ಅದೊ ಮಸಳುತಿದೆ ಗುರಿಯನಂತಕಾಲದ ಹಿಂದೆ.
ದಣಿದು ತೇಗುವ ಜೀವ ಮರಳುತಿದೆ. ಸಹಿಸಬೇ-
ಕಂತೆ ಕೋಟಿ ಕೋಟಿಗಟ್ಟಲೆಯೆ, ವಹಿಸಬೇ-
ಕಂತೆ ನಿರವಧಿ ಕಾಲವನು. ತಿಳಿವು ಬರದಿಂದೆ.
ಮೂಡಣದ ಮೂಡು- ಮುಳುಗುಗಳ ತೆರೆಗಳ ಹಿಂದೆ
ಅಸ್ತವಾಯಿತು ಗುರಿಯು. ಕನಸುಗಳ ಗಾಳಿಗೋ-
ಪುರದಾಚೆ, ಸುಖದ ಮಳೆಬಿಲ್ಲೀಚೆ, ಇಲ್ಲಿಗೋ!
ಬೇಹಿನವರನು ಕಳುಹು. ರಜನಿ ಕುಣಿವುದು ಮುಂದೆ!
ದೂರ ಮಸುಳಿದ ಗುರಿಯ ನೋಡಿ ದುಃಖಿಸಬೇಡ.
ಮೊಗ್ಗೆಯಿರದೊಮ್ಮಿಗಿಲೆ ಸುಮನವಾದಂಕುರವು
ಸುಗ್ಗಿಯಲಿ ಸಹ ಸಿಗದು. ಬರುವೊಂದು ಕಾಲದಲಿ
ನೆಲಮುಗಿಲು ಒಂದಾಗಿ ನಿಂತಿರುವದನು ನೋಡ !
ವಿಶ್ವಪತಿಯಾಗಿರುವ ಜೀವಕೆಲ್ಲಿಯ ಮರೆವು ?
ಸೂರ್‍ಯಚಂದ್ರರು ನರ್‍ತಿಸುವರದರ ತಾಲದಲಿ !
*****



















