ಒಡೆದು ಹೋಗದ ಗೊಂಬೆ

ಒಡೆದು ಹೋಗದ ಗೊಂಬೆ

ಮೂಲ: ಆರ್ ಕೆ ನಾರಾಯಣ್

ಸಾಯಂಕಾಲ ಅಪ್ಪ ಮನೆಗೆ ಬಂದಾಗ ಲೀಲಳ ಉತ್ಸಾಹವನ್ನು ನೋಡಬೇಕು. ಸಂತೋಷದ ಭರದಲ್ಲಿ ಚಪ್ಪಾಳೆ ತಟ್ಟಿಕೊಂಡು ಕುಣಿದಾಡಿ ಅಪ್ಪ ಮೆಟ್ಟಲು ಹತ್ತಿ ವರಾಂಡದೊಳಕ್ಕೆ ಬಂದೊಡನೆ ಓಡಿಹೋಗಿ ಅವರ ಕಾಲುಗಳನ್ನು ಕಟ್ಟಿಕೊಂಡುಬಿಟ್ಟಳು. ಪಕ್ಕದಲ್ಲಿ ನಿಂತಿದ್ದ ಅಮ್ಮ “ಈವತ್ತಾದರೂ ನಿಮ್ಮ ಮಾತು ಉಳಿಸಿಕೊಳ್ಳುತ್ತೀರೋ ಹೇಗೆ?” ಎಂದು ಕೇಳಿದಳು.

“ಸರಿಹೋಯಿತು. ಮತ್ತಿನ್ನೇಕೆ ಇಷ್ಟು ಬೇಗ ಆಫೀಸಿನಿಂದ ಬಂದೆ ಎಂದುಕೊಂಡೆ? ಮತ್ತೊಂದು ಸಲ ಮಗುವಿನ ಮನಸ್ಸು ಮುರಿಯುತ್ತೇನೆಯೆ?…. ಅದಿರಲಿ, ನನಗೇನಾದರೂ ಕುಡಿಯುದಕ್ಕೆ ಕೊಟ್ಟು ರೆಡಿಯಾಗು”

“ನನ್ನನ್ನೇಕೆ ಕರೀತೀರಿ? ನಾನು ಹೋಗಿ ಸೀರೆ ಬದಲಾಯಿಸಿ ಕೊಂಡು ಬರಲಾರೆ ಈಗ.”

“ಬದಲಾಯಿಸಲೂ ಬೇಡ, ಗಿದಲಾಯಿಸಲೂ ಬೇಡ. ಇದ್ದ ಹಾಗೆಯೇ ಮುದ್ದಾಗಿದ್ದೀಯ ನೀನು.”

“ಹೋಗೀಂದ್ರೆ. ನನಗೆ ಮನೆಬಿಟ್ಟು ಕದಲುವುದಕ್ಕೆ ಸಾಧ್ಯವಿಲ್ಲ. ನಾನು ಬರದೇಹೋದರೆ ನಿಮಗೆ ಗೊಂಬೆ ತರುವುದಕ್ಕೆ ತಿಳಿಯೊಲ್ಲವೇನೋ ಪಾಪ?”

“ತಿಳಿಯೊಲ್ಲ……….. ಇನ್ನೇನು ?……….ನಿನಗೂ ಏನೋ ಬೇಕು ಅಂತಿದ್ದೆ?”

“ಹೌದು ….ಆದರೆ….”

ಲೀಲಳ ಸಹನೆ ಮೀರಿತು. “ಬಾಪ್ಪಾ, ಹೋಗಿ ಗೊಂಬೆ ತರೋಣ”

ಮೂವರೂ ಮೂರ್ ಮಾರ್ಕೆಟ್ಟಿಗೆ ಹೊರಟರು. ಕಾರಿನಿಂದ ಇಳಿಯುವಾಗ ಅಮ್ಮ ಹೇಳಿದಳು “ಒಂದಷ್ಟು ತರಕಾರಿಯನ್ನೂ ಕೊಂಡುಕೊಳ್ಳಬೇಕು” ಎಂದು.

“ತರಕಾರಿ ಬೇಡ, ನನಗೆ ಗೊಂಬೆ ಬೇಕು”

“ನಿನಗೆ ನಿನ್ನ ಗೊಂಬೆ ಬರುತ್ತೆ. ಸುಮ್ಮನಿರೇ, ಮಾತುಮಾತಿಗೂ ಬಾಯಿ ಹಾಕಬೇಡ?”

“ಆಗಲೀಮ್ಮ, ಆದರೆ…..”

“ನನಗೆ ಜಾಕೆಟ್ಟುಗಳೇ ಇಲ್ಲ. ಒಂದಷ್ಟು ಸಿಲ್ಕ್ ಬಟ್ಟೆ ತೊಗೋ ಬೇಕು.”

“ಅಮ್ಮ ನನಿಗೆ ಸಿಲೋಲಾಯಿಡ್ ಬೊಂಬೆ ಬೇಡಮ್ಮ, ನನಗೆ….”

“ಲೇ ಲೀಲಾ, ಹರಟೋದನ್ನು ನಿಲ್ಲಿಸ್ತೀಯೋ ಇಲ್ಲವೊ?”

ಮೂರ್ ಮಾರ್ಕೆಟ್ಟಿನಲ್ಲಿ ಕಾಲಿಟ್ಟೊಡನೆಯೇ ಲೀಲಳಿಗೆ ಹುಚ್ಚು ಹಿಡಿದಹಾಗಾಗಿಹೋಯಿತು. ಅವಳ ಓಡಾಟವೇ ಓಡಾಟ. ಎಲ್ಲಾ ಅಂಗಡಿಗಳ ಹತ್ತಿರವೂ ನುಗ್ಗಿದಳು. ಅವಳ ಹಿಂದೆ ಓಡಿಹೋಗಿ ಅವಳನ್ನು ಹಿಡಿದು ನಿಲ್ಲಿಸುವ ವೇಳೆಗೆ ಅಪ್ಪನಿಗೆ ಸಾಕುಸಾಕಾಗಿಹೋಯಿತು. “ನನಗೆ ಪಾಪ ಬೇಕೂ” ಎಂದು ಲೀಲ ಹಠತೊಟ್ಟಳು.

“ಬರುತ್ತೆ. ಆದರೆ ಈ ಅಂಗಡೀಲಿ ಬೊಂಬೆ ಮಾರೊಲ್ಲಾಮ.”

“ಅದೇಕೆ?”

“ಮೊದಲು ತರಕಾರಿಯ ಕಡೆ ಹೋಗೋಣ” ಎಂದಳು ಅಮ್ಮ. ಲೀಲ ಮೊಂಡುಹಿಡಿದಳು. ದರದರನೆ ಅವಳನ್ನು ಎಳೆದುಕೊಂಡು ಹೋಗ ಬೇಕಾಯಿತು. “ನನಗೆ ಪಾಪ ಬೇಕೂ…….” ಎಂದು ಅವಳು ಗೋಳಾಡಿದ್ದೂ ಗೋಳಾಡಿದ್ದೇ.

ಸೂಟ್ ಕೇಸುಗಳನ್ನು ಪೇರಿಸಿದ ಒಂದು ಅಂಗಡಿಯ ಕಡೆ ಅಪ್ಪನ ದೃಷ್ಟಿ ಸುಳಿಯಿತು. “ನನ್ನ ಹಳೆಯ ಸೂಟ್ ಕೇಸು ಚಿಂದಿಚಿಂದಿ ಎದ್ದು ಹೋಗಿದೆ” ಎಂಬುದಾಗಿ ಗೊಣಗುಟ್ಟಿಕೊಂಡು ಅಪ್ಪ ಆ ಅಂಗಡಿಗೆ ನುಗ್ಗಿದರು, ಸ್ವಲ್ಪ ಹೊತ್ತಿನ ವೇಳೆಗೆ ಅವರು ಸೂಟ್ ಕೇಸುಗಳ ಜಗತ್ತಿನಲ್ಲಿ ತಲ್ಲೀನರಾಗಿಹೋಗಿ, ತಮ್ಮ ಬೇರೆಯ ಹೊಣೆಗಾರಿಕೆಗಳನ್ನೆಲ್ಲ ಮರೆತು ಹೋದರು. ಡಜನ್ಗಟ್ಟಲೆ ಸೂಟ್ ಕೇಸುಗಳನ್ನು ತೆಗೆಸಿ ತೆಗೆಸಿ ನೋಡಿ, ಅಂಗಡಿಯವನೊಡನೆ ಚೌಕಾಸಿ ಮಾಡುವುದಕ್ಕೆ ತೊಡಗಿದರು. ಅಮ್ಮನಿಗೆ ಕೂಡ ತಾಳ್ಮೆ ಮೀರಿತು. ಅಪ್ಪ ಹೇಳಿದರು. “ಒಂದು ನಿಮಿಷದಲ್ಲಿ ಬಂದು ಬಿಡ್ತೇನೆ. ನೀವು ತರಕಾರಿ ಕೊಂಡು ಕೊಳ್ತಾ ಇರಿ” ಎಂದು. ಅಮ್ಮ ಮುಖ ಸೊಟ್ಟಗೆ ಮಾಡಿಕೊಂಡು ಹೊರಟಳು. ಲೀಲಳು ಒಬ್ಬಂಟಿಯಾದಳು. ಅಪ್ಪನೋ ಸೂಟಕೇಸುಗಳಲ್ಲಿ ಮುಳುಗಿ ಹೋಗಿದಾರೆ. ಅಮ್ಮ ಹೊರಟು ಹೋಗುತ್ತಿದ್ದಾಳೆ. ತನಗಿನ್ನೇನುಗತಿ? “ಅಪ್ಪ…….. ಅಪ್ಪಾ…..” “ಶ್‌ಶ್‌–ಶ್ ……..”

“ನನಗೊಂದು ಬೊಂಬೆ ತೆಕ್ಕೊಡಿ ಅಪ್ಪ, ಅಪ್ಪ, ಅಪ್ಪ, ಅಪ್ಪ” ನಿಂತಿದ್ದರೆ ಸುಖವಿಲ್ಲವೆಂದು ಕಂಡುಕೊಂಡು ದೂರದಲ್ಲಿದ್ದ ಒಂದು ಬೊಂಬೆಯ ಅಂಗಡಿಯ ಕಡೆ ಓಡಿದಳು. ಅಲ್ಲೊಂದು ದೊಡ್ಡ ಸೆಲ್ಯೂಲಾಯಿಡ್ ಗೊಂಬೆ ಕೂತಿತ್ತು.

“ಏನಮ್ಮಾ, ನಿನಗೆ ಈ ಬೊಂಬೆ ಬೇಕಾಮ್ಮ?” ಎಂದು ಕೇಳಿದ ಅಂಗಡಿಯವನು.

“ನನಗೆ ಈ ಪಾಪ ಬೇಡ; ಕಣ್ಣು ಮುಚ್ಚಿ ತೆಗೆದು ಮಾಡುತ್ತಲ್ಲ, ಅಂಥ ಬೊಂಬೆ ಬೇಕು. ಮುದ್ದಾದ ಲಂಗ, ಕುಲಾವಿ ಹಾಕಿರಬೇಕು.” ಅಂಗಡಿಯವನು ಅವಳನ್ನು ಒಳಗೆ ಕರೆದುಕೊಂಡುಹೋದ, ಲೀಲ ಒಂದು ಕೆಂಪು ಚೆಂಡನ್ನು ಆರಿಸಿಕೊಂಡಳು. “ಬೊಂಬೆಯ ಜೊತೆಗೆ ನನಗೆ ಇದೂ ಬೇಕು……..” ಎಂದಳು. ಅಂಗಡಿಯವನು ಕೆಂಪು ಲಂಗ, ಲೇಸ್ ಅಂಚಿನ ನೀಲಿಯ ಟೋಪಿ, ಬಿಳಿಯ ಬೂಡ್ಸು ಹಾಕಿದಂಥ ಗೊಂಬೆಯೊಂದನ್ನು ಎತ್ತಿ ಕೊಟ್ಟ, ಮಲಗಿಸಿದರೆ ಅದು ಕಣ್ಣು ಮುಚ್ಚಿಕೊಳ್ಳುತ್ತಿತ್ತು. ನಿಲ್ಲಿಸಿದರೆ ಕಣ್ಣು ಬಿಚ್ಚುತ್ತಿತ್ತು.

“ನನಗೆ ಈ ಚಂಡು ಬೇಡ, ಆ ಬೊಂಬೆ ಬೇಕು.” ಲೀಲ ಆ ಬೊಂಬೆಯನ್ನು ಬಾಚಿಕೊಂಡು ಅಪ್ಪನಿದ್ದ ಕಡೆಗೆ ಓಡಿದಳು.

“ಎಷ್ಟು ಇದರ ಖರೀದಿ?”

ಅಂಗಡಿಯ ಹುಡುಗ ಲೀಲಳ ಹಿಂದೆಯೇ ಬಂದಿದ್ದ, “ಇದು ರೂಪಾಯಿ ನಾಲ್ಕಾಣೆ ಸಾರ್?”

“ಓಹೋ, ತುಂಬ ಬೆಲೆ, ತುಂಬ ಬೆಲೆ, ಎಂಥಾ ಬೊಂಬೆ ಅದು?”

“ಡ್ರೆಸ್ ಮಾಡಿರೋಂಥಾದ್ದು ಸಾರ್. ಒಡೆದುಹೋಗದ ಬೊಂಬೆ, ಅನ್ ಬ್ರೇಕಬಲ್ ಸಾರ್, ಆಥರದ್ದರಲ್ಲಿ ಚೀಪೆಸ್ಟು ಸಾರ್; ಇದೇ ಕಮ್ಮಿ ಖರೀದೀದು.”

“ಬೇರೆ ಯಾವುದಾದರೂ ಬೊಂಬೆ ತೊಗೋಮ್ಮ, ಲೀಲ.”

“ಉಹೂ, ನನಗೆ ಇದೇಬೇಕು. ಬೇರೆ ಯಾವುದೂ ಬೇಡ, ಎಷ್ಟು ಮುದ್ದಾಗಿದೆ, ಇದು ! ಅಪ್ಪ, ನೋಡಪ್ಪ ಇವಳು ನಿನ್ನ ಕಡೆಯೇ ನೋಡ್ತಾ ಇದ್ದಾಳೆ. ಅವಳು ಹೇಳ್ತಾಳೆ, ಆಂಗಡೀನ ಕಂಡರೆ ಅವಳಿಗೆ ಆಗೊಲ್ಲವಂತೆ. ಅಲ್ಲಿಗೆ ತಿರುಗಿ ಹೋಗೊಲ್ಲವಂತೆ.”

ಅಮ್ಮ ಬಂದಳು. ತರಕಾರಿ ತುಂಬಿದ ಗೂಡೆಯನ್ನು ಹೊತ್ತು ಕೊಂಡು ಕೂಲಿಯಾಳೊಬ್ಬನು ಹಿಂದೆಯೇ ಬಂದ. ಅಪ್ಪನು ಇನ್ನೂ ವ್ಯಾಪಾರದಲ್ಲೇ ಇದ್ದುದನ್ನು ಕಂಡು, ಜುಗುಪ್ಸೆಯಿಂದ “ಸೂಟ್ಕೇಸನ್ನೆಲ್ಲ ಪೂರಯಿಸಿದ ಮೇಲೆ ಕಾರ್ ಹತ್ತಿರ ಬನ್ನಿ. ಮರೀಬೇಡಿ. ಬಾರೆ ಲೀಲಾ ……..” ಎಂದು ಹೊರಟುಹೋದಳು.

ಲೀಲ ಅಮ್ಮನ ಹಿಂದೆಯೇ ಹೋದಳು. ಬಾಯಿತುಂಬ ಬೊಂಬೆಯ ಮಾತೇ. “ಅಮ್ಮ, ಇವಳ ಹೆಸರು ಗೊತ್ತೇನಮ್ಮ, ನಿನಗೆ?”

“ಅವಳಿಗೆ ಹೆಸರು ಬೇರೆ ಇಟ್ಟಿದ್ದೀಯೇನು?”

“ಹೂಮ್ಮಾ, ಅವಳ ಹೆಸರು ಡೋಚಿ ಅಂತ?”

“ಅದು ಹೇಗೆ ಗೊತ್ತು ನಿನಗೆ?”

“ನನ್ನ ಕಿವೀಲಿ ಹೇಳಿದಳು.”

“ಡೋಚಿ ಎಂದರೆ ಏನರ್‍ಥ?”

“ನಂಗೊತ್ತಿಲ್ಲಾಮ್ಮ, ಅವಳು ಪರಂಗಿಯವಳಮ್ಮ.”

ಕಾರಿನ ಬಳಿ ಬಂದಾಗ ಲೀಲ ಅಮ್ಮನಿಗೆ ಹೇಳಿದಳು, “ಮನೆಗೆ ಹೋದಮೇಲೆ ಇವಳಿಗೆ ಬುಡಕಸ್ಸಿ ಮಾಡಿಸ್ತೀನಿ.”

“ಉ ಹು ಹು ಹು ಹು. ಹಾಗೆಲ್ಲ ಮಾಡಕೂಡದು. ಬೊಂಬೆ ಹಾಳಾಗಿ ಹೋಗುತ್ತೆ, ಸ್ನಾನಗೀನ ಕೂಡದು.”

“ಇಲ್ಲಾಮ್ಮ…. ಸ್ನಾನ ಅಂದರೆ ನಿಜವಾದ ಸ್ನಾನ ಅಲ್ಲಾಮ್ಮಾ. ಇಲ್ಲಿ ನೋಡು…. ಹೀಗೆ…. ಈಗ ಮಾಡಿಸ್ತೀನಿ ನೋಡು….” ಎಂದು ಲೀಲ ಗೊಂಬೆಯನ್ನು ಮೋಟರಿನ ಬಾಗಿಲ ಹಿಡಿಯ ಕೆಳಗೆ ಹಿಡಿದು ಹಿಡಿಯ ಕೀಲನ್ನು ಒತ್ತಿದಳು.

“ಈಗ ಸ್ನಾನ ಆಯಿತು. ನಿದ್ದೆ ಬರ್‍ತಾ ಇದೆಯಂತೆ ಅವಳಿಗೆ. ಅಮ್ಮ, ಡೋಚಿಗೆ ಒಂದು ಚಿಕ್ಕ ಕುದುರೆಗಾಡಿ, ಒಂದು ತೊಟ್ಟಿಲು, ಒಂದು ಸೀರೆ ಎಲ್ಲ ತೆಕ್ಕೊಡ್ತೀಯೇನಮ್ಮ?”

ಒಬ್ಬ ಕೂಲಿಯ ತಲೆಯ ಮೇಲೆ ನಾಲ್ಕು ಸೂಟ್ ಕೇಸ್ ಗಳನ್ನು ಹೇರಿಸಿಕೊಂಡು ಅಪ್ಪ ಬಂದರು. “ಈ ನಾಲ್ಕರಲ್ಲಿ ಯಾವುದು ಕೊಂಡು ಕೊಳ್ಳೋಣ?” ಎಂದು ಕೇಳಿದರು.

“ನಾಲ್ಲೂ ಕೊಂಡುಕೊಳ್ಳೋಣವಾಗಬಹುದಲ್ಲ!”

“ಓಹೋ! ಮಾರ್ಕೆಟ್ ನಲ್ಲಿರೋ ತರಕಾರೀನೆಲ್ಲ ತಾವೇ ಕೊಂಡು ಕೊಂಡು ಬಿಡೋಣವಾಯಿತೋ?” ಎಂದು ಅಪ್ಪ ವ್ಯಂಗ್ಯವಾಗಿ ಬದಲು ಹೇಳಿದರು.

“ಅಲ್ಲಿರೋದೆಲ್ಲ ನನಗೇನೆ ಅನ್ನೋ ಹಾಗೆ ಮಾತಾಡ್ತೀರಲ್ಲ. ಇದಕ್ಕೆ ನಿಮ್ಮ ಜತೇಲಿ ಬರಬಾರದು ಅನ್ನೋದು” ಅಮ್ಮನಿಗೆ ಕೋಪ ಬಂದಿತ್ತು. ಈ ಅಸಂಬದ್ಧ ಪ್ರಲಾಪವನ್ನು ಮುಂದುವರಿಸಿ ಫಲವಿಲ್ಲವೆಂಬುದನ್ನು ಅಪ್ಪ ಕಂಡುಕೊಂಡು, ಮರುಮಾತಾಡದೆ ಅಂಗಡಿಗೆ ಹಿಂದಿರುಗಿದರು. ಸ್ವಲ್ಪ ಹೊತ್ತಾದಮೇಲೆ ತಮ್ಮ ಆಯ್ಕೆಯ ಸೂಟ್ ಕೇಸನ್ನು ಹೆಮ್ಮೆಯಿಂದ ಹಿಡಿದುಕೊಂಡು ಬಂದರು. ಆದರೆ ಅದನ್ನು ಕಾರಿನೊಳಗಿಡಲು ಅವಕಾಶ ಕೊಡಲಿಲ್ಲ ಅಮ್ಮ. “ಬೇಕಾದರೆ ಕಾರ್ ಹಿಂದೆ ಕಟ್ಟಿಕೊಳ್ಳಿ, ಲಗೇಜ್ ರ್‍ಯಾಕ್ ಇರೋದೇಕೆ?” ಸಂತೋಷ ಪ್ರದರ್ಶಿಸಿ ಅಪ್ಪ ಆ ಅನುಜ್ಞೆಯನ್ನು ಶಿರಸಾವಹಿಸಿದರು. ಬಹಳ ಮೃದುವಾಗಿ, “ನಿನಗೇನೋ ಸಿಲ್ಕ್ ಬಟ್ಟೆ ಬೇಕೂ ಅಂತಿದ್ದೆ….” ಎಂದರು.

“ಇಲ್ಲದಿದ್ದರೂ ಪರವಾ ಇಲ್ಲ, ಇಷ್ಟು ದಿನ ಇದ್ದದ್ದೇ ಆಯಿತಂತೆ…. ಇನ್ನು ಹೋಗೋಣ ಬನ್ನಿ. ಒಂದು ಗಂಟೆ ಹೊತ್ತು ಈಗಾಗಲೆ ದಂಡವಾಯಿತು. ಥೂ ಹಾಳು ಭಿಕ್ಷದವರ ಗಲಾಟೆ.”

“ಹೆದರಬೇಡಾಮ್ಮ ಡೋಚಿ ಭಿಕ್ಷದವರನ್ನೆಲ್ಲ ಓಡಿಸಿ ಬಿಡ್ತಾಳಮ್ಮಾ” ಎಂದಳು ಲೀಲಾ.

ಮೋಟಾರು ಕಾರು ಜನರಲ್ ಆಸ್ಪತ್ರೆಯ ರಸ್ತೆಯಲ್ಲಿ ಹೋಗುತ್ತಿದಾಗ ಲೀಲ ಗೊಂಬೆಯನ್ನು ಕಾರಿನ ಕಿಟಕಿಯಿಂದ ಹೊರಗೆ ಹಿಡಿದು, ಎಲ್ಲವನ್ನೂ ಅದಕ್ಕೆ ವಿವರಿಸುತ್ತಿದ್ದಳು.” “ನೋಡು ಮಗೂ, ಅದು ಟ್ರಾಮು…….. ಸುಳ್ಳು ಹೇಳ್ತಾ ಇಲ್ಲ ನಾನು. ಬೇಕಾದರೆ ಅಪ್ಪನ್ನ ಕೇಳಿ ನೋಡು, ಅದು ಟ್ರಾಮು ಹೌದೋ ಅಲ್ಲವೋ. ಅಪ್ಪ, ಒಂದು ದಿನ ನಮ್ಮನ್ನು ಟ್ರಾಮಿನಲ್ಲಿ ಕರಕೊಂಡು ಹೋಗ್ತೀರೇನಪ್ಪ? ಡೋಚೀಗೆ ಟ್ರ್ಯಾಮಿನಲ್ಲಿ ಹೋಗಬೇಕೂ ಅಂತ ತುಂಬ ಆಸೆಯಂತೆ.”

“ಬೊಂಬೇನ ಹಾಗೆ ಹೊರಗೆ ಹಿಡೀ ಬೇಡಮ್ಮಾ ಕುಕ್ಕಿ ಗಿಕ್ಕಿ ಬಿಟ್ಟೀಯ” ಎಂದಳು ಅಮ್ಮ. “ಇದನ್ನ ಒಡೆದುಕೊಂಡೇ ಅಂದರೆ ಬೇರೆ ಯಾವುದೂ ತೆಗೆದುಕೊಡೊಲ್ಲ” ಎಂದು ಅಪ್ಪ ಸೇರಿಸಿದರು.

“ನಾನವಳನ್ನ ಮುರಿದುಹಾಕೊಲ್ಲಾಪ್ಪ. ಅವಳು ಟ್ರಾಂನ ನೋಡ ಬೇಕು ಅಂದಳು, ತೋರಿಸ್ತಾ ಇದ್ದೀನಿ ಅಷ್ಟೆ. ಬಲು ತಂಟೆ ಹುಡುಗಿ ಅವಳು. ಒಂದು ನಿಮಿಷಾನೂ ನನ್ನನ್ನ ಸುಮ್ಮನೆ ಬಿಡೊಲ್ಲ ಪ್ರಾಣ ಹಿಂಡಿ ಬಿಡ್ತಾಳೆ.”

“ಊರು ಮದ್ಯ ಹೋಗಿ ಆಮೇಲೆ ಬೀಚ್ ಕಡೆ ಹೋಗೋಣವೇನು?” ಎಂದು ಅಪ್ಪ ಕೇಳಿದರು.

“ಹೂ” ಎಂದಳು ಅಮ್ಮ.

ಲೀಲ ಹೇಳಿದಳು. “ಬೀಚ್ ಗೆ ಹೋಗೋದು ಬೇಡಾಪ್ಪ”.

“ಯಾಕೆ ಬೇಡ?”

“ಅಲ್ಲಿ ತುಂಬ ಕತ್ತಲೆ, ಡೋಚಿ ಹೆದರಿಕೊಂಡುಬಿಡ್ತಾಳೆ.”

ಅಪ್ಪ ಚೈನಾ ಬಜಾರ್‌ನಲ್ಲಿ ಒಂದು ಅಂಗಡಿಯ ಮುಂದೆ ಸ್ವಲ್ಪ ನಿಂತರು, ಕಾರಿನ ಎದುರುಗಡೆಯಿದ್ದ ಅಂಗಡಿಯ ಮಹಡಿಯ ಮೇಲೆ ಬಣ್ಣ ಬಣ್ಣದ ಭಾರಿಯದೊಂದು ಸಿನಿಮಾ ಜಾಹೀರಾತು ಕಾಣಿಸುತ್ತಿತ್ತು. ಲೀಲ ತನ್ನ ಗೊಂಬೆಯನ್ನು ಹೊರಕ್ಕೆ ಹಿಡಿದು, “ಅಲ್ಲಿ ನೋಡು, ಅದು ಸಿನಿಮಾ ಹೇಗಿದೆ? ಇಷ್ಟನಾ ನಿನಗೆ?” ಎಂದು ಕೇಳಿದಳು. ಕಾರು ಹೊರಟ ತಕ್ಷಣ ಬೊಂಬೆಯನ್ನು ಒಳಕ್ಕೆ ಎಳೆದುಕೊಂಡು “ಸಿನಿಮಾ ಆಗ್ಹೋಯ್ತು” ಎಂದಳು.

ಬೀಚ್ ಹತ್ತಿರದ ರೈಲ್ವೆ ಗೇಟಿನ ಹತ್ತಿರ ಕಾರನ್ನು ನಿಲ್ಲಿಸಬೇಕಾಗಿ ಬಂತು. ನಾಲ್ಕು ಎಲೆಕ್ಟ್ರಿಕ್ ರೈಲುಗಳು ಹಾದು ಹೋಗಬೇಕಾಗಿತ್ತು. ಆದ್ದರಿಂದ ಬಾಗಿಲನ್ನು ಬಹಳ ಹೊತ್ತು ಮುಚ್ಚಿದ್ದರು. ಅಣೆಕಟ್ಟಿನ ಹಿಂದೆ ನೀರು ನಿಂತಂತೆ ಹತ್ತಾರು ಬಂಡಿಗಳು ನೂರಾರು ಪಾದಚಾರಿಗಳು ಗೇಟಿನ ಇತ್ತ ಕಡೆ ನಿಂತಿದ್ದರು. ಲೀಲ ಡೋಚಿಯನ್ನು ಮೋಟರಿನಿಂದ ಹೊರಗಡೆ ಹಿಡಿದು, “ಎಷ್ಟು ಗೋಳು ಹುಯ್ಯ ಕೊಳ್ಳುತಾಳಪ್ಪ! ಎಲೆಕ್ಟ್ರಿಕ್ ರೈಲನ್ನು ನೋಡಬೇಕಂತೆ. ನೋಡು ನೋಡು ಡೋಚಿ, ನಿನ್ನ ಕೈಯನ್ನ ಚಾಚಿ ಕೊಂಡಿರಬೇಡ, ಬೀಳಿಸಿಬಿಟ್ಟೀಯ ಬೊಂಬೇನ! ಬೀಳಿಸಿಬಿಟ್ಟರೆ ಇನ್ನೊಂದು ತೆಗೆದುಕೊಡೋಲ್ಲ” ಎಂದು ಎಚ್ಚರಿಕೆಯಿತ್ತಳು.

“ಏನ್ನ ಅವಳು ಹಿಡಕೊಂಡಿರೋದು?”

“ಅವಳಿಗೊಂದು ಪುಟ್ಟ ಬೊಂಬೆ ತೆಕ್ಕೊಟ್ಟೆ. ಅದನ್ನ ಕೈಲಿ ಹಿಡಿದು ಕೊಂಡು ಊರೆಲ್ಲ ತೋರಿಸಬೇಕೂ ಅಂತ ಹಟಹಿಡೀತಾಳೆ. ಎಷ್ಟು ಹೇಳಿದರೂ ಕೇಳೊಲ್ಲ. ಅದನ್ನ ಮುರಿದು ಹಾಕಿದರೆ ನಾನಂತೂ ಇನ್ನೊಂದು ತೆಕ್ಕೊಡೊಲ್ಲ” ಎಂದಳು ಲೀಲ.

ಬಾಗಿಲುಗಳು ತೆರೆದುವು. ಜನರ ಗುಂಪು ಮತ್ತೆ ಪ್ರವಹಿಸತೊಡಗಿತು. ಅಪ್ಪ ಬಹಳ ನಿಧಾನವಾಗಿ ಕಾರನ್ನು ನಡೆಸುತ್ತಿದ್ದರು. ಜನರ ಗುಂಪನ್ನು ನೋಡಬೇಕೆಂದು ಡೋಚಿ ಒತ್ತಾಯಮಾಡುತ್ತಿದ್ದಾಳೆಂದು ಹೇಳಿ ಲೀಲಳು ಗೊಂಬೆಯನ್ನು ಕಾರಿಂದ ಹೊರಗಡೆಯೇ ಹಿಡಿದುಕೊಂಡಿದ್ದು, ರೈಲ್ವೆ ಕಂಬಿ ದಾಟಬೇಕೆನ್ನುವಾಗ ಸರಿಯಾಗಿ ದೊಪ್ಪನೆ ಕೆಡವಿಬಿಟ್ಟಳು. “ಅಯ್ಯೋ, ಡೋಚಿ ಬಿದ್ದು ಹೋದಳು” ಎಂದು ಕಿಟ್ಟನೆ ಕಿರಿಚಿದಳು. ಆದರೆ ಬಾಗಿಲನ್ನು ದಾಟಿ ಹಲವು ಗಜ ಕಳೆಯುವ ವರೆಗೆ ನಿಲ್ಲಿಸುವುದಕ್ಕಾಗಲಿಲ್ಲ ಕಾರನ್ನು, ಅಮ್ಮನ ಮುಖ ಕೆಂಡವಾಗಿತ್ತು. “ಆಗಲೇ ಹೇಳಲಿಲ್ಲ?….”

“ಇನ್ನೆಂದೆಂದಿಗೂ ನಿನಗೆ ಬೊಂಬೆಕೊಂಡು ಕೊಡೊಲ್ಲ” ಎಂದು ಅಪ್ಪ ಗರ್ಜಿಸಿದರು. ಕಾರನ್ನು ನಿಲ್ಲಿಸಿ ಅಪಘಾತ ನಡೆದ ಸ್ಥಳಕ್ಕೆ ನಡೆದು ಹೋದರು. ಲೀಲಾ ಬಹಳ ಕಾತರದಿಂದ ಬಣ್ಣ ನೋಡುತ್ತಿದ್ದಳು. ಅಪ್ಪ ಬಗ್ಗಿ ನೆಲದಿಂದ ಗೊಂಬೆಯ ಅವಶೇಷಗಳನ್ನು ಆರಿಸಿಕೊಂಡು ಬಂದರು.

“ದೋಚಿಯೆಲ್ಲಿ?” ಎಂದು ಲೀಲ ಕೇಳಿದಳು. ಅಪ್ಪ, ಮಣ್ಣು ಮಡಕೆಯ ಚೂರುಗಳನ್ನೂ, ಮುದುರಿ ಮೂಟೆಕಟ್ಟಿದ ಕೆಂಪು ಲಂಗವನ್ನೂ ಕೊಚ್ಚೆ ಮೆತ್ತಿಕೊಂಡಿದ್ದ ಕುಲಾವಿಯನ್ನು ತೋರಿಸಿದರು.

“ಇದೇನೂ ನನ್ನ ದೋಚಿ ಅಲ್ಲ, ಅವಳು ಅಲ್ಲೇ ಇರಬೇಕು.” ಲೀಲ ತನ್ನ ಕಾಲುಗಳನ್ನು ಬಡಿಯುತ್ತ ಅಳ ತೊಡಗಿದಳು. ಆ ಪ್ರದೇಶಕೆ ಅಪ್ಪ ಅವಳನ್ನೇ ಕರೆದುಕೊಂಡು ಹೋದರು.

“ಡೋಚಿಯೆಲ್ಲಿ?” ಎಂದಳು ಲೀಲ. ಅಲ್ಲಿ ಬಿದ್ದಿದ್ದ ಇನ್ನಷ್ಟು ಚೂರುಗಳನ್ನು ಕಂಡು “ಇಪ್ಪತ್ತು ಮೂವತ್ತು ಕಾರುಗಳಾದರೂ ಅವಳ ಮೇಲೆ ಹರಿದು ಹೋಗಿರಬೇಕು” ಎಂದು ಹೇಳುತ್ತ ಅಪ್ಪ ಅವಳಿಗೆ ಲಂಗ ಕುಲಾವಿಗಳನ್ನು ಕೊಟ್ಟರು.

“ಇದು ಅವಳ ಬಟ್ಟೆ, ಅವಳೆಲ್ಲಿ?” ಎಂದು ಲೀಲ ಹಟಹಿಡಿದಳು. ಸುತ್ತಮುತ್ತ ಸಂಶಯದಿಂದ ಕಣ್ಣು ಹೊರಳಿಸಿ “ಇಲ್ಲೇ ಎಲ್ಲಾದರೂ ಬಚ್ಚಿಟ್ಟುಕೊಂಡಿರಬಹುದು” ಎಂದಳು.

ಲೀಲ ಕಾರಿನ ಬಳಿ ಓಡಿ ಹೋಗಿ, ಅಮ್ಮನನ್ನು ಕೂಗಿ ಕರೆದು “ಅಮ್ಮಾ, ಡೋಚಿ ತಪ್ಪಿಸಿಕೊಂಡು ಹೊರಟುಹೋಗಿದ್ದಳು; ಲಂಗ, ಕುಲಾವಿ ಮಾತ್ರ ಬಿಟುಬಿಟ್ಟು ಹೋಗಿದ್ದಾಳೆ. ನನಗೆ ಗೊತ್ತು ಅವಳು ತುಂಬ ತುಂಟಿ ಅಂತ. ಆಚೆ ಎತ್ತಿಕೊಂಡು ಎಲ್ಲಾ ತೋರಿಸುತ್ತಾ ಇದ್ದಾಗ ನನ್ನ ಕೈಯನ್ನ ಕಟ್ಟೋದು, ಜಿಗಟೋದು ಎಲ್ಲ ಮಾಡುತ್ತಾ ಇದ್ದಳು……..” ಎಂದು ತಿಳಿಸಿದಳು.

ಅಪ್ಪ ಕಾರಿನ ಬಳಿಗೆ ಹಿಂದಿರುಗಿ “ಸೂಟ್ ಕೇಸೆಲ್ಲಿ?” ಎಂದು ಉದ್ಗಾರ ತೆಗೆದರು. ಅಮ್ಮ ಲೀಲ ಇಬ್ಬರೂ ಇಳಿದು ಕಾರಿನ ಹಿಂದೆ ಹೋಗಿ ಲಗೇಜ್ ರ್‍ಯಾಕಿನ ಕಡೆ ನೋಡಿದರು. ಬರಿದಾಗಿತ್ತು. “ಹದಿ ನಾಲ್ಕು ರೂಪಾಯಿ ಚೊಕ್ಕಟವಾಯಿತು” ಎಂದು ಅಪ್ಪ ಗೋಳಿಟ್ಟರು. “ಹಿಂದುಗಡೇನೆ ಕಟ್ಟಬೇಕು ಎಂದು ನೀನು ಹಟಹಿಡೀದೆ ಹೋಗಿದ್ದರೆ ಅದು ಕಳೆದುಹೋಗುತ್ತಿರಲಿಲ್ಲ. ಬೆಲ್ಟೇ ಕಿತ್ತು ಹೋಯಿತೋ ಅಥವಾ ರೈಲ್ವೆ ಗೇಟ್ ಹತ್ತಿರ ಯಾರಾದರೂ ಹಾರಿಸಿ ಬಿಟ್ಟರೋ ಅದೇಸಮಯಾ ಅಂತ?” ಅಪ್ಪನ ಫಜೀತಿ ನೋಡುವುದಕ್ಕಾಗುತ್ತಿರಲಿಲ್ಲ.

ಮತ್ತೆ ತಮ್ಮ ತಮ್ಮ ಜಾಗಗಳಿಗೆ ಹಿಂದಿರುಗಿದ ಮೇಲೆ ಲೀಲ ಹೇಳಿ ದಳು. “ಆ! ನನಗೆ ಗೊತ್ತಾಯಿತು. ಅಪ್ಪಾ, ಡೋಚಿ ಸೂಟ್ಕೇಸ್ನೂ ಎತ್ತಿಕೊಂಡು ಓಡಿಹೋಗಿರಬೇಕು. ಎಲ್ಲಿ ಹೋಗ್ತಾಳೆ? ಬರ್‍ತಾಳೆ ಯಾವತ್ತಾದರೂ…….. ಆದರೆ ಅವಳಿಗೆ ನಮ್ಮ ಮನೆಯ ದಾರಿ ಗೊತ್ತೇ?”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮ ಚಲುವ ಕನ್ನಡ ನಾಡು
Next post ಏನಾಗುವೆ?

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…