ನವಿಲುಗರಿ – ೧೫

ನವಿಲುಗರಿ – ೧೫

‘ದೊಡ್ಡ ತ್ಯಾಗಮಯಿ ನೀನು… ದಡ್ಡ. ನಿನ್ನ ಓದಿಗೆ ಕೆಲಸ ಸಿಕ್ಕರೂ ಎಷ್ಟೋ ಸಂಬಳ ಬರುತ್ತೆ. ಅಸಲು ನಿನಗೆ ಕೆಲಸ ಕೊಡೋರಾದರೂ ಯಾರು? ನಿನಗೆ ಬರೋ ಸಂಬಳ ನಿನ್ನ ಹೊಟ್ಟೆಗೇ ಸಾಲ್ದು. ಮದುವೆಗೆ ಬೇಕಾಗಿರೋದು ಲಕ್ಷಗಟ್ಟಲೆ ಹಣ. ಖರ್ಚು ಮಾಡ್ದೆ ಕೂಡಿಟ್ಟರೂ ಅದು ಎರಡು ಮೂರು ಲಕ್ಷಗಳಷ್ಟಾಗಬೇಕೆಂದರೆ ಮೂರು ನಾಲ್ಕು ವರ್ಷಗಳಾದ್ರೂ ಬೇಕು ಅದೂ ತಟ್ಟಂತ ಕೆಲಸ ಸಿಕ್ಕರೆ. ಆ ಕಾಲಕ್ಕೆ ಕಾವೇರಿ ತಲೆಯಲ್ಲಿ ಬೆಳ್ಳಿ ಮೂಡಿರ್ತವೆ’ ಮಾಧುರಿ ಚುಡಾಯಿಸಿದಳು. ರಂಗನಿಗೂ ಹೌದಲ್ಲಾ ಎನಿಸಿತು. ಲಾಟರಿ ಟಿಕೇಟ್ ಸರ್ಕಾರ ನಿಲ್ಲಿಸಬಾರದಿತ್ತು ಅದರಿಂದಲಾದರೂ… ಥುತ್ ಎಂದುಕೊಂಡ ರಂಗ, ಅವರ ತರ್ಕ ವಾಸ್ತವ ಅನ್ನಿಸಿತು. ಆದರೂ ಏನಾದರೂ ಮಾಡಬೇಕು ಎಂದು ಮನ ಚಂಡಿ ಹಿಡಿದಿತ್ತು. ಆಗಲೆ ಲಾಯರ್ ಅಣ್ಣ ಒಂದು ಪರಿಹಾರ ಸೂಚಿಸಿದ. ‘ನೋಡು, ತಂಗಿ ಮದುವೆ ಮಾಡಬೇಕೆಂಬುದೇ ನಿನ್ನ ನಿಜವಾದ ಗುರಿಯಾಗಿದ್ದಲ್ಲಿ ಒಂದು ಮಾರ್ಗವಿದೆ ಮಾಡ್ತೀಯಾ?’ ರಂಗ ಹಿಗ್ಗಿ ಹೋದ. ‘ಹೇಳಣ್ಣಾ ಕೂಲಿ ಮಾಡೋಕೂ ನಾನು ಸಿದ್ದ’ ಅಂದ.

‘ಪೆದ್ದ. ಕೂಲಿ ಮಾಡಿದ್ರೆ ಲಕ್ಷಗಟ್ಟಲೆ ಸಿಗುತ್ತೇನೋ? ಇಲ್ಲಿ ಕೇಳು. ಈ ಸಲ ಕೂಡ ದುಗ್ಗಮ್ಮನ ಜಾತ್ರೆ ಹತ್ತಿರ ಬರ್ತಾ ಇದೆ. ಹೋದ ಸಲ ನೀನು ಮರಾಠಿ ಉಸ್ತಾದನ್ನ ಸೋಲಿಸಿದೆ. ಆಗ ಪಾಳೆಗಾರರು ನಿನಗೆ ಏನ್ ಬೇಕೋ ಕೇಳು ಭೂಮಿ ಕಾಣ್ಕೆ ಕ್ಯಾಷು ಅಂತೆಲ್ಲಾ ಓಪನ್ ಸಭೆಯಲ್ಲಿ ಆಫರ್ ಕೊಟ್ಟರಲ್ಲ… ಗ್ಯಾಪ್ಕ ಇದೆಯೇನೋ?’ ಅಣ್ಣನ ಮಾತಿಗೆ ರಂಗ ತಲೆ ಆಡಿಸಿದ.

‘ನೀನು ದೊಡ್ಡ ಕೋಟ್ಯಾಧೀಶನ ಮಗನಂತೆ ಬೇಡ ಅಂದುಬಿಟ್ಟೆ. ಬೇಕಾದ್ರೆ ಈಗ್ಲೂ ಹೋಗು… ಕೇಳು. ಮಾತು ಕೊಟ್ಟೋರು ಆವತ್ತು ಬೇರೆಯಾರೂ ಅಲ್ಲ. ಭರಮಪ್ಪನಾಯಕರು, ಮಾತಿಗೆ ತಪ್ಪೋರಲ್ಲ… ಹಿರೀಕರು, ಅವರ ಕಾಲು ಹಿಡಿದು ಒಂದು ಮಾತು ಕೇಳು. ನಾನೂ ಜೊತೆಗೆ ಬರ್ತಿನಿ. ಕೇಳೋದು ಕೇಳ್ತೀಯಾ ಹತ್ತು ಲಕ್ಷ ಕೇಳಿಬಿಡು. ಹೆಂಗೂ ಮನೆ ಹಳೇದಾಗಿದೆ ರಿನೋವೇಶನ್ ಮಾಡಿಸಬಹುದು. ಉಳಿದಿದ್ದರಲ್ಲಿ ಕಾವೇರಿ ಮದುವೇನೂ ಮುಗಿಸಬಹುದು’ ರಂಗ ತಕ್ಷಣ ತಲೆತುರಿಸಿಕೊಂಡ. ‘ಖಂಡಿತ ಅವರ ಮೂರುಕಾಸೂ ಬೇಡ…’ ನನ್ನ ಅಣ್ಣ ಹೋಗಿ ಪಾಳೇಗಾರರ ಪಾದ ಹಿಡಿಯೋದು ಬೇಡೋದೂ ಬೇಡ. ನನಗೆ ಮದುವೆಯಾಗ್ದೆ ಹೋದ್ರೂ ಸರಿ, ರಂಗ ಯಾರ ಎದುರೂ ತಲೆಬಾಗಬಾರ್‍ದು’ ಕಾವೇರಿ ಆವೇಶದಿಂದ ತಳಮಳಿಸಿದಳು. ರಂಗನ ಕಣ್ಣಲ್ಲಿ ನೀರಾಡಿತು.

‘ಇಂತಹ ಒಣ ಜಂಭಕ್ಕೇನೂ ಕಡಿಮೆಯಿಲ್ಲ’ ರಾಗಿಣಿ ತಟ್ಟನೆ ಅಂದಳು

‘ಇದು ಜಂಬ ಅಲ್ಲ ಸ್ವಾಭಿಮಾನ ಅತ್ತಿಗೆ… ನಿಮಗಿದೆಲ್ಲಾ ಅರ್ಥವಾಗೋಲ್ಲ ಬಿಡಿ’ ನೇರವಾಗಂದಳು ಕಾವೇರಿ.

‘ಏನೋ ಒಂದು ಒಳ್ಳೆ ಅವಕಾಶವೇ ಇದು. ಅಣ್ಣ ಜ್ಞಾಪಿಸಿದ್ದರಲ್ಲಿ ತಪ್ಪೇನಿದೆ? ಸಾಲಸೋಲ ಮಾಡ್ದೆ ಲಕ್ಷಗಟ್ಟಲೆ ಹಣ ಸಿಗೋವಾಗ ದೊಡ್ಡವರಿಗೆ ಶರಣಾದರೇನು? ಈವತ್ತು ದುಡ್ಡು ಇಲ್ದೆ ಚರಾಚರವೂ ಚಲಿಸೋಲ್ಲಯ್ಯ’ ಗಣೇಶ ತಿಳಿಹೇಳಿದ.

‘ಇದೆಲ್ಲಾ ಜುಜುಬಿ ಲಕ್ಷವೆಲ್ಲಾ ಯಾಕೆ. ಪಾಳೇಗಾರರ ಮನೆತನಕ್ಕೆ ಇರೋಳು ಒಬ್ಬಳೆ ಮಗಳು. ಅವಳನ್ನೇ ಬುಟ್ಟಿಗೆ ಹಾಕ್ಕೊಂಡ್ರೆ ಕೋಟಿಗಟ್ಟಲೆ ಆಸ್ತಿಗೆ ಒಡೆಯನಾಗ ಬಹುದೆಂಬ ಮಲ್ಟಿಕಲರ್ ಡ್ರೀಮ್?’ ಕೆಣಕಿದ ಪರಮೇಶಿ.

‘ಬುಟ್ಟಿಗೆ ಹಾಕ್ಕೋಳೋಕೆ ಹೋದ್ರೆ ಚಟ್ಟಕಟ್ಟಿಬಿಡ್ತಾರೆ ಇವನಿಗೆ. ಅವರೇನು, ಅವರ ಸ್ಟ್ರೆಂಥ್ ಏನು? ಮೊನ್ನೆ ಮುಂದಿನ ಸಿ‌ಎಂ ಆಗೋವಂತಹ ದುರ್ಗಸಿಂಹ, ಅವರ ಮಗನನ್ನೇ ಜಾಡಿಸಿ ಒದ್ದು ಓಡಿಸಿದಾರೆ.. ಇನ್ನು ಇವನ್ಯಾವ ಗೊಂಜಾಯಿ’ ಲಾಯರ್ ಬಣ್ಣನೆ ನಡೆಯಿತು.

‘ತಂಗಿ ಮೇಲೆ ಅಷ್ಟೊಂದು ಅಕ್ಕರೆ ಇದ್ದರೆ, ಚಿನ್ನು ಮೇಲಿನ ಆಸೆಗೆ ಎಳ್ಳು ನೀರು ಬಿಟ್ಟು ಹಣ ಕೇಳು… ಅದಪ್ಪಾ ತ್ಯಾಗ, ಸುಮ್ನೆ ಬಾಯಲ್ಲಿ ಬೆಲ್ಲ ಸುರಿಸಿದರೇನಪ್ಪಾ ಪ್ರಯೋಜನ’ ಪಾರ್ವತಿಯ ಹಿತವಚನ.

‘ಬೇಡ… ಅದೆಲ್ಲಾ ಏನೂ ಬೇಡ’ ಸಿಡಿಲಿನಂತೆ ಧ್ವನಿಯೊಂದು ಕೇಳಿತು. ಆ ಧ್ವನಿ ಅಡಿಗೆ ಕೋಣೆಯಿಂದಾಚೆ ಬಂದ ಕಮಲಮ್ಮನವರದಾಗಿತ್ತು. ಲಾಯರ್‍ಗೆ ಎಲ್ಲೆಲ್ಲೋ ಉರಿ ಹತ್ತಿತು. ‘ಬೇಡ ಅಂದ್ರೆ… ಏನ್ ಬೇಡ? ಯಾಕ್ ಬೇಡ’ ಎಂದು ಗದರಿದ.

‘ರಂಗ ಪಾಳೇಗಾರರ ಮನೆಗೆ ಹೋಗಿ ಭಿಕ್ಷೆ ಬೇಡೋದೂ ಬೇಡ, ಹಂಗೆ ಅವನು ಓದು ನಿಲ್ಲಿಸೋದೂ ಬೇಡ. ಇದಕ್ಕೆ ನನ್ನ ಒಪ್ಪಿಗೆಯಿಲ್ಲ’ ಕಮಲಮ್ಮಳ ಮಾತಿನಲ್ಲಿ ಆವೇಶ ಆಕ್ರೋಶ ಎರಡೂ ಕಂಡಿತು. ಏದುಸಿರು ಬಿಡುತ್ತಿದ್ದಳು.

‘ಅಮ್ಮಾ…’ ಎಂದ ನೋವು ಹತಾಶೆಯಿಂದ ತತ್ತರಿಸುತ್ತಾ ರಂಗ.

‘ನನ್ನಾಣೆ ಇದೆ… ಸಾಕು ಮಾಡಿ ಈ ಚರ್ಚೆ. ನೀನು ಕಾಲೇಜಿಗೆ ಹೋಗೋ ಕತ್ತೆ. ನಿನಗೆ ಓದೋಕೆ ಇಷ್ಟವಿಲ್ಲದಿದ್ದರೆ, ಓದೋದು ಕಷ್ಟವಾಗಿದ್ದರೆ ನಿನ್ನನ್ನು ಓದು ಅಂತ ಬಲವಂತ ಮಾಡಲ್ಲ. ಆದರೆ ಈ ನೆಪದಲ್ಲಿ ತಂಗಿಯ ಮದುವೆ ಕಾರಣ ಒಡ್ಡಿ ಕಾಲೇಜು ಬಿಡೋ ನಾಟ್ಕ ಬೇಡ’ ಕಮಲಮ್ಮ ಜಾಡಿಸಿದಳು. ಅಮ್ಮ ಕೂಡ ತನ್ನನ್ನು ಅಪಾರ್ಥ ಮಾಡಿಕೊಂಡು ಹೀಯಾಳಿಸಿ ಮಾತನಾಡಿದಾಗ ರಂಗನ ಆತ್ಮಸ್ಥೆರ್ಯ ಕುಸಿದಂತೆ ಭಾಸ. ತಾಯಿಗೆ ಈಗಾಗಲೆ ನೋವಾಗಿದೆ ತಾನೂ ವಾದಕ್ಕಿಳಿಯುವುದು ಬೇಡವೆಂದು ಮೌನಕ್ಕೆ ಶರಣಾದ.

ರಂಗ ಕಾಲೇಜಿಗೆ ಬಂದರೂ ಪಾಠ ತಲೆಗೆ ಇಳಿಯಲಿಲ್ಲ. ಸಂಗ್ರಾಮ ಗೆಳೆಯರೊಂದಿಗೆ ಇದ್ರೂ ವಿಷಣ್ಣವದನ. ಅವನ ತಲೆಗೆ ಎಂದೂ ಪಾಠ ಇಳಿದಿದ್ದೇಯಿಲ್ಲ. ಅವನದ್ದು ಯಾವಾಗಲೂ ‘ಬೇಟೆಯಾಡುವ’ ಗುಣ. ನೇರವಾಗಿಯಾದರೂ ಸರಿ ಮರೆಯಲ್ಲಿ ನಿಂತಾದರೂ ಸೈ ಮೋಸದಿಂದಲಾದರೂ ಅವನು ಎವರ್‌ರೆಡಿ. ಅವನ ತಲೆಯ ನರಗಳೆಲ್ಲವೂ ‘ಚಿನ್ನು ಚಿನ್ನು’ ಅಂತಲೆ ಪಟಪಟನೆ ಸಿಡಿಯುತ್ತಿದ್ದು ಆದ ಅಪಮಾನಕ್ಕೆ ಪಕ್ಕಾ ಸೇಡು ತೀರಿಸಿಕೊಳ್ಳುವ ಆತುರ. ತಮ್ಮಂತಹ ಪ್ರಬಲರನ್ನು ಕೋಟಿಗಟ್ಟಲೆ ಲಾಭದಲ್ಲಿ ತೊಡಗಿಸಿಕೊಂಡ ಪಾರ್ಟ್ನರ್‍‌ಗಳನ್ನು ರಾಜಕೀಯ ಪ್ರಭಾವಿಗಳನ್ನು ಅಷ್ಟೊಂದು ಲಘುವಾಗಿ ನಡೆಸಿಕೊಳ್ಳುವುದೆ? ಮೈ ಮೇಲೆ ಕೈ ಮಾಡುವುದೆ? ಸೀಮೆಗಿಲ್ಲದ ಹೆಣ್ಣಾ ಅವಳು? ಅವಳದ್ದೇನು ಚಿನ್ನದ್ದಾ ಮಯ್ಯಿ? ಎಲ್ಲರೆದುರೂ ಆದ ಮುಖಭಂಗ ತೇಜೋವಧೆಯಿಂದಾಗಿ ಅಂದು ದುರ್ಗಸಿಂಹ ಬೇಟೆ ಎದುರಿಗಿದ್ದರೂ ಬೇಟೆಯಾಡಲಾಗದ ಮುದಿಸಿಂಹದಂತೆ ಪರಿತಪಿಸಿದ್ದ. ಹಸಿದ ಸಿಂಹ ಎಷ್ಟು ದಿನ ತಾಳಿಕೊಂಡೀತು. ಹೊಂಚು ಹಾಕಿಯಾದರೂ ವಂಚಿಸಿಯಾದರೂ ತನ್ನ ಹಸಿವನ್ನು ತಣಿಸಿಕೊಳ್ಳದೆ ಇದ್ದೀತೆ?

ದುರ್ಗಾಂಬಿಕಾ ಜಾತ್ರೆ ಸಮೀಪಿಸಿದಂತೆಲ್ಲಾ ಬಜಾರ್‌ನಲ್ಲಿ ಅಂಗಡಿ ಮುಗ್ಗಟ್ಟುಗಳು ಬಿದ್ದವು. ತಿಂಡಿ ಅಂಗಡಿ ಸ್ವೀಟ್ಸ್ ಅಂಗಡಿಗಳ ಪುಟ್ಟ ಅಂಗಡಿ ಗುಡಾರದ ಅಂಗಡಿಗಳು ಬಳೆ ಮುತ್ತಿನ ಸರ ರೆಡಿಮೇಡ್ ವಸ್ತಗಳ ಗಿಲೀಟಿನ ಒಡವೆಗಳ ಸಾಲು ಸಾಲು ಅಂಗಡಿಗಳು ತೆರೆದುಕೊಂಡವು. ಕಾಯಿ ಕರ್ಪೂರದ ದುಖಾನುಗಳು ಮಂಡಕ್ಕಿ ಬೋಂಡಾ ಬೆಂಡು ಬತ್ತಾಸಿನ ಅಂಗಡಿಗಳು ಶೋಭೆ ತಂದವು. ನಾಟಕದ ಕಂಪನಿ ಬರುವ ಎಲ್ಲಾ ಲಕ್ಷಣಗಳೂ ಕಂಡವು. ನಾಟಕ ಥಿಯೇಟರ್‌ಗೆಂದು ಜಿಂಕ್ ಶೀಟು, ತಡಿಕೆಗಳು ಬಂದವು ರಾಶಿ ರಾಶಿ ಕಬ್ಬಿಣದ ಕುರ್ಚಿಗಳು, ಬಣ್ಣದ ಸೀನರಿಗಳೂ ಬರಲಾರಂಭಿಸಿದವು. ಜಾತ್ರೆಯ ಪ್ರಮುಖ ಆಕರ್ಷಣೆ ಎನಿಸಿದ್ದು ‘ಬಾಂಬೆ ಷೋನವರ ಎಕ್ಸಿಬಿಶನ್.’ ಅಲ್ಲಿ ತರೆವಾರಿ ಆಟಗಳು, ಕೋಲಂಬಸ್, ಟೊರಾಟೊರಾ, ಜೇಂಟ್ ವೀಲ್ ಹಾವಿನ ಮೈನ ಮನುಷ್ಯ ಮ್ಯಾಜಿಕ್ ರೂಮ್, ಗೋಬಿ ಮಂಚೂರಿ, ನೂಡಲ್ಸ್, ಎಗ್‌ಬುರ್ಜಿ, ಆಮ್ಲೆಟ್ ಹಳ್ಳಿಯವರ ಪಾಲಿಗೆ ರೆಡಿಮೇಡ್ ತಿಂಡಿಗಳ ಅಟ್ರಾಕ್ಷನ್, ತರಾವರಿ ಸಿಹಿ ತಿಂಡಿಗಳೂ ಅಲ್ಲೆ ಪ್ರಿಪೇರ್ ಆಗಿ, ಆಗಲೆ ಸಪ್ಲೆ! ವಿಚಿತ್ರ ಬಣ್ಣದ ತಂಪಾದ ಪಾನೀಯಗಳು. ಹಳ್ಳಿಗರಿಗಂತೂ ಅವುಗಳ ಹೆಸರೇ ಗೊತ್ತಿಲ್ಲ. ಹೇಳಿದರೂ ನೆನಪಿನಲ್ಲಿ ಉಳಿಯುವಂತಿಲ್ಲ. ‘ಆಕೆಂಪಗಿರೋದ ಕೊಡು ದುಂಡಗೆ ಇರೋದು ಬೇಕು ನೀಲಿಬಣ್ಣದ ಸ್ವೀಟು ಚೆಂದಾಗಿರ್ತದಾ?’ ಎಂದೆಲ್ಲ ಕೇಳಿ ಪಡೆಯುವರೇ ಹೆಚ್ಚು. ಎಲ್ಲಾ ಹೊಸ ಐಟಂಗಳೇ ಆದರೆ ಭಾಳ ದುಬಾರಿ ಮಕ್ಕಳೊಂದಿಗೆ ಹೋದರಂತೂ ಜೇಬು ಖಾಲಿ ಎಂಬ ಭಯವಂತೂ ಕಾಡಿತು. ಇಡೀ ಎಕ್ಸಿಬಿಶನ್‌ನ ಬಹುದೊಡ್ಡ ಆಕರ್ಷಣೆ ಎಂದರೆ ‘ಮೃತ್ಯುಪಂಜರ’ ದಲ್ಲಿ ಬೈಕ ಓಡಿಸೋ ಆಸಾಮಿಯ ಚಮತ್ಕಾರ. ಅಲ್ಲಿನ ದೇದೀಪ್ಯಮಾನ ಬೆಳಕು ಅದನು ನೋಡಬೇಕೆಂದರೆ ಭಾರಿ ಕಾಸು ಬಿಚ್ಚಬೇಕು. ತಾನು ನಿರೀಕ್ಷಿಸಿದಷ್ಟು ಟಿಕೆಟ್ ಸೇಲ ಆಗದಿದ್ದರೆ ಕಾಸು ವಾಪಸ್ ಪ್ರೋಗ್ರಾಂ ಕ್ಯಾನ್ಸಲ್ ಎಂಬ ನಾಮಫಲಕ ಬೇರೆ ತೂಗಾಡಿ ಮತ್ತಷ್ಟು ನೋಡಬೇಕೆಂಬ ಆಶೆ ಹುಟ್ಟಿಸುತ್ತಿತ್ತು. ನೋಡಿದವರಂತೂ ಬೈಕ್ ಸವಾರರ ಸಾಹಸಕ್ಕೆ ರೋಮಾಂಚನಗೊಂಡು ಇತರೆಯವರಿಗೂ ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿದ್ದರೆ ಸರಿಯಾಗಿ ನೆಲದ ಮ್ಯಾಗೆ ಬೈಕ್ ಓಡಿಸೋದೆ ಕಷ್ಟ, ಬಿದ್ದರೆ ಕೈ ಕಾಲು ಮೂಳೆ ಜಖ ಗ್ಯಾರಂಟಿ. ಅಂಥದ್ದರಲ್ಲಿ ಕಬ್ಬಿಣದ ಗೇಟ್ನಲ್ಲಿ ಆಪಾಟಿ ಬೈಕ್ ರೌಂಡ್ ಹೊಡೆಸುವುದೆಂದರೆ ಹುಟುಗಾಟವೆ? ಇವನಿಗೆ ಪ್ರಾಣದ ಮ್ಯಾಗೆ ಆಸೆಯಿಲ್ವೆ, ದುಡ್ಡು ಬೇಕು ನಿಜ, ದುಡ್ಡಿಗಾಗಿ ಎಲ್ಲಾರ ದಿನವೂ ಪ್ರಾಣ ಒತ್ತೆಯಿಡ್ತಾರಾ? ಯೋಯ್ ಇದು ಕಣ್ಕಟ್ಟು ಇರ್‍ಬೇಕು ಕಣ್ಲಾ. ಹಳ್ಳಿಗರ ನಾನಾ ನಮೂನಿ ಅಭಿಪ್ರಾಯಗಳು. ಇಂಥ ಮೌತ್‌ ಪಬ್ಲಿಸಿಟಿಯಿಂದಾಗಿ ದಿನದಿಂದ ದಿನಕ್ಕೆ ಎಕ್ಸಿಬಿಶನ್ ಹೌಸ್ಫುಲ್. ಮಕ್ಕಳಂತೂ ಅಲ್ಲೇ ತಿರುಗುತ್ತಿದ್ದವು, ಪಾಳೇಗಾರರ ಮನೆಯವರಿಗೆ ಮೊದಲ ದಿನವೇ ಫ್ರ್‍ಈ ಪಾಸು. ಎಲ್ಲರೂ ಹೋದರು ಚಿನ್ನುವಂತೂ ಮನೆಬಿಟ್ಟು ಕದಲಲಿಲ್ಲ. ಅವಳಿಗೀಗ ವೇಷ ಭೂಷಣ ಊಟ ತಿಂಡಿ ಟಿವಿಯಲ್ಲಿ ಬರೋ ಡಬ್ಲ್ಯೂ ಡಬ್ಲೂ ಎಫ್, ಫೈಟಿಂಗ್ ಸಿನಿಮಾ ಯಾವುದರಲ್ಲೂ ಆಸಕ್ತಿ ಉಳಿದಿರಲಿಲ್ಲ. ರಂಗನ ಅಗಲಿಕೆಯ ನೋವು ಅವಳ ಹೃದಯವನ್ನು ಹಿಂಡಿತ್ತು. ಕಾಲೇಜಿಗಾದರೂ ಹೋಗಿದ್ದಿದ್ದರೆ ಕನಿಷ್ಠ ಅವನನ್ನು ನೋಡಿಯಾದರೂ ಜೀವಕ್ಕೆ ಜೀವಕಳೆ ಬರುತ್ತಿತ್ತೇನೋ. ಅದಕ್ಕೂ ಅಡ್ಡಿಯಾಗಿದೆ. ರಂಗನ ತಂಗಿ ಮದುವೆಯಾಗೋದು ಯಾವಾಗ ತನ್ನ ಮದುವೆಗೆ ಯೋಗ ಬರೋದು ಯಾವಾಗ? ರಂಗ ತನ್ನ ಮನೆ ಅಸುರರನ್ನು ಒಪ್ಪಿಸಿ ಮದುವೆಯಾಗೋದಾದರೂ ಯಾವಾಗ? ಇದೆಲ್ಲಾ ಆದೀತೆ ಎಂಬ ಶಂಕೆ ದಿನಗಳೆದಂತೆ ಅವಳಲ್ಲಿನ ಚೈತನ್ಯವನ್ನೇ ಹೀರಿತ್ತು. ಮನೆಯವರಾಗಲೇ ಬೇರೆಯ ಸಂಬಂಧಗಳ ಹುಡುಕಾಟ ಶುರುಮಾಡಿದ್ದರು. ಇಂತಹ ಅಡಚಣೆ ವಿರೋಧಗಳ ನಡುವೆಯೂ ರಂಗನೆಂಬ ರಂಗ ತನ್ನನ್ನು ಮದುವೆಯಾದರೆ ಅದು ನಿಜಕ್ಕೂ ಪವಾಡವೆ ಎಂಬಷ್ಟು ನಲುಗಿ ಹೋಗಿದ್ದಳು. ಅವಳಿರುವ ಸ್ಥಿತಿಯನ್ನು ನೋಡಿದರೆ ಕೆಂಚಮ್ಮ ನಾಗತಿ ಕರುಳು ಕಿವುಚಿದಂತಾಗುತ್ತಿತ್ತು. ನಾಯಕನ ಮನೆ ಹೆಣ್ಣಮಕ್ಕಳಿಗೆಲ್ಲಾ ಹೆಸರಿನ ಮುಂದೆ ನಾಗತಿಯರೆಂಬ ‘ಠಸ್ಸೆ’ ಬೇರೆ. ಅದು ಬರೀ ಮಾತಿನ ಗೌರವವಷ್ಟೆ, ಹೆಂಗಸರಿಗೆ ನಾಯಕರು ತೋರುವ ಗೌರವ ಅಷ್ಟರಲ್ಲೇ ಐತೆ ಅಂದುಕೊಂಡಳು.

‘ಹೆದರ್‍ಬೇಡ ಕಣೆ… ದೇವರಿದ್ದಾನೆ. ರಂಗ ತಾಕತ್ತಿರೋನು ನಿಯತ್ತಿರೋನು. ಅವನೂ ನಾಯಕರ ಮನೆ ಹುಡುಗನೆ. ಅವನ ಮೈಯಲ್ಲೂ ನಾಯಕರ ರಕ್ತವೇ ಹರೀತಿದೆ. ಇವರುಗಳಿಗೆ ಮಾತ್ರ ಪಾಳೇಗಾರರ ವಂಶಸ್ಥರೆಂಬ ಕೋಡು. ಹಿಂದಿನ ಪಾಳೇಗಾರರಲ್ಲಿ ಇದ್ದ ದರ್ಪ ದೌಲತ್ತು ಇವರಲ್ಲಿ ಉಳಿದಿದೆಯೇ ಹೊರತು ಅವರಲ್ಲಿದ್ದ ಪರನಾರಿ ಸೋದರತೆಯಾಗಲಿ, ದಯೆಧರ್ಮವಾಗಲಿ ಬಡವರ ಮೇಲಿನ ಅನುಕಂಪವಾಗಲಿ ಸರ್ವಸಮಾನ ಭಾವವಾಗಲಿ ಮಾನವೀಯ ಗುಣಗಳಾಗಲಿ ಲವಲೇಶವೂ ಇಲ್ಲವೆಂದೇ ಆಕೆ ಕಣ್ಣೀರಾಗುತ್ತಾಳೆ. ರಂಗ ಬಡವನೆಂಬುದನ್ನು ಮರೆತರೆ ಅವನು ಯಾವುದರಲ್ಲೂ ಇವರಿಗಿಂತ ಕೊನೆಯಿಲ್ಲ. ಕುಸ್ತಿ ಗೆದ್ದಾಗ ಮರಾಠಿ ಪೈಲ್ವಾನನೇ ಚಿನ್ನುವನ್ನು ನಿನಗೇ ಬಿಟ್ಟುಕೊಡುತ್ತೇನೆ ಎಂದಾಗ ರಂಗ ಒಪ್ಪಿಕೊಂಡುಬಿಟ್ಟಿದ್ದರೆ ಈ ಪಾಳೇಗಾರರ ಮೀಸೆ ಅಡ್ಡಿಯಾಗುತ್ತಿರಲಿಲ್ಲವೆ? ಆದರೆ ರಂಗ ಅಂದು ಚಿನ್ನುವಿನ ರೂಪಕ್ಕೆ ಪಾಳೇಗಾರರ ಸಂಪತ್ತಿಗೆ ಮರುಳಾಗದೆ ವಿವೇಕಿಯಂತೆ ವರ್ತಿಸಿದ. ಸುತ್ತ ಹಳ್ಳಿಗರ ಮುಂದೆ ಇವರ ಮಾನ ಕಾಪಾಡಿದ. ಅಂಥವನ ಪ್ರಾಣತೆಗೆಯಲು ಸಂಚು ನಡೆಸುವ ಇವರು ಮನುಷ್ಯರೆ? ಮನಸೋತದ್ದೂ ಇವರ ಮನೆ ಹೆಣ್ಣೆ. ಈಗಲೂ ರಂಗ ಸಂಯಮ ಕಳೆದುಕೊಂಡಿಲ್ಲ. ಅವನಂತೂ ಚಿನ್ನುವನು ನಡು ನೀರಿನಲ್ಲಿ ಕೈ ಬಿಡುವವನಲ್ಲ ಎಂಬ ಅವನ ಮೇಲಿನ ನಂಬಿಕೆಯೇ ಮುಳುಗುವವನಿಗೆ ಸಿಕ್ಕ ಕಡ್ಡಿಯೂ ಆಸರೆ ಎಂಬ ಆಶಾವಾದವನ್ನವಳಲ್ಲಿ ಹುಟ್ಟಿ ಹಾಕಿತ್ತು.

ಯಾರ ಮನೆಯಲ್ಲಿ ಬಡತನವೋ ಸಿರಿತನವೋ ಉಪವಾಸವೋ ವನವಾಸವೋ ಸಾವೋ ನೋವೋ ಕಾಯಿಲೆ ಕಾಸಾಲೆಯೋ ಜಗಳ ದೊಂಬಿಯೋ ಆವೇಶವೋ ಆಕ್ರೋಶವೋ ಸೋಲೋ ಗೆಲುವೋ ಊರಿನ ಜಾತ್ರೆ, ಪರಸೆಗಳು ಅದನ್ನು ಕಟ್ಟಿಕೊಂಡೇನು ಮಾಡಿಯಾವು. ಅವುಗಳ ಪಾಡಿಗೆ ಅವು ಬರುತ್ತವೆ ಹೋಗುತ್ತವೆ. ದುಗ್ಗಮ್ಮನ ಜಾತ್ರೆ ನಿರಾತಂಕವಾಗಿ ನಡೆಯಿತು. ಸುತ್ತಮುತ್ತಲ ಹಳ್ಳಿಗಳಿಂದ ಸಹಸ್ರಾರು ಜನ ಸೇರಿ ಸಡಗರಪಟ್ಟರು. ರಥೋತ್ಸವವೂ ನಡೆದವು. ಆಟಪಾಠಗಳೂ ನಡೆದು ಪಾಳೇಗಾರರು ಬಹುಮಾನ ವಿತರಣೆಯನ್ನೂ ಮಾಡಿದರು. ಆದರೂ ಜಾತ್ರೆ ಕಳೆಗಟ್ಟಲಿಲ್ಲ. ಯಾಕೆಂದರೆ ಈ ಸಲ ಕಾಟಾ ಜಂಗೀ ಕುಸ್ತಿಯೇ ಇಲ್ಲ! ಕುಸ್ತಿಯನ್ನು ಏರ್ಪಡಿಸುವ ಉಮೇದನ್ನು ಪಾಳೇಗಾರರೂ ತೋರಲಿಲ್ಲ. ಹಾಗೆ ಚಮನ್ಸಾಬಿಯೂ ಉತ್ಸಾಹದಿಂದ ಮುಂದೆ ಬರಲಿಲ್ಲ. ಹೋದ ಸಲ ನಡೆದ ರಂಗಿನ ಕುಸ್ತಿಯ ನೆನಪಾಗಿ ಎಲ್ಲರ ನಾಲಿಗೆಯ ಮೇಲೆ ರಂಗ ಮತ್ತು ಚಿನ್ನುವಿನ ಹೆಸರು ಹೊರಳಾಡಿತು. ಇದರಿಂದ ಸಿಡಿಮಿಡಿಗೊಂಡ ಪಾಳೇಗಾರರು ಯಾರ ಯಾರ ಬಾಯಿ ಮುಚ್ಚಿಸಿಯಾರು? ತಾವೇ ಜಾತ್ರೆಯಿಂದ ಬೇಗ ಜಾಗ ಖಾಲಿಮಾಡಿದರು. ಜಾತ್ರೆಗಾದರೂ ಚಿನ್ನು ಬಂದೇ ಬರುತ್ತಾಳೆ ನೋಡಿಯೇನು ಎಂದು ಆಶೆಯಿಂದ ಅಡ್ಡಾಡಿದ ರಂಗ ಬೆವರಿಬಸವಳಿದದ್ದೇ ಬಂತು. ಅಲ್ಲಿಗೂ ತುಂಬಾ ಹುಷಾರಾಗಿ ಜನಜಾತ್ರೆಯ ನಡುವೆಯೇ ರಂಗನನ್ನು ಭೇಟಿ ಮಾಡಿದ ಕೆಂಚಮ್ಮ ಚಿನ್ನುವಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ವಿವರಿಸಿದ್ದಳು. ‘ಇನ್ನು ತಡಮಾಡಿದರೆ ಅವಳು ಜೀವ ಕಳೆದುಕೊಳ್ಳಲು ಹೇಸಳು, ಏನಾದರೂ ಮಾಡಪ್ಪಾ’ ಎಂದು ಕೈ ಜೋಡಿಸಿ ಬೇಡಿದ್ದಳು. ತನ್ನ ಜೀವವನ್ನೇ ಪಣವಾಗಿಟ್ಟು ಅವನನ್ನು ಮಾತನಾಡಿಸಿದ್ದ ಕೆಂಚಮ್ಮನಲ್ಲಿ ಅವನಿಗೆ ಇಮ್ಮಡಿ ಗೌರವ. ಆದರೆ ತಾನಾದರೂ ಈಗ ತಕ್ಷಣವೇ ಏನೂ ಮಾಡಲೂ ಅಸಹಾಯಕನೆಂದು ನೇರವಾಗಿ ಹೇಳದಿದ್ದರೂ, ತನ್ನ ಹೊರತು ಅವಳನ್ನು ಬೇರೆಯವರಿಗೆ ಮದುವೆ ಮಾಡಿಕೊಡಲು ಈ ಜನ್ಮದಲ್ಲಿ ಪಾಳೇಗಾರರಿಗೆ ಸಾಧ್ಯವಿಲ್ಲದ ಸಾಹಸವದು. ಯಾರು ಹಸೆಮಣೆ ಏರಿದರೂ ಎಷ್ಟೇ ಹೆಣಬಿದ್ದರೂ ಚಿನ್ನೂಗೆ ತಾಳಿಕಟ್ಟೋ ಗಂಡು ನಾನೇ’ ಅಂದಿದ್ದ.

ಕೆಂಚಮ್ಮ ಚಿನ್ನುವಿಗೆ ಈ ಸುದ್ದಿ ಮುಟ್ಟಿಸಿದಾಗ ಬಿರಿದ ಭೂಮಿಗೆ ಮಳೆಯ ಸಿಂಚನವಾದ ಹಿಗ್ಗು. ಅವಳ ಮೈಯಿಂದ ಕಮ್ಮನೆಯ ಪ್ರೇಮದ ವಾಸನೆ. ಕೆಂಚಮ್ಮನನ್ನು ಅಪ್ಪಿ ಅತ್ತುಬಿಟ್ಟಳು ಚಿನ್ನು, ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲವೆಂಬಂತೆ ಜಾತ್ರೆ ಮುಗಿದರೂ ಅಂಗಡಿಮುಂಗಟ್ಟುಗಳು ಟೆಂಟ್ ಸಿನೆಮಾ ನಾಟಕ ಎಕ್ಸಿಬಿಶನ್‌ನವರೂ ಜಾಗ ಖಾಲಿಮಾಡಲಿಲ್ಲ. ಸುತ್ತಮುತ್ತಲ ಹಳ್ಳಿಗರು ದಂಡು ದಂಡಾಗಿ ಬರುತ್ತಿದ್ದರಿಂದ ಅವರ ಕಮಾಯಿಗೇನೂ ಬಾಧಕವಾಗಿರಲಿಲ್ಲ.

ಇದ್ದಕ್ಕಿದ್ದಂತೆ ಎಗ್ಗಿಬಿಶನ್‌ನವರು ಒಂದು ಸ್ಪರ್ಧೆ ಏರ್ಪಡಿಸಿದ್ದು ಸಂಪಿಗೆಹಳ್ಳಿ ಹಾಗೂ ಸುತ್ತಲ ಹತ್ತು ಹಳ್ಳಿಗೂ ಕಾರಿಗೆ ಮೈಕ್ ಕಟ್ಟಿಕೊಂಡು ಸುತ್ತಿ ಅನೌನ್ಸ್ ಮಾಡಿದರು. ಜಾತ್ರೆಯಲ್ಲಿ ಕುಸ್ತಿ ನಡಿಯದ್ದರಿಂದ ತೀವ್ರ ನಿರಾಶೆಗೊಂಡಿದ್ದ ಕುಸ್ತಿ ಪ್ರಿಯರಿಗೆ, ಸಾಹಸಿ ಯುವಕರಿಗೆ, ಮೋಜು ಸವಿಯುವವರಿಗೆ ಎಗ್ಗಿಬಿಶನ್‌ನವರು ಏರ್ಪಡಿಸಿದ್ದ ಸ್ಪರ್ಧೆ ಹೊಸ ತುರುಸು ತಂತು. ಸ್ಪರ್ಧೆಗಿಟ್ಟ ಮೊಬಲಗು ಸಹ ಕಡಿಮೆಯದೇನಲ್ಲ. ಎಂಥವರಿಗಾದರೂ ಸ್ಪರ್ಧಿಸುವ ಆಶೆ ಹುಟ್ಟಿಸುವಂತಿತ್ತು. ಆದರೆ ಬದುಕುವ ಆಸೆಯನ್ನು ಬಿಟ್ಟೆ ಸ್ಪರ್ಧೆಗಿಳಿಯಬೇಕಿತ್ತು. ಮೃತ್ಯು ಪಂಜರದಲ್ಲಿ ಹತ್ತು ನಿಮಿಷಗಳ ಕಾಲ ಬೈಕ್ ಓಡಿಸಬೇಕು ಅಕಸ್ಮಾತ್ ಪ್ರಾಣಾಪಾಯವಾದರೆ ಒಂದು ಲಕ್ಷ ಗೆದ್ದರೆ ಪೂರಾ ಎರಡು ಲಕ್ಷ ರೂಪಾಯಿಗಳು ನಿಮ್ಮ ಕಿಸೆಗೆ, ಪ್ರಯತ್ನ ಮಾಡಿ ಸಾಹಸಿಗಳೆ ಲಕ್ಷಾಧೀಶರಾಗಿ ಎಂಬ ಅವರ ಸವಾಲು ಪ್ರತಿಹಳ್ಳಿಗಳಲ್ಲೂ ಧ್ವನಿಸಿ ಮನೆ ಮಾತಾಯಿತು. ಎಲ್ಲಿ ನೋಡಿದರೂ ಆ ಬಗ್ಗೆಯೇ ಚರ್ಚೆ ಯಾರ ಬಾಯಲ್ಲೂ ಅದೇ ಮಾತು ಪ್ರಾಣಾಪಾಯವಾದರೂ ಲಕ್ಷ ಸಿಗುತ್ತೆ ಎಂಬ ಆಮಿಷ ಬೇರೆ. ಬರೀ ಕೈಲಂತೂ ಕಳುಹಿಸೋಲ್ಲವೆಂಬ ಸಮಾಧಾನವೇ ಹೆಚ್ಚು ಆಕರ್ಷಕವೆನ್ನಿಸಿತು. ಈ ಬಗ್ಗೆ ಪತ್ರಿಕೆಗಳ ಮುಖಪುಟದಲ್ಲೂ ಸುದ್ದಿಗಳು ಬಿತ್ತರಗೊಂಡವು. ಟಿವಿಯ ಚಾನಲ್‌ಗಳಿಗೇನು ಕಡಿಮೆ. ಎಕ್ಸಿಬಿಶನ್‍ನ್ನ ವಿಶೇಷ ಆಕರ್ಷಣೆಗಳನ್ನು ಸೆರೆ ಹಿಡಿದು ನೋಡುಗರನ್ನು ಬೆರಗುಗೊಳಿಸಿದವು. ಎಲ್ಲರಿಗೂ ಥ್ರ್‍ಇಲ್ ಅನಿಸಿದ್ದು ಮೃತ್ಯುಪಂಜರದಲ್ಲಿನ ಬೈಕಿನಾಟ. ಇಂತಹ ಒಂದು ರೋಮಾಂಚಕ ಸ್ಪರ್ಧೆ ನೋಡುವ ಹಂಬಲ ದಿನೇದಿನೇ ಹೆಚ್ಚಾದಂತೆ ಪಬ್ಲಿಸಿಟಿ ಕಾವೇರಿಸಿಕೊಂಡಿತು! ಅನೇಕರಿಗೆ ಸ್ಪರ್ಧಿಸಿ ಲಕ್ಷಗಟ್ಟಲೆ ಸಂಪಾದಿಸುವ ಘನ ಹಂಬಲ. ಅದಕ್ಕಾಗಿ ದಿನವೂ ಹೋಗಿ ಟಿಕೆಟ್ ಕೊಂಡು ಮೃತ್ಯುಪಂಜರದಲ್ಲಿನ ಬೈಕಿನಾಟವನ್ನು ನೋಡಿ ಕಲೆಕ್ಷನ್ ಹೆಚ್ಚಿಸಿದರೇ ವಿನಹ ತಮ್ಮಲ್ಲಿನ ಧೈರ್ಯವನ್ನು ಹೆಚ್ಚಿಸಿಕೊಳ್ಳದೇ ಹೋದರು. ಪಂಜರದಲ್ಲಿ ಸುತ್ತುವ ಬೈಕಿನ ಶಬ್ದ ಕೇಳುವಾಗ ಇವರುಗಳಿಗೆ ತಲೆಸುತ್ತು ಬಂದಂತಾಗಿ ಎಂದಿಲ್ಲದ ವಾಂತಿಯೂ ನುಗ್ಗಿಬಂತು. ದಿನೇದಿನೇ ಹುರುಪು ತುಂಬಿಕೊಂಡು ಬರುವವರಿಗೇನು ಕೊರತೆಯುಂಟಾಗಲಿಲ್ಲ. ನಾನು ಕೈ ಬಿಟ್ಟು ಬೈಕ್ ಓಡಿಸುತ್ತೇನೆ. ನಾಲ್ವರನ್ನು ಐವರನ್ನು ಹೆಗಲ ಮೇಲೆ ಕೂರಿಸಿಕೊಂಡು ಬೈಕ್ ಓಡಿಸುತ್ತೇನೆ. ನಾನು ಹತ್ತು ಅಡಿ ಬೈಕ್ ಜಂಪ್ ಮಾಡಿಸುತ್ತೇನೆ, ಹಿಂದಿನ ಗಾಲಿ ಮೇಲೆ ಮಾರದ್ದ ಓಡಿಸುತ್ತೇನೆ. ತಾವು ಬೈಕ್ ಮೇಲೆ ಮಾಡುವ ಚಿತ್ರ ವಿಚಿತ್ರ ಚಮತ್ಕಾರಗಳನ್ನು ಹಲವರು ಹೇಳಿಕೊಂಡು ಖುಷಿಪಟ್ಟರು. ಆದರಿದು ಪಂಜರದಲ್ಲಿ ಬೈಕ್ ಓಡಿಸಬೇಕು ಪಲ್ಟಿ ಹೊಡೆದು ಬೈಕ್ ಮೇಲೆ ಬಿದ್ದರಂತೂ ಎಲ್ಲಿನ ಮೂಳೆಯಾದರೂ ಮುರಿದೀತು ತಲೆಗೆ ಪೆಟ್ಟು ಬಿದ್ದರಂತೂ ಸ್ಟಾಟಲ್ಲೇ ಫನಾ, ತಮ್ಮ ತಮ್ಮಲ್ಲೇ ಮಾತನಾಡಿಕೊಂಡರು. ಐದು ಲಕ್ಷವಾದರೂ ಇಟ್ಟಿದ್ದರಪ್ಪ ನಾನೂ ಬಿಡ್ತಾ ಇದ್ದಿಲ್ಲ ಒಂದು ಕೈನೋಡೇಬಿಡ್ತಿದ್ದೆ ಬಿಡೋ ಎಂಬ ಠೇಂಕಾರದ ಹಾರಿಕೆಯ ಮಾತುಗಳೂ ಹಾರಾಡಿದವು. ಲಕ್ಷಗಟ್ಟಲೆ ಹಣ ಬರುವುದೆಂದಾಗ ಹೆಂಗಸರು ಮಾತ್ರ ಹೇಗೆ ಸುಮ್ಮನಿದ್ದಾರು. ಬಂಗಾರದ ನೆಕ್ಲಸ್‌ ವಜ್ರದ ಬಳೆಗಳು ಕಣ್ಣು ಮುಂದೇ ತೇಲಿದವು. ಗಂಡಂದಿರನ್ನು ಹುರಿದುಂಬಿಸಿದರು. ‘ನೀವಂತೂ ದುಡಿದು ಒಂದು ಒಡವೆ ಮಾಡಿಸಲಿಲ್ಲ. ದಿನಾ ಬೈಕ್‌ನಾಗೆ ಸದ್ದು ಮಾಡ್ತಾ ಓಡಾಡ್ತೀರಲ್ಲ ಆ ಮೃತ್ಯು ಪಂಜರದಾಗೆ ಓಡ್ಸಿ, ಏಟು ಬಿದ್ದರೂ ಲಕ್ಷ ರೂಪಾಯಂತೂ ಬರ್ತೇತೆ’ ಎಂದು ಗಂಡರ ಪ್ರಾಣ ಹಿಂಡಿದರು. ‘ಇದೆಲ್ಲಿ ಗ್ರಹಚಾರ ತಂದನಪ್ಪಾ ಈ ನನ್ಮಗ’ ಎಂದು ಎಗ್ಗಿಬಿಶನ್ ಟೆಂಟ್ ಎತ್ತುವಂತಾಗಲಪ್ಪ ಮಾರುತಿ ಎಂದು ಊರ ಮುಂದಣ ಆಂಜನೇಯನಿಗೆ ಹಿಡಿಗಾಯಿ ಒಡೆಸಿದರು.

ರಂಗನ ಅಣ್ಣಂದಿರು ಅತ್ತಿಗೆಯರೂ ಅಪರೂಪಕ್ಕೆ ಬಂದ ಎಕ್ಸಿಬಿಶನ್ ನೋಡಲು ಹೊರಟರು. ಒಂದು ಮಾತುಗಾದರೂ ತಾಯಿಯನ್ನು ಇರಲಿ, ಆಶೆ ಕಂಗಳ ತಂಗಿಯನ್ನೂ ಬರುವಂತೆ ಕರೆಯಲಿಲ್ಲ. ಮಕ್ಕಳೊಡನೆ ನಕ್ಕು ನಲಿದು ತಿಂದು ಕುಡಿದು ಬಣ್ಣದ ಬೆಳಕಲ್ಲಿ ಅಡ್ಡಾಡಿದ ಅವರುಗಳನ್ನು ಆಕರ್ಷಿಸಿದ್ದು ಮೃತ್ಯುಪಂಜರವೆ! ‘ವಾಹ್! ಎಂಥ ಸಾಹಸ’ ವೆಂದು ಉದ್ಗಾರ ತೆಗೆದರು. ಸ್ಪರ್ಧೆಯ ಬೋರ್ಡನ್ನು ನೋಡಿದಾಗ ವಿಚಲಿತರಾದರು. ಸೋತರು ಲಕ್ಷ, ಗೆದ್ದರಂತೂ ಎರಡು ಲಕ್ಷ! ಹತ್ತು ನಿಮಿಷವಷ್ಟೆ ಬೈಕ್ ಓಡಿಸಬೇಕು! ಏನ್ಮಹಾ ಗುಡ್ಡ ಕಿತ್ತು ಹಾಕೋದಿದೆ ಇದರಲ್ಲಿ ಎಂದು ಗುಡುಗುಟ್ಟಿದವರೆ ತಮ್ಮ ಗಂಡಂದಿರಿಗೆ ದುಂಬಾಲು ಬಿದ್ದರು. ‘ನೀವಂತೂ ಬೈಕ್ ಓಡಿಸೋದ್ರಾಗೆ ಏ-ಒನ್’ ಅಂತ ಗಣೇಶನ ಹಿಂದೆ ಬಿದ್ದಳು ಹೆಂಡತಿ. ‘ನಮ್ಮ ಯಜಮಾನ್ರಂತೂ ಭಾಳಾನೇ ಎಕ್ಸ್‍ಪರ್ಟ್ ಅದಾರೆ ಕಣೆ. ಸಣ್ಣಗಲ್ಲಿನಲ್ಲೆಲ್ಲಾ ಹಂಡ್ರೆಡ್ ಕಿಲೋಮೀಟರ್ ಸ್ಪೀಡ್ನಲ್ಲಿ ಓಡಿಸ್ತಾರೆ’ ಎಂದು ರಾಗಿಣಿ ಪೂಸಿ ಹೊಡೆದಳು. ಇದ್ಯಾಕೋ ಜೀವಕ್ಕೇ ಬಂತೆಂದು ಗಾಬರಿಯಾದರೂ ಗಂಡಂದಿರು ಇನ್ನು ನೋಡಬೇಕಾದ್ದು ಬೇಕಾದಷ್ಟಿದೆ ಎಂದು ಹೆಂಗಸರು ಹಠ ಹಿಡಿದರೂ ‘ದರಿದ್ರ ಎಕ್ಸಿಬಿಶನ್ ಇದರಲ್ಲೇನೈತೆ ಮಣ್ಣು’ ವಂಡರ್‍ಲಾ ತೋರಿಸ್ತೀವಿ ಅದಪ್ಪಾ ವಂಡರ್‍ಮೆ ಥಂಡರ್… ನೆಕ್ಸ್ಟ್ ವೀಕೇ ಹೋಗೋಣ ಕಣೇ’ ಎಂದು ಗಣೇಶ ಇತರರನ್ನು ಉತ್ತೇಜಿಸಿದ. ಯಾರೂ ದುಸ್ರಾ ಮಾತಾಡಲಿಲ್ಲ. ಕಿರಿಕಿರಿ ಮಾಡುವ ಹೆಂಡಿರು ಮಕ್ಕಳನ್ನು ಎಳೆದುಕೊಂಡು ಅವರುಗಳು ಅಲ್ಲಿಂದ ಅಂತರ್ಧಾರಾದರು.

ಮನೆಗೆ ಬಂದ ಅತ್ತಿಗೆಯರು, ಅಣ್ಣಂದಿರ ಹೇಡಿತನವನ್ನು ಬಗೆ ಬಗೆಯಲ್ಲಿ ವರ್ಣನೆ ಮಾಡುತ್ತಾ ಲಕ್ಷಾಂತರ ಸಂಪಾದಿಸುವ ಆಶೆ ಕೈತಪ್ಪುವುದನ್ನು ತಾಳಲಾರದೆ ಪರಿಪರಿಯಾಗಿ ಪರಿತಪಿಸುವುದನ್ನು ಪ್ರತ್ಯಕ್ಷ ಕಂಡ ರಂಗನಿಗೆ ತಾನೇಕೆ ಸ್ಪರ್ಧಿಸಬಾರದು? ಸುದ್ದಿ ತಿಳಿದೂ ತಾನೇಕೆ ವೃಥಾ ದಿನಗಳೆದೆ! ಪೆಟ್ಟು ಬಿದ್ದರೆ ಕನಿಷ್ಟ ಲಕ್ಷ. ಗೆದ್ದರಂತೂ ಎರಡು ಲಕ್ಷ ಇಷ್ಟಗಲ ಬಾಯಿತೆರೆದ. ತಂಗಿಯ ಮದುವೆಗೆ ಇನ್ನು ಯಾತರ ಅಡ್ಡಿ? ಒಂದು ಕೈ ನೋಡೇಬಿಡೋಣವೆಂಬ ನಿರ್ಧಾರಕ್ಕೆ ಬಂದ. ಇದಂತೂ ಸುಲಭವಾಗಿ ಹತ್ತೇ ನಿಮಿಷದಲ್ಲೇ ಎರಡು ಲಕ್ಷ ಸಂಪಾದಿಸುವ ಅವಕಾಶ ಯಾರಿಗುಂಟು ಯಾರಿಗಿಲ್ಲ? ಈವರೆಗೆ ಯಾರೂ ಮುಂದೆ ಬಂದಿಲ್ಲವೆಂಬುದೇ ನನ್ನ ಪುಣ್ಯ ನನಗಾಗಿಯೇ ಈ ಎಗ್ಸಿಬಿಶನ್ ನಮ್ಮೂರಿಗೆ ಬಂತೆ, ಆ ದೇವರೇ ಕಳುಹಿಸಿದನೆ ಎಂತಹ ಅಮೋಘವಾದ ಅವಕಾಶ ಎಂದು ಪುಳಕಿತನಾದ. ಅವನ ಭಾವುಕ ಮನಸ್ಸು ತಂಗಿಯ ಮದುವೆ ಆಗಿಯೇ ಹೋಯಿತೆಂಬ ಕನಸು ಕಂಡಿತು. ಗರಡಿಗೆ ಬಂದವನೆ ಹನುಮಾನ್‌ಗೆ ವಂದಿಸಿ, ಸಾಬಿಯ ಪಾದಕ್ಕೆರಗಿದ. ಇದ್ದಕ್ಕಿದ್ದಂತೆ ತನ್ನ ಪಾದಮುಟ್ಟಿದ ಹುಡುಗನನ್ನು ಎಬ್ಬಿಸಿ ಪ್ರೀತಿಯ ನೋಟ ಹರಿಸಿದ ಚಮನ್ ಪ್ರಶ್ನಿಸಿದ. ‘ಯಾಕ್ಲಾ ಹೈವಾನ್, ಎಲ್ಲಾರ ಹೊಸ ಕುಸ್ತಿಗೇನಾರ ಒಪ್ಕೊಂಡಿಯೇನೋ?’

‘ಇಲ್ಲ ಗುರು. ಮನೆಯಾಗೆಲ್ಲಿ ಪರ್‍ಮಿಶನ್ ಕೊಡ್ತಾರೆ. ಇದು ಬೇರೇನೋ ವಿಚಾರವೈತೆ… ನಿನ್ನ ಆರ್ಶಿವಾದ ಬೇಕು ಉಸ್ತಾದ್’ ರಂಗನ ಕಣ್ಣುಗಳು ತೇವಗೊಂಡವು.

‘ಅರೆಬೇಟಾ, ನಂದು ಆರ್ಶಿವಾದ್ ಔರ್ ಖುದಾಕಿದುವಾ ಹಮೇಶಾ ನಿನ್ನ ಮ್ಯಾಗದೆ. ಸೋಚ್ನಾಮತ್ ವಿಷಯ ಏನಂತ ಸಚ್ ಸಚ್ ಹೇಳು’ ಚಮನ್‌ಸಾಬ್ ಶಬ್ದ ಬರುವಂತೆ ಅವನ ಬೆನ್ನು ತಟ್ಟಿದ. ನಿಧಾನವಾಗಿ, ಹೇಳುವ ಸಂಗತಿ ಪೈಲ್ವಾನನ ಮನಮುಟ್ಟುವಂತೆ ರಂಗ ಹೇಳಿದ. ಸಾಬಿಯ ಹೃದಯವೇ ಬಾಯಿಗೆ ಬಂದಂತಾಯಿತು. ‘ನಖೋ ಬೇಟೆ, ಇದು ಜಾನ್‌ಗೆ ಖತರ್‌ನಾಕ್ ಐತೆ, ಬೆಹನ್ ಮದುವೆಗಂತ ಇಂಥ ಹುಚ್ಚು ಸಹಾಸಕ್ಕೆಲ್ಲಾರ ಇಳಿತಾರೇನ್ಲಾ? ಇದೆಲ್ಲಾ ಬ್ಯಾಡಾ ಕಣಾ’ ಚಮನ್ ಸಾಬಿ ಗದ್ಗದಿತನಾಗಿ ಪ್ರೀತಿಯಿಂದ ಅವನ ತಲೆ ನೇವರಿಸಿದ. ನನಗೆ ಬೇರೆ ದಾರಿಯಿಲ್ಲ ಉಸ್ತಾದ್ ಅಣ್ಣಂದಿರುಗಳನ್ನ ನಂಬಿಕೊಂಡ್ರೆ ಈ ಜನ್ಮದಲ್ಲಿ ಅವಳಿಗೆ ಮದುವೆಯಾಗೋಲ್ಲ. ನಾವು ಮನೇಲಿ ಒಂತರಾ ಜೀತದಾಳುಗಳ ತರಾ ಬದುಕ್ತಾ ಇದೀವಿ’ ರಂಗ ನೋವನ್ನು ಬಿಚ್ಚಿಟ್ಟ.

‘ಅದೆಲ್ಲಾ ಪುರಾಣ ನನಗೆ ಗೊತ್ತು ಐತೆ ಕಣ್ಲಾ. ಹಂಗಂತಾ ಪ್ರಾಣಾನೇ ಪಣಕ್ಕಿಡ್ತಾರೇನ್ಲಾ? ಅಚಾನಕ್ ಆ ಕಾಂಪಿಟೇಶನ್ನಾಗೆ ನಿನಗೇನಾದ್ರೂ ಆಯ್ತಂದ್ರೆ ನಿನ್ನ ತಾಯಿ ತಂಗಿಗೆ ಯಾರ್ಲಾ ಹೈವಾನ್ ದಿಕ್ಕು?’ ಚಮನ್ ಸಿಟ್ಟಾದ.

‘ಲೈಫಲ್ಲಿ ರಿಸ್ಕ್ ತಗೊಳ್ದಿದ್ರೆ ಏನೂ ಸಾಧಿಸೋಕೆ ಸಾಧ್ಯವೇ ಇಲ್ಲ ಗುರು. ಹಿಂಗೆ ಸತ್ತಂತೆ ಬದುಕೋ ಬದ್ಲು ಸತ್ತು ಹೋಗೋದೆ ವಾಸಿ ಅಲ್ವಾ-ನಮ್ಮಂಥೋರು ಭೂಮಿಗೆ ಭಾರ ಕೂಳಿಗೆ ದಂಡ. ನಿನ್ನ ಆರ್ಶಿವಾದ ಇರ್‍ಲಿ ಗುರು’ ರಂಗ ತನ್ನ ನಿರ್ಧಾರವನ್ನು ಬದಲಿಸುವಂತಿರಲಿಲ್ಲ. ಚಮನ್‌ಸಾಬಿ ಅವನನ್ನು ಮಣಿಸಲು ಮತ್ತೊಂದು ದಾರಿ ಹುಡುಕಿದ. ‘ನೋಡು ರಂಗ ಆ ಹುಡ್ಗ ಐತಲ್ಲ ಪಾಳೇಗಾರುದ್ದು. ಅದು ನಿನ್ನ ಹಚ್ಕೊಂಡದೆ ‘ನಿನಗೇನಾದ್ರೂ ಆಯ್ತು… ಜೀವ ಹೋಗೋ ಮಾತು ಬ್ಯಾಡ. ಕೈಕಾಲೇನಾದ್ರೂ ಊನ ಆತಪಾ… ಅದರ ಗತಿ ಏನ್ಲಾ? ನೀನು ಪಾಳೇಗಾರರ ಮ್ಯಾಗೆ ಹಾಕಿದ ಸವಾಲ್ ಗತಿಹೆಂಗೆ? ಇದೆಲ್ಲಾ ಇಜ್ಜತ್ ಕಾ ಸವಾಲ್ ಕಣ್ಲಾ…’

‘ನೋಡುಗುರು, ಈ ಸ್ಪರ್ಧೆನಾಗೆ ನಾನ್ ಗೆದ್ದರೆ ತಂಗಿ ಮದುವೆ ಆಗೋಗ್ತದೆ. ಆಗ ಲೈನ್ ಕ್ಲಿಯರ್. ಆಮೇಲೆ ನಾನು ಅವಳ ಸಮೇತ ಎಸ್ಕೇಪ್ ಆಗಿಬಿಡ್ತೀನಿ. ಕೂಲಿನಾಲಿ ಮಾಡಿಯಾದ್ರೂ ಎಲ್ಲಾರ ಬದುಕ್ಕೋತೀನಿ… ಅದಕ್ಕೆ ಈ ಸ್ಪರ್ಧೆ ಮೇಲೆಯೇ ನಿಂತಿದೆ ಗುರು ನನ್ನ ಭವಿಷ್ಯ.’

‘ನಾನ್ ಏನು ಹೇಳಿದ್ರೂ ನೀನ್ ಕೇಳಂಗಿಲ್ಲ ಬಿಡು. ಆತೇಳಪಾ ಖುದಾ ಅದಾನ ಒಂದು ಕೈ ನೋಡೇ ಬಿಡು…’ ಎಂದು ಅವನ ಭುಜ ತಟ್ಟಿದ ಸಾಬಿ. ‘ಅದಾತ್ಲಾಗಿರ್‍ಲಿ.. ನಿನಗೆ ನೆಟ್ಟಗೆ ಬೈಕನಾರ ಓಡಿಸೋಕೆ ಬತ್ತದೇನ್ಲಾ ಬಡ್ಡೆತ್ತೋದೆ’ ಅಕ್ಕರೆಯಿಂದ ಬೆನ್ನ ಮೇಲೆ ಕೈ ಆಡಿಸಿದ. ‘ನಮ್ಮ ಅಣ್ಣಂದು ಐತಲ್ಲ ಉಸ್ತಾದ್, ಟ್ರಯಲ್ ಅಂತ ಆವಾಗೀವಾಗ ಓಡಿಸ್ತಾ ಇರ್ತಿನಿ… ಒಟ್ನಾಗೆ ಆತ್ಮವಿಶ್ವಾಸಬೇಕು. ಅದು ನನಗಿದೆ. ನೆಸೆಸಿಟಿ ಈಸ್ ದಿ ಅಡ್ವೆಂಚರ್ ಆಫ್ ಇನ್ವೆನ್ಯನ್ ಅಂತಾರೆ ಅದಕ್ಕೆ’ ರಂಗ ಹೇಳಿದ. ‘ಹಂಗಂದ್ರೇನ್ಲಾ! ಒಸಿ ಬಿಡಿಸಿ ಹೇಳು?’ ಚಮನ್ ಸಿಟ್ಟಿಸಿದ.

‘ನನಗೂ ಅದರರ್ಥ ಸರಿಯಾಗಿ ಗೊತ್ತಿಲ್ಲ ಉಸ್ತಾದ್, ಸೈನ್ಸ್ ಮೇಷ್ಟ್ರು ಪದೆ ಪದೆ ಅಂತಿರ್‍ತಾರೆ’ ಹಲ್ಲುಗಿಂಜಿದ ರಂಗ.

‘ಹುಂ… ನನ್ನ ಮಾತು ನೀನು ಕೇಳಂಗಿಲ್ಲ ಅಂತಿ, ಆತೇಳು ಅಚ್ಚಾಹೋಗಾ’ ಎಂದು ಆಕಾಶ ನೋಡಿದ ಉಸ್ತಾದ್. ಗೆಳೆಯರೆಲ್ಲಾ ಈ ವಿಷಯ ತಿಳಿದು ಮೊದಲು ಗಾಬರಿಗೊಂಡು ಅಡ್ಡಗಾಲು ಹಾಕಿದವರು ಅವನ ಧೃಢನಿರ್ಧಾರಕ್ಕೆ ಸೋತರು ಪ್ರೋತ್ಸಾಹಿಸಿದರು.

ಮರುದಿನ ಚಮನ್‌ಸಾಬಿ ಮತ್ತು ರಾಜಯ್ಯ ಮೇಷ್ಟ್ರ ಜೊತೆ ಎಗ್ಸಿಬಿಶನ್ ಮೇನೇಜರ್ ಸೋಹನಲಾಲನನ್ನು ಕಂಡು ತಾನು ಸ್ಪರ್ಧಿಸುವುದಾಗಿ ಹೇಳಿದ. ಸೋಹನಲಾಲ್ ಪೊದೆ ಮೀಸೆಯಡಿಯಲ್ಲೇ ನಕ್ಕ. ‘ಅಚ್ಚಾ’ ಎಂದವನೆ ಕೆಲವು ಕರಾರುಗಳಿಗೆ ಸಹಿ ಹಾಕಬೇಕೆಂದು ಪೇಪರ್‌ಗಳನ್ನಿಟ್ಟ, ರಾಜಯ್ಯನವರೇ ಅದನ್ನು ಓದಿಕೊಂಡು ನಂತರವೆ ರಂಗನನ್ನು ಸಹಿ ಮಾಡಲು ಸೂಚಿಸಿದರು. ರಂಗ ಅದೆಷ್ಟು ಆತುರದಲ್ಲಿದ್ದನೆಂದರೆ ಅವನಿಗೆ ಪೇಪರ್ ಓದುವಷ್ಟೂ ಪೇಶನ್ಸ್ ಇರಲಿಲ್ಲ. ಸಹಿ ಮಾಡಿದವನೇ ಕೇಳಿದ ‘ಇದ್ರಾಗೇನು ಮೋಸಗೀಸ ಇಲ್ವಲ್ಲಾ ಲಾಲ್?’

‘ನಹಿ ನಹಿ ಯಾರ್… ಜೀವದ ಜೊತೆ ಯಾರಾದ್ರೂ ಹುಡುಗಾಟ ಮಾಡ್ತಾರಾ…’ ಲಾಲ್ ಅಂದ.

‘ನಮ್ಮ ಹುಡ್ಗನಿಗೇನಾದ್ರೂ ಮೋಸ ಆಯ್ತೋ ನಿನ್ನೂ ಈ ಎಗ್ಸಿಬಿಶನ್ ಸಮೇತ ಬೆಂಕಿ ಇಕ್ಕಿ ಸುಟ್ಟು ಬಿಡ್ತೀನಿ… ಹುಶಾರ್’ ರೋಷಾವೇಶದಿಂದ ಎಚ್ಚರಿಸಿದ ಚಮನ್‌ಸಾಬಿ.

‘ತೋಬಾ ತೋಬಾ… ಹಂಗೆಲ್ಲಾ ಆಗಲ್ಲ ಉಸ್ತಾದ್… ಗಾಡ್ ಪ್ರಾಮಿಸ್’ ಅಂದ ಅಂಜಿದ ಲಾಲ್. ರಂಗ ತನ್ನ ಗುರುಗಳೊಡನೆ ಹೊರಟು ನಿಂತಾಗ ಸೋಹನ್‌ಲಾಲ ‘ಜರ್ರಾ ಠಹೆರೋ ಬಾಬು’ ಎಂದವನನ್ನು ನಿಲ್ಲಿಸಿದ. ‘ಈ ಕಾಂಪಿಟೇಶನ್ಗೆ ಯಾರೂ ಬರೋದಿಲ್ಲ ಅಂದ್ರೂಂಡಿದ್ದೆ… ಭೇಷ್. ತು ತೋ ಸಂಪಿಗೆಹಳ್ಳಿ ಶೇರ್ ಹೋ’ ಹೊಗಳಿದ.

‘ಇದಕ್ಕೆಲ್ಲಾ ಭರ್ಜರಿ ಪಬ್ಲಿಸಿಟಿ ಮಾಡ್ತಿವಿ. ನಿಂದು ಡಿಫರೆಂಟ್ ಟೈಪ್ ಫೋಟೋ ಬೇಕು ರಂಗ… ಅದ್ರಾಗೆ ಬಾಡಿ ಶೋಗೇ ಇಂಪಾರ್ಟೆನ್ಸ್ ಇರ್ತದೆ. ಒಳ್ಳೆ ಪೋಜ್ ಕೊಡಬೇಕು ಯಾರ್’ ಎಂದು ತಮ್ಮವನೇ ಫೋಟೋಗ್ರಾಫರ್ ಕರೆಸಿ ರಂಗನನ್ನು ಕಾಚ ಮೇಲೆ ನಿಲ್ಲಿಸಿ ಅವನಿಂದ ಬಾಡಿಬಿಲ್ಡರ್ ತರಹ ವಿವಿಧ ಭಂಗಿಗಳ ಫೋಟೋ ತೆಗೆಸಿದ. ಸುಮಾರಾಗಿ ಕಾಣುತ್ತಿದ್ದ ಹುಡುಗ ಬಟ್ಟೆ ಕಳಚಿ ನಿಂತಾಗ ಕಟ್ಟುಮಸ್ತಾಗಿ ಕಂಡ. ರ್‍ಯಾಂಪ್ ಶೋ ಮಾಡೋರ ತರಾ ಎಗ್ಗಿಲ್ಲದೆ ಸರಸರನೆ ಪೋಜ್‌ಗಳನ್ನು ನೀಡಿದಾಗ ಸೋಹನ್‌ಲಾಲ್ ಉಬ್ಬಿಹೋದ. ಇದನ್ನೆಲ್ಲಾ ನೋಡುತ್ತಾ ನಿಂತ ಮೃತ್ಯು ಪಂಜರದಲ್ಲಿ ದಿನವೂ ಬೈಕ್ ಓಡಿಸಿ ಅಗಾಧ ಚಮತ್ಕಾರ ತೋರುವ ಆಂಟನಿ ಹೊಟ್ಟೆಯಲಿ ಬಗಬಗನೆ ಉರಿ. ಆಂಟನಿ ಬಂದು ನಿಂತಿದ್ದನ್ನು ಗಮನಿಸಿದ ಸೋಹನ್‌ಲಾಲ್ ರಂಗನಿಗೆ ಅವನ ಪರಿಚಯ ಮಾಡಿಸಿದ. ರಂಗ ವಿನೀತನಾಗಿ ಅವನಿಗೆ ವಂದಿಸಿದ. ಅವನು ತೀರಾ ಅಲಕ್ಷಿಸಿದಂತೆ ಬಿಗುವಾಗಿದ್ದ. ಅದನ್ನೇನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ರಂಗ ಮೃತ್ಯು ಪಂಜರದ ಸುತ್ತ ಒಂದು ಸುತ್ತು ಬಂದು ಅದಕ್ಕೆ ನಮಸ್ಕರಿಸಿದ ಅಲ್ಲಿ ನಿಂತ ವಿಶೇಷವಾದ ಬೈಕನ್ನು ಮುಟ್ಟಿ ಮುಟ್ಟಿ ನೋಡಿ ನಮಸ್ಕರಿಸಿದ. ಆಂಟನಿ ಗೊಳ್ಳನೆ ನಕ್ಕಾಗ ರಂಗನೂ ಅವನ ಜೊತೆಗೂಡಿ ನಕ್ಕುಬಿಟ್ಟ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಂಧೀಜಿ : ೧೨೫
Next post ಗಾಂಧಿ ಹುಟ್ಟಿದ್ದು

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…