ಕನ್ನಡ ನಾಡು ನಮ್ಮ ನಾಡು
ಭುವನೇಶ್ವರಿ ಮಡಿಲಲಿ ಪವಡಿಸಿದ ನಾಡು
ಕನ್ನಡ ಚೆಲ್ವ ಕುವರ ಕುವರಿಯರ ನಾಡು
ನಮ್ಮ ಚಲುವ ಕನ್ನಡ ನಾಡು

ಸುಂದರ ಬನ ಸಿರಿಗಳ ಸಾಲೇ
ಸಹ್ಯಾದ್ರಿ ಮಡಿಲಲಿ ಬೆಳೆದಿಹ ನಾಡೆ
ಸುವಾಸನೆಯ ಶ್ರೀಗಂಧದ ಬೀಡೇ
ನಮ್ಮ ಚಲುವ ಕನ್ನಡ ನಾಡೇ

ತುಂಗೆ, ಭದ್ರೆ, ಕಾವೇರಿ
ಕೃಷ್ಣೆ, ಶರಾವತಿ ಹರಿದಿಹ ನಾಡೇ
ಜೋಗದ ಸೌಂದರ್‍ಯದ ಖಣಿಯೇ
ನಮ್ಮ ಚೆಲುವ ಕನ್ನಡ ನಾಡೇ

ಸಕಲ ಕಲೆ ಸಂಸ್ಕೃತಿಗಳ ಮೆರೆದಿಹ ನಾಡು
ಸಾಹಿತ್ಯ ನವರಸಗಳ ಆಗರವೆನಿಸಿದ ನಾಡು
ವಿದ್ಯಾರಣ್ಯರು ಕಟ್ಟಿದ ನಾಡು
ನಮ್ಮ ಚೆಲುವ ಕನ್ನಡ ನಾಡು

ಪಂಪ ರನ್ನ ಪೊನ್ನ ಕವಿ ರತ್ನತ್ರಯರು
ಕುವೆಂಪು ದ.ರಾ. ಬೇಂದ್ರೆ ಮಾಸ್ತಿ ಕಾರಂತ
ಗೋಕಾಕ್ ಕಾರ್‍ನಾಡ ಮೂರ್‍ತಿ ಜನಿಸಿದ ನಾಡು
ನಮ್ಮ ಚೆಲುವ ಕನ್ನಡ ನಾಡು

ಕಂಪಲಿ ರಾಮನಾಥರ ಬಲಿದಾನದಿಂದಲಿ
ಆಲೂರು ವೆಂಕಟರಾಯರ ಪುರೋಹಿತ್ಯದಲ್ಲಿ
ಹೆಸರಾಯಿತು ‘ಕರ್‍ಣಾಟಕ’
ನಮ್ಮ ಚೆಲುವ ಕನ್ನಡ ನಾಡು

ನೆಲ ಜಲದೊಂದಿಗೆ ಮೊಳಗಿತು ಕನ್ನಡ ಕಹಳೆ
ಮುಕ್ಕೋಟಿ ಕನ್ನಡಿಗರ ಕುಸುಮ ಈ ಕನ್ನಡ
ನೀರನ್ನುಣಿಸಿ ಉಳಿಸಿ ಬೆಳೆಸಬನ್ನಿ
ನಮ್ಮ ಚೆಲುವ ಕನ್ನಡ ನಾಡು
*****
ನವೆಂಬರ್ ೧೯೮೯ರ ಸಾಗರ ವಾರ ಪತ್ರಿಕೆಯಲ್ಲಿ ಪ್ರಕಟ