ಹೊನ್ನುರಿಯ ಮೈ ಬಣ್ಣ, ಕೆಂಡಕಾರುವ ಕಣ್ಣ
ಎಂಟೆದೆಯ ಹುಲಿರಾಯ, ನಂಟ ನೀನು.
“ಕವಡು ಕಂಟಕವಿಲ್ಲದೀ ಹುಲ್ಲೆ ಸವಿ ಮೇವು”
ಎನುವೆ ಅದು ತಿಂದಂಥ ಗಂಟು ಏನು?

ನೀ ಪಶುವು; ನಿನಗೇನು? ಮನದ ಚೊಚ್ಚಿಲ ಮಗನು
ನರಪಶುವು ನರಹಸುಗಳೆಷ್ಟೊ ತಿಂದ.
ತನ್ನ ತಾನೆನಿಸಿದನು, ಮೂರು ಕಣ್ಗಳ ಮುಚ್ಚಿ,
ಹಣೆಗಣ್ಣ ಶಿವರುದ್ರ ಶರಣು ಎಂದ.

ಜೀವ ಜೀವದ ಉಣಿಸೆ? ಏನು ಜೀವನವೊ?
ಬಾಳೆದೆಗೆ ಶೂಲವಿರಲೇನು ಕಾರಣವೊ?
ಬೇರೆ ಹಾದಿಯೆ ಇಲ್ಲೆ? ಇದು ಯಾವ ಭಾವ
ಇದು ಏನು ದೇವ? ಓ ದೇವ ಮಾದೇವ?
*****