಬೊಟ್ಟೊಂದು ಅದರ ಅಂದವನ್ನು ಹೆಚ್ಚಿಸಿದೆ. ಅದನ್ನು ದೇವರ ಬೊಟ್ಟು ಎಂದು ಗಡಂಗಿಗೆ ಬರುವವರು ಹೇಳುತ್ತಾರೆ. ಅದಕ್ಕೆಂದೇ ಆ ನಾಯಿಗೆ ತಿನ್ನಲು ಸ್ವಲ್ಪ ಹೆಚ್ಚೇ ಸಿಗುತ್ತದೆ.

ಮೊದಲು ಊರಿಂದ ದೂರದ ಗುಡ್ಡದಲ್ಲಿ ಗಡಂಗುಗಳಿದ್ದವು. ಅಲ್ಲಿಗೆ ಜೀಪಲ್ಲಿ ಕಳ್ಳು ಸಾರಾಯಿ ತಂದುಕೊಡುವುದು ಕಷ್ಟವಾಗುತ್ತದೆಂದು ಹೊಸ ಕಂಟ್ರಾಕ್ಟುದಾರ ಪಂಚಾಯತಿಗೆ ನಿವೇದನೆ ಮಾಡಿಕೊಂಡ. ಅಂದೇ ಕಾರ್ಯಪ್ರವೃತ್ತವಾದ ಪಂಚಾಯತು ಒಂದೇ ದಿನದಲ್ಲಿ ಗಡಂಗುಗಳಿಗೆ ಶಾಲೆಯ ಬಳಿಯ ಜಾಗವನ್ನು ಮಂಜೂರು ಮಾಡಿ ಬಿಟ್ಟಿತು. ಪಂಚಾಯತಿಯ ಈ ಕಾರ್ಯದಕತೆಯ ಬಗ್ಗೆ ಸ್ಥಳೀಯ ಪತ್ರಿಕೆಗಳು ಮುಖಪುಟದಲ್ಲಿ ಮೆಚ್ಚುಗೆಯ ವರದಿ ಪ್ರಕಟಿಸಿದವು.

ಗಡಂಗುಗಳು ಶಾಲೆಯ ಹತ್ತಿರಕ್ಕೆ ವರ್ಗಾವಣೆಯಾದ ಮೊದಲಲ್ಲಿ ನಾಯಿಗಳ ನಡುವೆ ಸಣ್ಣಪುಟ್ಟ ಜಗಳವಾಗುತ್ತಿತ್ತು. ಬಿಳಿಬೊಟ್ಟಿನ ನಾಯಿ ಆಗ ಕಚ್ಚಿಸಿಕೊಂಡಿತ್ತು ಕೂಡಾ. ಆದರೆ ಗಡಂಗಿಗೆ ಬರುವವರ ಸಂಖ್ಯೆಯಲ್ಲಿ ಅಸಾಧಾರಣ ಪ್ರಗತಿ ಕಾಣಿಸುವುದರೊಂದಿಗೆ ನಾಯಿಗಳಿಗೆ ಹೊಟ್ಟೆಗೆ ಸಾಕಷ್ಟು ಸಿಗಲು ಆರಂಭವಾಯಿತು. ಮಾಂಸ, ಮೀನು, ಮೊಟ್ಟೆ, ಕಡ್ಲೆ, ಚಕ್ಕುಲಿ, ಗೋಲಿಬಜೆ ಇತ್ಯಾದಿ. ಹೀಗಾಗಿ ನಾಯಿಗಳು ಬಹುಪಕ್ಷೀಯ ಶಾಂತಿ ಒಪ್ಪಂದ ಮಾಡಿಕೊಂಡಿವೆ. ಗಡಂಗುಗಳಿಗೆ ಬರುವವರಿಗೆ ತಮ್ಮ ಬಾಲಗಳಿಂದ ಚಾಮರ ಸೇವೆ ನಡೆಸುತ್ತವೆ.

ನಾಯಿಗಳ ಅದೃಷ್ಟ ಖುಲಾಯಿಸಬೇಕಾದರೆ ತುಂಬಾ ಪ್ರಮಾಣದಲ್ಲಿ ಪರಮಾತ್ಮ ಒಳಗಿಳಿಯಬೇಕು. ಗಡಂಗಿಗೆ ಪ್ರವೇಶಿಸುವ ಬಾಗಿಲಲ್ಲೇ ಬಾಲ ಅಲ್ಲಾಡಿಸುವ ನಾಯಿ ಗಳನ್ನು ‘ಅಲ್ಕಾ ಮುಂಡೇವು’ ಎಂದು ಬೈಯ್ದು ಕೈಯೆತ್ತುವ ಮಂದಿ ಕುಡಿತದ ಅಮಲೇರಿದಂತೆ ನಾಯಿಗಳ ಮೈದಡವಿ ತಮ್ಮ ಕುರುಕಲು ತಿಂಡಿಯಲ್ಲಿ ಅವುಗಳಿಗೆ ಪಾಲು ಕೊಡಲು ಶುರು ಮಾಡುತ್ತಾರೆ. ನಾಯಿಯಲ್ಲಿರುವ ನಾ ಎಂದರೆ ನಾರಾಯಣ ದೇವರು, ಈ ಅಂದರೆ ಈಶ್ವರ ದೇವರು ಎಂದು ವ್ಯಾಖ್ಯಾನಿಸಲು ತೊಡಗುತ್ತಾರೆ. ಅಮಲು ಏರುತ್ತಾ ಹೋದಂತೆ
ನಾಯಿಗಳನ್ನು ತಬ್ಬಿಕೊಂಡು ಗೋಳೋ ಎಂದು ಅಳುತ್ತಾರೆ. ನಾಯಿಗಳು ತಮ್ಮ ನಾಲಗೆ ಯಿಂದ ಅವರ ಕಣ್ಣೀರನ್ನು ನೆಕ್ಕಲು ತೊಡಗುತ್ತವೆ. ಆಗ ‘ಅಲಾ ಅಲಾ ಏನ್‌ ಸುರುವಾತು ಈ ಅಲ್ಕಾ ಮುಂಡೇವುಕ್ಕೆ’ ಎನ್ನುತ್ತಾ ರೋಮಾಂಚನಗೊಂಡು ಅವುಗಳ ಬಾಯಿಗೆ ಬಾಟ್ಲಿಯಲ್ಲಿರುವುದನ್ನು ಹೊಯ್ಯಲು ತೊಡಗುತ್ತಾರೆ.

ಈರಪ್ಪ ಆ ಗಡಂಗುಗಳ ಖಾಯಂ ಗಿರಾಕಿಗಳಲ್ಲಿ ಒಬ್ಬ. ತಿಂಗಳ ಮೊದಲ ದಿನ ಅವನು ಔಟ್‌ ಆಗುವವರೆಗೂ ಕುಡಿಯುತ್ತಾನೆ. ಅವನಿಗೆ ಹೆಂಡದೊಡನೆ ಸಾರಾಯಿ ಕೂಡಾ ಆಗಬೇಕು. ಅವೆರಡರ ಕಾಕ್‌ಟೈಲ್‌ ಅಧ್ಭುತವಾದ ಕಿಕ್ಕು ಕೊಡುತ್ತದೆ ಎನ್ನುವುದು ಅವನ ಅನುಭವಾಮೃತ. ರೆವಿನ್ಯೂ ಆಫೀಸ್‌ ಜವಾನನಾಗಿರುವ ಅವನ ಬಾಯಲ್ಲಿ ಕುಡಿಯದೆ ಇದ್ದಾಗಲೂ ಇಂಗ್ಲೀಷ್‌ ಶಬ್ದಗಳು ಬರುತ್ತಿರುತ್ತವೆ. ಅದಕ್ಕೇ ಗಡಂಗಿಗೆ ಬರುವವರೆಲ್ಲರಿಗೂ ಅವನೆಂದರೆ ತುಂಬಾ ಗೌರವ. ಅವನ ಸಾಯೇಬ್ರು ಸಿಕ್ಕಾಪಟ್ಟೆ ಪವರ್‌ಫುಲ್ಲು. ಚೀಪು ಮಿನಿಸ್ಟ್ರನ್ನು ಕೂಡಾ ಯಾವಾಗೆಂದರಾಗ ನೋಡಬಲ್ಲವರು ಎಂಬ ಖ್ಯಾತಿ ಇದ್ದುದರಿಂದ ಈರಪ್ಪನ ಬಗ್ಗೆ ಜನರಿಗೆ ಒಂತರಾ ಭಕ್ತಿ ಇತ್ತು. ಸಕತ್‌ಲೋಡ್‌ ಆದಾಗ ಈರಪ್ಪ ಊರ ದೊಡ್ಡ ಜನರ ಕಚ್ಚೆ ಹರಕುತನವನ್ನು ಸ್ವಯಂ ಕಂಡವನಂತೆ ವರ್ಣರಂಜಿತವಾಗಿ ಚಪ್ಪರಿಸುವಂತೆ ವಿವರಿಸುತ್ತಿದ್ದ. ಹಾಗಾಗಿ ಅವನು ಮತ್ತಷ್ಟು ಗೌರವವನ್ನು ಸಂಪಾದಿಸಿಕೊಂಡಿದ್ದ.

ಈರಪ್ಪನಿಗೆ ನಾಯಿಗಳೆಂದರೆ ಅಷ್ಟಕಷ್ಟೆ. ಓವರ್‌ಲೋಡು ಆದಾಗಲೂ ಅವನು ನಾಯಿಗಳಿಗೆ ಏನ್ನೂ ಕೊಡುತ್ತಿರಲಿಲ್ಲ. ಒಂದು ಬಾರಿ ಅವನು ಓವರ್‌ಲೋಡಾಗಿ ವಾಲಾಡುತ್ತಾ ಹೋಗುತ್ತಿದ್ದಾಗ ಕಂತ್ರಿ ನಾಯಿಗಳು ಅವನನ್ನು ಅಟ್ಟಿಸಿಕೊಂಡು ಬಂದಿದ್ದವು. ಅವ ಕಲ್ಲೊಂದನ್ನು ಎತ್ತಿ ಒಗೆದಾಗ ಅವುಗಳಲ್ಲಿ ದೊಡ್ಡದಾದ ನಾಯಿಯೊಂದು ಗುರ್ರೆಂದು ಹಾರಿ ಅವನ ಮೀನ ಖಂಡವನ್ನೇ ಕಚ್ಚಿ ಎಳೆದಿತ್ತು. ಹೆದರಿ ಅವ ಹದಿಮೂರು ಇಂಜಕ್ಷನ್ನು ಹೊಕ್ಕುಳ ಸುತ್ತ ಚುಚ್ಚಿಸಿಕೊಳ್ಳಬೇಕಾಗಿ ಬಂತು. ಅದಕ್ಕೆಂದೇ ಗಡಂಗಿನೆದುರು ನಾಯಿಗಳನ್ನು ಕಂಡಾಗ ‘ಅಲ್ಕಾ ಬೆಹನ್‌ಚೋದ್‌’ ಎಂದು ಹಲ್ಲು ಕಡಿದು ಓಡಿಸಲೆತ್ನಿಸುತ್ತಿದ್ದ.

ಬಿಳಿಬೊಟ್ಟಿನ ನಾಯಿಗೆ ಈರಪ್ಪ ಗದರುವಾಗಲೂ ಸಿಟ್ಟು ಬರುತ್ತಿರಲಿಲ್ಲ. ಒಂದು ಬಾರಿ ಕುಡುಕರು ಗಡಂಗಿನೆದುರೇ ಹೊಡೆದಾಡಲು ಶುರು ಮಾಡಿದಾಗ ಅದ್ಯಾರೋ ಪೋಲೀಸರಿಗೆ ಫೋನ್‌ ಮಾಡಿದರು. ತಕ್ಷಣ ಜೀಪಲ್ಲಿ ಬಂದ ಪೋಲೀಸರು ಲಾಠಿ ಚಾರ್ಜು ಮಾಡುವಾಗ ಬಿಳಿ ಬೊಟ್ಟಿನ ನಾಯಿ ಗುರ್ರೆಂದು ಪೋಲೀಸನೊಬ್ಬನ ಮೇಲೆ ಎಗರಿ ಬಿದ್ದದ್ದು, ಆಗ ಎಲ್ಲಾ ಪೋಲೀಸರು ಒಟ್ಟಾಗಿ ಅದರ ಮೇಲೆ ಸಾಮೂಹಿಕ ದಾಳಿ ಮಾಡಿ ಅದನ್ನು ಓಡಿಸಬೇಕಾಗಿ ಬಂದದ್ದು ಗಡಂಗಿನಲ್ಲಿ ದಿನನಿತ್ಯದ ಮಾತು.

ಅಂದು ತಿಂಗಳ ಮೊದಲ ದಿನ. ಭರ್ತಿ ಜೇಬಿನ ಈರಪ್ಪ ಸ್ವಲ್ಪ ಮುಂಚಿತವಾಗಿಯೇ ಗಡಂಗಿಗೆ ಬಂದಿದ್ದ. ಅವನ ಹೆಂಡತಿ ಮೂರನೆಯ ಹೆರಿಗೆಗೆಂದು ತವರಿಗೆ ಹೋಗಿದ್ದಳು. ಬಾಸ್‌ ಬೆಂಗಳೂರಿಗೆ ಮೀಟಿಂಗಿಗೆ ಹೋಗಿದ್ದುದರಿಂದ ಈರಪ್ಪ ಹಾಯಾಗಿದ್ದ. ಚಾಮರ ಬೀಸಿದ ನಾಯಿಗಳನ್ನು ‘ತಥ್‌! ಅಲ್ಕಾ ಬೆಹನ್‌ಚೋದ್‌’ ಎಂದು ಕೈಯೆತ್ತಿ ಓಡಿಸಿದ. ಆರಾಮವಾಗಿ ಕೂತು ಕುಡಿಯಲು ಆರಂಭಿಸಿದ.

ಈರಪ್ಪ ಕುಡಿಯುತ್ತಲೇ ಇದ್ದ. ಎಷ್ಟೋ ಹೊತ್ತಿನ ಮೇಲೆ ನಿಧಾನವಾಗಿ ಎದ್ದ. ತವರಲ್ಲಿರುವ ಹೆಂಡತಿಯ ನೆನಪಾಗಿ, ಅಲ್ಕಟ್‌ ಮುಂಡೆ… ಎಸ್ಟು ಎರ್ತೀಯೇ… ನಿನ್ನವ್ವನ್‌… ಎಂದು ಬೈದ. ನಾಯಿಗಳನ್ನು ನೋಡಿ ಕ್ಯಾಕರಿಸಿ ಉಗಿದ. ವಾಲಾಡುತ್ತಾ ಒಂದಷ್ಟು ದೂರ ಹೋದ. ರಸ್ತೆಯೇ ಎದ್ದು ಬಂದು ಮುಖಕ್ಕೆ ಅಪ್ಪಳಿಸಿದಂತಾಗಿ ದೊಪ್ಪನೆ ಚರಂಡಿಗೆ ಬಿದ್ದ. ಇದೆಲ್ಲಾ ಅಲ್ಲಿ ತೀರಾ ಸಾಮಾನ್ಯವಾದುದರಿಂದ ಅವನ ಬಗ್ಗೆ ಯಾರೂ ಯೋಚಿಸಲಿಲ್ಲ. ಅವನನ್ನು ಎಬ್ಬಿಸಲೂ ಇಲ್ಲ. ಆದರೆ ಬಿಳಿ ಬೊಟ್ಟಿನ ನಾಯಿ ಮಾತ್ರ ಅವನ ಹತ್ತಿರ ಹೋಗಿ ಕೂತುಬಿಟ್ಟಿತು. ಈರಪ್ಪನ ಬಳಿ ಯಾರಾದರೂ ಸುಳಿದರೆ ಬೊಗಳಿ ಓಡಿಸತೊಡಗಿತು.

ಮರುದಿನ ಸೂರ್ಯನ ಬೆಳಕು ಮುಖಕ್ಕೆ ಬಿದ್ದಾಗ ಈರಪ್ಪನಿಗೆ ಎಚ್ಚರವಾಯಿತು. ತಾನೆಲ್ಲಿದ್ದೇನೆಂದು ತಿಳಿಯಲು ಅವನಿಗೆ ಸ್ವಲ್ಪ ಹೊತ್ತು ಹಿಡಿಯಿತು. ನೋಡಿದರೆ ಬಿಳಿ ಬೊಟ್ಟಿನ ನಾಯಿ ತನ್ನ ಪಕ್ಕದಲ್ಲೇ ಕೂತಿದೆ. ಜೇಬು ಮುಟ್ಟಿ ನೋಡಿಕೊಂಡ. ನೋಟು ಗಳನ್ನು ತೆಗೆದು ಎಣಿಸಿ ನೋಡಿದ. ಹಣವೆಲ್ಲಾ ಹಾಗೇ ಇದೆ. ಈಗವನಿಗೆ ನಾಯಿ ಅಲ್ಲೇ ಕೂತದ್ದೇಕೆಂದು ಅರ್ಥವಾಯಿತು. ಅವನು ಪ್ರೀತಿಯಿಂದ ನಾಯಿಯ ಮೈದಡವಿ ‘ನೀನು ದೇವ್ರೇ ಕಣಪ್ಪಾ’ ಎಂದು ಅದನ್ನು ತಬ್ಬಿಕೊಂಡ. ಅವನ ಕಣ್ಣುಗಳಿಂದ ನೀರು ಸುರಿಯಲಾರಂಭಿಸಿತು. ಅವನು ನಾಯಿಯನ್ನು ಬಾಚಿ ಎತ್ತಿಕೊಂಡು ಗಡಂಗಿನ ಒಳಗೆ ಹೋಗಿ ನಾಲ್ಕು ಬೇಯಿಸಿದ ಮೊಟ್ಟೆ ಗಳನ್ನು ಕೊಂಡು ಅದಕ್ಕೆ ತಿನ್ನಿಸತೊಡಗಿದ.
*****
೧೯೯೬

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಳಲು
Next post ಲಾಂಛನ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

cheap jordans|wholesale air max|wholesale jordans|wholesale jewelry|wholesale jerseys