ಪಾತ್ರಗಳು
(ಮೇಳ) ೬ ಅಥವಾ ಹೆಚ್ಚು ಜನ
ಬಿಳಿ ೭
ಕೇಸರಿ ೮
ಹಸಿರು ೯
ನೀಲಿ ೧೦
ಕೆಂಪು ೧೧
ಗುಲಾಬಿ ೧೨
ಸಂಜೆಗೆಂಪು ೧೩
ಕಿತ್ತಳೆ ೧೪
ಕಪ್ಪು ೧೪
ಕಪ್ಪು ೧೫
ಆಕಾಶನೀಲಿ ೧೬
ಕಂದು ೧೭
ಹಳದಿ ೧೮
ದೃಶ್ಯ -ಒಂದು
(ಹಸಿರು, ನೀಲಿ, ಕೇಸರಿ, ಹಳದಿ ಬಣ್ಣಗಳು ರಂಗಕ್ಕೆ ಬಂದು ಹಾಡುವರು)
ಹಾಡು
ನಾವು ಚಿಕ್ಕ ಮಕ್ಕಳು ಆಡೋ
ನಾಟಕ ನೋಡೋ ಜನರೇ
ಅಕ್ಕಾ ತಂಗಿ ಅಮ್ಮ ಚಿಕ್ಕಿ
ಅಣ್ಣ ತಮ್ಮ ಬೆಳ್ಳಿ ಚುಕ್ಕಿ
ಹಾಡೋ ಹಕ್ಕಿ, ತಿನ್ನೋ ಅಕ್ಕಿ
ಎಲ್ಲರಿಗೂ ನಮ್ಮ ನಮಸ್ಕಾರ
ನಮಸ್ಕಾರಾ ನಮ್ಮ ನಮಸ್ಕಾರ.
ಹಳದಿ:
ಹಾಡು ಸಾಕು, ನಾಟಕ ಶುರು ಮಾಡಪ್ಪಾ.
ಹಸಿರು:
ಒಂದಲ್ಲಾ ಒಂದು ಊರಲ್ಲಿ…..
ನೀಲಿ:
ಏಯ್! ಆ ಥರಾ ಕತೆ ಶುರು ಮಾಡಬೇಡ ಕಣೋ
ಅದು ಓಲ್ಡ್ ಸ್ಟೈಲ್!
ನಾವೇ ಮೇಳ ಆಗಿ ಹಾಡಿನ ರೂಪದಲ್ಲಿ ಹೇಳೋಣ.
ಕೇಸರಿ:
ಇಡೀ ನಾಟಕ ಹಾಡಿನ ರೂಪದಲ್ಲೇ ಬೇಡ.
ಇಡೀ ನಾಟಕ ಬರೀ ಮಾತಲ್ಲೂ ಬೇಡ.
ಹಳದಿ:
ಮತ್ತೇನು ಮೂಕ ನಾಟಕ ಮಾಡಬೇಕು ಅಂತೀಯಾ?
ಕೇಸರಿ:
ಹಾಗಲ್ಲ ಕಣೋ, ಹೇಳೋ ತನಕ ಸರಿಯಾಗಿ ಕೇಳು,
ಅವಸರ ಮಾಡಬೇಡ.
ಕೇಸರಿ:
ಹಾಡು, ಮಾತು ಎರಡನ್ನೂ ಬೆರೆಸಿ ನಾಟಕ ಆಡೋಣ.
ಎಲ್ಲರೂ:
ಸರಿ…. ಸರಿ… ಹಾಗೇ ಮಾಡೋಣ, ಹಾಗೇ ಮಾಡೋಣ
ನೀಲಿ:
ನಾ ಶುರು ಮಾಡ್ತೀನಿ (ಗಂಟಲು ಸರಿ ಮಾಡಿಕೊಂಡು…)
ನನ್ನ ಊರು ನನಗೆ ಚಂದವು
ಗುಡ್ಡ ಬೆಟ್ಟ ನೋಡಲಂದವು
ಕುಂಟ ಪಿಲ್ಲೆ ಆಡಲಾನಂದವು
ತೋಟದಲ್ಲಿ ಜೇನು
ರಸ್ತೆಯಲ್ಲಿ ನಾಯಿ
ಕೆರೆಯಲ್ಲಿ ಕಮಲವು
ಕೇಸರಿ:
ನೀನು ಹೀಗೆ ಹಾಡ್ತಾ ಹೋದರೆ ಹೇಗೆ?
ನಾವು ನಾಟಕ ಶುರು ಮಾಡಬೇಕಲ್ಲಾ…..
ಹಳದಿ:
ಹಾಡೂ ಇರಲಿ ಮಾತೂ ಇರಲಿ
ಹಾಡೂ ಇರಲಿ ಮಾತೂ ಇರಲಿ
ಒಳ್ಳೇ ನಾಟಕ ಮೂಡಿ ಬರಲಿ
ನಮ್ಮಾ ಮೇಲೆ ನಿಮ್ಮಾ ದಯೆಯಿರಲಿ!
ಹಸಿರು:
ಹಾಗಿರಲಿ ಹೀಗಿರಲಿ ಅಂತ ಹಾಡ್ತಾ ಕುಂತರೆ ಹೆಂಗಪ್ಪಾ?
ಬೇಗ ಬೇಗ ನಾಟಕ ಶುರು ಮಾಡೋಣ
ಇಲ್ಲಾ ಅಂದರೆ ಜನ ಎದ್ದು ಹೋದಾರು.
ನೀಲಿ:
(ಕೈ ಮುಗಿದು) ಸರಿಯಪ್ಪಾ ಸರಿ, ನಾಟಕ ಶುರು ಮಾಡೋಣ.
ನೀನು ನಮ್ಮನ್ನೆಲ್ಲಾ ಹೆದರಿಸಬೇಡ.
ಒಳ್ಳೇ ಮಾತಾಡಿ ಹುರಿದುಂಬ್ಸು.
ಕೇಸರಿ:
ನಾಟಕಕ್ಕೆ ಏನು ಹೆಸರಿಡೋಣ?
ಹಸಿರು:
ಬಣ್ಣದ ಹಬ್ಬ
ನಾವಾಡೋ ನಾಟಕದ ಹೆಸರು…..
ಎಲ್ಲರೂ:
ಬಣ್ಣದ ಹಬ್ಬ
ಬಣ್ಣದ ಹಬ್ಬ
ನೀಲಿ, ಕೇಸರಿ:
(ರಂಗದ ಒಂದೊಂದು ತಿದಿಗೆ ಹೋಗಿ ಹೊಸ ಭಂಗಿ ನೀಡಿ)
ಈಗ ಬಣ್ಣದ ಹಬ್ಬ ನಾಟಕ ಶುರೂ…..
(ರಾಜು, ಗೀತಾ, ವೀಣಾ, ಬಾಲು ಮತ್ತು ಇನ್ನೂ ಹೆಚ್ಚು ಮಕ್ಕಳಿದ್ದರೆ
ಅವರೂ ಸೇರಿ ಮೇಳವಾಗಿ ಹಾಡುವರು)
ಮೇಳ:
ಹಬ್ಬ ಹಬ್ಬ ಬಣ್ಣದ ಹಬ್ಬ!
ಕೇಸರಿ ನೀಲಿ ಹಸಿರು!
ವೇಷಗಳಾ ಹೆಸರು!
ಅನ್ನಸಾರು ಕೀರು!
ಹಬ್ಬದ ಪರಿಮಳ ಜೋರು!
ಹಬ್ಬ ಹಬ್ಬ ಬಣ್ಣದ ಹಬ್ಬ!
(ಬಿಳಿ ಬಣ್ಣ ರಂಗಕ್ಕೆ ಬಂದು ದಿಗಣ ಹಾಕಿ ನಿಲ್ಲುವುದು)
ನನ್ನ ಪರಿಚಯ ಹೇಳಿಕೊಳ್ಳದೆ ಮಾತಾಡಿದರೆ ನಿಮಗೂ ಕತೆ ಅರ್ಥವಾಗಲಿಕ್ಕಿಲ್ಲ. ನಾನು ಬಿಳಿ ಬಣ್ಣ. ನಮ್ಮ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ ಕಂಗೊಳಿಸುವ ಬಿಳಿಯೇ ನಾನು. ಹೊಟ್ಟೇಲಿ ಅಹಿಂಸೆಗೆ ಸಂಕೇತದಂತಿರುವ ಅಶೋಕ ಚಕ್ರವನ್ನಿಟ್ಟುಕೊಂಡು ದೇಶದ ಎಲ್ಲೆಲ್ಲೂ ಗಾಳಿಗೆ ಹಾರಾಡ್ತಿದ್ದೇನೆ. ಅಣ್ಣನವರಾದ ಕೇಸರಿಯು ಮೇಲ್ಭಾಗದಲ್ಲೂ, ತಮ್ಮನಾದ ಹಸಿರು ಕೆಳಭಾಗದಲ್ಲೂ ನನ್ನೊಂದಿಗಿದ್ದಾರೆ. ನನ್ನ ಅಕ್ಕನಾದ ನೀಲಿ ನಿಮಗೆಲ್ಲಾ ಗೊತ್ತೇ ಇದೆ.
ಮೇಳ:
ಬಾರೋ ತಮ್ಮ ಬನ್ನಿ ಅಣ್ಣ
ಬಾರೇ ಅಕ್ಕ ಬನ್ನಿರಿ ಎಲ್ಲಾ.
ಬಿಳಿ:
ಬನ್ನಿ ಬನ್ನಿ ಬನ್ನಿ ಬನ್ನಿ.
ನನ್ನ ಮನದಲ್ಲಿ ಹೊಸದೊಂದು ಆಲೋಚನೆ ಬರ್ತಾ ಇದೆ.
ಹಾಗಾಗಿಯೇ ನಿಮ್ಮನ್ನು ಕರೆದದ್ದು.
ಕೇಸರಿ:
ಏನು ಅಂಥಾ ಹೊಸ ಯೋಚನೆ?
ಬಿಳಿ:
ಭೂಲೋಕದ ಈ ಮನುಷ್ಯರನ್ನು ನೋಡಿ. ವರ್ಷದ ಆರಂಭಕ್ಕೆ ಯುಗಾದಿ ನಂತರ ನಾಗರ ಪಂಚಮಿ, ಗಣಪತಿ ಹಬ್ಬ, ದೀಪಾವಳಿ ಹಬ್ಬ, ನವರಾತ್ರಿ, ಕ್ರಿಸ್ ಮಸ್, ಗುಡ್ ಫ್ರೈಡೇ, ಬಕ್ರೀದ್, ರಂಜಾನ್ ಮುಂತಾದ ಧಾರ್ಮಿಕ ಹಬ್ಬಗಳು, ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ, ಮಕ್ಕಳ ದಿನಾಚರಣೆ, ಶಿಕ್ಷಕರ ದಿನಾಚರಣೆ, ಮುಂತಾಗಿ ರಾಷ್ಟ್ರೀಯ ಹಬ್ಬಗಳು-ಹೀಗೆ ಒಂದೇ ವರ್ಷದಲ್ಲಿ ಹಬ್ಬಗಳ ಮೇಲೆ ಹಬ್ಬಗಳನ್ನು ಆಚರಿಸ್ತಾರೆ. ನಮಗೆ ಯಾವ ಹಬ್ಬವೂ ಇಲ್ಲ. ಅದಕ್ಕಾಗಿ ವರ್ಷದಲ್ಲಿ ಒಂದು ದಿನ ನಾವು ಎಲ್ಲಾ ಬಣ್ಣಗಳೂ ಸೇರಿ ಬಣ್ಣದ ಹಬ್ಬ ಆಚರಿಸಬೇಕು ಅನ್ನೋ ವಿಚಾರ ನನ್ನಲ್ಲುಂಟಾಗಿದೆ.
ಹಸಿರು, ನೀಲಿ:
ಒಳ್ಳೇದೇ, ಒಳ್ಳೇದೇ, ವಿಚಾರ ಚೆನ್ನಾಗಿಯೇ ಇದೆ. ನಮ್ಮ ಹಬ್ಬ ಯಾವ ರೀತಿ ಆಚರಿಸೋಣ?
ಮೇಳ:
(ಹಾಡಿಗೆ ತಕ್ಕಂತೆ ಬಿಳಿ ಅಭಿನಯಿಸುವುದು)
ಎಲ್ಲರೂ ಒಟ್ಟಿಗೇ ಸೇರೋಣ
ಹಾಡುತ ನಲಿಯುತ ಕುಣಿಯೋಣ
ಸಿಹಿ ಸಿಹಿ ತಿಂಡಿ ತಿನ್ನೋಣ
ಬಣ್ಣದ ಹಬ್ಬ ಎನ್ನೋಣ
ಬಿಸಿ ಬಿಸಿ ಅನ್ನ ಸಾರು
ಕುಡಿಯಲು ಬೆಚ್ಚನೆ ಕೀರು
ಹಲ್ವಾ, ಪೇಡ, ಮೈಸೂರು ಪಾಕು
ಬ್ರೆಡ್ಡು, ಜಾಮು ಇರಬೇಕು.
ಹಸಿರು, ಕೇಸರಿ, ನೀಲಿ:
ಚೆನ್ನಾಗಿದೆ ಚೆನ್ನಾಗಿದೆ. ಹೀಗಿದ್ದರೆ ನಮ್ಮ ಹಬ್ಬ ಎಷ್ಟು ಮಜವಾಗಿರತ್ತೆ.
ಹಸಿರು:
ಆದರೆ….. ಆದರೆ…….
ಬಿಳಿ:
ಅದೇನಯ್ಯಾ , ಹಸಿರೇ, ಆದರೆ….. ಆದರೆ ಅಂತೀಯಲ್ಲಾ….
ಹಸಿರು:
ಈಗ ಎಲ್ಲಾದರೆ ಬೆಲೆನೂ ಜಾಸ್ತಿ ಆಗಿದೆಯಲ್ಲಾ,
ಹಲ್ವಾ, ಪೇಡ, ಮೈಸೂರು ಪಾಕು
ಬ್ರೆಡ್ಡು ಜಾಮು ಇರಬೇಕು ಅಂತಿಯಾ
ಇದಕ್ಕೆಲ್ಲಾ ದುಡ್ಡೆಷ್ಟಾಗತ್ತೆ ಗೊತ್ತಾ?
ಕೇಸರಿ:
ಹೌದು, ಹೌದು. ಅಕ್ಕಿ ರೇಟು ಜಾಸ್ತಿ ಆಗಿದೆ.
ಬೇಳೆ ರೇಟು ಜಾಸ್ತಿ ಆಗಿದೆ.
ನೀಲಿ:
ರೇಟು ಜಾಸ್ತಿ ಆಗಿದೆ ಅಂತ ಹಬ್ಬ ಮಾಡೋದು ಬಿಡ್ಲಿಕ್ಕಾಗುತ್ತಾ?
ಇದ್ದಿದ್ದರಲ್ಲೇ ಹೊಂದಾಣಿಕೆ ಮಾಡ್ಕೋಬೇಕಪ್ಪಾ!
ಹಸಿರು:
ಅನ್ನ, ಸಾರು, ಕೀರು ಬೇಕೇ ಬೇಕು.
ಹಲ್ವ, ಪೇಡ, ಮೈಸೂರು ಪಾಕು -ಮೂರು ತಿಂಡಿ ಬೇಡ.
ದುಬಾರಿ ಆಗುತ್ತೆ.
ಯಾವುದಾದರೂ ಒಂದನ್ನ ಇಟ್ಕೋಬಹುದು
ಬ್ರೆಡ್ಡು ಜಾಮು ಬಿಟ್ಟು ಬಿಡೋಣ.
ಕೇಸರಿ:
ಬೇಕು, ಬೇಕು, ಬ್ರೆಡ್ಡು ಜಾಮು ಅಂದರೆ ನಂಗೆ ತುಂಬಾ ಇಷ್ಟ.
ನೀಲಿ:
ಪೇಡ ತರ್ಸೋಣ, ಸಿಹಿ ಸಿಹಿ ಪೇಡ ಅಂದರೆ ನಂಗೆ ತುಂಬಾ ಇಷ್ಟ.
ಹಸಿರು:
ಪೇಡ ಪೇಡ. ಮೈಸೂರು ಪಾಕೇ ಇರಲಿ. ಪದರ ಪದರಾಗಿರೋ
ಮೈಸೂರು ಪಾಕ ಬಾಯಲ್ಲಿಟ್ಟರೆ….. ಆಹಾ! ಈಗಲೇ ಬಾಯಲ್ಲಿ
ನೀರು ಬರ್ತಾ ಇದೆ.
(ನೀಲಿ ಮತ್ತು ಹಸಿರಿನ ನಡುವೆ ಪೇಡ ಬೇಕು, ಮೈಸೂರು ಪಾಕು ಬೇಕು,
ಪೇಡ ಬೇಡ, ಮೈಸೂರು ಪಾಕು ಬೇಡ ಅಂತ ಜಗಳ ಶುರುವಾಗತ್ತೆ.
ಬಿಳಿ ಮಧ್ಯೆ ಪ್ರವೇಶಿಸಿ ಮಧ್ಯಸ್ತಿಕೆ ಮಾಡುವನು)
ಬಿಳಿ:
ಜಗಳ ಮಾಡಬೇಡಿ. ಅಯ್ಯೋ! ಬಾಯಲ್ಲಿ ಜಗಳ ಆದರೂ ಪರವಾಗಿಲ್ಲ,
(ಪ್ರೇಕ್ಷಕರಿಗೆ) ಹೊಡಿಯೋದು ಬಡಿಯೋದು ಮಾಡ್ಲೇಬಾರದು.
(ನೀಲಿ ಮತ್ತು ಹಸಿರನ್ನು ಆಕಡೆ ಈಕಡೆ ನಿಲ್ಲಿಸಿ,
ಬಿಳಿ ತಾನು ನಡುವೆ ನಿಂತು ಹೇಳುವನು)
ದುಬಾರಿ ಆಗುತ್ತೆ ಅಂತ ನೀವೇ ಹೇಳ್ತೀರಿ,
ಆ ತಿಂಡಿನೂ ಬೇಕು, ಈ ತಿಂಡಿನೂ ಬೇಕು ಅಂತ ನೀವೇ ಹೇಳ್ತೀರಿ.
ಒಂದು ಕೆಲ್ಸ ಮಾಡೋಣ.
೧೦ ಕೆ.ಜಿ. ಪೇಡ, ೧೦ ಕೆ.ಜಿ. ಮೈಸೂರು ಪಾಕು ತರಿಸಬೇಕು ಅಂತಿದ್ವಿ, ಅಲ್ವಾ?
ಎಲ್ಲರೂ:
ಹೌದು.. ಹೌದು… ಹೌದು…
ಬಿಳಿ:
ಮೂರು ಮೂರು ತಿಂಡಿ ೧೦- ೧೦ ಕೆ.ಜಿ. ತರಿಸೋದು ದುಬಾರಿ ಆಗುತ್ತೆ
ಅಂತ ನೀವು ಹೇಳೋದು ತಾನೆ?
ಹಸಿರು, ನೀಲಿ:
ಹೌದು, ಹೌದು. ಒಟ್ಟು ೧೦ ಕೆ.ಜಿ. ಸಾಕು, ಹೆಂಗೆ ಮಾಡೋಣ?
ಬಿಳಿ:
೫ ಕೆ.ಜಿ. ಪೇಡ, ೫ ಕೆ.ಜಿ ಮೈಸೂರು ಪಾಕು ತರ್ಸೋಣ. ಒಟ್ಟು ೧೦ ಕೆ.ಜಿ. ಆಯ್ತಲ್ಲಾ,
ನಿಮ್ಮ ಸಮಸ್ಯೆನೂ ಬಗೆ ಹರೀತಲ್ಲಾ…..
ಕೇಸರಿ:
(ಅಳುತ್ತಾ) ಬ್ರೆಡ್ಡು ಜಾಮು ಬೇಕೇ ಬೇಕು.
ಮೇಳ:
ಬ್ರೆಡ್ಡು ತಿನ್ನಲು ದುಡ್ಡು
ಬೇಕೇ ಬೇಕು!
ಏನು ಮಾಡೋದು? ಏನು ಮಾಡೋದು?
(ಹಳದಿ ರಂಗಕ್ಕೆ ಬರುವುದು)
ಹಳದಿ:
ದುಡ್ಡು ಬೇಕಾ? ಹೆದರದಿರಿ
ನಾನೇ ಬ್ಯಾಂಕು! ಸಾಲ ಪಡೆಯಿರಿ
ಆದರೆ, ಚೆನ್ನಾಗ್ ದುಡೀರಿ!
ತಿನ್ನಿರಿ, ಕುಡಿಯಿರಿ, ಹಬ್ಬ ಮಾಡಿರಿ!
ಬಡ್ಡಿ ಅಸಲು ಕಟ್ಟಿದರಾಯ್ತು!
ಪುನಃ ಸಾಲ ಮಾಡಿದರಾಯ್ತು!
ದುಡೀರಿ, ಸಾಲ ಪಡೀರಿ!
ದುಡ್ಡು ಬೇಕಾ? ಹೆದರದಿರಿ.
ನಾನೇ ಬ್ಯಾಂಕು! ಸಾಲ ಪಡೆಯಿರಿ!
(ಕೇಸರಿ, ಹಸಿರು, ನೀಲಿ ಎಲ್ಲವೂ ಹಳದಿಯಿಂದ ಸಾಲ ಪಡೆದು
ಖುಷಿಗೊಳ್ಳುವರು)
ಕೇಸರಿ, ಹಸಿರು, ನೀಲಿ:
ನಾವು ಚೆನ್ನಾಗ್ ದುಡೀತೀವಿ
ಸಾಲ ವಾಪಸ್ ಮಾಡ್ತೀವಿ!
ನಾವು ಚೆನ್ನಾಗ್ ದುಡೀತೀವಿ
ಸಾಲ ವಾಪಸ್ ಮಾಡ್ತೀವಿ.
ಈಗೇನ್ ಮಾಡ್ತೀವಿ ಗೊತ್ತಾ?
(ಎಲ್ಲರೂ ಸೇರಿ ಕುಣಿಯುವರು)
ಮೇಳ:
ಎಲ್ಲರೂ ಒಟ್ಟಿಗೇ ಸೇರೋಣ
ಹಾಡುತ ನಲಿಯುತ ಕುಣಿಯೋಣ!
ಸಿಹಿ ಸಿಹಿ ತಿಂಡಿ ತಿನ್ನೋಣ
ಬಣ್ಣದ ಹಬ್ಬ ಎನ್ನೋಣ!
ಬಿಸಿ ಬಿಸಿ ಅನ್ನ ಸಾರು!
ಕುಡಿಯಲು ಬೆಚ್ಚನೆ ಕೀರು!
ಹಲ್ವ ಪೇಡ ಮೈಸೂರು ಪಾಕು
ಬ್ರೆಡ್ಡು ಜಾಮು ಇರಬೇಕು!
ಮೇಳ:
ಹಬ್ಬ ಹಬ್ಬ ನಮ್ಮ ಹಬ್ಬ
ಎಂಥಾ ಮಜ!
ಹಬ್ಬ ಹಬ್ಬಾ ಹಬ್ಬ ಹಬ್ಬಾ
ನಮ್ಗೆಲ್ಲಾ ರಜ!
ತಿಂಡಿ ತಿಂಡಿ ಸಿಹಿ ಸಿಹಿ ತಿಂಡಿ
ನಮಗೇ ಸ್ವರ್ಗದ ಕಿಂಡಿ!
ಮೈಸೂರು ಪಾಕು ಹಲ್ವಾ ಪೇಡ
ಯಾರಿಗೆ ಬೇಡ? ಯಾರಿಗೆ ಬೇಡ?
ಬಿಳಿ:
ಅಣ್ಣ ತಮ್ಮಂದಿರಾದ ಕೇಸರಿ ಹಸಿರುಗಳೇ
ಅಕ್ಕ ನೀಲಿ ಕೇಳಿ ಕೇಳಿ
ನಮ್ಮ ಸೋದರ ಸಂಬಂಧಿಗಳಾದ, ಬಂಧು ಬಾಂಧವರಾದ ಕಪ್ಪು,
ಕಿತ್ತಳೆ, ನೇರಳೆ, ಆಕಾಶನೀಲಿ, ಕಡು ನೀಲಿ, ತಾವರೆಗೆಂಪು,
ಗುಲಾಬಿ, ಸಂಜೆಗೆಂಪು ಮುಂತಾಗಿ ಎಲ್ಲಾ ಬಣ್ಣಗಳ
ಬಳಿಗೂ ಹೋಗಿ ಹಬ್ಬದ ವಿಷಯ ಹೇಳಿ ಕರೆದು ಬನ್ನಿ. ಹಬ್ಬದ
ಕರೆಯನ್ನು ಮಾಡುವಾಗ ಒಂದು ವಿಶೇಷ ಎಚ್ಚರಿಕೆ ಉಂಟು.
ಹಸಿರು:
ಏನು ವಿಶೇಷ ಎಚ್ಚರಿಕೆ ಅಣ್ಣಯ್ಯಾ?
ಬಿಳಿ:
ನಮಗೆಲ್ಲಾ ಆಗದ ಬಣ್ಣವೊಂದುಂಟಲ್ಲಾ? ಅದಕ್ಕೆ ಮಾತ್ರ
ಆಹ್ವಾನ ನೀಡಬಾರದು. ತಿಳೀತಾ?
(ಉಳಿದ ಬಣ್ಣಗಳು ಮೊದಲು ತಿಳಿಯದಂತೆ, ಬಿಳಿ ಗುಟ್ಟಾಗಿ ಹೇಳಿದ ನಂತರ
ತಿಳಿದಂತೆ ನಟಿಸುವುವು)
ಕೇಸರಿ, ಹಸಿರು, ನೀಲಿ:
ಹಾಂ, ಹಾಂ, ಹಾಂ ಗೊತ್ತಾಯ್ತು, ಗೊತ್ತಾಯ್ತು
ನಾವಿನ್ನು ಹೊರಡುತ್ತೇವೆ.
ಬಿಳಿ:
ಸರಿ ಸರಿ ಹೋಗೋಣ ಹೋಗೋಣ.
(ಮರೆಯಾಗುವರು, ಕತ್ತಲು)
ಭಾರೀ ಚಂಡೆಯ ಅಬ್ಬರ, ಕೋಪದ ಕೆಂಪು ಅಂದರೆ ಕಡು ಕೆಂಪು ಬಣ್ಣದ
ರಾಕ್ಷಸ ವೇಷದ ಪ್ರವೇಶ, ಆರ್ಭಟದ ಕುಣಿತದಲ್ಲಿ ಸುತ್ತು ಹಾಕುವುದು)
ಕೆಂಪು:
ಓಹೋಯ್ ಯಾರೆಂದು ಕೇಳಿದ್ದೀರಿ.
ಮೇಳ:
ಯಾರು ಸ್ವಾಮಿ?
ಕೆಂಪು:
ಕೋಪ ಕೋಪ. ಅಂದರೆ ಸಿಟ್ಟು
ಎಂದಾದರೂ ಮಾಡಿದ್ದೀರೇನು?
ಮನುಷ್ಯರು ಅಂದರೆ ಮಾಡಿರಲೇಬೇಕು ನೀವು?
ಕೋಪ ಬಂದಾಗ ಮುಖಾ ಎಲ್ಲಾ ಕೆಂಪಾಗಿತ್ತು ಎಂದು
ಹೇಳೋದಿಲ್ವೇ? ಅದೇ ಕೆಂಪು ನಾನು.
(ಭಾರೀ ಸಿಟ್ಟಿನಿಂದ) ಎಲ್ಲಿದ್ದಾರೆ ಹೇಳಿ ಅವರೆಲ್ಲಾ?
ಮೇಳ:
ಇದೇನು ಸ್ವಾಮಿ, ಈ ರೀತಿ ಸಿಟ್ಟು? ಅವರು ಅಂದರೆ ಯಾರು?
ಕೆಂಪು:
ನಿಮಗೆ ವಿಷಯವೇ ಗೊತ್ತಿಲ್ಲವೋ ಹ್ಯಾಗೆ?
ಬಣ್ಣಗಳೆಲ್ಲಾ ಸೇರಿ ಹಬ್ಬ ಮಾಡ್ತವೆಯಂತೆ, ಬಿಳಿ ಬಣ್ಣದ
ಯಜಮಾನಿಕೇಲಿ ಈ ಹಬ್ಬ ನಡೆಯುತ್ತೆ.
ಹಸಿರು, ನೀಲಿ, ಕೇಸರಿ, ಹಳದಿ, ಗುಲಾಬಿ, ಹೀಗಿ ಸಕಲ
ಬಣ್ಣಗಳಿಗೂ ಬಿಳಿಯ ಆಹ್ವಾನ ನೀಡಿದ್ದಾನೆ.
ಮೇಳ:
ಒಳ್ಳೆಯದೇ ಆಯ್ತಲ್ಲ, ಸ್ವಾಮೀ.
ಕೆಂಪು:
ನನಗೆ ಆಹ್ವಾನವನ್ನೇ ನೀಡಿಲ್ಲ, ಈ ರೀತಿ ಅವಮಾನ ಮಾಡಿದ
ನಾನೇನು ಮಾಡ್ತೇನೆ ನನಗೇ ಗೊತ್ತಿಲ್ಲ. ಮಾಡಬಹುದೋ ಹೀಗೆ?
ಮೇಳ:
ಹೀಗೆ ಮಾಡಬಾರದು ನಿಜ. ಈಗ ನೀವೇನು ಮಾಡ್ತೀರಿ?
ಕೆಂಪು:
ಆಹ್ವಾನ ಕೊಡದೇ ಇದ್ದರೆ ಏನಂತೆ? ಹಬ್ಬ ನಡೆಸೋ ಜಾಗಕ್ಕೇ
ಹೋಗ್ತೇನೆ. ಎಲ್ಲಾ ಬಣ್ಣಗಳಿಗೂ ಬುದ್ದಿ ಕಲಿಸ್ತೇನೆ. ನೋಡ್ತಾ ಇರಿ.
(ಪುನಃ ಆರ್ಭಟ ಮಾಡುತ್ತಾ ಮರೆಯಾಗುವನು)
ಕತ್ತಲು.
ಬಿಳಿ, ಹಸಿರು, ಕೇಸರಿ ರಂಗದ ತುಂಬಾ ಹೂವು, ಬಲೂನು
ಜೋಡಿಸುತ್ತಿವೆ)
ಮೇಳ:
ಬಣ್ಣಗಳೆಲ್ಲಾ ಒಂದೆಡೆ ಸೇರುತ್ತ
ಹಬ್ಬದ ಸಿದ್ಧತೆ ಮಾಡುತ್ತ
ತತ್ತತ್ತಾ ತತ್ತತ್ತಾ ತತ್ತತ್ತಾ….
ತಾರಾ ತಾರಾ ತತ್ತತ್ತಾ…
(ಒಂದೊಂದು ಬಣ್ಣಗಳು ಕುಣಿಯುತ್ತ ಪ್ರವೇಶ ಮಾಡುತ್ತವೆ)
ಗುಲಾಬಿ:
ನಾನು ಯಾರು ಗೊತ್ತೇ?
ಗುಲಾಬಿ ಬಣ್ಣ
ನನ್ನ ಬಣ್ಣಕ್ಕೆ ಮರುಳಾಗದವರೇ ಇಲ್ಲಣ್ಣ!
ಸಂಜೆಗೆಂಪು:
ನಾನು ಯಾರು ಗೊತ್ತಾ?
ಸಂಜೆಗೆಂಪು ಸಂಜೆಗೆಂಪು
ನೋಡಲಿ ಮನಸಿಗೆ ತಂಪು
ನೋಡಲು ಮನಸಿಗೆ ತಂಪು
ಕಿತ್ತಳೆ ಬಣ್ಣ:
ನಾನು ಯಾರು ಗೊತ್ತೆ?
ಕಿತ್ತಳೆ ಬಣ್ಣ
ತಿಂದಿದ್ದೀರಾ ಹಣ್ಣ!
ಕಪ್ಪು:
ನಾನು ಯಾರು ಗೊತ್ತೆ?
ಕಪ್ಪು ಕಪ್ಪು ಕಪ್ಪು
ಮಾಡೋದಿಲ್ಲ ತಪ್ಪು
ಆಗೋದಿಲ್ಲ ಬೆಪ್ಪು!
ಆಕಾಶನೀಲಿ:
ನಾನು ಯಾರು ಗೊತ್ತೇ?
ಆಕಾಶದ ನೀಲಿ
ಬನ್ನಿ ಬನ್ನಿ ಹಾಡಿ ತೇಲಿ
ಕಂದು:
ನಾನು ಯಾರು ಗೊತ್ತೇ?
ಕಂದು ಕಂದು ಕಂದು
ನನಗೆಂದೂ ಇಲ್ಲ ಕುಂದು
ಹಳದಿ:
ನೋಡಿರಿ ಅಣ್ಣಾ
ನಾನು ಹಳದಿ ಬಣ್ಣ!
(ಹೀಗೆ ವಿಧ ವಿಧ ಬಣ್ಣಗಳು ರಂಗಕ್ಕೆ ಬರುವುವು)
ಮೇಳ:
ಬಣ್ಣಗಳಾ ಹಬ್ಬ ಇಂದು
ಬಣ್ಣ ಬಣ್ಣ ಬಣ್ಣಾ!
ಬಗೆ ಬಗೆ ತಿಂಡಿ ತಿಂದು
ಕುಣಿಯಿರಿ ಅಕ್ಕ ಅಣ್ಣ!
ಕೈ ಕೈ ಹಿಡಿದು ಕುಣಿಯೋಣ
ಬಣ್ಣದ ಕನಸಿದು ನಲಿಯೋಣ!
(ಬಿಳಿ ಕೇಸರಿ ಹಸಿರುಗಳು ಸುತ್ತಲೂ ಲಗುಬಗೆ ಓಡಾಟ ಮಾಡುತ್ತಿವೆ. ಸಣ್ಣಗೆ
ಅಹ್ಲಾದಕರ ಸಂಗೀತವಿದೆ. ಅಲ್ಲಲ್ಲೇ ನಿಂತು ತಿಂಡಿ ತಿನ್ನುವ, ಕೀರು ಕುಡಿಯುವ
ನಟನೆ. ತಾವೇ ವಾದ್ಯಗಳನ್ನು ನುಡಿಸುತ್ತವೆ. ನಿಧಾನ ಕೈ ಕೈ ಹಿಡಿದು ನೃತ್ಯ
ಆರಂಭಿಸುತ್ತವೆ. ಬಣ್ಣದ ಬೆಳಕಿನಲ್ಲಿ ನರ್ತನ. ಇದ್ದಕ್ಕಿದ್ದಂತೇ ಚಂಡೆಯ ಆರ್ಭಟ.
ರಂಗದ ಮುಂಭಾಗಕ್ಕೆ ಕೋಪದ ಕೆಂಪಿನ ಪ್ರವೇಶ. ದೃಷ್ಟಿ ಪ್ರೇಕ್ಷಕರ ಕಡೆ.
ಅದರ ಹಿಂಭಾಗ ನರ್ತನ ಸಾಗಿದೆ.)
ಕೆಂಪು:
ಇದೇನು? ಬಗೆಬಗೆಯ ಬಣ್ಣ ಸೇರಿ ಹೀಗೆ ನರ್ತಿಸುತ್ತಿವೆ.
ನೋಡಿ, ಅಬ್ಬಾ ಇವುಗಳ ಸೊಕ್ಕೇ! ನನ್ನನ್ನು ಆಹ್ವಾನಿಸದೆ
ಅಪಮಾನ ಮಾಡಿ ಮೋಜು ಮಾಡುತ್ತಿವೆ. ಇವುಗಳ ಧಿಮಾಕಿಳಿಸುವೆ.
ಯಾರಲ್ಲಿ? ಬಾಗಿಲು ತೆಗೆಯಿರಿ
(ಪುನಃ ಚಂಡೆಯ ಆರ್ಭಟ. ಕುಣಿಯುತ್ತಿದ್ದವರು ಹೆದರಿ ಹೌಹಾರುವರು
ಇಣುಕಿ ನೋಡುವರು)
ಉಳಿದ ಬಣ್ಣಗಳು:
ಬಿಳಿಯಣ್ಣಾ, ಬಿಳಿಯಣ್ಣಾ, ಕೋಪದ ಕೆಂಪು ಹೊರಗಡೆ ಬಂದು
ಘರ್ಜನೆ ಮಾಡ್ತಾದ್ದಾನೆ. ಕೋಪದಿಂದ ಮುಖಾ ಅಂತೂ ಇನ್ನೂ ಕೆಂಪಾಗಿದೆ.
(ಕೆಂಪಿನ ದೃಷ್ಟಿ ಪ್ರೇಕ್ಷಕರತ್ತಲೇ ಇದೆ. ಅವನ ಎಡಭುಜದ ಬಳಿ ಬಿಳಿ ಬರುವನು)
ಬಿಳಿ:
ನೋಡಯ್ಯಾ ಕೋಪದ ಕೆಂಪೇ, ನಿನ್ನನ್ನು ಕರೀದೇ ಅವಮಾನ ಮಾಡಬೇಕು
ಅನ್ನೋದು ನಮ್ಮ ಉದ್ದೇಶ ಅಲ್ಲ, ಚೆನ್ನಾಗಿ ಹಾಡ್ತಾ ಕುಣೀತಾ
ಸಂತೋಷದಿಂದ ಇರುವಾಗ ನಿನ್ನ ಹಾಗೆ ಸಿಟ್ಟು ಮಾಡಿ ಮುಖ ಕೆಂಪಗೆ
ಮಾಡಿಕೊಂಡರೆ ಹಬ್ಬ ಹಾಳಾಗತ್ತೆ ಅಂತ ನಿನ್ನ ಹೊರಗಿಟ್ಟಿದ್ದೀವಿ. ನೀನು ಕೋಪ
ಬಿಟ್ಟು ಸಂತೋಷದಿಂದ ನಮ್ಜೊತೆ ಬರೋದಾದರೆ ಬಾಗಿಲು ತೆಗೀತೀವಿ.
(ಗುಲಾಬಿ, ಹಳದಿ, ಕಿತ್ತಳೆ, ನೀಲಿ ಮುಂತಾದವು ಕೆಂಪಿನ ಆಚೆ ಈಚೆ ನಿಲ್ಲುವವು)
ಗುಲಾದಿ, ಹಳದಿ ,ಹಸಿರು:
ತೊಲಗು ಆಚೆ ಕೋಪವೇ
ಬಾ ಬಾ ನಗುವೆ
ಕಿತ್ತಳೆ, ನೀಲಿ, ಕಂದು:
ರುದ್ರವೇ, ಭಯಂಕರವೇ
ತೊಲಗು ತೊಲಗು ಆಚೆಗೆ
ಶಾಂತಿಯೇ, ಸಮಾಧಾನವೇ
ಬಾ ಬಾ ಈಚೆಗೆ ಈಚೆಗೆ!
ಕಪ್ಪು, ಆಕಾಶ ನೀಲಿ, ಕೇಸರಿ:
ಕೋಪ ತಾಪ ಏತಕೆ ಬೇಕು
ಇಲ್ಲಿರೋದೇ ಸಂತೋಷ ಆನಂದಾ
ಇದನೇ ನಾವು ಹೆಚ್ಚಿಸುವಾ, ಉಕ್ಕಿಸುವಾ
ತುಂಬಿ ತುಳುಕಿಸಿ ಉಕ್ಕಿಸುವಾ
(ಹೀಗೆ ಹೇಳುತ್ತಿದ್ದಂತೆ ಕೋಪದ ಕೆಂಪು ತನ್ನ ಕೆಂಪನೆಯ ರುದ್ರ ಮುಖವಾಡ ಕಿತ್ತೆಸೆಯುತ್ತದೆ.
ಕೆಂಪು ಪೇಟ ತೆಗೆಯುತ್ತದೆ, ಎಲ್ಲಾ ಬಣ್ಣಗಳತ್ತ ನೋಡಿ ಮೊಟ್ಟ ಮೊದಲಿಗೆ ನಗುವುದು.
ಸಂತೋಷದಲ್ಲಿ ಕೈ ಮೇಲೆತ್ತುವುದು)
ಕೆಂಪು:
ಕೋಪದಿಂದ ಕೆಟ್ಟೆ ಕೆಟ್ಟೆ
ಕೋಪವನ್ನು ಬಿಟ್ಟೆ ಬಿಟ್ಟೆ
(ಉಳಿದ ಬಣ್ಣಗಳು ಕೆಂಪಿನ ಕೈ ಹಿಡಿದುಕೊಳ್ಳುವವು. ಪ್ರೇಕ್ಷಕರಿಗೆ ಬೆನ್ನಾಗಿ
ಕೆಂಪನ್ನು ತಿರುಗಿಸಿಕೊಳ್ಳುವವು)
ಮೇಳ:
ತೊಲಗು ಆಚೆ ಕೋಪವೇ
ಬಾ ಬಾ ನಗುವೇ
ಕೋಪ ತಾಪ ಏನಕೆ ಬೇಕು?
ಇಲ್ಲಿರೋದೆ ಸಂತೋಷ ಆನಂದಾ
ಇದನ್ನೇ ನಾವು ಹೆಚ್ಚಿಸುವಾ, ಉಕ್ಕಿಸುವಾ
ತುಂಬಿ ತುಳುಕಿಸಿ ಉಕ್ಕಿಸುವಾ
ಕೋಪ ಕೋಪ ಕೆಟ್ಟ ರೂಪ
ಬಿಡು ಬಿಡು ಅದನು
ಇರಲಿ ಸಂತಸವು
ಸಿಟ್ಟು ಸಿಟ್ಟು ಆಚೆಗೆ ಅಟ್ಟು
ನಗುವ ಹೂವಿನ ಹಾಗೆ ಇರಲಿ ಮನವು
ಸಂತಸ ಇರಲಿ ಎಲ್ಲರಿಗೂ
ಇರಲಿ ಆನಂದ
ಆನಂದಾ ಮಹದಾನಂದಾ
ಪರಮಾನಂದಾ
(ಮೌನ)
ಆನಂದ ಆನಂದ
ಮಹದಾನಂದಾ ಪರಮಾನಂದಾ!
(ಅಹ್ಲಾದಕರ ಸಂಗೀತ ಕೇಳುತ್ತಿರುತ್ತದೆ. ಎಲ್ಲಾ ಬಣ್ಣಗಳೂ ಕುಣಿಯುತ್ತಿರುತ್ತವೆ)