ಆರೋಪ – ೧೬

ಆರೋಪ – ೧೬

ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍

ಅಧ್ಯಾಯ ೩೧

ನಿರಂಜನ್ ರೇ ಗೊಳ್ಳನೆ ನಕ್ಕರು. ಅವರ ಪಕ್ಕದಲ್ಲಿದ್ದ ಪ್ರೊಫೆಸರ್ ಪದ್ಮಾವತಿಯ ಕದಪು ಕೆಂಪಾಯಿತು. ಪ್ರೊಫೆಸರ್ ಪಾಣಿಗ್ರಾಹಿ ಬಿಚ್ಚುಬಾಯಿ ಜೋಕು ಹೇಳಿದ್ದರು. ರೇ ನಕ್ಕಾಗ ಇಡೀ ದೇಹ ಕುಲುಕುತ್ತದೆ. ಮುಖದ ಮೇಲಿನ ನರಗಳು ಸೆಟೆಯುತ್ತವೆ. ಅವರು ನಕ್ಕುನಕ್ಕು ಉಬ್ಬಸ ಪಡುತ್ತಾರೆ. ದೇಹ ಒಟ್ಟಾರೆ ಬಿರಿಯುವಂತೆ ತೋರುತ್ತದೆ.

“ಕೆಟ್ಟ ಗಂಡಸರು ನೀವು !”

ಪ್ರೊಫೆಸರ್ ಪದ್ಮಾವತಿ ನಾಚಿಕೊಂಡೇ ಹೇಳಿದರು, ನಲವತ್ತರ ಆಚೆಯ ದಡದಲ್ಲಿದ್ದ ಪದ್ಮಾವತಿ ಇನ್ನೂ ಕುಮಾರಿಯೇ. ಇಪ್ಪತ್ತರ ಸಿನಿಮಾ ತಾರೆಯ ಒನಪು, ಒಯ್ಯಾರ. ರೇಯ ಬಳಗದಲ್ಲಿ ಸೇರಿದವರು.

ರೇ ಹೀಗೆ ಮನಬಿಚ್ಚಿ ಬೆರೆಯುವುದು ಕಡಿಮೆ. ಆದರೆ, ಅಗತ್ಯ ಬಿದ್ದಾಗ ಬಹಳ ಸೋಶಿಯಬಲ್ ಆಗಬಲ್ಲರು, ಸಂಸ್ಥೆಯ ವಾರ್ಷಿಕೋತ್ಸವ ಅಂಥ ಅಪರೂಪದ ಸಂದರ್ಭಗಳಲ್ಲಿ ಒಂದು.

ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸುವುದು ವಾಡಿಕೆ. ಆದರೆ ಈ ಬಾರಿ ಮಾತ್ರ ‘ಸಿಂಪಲ್ ಏಂಡ್ ಗ್ರಾಂಡ್’ ಆಗಿ ನಡೆಸಲು ತೀರ್ಮಾನಿಸಲಾಗಿತ್ತು. ಕಾರಣ ಬಜೆಟ್‌ನಲ್ಲಿ ಕಡಿತ, ಖರ್ಚು ಕಡಿಮೆ ಮಾಡುವಂತೆ ಕೇಂದ್ರದಿಂದ ಬಂದ ನಿರೂಪ.

ಹಸಿರು ಹುಲ್ಲಿನ ಲಾನ್‌ನಲ್ಲಿ ಹೈ ಟೀ ಏರ್ಪಾಟಾಗಿತ್ತು. ವಿದ್ಯಾರ್ಥಿಗಳು ಅಧ್ಯಾಪಕರು, ಅತಿಥಿಗಳು, ಸಂಸ್ಥೆಯ ಇತರ ನೌಕರ ವರ್ಗ ಎಲ್ಲರೂ ಸೇರಿದ್ದರು.

ರೇ ಖುಷಿಯಾಗಿರುವುದಕ್ಕೆ ಬೇರೆ ಕಾರಣವೂ ಇತ್ತು. ಯುನೆಸ್ಕೊ ಹುದ್ದೆಯೊಂದಕ್ಕೆ ಕೇಂದ್ರ ಸರಕಾರ ಅವರ ಹೆಸರನ್ನು ಶಿಫಾರ್‍ಸು ಮಾಡಿತ್ತು. ರೇ ಈಗ ಆರ್ಡರನ್ನು ಎದುರುನೋಡುತ್ತ ಇದ್ದರು. ರಾಷ್ಟ್ರೀಯ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ನೆಗೆತ ! ಸುದ್ದಿ ಇನ್ನೂ ಗುಪ್ತವಾಗಿಯೆ ಇತ್ತು. ಇದು ಬಹಿರಂಗವಾದಾಗ ಜನರ ಮುಖದಲ್ಲಿ ಮೂಡಬಹುದಾದ ಅಸೂಯೆಯನ್ನು ನೆನೆದುಕೊಂಡೇ ಅವರಿಗೆ ಮೋಜೆನಿಸುತ್ತಿತ್ತು.

ಸಂಸ್ಥೆಯ ಪಾರ್ಟಿ ಸಂದರ್ಭಗಳಲ್ಲಿ ರೇ ಎಲ್ಲರೊಂದಿಗೂ ಬೆರೆಯುತ್ತಾರೆ. ಕಾರಕೂನರಿರಲಿ, ಮಾಲಿಗಳಿರಲಿ, ವಾಚ್‌ಮನ್‌ಗಳಿರಲಿ ಎಲ್ಲರನ್ನೂ ಮಾತಾಡಿಸುತ್ತಾರೆ. ಆತ್ಮೀಯವಾಗಿ ಅವರ ಹೆಗಲ ಮೇಲೆ ಕೈಯಿರಿಸುತ್ತಾರೆ. ಹೇಗಿದ್ದೀಯಾ ಎಂದು ವಿಚಾರಿಸುತ್ತಾರೆ. ರೇಯ ವಿಜಯಕ್ಕೆ ಇದೂ ಒಂದು ಕಾರಣ.

ಪ್ರೊಫೆಸರ್ ಪಾನಿಗ್ರಾಹಿ ಮತ್ತು ಪ್ರೊಫೆಸರ್ ಪದ್ಮಾವತಿಯವರನ್ನು ಅಲ್ಲೇ ಬಿಟ್ಟು ರೇ ತಮ್ಮ ಕಾಫಿ ಮಗ್ಗಿನೊಂದಿಗೆ ಬೇರೆಡೆ ತೆರಳಿದರು. ಯಾರೊಂದಿಗೋ ಮಾತಾಡುತ್ತ ನಿಂತಿದ್ದ ರಾಣಿ ಅವರನ್ನು ಕಂಡು ಮುಗುಳು ನಗುತ್ತ ಮುಂದೆ ಬಂದಳು.

“ಹಲೋ ರಾಣಿ!”
“ಗುಡ್ ಈವ್ನಿಂಗ್ ಸರ್!”
“ಯು ಲುಕ್ ವಂಡರ್‌ಪುಲ್!”
“ಥ್ಯಾಂಕ್ಯೂ!”
ಜಾರಿದ ಶಿಫಾನ್ ಸೀರೆಯ ಸೆರಗನ್ನು ಮೇಲೆ ಸರಿಸುತ್ತ ನುಡಿದಳು ರಾಣಿ, ಈ ಕೀಟಲೆಗೆಂದು ಕೇಳಿದರು-ಗುಟ್ಟಿನಲ್ಲಿ :
“ವೇರೀಸ್‌ ಯುವರ್‌ ಬಾಯ್ ಫ್ರೆಂಡ್?”
“ಸರ್!”
ಅಪ್ರತಿಭಳಂತೆ ಕೇಳಿದಳು.
“ವೇರೀಸ್ ಅರವಿಂದ್?”

ಅರವಿಂದ ಒಂದು ಮೂಲೆಯಲ್ಲಿ ನಿಂತಿದ್ದ. ನಿಂತು ಪಾರ್ಟಿಯ ಮೋಜನ್ನು ನೋಡುತ್ತಿದ್ದ. ಅವನು ನಿರೀಕ್ಷಿಸಿದ್ದ ಫೋನ್ ಕರೆ ಹತ್ತು ಗಂಟೆಯ ಸುಮಾರಿಗೆ ಬಂದಿತ್ತು. ಎಲ್ಲವೂ ಸುಗಮವಾಗಿ ನಡೆಯಿತು ಎಂದಿದ್ದ ರೆಡ್ಡಿ, ಅದಕ್ಕೂ ಹೆಚ್ಚಾಗಿ ಆತ ಹೇಳುವ ಆತುರ ತೋರಿರಲಿಲ್ಲ. ಕೆಲವು ದಿನಗಳ ನಂತರ ಸಿಗುತ್ತೇನೆ ಎಂದಿದ್ದ.

ಹಿಂದಿನ ರಾತ್ರೆ ಚೆನ್ನಾಗಿ ನಿದ್ದೆಯೇ ಬಂದಿರಲಿಲ್ಲ. ಮನಸ್ಸನ್ನು ಏನೆಲ್ಲ ಭಯಗಳು ಆವರಿಸಿಕೊಂಡಿದ್ದುವು. ಇದಕ್ಕೆ ಸರಿಯಾಗಿ ಕೇಶವುಲು ಕೂಡ ಏನೇನೋ ಪ್ರಶ್ನೆಗಳನ್ನು, ಸಂದೇಹಗಳನ್ನು ಎತ್ತುತ್ತಿದ್ದ, ಕಂಠಪೂರ್ತಿ ಕುಡಿದು ಬಂದಿದ್ದ. ಅಲ್ಲದೆ ಅರ್ಧ ಬಾಟಲ್ ವಿಸ್ಕಿಯನ್ನು ಪಕ್ಕದಲ್ಲೇ ಇಟ್ಟುಕೊಂಡಿದ್ದ. ಆಗಾಗ ಅದನ್ನು ಬಾಯಿಗೆ ಬಗ್ಗಿಸಿಕೊಳ್ಳುತ್ತಿದ್ದ, ತನ್ನ ಆಶ್ಲೀಲ ಸಾಹಿತ್ಯದ ಬಗ್ಗೆ ಅವನಿಗೆ ಕಳವಳ. ಇದು ಪೋಲೀಸ್ ರೈಡ್ ಇರಬಹುದೆ? ಇದ್ದರೆ ಯಾಕೆ ಎಲ್ಲವನ್ನೂ ಬಿಟ್ಟು ಹೋಗಿದ್ದಾರೆ? ಅಥವಾ ಇನ್ನು ಯಾರಾದರೂ ವೈರಿಗಳಿರಬಹುದೆ? ಆತ ತನ್ನ ಜೀವಮಾನದಲ್ಲಿ ಇದುತನಕ ನಡೆದ ಎಲ್ಲ ಜಗಳಗಳನ್ನೂ ಜ್ಞಾಪಿಸಿಕೊಳ್ಳುತ್ತಿದ್ದ. ಆಫೀಸಿನಲ್ಲಿ, ಪೋಸ್ಟಾಫೀಸಿನಲ್ಲಿ, ಬಸ್ಸಿನಲ್ಲಿ, ಬಾರಿನಲ್ಲಿ. ಆನಂದನ ನೆನಪೂ ಅವನನ್ನು ಕಾಡದೆ ಇರುತ್ತಿರಲಿಲ್ಲ.

“ಹಲೋ ಅರವಿಂದ್!”
ಅರವಿಂದ ತಿರುಗಿ ನೋಡಿದ. ಡೈರೆಕ್ಟರ್ ನಿರಂಜನ್ ರೇ ನಿಂತಿದ್ದರು. ಅಚ್ಚ ಬಿಳಿಯ ಖದ್ದರು ಶರ್ಟು, ಇತ್ತೀಚೆಗೆ ರೇ ತುಂಬಾ ನ್ಯಾಶನಲಿಸ್ಟ್ ಆಗಿ ಬಿಟ್ಟಿದ್ದರು.

“ಹೌ ಆರ್ ಯು!”
“ಫೈನ್, ಥ್ಯಾಂಕ್ಯೂ ಸರ್”, ಎಂದ ಅರವಿಂದ.

“ನಿಮ್ಮ ಕ್ಯಾಂಡಿಡೇಚರ ರೆಕಮೆಂಡ್ ಮಾಡಿದ್ದೇನೆ. ಕೇಂಬ್ರಿಜ್ ಬಹಳ ಚೆನ್ನಾದ ಸ್ಥಳ, ಯೂ ಕ್ಯಾನ್ ಗೆಟ್ ರೆಡಿ.”

“ಥ್ಯಾಂಕೂ ಸರ್”

“ಕೆಲಸ ಟೆಂಪರರಿ ಎಂದು ಚಿಂತಿಸಬೇಕಾದ್ದಿಲ್ಲ. ವೈಶಾಖಿಗೆ ಹೇಳಿದ್ದೇನೆ. ಸಕಾಲದಲ್ಲಿ ಎಲ್ಲ ವ್ಯವಸ್ಥೆ ಆಗುತ್ತದೆ. ಕಾಫಿ ತಗೊಳ್ಳೋದಿಲ್ವೆ?”
“ರಶ್ ಮುಗೀಲೀಂತ”
ರೇ ನಕ್ಕರು.
“ರಶ್ ಮುಗೀಲೀಂತ ಕಾಯುವುದಿದೆಯೆ? ತೆರೆ ಮುಗಿದು ಸಮುದ್ರ ಸ್ನಾನ ಮಾಡುತ್ತಾರೆಯೆ? ಕಮ್ ಆನ್ ! ಜಾಯಿನ್ ದ ಮೈನ್ ಸ್ಟ್ರೀಮ್ !”

ರೇ ಅವನನ್ನು ಖುದ್ದಾಗಿ ನಿಮ್ಮನ್ನು ಕರೆದು ಕಾಫಿ ಕೊಡಿಸಿದುದನ್ನು ನೋಡಿದೆ.
“ಓ!”
“ಏನು ವಿಶೇಷ?”
“ಏನಿಲ್ಲ.”
“ನಿಮಗೋಸ್ಕರ ಹುಡುಕುತ್ತಿದ್ದರು. ನನ್ನನ್ನೇನು ಕೇಳಿದರು ಗೊತ್ತೆ?” “ಏನು?”
“ನಿನ್ನ ಬಾಯ್ ಫ್ರೆಂಡ್ ಎಲ್ಲಿದ್ದಾನೆ ಅಂತ ! ಒಂದು ಕ್ಷಣ ನನಗೆ ಏನು ಹೇಳಬೇಕೆಂದೇ ಗೊತ್ತಾಗಲಿಲ್ಲ…”
ರಾಣಿ ಅವನಿಗೆ ವಾಲಿಕೊಂಡು ಕುಳಿತಿದ್ದಳು. ಅವಳ ಉಸಿರು ಬಿಗಿಯಾಗ ತೊಡಗಿತ್ತು. ರಕ್ತದಲ್ಲಿ ಕಾವು ಮೆಲ್ಲನೆ ಏರುತ್ತಿತ್ತು. ರಂಗದ ಮೇಲೆ ಅವಳ ದೃಷ್ಟಿಯಿರಲಿಲ್ಲ.
“ಮನೆಗೆ ಹೋಗೋಣವೆ? ಹಸಿವಾಗುತ್ತಿದೆ.” ಅರವಿಂದ ಹೂಂ ಎಂದ.

ಹಸಿವಾಗುತ್ತಿದೆಯೆಂದು ಸುಳ್ಳೇ ಹೇಳಿದ್ದಳು. ಪಾರ್ಟಿಯಲ್ಲಿ ಇಬ್ಬರೂ ತಿಂಡಿ ತಿಂದಿದ್ದರು. ಈಗ ಮತ್ತೆ ಅಡುಗೆ ಮಾಡುವುದಕ್ಕೆ ಅವಳಿಗೆ ಮನಸ್ಸಿರಲಿಲ್ಲ. ಅರವಿಂದ ತನಗೆ ಹಸಿವಿಲ್ಲ ಎಂದ. ಫ್ರಿಜ್‌ನಲ್ಲಿ ಏನೋ ಸ್ವಲ್ಪ ಆಹಾರ ಇತ್ತು. ಪುಲಾವ್, ಅದನ್ನೇ ಬಿಸಿ ಮಾಡಿದಳು. ಇಬ್ಬರಿಗೂ ಸ್ವಲ್ಪ ಹಾಕಿದಳು. ಎರಡು ಗ್ಲಾಸುಗಳಲ್ಲಿ ಡ್ರಿಂಕ್ಸ್ ಮಿಕ್ಸ್ ಮಾಡಿದಳು.

ಊಟ ಮುಗಿದ ಮೇಲೆ ಅರವಿಂದ ಬಾಲ್ಕನಿಗೆ ಬಂದು ನಿಂತ. ಮೋಡಗಳಿಲ್ಲದ ರಾತ್ರಿಯ ಆಕಾಶ, ನಗರದ ವ್ಯಾಪ್ತಿಯನ್ನು ಸೂಚಿಸುವ ವಿದ್ಯುದ್ವೀಪಗಳು. ದೊಡ್ಡದಾಗಿ ಸದ್ದು ಮಾಡುತ್ತ ವಿಮಾನವೊಂದು ನಿಲ್ದಾಣದಲ್ಲಿಳಿಯಲು ಸುತ್ತು ಹಾಕುತ್ತಿತ್ತು.

ಅರವಿಂದ ಸಿಗರೇಟು ಹಚ್ಚಿದ.

ಸಮೀಪದಲ್ಲೆಲ್ಲೋ ಯಾರೋ ಖವ್ವಾಲಿ ರೆಕಾರ್ಡ್ ಹಾಕಿದ್ದರು. ಮದುವೆ, ಮುಂಜಿ ಸಮಾರಂಭ ಇರಬಹುದು. ದೊಡ್ಡದಾಗಿ ಕೇಳಿಸುತ್ತಿತ್ತು.
“ಏನು ಅಷ್ಟೊಂದು ಯೋಚನೆ?”
ರಾಣಿ ಕೇಳಿದಳು. ಬಟ್ಟೆ ಬದಲಾಯಿಸಿಕೊಂಡು ಬಂದಿದ್ದಳು. ಬಿಳಿ ಅಂಚಿನ ಕಪ್ಪು ಬಣ್ಣದ ನೈಟ್ಗೌನ್ ತೊಟ್ಟಿದ್ದಳು. ತಲೆಗೂದಲನ್ನು ಬಿಚ್ಚಿ ಹೆಗಲಿನ ಒಂದು ಬದಿಗೆ ಹಾಕಿಕೊಂಡಿದ್ದಳು. ಈ ರಾತ್ರಿ ಯಾವುದೋ ಹೊಸ ತೊಂದು ಅತ್ತರಿನ ಪರಿಮಳ.

“ಏನಿಲ್ಲ.”
“ಸುಳ್ಳು !”
ಅರವಿಂದ ಮಾತಾಡದಿರುವುದನ್ನು ಕಂಡು ಅವಳೇ ಹೇಳಿದಳು.

“ಕೆಲವು ದಿನಗಳಿಂದ ತುಂಬಾ ಮೂಡಿಯಾಗಿ ಬಿಟ್ಟಿದ್ದೀರಿ, ಯಾಕೆ?” ಅವನ ಮುಖವನ್ನು ಹಸ್ತಗಳಲ್ಲಿ ತೆಗೆದುಕೊಂಡು ಕಣ್ಣುಗಳನ್ನು ನೋಡಿದಳು.

“ಊರಿನ ನೆನಪು ಬಂತೆ? ಹೋಮ್ ಸಿಕ್ ಆರ್ ಯೂ?”
“ನಾನ್ಸೆನ್ಸ್”
“ಮತ್ತೆ?”
“ಹೊತ್ತಾಯಿತು. ನಾನು ರೂಮಿಗೆ ಹೋಗಬೇಕು ರಾಣಿ.”
“ಇಂಥ ಥಂಡಿ ಹವೆಯಲ್ಲೆ?”
“ಮೊನ್ನೆ ನನ್ನ ರೂಮ್‌ನಲ್ಲಿ ದರೋಡೆ ಆಯಿತು. ರೂಮ್ ಮೇಟ್ ಹೆದರಿಕೊಂಡಿದ್ದಾನೆ.”
“ದರೋಡೆಯೆ! ಯು ಲಾಸ್ಟ್ ಎನಿಥಿಂಗ್?”
“ರೇಡಿಯೋ, ಒಂದಷ್ಟು ಹಣ….”
“ಪೋಲೀಸಿಗೆ ರಿಪೋರ್ಟ್ ಮಾಡಿದಿರ?”
“ಅವರ ಹಿಂದೆ ಅಲೆಯೋದು ಯಾರಿಗಾಗುತ್ತದೆ?
ಅವನ ಹೆಗಲ ಮೇಲೆ ತೋಳುಗಳನ್ನು ಚೆಲ್ಲಿದಳು. ಅವಳ ಎದೆ ಒಂದೇ ಸಮನೆ ಏರಿಳಿಯುತ್ತಿತ್ತು.

“ನೀವು ಯಾರ ಹಿಂದೆಯೂ ಅಲೆಯುವುದು ಬೇಡ… ಒಳಗೆ ಬನ್ನಿ!”

ರಾತ್ರಿ ಎಷ್ಟೋ ಹೊತ್ತಿನಲ್ಲಿ ಕರೆಗಂಟೆ ಜೋರಾಗಿ ಹೊಡೆಯಲು ಸುರುವಾದಾಗ ರಾಣಿ ದಿಗ್ಗನೆ ಎದ್ದು ಕುಳಿತಳು. ಎದೆಯನ್ನು ಕೈಗಳಿಂದ ಮುಚ್ಚಿ ಕೊಂಡು ಏನೋ ಗೊಣಗಿದಳು. ಅರವಿಂದ ಅವಳನ್ನು ತಡೆದ, “ನಾನು ನೋಡುತ್ತೇನೆ,” ಎಂದು ಹೇಳಿ ಎದ್ದು ಹೋಗಿ ಬಾಗಿಲು ತೆರೆದ.
*****

ಅಧ್ಯಾಯ ೩೨

ವಿಚಾರಣಾಧಿಕಾರಿ ಹೇಳಿದ. ಯಾವಾಗಲೂ ಸರಕಾರಕ್ಕೆ ಒಬ್ಬ ವ್ಯಕ್ತಿಗೆ ಗೊತ್ತಿರೋದಕ್ಕಿಂತ ಹೆಚ್ಚಿಗೆ ಗೊತ್ತಿರುತ್ತದೆ. ಸರಕಾರದ ಅರ್ಥವೇ ಅದು. ಹಾಗಿಲ್ಲದ ಸರಕಾರ ಹೆಚ್ಚುಕಾಲ ಉಳಿಯುವುದಿಲ್ಲ. ಚರಿತ್ರೆಯಲ್ಲಿ ಇದಕ್ಕೆ ಅನೇಕ ಉದಾಹರಣೆಗಳಿವೆ. ಯಾವುದೇ ಸಾಮ್ರಾಜ್ಯವನ್ನು ತೆಗೆದುಕೊಳ್ಳಿ. ಯಾವಾಗ ಅದು ಜನರಿಂದ ಏಲಿಯನೇಟ್ ಆಯಿತೋ ಆವಾಗ ಕುಸಿಯಿತೆಂದೇ ಅರ್ಥ.

ಹಾಗಿದ್ದರೆ ಇಂಥ ವಿಚಾರಣೆಗಳೆಲ್ಲ ಯಾಕೆ? ಇವುಗಳ ಉಪಯೋಗ ವೇನು? ಎಂದು ನೀವು ಕೇಳಬಹುದು. ಸರಕಾರಕ್ಕೆ ಅದರದ್ದೇ ಆದ ಮುಖವಿಲ್ಲ, ಧ್ವನಿಯೂ ಇಲ್ಲ. ಜನವೇ ಅದರ ಮುಖಗಳು, ಧ್ವನಿಗಳು. ಜನರ ಮೂಲಕವೇ ಅದು ಮಾತಾಡುತ್ತದೆ.

ಈಗ ಸರಕಾರ ನಿಮ್ಮ ಮೂಲಕ ಮಾತಾಡಬಯಸಿದೆ.

ಸರಕಾರ ಜನರ ಕಲ್ಯಾಣಕ್ಕಾಗಿ ಇರುತ್ತದೆ. ಜನರ ಏಳಿಗೆ, ಮತ್ತು ಅವರ ರಕ್ಷಣೆ ಎಲ್ಲವೂ ಸರಕಾರದ ವಿಷಯ. ಕೆಲವೊಮ್ಮೆ ಜನರಿಗೆ ಯಾವುದು ಹಿತ, ಯಾವುದು ಅಹಿತ ಎಂಬುದನ್ನು ಸರಕಾರವೇ ನಿರ್ಧರಿಸಬೇಕಾಗುತ್ತದೆ. ಯಾಕೆಂದರೆ ಜನರು ಆಗಾಗ ದೂರದೃಷ್ಟಿಯನ್ನು ವಿವೇಚನಾ ಸಾಮರ್ಥ್ಯವನ್ನೂ ಕಳೆದು ಕೊಂಡವರಂತೆ ವರ್ತಿಸುತ್ತಾರೆ. ಜನರು ಭಾವವಿಕಾರಗಳಿಗೆ ಒಳಗಾಗುವವರು, ಇಂಥ ಪರಿಸ್ಥಿತಿಗಳನ್ನು ದುರುಪಯೋಗಪಡಿಸಲು ಕಾದುಕುಳಿತ ರಾಜಕಾರಣಿಗಳಂತೂ ಇದ್ದೇ ಇರುವರು. ಆದರೆ ಸರಕಾರವು ಒಂದು ವ್ಯವಸ್ಥೆಯಾಗಿರುವುದರಿಂದಲೂ, ಸಂವಿಧಾನಕ್ಕೆ ಬದ್ಧವಾಗಿರುವುದರಿಂದಲೂ ತನ್ನ ವಿವೇಕವನ್ನು ಎಂದೂ ಕಳೆದುಕೊಳ್ಳುವುದಿಲ್ಲ. ಅದು ಜನರ ಒಟ್ಟಾರೆ ವಿವೇಕದ ಸಂಚಯನದ ಹಾಗೆ.

ಜನರು ಸರಕಾರವನ್ನು ನಂಬುವುದು ಅಗತ್ಯ, ಜನರ ನಂಬಿಕೆಯ ಮೇಲೆ ಸರಕಾರಕ್ಕೆ ಯಾವ ಅಧಿಕಾರವೂ ಇಲ್ಲ. ನಂಬಿಕೆಯನ್ನು ಅದು ಗಳಿಸಿಕೊಳ್ಳಬೇಕಾಗುತ್ತದೆ. ನಿಜವಾದ ಸರಕಾರ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ಎಚ್ಚರಾಗಿರುತ್ತದೆ.

ವಿಚಾರಣಾಧಿಕಾರಿ ಒಮ್ಮೆಲೆ ಬೋರೆನಿಸಿದವನಂತೆ ಮಾತು ನಿಲ್ಲಿಸಿದ. ಮೇಜಿನ ಮೇಲಿದ್ದ ಪೇಪರ್‌ವೈಟನ್ನು ಅದರ ಭಾರದ ಅಂದಾಜು ಮಾಡುವವನಂತೆ ಕೈಯಲ್ಲಿ ತೂಗಿದ. ಜೋಪಾನವಾಗಿ ಅದನ್ನು ಮತ್ತೆ ಮೇಜಿನ ಮೇಲಿರಿಸಿದ.

ಅರವಿಂದ ನೋಡಿದ. ವಿಚಾರಣಾಧಿಕಾರಿ ಅಚ್ಚಬಿಳಿ ಶರ್ಟು ತೊಟ್ಟಿದ್ದ. ಫುಲ್ ಸ್ಲೀವ್, ಮುಂಗೈಯ ಪಚ್ಚೆನರಗಳು ಅಷ್ಟು ದೂರಕ್ಕೆ ಕಾಣಿಸುತ್ತಿದ್ದುವು.

ಅರವಿಂದ ಹೇಳಿದ : ನೀವೇನು ಹೇಳುತ್ತಿದ್ದೀರೋ ನನಗೆ ಅರ್ಥವಾಗುತಿಲ್ಲ.

ನಂತರ ಅನಿಸಿತು. ಯಾಕೆ ಹಾಗೆ ಹೇಳಬೇಕಾಗಿತ್ತು? ಬಹುಶಃ ಆ ನಿಶ್ಯಬ್ದತೆಯನ್ನು ಸಹಿಸುವುದು ಕಷ್ಟವಾಗಿತ್ತು, ಅಥವಾ ವಿಚಾರಣಾಧಿಕಾರಿ ಒಮ್ಮೆಲೆ ಮಾತು ನಿಲ್ಲಿಸಿದಾಗ ಅವನ ಸಹಾಯಕ್ಕೆ ಬರಬೇಕೆನ್ನಿಸಿತೇನೋ. ಅರವಿಂದನಿಗೀಗ ಬಹಳ ಹಸಿವಾಗತೊಡಗಿತ್ತು. ಬೇಕಿದ್ದರೆ ಕಾಫಿ ಕುಡಿಯಬಹುದಾಗಿತ್ತು. ಮೂರ್ಖನಂತೆ ಬೇಡ ಎಂದಿದ್ದ.

ವಿಚಾರಣಾಧಿಕಾರಿ ನಕ್ಕ. ಎಲ್ಲರೂ ಆರಂಭದಲ್ಲಿ ಹೀಗೇ ಹೇಳುತ್ತಾರೆ ಎಂಬಂತೆ. ನಾನಾಗಿ ಎಂದೂ ಈ ಭೇಟಿಯನ್ನು ಅಪೇಕ್ಷಿಸಿರಲಿಲ್ಲ. ಇದು ನೀವಾಗಿ ಅಪೇಕ್ಷಿಸಿದಂತಿದೆ ಎಂದ.

ನಕ್ಕಾಗ ಗುಳಿಬೀಳುವ ಕೆನ್ನೆಗಳು ಸ್ವಚ್ಛವಾಗಿ ಶೇವ್ ಮಾಡಿಕೊಂಡಿದ್ದ, ಆಫ್‍ಟರ್ ಶೇವ್‌ ಲೋಶನ್‌ನ ಹಿತವಾದ ವಾಸನೆ. ತಲೆಗೂದಲನ್ನು ಮಾಟವಾಗಿ ಬಾಚಿಕೊಂಡಿದ್ದ, ಅನೇಕ ವರ್ಷಗಳ ಶಿಸ್ತು, ನಿಗೂಢವಾದ ಮುಖಮುದ್ರೆ.

ವಿಚಾರಣಾಧಿಕಾರಿ ಪೀಠಿಕೆಯನ್ನು ಬಿಟ್ಟುಕೊಟ್ಟವನಂತೆ ಹೇಳಿದ: ನಾನು ಮಾತಾಡುತ್ತಿರೋದು ರಾಜಶೇಖರನ ಬಗ್ಗೆ, ನಾಗೂರಿನಲ್ಲಿ ನಿಮ್ಮ ಭೇಟಿ ನಡೆಯಿತು. ಅದಕ್ಕೂ ಮೊದಲು ನೀವು ಭೇಟಿಯಾಗಿರಬಹುದು. ಮೈಸೂರಿನಲ್ಲಿ?

ಅರವಿಂದನಿಗೆ ಅಟ್ಟದಲ್ಲಿ ನಡೆದ ಸಭೆಯ ನೆನಪಾಯಿತು. ಅಂದು ಮಾತಾಡಿದವನು ರಾಜಶೇಖರನೇ? ಅಲ್ಲವೆ? ನೆನಪಿರಲಿಲ್ಲ, ನೆನಪಿಗೆ ಬರುತ್ತಿದ್ದುದು ಬೇಕರಿಯಿಂದ ಬರುತ್ತಿದ್ದ ಹೊಗೆ, ಉಸಿರುಗಟ್ಟಿದ ವಾತಾವರಣ. ನಂತರ ನಡೆದ ಯಾವುದೋ ಚರ್ಚೆ.

ಆದರೆ ವಿಚಾರಣಾಧಿಕಾರಿಗೆ ಆ ಪ್ರಶ್ನೆಯಲ್ಲಿ ಆಸಕ್ತಿಯಿದ್ದಂತಿರಲಿಲ್ಲ.

ಅವನೆಂದ : ಸರಕಾರ ನಿಮ್ಮ ನೆರವನ್ನು ಬಯಸುತ್ತದೆ.
ಏನು ನೆರವು? ಅರವಿಂದನಿಗೆ ಯುವಕ ಸಮಾಜದ ಚಹಾದ ನೆನಪು. ಇಷ್ಟು ಹೊತ್ತಿಗೆ ಎಲ್ಲರೂ ಬೆಳಗಿನ ಉಪಹಾರ ಮುಗಿಸಿರುತ್ತಾರೆ. ಕೇಶವುಲು ಆಫೀಸಿಗೆ ಹೊರಟಿರುತ್ತಾನೆ. ತಾನು ಇನ್ನೂ ರೂಮಿಗೆ ಮರಳಿರದುದನ್ನು ಗಮನಿಸುತ್ತಾನೆ. ಅವನ ಮನಸ್ಸಿನಲ್ಲಿ ಅನೇಕ ಸಂದೇಹಗಳು ಮೂಡಬಹುದು, ಮುಖ್ಯವಾಗಿ ರೈಡ್ ತನಗೂ ಅದಕ್ಕೂ ಸಂಬಂಧ ಕಲ್ಪಿಸುತ್ತಾನೆ. ಯಾವುದೋ ಕತೆಗಳನ್ನು ಕಟ್ಟುತ್ತಾನೆ.

ಕೊಲೆ, ಬಂಡಾಯ, ಹಿಂಸಾಚರಣೆ, ಚುನಾಯಿತ ಸರಕಾರದ ವಿರುದ್ದ ಪಿತೂರಿ, ಸಂವಿಧಾನ ವಿರೋಧಿ ಚಟುವಟಿಕೆಗಳು, ಎಲ್ಲವೂ ವಯಸ್ಕರ ಶಿಕ್ಷಣದ ತೆರೆಮರೆಯಲ್ಲಿ. ಇದಕ್ಕೆ ನೀವು ಪ್ರತ್ಯಕ್ಷ ಸಾಕ್ಷಿ. ನಾನು ಹಿಂದೆಯೇ ಹೇಳಿದಂತೆ ಸರಕಾರ ಕಾಣುವುದು ಜನರ ಕಣ್ಣಿನಲ್ಲಿ.

ವಿಚಾರಣಾಧಿಕಾರಿ ಮಾತಾಡುತ್ತಲೇ ಇದ್ದ. ಅವನ ಧ್ವನಿಯಲ್ಲಿ ಪ್ರತ್ಯೇಕವಾದೊಂದು ಗಾಂಭೀರ್ಯವಿರುವುದನ್ನು ಅರವಿಂದ ಗಮನಿಸಿದ, ನಿರರ್ಗಳವಾದ ಮಾತು, ಪ್ರತಿಯೊಂದು ಶಬ್ದವನ್ನೂ ತೊಳೆದಿಟ್ಟಂತೆ – ಸ್ಪಷ್ಟ, ಖಚಿತ, ಇಂಥ ಮಾತಿನ ಹಿಂದಿರುವ ಪ್ರೇರಣೆ ಯಾವುದು? ಅಧಿಕಾರವೆ? ವ್ಯವಸ್ಥೆಯ ಬೆಂಬಲವೆ? ಅಪಾರವಾದ ಆತ್ಮವಿಶ್ವಾಸವೆ? ರೇ ಕೂಡ ಒಮ್ಮೊಮ್ಮೆ ಇದೇ ಧಾಟಿಯಲ್ಲಿ ಮಾತಾಡುತ್ತಾರೆ ಅನಿಸಿತು. ಈ ಹೋಲಿಕೆ ಬರೇ ಆಕಸ್ಮಿಕವೆ? ಅಥವಾ ಬೇರೇನಾದರೂ ಕಾರಣವಿದೆಯೆ? ಸರಕಾರ ಮೊದಲು ಭಾಷೆಯನ್ನು ಆಕ್ರಮಿಸುತ್ತದೆ, ನಂತರ ಜನತೆಯನ್ನು ಅನಿಸಿತು.

ವಿಚಾರಣಾಧಿಕಾರಿಯ ಮಾತಿನಲ್ಲಿರುವ ಏಕನಾದವನ್ನು ಸಹಿಸಲಾರದೆ ಹೇಳಿದ : ರಾಜಶೇಖರನ ವಿರುದ್ಧವಾಗಿ ನಾನು ಸಾಕ್ಷಿ ಹೇಳುತ್ತೇನೆಂದು ನೀವು ತಿಳಿದಿದ್ದರೆ ಅದೊಂದು ಭ್ರಮೆ. ಅವನ ಮೇಲಿನ ಆರೋಪವನ್ನು ರುಜುಪಡಿಸಲು ನೀವು ಉಪಯೋಗಿಸಬಹುದಾದಂಥ ಯಾವ ವಿವರಗಳನ್ನೂ ನಾನು ನೀಡಲಾರೆ.

ಮುಖ್ಯ ಅಂಥ ವಿವರಗಳೇ ನನ್ನ ಬಳಿ ಇಲ್ಲ. ಅಲ್ಲದೆ ಇದು ಸುಳ್ಳು ಆರೋಪವೆಂಬುದು ನಿಮಗೆ ಗೊತ್ತು. ರಾಜಶೇಖರ ಯಾವುದೇ ಕೊಲೆ ಮಾಡಿದ್ದಾನೆ ಎನ್ನೋದನ್ನು ನಾನು ನಂಬುವುದಿಲ್ಲ-ಯಾರೂ ನಂಬಲಾರರು…

ತಾನು ಮಾತಾಡುತ್ತಲೇ ಇದ್ದೇನೆ ಎಂದು ತಿಳಿಯುವುದಕ್ಕೆ ಅವನಿಗೆ ಸ್ವಲ್ಪ ಸಮಯವೇ ತಗಲಿತು, ಅಷ್ಟೊಂದು ಮಾತಾಡಬೇಕೆಂದು ಅವನು ನಿಜಕ್ಕೂ ಬಯಸಿರಲಿಲ್ಲ. ಈ ವಿಚಾರಣೆಯ ನಾಟಕವನ್ನು ಮುಕ್ತಾಯಗೊಳಿಸುವ ಆತುರದಲ್ಲಿದ್ದ. ಆದರೆ ವಿಚಾರಣಾಧಿಕಾರಿ ಅಂಥ ಯಾವ ಆತುರವನ್ನೂ ತೋರಲಿಲ್ಲ. ಅವನು ದೊಡ್ಡದೊಂದು ಆಶ್-ಟ್ರೇಯನ್ನು ಮುಂದೆ ದೂಡಿದ, “ಗೋ ಅಹೆಡ್,” ಎಂದ. ತಾನು ಸಿಗರೇಟ್ ಪ್ಯಾಕನ್ನು ಬಹಳ ಹೊತ್ತಿನಿಂದಲೂ ಕೈ ಯಲ್ಲಿ ಹಿಡಿದುಕೊಂಡಿರುವುದು ಅರವಿಂದನ ಗಮನಕ್ಕೆ ಬಂತು. ಹೌದು, ಸಿಗರೇಟು ಸೇದಬಹುದಿತ್ತು. ಯಾರೂ ತಡೆಯುತ್ತಿರಲಿಲ್ಲ. ವಿಚಾರಣಾಧಿಕಾರಿಯ ಮಾತಿನಿಂದ ಅವನಿಗೆ ಅಸಮಾಧಾನವೆನಿಸಿದರೂ ಇನ್ನೇನೂ ಮಾಡುವುದಕ್ಕಿಲ್ಲ ಎಂದು ಸಿಗರೇಟು ಹಚ್ಚಿ, ಆರಿದ ಕಡ್ಡಿಯನ್ನು ಟ್ರೇಯಲ್ಲಿ ಹಾಕಿದ. ನಸು ನೀಲಿ ಯಾದ ಹೊಗೆ ಕೋಣೆಯಲ್ಲಿ ಪಸರಿಸಿತು.

ವಿಚಾರಣಾಧಿಕಾರಿ ಸಿಗರೇಟು ಸೇದಲಿಲ್ಲ, ತನಗೆ ಅಭ್ಯಾಸವಿಲ್ಲವೆಂದ. ಬಹಳ ಶಿಸ್ತಿನ ಅಧಿಕಾರಿ. ಅವನು ಹೇಳಿದ : ನೀವಿದನ್ನೆಲ್ಲ ತುಂಬಾ ವೈಯಕ್ತಿಕವಾಗಿ ತೆಗೆದುಕೊಂಡಂತಿದೆ. ಅದರ ಅಗತ್ಯವಿಲ್ಲ. ಮುಖ್ಯವಾಗಿ ಇದು ರಾಜ್ಯಕ್ಕೆ ಸಂಬಂಧಿಸಿದ ವಿಷಯ. ಬುದ್ದಿಜೀವಿಗಳಾದ ನಿಮಗೆ ಹೆಚ್ಚು ವಿವರಿಸುವ ಅಗತ್ಯವಿಲ್ಲ.

ಆದರೂ ಆತ ವಿವರಿಸುತ್ತಲೇ ಹೋದ. ವಿಚಾರಣೆ ಅವನು ನಿರೀಕ್ಷಿಸಿದಂತೆಯೇ ಸಾಗುತ್ತಿದೆ ಎಂಬ ಭರವಸೆಯಿಂದ ಮೊದಲು ಪ್ರಜಾಪ್ರಭುತ್ವದ ಕುರಿತು ಹೇಳಿದ. ನಂತರ ಅದಕ್ಕಿರುವ ಗಂಡಾಂತರಗಳ ಬಗ್ಗೆ ಹೇಳಿದ, ಪ್ರಜಾ ಪ್ರಭುತ್ವ, ಪಕ್ಷಗಳು, ಚುನಾವಣೆ, ಸರಕಾರ, ಸ್ವಾತಂತ್ರ್ಯ, ಜವಾಬ್ದಾರಿ, ಸಂವಿಧಾನ, ಚಳುವಳಿ, ಭಯೋತ್ಪಾದನೆ-ಸರಕಾರದ ಕರ್ತವ್ಯ, ವ್ಯಕ್ತಿಯ ಕಟ್ಟುಪಾಡು ಇತ್ಯಾದಿ.

ಯಾಕೆ? ಅರವಿಂದನಿಗೆ ಆಶ್ಚರ್ಯವೆನಿಸಿತು. ಈ ರೀತಿ ನನಗೆ ನನ್ನ ಕರ್ತವ್ಯದ ನೆನಪು ಮಾಡುವುದರ ಮೂಲಕ ನನ್ನನ್ನು ಗೆಲ್ಲಬೇಕೆಂದಿದ್ದಾನೆಯೆ? ಇರಲಾರದು. ವಿಚಾರಣಾಧಿಕಾರಿ ಅಷ್ಟೊಂದು ಮೂರ್ಖನಂತೆ ಕಾಣಿಸಲಿಲ್ಲ. ನಿಜಕ್ಕೂ ಬುದ್ದಿವಂತನಿದ್ದ ಹಾಗನಿಸಿತು. ಬಹುಶಃ ಈತ ಇದನ್ನೆಲ್ಲ ಖಂಡಿತವಾಗಿ ನಂಬುವವನಿರಬಹುದು. ಅವನ ಕಾತರ ನಿಜವಾದ್ದೇ ಇರಬಹುದು.

ನಂತರ ಅವನು ರಾಜಶೇಖರನ ಬಗ್ಗೆ ಮಾತಾಡತೊಡಗಿದ. ಅವನು ಅಮೇರಿಕಾದಲ್ಲಿ ಓದಿದುದು, ತೀವ್ರಗಾಮಿಗಳೊಂದಿಗೆ ಸೇರಿದುದು, ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದುದು ಇತ್ಯಾದಿ. ಸರಕಾರದ ವಶ ರಾಜಶೇಖರನಿಗೆ ಹಾಗೂ ಅವನ ಮಿತ್ರರಿಗೆ ಸಂಬಂಧಿಸಿದಂತೆ ಎಲ್ಲ ವಿವರಗಳೂ ಇದ್ದ ಹಾಗೆ ಅನಿಸಿತು. ಅರವಿಂದನಿಗೆ ವಿಚಾರಣಾಧಿಕಾರಿ ಅವನ್ನೆಲ್ಲ ಚೆನ್ನಾಗಿ ಅಭ್ಯಾಸಮಾಡಿದವನಂತೆ ಕಂಡ. ಅಂಕೆ ಸಂಖ್ಯೆಗಳನ್ನೂ ಕೂಡ ಆತ ಕೊಡುತ್ತಿದ್ದ, ಯಾವ ಘಟನೆ ಯಾವಾಗ ಆಯಿತು ಎಂಬುದೆಲ್ಲ ಅವನಿಗೆ ಖಚಿತವಾಗಿ ಗೊತ್ತಿರುವಂತೆ ತೋರಿತು. ಅಲ್ಲದೆ ಚರಿತ್ರೆ, ಅರ್ಥಶಾಸ್ತ್ರ, ರಾಜಕೀಯಗಳಲ್ಲಿ ಅವನು ಪಳಗಿದವನಿರಬೇಕು. ರಾಜಶೇಖರನ ಕುರಿತು ಅವನಿಗಿದ್ದ ಆಸಕ್ತಿ ಕೇವಲ ಕರ್ತವ್ಯಕ್ಕೆ ಸಂಬಂಧಿಸಿದ್ದು ಮಾತ್ರವಾಗಿರಲಿಲ್ಲ. ಅದು ನಿಜವಾದ ಕುತೂಹಲದಿಂದ ಮೂಡಿದ ಆಸಕ್ತಿಯಿರಬಹುದು.

ರಾಜಶೇಖರನ ರಾಜಕೀಯ ಬದುಕಿನ ಬೆಳವಣಿಗೆಯನ್ನು ಅವನು ವಿಶ್ಲೇಷಿಸಿದ. ಆರಂಭದಲ್ಲಿ ಸೋಶಿಯಲಿಸ್ಟ್ ಆಗಿದ್ದ ಮನುಷ್ಯ ಕೊನೆಯಲ್ಲಿ ತೀವ್ರ ಗಾಮಿಯಾಗಿ, ಭಯೋತ್ಪಾದಕನಾಗಿ ಹೇಗೆ ಪರಿವರ್ತನೆಗೊಂಡ? ಇದರ ಹಿಂದಿನ ಆರ್ಥಿಕ, ಸಾಮಜಿಕ, ಅಂತಾರಾಷ್ಟ್ರೀಯ ಒತ್ತಡಗಳು ಯಾವುವು? ದೇಶದ ಪ್ರಜಾಪ್ರಭುತ್ವದ ಮೇಲೆ ಇದರ ಪರಿಣಾಮಗಳೇನು? ಸರಕಾರ ಈ ಸಮಸ್ಯೆಯನ್ನು ಹೇಗೆ ಎದುರಿಸಬೇಕು?

ಅರವಿಂದ ಮಾತಾಡುವುದಿಲ್ಲವೆಂದು ತೀಮಾರ್ನಿಸಿದ್ದ. ತನ್ನೆದುರಿಗಿದ್ದ ಆಶ್‌ಟ್ರೇಯನ್ನು ನೋಡುತ್ತ ಕುಳಿತ. ಯಾವುದೋ ಟಯರು ಕಂಪೆನಿಯವರು ಪ್ರಚಾರಕ್ಕಾಗಿ ವಿತರಣೆ ಮಾಡಿದ ಸಾಧನವಿರಬೇಕು. ದೊಡ್ಡ ಟಯರಿನ ಮರಿಯಂತಿತ್ತು. ಆದರೆ ರಬ್ಬರಿನದಲ್ಲ. ಬೇಕರ್‌ಲೈಟ್ ಇದ್ದೀತು. ಸಿಗರೇಟು ಮುಗಿಯುತ್ತ ಬಂದಿತ್ತು. ಟ್ರೇಯಲ್ಲಿ ಅದನ್ನು ನಂದಿಸಿದ.
ವಿಚಾರಣಾಧಿಕಾರಿಯ ಧ್ವನಿ ಕೋಣೆಯೊಳಗೆ ಪ್ರತಿಧ್ವನಿಸುತ್ತಲೇ ಇತ್ತು, ಬಹಳ ದೊಡ್ಡದಾದ ಕೋಣೆ ಅದು. ಒಂದು ಥಿಯೇಟರಿನಂತಿತ್ತು. ಖಾಲಿ ಕುರ್ಚಿಗಳು, ಆದರೆ ಕೋಣೆಯೊಳಗಿದ್ದುದು ಅವರಿಬ್ಬರೇ. ಹೊರಗೆ ಬೇರೆ ಮಂದಿಯಿದ್ದಂತಿತ್ತು. ಅವರೆಲ್ಲ ಇಲ್ಲಿನ ಮಾತುಕತೆಯನ್ನು ಕೇಳುತ್ತಿರಬಹುದು. ಈ ಹಳೆಯ ಕಟ್ಟಡದ ಸಂದಿಗಳಲ್ಲಿ ಮೈಕ್ರೋಫೋನ್ನು ಅಡಗಿಸಿಟ್ಟಿರಲೂಬಹುದು, ಬೇಕೆಂದೇ ಇಂಥ ಸ್ಥಳವನ್ನು ಆರಿಸಿಕೊಂಡಂತಿತ್ತು.

ದೂರದಲ್ಲಿ ಗಂಟೆಗಳು ಬಡಿಯತೊಡಗಿದುವು. ಅರವಿಂದ ಎಣಿಸತೊಡಗಿದ. ಎಣಿಕೆಯ ಮಧ್ಯೆ ಗೊಂದಲಕ್ಕೊಳಗಾದುದರಿಂದ ಹತ್ತೋ ಹನ್ನೊಂದೋ ಅಥವಾ ಹನ್ನೆರಡೋ ಎಂಬುದು ಗೊತ್ತಾಗಲಿಲ್ಲ. ಫಕ್ಕನೆ ಅವನಿಗೆ ಭಯವಾಗತೊಡಗಿತು. ಇದೊಂದು ದೊಡ್ಡ ದುಸ್ವಪ್ನವಿರಬಾರದೇಕೆ? ದುಸ್ವಪ್ನವಾಗಿದ್ದರೆ ಇದನ್ನು ಕೊನೆಗಾಣಿಸುವುದು ಹೇಗೆ?

ವಿಚಾರಣಾಧಿಕಾರಿ ಹೇಳಿದ :
ನಿಮ್ಮ ವೈಯಕ್ತಿಕ ನಿಷ್ಠೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನಾಗೂರಿನಲ್ಲಿರುವಾಗ ನೀವು ಒಂದೆರಡು ಲೇಖನಗಳನ್ನು ಬರೆದು ಪ್ರಕಟಿಸಿದಿರಲ್ಲವೆ ? ಹಳ್ಳಿಗಳ ಅನೇಕಾನೇಕ ಕಾರ್ಮಿಕರ ಬಗೆ ಬರೆದಿರಿ, ಈ ಮಂದಿ ಅಸಂಘಟಿತರು. ಶೋಷಣೆಗೊಳಗಾಗಿದ್ದಾರೆ. ಸರಕಾರದ ಕಾರ್ಯಕ್ರಮಗಳನ್ನು ಟೀಕಿಸಿದಿರಿ.

ರಾಜಶೇಖರ ನಿಜವಾದ ಸಂದರ್ಭದಲ್ಲಿ ನಾಗೂರಿನಲ್ಲಿ ಬಂದಿಳಿದ, ಆತ ಸಂಘಟಕ, ದೇಶ ವಿದೇಶಗಳ ಚಳುವಳಿಗಳಲ್ಲಿ ಪಳಗಿದವನು. ನೀವು ಅವನತ್ತ ಆಕರ್ಷಕರಾದುದರಲ್ಲಿ ಆಶ್ಚರ್ಯವಿಲ್ಲ. ಅರಿತೋ ಅರಿಯದೆಯೋ ಅವನ ಯೋಜನೆಯಲ್ಲಿ ಭಾಗವಹಿಸಿದಿರಿ.

ರಾಜಶೇಖರ ಮತ್ತು ಮರೀನಾ ಒಮ್ಮೆಲೆ ಮಾಯವಾದರು. ಮರೀನಾ ಮತ್ತೆ ಕಾಣಿಸಿಕೊಂಡುದು ಹೈದರಾಬಾದಿನಲ್ಲಿ. ಈ ಮಧ್ಯೆ ನಡೆದುದರಲ್ಲಿ ನಮ್ಮ ಪಾಲಿಲ್ಲ. ಅದು ಬಹುಶಃ ಎಂದೂ ಇರಲಿಲ್ಲ.

ವಿಚಾರಣಾಧಿಕಾರಿ ಎದ್ದು ಕೋಣೆಯಲ್ಲಿ ಶತಪಥ ಹಾಕಲು ತೊಡಗಿದ. ಕುಳಿತು ಬೇಸರವಾಗಿ ಹಾಗೆ ಮಾಡಿದನೋ, ಬಿಟ್ಟು ಪರಿಣಾಮಕ್ಕಾಗಿಯೋ,
ಕೊನೆಗೆ ಒಮ್ಮೆಲೆ ಅವನು ಹೇಳತೊಡಗಿದ.

ಇಲ್ಲ ನೀವೆಂದೂ ಕ್ರಾಂತಿಕಾರಿಯಾಗಿರಲಿಲ್ಲ. ಆಗಿದ್ದರೂ ಅದು ಮನಸ್ಸಿನ ದ್ವಂದ್ವದಲ್ಲಿ ಮಾತ್ರ. ನಿಮ್ಮ ಕ್ರಾಂತಿಯ ಸ್ಫೂರ್ತಿ ಮರೀನಾ, ಆದರೆ ಮರೀನಾಳನ್ನು ನೀವು ರಕ್ಷಿಸುವಂತಿಲ್ಲ. ಕೇಳಿ : ನೀವುಮಾಡಿದ ದೊಡ್ಡ ತಪ್ಪು ರೆಡ್ಡಿಯನ್ನು ಭೇಟಿಯಾದುದು, ರೆಡ್ಡಿಯ ಮೇಲೆ ಪೋಲೀಸ್ ಇಲಾಖೆ ಕಣ್ಣಿಟ್ಟಿದೆಯೆಂಬುದು ನಿಮಗೆ ಗೊತ್ತಿರಬೇಕಿತ್ತು. ಮರೀನಾ ಒಂಟಿಯಾಗಿ ಪ್ರಯಾಣಿಸಲಿಲ್ಲ.

ಆರವಿಂದ ಏನೋ ಕೇಳಬೇಕೆಂದುಕೊಂಡು ಕೇಳಲು ಪ್ರಯತ್ನಿಸಿದ. ಇದೆಲ್ಲ ಯಾಕೆ ಹೇಳುತ್ತಿದ್ದೀರಿ ನನಗೆ ? ನೀವು ಬಯಸುವುದಾದರೂ ಏನನ್ನು ?

ವಿಚಾರಣಾಧಿಕಾರಿ ಹೇಳುತ್ತಿದ್ದ :
ಮರೀನಾ ಟ್ರೇನಿನಿಂದ ಹೊರಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು. ಇದು ನಿಜಕ್ಕೂ ದುರದೃಷ್ಟಕರ. ಯಾಕೆಂದರೆ ಆಕೆಯಿಂದ ಇಲಾಖೆ ಕೆಲವು ವಿವರಗಳನ್ನು ಪಡೆಯುವುದಿತ್ತು.

ಐ ಆಮ್ ರಿಯಲಿ ಸಾರಿ ಅರವಿಂದ್, ಮುಖ್ಯವಾಗಿ ಇದು ಪೋಲೀಸ್ ಇಲಾಖೆಯದೇ ತಪ್ಪು, ನನಗನಿಸುತ್ತದೆ ನಾವಿದನ್ನು ಸರಿಯಾಗಿ ಹ್ಯಾಂಡ್ಲ್ ಮಾಡಲಿಲ್ಲ ಅಂತ. ಮರೀನಾ ಬಹಳ ಟೆನ್ಸ್ ಆಗಿದ್ದಳು. ಅವಳ ಸ್ಥಿತಿಯನ್ನು ಇಲಾಖೆ ಅರಿಯಬೇಕಿತ್ತು….

ಮುಂದೆ ಆತ ಹೇಳುತ್ತಿದ್ದುದು ಅರವಿಂದನಿಗೆ ಕೇಳಿಸಲಿಲ್ಲ. ಕೇಳಿಸುತ್ತಿದ್ದುದು ಬೇರೇ ಶಬ್ದಗಳು, ಸಮುದ್ರದ ಮೊರತ, ಒಂದರ ಮೇಲೊಂದರಂತೆ ಉದ್ದ ಅಲೆಗಳು ಕಲ್ಲುಬಂಡೆಗಳಿಗೆ ಅಪ್ಪಳಿಸುವ ಶಬ್ದ, ಯಾರೋ ಅವನ ಹೆಸರು ಹಿಡಿದು ಕೂಗುತ್ತಿದ್ದರು. ಯಾರು? ಯಾಕೆ? ಯಾವುದೂ ಸ್ಪಷ್ಟವಾಗುತ್ತಿರಲಿಲ್ಲ. ತಾನು ಇದ್ದಲ್ಲೇ ಇದ್ದೇನೆಯೇ ಅಥವಾ ತೆರೆಗಳ ಮೇಲೆ ತೇಲುತ್ತಿದ್ದೇನೆಯೇ ಕಣ್ಣುಗಳನ್ನು ಆವರಿಸುವ ಕತ್ತಲೆ ಬೆಳಕುಗಳು ಯಾವುವು ಈ ಮುಖಗಳು ಯಾವುವು ಒಂದು ಗೊತ್ತಾಗುತ್ತಿರಲಿಲ್ಲ.

ತಟ್ಟನೆ ಅವನಿಗನಿಸಿತು ;
ಈ ವಿಚಾರಣಾಧಿಕಾರಿ, ಈ ಕೋಣೆ ಈ ಆಶ್ ಟ್ರೇ-ಎಲ್ಲ ನನ್ನ ಮನಸ್ಸಿನ ಭ್ರಮೆಯಾದರೆ ನಾನಿದನ್ನು ಕೊನೆಗೊಳಿಸಲಾರನೆ? ಇಲ್ಲಿಂದ ಎದ್ದು ಹೊರಗೆ ನಡೆದರೆ ಸಾಕು ಈ ಕನಸು ಹರಿಯುವುದಕ್ಕೆ, ಯಾರೂ ನನ್ನನ್ನು ತಡೆಯಲಾರರು.
*****

ಅಧ್ಯಾಯ ೩೩

ಹೊಸೆದು ತಂದಿದ್ದ ಬೀಡಿಗಳನ್ನು ಎಣಿಸಿ ಕೊಟ್ಟು ತಂಬಾಕಿನ ಪುಡಿ, ಬೀಡಿಯೆಲೆಗಳನ್ನು ಚೀಲದಲ್ಲಿ ತುಂಬಿ ಕೊಂಡಳು ಲಕ್ಷ್ಮಿ, ಡಿಪೋದ ಏಜೆಂಟ್ ರಾಮಣ್ಣ ತಲೆಹರಟೆಯ ಮಾತುಗಳನ್ನು ಆಡುತ್ತಲೇ ಇದ್ದ, ಊರ ಪರವೂರ ಸುದ್ದಿ ಸಿಕ್ಕ ಸಿಕ್ಕವರ ಬಗ್ಗೆ ಗಾಳಿಸುದ್ದಿ, ಬಂಟ್ವಾಳ ಮಂಗಳೂರು ಮೂಲ್ಕಿ ಯಲ್ಲಿ ಯಾವ ಯಾವ ಸಿನಿಮಾಗಳು ನಡೆಯುತ್ತಿವೆ. ಯಾರು ಯಾರು ಏಕ್ಟ್ ಮಾಡಿದಾರೆ, ಕತೆಯೇನು ಇತ್ಯಾದಿ ಇತ್ಯಾದಿ. ತಂಬಾಕು ತಿಂದು, ಬೀಡಿ ಸೇದಿ ಕಪ್ಪಾದ ಹಲ್ಲುಗಳು, ಕುಳಿತಲ್ಲಿಗೇ ಬೆಳೆದ ಹೊಟ್ಟೆ, ನಾಲ್ಕು ಮಕ್ಕಳ ತಂದೆ. ಮಹಾ ರಸಿಕನಂತೆ ನಟಿಸುತ್ತಿದ್ದ. ಹರೆಯದ ಹುಡುಗಿಯರೊಂದಿಗೆ ಸುಮ್ಮನೇ ಮಾತಾಡುವ ಚಪಲ, ಇದಕ್ಕೆಂದು ಅಂಥವರನ್ನು ಅಂಗಡಿಯೊಳಗೆ ಕಾಯಿಸುತ್ತಿದ್ದ. ಬೆನ್ನ ಹಿಂದೆ ಎಲ್ಲರೂ ಅವನನ್ನು ಕಾಮಣ್ಣ ಅನ್ನುತ್ತಿದ್ದರು.

ರಾಮಣ್ಣ ತನ್ನ ಮನಸ್ಸಿಗೆ ಬಂದ ಹೆಣ್ಣುಗಳ ಚೀಲಕ್ಕೆ ತುಸು ಹೆಚ್ಚೇ ತಂಬಾಕು, ಎಲೆಗಳನ್ನು ತುರುಕಿ ಬಿಡುತ್ತಿದ್ದ. ಅಂಥ ಹೆಣ್ಣು ಮಕ್ಕಳಲ್ಲಿ ತಾನು ಒಬ್ಬಳು ಎನ್ನುವುದು ಲಕ್ಷ್ಮಿಗೆ ನಿಜಕ್ಕೂ ನಾಚಿಕೆಯ ಸಂಗತಿ. ಆದರೂ ಇದರಿಂದ ಲಾಗಿ ಉಳಿದವರು ಸಾವಿರ ಬೀಡಿ ತಯಾರಿಸುವಲ್ಲಿ ಅವಳಿಗೆ ಮೇಲೆ ಇನ್ನೆರಡು ನೂರು ತಯಾರಿಸುವುದು ಸಾಧ್ಯವಾಗುತ್ತಿತ್ತು.

“ಮುಂದಿನ ವಾರ ಎಲ್ಲರಿಗೂ ಬೋನಸ್ ಸಿಗುತ್ತದೆ.” ಎಂದ ರಾಮಣ್ಣ ಹೊಸ ಸುದ್ದಿ ಹೇಳುವ ಠಿವಿಯಲ್ಲಿ.

ಡಿಪೋದೊಳಗೆ ಬೇರಾರೂ ಇರಲಿಲ್ಲ. ಲಕ್ಷ್ಮಿ ಹೊರಡುವ ಆತುರದಲ್ಲಿದ್ದಳು. ಅತ ಬೋನಸ್‌ನ ಸುದ್ದಿಯನ್ನು ಹಲವು ದಿನಗಳಿಂದ ಹೇಳುತ್ತಲೇ ಬಂದಿದ್ದ. ಆದರೂ ಬೋನಸ್‌ನ ಹಣ ಇನ್ನೂ ಜನರ ಕೈ ಸೇರಿರಲಿಲ್ಲ. – ಲಕ್ಷ್ಮೀ ಹೂಂ ಅಂದಳು-ಯಾವ ಕುತೂಹಲವನ್ನು ತೋರದೆ. ಕೆಲಸಗಾರರಿಗೆಲ್ಲ ಕೊನೆಗೂ ಬೋನಸ್ ಕೊಡಲು ಬೀಡಿ ಕಂಪೆನಿಗಳು ನಿರ್ಧರಿಸಿದುವು. ದೇಶದ ಅನೇಕ ಕಾರ್ಮಿಕರ ಚಳುವಳಿಯ ಫಲ.

“ಖಂಡಿತಾ ಸಿಗುತ್ತೆ. ಕಂಪೆನಿಯಿಂದ ಆರ್ಡರ್ ಬಂದಿದೆ. ಮುಂದಿನ ವಾರ ಆಫೀಸರು ಬರುತ್ತಾರೆ. ನಿನಗೆಷ್ಟು ಬೋನಸ್ ಬರುತ್ತೆ ಗೊತ್ತೆ ?”

“ಎಷ್ಟು?” ಕುತೂಹಲದಿಂದ ಕೇಳಿದಳು.
“ಎರಡು ನೂರು.”
ಲಕ್ಷ್ಮಿಯ ಮುಖ ಪ್ರಸನ್ನವಾದುದನ್ನು ಕಂಡು ರಾಮಣ್ಣ ಹಿಗ್ಗಿದ. “ಎಲ್ಲರಿಗಿಂತ ಹೆಚ್ಚು ನಿನಗೆ ಅಲ್ಲದೆ ಒಂದು ಪ್ರೈಜೂ, ಉಂಟು.”
“ಪ್ರೆಜೆ !”
“ಕೆಲಸ ನಿಯತ್ತಾಗಿ ಮಾಡ್ತ ಬಂದಿದೀಯಲ್ಲ. ಅದಕ್ಕೆ.”
“ಏನು ಪ್ರೈಜು ?”
ಏನೆಂದು ರಾಮಣ್ಣನಿಗೆ ಗೊತ್ತಿರಲಿಲ್ಲ.

“ಬಂದಾಗಲೇ ಗೊತ್ತಾಗೋದು, ಹ್ಯಾಂಡ್‌ಬ್ಯಾಗೋ ಕನ್ನಡಿಯೊ. ಏನಾದ್ರೂ ಇರಬಹುದು. ನಮ್ಮ ಡಿಪೋದಲ್ಲಿ ಪ್ರೈಜು ಬಂದಿರೋದು ನಿನಗೊಬ್ಬಳಿಗೆ ಮಾತ್ರ.”

ರಾಮಣ್ಣ ಮತ್ತೆ ಕೇಳಿದ :
“ಬೋನಸ್ ಹಣ ಏನ್ಮಾಡ್ತೀ ?”
“ಏನಾದ್ರೂ ಮಾಡ್ತೇನೆ. ದಾನ ಮಾಡ್ತೇನೆ.”
ರಾಮಣ್ಣ ನಕ್ಕ. ಅವನಿಗೆ ಇಂಥ ಮಾತುಗಳು ಇಷ್ಟ,
“ಯಾರಿಗೆ ?” ಎಂದ.
ಲಕ್ಷ್ಮಿ ಮಾತಾಡಲಿಲ್ಲ.
“ಒಂದು ರಿಸ್ಟ್‌ವಾಚ್ ತಗೋ, ನಿನ್ನ ಕೈಗೆ ಹಿಡಿಸುತ್ತೆ. ಈಗ ನಿನ್ನ ವಯಸ್ಸಿನ ಎಲ್ಲರ ಕೈಯಲ್ಲೂ ಇದೆ.”
ರಾಮಣ್ಣ ಈಗ ಬೋನಸ್ ಹಣವನ್ನು ಹೇಗೆ ವಿನಿಯೋಗಿಸಬೇಕೆಂಬುದರ ಬಗ್ಗೆ ಎಲ್ಲರಿಗೂ ಧಾರಾಳ ಸಲಹೆ ನೀಡತೊಡಗಿದ್ದ.
“ಬಂದಾಗ ಅಲ್ವೆ,” ಎಂದುಕೊಂಡು ಲಕ್ಷ್ಮಿ ಹೊರಗಿಳಿದಳು,

ಡಿಪೋದ ಹೊರಗೋಡೆಯ ಮೇಲೆ ಮಸಿಯಿಂದ ಬರೆದ ಪೋಲಿಚಿತ್ರಗಳು ಅಂಗಡಿಯ ಹಣೆಬರಹದಂತೆ ಇದ್ದವು. ಅವು ಕೆಲಸವಿಲ್ಲದ ಉಂಡಾಡಿಗಳ ಕೃತ್ಯ. ಅಷ್ಟು ದೂರ ಕುಳಿತು ಅಂಗಡಿಗೆ ಬಂದು ಹೋಗುವ ಹೆಣ್ಣುಮಕ್ಕಳನ್ನು ಕೀಟಲೆ ಮಾಡುವುದೇ ಇವರ ದಂಧೆ, ಹೆಚ್ಚಾಗಿ ಈ ಗುಂಪು ಸೇರುವುದು ಸಂಜೆಯ ಹೊತ್ತಿನಲ್ಲಿ. ಇವರ ಕಣ್ಣು ತಪ್ಪಿಸಬೇಕಾದರೆ ಮಧ್ಯಾಹ್ನವೇ ಬರಬೇಕು. ಆದರೆ ಮಧ್ಯಾಹ್ನದ ಹೊತ್ತಿನಲ್ಲಿ ಡಿಪೋದಲ್ಲಿ ಹೆಚ್ಚು ಮಂದಿ ಇರುವುದಿಲ್ಲ. ಆದ್ದರಿಂದ ರಾಮಣ್ಣನ ಆತ್ಮೀಯತೆ ಜಾಸ್ತಿಯಾಗುವ ಭೀತಿ ಲಕ್ಷ್ಮೀ ಬರುತ್ತಿದ್ದುದು ಸಂಜೆಯಲ್ಲಿ.

ಅವಳು ತುಂಬಾ ಭರವಸೆ ಇಟ್ಟುಕೊಂಡಿದ್ದ ಶ್ರೀನಿ ಕೊನೆಗೂ ಮನೆಬಿಟ್ಟು ಹೋಗಿದ್ದ. ಹೋಗುವಾಗ ಮನೆಯ ನಗನಾಣ್ಯಗಳನ್ನೂ ಎತ್ತಿ ಕೊಂಡು ಹೋದ. ಅವಳು ಆ ದಿನ ಬಹಳವಾಗಿ ದುಃಖಿಸಿದ್ದಳು. ಈಗ ಮನೆಯ ಎಲ್ಲ ಜವಾಬ್ದಾರಿಯೂ ಅವಳ ಹೆಗಲ ಮೇಲೆಯೇ. ಇದ್ದ ಇನ್ನೊಬ್ಬ ತಮ್ಮ ಶಾಲೆಗೆ ಹೋಗುತ್ತಿದ್ದ, ತಾಯಿ ಶ್ರೀನಿಯ ಚಿಂತೆಯಲ್ಲಿ ಕೆಲವು ದಿನ ಹಾಸಿಗೆ ಹಿಡಿದಿದ್ದಳು.

ಇಂಥ ಕಷ್ಟದಲ್ಲೂ ಒಂದು ಸಮಾಧಾನವೆಂದರೆ ಕರಿಗೌಡರು ಹಿಂದಿನಷ್ಟು ಕಟುವಾಗಿಲ್ಲ ಎಂಬುದು, ಮನೆಯ ಸುತ್ತುಮುತ್ತಲಿನ ಸ್ವಲ್ಪ ಸ್ಥಳವನ್ನು ಅವರಾಗಿಯೇ ಬಿಟ್ಟುಕೊಟ್ಟಿದ್ದರು. ಈ ಸ್ಥಳದಲ್ಲಿ ಕೆಲವು ಹಲಸು ಮಾವು ತೆಂಗು ಗೇರು ಮರಗಳಿದ್ದುವು. ಕೈಗೆ ಸ್ವಲ್ಪ ಹಣ ಬರುತ್ತಿತ್ತು, ಕರಿಗೌಡರು ಹೀಗೆ ಮನಸ್ಸು ಬದಲಾಯಿಸಿದ್ದರ ಕಾರಣ ಅವಳಿಗೆ ಗೊತ್ತಿರಲಿಲ್ಲ. ಆದರೆ ಗೌಡರು ಈಗ ಬದಲಾಗಿದ್ದಾರೆ ಎಂದು ಎಲ್ಲರೂ ಆಡಿಕೊಳ್ಳುತ್ತಿದ್ದರು. ಅವರು ಚುನಾವಣೆಗೆ ಬೇರೆ ನಿಲ್ಲುತ್ತಿದ್ದಾರಂತೆ. ಬೋನಸ್ ಬಂದರೆ ಒಂದು ಒಳ್ಳೆ ಸೀರೆ, ಅದಕೊಪ್ಪುವ ಕುಪ್ಪಸ, ಲಂಗ ಕೊಂಡುಕೊಳ್ಳಬೇಕು ಎಂಬ ವಿಚಾರವಿತ್ತು, ಪೇಟೆ ಯಲ್ಲಿ ಹೊಸತಾಗಿ ತೆರೆದ ಭರ್ಜರಿ ಜವಳಿ ಅಂಗಡಿಯಲ್ಲಿ ತೂಗುಹಾಕಿದ್ದ ಸೀರೆಯೊಂದು ಅವಳ ಮನಸ್ಸನ್ನು ತುಂಬಾ ಸೆಳೆದಿತ್ತು.

ಈಗ ಅಂಗಡಿಗೆ ಹೋಗಿ ಅದರ ಬೆಲೆಯನ್ನು ವಿಚಾರಿಸುವ ಧೈರ್ಯವಾಯಿತು.
“ಎಂಬತ್ತು,” ಎಂದ ಅಂಗಡಿಯವ.
ಅಮೇರಿಕನ್ ಜಾರ್ಜೆಟ್ ಸೀರೆ, ಮುಟ್ಟುವಾಗ ಗರಿಗರಿಯೆನಿಸುತ್ತಿತ್ತು. ಲಕ್ಷ್ಮಿ ಆಸೆಗಣ್ಣುಗಳಿಂದ ನೋಡಿದಳು.
“ಇದರಲ್ಲಿ ಬೇರೆ ಬಣ್ಣಗಳಿವೆ, ತೋರಿಸಲೆ ?”
ಲಕ್ಷ್ಮೀ ಹೂಂ ಎಂದಳು.
ಮಾರುವಾತ ಇನ್ನೂ ನಾಲ್ಕು ಸೀರೆಗಳನ್ನು ಶೋಕೇಸಿನ ಮೇಲೆ ಹರಡಿದ. ತಿಳಿನೀಲಿ, ಗುಲಾಬಿ, ಕೆಂಪು, ಹಳದಿ ಬಣ್ಣದವು ಎಲ್ಲವೂ ಚೆನ್ನಾಗಿದ್ದುವು.
ಅವಳು ಅನುಮಾನಿಸುತ್ತಿರುವುದನ್ನು ನೋಡಿ ಆತ ಹೇಳಿದ : “ಒಂದೆರಡು ರೂಪಾಯಿ ಕಡಿಮೆಗೆ ಕೊಡಬಹುದು.”
“ಇದಕ್ಕೆ ಹೊಂದುವ ರವಿಕೆ ಕಣ ಇದೆಯೆ ?”
“ಸೀರೆ ಸೆಲೆಕ್ಟ್ ಮಾಡಿ.”
“ಇದು,” ಲಕ್ಷ್ಮಿ ತಿಳಿನೀಲಿಯ ಮೇಲೆ ಕೈಯಿಟ್ಟಳು.
“ಈಗ ಬೇಡ,” ಎಂದಳು ಒಡನೆಯೇ.
“ಮತ್ತೆ ?”
“ಒಂದು ವಾರ ಕಳೆದು. ಅಷ್ಟರ ತನಕ ಇದನ್ನ ತೆಗೆದಿಡೋದು ಸಾಧ್ಯವೆ?” ಅನುಮಾನಿಸುತ್ತ ಕೇಳಿದಳು.
ಮಾರುವಾತನ ಉತ್ಸಾಹ ಇಳಿಯಿತು.
“ಈಗಲೇ ಕೊಂಡುಬಿಡಿ,” ಎಂದ.
“ಈಗ ನನ್ನ ಕೈಲಿ ಹಣ ಇಲ್ಲ.”
ಆತ ಬೇರೆ ಗಿರಾಕಿಗಳ ಕಡೆ ಗಮನ ಹರಿಸಿದ. ಲಕ್ಷ್ಮಿ ಅಂಗಡಿಯಿಂದ ಹೊರಬಿದ್ದಳು.

ಕತ್ತಲು ಒಮ್ಮೆಲೆ ಆವರಿಸತೊಡಗಿತ್ತು. ನಾಗೂರೇ ಹಾಗೆ ಪಶ್ಚಿಮದ ಬೆಟ್ಟಗಳ ಹಿಂದೆ ಸೂರ್ಯ ಮರೆಯಾದರೆ ಸಾಕು ಮತ್ತೆ ಬೆಳಕು ಬಹಳ ಬೇಗನೆ ಮಾಯತೊಡಗುತ್ತದೆ. ಈ ಬೆಟ್ಟಗಳೂ ಎತ್ತರ. ಸಂಜೆ ಆರುಗಂಟೆಗೆಲ್ಲಾ ಸೂರ್ಯನನ್ನು ಮರೆಸಿಬಿಡುತ್ತವೆ. ಲಕ್ಷ್ಮಿ ಕಳೆದ ಅನೇಕ ವರ್ಷಗಳಿಂದ ತುಳಿದ ದಾರಿ ಇದು. ದಿನಕ್ಕೆರಡು ಬಾರಿ, ಕಾಡಿನ ಪಕ್ಕದ ಹರಳುಕಲ್ಲಿನ ದಾರಿಯಲ್ಲಿ ಅವಳ ಅನೇಕ ಜತೆ ಚಪ್ಪಲಿಗಳು ಸವೆದುಹೋಗಿವೆ.

ರಾತ್ರಿಯಾಗುವ ಮೊದಲು ಮನೆಸೇರಬೇಕೆಂದು ಬಿರುಸಾಗಿ ನಡೆಯತೊಡಗಿದಳು, ಜನರ ಉಪಟಳ ಇತ್ತೀಚೆಗೆ ಹೆಚ್ಚಾಗುತ್ತಿತ್ತು. ನಡೆಯುವಾಗ ಹಿಂಬಾಲಿಸುವ ಹದ್ದಿನ ಕಣ್ಣುಗಳು, ಆಕೆಯನ್ನು ಸುಮ್ಮಸುಮ್ಮನೇ ಮಾತಾಡಿಸುವುದಕ್ಕೆ ಯುವಕರಿಗೆ ತವಕ, ಬಯಲಾಟ, ಜಾತ್ರೆ, ಬಸ್ಸು ನಿಲ್ದಾಣ ಎಲ್ಲೆಂದರಲ್ಲಿ ಎದುರಾಗುವ ಮನುಷ್ಯರು, ಆಕೆಗೆ ಕೇಳಿಸುವಂತೆ ಹೇಳುವ ಚೇಷ್ಟೆ ಮಾತುಗಳು ಬೇಕೆಂದೇ ಜತೆಯಲ್ಲಿ ಬರುವವರು.

ಯೋಚಿಸುತ್ತಲೇ ನಡೆಯುತ್ತಿದ್ದಳು. ಇನ್ನೇನು ಮನೆ ತಲಪಿತು ಅನ್ನುವಷ್ಟರಲ್ಲಿ ಯಾರೋ ಸಣ್ಣ ದನಿಯಲ್ಲಿ ಹೆಸರು ಹಿಡಿದು ಕರೆದಂತಾಯಿತು. ತಟ್ಟನೆ ತಿರುಗಿ ನೋಡಿದಳು. ಕತ್ತಲಲ್ಲಿ ಮೊದಲು ಗುರುತು ಹತ್ತಲಿಲ್ಲ. ಗುರುತು ಹತ್ತಿದಾಗ ತನ್ನ ಕಣ್ಣುಗಳನ್ನು ತಾನೇ ನಂಬಲಾರದಾದಳು ಏನೋ ಉದ್ದರಿಸಲೆಂದು ಬಾಯಿತೆರೆದಳು.

ಮಾತು ಹೊರಡಲಿಲ್ಲ.

ಇನ್ನೆಂದಿಗೂ ಈ ಊರಿಗೆ ಬರುವುದಿಲ್ಲವೆಂದು ಇವರು ಹೇಳಿರಲಿಲ್ಲವೇ ಅಂದುಕೊಂಡಳು ಲಕ್ಷ್ಮಿ.

ಯಾವ ಕಾರಣಕ್ಕೋ ಅವಳಿಗೆ ತುಂಬಾ ಭಯವೆನಿಸಿ ಅರಿಯದೆಯೆ ಕಂಪಿಸಿದಳು.
*****
(ಮುಕ್ತಾಯ)

ಇದು ನನ್ನ ಮೊದಲ ಕಾದಂಬರಿ. ಹಿಂದೆ ಪತ್ರಿಕೆಯೊಂದರಲ್ಲಿ ಬೆಳಕಿಗೆ ಬಂದ ಕೃತಿಯ ಪರಿಷ್ಕೃತ ರೂಪ. ಓದುಗರು ಇದನ್ನು ಹೇಗೆ ತೆಗೆದುಕೊಳ್ಳುತ್ತಾರೆಂದು ತಿಳಿಯುವ ಕೇವಲ ಕುತೂಹಲ ಹಾಗೂ ವಾಕ್ಯಗಳ ಕುರಿತಾದ ನನ್ನ ಪ್ರೀತಿ ಈ ಕೃತಿಯನ್ನು ಬಿಡುಗಡೆಗೊಳಿಸಲು ನನ್ನನ್ನು ಪ್ರೇರೇಪಿಸಿದವು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂರ್ಯೋದಯ
Next post ಎದೆ ತಂತಿ ಮಿಡಿದಾಗ

ಸಣ್ಣ ಕತೆ

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

 • ಕೆಂಪು ಲುಂಗಿ

  ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

 • ಗುಲ್ಬಾಯಿ

  ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys