ಚಳಿಗಾಲದಂತಿದ್ದ ನಿನ್ನ ಅಗಲಿಕೆ ಹೇಗೆ
ಕರಗಿ ಓಡುತ್ತಿರುವ ಸಂವತ್ಸರದ ಸುಖದ
ಕೊಡುಗೆಯಾಗಿದೆ ಈಗ! ಎಷ್ಟು ಜಡಗಟ್ಟಿದೆ,
ಎಂಥ ಕತ್ತಲೆ ಕಾಲ ಕಂಡೆ! ಮುದಿ ಫಾಲ್ಗುಣದ
ಬರಿತನವೆ ಎಲ್ಲೆಲ್ಲೂ. ಕಳೆದ ಸಲ ನೀನಿರದ
ಚೈತ್ರ-ಕಾರ್ತಿಕ ಅವಧಿ ಮಧುವಸಂತನ ಸಿರಿಯ
ತನ್ನ ಒಳಗಡೆ ಹೊತ್ತು ಫಲಿಸಿತ್ತು ಸಮೃದ್ಧ,
ಹೋಲಿತ್ತು ವಿಧವೆಮೈ ತಾಳಿರುವ ಸಿರಿಬಸಿರ.
ಅಷ್ಟು ಸಮೃದ್ದವಿದ್ದೂ ತಂದೆಯೇ ಇರದ ಮಗು
ಎನುವಂತೆ ಮಧುಮಾಸ. ಕಾಯುವುವು ನಿನಗಾಗಿ
ಮಧುಮಾಸದೆಲ್ಲ ಸವಿ; ನೀನೆ ಇಲ್ಲದೆ ಇರಲು
ಹಕ್ಕಿಗಳು ಕೂಡ ಹಾಡುವುದಿಲ್ಲ ದನಿ ಬೀಗಿ.
ಹಾಡಿದರು ಕೂಡ ಬರಿಸಪ್ಪೆ ಹಕ್ಕಿಯ ಕೊರಳು,
ಎಲೆಯ ಮುಖದಲಿ ಬರುವ ಶಿಶಿರ ಋತುವಿನ ನೆರಳು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 97
How like a Winter hath my absence been