ಕಾವ್ಯಪ್ರಭಾವ

ಕಾವ್ಯಪ್ರಭಾವ

‘ಕಾವ್ಯಪ್ರಭಾವ’ದ ಮೂಲಕ ನಾನು ಹಿಂದಣ ಕವಿಗಳಿಂದ ಮುಂದಣ ಕವಿಗಳಿಗೆ ಪ್ರಸರಿಸುವ ವಸ್ತುವಿಷಯಗಳನ್ನಾಗಲಿ ಪ್ರತಿಮೆಗಳನ್ನಾಗಲಿ ಉದ್ದೇಶಿಸುವುದಿಲ್ಲ. ಇದು ‘ಸಾಧಾರಣವಾಗಿ ನಡೆಯುವಂಥ ಸಂಗತಿ’, ಹಾಗೂ ಮುಂದಣ ಕವಿಗಳಲ್ಲಿ ಇಂಥ ಪ್ರಸರಣ ಆತಂಕ ಉಂಟುಮಾಡುತ್ತದೆಯೇ ಇಲ್ಲವೇ ಎನ್ನುವುದು ಕೇವಲ ಮನಸ್ಥಿತಿ ಮತ್ತು ಸನ್ನಿವೇಶಗಳಿಗೆ ಸಂಬಂಧಿಸಿದುದು. ಇವು ಮೂಲ ಹುಡುಕುವವರಿಗೂ ಜೀವನ ಚರಿತ್ರೆ ಬರೆಯುವವರಿಗೂ ತಕ್ಕ ವಸ್ತುಗಳಾಗುತ್ತವೆ ಮತ್ತು ನನ್ನ ಆಸಕ್ತಿಗೂ ಇವಕ್ಕೂ ಏನೇನೂ ಸಂಬಂಧವಿಲ್ಲ. ವಸ್ತುವಿಷಯಗಳೂ ಪ್ರತಿಮೆಗಳೂ ಕಥನಕಲೆ ಮತ್ತು ಚರಿತ್ರೆಗೆ ಸೇರಿದಂಥವು, ಹಾಗೂ ಕಾವ್ಯಕ್ಕೆ ವಿಶಿಷ್ಟವಾದವೇನಲ್ಲ. ಆದರೂ ಕವಿಯೊಬ್ಬನ ನಿಲುವು, ಆತನ ನುಡಿ (Word), ಆತನ ಭಾವನಾ ವ್ಯಕ್ತಿತ್ವ, ಆತನ ಇಡೀ ಇರುವಿಕೆ (being) ವಿಶಿಷ್ಟವಾಗಿರಲೇಬೇಕು, ಇಲ್ಲವೆಂದಾದರೆ ಆತ ನಾಶವಾಗುತ್ತಾನೆ, ಆತನಿಗೆ ಎಂದಾದರೂ ಕಾವ್ಯಾವತಾರದಲ್ಲಿ ಪುನರ್ಜನ್ಮ ಪಡೆಯಲು ಸಾಧ್ಯವಾಗಿದ್ದರೂ ಸಹಾ. ಆದರೆ ಅವನ ಮೂಲಭೂತ ನಿಲುವು ಆತನಷ್ಟೇ ಆತನ ಪೂರ್ವಜರದ್ದೂ ಹೌದು, ಯಾವನೇ ಒಬ್ಬ ಮನುಷ್ಯನ ಮೂಲಗುಣ ಆ ಮನುಷ್ಯನ ಹಿರಿಯರದ್ದಿರುವಂತೆ, ಅದೆಷ್ಟೇ ಮಾರ್ಪಾಟು ಹೊಂದಿದ್ದರೂ.

ಅಮೆರಿಕದ ಪಸಿದ್ಧ ಆಧುನಿಕ ವಿಮರ್ಶಕ ಹೆರಾಲ್ಡ್ ಬ್ಲೂಮ್‌ನ ‘ಪ್ರಭಾವದ ಆತಂಕ’(Anxiety of Influence) ಎಂಬ ಪುಸ್ತಕದಲ್ಲಿ ಬರುವ ಮಾತುಗಳು ಇವು – ಕವಿಗಳ ಮೇಲಿನ ಕಾವ್ಯಪ್ರಭಾವಕ್ಕೆ ಮತ್ತು ಅದರ ಮೂಲಕ ಉಂಟಾಗುವ ಆತಂಕಕ್ಕೆ ಸಂಬಂಧಿಸಿ. ಈ ಮಾತುಗಳಲ್ಲಿನ ವಿರೋಧಾಭಾಸ ಯಾರಿಗೂ ಸ್ಪಷ್ಟವಾಗುವುದೇ: ಒಂದೆಡೆ ಬ್ಲೂಮ್ ಕವಿಗಳಲ್ಲಿ ವಿಶಿಷ್ಟವಾಗಿರಲೇಬೇಕಾದ ಸ್ವಂತಿಕೆಯ ಕುರಿತು ಒತ್ತಿಹೇಳುತ್ತಾನೆ, ಅದಿಲ್ಲದಿದ್ದರೆ ಅವರು ಕಾವ್ಯಕ್ಷೇತ್ರದಲ್ಲಿ ಪ್ರವೇಶಪಡೆದರೂ ಉಳಿಯಲಾರರು ಎನ್ನುತ್ತಾನೆ; ಇನ್ನೊಂದೆಡೆ ಹಿರಿಯ ಕವಿಗಳ ಪ್ರಭಾವದಿಂದ ತಪ್ಪಿಸಿಕೊಳ್ಳುವುದೂ ಅಸಾಧ್ಯ ಎನ್ನುತ್ತಾನೆ-ಯಾಕೆಂದರೆ ಕವಿಯ ಸ್ವಂತಿಕೆಗೆ ಸಂಬಂಧಿಸಿದ ‘ಮೂಲಭೂತ ನಿಲುವು ಆತನಪ್ಪೇ ಆತನ ಪೂರ್ವಜರಿಗೂ ಸೇರಿದುದು. ಈ ಮಾತುಗಳ ಮೂಲಕ ಬ್ಲೂಮ್ ಪುರಾತನವಾದ ಸಮಸ್ಯೆಯೊಂದಕ್ಕೆ ಉತ್ತರ ನೀಡಿರಬಹುದೇ ಅಥವಾ ಸಮಸ್ಯೆಯೊಂದನ್ನು ಇನ್ನೊಂದು ರೀತಿಯಲ್ಲಿ ಉಲ್ಲೇಖಿಸಿರಬಹುದೇ? ಹಲವು ವೇಳೆ ಸಮಸ್ಯೆಯನ್ನು ಪುನರುಲ್ಲೇಖಿಸುವುದೇ ಅದನ್ನು ಅರ್ಥಮಾಡಿಕೊಳ್ಳುವುದಕ್ಕೆ ಇರುವ ಒಂದು ದಾರಿ; ಹಾಗೂ ಸಮಸ್ಯೆಯನ್ನು ಅರ್ಥಮಾಡಿ ಕೊಳ್ಳುವುದೊಂದೇ ನಾವು ಮಾಡಬಹುದಾದ ಕಾರ್ಯ. ಗೆಯಥೆ ಹೇಳುವಂತೆ, ಲೋಕದ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಮನುಷ್ಯ ಹುಟ್ಟಿಲ್ಲ; ಅವನ್ನು ಅರ್ಥಮಾಡಿಕೊಂಡು ಬದುಕುವುದಷ್ಟೇ ಮನುಷ್ಯನಿಗೆ ಸಾಧ್ಯ. ಕಾವ್ಯಪ್ರಭಾವವೂ ಇಂಥದೊಂದು ಸಮಸ್ಯೆ, ಹಾಗೂ ಬರೆಯಲು ಸುರುಮಾಡುವ ಎಲ್ಲಾ ಕವಿಗಳನ್ನೂ ಒಂದಲ್ಲ ಒಂದು ಕಾಲದಲ್ಲಿ ಕಾಡುವಂಥದು. ಯಾಕೆಂದರೆ ಯಾರಿಗೂ ತಾನು ಬೇರೆ ಕವಿಗಳ – ಅವರೆಷ್ಟೇ ಪ್ರಸಿದ್ಧರಾಗಿದ್ದರೂ- ಪಭಾವದಲ್ಲಿರುವುದು ಬೇಕಾಗಿರುವುದಿಲ್ಲ; ಆದರೂ ಈ ಕವಿಗಳನ್ನು ಓದಿದ್ದೇ ಆತನ ಕಾವ್ಯಸೃಪ್ಪಿಗೂ ಕಾರಣವಾಗಿರುತ್ತ, ಪ್ರಭಾವವನ್ನು ನಿರಾಕರಿಸುವುದಾಗಲಿ, ಅದರಿಂದ ತಪ್ಪಿಸಿಕೊಳ್ಳುವುದಾಗಲಿ ಕಷ್ಟಸಾಧ್ಯವಾಗುತ್ತದೆ. ಬ್ಲೂಮ್ ಗುರುತಿಸುವ ಆತಂಕ ಇದುವೇ.

ಆದರೆ ಪ್ರಭಾವಕ್ಕೆ ನಾವು ಯಾಕೆ ಆತಂಕಗೊಳ್ಳಬೇಕು? ಪ್ರಭಾವವೆಂದರೆ ಅಣಕವೇನೂ ಅಲ್ಲದಿರುತ್ತ, ಪ್ರಭಾವವನ್ನು ಒಪ್ಪಿಕೊಳ್ಳುವುದರಿಂದ ಯಾವ ನಶ್ಟವೂ ಇಲ್ಲವಲ್ಲ ಎನ್ನಬಹುದು. ಪ್ರಭಾವದ ಎದುರು ಆತಂಕಗೊಳ್ಳುವುದು ಆಧುನಿಕತೆಯ ಒಂದು ಸ್ವಭಾವ. ಯಾಕೆಂದರೆ ಆಧುನಿಕತೆಯೆಂದರೆ ವ್ಯಕ್ತಿವಿಶಿಷ್ಟತೆಯ ಯುಗವೂ ಹೌದು; ಪ್ರತಿಯೊಬ್ಬ ವ್ಯಕ್ತಿಯೂ, ಅದರಲ್ಲೂ ಕವಿ, ಕಲಾವಿದ ಮುಂತಾದ ಸೃಜನಶೀಲ ವರ್ಗಕ್ಕೆ ಸೇರಿದಾತ, ತಾನು ವಿಶಿಷ್ಟವಾಗಿರಲು ಬಯಸುತ್ತಾನೆ; ಹಲವು ವೇಳೆ ಇಂಥ ವ್ಯಕ್ತಿವಿಶಿಷ್ಟತೆಯೊಂದೇ ಆತನಲ್ಲಿ ಹೇಳಿಕೊಳ್ಳಲು ಇರುವಂಥಾದ್ದೂ ಆಗಿರುತ್ತದೆ. ಇದೊಂದು ರೀತಿಯಲ್ಲಿ ದೈವಾವಸಾನದ ನಂತರ ಮನುಷ್ಯನಲ್ಲಿ ಮೂಡಿಬಂದ ಗುಣ. ಅಲ್ಲಿಯತನಕ, ಉದಾಹರಣೆಗೆ ಕ್ಲಾಸಿಕಲ್ (ಅಭಿಜಾತ) ಯುಗದಲ್ಲಿ, ಪ್ರಭಾವದ ಬಗ್ಗೆ ಇಷ್ಟೊಂದು ಆತಂಕವಿದ್ದಂತೆ ಕಂಡುಬರುವುದಿಲ್ಲ. ಕನ್ನಡದ ಕವಿಗಳನ್ನೇ ತೆಗೆದುಕೊಂಡರೆ ರನ್ನ ಕವಿ ಹಿರಿಯ ಪಂಪನಿಂದ ಸಾಕಷ್ಟು ಪ್ರಭಾವಿತನಾದ್ದು ಕಂಡುಬರುತ್ತದೆ; ಆದರೂ ತನ್ನ ಒಟ್ಟಾರೆ ನಿಲುವಿನಲ್ಲಿ ರನ್ನ ತನ್ನ ವೈಶಿಷ್ಠ್ಯವನ್ನು ಸಾಧಿಸಿದ. ಹಿಂದಣವರಿಂದ ಪಡೆಯುವುದಕ್ಕಾಗಲಿ, ಹಾಗೆ ಪಡೆದುದನ್ನು ಉಪಯೋಗಿಸಿಕೊಂಡು ತಮ್ಮದೇ ವೈಶಿಷ್ಪ್ಯವನ್ನು ರೂಢಿಸಿಕೊಳ್ಳುವುದಕ್ಕಾಗಲಿ ಆ ಕಾಲದವರಿಗೆ ಸಿದ್ಧಾಂತವೊಂದರ ಅಗತ್ಯವಿರಲಿಲ್ಲ; ಅರ್ಥಾತ್ ಕ್ಲಾಸಿಕಲ್ ಯುಗದಲ್ಲಿ ಇವೆಲ್ಲವೂ ಸಾಮಾನ್ಯವಾಗಿದ್ದುವು. ಪ್ರಭಾವದ ಆತಂಕವೆಂಬ ಕಲ್ಪನೆಯೇ ಆಗ ಇದ್ದಂತೆನಿಸುವುದಿಲ್ಲ. ಆಧುನಿಕರಾದರೆ ಸೃಜನಶೀಲತೆಯಮಟ್ಟಿಗೆ ತಾವು ಪ್ರತ್ಯೇಕ ದ್ವೀಪವಾಸಿಗಳಾಗಲು ಬಯಸುತ್ತಾರೆ. ಸ್ವಲ್ಪವೇ ಪ್ರಭಾವ ಕೂಡಾ ಅವರಿಗೆ ಮುಜುಗರದ ಸಂಗತಿಯಾಗುತ್ತದೆ.

ಈ ಭಿನ್ನತೆಗೆ ಬಹುಶಃ ಕ್ಲಾಸಿಕಲ್ ಮತ್ತು ಆಧುನಿಕ ಯುಗಗಳ ವಿಭಿನ್ನ ಗುಣಗಳೇ ಕಾರಣವಾಗಿರಬಹುದು. ಕ್ಲಾಸಿಕಲ್ ಯುಗ ಧಾರ್ಮಿಕವಾಗಿ ದೈವಕೇಂದ್ರಿತವೂ ಲೌಕಿಕವಾಗಿ ರಾಜಕೇಂದ್ರಿತವೂ ಆಗಿದ್ದುದು. ಆದ್ದರಿಂದ ಕಾವ್ಯವೆಂದರೆ ಅದು ದೈವದತ್ತವಾಗಿ ಬರುವ ಸಂಗತಿ; ಮತ್ತು ಈ ರೀತಿ ಬಂದುದೆಲ್ಲವೂ ರಾಜಸಮರ್ಪಿತ. ಕಾವ್ಯವೆಂದರೆ ಕೆರೆಯ ನೀರನು ಕೆರೆಗೆ ಚೆಲ್ಲಿದ ಹಾಗೆ. ಆದ್ದರಿಂದ ಪಂಪ ಬರೆದುದು ಪಂಪನದೇ ಅಲ್ಲ; ರನ್ನ ಪಡೆದುಕೊಂಡರೆ ಅದು ಕೇವಲ ಪಂಪನಿಂದಲೂ ಅಲ್ಲ- ಒಟ್ಟಾರೆ ಕಾವ್ಯಲೋಕದಿಂದ. ಆಧುನಿಕ ಯುಗದಲ್ಲಿ ಎಲ್ಲರೂ ಸ್ವೀಕರಿಸಬಹುದಾದ ದೈವವಾಗಲಿ ಅರಸನಾಗಲಿ ಇಲ್ಲ. ಆದ್ದರಿಂದ ಸಕಲರೂ ಬೇಕಾದಂತೆ ಉಪಯೋಗಿಸಿಕೊಳ್ಳಬಹುದಾದ ಸಮನಾದ ಕಾವ್ಯಲೋಕವೂ ಇಲ್ಲ. ಅಥವಾ ಅಂಥದೊಂದು ತಿಳುವಳಿಕೆಗೆ ಆಧುನಿಕರು ಇಂದು ಒಳಗಾಗಿದ್ದಾರೆ. ಆದ್ದರಿಂದ ಪ್ರಭಾವ, ಅನುಕರಣೆ, ಕೃತಿಚೌರ್‍ಯ ಮುಂತಾದ ಕಲನೆಗಳು ವಿಮರ್ಶೆಯಲ್ಲಿ ಪ್ರವೇಶ ಪಡೆದಿವೆ. ಯಾಕೆಂದರೆ ಆಧುನಿಕ ಕಾಲದಲ್ಲಿ ಮನುಷ್ಯ ತನ್ನ ಪ್ರತಿಯೊಂದು ಕಾರ್ಯಕ್ಕೂ ತಾನೇ ಜವಾಬ್ದಾರನಾಗುತ್ತಾನೆ. ಕ್ಲಾಸಿಕಲ್ ಯುಗದಲ್ಲಿ ಮನುಷ್ಯ ಮಾಡಿದ್ದೆಲ್ಲ ದೈವ ಸಂಕಲ್ಪ ಎನ್ನುವ ನಂಬಿಕೆಯಿತ್ತು. ಆಧುನಿಕ ಕಾವ್ಯ ಇಂಥ ನಂಬಿಕೆಗೆ ವಿರುದ್ಧವಾಗಿದೆ.

ಆದರೆ ಆಧುನಿಕ ಕಾಲದಲ್ಲೂ ಕಾವ್ಯ, ಅಥವಾ ಒಟ್ಟಾರೆಯಾಗಿ ಸಾಹಿತ್ಯ, ಮೂಲಭೂತ ಸಿದ್ಧಾಂತವೊಂದಕ್ಕೆ (ಅರ್ಥಾತ್ ಐಡಿಯಾಲಜಿಗೆ) ಬದ್ಧವಾಗಬೇಕೆಂಬ ನಂಬಿಕೆಯಿರುವಲ್ಲಿ ಭಿನ್ನತೆಯ ಪಶ್ನೆ ಏಳುವುದಿಲ್ಲ. ಯಾಕೆಂದರೆ ಭಿನ್ನವಾಗಿರುವುದೇ ಇಂಥ ಸಿದ್ಧಾಂತಕ್ಕೆ ವಿರುದ್ಧವಾದುದು. ಆದ್ದರಿಂದ ಇಲ್ಲಿ ಪ್ರಭಾವದ ಸಮಸ್ಯೆಯೂ ಇಲ್ಲ. ಎಲ್ಲರೂ ಒಂದೇ ರೀತಿ ಬರೆಯಬೇಕು ಎಂದಾದಾಗ ಪ್ರಭಾವದ ಸಮಸ್ಯೆಯಿರುವುದು ಹೇಗೆ? ಒಂದೇ ಸಿದ್ಧಾಂತಕ್ಕೆ ಒಳಗಾಗಿ ಬರೆಯುವವರೆಲ್ಲರೂ ಒಂದೇ ಅಭಿಪ್ರಾಯ ಮತ್ತು ದೃಷ್ಟಿಕೋನ ಉಳ್ಳವರಾಗಿರುತ್ತಾರೆ. ಇಂಥ ಕಡೆ ಯಾರೊಬ್ಬನೂ ಸಿದ್ಧಾಂತದ ಚೌಕಟ್ಟನ್ನು ಮೀರಲು ಪಯತ್ನಿಸಿದರೆ ಆತ ಟೀಕೆಗೆ ಗುರಿಯಾಗುವುದು ಖಂಡಿತ. ಮೆಂಡೆಲ್‌ಸ್ಟಾಮ್ ಆಗಲಿ, ಬೋರಿಸ್ ಪಾಸ್ಟರ್‌ನಾಕ್ ಆಗಲಿ, ಸೋಲ್ಝೆನಿತ್ಸಿನ್ ಆಗಲಿ ಭಿನ್ನರಾಗಿರಲು ಪ್ರಯತ್ನಿಸಿದ್ದರಿಂದಲೇ ಸ್ಥಾಪಿತ ಹಿತಾಸಕ್ತಿಗಳಿಂದ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಇಂದು ಸಲ್ಮಾನ್ ರಶ್ದಿ ಮತ್ತು ನಸ್ರೀನಾ ತಸ್ಲಿಂ ಅದೇ ಸ್ಥಿತಿಯಲ್ಲಿದ್ದಾರೆ. ರಾಜಕೀಯ ಮೂಲಭೂತವಾದ ಮತ್ತು ಧಾರ್ಮಿಕ ಮೂಲಭೂತವಾದ ಎರಡೂ ಸಮೂಹದ ಹೆಸರಿನಲ್ಲಿ ಮನುಷ್ಯನ ಮನಸ್ಸಿನ ಮೇಲೆ ನಡೆಸುವ ದಬ್ದಾಳಿಕೆಗಳೇ. ಸಾಹಿತ್ಯ ಚರಿತ್ರೆಯನ್ನು ನೋಡಿದರೆ ಹಲವು ಬದಲಾವಣೆಗಳು ಇಂಥ ಅಸಹನೆ ಮತ್ತು ದಬ್ಬಾಳಿಕೆಗಳ ವಿರುದ್ಧ ತಿಳಿದೋ ತಿಳಿಯದೆಯೋ ಸ್ವೀಕರಿಸಿದ ಸವಾಲುಗಳಾಗಿ ಕಂಡುಬರುತ್ತದೆ.

ಒಂದೊಂದು ಕಾಲಘಟ್ಟದ ಕೃತಿಗಳು ತೋರಮಟ್ಟದಲ್ಲಿ ಒಂದೇ ಗುಣವನ್ನು ಪಡೆದುಕೊಂಡಿರುತ್ತವೆ. ಉದಾಹರಣೆಗೆ ನವೋದಯ ಕಾಲದ ಕೃತಿಗಳಲ್ಲಿ ಕೆಲವೊಂದು ಸಾಮಾನ್ಯ ಗುಣಗಳನ್ನು ಗುರುತಿಸುವುದು ಸಾಧ್ಯ; ಅದೇ ರೀತಿ ನವ್ಯ ಸಾಹಿತ್ಯದ ಕಾಲದ ಕೃತಿಗಳಲ್ಲಿ ಕೂಡಾ. ಇದು ಚರಿತ್ರೆಯ ಅನಿವಾರ್ಯತೆ. ಆದರೂ ಇವೆಲ್ಲವೂ ಒಂದೇ ಅಚ್ಚಿನಲ್ಲಿ ಎರಕಗೊಂಡವು ಎಂಬ ದೃಷ್ಟಿಯಿಂದ ಓದಿದರೆ ಇಲ್ಲಿನ ಭಿನ್ನತೆಗಳು ನಮಗೆ ಎರವಾಗುತ್ತವೆ. ಸಾಮಾನ್ಯತೆ ಮತ್ತು ಭಿನ್ನತೆ – ಇವೆರಡನ್ನೂ ಗುರುತಿಸುವುದೇ ಬಹುಶಃ ಲಾಭದಾಯಕವಾದ ಓದು. ಹಾಗೇನೇ ಸಾಹಿತ್ಯ ಕ್ರಾಂತಿಯೊಂದು ಯಾವಾಗ, ಹೇಗೆ ಮತ್ತು ಯಾರಿಂದ ಸುರುವಾಯಿತು ಎಂಬ ಪಶ್ನೆ: ಇದನ್ನೊಂದು ನಿಖರವಾದ ತಾರೀಖು, ವಿಧಾನ ಮತ್ತು ವ್ಯಕ್ತಿಗೆ ಸಂಬಂಧಿಸುವುದು ಕೂಡಾ ಸರಿಯಾಗುವುದಿಲ್ಲ. ಕನ್ನಡ ನವೋದಯ ಸಾಹಿತ್ಯ ಬಿ. ಎಂ. ಶ್ರೀ. ಅವರಿಂದ ಹಾಗೂ ನವ್ಯಸಾಹಿತ್ಯ ಗೋಪಾಲಕೃಷ್ಣ ಅಡಿಗರಿಂದ ಮೊದಲಾದುವೇ? ಹೌದೆನ್ನಲು ಮನಸ್ಸು ಹಾತೊರೆಯಬಹುದು; ಆದರೂ ಪ್ರಮುಖ ಸಾಹಿತ್ಯವಿಧಾನವೊಂದಕ್ಕೆ ಅನೇಕ ಕಾರಣಗಳು ಮತ್ತು ಮೂಲಗಳಿರುತ್ತವೆ. ಯಾವುದೂ ಒಂದು ದಿನ ಇದ್ದಕ್ಕಿದ್ದಂತೆ ನಿರ್ವಾತದಲ್ಲಿ ಹುಟ್ಟುವುದಿಲ್ಲ. ಬ್ಲೂಮ್‌ನ ಪ್ರಭಾವದ ಪರಿಕಲ್ಪನೆಯೂ ಸೂಚಿಸುವುದು ಇದನ್ನೇ.

ಸಾಹಿತ್ಯಕ ಕೃತಿಯೊಂದು ಅತ್ಯಂತ ಪಯೋಗಾತ್ಮಕವಾದಾಗ ಕೆಲವೊಂದು ಸಮಸ್ಯೆಗಳು ಎದುರಾಗುತ್ತವೆ. ಮುಖ್ಯವಾಗಿ ಅದನ್ನು ಹೇಗೆ ಓದುವುದೆಂದು ಜನರಿಗೆ ಗೊತ್ತಾಗದೆ ಕೃತಿ ಮೂಲೆಗುಂಪಾಗಬಹುದು. ಅಥವಾ ಕೇವಲ ಇಂಥ ಪ್ರಯೋಗಾತ್ಮಕತೆಯೇ ಅದರ ಗುಣವೆಂದು ಗುರುತಿಸಲ್ಪಡಬಹುದು. ಇದಕ್ಕಿಂತಲೂ ಹೆಚ್ಚಾಗಿ ಪ್ರಯೋಗಾತ್ಮಕವಾದುದಕ್ಕೇ ಅದು ಕೊಂಡಾಡಲ್ಪಡಲೂಬಹುದು. ಜೇಮ್ಸ್ ಜಾಯ್ಸ್‌ನ ಮಟ್ಟಿಗೆ ಇದೆಲ್ಲವೂ ನಡೆದಿದೆ: ಅವನ ‘ಡಬ್ಲಿನರ್ಸ್’ ಎಂಬ ಕಥಾಸಂಕಲನವೇ ವಿಶಿಷ್ಣವಾದರೆ ಇದಕ್ಕಿಂತಲೂ ವಿಶಿಷ್ಟವಾದುದು ‘ದ ಪೋರ್ಟೇಟ್ ಆಫ್ ಎ ಯಂಗ್ ಮ್ಯಾನ್ ಏಸ್ ಏನ್ ಆರ್ಟಿಸ್ಟ್’ ಎಂಬ ಮೊದಲ ಕಾದಂಬರಿ; ನಂತರದ ‘ಯೂಲಿಸಿಸ್’ ಇಡೀ ಕಾದಂಬರಿ ಕ್ಷೇತ್ರದಲ್ಲೇ ಹೊಸ ಪ್ರಯೋಗ-ಆದರೆ ಸುಲಭ ಓದಿಗೆ ದೊರಕುವಂಥದಲ್ಲ; ಇನ್ನೂ ಮುಂದಿನ ‘ಫಿನೆಗನ್ಸ್ ವೇಕ್’ ಇವೆಲ್ಲಕ್ಕಿಂತಲೂ ವಿಶಿಷ್ಟವೂ ಕ್ಲಿಷ್ಟವೂ ಆಗಿರುವಂಥ ಕಾದಂಬರಿ. ಆದರೆ ಇಂದು ಅರ್ಥವಾಗದೆ ಇದ್ದುದು ನಾಳೆ ಅರ್ಥವಾಗಬಾರದು ಎಂದೇನಿಲ್ಲ. ಜಾನ್ ಡನ್‌ನ ಕವಿತೆಗಳು ಓದುಗರಿಗೆ ಅರ್ಥವಾಗದೆ ನಾಶವಾಗಬಹುದು ಎಂದು ಬೆನ್ ಜಾನ್ಸನ್ ಹೇಳಿದ್ದ; ಆದರೆ ಹಾಗಾಗಲಿಲ್ಲ. ಡನ್‌ನ ಕವಿತೆಗಳು ಇಂದಿಗೂ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಇದಕ್ಕೆ ಸಮಕಾಲೀನ ಸಂದರ್ಭದಲ್ಲಿ ಎಲಿಯಟ್‌ನ ಪ್ರಭಾವಶಾಲಿಯಾದ ಓದೂ ಒಂದು ಕಾರಣವೆನ್ನುವುದನ್ನು ಇಲ್ಲಿ ಹೇಳಬೇಕು. ಬದಿಗೆ ಸರಿದಿದ್ದ ಅದೆಷ್ಟೋ ಕವಿಗಳನ್ನು ಎಲಿಯಟ್ ಸಾಹಿತ್ಯದ ಮುಖ್ಯವಾಹಿನಿಗೆ ಮರಳಿ ತಂದುದು ಆಧುನಿಕ ಕಾಲದ ಒಂದು ಚರಿತ್ರಾರ್ಹ ವಿದ್ಯಮಾನ.

ಸಾಹಿತ್ಯದ ಯಾವುದೇ ವಿಭಾಗದಲ್ಲಿ ಕಾಲದಿಂದ ಕಾಲಕ್ಕೆ ನಡೆಯುವ ಪ್ರಾಯೋಗಿಕತೆ ಆಘೋಷಕ್ಕೆ ಕಾರಣವಾಗುವಂತೆ ಆತಂಕಕ್ಕೂ ಕಾರಣವಾಗಬಹುದು. ಜಾಯ್ಸ್ ಕಾದಂಬರಿಯ ಸಾಧ್ಯತೆಯನ್ನು ಹಿಗ್ಗಿಸಿದನೇ ಅಥವಾ ಕುಗ್ಗಿಸಿದನೇ ಎಂದರೆ ಉತ್ತರಿಸುವುದು ಕಷ್ಟವಾಗುತ್ತದೆ. ಆಧುನಿಕ ಯುಗ ಕಾದಂಬರಿಯದು ಎಂದು ಕೊಂಡಾಡುತ್ತಿರುವಾಗಲೇ ಕಾದಂಬರಿಯ ಅಂತ್ಯವನ್ನೂ ಕೆಲವರು ಸೂಚಿಸಿದ್ದಾರೆ; ವಿ. ಎಸ್. ನೈಪಾಲರು ಕಾದಂಬರಿಯ ಕತೆ ಮುಗಿಯಿತು ಎಂದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇದೇ ಕಾರಣಕ್ಕೆ ನೈಪಾಲರು ಕಾದಂಬರಿ ಬರೆಯುವುದನ್ನು ಬಿಟ್ಟು ಪ್ರವಾಸ ಕಥನಗಳನ್ನು ಬರೆಯಹೊರಟಂತೆ ಕಾಣುತ್ತದೆ. ಈ ಸ್ಥಿತಿಗೆ ಜಾಯ್ಸ್‌ನ ‘ಅತಿಪ್ರಾಯೋಗಿಕತೆ’ ದಾರಿಮಾಡಿಕೊಟ್ಟಿತೇ ಎಂದು ನಾವು ಕೇಳಬಹುದು. After Joyce: Studies in Fiction After Ulysses ಎಂಬ ಮಾರ್ಟಿನ್ ಆಡಮ್ಸ್‌ನ ಪುಸ್ತಕದ ಮುಖವಾಣಿಯಾಗಿ ಜಾರ್ಜ್ ಕೂಬ್ಲರ್‌ನ The Shape of Timeನಿಂದ ಈ ಮಾತನ್ನು ಉದ್ಧರಿಸಲಾಗಿದೆ: ‘ಪ್ರತಿಯೊಂದು ಹೊಸ ರಚನೆಯೂ ಆಯಾ ಸರಣಿಯೊಳಗಿನ ಮುಂದಣ ಆವಿಷ್ಕಾರಗಳನ್ನು ಮಿತಗೊಳಿಸುತ್ತದೆ. ಅಂಥ ಪ್ರತಿಯೊಂದು ರಚನೆಯೂ ಯಾವುದೇ ಸಾಮಯಿಕ ಸಂದರ್ಭದಲ್ಲಿ ತೆರೆದಿರುವ ಪರಿಮಿತ ಸಾಧ್ಯತೆಗಳಲ್ಲಿ ತಾನೂ ಒಂದಾಗಿರುತ್ತದೆ. ಆದ್ದರಿಂದ ಒಂದೊಂದು ಆವಿಷ್ಕಾರವೂ ತನ್ನ ವರ್ಗದ ಆಯುಸ್ಸನ್ನು ಕಡಿಮೆಮಾಡುವಂಥದು.’ ಇಂಥ ಚಿಂತನೆ ಹೊಸತನದ ಹುಡುಕಾಟವನ್ನು ನಿರಾಸೆಯೆಡೆಗೆ ತಳ್ಳುವುದಾದರೂ, ಹೊಸ ರೂಪ ಹಳೆಯದನ್ನು ಸಂಪೂರ್ಣವಾಗಿ ತೊರೆಯಬೇಕೆಂದಿಲ್ಲ; ಹಳೆಯದನ್ನು ಒಳಗೊಂಡು ಹೊಸದನ್ನು ರೂಪಿಸಿಕೊಳ್ಳಬಹುದು ಎನ್ನುವುದೇ ಆಧುನಿಕೋತ್ತರ ಚಿಂತನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೫
Next post ತಾಯ್ತನ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

cheap jordans|wholesale air max|wholesale jordans|wholesale jewelry|wholesale jerseys