ಮೂಲ: ಬುದ್ಧದೇವ ದಾಸಗುಪ್ತ
ಛತ್ರಿಗಳೆಲ್ಲ ಥಟ್ಟನೆ ಬೀದಿಗೆ ಬಂದಿದ್ದಾವೆ,
ಒಂದರ ಸಹಾಯದಿಂದ ಒಂದು ನಡೆಯುತ್ತಿದ್ದಾವೆ.
ಪುಟ್ಟನೆ ಛತ್ರಿಯ ಹೆಗಲಿನ ಮೇಲೆ ಒಂದು ಕೈಯಿಟ್ಟು
ದೊಡ್ಡ ಛತ್ರಿ ನಡೆಯುತ್ತಿದೆ ತಾನೇ ಪ್ರತ್ಯೇಕ.
ಎಷ್ಟೋ ಹೊತ್ತಿನಿಂದ ಪಾಪ ಬಸ್ ಸ್ಟಾಂಡ್ ಕಟ್ಟೆ ಮೇಲೆ ನಿಂತು
ಯಾರು ಬರುವರಂತಲೋ ಕಾದ ಒಂದು ಛತ್ರಿ
ಕಾದು ಕಾದು ಕಾದು
ಹೇಳಿದ್ದ ಆಸಾಮಿ ಬರದೆ
ಕೋಪ ದುಃಖ ಅವಮಾನದ ತಾಪದಲ್ಲಿ ಸೀದು
ಸ್ಟ್ಯಾಂಡು ಬಿಟ್ಟು ಹೊರಗೆ ಬಂತು, ದಾರಿಯಲ್ಲಿ ಹೋಗುತ್ತಿದ್ದ
ಸಾವಿರಾರು ಛತ್ರಿ ಮಧ್ಯೆ ತೂರಿ ಸೇರಿ ಹೋಯಿತು.
ಅಗೋ ಅಲ್ಲಿ ಇದ್ದಕ್ಕಿದ್ದ ಹಾಗೆ ದೂರ ತಲೆಯ ಮೇಲೆ
ಬಿಳಿಯ ಭಾರಿ ಭತ್ರಿ ಮೆಲ್ಲಗರಳಿಕೊಂಡಿತು,
ಅದೇ ಹೊತ್ತಿನಲ್ಲಿ ದೈತ್ಯನಂಥ ಒಂದು ಕರೀ ಮೋಡ
ಮೂಡಿ ಬಿಳಿಯ ಛತ್ರಿಮೇಲೆ ಕಾವು ಕೂತಿತು,
ದಾರಿಯಲ್ಲಿ ಬಿಡಿ ಬಿಡೀ ಹೋಗುತ್ತಿದ್ದ ಛತ್ರಿಗಳು
ಹಠಾತ್ತನೆ ಒಂದೇ ಸಲ ನಿಂತುಬಿಟ್ಟವು.
ಒಂದು ಛತ್ರಿ ಮತ್ತೊಂದರ ಕಡೆಗೆ ಓಡಿ ನುಗ್ಗಿದವು
ಕಟಕಟನೆ ಹಲ್ಲು ಕಡಿದು, ಕುತ್ತಿಗೆಗೆ ಕೈಹಾಕಿ
ಒಂದನ್ನೊಂದು ಎಳೆದು ನೂಕಿ ಎಗರಾಡಿದವು.
ಹಿಗ್ಗಾಮುಗ್ಗಾ ಎಳೆದಾಡಿ, ಕಡೆಗೆ ಪೂರಾ ಸುಸ್ತಾಗಿ
ಒಂದೊಂದೇ ಛತ್ರಿ ಮನೆಯ ದಾರಿ ಹಿಡಿದವು;
ಬಂದದ್ದೇ ಮಾತಿಲ್ಲದೆ ಮನೆಯಲ್ಲೊಂದು ಮೇಲೆ ಸೇರಿ
ಒರಗಿಕೊಂಡಿವೆ.
ತುಂಬಿಕೊಂಡ ನೀರನ್ನೆಲ್ಲ ಹನಿಹನಿ ಹನಿ ನೆಲಕ್ಕಿಳಿಸಿ
ಭಾರ ಕಳೆದು ಹಗುರಾಗಿ
ತೆಪ್ಪಗಾಗಿವೆ.
*****
















