ಒಂದು ಕನ್ನಡಿ ಧಿಡೀರನೆ ಮಾತನಾಡ ತೊಡಗಿತು. “ಎಲೆ, ಮಾನವ! ಏಕೆ ಹೀಗೆ ಪರಿತಪಿಸುತ್ತಿರುವೆ? ಕಂಡದ್ದು, ಎಲ್ಲಾ ನೋಡುವೆ, ಊಹಿಸಿ ಕೊಳ್ಳುವೆ, ಕಲ್ಪಿಸಿಕೊಳ್ಳುವೆ, ಬಾಳ ಇಡೀ ಗೋಳಾಡುವೆ, ಒದ್ದಾಡುವೆ ಛೇ ! ನಿನ್ನ ಬಾಳನೋಡಿ ನನಗೆ ಮರುಕವೆನುಸಿತ್ತಿದೆ”- ಎಂದಿತು.
ಎಲೆ, ಕನ್ನಡಿ! “ನಿನ್ನ ಜಂಭ ಸಾಕು. ನೀನು ಬಿಂಬ ಸ್ವರೂಪಿ ನಿನಗೆ ನನ್ನಂತೆ ಒಂದು ದೇಹವಿಲ್ಲ, ಕಣ್ಣಿಲ್ಲ, ಬಾಯಿಲ್ಲ, ಮೂಗಿಲ್ಲ, ಕೈಕಾಲು, ಮೈ, ತಲೆ ಇಲ್ಲ, ಕೊನೆಗೆ ಹೃದಯವೂ ಇಲ್ಲ. ನೀನು ಬರಿ ಕನ್ನಡಿ.” ಎಂದು ಹೀಯಾಳಿಸಿದ ಮಾನವ.
ಕನ್ನಡಿ ಮರುನುಡಿಯಿತು. “ನಿನಗೆ ಒಂದು ದೇಹದ ಅವಯವವಾದರೆ ನನಗೆ ಹಲವು ದೇಹದ ಅವಯವಗಳು. ಎಂದು ಯಾವುದನ್ನು ನನ್ನದೆನ್ನಿಸಿ ಕೊಂಡಿಲ್ಲ. ನನ್ನ ಕಣ್ಣೀರಿಗೆ ಒದ್ದೆಯಿಲ್ಲ. ನನ್ನ ಭಾವಗಳಲ್ಲಿ ಸ್ಥಿರ ದುಃಖ ಸ್ಥಿರ ಸುಖವಿಲ್ಲ. ನಿಂತಂತೆ ನಿಂತು, ಕಂಡಂತೆ ಕಂಡು ಬಾಳ ರಸ ಉಂಡು ಹೊಳಯುತ್ತಿರುವೆ. ನನಗೆ ಅಳಿವಿಲ್ಲ, ನೋವಿಲ್ಲ, ನಲಿವಿಲ್ಲ, ನಾನು ಯಾವುದನ್ನೂ ಸ್ವೀಕರಿಸುವುದಿಲ್ಲ, ತಿರಸ್ಕರಿಸುವುದಿಲ್ಲ. ಸಂಗ್ರಹಿಸಿಕೊಳ್ಳವುದಿಲ್ಲ. ಆದರೆ ನಿನ್ನ ತಲೆ ತುಂಬಾ ವಿಚಾರಗಳು, ಯೋಚನೆಗಳು, ಎದೆ ತುಂಬಾ ಪ್ರೀತಿ, ದ್ವೇಷ, ಮೈತ್ರಿ ಎಲ್ಲಾ ಭಾವಗಳು ತುಂಬಿ ನೀ ಚಡಪಡಿಸುತ್ತಿರುವೆ. ಒಮ್ಮೆ ನಿನ್ನ ಎದೆಯನ್ನು ಕನ್ನಡಿ ಮಾಡಿಕೊ. ಕಣ್ಣನ್ನು ಕನ್ನಡಿ ಮಾಡಕೊ, ಆಗ ನಿನ್ನ ಬಾಳು ಎಂದೂ ಗೋಳಾಗುವುದಿಲ್ಲ” ಎಂದಿತು ಕನ್ನಡಿ.
ಕನ್ನಡಿಯ ನುಡಿಗಳು ಮಾನವನ ಕಣ್ಣು ತೆರೆಯಿಸಿದವು.
*****