ಒಬ್ಬ ಗೊಲ್ಲ ದನವನ್ನು ಅಟ್ಟಿಕೊಂಡು ಹುಲ್ಲುಗಾವಲಿಗೆ ಬಂದ. ದನಗಳು ತಲೆ ಬಗ್ಗಿಸಿ ಮೇವನ್ನು ಮೇಯಲಾರಂಭಿಸಿದವು. ಅಷ್ಟರಲ್ಲಿ ಅಲ್ಲಿ ಒಬ್ಬ ಸಾಧು ಬಂದರು.

“ಗೊಲ್ಲಾ, ನೀನು ಏನು ಮಾಡುತ್ತಿರುವೆ?” ಎಂದು ಕೇಳಿದರು ಸಾಧು.
“ದನ ಮೇಯುತ್ತಿದೆ. ನಾನು ಸುಮ್ಮನೆ ಕುಳಿತಿರುವೆ.” ಎಂದ.
“ನಿನಗೂ, ದನಕ್ಕೂ ಇರುವ ವ್ಯತ್ಯಾಸವೇನು?” ಎಂದರು ಸಾಧು.
“ನಾನು ಮನುಷ್ಯ, ಅದು ಪ್ರಾಣಿ” ಎಂದ ಗೊಲ್ಲ.
“ಹೌದು, ನೀನು ಮನವನ್ನು ಬಿಡದೆ ಮೇಯುತ್ತಿರುವೆ. ದನ ಮನವನ್ನು ಬಿಟ್ಟು ಮೇಯುತ್ತಿದೆ.”
“ನನಗೇನು ಅರ್ಥವಾಗಲಿಲ್ಲ” ಎಂದ ಗೊಲ್ಲ.
“ಹಳ್ಳಿಯ ಗೊಲ್ಲಾ! ಕೇಳು, ಮನವನ್ನು ತೊರೆದು ಮೇಯುವ ದನ, ಬೆಳಗಾಗಲು ಹಾಲು ಕರೆಯುತ್ತದೆ. ಮನವನ್ನು ತೊರೆಯದೆ ಮೇಯುವ ನಾವು, ಬೆಳಗಾಗಲು ಇತರರಲ್ಲಿ ವಿಷಕಾರುತ್ತೇವೆ. ಮನವನ್ನು ಕಾಡಿನಲ್ಲಿ ಬಿಟ್ಟು ದನದೊಂದಿಗೆ ಮನೆ ಸೇರು ಗೊಲ್ಲ.” ಎಂದರು. ಗೊಲ್ಲನ ಹೃದಯದಲ್ಲಿ ಹಾಲು ಉಕ್ಕಿತು, ಸಾಧುವಿನ ಮಾತು ಕೇಳಿ.
*****