ತೊಗಲ ನಾಲಗೆ ನಿಜವ ನುಡಿಯಲೆಣಿಸಿದರೆ, ತಾ-
ನಂಗೈಲಿ ಪ್ರಾಣಿಗಳ ಹಿಡಿಯಬೇಕು.
ಇಲ್ಲದಿರೆ ನೀರಿನೊಲು ತಣ್ಣಗಿದ್ದವನದನು
ಉರಿಯ ನಾಲಗೆಯಿಂದ ನುಡಿಯಬೇಕು.
ಸುಡುಗಾಡಿನಲಿ ಹುಡುಗ ಹೆಣವಾದರೇನು? ಕೈ-
ಹಿಡಿದವಳು ಹೊಲೆಯನಾಳಾದರೇನು ?
ಸಿಲುಬೆಯಲ್ಲೊಡಲು, ವಿಷದಲಿ ನೆರಳು ಚಲಿಸಿದರು,
ಆತ್ಮವಾದರೆ ಸಾಕು ಉದಯಭಾನು.
ವಿಶ್ವ ವಿಶ್ವಾಮಿತ್ರನಾಗಿ ತಾನು
ರಾಹುವೊಲು ಬೆನ್ನಟ್ಟಿ ಬಂದರೇನು?
ನಿಜದಿ ಬೆರೆತವ ಮರೆತು ಬೇರೆ ಸೊಲ್ಲ,
ಚಿತೆಯ ಸತಿಯಂತೆ ಕೈ ಎತ್ತಬಲ್ಲ!
*****