ಬದುಕಿಗಾಗಿ…

ಬದುಕಿಗಾಗಿ…

ಚಿತ್ರ: ಪಿಕ್ಸೆಲ್ಸ್
ಚಿತ್ರ: ಪಿಕ್ಸೆಲ್ಸ್

ಹಾಗೆ ನೋಡಿದರೆ ಅವರೆಲ್ಲ ಕೊಲ್ಲಿದೇಶಗಳಿಗೆ ಹೋಗಿ ಸಾಕಷ್ಟು ಹಣಗಳಿಸಬೇಕೆಂದು ಕನಸು ಕಂಡವರೇ ಅಲ್ಲ.

ತುತ್ತು ಅನ್ನಕ್ಕಾಗಿ ಚೂರು ರೊಟ್ಟಿಗಾಗಿ ಎಲ್ಲೆಲ್ಲಿಯೋ ಮುಸುರೆ ತೊಳೆಯುವ ಹಮೀದಾ, ಅವಳ ಮಗಳು ಸಾರಾ ದಿನನಿತ್ಯ ದುಡಿದು ಒದ್ದೆ ಬಟ್ಟೆಗಳಿಂದ ಕಾಲು ತೊಡಕಾಗಿಸಿಕೊಳ್ಳುತ್ತ ಗಡಿಬಿಡಿಯಿಂದ ಸಾಯಂಕಾಲ ಅರ್ಧ ಕಿ.ಮೀ ದೂರದ ನಮಾಜಮಾಳ ಸೇರುತ್ತಾರೆ.

ಹೋದವರ್ಷವಷ್ಟೇ ದುಬೈದಿಂದ ಮಗ ಉಮರ್ ಬಂದಾಗ ಹೆಣಿಕೆಯ ಚಾಪೆ, ಟೇಪರಿಕಾರ್ಡರ್ ತಂದಿದ್ದ.

ದಣಿದ ದೇಹಕ್ಕೆ ಚಾಪೆ ಹಿತ ನೀಡುತ್ತಿತ್ತು. ಹಮೀದಾ ಒರಗುತ್ತಾಳೆ. ಇಪ್ಪತ್ತ ರ ಬಿಸಿರಕ್ತದ ಸಾರಾ ಮುಳ್ಳುಕೊರೆಗಳಿಂದ ಒಲೆ ಹೊತ್ತಿಸಿ ಕುಕ್ಕರಗಾಲಿನಲ್ಲಿ ಕುಳಿತು ತೊಯ್ದ ಪೈಜಾಮಾ ಆರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ.

ತಿಳಿಬಣ್ಣದ ಬೆಲ್ಲದ ಚಹಾ ತಯಾರಿಸಿ ಅಮ್ಮನಿಗೊಂದಿಷ್ಟು ಕೊಟ್ಟು ತಾನೂ ಒಡ್ಡಲೋಟದಲ್ಲಿ ಹಾಕಿಕೊಂಡು ಬಂದು ಅಮ್ಮನ ಹತ್ತಿರ ಕೂಡುವಳು.

ಮೂಲೆಯಲ್ಲಿ ಸ್ವಲ್ಪ ಎತ್ತರವಾದ ಮುರಿದ ಕಟ್ಟಿಗೆ ಕಪಾಟು ಇದ್ದರೂ ಅದರ ಮೇಲೆ ಟೇಪ್‌ರಿಕಾರ್ಡರ, ಎಷ್ಟೊಂದು ನೀಟಾಗಿ ಇಟ್ಟಿದ್ದಾಳೆ ಸಾರಾ ಅದನ್ನು.

ಹಮೀದಾ ಎದ್ದು ಗೋಡೆಗೆ ಒರಗಿ ಚಹಾ ಕುಡಿಯುತ್ತಿದ್ದಂತೆಯೇ ಸಾರಾ ಟೇಪ್ ರಿಕಾರ್ಡರ್ ಅನ್ ಮಾಡಿ ಹಾಡು ಕೇಳತೊಡಗಿದಳು.

ಅವಳ ನಾಲಿಗೆಯ ಮೇಲೆ ೩೦-೪೦ ವರ್ಷಗಳ ಸಿನೇಮ ಹಾಡುಗಳೆಲ್ಲವೂ ಇವೆ. ಆ ಹಾಡುಗಳ ಏರಿಳಿತಗಳಲ್ಲಿ ನೂರಾರು ಕನಸುಗಳು ಕಾಣುತ್ತ ಅಳುತ್ತ ನಗುತ್ತಾ, ಏನೇನೋ ಒಂದಿಷ್ಟು ಉಳಿದದ್ದು, ತಂದದ್ದು ಬಿಸಿಮಾಡಿಕೊಂಡು ಒಂದಷ್ಟು ಹೊಸದನ್ನು ಮಾಡಿ ಅಣ್ಣ ಬಶೀರ್‌ನಿಗೆ ಕಾಯುವಳು.

ಬಶೀರ್ ಇತ್ತೀಚೆಗೆ ಮನೆಗೆ ರಾತ್ರಿ ಬಹಳ ಹೊತ್ತು ಕಳೆದು ಬರುತ್ತಿದ್ದಾನೆ. ಅಂದ ಮಾತ್ರಕ್ಕೆ ಅವನು ಯಾವ ಕೆಟ್ಟ ಕೆಲಸವೂ ಮಾಡುತ್ತಿಲ್ಲ. ಬದುಕುವ ದಾರಿ ಕಾಣಲು ಹೋರಾಡುತ್ತಿದ್ದಾನೆ.

ಅಮ್ಮ-ತಂಗಿಯ ಪರಿಸ್ಥಿತಿಯ ಬಗೆಗೆ ಅವನದೆಷ್ಟೋ ಸಲ ನೊಂದುಕೊಳ್ಳುವನು. ಅಮ್ಮನ ಕಣ್ಣೀರು ಒರೆಸಲು; ತಂಗಿಯ ಕನಸುಗಳಿಗೆ ಕಾವು ಕೊಡಲು ಅಲ್ಲಲ್ಲಿ ಓಡಾಡುತ್ತಿದ್ದಾನೆ.

ಎಷ್ಟೋ ಹೊತ್ತು ಬಶೀರನಿಗಾಗಿ ಕಾಯ್ದು ಸುಸ್ತಾದ ಸಾರಾ ಅಮ್ಮನ ಮುಂದೆ ಬಯ್ಯುತ್ತ ತಾನು ಊಟಮಾಡಿ ಮಲಗಿಕೊಂಡಳು.

ಒಂದು ಕೋಣೆ ಎನ್ನುವ ಹಂಚಿನ ಮನೆಗೆ ರಾತ್ರಿ ಝೀರೋ ಬಲ್ಬು ಜೀವ ತುಂಬುತ್ತಿತ್ತು. ಅಷ್ಟೇ ಮಿಣಿ ಮಿಣಿ ಬೆಳಕಿನಲ್ಲಿ ಅಡುಗೆ, ಊಟ ಮಾತುಕಥೆ, ನಗು ಅಳು ಜಗಳ ಏನೆಲ್ಲ ತುಂಬಿಕೊಂಡು ಆಗಾಗ ಮನದಾಳಕ್ಕೆ ಇಳಿದು ಕಲಕಿದಾಗ ಸಂದರ್ಭಕ್ಕನುಗುಣವಾಗಿ ಒಂದೊಂದೇ ಬಿಚ್ಚಿಕೊಳ್ಳುತ್ತಿದ್ದವು.

ಸರಿ ರಾತ್ರಿಯೇ ಆಗುತ್ತ ಬರುತ್ತಿದೆ. ಹೊರಗಡೆ ಭರ್ರೆಂದು ಅಂಬಾಸೆಡರ್ ಕಾರು ತನ್ನ ಹಳೆತನ, ಮೊಡಕಾ ಬಜಾರಿನದೆಂದು ತಿಳಿಸುವಂತೆ ಹಾರ್ನ್ ಹಾಕುತ್ತ ದಾಟಿ ಹೋಯಿತು.

ಹಮೀದಾ ಮಗ್ಗಲು ಹೊರಳಿಸುವಳು. ಬಶೀರ್ ಬೇಟಾ ಇನ್ನೂ ಬರಲಿಲ್ಲವೇ ಎನ್ನುತ್ತ ಉಸಿರು ಹಾಕಿ ನಿಧಾನಕ್ಕೆ ಎದ್ದು ಕುಳಿತು ಮೂಲೆಯಲ್ಲಿ ಸರಿಸಿದ್ದ ಯಾವುದೋ ಮುಲಾಮು ತನ್ನ ಕೊಳೆತು ನೋವಾದ ಕಾಲು ಬೆರಳು ಸಂದಿಗಳಿಗೆ ಹಚ್ಚಿ ತೀಡಿಕೊಳ್ಳತೊಡಗಿದಳು. ಪಕ್ಕದಲ್ಲಿಯೇ ಮಲಗಿದ ತುಂಬು ಹರೆಯದ ಸಾರಾಳನ್ನು ನೋಡಿ ಉಸಿರಿಡುವಳು.

ಉಸಿರಿಡುವದು ಅವಳಿಗೇನೂ ಹೊಸದಲ್ಲ. ಇಪ್ಪತ್ತು ವರ್ಷಗಳಿಂದ ಉಸಿರು ಬಿಟ್ಟು, ಬಿಟ್ಟು ಎದೆಗೊಡೆಲ್ಲ ಸುಟ್ಟುಹೋಗಿದೆ.

ಅಂದು ಹರಕುಚಾಪೆಗಳ ಮೇಲೆ ನಾಲ್ಕು, ಚಿಕ್ಕಪುಟ್ಟ ಇಬ್ರಾಹಿಂ, ಅಹಮದ್, ಉಮರ್, ಬಶೀರ್ ಗಂಡು ಮಕ್ಕಳೊಂದಿಗೆ ಉರುಳಿಕೊಳ್ಳುತ್ತಿದ್ದ ಹಮೀದಾ, ಗಂಡ ಅಬ್ದುಲ್‌ನ ಜೊತೆ ಅರೆಹೊಟ್ಟೆಯಿಂದ ಜಗಳಾಡುತ್ತ ಆಗಾಗ ಹೊಡೆದಾಡುತ್ತ ಕಣ್ಣೀರು ಹಾಕುತ್ತಿದ್ದುದು ನಿನ್ನೆಯೋ ಮೊನ್ನೆಯೋ ಎಂದಂತಾಗಿದೆ ಅವಳಿಗೆ.

ಬಡತನಕ್ಕೆ ಹಸಿವು-ಮಕ್ಕಳು ಹೆಚ್ಚೆನ್ನುವಂತೆ ಮತ್ತೊಮ್ಮೆ ಬಸಿರಾಗಿದ್ದಳು. ಪಾತ್ರೆ ತೊಳಿಸಿಕೊಳ್ಳುವವರ ಹಳಸಿದ ಅನ್ನ ಸಾಕಾಗುತ್ತಿರಲಿಲ್ಲ. ಅಬ್ದುಲ್‌ನ ಹೂವು ಮಾರಾಟವೂ ಅಷ್ಟಕ್ಕಷ್ಟೆ. ಸೈಕಲ್ ಮೇಲೆ ಓಣಿ ಓಣಿ ತಿರುಗಿ ಒಂದು ಬುಟ್ಟಿ ಹೂವು ಮಾರಾಟಮಾಡಬೇಕಾದರೆ ಗಂಟಲು ಹರಿದು ಹೋಗುತ್ತಿತ್ತು. ಸೈಕಲ್ ಪೆಡಲ್ ತುಳಿದೂ ತುಳಿದೂ ಸುಸ್ತಾಗಿ ಗಳಿಸಿದ್ದರಲ್ಲಿ ಅರ್ಧಹಣ ರಾತ್ರಿಗೆ ಹೆಂಡದಂಗಡಿಯಲ್ಲಿ ಇಟ್ಟು ತೂರಾಡುತ್ತ ಮನೆಗೆ ಬರುತ್ತಿದ್ದ.

ಒಂದು ದಿನ ಇದ್ದಕ್ಕಿದ್ದ ಹಾಗೆ ಮುಂಬೈದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂವಿನ ವ್ಯಾಪಾರಮಾಡಿ ನಾಲ್ಕು ದುಡ್ಡು ಕೈಯಲ್ಲಿ ಉಳಿಸಿಕೊಳ್ಳಬೇಕೆನ್ನುವ ಆಸೆಯಿಂದ ಹಮೀದಾಳಿಗೆ ಹೇಳಿ, ನಿನ್ನನ್ನೂ ಕರೆಯಿಸಿಕೊಳ್ಳುವೆನೆನ್ನುವ ಭರವಸೆ ಕೊಟ್ಟು ಹೈವೇ ಟ್ರಕ್ ಹತ್ತಿ ಹೊರಟುಬಿಟ್ಟ.

ಹಮೀದಾಳ ಎದೆ ಒಡೆದುಹೋಯಿತು. ಈ ಮಕ್ಕಳನ್ನೆಲ್ಲಾ ಕಟ್ಟಿಕೊಂಡು ಸಂಸಾರ ಮುಂದುವರೆಸುವದು ಹೇಗೆ ಎನ್ನುವ ದೊಡ್ಡ ಚಿಂತೆಯಲ್ಲಿ ಅತ್ತೂ ಅತ್ತೂ ಸುಸ್ತಾಗತೊಡಗಿದಳು.

ಅಬ್ದುಲ್‌ನಿಂದ ಆಗಾಗ ಸಮಾಚಾರ ಬರುತ್ತಿತ್ತು. ತನ್ನ ಇರವಿಕೆ ತಿಳಿಸುತ್ತಿದ್ದ. ಬಡತನ ತನ್ನಿಂದ ಗಂಡನನ್ನು ದೂರ ಮಾಡಿತು ಎಂದು ನೆನಸಿಕೊಂಡಾಗೆಲ್ಲ ಅವಳ ಕಣ್ಣು ತುಂಬಿಬಿಡುತ್ತದ್ದವು. ಮುಂದಿನ ನಾಲ್ಕೈದು ತಿಂಗಳಲ್ಲಿ ಸಾರಾ ಹೆಣ್ಣು ಕೂಸು ಹುಟ್ಟಿ ಬಡತನಕ್ಕೆ ಸಾಲು ಹಚ್ಚಿತು.

ಆಗಲೇ ೨-೩ ವರ್ಷಗಳಾಗಿದ್ದವು ಅಬ್ದುಲ್ ಬೊಂಬಾಯಿಗೆ ಹೋಗಿ. ಈ ಮಧ್ಯೆ ಒಂದು ಸಲ ಮಾತ್ರ ಊರಿಗೆ ಬಂದು ಹೆಂಡತಿ ಮಕ್ಕಳನ್ನೆಲ್ಲಾ ಪ್ರೀತಿಸಿ ಬಟ್ಟೆ ಬರೆ ಕೊಡಿಸಿ ಒಂದಿಷ್ಟು ಹಣ ಕೊಟ್ಟು ಮತ್ತೆ ಹೊರಟು ಬಿಟ್ಟ.

ಬಾಂಬೆಯಲ್ಲಿ ಎಷ್ಟೊಂದು ದುಡಿದರೂ ಅವನ ಕುಡಿತಕ್ಕೆ ಸಾಕಾಗುತ್ತಿರಲಿಲ್ಲ. ಹೇಗೋ ಅವರಿವರಿಗೆ ಸಲಾಂ ಹೊಡೆಯುತ್ತ, ಹೂವಿನಂಗಡಿ ಮಾಲಕನಿಗೆ ವಿನಮ್ರವಾಗುತ್ತ ನಡೆಸಿದ್ದ ಜೀವನ.

ಹೂವಿನಂಗಡಿಯ ಮಾಲಕ ಶ್ರೀಮಂತ ಜೀವನದಲೊಮ್ಮೆಯಾದರೂ ಹಝ್ ಮಾಡಬೇಕೆನ್ನುವ ಆಸೆಯಿಂದ ಅವರು ಮಕ್ಕಾ, ಮದೀನಾಕ್ಕೆ ಹೊರಡಲನುವಾಗುತ್ತಾರೆ. ಹೇಗೋ ಇವನೂ ಸಾಧಿಸಿಕೊಂಡು ಅವರೊಂದಿಗೆ ಹಡಗೇರಿ ಬಿಡುವನು.

ಗಂಡ ಹಝ್ ಹೋಗಿದ್ದೊಂದೇ ಗೊತ್ತು ಹಮೀದಾಳಿಗೆ, ಮರಳಿ ಏನೂ ಪತ್ರಗಳಿಲ್ಲ ಸುದ್ದಿ ಇಲ್ಲ. ಕಾಯ್ದು ಕಾಯ್ದು ೧೫-೧೬ ವರ್ಷಗಳೇ ದಾಟಿ ಹೋದವು ವಿಚಾರಿಸಬೇಕೆಂದರೂ ಬಾಂಬೆಯ ಹೂವು ದಲ್ಲಾಳಿಯ ಪತ್ತೆಯೂ ಇಲ್ಲ. ಬರ ಬರುತ್ತ ಗಂಡ ಬದುಕಿ ಉಳಿದಿಲ್ಲವೆಂದು ತಿಳಿದುಕೊಂಡು ಕಣ್ಣೀರು ಹಾಕುವದು ನಿಲ್ಲಿಸಿದ್ದಳು.

ಅದರೆ ಆಗಲೇ ಬೆಳೆದ ಇಬ್ರಾಹಿಂ, ಅಹಮ್ಮದ್ ಗಂಡು ಮಕ್ಕಳಿಬ್ಬರಿಗೂ ತಂದೆಯ ಪತ್ತೆ ಹಚ್ಚಿಯೇ ತೀರಬೇಕೆನ್ನುವ ಅಸೆಯಿಂದ ಅವರೂ ಬೊಂಬಾಯಿಯ ಹಾದಿ ಹಿಡಿದಿದ್ದರು.

ಅಂತಹ ಮಹಾ ಮಾಯಾನಗರಿಯಲ್ಲಿ ಯಾರಿಂದ ಪರಿಚಯ ಸಿಗಬೇಕು. ಎಲ್ಲ ಹೂವಿನಂಗಡಿಗಳಲ್ಲಿ ೧೫ ವರ್ಷಗಳ ಹಿಂದಿನ ಅಪ್ಪನ ಪರಿಚಯ ಕೇಳುವಾಗ ಬೈಯಿಸಿಕೊಂಡಿದ್ದೇ ಹೆಚ್ಚು. ನಿರಾಶೆ ತುಂಬಿಕೊಳ್ಳುತ್ತದೆ. ಗಜಿ ಬಿಜಿ ನಗರದಲ್ಲಿಯೂ ಏನೇನೋ ಕೆಲಸ ಮಾಡಿಕೊಂಡಿದ್ದರೂ ಅವರಿಬ್ಬರದೊಂದೇ ಗುರಿ, ಹೇಗಾದರೂ ಮಾಡಿ ಅಪ್ಪನನ್ನು ಹುಡುಕುವದು.

ಹಜ್ ಯಾತ್ರೆಗೆ ಹೋದ ಅಪ್ಪ ಬಂದಿಲ್ಲ ಎಂಬ ಸಂಶಯ ಸಾಕಷ್ಟು ಕಾಡಿತ್ತು. ತಾವು ಅಲ್ಲಿಯೇ ಹೋಗಿ ಹುಡುಕುವ ಯೋಚನೆ ಮಾಡತೊಡಗಿದರು.

ಅರಬ್ ನಾಡಿಗೆ ಹೋಗಬೇಕಾದರೆ ಏನಾದರೂ ಕೆಲಸ ಹುಡುಕಿಕೊಂಡು ಏಜೆಂಟರ ಮುಖಾಂತರ ಹೋಗಬೇಕು. ಅಥವಾ ಒಳ್ಳೆಯ ಶಿಕ್ಷಣ, ಕೆಲಸದ ಅನುಭವದ ಹಿನ್ನೆಲೆ ಇದ್ದರೆ ಅಲ್ಲಿಯ ಏಜೆನ್ಸಿಗಳೇ ಬಂದು ಇಲ್ಲಿಯವರನ್ನು ಹುಡುಕಿಕೊಂಡು ಕರೆದುಕೊಂಡು ಹೋಗುವರು.

ಆದರೆ ಇಬ್ರಾಹಿಂ ಅಹಮ್ಮದ್ ಇಬ್ಬರೂ ಈ ಎರಡರಲ್ಲೂ ಸಮರ್ಥರಿಲ್ಲ. ಕೊನೆಗೆ ಉಮ್ರಾ ನೆಪಮಾಡಿಕೊಂಡು ಹೊರಡುವ ಯೋಚನೆ ಮಾಡಿದರು. ಹಜ್ ಸಮಯಕ್ಕೆ ಹೋಗಲಾಗದಿದ್ದರೆ ಉಮ್ರಾ ಎಂದು ಯಾವಾಗಲಾದರೂ ಮಕ್ಕಾಗೆ ಹೋಗಿ ಪ್ರಾರ್ಥಿಸಿ ಬರಬಹುದು ಎನ್ನುವ ತಿಳುವಳಿಕೆ ಬಂದದ್ದೇ ಊರಿನ ಮಸೀದೆಯ ಪೀರಸಾಬ್ ಹೋಗಿ ಬಂದಮೇಲೆ.

ಹೇಗೋ ಹಣ ಹೊಂದಿಸಿಕೊಂಡು ಉಮ್ರಾಕ್ಕೆ ಹೊರಡುವ ತಯಾರಿಯೆಲ್ಲ ಮಾಡಿಕೊಂಡು, ಊರಿಗೆ ಬಂದು ಅಮ್ಮ ಹಮೀದಾಳಿಗೆ ತಾವು ಅರೇಬಿಯಕ್ಕೆ ಹೋಗುವ ವಿಷಯ ಅಪ್ಪನನ್ನು ಹುಡುಕುವ ಉದ್ದೇಶ ತಿಳಿಸಿ ಹೊರಟೇ ಬಿಟ್ಟರು.

ಒಳಗೊಳಗೇ ಗಂಡನನ್ನು ಹುಡುಕಿಯೇ ತರುವರೆಂಬ ನಿರೀಕ್ಷೆಯಿಂದ ಕಣ್ಣಾಲಿ ತುಂಬಿಕೊಂಡು ಮಕ್ಕಳನ್ನು ಬೀಳ್ಕೊಟ್ಟಿದ್ದಳು.

ಮಕ್ಕಳು ವಿಮಾನ ಹತ್ತಿದರೋ, ಹಡಗು ಹತ್ತಿದರೋ ಏನೊಂದೂ ಗೊತ್ತಾಗಲೇ ಇಲ್ಲ.

ವರ್ಷ ಎರಡು ವರ್ಷ ಊಹೂಂ….

ಕರುಳು ಬಳ್ಳಿಗಳಿಗೆ ಕಾಯ್ದು ಸುಸ್ತಾಗಿ ಹೋಗಿದ್ದಳು ಹಮೀದಾ.

ಇದ್ದಕ್ಕಿದ್ದಂತೆ ಒಂದು ದಿನ ಅಹಮ್ಮದನಿಂದ ಪತ್ರ ಬಂದಿತ್ತು.

ಸರಿಯಾದ ಪಾಸ್‌ಪೋರ್ಟ್‌, ವೀಸಾಗಳಿಲ್ಲದೇ ಬಂದದ್ದು, ಉಮ್ರಾ ಮುಗಿಸಿ ಸ್ವದೇಶಕ್ಕೆ ಮರಳಬೇಕಾದ ಸಮಯಕ್ಕೆ ಮರಳದೇ ಇದ್ದುದರಿಂದ ಸಿಕ್ಕು ಹಾಕಿಕೊಂಡು ಜೈಲಿನಲ್ಲಿದ್ದದ್ದು, ಅಪ್ಪ ಈವರೆಗೂ ಸಿಗದೇ ಇದ್ದದ್ದು, ಕೊನೆಗೆ ಜೈಲಿನಿಂದ ಬಿಡುಗಡೆಯಾಗಿ ಮರುಭೂಮಿಯಲ್ಲಿ ಎಣ್ಣೆ ಭಾವಿಗಳನ್ನು ತೋಡುವ ಕೆಲಸ ಹಿಡಿದಾಗ ಹೆವೀ ಮಷಿನ್‌ದಲ್ಲಿ ಸಿಕ್ಕು ಇಬ್ರಾಹಿಂ ಸತ್ತದ್ದು, ತಾನೂ ಮತ್ತೊಮ್ಮೆ ಅಪರಾಧದಲ್ಲಿ ಸಿಕ್ಕಿ ಹಾಕಿಕೊಂಡು ಜೈಲಿನಲ್ಲಿ ನೋವು ಸಾವಿನೊಂದಿಗೆ ಹೋರಾಡುತ್ತ ಬಿದ್ದದ್ದು…

ಹಮೀದಾ ಸುದೀರ್ಫ ನಿಟ್ಟುಸಿರು ಬಿಟ್ಟು ಗೋಳಾಡಿದಳು. ಮುಂದಿನ ಓಣಿಯಿಂದ ನಾಯಿಗಳು ಒಂದೇ ಸವನೇ ಬೊಗಳುವ ಧ್ವನಿ ಕೇಳಿ ಎಚ್ಚೆತ್ತು ನಡುರಾತ್ರಿ ಆಗಿಯೇ ಹೋಯ್ತು, ಬಶೀರ ಇನ್ನು ಯಾಕೆ ಬರಲಿಲ್ಲವೋ ಎಂದು ಚಡಪಡಿಸತೊಡಗಿದಳು.

ಬಾಗಿಲು ತಟ್ಟಿದ ಶಬ್ಧವಾಯಿತು.

ಸರಿಯಾಗಿ ಒಂದೆರಡು ಏಟು ಕೊಟ್ಟೇ ಬಿಡಬೇಕು, ಮನೆಯಲ್ಲಿ ಎರಡು ಹೆಣ್ಣು ಜೀವಗಳು ಎಷ್ಟೊಂದು ಜೀವ ಹಿಡಿದು ಕೂತಿರುತ್ತವೆ ಎನ್ನುವ ವಿಚಾರ ಇವನಿಗೆ ಏನೇನೂ ಇಲ್ಲ, ಎಂದು ಗುಣಗುಣಿಸುತ್ತಲೇ ಬಾಗಿಲು ತೆಗೆದಳು.

ಬಶೀರ ತುಂಬಾ ಖುಷಿಯಿಂದ ಒಳಗೆ ನುಗ್ಗುತ್ತಾ “ಅಮ್ಮಾ ನನಗೆ ಕೆಲಸ ಸಿಕ್ಕಿತು. ಅಂತಿಂತಹ ಕೆಲಸ ಅಲ್ಲ. ಅರೇಬಿಯಾ ದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಲು ಇನ್ನು ಒಂದು ವಾರದಲ್ಲಿಯೇ ಹೊರಡಬೇಕು. ನಾನು ಸಾಕಷ್ಟು ಹಣ ಸಂಪಾದನೆ ಮಾಡುತ್ತೇನೆ. ನಾವಿನ್ನು ಅರಾಮವಾಗಿ ಇರೋಣ; ಒಳ್ಳೆಯ ಕನಸುಗಳನ್ನು ಕಾಣೋಣ ಅಮ್ಮಾ” ಅನ್ನುತ್ತ ಅವಳ ಯಾವ ಮಾತಿಗೂ ಆಸ್ಪದ ಕೊಡದೇ ತನ್ನ ಸಂತೋಷವನ್ನು ಪಟಪಟನೆ ಅರಳು ಹುರಿದಂತೆ ವ್ಯಕ್ತಪಡಿಸಿಕೊಂಡು ಬಿಟ್ಟ.

“ಮಗಾ ಬಶೀರ್ ಹೊರದೇಶಕ್ಕೆ ಹೋಗುವದು ಬೇಡವೋ… ಸಾಕು ನಮ್ಮ ಮನೆಗೆ ಅದು ಒಗ್ಗುವದಿಲ್ಲ, ನಮ್ಮ ಕಣ್ಣು ಮುಂದೆ ನೀನೊಬ್ಬನಾದರೂ ಇರು” ಎಂದು ಹೇಳುತ್ತ ಬಾಯಿ ತೆಗೆಯುತ್ತಿದ್ದಂತೆಯೇ –

“ಅಮ್ಮಾ ಆ ಮಾತುಗಳು ಈಗ ಬೇಡ” ಎಂದವನೇ ತಂದ ಸಿಹಿ ತಿಂಡಿ ಒತ್ತಾಯಪೂರ್ವಕವಾಗಿ ಅವಳ ಬಾಯಿಗೆ ಹಾಕಿಯೇ ಬಿಟ್ಟ. ತಂಗಿಯನ್ನು ಎಬ್ಬಿಸಬೇಕೆಂದುಕೊಂಡವನು ಅವಳ ದಣಿದ “ದೇಹದ ಶಾಂತ ನಿದ್ದೆ ನೋಡಿ ಕನಿಕರ ಪ್ರೀತಿಯಿಂದ-

“ಆಸಿಫ್ ಅದೆಷ್ಟು ಲಕ್ಕಿ, ನನ್ನ ತಂಗಿಯನ್ನು ಪ್ರೀತಿಸುತ್ತಿದ್ದಾನೆ. ಮಶಿನರಿ ರಿಪೇರಿ ಶಾಪ್‌ನಲ್ಲಿ ಒಂದು ವರ್ಷದಿಂದ ನೋಡುತ್ತ ಬರುತ್ತಿದ್ದೇನೆ, ಒಳ್ಳೆಯ ಸ್ನೇಹಿತ. ನನ್ನೆಲ್ಲ ಸುಖ ದುಃಖಗಳನ್ನು ಅವನ ಮುಂದೆ ತೋಡಿ ಕೊಂಡಿದ್ದೇನೆ. ನಮ್ಮ ಕುಟುಂಬದ ಬಗೆಗೆ ಸಾಕಷ್ಟು ಕನಿಕರ ಪ್ರೀತಿ ಇದೆ, ಈಗ ಬಹುಶಃ ಹೆಚ್ಚಿನ ಜವಾಬ್ದಾರಿ ಅವನ ಮೇಲೆ ಹೊರಿಸಿಯೇ ಹೋಗುತ್ತಿದ್ದೇನೆ”

ಎಂದು ಬಟ್ಟೆ ಬದಲಾಯಿಸುತ್ತ ಅಮ್ಮನ ಮುಂದೆ ಹೇಳತೊಡಗಿದ.

“ಉಳಿದ ಮಾತೆಲ್ಲ ನಾಳೆ, ಈಗ ಊಟ ಮಾಡು ಅಡುಗೆ ಎಲ್ಲ ಆರಿ ಹೋಗಿದೆ, ನಾನೂ ಇನ್ನೂ ಊಟ ಮಾಡಿಲ್ಲ ಏಳು”

“ಅಮ್ಮಾ ಈವೊತ್ತು ಭರ್ಜರಿ ಊಟ ಆಯ್ತು, ಆಸಿಫ್ ಬಿಡಲಿಲ್ಲ. ಅದಕ್ಕೇ ಬರುವದಕ್ಕೆ ಸಮಯ ಆಯ್ತು ನೀನ್ಯಾಕೆ ಕಾಯ್ದೆ ನನ್ನನ್ನ, ಊಟ ಮುಗಿಸಿ ನಿದ್ದೆ ಮಾಡಬಾರದಾ… ಬಾ ನೀನು ಊಟ ಮಾಡು ಬಾ” ಎನ್ನುತ್ತ ಅವಳಿಗೆ ಕೈಯಲ್ಲಿ ತಟ್ಟೆ ಕೊಟ್ಟು ಸಮಾಧಾನಿಸುವನು.

ಮೊದಲಿನಿಂದಲೂ ಯಾರು ಹೇಳಿದರೂ ಮಾತು ಕೇಳುವವನಲ್ಲ ಬಶೀರ್, ತನಗೆ ಏನು ಮಾಡಬೇಕೋ ಅದನ್ನೇ ಮಾಡಿತೋರಿಸುವ ಎದೆಗಾರಿಕೆ ಅವನದು. ಹಮೀದಾಳ ಅಳು, ಕೂಗಾಡುವಿಕೆ ಯಾವುದೊಂದೂ ಅವನನ್ನು ಸುಮ್ಮನಿರಿಸುತ್ತಿರಲಿಲ್ಲ.

ಈಗ ಅವಳ ಗಂಟಲಿನಲ್ಲಿ ಅನ್ನ ಇಳಿಯುತ್ತಿಲ್ಲ. ಒಳಗೊಳಗೇ ಏನೋ ಎಲ್ಲವೂ ನೆನೆದು ದುಃಖ ಉಮ್ಮಳಿಸಿಕೊಳ್ಳುತ್ತಿದ್ದಾಳೆ.

“ನೀನು ನಿದ್ದೆ ಮಾಡು ಹೋಗು” ಬಶೀರ್‌ನನ್ನು ಎಬ್ಬಿಸಿ ಕಳಿಸುವ ಯತ್ನ ಮಾಡಿದಳು. ಅಮ್ಮನ ಸಂಕಟ ಅವನಿಗೆ ಅರ್ಥವಾಯಿತು. ಅವಳ ಕಂಪನದ ಮಾತು, ನಿಟ್ಟುಸಿರು ಗಮನಿಸಿ ಇನ್ನು ಹೆಚ್ಚು ಮಾತು ಬೇಡವೆಂದು ಅವನು ಎದ್ದು ಚಾಪೆ ಹಾಸಿಕೊಂಡು ಉರುಳಿದನು.

ರಾತ್ರಿ ಹಗಲು ಜೀರೊ ಬಲ್ಬ್ ಯಾವ ಆತಂಕವೂ ಇಲ್ಲದೆ ಇನ್ನೂ ಇನ್ನೂ ಧೂಳು ತುಂಬಿಕೊಳ್ಳುತ್ತ, ಇನ್ನೂ ಇನ್ನೂ ಜೀರೊ ಆಗುತ್ತ ಉರಿಯುತ್ತಲೇ ಇತ್ತು. ಅದನ್ನು ಆನ್-ಆಫ್ ಮಾಡುವ ಸಮಸ್ಯೆ ಯಾರಿಗೂ ಇಲ್ಲ. ಅದರ ಬಗೆಗೆ ಯಾರೂ ತಲೆ ಕೆಡಿಸಿಕೊಂಡವರೇ ಅಲ್ಲ.

ಆದರೆ ಈಗ ಅದೇಕೋ ಹಮೀದಾಳಿಗೆ ಅಳಬೇಕೆನಿಸಿದೆ. ಎದೆಯಾಳದಲ್ಲಿ ತಳಮಳದ ಮಡು ತುಂಬಿಕೊಳ್ಳುತ್ತಿದೆ. ತಟ್ಟೆ ಸರಿಸಿಟ್ಟು ಲೈಟ್ ಕಳೆದು ಚಾಪೆ ಮೇಲೆ ಉರುಳಿ ಕತ್ತಲೆ ಕಗ್ಗತ್ತಲೆಯೊಳಗೆ ಒಂದಾಗತೊಡಗಿದಳು. ಕಣ್ಣೀರ ಹನಿಗಳು ರಾತ್ರಿಗೆ ಚಡಪಡಿಕೆಯ ರಂಗೋಲಿ ಹಾಕತೊಡಗಿದವು.

ಮುಂದಿನ ಓಣಿಯ ನಾಯಿಗಳು ಬಿಟ್ಟೂ ಬಿಡದೇ ಕೂಗಾಡುತ್ತಿದ್ದಷ್ಟು ಇಲ್ಲಿ ಕತ್ತಲಗೂಡಿನಲ್ಲಿ ಹಮೀದಾಳ ಬಳ್ಳಿಗಳು ಕತ್ತರಿಸಿ ಕತ್ತರಿಸಿ ತುಂಡಾಗುತ್ತಿದ್ದವು.

ಬಶೀರ್ ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದಾನೆ. ಗೊರಕೆ ಸಪ್ಪಳ ಗಾಢ ಕತ್ತಲೆಯನ್ನೇ ಸೀಳುತ್ತದೇನೋ ಅನ್ನುವಂತಿತ್ತು. ಬಿಸಿರಕ್ತ ಬಿಸಿ ಉಸುರಿನ ಮೂರು ಮಕ್ಕಳನ್ನು ಕಳೆದುಕೊಂಡ ಹಮೀದಾಳ ಎದೆ ಬರ್ಫಿನಂತೆ ತಣ್ಣಗಾಗುತ್ತ ನಿಶ್ಶಕ್ತವಾಗುತ್ತಿದೆ.

ಹೋದ ವರ್ಷ ಸುಮಾರು ಇದೇ ದಿನಗಳಲ್ಲಿ ದುಬೈದಿಂದ ಉಮರ್ ಬಂದು ಹೋಗಿದ್ದ. ಎರಡು ವರ್ಷಗಳ ಮೇಲೆ ಬಂದಾಗಿನ ಅವನ ಸಂತೋಷ ಸಂಭ್ರಮ ಹೇಳತೀರದಷ್ಟು. ದುಬೈದೊರೆಯ ಕಾರಿನ ಡ್ರೈವರ್ ಆಗಿದ್ದರು ತಾನೇ ಮಾಲೀಕನೇನೋ ಅನ್ನುವಷ್ಟರ ಮಟ್ಟಿಗೆ ವಿವಿಧ ಕಾರುಗಳನ್ನು ಓಡಾಡಿಸಿದ್ದನಂತೆ. ಅಲ್ಲಿಯ ವಿಷಯ ಕೇಳುಗರಿಗೆಲ್ಲ ಅಲ್ಲಿಯ ರಸ್ತೆಗಳು ವಾಹನಗಳು, ಪೆಟ್ರೋಲ್ ಸೌಲಭ್ಯಗಳ ರೀಲ್ ಬಿಚ್ಚಿಬಿಡುತ್ತಿದ್ದ.

ಅಮ್ಮನಿಗೆ ಎರಡು ಬಳೆ, ಸಾರಾಳಿಗೆ ಒಂದು ಸರ ತಂದು ತೊಡಿಸಿ ಅವರ ಸಂತೋಷ ನೋಡಿ ಖುಷಿ ಪಟ್ಟಿದ್ದ. ೩೦ ದಿವಸಗಳ ರಜೆ ತನಗೆ ಏತಕ್ಕೂ ಸಾಲಲಿಲ್ಲವೆಂಬಂತೆ ಗೊಣಗಿಕೊಳ್ಳುತ್ತಲೇ ಮತ್ತೆ ದುಬೈಗೆ ಮರಳಿದ್ದ.

ಮುಂದೆ ೨೦ ದಿನಗಳಲ್ಲಿ ಕಾರ್ ಆಕ್ಸಿಡೆಂಟ್‌ದಲ್ಲಿ ಸತ್ತ ಸುದ್ದಿ ಬರಸಿಡಿಲಿನಂತೆ ಬಂದು ಅಪ್ಪಳಿಸಿತ್ತು ಹಮೀದಾಳ ಎದೆಗೆ, ನೆತ್ತಿಗೆ. ಎದೆ ಹೊಡೆದುಕೊಂಡು ಅತ್ತಿದ್ದೆಷ್ಟೋ, ಮೂರು ಮಕ್ಕಳನ್ನು, ಗಂಡನನ್ನು ಕಳೆದುಕೊಂಡು ಬೋರಾಡಿ ಉರುಳಾಡಿ ಅತ್ತದ್ದು ನೋಡುವವರಿಗೆ ಕರುಳು ಹಿಂಡುವಂತಿತ್ತು.

ಹಮೀದಾ ಎದ್ದು ಕುಳಿತಳು. ಅವಳ ನಿದ್ದೆ ಕತ್ತಲು ನುಂಗಿತ್ತು. ಈಗ ಅವಳನ್ನೇ ಇಡಿಯಾಗಿ ನುಂಗುವ ಹುನ್ನಾರ.

“ಈಗಾಗಲೇ ನಾಲ್ಕು ಜನರನ್ನು ನುಂಗಿ ನೀರು ಕುಡಿದು ಬದುಕಿದ ವಿಧಿ, ಇನ್ನೊಬ್ಬನಿಗಾಗಿ ಕೈ ಚಾಚುತ್ತಿರಬಹುದೆ” ಎಂದೆನಿಸಿದಾಗ ಅವಳೆದೆ ಧಸ್ಸೆಂದಿತ್ತು, ಕತ್ತಲೆಯ ಜಂತಿಯೇ ದೊಪ್ಪೆಂದು ಕಳಚಿಕೊಂಡು ಬಿದ್ದಂತಾಯ್ತು.

ಹಮೀದಾ ಇಡಿಯಾಗಿ ಬೆವೆತಳು. ಕಣ್ಣೀರು ಸ್ಥಿಮಿತಕ್ಕೆ ಬರದೆಯೇ ಹರಿಯತೊಡಗಿತು. ಸೀರೆಯ ಸೆರಗು ಒದ್ದೆಯಾಗಿತ್ತು. ಇದೇನು ವಿಧಿ ನಮಗೆ ಬೆನ್ನು ಹತ್ತಿದೆ ಎಂದು ಒಂದೇ ಸವನೇ ಚಡಪಡಿಸತೊಡಗಿದಳು.

ಬೆಳಗಾದರೆ ಸಾಕು ಬಶೀರನಿಗೆ ಏನೆಲ್ಲಾ ತಿಳುವಳಿಕೆ ಹೇಳಿ ಅವನು ಹೋಗುವದನ್ನು ತಡೆಗಟ್ಟಲೇಬೇಕೆಂದು ಚಿಂತಿಸತೊಡಗಿದಳು.

ಅದಾವಾಗಲೋ ಬೆಳಕಾಗಿ ಹೋಗಿತ್ತು.

ಸಾರಾ ಚಹಾಲೋಟ ತಂದು ಅಮ್ಮನ ಮುಂದೆ ಇಟ್ಟಾಗ ‘ಸಾರಾ ಕುಳಿತುಕೋ ಈ ದಿನ ಏನಾದರೊಂದು ನಿರ್ಣಯ ಆಗಲೇಬೇಕು. ನಿನ್ನ ಅಣ್ಣ ಕೆಲಸ ಹುಡುಕಿಕೊಂಡು ಅರೇಬಿಯಾಕ್ಕೆ ಹೊರಟದ್ದಾನೆ. ಇಷ್ಟು ವರ್ಷಗಳಲ್ಲಿ ನಡೆದು ಹೋದ ದುರಂತಗಳ ಹೊಡೆತಕ್ಕೆ ಸಿಕ್ಕು ಸಾಕಷ್ಟು ನೊಂದು ಬೆಂದು ಹೋಗಿದ್ದೇನೆ. ಈಗ ಇವನೊಬ್ಬನೇ ನಮಗೆ ಆಸರೆ, ಇವನಿಗೂ ಏನಾದರೂ ಆಗಿಬಿಟ್ಟರೆ’…. ಜೋರಾಗಿ, ಉಸಿರು ಹಾಕಿದಳು ಹಮೀದಾ.

‘ಅಮ್ಮ ಅವನಿಗೇನಾಗುತ್ತದೆ. ಹಾಗೆಲ್ಲ ಯಾಕೆ ಮಾತನಾಡಿಕೊಂಡು ಬೇಸರ ಪಟ್ಟುಕೊಳ್ಳುವಿ’ ಎಂದು ಸಾರಾ ಸಮಾಧಾನಿಸಲು ಪ್ರಯತ್ನಿಸಿದಳು.

ಒಂದು ವರ್ಷದಿಂದ ಅದೂ ಉಮರ್ ತೀರಿಹೋದಮೇಲಂತೂ ಹಮೀದಾಳ ಮನಸ್ಥಿತಿ ಸಾಕಷ್ಟು ಅಸ್ವಸ್ಥತೆ ಹೊಂದಿತ್ತು. ದೈಹಿಕವಾಗಿಯೂ ಸುಸ್ತಾಗಿದ್ದಾಳು. ಅದನ್ನು ಸಾರಾ ಗಮನಿಸುತ್ತಲೇ ಬಂದಿದ್ದಳು. ಅದರೆ ವಿಧಿಯ ಮುಂದೆ ಎಲ್ಲರೂ ಅಸಹಾಯಕರಾಗಿದ್ದರು.

ಧೈರ್ಯವಾಗಿ ಜೀವನ ಮುಂದೂಡಿಕೊಂಡು ಹೋಗುವದೊಂದೇ ಗುರಿ ಎನ್ನುವ ಅಣ್ಣ ಬಶೀರನ ಮಾತುಗಳಿಂದಾಗಲೀ, ದುರಂತಗಳ ನೆನಪಿನಲ್ಲಿ ಕೊರೆಯುವದಕ್ಕಿಂತ ಭವಿಷ್ಯವನ್ನು ಅಶಾವಾದಿಯಿಂದ ನಿರೀಕ್ಷಿಸಬೇಕೆನ್ನುವ ಮುಂದೆ ಗಂಡನಾಗುವ ಅಸಿಫ್‌ನ ಮಾತುಗಳಿಂದಾಗಲೀ ಸಾರಾ ಬೇಗ ಚೇತರಿಸಿಕೊಂಡು ಅಮ್ಮನನ್ನು ಅದೆಷ್ಟೋ ಸಲ ರಮಿಸಿದ್ದುಂಟು. ಮನಸ್ಸು ಹಗುರ ಮಾಡಿಸಿದ್ದುಂಟು.

ಆದರೆ ಈಗ ಹಮೀದಾಳ ಮನಸ್ಥಿತಿ ಕಂಟ್ರೋಲ್’ಗೇ ಬರುತ್ತಿಲ್ಲ. ಮುಸು ಮುಸು ಅಳುವ ಉಸುರಿನ ಸಪ್ಪಳಕ್ಕೆ ಬಶೀರ್ ಎದ್ದು “ಏನಮ್ಮ ಬೆಳಿಗ್ಗೆಯೇ ಸುರು ಮಾಡಿಬಿಟ್ಟೆಯಾ ಅಳೋದಕ್ಕೆ” – ಎಂದವನೇ ಅಮ್ಮನ ಹತ್ತಿರ ಬಂದು ಕುಳಿತುಕೊಂಡನು.

ಹಮೀದಾಳಿಗೆ ಕಣ್ಣೀರು ತಡೆದುಕೊಳ್ಳಲಿಕ್ಕಾಗಲಿಲ್ಲ. ಕಣ್ಣಿಗೆ ಸೆರಗು ಒತ್ತಿ ಹಿಡಿದು ಅಳತೊಡಗಿದಳು. ಗಂಟಲು ತುಂಬಿ ಮಾತು ಹೊರಡದಾಯ್ತು.
ಇಬ್ಬರೂ ಮಕ್ಕಳನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಮನಸಾರೆ ಅತ್ತುಬಿಟ್ಟಳು.  ಮೂವರ ಮೌನರೋಧನ ಚಿಕ್ಕ ಕೋಣೆ ತುಂಬಿಕೊಂಡಿತ್ತು.

ಹೊರಗಡೆ ಬಾಗಿಲು ಬಡಿದ ಸಪ್ಪಳ, ಬಶೀರ್ ಬಾಗಿಲು ತಗೆಯುತ್ತಿದ್ದಂತೆಯೇ ಅಸಿಫ್ ಖುಷಿಯಿಂದ ದೊಡ್ಡ ಧ್ವನಿ ತೆಗೆದು ಮುಬಾರಕ್ ಮುಬಾರಕ್ ಎನ್ನುತ್ತ ಬಶೀರನನ್ನೂ ತಳ್ಳಿಕೊಂಡು ಚಾಪೆಯಮೇಲೆ ಬಂದು ಕುಳಿತವನು.

ಎಲ್ಲರ ಅಳು ಮುಖ ನೋಡಿ ಪರಿಸ್ಥಿತಿ ಅರಿವು ಮಾಡಿಕೊಂಡು ಮೆತ್ತನೆಯ ಧ್ವನಿಯಿಂದ “ಅಮ್ಮಾ ಧೈರ್ಯವಾಗಿರಬೇಕು, ನಮ್ಮಂತಹ ಬಡವರು ಬದುಕಿಗಾಗಿ ಏನೆಲ್ಲ ಎದುರಿಸಬೇಕಾಗುತ್ತದೆ. ಇಲ್ಲಿ ಇದ್ದರೇನು, ಎಲ್ಲಿ ಹೋದರೇನು, ವಿಧಿ ನಮ್ಮನ್ನು ಎಲ್ಲೆಲ್ಲಿಗೆ ಕರೆದೊಯುತ್ತದೆಯೋ ಅಲ್ಲಿಗೆ ಹೋಗಬೇಕಾಗುತ್ತದೆ”.

ಅಸಿಫ್ ಸಮಾಧಾನ ಪಡಿಸಲು ಪ್ರಯತ್ನಿಸಿದಷ್ಟು ಹಮೀದಾಳ ಕಣ್ಣೀರು ಸೆರೆಗು ತೊಯ್ಸಿಬಿಟ್ಟಿದ್ದವು.

ಮುಂದಿನವಾರ ಹೊರಡುವ ತಯಾರಿಯ ಮಾತುಗಳನ್ನು ಇಬ್ಬರೂ ಮುಂದುವರೆಸಿದರು.

ತಾನು ಎರಡು ವರ್ಷಗಳ ಕಾಂಟ್ರಾಕ್ಟದ ಮೇಲೆ ಹೋಗುತ್ತಿರುವುದಾಗಿ ತಿಳಿಸಿ ಅಮ್ಮ ತಂಗಿಯ ಜವಾಬ್ದಾರಿಯ ವಿಷಯ ಮಾತಾಡಿದನು. ಪ್ರತಿ ತಿಂಗಳು ಅಲ್ಲಿಂದ ಹಣ ಕಳಿಸುವದಾಗಿ, ಅಮ್ಮ-ತಂಗಿ ಇನ್ನು ಯಾರ ಮನೆಕೆಲಸಕ್ಕೂ ಹೋಗುವುದು ಬೇಡ ಅಂದನು.

ಅಸಿಫ್‌ನ ಕೈಯಲ್ಲಿ ಕೈ ಇಟ್ಟು “ಇನ್ನೆರಡು ವರ್ಷಗಳಲ್ಲಿ ನಾನು ಸಾಕಷ್ಟು ಹಣ ಗಳಿಸಿರುತ್ತೇನೆ. ನನ್ನ ತಂಗಿಯನ್ನು ನಿನಗೇ ಕೊಟ್ಟು  ವಿಜೃಂಭಣೆಯಿಂದ ಮದುವೆ ಮಾಡುತ್ತೇನೆ” ಎಂದು ಆಶ್ವಾಸನೆ ಕೊಟ್ಟನು.

ಅಸಿಫ್ ಸಾರಾಳ ಕಣ್ಣುಗಳು ಒಂದು ಕ್ಷಣ ಕೂಡಿಕೊಂಡು ಒಳಗೊಳಗೇ ಸಂತೋಷಪಟ್ಟರೆ, ಹಮೀದಾಳಿಗೆ. ಸಾರಾಳ ಭಾರ ಈಗಲೇ ಇಳಿದುಹೋಯಿತೇನೋ ಅನ್ನುವಂತೆ ಖುಷಿಯ ಕಣ್ಣೀರು ಒಂದು ಕಡೆ, ಮಗನ ಹೊರಡುವ ನಿರ್ಧಾರದ ಸಂಕಟ ಮತ್ತೊಂದು ಕಡೆ, ಒಟ್ಟೊಟ್ಟಿಗೇ ಕೂಡಿ ಬಂದು ಅಳು ಮತ್ತೊಮ್ಮೆ ಉಕ್ಕಿ ಹರಿಯಿತು.

***

ದಿಲ್ಲಿಯಿಂದ ಅರೇಬಿಯಾಕ್ಕೆ ಪ್ರಯಾಣಿಸಲು ನಾಲ್ಕು ದಿನಗಳು ಉಳಿದಿವೆ. ಪಾಸ್‌ಪೋರ್ಟ್‌ ವೀಸಾ ಇನ್ನಿತರ ಕೆಲಸಗಳೆಲ್ಲ ಮಾಡಿ ಮುಗಿಸಿದ್ದಾಗಿ ತಿಳಿಸಿ ಏಜೆಂಟರು ಬಶೀರ್‌ಗೆ ಹೊರಡಲು ಟೆಲಿಗ್ರಾಂ ಕಳಿಸಿದ್ದರು.

ಅಂದೇ ಸಂಜೆಗೆ ಟ್ರೇನ್ ಮುಖಾಂತರ ಹೊರಡಲು ಬಶೀರ್ ತಯಾರಿ ನಡೆಸಿದ. ಅಸಿಫ್ ಕೂಡಾ ದಿಲ್ಲಿಯವರೆಗೆ ಹೋಗಿ ಕಳಿಸಿಬರುವದಾಗಿ ಹಮೀದಾ, ಸಾರಾಳಿಗೆ ಧೈರ್ಯ ತುಂಬಿದನು.

ಮೇಲಿಂದ ಮೇಲೆ ಹಮೀದಾ ಮಗನಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತಿರುವದೊಂದೇ ಮಾತು-

“ಬಶೀರ್ ಬೇಟಾ ವಾರಕ್ಕೊಂದು ಪತ್ರ ಬರೆ, ನಿನ್ನ ಅಪ್ಪ ಅಣ್ಣಂದಿರಂತೆ ಇರುವು ತಿಳಿಸದೇ ಹೊಟ್ಟೆ ಉರಿಸಬೇಡ”

ಹೊರಡುವ ಸಮಯ ಬಂದೇ ಬಿಟ್ಟಿತು ಎಲ್ಲರೂ ಭಾರವಾದ ಹೃದಯದಿಂದ ಸ್ಟೇಶನ್ ತಲುಪಿದರು.

ಕೆಲವೇ ನಿಮಿಷಗಳಲ್ಲಿ ನಿಜಾಮುದ್ದೀನ್ ಎಕ್ಸಪ್ರೆಸ್ ಜೋರಾಗಿ ಕೂಗು ಹಾಕುತ್ತ ಧಡ ಧಡ ಸಪ್ಪಳ ಮಾಡುತ್ತ ಪ್ಲಾಟ್‌ಫಾರಂಗೆ ಬಂದು ನಿಂತಿತು. ಕೊನೆಯ ಸಮಯ, ತಾಯಿ ತಂಗಿ ಮಗನ ಮಾತುಗಳೆಲ್ಲ ಹೃದಯಭಾರ, ಕಣ್ಣಂಚಿನ ತೇವಗಳೊಂದಿಗೆ ಮುಗಿದು ಒಬ್ಬರಿಗೊಬ್ಬರು ಧೈರ್ಯವಾಗಿರಲು ಹೇಳಿಕೊಂಡರು.

ಟ್ರೇನು ಹೊರಟೇ ಬಿಟ್ಟಿತು-

ದಿಲ್ಲಿ ಏರ್‌ಪೋರ್ಟ್‍ನಲ್ಲಿ ೭೪೭ ಜಂಬೋಜೆಟ್ ಅರೇಬಿಯಕ್ಕೆ ಹಾರಲು ತಯಾರಾಗಿ ನಿಂತಿದೆ. ಏಜೆಂಟರೆಲ್ಲ ಸಾಕಷ್ಟು ಹಣ ಸುಲಿದಿದ್ದರೂ ಪೇಪರ್ಸ ಎಲ್ಲಾ ಸರಿಯಾಗಿಯೇ ಮಾಡಿಕೊಟ್ಟದ್ದರು.

ಬೇರೆ ಬೇರೆ ಭಾಷೆಯ ಜನರೆಲ್ಲಾ ಏನೇನೋ ಉದ್ಯೋಗಗಳ ಮೇಲೆ ಹೊರಟು ನಿಂತಿರುವ ಸಾಲು ನೋಡಿ ಇಬ್ಬರಿಗೂ ಅಶ್ಚರ್ಯ. ಆಶ್ಚರ್ಯ ಸಂತೋಷಗಳೊಂದಿಗೆ ಅಮ್ಮ ತಂಗಿಯ ಜವಾಬ್ದಾರಿಯ ಬಗೆಗೆ ಮತ್ತೊಮ್ಮೆ ಎಚ್ಚರಿಕೆ ಕೊಟ್ಟು ಸ್ನೇಹಿತ ಅಸಿಫ್‌ನಿಂದ ಬೀಳ್ಕೊಂಡು ಹೊರಟನು ಬಶೀರ್.

ಮೂರು ತಾಸಿನಲ್ಲಿ ಸಹಪ್ರಯಾಣಿಕರೆಲ್ಲರು ವಿದೇಶಿ ಸಂಚಾರದ ನಿಯಮಗಳನ್ನೆಲ್ಲಾ ಮುಗಿಸಿ ಜೆಟ್‌ನಲ್ಲಿ ಹಾಯಾಗಿ ಕುಳಿತುಕೊಂಡರು.
ಮನೆಯವರೆಲ್ಲರ ಪ್ರೀತಿ-ಪ್ರೇಮಗಳ ಹಾರೈಕೆ-ಸಿಹಿ ತಿಂಡಿ ತಿನಿಸುಗಳನ್ನೆಲ್ಲಾ ಗಂಟು ಕಟ್ಟಿ ಎದೆಗೂಡಿನಲ್ಲಿ ಮಡಿಲಿನಲ್ಲಿ ಇಟ್ಟುಕೊಂಡು ಅರೇಬಿಯದಲ್ಲಿ ಅಷ್ಟಷ್ಟೇ ನೆನಪಿಸಿ ಬಿಚ್ಚಿ ತಿನ್ನಲು ಒದ್ದೆ ಕಣ್ಣುಗಳೊಂದಿಗೆ ಬೀಳ್ಕೊಂಡಿದ್ದರು.

ಬೀಳ್ಕೊಡಲು ಬಂದವರೆಲ್ಲ ವಿಮಾನ ನಿಲ್ದಾಣದ ಗ್ಯಾಲರಿಯಲ್ಲಿ ನಿಂತುಕೊಂಡು ಬೈ ಹೇಳುತ್ತಲೇ ಇದ್ದಾರೆ.

ವಿಮಾನ ಆಕಾಶಕ್ಕೇರಿದಾಗ ಎಲ್ಲರಿಗೂ ಸಂತೋಷವೇ ಸಂತೋಷ. ಇಂಜಿನ್‌ನಲ್ಲಿ ಏನೋ ದೋಷಕಾಣಿಸಿಕೊಂಡು ಸರಿಪಡಿಸಿಕೊಳ್ಳಲು ಮತ್ತೆ ಏರ್‌ಪೋರ್ಟ್‍ನಲ್ಲಿ  ಇಳಿಸಬೇಕಾಗುತ್ತದೆ ಎಂದು ಪೈಲಟ್ ಹೇಳುತ್ತಿದ್ದಾನೆ. ಕಂಟ್ರೋಲ್ ಟವರ್‌ದವರು ರಡಾರ್ ಮುಖಾಂತರ ವಿಕ್ಷಿಸುತ್ತಿದ್ದಾರೆ. ಎರಡೂ ಕಡೆಯಿಂದಲೂ ಸಿಬ್ಬಂಧಿಗಳು ಚುರುಕಾಗುತ್ತಿದ್ದಾರೆ, ಆದರೆ ಯಾವುದೂ ನಿಯಂತ್ರಣಕ್ಕೆ ಬರುತ್ತಲೇ ಇಲ್ಲ. ನೋಡು ನೋಡುತ್ತಿದ್ದಂತೆಯೇ ಆಕಾಶದಲ್ಲಿ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಕೆಲವೇ ಕ್ಷಣಗಳಲ್ಲಿ ನೆಲಕ್ಕಪ್ಪಳಿಸಿಬಿಟ್ಟಿತು.

ಏರ್‌ಪೋರ್ಟ್‍ನಲ್ಲಿ ವಿಮಾನ ದುರಂತದ ಭಿತ್ತರಣೆ ಸುರುವಾಗತೊಡಗಿತು. ಆತ್ಮೀಯರನ್ನು ಕಳಿಸಲು ಬಂದವರೆಲ್ಲಾ ಇನ್ನೂ ಅಲ್ಲಿಯೇ ಸುತ್ತಾಡುತ್ತಿದ್ದಾರೆ. ಸುದ್ದಿ ಕೇಳಿದ ತಕ್ಷಣ ಆಕ್ರಂದನ, ಓಡಾಟ, ತಮ್ಮವರಿಗೆ ಏನೂ ಆಗದಿರಲಿ ದೇವರೆ ಎಂದು ಪ್ರಾರ್ಥಿಸಿಕೊಳ್ಳುವ ಸಂಕಟ…

ಅದರೆ ಈಗ ಯಾರ ಪ್ರಾರ್ಥನೆಯೂ ದೇವರಿಗೆ ಕೇಳಿಸಲಿಲ್ಲ. ಎಲ್ಲಾ ದೇಹಗಳು ಮುರಿದ ಅವಶೇಷಗಳಡಿ ಸಿಕ್ಕು ಕರಕಾಗುತ್ತಿದ್ದವು ಕೊನೆ ಕೊನೆಗೆ ಗುರುತಿಸಲಾಗದಷ್ಟು ಕರಕಲಾಗಿ ಹೋದವು.

ಬಶೀರ್‌ನಂತಹ ೩೬೦ ಜನರು ಕನಸುಗಳೊಂದಿಗೆ ಕ್ಷಣದಲ್ಲಿ ಕರಕಾಗಿ ಹೋದ ಸುದ್ಧಿ ಅವರವರ ಮನೆ ತಲುಪಿತ್ತು.

ಹಮೀದಾಳಿಗೆ ಮಾತೇ ಹೊರಡುತ್ತಿಲ್ಲ, ಕೆಲಸದ ಮನೆಯವರೆಲ್ಲ ಬಂದು ಸಾಂತ್ವನ ಹೇಳುತ್ತಿದ್ದಾರೆ. ಈಗ ಅವಳ ಮನಸ್ಸಿನ ತುಂಬಾ ಶೂನ್ಯ ಆವರಿಸಿಬಿಟ್ಟಿದೆ. ಆಲದ ಮರದ ರೆಂಬೆಕೊಂಬೆಗಳನ್ನೆಲ್ಲ ಯಾರೋ ಕೊಚ್ಚಿ ಕೊಚ್ಚಿ ಬರಡುಮಾಡಿ ಕೊನೆಗೆ ತಾಯಿಬೇರು ಸಮೇತ ಉರುಳಿಸಿದಂತಾಗಿತ್ತು ಅವಳ ಅಂತರಂಗದ ತಳಮಳ.

ಸಾಮೂಹಿಕ ಚಿತೆಗೆ ಬೆಂಕಿ ಇಟ್ಟು ಅಸಿಫ್ ಮರಳಿ ಮನೆಗೆ ಬಂದಾಗ ಯಾರಲ್ಲೂ ಏನೊಂದೂ ಮಾತಿಲ್ಲ. ಯಾರನ್ನೂ ಯಾವ ವಿಧಿಯನ್ನೂ ದೂಷಿಸುವ ಹಾಗಿಲ್ಲದ ಕರಾಳತೆ ತುಂಬಿತ್ತು.

ಕಣ್ಣೀರಿಲ್ಲದ ಹಮೀದಾಳನ್ನು ಅಳಿಸಲು ಅದೆಷ್ಟೋ ಪ್ರಯತ್ನಿಸಿದರೂ ಒಂದು ತೊಟ್ಟು ನೀರೂ ಉದುರಲಿಲ್ಲ.

ಅಮ್ಮನ ಪರಿಸ್ಥಿತಿ ನೋಡಿ ಸಾರಾಳ ಆಕ್ರಂದನ ಮುಗಿಲು ಮುಟ್ಟುತ್ತಿತ್ತು. ಇಡೀ ರಾತ್ರಿ ಗೋಡೆಗೆ ಆತು ಕುಳಿತ ಹಮೀದಾ ನಸುಕಿನ ಸಮಯ ನಿಧಾನವಾಗಿ ಎದ್ದು ಬಾಗಿಲು ತೆಗೆದು ಹೊರಟಳು.

ಮರುದಿನ ಬೆಳಿಗ್ಗೆ ಎಕ್ಸಪ್ರೆಸ್ ಟ್ರೇನ್‌ಗೆ ಸಿಕ್ಕು ಆತ್ಮಹತ್ಯೆ ಮಾಡಿಕೊಂಡ ಹಮೀದಾಳ ಸುದ್ದಿ ಪೇಪರಿನಲ್ಲಿ ಪ್ರಕಟವಾಗಿತ್ತು.
*****

ಪುಸ್ತಕ: ಕಡಲಾಚೆಯ ಕಥೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಂಚರಾತ್ರ (ತೊಗಲುಬೊಂಬೆಯಾಟ)
Next post ಕಲಿಸಿದರು

ಸಣ್ಣ ಕತೆ

 • ಎರಡು…. ದೃಷ್ಟಿ!

  ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

 • ಎರಡು ರೆಕ್ಕೆಗಳು

  ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಆಪ್ತಮಿತ್ರ

  ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

 • ಧರ್ಮಸಂಸ್ಥಾಪನಾರ್ಥಾಯ

  ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…