ಮೂಲ: ಆರ್ ಕೆ ನಾರಾಯಣ್
ಪದ್ಮಳಗಂಡ ಹೇಳಿದ. “ಆರು ಗಂಟೆಗೆ ವಾಪಸು ಬಂದುಬಿಡ್ತೀನಿ. ಆವೇಳೆಗೆ ನೀನು ಸಿದ್ದವಾಗಿರು. ಇಬ್ಬರೂ ಬೀಚ್ ಗೆ ಹೋಗೋಣವಂತೆ”
“ನಾನು ರಾಯಲ್ ಥಿಯೇಟರಿಗೆ ಹೋಗ್ತಿನಿ ಈವತ್ತು ಸಾಯಂ ಕಾಲ. ಅಲ್ಲಿ ಗಾಂಧಿ ಮಾತಾಡ್ತಾರಂತೆ.”
“ಓಹೋ. ಆದರೆ ಒಂದು ಮಾತು. ಅಲ್ಲಿಗೆ ಹೋಗೋ ಮುಂಚೆ ಒಡವೆಗಳನ್ನೆಲ್ಲ ತೆಗೆದು ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿಕೊಂಡು ಹೋಗು, ಹುಷಾರ್” ಎಂದು ಗಂಡ ಹೇಳಿದ.
“ನೀವು ಅಲ್ಲಿಗೆ ಹೋಗೋದಾದರೆ ಪರ್‍ಸ್‌ತೆಗೆದು ನಿಮ್ಮ ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟು ಬೀಗಹಾಕಿಕೊಂಡು ಹೋಗಿ” ಎಂದು ಪದ್ಮ ಎದುರು ಜವಾಬು ಹೇಳಿದಳು.
“ನಾನೇನೂ ಅಲ್ಲಿಗೆ ಹೋಗೊಲ್ಲ” ಎಂದು ಹೇಳಿ ಆಫೀಸಿಗೆ ಹೊರಟು ಹೋದ.
ಮಧ್ಯಾಹ್ನ ಮೂರು ಗಂಟೆಯವೇಳೆಗೆ ಪದ್ಮ ಕನ್ನಡಿಯ ಮುಂದೆ ನಿಂತು ಒಂದೊಂದಾಗಿ ಎಲ್ಲ ಒಡವೆಗಳನ್ನು ಬಿಚ್ಚತೊಡಗಿದಳು. ಅರ್‍ಧ ಗಂಟೆಯವೇಳೆಗೆ ಮುಖ, ಕೈಯಿ, ಎಲ್ಲ ಬರಿದಾಗಿಬಿಟ್ಟಿತ್ತು. ಕನ್ನಡಿಯಲ್ಲಿ ಒಂದುಸಲ ಪರೀಕ್ಷಿಸಿಕೊಂಡಳು. ಮನಸ್ಸು ಸ್ವಲ್ಪ ಬಿನ್ನವಾಯಿತು ಅವಳಿಗೆ ಪಕ್ಕದ ಮನೆಯ ಲಾಯರ್ ಹೆಂಡತಿಯ ಮಾಟಂಗಿಗೆ ಬಂದಿರುತ್ತಾಳೆ. ಅವಳ ಮುಂದೆ ತನ್ನ ಹೊಸ ಬಂಗಾರದ ಸರವನ್ನು ತೋರಿಸಿ ಕೊಳ್ಳುವ ಹಾಗಿಲ್ಲವಲ್ಲಾ ಎಂಥ ಅವಕಾಶ ಹೋಯಿತು!
ಸಭೆಯಲ್ಲಿ ಕಳೆದುಕೊಳ್ಳುವಂಥ ಒಡವೆ ಯಾವುದೂ ಇಲ್ಲವಲ್ಲ ಸಧ್ಯ, ಎಂದು ಅವಳಿಗೆ ಸಮಾಧಾನವಾಯಿತು. ಬಳೆ ಕೂಡ ತೆಗೆದುಬಿಟ್ಟಿದ್ದಳು. ತಕ್ಷಣ ಅವಳಿಗೆ ಜ್ಞಾಪಕ ಬಂತು. ಶುಕ್ರವಾರದಂಥ ಮಂಗಳ ದಿವಸದಲ್ಲಿ ಬಳೆಯಿಲ್ಲದೆ ಬರಿಕೈಯಲ್ಲಿ ಮನೆಬಿಟ್ಟು ಕದಲುವುದು ಮುತ್ತೈದೆ ಯಾದವಳಿಗೆ ಶ್ರೇಯಸ್ಸಲ್ಲ ಎಂದು. ಎಲ್ಲಕ್ಕಿಂತ ತೆಳ್ಳಗಿದ್ದ ಎರಡು ಬಳೆ ಆರಿಸಿ ತೊಟ್ಟುಕೊಂಡಳು. ಸೀರೆಯ ಸೆರಗಿಂದ ಅವುಗಳನ್ನು ಭದ್ರವಾಗಿ ಮುಚ್ಚಿಟ್ಟು ಕೊಳ್ಳುತ್ತೇನೆಂದು ಮನಸ್ಸು ಮಾಡಿಕೊಂಡಳು.
ಸಭೆ ಐದು ಗಂಟೆಗೆ ಮೊದಲಾಗಬೇಕಾಗಿತ್ತು, ಆದರೆ ಪದ್ಮ ನಾಲ್ಕು ಗಂಟೆಗೇ ರಾಯಲ್ ಥಿಯೇಟರಿನಲ್ಲಿದ್ದಳು. ಆದುದರಿಂದ ಮುಂದಿನ ಸಾಲಿನಲ್ಲಿ ಒಂದು ಕುರ್‍ಚಿ ದಕ್ಕಿತು. ಪಕ್ಕದ ಕುರ್‍ಚಿಯಲ್ಲಿ ಅವಳ ಸ್ನೇಹಿತಿಯೇ ಆದವಳೊಬ್ಬಳು ಕೂತಿದ್ದಳು. ಅವಳ ಕೈಯಿ, ಕಿವಿ, ಮೂಗೂ ಕೂಡ ಬರಿದಾಗಿದ್ದುವು. “ಇದೇನಿದು ಸಮಾಚಾರ? ಬಳೆ, ಓಲೆ, ಮೂಗುಬೊಟ್ಟು ಎಲ್ಲ ಎಲ್ಲಿ?” ಎಂದು ಪದ್ಮ ಕೇಳಿದಳು. ಸ್ನೇಹಿತಿ ಹೇಳಿದಳು: “ಬೇಕೂ ಅಂತಲೇ ತೆಗೆದು ಮನೇಲಿಟ್ಟು ಬಿಟ್ಟು ಬಂದೆ. ಗಾಂಧೀ ಮಹಾತ್ಮರು ನಾಕು ವರ್‍ಷದ ಕೆಳಗೆ ಇಲ್ಲಿಗೆ ಬಂದಿದ್ದರು. ಇದೇ ಹಾಲಿನಲ್ಲೇ ಮೀಟಿಂಗ್ ನಡೀತು. ಆಗ ನಾನೂ ಬಂದಿದ್ದೆ. ಅವರು ಭಾಷಣಮಾಡಿ, ಹಣಕೊಡಿ ಎಂದ ಕೈಯೊಡ್ಡಿದರು. ನನಗೇ ಗೊತ್ತಿಲ್ಲ, ಏನುಮಾಡಿದೆ ಅನ್ನೋದು, ಅಷ್ಟರಲ್ಲಿ ನನ್ನ ಎಂಟುಬಳೆ, ಅರವತ್ತು ಸವರನ್ ಬಾಳೊ ನನ್ನ ಚಿನ್ನದ ಸರ ಎಲ್ಲ ತೆಗೆದು ಅವರ ಪಾದದ ಬಳಿ ಇಟ್ಟುಬಿಟ್ಟೆ. ಆ ಗಾಂಧೀ ಮಹಾತ್ಮರ ಮಾಯೆ ಏನೂ ಅಂತೀ? ಅರ್‍ಧ ಗಂಟೇಲಿ ಒಡವೆಯ ರೂಪದಲ್ಲೇ ಮೂರುಸಾವಿರ ರೂಪಾಯಿ ಸುರಿದುಹೋದುವು. ಅದೇನು ಶಕ್ತಿಯೋ ಏನೋ, ಆತ ಕೇಳಿದರೆ ಯಾರೂ ಇಲ್ಲ ಎನ್ನುವುದೇ ಇಲ್ಲ. ನಾನು ಮನೆಗೆ ಬರಿಗೈಯಲ್ಲಿ ಹೋದುದನ್ನು ನೋಡಿ ನನ್ನ ಮನೆಯವರು ಮೂರು ತಿಂಗಳ ಕಾಲ ನನ್ನ ಕೈಯಲ್ಲಿ ಮಾತು ಬಿಟ್ಟು ಬಿಟ್ಟರು. ಈವತ್ತಂತೂ, ನನ್ನ ಒಡವೇನೆಲ್ಲ ಕಳಚಿಟ್ಟ ಹೊರತು ಹೊರಕ್ಕೆ ಬಿಡಲಿಲ್ಲ ಅವರು.”
ಬಿಳಿಯ ಖಾದಿ ಬಟ್ಟೆಯನ್ನು ತೊಟ್ಟಿದ್ದ ಸ್ವಯಂಸೇವಕರ ಸಂಭ್ರಮವೋ ಸಂಭ್ರಮ. ಕುರ್‍ಚಿಗಳನ್ನು ಇಲ್ಲಿಂದಲ್ಲಿಗೆ ನೂಕುವುದೇನು, ವೇದಿಕೆಯ ಮೇಲೆ ಹೂವಿನ ಕುಂಡಗಳನ್ನು ಜೋಡಿಸುವುದೇನು, ಸೇರಿದ ಸಂದಣಿಯಲ್ಲಿ ಸದ್ದಡಗಿಸುವುದೇನು! ನಾಲ್ಕು ಹೊಡೆದು ಹದಿನೈದು ನಿಮಿಷ ವಾಗಿಲ್ಲ, ಆಗಲೇ ಮಂದಿರವೆಲ್ಲ ತುಂಬಿಹೋಗಿತ್ತು. ಕಿಟಕಿಗಳು ಬಾಗಿಲುಗಳು, ಎಲ್ಲಿ ನೋಡಲಿ, ಮನುಷ್ಯರ ತಲೆಗಳೇ, ಉಸಿರಾಡುವುದಕ್ಕೂ ಸ್ಥಳವಿರಬಾರದು. ಹಾಗಿತ್ತು ಗುಂಪು.
ಐದು ಹೊಡೆಯುವ ವೇಳೆಗೆ ಸರಿಯಾಗಿ ಮಹಾತ್ಮಾ ಗಾಂಧಿ ಬಂದರು. ಎಲ್ಲರೂ ಎದ್ದು ನಿಂತರು. ಸಭೆಯ ತುಂಬ “ಗಾಂಧೀಕಿ ಜೈ, ಭಾರತ ಮಾತಾಕೀ ಜೈ” ಎಂಬ ಕೂಗುಗಳು, ಗಾಂಧಿ ವೇದಿಕೆಯ ಮೇಲೆ ನಿಂತು ಜನರ ಕಡೆ ನೋಡಿ ತೃಪ್ತಿಯಾದ ಕಿರುನಗುವನ್ನು ಸೂಸಿ, ತಲೆಬಾಗಿ ಜನರಿಗೆ ನಮಸ್ಕರಿಸಿದರು. ಪದ್ಮ ಕೈಜೋಡಿಸಿಕೊಂಡು ನಿಂತಿದ್ದಳು. ಇವರೇನೇ ಗಾಂಧೀ ಮಹಾತ್ಮರು? ನಾಲ್ಕೈದು ಸಲ ಕೈ ಮುಗಿದು ಕೂತು ಕೊಂಡಳು. ಸಭಾ ಮಂದಿರದ ಮೂಲೆ ಮೂಲೆಯಿಂದಲೂ ಮಹಾತ್ಮರ ಮೇಲೆ ಜನ ಹಾರಗಳನ್ನೂ ಹೂವುಗಳನ್ನೂ ಎಸೆದರು. ಅನೇಕ ಹೆಂಗಸರು ಓಡೋಡಿ ಬಂದು ವೇದಿಕೆಯನ್ನು ಹತ್ತಿ ಗಾಂಧೀಜಿಯ ಪಾದಗಳನ್ನು ಕಣ್ಣಿಗೊತ್ತಿಕೊಂಡರು. ಗದ್ದಲ ಅಡಗುವುದಕ್ಕೆ ಅರ್‍ಧ ಗಂಟೆ ಹಿಡಿಯಿತು. ಗಾಂಧೀಜಿ ವೇದಿಕೆಯ ಮೇಲೆ ಕುಳಿತುಕೊಂಡರು. ಅವರ ಸುತ್ತು ಮುತ್ತಲೇ ಅಡ್ಡಾಡುತ್ತಿದ್ದ ಜೋಲು ಮೀಸೆಯ ಇಳಿವಯಸ್ಸಿನವರೊಬ್ಬರು ಕಾಗದದ ಸುರುಳಿಯನ್ನು ಕೈಲಿ ಹಿಡಿದುಕೊಂಡು ಮುಂದೆ ಬಂದು ಮಾನ ಪತ್ರವನ್ನು ಓದಿದರು. ಮಹಾತ್ಮರನ್ನು ಸ್ವಾಗತಿಸುವುದರ ಜತೆಗೆ ಸ್ಥಳೀಯ ಅಸ್ಪೃಶ್ಯ ಸೇವಕ ಸಂಘದ ಚಟುವಟಿಕೆಗಳ ವರದಿಯನ್ನು ಒಪ್ಪಿಸಿದರು.
ಮಾನಪತ್ರ ಸಮರ್‍ಪಣೆಯಾದ ಮೇಲೆ ಗಾಂಧಿ ಮಾತನಾಡಿದರು. ಅವರ ದನಿಯಲ್ಲಿ ಏನೋ ಒಂದು ಬಗೆಯ ಶಾಂತವಾದ ಇಂಪಾದ ತಾನವಿತ್ತು. ಶ್ರಾವಕರ ಮನಸ್ಸನ್ನೆಲ್ಲ ಅದು ಆಕರ್‍ಷಿಸುತ್ತಿತ್ತು. ಅದನ್ನು ಕೇಳಿದವರು ಅದರಂತೆ ನಡೆಯದಿರಲು ಸಾಧ್ಯವೇ ಇರುತ್ತಿರಲಿಲ್ಲ. “ನಾನು ಸುಧಾರಣೆಯ ಯಾತ್ರೆಗಾಗಿ ಬಂದಿದ್ದೇನೆಂಬುದು ನಿಮಗೆ ಗೊತ್ತೇ ಇದೆ. ಯಾವುದನ್ನು ನಾನು ಸತ್ಯವೆಂದು ಕಂಡುಕೊಂಡಿದ್ದೆನೋ ಅದರ ಸಲುವಾಗಿ ಬಂದಿದ್ದೇನೆ. ಈ ಕಾರ್‍ಯದಲ್ಲಿ ನೀವು ನೆರವಾಗಬೇಕೆಂದು ಪ್ರಾರ್‍ಥಿಸುತ್ತೇನೆ” ಎಂದು ಗಾಂಧಿ ನುಡಿದರು. ದೇವರ ದೃಷ್ಟಿಯಲ್ಲಿ ಎಲ್ಲ ಮನುಷ್ಯರೂ ಸಮಾನರು, ತಲೆ, ಕೈ, ಕಾಲುಗಳಿಗಿಂತ ಕಿವಿ, ಮೂಗುಗಳು ಹೆಚ್ಚು ಮುಖ್ಯವೆಂದು ಯಾರಾದರೂ ಹೇಳುವುದಕ್ಕೆ ಸಾಧ್ಯವೇ? ಪ್ರತಿಯೊಂದೂ ಮುಖ್ಯ. ಅದೇ ರೀತಿ ಸಮಾಜದ ಪ್ರತಿಯೊಂದು ವರ್‍ಗವೂ ಮಿಕ್ಕೆಲ್ಲ ವರ್‍ಗಗಳಷ್ಟೇ ಪ್ರಧಾನವಾದುದು. ವರ್‍ಣಾಶ್ರಮ ಭೇದವೆನ್ನುವುದು ಕೇವಲ ಆರ್‍ಥಿಕವಾದುದು. ಕಾರ್‍ಯ ಸುಗಮವಾಗಿ ನಡೆಯಲೆಂಬ ಅನುಕೂಲ ಕ್ಕಾಗಿ ಏರ್ಪಡಿಸಿದ್ದ ಪದ್ದತಿಯದು. ತುಟ್ಟತುದಿಯಲ್ಲಿದ್ದ ಬ್ರಾಹ್ಮಣನು ವೈದೀಕ ಕಾರ್‍ಯಗಳನ್ನೂ ಆಧ್ಯಾತ್ಮಕ ಕಾರ್‍ಯಗಳನ್ನೂ ಮಾಡುತ್ತಿದ್ದರೆ, ಪಂಚಮನೆನಿಸಿದ ಹರಿಜನನಾದರೋ, ಅಷ್ಟೇ ಅಗತ್ಯವಾದ ನಗರ ನೈರ್‍ಮಲ್ಯ ಮುಂತಾದ ದೈಹಿಕ ಕಾರ್‍ಯಗಳಲ್ಲಿ ಪ್ರವೃತ್ತನಾಗಿರುತ್ತಿದ್ದನು. ಆದಷ್ಟು ಮಾತ್ರದಿಂದ ಪಂಚಮರನ್ನು ಕುಷ್ಠರೋಗಿಗಳಂತೆ ಕಾಣುವುದು ತರವೆ? ದೇವರ ಕಣ್ಣಿನಲ್ಲಿ ಎಲ್ಲರೂ ಸಮಾನರಲ್ಲವೆ?
ಈ ರೀತಿ ಗಾಂಧೀಜಿ ಸುಮಾರು ನಲವತ್ತು ನಿಮಿಷ ಮಾತಾಡಿರ ಬಹುದು. ಸೇರಿದ್ದ ಜನ ಯಕ್ಷಣಿಗೊಳಗಾದಂತೆ ಮೂಕಬಡಿದು ಕೇಳುತ್ತಿದ್ದರು. ಗಾಂಧೀಜಿಯ ಶಿರಸ್ಸಿನ ಹಿಂದೆ ಪ್ರಭಾವಳಿಯಂತೆ ಹೊಳೆಯುವ ಜ್ಯೋತಿಯೊಂದು ಪದ್ಮಳಿಗೆ ಕಾಣಿಸಿತು. ಅವರು ಹೇಳಿದ ಪ್ರತಿ ಮಾತೂ ಆಕೆಗೆ ಒಪ್ಪಿಗೆಯಾಯಿತು. ತಮ್ಮ ಮನೆಗೆ ಬರುತ್ತಿದ ಜಲಗಾರನ ಬಗ್ಗೆ ಅವಳಿಗೆ ವಿಶೇಷವಾದ ಮರುಕ ಹುಟ್ಟಿತು. ನಿಷ್ಕಾರಣವಾಗಿ ಅವನನ್ನು ನಿಂದಿಸಿ, ಬೈದು ಗೋಳುಹುಯ್ದು ಕೊಳ್ಳುವೆನಲ್ಲಾ ಎಂದು ಪೇಚಾಡಿ ಕೊಂಡಳು.
ಭಾಷಣವಾದಮೇಲೆ ಗಾಂಧಿ ವ್ಯವಹಾರಕ್ಕೆ ತೊಡಗಿದರು. ತಾವು ಬಂದಿರುವುದು ಹಣಕ್ಕೆ ಎಂದು ಸಭಿಕರೆಲ್ಲ ಈ ವೇಳೆಗೆ ಅರಿತುಕೊಂಡೇ ಇರಬೇಕೆಂದು ಹೇಳಿದರು. ಹಣ ಬೇಕಾದುದಾದರೂ ದಲಿತ ಜನರಿಗೆ ಜೀವನದ ಅತ್ಯಗತ್ಯವಾದ ಸಾಮಗ್ರಿಗಳನ್ನು ಒದಕಿಸುವುದಕ್ಕಾಗಿ, ಹೆಂಗಸರ ಕಡೆ ನೋಡಿ, “ನಿಮ್ಮ ಒಡವೆಗಳೆಲ್ಲ ಈ ಕೆಲಸಕ್ಕೆ ಒದಗಬೇಕು” ಎಂದರು. ಸಭೆಯಲ್ಲಿ ಹೆಂಗಸರ ಗುಂಪಿನಲ್ಲಿ ಗುಸಗುಸ ಹಬ್ಬಿತು. ಇದನ್ನು ಕಂಡು ಗಾಂಧೀಜಿ ಸಣ್ಣದಾಗಿ “ನಾನು ಬನಿಯಾ ಜಾತಿಯವನು. ಲೇವಾದೇವಿ ನಮ್ಮ ಕಸಬು. ನಿಮ್ಮ ಹತ್ತಿರವಿರುವ ಹಣವೆಲ್ಲಾ, ಅಷ್ಟೇ ಅಲ್ಲ, ಹಣಕ್ಕೆ ಪರಿವರ್‍ತಿಸಬಹುದಾದ ವಸ್ತುಗಳೆಲ್ಲಾ ನನ್ನ ಜೇಬಿಗೆ ಬೀಳುವವರೆಗೆ ನಾನು ಕದಲುವವನಲ್ಲ. ಎಲ್ಲಿ ಜಾಗ್ರತೆ ಮಾಡಿ, ಈ ಸಂಜೆ ನಾನು ಇನ್ನೂ ಒಂದು ಸಭೆಗೆ ಹೋಗಬೇಕಾಗಿದೆ” ಎಂದರು.
ಯಾರೋ ಒಬ್ಬರು ಗುಂಪಿನಲ್ಲಿ ದಾರಿಮಾಡಿಕೊಂಡು ನುಗ್ಗಿ ಬಂದು ಗಾಂಧೀಜಿಯ ಕೈಯಲ್ಲಿ ಒಂದು ಬೆಳ್ಳಿಯ ತಟ್ಟೆಯನ್ನಿಟ್ಟರು. ಮಹಿಳೆಯೊಬ್ಬಳು ವೇದಿಕೆಯ ಮೇಲೆ ಪುಟಕ್ಕನೆ ನೆಗೆದು ಬಂದು, ತನ್ನ ಅಡ್ಡಿಕೆಯನ್ನು ತೆಗೆದು ಕೊಟ್ಟಳು. ಅಡ್ಡಿಕೆಯನ್ನು ಕೊಟ್ಟುದಕ್ಕಾಗಿ ಅವಳನ್ನು ವಂದಿಸಿ, ಗಾಂಧೀಜಿ ಕೇಳಿದರು “ನಿನ್ನ ಬೆರಳಿನಲ್ಲಿ ಕಾಣಿಸುತ್ತದಲ್ಲ, ಆ ಉಂಗುರವನ್ನು ಇಟ್ಟುಕೊಂಡಿರಬೇಕೆಂದು ತೀರ್‍ಮಾನಿಸಿ ಬಿಟ್ಟಿದ್ದೀಯೇನು ?” ಎಂಬುದಾಗಿ, ಮಹಿಳೆಯು ಉಂಗುರವನ್ನು ತೆಗೆದು ಗಾಂಧಿಗೆ ಆರ್‍ಪಿಸಿದಳು. ಚಪ್ಪಾಳೆಗಳ ಸುರಿಮಳೆಯೇ ಸುರಿಮಳೆ.
ವೇದಿಕೆಯ ಕಡೆಗೆ ನುಗ್ಗುತ್ತಿದ್ದವರಿಗೆ ಲೆಕ್ಕವೇ ಇಲ್ಲ. ಹಣವೂ ಒಡವೆ ವಸ್ತುಗಳೂ ಸುರಿಯುತ್ತಿದ್ದವು. ಕೇಂದ್ರ ಶಕ್ತಿಯಂತೆ ಗಾಂಧಿ ಎಲ್ಲರನ್ನೂ ಆಕರ್‍ಷಿಸುತ್ತಿದ್ದರು. ಗಂಡಸರು, ಹೆಂಗಸರು, ಮಕ್ಕಳು ಎಲ್ಲರೂ ಗಲಾಟೆಯಲ್ಲಿ ದಾರಿಮಾಡಿಕೊಂಡು ಗಾಂಧಿಯ ಬಳಿಗೆ ಹೋಗಿ ಏನಾದರೂ ಒಂದು ಕಾಣಿಕೆಯನ್ನು ಒಪ್ಪಿಸುತ್ತಿದ್ದರು. ಪದ್ಮಳ ಬಲಗಡೆಗಿದ್ದ ಗಂಡಸರು, ಎಡಗಡೆಗಿದ್ದ ಹೆಂಗಸರು, ಮುಂದಗಡೆ ಜಮಖಾನದ ಮೇಲೆ ಕುಳಿತಿದ್ದ ಮಕ್ಕಳು ಇವರಲ್ಲಿ ಯಾರಾದರೂ ಸುಮ್ಮನೆ ಕುಳಿತಿರಬೇಕಲ್ಲ! ಪದ್ಮ ತನ್ನ ಬಳೆಗಳನ್ನು ಸೀರೆಯ ಸೆರಗಿನಲ್ಲಿ ಬಚ್ಚಿಟ್ಟು ಕೊಂಡು ಮನಸ್ಸಿನಲ್ಲಿ ಏರಿಬರುತ್ತಿದ್ದ ಆವೇಶದೊಡನೆ ವಿಶೇಷ ಪ್ರಯಾಸದಿಂದ ಕಾದಾಡುತ್ತ ಕುಳಿತಿದ್ದಳು.
ನೂಕು ನುಗ್ಗಲು ಅಡಗಿತು. ಗಾಂಧೀಜಿಯ ಸುತ್ತ ಬೆಳ್ಳಿಯ ತಟ್ಟೆ ಗಳೇನು, ಬಟ್ಟಲುಗಳೇನು, ಗಡಿಯಾರಗಳೇನು, ಬಳೆಗಳೇನು, ಮುಗುತಿಗಳೇನು, ನಾಣ್ಯಗಳೇನು, ಹೂವಿನ ಹಾರಗಳೇನು-ರಾಸಿರಿಸಿಯಾಗಿ ಬಿದ್ದಿದ್ದುವು.
ಗಾಂಧೀಜಿ ಜನರನ್ನೆಲ್ಲ ಮನಸಾರ ವಂದಿಸಿ ಕಾಣಿಕೆಯ ರಾಸಿಯಲ್ಲಿ ಸೇರಿದ್ದ ಬೆಲೆಬಾಳುವ ವಸ್ತುಗಳನ್ನೆಲ್ಲ ಹರಾಜು ಹಾಕುತ್ತೇನೆಂಬುದಾಗಿ ತಿಳಿಸಿದರು. ಆದರೆ ಅದಕ್ಕೆ ಮೊದಲು ಇನ್ನೂ ಏನಾದರೂ ಬರಲಿದೆಯೋ ಎಂಬುದನ್ನು ಖಚಿತ ಮಾಡಿಕೊಳ್ಳಬೇಕಾದುದಿತ್ತು. ಅಕ್ಕತಂಗಿಯರೆ, ನೀವು ಕೊಡಬೇಕಾದುದೆಲ್ಲ ಮುಗಿಯಿತೇ? ಇನ್ನೂ ಏನಾದರೂ ಇದೆಯೋ? ಎಂದು ಕೇಳಿ ಒಂದುಸಲ ಸಭಿಕರ ಕಡೆ ತಿರುಗಿನೋಡಿದರು. ಪದ್ಮಳು ಸೀರೆಯ ಸೆರಗಿನಲ್ಲಿ ಬಳೆಯನ್ನು ಇನ್ನೂ ಬಲವಾಗಿ ಮುಚ್ಚಿಕೊಳ್ಳ ತೊಡಗಿದಳು. ಆದರೆ ಕೈಯ ನಡುಗಿತು. ಗಾಂಧಿಯ ದೃಷ್ಟಿ ತನ್ನ ಕಡೆ ಸುಳಿ ದಾಗಲಂತೂ ತನ್ನ ಗುಟ್ಟೆಲ್ಲ ರಟ್ಟಾಗಿಹೋಯಿತೆಂದು ದಿಗಿಲುಬಿದ್ದಳು. ವೇದಿಕೆಯನ್ನು ಹತ್ತಿ ಹೋಗಿ, ಎರಡು ಬಳೆಗಳನ್ನೂ ತೆಗೆದು ಗಾಂಧೀಜಿಯ ಮುಂದಿಟ್ಟಳು. ಗಾಂಧಿ ಮಂದಹಾಸವನ್ನು ಬೀರಿ “ಬಹಳ ಸಂತೋಷ ತಂಗಿ” ಎಂದರು. ಪದ್ಮಳಿಗೊಂದು ಮಹಾ ಮುಹೂರ್‍ತ,
ಗಂಡ ಮನೆಗೆ ಬಹಳ ಹೊತ್ತು ಮೀರಿ ಬಂದ. ಮರುಮಾತಾಡದೆ ಯಂತ್ರದಂತೆ ಕೂಳನ್ನು ತಿಂದು ಹಾಸಿಗೆಯಲ್ಲಿ ಬಿದ್ದು ಕೊಂಡ ಪದ್ಮಳ ಬರಿಗೈಯನ್ನು ಅವನು ಗಮನಿಸಲಿಲ್ಲ. ತಾನು ಬಳೆ ಕಳೆದುಕೊಂಡುದು ಗಂಡನಿಗೆ ಗೊತ್ತಾದರೆ ಏನು ಮಾಡುತ್ತಾನೋ ಯಾರಿಗೆ ಗೊತ್ತು? ಗಂಟು ಕಟ್ಟಿಕೊಂಡು ನಿಮ್ಮಪ್ಪನ ಮನೆಗೆ ಹೊರಡು ಎಂದು ಅಪ್ಪಣೆ ಮಾಡಬಹುದು. ಮೂರು ನಾಲ್ಕು ತಿಂಗಳ ಕಾಲ ಮಾತು ಬಿಟ್ಟುಬಿಡಬಹುದು…….. ತನಗೇನು ಕಾಯ್ದು ಕೊಂಡಿದೆಯೋ ಶಿವನೇ ಬಲ್ಲ. ಗಾಂಧಿಯನ್ನು ನೋಡುವುದಕ್ಕೆ ಹೋಗದೆ ಇದ್ದರೆ ಚೆನ್ನಾಗಿತ್ತಲ್ಲ ಎಂದುಕೊಂಡಳು. ಬೆಳಿಗ್ಗೆಯವರೆಗೆ ಒಂದು ಮಾತೂ ಹೇಳುವುದಿಲ್ಲವೆಂದು ಸಂಕಲ್ಪ ಮಾಡಿಕೊಂಡಳು. ಆದರೆ ಹನ್ನೊಂದು ಗಂಟೆಯ ವೇಳೆಗೆ, ಮನೋಸಾರ್‍ಥ್ಯವೆಲ್ಲ ಮುರಿದುಬಿತ್ತು. ತಡೆಯುವುದಕಾಗಲಿಲ್ಲ. ಕಿತ್ತು ತಿನ್ನುತ್ತಿತ್ತು ಭಯ. ಗಂಡನ ಭುಜವನ್ನು ಹಿಡಿದು ಅಲ್ಲಾಡಿಸಿ ಎಚ್ಚರಗೊಳಿಸಿದಳು. ಎಬ್ಬಿಸಿ ಬಳೆಗಳ ವಿಷಯ ಹೇಳಿದಳು. ಗಂಡನಿಗೆ ತೀರ ನಿದ್ರೆ, ಅವಳೇನು ಹೇಳುತ್ತಿದ್ದಾಳೋ ಅವನಿಗೆ ಗೊತ್ತಾಗಲಿಲ್ಲ. ಪದ್ಮಳು ಇನ್ನೂ ಬಲವಾಗಿ ಅವನ ಭುಜವನ್ನು ಜಗ್ಗಿಸಿದಳು. ಬಳೆಗಳ ಸಂಗತಿ ಮತ್ತೆ ತಿಳಿಸಿದಳು. ಉತ್ತರ ಹೇಳುವ ಮುಂಚೆ ಇನ್ನೊಂದು ವರಸೆ ಜೊಂಪು ಹತ್ತಿತ್ತು. ಯುಗಗಳು ಕಳೆದು ಹೋದುವೇನೋ ಎನ್ನಿಸಿತು ಪದ್ಮಳಿಗೆ. ಕೊನೆಗವನು ಬಹಳ ತೆಪ್ಪಗೆ ಉಸುರಿದ “ನಾನು ಹೇಳಿರಲಿಲ್ಲವೆ ಒಡವೆ ಇಟ್ಟು ಕೊಂಡು ಹೋಗಬೇಡ ಎಂದು? ನನಗೆ ಗೊತ್ತು. ಅವಳು ಇದಕ್ಕೆ ಉತ್ತರ ಹೇಳಲಿಲ್ಲ. ಇಬ್ಬರೂ ಕೆಲವು ನಿಮಿಷ ಮೌನವಾಗಿದ್ದರು. ಆಮೇಲೆ ಗಂಡ “ಅದಿರಲಿ, ನಾನೇನು ಮಾಡಿದೆ ಹೇಳ್ತಿನಿ ಕೇಳು. ಮೀಟಂಗಿಗೆ ಹೋಗಕೂಡದು ಅಂತ ಮೊದಲು ತೀರ್‍ಮಾನಿಸಿಕೊಂಡಿದ್ದೆ. ಆದರೆ ಸ್ನೇಹಿತನೊಬ್ಬನ ಜತೆಯಲ್ಲಿ ಹೇಗೋ ಏನೋ ಅಲ್ಲಿಗೆ ನುಗ್ಗಿದೆ. ಜೇಬಿನಲ್ಲಿ ಐವತ್ತು ರೂಪಾಯಿತ್ತು. ನಾಳೆ ಬೆಳಿಗ್ಗೆ ಮನೆ ಬಾಡಿಗೆ ಕೊಡೋಣಾಂತ ಮಧ್ಯಾಹ್ನ ತಾನೆ ಬ್ಯಾಂಕಿನಿಂದ ತಂದಿದ್ದೆ. ಸ್ವಯಂ ಸೇವಕ ಬಂದ, ಹುಂಡಿಯಲ್ಲಿ ಹಾಕಿಬಿಟ್ಟೆ” ಎಂದ.
“ಸ್ಪಲ್ಪವಾದರೂ ನಿಮಗೆ ಮುಂದಾಲೋಚನೆಯೇ ಇಲ್ಲ! ನಾಳೆ ಬಾಡಿಗೆಗೆ ಏನು ಮಾಡುವುದು?” ಎಂದು ಕೇಳಿದಳು ಪದ್ಮ ಮುನಿಸಿ ಕೊಂಡು.
*****