ದೊಡ್ಡದೇವರಾಜ ಒಡೆಯರ ತರುವಾಯ ಚಿಕ್ಕದೇವರಾಜ ಒಡೆಯರು ಪ್ರಸಿದ್ದರಾಗಿ ಆಳಿದರಷ್ಟೆ. ಈ ಚಿಕ್ಕದೇವರಾಜ ಒಡೆಯರು ಪಟ್ಟವನ್ನೇರುವುದಕ್ಕೆ ಮೊದಲು ಹಂಗಳದಲ್ಲಿದ್ದು ಜೈನ ಮತಸ್ಥನೂ ಪ್ರಖ್ಯಾತ ಪಂಡಿತನೂ ಆಗಿದ್ದ ಯಳಂದೂರಿನ ವಿಶಾಲಾಕ್ಷ ಪಂಡಿತನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಪಟ್ಟವಾದ ಮೇಲೆ ಗುರುವಿನ ಮೇಲಿನ ಭಕ್ತಿಯಿಂದ ಒಡೆಯರು ವಿಶಾಲಾಕ್ಷ ಪಂಡಿತನನ್ನೆ ಮಂತ್ರಿಯಾಗಿ ನೇಮಿಸಿಕೊಂಡರು.
ಅದುವರೆಗೂ ಅರಮನೆಯಲ್ಲಿ ವೀರಶೈವ ಮತಸ್ಥರ ಮತ್ತು ಅವರ ಗುರುಗಳಾದ ಜಂಗಮರ ಪ್ರಭಾವವೇ ಹೆಚ್ಚಾಗಿತ್ತು. ಜೈನ ಮತಕ್ಕೂ ವೀರಶೈವ ಮತಕ್ಕೂ ಬಿಜ್ಜಳ ಬಸವೇಶ್ವರರ ಕಾಲದಿಂದಲೂ ವಿರೋಧ. ಆದ್ದರಿಂದ ಜಂಗಮರಿಗೆ ವಿಶಾಲಾಕ್ಷ ಪಂಡಿತನು ಮಂತ್ರಿ ಪದವಿಗೆ ಬಂದುದು ಸರಿಬೀಳಲಿಲ್ಲ. ಪ್ರಕಾಶವಾಗಿ ವಿರೋಧವನ್ನು ತೋರದಿದ್ದರೂ ಈ ಜಂಗಮರು ರಹಸ್ಯವಾಗಿ ಸಂಧಾನಮಾಡಿ ಪಂಡಿತನನ್ನು ಅರಮನೆಯಿಂದ ತಪ್ಪಿಸಬೇಕೆಂದು ಯೋಚನೆ ಮಾಡುತ್ತಿದ್ದರು.
ಇತ್ತ ರಾಜರೂ ಮಂತ್ರಿಯ ಇಬ್ಬರೂ ಸೇರಿ ರಾಜಾದಾಯವನ್ನು ಹೆಚ್ಚಿಸಲು ಅನೇಕ ಉಪಾಯಗಳನ್ನು ಯೋಚಿಸಿದರು. ನೆಲಗಂದಾಯವನ್ನು ಹೆಚ್ಚಿಸಿದ್ದಲ್ಲದೆ ಅನೇಕ ತೆರಿಗೆಗಳನ್ನು ಹೊಸದಾಗಿ ಗೊತ್ತುಮಾಡಿದರು. ರೈತರಲ್ಲಿಯೂ ಇತರ ಸಾಮಾನ್ಯ ಪ್ರಜೆಯಲ್ಲಿಯೂ ಇದರಿಂದ ಅತೃಪ್ತಿಯು ತೋರಿತು. ಇದೇ ಸಮಯವೆಂದು ಜಂಗಮರು ಅಲ್ಲಲ್ಲಿ ಸಂಚರಿಸುತ್ತ ವಿಷದ ಬೀಜವನ್ನು ಚಲ್ಲುತ್ತ ಜನರು ದಂಗೆಯೇಳುವಂತೆ ಪ್ರೇರೇಪಿಸಲಾರಂಭಿಸಿದರು. ಬೇಹಿನವರು ಈ ಸುದ್ದಿಯನ್ನು ದಿನೇ ದಿನೇ ಸನ್ನಿಧಾನದಲ್ಲಿ ಅರುಹುತ್ತಿರಲು ಒಡೆಯರವರು “ಈ ಜಂಗಮರು ಬಹಳ ಕೊಬ್ಬಿರುತ್ತಾರೆ. ಇವರಿಗೆ ಆಸ್ಪದ ಕೊಟ್ಟರೆ ರಾಜ್ಯಕ್ಕೆ ವಿಪತ್ತನ್ನು ತಂದಿಡುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಅಂಕುರದಲ್ಲಿಯೇ ಇದನ್ನು ನಿರ್ಮೂಲನ ಮಾಡಿಬಿಡಬೇಕು” ಎಂದು ಜಂಗಮರನ್ನು ಅಡಗಿಸಲು ಒಂದು ಉಪಾಯವನ್ನು ಸಿದ್ಧಗೊಳಿಸಿದರು.
ಮೊದಲು ರಾಜ್ಯದಲ್ಲಿದ್ದ ಜಂಗಮರೆಲ್ಲರೂ ನಂಜನಗೂಡಿನಲ್ಲಿ ಸಭೆ ಸೇರತಕ್ಕದೆಂದು ಎಲ್ಲೆಲಿಯೂ ಸಾರಿದರು. ರಾಜ ಸಭೆಗೆ ಕರೆಸಿದಾಗ ಹೋಗುವುದಕ್ಕೇನು? ಪಂಡಿತರಾದವರೂ ಪಂಡಿತರೆಂದು ವೇಷಹಾಕಿದವರೂ ಗೊತ್ತಾದ ದಿನ ನಂಜನಗೂಡಿಗೆ ಹೊರಟರು. ಅಲ್ಲಿ ರಾಜರು ಇವರ ಔತಣಕ್ಕೆಂದು ಕಾಣುವ ಹಾಗೆ ಅನೇಕ ಗುಡಾರಗಳನ್ನು ನಿರ್ಮಿಸಿದ್ದರು. ಸ್ವತಃ ರಾಜರೇ ಒಂದು ಗುಡಾರದಲ್ಲಿ ಭದ್ರಾಸನದಲ್ಲಿ ಕುಳಿತು ಒಬ್ಬೊಬ್ಬರಾಗಿ ಬಂದ ಜ೦ಗಮರನ್ನು ಕುರಿತು “ಒಳಗೆ ದಯಮಾಡಿ” ಎಂದು ಒಳಕ್ಕೆ ಕಳುಹಿಸುತ್ತಿದ್ದರು. ಒಳಗೆ ಫಲಾಹಾರದ ವ್ಯವಸ್ಥೆಯು ಎಂದಿನಂತೆ ನಡೆದಿರುತ್ತದೆಂದು ಜ೦ಗಮರೊಬ್ಬೊಬ್ಬರಾಗಿ ಆ ಗುಡಾರವನ್ನು ಬಿಟ್ಟು ಪಕ್ಕದ ಗುಡಾರಕ್ಕೂ ಅಲ್ಲಿಂದ ಒಂದು ಅಂಗಳಕ್ಕೂ ಹೊರಡು ತ್ತಿದ್ದರು. ಆ ಅಂಗಳದ ಸುತ್ತಲೂ ಪಟದಿಂದ ನಿರ್ಮಿತವಾದ ಗೋಡೆಯಿದ್ದು ಮಧ್ಯೆ ಮಾತ್ರ ಬರೀ ಹಳ್ಳವಾಗಿತ್ತು. ಇದ್ದುದು ಒಂದೇ ಬಾಗಿಲು, ರಾಜರನ್ನು ಕಂಡು ಜಂಗಮರು ಒಬ್ಬೊಬ್ಬ ರಾಗಿ ಈ ಬಾಗಿಲಿನಲ್ಲಿ ಪ್ರವೇಶಮಾಡಿದೊಡನೆಯೇ ಬಾಗಿಲ ಹಿಂದೆ ಸದ್ದಿಲ್ಲದೆ ನಿಂತಿದ್ದ ಆಯುಧಪಾಣಿಗಳಾದ ಇಬ್ಬರು ಭಟರು ತಮ್ಮ ಕತ್ತಿ, ಕಠಾರಿಗಳಿಂದ ಒಂದೇ ಏಟಿಗೆ ಸಂಹರಿಸಿ ದೇಹ ಬೀಳುವುದಕ್ಕೆ ಮೊದಲೇ ಹಳ್ಳಕ್ಕೆ ನೂಕಿಬಿಡುತ್ತಿದ್ದರು. ಇನ್ನೂರು ಮುನ್ನೂರು ಮಂದಿ ಜಂಗಮರಿಗೂ ಇದೇ ಗತಿಯಾಯಿತು. ಜಂಗಮರ ಮುಖಂಡರೆಲ್ಲರೂ ಈ ರೀತಿಯಾಗಿ ಹತರಾದರು.
ಅದೇ ದಿನ ರಾಜಾಜ್ಞೆಯಿಂದ ರಾಜ್ಯದಲ್ಲೆಲ್ಲಿಯೂ ರಾಜ ಭಟರು ಆಯುಧಪಾಣಿಗಳಾಗಿ ಸಂಚರಿಸುತ್ತಲೂ ತುಂಟತನ ಮಾಡಿದವರನ್ನು ಕಡಿದುಹಾಕುತ್ತಲೂ ಇದ್ದರು. ಎಲ್ಲ ಪ್ರಜೆಗಳ ಮನಸ್ಸಿನಲ್ಲಿಯೂ ಭೀತಿಯ ನಾಟಿತು. ಜಂಗಮರಲ್ಲಿ ಎಲ್ಲಿಯೋ ಹಲ ಕೆಲವರು ಮಾತ್ರ ತಪ್ಪಿಸಿಕೊಂಡು ತಲೆಯನ್ನು ಮರೆಸಿಕೊಂಡು ಇರುತ್ತಿದ್ದರು.
ಘೋರವಾದ ಈ ಕೊಲೆಗೆ ಯಳಂದೂರು ಪಂಡಿತನೇ ಕಾರಣನೆಂದು ಅನೇಕರು ಆಡಿಕೊಳ್ಳುತ್ತಿದ್ದರು. ಮರೆಯಲ್ಲಿದ್ದುಕೊಂಡು ದುಃಖದವನ್ನೂ ರೋಷವನ್ನೂ ಅನುಭವಿಸುತ್ತಿದ್ದ ಜಂಗಮರು ವಿಶಾಲಾಕ್ಷ ಪಂಡಿತರನ್ನು ಹೇಗಾದರೂ ಕೊನೆಗಾಣಿಸಬೇಕೆಂದು ಹೊಂಚುತ್ತಿದ್ದರು. ಹೀಗಿರಲು, ಒಡೆಯರು ಜೈನಮತ ದೀಕ್ಷೆಯನ್ನು ತೆಗೆದುಕೊಳ್ಳುವರೆಂಬ ವದಂತಿಯು ಹರಡಲು ಜಂಗಮರೂ ಅವರ ಅನುಚರರೂ ಸಾಹಸವನ್ನೇ ಮಾಡಬೇಕೆಂದು ಒಂದು ದಿನ ಸಂಜೆಯ ಮಸುಕಿನಲ್ಲಿ ಪಂಡಿತನು ತನ್ನ ಮನೆಯನ್ನು ಬಿಟ್ಟು ಅರಮನೆಗೆ ಹೊರಡುತ್ತಿದ್ದ ವೇಳೆಯಲ್ಲಿ ದಾರಿಯಲ್ಲಿ ಅವಿತಿದ್ದು ಮೇಲೆ ಬಿದ್ದು ಆತನನ್ನು ಚೆನ್ನಾಗಿ ಹೊಡೆದು ಸತ್ತನೆಂದು ಬಿಟ್ಟು ಬಿಟ್ಟು ಓಡಿ ಹೋದರು. ಪಂಡಿತರು ಇನ್ನೂ ಸತ್ತಿರಲಿಲ್ಲ; ಕೆಳಕ್ಕೆ ಬಿದ್ದು ಪೆಟ್ಟು ತಿಂದು ಕೂಗಿಕೊಳ್ಳುತ್ತಿದ್ದನು ಸ್ವಲ್ಪಕಾಲದಲ್ಲಿ ಊಳಿಗದವರು ಕೆಲವರು ಕೂಗನ್ನು ಕೇಳಿ ಬಂದು ಆತನನ್ನು ಹೊತ್ತುಕೊಂಡು ಹೋಗಿ ಆತನ ಮನೆಯಲ್ಲಿ ಮಂಚದಮೇಲೆ ಮಲಗಿಸಿದರು. ಅರಸನಿಗೆ ಸಮಾಚಾರ ತಲಪಿತು. “ಆಹಾ! ಏನು ಪ್ರಮಾದವಾಯಿತು!” ಎಂದುಕೊಂಡು ಒಡೆಯರೇ ಪಂಜಿನವರನ್ನು ಕರೆದುಕೊಂಡು, ರಾತ್ರಿಯಾದರೂ ತಮ್ಮ ಗುರುವಿನ ಮನೆಗೆ ಬಂದರು. ಪಂಡಿತನು ಅವರು ಬರುವವರೆಗೂ ಪ್ರಾಣವನ್ನು ಹಿಡಿದಿದ್ದು ಅವರು ಬಂದೊಡನೆ ಸಮಾಚಾರವನ್ನು ಸೂಕ್ಷ್ಮವಾಗಿ ತಿಳುಹಿಸಿ “ಇನ್ನು ನಾನು, ಬದುಕುವ ಆಸೆಯೇನೂ ಇಲ್ಲ; ತಾವಿನ್ನೂ ಚಿಕ್ಕವರು. ನನ್ನ ಬಳಿಕ ನನ್ನ ಸ್ಥಾನದಲ್ಲಿ ನಿಮ್ಮ ಸಹಾಧ್ಯಾಯಿಯಾದ ತಿರುಮಲಾರ್ಯನನ್ನು ನೇಮಕ ಮಾಡಿರಿ. ದೇವರು ನಿಮಗೆ ಮಂಗಳವನ್ನು ಮಾಡಲಿ” ಎಂದು ಪ್ರಾಣವನ್ನು ಬಿಟ್ಟನು.
ಒಡೆಯರೂ ಸಹ ಹಾಗೆಯೇ ತಿರುಮಲಾರ್ಯನನ್ನೇ ಮಂತ್ರಿ ಪದವಿಯಲ್ಲಿ ನಿಯಮಿಸಿದರು.
*****
[ವಿಲ್ಕ್ಸ್, ಸಂ.೧ ಪುಟ ೫೪, ೫೫, ೧೨೪, ೧೨೮.೧೨೯; ಹೊಸ ಗೆಜಟಿಯರ್ ಸಂ, ii, ಭಾಗ ೪, ಪುಟ….., ಸಂ. v, ಪುಟ ೮೭೧, ೮೭೨; ವಂಶ ರತ್ನಾಕರ ಪುಟ ೧೪೬, ವಂಶಾವಳಿ ಪಟ೧೦೫]


















