ಕಾವ್ಯಾಧ್ಯಯನ: ಮ್ಯಾಥ್ಯೂ ಅರ್ನಾಲ್ಡ್‌ನ ವಿಚಾರಗಳು

ಕಾವ್ಯಾಧ್ಯಯನ: ಮ್ಯಾಥ್ಯೂ ಅರ್ನಾಲ್ಡ್‌ನ ವಿಚಾರಗಳು

ಕಾವ್ಯ ಪ್ರಕಾರದ ಬಗ್ಗೆ ಆಧುನಿಕ ವಿಮರ್ಶಾಪ್ರಜ್ಞೆಯನ್ನು ಬೆಳೆಸಿದವರಲ್ಲಿ ಹತ್ತೊಂಬತ್ತನೆಯ ಶತಮಾನದ ಇಂಗ್ಲಿಷ್ ಲೇಖಕ ಮ್ಯಾಥ್ಯೂ ಅರ್ನಾಲ್ಡ್ ಒಬ್ಬ ಪ್ರಮುಖ ವ್ಯಕ್ತಿ. ಮೂವತ್ತೈದು ವರ್ಷಗಳ ಕಾಲ ಶಾಲಾ ಇನ್‌ಸ್ಪೆಕ್ಟರನಾಗಿ, ಹತ್ತು ವರ್ಷಗಳ ಕಾಲ ಆಕ್ಸ್‌ಫರ್ಡ್ ಯುನಿವರ್ಸಿಟಿಯಲ್ಲಿ ಕಾವ್ಯದ ಪ್ರೊಫೆಸರನಾಗಿ ಕೆಲಸ ಮಾಡಿದ ಅರ್ನಾಲ್ಡ್ ಸ್ವತಃ ಒಳ್ಳೇ ಕವಿಯೂ ಆಗಿದ್ದವ. ಕಾವ್ಯದ ಕುರಿತಾದ ಅವನ ವಿಚಾರಗಳು ಮುಖ್ಯವಾಗಿ ‘ಕಾವ್ಯಾಧ್ಯಯನ’ (The Study of Poetry) ಎಂಬ ಅವನ ಲೇಖನದಲ್ಲಿ ದೊರಕುತ್ತವೆ. ಕಾವ್ಯದ ಭವಿಷ್ಯವೇನು, ಎಂತಹ ಕಾವ್ಯ ನಮಗೆ ಬೇಕು. ಒಳ್ಳೆಯ ಕಾವ್ಯವನ್ನು ಗುರುತಿಸುವುದು ಹೇಗೆ, ಅಧ್ಯಯನ ಮಾಡುವುದು ಯಾವ ರೀತಿ ಮುಂತಾದ ಹಲವು ಪ್ರಸ್ತುತ ವಿಷಯಗಳನ್ನು ಅರ್ನಾಲ್ಡ್ ಈ ಲೇಖನದಲ್ಲಿ ಚರ್ಚಿಸುತ್ತಾನೆ. ಸಾಹಿತ್ಯಕ ವಿಮರ್ಶೆ ಹಲವು ದಿಕ್ಕುಗಳತ್ತ ಸ್ಫೋಟಿಸಿರುವ ನಮ್ಮ ಕಾಲದಲ್ಲಿ ಅವನ ವಿಚಾರಗಳನ್ನು ನಾವು ಈಗಾಗಲೇ ತಣಿಸಿಕೊಂಡಿದ್ದೇವೆ ಎನಿಸಬಹುದಾದರೂ ಅವುಗಳ ಶಾಖ ನಿಜಕ್ಕೂ ಆರಿಲ್ಲದ ಕಾರಣ ಅವನ್ನು ಮತ್ತೆ ನೆನಪಿಗೆ ತರುವುದು ಅಗತ್ಯವಾಗುತ್ತದೆ.

ಕವಿತೆಯ ಭವಿಷ್ಯದ ಬಗ್ಗೆ ಮಾತಾಡುತ್ತ, ಕವಿತೆಯ ಅದೃಷ್ಟದಲ್ಲಿ ಮಾತ್ರವೇ ನಮ್ಮ ಕುಲ ಹೆಚ್ಚೆಚ್ಚು ಭದ್ರವಾದ ನೆಲೆಯನ್ನು ಕಂಡುಕೊಳ್ಳುವುದು ಸಾಧ್ಯ ಎನ್ನುತ್ತಾನೆ ಅರ್ನಾಲ್ಡ್. ಇಂದು ಕುಸಿಯದ ಯಾವುದೇ ಪಂಥವಿಲ್ಲ, ಪ್ರಶ್ನೆಗೊಳಗಾಗದ ಸನಾತನ ವಿಶ್ವಾಸವಿಲ್ಲ, ನಾಶವಾಗುವ ಭಯವಿಲ್ಲದ ಯಾವುದೇ ಪರಂಪರೆಯಿಲ್ಲ ಎನ್ನುತ್ತಾನೆ ಅರ್ನಾಲ್ಡ್. ಆತ ಈ ಮಾತನ್ನು ಹೇಳಿದುದು ನೀತ್ಸೆ, ಮಾರ್ಕ್, ಫ್ರಾಯ್ಡ್, ಡಾರ್ವಿನ್ ಮುಂತಾದ ಮಹಾಮಹಿಮರು ತಂತಮ್ಮ ಕ್ಷೇತ್ರಗಳಲ್ಲಿನ ಆವರೆಗಿನ ಕಲ್ಪನೆಗಳನ್ನೆಲ್ಲ ಬುಡಮೇಲು ಮಾಡುತ್ತಿದ್ದ ವೇಳೆಯಲ್ಲಿ ಎನ್ನುವುದನ್ನು ಇಲ್ಲಿ ನೆನೆಯಬಹುದು. ನಮ್ಮ ಮತಧರ್ಮವಾದರೋ ವಸ್ತುಸ್ಥಿತಿಯ ಅಥವಾ ಹಾಗೆಂದು ನಂಬುವ ಸತ್ಯದ ಮೇಲೆ ಸಾಕಾರಗೊಂಡುದು. ಅದು ತನ್ನ ಭಾವನೆಯನ್ನು ಈ ವಸ್ತುಸ್ಥಿತಿಗೆ ಜೋಡಿಸಿ ಕೊಂಡಿತು. ಉಳಿದುದೆಲ್ಲ ಭ್ರಮೆಯೆನಿಸಿತು. ಆದರೆ ಈಗ ಈ ವಸ್ತುಸ್ಥಿತಿಯೇ ಕುಸಿದು ಬೀಳುತ್ತಿದೆ. ಉದಾಹರಣೆಗೆ, ಮನುಷ್ಯರು ಆದಮ್ ಮತ್ತು ಈವರಿಂದ ಹುಟ್ಟಬಂದರು ಎಂಬ ಕಲ್ಪನೆ ಹೋಗಿ, ಜೀವವಿಕಾಸದ ಮೂಲಕ ವಿಕಸನಗೊಂಡರು ಎಂಬ ಕಲ್ಪನೆ ಮೂಡಿದೆ. ಆದ್ದರಿಂದ ವಾಸ್ತವದ ಮೇಲೆ ನಿಂತಿದೆಯೆನ್ನುವ ಮತಧರ್ಮಕ್ಕೆ ಆಧಾರ ಇಲ್ಲದಾಗಿದೆ. ಆದರೆ ಕವಿತೆ ತನ್ನ ಭಾವನೆಯನ್ನು ವಿಚಾರಕ್ಕೆ ಜೋಡಿಸಿಕೊಂಡಿರುತ್ತದೆ- ಆಗ ವಿಚಾರವೇ ವಸ್ತುಸ್ಥಿತಿಯಾಗುತ್ತದೆ. ನಮ್ಮ ಧರ್ಮದ ಅತ್ಯಂತ ಶಕ್ತವಾದ ಭಾಗವೆಂದರೆ ಅದರ ಅಪ್ರಜ್ಞಾಪೂರ್ವಕ ಕವಿತೆ.

ಆದ್ದರಿಂದ ಕವಿತೆಯನ್ನು ನಾವು ಇದುವರೆಗೆ ನೀಡಿದ ಪರಿಗಣನೆಗಿಂತ ಹೆಚ್ಚಿನ ರೀತಿಯಲ್ಲಿ ತೆಗೆದುಕೊಳ್ಳಬೇಕಾಗುತ್ತದೆ, ಎಂದರೆ ಕವಿತೆಗೆ ಜನ ಇದುವರೆಗೆ ಗ್ರಹಿಸಿದುದಕ್ಕಿಂತ ಹೆಚ್ಚಿನ ಸಾಧ್ಯತೆಗಳಿರುವ ರೀತಿಯಲ್ಲಿ. ಜೀವನವನ್ನು ವಿಶ್ಲೇಷಿಸುವುದಕ್ಕೆ, ನಿರೂಪಿಸುವುದಕ್ಕೆ, ಸಾಂತ್ವನಗೊಳಿಸುವುದಕ್ಕೆ ಮತ್ತು ನೋಡಿಕೊಳ್ಳುವುದಕ್ಕೆ ನಾವು ಕವಿತೆಯತ್ತ ತಿರುಗಬೇಕಾಗುತ್ತದೆ ಎನ್ನುವುದನ್ನು ಅವರು ತಿಳಿದುಕೊಳ್ಳುತ್ತಾರೆ. ಕವಿತೆಯಿಲ್ಲದೆ ನಮ್ಮ ವಿಜ್ಞಾನವೂ ಅಸಂಪೂರ್ಣ, ಈಗ ಮತಧರ್ಮ ಮತ್ತು ತತ್ವಜ್ಞಾನವೆಂದು ಯಾವುದನ್ನು ಕರೆಯಲ್ಪಡುತ್ತವೆಯೋ ಅವನ್ನು ಕವಿತೆ ಸ್ಥಳಾಂತರಿಸುತ್ತದೆ. ನಮ್ಮ ಧರ್ಮವಾದರೆ ನೆಲೆನಿಂತುದು ಸಾಮಾನ್ಯ ಜನರನ್ನು ನಂಬಿಸುವ ಸಾಕ್ಷ್ಯಗಳ ಮೇಲೆ; ನಮ್ಮ ತತ್ವಜ್ಞಾನವಾದರೂ ಕಾರ್ಯಕಾರಣ ಸಂಬಂಧ, ಪರಿಮಿತತ್ವ. ಅಪರಿಮಿತತ್ವ ಮುಂತಾದ ತರ್ಕಗಳ ಮೇಲೆ. ಇವೆಲ್ಲ ಜ್ಞಾನದ ಛಾಯೆಗಳು ಹಾಗೂ ಹುಸಿ ಅರಿವಿನ ನೆರಳುಗಳಲ್ಲದೆ ಇನ್ನೇನಲ್ಲ. ನಾವು ಇವುಗಳಲ್ಲೆಲ್ಲ ಹೇಗಾದರೂ ಇಷ್ಟು ವರ್ಷ ವಿಶ್ವಾಸವಿರಿಸಿದೆವು ಎಂದು ದಿಗ್ಭ್ರಮೆಗೊಳ್ಳುವ ದಿನ ಬಂದೀತು. ಇವುಗಳ ಟೊಳ್ಳುತನವನ್ನು ಗಮನಿಸಿದಷ್ಟೂ ನಾವು ಕವಿತೆ ನೀಡುವ ಜ್ಞಾನದ ಮೌಲ್ಯವನ್ನು ಗುರುತಿಸುತ್ತೇವೆ.

ಕವಿತೆಯ ಅದೃಷ್ಟವನ್ನು ನಾವು ಈ ತರದ ಎತ್ತರದಲ್ಲಿ ಗುರುತಿಸುವುದಾದರೆ, ಅಂಥಾ ಕವಿತೆಗೆ ನಾವೊಂದು ಉನ್ನತಮಟ್ಟದ ಗುಣವನ್ನೂ ಕಲ್ಪಿಸಬೇಕು ಎನ್ನುತ್ತಾನೆ ಅರ್ನಾಲ್ಡ್. ಯಾಕೆಂದರೆ ಅಷ್ಟೊಂದು ಔನ್ನತ್ಯದ ಅದೃಷ್ಟವನ್ನು ಸಾಧಿಸಬಲ್ಲ ಕವಿತೆ ಅಷ್ಟು ಮೇಲ್ಮಟ್ಟದ್ದೂ ಶ್ರೇಷ್ಠವಾದ್ದೂ ಆಗಿರಬೇಕಾದ್ದು ಅನಿವಾರ್ಯ. ಉನ್ನತ ಗುಣಮಟ್ಟಕ್ಕೂ ಅಷ್ಪೇ ಕಠಿಣವಾದ ನಿರ್ಣಯಕ್ಕೂ ನಾವು ಹೊಂದಿಕೊಳ್ಳಬೇಕು. ಮನುಷ್ಯರು ಸೋಗಲಾಡಿಗಳಾಗಿರಬಹುದು; ಆದರೆ ಕಲೆಯಲ್ಲಿ, ಸಾಹಿತ್ಯದಲ್ಲಿ ಸೋಗಲಾಡಿತನ ಸಾಧ್ಯವಿಲ್ಲ. ಕವಿತೆಯಲ್ಲಾದರೆ, ಇನ್ನೆಲ್ಲಕ್ಕಿಂತಲೂ ಜಾಸ್ತಿಯಾಗಿ, ಮೇಲು ಮತ್ತು ಕೀಳು, ಒಳಿತು ಮತ್ತು ಕೆಟ್ಟುದು ಅಥವಾ ಸಾಮಾನ್ಯದ್ದು, ಸತ್ಯವಾದ್ದು ಮತ್ತು ಹುಸಿಯಾದ್ದು ಅಥವಾ ಅರ್‍ಧಸತ್ಯದ್ದು-ಈ ವ್ಯತ್ಯಾಸ ಮುಖ್ಯವಾದ್ದು. ಯಾಕೆ ಮುಖ್ಯವಾದ್ದೆಂದರೆ ಕವಿತೆಯ ಉನ್ನತ ಅದೃಷ್ಟದ ಕಾರಣ. ಕವಿತೆಯಲ್ಲಿ, ಜೀವನ ವಿಮರ್ಶೆಯಲ್ಲಿ ಹೇಗೋ ಹಾಗೆ-ಅಂಥ ವಿಮರ್ಶೆಗೆ ಕಾವ್ಯಸತ್ಯ ಮತ್ತು ಕಾವ್ಯಸೌಂದರ್ಯದ ತತ್ವಗಳಿಂದ ನಿರ್ಣಯಿಸಲ್ಪಟ್ಟ ನಿಯಮಗಳಿಗನುಸಾರ-ಸಮಯ ಸರಿದಂತೆ, ಇನ್ನಿತರ ಸಹಾಯಗಳು ಸೋಲುತ್ತಿರುತ್ತ, ನಮ್ಮ ಕುಲ ಸಮಾಧಾನವನ್ನೂ ನೆಲೆಯನ್ನೂ ಕಂಡುಕೊಳ್ಳುವುದು. ಆದರೆ ಸಮಾಧಾನ ಮತ್ತು ನೆಲೆ ಜೀವನ ವಿಮರ್ಶೆಯ ಶಕ್ತಿಗೆ ಅನುಸಾರ ಸಶಕ್ತವಾಗುತ್ತವೆ. ಹಾಗೂ ಜೀವನ ವಿಮರ್ಶೆ ಅದನ್ನು ಪ್ರಕಟಪಡಿಸುವ ಕವಿತೆ ಎಷ್ಟು ಉತ್ತಮವಾಗಿದೆ ಹೊರತು ಕಳಪೆಯಾಗಿಲ್ಲ, ಪುಷ್ಟವಾಗಿದೆ ಹೊರತು ಬಡವಾಗಿಲ್ಲ, ಸತ್ಯವಾಗಿದೆ ಹೊರತು ಅಸತ್ಯವಾಗಿಲ್ಲ ಎಂಬುದನ್ನು ಅವಲಂಬಿಸಿದೆ.

ನಾವೀಗ ಬಯಸುವುದು ಅತ್ಯುತ್ತಮ ಕವಿತೆಯನ್ನು. ಉತ್ತಮ ಕವಿತೆಗೆ ನಮ್ಮನ್ನು ಹೊಂದಿಸುವ, ಕಾಪಾಡುವ ಮತ್ತು ಸಂತೋಷಪಡಿಸುವ ಹಾಗೂ ಇನ್ನು ಯಾವುದರಿಂದಲೂ ಸಾಧ್ಯವಾಗದ ಶಕ್ತಿಯಿರುತ್ತದೆ. ಕವಿತೆಯನ್ನು ನಾವು ಓದುವಾಗ ಇದು ಯಾವಾಗಲೂ ನಮ್ಮ ಮನಸ್ಸಿನಲ್ಲಿ ಜಾಗೃತವಾಗಿರಬೇಕು. ಹಾಗಿದ್ದರೆ ಮಾತ್ರವೇ ನಾವು ಸರಿಯಾದ ಗಣನೆ ಮಾಡುವುದು ಸಾಧ್ಯ. ಆದರೆ ಇಲ್ಲಿ ಅರ್ನಾಲ್ಡ್ ಎರಡು ತೊಡಕುಗಳನ್ನು ಗಮನಿಸುತ್ತಾನೆ: ಒಂದು ಚಾರಿತ್ರಿಕ ಗಣನೆ, ಇನ್ನೊಂದು ವೈಯಕ್ತಿಕ ಗಣನೆ; ಇವೆರಡೂ ಅರ್ನಾಲ್ಡ್ ಪ್ರಕಾರ ಭ್ರಮೆಗಳೇ. ಒಬ್ಬ ಕವಿ ಅಥವಾ ಒಂದು ಕವಿತೆ ಚಾರಿತ್ರಿಕವಾಗಿ ನಮಗೆ ಮುಖ್ಯವಾಗಬಹುದು, ಅಥವಾ ವೈಯಕ್ತಿಕವಾಗಿ ಹಾಗನಿಸಬಹುದು. ದೇಶವೊಂದರ ಭಾಷೆ, ವೈಚಾರಿಕತೆ, ಮತ್ತು ಕವಿತೆ ನಡೆದು ಬಂದ ದಾರಿ ಬಹಳವೇ ಸ್ವಾರಸ್ಯಕರವಾಗಿರುತ್ತದೆ. ಈ ಬೆಳವಣಿಗೆಯಲ್ಲಿ ಕವಿಯೊಬ್ಬನ ಕೃತಿಯ ಪಾತ್ರವನ್ನು ಒಂದು ಕಾಲಘಟ್ಟವಾಗಿ ಪರಿಗಣಿಸುವುದರಿಂದ ಕೆಲವೊಮ್ಮೆ ನಾವು ಆ ಕೃತಿಗೆ ಅದರಲ್ಲಿ ನಿಜಕ್ಕೂ ಇಲ್ಲದಂಥ ಕಾವ್ಯಮಹತ್ವವನ್ನು ನೀಡಬಹುದು; ಆಗ ಕೃತಿಯನ್ನು ವಿಮರ್ಶಿಸುವಲ್ಲಿ ನಾವು ಅತಿಶಯೋಕ್ತಿಯನ್ನು ಬಳಸುತ್ತೇವೆ; ಮೊತ್ತದಲ್ಲಿ ಅದಕ್ಕೆ ಇದ್ದುದಕ್ಕಿಂತ ಹೆಚ್ಚಿನ ಬೆಲೆಕಟ್ಟುವುದು. ಚಾರಿತ್ರಿಕ ಭ್ರಮೆ ಉಂಟಾಗುವುದು ಹೀಗೆ. ಅದೇ ರೀತಿ, ಒಬ್ಬ ಕವಿಯಾಗಲಿ ಕವಿತೆಯಾಗಲಿ ವೈಯಕ್ತಿಕ ಒಲವಿನ ಮೇಲೆ ನಮಗೆ ಮಹತ್ವವೆನಿಸಬಹುದು. ನಮ್ಮ ಸ್ವಂತದ ಒಲವುಗಳಿಗೆ, ಅಭಿರುಚಿಗಳಿಗೆ, ಮತ್ತು ಸಂದರ್ಭಗಳಿಗೆ ಕವಿಯ ಕೃತಿಯ ಕುರಿತಾದ ಗುಣನಿರ್‍ಣಯವನ್ನು ಆಚೀಚೆಗೆ ವಾಲಿಸುವ ಪ್ರಬಲವಾದ ಶಕ್ತಿಯಿದ್ದು, ಅವು ನಮ್ಮನ್ನು ಅದಕ್ಕಿಲ್ಲದಂಥ ಮಹತ್ವವನ್ನು ಕೊಡುವಂತೆ ಮಾಡಬಹುದು. ಯಾಕೆಂದರೆ ಅದು ನಮಗೆ ವೈಯಕ್ತಿಕವಾಗಿ ಮಹತ್ವದ್ದಾಗಿದೆ ಅಥವಾ ಹಿಂದಿನಿಂದಲೂ ಹಾಗೆ ಕಾಣಿಸುತ್ತ ಬಂದಿದೆ. ಇಲ್ಲಿ ಕೂಡಾ ನಾವು ನಮ್ಮ ಆಸಕ್ತಿಯ ವಸ್ತುವನ್ನು ಅತಿಮೌಲ್ಯಗೊಳಿಸುತ್ತೇವೆ, ಹಾಗೂ ಅದನ್ನು ವರ್ಣಿಸುವಲ್ಲಿ ಅತಿಶಯೋಕ್ತಿಯನ್ನು ಉಪಯೋಗಿಸುತ್ತೇವೆ. ಕವಿತೆಯ ನಿಜವಾದ ಗುಣನಿರ್‍ಣಯದಲ್ಲಿನ ಎರಡನೆಯ ಭ್ರಮೆಯ ಮೂಲ ಇದುವೇ.

ಕವಿಗಳ ಕುರಿತಾದ ಮೌಲ್ಯಮಾಪನದಲ್ಲಿ ಅರ್ನಾಲ್ಡ್‌ನದು ಕಠೋರ ಧೋರಣೆಯೇ ಸರಿ. ಆದರೆ ವಿಮರ್ಶೆಗಾಗಿ ವಿಮರ್ಶೆಯಲ್ಲ, ಕವಿತೆಯನ್ನು ಇನ್ನಷ್ಟು ಅರಿತುಕೊಳ್ಳುವುದಕ್ಕೆ ಎನ್ನುವುದು ಅವನ ಮತ. ಆದ್ದರಿಂದ, ನಮ್ಮ ಅತ್ಯುನ್ನತ ಮೌಲ್ಕಮಾಪನದಲ್ಲಿ ಕವಿ ಸಂಶಯಾಸ್ಪದನೆಂದು ಅನಿಸಿದರೆ ಅವನನ್ನು ಗಾಳಿಗೆ ಹಿಡಿಯೋಣ, ಹುಸಿಯೆನಿಸಿದರೆ ಸಿಡಿಸೋಣ. ಆದರೆ ಕವಿ ನಿಜಕ್ಕೂ ಉತ್ಕೃಷ್ಟ ಎಂದಾದರೆ ಆತ ಅತ್ಯುತ್ತಮ ವರ್ಗಕ್ಕೆ ಸೇರಿದವನೆಂದೇ ಲೆಕ್ಕ. ಹಾಗಿದ್ದ ಪಕ್ಷ ನಾವು ಮಾಡಬಹುದಾದ ದೊಡ್ಡ ಸಂಗತಿಯೆಂದರೆ ಅವನ ಕೃತಿಯನ್ನು ನಮ್ಮಿಂದಾದಷ್ಟೂ ಆಳವಾಗಿ ಸವಿಯುವುದು, ಮತ್ತು ಅದಕ್ಕೂ ಅದರಷ್ಟು ಉತ್ತಮಗುಣವಿರದ ಕೃತಿಗಳಿಗೂ ಇರುವ ವ್ಯತ್ಯಾಸವನ್ನು ಅಧ್ಯಯನಮಾಡಿಕೊಳ್ಳುವುದು. ಇದು ಗುಣಾತ್ಮಕವಾದ್ದು, ಸೃಜನಾತ್ಮಕವಾದ್ದು. ಕವಿತೆಯ ಅಧ್ಯಯನದಿಂದ ನಾವು ಪಡೆಯಬಹುದಾದ ಅತಿ ಹೆಚ್ಚಿನ ಅನುಕೂಲತೆ ಇದುವೇ. ಇದರಲ್ಲಿ ಹಸ್ತಕ್ಷೇಪ ಮಾಡುವ, ಅಡ್ಡಿಪಡಿಸುವ ಏನೇ ಆದರೂ ಹಾನಿಕಾರಕ. ಅಭಿಜಾತ ಕೃತಿಗಳನ್ನು ನಾವು ತೆರೆದ ಕಣ್ಣುಗಳಿಂದ ಓದಬೇಕು, ಪೂರ್ವಾಗಹದಿಂದ ಕುರುಡಾದ ಕಣ್ಣುಗಳಿಂದ ಅಲ್ಲ ಎನ್ನುವುದು ನಿಜ. ಕೃತಿ ಎಲ್ಲಿ ಕಮ್ಮಿ ಬೀಳುತ್ತದೆ, ಉತ್ಕೃಷ್ಟ ಮಟ್ಟದಿಂದ ಎಲ್ಲಿ ಕುಸಿಯುತ್ತದೆ ಎನ್ನುವುದನ್ನು ನಾವು ಪರಿಶೀಲಿಸಬೇಕು; ಅಂಥ ಸಂದರ್ಭಗಳಲ್ಲಿ ನಾವದಕ್ಕೆ ತಕ್ಕ ಬೆಲೆ ಕಟ್ಟಬೇಕು. ಆದರೆ ಈ ರೀತಿಯ ನಕಾರಾತ್ಮಕ ವಿಮರ್ಶೆಗೆ ಸ್ವಯಂಪೂರ್ಣತೆಯೇನೂ ಇಲ್ಲ. ಅದರ ಉಪಯೋಗವಿರುವುದು ನಿಜಕ್ಕೂ ಉತ್ಕೃಷ್ಣವಾಗಿರುವುದರ ಕುರಿತಾದ ಸ್ಪಷ್ಟ ಅರಿವು ಹಾಗೂ ಆಳವಾದ ಸ್ವಾದನ್ನು ಪಡೆದುಕೊಳ್ಳುವುದರಲ್ಲಿ. ಅಂಥಾ ಸ್ಷಷ್ಟ ಅರಿವು ಮತ್ತು ಆಳವಾದ ಆನಂದದ ಗುರಿಯಿಲ್ಲದೆ ಉತ್ಕೃಷ್ಟ ಕವಿಯೊಬ್ಬನನ್ನು ಹುಡುಕಿ, ಅವನ ಕಾಲ, ಜೀವನ ಮತ್ತು ಚಾರಿತ್ರಿಕ ಸಂಬಂಧಗಳ ಪರಿಚಯಮಾಡಿಕೊಳ್ಳುವುದು ಒಂದು ಕೇವಲ ಕುಶಾಲುಗಾರಿಕೆ.

ಎಷ್ಟು ಪಾಂಡಿತ್ಯ ಗಳಿಸುತ್ತೇವೆಯೋ ಅಷ್ಟೂ ಉತ್ಕೃಷ್ಟ ಕವಿಯನ್ನು ಅರಿತುಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳುವವರಿದ್ದಾರೆ. ಆದ್ದರಿಂದ ನಾವು ಗ್ರೀಕ್, ಲ್ಯಾಟಿನ್ ಮುಂತಾದ ಭಾಷೆಗಳನ್ನು ಕಲಿತುಕೊಳ್ಳಬೇಕು ಎಂದು ಅಂಥವರು ವಾದಿಸುತ್ತಾರೆ. ಆದರೆ ಅರ್ನಾಲ್ಡನ ಪ್ರಕಾರ ಇದನ್ನು ತತ್ವಶಃ ಓಪ್ಬಬಹುದಾದರೂ ವಾಸ್ತವದಲ್ಲಿ ಆಗುವ ಕೆಲಸವಲ್ಲ. ಎಲ್ಲವನ್ನೂ ತಿಳಿದುಕೊಂಡು ನಾವು ಕಾವ್ಯವನ್ನು ಪ್ರವೇಶಿಸಬೇಕಾದರೆ ನಮಗೆ ಅನಂತ ಆಯುಸ್ಸು ಬೇಕಾಗುತ್ತದೆ! ಉದಾಹರಣೆಗೆ, ಶಾಲಾವಿದ್ಯಾರ್ಥಿಗಳಲ್ಲಿ ಇಂಥ ಸುದೀರ್ಘವಾದ ಭಾಷಾ ತಯಾರಿ ಒಂದೆಡೆ ಮುಂದುವರಿದರೆ, ಇನ್ನೊಂದೆಡೆ ಕವಿಗಳ ಕುರಿತಾದ ಅರಿವು ಮತ್ತು ಆಸ್ವಾದನೆ ಕಡಿಮೆಯಾಗುತ್ತಲೂ ಇರುತ್ತದೆ. ‘ಚಾರಿತ್ರಿಕ ಮೂಲ’ಗಳನ್ನು ಹುಡುಕುವಾತನೂ ಹೀಗೆಯೇ. ಅವನ ಶ್ರಮವನ್ನು ನೋಡಿದರೆ ಈ ಶ್ರಮದ ಕಾರಣ ಅವನು ನಿಜವಾದ ಉತ್ಕೃಷ್ಟ ಕಾವ್ಯವನ್ನು ಆಸ್ವಾದಿಸಬೇಕು; ಆದರೆ ಅತ್ಯುತ್ತಮವಾದ್ದನ್ನು ಸವಿಯುವುದರಿಂದ ಅವನು ವಿಮುಖನಾಗುವುದೇ ಹೆಚ್ಚು. ಯಾಕೆಂದರೆ ಕೆಳಮಟ್ಟದ ಕೃತಿಯಲ್ಲೇ ಅವನು ನಿರತನಾಗಿರುತ್ತಾನೆ ಮತ್ತು ಹೀಗೆ ತಗಲಿದ ಶ್ರಮಕ್ಕೆ ಅನುಗುಣವಾಗಿ ಅವನು ಅಂಥ ಕೃತಿಗೆ ಹೆಚ್ಚಿನ ಬೆಲೆ ಕಟ್ಟಬಹುದು. ಅರ್ನಾಲ್ಡನ ಪ್ರಕಾರ, ನಾವು ಸಾಧಾರಣವಾಗಿ ಚಾರಿತ್ರಿಕ ಭ್ರಮೆಗೆ ಒಳಗಾಗುವುದು ಹಿಂದಣ ಕವಿಗಳ ಬಗ್ಗೆ. ಹಾಗೂ ವೈಯಕ್ತಿಕ ಭ್ರಮೆಗೆ ಒಳಗಾಗುವುದು ಆಧುನಿಕ ಅಥವಾ ಸಮಕಾಲೀನ ಕವಿಗಳ ಬಗ್ಗೆ

ಉತ್ಕೃಷ್ಟ ಕವಿತೆಯ ಗುಣಗಳೇನೆಂದು ತಿಳಿಯುವುದು ಹೇಗೆ? ಅವು ಕವಿತೆಯ ವಸ್ತು ಮತ್ತು ವಿಷಯದಲ್ಲಿ, ರೀತಿ ಮತ್ತು ಶೈಲಿಯಲ್ಲಿ ಇರುವಂಥವು. ಇವೆರಡಕ್ಕೂ ಎಂದರೆ, ವಸ್ತುವಿಷಯಕ್ಕೆ ಮತ್ತು ರೀತಿಶೈಲಿಗೆ-ಉನ್ನತವಾದ ಸೌಂದರ್ಯ, ಮೌಲ್ಯ ಮತ್ತು ಶಕ್ತಿಯ ಒಂದು ಘಾತವಿದೆ. ಆದರೆ ಅಮೂರ್ತವಾಗಿ ಈ ಗುಣ ಮತ್ತು ಘಾತವನ್ನು ವಿವರಿಸಬೇಕೆಂದರೆ ಅದು ಸಾಧ್ಯವಾಗುವುದಿಲ್ಲ; ಯಾಕೆಂದರೆ ಆ ಮೂಲಕ ಪ್ರಶ್ನೆ ತಿಳಿಯಾಗುವ ಬದಲು ಮಸಕಾಗುತ್ತದೆ. ಆದ್ದರಿಂದ ಉತ್ತಮ ಕವಿತೆಯ ಗುಣ ಮತ್ತು ಘಾತವನ್ನು ನಾವು ಅದರ ವಸ್ತು-ವಿಷಯದಲ್ಲಿ ಹಾಗೂ ರೀತಿ-ಶೈಲಿಯಲ್ಲಿ ಕಾಣಬೇಕಾಗುತ್ತದೆ. ಇದಕ್ಕೆ ಅರ್ನಾಲ್ಡ್ ಸೂಚಿಸುವ ವಿಧಾನ ಒಂದು ತರದಲ್ಲಿ ಪ್ರಾಯೋಗಿಕವಾದ್ದು: ಎಂದರೆ, ಈಗಾಗಲೇ ಸರ್ವಮಾನ್ಯಕವಾಗಿರುವ ಉತ್ಕೃಷ್ಟ ಕವಿಗಳ ಕೃತಿಗಳನ್ನು ನಾವು ಮಾಪಕವಾಗಿ ತೆಗೆದುಕೊಳ್ಳುವುದು. ಆದ್ದರಿಂದ ಅವನು ತನ್ನ ಲೇಖನದ ಉದ್ದಕ್ಕೂ ಹೋಮರ್, ಶೇಕ್ಸ್‌ಪಿಯರ್, ಮಿಲ್ಟನ್ ಮುಂತಾದ ಪ್ರಸಿದ್ಧರ ಕಾವ್ಯಗಳಿಂದ ಪ್ರಮಾಣಗಳನ್ನು ನೀಡುತ್ತ ಹೋಗುತ್ತಾನೆ. ಈ ಮಾಪನ ರೀತಿಗೆ ಸಾಹಿತ್ಯ ವಿಮರ್ಶೆಯಲ್ಲಿ touchstone method `ನಿಕಷ ವಿಧಾನ’ ಎಂಬ ಹೆಸರಿದೆ. ಅರ್ನಾಲ್ಡನ ವಿಮರ್ಶಾ ಪ್ರಣಾಳಿಕೆ ಇಂದು ನಮಗೆ ಕೇವಲ ‘ಮಾನವಿಕ’ (humanist) ಎನಿಸಬಹುದು. ಆದರೆ ಅಷ್ಟಕ್ಕೆ ಅವನ ವಿಚಾರಗಳನ್ನು ತಳ್ಳಿಹಾಕುವುದು ಸರಿಯಲ್ಲ. ಯಾಕೆಂದರೆ ನಮ್ಮ ವೈಚಾರಿಕತೆ ಇಂದು ಎಷ್ಟೇ ಮುಂದರಿದಿದ್ದರೂ, ವಾಸ್ತವದಲ್ಲಿ ನಮ್ಮ ಕಾವ್ಯಪ್ರಜ್ಞೆಯನ್ನು ಕೆಲವೊಂದು ಉತ್ಕೃಷ್ಟ ಮಾದರಿಗಳು ರೂಪಿಸಿರುತ್ತವೆ. ಅಷ್ಣರ ಮಟ್ಟಿಗೆ ಅರ್ನಾಲ್ಡನ ವಿಚಾರಗಳು ನೈಜವೆಂದೇ ಹೇಳಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಂದು ನವಿಲಿಂದು ಕೋಲೇ
Next post ಕ್ಷಮೆ ಇರಲಿ ನನಗೆ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…