ರಂಗಣ್ಣನ ಕನಸಿನ ದಿನಗಳು – ೨೬

ರಂಗಣ್ಣನ ಕನಸಿನ ದಿನಗಳು – ೨೬

ಉಗ್ರಪ್ಪನ ವಾದ

ಉಗ್ರಪ್ಪನ ಸಸ್ಪೆಂಡ್ ಆರ್ಡರ್ ಹೊರಡಿಸಿ ಹತ್ತಿರ ಹತ್ತಿರ ಒಂದು ತಿಂಗಳಾಗುತ್ತ ಬಂತು. ನಾಗೇನಹಳ್ಳಿಯ ಪಾಠ ಶಾಲೆಯ ಪ್ರಾರಂಭೋತ್ಸವದಿಂದ ಮನಸ್ಸು ಹರ್ಷಯುಕ್ತವಾಗಿದ್ದರೂ ರಂಗಣ್ಣನಿಗೆ ಆಲೋಚನೆ ತಪ್ಪಲಿಲ್ಲ. ತನಗಿರುವುದು ಒಂದು ತಿಂಗಳು ಸಸ್ಪೆಂಡ್ ಮಾಡುವ ಅಧಿಕಾರ ಮಾತ್ರ. ತಾನು ಎಲ್ಲ ರಿಕಾರ್ಡುಗಳನ್ನೂ ಸಾಹೇಬರಿಗೆ ಹೊತ್ತು ಹಾಕಿ ರಹಸ್ಯದ ವರದಿಯನ್ನು ಬರೆದು ಉಗ್ರಪ್ಪನನ್ನು ಡಿಸ್ಟಿಕ್ಟಿನಿಂದಲೇ ವರ್ಗಾಯಿಸ ಬೇಕೆಂದೂ, ಅವನನ್ನು ಮನ್ನಿಸಿ ಇದ್ದ ಸ್ಥಳದಲ್ಲಿಯೇ ಇಟ್ಟರೆ ತನ್ನಿಂದ ಮುಂದೆ ಕೆಲಸ ಮಾಡುವುದು ಸಾಧ್ಯವಿಲ್ಲವೆಂದೂ ಕಡಾಖಂಡಿತವಾಗಿ ತಿಳಿಸಿದ್ದಾಯಿತು. ಸಾಹೇಬರಿಂದ ಏನೊಂದು ಆರ್ಡರೂ ಬರಲಿಲ್ಲ. ಬೇರೆ ಡಿಸ್ಟ್ರಿಕ್ಟಿಗೆ ವರ್ಗಮಾಡಿಸುವುದಕ್ಕೆ ಹೆಚ್ಚು ಕಾಲ ಹಿಡಿಯುವುದೆಂದು ರಂಗಣ್ಣನಿಗೆ ತಿಳಿದಿತ್ತು. ಆ ಬೇರೆ ಜಿಲ್ಲೆಯ ಅಧಿಕಾರಿಯೊಡನೆ ಪತ್ರ ವ್ಯವಹಾರ ನಡೆಸಿ ಅಲ್ಲಿರುವ ಖಾಲಿ ಜಾಗಕ್ಕೆ ಕಳಿಸಿಯೋ, ಪರಸ್ಪರ ವಿನಿಮಯದಿಂದಲೋ ಉಗ್ರಪ್ಪನನ್ನು ತೊಲಗಿಸಬೇಕಾಗಿತ್ತು. ಈ ಮಧ್ಯೆ ಒಂದು ತಿಂಗಳ ಅವಧಿ ಮುಗಿದು ಹೋದರೆ ಅವನು ಪುನಃ ಕೆಲಸಕ್ಕೆ ಬಂದು ಸೇರಿಕೊಳ್ಳಬಹುದು. ಆಗ ಏನು ಮಾಡಬೇಕು? ಅವನನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲವೆಂದು ಹೇಳುವುದಕ್ಕಾಗುವುದಿಲ್ಲ ಬಲಾತ್ಕಾರದಿಂದ ರಜ ಕೊಟ್ಟು ಕಳಿಸಿದರೆ ಮೇಲಿನವರು ಒಪ್ಪದೆ ಆಕ್ಷೇಪಿಸಬಹುದು. ಹೀಗೆ ಆಲೋಚನಾತರಂಗಗಳಲ್ಲಿ ಮಗ್ನನಾಗಿ ರಂಗಣ್ಣ ಕಚೇರಿಯಲ್ಲಿ ಕುಳಿತಿದ್ದಾಗ ಬಾಗಿಲ ಮುಂದೆ ಒಂದು ಅಗಲವಾದ ನೆರಳು ಬಿದ್ದಂತೆ ಕಂಡಿತು. ಆ ನೆರಳು ಅದೃಶ್ಯವಾಗಿ ಉಗ್ರಪ್ಪನೇ ಸಾಕ್ಷಾತ್ತಾಗಿ ನಿಂತಿದ್ದನು! ದೊಡ್ಡ ಬೂದು ಗುಂಬಳಕಾಯಿನಂತೆ ದಪ್ಪ ಬೋಳು ತಲೆ! ಸ್ವಲ್ಪ ಕುಳಿ ಬಿದ್ದಿದ್ದರೂ ತೇಜಸ್ವಿಯಾಗಿದ್ದ ಕಣ್ಣುಗಳು! ಮುಖಕ್ಕೆಲ್ಲ ರೆಟ್ಟೆ ರಟ್ಟೆ ಗಾತ್ರದ ಮೀಸೆಗಳು! ಕ್ಷೌರ ಮಾಡಿಸಿಕೊಳ್ಳದೇ ಇದ್ದುದರಿಂದ ಬ್ರಷ್ಷಿನಂತೆ ಬೆಳೆದಿದ್ದ ಒರಟು ಗಡ್ಡ! ಖಾದಿಯ ಒಂದು ಜುಬ್ಬವನ್ನು ತೊಟ್ಟು ಕೊಂಡು ಖಾದಿಯ ಪಂಚೆಯನ್ನು ಲುಂಗಿ ಸುತ್ತಿಕೊಂಡು, ಮಡಸಿದ್ದ ಖಾದಿ ಅಂಗವಸ್ತ್ರವನ್ನು ಭುಜದಮೇಲೆ ಹಾಕಿಕೊಂಡು, ಕೈಯಲ್ಲಿ ದಪ್ಪವಾದ ದೊಣ್ಣೆಯೊಂದನ್ನು ಹಿಡಿದುಕೊಂಡು ಎದುರಿಗೆ ರಾಕ್ಷಸಾಕಾರದಲ್ಲಿ ನಿಂತಿದ್ದನು! ರಂಗಣ್ಣ ಧೈರ್ಯಶಾಲಿಯೇ ಆಗಿದ್ದರೂ ಅವನ ಎದೆ ಝಲ್ಲೆಂದಿತು; ರಕ್ತ ವೇಗವಾಗಿ ಹರಿಯತೊಡಗಿತು; ಮುಖದಲ್ಲಿ ಕಳೆ ಇಳಿಯಿತು. ಉಗ್ರಪ್ಪನು ಕೈ ದೊಣ್ಣೆಯನ್ನು ಬಾಗಿಲ ಹೊರಗೆ ಒರಗಿಸಿ ಹೊಸ್ತಿಲ ಬಳಿ ನಿಂತುಕೊಂಡನು. ನಮಸ್ಕಾರವನ್ನು ಮಾಡಲಿಲ್ಲ. ರಂಗಣ್ಣ ಒಂದು ಕ್ಷಣದಲ್ಲಿ ಧೈರ ತಂದುಕೊಂಡು,

`ಒಳಕ್ಕೆ ಬನ್ನಿ ಮೇಷ್ಟ್ರೇ! ಕುಳಿತುಕೊಳ್ಳಿ’ ಎಂದು ಹೇಳಿದನು.

ಉಗ್ರಪ್ಪ ಒಳಕ್ಕೆ ಹೋಗಿ ಮೇಜಿನ ಎದುರಂಚಿನಲ್ಲಿ ರಂಗಣ್ಣನಿಗೆ ಎದುರಾಗಿ ನಿಂತುಕೊಂಡನು.

`ಕುಳಿತುಕೊಳ್ಳಿ. ಕುಳಿತುಕೊಂಡೇ ಮಾತನಾಡಿ ಉಗ್ರಪ್ಪನವರೇ!’

`ಇಲ್ಲ ಸ್ವಾಮಿ! ನಾನು ಕುಳಿತು ಕೊಳ್ಳುವುದಿಲ್ಲ. ನಿಂತುಕೊಂಡೇ ನಾಲ್ಕು ಮಾತನ್ನು ಹೇಳಿ ಹೊರಟುಹೋಗುತ್ತೇನೆ.’

‘ಏನನ್ನು ಹೇಳಬೇಕೆಂದಿರುವಿರೋ ಅದನ್ನು ಸಮಾಧಾನದಿಂದಲೇ ಹೇಳಿ, ಕುಳಿತುಕೊಂಡು ಹೇಳಿದರೆ ಸಮಾಧಾನಚಿತ್ತವಿರುತ್ತದೆ.’

`ಈಗ ಸಮಾಧಾನಚಿತ್ತದಿಂದಲೇ ಬಂದಿದ್ದೆನೆ ಸ್ವಾಮಿ! ಕೋಪ ತಾಪಗಳೇನೂ ಇಲ್ಲ!’

`ಒಳ್ಳೆಯದು ಮೇಷ್ಟ್ರೇ!’

`ಸ್ವಾಮಿ! ತಮ್ಮನ್ನು ಮೆಚ್ಚಿ ಕೊಂಡೆ! ತಮ್ಮ ಧ್ಯೆರ್ಯವನ್ನು ಮೆಚ್ಚಿ ಕೊಂಡೆ! ದೇಹಶಕ್ತಿ ಹಲವರಿಗೆ ಇರಬಹುದು. ಹೇಡಿಗಳಾಗಿದ್ದರೆ ಆ ದೇಹ ಶಕ್ತಿ ಕಾರ್ಯಗತವಾಗುವುದಿಲ್ಲ ಧೈರ್ದಿಂದಲೇ ಕಾರ್ಯ ಸಾಧನ! ತಮ್ಮ ಧೈರ್ಯವನ್ನು ಮೆಚ್ಚಿ ಕೊಂಡೆ! ಭೇಷ್!’

`ನಿಮ್ಮನ್ನು ದಂಡಿಸಿದ್ದು ಧೈರ್ಯದ ವಿಚಾರವೆ? ಬಡಮೇಷ್ಟುಗಳನ್ನು ದಂಡಿಸುವುದು ಹೇಡಿತನವೆಂದೇ ನಾನು ತಿಳಿದು ಕೊಂಡಿದ್ದೇನೆ.’

`ಹಾಗಲ್ಲ ಸ್ವಾಮಿ! ನಾನು ಪುಂಡ! ಯಾರನ್ನೂ ಲಕ್ಷಮಾಡತಕ್ಕವನಲ್ಲ. ಜೀವದ ಹಂಗು ಇಲ್ಲದವನು! ಆದ್ದರಿ೦ದ ನನ್ನ ಮಾತಿಗೆ ಯಾರೂ ಬರುತ್ತಿರಲಿಲ್ಲ; ಬರುವ ಧೈರ್ಯವೇ ಅವರಿಗಿರುತ್ತಿರಲಿಲ್ಲ. ನನ್ನ ಆಕಾರವನ್ನು ನೋಡಿದರೇನೆ ಸಾಕು,- ಏನು ಉಗ್ರಪ್ಪನವರೇ? ಎಂದು ಕುಶಲಪ್ರಶ್ನೆ ಮಾಡಿ ಅವರಾಗಿ ಮೊದಲೇ ನಮಸ್ಕಾರ ಮಾಡುತ್ತಿದ್ದರು! ನಾನು ಅದೇ ಜೋರಿನಿಂದ ಧೂರ್ತನಾಗಿ ವರ್ತಿಸುತ್ತಿದ್ದೆ. ನನಗೆ ತಾವು ಪಾಠ ಕಲಿಸಿಬಿಟ್ಟಿರಿ! ನೀವೂ ಜೀವದ ಹಂಗಿಲ್ಲದವರು ಎಂದು ನನಗೆ ಮನವರಿಕೆಯಾಗಿ ಹೋಯಿತು. ಭೇಷ್! ಇದ್ದರೆ ಇಂಥ ಗಂಡು ಇನ್ ಸ್ಪೆಕ್ಟರು ಇರಬೇಕು ಎಂದು ಮೆಚ್ಚಿಕೊಂಡಿದ್ದೇನೆ ಸ್ವಾಮಿ! ಆದರೆ ತಾವು ದುಡುಕಿ ನನಗೆ ಅನ್ಯಾಯ ಮಾಡಿದ್ದೀರಿ! ಅದನ್ನು ತಿಳಿಸಬೇಕೆಂದು ನಾನು ಬಂದಿದ್ದೇನೆ.’

`ಮೇಷ್ಟ್ರೆ! ನಾನು ಅನ್ಯಾಯ ಮಾಡಿದ್ದೇನೆಯೆ? ಅನ್ಯಾಯವೆಂದು ತೋರಿಸಿಕೊಟ್ಟರೆ ಸಸ್ಪೆನ್ಷನ್ ಆರ್ಡರನ್ನು ಈ ಕ್ಷಣ ವಜಾ ಮಾಡಿ, ಈ ಅವಧಿಯನ್ನು ಪ್ರಿವಿಲೆಜ್ ರಜವನ್ನಾಗಿ ಬದಲಾಯಿಸಿ, ಈ ದಿನವೇ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತೇನೆ.’

‘ಪುನಃ ಕೆಲಸಕ್ಕೆ ಬರಬೇಕೆಂಬ ಆಸೆಯಿಂದ ಆ ಮಾತನ್ನು ನಾನು ಹೇಳಲಿಲ್ಲ ಸ್ವಾಮಿ! ನಾನು ಪುನಃ ಕೆಲಸಕ್ಕೆ ಬರುವುದಿಲ್ಲ, ಈ ಗುಲಾಮ ಗಿರಿಯನ್ನು ತಪ್ಪಿಸಿಬಿಟ್ಟರಿ! ತಮಗೆ ನಾನು ಬಹಳ ಕೃತಜ್ಞನಾಗಿದ್ದೇನೆ.’

`ಸಸ್ಪೆನ್ಷನ್ ಆರ್ಡರನ್ನು ವಜಾ ಮಾಡಿದರೆ?’

`ವಜಾ ಮಾಡಿದರೂ ನಾನು ಬರುವುದಿಲ್ಲ, ತಮ್ಮ ಕಾಲಿಗೆ ಬಿದ್ದು, ಕ್ಷಮಾಪಣೆ ಕೇಳಿಕೊಂಡು, ವಜಾಮಾಡಿಸಿಕೊಂಡೆನೆಂದು ಜನ ಆಡುತ್ತಾರೆ ಸ್ವಾಮಿ! ಈಗ ಆಗಿರುವ ಆಪಮಾನದ ಜೊತೆಗೆ ಅದೊಂದು ಅಪಮಾನ ಹೆಚ್ಚಾಗಿ ಬರುತ್ತದೆ. ನರಮನುಷ್ಯರಿಗಾರಿಗೂ ಈ ತಲೆಯನ್ನು ಬಗ್ಗಿಸುವುದಿಲ್ಲವೆಂಬ ನನ್ನ ಶಪಥಕ್ಕೆ ಭಂಗ ಬಂದಂತಾಗುತ್ತದೆ. ಈ ಸಸ್ಪೆನ್ಷನ್ನಿ ನಿಂದ ತಮ್ಮ ಕೀರ್ತಿ ಜಗತ್ಪ್ರಸಿದ್ಧವಾಯಿತು! ನನ್ನ ಅಪಮಾನ ಲೋಕ ಪ್ರಚಾರವಾಯಿತು! ತಾವೀಗ ಏನು ದುರಸ್ತು ಮಾಡಿದರೂ ಮೊದಲಿನ ಉಗ್ರಪ್ಪನಾಗುವುದಿಲ್ಲ, ತಲೆಯೆತ್ತಿಕೊಂಡು ಪಾಳೆಯಗಾರನಾಗಿ ಮೆರೆಯುತ್ತಿದ್ದವನು ಅಪಮಾನವನ್ನು ಅನುಭವಿಸಿಬಿಟ್ಟೆ! ಈ ಜನಾರ್ದನಪುರದಲ್ಲಿ ಮುಖ ತೋರಿಸದಂತ ಭಂಗಪಟ್ಟೆ! ನಾನು ಮತ್ತೆ ಕೆಲಸಕ್ಕೆ ಸೇರಿ ಉಪಾಧ್ಯಾಯರ ಸಂಘದ ಸಭೆಗಳಲ್ಲಿ ಹೇಗೆ ಮುಖವೆತ್ತಿಕೊಂಡು ಕುಳಿತು ಕೊಳ್ಳಲಿ! ಅಪ್ಪಣೆ ಯಾಗಲಿ ಸ್ವಾಮಿ!’

`ನಾನೇನು ಮಾಡಲಿ ಮೇಷ್ಟ್ರೆ! ನನಗೂ ಬಹಳ ವ್ಯಸನವಾಗುತ್ತತದೆ. ನೀವು ಹಾಗೆಲ್ಲ ಅವಿಧೇಯತೆಯಿಂದ ನಡೆದುಕೊಳ್ಳದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಸರಕಾರದ ನೌಕರಿಯಲ್ಲಿದ್ದ ಮೇಲೆ ನಾವೆಲ್ಲ ಶಿಸ್ತಿಗೊಳಪಟ್ಟಿರಬೇಕು; ತಗ್ಗಿ ನಡೆಯಬೇಕು.’

`ಅದೇ ಸ್ವಾಮಿ ನನಗೂ ತಮಗೂ ವ್ಯತ್ಯಾಸ! ತಾವು ನನಗೆ ಅನ್ಯಾಯ ಮಾಡಿದ್ದೀರೆಂದು ನಾನು ಕಾರಣವಿಲ್ಲದೆ ಹೇಳಲಿಲ್ಲ. ಸರಕಾರದ ಮಾತು ಆಡುತ್ತೀರಿ; ನೌಕರಿಯ ಮಾತು ಆಡುತ್ತೀರಿ; ತಗ್ಗಿ ನಡೆಯಬೇಕು ಎಂದು ಹೇಳುತ್ತೀರಿ. ತಮ್ಮನ್ನು ಕೇಳುತ್ತೇನೆ. ಹೇಳಿ ಸ್ವಾಮಿ! ತಾವು ಓದಿದವರು, ನಮ್ಮ ಇಲಾಖೆಯಲ್ಲಿ ತಮ್ಮಷ್ಟು ಬುದ್ಧಿವಂತರು ನಾಲ್ಕೈದು ಜನ ಇರುವರೋ ಇಲ್ಲವೋ ಹೇಳಲಾರೆ. ನಿಧಾನವಾಗಿ ಆಲೋಚನೆ ಮಾಡಿ ಸ್ವಾಮಿ! ಸರಕಾರ ಎಂದರೆ, ಅದನ್ನು ನಡೆಸುವ ನಾಲ್ಕು ಜನ ಮನುಷ್ಯರು ತಾನೇ! ಸರಕಾರಕ್ಕೆ ರೂಪ ಇದೆಯೇ? ಗುಣ ಇದೆಯೇ? ಎಲ್ಲ ಆ ನಾಲ್ವರ ಕಾರುಬಾರು! ಸರಕಾರದ ಗೌರವ ಎಂದರೆ ಆ ನಾಲ್ವರ ಗೌರವ! ಅವರೇ ಮಾಡುವ ಹುಕುಮುಗಳು ಜಾರಿಗೆ ಬರದಿದ್ದರೆ ಅವರ ಗೌರವ ಉಳಿಯುತ್ತದೆಯೇ? ಸರಕಾರದ ಗೌರವಕ್ಕೆ ಕುಂದುಕವಲ್ಲವೇ? ಜಾರಿಗೆ ಬಾರದ ಹುಕುಮುಗಳನ್ನು ಏತಕ್ಕೆ ಮಾಡಬೇಕು? ಹೇಳಿ ಸ್ವಾಮಿ!-ಇಲ್ಲಿ ಹೇಸಿಗೆ ಮಾಡಬಾರದು! ಹೇಸಿಗೆ ಮಾಡಿದವರು ದಂಡನೆಗೊಳಗಾಗುತಾರೆ!- ಎಂದು ಬೋರ್ಡುಗಳನ್ನು ಊರಿನಲ್ಲೆಲ್ಲ ನೆಡುತ್ತಾರೆ. ಆ ಬೋರ್ಡಿನ ಕಂಬದ ಸುತ್ತಲೂ ಹೇಸಿಗೆಯನ್ನು ಎಲ್ಲರೂ ಮಾಡುತ್ತಾರೆ! ಆ ಕಂಬಕ್ಕನ ಮೂತ್ರಾಭಿಷೇಕ ಮಾಡುತ್ತಾರೆ! ಸರಕಾರಿ ನೌಕರರು, ಕಡೆಗೆ ತಪ್ಪಿತಸ್ಥರನ್ನು ಹಿಡಿಯಬೇಕಾದ ಪೋಲೀಸಿನವರೇ ಮೂತ್ರಾಭಿಷೇಕ ಮಾಡುವುದನ್ನು ನಾನು ನೋಡಿದ್ದೇನೆ. ಅಪಮಾನವನ್ನು ತಪ್ಪಿಸಲು ಪ್ರತಿಭಟಿಸಿದರೆ ನಾನು ಅಪರಾಧಿಯೇ? ನನಗೆ ದಂಡನೆ ಮಾಡಬಹುದೇ? ಸರಕಾರಕ್ಕೆ ನಿತ್ಯ ಅಪಮಾನವಾಗುತ್ತಿರುವುದನ್ನು ನಾನು ತಪ್ಪಿಸಿದರೆ ನನಗೆ ಸಸ್ಪೆಂಡ್ ಮಾಡಬಹುದೇ? ಬಸ್ಸುಗಳಲ್ಲಿ ನೋಡಿ ಸ್ವಾಮಿ! ಬೀಡಿ ಸಿಗರೇಟುಗಳನ್ನು ಖಂಡಿತ ಸೇದಬಾರದು- ಎಂದು ಬೋರ್ಡು ! ಒಂದು ಕೈಯಲ್ಲಿ ಚಕ್ರ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಸಿಗರೇಟ್ ಹಚ್ಚಿ ಕೊಳ್ಳುತ್ತ, ರಾಜಾರೋಷಾಗಿ ಹೊಗೆಯನ್ನೆಲ್ಲ ಆ ಬೋರ್ಡಿಗೇ ಬಿಡುವ ಡ್ರೈವರನ್ನು ನೋಡಿಲ್ಲವೇ ನೀವು ? ಮುಂದುಗಡೆ ಸೀಟುಗಳಲ್ಲಿ ಕುಳಿತುಕೊಳ್ಳುವ ಸರಕಾರದ ಅಧಿಕಾರಿಗಳೇ ಆ ಬೋರ್ಡಿಗೆ ಧೂಪಾರತಿ ಎತ್ತುವುದನ್ನು ನೋಡಿಲ್ಲವೇ ನೀವು ? ಬಸ್ಸಿನ ಒಳಗಡೆಯಲ್ಲಿ ಸಿಗರೇಟುಗಳನ್ನು ಹಚ್ಚಿ ಕೊಂಡು ಎದುರಿಗೆ ಕುಳಿತಿರುವ ಸಭ್ಯರ ಮತ್ತು ಸ್ತ್ರೀಯರ ಮುಖಗಳಿಗೇನೆ ಹೊಗೆ ಬಿಡುವ ಮನುಷ್ಯರನ್ನು ನೋಡಿಲ್ಲವೇ ನೀವು ? ಏಕೆ ಸ್ವಾಮಿ ನಿಮಗೆ ಆ ಬೋರ್ಡು ? ಸರಕಾರ ತನ್ನ ಆಜ್ಞಾಭಂಗವನ್ನು ಸಹಿಸುತ್ತಿದ್ದರೆ ಅದು ಸರಕಾರವೇ ? ರೈಲುಗಳಲ್ಲಿ ನೋಡಿ! ಇಪ್ಪತ್ತು ಜನ ಕುಳಿತು ಕೊಳ್ಳುವ ಗಾಡಿಯಲ್ಲಿ ಅರುವತ್ತು ಜನ ! ಒಳಗೆ ಬೋರ್ಡು ನೋಡಿದರೆ- ಇಪ್ಪತ್ತು ಜನ ಕುಳಿತುಕೊಳ್ಳುವುದು – ಎಂದು ಲಿಖಿತ ! ಆ ಬೋರ್ಡು ಹಾಕಿ ಅಪಮಾನ ಪಟ್ಟು ಕೊಳ್ಳಬೇಡಿ. ಎಂತಿದ್ದರೂ ನಮ್ಮ ಜನ ಕುರಿಗಳು! ಸರಕಾರಕ್ಕೆ ತನ್ನ ಮಾತು ನಡೆಯಬೇಕೆಂಬ ಸ್ವಾಭಿಮಾನವಿಲ್ಲ. ದೊಡ್ಡ ದೊಡ್ಡ ಅಧಿಕಾರಿಗಳಲ್ಲೇ ಲಂಚರುಷುವತ್ತುಗಳು! ಎಲ್ಲ ಕಡೆಯೂ ಸರಕಾರದ ಆಜ್ಞೋಲ್ಲಂಘನೆಗಳು! ಗತಿಯಿಲ್ಲದ ನಾಲ್ಕು ಜನರನ್ನು ದಂಡಿಸಿ ಶಿಸ್ತು ಕಾಪಾಡುವುದು ಎಂದರೇನು?’

`ನನ್ನ ಮೇಲೆ ದೋಷಾರೋಪಣೆಗಳನ್ನು ಹೊರಿಸಿ ಸಸ್ಪೆಂಡ್ ಮಾಡಿದಿರಿ! ಅದು ಅನ್ಯಾಯವೆಂದೇ ಹೇಳುತ್ತೇನೆ. ನಮ್ಮ ಇಲಾಖೆಯ ರೂಲ್ಸೂರೆಗ್ಯುಲೇಷನ್ನು ಗಳನ್ನು ತಾವು ನೋಡಿದ್ದೀರಿ, ಪ್ರೈಮರಿ ತರಗತಿಗಳಲ್ಲಿ ಇಪ್ಪತೈದು-ಮುವ್ವತ್ತು ಮಕ್ಕಳು; ಮಿಡಲ್ ಸ್ಕೂಲಿನ ತರಗತಿಗಳಲ್ಲಿ ನಲವತ್ತು ಮಕ್ಕಳು, ಎಂದು ನಿಗದಿ ಮಾಡಿದ್ದಾರೆ. ಏತಕ್ಕೋಸ್ಕರ ನಿಗದಿಮಾಡಿದ್ದಾರೆ ಸ್ವಾಮಿ? ಸಾವಧಾನವಾಗಿ ಆಲೋಚನೆ ಮಾಡಿ, ತಾವು ವಿದಾಭ್ಯಾಸ ಪದ್ಧತಿಗಳನ್ನು ಚೆನ್ನಾಗಿ ಓದಿಕೊಂಡಿದ್ದೀರಿ; ಮನಶ್ಯಾಸ್ತ್ರದ ತತ್ತ್ವಗಳನ್ನು ತಿಳಿದುಕೊಡಿದ್ದೀರಿ. ಒಬ್ಬ ಉಪಾಧ್ಯಾಯನು ಎಷ್ಟು ಜನ ಮಕ್ಕಳಿಗೆ ನ್ಯಾಯವಾಗಿ ಪಾಠ ಹೇಳಬಹುದು ? ತರಗತಿ ಯಲ್ಲಿ ಎಷ್ಟು ಜನ ಮಕ್ಕಳಿದ್ದರೆ ವಿದ್ಯಾಭಿವೃದ್ಧಿಗೆ ಮತ್ತು ಸಂವಿಧಾನಕ್ಕೆ ಅನುಕೂಲ ? ಎಂಬ ಅಂಶಗಳನ್ನು ಗಮನಿಸಿ ಅಲ್ಲವೇ ನಿಗದಿ ಮಾಡಿರುವುದು ? ನನ್ನ ತರಗತಿಯಲ್ಲಿ ನಲವತ್ತೈದು ಜನ ಮಕ್ಕಳು! ಕುಳಿತು ಕೊಳ್ಳುವುದಕ್ಕೆ ಎಲ್ಲರಿಗೂ ಬೆಂಚುಗಳಿಲ್ಲ, ಹಲಗೆಗಳಿಲ್ಲ, ಕೊಟಡಿ ಚಿಕ್ಕದು; ಕಿಟಕಿಗಳಲ್ಲಿ, ನೆಲದ ಮೇಲೆ, ನನ್ನ ಮೇಜಿನ ಪಕ್ಕಗಳಲ್ಲಿ, ಎಲ್ಲ ಕಡೆಯೂ ಮಕ್ಕಳು ಕುಳಿತಿರುತ್ತಾರೆ. ಬರೆಯಲು ಬೋರ್ಡಿನ ಹತ್ತಿರ ಹೋಗಬೇಕಾದರೆ ಹೆಜ್ಜೆ ಯಿಡುವುದಕ್ಕೆ ಜಾಗವಿಲ್ಲ ; ಬೋರ್ಡಿನ ಮೇಲೆ ಬರೆದರೆ ಅರ್ಧ ಜನ ಮಕ್ಕಳಿಗೆ ಕಾಣಿಸುವುದಿಲ್ಲ. ಹೌದು ಸ್ವಾಮಿ! ನಾನು ಹೇಳಿದೆ: ಮುವ್ವತ್ತು ಹುಡುಗರಿಗಿಂತ ಹೆಚ್ಚಾಗಿದ್ದರೆ ನಾನು ಪಾಠ ಮಾಡುವುದಿಲ್ಲ ಎಂದು ಹೇಳಿದೆ; ಹೆಚ್ಚು ಹುಡುಗರನ್ನು ಕಳಿಸಿಬಿಟ್ಟೆ. ಸರಕಾರ ಕೊಡುವ ಅಲ್ಪ ಸಂಬಳಕ್ಕೆ ಹೆಚ್ಚು ಜನ ಹುಡುಗರನ್ನೆಲ್ಲ ಸೇರಿಸಿಕೊಂಡು ಉಸಿರು ಕಳೆದುಕೊಂಡು ನಾನೇಕೆ ಪಾಠಮಾಡಬೇಕು? ನಾನೇಕೆ ಸಾಯಬೇಕು ? ನಾನು ಸತ್ತರೆ ನನ್ನ ಸಂಸಾರಪೋಷಣೆಗೆ ಸರಕಾರ ನೆರವಾಗುತ್ತದೆಯೆ? ತಾವು ಆ ಹೆಡ್‌ಮೇಷ್ಟರ ಮಾತು ಕೇಳಿ ಕೊಂಡು ನನ್ನನ್ನು ಸಸ್ಪೆಂಡ್ ಮಾಡಿದಿರಿ. ರೋಗಕ್ಕೆ ಮದ್ದು ಹುಡುಕದೆ ರೋಗಿಯನ್ನೇ ಕೊಂದುಬಿಟ್ಟಿರಿ. ಮಾಡಬಹುದೇ ಸ್ವಾಮಿ?’

`ಇಲಾಖೆಗೂ ರೂಲ್ಸು ರೆಗ್ಯುಲೇಷನ್ ಗೊತ್ತಿದೆ ಮೇಷ್ಟ್ರೆ! ಊರ ಜನರ ಒತ್ತಾಯದಿಂದ, ಸಾಹೇಬರ ನಿರ್ದೆಶದಿಂದ ನಿಗದಿಯ ಸಂಖ್ಯೆ ಗಿಂತ ಹೆಚ್ಚಾಗಿ ಸೇರಿಸಬೇಕಾಗುತ್ತದೆ. ಏನು ಮಾಡಬೇಕು?’

`ಬಡಮೇಷ್ಟರುಗಳ ಬಲಿಯಾಗಬೇಕು ಎಂದು ಹೇಳುತ್ತೀರಾ ಸ್ವಾಮಿ ! ಊರ ಜನ ಒತ್ತಾಯಮಾಡಿದರೆ ಸರ್ಕಾರಕ್ಕೆ ತಗಾದೆ ಕೊಟ್ಟು ನೀವು ಬೇರೊಂದು ಸ್ಕೂಲನ್ನು ಸ್ಥಾಪಿಸಿರಿ! ಹೆಚ್ಚಿಗೆ ಉಪಾಧ್ಯಾಯರನ್ನು ಸರ್ಕಾರದಿಂದ ಕೊಡಿಸಿಕೊಡಿ! ಈ ದೊಡ್ಡ ಊರಿಗೆಲ್ಲ ಒಂದೇ ಫೈಮರಿ ಸ್ಕೂಲು! ನಾನೂರು ಐವತ್ತು ಜನ ಮಕ್ಕಳು! ಒಂದೊಂದು ತರಗತಿಯಲ್ಲಿ ನಲವತ್ತು ಐವತ್ತು ಮಕ್ಕಳು! ಸ್ಥಳ ಕಿಷ್ಕಿಂಧ. ಕುರಿಗಳನ್ನು ರೊಪ್ಪದಲ್ಲಿ ಕೂಡಿದಂತೆ ಮಕ್ಕಳನ್ನು ಕೂಡುತ್ತಾರೆ. ಊರ ಜನ,-ನಮ್ಮ ಮಕ್ಕಳನ್ನು ಸ್ಕೂಲಿಗೆ ಹಾಕಿದರೂ ವಿದ್ಯೆಯೇ ಬರುವುದಿಲ್ಲ, ಮೇಷ್ಟರು ಪಾಠವೇ ಮಾಡುವುದಿಲ್ಲ ಎಂದು ನಮ್ಮನ್ನು ದೂರಬೇಕು! ಸಾಹೇಬರುಗಳು ವಿದ್ಯಾಭಿವೃದ್ಧಿ ಏನೂ ಆಗಿಲ್ಲ, ಮೇಷ್ಟ್ರುಗಳು ಕಳ್ಳಾಟ ಆಡುತ್ತಾರೆ ಎಂದು ನಮ್ಮನ್ನು ದಂಡಿಸಬೇಕು! ಇದು ನ್ಯಾಯವೇ ಸ್ವಾಮಿ? ಹಿಂದಿನ ಡಿ. ಇ. ಓ ಸಾಹೇಬರು ಆ ದಿನ ಮಿಡಲ್ ಸ್ಕೂಲಿಗೆ ಹೋಗಿ ತನಿಖೆಯ ಶಾಸ್ತ್ರ ಮಾಡಿ, ಪರೀಕ್ಷೆಯ ಫಲಿತಾಂಶಗಳು ತೃಪ್ತಿಕರವಾಗಿಲ್ಲ ಎಂದು ಆಕ್ಷೇಪಿಸಿ, ಎಲ್ಲ ಮೇಷ್ಟರುಗಳಿಗೂ ಐದು ಐದು ರುಪಾಯಿ ಜುಲ್ಮಾನೆ ಹಾಕಿದರಲ್ಲ ! ಒಂದೊಂದು ತರಗತಿಯಲ್ಲಿ ಅರುವತ್ತೈದು ಮಕ್ಕಳಿದ್ದಾರೆ; ಹೆಚ್ಚಾಗಿ ಮೇಷ್ಟರುಗಳನ್ನು ಕೊಟ್ಟಿಲ್ಲ. ಸತ್ಯವಾಗಿ ಹೇಳುತ್ತೇನೆ ಸ್ವಾಮಿ! ನಾನು ಆ ದಿನ ಮಿಡಲ್ ಸ್ಕೂಲಿನಲ್ಲಿದ್ದಿದ್ದರೆ ಜೀವದ ಹಂಗು ತೊರೆದು ಆ ಸಾಹೇಬರನ್ನು ನನ್ನ ದೊಣ್ಣೆಯಿಂದ ಚೆಚ್ಚಿ ಬಿಡುತ್ತಿದ್ದೆ! ಯಾವಾಗ ನೀವು ಸಂವಿಧಾನದ ನಿಯಮಗಳನ್ನು ಪಾಲಿಸುವುದಿಲ್ಲವೋ, ಯಾವಾಗ ನೀವು ರೂಲ್ಸು ರೆಗ್ಯುಲೇಷನ್ನುಗಳನ್ನು ಉಲ್ಲಂಘಿಸುತ್ತೀರೋ ಆವಾಗ ವಿದ್ಯಾಭಿವೃದ್ಧಿಯ ಮಾತು ಆಡಬೇಡಿ, ಶಿಸ್ತಿನ ಮಾತು ಎತ್ತಬೇಡಿ, ನಮಗೆ ದಂಡನೆ ಗಿ೦ಡನೆ ಮಾಡಬೇಡಿ. ನಮಗಿಷ್ಟವಿದ್ದರೆ ನಾವು ಪಾಠ ಮಾಡುತ್ತೇವೆ; ಇಷ್ಟವಿಲ್ಲದಿದ್ದರೆ ಮಲಗಿ ನಿದ್ರೆ ಮಾಡುತ್ತೇವೆ. ರೂಲ್ಸುಗಳನ್ನು ಪಾಲಿಸುವುದಕ್ಕೂ ಉಲ್ಲಂಘಿಸುವುದಕ್ಕೂ ನಿಮಗೆ ಸ್ವಾತಂತ್ರ್ಯ! ಪಾಠ ಹೇಳುವುದಕ್ಕೂ ಬಿಡುವುದಕ್ಕೂ ನಮಗೆ ಸ್ವಾತಂತ್ರ್ಯ!

‘ಸರಕಾರದ ನೌಕರರಿಗೆ ಸ್ವಾತಂತ್ರ್ಯವಿಲ್ಲ ಮೇಷ್ಟ್ರೆ!’

‘ನಾವು ಗುಲಾಮರೇನು ಸ್ವಾಮಿ ? ಸರಕಾರದ ಅಂಗಗಳಲ್ಲಿ ನಾವೂ ಒಂದಲ್ಲವ? ನಮ್ಮ ಸ್ಕೂಲಿನ ಕಾಗದಪತ್ರಗಳು ಸರಕಾರಿ ಪತ್ರಗಳಲ್ಲವೇ ? ತಮ್ಮ ಕಚೇರಿಯ ಕಾಗದ ಪತ್ರಗಳು ಸರಕಾರದ ರಿಕಾರ್ಡುಗಳಲ್ಲವೇ ? ತಮ್ಮ ಕಚೇರಿಯ ವ್ಯವಹಾರವೆಲ್ಲ ಮೈಸೂರು ಸರ್ಕಾರಿಯ ಮೇಲೆ ನಡೆಯುವುದಿಲ್ಲವೇ ? ನಾವು ಗುಲಾಮರೇ ಸ್ವಾಮಿ ? ಮನುಷ್ಯರಲ್ಲವೇ ನಾವು ? ಆತ್ಮ ಗೌರವವಿಲ್ಲವೇ ನಮಗೆ ? ಮನುಷ್ಯ ಸಹಜವಾದ ಹಕ್ಕುಗಳಿಲ್ಲವೇ ನಮಗೆ ? ಮದಾಂಧರಾದ ಅಧಿಕಾರಿಗಳು ನಮ್ಮನ್ನು ಗುಲಾಮರಂತೆ ಕಂಡರೆ ನಾವು ಪ್ರತಿಭಟಿಸಬೇಕು, ಅವರಿಗೆ ಬುದ್ದಿ ಕಲಿಸಬೇಕು. ನಾನು ಹಿಂದೆ ಡೆಪ್ಯುಟಿ ಕಮಿಷನರ್ ಸಾಹೇಬರಿಗೆ ಹಾಗೆ ಬುದ್ದಿ ಕಲಿಸಿದೆ ಸ್ವಾಮಿ! ತಮಗೆಲ್ಲ ತಿಳಿದಿರಬೇಕು. ತಾವೇ ನ್ಯಾಯ ನೋಡಿ ! ಸರಕಾರ ಬಡ ಮೇಷ್ಟರುಗಳಿಗೆ ಕೊಡುವುದು ಅಲ್ಪ ಸಂಬಳ, ಹೊಟ್ಟೆಗೆ ಸಾಲದು, ಬಟ್ಟೆಗೆ ಸಾಲದು;-ನಮಗೆ ಹೊಟ್ಟೆಗೆ ಸಾಕಾದಷ್ಟು ಕೊಡಿ, ಇಲ್ಲದಿದ್ದರೆ ನಾವು ಕೆಲಸ ಮಾಡುವುದಿಲ್ಲ ಎಂದು ಹೇಳಿದರೆ, ಸರಕಾರವನ್ನು ಪ್ರತಿಭಟಿಸ ಕೂಡದು ಎನ್ನುತ್ತೀರಿ! ಅರೆಗಂಜಿ ಕಾಲಗಂಜಿಗಳಲ್ಲೇ ತೃಪ್ತಿ ಪಟ್ಟು ಕೊಳ್ಳಬೇಕು ಎನ್ನುತ್ತೀರಿ! ಕೆಲಸ ತೆಗೆಯುವುದನ್ನು ನೋಡಿದರೆ, ಇಪ್ಪತೈದು ಮಕ್ಕಳಿಗೆ ಪಾಠ ಹೇಳಿಕೊಡುವುದಕ್ಕೆ ಬದಲಾಗಿ ನಲವತ್ತೈದು ಮಕ್ಕಳಿಗೆ ಪಾಠ ಹೇಳು ಎನ್ನುತ್ತೀರಿ! ನಾನು ಹೇಳುವುದಿಲ್ಲ ಎಂದು ಪ್ರತಿಭಟಿಸಿದರೆ,-ನಿನಗೆ ಸ್ವಾತಂತ್ರ್ಯವಿಲ್ಲ! ನೀನು ಗುಲಾಮ ಎನ್ನುತೀರಿ! ಅಧಿಕಾರವಿದೆ ಎಂದು ಸಸ್ಪೆಂಡ್ ಮಾಡುತ್ತೀರಿ!’

`ಹೌದು ಮೇಷ್ಟ್ರೇ! ನಿಮ್ಮ ಅಸಮಾಧಾನಗಳನ್ನೂ ಅಹವಾಗಳನ್ನೂ ವಿನಯದಿಂದ ಹೇಳಿಕೊಳ್ಳಬೇಕು. ಒರಟಾಟ ಮಾಡಬಾರದು.’

‘ಸ್ವಾಮಿ ! ನಾನೇನು ಒರಟಾಟ ಮಾಡಿದ್ದೆನೆ ? ಹೆಚ್ಚು ಮಕ್ಕಳಿಗೆ ಪಾಠ ಮಾಡುವುದಿಲ್ಲ ಎಂದು ಹೇಳಿದ್ದು೦ಟು; ಪಾಠ ಮಾಡದೆ ನಿಲ್ಲಿಸಿದು೦ಟು. ಆ ವಿಚಾರದಲ್ಲಿ ಹಿಂದೆಯೇ ಹೆಡ್‌ಮೇಷ್ಟರಿಗೆ ಹಲವು ಬಾರಿ ಅರಿಕೆ ಮಾಡಿಕೊಂಡಿದ್ದೇನೆ. ಹೆಚ್ಚಾಗಿ ಮೇಷ್ಟುಗಳನ್ನು ಕಳಿಸಿ ಕೊಡಲಿಲ್ಲ, ಪರಿಹಾರ ದೊರೆಯಲಿಲ್ಲ. ಸಂಘದ ಸಭೆಗಳಲ್ಲಿ, ತಮ್ಮ ಅಧ್ಯಕ್ಷತೆಯಲ್ಲಿಯೇ ರೆಜಲ್ಯೂಷನ್ನುಗಳನ್ನು ಮಾಡಿದ್ದೇವೆ; ಮೇಲಕ್ಕೆ ಕಳಿಸಿದ್ದೆವೆ. ಪರಿಹಾರ ದೊರೆಯಲಿಲ್ಲ. ಇನ್ನು ಮುಷ್ಕರ ಹೂಡದೆ ಏನು ಮಾಡಬೇಕು? ಇತರ ಮೇಷ್ಟುಗಳು ಭಯಸ್ಥರು; ಆತ್ಮಗೌರವ ಎಂಬುದನ್ನು ತಿಳಿಯದವರು. ನಾನು ಪುಂಡ! ಮುಷ್ಕರ ಹೂಡಿದೆ! ರೇ೦ಜಿನಲ್ಲಿ ನೂರಾರು ಜನ ನನ್ನಂತೆಯೇ ಮುಷ್ಕರ ಹೂಡಿದ್ದಿದ್ದರೆ ಸರ್ಕಾರ ಕಣ್ಣು ಬಿಟ್ಟು ನೋಡಿ ಪರಿಹಾರ ಕೊಡುತ್ತಿತ್ತು!

`ಎಲ್ಲವೂ ಸರಿಯೇ ಉಗ್ರಪ್ಪನವರೇ! ನೀವು ಮೊದಲೇ ನನ್ನ ಹತ್ತಿರ ಬಂದು ಈ ವಾದವನ್ನೆಲ್ಲ ಮಾಡಬಹುದಾಗಿತ್ತಲ್ಲ. ಅದಕ್ಕೆ ಬದಲು ಹೆಡ್‌ಮೇಷ್ಟರನ್ನು ಬೆದರಿಸಿದಿರ; ಮೆಮೋ ಪುಸ್ತಕವನ್ನು ಕಿತ್ತಿಟ್ಟು ಕೊಂಡಿರಿ. ಇವುಗಳನ್ನು ನೀವು ಮಾಡಬಹುದೇ?’

`ಸ್ವಾಮಿ! ನಾನು ಅಹಂಕಾರ ಸ್ವಭಾವದವನು, ಸ್ವಪ್ರತಿಷ್ಠೆಯುಳ್ಳವನು. ಜೊತೆಗೆ ನಮ್ಮ ಮುಖಂಡರ ಏಜೆಂಟಾಗಿ ಇದ್ದು ಕೊಂಡು ಅವರ ಬೆಂಬಲದಿಂದ ಗರ್ವಿತನಾಗಿ ಕೆಟ್ಟು ಹೋದವನು! ಮೇಲ್ಪಟ್ಟ ಅಧಿಕಾರಿಗಳನ್ನು ಕಂಡು ಸಮಾಧಾನ ಮತ್ತು ಸಮಜಾಯಿಷಿಗಳನ್ನು ಹೇಳುವುದು ಈ ಚೇತನಕ್ಕೆ ವಿರುದ್ದವಾದ್ದು! ತಾವೇ ಪಾಠಶಾಲೆಗೆ ಬಂದು ವಿಚಾರಿಸುತ್ತೀರಿ ಎಂದು ನನ್ನ ನಂಬಿಕೆಯಿತ್ತು. ಆದ್ದರಿಂದ ನಾನು ಬರಲಿಲ್ಲ. ಆ ಹೆಡ್‌ಮೇಷ್ಟ್ರು! ಮುಚ್ಚು ಮರೆಯಿಲ್ಲದೆ ಹೇಳುತ್ತೇನೆ. ಆತನಿಗೆ ಹೆಡ್‌ಮೇಷ್ಟ್ರ ಕೆಲಸವೇ ಗೊತ್ತಿಲ್ಲ; ನಾಲಾಯಖ್ ಮನುಷ್ಯ; ತಾಕತ್ ಇಲ್ಲದವನು. ಹುಡುಗರನ್ನು ಸುಮ್ಮನೇ ತರಗತಿಗಳಲ್ಲಿ ತುಂಬುವ ಬದಲು ತಂದೆ ತಾಯಿಗಳಿಗೆ ಖಂಡಿತವಾಗಿ ಹೇಳಬೇಕಾಗಿತ್ತು; ಸ್ಥಳವಿಲ್ಲ, ಸೇರಿಸುವುದಿಲ್ಲ ಎಂದು ಹೇಳಬೇಕಾಗಿತ್ತು, ತಮಗೆ ಕಾಗದ ಬರೆದು ಹೆಚ್ಚು ಮಕ್ಕಳು ಬರುತ್ತಿದಾರೆ, ಹೆಚ್ಚು ಮೇಷ್ಟ್ರುಗಳನ್ನು ಕೊಡಿ ಎಂದು ಕೇಳಬೇಕಾಗಿತ್ತು. ಹಾಗೆ ರಿಪೋರ್ಟು ಮಾಡಿದ್ದಾರೆಯೇ ಸ್ವಾಮಿ?’

`ಮಾಡಿದ ಹಾಗೆ ಜ್ಞಾಪಕವಿಲ್ಲ ಮೇಷ್ಟ್ರು!’

‘ನನ್ನ ಪ್ರತಿಭಟನೆ ಹೊಸದಲ್ಲ; ವರ್ಷವರ್ಷವೂ ಇದೆ. ತಮ್ಮ ನೋಟಿಸಿಗೂ ಆಗಾಗ ಬಂದಿರುತ್ತದೆ. ಆದ್ದರಿಂದ ತಮ್ಮ ಬಳಿಗೆ ಬಂದು ಹೊಸದಾಗಿ ಹೇಳಬೇಕಾದ್ದು ಏನೂ ಇರಲಿಲ್ಲ. ಒಂದುವೇಳೆ ನನ್ನ ನಡತೆ ತಪ್ಪಾಗಿಯೇ ಇದ್ದಿರಲಿ ಸ್ವಾಮಿ! ಆ ಹೆಡ್ ಮೇಷ್ಟ್ರು ಬೇರೆ ಒಂದು ಕಾಗದದಲ್ಲಿ ರಹಸ್ಯವಾಗಿ ಬರೆದು ಕವರಿನಲ್ಲಿಟ್ಟು ಗೋ೦ದು ಹಚ್ಚಿ ನನ್ನ ಹತ್ತಿರ ಕಳಿಸಿ ಸಮಜಾಯಿಷಿ ಕೇಳಿದ್ದಿದ್ದರೆ, ನಾನು ವಿವರವಾಗಿ ಸಮಜಾಯಿಷಿ ಕೊಡುತ್ತಿದ್ದೆ, ಸಮಜಾಯಿಷಿ ಕೇಳುವವರು ಹತ್ತು ಜನ ನೋಡುವ ಮೆಮೋ ಪುಸ್ತಕದಲ್ಲಿ ಬರೆಯುತ್ತಾರೆಯೇ ಸ್ವಾಮಿ? ಹಾಗೆ ಬರೆಯಬಹುದೇ? ಅವರು ಮೆಮೋ ಪುಸ್ತಕದಲ್ಲಿ ಬರೆದು ಆಳಿನ ಹತ್ತಿರ ಕೊಟ್ಟು ಕಳಿಸಿದರು. ನಾನು ಪಾಠ ಮಾಡುತ್ತಿದ್ದರೆ ಆಳು ತಂದು ನನ್ನ ಮುಖಕ್ಕೆ ಹಿಡಿದ! ಸ್ವಾಮಿ! ನನ್ನ ಸ್ವಭಾವಕ್ಕೂ ಆ ಆಳು ಮಾಡಿದ್ದಕ್ಕೂ ಹೊಂದುತ್ತದೆಯೇ? ಅವನಿಗೆ ಕಪಾಳಕ್ಕೆ ಎರಡು ಬಿಗಿದೆ! ಇದು ತಪ್ಪೇ ಸ್ವಾಮಿ? ಹೆಡ್‌ಮೇಷ್ಟ್ರು ಬಂದು ಕೇಳಿದಾಗ ಹಾಗೆಲ್ಲ ಮೆಮೊ ಮಾಡಬೇಡಿ ಎಂದು ಗದರಿಸಿದೆ. ಪುನಃ ಆ ಹೆಡ್‌ಮೇಷ್ಟ್ರು ಅದೇ ಮೆಮೋ ಪುಸ್ತಕದಲ್ಲಿ ನನ್ನ ಸಮಜಾಯಿಷಿ ಕೇಳಿ ಮತ್ತೆ ಬರೆದು ಕಳಿಸಿದರು. ನಾನು ಆ ಪುಸ್ತಕವನ್ನೇ ಕಿತ್ತು ಕೊಂಡು ಹತ್ತಿರ ಇಟ್ಟು ಕೊಂಡೆ, ತಾವು ನ್ಯಾಯ ಹೇಳಿ ಸ್ವಾಮಿ! ನಾನು ಪುಂಡ! ಒಪ್ಪಿಕೊಳ್ಳುತ್ತೇನೆ. ನನ್ನ ಮಾತಿಗೆ ಬರಬಾರದೆಂದು ತಿಳಿದಿದ್ದರೂ ಸಹ ನನಗೆ ಅಪಮಾನ ಮಾಡಬೇಕೆಂದು ಅವರು ಎಲ್ಲವನ್ನೂ ಮಾಡಿದರು. ಜೊತೆಗೆ ತಮ್ಮ ಹತ್ತಿರ ಬಂದು ಚಾಡಿಗಳನ್ನೂ ಹೇಳಿದರು. ನಾನು ಎಲ್ಲವನ್ನೂ ಸೈರಿಸಿಕೊಂಡು,- ಮಕ್ಕಳೊಂದಿಗರು ನೀವು! ಹುಷಾರಾಗಿರಿ!-ಎಂದು ಹೇಳಿದೆ.’

ರಂಗಣ್ಣನು ಹಾಗೆಯೇ ಆಲೋಚನೆ ಮಾಡುತ್ತ ಎರಡು ನಿಮಿಷ ಸುಮ್ಮನಿದ್ದನು. ಉಗ್ರಪ್ಪನೂ ಎರಡು ನಿಮಿಷಗಳ ಕಾಲ ಸುಮ್ಮನಿದ್ದನು. ಏನಾದರೊಂದನ್ನು ಹೇಳಿ ಆ ಸಂಕಷ್ಟ ಸನ್ನಿವೇಶದಿಂದ ಪಾರಾಗ ಬೇಕೆಂದು ರಂಗಣ್ಣನು,

`ಮೇಷ್ಟ್ರೇ! ನಾನು ಸ್ಕೂಲಿಗೆ ಬಂದ ದಿನ ನೀವು ವಿನಯದಿಂದ, ವಿಧೇಯತೆಯಿಂದ, ನಡೆದುಕೊಂಡಿದ್ದಿದ್ದರೆ ಈ ವಿಷಾದ ಪ್ರಕರಣವೇ ಆಗುತ್ತಿರಲಿಲ್ಲ. ನನ್ನ ವಿಚಾರದಲ್ಲಿಯೂ ಒರಟೊರಟಾಗಿ ನಡೆದು ಕೊಂಡಿರಿ’ ಎಂದು ಹೇಳಿದನು.

`ಸ್ವಾಮಿ! ತಾವು ನನ್ನನ್ನು ಸಸ್ಪೆಂಡ್ ಮಾಡುವ ಸಂಕಲ್ಪದಿಂದಲೇ ಆ ದಿನ ಪಾಠಶಾಲೆಗೆ ಬಂದಿರಿ! ನಾನು ವಿನಯದಿಂದ ಹೇಳಿದ್ದರೂ ನನ್ನನ್ನು ರೇಗಿಸಿ ನನ್ನ ಬಾಯಿಯಲ್ಲಿ ಏನಾದರೂ ಮಾತನ್ನು ಹೊರಡಿಸಿ ಸಸ್ಪೆಂಡ್ ಮಾಡುತ್ತಿದ್ದಿರಿ. ತಮಗೆ ನನ್ನ ಮೇಲಿನ ದ್ವೇಷಕ್ಕಿಂತ ಹೆಚ್ಚಾಗಿ ಕಲ್ಲೇಗೌಡ ಮತ್ತು ಕರಿಯಪ್ಪನವರ ಮೇಲೆ ಛಲ! ಅವರ ಏಜೆಂಟ್ ನಾನು ಎಂಬುದು ತಮಗೆ ತಿಳಿದಿತ್ತು. ತಾವು ಬೆಂಗಳೂರಿಗೆ ಸಹ ಹೋಗಿ, ದೊಡ್ಡ ಸಾಹೇಬರನ್ನು ಕಂಡು ಗಟ್ಟಿ ಮಾಡಿಕೊಂಡು ಬಂದಿದ್ದಿರಿ, ಸಿದ್ದಪ್ಪನವರು ನಿಮ್ಮ ಬೆಂಬಲಕ್ಕಿರುವರೆಂದು ತೋರಿಸುವ ಏರ್ಪಾಟು ಮಾಡಿ ಕೊಂಡು ಬಂದಿದ್ದಿರಿ. ಆದ್ದರಿಂದ ಹೇಗೂ ನನಗೆ ಒಳ್ಳೆಯದಾಗುತ್ತಿರಲಿಲ್ಲ. ಇಷ್ಟಾಗಿ ನಾನು ಹೇಳಿದ್ದೇನು! ರೂಲ್ಸು ರೆಗ್ಯುಲೇಷನ್ನು ತಿಳಿಯದವರಿಗೆ ನಾನು ಅವಿಧೇಯನೇ!-ಎಂದು ಹೇಳಿದೆ. ತಮಗೆ ಜ್ಞಾಪಕವಿರಬಹುದು.’

`ಮೇಷ್ಟ್ರೆ! ಒಂದು ವಿಷಾದ ಪ್ರಕರಣ ಆಗಿಹೋಯಿತು! ನೀವು ಆ ದಿನ ವಿನಯದಿಂದ ವರ್ತಿಸಿ, ಹೇಳ ಬೇಕಾದ್ದನ್ನೆಲ್ಲ ಹೇಳಿ ಕಡೆಯ ತನಕ ಕಾದಿದ್ದರೆ, ನಾನೇನು ಮಾಡುತ್ತಿದ್ದೆನೋ ತಿಳಿಯುತ್ತಿತ್ತು. ಈಗ ನನಗೆ ನಿಮ್ಮ ಮೇಲೆ ದ್ವೇಷವಿಲ್ಲ, ಛಲವಿಲ್ಲ. ಕೆಲಸಕ್ಕೆ ನೀವು ಬನ್ನಿ, ಈಗ ಆಗಿರುವ ಸಸ್ಪೆನ್ಷನ್ ಆರ್ಡರನ್ನು ರದ್ದುಗೊಳಿಸಿ, ರಜವನ್ನಾಗಿ ಪರಿವರ್ತಿಸಿ, ನಿಮಗೆ ಕಳಂಕ ಹತ್ತದಂತೆ ಮಾಡುತ್ತೇನೆ. ಕಡೆಗೆ ಸರ್ವಿಸ್ ರಿಜಿಸ್ಟರಿನಲ್ಲಿ ಸಹ ಅದು ದಾಖಲಾಗದಂತೆ ಏನಾದರೂ ಉಪಾಯ ಮಾಡುತ್ತೇನೆ.’

‘ಸ್ವಾಮಿ ! ನನಗೂ ತಮ್ಮ ಮೇಲೆ ಛಲವಿಲ್ಲ, ದ್ವೇಷವಿಲ್ಲ! ಸತ್ಯವಾಗಿ ಹೇಳುತ್ತೇನೆ. ಆದರೆ ನಾನು ಪುನಃ ಕೆಲಸಕ್ಕೆ ಬರುವುದಿಲ್ಲ. ಕಾರಣವನ್ನು ಆಗಲೇ ತಿಳಿಸಿದ್ದೇನೆ. ಈಗ ನಾನು ಹೊಸ ಮನುಷ್ಯ; ಪುನರ್ಜನ್ಮ ತಾಳಿದ್ದೇನೆ. ಈಗ ಇಪ್ಪತ್ತು ಇಪ್ಪತ್ತೈದು ದಿನಗಳಿಂದ ನನ್ನ ಮನಸ್ಸಿನೊಡನೆ ಬಲವಾಗಿ ಹೋರಾಡಿದೆ. ದ್ವೇಷವನ್ನು ಸಾಧಿಸಲೇ? ಶಾ೦ತಿಯನ್ನು ಸಾಧಿಸಲೇ? ಎಂದು ಹಗಲಿರುಳೂ ಗುದ್ದಾಡಿದೆ. ತಾವೇನೋ ಪೊಲೀಸ್ ಸಿಬ್ಬಂದಿಯ ಸಹಾಯ ತೆಗೆದುಕೊಂಡಿರಿ. ಮನೆಯ ಹತ್ತಿರ, ಕಚೇರಿಯ ಹತ್ತಿರ ಕಾನ್ ಸ್ಟೇಬಲ್ಲುಗಳನ್ನು ನಿಲ್ಲಿಸಿ ಕೊಂಡಿರಿ. ಊರೂರುಗಳಿಂದ ನಿಮ್ಮ ಇಷ್ಟ ಮಿತ್ರರನ್ನು ಕರೆಸಿಕೊಂಡಿರಿ. ನಿಮ್ಮ ಬಲವನ್ನೂ ನಿಮಗಿದ್ದ ಬೆಂಬಲನ್ನೂ ಪ್ರಕಟಿಸಿದಿರಿ. ಆದರೆ, ನಾನು ತಮ್ಮನ್ನು ಘಾತಿಸಬೇಕೆಂದು ಸಂಕಲ್ಪ ಮಾಡಿದ್ದಿದ್ದರೆ ನಿಮ್ಮನ್ನು ಯಾರೂ ರಕ್ಷಿಸಲಾಗುತ್ತಿರಲಿಲ್ಲ! ಅದು ಖಂಡಿತ! ನಿಮಗೆ ಯಾರು ತಾನೆ ಎಷ್ಟು ದಿನ ಕಾವಲಿದ್ದಾರು? ನಾನೇ ಬಹಳವಾಗಿ ಪೂರ್ವಾಪರಗಳನ್ನು ಚರ್ಚಿಸಿಕೊಂಡೆ ಚರ್ಚಿಸಿ ಕೊಳ್ಳುತ್ತಿದ್ದಾಗ ನನ್ನ ಉಡುಪಿನ ಮೇಲೆ ನನ್ನ ದೃಷ್ಟಿ ಹೋಯಿತು! ನಾನು ಧರಿಸುತ್ತಿರುವುದು ಖಾದಿ! ಪೂಜ್ಯ ಗಾಂಧಿಯ ವರ ಪ್ರೇಮ ವಸ್ತ್ರವಾದ ಖಾದಿ! ನಾನು ಮಾಡಿದ ಪಾಪಕಾರ್ಯಗಳೆಲ್ಲ ಚಲನ ಚಿತ್ರದಂತೆ ಪರಂಪರೆಯಾಗಿ ಚಿತ್ರಪಟದಲ್ಲಿ ಕಾಣಿಸಿಕೊಂಡುವು! ಗಾಂಧಿ ಯವರ ಸತ್ಯ, ಅಹಿಂಸೆ, ಮತ್ತು ಪ್ರೇಮಗಳನ್ನು ನಾನು ಆಚರಣೆಯಲ್ಲಿಟ್ಟು ಕೊಳ್ಳದೇ ಹೋದೆನಲ್ಲಾ! ಎಂದು ಬಲವಾದ ಪಶ್ಚಾತ್ತಾಪ ಉಂಟಾಯಿತು. ಸ್ವಾಮಿ! ಅದನ್ನು ಏನೆಂದು ಹೇಳಲಿ! ದ್ವೇಷವನ್ನೂ ಸ್ವಾರ್ಥವನ್ನೂ ಗೆಲ್ಲುವುದೆಂದರೆ ಮರಣ ಸಂಕಟ ಪಟ್ಟ ಹಾಗೆ; ಗೆದ್ದ ಮೇಲೆ ಪುನರ್ಜನ್ಮ; ಶಾಂತಿ, ಆತ್ಮಕಲ್ಯಾಣ, ದ್ವೇಷದಿಂದ ಪ್ರಯೋಜನವಿಲ್ಲ ಎಂದು ತೀರ್ಮಾನಿಸಿದೆ ಆಗ ತಮ್ಮ ಮೇಲಿನ ಕ್ರೋಧವನ್ನು ವಿಸರ್ಜಿಸಿಬಿಟ್ಟೆ! ಶಾಂತಿಯಿಂದಲೇ ಸೌಖ್ಯ, ಪ್ರೇಮದಿಂದಲೇ ಆತ್ಮಕಲ್ಯಾಣ ಎಂದು ಗ್ರಹಣ ಮಾಡಿದೆ! ನಾನು ಇದುವರೆಗೂ ಮಾಡಿರುವ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ, ಸಂನ್ಯಾಸವನ್ನು ಸ್ವೀಕಾರ ಮಾಡಬೇಕೆಂದು ಸಂಕಲ್ಪಿಸಿದ್ದೇನೆ! ಇಲ್ಲಿಗೆ ಹತ್ತು ಮೈಲಿಗಳ ದೂರದಲ್ಲಿ ನಮ್ಮವರ ಗವಿಮಠವಿದೆ. ಅಲ್ಲಿ ಹಿಂದೆ ಮಹಾತ್ಮರಾದ ಯೋಗೀಶ್ವರರೊಬ್ಬರು ಸಮಾಧಿಯಾಗಿದ್ದಾರೆ. ಆ ಮಠದಲ್ಲಿ ಈಗ ಅಧ್ಯಕ್ಷಪೀಠ ಖಾಲಿಯಾಗಿದೆ. ನಮ್ಮ ಜನ ಒಪ್ಪಿ ಕೊಂಡಿದ್ದಾರೆ. ಎರಡು ಮೂರು ದಿನಗಳಲ್ಲಿ ಅಲ್ಲಿಗೆ ಹೋಗಿ ನೆಲಸುತ್ತೇನೆ. ನಾನು ಇಲ್ಲಿಗೆ ತಮ್ಮನ್ನು ಕಾಣಲು ಬಂದದ್ದು: ಮೊದಲನೆಯದಾಗಿ, ತಾವು ನನ್ನ ವಿಚಾರದಲ್ಲಿ ಅನ್ಯಾಯ ಮಾಡಿದಿರಿ ಎಂದು ತಿಳಿಸುವುದಕ್ಕೆ; ಎರಡನೆಯದಾಗಿ, ಹಾಗೆ ಅನ್ಯಾಯ ಮಾಡಿದ್ದರೂ ನನಗೆ ತಮ್ಮ ವಿಚಾರದಲ್ಲಿ ದ್ವೇಷವೇನೂ ಇಲ್ಲ; ಗೌರವ ಮತ್ತು ಪ್ರೇಮ ಇವೆ ಎಂದು ತಿಳಿಸುವುದಕ್ಕೆ. ತಾವು ಒಳ್ಳೆಯ ಕೆಲಸ ಮಾಡಿದ್ದೀರಿ. ಯಾರೂ ಇದುವರೆಗೂ ತಾವು ತೋರಿಸಿಕೊಟ್ಟಿರುವ ಮಾರ್ಗಗಳನ್ನು ತೋರಿಸಲಿಲ್ಲ, ಹೀಗೆ ವಿದ್ಯಾಭಿವೃದ್ಧಿಯನ್ನುಂಟುಮಾಡಲಿಲ್ಲ. ತಮ್ಮ ಶೀಲವೂ ಸ್ತೋತ್ರಾರ್ಹವಾದುದು. ಆದ್ದರಿಂದ ತಮ್ಮಲ್ಲಿ ನನಗೆ ಗೌರವವಿದೆ. ತಮಗೆ ಇನ್ನು ಕೆಲವು ದಿನಗಳಗಾಗಿ ಇಲ್ಲಿಂದ ವರ್ಗವಾಗುತ್ತದೆ. ಅದು ಖಂಡಿತ. ನನ್ನ ಅರಿಕೆ ಏನೆಂದರೆ: ತಾವು ಜನಾರ್ದನಪುರವನ್ನು ಬಿಟ್ಟು ಹೋಗವುದರೊಳಗಾಗಿ ಗವಿಮಠಕ್ಕೆ ಬರಬೇಕು, ಒಪ್ಪೊತ್ತು ಇದ್ದು ನನ್ನ ಪ್ರೇಮ ಗೌರವಗಳ ಆತಿಥ್ಯವನ್ನು ಸ್ವೀಕರಿಸಬೇಕು!’

`ಮೇಷ್ಟ್ರೇ! ಇದೇನಿದು! ನಿಜವಾಗಿಯೂ ನೀವು ಸಂಸಾರತ್ಯಾಗ ಮಾಡಿ ಸಂನ್ಯಾಸಿಗಳಾಗುತ್ತೀರಾ? ಹೆಂಡತಿ ಮತ್ತು ಮಕ್ಕಳ ಕೈ ಬಿಡುತ್ತೀರಾ? ಇವಕ್ಕೆಲ್ಲ ನಾನು ಕಾರಣನಾದ ಹಾಗಾಯಿತಲ್ಲ! ಅವರ ಶಾಪ ನನಗೆ ತಟ್ಟದೇ ಹೋಗುವುದೇ!’

‘ಸ್ವಾಮಿ ! ತಾವು ಖಿನ್ನರಾಗಬೇಡಿ. ನಾನು ಸಂನ್ಯಾಸಿಯಾಗುವುದು ನಿಶ್ಚಯ. ಹೆಂಡತಿ ಮಕ್ಕಳ ರಕ್ಷಣೆಯನ್ನು ಎಲ್ಲರನ್ನೂ ರಕ್ಷಿಸುವ ಭಗವಂತನೇ ಮಾಡುತ್ತಾನೆ! ಲೌಕಿಕ ರೀತಿಯಲ್ಲಿ ಅವರನ್ನು ನಾನು ನಿರ್ಗತಿಕರನ್ನಾಗಿ ಬಿಟ್ಟಿಲ್ಲ. ಈಗ ಇಪ್ಪತ್ತೈದು ವರ್ಷ ನಾನೂ ಸರ್ವಿಸ್ ಮಾಡಿದೆ. ತಿಂಗಳಿಗೆ ಹದಿನೇಳು ರುಪಾಯಿ ಬರುತ್ತಿತ್ತು! ಸಂಸಾರನ್ನು ಅಷ್ಟರಿಂದಲೇ ನಡೆಸುವುದಕ್ಕೆ ಸಾಧ್ಯವೇ? ನನಗೆ ಜಮೀನಿದೆ. ಹೆಂಡತಿ ಮತ್ತು ಮಕ್ಕಳು ಹಿಂದಿನಂತೆಯೇ ಮುಂದೆಯೂ ಆ ಜಮೀನಿನಿಂದ ಜೀವನ ನಡೆಸಿಕೊಳ್ಳಬಹುದು. ಗವಿಮಠಕ್ಕೂ ತಕ್ಕಷ್ಟು ಆದಾಯವಿದೆ. ನನ್ನ ಸಂಸಾರ ಪೋಷಣೆಗೆ ಅಗತ್ಯ ಬಿದ್ದರೆ ಸ್ವಲ್ಪ ಸಹಾಯ ಮಾಡಬಹುದು. ನಾನು ಸಂನ್ಯಾಸ ತೆಗೆದು ಕೊಳ್ಳುವುದಕ್ಕೆ ತಾವೇನೂ ಕಾರಣರಲ್ಲ. ಆತ್ಮಪ್ರೇರಣೆಯೇ ಕಾರಣ. ನಾನು ಪ್ರಪಂಚವನ್ನು ಚೆನ್ನಾಗಿ ನೋಡಿದ್ದೇನೆ. ದೊಡ್ಡ ದೊಡ್ಡ ಅಧಿಕಾರಿಗಳ ಹೊಲಸು ಚರಿತ್ರೆಗಳನ್ನೆಲ್ಲ ತಿಳಿದು ಕೊಂಡಿದ್ದೇನೆ; ಮುಖಂಡರುಗಳನ್ನೂ ನೋಡಿದ್ದೇನೆ. ಅವರು ಒಬ್ಬರಿಗೊಬ್ಬರು ಬೆಂಬಲ. ಆ ದೊಡ್ಡ ಅಧಿಕಾರಿಗಳು ತಮ್ಮ ಹೊಲಸನೆಲ್ಲ ಪ್ರಜಾ ಪ್ರತಿನಿಧಿಸಭೆ ಮತ್ತು ನ್ಯಾಯವಿಧಾಯಕ ಸಭೆಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಮುಖಂಡರು ಎಲ್ಲಿ ಹೊರಗೆಡಹುತ್ತಾರೋ ಎಂದು ಹೆದರಿ ಕೊಂಡು ಆ ನೀತಿಗೆಟ್ಟ ಮುಖಂಡರ ಬೆನ್ನು ತಟ್ಟುತ್ತ, ಕೈ ಕುಲುಕುತ್ತ, ಲಂಚಗಿ೦ಚುಗಳಿಗೆ ಪಕ್ಕದಲ್ಲಿ ಕುಳ್ಳಿರಿಸಿ ಕೊಳ್ಳುತ್ತ, ಅವರ ಬೆಂಬಲವನ್ನೂ ಅವರ ಕಡೆಯ ಓಟುಗಳನ್ನೂ ಪಡೆದುಕೊಂಡು ಬಹಳ ನಿಸ್ಪೃಹರಂತೆಯೂ ಪ್ರಜಾನುರಾಗಿಗಳಂತೆಯೂ ತೋರ್ಪಡಿಸಿಕೊಳ್ಳುವುದು! ಆ ಮುಖಂಡರಾದರೋ ಅಲ್ಪ ಸ್ವಲ್ಪ ಆದಾಯದ ರೊಟ್ಟಿ ಚೂರುಗಳಿಗೆ ಅವರನ್ನು ಆಶ್ರಯಿಸುತ್ತ, ತಾವು ದೊಡ್ಡ ಮುಖಂಡರೆಂದೂ ತಮ್ಮ ಮಾತು ಸರಕಾರದಲ್ಲಿ ನಡೆಯುತ್ತದೆಂದೂ ಅಜ್ಞಾನಿಗಳಾದ ಹಳ್ಳಿಯವರಿಗೆ ತೋರಿಸುತ್ತ ಸ್ವಾರ್ಥವನ್ನು ಸಾಧಿಸಿಕೊಳ್ಳುವುದು! ಎಲ್ಲರ ಹೇಯ ಕೃತ್ಯಗಳನ್ನೂ ತಿಳಿದಿದ್ದೇನೆ. ನಾನು ಸಹ ಮುಖಂಡರುಗಳ ಮಾತಿನಂತೆ ಅವರು ಕೊಡುತ್ತಿದ್ದ ಹಣದಾಸೆಗಾಗಿ ಅವರ ಏಜೆಂಟಾಗಿ ಮಾಡ ಬಾರದ ಕೆಲಸಗಳನ್ನು ಮಾಡಿದ್ದೇನೆ! ಹೆಚ್ಚಾಗಿ ಏಕೆ ಹೇಳಲಿ! ತಮ್ಮ ವಿಚಾರ ದಲ್ಲಿಯೂ ನಾನು ಅಪರಾಧ ಮಾಡಿದ್ದೇನೆ! ಆ ತಿಮ್ಮಮ್ಮನನ್ನು ಡೈರೆಕ್ಟರ್ ಸಾಹೇಬರ ಬಳಿಗೆ ಕರೆದುಕೊಂಡು ಹೋದವನೇ ನಾನು! ಪ್ರಪಂಚವನ್ನು ನೋಡಿ ಜುಗುಪ್ಸೆಯುಂಟಾಗಿದೆ. ತಾವು ಸರಳ ಸ್ವಭಾವದವರು; ತಮಗೆ ಲೋಕ ತಿಳಿಯದು. ಈಗ ನಾನು ಗವಿಮಠಕ್ಕೆ ಹೋಗುವುದರಿಂದ ಆ ರಾಜಕೀಯ ಮುಖಂಡರ ಏಜೆಂಟ್ ಕೆಲಸ ತಪ್ಪುತ್ತದೆ ಸ್ವಾಮಿ! ಮುಂದೆ ದೇವರ ಏಜೆಂಟ್ ಆಗಿ ಕೆಲಸ ಮಾಡುತ್ತೇನೆ! ಶಾಂತವೀರ ಸ್ವಾಮಿಯಾಗಿ ದೇವರ ಹೆಸರಿನಲ್ಲಿ ದುಡಿಯುತ್ತೇನೆ!’

ರಂಗಣ್ಣನಿಗೆ ಉಗ್ರಪ್ಪನ ಚರಿತ್ರೆಯೆಲ್ಲ ಒಂದು ಅದ್ಭುತ ಪವಾಡವಾಗಿ ಕಂಡು ಬಂತು. ಯಾವ ಕಾಲಕ್ಕೆ ಏನು ಪರಿವರ್ತನೆ ಮನುಷ್ಯನಲ್ಲಾಗಬಹುದೋ! ತಿಳಿದವರಾರು? ನಾರದ ಮಹರ್ಷಿಗಳು ಒಬ್ಬ ಕಿರಾತಕನನ್ನು ವಾಲ್ಮೀಕಿಯನ್ನಾಗಿ ಮಾಡಿದರು. ಮಹಾತ್ಮ ಗಾಂಧಿಯವರು ಪರೋಕ್ಷದಲ್ಲಿದ್ದು ಕೊಂಡೆ ಉಗ್ರಪ್ಪನನ್ನು ಶಾಂತವೀರಸ್ವಾಮಿಯಾಗಿ ಮಾಡಿದರು! ಎಂತಹ ಅದ್ಭುತ! ಎಂತಹ ಪವಾಡ!

‘ಸ್ವಾಮಿ ! ನಾನು ಹೋಗಿ ಬರುತ್ತೇನೆ. ತಮ್ಮನ್ನು ಪುನಃ ಕಾಣುವುದಕ್ಕೆ ಅವಕಾಶವಾಗುವುದಿಲ್ಲ. ಗವಿಮಠಕ್ಕೆ ಬರಬೇಕು! ಆತಿಥ್ಯ ಸ್ವೀಕಾರ ಮಾಡಬೇಕು!’

`ಆಗಲಿ ಮೇಷ್ಟ್ರೇ! ಖಂಡಿತವಾಗಿ ಬರುತ್ತೇನೆ.’

‘ಶ್ರೇಯೋಸ್ತು!’ ಎಂದು ಉಗ್ರಪ್ಪನು ಹೇಳಿ ಹೊರಕ್ಕೆ ಬಂದು ದೊಣ್ಣೆಯನ್ನು ಕೈಗೆ ತೆಗೆದುಕೊಂಡು ಹೊರಟುಹೋದನು.

ರಂಗಣ್ಣನು ದೀರ್ಘಾಲೋಚನೆಯಲ್ಲಿ ಮಗ್ನನಾದನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಂಪಿರುವೆಗಳು
Next post ಅಗೊ, ಬೇಲಿಹಾರಿ ಓಡಿತು ಕೋಳಿ ಹೊರಗೆ, ಮನೆ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

cheap jordans|wholesale air max|wholesale jordans|wholesale jewelry|wholesale jerseys