ಅಮೃತಶಿಲೆಯಲಿ ಕಡೆದ ಚಿನ್ನಲೇಪನವಿರುವ
ರಾಜಸ್ಮಾರಕ ಮೀರಿ ಬಾಳುವುದು ಈ ಕಾವ್ಯ,
ಕಾಲದ ಹೊಲಸು ಪಾಚಿ ಮೆತ್ತಿರುವ ಸ್ಮಾರಕವ
ಮೂದಲಿಸಿ ಹೊಳೆವೆ ನೀ ಕವಿತೆಯಲಿ ಬಲುಭವ್ಯ
ಯುದ್ಧದಲಿ ಎಲ್ಲ ವಿಗ್ರಹ ಮಣ್ಣಿಗುರುಳುವುವು,
ಬುಡಮೇಲು ಮಾಡುವುವು ಭವ್ಯ ಕಟ್ಟಡಗಳನು
ದೊಂಬಿಗಳು. ರಣಚಂಡಿ ಖಡ್ಗ ರಣಜ್ವಾಲೆಗಳು
ಅಳಿಸವೀ ಸ್ಮೃತಿಯ ಜೀವಂತ ದಾಖಲೆಯನ್ನು.
ಸಾವನ್ನು, ಸ್ಮೃತಿಯನೊರೆಸುವ ಶತ್ರುವೆಲ್ಲವನು,
ಸೆಣಸುತ್ತ ಗೆದ್ದು ಸಾಗುವೆ ನೀನು ಕಡೆತನಕ,
ಬರಲಿರುವ ಜನರ ಕಣ್ಣಲ್ಲಿ ನಿನ್ನ ಯಶಸ್ಸು
ಹೊಳೆಯುತಿರುವುದು, ಲೋಕ ಪ್ರಳಯ ಕಾಣುವ ತನಕ.
ದೈವನಿರ್ಣಯದ ದಿನ ಮೇಲಕೇಳುವವರೆಗೆ,
ಇರುವೆ ಈ ಕವಿತೆಯಲಿ, ಪ್ರೇಮಿಗಳ ಕಣ್ಣೊಳಗೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 55
Not marble, nor the gilded monuments