ಜಿಗ್ಗಿನ ಚಕ್ರವ್ಯೂಹ ಮತ್ತು ಸರಳದಾರಿಯ ಕಷ್ಟಗಳು

ಹ್ಯಾಮ್ಲೆಟ್ ನಾಟಕದಲ್ಲಿ ಹ್ಯಾಮ್ಲೆಟ್‌ಗೆ ಕಿರಿಕಿರಿ ಮಾಡುವ ಪೊಲೊನಿಯಸ್‌ನ ಪರಿಚಯ ಆ ನಾಟಕದ ಓದುಗರಿಗೆ ಇದ್ದೇ ಇರುತ್ತದೆ. ಒಂದು ಕಡೆ ತಾತ್ವಿಕ ಜಿಜ್ಞಾಸೆಯಲ್ಲಿ ಮುಳುಗಿ ಹೋಗುತ್ತಿರುವ ಹ್ಯಾಮ್ಲೆಟ್ ಇದ್ದಾನೆ. ಇನ್ನೊಂದು ಕಡೆ ಹ್ಯಾಮ್ಲೆಟ್‌ನ ತಾತ್ವಿಕತೆಯನ್ನು ಸಾಮಾನ್ಯೀಕರಿಸಿಕೊಂಡು ಪ್ರತಿಕ್ರಿಯಿಸುವ ಪೊಲೊಮಿಯಸ್ ಇದ್ದಾನೆ. ದಿನನಿತ್ಯದ ಸುಖದುಃಖಗಳನ್ನು ಅತಿ ತಾತ್ವಿಕತೆಯಿಂದ ನೋಡುತ್ತ ಹುಚ್ಚನಾಗಿರುವ ನಾಯಕ. ಹುಟ್ಟಾ ಆತುರಗಾರನಾದ ಪೊಲೊನಿಯಸ್ ಪರಿಣಾಮಗಳತ್ತ ಗಮನಹರಿಸುತ್ತಾನೆ. ಅವನಲ್ಲಿ ಬಹು ಆಯ್ಕೆಗಳಿಲ್ಲ. ಅವನಿಗಿರುವ ನಾಲ್ಕಾರು ಉತ್ತರಗಳಲ್ಲಿಂದೇ ಎಲ್ಲಾ ಪ್ರಶ್ನೆಗಳಿಗೂ ಪರಿಹಾರ ಹೇಳಬಲ್ಲ. ಮಗಳ ಪ್ರೇಮ, ಮಗನ ಹರಯ – ಎಲ್ಲದಕ್ಕೂ ಸರಳ ಸೂತ್ರಗಳಿವೆ ಅವನ ಬಳಿ. ಇವರಿಬ್ಬರ ನಡುವೆ ಕಂದರವೊಂದು ತೆರೆದುಕೊಂಡಿದೆ. ಅದು ಸಂವಹನದ ಕಂದರ. ಧ್ರುವಗಳ ತೊಂದರೆಯಿಂದ ದುರಂತ ಆವರಿಸುತ್ತಿದೆ. ಇವರಿಬ್ಬರೂ ಹೀಗೆ ನನಗೆ ಇಂದಿನ ಓದು, ವಿಮರ್ಶೆಗಳಿಗೆ ರೂಪಕಗಳೇನೋ ಎನ್ನಿಸುವಂತೆ ಭಾಸವಾಗುತ್ತಿದೆ. ನಮ್ಮ ಇಂದಿನ ಓದು, ವಿಮರ್ಶೆಗಳು ತಾತ್ವಿಕತೆಯ, ಅತಿ ಭಾರದಿಂದಲೂ, ಇನ್ನೊಂದು ಕಡೆ ಸರಳೀಕರಣದ ಹಗುರ ಭಾವದಿಂದಲೂ ಒಂದು ಕಂದರವನ್ನೇ ಸೃಷ್ಟಿಸಿಕೊಂಡಿವೆಯೇನೋ ಅನ್ನಿಸುತ್ತಿದೆ. ಇಂದು ಪಠ್ಯವೊಂದು ಪಠ್ಯವಾಗಿ ಉಳಿದಿಲ್ಲ. ಅದು ಪಠ್ಯಾಂತರವಾಗಿ ತಾತ್ವಿಕ ಸ್ವರೂಪದಲ್ಲಿ ಬರುತ್ತಿರುವುದನ್ನು ಗಮನಿಸಬಹುದು. ಕಲಾತ್ಮಕತೆಯೊಂದೇ ಮಾನದಂಡವಾಗದೇ, ಅನೇಕ ಅನ್ಯಶಿಸ್ತುಗಳ ನೆಲೆಯಲ್ಲಿ ಪಠ್ಯವನ್ನು ಭಾಷೆಯ ಚಟುವಟಿಕೆಯಾಗಿ ಮಾತ್ರ ನೋಡದೆ ರಾಜಕೀಯ, ಸಾಮಾಜಿಕ, ಆರ್ಥಿಕ ಆಯಾಮಗಳಿರುವುದನ್ನು ಗ್ರಹಿಸುವ ಕ್ರಮವೂ ಆಗಿದೆ. ಪಠ್ಯದ ಸೃಷ್ಟಿಯು ನಡೆಯುವಾಗಲೇ ಮೇಲೆ ಹೇಳಿದ ನಿಶ್ಚಿತತೆಗಳೆಲ್ಲ ಹೊಕ್ಕು ಬಿಡುವುದರಿಂದ, ಪಠ್ಯವು ಇದರಿಂದ ಮುಕ್ತವಾಗಿಲ್ಲ ಎಂಬುದೇ ಇಲ್ಲಿನ ಗ್ರಹಿಕೆ. ಆದ್ದರಿಂದ ಇಂದು ಕೃತಿಯೊಂದರ ಪ್ರವೇಶಕ್ಕೆ ಕೃತಿ ಅಥವಾ ಮೀಮಾಂಸೆಯ ತಿಳುವಳಿಕೆಗಳು ಮಾತ್ರ ಸಾಲದು. ಇಲ್ಲಿ ಒಂದು ಉದಾಹರಣೆಯನ್ನು ಕೊಡುವುದಾದರೆ, ಇತ್ತೀಚೆಗೆ ನಾನು ಕೇಳಿದ ಕಾಳಿದಾಸನ ನಾಟಕ `ಶಾಕುಂತಲ’ ಉಪನ್ಯಾಸದಲ್ಲಿ ಕೃತಿಯ ರಸಾನುಭವ ಮುಖ್ಯವಾಗಿರಲೇ ಇಲ್ಲ. ಅಲ್ಲಿ ಮೂಲ ಮಹಾಭಾರತಕ್ಕಿಂತ ಕಾಳಿದಾಸ ಯಾವ ರೀತಿ ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ ಮತ್ತು ಏಕೆ ಮಾಡಿಕೊಳ್ಳುತ್ತಾನೆ ಎನ್ನುವ ಪ್ರಶ್ನೆಗಳು ಮುಖ್ಯವಾಗಿ ಫೋಕಸ್ ಆಯಿತು. ಜೊತೆಗೆ ಆ ಕೃತಿ ಬಂದ ಕಾಲದ ರಾಜಕೀಯ ಮತ್ತು ಸಾಮಾಜಿಕ ಸಂವಿಧಾನಗಳನ್ನು ಎತ್ತಿಕೊಳ್ಳಲಾಯಿತು. ವಾತ್ಸಾಯನನ `ಕಾಮಸೂತ್ರ’ ಬಂದ ಕಾಲವಾಗಿದ್ದರಿಂದ ಕಾಮೋದ್ದೀಪನ ಅಂಶಗಳು ಹೆಚ್ಚಾಗಿವೆ; ಪ್ರಭುತ್ವವು ನೆಲೆಗೊಂಡು ಹಿಂದುಧರ್ಮದ ರೂಪುರೇಷೆಗಳನ್ನು ರೂಪಿಸುತ್ತಿದ್ದುದರಿಂದ ಲಜ್ಜಾವತಿಯಾದ ಶಾಕುಂತಲೆಯ ಆವಿಷ್ಕಾರವಾಯಿತು…. ಹೀಗೆ ಚರ್ಚೆ ಮುಂದುವರೆಯಿತು. ಇಲ್ಲಿ ರಸದ ಪರಿಣಾಮಗಳಿಗಿಂತ ರಸವನ್ನುಂಟು ಮಾಡು ಮೇಕಿಂಗ್ ಬಗ್ಗೆ ಒತ್ತು ಸಿಕ್ಕಿತು. ಕೃತಿಯನ್ನು ನಿರಚನಗೊಳಿಸಿಕೊಲ್ಳುವ ರೀತಿಯೂ ಇದಾಗಿತ್ತು.

ಈ ಬಗೆಯ ಓದು ಬೌದ್ಧಿಕತೆಯನ್ನು ಬೇಡುತ್ತದೆ. ತತ್ವಗಳಿಂದ ಪುಷ್ಟಿಗೊಂಡು ಬೆಳೆಯುತ್ತದೆ. ಆಗ ಇಂತಹ ಕ್ರಮಗಳನ್ನೇ ಸರಳಗೊಳಿಸಿ ನೋಡುವ ಅಡ್ಡ ಪರಿಣಾಮಗಳು ಸೃಷ್ಟಿಯಾಗುತ್ತದೆ. ಏಕೆಂದರೆ, ತತ್ವದ ಸಿಕ್ಕು ಒಳಹೊಕ್ಕು ನೋಡಲು ಅಸಾಧ್ಯವಾದಾಗ ಒಂದು ಮಧ್ಯಮ ನೋಟದಿಂದ ಅದನ್ನು ಭೇದಿಸಿಬಿಡುವ ಪ್ರಯತ್ನ ಮಾಡುವುದು ನಿರೀಕ್ಷಿತ.

ಸಾಹಿತ್ಯ ವಿಮರ್ಶೆಯು ಮೊದಲಲ್ಲಿ ಕೃತಿಕಾರನನ್ನು ಕೇಂದ್ರವಾಗಿರಿಸಿಕೊಂಡಿತಲ್ಲದೆ, ನಂತರ ಪಠ್ಯಕೇಂದ್ರಿತವಾಗಿ, ತದನಂತರ ಸಮಾಜ, ಓದುಗ, ಸಂಸ್ಕೃತಿ ಕೇಂದ್ರಿತವಾಗಿ ತನ್ನನ್ನು ವಿಸ್ತರಿಸಿಕೊಂಡಿದೆ. ಹೊಳೆದಾರಿ ಅಗಲ ವಿಸ್ತಾರಗಳಲ್ಲಿ ಬಿಚ್ಚಿಕೊಳ್ಳುವಂತೆ ವಿಮರ್ಶೆಯು ಅನ್ಯಶಿಸ್ತೀಯ ನೆಲೆಗಳಲ್ಲೂ ತನ್ನ ನೆಲೆಯನ್ನು ಅರಸಿತು. ಇದರಿಂದ ಅದರ ವ್ಯಾಪ್ತಿ ಹಿರಿದಾಯಿತು. ಬಹುಮುಖೀ ಚರ್ಚೆಗೆ ದಾರಿಯಾಯಿತು. ಇದರೊಂದಿಗೆ ವಾದ, ತತ್ವಗಳನ್ನು ಆಧರಿಸಿದ ವಿಮರ್ಶೆಯ ವಿಸ್ತಾರ ಹೆಚ್ಚಾದಂತೆ, ಅದು ಸರಳೀಕರಣದ ಸಂಕಷ್ಟವನ್ನು ತನ್ನ ಮೇಲೆ ತಂದುಕೊಳ್ಳತೊಡಗಿದ್ದು.

ತತ್ವಾಧಾರಿತ ವಿಮರ್ಶಾಕ್ರಮಗಳು ಎದುರಿಸುತ್ತಿರುವ ಕಷ್ಟಗಳು ಹಲವಾರು. ಅವುಗಳು ಆಧರಿಸಿರುವ ಎಲ್ಲಾ ತಾತ್ವಿಕತೆಗಳಲ್ಲಿಯೂ ಸಾಕಷ್ಟು ಏರಿಳಿತಗಳಾಗಿವೆ. ಅವುಗಳ ಪ್ರಾಥಮಿಕ ಹಂತಗಳಿಂದ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಾ ಬಂದು, ಹೊಸ ಹೊಸ ಸ್ವರೂಪಗಳಲ್ಲಿ ತಲೆದೋರಿವೆ. ಇವು ಬರುಬರುತ್ತಾ ಒಂದು ಮತ್ತೊಂದಕ್ಕೆ ಅಂಟಿಕೊಂಡು ಹೆಣೆದುಕೊಂಡ ಪರಿಣಾಮ ಜಿಗ್ಗು ನಿರ್ಮಾಣವಾಗಿಬಿಟ್ಟಿದೆ. ಇದನ್ನು ಇಂದು ಚಾಲನೆಯಲ್ಲಿರುವ ಸ್ತ್ರೀವಾದದ, ಮಾರ್ಕ್ಸ್‌ವಾದ, ರಚನಾವಾದಗಳೇ ಮೊದಲಾಗಿ ಬಹುತೇಕ ಎಲ್ಲಾ ವಾದಗಳಿಗೂ ಅನ್ವಯಿಸಿ ಹೇಳಬಹುದು. ಇದನ್ನು ಆಧರಿಸಿದ ವಿಮರ್ಶೆಯೂ ಸ್ವಾಭಾವಿಕವಾಗಿ ಜಿಗುಟುತನದಿಂದಲೇ ಕೂಡಿ, ವೈಶಾಲ್ಯದಲ್ಲಿ ಹರಡಿಕೊಂಡು, ಜಿಜ್ಞಾಸೆಯಲ್ಲಿ ಮುಳುಗಿರುತ್ತದೆ. ಆಗ ಮೇಲ್ಮೈ ಸ್ವರೂಪವನ್ನು ಮಾತ್ರ ಗಣನೆಗೆ ತೆಗೆದುಕೊಂಡು `ಇದು ಇಷ್ಟೇ’ ಎಂಬ ತೀರ್ಮಾನಗಳಿಗೆ ಬಂದು ಆತುರಾತುರವಾಗಿ ತತ್ವವೊಂದಕ್ಕೆ ಕೊನೆಯ ಮೊಳೆ ಹೊಡೆದುಬಿಡುವ ಪ್ರವೃತ್ತಿ ಇನ್ನೊಂದು ಕಡೆಯಿಂದ ಕುಡಿಯತೊಡಗುತ್ತದೆ.

ಸ್ತ್ರೀವಾದವನ್ನೇ ಇಲ್ಲಿ ಉದಾಹರಿಸುವುದಾದರೆ ಅದು ಮೂಲತಃ ರಾಜಕೀಯ ಸ್ವರೂಪದಿಂದ ಅವತರಿಸಿ, ಸಾಮಾಜಿಕ ಸಾಧಕ ಬಾಧಕಗಳನ್ನು, ವಿವರಿಸಿಕೊಳ್ಳುತ್ತಲೇ ಮಾನಸಿಕ ಅಸ್ತಿತ್ವದ ಸ್ವರೂಪವನ್ನು ವಿಶದಪಡಿಸಿಕೊಂಡಿತು. ಆನಂತರವಾದರೂ ಅದು ಅನೇಕ ನಿಶ್ಚಿತತೆಗಳಲ್ಲದೆ, ಆದಿವಾಸಿ, ತೃತೀಯ ರಾಷ್ಟ್ರಗಳ ಮಹಿಳೆಯರ ನಿಶ್ಚಿತತೆಗಳನ್ನು ವಿಶ್ಲೇಷಣೆಗೆ ತೆಗೆದುಕೊಂಡಿತು. ಹೀಗೆ ಸ್ತ್ರೀವಾದವು ಬೆಳೆಯುತ್ತ ಬಂದಂತೆ, ಅದನ್ನು ಆಧರಿಸಿದ ವಿಮರ್ಶೆ ಸಹ ಇವನ್ನೆಲ್ಲ ಗಮನಿಸಬೇಕಾಯಿತು. ಈ ಅನಿವಾರ್ಯತೆಗಳಲ್ಲಿ ಅದು ಸಿಕ್ಕಿಕೊಂಡಂತೆಯೆ, ಸ್ತ್ರೀವಾದಿ ವಿಮರ್ಶೆಯು ಲಿಂಗಭೇದದ ಸರಳ ಸಮಸ್ಯೆಗಳ ವಿಶ್ಲೇಷಣೆ ಎಂಬ ಸರಳೀಕರಣದ ಉಪಾಯ ಹುಟ್ಟಿಕೊಂಡು ಬಿಟ್ಟಿದೆ. ಅಲ್ಲಿಗೆ ಸ್ತ್ರೀವಾದವೆಂದರೆ ಇಷ್ಟೇ ಎಂದು ಅದನ್ನು ನಿರ್ಲಕ್ಷಿಸಿ, ಅದನ್ನು ಓದಿ ಮುಗಿಸಿ ಆಯಿತೆಂಬ ಧೋರಣೆ ಉಂಟಾಗುತ್ತದೆ. ಇದು ದುರಂತ. ಇದೇ ಗತಿ ಸಮಾಜವಾದ, ಮಾರ್ಕ್‌ವಾದ ಇತ್ಯಾದಿ ತತ್ವಾಧಾರಿತ ವಿಮರ್ಶೆಗಳಿಗೆ ಒದಗಿದೆ ಎನ್ನಬಹುದು.

ಬೌದ್ಧಿಕ ಜಿಗುಟುತನ ಮತ್ತು ಸಾಮಾನ್ಯೀಕರಣದ ಆತುರ ಎರಡೂ ರೀತಿಗಳೂ ಕೃತಿಯ ಓದಿಗೆ ತೊಡಕನ್ನೇ ಉಂಟು ಮಾಡುತ್ತವೆ. ಇತ್ತೀಚೆಗೆ ಬಹು ಚರ್ಚಿತವಾಗುತ್ತಿರುವ ಎರಡು ಕೃತಿಗಳಿಗೂ ಇದೇ ಸಮಸ್ಯೆ ಎದುರಾಗಿದೆ.

ಡಾ. ಬಂಜಗೆರೆ ಜಯಪ್ರಕಾಶರ ಕೃತಿ – `ಅನುದೇವಾ ಹೊರಗಣವನು’ ಸಂಶೋಧನೆಯ ಕೃತಿ. ಸಮಕಾಲೀನ ಸಂಶೋಧನೆಗಳು ಬಹುಮುಖೀ ನೆಲೆಗಳಲ್ಲಿ, ಚರ್ಚೆಗಳನ್ನು ಮಾಡುತ್ತಿವೆ. ಅದರಂತೆ ಜಯಪ್ರಕಾಶರೂ ಸಹ ಅನ್ಯಶಿಸ್ತೀಯ ನೆಲೆಗಳಿಂದ ವಿಷಯಾವಲೋಕನ ಮಾಡುವ ಪ್ರಯತ್ನದಲ್ಲಿದ್ದಾರೆ. ಆದರೆ ಅನ್ಯಶಿಸ್ತಿನ ನೆಲೆಗಳು ಮತ್ತು ಕನ್ನಡ ಚಾರಿತ್ರಿಕ ಸಂದರ್ಭಗಳನ್ನು ಅರಿತು ಕೃತಿಯ ವಿವೇಚನೆಯಲ್ಲಿ ತೊಡಗುವುದು ಒಂದು ರೀತಿಯ ಜಿಜ್ಞಾಸೆಯನ್ನು ಹುಟ್ಟುಹಾಕುತ್ತಿದ್ದರೆ, ಇನ್ನೊಂದೆಡೆ ಸರಳೀಕರಣದಿಂದ ಜಾತಿಮೂಲವನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತಿದೆ. ಇದು ಕೃತಿಯೊಂದು ತಲುಪಬೇಕಾದ ಸಂವಹನದ ರೀತಿಯನ್ನು ಮೊಟಕುಗೊಳಿಸುವಂತದ್ದು.

ಹಾಗೆಯೇ `ಆವರಣ’ದಲ್ಲಿ ಚರ್ಚೆಯಾಗಿರುವ ವಿಷಯ ಇತಿಹಾಸದ್ದು. ಅತಿಯಾದ ಆಕರಗಳನ್ನು ಮುಂದಿಟ್ಟು ಓದುಗರನ್ನು ದಿಕ್ಕು ತಪ್ಪಿಸುವ ಪ್ರಯತ್ನವನ್ನು ಇಲ್ಲಿ ಕೃತಿಕಾರ ಮಾಡುತ್ತಿದ್ದಾನೆ. ಬೌದ್ಧಿಕ ಕಸರತ್ತುಗಳಿಂದ ಒಂದು ತರ್ಕವನ್ನು ನಿರೂಪಿಸುತ್ತಾ, ಒಂದು ಭಾರವನ್ನು ಓದುಗರ ತಲೆ ಮೇಲೆ ಹೊರೆಸುತ್ತಾನೆ. ಇತಿಹಾಸದ ವ್ಯಾಖ್ಯಾನಗಳು ಇಂದು ಹತ್ತು ಹಲವು ದಾರಿಗಳಲ್ಲಿದೆಯಾಗಿ, ಇತಿಹಾಸವನ್ನು ತಾತ್ವಿಕವಾಗಿ ನೋಡುವ ಚರ್ಚೆಗಳು ಒಂದು ಕಡೆ ದಿಕ್ಕು ತಪ್ಪಿಸುತ್ತಿದ್ದರೆ, ಇನ್ನೊಂದೆಡೆ ತಮ್ಮ ವ್ಯಾಸಂಗ ಕಾಲದ ಹಳೆಯ ಚರಿತ್ರೆಯ ನೆನಪುಗಳನ್ನಿಟ್ಟುಕೊಂಡು ಎಂದೋ ಕಲಿತು ಮರೆತ ವಿಷಯವನ್ನು ತಮಗೆ ತಿಳಿಯದಂತೆ ತೆಳುಗೊಳಿಸಿಕೊಳ್ಳುತ್ತಿರುವುದು ಕಾಣುತ್ತದೆ.

ಈ ಕೃತಿಗಳ ಭಿನ್ನಾಭಿಪ್ರಾಯಗಳು ಇಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ತಾತ್ವಿಕ ಜಿಗುಟುತನ ಮತ್ತು ಸರಳಗೊಳಿಸುಕೊಳ್ಳುವಿಕೆಯ ಎರಡು ಅತಿಯ ಪರಿಣಾಮಗಳನ್ನು ಸೂಚಿಸುವಂತೆ ಕಾಣುತ್ತಿವೆ.

ವಿವೇಕ ಶಾನುಭಾಗ, ನಟರಾಜ ಹುಳಿಯಾರ್‍ ಮುಂತಾದವರೆಲ್ಲ ಗುರುತಿಸಿದಂತೆ ಸಾಹಿತ್ಯದಲ್ಲಿ ಸುಗಮ ಸಾಹಿತ್ಯ ಹುಟ್ಟುತ್ತಿದೆ ಮತ್ತು ಸುಗಮ ಓದುಗರು ನಿರ್ಮಣವಾಗುತ್ತಿದ್ದಾರೆ ಎನ್ನುವ ಮಾತನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ. ಸುಗಮ ಸಾಹಿತ್ಯ ಎನ್ನುವುದನ್ನು ಸಾಹಿತ್ಯ ಶ್ರೇಷ್ಠತೆಯ ಆಯ್ಕೆ ಇಟ್ಟುಕೊಂಡು ಹೇಳಿದ ಮಾತು ಎನ್ನುವುದಕ್ಕಿಂತ, ಸರಳೀಕರಣದ ಅಪಾಯಗಳನ್ನೇ ಅವು ಧ್ವನಿಸುತ್ತಿರುವಂತೆ ಕಾಣುತ್ತದೆ. ಅತ್ಯತಿಷ್ಠ ದಶಾಂಗುಲವಾಗಿ ಬೆಳೆಯುತ್ತಿರುವ ಬೌದ್ಧಿಕತೆ, ಅದನ್ನು ಮುಟ್ಟಲಾರದೇ ತಮ್ಮದೇ ಆದ ಮಾರ್ಗದಲ್ಲಿ ಅರ್ಥೈಸಿಕೊಳ್ಳುತ್ತಿರುವ ಭೋಳೆತನ ಎರಡೂ ಅತಿಗಳಂತೆ ಕಾಣುತ್ತಿವೆ. ಹಾಗಾಗಿಯೇ ಮತ್ತೆ ಮತ್ತೆ ಪೊಲೊನಿಯಸ್ ಕಾಡುತ್ತಾನೆ. ತನ್ನ ಮೂಗಿನ ನೇರಕ್ಕೆ ಸರಳ ತರ್ಕಗಳಿಂದ ಬದುಕನ್ನು ಅಳೆಯುವ ಪೊಲೊನಿಯಸ್; ತತ್ವದಲ್ಲಿ ಮುಳುಗೇಳುತ್ತಿರುವ ಹ್ಯಾಮ್ಲೆಟ್ – ಈ ಇಬ್ಬರ ನಡುವಿನ ಸೇತುವೆ ಕುಸಿದಿದೆ. ಒಬ್ಬರ ಮಾತು ಇನ್ನೊಬ್ಬರಿಗೆ ಅರ್ಥ ಆಗುತ್ತಿಲ್ಲ; ಅರ್ಥ ಮಾಡಿಕೊಳ್ಳುವ ಕಾತುರವೂ ಇಲ್ಲ. ಈ ಇಬ್ಬರೂ ತಮ್ಮನ್ನು ಚತುರರು ಎಂದುಕೊಂಡು ತಮ್ಮ ವೃತ್ತಗಳಲ್ಲಿ ನಿಂತಿದ್ದಾರೆ. ಆದರೆ ಚತುರತೆ ಹುಟ್ಟಿಸುತ್ತಿರುವ ದುರಂತ ಹಿಮದ ಹೊಗೆಯಂತೆ ಸುತ್ತ ಆವರಿಸಿ, ದೃಷ್ಟಿಗಳನ್ನು ಮಬ್ಬುಗೊಳಿಸುತ್ತದೆ.

*****

(ಕನ್ನಡ ಪ್ರಭ)

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾರ್ಸ್ ಪವರ್
Next post ಉಣ್ಣಾಕ ನೀಡಿದಿ ನಮ್ಮವ್ವಾ

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…