ಚಂಡೆಮದ್ಡಳೆ ತಾಳ ಜಾಗಟೆ ಕೊಂಬು ಕಹಳೆ
ಕೊಟ್ಟು ಕುಳಿತಲ್ಲೆ ಒಡ್ಡೋಲಗ
ಕಟ್ಟಿ ಅಭೇದ್ಯ ಕೋಟೆ ದಾಟಿ ಸಮುದ್ರವನಿರುಳೆ
ಉಸಿರು ಬಿಗಿಹಿಡಿದು ಗೆದ್ದ ಕಾಳಗ
ಇನ್ನಿಲ್ಲವೆಂಬ ಅಶ್ವಮೇಧ ಯಾಗ

ಎಲ್ಲ ಮುಗಿಯಿತೆಂದರೆ ಮತ್ತಿದೇನಾರ್ಭಟ
ಅದೇನು ಭಗ್ಗನೆ ಉರಿವ ಪಂಜು ?
ಮಹಾ ರಕ್ಕಸನೆ ಸರಿ ಇವನು ಅಂಥ ಕರಾಳ ನೋಟ
ಲೆಕ್ಕಿಸದೆ ಮುಂಜಾವದ ಮಂಜು
ಕಾರುತಿರುವನು ಎಲ್ಲರ ಮೇಲೆ ನಂಜು

ಮುಗಿಯಿತೆಂದರೆ ಮುಗಿಯುವುದು ಹೇಗೆ ಒಂದು
ಜನಾಂಗವನ್ನೆ ಹುಚ್ಚೆಬ್ಬಿಸಿದ ಪುರಾಣ
ಮಗಧ ದೇಶದ ಅರಸನಿವನು ಹೆಸರು ಮಾಗಧನೆಂದು
ಸದೆಬಡಿಯಲಾರವು ಬಿಲ್ಲು ಬಾಣ
ಇವನಿಗೆ ಅನೇಕ ಆನೆಗಳ ತ್ರಾಣ

ಇವನ ಪ್ರಾಣದ ರಹಸ್ಯವೇನೂ ಹೊಸತಲ್ಲ ನಮಗೆ
ಆದರೂ ತಿಳಿವಂತೆ ಹೊಸ ಗುಟ್ಟು
ಕಾದಿರುವೆವು ವರುಷವರುಷವೂ ಆತಂಕಗೊಂಡು ಬಗೆ
ನಮ್ಮ ತಲ್ಲಣದಲ್ಲಿ ನಿಮ್ಮ ಮಟ್ಟು
ಯುಗದಾಚೆಗೆ ಕಾಲನಿಟ್ಟು
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)