ಉತ್ತರಣ – ೫

ಉತ್ತರಣ – ೫

ಅಸೂಯೆಯ ಬಿರುಗಾಳಿ

ಆನಂದನಿಗೆ ತಂದೆಯ ಈ ರೀತಿಯ ನಡೆವಳಿಕೆಯಿಂದಲೇ ವಿಪರೀತ ಸಿಟ್ಟು ಬರುತ್ತಿದ್ದುದು. ಮನೆಯ ಹಿರಿಯ ಮಗ ತಾನಾದರೂ ಅನುರಾಧಳ ಮಾತಿಗಿದ್ದ ಮಾನ್ಯತೆ ತನ್ನ ಮಾತಿಗಿದೆಯೇ ಎಂದು ಅವನು ಹಲವಾರು ಬಾರಿ ತೂಗಿ ನೋಡುವುದಿತ್ತು. ಆದರೆ ಯಾವಾಗಲೂ ಬಾಯಿ ಬಿಡುತ್ತಿರಲಿಲ್ಲ. ತನ್ನ ಅಸಮಾಧಾನ ವ್ಯಕ್ತ ಪಡಿಸುತ್ತಿರಲಿಲ್ಲ. ಮನದೊಳಗೇ ಅಸಮಾಧಾನದ ಹೊಗೆ ತುಂಬಿಸಿಕೊಂಡು ಇರುತ್ತಿದ್ದ. ಇದರಿಂದಾಗಿ ಅನುರಾಧಳ ಮೇಲೆ ಒಂದು ರೀತಿಯ ವೈರತ್ವ ಬೆಳೆಸಿಕೊಳ್ಳುತ್ತಲೇ ಹೋಗಿದ್ದ. ಬೇರೆ ತಂಗಿಯಂದಿರೂ, ತಮ್ಮನೂ ಹೆಚ್ಚು ಬೆರೆಯುತ್ತಿದ್ದುದು ಅನುರಾಧಳೊಡನೆಯೇ. ಅದೂ ಅವನಲ್ಲಿ ಸಿಟ್ಟು ಬೆಳೆಸುತ್ತಿತ್ತು. ಅಸೂಯೆಯನ್ನೇಳಿಸುತ್ತಿತ್ತು. ಅನುರಾಧ ಅಣ್ಣನನ್ನು ಒಲಿಸಿಕೊಂಡು ಅವನೂ ತಮ್ಮೆಲ್ಲರಂತಿರಬೇಕೆಂದು ಎಷ್ಟು ಬಾರಿ ಪ್ರಯತ್ನಿಸಿದ್ದಳೆಂದಿಲ್ಲ. ಆದರೆ ಅವನು ತೋರಿಸುತ್ತಿದ್ದುದು ಬರೇ ತಿರಸ್ಕಾರ. ಇದರ ಬಿಸಿ ಅವಳಿಗೆ ತಟ್ಟುತ್ತಿದ್ದರೂ ಅನುರಾಧ ಅದನ್ನು ಮರೆತು ಬಿಡಲು ಪ್ರಯತ್ನಿಸುತಿದ್ದಳು.

ಆದರೆ ಅಣ್ಣನ ಈ ಒಂದು ಚಿಕ್ಕ ಗುಣದಿಂದಾಗಿ ಅವಳು ಹಲವು ಬಾರಿ ಯಾರಿಗೂ ತಿಳಿಯದಂತೆ ಕಣ್ಣೀರು ಹರಿಸಿದ್ದಳು. ತನ್ನನ್ನು ಕಂಡರೆ ಅಣ್ಣನಿಗೆ ಇಷ್ಟವಿಲ್ಲ ಎನ್ನುವ ಭಾವನೆ ಅವಳಿಗೆ ತುಂಬಾ ಅಪ್ರಿಯವಾಗಿತ್ತು. ಆದರೆ ಅವಳೆಂದೂ ಈ ವಿಚಾರವಾಗಿ ತಾಯಿ, ತಂದೆಯೊಡನಾಗಲಿ, ತಂಗಿಯರೊಡನಾಗಲಿ, ಬಾಯಿಬಿಟ್ಟಿಲ್ಲ.

ಅವರೊಳಗೆ ಬೆಳೆದ ಈ ಅಂತರ ಎಂದಿಗೂ ಕಡಿಮೆಯಾಗಲಿಲ್ಲ. ಆನಂದನ ಈ ಒಂದು ಕೆಟ್ಟ ಭಾವನೆಯಿಂದಾಗಿ ಅನುರಾಧ ಮದುವೆಯಾಗಿ ಹೋದಾಗ ಅವನಿಗೆ ಬೇಸರವೆನಿಸಿರಲಿಲ್ಲ. ಪ್ರತಿಯಾಗಿ, ತನ್ನ ಎದುರಾಳೊಬ್ಬಳು ತೊಲಗಿದಂತೆ ಅನಿಸಿತ್ತು. ಚಿಕ್ಕಂದಿನಿಂದಲೂ ಅವರಿಬ್ಬರ ಮಧ್ಯೆ ಒಲವು ಬೆಳೆದಿರಲೇ ಇಲ್ಲ. ಚಿಕ್ಕಂದಿನಲ್ಲಿ ಅವನ ಅಸಮಾಧಾನ ಎಲ್ಲರಿಗೂ ಗೋಚರವಾಗುವಂತೆ ಇರುತ್ತಿತ್ತು.

ಬೆಳೆದಂತೆ ಮುಚ್ಚುಮರೆಯಾಗಿ ಬೂದಿ ಮುಸುಕಿದ ಕೆಂಡದಂತೆ ಹೊಗೆಯಾಡುತ್ತಿತ್ತು. ಇದಕ್ಕೆ ಸ್ವಲ್ಪ ಮಟ್ಟಿಗೆ ರಾಮಕೃಷ್ಣಯ್ಯನವರೇ ಕಾರಣರೆನ್ನಬೇಕು. ಚಿಕ್ಕಂದಿನಲ್ಲಿ ಯಾವಾಗಲೂ ಅನುರಾಧಳನ್ನೇ ಹೊಗಳುತ್ತಿದ್ದು, ಆನಂದನನ್ನು ವಿಮರ್ಶಿಸುತ್ತಿದ್ದುದು ಅವರದೊಂದು ದೊಡ್ಡ ತಪ್ಪು. ಸುಶೀಲಮ್ಮನಿಗೆ ಮಗಳಲ್ಲಿ ಮಮತೆ, ಅಭಿಮಾನ ಹೆಚ್ಚಿದ್ದರೂ, ಅವರ ಮಟ್ಟಿಗೆ ಮಗನೇ ಒಂದು ತೂಕ ಮೇಲು. ಅವರ ಮನಸ್ಸು ಯಾವಾಗಲೂ ‘ಏನಾದರೇನು ಅನುರಾಧ ಎಂದಿದ್ದರೂ ಇನ್ನೊಂದು ಮನೆಯ ಸೊತ್ತು. ಆನಂದನೇ ನಮ್ಮ ವೃದ್ಧಾಪ್ಯದ ಊರುಗೋಲು’ ಎಂದು ಹೇಳುತ್ತಿತ್ತು.

ಈಗ ಆ ಭಾವನೆ ನಿಜವಾಗುವ ಕಾಲವೂ ಬಂದು ಬಿಟ್ಟಿದೆ. ರಾಮಕೃಷ್ಣಯ್ಯನವರ ಪಿಂಚಿನಿಯಲ್ಲಿ ಸಂಸಾರ ನಿಭಾಯಿಸುವುದು ಕನಸಿನ ಮಾತು. ಈಗ ಮಗನ ಸಹಾಯ ಬೇಕೇ ಬೇಕು. ಅದೂ ರಾಮಕೃಷ್ಣಯ್ಯನವರದ್ದು ತುಂಬಿದ ಸಂಸಾರ. ವಿದ್ಯೆ ಕಲಿಯುತ್ತಿರುವ ಮಕ್ಕಳು ಬೇರೆ. ಹಣವೆಂದರೆ ನೀರಿನಂತೆ ಖರ್ಚಾಗುವ ಕಾಲ, ಸುಶೀಲಮ್ಮನ ಚಾಕಚಕ್ಯತೆಯಿಂದಷ್ಟೇ ಸಂಸಾರ ಸರಿತೂಗಿಕೊಂಡು ಹೋಗುತ್ತಿತ್ತೆಂದು ಹೇಳಬಹುದು.

ಆನಂದನಂತೂ ನಗು ನಗುತ್ತಾ ಮುಕ್ತಮನಸ್ಸಿನಿಂದ ಸಂಬಳ ತಂದು ತಾಯಿಯ ಕೈಯಲ್ಲಿ ಕೊಡುವ ರೀತಿಯ ಮನುಷ್ಯನಲ್ಲ, ದೊಡ್ಡದೊಂದು ಹೊರೆ ಜರಗಿಸಿದಂತೆ. ತನ್ನ ಸಂಬಳದ ಅರ್ಧಭಾಗವೆಂದು ರೂ. ೮೦೦/-ನ್ನು ತಾಯಿಗೆ ಕೊಟ್ಟು ಬೇರೆ ಮಾತಿಲ್ಲದೆ ತಿಂಗಳು ತೆಗೆಯುವವನು. ಇನ್ನುಳಿದುದು ಹಲವಾರು ಕಡೆ ತಿರುಗಾಟ ದೋಸ್ತಿಗಳೆಂದು ಅವನ ಸ್ವಂತ ಖರ್ಚಿಗೆ. ಆಗಾಗ ಕುಡಿತ ಬೇರೆ ಇತ್ತು. ಯಾಕೆ ಈ ಅಭ್ಯಾಸ ಮಾಡಿಕೊಂಡೆ ಅಂದರೆ ಮಗನ ಉತ್ತರ ಸಿದ್ಧ. “ಫ್ರೆಂಡ್ಸ್ ಜತೆಯಲ್ಲಿ, ಇದೊಂದು ರೀತಿ ಕೂಡಾ. ನಾನು ಅವರಿಗಿಂತ ಬೇರೆಯಾಗೋದು ಹೇಗೆ?” ಎನ್ನುವ ಸವಾಲೂ ಎಸೆಯುತ್ತಿದ್ದ. ರಾಮಕೃಷ್ಣಯ್ಯನವರಿಗೆ ಈ ಮಾತು ಕೇಳುವಾಗ ಆಗುತ್ತಿದ್ದ ವೇದನೆ ಅಷ್ಟಿಷ್ಟಲ್ಲ. ಬುದ್ಧಿ ಹೇಳಿದರೆ ಅರ್ಥಮಾಡಿಕೊಳ್ಳಲಾಗದ ಮಗನಿಗೆ ತಿಳಿಸಿ ಹೇಳುವ ರೀತಿಯೂ ಅವರಿಗೆ ತಿಳಿಯದು. ಇದರಿಂದಾಗಿ, ಆದ ಹಾಗೆ ಆಗುತ್ತದೆ ಎನ್ನುವ ಮನೋಭಾವ ಬೆಳೆಸಿಕೊಂಡಿದ್ದರು. ಯಾವುದಕ್ಕೂ ಬಾಯಿ ಹಾಕಲು ಹೋಗುತ್ತಿರಲಿಲ್ಲ. ಮಗನ ಕೈ ಕಾಯಬೇಕಾಗಿರುವಾಗ ಅವನನ್ನು ವಿರೋಧಿಸುವುದೂ ಸರಿಯಲ್ಲ. ಎಷ್ಟಾದರೂ ಬೆಳೆದ ಹುಡುಗ, ಬೇಕೆಂದರೆ ಏನನ್ನಾದರೂ ಅರ್ಥೈಸಿಕೊಳ್ಳುವುದೇನೂ ಅವನಿಗೆ ಕಷ್ಟವಲ್ಲ. ಒಳಿತು ಕೆಡುಕುಗಳ ವ್ಯತ್ಯಾಸ ತಿಳಿಯದಷ್ಟು ಚಿಕ್ಕವನೂ ಅವನಲ್ಲ. ಆದರೂ ಅವನಿಗೆ ತಿಳಿದುಕೊಳ್ಳುವ ಮನಸ್ಸು ಮಾತ್ರ ಇದ್ದ ಹಾಗಿಲ್ಲ. ಸ್ವಲ್ಪ ಸ್ವಾರ್ಥಿಯೆಂದೇ ಹೇಳಬೇಕು.

ಮಗನ ಮರ್ಜಿ ತಂದೆ ತಾಯಿಗೇ ಸರೀ ಅರ್ಥವಾಗಿಲ್ಲ. ಸೊಸೆಗೂ ಅಂಥ ಹೇಳಿಕೊಳ್ಳುವಂಥ ಸಲುಗೆ ಬೆಳೆದಂತಿಲ್ಲ. ಅಲ್ಲದೇ ಮಗನ ಮುಂದೆ ಹಾಗಲ್ಲ ಹೀಗೆ ಎಂದು ಹೇಳುವ ಧೈರ್ಯವಿದ್ದ ಹುಡುಗಿಯೂ ಅವಳಲ್ಲ.

ರಾಮಕೃಷ್ಣಯ್ಯನವರ ಪಿಂಚಿನಿಯಂತೂ ಅದು ಸಿಕ್ಕಿದ ಏಳೆಂಟು ದಿನದಲ್ಲೇ ಅದಕ್ಕೆ ಇದಕ್ಕೆಂದು ಮಾಯವಾಗುತ್ತಿತ್ತು. ಆ ಮೇಲಿನ ಅವರ ಮಾನಸಿಕ ಒದ್ದಾಟವನ್ನು ಅರ್ಥಮಾಡಿಕೊಂಡರೂ ಅದಕ್ಕೆ ಪರಿಹಾರ ಹುಡುಕುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಪೂರ್ಣಿಮಾ ಅಗೆಲ್ಲಾ ಯೋಚಿಸುವುದು ಒಂದೇ. ತನ್ನದೊಂದು ಡಿಗ್ರಿ ಮುಗಿದ ಕೂಡಲೇ ಕೆಲಸಕ್ಕೆ ಸೇರಬೇಕು. ಇನ್ನೇನು ಸ್ವಲ್ಪ ಸಮಯ. ಅಮ್ಮ ಅಪ್ಪ ಯಾವಾಗಲೂ ಅಣ್ಣನಿಗೇ ಕೈಚಾಚುವಂತಾಗಬಾರದು.

ಇದೇ ಯೋಚನೆಯಲ್ಲಿ ಪೂರ್ಣಿಮಾಳ ಡಿಗ್ರಿ ಮುಗಿದಿತ್ತು. ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಶತಪ್ರಯತ್ನ ಮಾಡುತ್ತಿದ್ದರೂ ಕೆಲಸ ಸಿಗುವುದೂ ಅಷ್ಟು ಸುಲಭವಿರಲಿಲ್ಲ.

ಆನಂದನಿಗೆ ಗುಲ್ಬರ್ಗಕ್ಕೆ ವರ್ಗಾವಣೆಯಾದಾಗ ಪೂರ್ಣಿಮಾಳ ಯೋಚನೆ ಕಾರ್ಯರೂಪಕ್ಕೆ ಬರಲೇಬೇಕಾಗುತ್ತದೆ. ಮಗ ಹೊರಟು ಹೋದ ಮೇಲೆ ಮಗಳು ಕೆಲಸಕ್ಕೆ ಸೇರುವ ತಯಾರಿ ಮಾಡಿದಾಗ ಸುಶೀಲಮ್ಮ ಏನೂ ಹೇಳುವ ಗೋಜಿಗೇ ಹೋಗಲಿಲ್ಲ. ಅವರ ಬಾಯಿ ಸಂಪೂರ್ಣ ಕಟ್ಟಿತ್ತು. ಸ್ತಬ್ಧಗೊಳ್ಳುತ್ತಿರುವ ರಥ ಚಲಿಸಬೇಕಾದರೆ ಅದಕ್ಕೆ ಪೂರ್ಣಿಮಾ ಹೆಗಲು ಕೊಡಲೇಬೇಕೆಂಬ ಸತ್ಯ ಅವರಿಗೆ ಸ್ಪಷ್ಟವಾಗಿತ್ತು! ಸಂದರ್ಭಗಳು ಮನುಷ್ಯರನ್ನು ಬದಲಾಯಿಸುತ್ತಲೇ ಇರುತ್ತವೆ. ಮಾನವ ಸಮಯದ ಕೈ ಗೊಂಬೆಯಲ್ಲವೇ? ಮನಸ್ಸಿಗೆ ಹಿತವೆನಿಸದ ಕಾರ್ಯಗಳಿಗೂ ಕೆಲವೊಮ್ಮೆ ಕೈ ಹಾಕಲೇಬೇಕಾದ, ತಮ್ಮ ನಿಲುವನ್ನು ಹಿಂದಕ್ಕೆ ದೂಡಿ ಅವುಗಳನ್ನು ಒಪ್ಪಲೇಬೇಕಾದ ಸಂದರ್ಭಗಳು ಎಲ್ಲರ ಜೀವನದಲ್ಲೂ ಬರುತ್ತವೆ. ಹಾಗೇ ಸುಶೀಲಮ್ಮ ಅನುರಾಧ ಕೆಲಸಕ್ಕೆ ಸೇರಬೇಕೆಂದಾಗ ವಿರೋಧಿಸಿದ್ದರೂ ಈಗ ಏನೂ ಮಾಡಲಾರದವರಾಗಿದ್ದರು.

ತಮ್ಮದೇ ಕೈಯಲ್ಲಿ ಇಷ್ಟು ವರುಷ ಊಟ ಮಾಡಿ ಬೆಳೆದ ಮಗನಿಂದು ಅಪರಿಚಿತ! ಮನೆಗೆ ಬಂದ ಸೊಸೆಯ ನಿಲುವಿನ್ನೂ ತಿಳಿಯಲಾರದಷ್ಟು ದೂರದಲ್ಲಿದೆ. ಹಾಗಲ್ಲ ಹೀಗೆ ಅಂದರೆ ಕೋಪಿಸಿಕೊಳ್ಳುವ ತನ್ನ ಮಗನೊಡನೆ ಸುಧಾರಿಸಿಕೊಂಡು ಹೋಗುವುದೂ ನಿರ್ಮಲಾಗೆ ಕಷ್ಟವೆಂದು ಸುಶೀಲಮ್ಮನಿಗೆ ತಿಳಿದ ಸಂಗತಿ. ಹಾಗಾಗಿ ಸೊಸೆಯನ್ನು ಅವರೇನೂ ದೂರಲಾರರು. ಅಷ್ಟು ಚಿಕ್ಕ ಮನಸ್ಸು ಅವರದ್ದಲ್ಲ. ತನ್ನದೇ ಮಗ ತನಗೆ ಅರ್ಥವಾಗದಿರುವಾಗ ಸೊಸೆ ಅರ್ಥವಾಗದಿರುವುದು ವಿಚಿತ್ರವಲ್ಲ. ನಿರ್ಮಲಾಗೂ ಅವಳ ಗಂಡನ ಸ್ವಭಾವ ಇನ್ನೂ ಅರ್ಥವಾಗಿಲ್ಲ. ಅಂಥಾ ಭಾವನೆ ಬಂದಾಗಲೆಲ್ಲಾ ಅವಳು ಯೋಚಿಸುವುದು ಒಂದೇ.

‘ಅನುರಾಧ ಶಂಕರರು ಇಷ್ಟೊಂದು ಅನ್ನೋನ್ಯವಾಗಿದ್ದಾರೆ. ಅವರ ಪರಿಚಯ ಮದುವೆಯ ಮೇಲಿನದ್ದು. ತಮ್ಮದು ಮದುವೆಯ ಮೊದಲಿನ ಪರಿಚಯವಾದರೂ ಇಂದಿಗೂ ಕೆಲವೊಮ್ಮೆ ನಮ್ಮೊಳಗೆ ಪ್ರೀತಿಯೇ ಇಲ್ಲವೇನೋ ಎನ್ನುವಂತಾಗುತ್ತಿದೆ. ಆನಂದನ ಮೌನ ದಿನ ಹೋದಂತೆ ಬೆಳೆಯುತ್ತಿರುವುದಲ್ಲದೇ ಕಡಿಮೆಯಾಗಿಲ್ಲ. ಇದಕ್ಕೆ ಕಾರಣವಾದರೂ ಏನು? ಎನ್ನುವ ಪ್ರಶ್ನೆಗೆ ಉತ್ತರ ಹುಡುಕಿ ಹುಡುಕಿ ನಿರ್ಮಲಾ ಸೋತಿದ್ದಳು.
*****

ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನ
Next post ಅಮೃತಶಿಲೆಯಲಿ ಕಡೆದ ಚಿನ್ನಲೇಪನವಿರುವ

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…