೧
ಹೊಟ್ಟೆಯೇ ಮೊಟ್ಟಮೊದಲ ಚಿಂತೆಯು
ಹೊಟ್ಟೆಯಲ್ಲಿ ಬಂದವರ ಚಿಂತೆಯು
ಬೆನ್ನು ಬಿದ್ದು ಬಂದವರ ಚಿಂತೆಯು
ಬೆನ್ನು ಹಿಡಿದ ವಿಧಿ ಬಿಡದ ಚಿಂತೆಯು
ಕೈಯ ಹಿಡಿವರಾರೆಂಬ ಚಿಂತೆಯು;
ಹಿರಿಯರಂಜಿಕೆಯ ಹಿರಿದು ಚಿಂತೆಯು
ನೆರೆಯ ಹೊರೆಯವರ ಹೊರದ ಚಿಂತೆಯು
ಬದುಕು ಸಾರ್‍ಥಕವೆ ಎಂಬ ಚಿಂತೆಯು
ಮೊದಲಿನಿಂದ ತುದಿವರೆಗು ಚಿಂತೆಯು;
ಬಾಳು ಸುಲಿದುಕೊಳುತಿರುವ ಚಿಂತೆಯು,
ಕೀಳುಗಂಟಿಚಡಿಗಳ ಸಂತೆಯು.
೨
ಇಷ್ಟು ಜೀವ ಎಷ್ಟೊಂದು ರಿಣಗಳು?
ಇಷ್ಟು ಚಿಂತೆ ಅಷ್ಟಷ್ಟು ಹೆಣಗಳು.
ಎಲ್ಲ ಹೆಣಗಳನು ತಾನೆ ಸುಡುವದು
ಕೋಳ್ಳಿದೆವ್ವ ಮಂತ್ರಾಗ್ನಿ ಕೊಡುವದು.
ಹಾಳು ಸುರಿಯುತಿದೆ ಚೆಲುವು ಇಳೆಯೊಳು
ಬಾಲವಿಧವೆಯರ ಹಸರು ಹಣಿಯೊಲು;
ಚಿಂತೆಯುಳಿಸಿ ಚಿಂತನದಿ ಮುಳುಗಿಸು
ಅಂತು ಇಂತುಳಿಸಿ ಆತ್ಮ ಬೆಳಗಿಸು!
ಸದಯನಾಗಿ ಹೇ ಗುರುವೆ ಆರ್‍ಯನೇ!
ಉದಯವಾಗು ವಿಜ್ಞಾನ ಸೂರ್‍ಯನೇ!!
*****