ಉಯ್ಯಾಲೆ ಗಣಗಳಿರುವ ಒಂದು ಅಪೂರ್ವ ಅಂಶಲಯದ ಧಾಟಿ (ಸಾಧನ, ಸಂಪುಟ ೯, ಸಂಚಿಕೆ ೧ (ಜನವರಿ-ಮಾಚ್೯ ೧೯೮೦) ಎಂಬ ಲೇಖನದಲ್ಲಿ ಡಾ|| ಎಂ. ಚಿದಾನಂದಮೂರ್ತಿಯವರು ಪುಲಿಗೆರೆಯ ಶಂಖಜಿನೋದ್ಬವ ಕಾವ್ಯ (ಕವಿಶಂಖ: ಪುಲಿಗೆರೆಯ ಶಂಖಜಿನೋದ್ಭವ ಕಾವ್ಯ, (ಸಂ.): ಎಸ್. ಪಿ. ಪಾಟೀಲ ಮತ್ತು‌ಎಸ್. ವಿ. ಅಯ್ಯನಗೌಡರ, ಶ್ರೀ ವಜ್ರಕೀರ್ತಿ ಗ್ರಂಥಮಾಲೆ, ಲಕ್ಷ್ಮೇಶ್ವರ) ಎಂಬ ಪುಟ್ಟ ಪದ್ಯಕೃತಿ‌ಒಂದರ ಛಂದಸ್ಸನ್ನು ಕುರಿತು ವಿವರವಾಗಿ ಚರ್ಚಿಸಿದ್ದಾರೆ. ಅಲ್ಲಿ ‘ಉಯ್ಯಾಲೆಗಣ’ ಎಂಬ ಹೊಸ ಬಗೆಯ ಕಲ್ಪನೆಯನ್ನು ಮುಂದಿಟ್ಟಿರುವುದಲ್ಲದೆ, ಆ ಪದ್ಯಕೃತಿಯಲ್ಲಿ ಕಾಣುವ ಅಂಶಲಯದ ಧಾಟಿ ಅಪೂರ್ವ ಎಂದು ಹೇಳಿದ್ದಾರೆ. ಅವರು ಮಂಡಿಸಿರುವ ಎರಡು ವಿಚಾರಗಳು ಸಾಕಷ್ಟು ವಿವಾದಾಸ್ಪದವಾಗಿದ್ದು, ಅವುಗಳ ಸಾಧುತ್ವವನ್ನು ಚರ್ಚಿಸುವುದು ಈ ಲೇಖನದ ಉದ್ದೇಶವಾಗಿದೆ.

ಶಂಖಜಿನೋದ್ಭವ ಕಾವ್ಯದಲ್ಲಿ ನೂರ ನಲವತ್ತು ಪದ್ಯಗಳಿವೆ. ಸಂಪಾದಕರು ಆ ಪದ್ಯಗಳನ್ನು ಕೆಳಕಂಡ ವಿಧಾನದಲಿ ಅಚ್ಚು ಮಾಡಿದ್ದಾರೆ:

ಕಂಡು ತಾನಾದೇವಿಯಾ| ವಿಸ್ಮಿತನಾಗಿ
ದಿಂಡುಗೆಡದು ನಮಿಸಿ|
ಪುಂಡರೀಕಾಕ್ಷಿಯನು| ಸ್ತುತಿಸಿದನು
ಮಂಡಲೇಶ್ವರಿಯನುತ

ಕವಿ ಬಳಸಿರುವ ಪ್ರಾಸಕ್ರಮ ಮತ್ತು ಲಂಬರೇಖೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸಂಪಾದಕರು ಪದ್ಯಗಳನ್ನು ಮೇಲಿನ ರೀತಿಯಲ್ಲಿ ಅಚ್ಚು ಮಾಡಿರುವಂತಿದೆ. ಚಿದಾನಂದಮೂರ್ತಿಯವರು “ಮೇಲಿನ ಪದ್ಯವನ್ನ ಧಾಟಿಯ ದೃಷ್ಟಿಯಿಂದ ಹೀಗೆ ಬಿಡಿಸಿ ತೋರಿಸಬಹುದು” ಎನ್ನುತ್ತಾರೆ.

ಕಂಡು ತಾ! ನಾದೇವಿ|ಯಾ| ವಿ | ವಿ | ಮು
ವಿಸ್ಮಿತನಾಗಿ| ವಿ | ವಿ | ಮು
ದಿಂಡುಗೆ|ಡದು|ನಮಿ|ಸಿ
ಪುಲಡರೀ|ಕಾಕ್ಷಿಯ|ನು| ವಿ | ವಿ | ಮು
ಮಂಡಲೇ|ಶ್ವರಿಯನು|ತ ವಿ | ವಿ | ಮು

ಚಿದಾನಂದಮೂರ್ತಿಯವರ ಅಭಿಪ್ರಾಯದಂತೆ ಪದ್ಯದ ಪ್ರತಿಯೊಂದು ಪದವು ಎರಡು ವಿಷ್ಣುಗಣ ಮತ್ತು ಒಂದು ಮುಡಿಯಿಂದ ಕೂಡಿದೆ. ಒಂದು ಮತ್ತು ಮೂರನೆಯ ಪದಗಳಲ್ಲಿ ಲಂಬರೇಖೆಯ ನಂತರ ಸಂಪಾದಕರು ತೋರಿಸಿರುವ ಗಣಗಳು (‘ವಿಸ್ಮಿತನಾಗಿ’ ಮತ್ತು ‘ಸ್ತುತಿಸಿದನು’ ಎಂಬುವು) ಮೂರ್ತಿಯವರ ಮತದಂತೆ ಯಾವ ಪಾದಕ್ಕೂ ಸೇರುವುದಿಲ್ಲ. ಇವು ಕ್ರಮವಾಗಿ ಒಂದು ಮತ್ತು ನಾಲ್ಕನೆಯ ಪಾದಗಳ ನಡುವೆ ನಿಲ್ಲುತ್ತವೆ. ಪದ್ಯದ ಸ್ವಾರಸ್ಯವಿರುವುದೇ ಈ ಗಣದಲ್ಲಿ. ಈ ಗಣದ ಮುಖ್ಯ ಲಕ್ಷಣವೆಂದರೆ ಅದರ ಪ್ರಮಾಣ ಅನಿರ್ದಿಷ್ಟವಾಗಿರುವುದು. ಓದುವಾಗ ಈ ಗಣದ ಜಾಗದಲ್ಲಿ ಲಯ ಒಂದು ಪಾದದಿಂದ ಇನ್ನೊಂದು ಪಾದಕ್ಕೆ ತೂಗುತ್ತದೆ, ಅಥವಾ ಜಾರುತ್ತದೆ ಎಂಬ ಕಾರಣ ಕೊಟ್ಟು ಅವರು ಅದನ್ನು ಉಯ್ಯಾಲೆಗಣ ಎಂದು ಕರೆದಿದ್ದಾರೆ. ವಿಶೇಷವೆಂದರೆ “ಕವಿಯೇನೋ ಆ ಗಣ ಒಂದನೆಯ ಪಾದಕ್ಕೆ ಸೇರಿದ್ದೆಂಬಂತೆ ಭಾವಿಸಿದ್ದಾನೆಂದು ತೋರುತ್ತದೆ. (ಪ್ರಾಸಸ್ಥಾನಗಳನ್ನು ಗಮನಿಸಿದರೆ)” ಎಂದು ಹೇಳಿ ಚಿದಾನಂದಮೂರ್ತಿಯವರು ಕೃತಿಯನ್ನು ಸೃಷ್ಟಿಸಿದ ಕವಿಯ ಸಹಜ ಛಂದೋಜ್ಞಾನವನ್ನೇ ಶರಿಕಿಸಿದ್ಧಾರೆ. (ಹಿಂದಿನ ಎಲ್ಲ ಕವಿಗಳು ತಾವು ಬಳಸಿದ ಛಂದಸ್ಸಿನ ಸ್ವರೂಪವನ್ನು ಗ್ರಹಿಸಿದ್ದು ಮುಖ್ಯವಾಗಿ ಅದನ್ನು ಓದುವ ಧಾಟಿಯ ಮೇಲೆ. ಒಂದು ಛಂದೋವಿಧಾನದ ಗಣಕ್ರಮ, ಒಂದೊಂದು ಗಣದಲ್ಲಿರಬೇಕಾದ ವರ್ಣ|ಅಂಶ| ಮಾತ್ರೆ ಇವುಗಳ ಗಣಿತಾತ್ಮಕವಾದ ಗ್ರಹಿಕೆ ಆ ಛಂದೋಕ್ರಮವನ್ನು ವಿಶ್ಲೇಷಿಸಲು, ವಿವರಿಸಲು ಸಹಾಯವಾಗುತ್ತದೆ ಎನ್ನುವುದೇನೋ ನಿಜ. ಆದರೆ ಯಾವ ಕವಿಯೂ ವರ್ಣ|ಅಂಶ| ಮಾತ್ರೆಗಳ ಲೆಕ್ಕ ಹಿಡಿಯುತ್ತ ಪದ್ಯ ಬರೆಯುವುದಿಲ್ಲವಷ್ಟೆ. ಛಂದಸ್ಸಿನ ಓಟವನ್ನೇ ಆಧಾರವಾಗಿಟ್ಟುಕೊಂಡು ಪದ್ಯ ರಚಿಸಿದ ಕವಿಯ ಲಯಜ್ಞಾನವನ್ನು ಅದರ ಗಣಿತ ಗ್ರಹಿಕೆಯ ಬಲದ ಮೇಲೆ ತಪ್ಪೆನ್ನುವುದು ಸರಿಯಾಗಲಾರದು. ಒಂದು ಹೊಸ ಛಂದೋವಿಧಾನವ ಸ್ವರೂಪವನ್ನು ಗ್ರಹಿಸಲು ಹೊರಡುವಾಗ ಕವಿಯನ್ನೇ ಅನುಸರಿಸಿ ತಿಳಿಯಲೆತ್ನಿಸುವುದು ಹೆಚ್ಚು ಲಾಭಕರವಾದುದು ಎನ್ನಿಸುತ್ತದೆ.)

ಈ ಕೃತಿಯನ್ನು ಬರೆದ ಕವಿ ಪೂರ್ಣವಾಗಿ ಮತ್ತು ಕೃತಿಯನ್ನು ಪ್ರಕಟಿಸಿರುವ ಸಂಪಾದಕರು (ಕೆಲವು ಅಪವಾದ ಬಿಟ್ಟರೆ) ಒಟ್ಟಿನಲ್ಲಿ ಈ ಛಂದಸ್ಸನ್ನು ಸರಿಯಾಗಿಯೇ ಗ್ರಹಿಸಿದ್ದಾರೆಂದು ನನ್ನ ತಿಳಿವಳಿಕೆ. ಒಟ್ಟು ಆಕಾರದಲ್ಲಿ ಈ ಛಂದಸ್ಸು ಸಾಂಗತ್ಯವನ್ನು ಸುಮಾರಾಗಿ ಹೋಲುವ, ಆದರೆ ವಿವರಗಳಲ್ಲಿ ಅದರಿಂದ ಸಾಕಷ್ಟು ಭಿನ್ನವಾದ ಬಗೆಯಲ್ಲಿ ವಾಚನಗೊಳ್ಳುವ ಒಂದು ಅಂಶಲಯದ ಧಾಟಿಯಾಗಿದೆ. ಇವುಗಳಿಗೆ ಹೋಲಿಕೆಯಿರುವುದು ಒಟ್ಬುಪಾದ ಮತ್ತು ಗಣ ಸಂಖ್ಯೆಯಲ್ಲಿ (ಎರಡರಲ್ಲಿಯೂ ಪದ್ಯದ ಪೂರ್ವಾರ್ಧ ಅದರ ಉತ್ತರಾರ್ಧಕ್ಕೆ ಸಮನಾಗಿರುವುದರಿಂದ ಹೋಲಿಕೆಗೆ ಅರ್ಧ ಭಾಗವನ್ನು ಬಳಸಿದರೆ ಸಾಕು). ಮೊದಲ ಪಾದದಲ್ಲಿ ನಾಲ್ಕು ಗಣಗಳಿವೆ. ಎರಡನೆಯ ಪಾದದಲ್ಲಿ ಮೂರು ಗಣಗಳಿವೆ. ಮುಕ್ತಾಯಕ್ಕೆ ಹಿತವಾಗಿ ಒದಗುವ ಕಡಿಮೆ ಅಂಶಪ್ರಮಾಣದ ಗಣವು ಕೂಡ ಎರಡರಲ್ಲೂ ಇದೆ. ಮುಖ್ಯ ವ್ಯತ್ಯಾಸವೆಂದರೆ ಸಾಂಗತ್ಯದಲ್ಲಿ ಮೊದಲ ಪಾದದ ಮೂರನೆಯ ಗಣ ಉಳಿದ ಪಾದಗಳಂತೆಯೇ ವಿಷ್ಣುಗಣ. ಪ್ರಸ್ತುತ ಛಂದಸ್ಸಿನಲ್ಲಿ ಈ ವಿಷ್ಣುಗಣಕ್ಕೆ ಬದಲಾಗಿ ಅದರ ಸ್ಥಳದಲ್ಲಿ ಒಂದು ಮುಡಿ ಬರುತ್ತದೆ. ಸಾಂಗತ್ಯದ ಎರಡನೆಯ ಪಾದದ ಕಡೆಯಲ್ಲಿ (ಮೂರನೆಯ ಗಣವಾಗಿ) ಬ್ರಹ್ಮಗಣ ಬರುತ್ತದೆ. ಇಲ್ಲಿ ಆ ಗಣದ ಜಾಗದಲ್ಲಿಯೂ ಒಂದು ಮುಡಿಯೇ ಬರುತ್ತದೆ. ಪ್ರಸ್ತುತ ಛಂದಸ್ಸಿನ ಪ್ರತಿ ಪಾದದ ಮೂರನೆಯ ಗಣವು ಒಂದು ಮುಡಿಯೇ ಆಗಿರುತ್ತದೆ. ಈ ಮುಡಿಗಳೇ ಅದರ ವೃಶಿಷ್ಟ್ಯವಲ್ಲದೆ ಚಿದಾನಂದಮೂರ್ತಿಯವರು ಹೇಳುವ ‘ಉಯ್ಯಾಲೆಗಣ’ವಲ್ಲ. (ಕೆಲವು ಪದ್ಯಗಳಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಒಂದು ಎರಡು ಮಾತ್ರೆಗಳಷ್ಟು ಕಾಲದ ಹುಸಿ ಇದರ ಇನ್ನೊಂದು ವಿಶೇಷಾಂಶ. ಇದನ್ನು ಮುಂದೆ ಪರಿಶೀಲಿಸಲಾಗುತ್ತದೆ). ಈವರೆಗೆ ಹೇಳಿದ್ದನ್ನು ಪಾದಗಣಗಳ ಕ್ರಮವನ್ನನುಸರಿಸಿ ಹೀಗೆ ಗುರುತಿಸಬಹುದು.

ಸಾಂಗತ್ಕದ ಸಾಮಾನ್ಯಲಕ್ಷಣ ಪ್ರಸ್ತುತ ಪದ್ಯದ ಸಾಮಾನ್ಯ ಲಕ್ಷಣ

ವಿ ವಿ ವಿ ವಿ ವಿ ವಿ ಮು ವಿ

ವಿ ವಿ ಬ್ರ ವಿ ವಿ ಮು

ವಿ ವಿ ವಿ ವಿ ವಿ ವಿ ಮು ವಿ

ವಿ ವಿ ಬ್ರ ವಿ ವಿ ಮು
ಪ್ರಸ್ತುತ ಪದ್ಯದ ಸಾಮಾನ್ಯ ಲಯವಿನ್ಯಾಸವನ್ನು ಒಂದು ನಿದರ್ಶನದ ಮೂಲಕ ನೋಡಬಹುದು.

ರನ್ನ ಜ| ನ್ನನ ಹಂಪ|ನ| ಗುಣಧರ್ಮ
ಸನ್ನುತ|ನೇಮಿಚಂ|ದ್ರ
ಮುನ್ನಿನ| ಕೃತಿ ಪೇಳ್ದ|ರ| ಕವಿಗಳ
ಚೆನ್ನಡಿ|ಗೆರಗುವೆ|ನು|

ಶಂಖಜಿನೊಭೀದ್ಭವದ ಕೆಲವು ಪದ್ಯಗಳಲ್ಲಿ ಹುಸಿರೂಪದ ಇನ್ನೊಂದು ವಿಶೇಷಾಂಶವಿದೆಯೆಂದು ಮೇಲೆ ಹೇಳಿದೆಯಷ್ಟೆ. ಚಿದಾನಂದಮೂರ್ತಿಗಳು ಲಯವಿಶ್ಲೇಷಣೆಯ ಸಲುವಾಗಿ ಆಯ್ದುಕೊಂಡ ನಿದರ್ಶನ ಪದ್ಯಗಳಲ್ಲಿಯೂ ಈ ಹುಸಿ ಇದೆ. ಆದರೆ ಅವರು ಅದನ್ನು ಗುರುತಿಸಿಲ್ಲ. ಇಲ್ಲಿ ಅದನ್ನು ನೋಡಬಹುದು.

ಕಂಡು ತಾ| ನಾದೇವಿ|ಯಾ-ವಿ|ಸ್ಮಿತನಾಗಿ ವಿ|ವಿ|ಮು + ಹು|ವಿ
ದಿಂಡುಗೆ|ಡದು ನಮಿ|ಸಿ ವಿ|ವಿ|ಮು
ಪುಂಡರೀ|ಕಾಕ್ಷಿಯ|ನು-ಸ್ತು|ತಿಸಿದನು ವಿ|ವಿ|ಮು + ಹು|ವಿ
ಮಂಡಲೇ|ಶ್ವರಿಯೆನು|ತ ವಿ|ವಿ|ಮು

ಮೊದಲ ಮತ್ತು ಮೂರನೆಯ ವಾದಗಳಲ್ಲಿ ಮುಡಿಯಕ್ಷರದ ನಂತರ ಗುರುತಿಸಿರುವ ‘ವಿ’ ಮತ್ತು ‘ಸ್ತು’ಗಳು ಹುಸಿವರ್ಣಗಳು. ಎಲ್ಲೇ ಅಗಲಿ ಹುಸಿ ಸಾಧ್ಯವಾಗಲು ಅದರ ಹಿಂದಿನ ಗಣ ಮುಡಿಯೋ ಅಥವಾ ಪದ್ಮಗಣವೋ ಆಗಿರಬೇಕಾಗುತ್ತದೆ. (ಪದ್ಯದ ಮೊದಲ ಸಾಲಿನಲ್ಲಿ ಮೊದಲ ಗಣದ ಆರಂಭದಲ್ಲಿಯೂ ಬರಬಹುದು.) ಇಲ್ಲಿ ಆ ಅನುಕೂಲವಿರುವುದರಿಂದ ಹುಸಿವರ್ಣದ ಬಳಕೆಗೆ ಅವಕಾಶವಾಗಿದೆ. ಇಲ್ಲಿರುವ ಹುಸಿಯ ಹಿಂದೆ ಒಂದು ಅಂಶದಷ್ಟು ಅಕ್ಷರ ಪ್ರಮಾಣವುಳ್ಳ (ಮುಡಿಯಾಗಿ ಬಂದಿರುವ ಅಕ್ಷರ ಲಘುವಾಗಿದ್ದರೂ ಅದಕ್ಕೆ ಗುರುವಿನ ಬೆಲೆ ಬರುವುದರಿಂದ ಅದು ಒಂದು ಅಂಶವೇ ಆಗುತ್ತದೆ.) ಆದರೆ ಮೂರು ಅಂಶಗಳ ಕಾಲ ಪ್ರಮಾಣವಿರುವ ಮುಡಿ ಬಂದಿದೆ. ಉಚ್ಚರಿಸಬೇಕಾದದ್ದು ಒಂದು ಅಂಶದಷ್ಟು ಅಕ್ಷರ. ಅದಕ್ಕೆ ದೊರೆತಿರುವುದು ಮೂರು ಆಂಶಗಳ ಉಚ್ಚಾರಣೆಗೆ ಬೇಕಾದ ಕಾಲ. ಹೀಗೆ ಹೆಚ್ಚಿನ ಕಾಲ ಸೌಲಭ್ಯ ಪಡೆದ ಈ ಮುಡಿರೂಪದ ಗಣ ಮುಂದೆ ಬರುವ ಹುಸಿಯನ್ನು ಲಯದೊಳಗೆ ಸೇರಿಸಿ ಹೇಳಲು ಅಗತ್ಯವಾದ ಕಾಲವನ್ನು ಒದಗಿಸುತ್ತದೆ. ಎಂದರೆ ಹುಸಿವರ್ಣ ಮುಡಿಯ ಕಾಲದ ಗಡಿಯೊಳಗೇ ಸೇರಿಕೊಳ್ಳುತ್ತದೆ. ಇಲ್ಲಿ ಬರುವ ಹುಸಿ ಸ್ವರೂಪದಲ್ಲಿ ಒಂದು ಗುರುವೋ, ಲಘುವೋ ಯಾವುದಾದರೂ ಆಗಬಹುದು. ತುಂಬಾ ಅಪರೂಪವಾಗಿ ಅದು ಎರಡು ಲಘುವಿನಷ್ಟು ಪ್ರಮಾಣದ್ದೂ ಆಗಬಹುದು. ಉದಾ:

ಭೂಮಿ |ಮೂ|ರರ ದೇವ|ಗೆ – ಪರ||ಮಾಹ್ನಿಕವ ವಿ|ವಿ|ಮು+ಹು|ರು
ಹೇಮ ಭಾ| ಜನದೊಳಿಟ್ಟು ವಿ|ವಿ|ಮು

ಮೊದಲನೆಯ ಮತ್ತು ಮೂರನೆಯ ಪಾದಗಳಲ್ಲಿ (ಮುಡಿಯ ಆನಂತರ ಬರುವ) ಕಡೆಯ ಗಣ ಸಾಮಾನ್ಯವಾಗಿ ವಿಷ್ಣುಗಣ. ಒಮ್ಮೊಮ್ಮೆ ಅದು ರುದ್ರವಾಗುವುದೂ ಉಂಟು. ಚಿದಾನಂದಮೂರ್ತಿಯವರು ಅದನ್ನು ಅನಿರ್ದಿಷ್ಣ ಪ್ರಮಾಣದ ಗಣವೆಂದು ವಿವರಿಸುತ್ತಾರೆ. “ಅದರಲ್ಲಿ ಮೂರು, ನಾಲ್ಕು, ಐದು ಅಕ್ಷರಗಳಿರಬಹುದು. ಅತಿ ವಿರಳವಾಗಿ ಆರಕ್ಷರಗಳೂ ಇರಬಹುದು. ಕೆಲವೆಡೆ ರುದ್ರಗಣಕ್ಕಿಂತ ದೊಡ್ದದಾಗಿರುವುದೂ ಉಂಟು”. “ರುದ್ರಕ್ಕಿಂತ ಒಂದು ಅಂಶ ಎರಡು ಅಂಶದಷ್ಟೂ ಹೆಚ್ಚೂ ಇರಬಹುದು.” “ಮಾತ್ರೆಗಳ ದೃಷ್ಟಿಯಿಂದ
ಮೂರರಿಂದ ಏಳು ಮಾತ್ರೆಗಳು ಬಂದಿರಬಹುದು”. “ಆದರೂ ಅದನ್ನು ಅಖಂಡ ಗಣವಾಗಿಯೇ ಭಾವಿಸಬೇಕು” ಎನ್ನುತ್ತಾರೆ.

ಈ ಗಣದ ದೀರ್ಘತೆಯನ್ನು ತೋರಿಸಲು ‘ಸಾಗರದತ್ತ’, ‘ಹೇಳಿದ ಕಥೆಯ’ ಎಂಬ ಐದು ಆರು ಅಂಶಗಳಿರುವ, ಏಳು ಮಾತ್ರೆಗಳಷ್ಟು ಕಾಲವ್ಯಾಪ್ತಿಯುಳ್ಳಗಣಗಳನ್ನು ನಿದರ್ಶನವಾಗಿ ಕೊಡುತ್ತಾರೆ. ವಾಸ್ತವವಾಗಿ ಇದು ಅನಿರ್ದಿಷ್ಟ ಪ್ರಮಾಣದ ಗಣವೇನಲ್ಲ, ಅನಿರ್ದಿಷ್ಟ ಪ್ರಮಾಣದ್ದಾದರೆ ಅದನ್ನು ವಾಚನದ ಧಾಟಿಗೆ ಯಾವ ನೆಲೆಯಲ್ಲೇ ಆಗಲಿ, ಒಳಪಡಿಸುವುದು ಹೇಗೆ? ಅದು ಸ್ಪಷ್ಟವಾಗಿ ನಿರ್ದಿಷ್ಪ ಪ್ರಮಾಣದ ಗಣ. ಈ ಗಣ ಸಾಮಾನ್ಯವಾಗಿ ವಿಷ್ಣುಗಣವಾಗಿರುತ್ತ ಒಮ್ಮೊಮ್ಮೆ ಅಪರೂಪವಾಗಿ ರುದ್ರಗಣವೂ ಆಗಿರುತ್ತದೆ, ಅಷ್ಟೆ. ಎಲ್ಲಿಯೂ ಅದು ರುದ್ರಕ್ಕೆ ಮೀರಿದ ಪ್ರಮಾಣವಾಗಿ ಬಂದಿಲ್ಲ. ಈ ಗಣದ ಆರಂಭಕ್ಕೆ ಮುಂಚೆ ಕಾಣಿಸಿಕೊಳ್ಳುವ ಹುಸಿಯನ್ನು ಮೂರ್ತಿಯವರು ಹುಸಿಯೆಂದು ಗುರುತಿಸದೆ ಈ ಗಣದ ಜೊತೆಗೆ ಸೇರಿಸಿಕೊಂಡು ಬಿಡುವುದರಿಂದ ಅದು ಅನಿರ್ದಿಷ್ಟ ಪ್ರಮಾಣದ್ದಾಗಿ ಕಾಣುತ್ತದೆ. ಹುಸಿಯ ಜೊತೆಯಿಲ್ಲದ ವಿಷ್ಣುಗಣವನ್ನೇನೋ ಅವರು ವಿಷ್ಣುಗಣವೆಂದು ಸರಿಯಾಗಿ ಕರೆದರೂ ಹುಸಿಸಹಿತವಾದ ವಿಷ್ಣುಗಣವನ್ನು ರುದ್ರಗಣವೆಂದೂ ಹುಸಿಸಹಿತವಾದ ರುದ್ರಗಣವನ್ನು “ರುದ್ರಕ್ಕಿಂತ ಒಂದು ಎರಡು ಅಂಶದಷ್ಟು” ಹೆಚ್ಚಾದ ಗಣವೆಂದೂ ತಪ್ಪಾಗಿ ವಿವರಿಸಿದ್ದಾರೆ.

ಕಂಡು ತಾ| ನಾವೇವಿ! ಯಾವಿ|ಸ್ಮಿತನಾಗಿ|

ಎಂಬ ಕಡೆ ತುದಿಯಲ್ಲಿ ವಿಷ್ಣುಗಣ ಬಂದಿದೆಯಷ್ಟೆ. ಇದನ್ನು ಅವರು,

ಕಂಡು ತಾ| ನಾವೇವಿ! ಯಾ|ವಿಸ್ಮಿತನಾಗಿ

ಎಂದು ವಿಂಗಡಿಸಿಕೊಂಡು ಕಡೆಯ ಗಣ (ವಿಸ್ಮಿತನಾಗಿ) ರುದ್ರಕ್ಕಿಂತಲೂ ದೊಡ್ದದಾಗುತ್ತದೆಯೆಂದು ಭಾವಿಸುತ್ತಾರೆ. ಅವರು ಪ್ರಸ್ತಾಪಿಸುವ ‘ಸಾಗರದತ್ತ’, ‘ಹೇಳಿದ ಕಥೆಯ’ ಗಣಗಳ ವಿಷಯವಾದರೂ ಇದೇ. ಅವು ಹುಸಿಸಹಿತವಾದ ರುದ್ರಗಣಗಳು. ಆಂಶಲಯದ ಅಳತೆಗೆ ಮೀರಿದ ಅಕ್ಷರಗುಚ್ಛವಾಗಿ ಅವು ಕಂಡದ್ದರಿಂದ ಆ ಗಣಗಳನ್ನೇ ಅನಿರ್ದಿಷ್ಟ ಪ್ರಮಾಣದ ಗಣವೆಂದು ಅವರು ಭಾವಿಸಿದ್ದಾರೆ. ಹಾಗೆಂದೇ ಲಯಬದ್ಧವಾದ ಗಣಗಳಿರುವ ಸಾಲುಗಳಿಂದ ಅದನ್ನು ಪ್ರತ್ಯೇಕಿಸಿ ಎರಡು ಪಾದಗಳ ನಡುವೆ ಅದನ್ನು ಇರಿಸಿದ್ದಾರೆ. ಮಾತನ್ನು ಲಯಾನುಸಾರವಾಗಿ ನಿರ್ದಿಷ್ಟ ತಾಳಕ್ಕೊಳಪಡಿಸಿ ತರುವುದೇ ಛಂದಸ್ಸಿನ ಲಕ್ಷಣವಾಗಿರುವುದರಿಂದ ಪದ್ಯದ ನಡುವೆ ಅನಿರ್ದಿಷ್ಟ ಪ್ರಮಾಣದ ಮಾತು ಇರುತ್ತದೆಯೆಂಬ ಹೇಳಿಕೆ ಸಾಧುವಾಗುವುದಿಲ್ಲ.

ಉಯ್ಯಾಲೆಗಣದ ಕಾಲಾವಧಿಯು ಮಾತ್ರಾದೃಷ್ಟಿಯಿಂದ ನೋಡಿದಾಗ ಮೂರು ಮಾತ್ರೆಗಳಿಂದ ಏಳು ಮಾತ್ರೆಗಳವರೆಗಿರುತ್ತದೆ ಎಂದು ಚಿದಾನಂದಮೂರ್ತಿಯವರ ಹೇಳಿಕೆ (ಇದು ಮೂರು ಮಾತ್ರೆಗಳ ಕಾಲದಷ್ಟು ಚಿಕ್ಕದಾಗಿರಬಹುದು ಎನ್ನುವ ಚಿದಾನಂದ ಮೂರ್ತಿಯವರು ಈ ಗಣ ‘ಎಲ್ಲ ಕಡೆಗೂ ಬ್ರಹ್ಮಗಣಕ್ಕಿಂತ ದೊಡ್ಡದು’ ಎಂದಾಗ ಹೇಳಿಕೆಗಳಲ್ಲಿ ಪರಸ್ಪರ ವಿರೋಧ ಕಾಣುತ್ತದೆ. ಮೂರು ಮಾತ್ರೆಗಳ ಕಾಲದಗಣ ಅಂಶಗಣವಾಗಿದ್ದಾಗ ಬ್ರಹ್ಮಗಣವಲ್ಲದೆ ಬೇರೆ ಯಾವ ಗಣವಾಗಲು ಸಾಧ್ಯ?) (ಅದು ಅನಿರ್ದಿಷ್ಟವಾಗಿ ಅವರಿಗೆ ಕಂಡದ್ದು ಆದರೆ ಈ ದೀರ್ಘತೆಯಿಂದಲೇ). ಆದರೆ ಈ ಕೃತಿಯಲ್ಲಿ ಅದು ಎಲ್ಲಿಯೂ ಐದು ಮಾತ್ರೆಗಿಂತ ಹೆಚ್ಚಿನ ಪ್ರಮಾಣದ್ದಾಗಿ ಬಂದಿಲ್ಲ. (ರುದ್ರಗಣಗಳಲ್ಲಿ ನಾಲ್ಕು ಆಂಶಗಳಿರುತ್ತದೆಯಾಗಿ ಐದಕ್ಕಿಂತ ಹೆಚ್ಚು ಮಾತ್ರೆಗಳ ಮಾತು ಅಲ್ಲಿ ಇರುವುದು ಸಾಧ್ಯ. ಆದರೆ ಈ ಕೃತಿಯಲ್ಲಿ ಮತ್ತು ಈ ನಿರ್ದಿಷ್ಪ ಎಡೆಯಲ್ಲಿ ಬರುವ ಗಣದಲ್ಲಿ ಅದು ಐದು ಮಾತ್ರೆಗಳಿಗೆ ಮೀರಿಲ್ಲ.) ಹಾಗೆಯೇ ನಾಲ್ಕು ಮಾತ್ರೆಗಳಿಗಿಂತ ಕಡಿಮೆ ಅಂಶ ಪ್ರಮಾಣದ್ದಾಗಿಯೂ ಬಳಕೆಯಾಗಿಲ್ಲ. ಅದು ನಾಲ್ಕು ಮಾತ್ರೆಯಿಂದ ಐದು ಮಾತ್ರೆಗಳವರೆಗಿನ ಕಾಲವ್ಯಾಪ್ತಿಯುಳ್ಳ ವಿಷ್ಣು ಅಥವಾ ರುದ್ರಗಣ ಮಾತ್ರವಾಗಿದೆ. ರುದ್ರಗಣಕ್ಕೆ ಹುಸಿಯನ್ನು ಸೇರಿಸಿಕೊಂಡದ್ದರಿಂದ ಆದ ಏಳು ಮಾತ್ರೆಯವಾಗಿ ಕಂಡಿತೆನ್ನುವುದನ್ನು ನಾವು ಅಗಲೇ ನೋಡಿದೆವು (ಉದಾ: ಸಾಗರದತ್ತ, ಹೇಳಿದ ಕಥೆಯ). ಹಾಗಾದರೆ ಅದು ಮೂರು ಮಾತ್ರೆಯಷ್ಟು ಕಾಲದ ಕಿರಿಗಣವಾಗಿ ಕಂಡದ್ದು ಹೇಗೆ? ಮೊದಲ ಮತ್ತು ಮೂರನೆಯ ಪಾದಗಳಲ್ಲಿ ಇರುವ ಲಂಬರೇಖೆಯನ್ನು (ಲಿಪಿಕಾರ ತಪ್ಪಾಗಿ ಬರೆದ ಅಥವಾ ಸಂಪಾದಕರು) ತಪ್ಪಾಗಿ ಅಚ್ಚಿಟ್ಟ ಪದ್ಯಗಳಲ್ಲಿ (ಲಂಬರೇಖೆಯ ನಂತರ ಬರುವ) ಈ ಗಣ ಮೂರು ಮಾತ್ರೆಯದಾಗಿರುವಂತೆ ನೋಟಕ್ಕೆ ತೋರುತ್ತದೆ. ಲಯ ಹಿಡಿದು ಓದಿಕೊಂಡು ಸರಿಪಡಿಸಬಹುದಾದ ತಪ್ಪು ಅದು; ತಪ್ಪು ಲಿಪಿಕಾರನದಾಗಿದ್ದಲ್ಲಿ ಸಂಪಾದಕರು ಸರಿಪಡಿಸಬಹುದಾಗಿತ್ತು. ಸಂಪಾದಕರದೇ ಆದಾಗಲೂ ಚಿದಾನಂದಮೂರ್ತಿಯವರು ಅದರ ಕಡೆಗೆ ಗಮನ ಹರಿಸಬಹುದಾಗಿತ್ತು. ಆಗ ಅದು ಮೂರು ಮಾತ್ರೆಯ ಗಣವಾಗಿ ‘ಕಾಣು’ತ್ತಿರಲಿಲ್ಲ. ಲಂಬರೇಖೆ ತಪ್ಪಾಗಿರುವ ಪಾದಗಳಿಗೆ ಇಲ್ಲಿ ನಾಲ್ಕು ನಿದರ್ಶನಗಳನ್ನು ನೋಡಬಹುದು. ಪಾದ ಅಚ್ಚಾಗಿರುವ
ರೀತಿಯನ್ನು A ಎಂದೂ ಅಚ್ಚಾಗಬೇಕಿದ್ದ ರೀತಿಯನ್ನು B ಎಂದೂ ಕರೆದಿದೆ.

೧. A ಜಲಜನಾಭನ ಸುತನಾ ಗೆಲಿದ! ದೇವ ಪದ್ಯ ೪೦
B ಜಲಜನಾಭನ ಸುತನಾ | ಗೆಲಿದ ದೇವ

೨. A ಕುಂದಣ ಕೊಪ್ಪರಿಗೆಯೊಳು | ತಾವು
B ಕುಂದಣ ಕೊಪ್ಪರಿಗೆ|ಯೊಳು ತಾವು ಪದ್ಯ ೧೦೧

೩. A ಫುಲ್ಲಶರನ ಗಲಿದಾ ಜಿನಗೆ | ಪುಷ್ಪ
B ಫುಲ್ಲಶರನ ಗೆಲಿದಾ| ಜಿನಗೆ ಪುಷ್ಪ ಪದ್ಯ ೫೧

೪. A ದಿನಕರನೆಂಬ ತಾರಿಬ್ರಚೂಡನು | ತನ್ನ
B ದಿನಕರನೆಂಬ ತಾಂಬ್ರ| ಚೂಡನು ತನ್ನ ಪದ್ಯ ೬೯

ಲಯಬದ್ಧವಾಗಿ ಓದಿಕೊಳ್ಳಲು ಬರುವವರಿಗೆ ಇಲ್ಲಿ ತಿದ್ದಿ ತೋರಿಸಿರುವ ರೀತಿ ಸರಿಯೆನ್ನುವುದಕ್ಕೆ ಬೇರೆ ಸಾಕ್ಷ್ಯದ ಅಗತ್ಯವೇನೂ ಇಲ್ಲ. ಆದರೂ ಈ ತಿದ್ದುಪಾಟಿನಿಂದ ಗಣಕ್ರಮವು ಸರಿಯಾಗುವುದೇ ತಿದ್ದುಪಾಟಿನ ಸಾಧುತ್ವಕ್ಕೆ ಒಂದು ಪ್ರಬಲವಾದ ಸಾಕ್ಷ್ಯ. ಒಂದು ಮತ್ತು ಮೂರನೆಯ ಪಾದಗಳಲ್ಲಿ ಲಂಬರೇಖೆಯ ಹಿಂದೆ ಎರಡು ವಿಷ್ಣು ಗಣಗಳು ಮತ್ತು ಒಂದು ಮುಡಿ ಇರಬೇಕಷ್ಟೆ. ಲಂಬರೇಖೆಯನ್ನು ತಪ್ಪಾಗಿ ಹಾಕಿರುವ ಪಾದಗಳಲ್ಲಿ ರೇಖೆಗೆ ಮುಂಚೆ ಅದಕ್ಕಿಂತ ಹೆಚ್ಚಿನ ಅಂಶಗಳು ಇವೆ. ಹಾಗೆಯೇ ಲಂಬರೇಖೆಯ ಆಚೆಗೆ
(ಮೂರು ಮಾತ್ರೆಗಳ ಕಾಲದ) ಬ್ರಹ್ಮಗಣವಿದೆ. ಲಂಬರೇಖೆಯನ್ನು ಸರಿಪಡಿಸಿದ ಮೇಲೆ ರೇಖೆಗೆ ಮುಂಚೆ ಎರಡು ವಿಷ್ಣುಗಣ ಮತ್ತು ಒಂದು ಮುಡಿ ಮಾತ್ರ ಉಳಿದು ರೇಖೆಯ ಆಚೆಗೆ, ಅಲ್ಲಿ ಬರಬೇಕಾದ ಸಹಜ ವಿಷ್ಣುಗಣವೇ ಬಂದಿದೆ. ಇವುಗಳಲ್ಲಿ ೧, ೨, ೪ನೆಯ ನಿದರ್ಶನಗಳಲ್ಲಿ ಆ ವಿಷ್ಣುಗಣದ ಜೊತೆಗೆ ಒಂದು ಹುಸಿಯೂ ಸೇರಿಕೊಂಡಿದೆ.

ಮೂರು ಮಾತ್ರೆಯ ಕಿರಿಗಣ ಇಲ್ಲವೆಂದಾಯಿತು. ಏಳು ಮಾತ್ರೆಯ ಹಿರಿ ಗಣವೂ ಇಲ್ಲ. ಅವರು ನಿದರ್ಶನವಾಗಿ ಕೊಡುವ ಅತಿದೊಡ್ಡ ಗಣಗಳೂ ಏಳು ಮಾತ್ರೆಯ ಕಾಲಪ್ರಮಾಣದ ಗಣಗಳಲ್ಲ. ಕೆಳಗೆ ಅದನ್ನು ನೋಡಬಹುದು:

ಪದ್ಯ ೪೦ ಬಡವರೊ|ಡವೆ|ಗಂಡಂ|ತೆ ಸಾ| ಗರದತ್ತ ವಿ|ವಿ|ಮು+ಹು|ವಿ
ಪೊಡವಿಗೊಡೆಯ ಪುಟ್ಪರೆ ವಿ|ವಿ|ಮು

ಪದ್ಯ ೧೩೪ ಸುತವರ|ಕವಿಶಂಖ|ನು ಹೇ|ಳಿದ ಕಥೆಯ ವಿ|ವಿ|ಮು+ಹು|ವಿ
ಅತಿಜಾಣ|ರೆಲ್ಲ ಕೇ|ಳಿ ವಿ|ವಿ|ಮು

ಇಲ್ಲಿ ‘ಸಾ|ಗರದತ್ತ’ ಮತ್ತು ‘ಹೇ|ಳಿದ ಕಥೆಯ’ – ಎರಡೂ ಕ್ರಮವಾಗಿ ಹುಸಿಸಹಿತವಾದ ವಿಷ್ಣು ಮತ್ತು ರುದ್ರ ಗಣಗಳು. ಇವು ಎರಡೂ ಐದು ಮಾತ್ರೆಯ ಅತಿ ಕಿರಿಗಣ ವ್ಯಾಪ್ತಿಯುಳ್ಳದ್ದಾಗಿವೆ. ಮೇಲಿನ ವಿವರಣೆಯಿಂದ ಮೂರು ಮಾತ್ರೆಯ ಅತಿ ಕಿರಿಗಣವಾಗಲಿ, ಏಳು ಮಾತ್ರೆಯ ಅತಿ ಹಿರಿಗಣವಾಗಲಿ ಈ ಛಂದಸ್ಸಿನಲ್ಲಿ ಇಲ್ಲವೆನ್ನುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ಆ ತಪ್ಪು ಕಲ್ಪನೆಯನ್ನು ಆಧರಿಸಿ ಅದನ್ನು ಅನಿರ್ದಿಷ್ಟ ಪ್ರಮಾಣದ ಗಣವೆಂದು ವಿವರಿಸಿದ ಚಿದಾನಂದಮೂರ್ತಿಯವರ ಹೇಳಿಕೆ ಸರಿಯಲ್ಲವೆಂದಾಗುತ್ತದೆ. ನಿರ್ದಿಷ್ಟ ಪ್ರಮಾಣದ ಈ ಗಣ ಪಾದಗಳೆರಡರ ಮಧ್ಯೆ ಇಡಬೇಕಾದ ಗಣವಾಗಿರದೆ ಲಯಬದ್ಧವಾದ ಒಂದು ಮೂರನೆಯ ಪಾದಗಳಿಗೆ ಸೇರಬೇಕಾದ ಗಣವಾಗುತ್ತದೆ.

ಮೇಲಿನ ವಿವರಣೆಯ ದೃಷ್ಟಿಯಿಂದ ಚಿದಾನಂದಮೂರ್ತಿಯವರು ತಮ್ಮ ಲೇಖನದಲ್ಲಿ ಉಲ್ಲೇಖಿಸಿರುವ ಇನ್ನೊಂದು ಪದ್ಯವನ್ನು ಪರಿಶೀಲಿಸಬಹುದು. ಅವರು ಅದನ್ನು ವಿಂಗಡಿಸಿಕೊಟ್ಟಿರುವ ರೀತಿ ಹೀಗಿದೆ:

ತಮ್ಮೊಳು ತಾವೆಲ್ಲರು-
[ಓಕುಳಿಗಳ]
ಗಮ್ಮನೆ ಆಡುತಲಿ
ಕಮ್ಮಂಗೋಲನ ಗೆಲಿದ
[ಸ್ವಾಮಿಯ]
ಹೆಮ್ಮೆಯೊಳ್ಬಲಗೊಂಡರು

“ಮೇಲಿನಪದ್ಯದಲ್ಲಿರುವಂತೆ (ಓಕುಳಿಗಳ) ಮತ್ತು (ಸ್ವಾಮಿಯ) ಎಂಬುವು ಬೇರೆ ಪ್ರಮಾಣದವಾದರೂ ಅವೆರಡೂ ಉಯ್ಯಾಲೆಣಗಳೇ” ಎಂದು ಅವರ ವಿವರಣೆ. ಅದರೆ ಅವೆರಡೂ ಒಂದೇ ಪ್ರಮಾಣದವು, ವಿಷ್ಣುಗಣಗಳು ಎನ್ನುವುದು ಸ್ಪಷ್ಟ. ಪದ್ಯದ ಲಯವನ್ನು ಹೀಗೆ ವಿಶ್ಲೇಷಿಸಬಹುದು:

ತಮ್ಮೊಳು| ತಾವೆಲ್ಲ| ರು-ಓ| ಕುಳಿಗಳ
ಗಮ್ಮನೆ| ಆಡುತ|ಲಿ
ಕಮ್ಮಂಗೋ| ಲನ ಗೆಲಿ|ದ| ಸ್ವಾಮಿಯ
ಹೆಮ್ಮೆಯೊ|ಳ್ಬಲಗೊಂಡ|ರು

ಈ ಬಗೆಯ ಪಾದಗಳಿರುವ ಪದ್ಯಗಳು ನಮ್ಮಲ್ಲಿ ಬೇರೆ ಕಡೆಯೂ ಸಿಗುತ್ತವೆ. ಕನ್ನಡ ಕೈಪಿಡಿಯಲ್ಲಿ (ಪು. ೧೩೫, ಮೈಸೂರು, ೧೯೫೫) ಕೊಟ್ಟಿರುವ ಪಾರ್ಥಜೋಗಿ ಹಾಡಿನಲ್ಲಿ ಮತ್ತು (ಲೇಖಕ ಪ್ರಕಾಶಕರ ಹೆಸರಿಲ್ಲದ ಅಚ್ಚಾಗಿರುವ) ಜೋಗಿ ಹಾಡು ಎಂಬ ಕೃತಿಯ ನುಡಿಗಳಲ್ಲಿ ಇದೇ ಬಗೆಯ ಚರಣಗಳಿವೆ. ಪಾರ್ಥಜೋಗಿ ಹಾಡಿನ ಮೊದಲ ಎರಡು ಚರಣಗಳು-

ಮಣಿಪುರಕೆ| ಬಂದುವಾ| ಗಾ ಗಿಳಿಗಳು ೫.೫.ಮು.೫ (?)
ದಣಿದು ಮಲ| ಗಿದವು ಬೇ| ಗಾ ೫.೫.ಮು

ಜೋಗಿ ಹಾಡಿನ ಮೊದಲ ಎರಡು ಚರಣಗಳು ಹೀಗಿರುತ್ತವೆ:

ಅಂದಿಗೆ| ಗಾಲಿನವ|ಳು| ಅವಳೀಗ ವಿ ವಿ ಮು ವಿ
ಬಂದಿಯ ಕೊರಳಿನವ|ಳು ವಿ ವಿ ಮು
ಬಿ. ಎಂ. ಶ್ರೀಯವರ ಇಂಗ್ಲಿಷ್ ಗೀತೆಗಳ ಪಾರ್ಥ ಜೋಗಿ ಹಾಡಿನಲ್ಲಿ ಕಾಣುವ ಗಣ ವಿನ್ಯಾಸ ಇಲ್ಲಿ ಬಳಕೆಯಾಗಿದೆ. (ತೀ.ನಂ.ಶ್ರೀ: ಸಮಾಲೋಕನ, ಪು. ೨೧) ಇಂಗ್ಲೆಂಡ್ ನಾವಿಕರು ಎಂಬ ಕವನದಲ್ಲಿ ಈ
ಬಗೆಯ ಸಾಲುಗಳು ಬರುತ್ತವೆ. ಇದನ್ನು ತೀ.ನಂ.ಶ್ರೀ. ಪ್ರಸ್ತಾಪಿಸಿದ್ದಾರೆ.

ನಿಮ್ಮ ಪಿತೃ|ಗಳು ಧೀರ|ರು| ತೆರೆ ತೆರೆಗೆ ೫,೫, ಮು, ೫
ಹೊಮ್ಮುವರು | ಹುರಿಗೊಳಿಸ|ಲು ೫,೫,ಮು

ತಾಳಮದ್ದಳೆಯ ಆರಂಭದಲ್ಲಿ ಹಾಡುವ ಪ್ರಾರ್ಥನಾ ಪದ್ಯಗಳಲ್ಲಿಯೂ ಈ ಬಗೆಯ ಚರಣಗಳು ಸಿಗುತ್ತವೆ. (ತಾಳಮದ್ದಳೆ ಕಾರ್ಯಕ್ರಮವನ್ನು ನಡೆಸುವ ಪದ್ಧತಿ ಇಟ್ಟುಕೊಂಡಿರುವ ಶ್ರೀ ಟಿ. ಕೇಶವಭಟ್ಟರು ಇದನ್ನು ನನಗೆ ತಿಳಿಸಿದರು.)

ನಿನ್ನ ನಂ|ಬಿದೆ ಶಾರ|ದೆ ಭ|ಕ್ತಗೆ ಮತಿ ವಿ, ವಿ, ಮು, ಹು, ವಿ
ಯನ್ನು ಪಾ|ಲಿಸಬಾರ|ದೆ ವಿ, ವಿ, ಮು

ಮೇಲಿನ ಚರಣಗಳ ಗಣವಿನ್ಯಾಸವನ್ನು ನೋಡಿದ ಮೇಲೆ ಶಂಖಜಿನೋದ್ಭವ ಕೃತಿಯಲ್ಲಿನ ಪದ್ಯಗಳ ಪಾದ ಗಣವಿನ್ಯಾಸವು ಇದೇ ಬಗೆಯದು ಎನ್ನುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ಅನಿರ್ದಿಷ್ಟ ಪ್ರಮಾಣದ್ದಾಗಿದ್ದು ಪಾದಗಳೆರಡನ್ನು ಕೂಡಿಸಲು ಅವುಗಳ ನಡುವೆ ಬರುತ್ತದೆಂದು ಚಿದಾನಂದಮೂರ್ತಿಯವರು ವಿವರಿಸುವ ಉಯ್ಯಾಲೆಗಣವೊಂದು ಇಲ್ಲವೇ ಇಲ್ಲ. ಅದು ಶಂಖಜಿನೋದ್ಭವದ ಪದ್ಯಗಳ ಪಾದವಿನ್ಯಾಸವನ್ನು ತಪ್ಪಾಗಿ ಗ್ರಹಿಸಿರುವುದರಿಂದ ಕೊಡಬೇಕಾಗಿ ಬಂದ ಒಂದು ಹೊಸ ವಿವರಣೆ ಅಷ್ಟೆ.
* * *

ಶಂಖಜಿನೋದ್ಭವದ ಪದ್ಯಗಳ ಲಯವಿಧಾನ ಅಪೂರ್ವವಾದದ್ದೆಂದು ಮೂರ್ತಿಯವರು ಹೇಳುತ್ತಾರೆ. ಇದನ್ನು ಒಪ್ಪುವುದು ಕಷ್ಟವಾಗುತ್ತದೆ. ವಾಸ್ತವವಾಗಿ ಅದು ನಮಗೆ ಪೂರ್ವಚರಿತವಾದದ್ದೇ. ಜೋಗಿಹಾಡು, ಅರ್ಜುನ ಜೋಗಿಹಾಡು ಎಂಬ ಹೆಸರುಗಳಿಂದಲೂ ಕರೆಯಲ್ಪಡುವ ಪಾರ್ಥ ಜೋಗಿಹಾಡಿನಲ್ಲಿ ಬಳಕೆಯಾಗಿರುವ ಛಂದಸ್ಸು ವಾಸ್ತವವಾಗಿ ಇದೇ ಎನ್ನಬಹುದು. (ಚಿದಾನಂದಮೂರ್ತಿಯವರು ತಮ್ಮ ಲೇಖನವನ್ನು ಪ್ರಕಟಿಸುವ ಮುಂಚೆ ಅದನ್ನು (ಹಸ್ತ ಪ್ರತಿ ರೂಪದಲ್ಲಿಯೇ) ನೋಡುವ ಅವಕಾಶ ನನಗೆ ಒದಗಿತ್ತು. ಶಂಖಜಿನೋದ್ಭವದ ಲಯ ಮೂಲಭೂತವಾಗಿ ಪಾರ್ಥಜೋಗಿ ಹಾಡಿನ ಲಯವೆಂಬ ನನ್ನ ಅಭಿಪ್ರಾಯವನ್ನೂ ಅಲ್ಲಿ ಕೂಡ ಪಾದದ ನಡುವೆ ಒಂದು ಅಂಶದ ಮುಡಿ ಬರುವ ವಿಷಯವನ್ನೂ ನಾನು ಅವರಿಗೆ ನೆನಪಿಸಿ ಕೈಪಿಡಿಯ ಪಾರ್ಥ ಜೋಗಿಹಾಡಿನ ನುಡಿಯ ಕಡೆಗೆ ಅವರ ಗಮನ ಸೆಳೆದೆ. ಬಿ. ಎಂ. ಶ್ರೀಯವರು ಇಂಗ್ಲೀಷ್ ಗೀತೆಗಳ ಪದ್ಯವೊಂದರಲ್ಲಿ ಈ ಲಯದ ಉಪಯೋಗವನ್ನು ಕೆಲಮಟ್ಟಿಗೆ ಮಾಡಿಕೊಂಡಿರುವ ವಿಷಯವನ್ನೂ ಅವರಿಗೆ ನೆನಪಿಸಿದೆ. ಅನಂತರ ಅವರು ತಮ್ಮ ಲೇಖನಕ್ಕೆ ಬರೆದ ಅನುಬಂಧದಲ್ಲಿ ಈ ವಿಷಯವನ್ನು ಚರ್ಚಿಸಿರುವುದು ನನಗೆ ತುಂಬ ಸಂತೋಷದ ಸಂಗತಿ.)

ಉತ್ತರಾರ್ಧದಲ್ಲಿ ಕಾಣುವ ಅಲ್ಪಪ್ರಮಾಣದ ವ್ಯತ್ಯಾಸ ಕೂಡ ಹೇಗೆ ಬಂತೆಂದು ವಿವರಿಸುವುದು ಸಾಧ್ಯವಿದೆ. ಚಿದಾನಂದಮೂರ್ತಿಯವರು ತಮ್ಮ ಲೇಖನಕ್ಕೆ ಸೇರಿಸಿರುವ ಅನುಬಂಧಗಳಲ್ಲಿ ಪಾರ್ಥಜೋಗಿ ಹಾಡಿನ ನುಡಿಗಳ ಜೊತೆ ಶಂಖಜಿನೋದ್ಭವದ ನುಡಿಗಳನ್ನು ಹೋಲಿಸಿ ಎರಡರ ನಡುವೆ ಸಾಮ್ಯಾಂಶಗಳಿದ್ದರೂ ತುಂಬ ವ್ಯತ್ಯಾಸಗಳೂ ಇವೆ ಎಂದು ಹೇಳುತ್ತಾರೆ. ಅವರು ತೋರಿಸುವ ವ್ಯತ್ಯಾಸಗಳು ಇವು:

೧. ಶಂಖಜಿನೋದ್ಭವದ ಪದ್ಯಗಳಲ್ಲಿ ನಾಲ್ಕು ಚರಣಗಳಿವೆ. (ಕೈಪಿಡಿಯಲ್ಲಿ ಕೊಡುವ) ಪಾರ್ಥಜೋಗಿ ಹಾಡಿನ ನುಡಿಗಳಲ್ಲಿ ಐದು ಚರಣಗಳಿವೆ.

೨. ಶಂಖಜಿನೋದ್ಭವ ಅಂಶಲಯ ಘಟಿತವಾದದ್ದು, ಪಾರ್ಥಜೋಗಿ ಹಾಡು ಮಾತ್ರಾ ಲಯದಿಂದ ಕೂಡಿದ್ದು.

೩. ಶಂಖಜಿನೋದ್ಭವದ ಪದ್ಯಗಳಲ್ಲಿ ಒಂದು ಮತ್ತು ಮೂರನೆಯ ಪಾದಗಳೆರಡರಲ್ಲೂ ಮೂರನೆಯ ಗಣ ಮುಡಿಯಾಗಿದೆ. ಪಾರ್ಥಜೋಗಿ ಹಾಡಿನಲ್ಲಿ ಹಾಗಲ್ಲ. ಒಂದನೆಯ ಪಾದದ ಮೂರನೆಯ ಗಣ ಮುಡಿಯಾಗಿದೆ. ಆದರೆ ಮೂರನೆಯ ಪಾದದ ಮೂರನೆಯ ಗಣ ಐದು ಮಾತ್ರೆಯ ಸಹಜಗಣವಾಗಿದೆ.

ಇವುಗಳಲ್ಲಿ ಮೊದಲ ನಿಜವಾದ ವ್ಯತ್ಯಾಸವಲ್ಲವೆಂದು ತೋರಿಸಲು ಬೇಕಾದ ವಿವರಣೆ ಚಿದಾನಂದ ಮೂರ್ತಿಯವರಿಂದಲೇ ಸಿಗುತ್ತದೆ. ರಚನೆಯ ದೃಷ್ಟಿಯಿಂದ ಪಾರ್ಥಜೋಗಿ ಹಾಡು ಸಹ ನಾಲ್ಕೇ ಚರಣಗಳಿಂದ ಕೂಡಿದುದು. ಆದರೆ ಓದುವಾಗ ಮಾತ್ರ ನಾಲ್ಕನೆಯ ಚರಣದ ಕಡೆಗೆ ಒಂದು ಗಣದಷ್ಟು ಮಾತನ್ನು ಸೇರಿಸಿಕೊಂಡು ಆ ಪಾದವನ್ನು ಇನ್ನೊಮ್ಮೆ ಹೇಳುವ ರೂಢಿ ಬಹುಶಃ ಇದ್ದು, ಅದರಿಂದ (ಕೈಪಿಡಿಯಲ್ಲಿರುವ) ಪಾರ್ಥಜೋಗಿ ಹಾಡಿನಂಥ ಐದು ಚರಣಗಳ ಹಾಡುಸ ರೂಪುಗೊಂಡಿರಬೇಕು ಎಂದು ಅವರ ಒಟ್ಟು ಅಭಿಪ್ರಾಯವಾಗಿದೆ. (ಶಾಮಶಾಸ್ತ್ರಿಯವರಿಂದ ರಚಿತವಾದ “ಜೋಗಿಹಾಡು” ಎಂಬ ಕೃತಿಯಲ್ಲಿ ಹೀಗೆ ಪುನರಾವೃತ್ತಿ ಮಾಡಬೇಕೆನ್ನುವುದನ್ನು ಕವಿ ಸೂಚಿಸಿದ್ದಾನೆ. ಪುನರಾವೃತ್ತಿಗೆ ಮುಂಚೆ ಸೇರಿಸಬೇಕಾದ ಮಾತನ್ನು ಸಹ ಕೊಡುತ್ತಾನೆ. ಆದ್ದರಿಂದ ಈ ರೀತಿ ಪುನರಾವೃತ್ತಿ ಮಾಡುತ್ತಿದ್ದರೆಂದು ತೋರುತ್ತದೆ ಎಂದು ಹೊಸದಾಗಿ ವಿಚಾರ ಮಾಡಬೇಕಾದ ಅಗತ್ಯವಿಲ್ಲ ಎನಿಸುತ್ತದೆ. ಈ ಪುಸ್ತಕವೂ ಸಹ ಮೂರ್ತಿಯವರಿಗೆ ಉಳಿದೆರಡು ಜೋಗಿಹಾಡಿನ ಪುಸ್ತಕಗಳನ್ನು ಕೊಟ್ಟ ಎಸ್. ಶಿವಣ್ಣನವರ ಬಳಿಯೇ ಇದೆ.)

ಇದರ ಜೊತೆಗೆ ಜೋಗಿಹಾಡು, ಅರ್ಜುನ ಜೋಗಿಹಾಡು ಇವೆಲ್ಲವೂ ಪಾರ್ಥಜೋಗಿ ಹಾಡೇ ಆಗಿದ್ದು ಅವುಗಳಲ್ಲಿ ಎಲ್ಲಾ ಕಡೆಗೂ ನಾಲ್ಕು ಚರಣದ ಪದ್ಯಗಳೇ ಇವೆ. ಅಂಥ ಪದ್ಯವನ್ನು ಚಿದಾನಂದಮೂರ್ತಿಯವರೇ ಅನುಬಂಧದಲ್ಲಿ ಉದ್ದರಿಸಿದ್ದಾರೆ. ಹೀಗಿರುವಾಗ ಐದನೆಯ ಚರಣವನ್ನು ಇವುಗಳ ನಡುವಿನ ವ್ಯತ್ಯಾಸವಾಗಿ ಕಾಣುವ ಅಗತ್ಯವಿಲ್ಲ. ವಾಸ್ತವವಾಗಿ ಐದು ಚರಣಗಳ ಪಾರ್ಥಜೋಗಿ ನುಡಿ ನಮಗೆ ದೊರೆತಿರುವುದು (ಸದ್ಯಕ್ಕೆ) ಒಂದು ಮಾತ್ರ (ಕೈಪಿಡಿಯಲ್ಲಿ ಇರುವುದು), ನಾಲ್ಕು ಪಾದಗಳ ನುಡಿಗಳು ನೂರಾರು ಸಿಕ್ಕಿವೆ. (ಕನ್ನಡ ಅಧ್ಯಯನ ಕೇಂದ್ರದ ಶ್ರೀ ಎಸ್. ಶಿವಣ್ಣನವರು ಅಭ್ಯಾಸದ ಸಲುವಾಗಿ ನನಗೆ ಅರ್ಜುನಜೋಗಿ ಹಾಡಿನ ಮೂರು ಪುಸ್ತಕಗಳನ್ನು ಒದಗಿಸಿ ಸಹಕರಿಸಿದ್ದಾರೆ. ಅವುಗಳಲ್ಲೆಲ್ಲ ನಾಲ್ಕು ಚರಣಗಳ ಪದ್ಯಗಳೇ ಇವೆ.) ಶಂಖಜಿನೋದ್ಭವದ ಪದ್ಯದಂತೆ ಪಾರ್ಥ ಜೋಗಿ ಹಾಡಿನ ನುಡಿಗಳೂ ನಾಲ್ಕೇ ಪಾದಗಳು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಇನ್ನು ಶಂಖಜಿನೋದ್ಭವದ ಪದ್ಯಗಳು ಅಂಶಲಯದವು, ಪಾರ್ಥಜೋಗಿ ಹಾಡು ಮಾತ್ರಾಲಯದ್ದು ಎಂಬ ಅಂಶ ಸಹ ವಿಚಾರ ಮಾಡಬೇಕಾದದ್ದು. ಚಿದಾನಂದಮೂರ್ತಿಯವರು ಗಮನಿಸಿರುವ (ಲೇಖಕರ ಪ್ರಕಾಶಕರ ಹೆಸರಿಲ್ಲದ) ಜೋಗಿ ಹಾಡು ಕೃತಿಯಲ್ಲಿಯೇ ಕೆಳಗಿನ ಅಂಶಲಯದ ಚರಣಗಳಿವೆ. (ಚರಣಗಳ ಬದಿಗೆ ಅದರ ಗಣಗಳ ಮಾತ್ರಾ ವ್ಯಾಪ್ತಿಯನ್ನೂ ತೋರಿಸಿದೆ).

ಕಂದನ| ನುಡಿದುದ| ಕ್ಕೆ | ಅಮ್ಮಯ್ಯ ೪, ೫, ಮು, ೫
ಕಂದು ಮಾ| ಡುವರೇ ಮನ |ವಾ ೪, ೬,ಮು
(ಪದ್ಯ ೬೭, ೩ನೆಯ ಅಧ್ಯಾಯ)
ತಾಯಿಯಿಲ್ಲ| ದಾ ಮಕ್ಕಳಿ| ಗೆ| ಅಣ್ಣ ನಿಮ್ಮ
ತಾಯಿಯಂ|ತಿರ್ದೆನ|ಲ್ಲ
(ಪದ್ಯ ೪೭, ೩ನೆಯ ಅಧ್ಯಾಯ)
ಎಲ್ಲಿಯ | ಜೋಗಿಯ|ಣ್ಣಾ| ಅವರಿಗೆ
ಎಲ್ಲಿಯ| ಗ್ರಾಸವ| ಣ್ಣಾ|
(ಪದ್ಯ ೧೫, ೩ನೆಯ ಅಧ್ಯಾಯ)

ಮೇಲಿನ ಪದ್ಯಗಳಲ್ಲಿ ೪, ೫ ಮತ್ತು ೬ ಮಾತ್ರೆಗಳ ಗಣಗಳು ಬೆರೆತು ಬಂದಿರುವುದರಿಂದ ಇದನ್ನು ಮಾತ್ರಾಲಯದಲ್ಲಿ ಓದುವುದು ಸಾಧ್ಯವೇ ಇಲ್ಲ; ಅಂಶಲಯದಲ್ಲಿ ಮಾತ್ರ ಓದಬಹುದು. ಶಂಖಜಿನೋದ್ಭವದ ಪದ್ಯವನ್ನು ಈ ಭಾಗಗಳು ಪೂರ್ತಿಯಾಗಿ ಹೋಲುತ್ತವೆ. ಅಲ್ಲಿಯಂತೇ ಇಲ್ಲಿಯೂ
ವಿ ವಿ ಮು ವಿ
ವಿ ವಿ ಮು

ಹೀಗೆ ಗಣಗಳು ಬರುತ್ತವೆ. ಅಲ್ಲಿಯಂತೆ ಇಲ್ಲಿಯೂ ಒಮ್ಮೊಮ್ಮೆ ವಿಷ್ಣುಗಣದ ಬದಲು ರುದ್ರಗಣ ಬರುತ್ತದೆ; ಅಲ್ಲಿಗಿಂತ ಹೆಚ್ಚಾದ ಪ್ರಮಾಣದಲ್ಲಿ ಬರುತ್ತದೆ. ಕೈಪಿಡಿಕಾರರು ಮಾತ್ರಾಲಯವಾಗಿ ಗುರುತಿಸಿ, ಚಿದಾನಂದ ಮೂರ್ತಿಯವರು ಉದ್ಧರಿಸಿರುವ ಪಾರ್ಥಜೋಗಿ ಹಾಡಿನ ನಿದರ್ಶನ ಪದ್ಯದಲ್ಲಿಯೂ ಐದು ಮಾತ್ರೆಯ ಗಣ ಎಲ್ಲ ಕಡೆ ಬಂದಿಲ್ಲ. ಎರಡು ಕಡೆ ನಾಲ್ಕು ಮಾತ್ರೆಯ ಗಣಗಳಿವೆ. ಗಮನಿಸಿ:

ಮಣಿಪುರಕೆ| ಬಂದುವಾ| ಗಾ| ಗಿಳಿಗಳು
ದಣಿದು ಮಲ| ಗಿದವು ಬೇ | ಗಾ
ದಿನಮಣಿಯು| ಉದಿಸಿದಾ | ಅನುವ ಕಾ| ಣುತಲಾಗ
ವನದಿ ಸುಖಿ | ಸಿದುವು ಬೇ| ಗಾ|ಫಲಸವಿದು
ವನದಿ ಸುಖಿ | ಸಿದುವು ಬೇ| ಗಾ

ಮೊದಲ ಪಾದದ ಕಡೆಯ ಗಣವಾದ ‘ಗಿಳಿಗಳು’ ಮತ್ತು ಮೂರನೆಯ ಪಾದದ ಎರಡನೆಯ ಗಣವಾದ ಉದಿಸಿದ (ಉದಿಸಿದಾ ಎಂದಾಗುವುದು ವಾಚನದಲ್ಲಿ ಮಾತ್ರ) ಈ ಎರಡೂ ನಾಲ್ಕು ಮಾತ್ರೆಯ ಗಣಗಳು. ಇವುಗಳನ್ನು ಐದು ಮಾತ್ರೆಯ ಉದ್ದಕ್ಕೆ ಎಳೆದುಕೊಳ್ಳಲು ಅವಕಾಶವಿರುವುದು ಅಂಶಲಯದಲ್ಲಿ ಮಾತ್ರ. ಪಾರ್ಥಜೋಗಿ ಹಾಡು ಮೊದಲು ಅಂಶಲಯದಲ್ಲಿ ಇದು ಕ್ರಮೇಣ (ತ್ರಿಪದಿ ಷಟ್ಪದಿಗಳಂತೆ) ಮಾತ್ರಾಲಯಕ್ಕೆ ಹೊರಳಲು ಅರಂಭವಾಗಿರಬೇಕು. (ಈ ಮಾತಿಗೆ ಅನೇಕ ಸಾಕ್ಷಿಗಳು ದೊರೆಯುತ್ತವೆ. ಸದ್ಯದಲ್ಲೇ ಹೊರಬರಲಿರುವ ಬೇರೊಂದು ಲೇಖನದಲ್ಲಿ ಅದನ್ನು ವಿವರವಾಗಿ ಚರ್ಚಿಸಲಾಗುವುದು.)

ಚಿದಾನಂದಮೂರ್ತಿಯವರು ಹೇಳುವ ಮೂರನೇ ವ್ಯತ್ಯಾಸವನ್ನು ಪರಿಶೀಲಿಸೋಣ. ಶಂಖಜಿನೋದ್ಭವದಲ್ಲಿ ಹುಸಿಯಿರುವ ಕೆಲವು ಪದ್ಯಗಳನ್ನು ನಾವು ಹಿಂದೆ ನೋಡಿದೆವಷ್ಟೆ. ಮುಡಿಯು ಹುಸಿಗೆ ಬೇಕಾದ ಕಾಲವನ್ನೂ ಒದಗಿಸುವುದರಿಂದ ಅವೆರಡೂ ಒಂದೇ ಗಣದ ಕಾಲಾವಧಿಯಲ್ಲಿ ಬರುತ್ತವೆ. ಮೊದಲೇ ಒಂದು ಅಂಶವಿರುವ ಮುಡಿಯ ಜೊತೆಗೆ ಒಂದು ಅಂಶದಷ್ಟು ಹುಸಿಯೂ ಸೇರಿದಾಗ ಅದು ಬ್ರಹ್ಮಗಣದಷ್ಟು ದೊಡ್ಡದಾಗುತ್ತದೆ. ಹುಸಿಯ ಪ್ರಮಾಣ ಎರಡು ಲಘುವಿನಷ್ಟು ಇರಬಹುದು ಎನ್ನುವುದನ್ನು ನಾವು ನೋಡಿದ್ದೇವೆ. ಆ ಪ್ರಮಾಣದ ಹುಸಿ ಬಂದಾಗ ಪಾದದ ಉಳಿದ ವಿಷ್ಣುಗಣಗಳಂತೆ ಅದೂ ವಿಷ್ಣುಗಣವಾಗಿ ಬಿಡುತ್ತದೆ (ಪಾರ್ಥಜೋಗಿ ಹಾಡಿನ ಪೂರ್ವಾರ್ಧದಲ್ಲಿ ಮುಡಿಯನ್ನು ತಂದು ಉತ್ತರಾರ್ಧದಲ್ಲಿ ಆ ಮುಡಿಯ ಜಾಗದಲ್ಲಿ ವಿಷ್ಣುಗಣವನ್ನು ತರುವ ಪದ್ಧತಿಯಿದೆಯಷ್ಟೆ). ಮುಡಿಯನ್ನು ಗಣವಾಗಿಸಿ ಹೇಳುವ ಕಲ್ಪನೆಗೆ ಹೀಗೆ ಇಂಬು ದೊರೆತಿರಬೇಕು. ವೈವಿಧ್ಯದ ಸಲುವಾಗಿ ಪದ್ಯದ ಪೂರ್ವಾರ್ಧದಲ್ಲಿ ನಿಯಮಿತವಾಗಿ ಮುಡಿ ಉಳಿಸಿಕೊಂಡು ಉತ್ತರಾರ್ಧದಲ್ಲಿ ಅದನ್ನು ತಪ್ಪದೆ ಗಣವಾಗಿ ಮಾಡುವ ರೀತಿ ರೂಢಿಗೆ ಬಂದಿರಬಹುದು. ಶಂಖಜಿನೋದ್ಧವ ಕಾವ್ಯದಲ್ಲಿಯೇ ಈ ಹೇಳಿಕೆಗೆ ಬಲಕೊಡುವ ನಿದರ್ಶನಗಳಿವೆ :

ಪದ್ಯ ೩೨ ಒಚ್ಚೆರೆ| ಗಣ್ಣಯ|ಕ್ಷಿ-ತಾ| ಪೋಗಲು ವಿ.ವಿ.ಮು+ ಹು. ವಿ
ಎಚ್ಚತ್ತು | ಮನದೊಳ|ಗೆ ವಿ. ವಿ. ಮು
ಬೆಚ್ಚಿ ಬೆದರಿನೋಡು| ತ-ಲಾಗ| ನೆನೆದನು ವಿ.ವಿ.ವಿ ?ವಿ
ನಿಶ್ಚಿಂತ | ಜಿನ ರಡಿ|ಯ ವಿ.ವಿ.ಮು

ಪದ್ಯ ೫೨ ಭೂಮಿ ಮೂ| ರರದೇವ| ಗೆ-ಪರ|ಮಾಹ್ನಿಕವ ವಿ ವಿ ವಿ ? ರು
ಹೇಮ ಭಾ| ಜನದೊಳಿ|ಟ್ಟು ವಿ ವಿ ಮು

೩೨ನೆಯ ಪದ್ಯದ ಮೂರನೆಯ ಪಾದದಲ್ಲಿ ಮೂರನೆಯ ಗುಂಪನ್ನು ಗಮನಿಸಬೇಕು. ಅದು ಮುಡಿ ಇರಬೇಕಾದ ಸ್ಥಳ. ಅದರ ಜೊತೆಗೆ ಮತ್ತೆ ಎರಡು ಅಕ್ಷರ (ಅಂಶಗಳು) ಹುಸಿಯ ರೂಪದಲ್ಲಿ ಸೇರಿಕೊಂಡಿವೆ. ಮುಡಿಯನ್ನು (ಅದು ಲಘುವೇ ಆಗಿದ್ದರೂ ದೀರ್ಘವಾಗಿ ಎಳೆದು ಹೇಳುವುದರಿಂದ) ಮೊದಲ ಅಂಶವಾಗಿ ಭಾವಿಸಿದರೆ ಮುಂದಿನ ಎರಡು ಹುಸಿ ವರ್ಣಗಳು ಒಂದೊಂದು ಅಂಶವಾಗಿ ಅದು ಮೂರಂಶಗಳ ವಿಷ್ಣುಗಣವಾಗುತ್ತದೆ. ಈಗಿರುವಂತೆ ಅದನ್ನು ವಿಷ್ಣುಗಣ ಎಂದು ತಿಳಿಯಬೇಕಾಗಿಲ್ಲವಾದರೂ ಆ ಜಾಗದಲ್ಲಿ ಮುಂದೆ ವಿಷ್ಣುಗಣ ರೂಪುಗೊಂಡಿರಬೇಕು ಎಂಬ ಊಹೆಗೆ ಇದು ಪುಷ್ಟಿ ಕೊಡುವಂತಿದೆ ಎನ್ನುವುದು ಸುಳ್ಳಲ್ಲ. ಈ ವಿವರಣೆಯನ್ನು ಬದಿಗಿಟ್ಟು ನೋಡಿದಾಗಲೂ ಉಳಿದ ಎಲ್ಲ ವಿಷಯಗಳಲ್ಲಿ ಶಂಖಜಿನೋದ್ಭವದ ಲಯ (ಪಾರ್ಥ) ಜೋಗಿಹಾಡಿನದೇ ಆಗಿದೆ. ಇದನ್ನೆಲ್ಲಾ ಪರಿಶೀಲಿಸಿದಾಗ ಶಂಖಜಿನೋದ್ಭವದ ಅಂಶಲಯ ಅಫೂರ್ವವಾದದ್ದು ಎಂಬ ಚಿದಾನಂದಮೂರ್ತಿಯವರ ಮಾತು ಸರಿಯಲ್ಲ ಎನ್ನುವುದು ಸ್ಪಷ್ಟವಾಗಿದೆ.

ಅನುಬಂಧ:

ಅರ್ಜುನ ಜೋಗಿ ಹಾಡಿಗೆ ಉದಾಹರಣೆಯಾಗಿ ಚಿದಾನಂದಮೂರ್ತಿಯವರು ತಮ್ಮ ಲೇಖನದ ಅನುಬಂಧದಲ್ಲಿ ಕಳಗಿನ ಉದಾಹರಣೆಯನ್ನು ಕೊಡುತ್ತಾರೆ:

ತಾವರೆಯ ಕೊರಳಿನವಳೇ ನೀ ನಮ್ಮ
ವೇದಕ್ಕೆ ತವರುಮನೆಯೇ
ಆದಿ ಬ್ರಹ್ಮನ ರಾಣಿ ನಾನಿಮ್ಮ ಭಜಿಸುವೆನು
ವದಿಗಿಸೈ ಸಮ್ಮತಿಯನೂ

ಇದನ್ನು ಅವರು ಪ್ರಕಾಶಕ ಲೇಖಕ ಯಾರ ಪ್ರಸ್ತಾವವೂ ಇಲ್ಲದ ಜೋಗಿ ಹಾಡು ಎಂಬ ಪುಸ್ತಕದಿಂದ ಆಯ್ದು ಕೊಂಡಿದ್ದಾರೆ. ಆ ಪುಸ್ತಕದಲ್ಲಿ ಮೇಲಿನಪದ್ಯದ ಪಾಠ,

ಕಾರೆಯ ಕೊರಳಿನವಳೇ ನೀನಮ್ಮ
ವೇದಕ್ಕೆ ತೌರುಮನೆಯೇ
ಆದಿ ಬ್ರಹ್ಮನ ರಾಣಿ ನಾನಿಮ್ಮ ಭಜಿಸುವೆನು
ಓದಮ್ಮ ಪಂಚಮತಿಯಾ

ಎಂದಿದೆ. ಎರಡು ಪದ್ಯಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಚಿದಾನಂದಮೂರ್ತಿಯವರು ಪಾಠದಲ್ಲಿ ವ್ಯತ್ಯಾಸ ಮಾಡಿಕೊಂಡಿದ್ದಾರೆ. ಆದರೆ ಏಕೆ ಹಾಗೆ ಮಾಡಿದರು ಎನ್ನುವುದು ತಿಳಿಯುವುದಿಲ್ಲ.

ಈ ಲೇಖನವು ‘ಉಯ್ಯಾಲೆ ಗಣವೂ ಇಲ್ಲ, ಅಪೂರ್ವ ಲಯವೂ ಅಲ್ಲ’ ಎಂಬ ಶೀರ್ಷಿಕೆಯಲ್ಲಿ ಈ ಹಿಂದೆಯೇ ‘ಅಂಕಣ’ (೨-೩, ಮಾರ್ಚ್‌೧೯೮೧) ದಲ್ಲಿ ಪ್ರಕಟಗೊಂಡಿದೆ. ಡಾ|| ಎನ್. ಲಕ್ಷ್ಮೀನಾರಾಯಣ ಭಟ್ಟ ಅವರ ಈ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಡಾ|| ಎಂ.ಎಂ. ಕಲುಬುರ್ಗಿ ಅವರು ‘ಉಯ್ಯಾಲೆ ಗಣ ಯಾವುದು? ತರಂಗ ಸೂಕ್ತ ಹೆಸರು’ ಎಂಬ ಲೇಖನವನ್ನು ‘ಅಂಕಣ’ (೨-೪, ಮೇ ೧೯೮೧) ದಲ್ಲಿಯೇ ಪ್ರಕಟಿಸಿರುವುದರೊಡನೆ ಆ ಬಗೆಗಿನ ಕೆಲವಂಶಗಳನ್ನು ಚರ್ಚಿಸಿರುವರು. ಇದೇ ನಿಯತಕಾಲಿಕೆಯ ಜುಲೈ ಸಂಚಿಕೆಯಲ್ಲಿ ಡಾ|| ಶಂಕರ ಮೊಕಾಶಿ ಪುಣೇಕರ ಅವರು ‘ಕೋಟೆಯ ಧಾಟಿ’ ಎಂಬ ತಮ್ಮ ಪ್ರತಿಕ್ರಿಯೆಯಲ್ಲಿ “ಶಂಖಜಿನೋದ್ಭವದ ಛಂದಸ್ಸಿಗೆ ‘ಕೋಟೆಯ ಧಾಟಿ’ ಎನ್ನುವುದು ಯೋಗ್ಯ ಕಾಣುತ್ತದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವರು. ಈ ಮೇಲಿನ ಮೊದಲೀರ್ವರ ಪ್ರತಿಕ್ರಿಯೆಗಳಿಗೆ ಉತ್ತರ ರೂಪದಲ್ಲಿ ಡಾ|| ಎಂ. ಚಿದಾನಂದಮೂರ್ತಿ ಅವರು ಇದೇ ಸಂಚಿಕೆಯಲ್ಲಿಯೇ ಪ್ರಕಟಿಸಿದ ‘ಉಯ್ಯಾಲೆ ಗಣ’ ಇರುವುದು ನಿಜ, ಅಫೂರ್ವವೂ ಹೌದು’ ಎಂಬ ಲೇಖನದಲ್ಲಿ, “ಶ್ರೀ ಭಟ್ಟರ ಮತ್ತು ಡಾ|| ಕಲುಬುರ್ಗಿಯವರ ಲೇಖನಗಳನ್ನು ನೋಡಿದ ಮೇಲೂ ನನ್ನ ಮೊದಲಿನ
ಅಭಿಪ್ರಾಯಗಳನ್ನೇ ಉಳಿಸಿಕೊಂಡಿರುವ ನಾನು, ಮುಂದೆ ಮತ್ತೆ ಈ ಬಗ್ಗೆ ಬರೆಯದಿದ್ದರೆ ನನ್ನ ಅಭಿಪ್ರಾಯವನ್ನು ಮಾರ್ಪಡಿಸಿಕೊಳ್ಳುವಂತಹ ಸಂದರ್ಭ ಬಂದಿಲ್ಲವೆಂದು ಓದುಗರು ಭಾವಿಸಬೇಕಾಗಿ ನನ್ನ ಪ್ರಾರ್ಥನೆ” ಎಂದು ತಮ್ಮ ಮೊದಲಿನ ಅಭಿಪ್ರಾಯವನ್ನೆ ಸಮರ್ಥಿಸಿಕೊಂಡಿರುವರು. “ಇದು ನನ್ನ ಮೊದಲ ಲೇಖನದ ಸಾರಾಂಶವೇ ಆಗಿದೆ. ಈ ಲೇಖನದ ಸಾರಾಂಶವೂ ಅದೇ ಆಗಿದೆ” ಎಂತಲೂ ಸ್ಪಷ್ಟಪಡಿಸಿರುವರು-ಸಂಪಾದಕ.
*****