‘ದಂಡೆಗೆ ಬಂದ ಚಿಪ್ಪಿನಲ್ಲಿ ಎಪ್ಪತ್ತು ಸಾವಿರದ ಮುತ್ತು’

(ಪ್ರತಿಭಾ ನಂದಕುಮಾರ್ ಮತ್ತು ಸವಿತಾ ನಾಗಭೂಷಣ ಆವರ ಕಾವ್ಯಗಳ ಆಧ್ಯಯನ)

ಕಾಲ ದೇಶಗಳ ವರ್ತಮಾನಗಳ ಮುಖಾಮುಖಿಯಲ್ಲಿ ಅವರಿಗೆ ಪರಸ್ಪರ ಗುರುತು ಹತ್ತಿದ ಅಮಲು – ಪ್ರತಿಭಾ ನಂದಕುಮಾರ್

ಕನ್ನಡ ಕಾವ್ಯ ಸಂದರ್ಭದಲ್ಲಿ ಮಹಿಳಾ ಕಾವ್ಯವನ್ನು ಇತ್ತೀಚಿನ ಬೆಳವಣಿಗೆಯೆಂದು ಗುರುತಿಸಲಾಗುತ್ತದೆ. ದಲಿತ ಬಂಡಾಯ ಚಳುವಳಿಯ ಭಾಗವಾಗಿ ಬಂದ ಸ್ತ್ರಿವಾದೀ ತಾತ್ವಿಕ ನೆಲೆಗಳು ಬಹಳಷ್ಟು ಸ್ತ್ರೀಬರವಣಿಗೆಗೆ ಮೀರಿ ಹೊಸ ದಿಕ್ಕುದೆಸೆಗಳತ್ತ ಚಾಚುತ್ತಿರುವ ಸ್ತ್ರೀಯರ ಬರವಣಿಗೆಗಳ ಬಗ್ಗೆ ಮಾತ್ರ ನಮ್ಮ ವಿಮರ್ಶಾ ಮಾನದಂಡಗಳು ಅವಜ್ಞೆಯನ್ನು ತೋರಿಸುತ್ತಲೇ ಬಂದಿವೆ. ಶೈಶವದ ಹಂತ ದಾಟಿ ಸ್ತ್ರೀಬರಹಗಳು ತಮ್ಮದೇ ಆದ ಅಭಿವ್ಯಕ್ತಿ ರಚನೆ, ಸಂವೇದನೆಗಳನ್ನು ರೂಪಿಸಿಕೊಳ್ಳುತ್ತಿದೆ ಎಂದು ವಿಮರ್ಶಕ ವಲಯ ಗುರುತಿಸಿದರೂ, ಮೆಚ್ಚುಗೆಯ ಸ್ತರಗಳನ್ನು ಬಿಟ್ಟು ಹೊಸ ನೆಲೆಗಳಲ್ಲಿ ಮಹಿಳೆಯರ ಬರವಣಿಗೆಯನ್ನು ಗಮನಿಸುವುದಿಲ್ಲ. ಹೀಗಾಗಿ ಸ್ತ್ರೀವಾದದ ಹಿನ್ನಲೆಯಲ್ಲಿ ಮಾತ್ರ ಮಹಿಳಾ ಸಾಹಿತ್ಯವನ್ನು ಚರ್ಚಿಸಿ, ನಿರ್ಲಕ್ಷಿಸುವ ಧೋರಣೆಗಳನ್ನು ಕುರಿತು ಚರ್ಚಿಸಬೇಕಾದ ಸಂದರ್ಭ ಇದೆ. ಈ ಕಾರಣದಿಂದ ನಮ್ಮ ಕಾಲದ ಇಬ್ಬರು ಕವಯತ್ರಿಯರಾದ ಪ್ರತಿಭಾ ನಂದಕುಮಾರ್ ಮತ್ತು ಸವಿತಾ ನಾಗಭೂಷಣ ಆವರ ಕಾವ್ಯ ರಚನೆ, ಅಭಿವ್ಯಕ್ತಿ, ಸಂವೇದನೆಗಳನ್ನು ಕುರಿತು ಚರ್ಚಿಸುವ ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ.

ಮುಖ್ಯವಾಹಿನಿ ಎಂದು ಕರೆಯುವ ಅಕ್ಷರ ಪರಂಪರೆಯ ದೃಷ್ಟಿಕೋನವು ನಮ್ಮ ಪ್ರಜ್ಞೆಯನ್ನು ಆವರಿಸಿರುವುದರಿಂದ ಮೌಖಿಕ ಪರಂಪರೆಯ ಮತ್ತು ವಿಸ್ಮೃತಿಗೊಳಗಾದ ಅನೇಕ ದೇಸಿ ಮೂಲದ ಪರಂಪರೆಗಳನ್ನು ನಾವು ಪರಿಗಣಿಸುವುದೇ ಇಲ್ಲ. ಮಹಿಳಾ ಕಾವ್ಯವನ್ನು ಅಭ್ಯಾಸ ಮಾಡುವಾಗ ಪರಂಪರೆಯನ್ನು ಗುರುತಿಸುವುದು ಪಂಪ, ಕುಮಾರವ್ಯಾಸ್, ಕುವೆಂಪು ಸಾಲಿನಲ್ಲಿ ಅಲ್ಲ. ಬದಲಾಗಿ ಆಕ್ಕಮಹಾದೇವಿ, ಸಂಚಿ ಹೊನ್ನಮ್ಮ ಈ ಸಾಲಿನಲ್ಲಿ ಗುರುತಿಸಲಾಗುತ್ತದೆ. ಯಾಕೆಂದರೆ ಅಕ್ಷರ ವ್ಯವಸಾಯದ ಫಲಗಳನ್ನು ಮಾತ್ರ ಗುರುತಿಸುವ ಕ್ರಮ ಇದು. ಇಂಥ ಒಂದು ಕ್ರಮ ಉಪಲಬ್ದವಿರುವ ಸಾಹಿತ್ಯಿಕ ಉಪಕರಣಗಳಿಂದ, ಮುಖ್ಯವಾಗಿ ಭಾಷಿಕ ಮತ್ತು ಸಾಂಸ್ಕೃತಿಕ-ಸಾಹಿತ್ಯವನ್ನು ಅನುಸಂಧಾನ ಮಾಡುವ ಕ್ರಮವಾಗಿದೆ. ಈ ದೃಷ್ಟಿಕೋನವೇ ಬದಲಾಗಬೇಕಾದ ಅಗತ್ಯ ಇದೆ.

“ಲೇಖಕಿಯರ ಮುಂದೆ ವಿಮರ್ಶಕ ಸಮುದಾಯ ಪೇರಿಸಿ ಬಿಡುವ ಇನ್ನೊಂದು ದೊಡ್ಡ ಗೋಡೆ ಅಕ್ಕಮಹಾದೇವಿ. ಕುವೆಂಪು, ಬೇಂದ್ರ, ಅಡಿಗರನ್ನು ಯಾರೂ ಅಲ್ಲಮಪ್ರಭುಗಳಿಗೆ ಹೋಲಿಸುವುದಿಲ್ಲ. ಆದರೆ ಇತ್ತೀಚೆಗೆ ಬರೆಯಲು ಪ್ರಾರಂಭಿಸಿದ ಪುಟ್ಟ ಹುಡುಗಿಯ ಕವನವನ್ನೂ ಅಕ್ಕಮಹಾದೇವಿಗೆ ಧಾರಾಳವಾಗಿ ನಿರ್ಣಯಗಳನ್ನು ಕೊಟ್ಟುಬಿಡುತ್ತಾರೆ. ಈ ಅಕ್ಕ Syndrome ನಿಂದ ಪಾರಾಗದೆ ಬೇರೆ ದಾರಿಯಿಲ್ಲ” – ಎಂದು ಪ್ರತಿಭಾ ನಂದಕುಮಾರ್ ಬರೆಯುವಾಗ, ಕಾವ್ಯವನ್ನು ಕಾವ್ಯವೆಂದು ಗಮನಿಸುವುದಕ್ಕೂ, ಮಹಿಳೆಯಿಂದ ರಚಿತವಾದ ಕಾವ್ಯವನ್ನು ‘ಕಾವ್ಯ’ ಎಂದು ಗುರುತಿಸುವಾಗ ಇರುವ ಪರಂಪರೆಯ ಸೀಳುನೋಟವನ್ನು ತೋರಿಸುವಂತಿದೆ. ಹಾಗೆ ನೋಡಿದರೆ ಮಹಿಳಾ ಕಾವ್ಯ ಒಮ್ಮೆಗೇ ಧಗ್ಗನೆ ಉದ್ಭವಿಸಿ ಬಂದದ್ದಲ್ಲ. ಇಂದಿನ ಸ್ತ್ರೀಯರ ಅಭಿವ್ಯಕ್ತಿಗಳು ಬರಹ ರೂಪದಲ್ಲಿದ್ದರೆ, ಹಳೆಯ ಅಭಿವ್ಯಕ್ತಿಗಳು ಮೌಖಿಕ ಪರಂಪರೆಗೆ ಸೇರಿದವು. ಇಂದು ಬರಹಗಳ ಮೂಲಕ ಪರಂಪರೆಯ, ವಿಸ್ಮೃತಿಯಲ್ಲಿ ಅಡಗಿ ಹೋಗಿರಬಹುದಾದ ನಿರೂಪಣಾ ಮಾದರಿಗಳಿಗೆ ಹತ್ತಿರವಿದೆ. ಜನಪದದಲ್ಲಿ ಅಭಿವ್ಯಕ್ತಿಸುವ ಭಾಷೆ ಭಾವಗಳು ಹೆಣ್ಣು ನಿರೂಪಣೆಯಲ್ಲಿ ಭಿನ್ನವೂ, ವಿಶಿಷ್ಟವೂ ಆಗಿರುವಂತೆ, ಇವುಗಳನ್ನು ನೋಡುವ ಕ್ರಮವು ಭಿನ್ನವಾಗಿರುತ್ತದೆ. ಸ್ತ್ರೀನಿರೂಪಣೆಯ ದೃಷ್ಟಿಕೋನಗಳು, ಅವು ಸೃಷ್ಟಿಸುವ ದೇಶ ಕಾಲಗಳನ್ನು ಅರಿಯಲು ಬೇರೆಯದೇ ಆದ ವ್ಯಾಕರಣದ ಅವಶ್ಯಕತೆಯಿದೆ. ಭಾರತದ ಮೌಖಿಕ ಪರಂಪರೆಯಲ್ಲಿ ಪ್ರಚಲಿತವಾಗಿರುವ ಕತೆಗಳನ್ನು ಸಂಗ್ರಹ ಮಾಡಿದ ಎ.ಕೆ.ರಾಮಾನುಜನ್ ಅವರು ಗುರುತಿಸುವಂತೆ:
“…..Symbols, far from universal, do not even mean the something as from genre to genere so gender of the gnere, if one may speak of such and surely the gender of the teller, the listener, and the interpreter-becomes important in interpretation. A woman’s culturally constructed life forms her meaning-universe, is different from man’s …….”

ಲಿಖಿತ ರೂಪದಲ್ಲಿ ಸಿಗುವ ಅಭಿವ್ಯಕ್ತಿ ರಚನೆಗಳಿಂಗಿಂತ ದೇಸಿ ನೆಲೆಗಳಲ್ಲಿರುವ ಸ್ತ್ರೀ ಅಭಿವ್ಯಕ್ತಿಯ ರಚನೆಗಳು (constructs) ಭಿನ್ನವಾಗಿರುತ್ತವೆ. ಅವು ತಮ್ಮದೇ ಆದ ಮಾದರಿಗಳನ್ನು ಮತ್ತು ಕ್ರಮಗಳನ್ನು ರೂಪಿಸಿಕೊಂಡಿವೆ. ಜಾನಪದ ಹಾಡುಗಳನ್ನು ಇಲ್ಲಿ ಉದಾಹರಿಸುವುದಾದರೆ, ಬೀಸುಕಲ್ಲುಪದ, ಸೋಬಾನೆಪದ, ತೌರಿನ ಕುರಿತ ಹಾಡುಗಳು ಒಂದು ವಿಶಿಷ್ಟವಾದ ‘ಕಟ್ಟುವಿಕೆ’ಯಲ್ಲಿ ಅವಿರ್ಭವಿಸುತ್ತವೆ. ಬಾಯಿಂದ ಬಾಯಿಗೆ ಹರಿದಾಡುವಾಗ, ಒಂದೇ ಪದದಲ್ಲಿ ಒಳವಿನ್ಯಾಸಗಳನ್ನು ರೂಪಿಸಿಕೊಳ್ಳುತ್ತಾ ಒಡೆದು ಕಟ್ಟುವ ಒಂದು ಸೃಜನಶೀಲ ನಿರಚನಾಕ್ರಮ. ಇವುಗಳಲ್ಲಿ ಮುಖ್ಯವಾಗಿ ವೈಯುಕ್ತಿಕ ನೋವು-ನಲಿವುಗಳು ಒಂದು ಕಥನದ ನೇಯ್ಗೆಯಲ್ಲಿ ರೂಪುಗೊಂಡಿದ್ದರೂ, ಒಂದು ಹೆಣ್ಣದನಿಯ ನಿರೂಪಣೆಯಲ್ಲಿ ಸಾಂದರ್ಭಿಕವಾದ ಸಾಮಾಜಿಕ ಆವರಣವನ್ನು ಸೃಷ್ಟಿಸಿಕೊಳ್ಳುತ್ತವೆ. ಇವು ಮೇಲೆ ಒಡೆದು ಕಾಣುವ ಕ್ರಮಗಳಲ್ಲ. ಆದರೆ ಅವುಗಳ ಗುಪ್ತಗಾಮಿನಿ ನಡೆಗಳು ಆಳದಲ್ಲಿ ಚಲನಶೀಲವಾಗಿರುತ್ತವೆ. ಈ ನಿರ್ದಿಷ್ಟ ಪರಂಪರೆಯ ಬೆನ್ನಿಗಿಟ್ಟುಕೊಂಡು ಅದನ್ನು ಮುಂದುವರೆಸುವ ಕ್ರಿಯಾಶೀಲ ಕಾವ್ಯವನ್ನು ಮಹಿಳಾ ಕಾವ್ಯ ಕಟ್ಟುತ್ತಾ ಇದೆ ಎಂದು ನನ್ನ ಭಾವನೆ. ಹೀಗೆ ‘ನಿರಚನ’ ಮತ್ತು ‘ರಚನೆ’ಯ ಕ್ರಮಗಳನ್ನು ಮೈಗೂಡಿಸಿಕೊಂಡು ತಮ್ಮದೇ ಆದ ಕಾಲ ದೇಶಗಳನ್ನು ನಿರ್ವಚನ ಮಾಡಿಕೊಳ್ಳುವಾಗ ಪ್ರತಿಭಾ ನಂದಕುಮಾರ್ ಮತ್ತು ಸವಿತಾ ನಾಗಭೂಷಣರ ಕಾವ್ಯಗಳು ಅನುಸರಿಸುವ ಕ್ರಮಗಳು ಮತ್ತು ಅವರಿಬ್ಬರು ಹೇಗೆ ಇದನ್ನು ನಿರೂಪಿಸುತ್ತಾರೆ ಎಂಬುದೇ ಇಲ್ಲಿನ ಚರ್ಚೆ.

(ಅ)
ಮೊದಲು ಎದುರಾಗುವ ತೊಂದರೆಯೆಂದರೆ ಭಾಷೆಯದ್ದೇ. ಈಗಾಗಲೇ ಸಿದ್ಧ ಸಮಾಜ ಪಡಿಸಿದ ಭಾಷೆಯಲ್ಲಿ ಅಭಿವ್ಯಕ್ತಿಸಬೇಕಾದ ದೊಡ್ಡ ತೊಡಕು. ಮೂಲನಿವಾಸಿಗಳ ಪ್ರಪಂಚಕ್ಕೆ ಕಾಲಿಟ್ಟ ವಸಾಹತುಶಾಹಿ ಅವರ ಭಾಷೆಗೆ ಬದಲಾಗಿ ತನ್ನ ಭಾಷೆಯನ್ನು ಸ್ಥಾಪಿಸಿತು. ಇದರಿಂದಾಗಿ ತಮ್ಮ ಭಾಷೆ ಕಳೆದುಕೊಂಡ ಜನ ವಸಾಹತುಶಾಹಿ ನಿರ್ಮಿಸಿದ ಭಾಷೆಯಲ್ಲಿಯೇ ಅಭಿವ್ಯಕ್ತಿಸಬೇಕಾಯಿತು. ಈ ಬಿಕ್ಕಟ್ಟಿನಂತೆಯೇ ಪುರುಷಪ್ರಧಾನ ಸಮಾಜ ರೂಪಿಸಿದ ಭಾಷೆಯಲ್ಲಿ ಅಭಿವ್ಯಕ್ತಿಸುವ ಮತ್ತು ಸಂವಾದದ ತೊಡಕನ್ನು ಎದುರಿಸುವ ಕಷ್ಟ ಮಹಿಳಾ ಕಾವ್ಯಕ್ಕೆ ಉಂಟಾಯಿತು. ಇರುವ ಭಾಷಿಕ ರಚನೆಗಳನ್ನು ಬಳಸಿ ಹೇಳುವ ಅಭಿವ್ಯಕ್ತಿಯಲ್ಲಿ ಇರುವ ತೊಡಕು, ಸಂವಹನದ ಕಷ್ಟಗಳು ಒಟ್ಟಾರೆಯಾಗಿ ಬೇರೆಯ ಕಾಲ ದೇಶಗಳನ್ನು ಸೂಚಿಸುತ್ತವೆ.

ನನಗೆ ಭಾಷೆಯಿಲ್ಲ
ನಿನಗೆ ಕಿವಿಯಿಲ್ಲ
ಮಾತನಾಡುವುದು ಹೇಗೆ?
(ಸಾಧ್ಯವೇ ಇಲ್ಲ…)

ಭಾಷೆಯ ಭಿನ್ನತೆ, ಸಂವಹನದ ತೊಂದರೆಗಳಿಂದ ಹೆಣ್ಣ ನಿರೂಪಿತ ಕಾವ್ಯದ ಒಳಮಟ್ಟುಗಳು ಅರ್ಥವಾಗದೇ ಇರುವ ಅಪಾಯವನ್ನು ಗುರುತಿಸುವ ಪ್ರತಿಭಾ ಹೇಳುತ್ತಾರೆ:

ಪ್ರತಿಮೆಗಳಲ್ಲಿ ಬರೆದರೆ ತಿಳಿಯುವುದಿಲ್ಲವಂತೆ
ನೇರವಾಗಿ ಬಿಚ್ಚಿಕೊಂಡರೆ ಅರ್ಥವಾಗುವುದಂತೆ
ಬಿಚ್ಚಿ ಬಿಚ್ಚಿದಾಗ ನೀನು ಎಲ್ಲಿ ಬಚ್ಚಿಟ್ಟುಕೊಂಡಿದ್ದೆ?
(ಎಲ್ಲಿದ್ದೆ?)
ನನ್ನ ಗುಬ್ಬಿ ಬೆಳೆ ಕಟಾವಿಗೆ
ಕೊಡಲಿ ಹಿಡಿದು ಬಂದವರು ಹೇಳಿ
ಕವನವೆಂದರೆ ಏನು?
ಹೇಳಿದರೆ ಇವರಿಗೆ ಅರ್ಥವಾಗುವುದೇನು
(ಕವಿತೆ)
ನನಗೆ ಕತೆ ಹೇಳ ಬರುವುದಿಲ್ಲ
ಅಂತ ಮಕ್ಕಳ ಗಲಾಟೆ
(ಕತೆ)
ಈ ಭಾಷೆಯ ವ್ಯಾಕರಣ, ಪ್ರಯೋಗಗಳು ಪರಿಚಿತ ಅಲ್ಲ ಎನ್ನಿಸುವುದಕ್ಕೆ ಹೆಣ್ಣುಗಂಡಿನ ವಿಭಿನ್ನ ಲೋಕಗಳು ಕಾರಣವಾಗಿವೆ, ಇಲ್ಲಿ ಉಂಟಾಗುವ ಸಂವಹನದ ಅಡಚಣೆಗಳು ವಿಭಿನ್ನ ನೆಲೆಗಳ ಸಂಘರ್ಷಗಳಿಂದ ಆಗಿವೆ. ಹೆಣ್ಣಗಂಡಿನ ಸಂಘರ್ಷಗಳಲ್ಲಿ ವೈರುಧ್ಯಗಳಿವೆ. ಒಂದರ ಮೇಲೊಂದು ಅತಿಕ್ರಮಿಸುವ, ಪ್ರೀತಿಸುವ, ದ್ವೇಷಿಸುವ ಸಂಕೀರ್ಣ ಸ್ವರೂಪಗಳಲ್ಲಿ ಅವು ಪ್ರಕಟಗೊಳ್ಳುತ್ತವೆ. ಮೇಲ್ನೋಟಕ್ಕೆ ಎದ್ದು ಕಾಣುವುದು ಕ್ರೌರ್ಯ. ಗಂಡು ಹೆಣ್ಣಿನ ಸಂಬಂಧಗಳಲ್ಲಿ ಪರಸ್ಪರ ವಿರೋಧಿ ನೆಲೆಗಳಲ್ಲಿ ನಿಂತು ನೋಡುವಾಗ ಹೆಣ್ಣಿನ ಮೇಲಿನ ಕ್ರೌರ್ಯ ಎದ್ದು ಕಾಣುವಂತದ್ದು. ವೈಯಕ್ತಿಕ ಮತ್ತು ಸಾಮಾಜಿಕ ಸಂದರ್ಭಗಳೆರಡರಲ್ಲೂ ಈ ವಿರೋಧ ಕ್ರೌರ್ಯದಲ್ಲಿ ವ್ಯಕ್ತವಾಗುತ್ತದೆ. ಇದನ್ನು ಸ್ಫುಟಗೊಳಿಸಿ ಬರೆಯುವ ಪ್ರತಿಭಾ ‘ನೈನಾಸಾಹ್ನಿ’ಯಂತಹ
ಪದ್ಯ ಬರೆಯುವಾಗ, ಇನ್ನಷ್ಟು ಸ್ಪಷ್ಟಪಡಿಸುತ್ತಾರೆ :

ಊಟಕ್ಕೇನೆ ನೈನಾ
ರೊಟ್ಟಿ ತಂದೆಯೇನೇ
ಬೇಯ್ತಾ ಇದ್ದೀನಪ್ಪಾ
ಶರ್ಮ ತರ್ತಾನಪ್ಪ
(ನೈನಾಸಾಹ್ನಿ)

‘ನಡುರಾತ್ರಿಯಲ್ಲಿ ಕೇಳಿಸಿದ ಹೆಣ್ಣೊಬ್ಬಳ ಅಳು’ ಕವಿತೆಯಲ್ಲಿ ಕ್ರೌರ್ಯ ಇನ್ನಷ್ಟು ಸಂಕೀರ್ಣ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಇವಕ್ಕೆ ಪುರಾವೆಗಳೇ ಇಲ್ಲ. ಇಂತಹ ಪ್ರಪಂಚ ನಮ್ಮ ಪಕ್ಕದಲ್ಲೆ ಇದೆ. ಅದನ್ನು ಗಮನಿಸುವಾಗ ದಿಗ್ಭ್ರಮೆ ಆಗುತ್ತದೆ :

ಅವರು ಸುಲಿಯುವ ಪರಿಯಲ್ಲಿ
ಯಾವ ಗುರುತೂ ಗುಮಾನಿಯೂ ಇರುವುದಿಲ್ಲ
ಯಾರೂ ನಂಬುವುದಿಲ್ಲ
(ಅನಾವರಣ)
ಈ ರೀತಿಯ ಸಂಘರ್ಷಗಳು, ಕ್ರೌರ್ಯಗಳಲ್ಲಿರುವ ಭಿನ್ನತೆ ನೋಡಿ. ಸ್ತ್ರೀಯರಿಗೆ ‘ಪುರಾವೆಗಳನ್ನು ಕೇಳುವ’ ಪ್ರಪಂಚ, ಯಾವ ಪುರಾವೆಗಳೂ ಇಲ್ಲದಂತೆ ಕ್ರೌರ್ಯವನ್ನು ಪ್ರಕಟಿಸಿ ತಣ್ಣಗಿರುವ ಲೋಕ ಇದು. ಇವನ್ನು ಕೆಲವರು ಆಧುನಿಕ ಸ್ತ್ರೀವಾದದ ಪ್ರತಿಫಲನಗಳು ಎಂದು ಸರಳೀಕರಿಸಿ ಬಿಡುತ್ತಾರೆ. ಆದರೆ ಪ್ರತಿಭಾ ಇದನ್ನು ನೋಡುವಾಗ ಭಿನ್ನವಾದ ದೇಶಕಾಲಗಳನ್ನಾಗಿ ನೋಡುತ್ತಾರೆ ಮತ್ತು ಇದಕ್ಕೆ ಪರ್ಯಾಯವಾಗಿ ಕಟ್ಟಬೇಕಾದ ಸಾಧ್ಯತೆಗಳನ್ನು ರೂಪಿಸುತ್ತಾರೆ. ಅದು ಹೇಗೆಂದರೆ, (ಅ) ಹಳೆಯ ರೂಪ, ರಚನೆಗಳು, ಭಾಷಾ, ಪುರಾಣೇತಿಹಾಸಗಳ ಮಿಥ್ ಅನ್ನು ಒಡೆಯುವುದರ ಮೂಲಕ (Demystification) (ಆ) ಇನ್ನೊಂದು ಮೊದಲು ಪ್ರಸ್ತಾಪಿಸಿದ ದೇಸಿ ಪರಂಪರೆಯಲ್ಲಿ ಸೃಜನಶೀಲವಾಗಿ ದಿನದ ಸವಾಲುಗಳನ್ನು ಎದುರಿಸುವಂತಹ ಕ್ರಮಗಳಿಂದ. ಪ್ರತಿಭಾ ಅವರ ಭಾಷೆಯಲ್ಲೇ ಹೇಳುವುದಾದರೆ ‘ಅನುದಿನದ ಅಂತರಗಂಗೆ’ಯನ್ನು ದಾಟುವ ಸವಾಲುಗಳನ್ನು -ಕ್ರಿಯಾಶೀಲವಾಗಿ ಎದುರಿಸುವ ಮೂಲಕ.

ಸಾರ್ವತ್ರಿಕವಾಗಿ ಪುರುಷ ಆಹಂ ಅನ್ನು ಸ್ತ್ರೀವಾದವು ಮುಖಾಮುಖಿಯಾಗಿಸಿಕೊಂಡು ಜಿಜ್ಞಾಸೆಗೆ ತೊಡಗುತ್ತದೆ. ಆದರೆ ಪ್ರತಿಭಾ ಅವರು ಗಂಡಸಿನ ಅಹಂ ಅನ್ನು ಮಿಥ್ ಎಂದು ಭಾವಿಸಿ, ಅದನ್ನು ಒಡೆಯಲು ಇಚ್ಛಿಸುತ್ತಾರೆ. ಈ ರೀತಿ ಗಂಡಸಿನ ಗರ್ವದ ನಿರಾಕರಣೆ ರೊಮ್ಯಾಂಟಿಕ್ ಆಗುವ ಅಪಾಯ ಇದೆ. ಪ್ರತಿಭಾ ಇದನ್ನು ವಾಸ್ತವದ ನೆಲೆಯಲ್ಲಿಯೇ ನಿರ್ವಚನ ಮಾಡಿಕೊಳುತ್ತಾರೆ.

‘ಆಹಾ, ಪುರುಷಾಕಾರಂ!’ ಎನ್ನುವುದು ಪತಂಜಲಿಯ ಯೋಗ ಸೂತ್ರದ ಸಾಲು. ಇದು ಸಾಮಾನ್ಯವಾಗಿ ಮನುಷ್ಯ ದೇಹಕ್ಕೆ ಅನ್ವಯಿಸಿ ನುಡಿದ ಉದ್ಗಾರವೆಂದು ಭಾವಿಸುವುದಾದರೂ, ಗಂಡು ಹೆಣ್ಣಿನ ದೇಹ ರಚನೆಗಳು ಬೇರೆ ಬೇರೆಯಾಗಿರುವುದರಿಂದ ಅದಕ್ಕೆ ಶುದ್ದಾಂಗವಾದ ಪ್ರಶಂಸೆ ಅನ್ವಯಿಸದೇ, ಗಂಡು ದೇಹ, ಹೆಣ್ಣು ದೇಹ ರಚನೆಗಳ ಮೇಲೆ ಉದ್ಗಾರದ ಆರ್ಥ ಬೇರೆ ಬೇರೆಯಾಗುತ್ತದೆ. ಗಂಡಿನ ದೇಹ ಸೌಂದರ್ಯ ಅಲಂಕಾರಕ್ಕೆ ಪೂರಕವಾಗಿ ಬಂದರೆ, ಹೆಣ್ಣಿನ ದೇಹ ಭೋಗರೂಪವಾಗಿ ಬರುತ್ತದೆ. ‘ಆಹಾ, ಪುರುಪಾಕಾರಂ’ ಎನ್ನುವುದು ಪ್ರತಿಭಾ ಅವರಲ್ಲಿ ವ್ಯಂಗ್ಯ, ಛೇಡನೆಯ ದನಿಯಾಗಿ ಬಿಡುತ್ತದೆ. ‘ಆಹಾ’ ಎನ್ನುವ ಮೆಚ್ಚುಗೆಯನ್ನು ಅವರು ಒಡೆಯುತ್ತಾರೆ. ಗಂಡಸಿನ ದೇಹಶಿಲ್ಪದ ಸ್ವಾರಸ್ಯವನ್ನು ತೆಳುಗೊಳಿಸಿ, ಪುನರುಜ್ಜೀವನ ಕಾಲದಲ್ಲಿ ಉಂಟಾದ ದೇಹ ಸೌಂದರ್ಯದ ಬಗೆಗಿನ ಆಭಿಮಾನವನ್ನು ಪ್ರಶ್ನಿಸಿಕೊಳ್ಳುತ್ತಾರೆ. ಇದರ ಇನ್ನೊಂದು ತುದಿಯಲ್ಲಿ ಹೆಣ್ಣನ ರೂಪ ಲಾವಣ್ಯವನ್ನು ಸೂಚಿಸುವ ಸ್ತ್ರೀ ರೂಪಮೆ ರೂಪಂ ಶ್ಶಂಗಾರಮೆ ರಸಂ’ (ನೇಮಿಚಂದ್ರ) -ಈ ಉದ್ಗಾರ ನೋಡಬೇಕು. ಸ್ತ್ರೀರೂಪವು-ಭೋಗಕ್ಕೆ ಹತ್ತಿರವಾಗುವ ದನಿಯನ್ನು ಪ್ರತಿಭಾ ಗುರುತಿಸಿಕೊಳ್ಳುತ್ತಾರೆ. ಹೆಣ್ಣಿನ ಅಂಗಾಂಗಗಳು ಪ್ರತಿಭಾ ಅವರಲ್ಲಿ ವಿಶಿಷ್ಟವಾಗಿ ನಿರಚನೆಗೊಳ್ಳುತ್ತವೆ. ಭೋಗ ಆಥವಾ ತಾಯ್ತನದ ಸಂಕೇತಗಳಾಗಿ ಬರುವ ಹೆಣ್ಣಿನ ಅಂಗಾಂಗಗಳ ಸೌಂದರ್ಯದ ನಿಗೂಢತೆಯನ್ನು ಒಡೆದು, ಅಲ್ಲಿರುವ ಸೌಂದರ್ಯದ ಕಲ್ಪನೆಯನ್ನೇ ಪ್ರಶ್ನಿಸುತ್ತಾರೆ. ಹೆಣ್ಣಿನ ಸೌಂದರ್ಯದ ‘ಒಪ್ಪಿತ’ ಮಾನದಂಡಗಳ ಕಲ್ಪನೆ ಒಡೆದು, ‘ಜೋತಮೊಲೆ’, ‘ಸೋತತುಟಿ’, ‘ಬಿರುಕುಪಾದ’, ‘ನೆರೆತ ಕೂದಲು’, ‘ಹೊಟ್ಟಿ ಸುತ್ತಿನ ಬಂದ ಬೊಜ್ಜಿನ ಪದರಗಳ’ ವಿವರಗಳು ಅವರ ಕಾವ್ಯ ಒಳಗೊಳ್ಳುತ್ತದೆ.

ದೇಹಶಿಲ್ಪದ ಛೇಡನೆ, ವ್ಯ೦ಗ್ಯಗಳು ಪುರಾಣಕ್ಕೂ ವ್ಯಾಪಿಸುತ್ತದೆ. ಅರ್ಧನಾರೀಶ್ವರನಾದ ಈಶ್ವರನನ್ನು ಪ್ರಶ್ನಿಸುವ ರೀತಿ ನೋಡಿ :

ನಾಚಿಕೆಯಾಗಬೇಕು ಜೀವಕ್ಕೆ
ಅರ್ಧ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ
ಹೆಣ್ತನದ ಸೂಚನೆಯೆಂದು ಒಂದು
ಸ್ತನ ಧರಿಸಿಬಿಟ್ಟರೆ ಆಯಿತೇ ಲಿಂಗಕ್ಕೆ
ಅರೆ ಬಸಿರು ತಡೆಯಬಹುದೇ ಪೂರ್ಣ ಗರ್ಭದ ಹೊರೆ?
ಇಡೀ ದೇಹವೇ ತಡೆಯಲಾಗದು
ಪಾರ್ಶ್ವಕ್ಕೆ ಸಾಕೇ ಪ್ರಣಯದ ಬೇಗೆ?
(ಅರ್ಧನಾರೀಶ್ವರ).

ಹೆಣ್ತನದ ಕುರುಹುಗಳನ್ನು ಧರಿಸಿದ ಮಾತ್ರಕ್ಕೆ ‘ಪೂರ್ಣಾಂಗ’ನಾಗಲು ಸಾಧ್ಯವಿಲ್ಲವೆಂಬ ಛೇಡನೆಯಲ್ಲಿ, ಹೆಣ್ತನದ ಬಗೆಗಿರುವ ಒಪ್ಪಿತ ದೃಷ್ಟಿಕೋನದ ಮಿಥ್ ಅನ್ನು ಒಡೆಯುವುದರಲ್ಲಿ ಕವಯಿತ್ರಿ ಯಶಸ್ಸು ಸಾಧಿಸುತ್ತಾರೆ. ದೇಹವೆನ್ನುವುದು ಅನುಭವಗಳ ನೆಲೆ ಅದರೆ ಅದು ಹೆಣ್ಣು ಗಂಡಿಗೆ ಭಿನ್ನದಾದುದು. ಈ ದೃಷ್ಟಿಯಲ್ಲಿ ದೇವರು ಕೂಡ ಅರ್ಧ. ಸ್ತ್ರೀ ದೇಹದಲ್ಲಿ ಕುರುಹುಗಳಾಗಿ ಉಳಿಯುವ ಹೆಣ್ಣಿನ ಅಂಗಗಳು ಅನುಭವಿಗಳಿಗೆ ಬಯಲಾಗುವ ದಿಟ್ಟತನದ ಸೂಚನೆಯನ್ನು ನೀಡುತ್ತವೆ. ಹೀಗೆ ನಿಗೂಢವೆನಿಸುವ ಸ್ತ್ರೀ ಸೌಂದರ್ಯ ರಕ್ತ ಮಾಂಸಗಳ ವಾಸ್ತವಕ್ಕೆ ಬಂದು ನಿಲ್ಲುವುದನ್ನು ಪ್ರತಿಭಾ ಅವರ ಕಾವ್ಯ ಸಾಧಿಸುತ್ತದೆ.

ಇಷ್ಟೇ ಅಲ್ಲ, ಹೆಣ್ಣನ್ನು ದೈವತ್ವಕ್ಕೇರಿಸುವ ಕ್ರಿಯೆಯನ್ನು ಅವರು ಒಡೆದು ನೋಡುತ್ತಾರೆ. ದುರ್ಗೆಯ ಅವತಾರವನ್ನು ಪ್ರತಿಭಾ ನಿರ್ವಚನ ಮಾಡಿಕೊಳ್ಳುವ ರೀತಿ ನೋಡಿ- ‘ಇಲ್ಲೊಮ್ಮೆ ಸಂಹಾರ ಆಗಬೇಕಾದರೆ ಕರೆಯುತ್ತೇನೆ ಆಗ ಬರುವೆಯಂತೆ’. ದುರ್ಗೆಯ ಅತಿಮಾನುಷಶಕ್ತಿಯ ಆವರಣವನ್ನು ಸರಿಸಲು ಬಯಸುತ್ತಾರೆ ಅವರು. ‘ನಾನು ಬ್ರಾಹ್ಮಣ ಕನ್ಯೆ’, ‘ನಾನು ಚಾಂಡಾಲ ಕನ್ಯೆ’ಯಂತಹ ಕವಿತೆಗಳು ಹಳೆಯ ಮಾದರಿಗಳನ್ನು ಸಂಶಯಿಸಿ, ಒಡೆದು ನೋಡುತ್ತವೆ. ‘ಬುದ್ದಿ ನೀನು, ಭಾವ-ನಾನು, ವಿದ್ಯುದಾಲಿಂಗನವೆಲ್ಲ ಸುಳ್ಳು’ ಎಂಬ ವಾಸ್ತವ ಗ್ರಹಿಕೆ ಸದಾ ಅವರಲ್ಲಿ ಜಾಗೃತವಾಗಿದೆ. ಅಮ್ಮ, ಅಜ್ಜಿಯರಂತಹ ವ್ಯಕ್ತಿತ್ವಗಳನ್ನು ಚಿತ್ರಿಸುವಾಗಲು ಸಾಮಾನ್ಯತೆಯ ಸ್ಪರ್ಶ ಅವುಗಳಿಗೆ ಇರುವಂತೆ ಮಾಡುತ್ತಾರೆ. ಕಣ್ಣೀರು ಕರೆಯುವ ಸನ್ನಿವೇಶಗಳನ್ನಂತು ಅವರು ಸಂಶಯದಿಂದಲೇ ನೋಡುತ್ತಾರೆ.

ಆಪ್ಪ Syndrome ನಿಂದ ಹೊರಬರಬೇಕೆನ್ನುವ ಆಶಯಗಳನ್ನು ಕನ್ನಡದ ಕವಿಗಳಲ್ಲಿ ನೋಡಿದರೆ, ಅಮ್ಮ Syndrome ನಿಂದ ಬಿಡುಗಡೆಯಾಗಲು ಬಯಸುವುದನ್ನು ನಮ್ಮ ಕವಯತ್ರಿಯರಲ್ಲಿ ನೋಡುತ್ತೇವೆ. ಅಮ್ಮ ಎನ್ನುವವಳು ವ್ಯವಸ್ಥೆಯ ಭಾಗವಾಗಿದ್ದು, ಮಗಳನ್ನು ನಿಯಂತ್ರಿಸುವ ಅದೃಶ್ಯ ಲಗಾಮುಗಳನ್ನು ಹೊಂದಿದವಳು. ಇವಳನ್ನು ಎದುರಿಸುವ, ಪಾರಾಗುವ ದಾರಿಗಳನ್ನು ಕುರಿತಾದ ಕವಿತೆಗಳನ್ನು ಇತರ ಕವಯತ್ರಿಯರು ಮಾಡಿದರೆ, ಪ್ರತಿಭಾ ಅಮ್ಮ ಮತ್ತು ಅಜ್ಜಿಯರನ್ನು ರಕ್ತಮಾಂಸದ ಸಹಜ ಸ್ವರೂಪದಲ್ಲಿ ನೋಡುತ್ತಾರೆ. ಪರಂಪರೆಯನ್ನು ಎದುರಿಸುವ ನಿಟ್ಟಿನಲ್ಲಿ, ಅಮ್ಮ ಅಜ್ಜಿಯರಲ್ಲಿ ಬಂಡಾಯದ ಕಾವೊಂದು ಇರುವುದನ್ನು ಗುರುತಿಸಿ, ಆ ಪರಂಪರೆಯಲ್ಲಿ ಗುರುತಿಸಿಕೊಳ್ಳಲು ಪ್ರತಿಭಾ ಬಯಸುತ್ತಾರೆ. ಕಾಲದ ಪಲ್ಲಟಗಳು, ಭೂತ-ಭವಿಷ್ಯತ್ತು-ವರ್ತಮಾನಗಳಲ್ಲಿ ಪ್ರವಹಿಸುವಂತೆ, ಅವು ಶಕ್ತವಾಗಿ ವ್ಯಕ್ತವಾಗುವುದು ಅಜ್ಜಿ-ಅಮ್ಮ-ಮಗಳು ರೂಪಗಳಲ್ಲಿ. ‘ನಿನ್ನ ಜೀನ್ಸ್ ಪ್ಯಾಂಟನೊಯ್ದು ಒಲೆಯೊಳಗಿಕ್ಕು’ ಎಂದು ಮೊಮ್ಮಗಳಿಗೆ ಹೇಳುವ ಅಜ್ಜಿ ಪಲ್ಲಟವನ್ನು ಸೂಚಿಸುತ್ತಾಳೆ. ಹಾಗೆಯೇ ‘ನನ್ನ ಮಗಳು ಅವರಪ್ಪನಿಗೆ ದಬಾಯಿಸಿದ ದಿನ ನಾನು ಹೋಳಿಗೆ ಮಾಡಿದೆ’ ಎನ್ನುವ ತಾಯಿಯ ಮಾತು ಒಳಬಾಳಿನ ಪಲ್ಲಟದ ಸೂಚನೆಯನ್ನು ನೀಡುವಂತಿದೆ. ‘ನಾನು ಪುಟ್ಟಿ ಮಳೆ ನೋಡಿದ್ದು’, ಕವನದಲ್ಲಿ ಮಳೆ ನೋಡುವ ಸಂಭ್ರಮವು ಕೂಡ ಕಾಲ ಸೂಚಕದ ಪ್ರತೀಕವಾಗಿ ಬರುತ್ತದೆ.

ವ್ಯಾಪಾರೀಕರಣವು ಹೆಣ್ಣನ್ನು ಆವರಿಸುವಂತೆ ಬೇರೆಯವರನ್ನು ಆವರಿಸುವುದಿಲ್ಲ. ವ್ಯಾಪಾರೀಕರಣದ ಮುಂದಿನ ಭಾಗವಾದ ಜಾಗತೀಕರಣ, ಸರಕು ಸಂಸ್ಕೃತೀಕರಣದ ದಾಳಿಯನ್ನು ಮುಖಾಮುಖಿಯಾಗಿಸಿಕೊಳ್ಳುವ ಪ್ರತಿಭಾ, ಈ ಮಿಥ್ ಅನ್ನು ಒಡೆಯುವಲ್ಲಿ ಆಸಕ್ತಿ ತೋರುತ್ತಾರೆ. ಇಪ್ಪತ್ತೈದು ರೂಪಾಯಿಯ ನೈಟಿ, ವ್ಯಾನಿಶಿಂಗ್ ಕ್ರೀಮುಗಳ ಆಮಿಷದಲ್ಲಿ ಬಿದ್ದ ಕೇರ್ ಫ್ರೀ ಮಹಿಳೆಯರು ವಿಶೇಷವಾಗಿ ಮಧ್ಯಮವರ್ಗವನ್ನು ಸೂಚಿಸುತ್ತದೆ. ಮೊಮ್ಮಗಳಿಗೆ ದೀಪಾವಳಿಯಲ್ಲಿ ‘ಪಾಮಾಯಿಲ್ ಆರತಿ’ ಬೆಳಗುವ ಆಜ್ಜಿ ‘ಪ್ಲಾಸ್ಟಿಕ್ ಬಳೆ ತೊಟ್ಟ ಮೊಮ್ಮಗಳು’. ‘ದಿ ಯುಗ’ದ ಸಂಕೇತಗಳಂತಿದ್ದಾರೆ. ‘ದಿಲ್ ಮಾಂಗೆ ಮೋರ್’ದಂತಹ ಕವನಗಳು ಗ್ರಾಹಕ ಸಂಸ್ಕೃತಿಯ ರೂಪಕಗಳನ್ನು ಒದಗಿಸುತ್ತವೆ. ಕಾಲದ ಪಲ್ಲಟಗಳನ್ನು ಗುರುತಿಸುತ್ತಾ, ಇದರಿಂದ ಸ್ಥಿತ್ಯಂತರವಾದುದೇನು ಎಂಬ ಶೋಧ ಇಲ್ಲಿ ಕಾಣುತ್ತದೆ. ಹಳೆಯ ಜಾನಪದ ಗೀತೆಯಾದ ‘ಭಾಗ್ಯದ ಬಳೆಗಾರ ಹೋಗಿ ಬಾ ತವರಿಗೆ’ ಬೊತೆಗೆ ಕೆ. ಎಸ್. ನರಸಿಂಹಸ್ವಾಮಿಯವರ ‘ಬಳೆಗಾರ ಚೆನ್ನಯ್ಯ’ನ ಸುಕುಮಾರ ಲೋಕವನ್ನು ಸೇರಿಸಿ, ಅವನ್ನು ಒಡೆದು ನೋಡುತ್ತಾರೆ. ಬದಲಾದ ಕಾಲದಲ್ಲಿ ಬಿಂಬಿತವಾಗುವ ಚಿತ್ರವೇ ಬೇರೆ :
ತವರು ಹಾದಿಯಲಿ ಫ್ಲೈ‌ಓವರುಗಳು ಬಹಳ
ಟಾರು ರಸ್ತೆಯಲ್ಲಿ ಕಲ್ಲು ಮುಳ್ಳುಗಳಿಲ್ಲ.
……………………..
ಬಂದಿದ್ದ ನಮ್ಮ ಊರಿನ ಬಳೆಗಳ ಸೇಲ್ಸ್‌ಮನ್
……………………..
ಆ ಚೆನ್ನಯ್ಯನೂ ಹಾಗೇ, ಬಂದು ಏನೇನೋ ಹೇಳಿ ಚುಚ್ಚಿಕೊಟ್ಟು
ನನ್ನ ಕಣ್ಣಲ್ಲಿರದ ಹನಿಯ ಪ್ರಸ್ತಾಪಿಸಿ ನಿನ್ನ ಕಣ್ಣಲ್ಲಿ ಬರಿಸಿ
ಯಾಕೆ ಇದೆಲ್ಲ ರಗಳೆ, ಬಳೆಬೇಕಾದರೆ ಹೋಗು ಫ್ಯಾಮಿಲಿ ಮಾರ್ಟಿಗೆ.
(ಬಳೆಗಳ ಸೇಲ್ಸ್‍ಮನ್)

ಈ ರೀತಿ ಎಲ್ಲ ನೆಲೆಗಳಲ್ಲಿ ನಿಂತು ನೋಡಿ, ಅಲ್ಲಿರುವ ಸ್ಥಾಪಿತವಾಗಿರುವ icons ಮತ್ತು ಕಲ್ಪನೆಗಳನ್ನು ಭೇದಿಸುವ ಪ್ರತಿಭಾ ಅವರ ಕಾವ್ಯ ಆಸ್ಮಿತೆಯ ಶೋಧವನ್ನು ದೃಢಗೊಳಿಸಿಕೊಳ್ಳುತ್ತದೆ. ಪರಂಪರೆಯ ಕೊಂಡಿಯಾಗಿ ಆಸ್ತಿತ್ವವನ್ನು ಗುರುತಿಸುವ ಕ್ರಮ ಇದ್ದೇ ಇದೆ-
ಬಾಗಿಲಲ್ಲಿ ನಾನು ನಿಂತಾಗ| ಅವರಿಗೆ ಕಂಡಿದ್ದು
ನಾನು ಮಾತ್ರವಲ್ಲ! ನನ್ನ ಬೆನ್ನ ಹಿಂದಿನ ಏಳು ತಲೆಮಾರು
(ಪೊರೆ ಕಳಚುವುದು)

ಇಂತಹ ಆಸ್ಮಿತೆಗಳಿಗಿಂತ, ವಿಸ್ಮೃತಗೊಂಡ ಆಸ್ಮಿತೆಗಳನ್ನು ಹುಡುಕಾಡುವುದು ಪ್ರತಿಭಾ ಅವರಿಗೆ ಮುಖ್ಯವಾದುದು. ಅವರು ನಿರ್ವಚಿಸುವ ಸ್ತ್ರೀ ಅಸ್ಮಿತೆಯು ಸಂಕೀರ್ಣವೂ, ಸುಲಭ ಗ್ರಾಹ್ಯವಲ್ಲದ್ದೂ ಆಗಿದೆ. ಮುಖ್ಯವಾಗಿ ಚಲನಶೀಲ ಗುಣವುಳದ್ದಾಗಿದೆ. ಹಾಗೆಂದೇ ಇದರ ಅನಾವರಣ :
ನೀನು ಎರಡೂ ತೋಳು
ಚಾಚಿದರೆ ಬರೀ ಗಾಳಿ
ನಾನು ಎದೆ ತೆರೆದರೆ
ಸಂಪೂರ್ಣ ಸಾಮ್ರಾಜ್ಯ
(ಹೆಣ್ಣು-ಕಾಡು)
ನಾನು ಕಣಿವೆಯಲ್ಲಿ ಗಂಭೀರವಾಗಿ
ಹರಿಯುತ್ತಿರುವ ನದಿ. (ಸಾಧ್ಯವೇ ಇಲ್ಲ…)
ನಾನು ಸುಟ್ಟ ನಂತರವೂ ಚಿಮ್ಮುವ ಚಿಗುರು.
(ಹೆಣ್ಣು-ಕಾಡು)

ಈ ಎಲ್ಲ ಸಾಲುಗಳೂ ಸ್ವಯಂ ಅಸ್ಮಿತೆಯ ಅನಾವರಣ ಮಾಡಿಕೊಳ್ಳುತ್ತವೆ. ಜೀವ ಚೈತನ್ಯವಾದವನ್ನು ಉಳಿಸಿಕೊಂಡು ಫೀನಿಕ್ಸ್ ನಂತೆ ಬದುಕಿ ಬರುವ ಚಲದ ಆಸ್ಮಿತೆಯ ಅನಾವರಣ ಇದು.
ಬಾಳೆಯಾದರೆ ಕತ್ತರಿಸಿದರೂ
ಪುಟಿಪುಟಿದು ನೂರೆಂಟು ಕಿಡಿಗಳು.
. . . . . . . . .
ಮಾವು, ಹಲಸು, ತೇಗವಾದರೆ
ನೆಟ್ಟಗೆ ಆಕಾಶಕ್ಕೆ ಮುಖಮಾಡಿ
ಕುರ್ಚಿ ಮೇಜು ಮ೦ಚವಾಗಿ ಪರಿವರ್ತಗೊಂಡು
ನಾನು ಸಾಯುವುದಿಲ್ಲ
ಮುಟ್ಟಿದ ತಕ್ಷಣ ಗೊತ್ತಾಗಿ ಬಿಡುತ್ತದೆ
ಇದು ಹೆಣ್ತನದ ಪರಾಕಾಷ್ಠೆ
(ಹಿಮದ ಹಾದಿ)

ಇದು ಒಂದು ಬಗೆಯಾದರೆ, ಕೇಡನ್ನು (Evil) ಅವರ ವ್ಯಕ್ತಿತ್ವದಲ್ಲಿ ವಿಶಿಷ್ಟವಾಗಿ ಅಂದುಕೊಳ್ಳುವುದು ಮತ್ತು ಅದರಿಂದ ಆಸ್ಮಿತೆಯನ್ನು ಸಾಧಿಸುವುದು. ಕೇಡನ್ನು ಒಂದು ಶಕ್ತಿ, ಸಂಕೀರ್ಣ ಶಕ್ತಿಯಾಗಿ ಗ್ರಹಿಸಿ, ಅದನ್ನು ತಮ್ಮ ಕಾವ್ಯದಲ್ಲಿ ತರುತ್ತಾರೆ ಪ್ರತಿಭಾ. ಅವರ ಪ್ರತಿಮೆಗಳಲ್ಲಿ ಪುನರಾವರ್ತಿತವಾಗಿ ಬರುವ ಹುಲಿ ಮತ್ತು ಕಾಡು, ಸೃಷ್ಟಿಸುವ ನಿಗೂಢ ಶಕ್ತಿಯ ಸ್ವರೂಪ ಒಂದು ಋಣಾತ್ಮಕ ಸಾಮರ್ಥ್ಯವನ್ನು ( Negative potentiality) ಎತ್ತಿ ತೋರುತ್ತವೆ. ಸೆಟಾನಿಕ್ ಪ್ರಲೋಭನೆಯೂ ಪ್ರತಿಭಾ ಕಾವ್ಯದಲ್ಲಿ ದಟ್ಟವಾಗಿ ಆವರಿಸಿ ಶಕ್ತಿಶಾಲಿಯಾಗುತ್ತದೆ. ‘ಹಾವು ಬಂದು ತಿನ್ನು ತಿನ್ನು ಎನ್ನುವ ಸೇಬು ನಾನು’ ಎಂದು ಆತ್ಮ ಪ್ರತ್ಯಯ ಬಳಸಿ ಹೇಳುವಾಗಿನ ಶಕ್ತಿಯನ್ನು ಗಮನಿಸಬೇಕು. ‘ನಾನು’ ಎಂಬುದು ಜಡ ಸ್ವರೂಪದಲ್ಲಿರದೆ, ಸದಾ ಬದಲಾಗುವ ಸಂಕೀರ್ಣ ಸ್ವರೂಪ :
ದಿನಾ ನೋಡುತ್ತೀಯ
ನಾನು ಹೆಣ್ಣು ಅಂತ ತಿಳಿದಿದ್ದೀಯಾ
ಅಲ್ಲ, ನಾನೊಂದು ಕಾಡು
(ಹೆಣ್ಣು-ಕಾಡು)
ಇದಕ್ಕೆ ಜೊತೆಯಲ್ಲಿ ಈ ಸಾಲುಗಳನ್ನಿಟ್ಟು ಓದಬೇಕು :
ನನ್ನ ಬಿಕ್ಕಳಿಕೆ ಮತ್ತು
ನಿನ್ನ ಆಲಿಂಗನಗಳ ನಡುವೆ
ಸಮಾಜವಿಜ್ಞಾನದ ಗೋಡೆ
(ಸಾಧ್ಯವೇ ಇಲ್ಲ….)
‘ಸಮಾಜವಿಜ್ಞಾನದ ಗೋಡೆ’ಗಳಿಗೆ ಎದುರಾಗಿ ರೂಪಿತವಾಗುವ ಕಾಡು ಶಕ್ತವಾದ ಪ್ರತಿಸೃಷ್ಟಿಯಾಗುತ್ತದೆ.
ಮೈಥುನದಂತಹ ಕ್ರಿಯೆಯಲ್ಲಿ ಹೆಣ್ಣ ಭೋಗವಸ್ತುವಾಗಿ ಬಳಕೆಯಾಗುವುದು, ಗೌಣವಾಗುವುದು ಪ್ರತಿಭಾ ಒಪ್ಪದ ಸಂಗತಿ. ಹಳೆಯ ದೃಷ್ಟಿಕೋನವನ್ನು ಒಡೆದು ನೋಡಿದಾಗ.. ‘ಭೋಗಿಸಲ್ಪಡುವ ವ್ಯಕ್ತಿತ್ವ’ ಹೆಣ್ಣಿನದು ಎನ್ನುವ ಮಿಥ್ ಒಡೆದು, ಮೈಥುನ ಗಂಡಿನ ಗರ್ವದ ಉತ್ತುಂಗ ಅಲ್ಲ, ಅದು ಅವನ ಸೋಲು ಎಂಬುದನ್ನು ಕಟ್ಟುತ್ತಾರೆ’.
‘ಅರ್ಧನಾರೀಶ್ವರ’ದಲ್ಲಿ ಅವರು ವಿವರಿಸುವಂತೆ,
ಗಂಡೆಂಬ ಗತ್ತುಗರ್ವಗೌಡಿಕೆ
ಗಳು ಮಲಗಿ ಬಿಡುತ್ತವೆ. ಕೆಲಸವಾದ ಮೇಲೆ.

ಇದಕ್ಕೆ ಪ್ರತಿಯಾಗಿ ಹೆಣ್ಣಿನ ಫಲವತ್ತಾದ ವ್ಯಕ್ತಿತ್ವ ಹೀಗೆ ಬರುತ್ತದೆ :
ಉತ್ತಿ ಬಿತ್ತಿ ಬೆಳೆದು ಹೂವಾಗಿ
ಎಲ್ಲ ಮುಗಿದಿದ್ದರೂ
ನಾನಿನ್ನೂ ಫಲವತ್ತಾಗಿದ್ದೆ
ಅದಕ್ಕೆ ನಾನೇನು ಮಾಡಲಿ?
ಮುಂಗಾರಿನ ಹೊಳೆಯಂತೆ ಉಕ್ಕುವ
ನನನ್ನು ಅವರು ಲೀಟರುಗಳಲಿ ಅಳೆಯುತ್ತಿದ್ದರು
(ಹೋಗಲಿ ಬಿಡಿ).
ಇದು ಪ್ರತಿಭಾ ಅವರ ದೇಶ ಕಾಲಗಳಲ್ಲಿ ಅರಳುವ ಹೆಣ್ಣಿನ ಆಸ್ಮಿತೆ. ಜಾನಪದದಲ್ಲಿ ಸೀತೆ ಕೊರವಂಜಿಯೆದುರು ರಾವಣನ ಚಿತ್ರ ಬರೆಯುತ್ತ ತನ್ನೊಳಗಿನ ಸುಪ್ತಮನಸ್ಸಿನ ಅಭೀಪ್ಸೆಗಳನ್ನು ಬಿಚ್ಚಿಡುವಂತಹ ಮುಕ್ತ ಅಭಿವ್ಯಕ್ತಿಯ ಕ್ರಮದಂತೆ ಇದು ಕಾಣುತ್ತದೆ. ಈ ಅಸ್ಮಿತೆಯು ಗಂಡಸಿನ Comfort zone ಖಂಡಿತ ಅಲ್ಲ. ಎಚ್. ಎಸ್.ರಾಘವೇಂದ್ರರಾವ್ ಅವರು ಪ್ರತಿಭಾ ಸಂಕಲನಕ್ಕೆ ಬರೆದ ಮುನ್ನುಡಿಯಲ್ಲಿ ಗುರುತಿಸುವಂತೆ, “ಈ ಬದಲಾವಣೆಯು ಕೇವಲ ನೀಡುವ-ಕೊಡುವ ತಾಯಿತನದ, ಪುರುಷನಿಗೆ ಚಿರಪರಿಚಿತವಾದ ಸೆಲೆಯಲ್ಲ. ಅಂಥ ನೆಲೆಯ ಸಂಗಡ ಅವನು ಕಂಫರ್ಟಬಲ್ ಆಗಿಯೇ ಇರುತ್ತಾನೆ. ಬದಲಾಗಿ ಇದು ಸಮಾನತೆಯಲ್ಲಿ ನೆಲೆನಿ೦ತ, ದೇಹವನ್ನು ಮರೆಯದ, ಬಂಧನಗಳನ್ನು ಕಳಚಬಯಸುವ ಹೊಸ ವ್ಯಕ್ತಿತ್ವ. ಇದು ಪುರುಷನಿಗೆ ನಿಗೂಢವಾಗುತ್ತದೆ, ದಿಗಿಲು ತರಿಸುತ್ತದೆ” (ರಾಫವೇಂದ್ರ ರಾವ್ ಎಚ್. ಎಸ್., ಪು. xv).

ಅರೇಬಿಯನ್ ನೈಟ್ಸ್‍ನ ಷಹಾಜಾದೆಗೆ ಕತೆ ಹೇಳುವುದು ಎಂದರೆ ಬದುಕನ್ನು ಅನುಭವಿಸುವ ಸಾವನ್ನು ಎದುರಿಸುವ ಜೀವನ್ಮರಣದ ಪ್ರಶ್ನೆ. ನಿತ್ಯಕ್ಕೆ ತೆರೆದುಕೊಳ್ಳುತ್ತ, ಸಾವು ಬದುಕಿನ ಸವಾಲುಗಳನ್ನು ಕಥೆಯಲ್ಲಿ ತೀವ್ರವಾಗಿ ನಿರೂಪಿಸುವ ಷಹಾಜಾದೆಯಂತೆ ಪ್ರತಿಭಾಗೆ ಅನುದಿನದ, ಅನುಕ್ಷಣದ ಬದುಕಿನ ಸವಾಲುಗಳನ್ನು ಮತ್ತು ಅವನ್ನು ಕಾವ್ಯದಲ್ಲಿ ಶಕ್ತವಾಗಿ ತರುವ ಸವಾಲುಗಳು ಇವೆ. ಪ್ರತಿಭಾ ಕಾವ್ಯಕ್ಕಾಗಿ ಥಿಯರಿಗಳಿಗೆ ಮೊರೆ ಹೋದವರಲ್ಲ. ಅವರಿಗೆ ಸುತ್ತಲಿನ, ಸಾಮಾನ್ಯ ಬದುಕಿನ ಧಾತುಗಳೇ ಮುಖ್ಯ. ಅವರು ಉಲ್ಲೇಖಿಸುವ ಎ. ಕೆ. ರಾಮಾನುಜನ್ ಅವರ ‘ಅಮೆಜಾನ್ ದಾಟಬಹುದು ಈ ಅನುದಿನದ| ಆಂತರಗಂಗೆಯನ್ನು ದಾಟುವುದು ಹೇಗೆ’-ಎಂಬ ಮಾತು ಅವರ ಕಾವ್ಯದಲ್ಲಿ ಪ್ರತಿಫಲಿಸುತ್ತದೆ. ಅನುದಿನದ ಸವಾಲುಗಳ, ಅನುಭವ ಪ್ರವಾಹಗಳ ಕೆಳಗೆ ತಲೆಯೊಡ್ಡಿ ನಿಲ್ಲುವ ಕವಯತ್ರಿಗೆ ಅಡುಗೆ, ಮುಟ್ಟು, ಮೈಥುನದಂತಹ ನಿತ್ಯದ ಸಂಗತಿಗಳೇ ಕಾವ್ಯಕ್ಕೆ ಒದಗಿ ಬರುತ್ತವೆ. ಪ್ರತಿ ಮೈಥುನಕ್ಕು ಬೆದೆ, ತಲ್ಲಣಗಳು ಇರುವಂತೆ, ದಿನದ ಸಂಗತಿಗಳನ್ನು ತೀವ್ರವಾಗಿ ಅನುಭವಿಸುವ ಕವಯಿತ್ರಿ, ಒಂದು ಅನುಭವ ಪುನಃ ಸಂಭವಿಸುವಾಗಿನ ಭಿನ್ನತೆಯನ್ನು ಸೂಕ್ಷ್ಮವಾಗಿ ತೋರಿಸುತ್ತಾರೆ. ದಿನವೂ ‘ಆಗುವಿಕೆ’ಯ ಸವಾಲುಗಳು ಅಸ್ತಿತ್ವವನ್ನು ರೂಪಿಸುತ್ತಿರುತ್ತವೆ. ಆಗುವಿಕೆಯ ಹಂತದಲ್ಲಿ ಭಿನ್ನ ಪರಿವರ್ತನೆಗಳನ್ನೂ (Permutations) ಮತ್ತು ಸಂಯೋಜನೆಗಳನ್ನೂ (Combinations) ಗಮನಿಸುವ ಕೌತುಕ ಮೂಲವಾದುದು ಪ್ರತಿಭಾ ಕಾವ್ಯದ ಶೋಧ. ಏಕಬಿಂದುವಿನಲ್ಲಿ ಆಳಕ್ಕೆ ಇಳಿಯುವ ತಂತ್ರ. ಇದನ್ನೇ ಒಡೆದುಕಟ್ಟುವ ಸೃಜನಶೀಲ ವಿನ್ಯಾಸ ತಂತ್ರ ಎನ್ನಬಹುದು. ‘ನನ್ನ ಅಡಿಗೆ ರಹಸ್ಯದ ಹಾಗೆ’ ನನ್ನ ಕವನಗಳೂ ಅವರಿಗೆ ನಿಗೂಢ’(ಹೋಗಲಿ ಬಿಡಿ)-ಈ ರೀತಿಯ ನಿತ್ಯದ ಕ್ರಿಯೆಗಳಲ್ಲಿ ಉಳಿದಿರಬಹುದಾದ Spaceಗಳನ್ನು ಬಗೆದು ನೋಡುವ ಕಾವ್ಯಕರ್ಮ ಇಲ್ಲಿದೆ. ಈ Spaceಗಳಲ್ಲಿ ನಿರಂತರ ‘ರಚನೆ’ ಮತ್ತು ‘ನಿರಚನ’ಗೊಳಗಾಗಬಲ್ಲ ಸಾಮರ್ಥ್ಯವನ್ನು ಉಳಿಸಿಕೆ.ಂಂಡಿರುವುದೂ ತುಂಬ ಮುಖ್ಯವಾಗುತ್ತದೆ.

ನಿತ್ಯದ ಆನುಭವಗಳನ್ನು ಅಭಿವ್ಯಕ್ತಿಸುವ ಭಾಷೆಯ ಲಯದಲ್ಲಿ ರಚನೆಗಳನ್ನು ಸೃಷ್ಟಿ ಮಾಡುವ ಮೌಖಿಕ ಪರಂಪರೆಯು ‘ಮುಕ್ತತೆ’ ಮತ್ತು ‘ಸರಳತೆ’ಗಳಲ್ಲಿ Spaceಗಳನ್ನು ಬಿಟ್ಟು ಕೊಡುತ್ತದೆ. ಹಾಗೆಯೇ ಪ್ರತಿಭಾ ಅವರ ಕಾವ್ಯ ಮಾತಿನ ಲಯದಲ್ಲಿ ವಿನ್ಯಾಸಗೊಳ್ಳುವ ರಚನೆಗಳು.

ಮರೆಯಿಲ್ಲದ ಬಯಲಿದು
ನನ್ನ ಕವಿತೆಗೆ ಮುಸುಕು ತಿಳಿಯದು
ಇನ್ನು
(ಕವಿತೆ)
ಸಹಜಾಭಿವ್ಯಕ್ತಿಯನ್ನು ಮೂಲವಾಗಿಸಿಕೊಂಡ ಕಾವ್ಯ ನಿರ್ದಿಷ್ಟವಾಗಿ ದೇಸಿ ಮೂಲಕ್ಕೆ ತಿರುಗಿ ತನ್ನ ಕೊರತೆಯನ್ನು ಅರಿಯುವ ಪ್ರಯತ್ನ ಮಾಡುತ್ತದೆ :
ನಿನ್ನ ಅದಕ್ಕೆ ನನ್ನ ಇದು ಎಂದು ಸಲೀಸಾಗಿ
ಜಾನಪದೀಯವಾಗಿ ಹೇಳಲಾಗದೇ ಉಗುಳಿನ
ಸಹಿತ ಕಿರುಚಲಾಗದೇ ಅವರ ಜೊತೆಗೆ ಕೈಯ
ಸಂಜ್ಞೆಯನ್ನು ಬಳಸಿ, ನೇರ ನಾಟುವಂತೆ ಬಾಣ
ಕಳಚಲಾಗಲಿಲ್ಲ ಮರ್ಯಾದೆಯ ಮುಸುಕು.
(ಭಾಷೆ)
ಮಾತಿನ ಲಯದಲ್ಲಿ ಹಳೆ ಹೊಸ ಕಾವ್ಯ ನುಡಿಗಟ್ಟುಗಳನ್ನು ಒಡೆದುಕೊಂಡು ಹೊಸ ಸಮಕಾಲೀನ ಸಂವೇದನೆಯಲ್ಲಿ ಪುನಾರಚನೆ ಮಾಡಕೊಳ್ಳುತ್ತಾರೆ ಪ್ರತಿಭಾ. ಗದ್ಯವೂ ಅಲ್ಲದ, ಪದ್ಯವೂ ಅಲ್ಲದ ವಿಶಿಷ್ಟ ಹದದ ಸಾಲುಗಳನ್ನು ಸಹಜಾಭಿವ್ಯಕ್ತಿಯಾಗಿ ಹೊಮ್ಮಿಸುತ್ತಾರೆ ಅವರು.

ಹಾಗೆ ನೋಡಿದರೆ ಭಾಷೆಯನ್ನು ಕುರಿತು ಬರೆಯುವ ಪ್ರತಿಭಾ ಅವರ ಪದ್ಯಗಳಲ್ಲಿ ಒಂದು ಸಹಜಾಭಿವ್ಯಕ್ತಿಯ ಹಂಬಲವೇ ಕಾಣುತ್ತದೆ. ಮಾತು, ಸಂಭಾಷಣೆ, ಉಲ್ಲೇಖಗಳು-ಎಲ್ಲವನ್ನೂ ತಮ್ಮ ಅಭಿವ್ಯಕ್ತಿಯಾಗಿ ಬಗ್ಗಿಸಿ, ರಚನೆಗಳನ್ನು ಮಾಡಿಕೊಳ್ಳುವ ರೀತಿಯಲ್ಲಿ ರಾಚನಿಕವಾಗಿ Spaceಗಳನ್ನು ಉಳಿಸಿಕೊಂಡು ಹೊಸ ಸಾಧ್ಯತೆಗಳಿಗೆ ಕಣ್ಣು ಹಾಯಿಸುವ ಸೃಜನಶೀಲತೆ ಇದೆ. ‘ಮಾತಿನ ಕೊನೆ ಮೌನ’-ಇದು ಅವರ ಪದ್ಯದ ಒಂದು ಸಾಲು; ಇದೇ ಅವರ ಕಾವ್ಯದೊಳಗಿನ Spaceಅನ್ನು ಸೂಚಿಸುವಂತಿದೆ-

ದೇಶ ಕಾಲಗಳ ವಾಸ್ತವಗಳನ್ನು ನಿರಂತರ ಪುನಾರಚಿಸಿಕೊಳ್ಳುವ ಸೃಜನಶೀಲ ಪ್ರಕ್ರಿಯೆಯಾಗಿ ಬರುವ ಪ್ರತಿಭಾ ಅವರ ಕಾವ್ಯ, ಹೆಣ್ಣು ದನಿಯ ನಿರೂಪಣೆಯಲ್ಲಿ ನಿರ್ವಚನಗೊಳ್ಳುವ ದೇಶಕಾಲಗಳ ವಿಶಿಷ್ಟತೆಯನ್ನೂ, ವಿವಿಧ ಅನುದೃಶ್ಯಗಳನ್ನೂ (perspective) ಸೃಷ್ಟಿಸುವಂತದ್ದಾಗಿದೆ. ಹೆಣ್ಣು ದನಿಯನ್ನೆ ಶ್ರುತಿಯಾಗಿಸಿಕೊಂಡು, ಹಾಡುವ ಕಾವ್ಯ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಬಹಳ ಮಹತ್ವದ ಮಟ್ಟು ಎಂದು ನನ್ನ ನಂಬಿಕೆ.

‘ಯಾರ ಪದ್ಯ ಓದಿದರೂ ಒಂದೇ ಪದ್ಯ ಓದಿದಂತೆ’ ಅನ್ನಿಸುತ್ತದೆ- ಎಂದು ಮಹಿಳಾ ಕಾವ್ಯವನ್ನು ಕುರಿತು ವಿಮರ್ಶಕರೊಬ್ಬರು ಹೇಳಿದ ಮಾತು. ಸ್ತ್ರೀವಾದದ ಆರಂಭಕಾಲದಲ್ಲಿ ಬಂದ ಪದ್ಯಗಳಲ್ಲಿ ವಸ್ತು ಪುನರಾವರ್ತನೆಯಾಗಿರಬಹುದು. ಆದರೆ ನಾನಿಲ್ಲಿ ಆಯ್ಕೆ ಮಾಡಿಕೊಂಡ ಇಬ್ಬರು ಕವಿಯತ್ರಿಯರ ವಿಷಯದಲ್ಲಂತು ಈ ಹೇಳಿಕೆ ಆನ್ವಯಿಸುವುದಿಲ್ಲ. ಸ್ತ್ರೀವಾದದ ತಾತ್ವಿಕತೆಯ ಹಿನ್ನೆಲೆ ಸ್ವಲ್ಪಮಟ್ಟಿಗೆ ಸವಿತಾ ಮತ್ತು ಪ್ರತಿಭಾ ಅವರಿಗೆ ಒದಗಿರಬಹುದು. ಆದರೆ ಏಕರೂಪತೆ ಖಂಡಿತ ಇಲ್ಲ. ಇಬ್ಬರ ಶೋಧನೆಗಳು ಭಿನ್ನ ನೆಲೆಯವು;

ಇಬ್ಬರ ತಾತ್ವಿಕ ದೃಷ್ಟಿಕೋನಗಳು ವಿಭಿನ್ನ ನೆಲೆಯವು. ಪ್ರತಿಭಾ ಅವರದು ಪಂಚೇಂದ್ರಿಯಗಳಿಗೆ ನಿಷ್ಠವಾದ ಕಾವ್ಯವಾದರೆ ಸವಿತಾ ಅವರದು ಪಂಚಭೂತಗಳ ನಿಷ್ಠೆಯ ಕಾವ್ಯ. ಆದರೆ ಇವರಿಬ್ಬರಲ್ಲೂ ಕಾಣುವ ಸಾಮ್ಯತೆ ಎಂದರೆ ಪ್ರಯೋಗಶೀಲತೆಯ ದೃಷ್ಟಿ; ಒಡೆದು ಕಟ್ಟುವ ಸೃಜನಾತ್ಮಕತೆ. ಅಂದರೆ ಇರುವ ಭಾಷೆ, ಸಂಸ್ಕೃತಿ, ಕಾವ್ಯದ ರೂಢಿಗಳನ್ನು ಪುನರ್ನಿಮಿಸಿಕೊಳ್ಳುವ ಬಗೆ.

ಸವಿತಾ ನಾಗಭೂಷಣ ತಮ್ಮ ಕಾವ್ಯದಲ್ಲಿ ಇದನ್ನು ಸಾಧಿಸುವುದು ಎರಡು ರೀತಿ-ಒಂದು, ಇರುವ ಕಾಲದೇಶಗಳ ಪುನಾರಚನೆಯಲ್ಲಿ ಹೊಸದನ್ನು ಕಂಡುಕೊಳ್ಳುವ, ಕಟ್ಟಿಕೊಳ್ಳುವ ಕ್ರಿಯೆಯ ಮೂಲಕ. ಇನ್ನೊಂದು, ಇರುವ ಭಾಷಿಕ ರಚನೆಗಳಲ್ಲಿ ಹೊಸ ವಿನ್ಯಾಸಗಳನ್ನೂ, ರಚನೆಗಳನ್ನೂ (Constructs) ರೂಪಿಸುವುದರ ಮೂಲಕ.

ಸವಿತಾ ನಾಗಭೂಷಣ ಅವರು ಹೊಸದನ್ನು ನಿರ್ಮಿಸಿಕೊಳ್ಳುವುದು ಕವಯಿತ್ರಿಗೆ ಸಹಜವೆನಿಸುವಂತದ್ದು. ಮೇಲ್ನೋಟಕ್ಕೆ ಕಾಣಸಿಗದಂತೆ ಸರಳವಾದ ಪದರಚನೆಗಳಲ್ಲಿ ಪ್ರೀತಿಯ ಭಾಷೆ ಅರಿಯದ ಅಥವಾ ಅರಿತೂ ಸಂವಾದ ಮಾಡಲಾರದ ಜನರ ಲೋಕವೇ ಅಡಗಿದೆ. ಮುಂಜಾವದ ತಂಪೊತ್ತಿನಲ್ಲಿ ರಸ್ತೆಯಲ್ಲಿ ನಿಂತ ಹುಡುಗಿಯನ್ನು ಹೇಗೆ ಸಂತೈಸುವುದು ಅನ್ನುವ ಪ್ರಶ್ನೆ ಇಲ್ಲಿದೆ; ಬರೆದದ್ದನ್ನು ಸುಮ್ಮನೇ ಓದಿ ಮಾರ್ಕ್ ಕೊಟ್ಟು ಮರೆತುಬಿಡುವ ಟೀಚರು, ಹುಡುಗಿ ಪ್ರೀತಿಯಿಂದ ಕೊಟ್ಟ ದಾಸವಾಳ ಮುಡಿಯದ ಟೀಚರು, ‘ಯಾಕೆ ಬರಲಿಲ್ಲ, ನಿನಗಾಗಿ ಕಾದಿದ್ದೆ, ನನ್ನದೇನೂ ತಪ್ಪಿಲ್ಲ’ ಎಂದು ಬಯಸುವ ಹುಡುಗಿ, ಈ ಲೋಕ ಬಿಡುವ ಮುನ್ನ ತನ್ನ ಪ್ರೀತಿಯ ಬಯಕೆ ಈಡೇರಲಿ ಎಂದು ಬಯಸುವ ಹುಡುಗಿ-ಇವರೆಲ್ಲ ಒಂದು ಅವಮಾನ, ನಿರಾಸೆಗಳ ಲೋಕವನ್ನು ನೋಡುತ್ತಾರೆ ಮತ್ತು ಅನುಭವಿಸುತ್ತಿದ್ದಾರೆ. ಇದು ಸಂಘರ್ಷವನ್ನು ಬೇರೆ ರೀತಿಯಲ್ಲಿ ಗ್ರಹಿಸುವ ರೀತಿ. ಗಂಡು-ಹೆಣ್ಣು, ಹುಡುಗಿ ಮತ್ತು ಪ್ರಪಂಚದ ನಡುವೆ ನೋವು ನಿರಾಸೆಗಳು ಹೆಪ್ಪುಗಟ್ಟುವ ಸ್ಥಿತಿಯನ್ನು ಈ ಸಂಘರ್ಷಗಳು ತೋರಿಸುತ್ತವೆ. ಇದನ್ನು ದೊಡ್ಡ ದನಿಯಲ್ಲಿ ಕಿರುಚಿ ಹೇಳದೆ, ಅರಿವಿನ ಮಾರ್ಗ ಹಿಡಿಯುವುದು ಕವಯತ್ರಿಯ ವಿಶಿಷ್ಟತೆ.

ನನ್ನ ಸೌಂದರ್ಯವನ್ನು| ಮೆಚ್ಚಿಕೊಂಡ ಜನ
ನನ್ನ ಸರಳತೆಯನ್ನು | ಮೆಚ್ಚಿಕೊಂಡ ಜನ
ನನ್ನ ದುಃಖ ಎಷ್ಟೆಂದು ಕೇಳಲಿಲ್ಲ
ಅಂದಿನಿಂದಲೇ ನಾನು
ಎಲ್ಲರ ಬಳಿ ಕನಸುಗಳನ್ನು ಕುತೂಹಲಿಯಾಗಿ ನೋಡಿದೆ
(ಕೊಡು ನಿನ್ನ ದುಃಖ)
ಗಂಡು-ಹೆಣ್ಣಿನ ನಡುವೆ ಇರಬಹುದಾದ ಸಂವಹನ ತೊಂದರೆಗಳನ್ನು ಸವಿತಾ ಅವರು ಗಮನಿಸುತ್ತಾರೆ. ಅವರಿಗೆ ಸಂಘರ್ಷಗಳನ್ನು ದಾಟಿ ನೆಲೆನಿಲ್ಲುವ ಪ್ರೀತಿಯ ಕಡೆಗೆ ಆಸಕ್ತಿಯಿದೆ. ಸ್ತ್ರೀವಾದಿ ನೆಲೆಯಲ್ಲಿ ಉದ್ವೇಗದಿಂದ ನಿರೂಪಿತವಾಗುವ ವೈಯಕ್ತಿಕ, ಸಾಮಾಜಿಕ ಸಂಘರ್ಷಗಳನ್ನು ಇಲ್ಲಿ ಕಾಣುವುದಿಲ್ಲ. ಆದರೆ ಸಂಘರ್ಷಕ್ಕೆ ಕಾರಣವಾದ ‘ಅಹಂ’ನ ಪ್ರಸ್ತಾಪವನ್ನವರು ಮಾಡುತ್ತಾರೆ; ಈ ಆಹಂಕಾರವನ್ನು ಧಿಕ್ಕರಿಸುತ್ತಾರೆ.
ನಿನ್ನ ಸಿಟ್ಟು ಸೆಡವುಗಳನ್ನು
ಧಿಕ್ಕರಿಸುತ್ತೇನೆ.
ನೀನು ಮೈಯೆಲ್ಲಾ
ಕಿಚಡಿಯಾಗಿರುವ ತನಕ
ಈ ಚೈತನ್ಯಮಯವಾದ
ಕಾಡನ್ನು ಪ್ರವೇಶಿಸಲು
ನಿಷೇಧವಿದೆ.
(ಧಿಕ್ಕರಿಸುತ್ತೇನೆ)

ಈ ‘ಅಹಂ’, ‘ಮಮಕಾರ’ಗಳು ಹೆಣ್ಣಿನಲ್ಲೂ ಇರಬಹುದು. ಇದನ್ನು ಮೀರಿ ಬೆಳೆಯುವ ಪ್ತೀತಿಯ ಅರಿವು ಸವಿತಾ ಅವರಿಗೆ ಮುಖ್ಯ;
ನಾನು ಪ್ರೀತಿಸಿದ್ದು ನನ್ನನ್ನೆ
ನನ್ನ ಅಹಂಕಾರವನ್ನು
ಒಮ್ಮೆ ಮಾತ್ರ ನನಗೆ
ಗೊತ್ತಿಲ್ಲದ ಹಾಗೆ
ಬಟ್ಟಲು ತುಂಬಿ ತುಳುಕಿ
ಚೆಲ್ಲಿತು ನಿನ್ನ ಮೇಲೆ
ಅದೇ ಕೊನೆ
ಆಮೇಲೆ ಪ್ರೀತಿಸಿದ್ದು ನಿನ್ನನ್ನೆ.

ಗಂಡು-ಹೆಣ್ಣಿನ ಪ್ರೇಮದ ಅಭಿನ್ನರೂಪ ಸಾಧ್ಯವಾಗುವುದು ಒಂದಕ್ಕೊಂದು ಪರಸ್ಪರ ಅಸ್ತಿತ್ವದಲಿ ನಂಬಿಕೆಯಿರಿಸಿದಾಗ. ಇದನ್ನು ಬೆಳೆಸಿಕೊಂಡು ಛೇದರೂಪವನ್ನು ತೊಡೆಯಬೇಕೆನ್ನುವ ಆಶಯ ಸವಿತಾ ಅವರದು: ‘ನೀನೆಂಬುದಿಲ್ಲದಿದ್ದರೆ ನಾನೆಂಬುದೂ ಇಲ್ಲ’ ಎಂದು ಹೊರಡುವ ಅವರು ನಾನು-ನೀನು ಭಿನ್ನ ಲೋಕಗಳಾದರೂ ಪೂರಕ ನೆಲೆಗಳಾಗಿರಬಹುದಾದ ಸಾಧ್ಯತೆಗಳನ್ನು ತೋರುತ್ತಾರೆ. ಅಹಂಕಾರದ ಕೇಡು ಪ್ರೀತಿಯ ಉಪಾದಿ. ಆದನ್ನು ದಾಟುವ ಆಶಯ ಹೊತ್ತ ಕವಯಿತ್ರಿ ಹೇಳುತ್ತಾರೆ;
ಸತಿ ಹೋಗಬೇಡ…
ನನ್ನ ಸಖಿಯಾಗುವ ಬಾ ಗೆಳತಿ
ಅಂದ ಪ್ರೀತಿ ಶಿವನೊಡ
ನನ್ನ ಮರುಮದುವೆ, ಮನೆ
(ಸತಿ ಹೋಗುವುದಿಲ್ಲ)
ಇದು ಅವರು ಆಶಿಸುವ ಸಮಾನತೆಯ ನೆಲೆ.

ಆಧುನಿಕ ಕಾಲದ ಹಿಂಸೆಯನ್ನು ಪ್ರತಿರೋಧಿಸುವ ಮೂಲಕ ನಮ್ಮ ಕಾಲವನ್ನು ನಿರ್ವಚಿಸಿಕೊಳ್ಳುತ್ತಾರೆ ಕವಿಯಿತ್ರಿ. ಆಧುನಿಕ ಸಾಮಾಜಗಳಲ್ಲಿ ಸರ್ವವ್ಯಾಪಿಯಾಗಿರುವ ಹಿಂಸೆಗೆ ಯುದ್ದ, ರಾಜಕೀಯ, ಮುಂತಾದ ನೂರಾರು ಕಾರಣಗಳಿರಬಹುದು (ರಾಜಕೀಯವಲ್ಲದ ಕಾವ್ಯ ಇಲ್ಲ ಎಂದು ಹೇಳಲಾಗುವುದು ಈ ಅರ್ಥದಲ್ಲೇ ಇರಬಹುದು). ಅವುಗಳನ್ನು ಮುಖಾಮುಖಿಯಾಗಿಸಿಕೊಳ್ಳುವ ಸವಿತ ಹಿಂಸೆ, ಕ್ರೌರ್ಯಗಳಿಗೆ ಕಾರಣ ಏನೆಂಬುದನ್ನು ಕುರಿತು ಚಿಂತಿಸುತ್ತಾರೆ. ಬಹುಶಃ ಹೃದಯ ಸಂವಾದಗಳು ಇಲ್ಲದೇ ಉಂಟಾಗಿರುವ ತೊಂದರೆಗಳಿವು ಎಂದು ಆನ್ನಿಸುತ್ತದೆ. ಹಾಗಾಗಿ ಸವಿತಾ ಅವರ ಕಾವ್ಯದಲ್ಲಿ ಬಾಳಸಂಜೆಯಲ್ಲಿ ಒಂಟಿಯಾಗಿ ಕಾಲಕಳೆಯಬೇಕಾದ ಅಸಹಾಯಕ ತಂದೆತಾಯಿಗಳು (ಬಾಳಸಂಜೆ), ಕೆರಿಯರ್ ಮತ್ತು ಹಣದಲ್ಲಿ ಮುಳುಗಿಹೋದ ತಂದೆಯ ಜೊತೆ ಸಂವಾದ ಸಾಧ್ಯವಿರದ ಮಗು (ಸಮಯವಿದೆಯಾ ಪಪ್ಪಾ), ಹೆಣ್ಣು ಮಗು ಹುಟ್ಟಿದಾಗ ಮನೆಯಲ್ಲಿ ಉಂಟಾಗುವ ನಿರ್ವಾತಸ್ಥಿತಿ (ತಂಗಿ ಹುಟ್ಟಿದಳು) -ಇದನ್ನೆಲ್ಲ ಸಂವಹನದ ತೊಂದರೆಗಳಿಂದ ಆದ ಸಾಮಾಜಿಕ ತೊಡಕುಗಳೆಂಬುದನ್ನು ನಿರೂಪಿಸಲಾಗಿದೆ. ಇದರ ಮುಂದೆ ತಾಲಿಬಾನಿಗಳು ಪ್ರತಿಮೆಯನ್ನು ಕೆಡವಿದಾಗಲು ಈ ಬಗೆಯ ಸಂವಹನದ ತೊಂದರೆಯಿರುವುದನ್ನು ಅವರ ಕಾವ್ಯ ಸೂಚಿಸುತ್ತದೆ. ೮೮, ಫೆಬ್ರವರಿ ೩, ಕವಿತೆ ವರದಕ್ಷಿಣೆಯ ಸಮಸ್ಯೆಯಿಂದ ಸತ್ತ ಮೂರು ಜನ ಹೆಣ್ಣುಮಕ್ಕಳನ್ನು ಕುರಿತು ಹೇಳಿದರೂ, ಅಲ್ಲಿ ಸಮಾಜಕ್ಕೂ ವ್ಯಕ್ತಿಗಳ ನಡುವೆಯೂ ಇಲ್ಲದ ಸಂವಹನದ ಧಾತುವನ್ನು ಕುರಿತು ಖೇದಗೊಂಡಂತೆ ಇದೆ. ಈ ಶಿಥಿಲ ಸಂವಹನ, ಸ್ಪಂದನಗಳಿಲ್ಲದ ಜಗತ್ತನ್ನು ಗುರುತಿಸುತ್ತಾರೆ ಸವಿತಾ.

ಈ ಆಧುನಿಕ ಮನಸ್ಸಿನ ನೋವನ್ನು ನಿರ್ವಚನಮಾಡಿಕೊಳ್ಳುತ್ತಲೇ, ಅದಕ್ಕೆ ಪರಿಹಾರೋಪಾಯಗಳನ್ನು ಚಿಂತಿಸುತ್ತಾರೆ ಸವಿತಾ. ಸರ್ವವ್ಯಾಪಿಯಾಗಿರುವ ಕೇಡು (Evil) ಅವರಿಗೆ ಒಂದು ಮಿಥ್. ಅದನ್ನು ಬಯಲುಗೊಳಿಸಿಕೊಂಡು ಶಮನಗೊಳ್ಳುವ ದಾರಿಗಳನ್ನು ಅವರು ಹುಡುಕುತ್ತಾರೆ. ಕೇಡನ್ನು ಎದುರಿಸಲು ಸವಿತಾ ಬಳಸುವುದು ಸನ್ನೆಗೋಲುಗಳನ್ನು! ಒಂದು ಪ್ರಕೃತಿ ಇನ್ನೊಂದು ಬುದ್ಧದತ್ತ ಮೈತ್ರೀಕರುಣೆಗಳನ್ನು!

ಅವಮಾನ, ಸೇಡು, ಕೇಡಿಗೆ ಉಪಶಮನವೆಂಬಂತೆ ಕವಯಿತ್ರಿ ಪ್ರಕೃತಿ ದೇಶವನ್ನು ಆನಾವರಣಗೊಳಿಸಿಕೊಳ್ಳುತ್ತಾರೆ. ಆ ದೇಶ ಸೂರ್ಯಚಂದ್ರ ಹೂವು ನದಿಬೆಟ್ಟ ಗಾಳಿಯಿಂದ ಕೂಡಿದ ಭೂದೃಶ್ಯಗಳಿಂದ (Landscape) ಕೂಡಿದೆ. ಪ್ರಕ್ಕತಿಯ ಅಗಾಧತೆಯನ್ನು ಸಾಮಾನ್ಯೀಕರಿಸಿಕೊಂಡು ಪ್ರವರ್ತಿಸುತ್ತ, ಸಂವಾದವನ್ನು ಸಾಧ್ಯವಾಗಿಸಿಕೊಳ್ಳುತ್ತಾರೆ ಕವಯತ್ರಿ|

ನಾನು ಸೂರ್ಯ/ನಾನು ವಸ್ತು/ನಾನು ಚೈತನ್ಯ (ನಾನು ಸೂರ್ಯ) ಇದು ಹೊಸ ತಿಳುವಳಿಕೆ ಏನಲ್ಲ. ಆದರೆ ಸೂರ್ಯ ಉಪನಿಷತ್ತಿನ ಸತ್ಯವಾಗಿ ಬರುವುದಕ್ಕಿಂತ ಸಾಮಾನ್ಯನನ್ನಾಗಿ, ನಮ್ಮೊಳಗೊಬ್ಬನಾಗಿ ನೋಡುವ ರೀತಿಯಿಂದ, ಸೂರ್ಯನೂ ನಮ್ಮ ಜೊತೆ ಮಾತಿಗಿಳಿದು, ನಮ್ಮ ಕಷ್ಟಸುಖಕ್ಕೆ ಆಗುವ ಹೃದಯವಂತನಂತೆ ಕಾಣುತ್ತಾನೆ :
ನಾನು ಬಂಗಾರದ ರಥ
ಒಡೆಯ ಎನ್ನುವುದು
ಕೇವಲ ಉಳ್ಳವರ ಕುಹಕ
ನಾನೂ ನಿಮ್ಮಂತೆಯೆ
ಬೆಂಕಿಯ ಕಾರ್ಖಾನೆಯಲ್ಲಿ
ಬಡ ಕಾರ್ಮಿಕ
(ನಾನು ಸೂರ್ಯ)
‘ಹೀಗೆ ಸೂರ್ಯ ನನ್ನೊಳಗೊಬ್ಬ. ಇದೇ ಸಾಮಾನ್ಯೀಕರಣ ಚಂದ್ರನಿಗೂ ಅನ್ವಯಿಸುತ್ತದೆ. ಅಳುವ ಹುಡುಗಿಗೆ ‘ಆ ಚಂದಿರ ಜೊತೆಯಾದರೂ ಆಗಬಹುದು’ ಎನ್ನುವ ಭಾವ ಹುಟ್ಟಿಸುವ, ಹುಡುಗಿಯ ಅಳುವಿನಲ್ಲಿ ‘ತಾರೆಗಳು, ಚಂದಿರ, ಮೋಡಗಳ ಮರೆಯಲ್ಲಿ ಕುಳಿತು ಬಿಕ್ಕಳಿಸುತ್ತಿದ್ದಾರೆ’ ಎನ್ನುವಲ್ಲಿ ಚಂದ್ರನೂ ಭಾಗಿಯಾಗುವ ಸಹ ಸ್ಪಂದನದ ಭಾವ ಸಿಗುತ್ತದೆ. ಪ್ರಕೃತಿಯ ‘ಮಾಯಿಸುವ’ ಈ ಗುಣವೇ ಸವಿತಾ ಅವರ ಕಾವ್ಯದ, ಬದುಕಿನ ಭರವಸೆ :
ಅಹಂಕಾರದ ಗಾಯಗಳವು
ಅವಮಾನದ ಗಾಯಗಳವು
ಇವತ್ತು ನಿರ್ಧರಿಸಿದ್ದೇನೆ
ಆ ಸೂರ್ಯನನ್ನು ಕೇಳಿಯೇ ಬಿಡುತ್ತೇನೆ
ಅವನು ನನ್ನ ಗಾಯಗಳನು | ಒಣಗಿಸಬಹುದು
ನಾಳೆ ಚಂದ್ರನ ಮೊರೆಹೋಗುತ್ತೇನೆ.
ಅವನು ಅಳಿದುಳಿದ
ಕಲೆಗಳನ್ನೂ ಅಳಿಸಿ ಹಾಕಬಹುದು
ರಾತ್ರಿಗಳು-ಹಗಲುಗಳು
ಗಾಯಗಳು ಮಾಯಬಹುದು
(ಗಾಯಗಳು) ,

ಇಷ್ಟೇ ಆಲ್ಲದೆ ಪ್ರಕೃತಿ ಸಮಾನತೆಯ ಯುಟೋಪಿಯಾ ನಿರ್ಮಿಸುತ್ತದೆ ಕವಯಿತ್ರಿಗೆ.

ಆಕಾಶವು ‘ರೆಕ್ಕೆಗಳಿಲ್ಲ ಎಂದು ಅವಮಾನಿಸುವುದಿಲ್ಲ’, ‘ಸಣ್ಣವಳೆಂದು’ ಶಿಶಿರವು ತಿರಸ್ಕರಿಸುವುದಿಲ್ಲ. ಚಂದ್ರನಂತೂ ‘ಸಿದ್ಧಾರ್ಥನ ಪ್ರಿಯಮಿತ್ರ, ಮೈತ್ರಿಯೇ ಮಹಾಸೂತ್ರನಾದವನು’- ಇವನನ್ನು ‘ಪ್ತೀತಿಸದೆ ಇರಲಾರ’ ಎನ್ನುವ ಭಾವನಾತ್ಮಕ ರಕ್ಷಣೆಯನ್ನು ಪ್ರಕೃತಿಯಲ್ಲಿ ಅವರಿಗೆ ಸಿಗುತ್ತದೆ.

ಹೊಳೆಮಗಳಿಗೆ ತಾಯಿ ಕೇಡನ್ನು ನಾಶ ಮಾಡುವ ಪಾಠವನ್ನು ಹೇಳಿಕೊಡುವುದು ಕೂಡ ಪ್ರಕೃತಿಯಲ್ಲಿ ಕೇಡನ್ನು ಎದುರಿಸುವ ಉಪಾಯ ಇರುವುದನ್ನು ಸೂಚಿಸುತ್ತದೆ. ಹೊಳೆಮಗಳಿಗೆ ತಾಯಿ ಹೇಳಿಕೊಡುವುದು ಜೀವನಿಷ್ಟೆ ಪಾಠ; ಕೇಡಿನ ವಿರುದ್ದ ನಿಲ್ಲುವ ಪಾಠ:
ಹರಿವ ಹಾದಿಯಲ್ಲೆಲ್ಲ
ಜೀವ ದೀಪವನುರಿಸು
ಕಾಳಿಯಾವೇಶವತಾಳಿ
ಕೇಡಿನೆದಗೂಡ ಸೆಳೆದು
ಮಡುವಿನಲಿ ಮುಳುಗಿಸುವ
(ಹೊಳೆಮಗಳು)

ಕೇಡಿಗೆ ಇನ್ನೂ ಒಂದು ಪರ್ಯಾಯ ಮಾರ್ಗ ಪ್ರಕೃತಿಯಲ್ಲಿದೆ. ಅದು ಹೂವಿನ ಲೋಕ; ಆಕಾಶ ಮಲ್ಲಿಗೆಯ ಲೋಕ- ನೆಲದಲ್ಲಿದ್ದು ಆಕಾಶಕ್ಕೆ ಚಾಚಿ ಬೆರಗು ಮೂಡಿಸುವ ಆಕಾಶ ಮಲ್ಲಿಗೆಯ ಲೋಕ. ಭೂಮಿಯ ಅಗಾಧ ಗಾತ್ರವನ್ನು ತಗ್ಗಿಸಿಕೊಂಡು ‘ಇಡೀ ಭೂಮಂಡಲವು ಒಂದು ಹೂ ಬುಟ್ಟಿಯು’ ಎಂದು ಹೂವೆನ್ನುವ ಸನ್ನೆಗೋಲಾಗಿಸಿ ನೋವು ಕೇಡುಗಳನನ್ನು ಎದುರಿಸಬಯಸುತ್ತಾರೆ ಕವಯತ್ರಿ. ‘ಶಿಕ್ಷೆ ಗರ್ವ’ ಎಂದರೆ ಏನೆಂದು ತಿಳಿಯದ ಹೂವು ಮೈತ್ರಿ ಸ್ವರೂಪವನ್ನು ಮಾತ್ರ ಪ್ರಕಟಗೊಳ್ಳಬಲ್ಲುದು. ಕ್ರೌರ್ಯದಿಂದ ತುಂಬಿದ ಲೋಕಕ್ಕೆ ಬುದ್ದಮಾರ್ಗದ ಮೈತ್ರಿ, ಕರುಣೆಗಳನ್ನು ಹೂವು ಪರಿಚಯಿಸುತ್ತವೆ. ಆದ್ದರಿಂದ ಇಂತಲ್ಲಿ ಸಂವಹನ ಸಾಧ್ಯವಾಗುತ್ತದೆ. ಅದಕ್ಕೆ ಕವಯತ್ರಿ ಹೇಳುತ್ತಾರೆ ;

ಏ…ಹೂವೆ
ನಿನ್ನ ಭಾಷೆ ನನಗೆ ಅರ್ಥವಾಗುವುದು
ನನ್ನ ಆಶೆ ನಿನ್ನಂತೆ ಆಗುವುದು
(ಹೂವು)

ಹೂವಿನ ಶಕ್ತಿಯಲ್ಲಿ ಅಪಾರ ಭರವಸೆಯಿರುವುದರಿಂದ ‘ಪರಿಮಳಕ್ಕೆ ಪಕ್ಕಾಗಿ ಕೇಡು ತಂತಾನೆ ಹಿಂಜರಿದು ನಿರ್ಗಮಿಸುವುದು’ ಎನ್ನುವ ದರ್ಶನವೂ ಇಲ್ಲಿದೆ.

ಹಾಗೆ ನೋಡಿದರೆ ಕೇಡನ್ನು ಅದರ ವಿರುದ್ಧ ಶಕ್ತಿಯಾದ ಪ್ರೀತಿ ಕರುಣೆಗಳಿಂದ ಎದುರಿಸುವುದು ಬುದ್ಧಮಾರ್ಗ-ಗಾಂಧಿಮಾರ್ಗ ಆಥವಾ ಪ್ರಕೃತಿಯ ಮೂಲಗುಣ.
ಜ್ವಾಲಾಮುಖಿಯೇ ಆಗಲಿ
ಸೂರ್ಯನೇ ಆಗಲಿ ! ಸಿಟ್ಟಿನಿಂದ
ಆಕ್ರೋಶದಿಂದ ! ಯಾರನ್ನೂ ಸುಟ್ಟ ದಾಖಲೆಗಳಿಲ್ಲ
(ಧಿಕ್ಕರಿಸುತ್ತೇನೆ)

ಪಂಚಭೂತಗಳ ಸಮರಸದ ಸಂಯೋಜನೆಯಲ್ಲಿಯೇ ಕೇಡನ್ನು ತೊಡೆಯುವ ಗುಣ ಇದೆ. ಹಾಗಾಗಿಯೇ ಮತ್ತೆ ಮತ್ತೆ ಅವರು ಪ್ರಕೃತಿಯ ಕಡೆ ನೋಡುತ್ತಾರೆ. ಅಹಂಕಾರನಿರಸನವೆಂಬ ತತ್ತ್ವದಿಂದ ಪ್ರಕೃತಿಯಲ್ಲಿ ಗುರುತಿಸಿಕೊಳ್ಳುವ ಹಂತವನ್ನು ತಲುಪುವುದನ್ನು ಅವರ ಕಾವ್ಯ ಗುರುತಿಸಲು ಬಯಸುತ್ತದೆ. ‘ನೆತ್ತಿಯನು ಹೊತ್ತಿಸಿ | ಬತ್ತಿಯಾಗಿಸು ತಾಯೆ’ ಎಂದು ಬೇಡುವ, ‘ಉರಿದೂ ಉರಿದೆ ಕೊನೆಯವರೆಗೆ, ದೇಹದೊಂದಿಗೆ, ಆತ್ಮನೊಂದಿಗೆ’- ಹೀಗೆ ನೋಯುವ ಕ್ರಿಯೆಯು ಆತ್ಮೋನ್ನತಿಯ ಮಾರ್ಗ. ಇದರಿಂದ ಹುಟ್ಟುವ ಸಾತ್ತ್ವಿಕಶಕ್ತಿಯ ಭರವಸೆಯಲ್ಲಿ ತಮ್ಮ ದೇಶಕಾಲವನ್ನು ಕಟ್ಟಿಕೊಳ್ಳುತ್ತಾರೆ. ‘ಹಪ್ಪಳದ ಕತೆ’ಯಲ್ಲಿ ಹಪ್ಪಳವೊಂದು ಸಂಯೋಜನೆಗೊಂಡ ರಹಸ್ಯ, ಹದವಾಗಿ ಒಣಗಿದ ತತ್ತ್ವವು ಸಂಯೋಜಕತೆಯ ಸಾತ್ತ್ವಿಕ ಶಕ್ತಿ ಮತ್ತು ಮಾನವ ರೂಪಕದಂತೆ ಬಳಸಲಾಗಿದೆ.

ಪಂಚಭೂತಗಳಲ್ಲೊಂದಾದ ‘ಬೆಂಕಿ’ ಕೇಡಿನ ಸಂಕೇತ. ಆದರೆ ಸವಿತಾ ಕೇಡಜಿನಲ್ಲಿಯೇ ಹುಟ್ಟಬಹುದಾದ ಬೆಳಕಿನ ಕಡೆ ಭರವಸೆಯಿಡುತ್ತಾರೆ.
ಬೆಂಕಿಯ ಕರುಣೆ
ಬತ್ತಿ
ಮತ್ತೂ ಉರಿಯುವುದು
(ಎಲ್ಲಿ ಹೋದವೋ)
ಗಾಳಿಬೆಂಕಿ ಸೇರಿಕೊಂಡು
ತನಗೆ ತಾನೇ ಕೂಡಿಕೊಂಡು
ಉರಿಯೊಳಗೆ ಬಿರಿಯುತ್ತಿತ್ತು
ಬಿರಿದು ತಾನೇ ಬೆಳಗುತ್ತಿತ್ತು
ಪ್ರೇಮಪುಷ್ಪ ಅರಳುತ್ತಿತ್ತು
(ಮಹಮದನ ಪ್ರೇಮಪತ್ರ)

ಈ ಭರವಸೆಯ ಮಾರ್ಗ ಧನಾತ್ಮಕವಾದ, ಜೀವಪರವಾದ ಕಾವ್ಯ ಲಕ್ಷಣ. ಹೊಳೆ ಮಗಳಿಗೆ ತಾಯಿ ಹೇಳುವ ಪಾಠವೂ ಆದೇ- ‘ಹರಿವ ಹಾದಿಯಲ್ಲೆಲ್ಲ! ಜೀವದೀಪವನುರಿಸು’ ಎಂದು. ವಾಸ್ತವವಾಗಿ ಇದು ಸಹಜ ಗುಣ. ಇದಕ್ಕೆ ಇರುವ ಆವರಣಗಳನ್ನು ಸರಿಸುವ ಪ್ರಯತ್ನಿಸುತ್ತಾರೆ ಸವಿತಾ.

ಮೈತ್ರಿ ಕರುಣೆ ತ್ಯಾಗಗಳು ಸ್ತ್ರೀ ಸಹಜತೆಗೆ ಹತ್ತಿರವಾದವು. ಇವೇ ಹೆಣ್ಣಿನ ಸಾಮರ್ಥ್ಯಗಳನ್ನು ಉದ್ದೀಪನಗೊಳಿಸಿ ಅವಳನ್ನು ಜೀವಮುಖಿಯಾಗಿಸುತ್ತವೆ ಎಂಬುದನ್ನು ಸವಿತಾ ಕಾವ್ಯ ತೋರಿಸುತ್ತದೆ. ಜೀವಪರ ನಿಲುವು ಮತ್ತು ಬದುಕಿನ ತಲ್ಲೀನತೆಗಳಲ್ಲಿ ಸ್ತ್ರೀ ಸಾಮರ್ಥ್ಯವು ವ್ಯಕ್ತವಾಗುತ್ತದೆ. ಪ್ರತಿಭಾ ಅವರ ಕಾವ್ಯದಲ್ಲಿ ಮುಖ್ಯವಾಗಿ ಬರುವ ‘ಅನುದಿನ ಅಂತರಗಂಗೆ’ಯ ಸವಾಲುಗಳನ್ನು ಎದುರಿಸುವ ಮಹಿಳೆಯರು ಸವಿತಾ ಅವರ ಕಾವ್ಯದಲ್ಲಿಯೂ ಇದ್ದಾರೆ. ಪುಟ್ಟಕೆಂಚವ್ವ ಅಂಥದೊಂದು ಉದಾಹರಣೆಯಾಗಿದೆ. ಕೆಂಚವ್ವನ ಮನೆಗೆಲಸಗಳ ಅಚ್ಚುಕಟ್ಟುತನ, ತಂಗಿ ತಮ್ಮಂದಿರನ್ನು ಸುಧಾರಿಸುವ ಛಾತಿಯಲ್ಲಿ ಸಹಜ ಸಾಮರ್ಥ್ಯ ಇರುವುದನ್ನು ಗುರುತಿಸಲಾಗಿದೆ.

ಇದನ್ನೇ ಮುನ್ನೆಲೆಗೆ ತರುವ ಯತ್ನ ಕವಯತ್ರಿಯದು :
ಎರೆಮಣ್ಣನ್ನು ಕಲಸಿ ಬೊಂಬೆ ಮಾಡುವಳು
ಬೊಂಬೆಗೂ ಜೀವ ಕೊಡುವವಳು…
ಗಟ್ಟಿಗು೦ಡಿಗೆಯವಳು ಕಾಳವ್ವನ
ಕಿಡಿ ಇವಳು ನಮ್ಮ ಪುಟ್ಟ ಕೆಂಚವ್ವ
(ಪುಟ್ಟ ಕೆಂಚವ್ವ)

ಇಲ್ಲಿ ಸಹಜ ದೇಸಿ ನೆಲೆಗೆ ತಲುಪಿ, ಮಹಿಳೆಯ ಶಕ್ತಿಯನ್ನು ಗುರುತಿಸುತ್ತಾರೆ ಕವಯತ್ರಿ. ಇದರೊಂದಿಗೆ ‘ಹಾಡೇ ಹನುಮವ್ವಾ’ ಕವಿತೆಯನ್ನು ನೋಡಬೇಕು.
ಹಾಡೇ ಹನುಮವ್ವಾ
ಕತ್ತಲ ಒಳಗೆ ಕರಗಿದೆ ಕೋಗಿಲೆ
ಬೆಳಕಿಗೆ ತಾರವ್ವ
(ಹಾಡೇ ಹನುಮವ್ವ)

ಇದು ಮುಖ್ಯವಾದ ದನಿ. ಈ ಹಾಡಿಗೆ ಮುಕ್ಕಣ್ಣನನ್ನು ಮುಟ್ಟಬಲ್ಲ ಶಕ್ತಿ ಇದೆ. ಶುದ್ದ ದೇಸಿ ಹೆಸರುಗಳುಳ್ಳ (ಕೆಂಚವ್ವ, ಹನುಮವ್ವ ಇತ್ಯಾದಿ) ಸ್ತ್ರೀಯರನ್ನೂ ಅವರ ಸಾಮರ್ಥ್ಯಗಳನ್ನೂ ಗುರುತಿಸುವುದು ಧ್ವನಿಪೂರ್ಣವಾಗಿದೆ. ಸ್ತ್ರೀಸಹಜ ಸಹಸ್ಪಂದನದ ಗುಣ, ಜೀವಪರ ನಿಲುವು ‘ತಂಗಿ ಹುಟ್ಟಿದಳು’ ಕವಿತೆಯ ಪುಟ್ಟ ಅಕ್ಕನಲ್ಲು ಕಾಣುತ್ತದೆ. ಎಲ್ಲರೂ ಹೆಣ್ಣು ಮಗುವನ್ನು ನಿರಾಕರಿಸುವಾಗ, ‘ಹಿಡಿಯಷ್ಟಿರುವ ತಂಗಿಯನು | ಮುಡಿಯಷ್ಟಿರುವ ಅಕ್ಕ | ಅಕ್ಕರೆಯಿಂದ ಅಪ್ಪುವಳು | ಅಭಯ ನೀಡುವಳು…’. ಸವಿತಾ ನಾಗಭೂಷಣ ಅವರ ಭಾಷೆ ಸರಳ ಅನ್ನಿಸುವಂಥದ್ದು. ಆದರೆ ಅದರಲ್ಲೇ ಸಂಕೀರ್ಣ ಲಯಗಳಿವೆ. ‘ಅರ್ಥ’ ವಿನ್ಯಾಸಗಳಿವೆ. ಹಾಗೆ ನೋಡಿದರೆ ಸರಳತೆ ಎನ್ನುವುದೇ ಸಂಕೀರ್ಣ, ಮುಸುಕು. ಸರಳ ಪದಗಳ ಸಂರಚನೆಯಾಚೆ ಅರ್ಥ ಸ್ಪುರಿಸುವಂತೆ ಮಾಡುವ ರಚನೆಗಳನ್ನು ಸವಿತಾ ಕಾವ್ಯದಲ್ಲಿ ಕಾಣಬಹುದು. ಜಾನಪದೀಯವಾದ ಆಡುಭಾಷೆಯ ಚೌಕಟ್ಟಿನಲ್ಲಿಯೇ ವಿನ್ಯಾಸಗಳು ಮೂಡುತ್ತವೆ.

ಸವಿತಾ ಅವರು ಅಭಿವ್ಯಕ್ತಿಗೆ ಹೆಚ್ಚು ಪದಗಳನ್ನು ಬಳಸುವುದಿಲ್ಲ. ಅವರು ಬಳಸುವ ಪದಗಳು ವಾಚಾಳಿತನದಿಂದ ದೂರ. ‘ಮಾತಿನ ಕೊನೆ ಮೌನ-ಮಾತು-ಮೌನ-ಈ ಗತಿಯಲ್ಲಿ ವಿನ್ಯಾಸಗೊಳ್ಳುತ್ತದೆ.

ಉದಾಹರಣೆಗೆ ‘ತಾರುಣ್ಯ,’ ‘ಮಳೆ’ಯಂತಹ ಪದ್ಯಗಳನ್ನು ನೋಡಬಹುದು :
ತುಂಬಿದ ಹೊಳೆ
ಸುಡುವ ಬೆಂಕಿ
(ತಾರುಣ್ಯ)

ಮಳೆಯೆಂದರೆ
ಹಳ್ಳಕೊಳ್ಳ
ನದಿ ಹೊಳೆ
(ಮಳೆ)

ಪದಗಳ ಮಿತ ಬಳಕೆಯಿಂದ ಉಂಟಾಗುವ spaceಗಳು ಹೊಸ ರಚನೆಗಳಲ್ಲಿ ಕಾರಣವಾಗುತ್ತವೆ. ಝೆನ್, ಹಾಯ್ಕು ಪದ್ಯಗಳಲ್ಲಿನ ವಿನ್ಯಾಸಕ್ಕೆ ಹತ್ತಿರವಿರುವ ಕಾವ್ಯ ನಿಶ್ಶಬ್ದದ ಲಯಕ್ಕೆ ವಾಪಸು ಬರುವಂತದ್ದು.

ಅನುಕರಣಾ ಪದಗಳ ಮೂಲಕ ಅರ್ಥ ಸ್ಪುರಿಸುವಂತೆ ಮಾಡುವ ವಿನ್ಯಾಸವು ಅವರ ಕಾವ್ಯದಲ್ಲಿದೆ. ಮಹತ್ವದ ಸಂಗತಿಗಳೂ ಈ ರೀತಿಯ ವಿನ್ಯಾಸದಲ್ಲಿ ಬಿಚ್ಚಿಕೊಳ್ಳುತ್ತವೆ. ಅನುಭವ ವೇದ್ಯವಾಗುತ್ತದೆ. ‘ಕಾಗೆ ಮತ್ತು ಕೋಗಿಲೆ’ ಪದ್ಯದಲ್ಲಿ- ಕಾಗೆ ಕೂಗುತ್ತಿತ್ತು ಕಾ… ಕಾ… ಕಾ… ಕಾ…, ಕೋಗಿಲೆ ಹಾಡುತ್ತಿತ್ತು ಕುಹೂ…ಕುಹೂ…ಕುಹೂ… ಎಂದು ಬಳಸುತ್ತಲೇ ‘ಕಾಕಾ’ ‘ಕುಹೂಕುಹೂ’ಗಳಿಗೆ Spaceಗಳನ್ನು ಕೊಡುತ್ತಾರೆ. ಹಾಗೆಯೇ ‘ಯಾಕೆ?’ ಪದ್ಯದಲ್ಲಿ ಅವರು ಬಳಸುವ ಅನುಕರಣಾ ಪದಗಳು Spaceಗಳನ್ನು ಕೂಡುತ್ತವೆ.
ರುಮುರುಮು ಗಾಳಿ ಬೀಸಿತು
ಧಗಧಗ ಬೆಂಕಿ ಉರಿಯಿತು
ಪಟಪಟ ರೆಕ್ಕೆ ಬೀಸಿತು
(ಯಾಕೆ?)

ಸವಿತಾ ನಾಗಭೂಷಣ ಇವುಗಳನ್ನು ಸನ್ನೆಗೋಲುಗಳಂತೆ ಬಳಸಿ, ಅಗಾಧವಾದ ಅನುಭವಗಳನ್ನು ಮೀಟುತ್ತಾರೆ.

ಚೆಲುವ ನಾರಾಯಣ ಕವಿತೆಯಲ್ಲಿ ಪುನಾರಾವರ್ತನೆಗೊಳ್ಳುವ ‘ಚೆಲುವ ನಾರಾಯಣ’ ಪದ ನೋಡಬೇಕು. ಪ್ರತಿ ಪಂಕ್ತಿಗೂ ಬೇರೆ ಬೇರೆ ಅರ್ಥಗಳನ್ನು ದಾಟಿಸಿ, Spaceಗಳನ್ನು ಉಳಿಸಿಕೊಂಡ ವಿನ್ಯಾಸ ಅಲ್ಲಿದೆ. ಹಾಗೆ ನೋಡಿದರೆ ಪುನರಾವರ್ತನೆ ದೇಸಿ ಲಯದಲ್ಲಿ ಬಳಕೆಯಾಗುವಂತದ್ದು. ಮೌಖಿಕ ಪರಂಪರೆಯಲ್ಲಿ ಪ್ರಚುರವಾಗಿರುವ ವಿನ್ಯಾಸ ಅದು. ಅದನ್ನೇ ಸವಿತಾ ತಮ್ಮ ಕಾವ್ಯದಲ್ಲಿ ಬಳಕೆ ಮಾಡಿಕೊಳ್ಳುತ್ತಾರೆ. ‘ನಾನೆಂಬುದಿಲ್ಲದಿದ್ದರೆ ನೀನೆಂಬುದೂ ಇಲ್ಲ’ ಎನ್ನುವ ಸಾಲು ಅದೇ ಹೆಸರಿನ ಕವನದಲ್ಲಿ ಪುನರಾವರ್ತನೆಯಾಗುತ್ತವೆ. ಇದರಂತೆ ‘ನಿನ್ನ’ ಪದ ಪ್ರಯೋಗ ‘ಒಳಗೊಂದು ನದಿಯಿದೆ’ ಕವಿತೆಯಲ್ಲಿ, ‘ಪ್ರೀತಿ’ ಎಂಬ ಪದ ‘ಪ್ರೀತಿ’ ಕವಿತೆಯಲ್ಲಿ ಇನ್ನು ಕೆಲವು ಪದ್ಯಗಳಲ್ಲಿ ಪದಗಳು ಪುನರಾವರ್ತನೆಯಲ್ಲಿ ವಿನ್ಯಾಸಗೊಳ್ಳುತ್ತದೆ. ‘ಏಯ್ ಯಾರು ನೀನು’?-ಪದ್ಯ ಪ್ರಶ್ನೋತ್ತರ ರೂಪದಲ್ಲಿದ್ದು ಇದು ಒಗಟು ಹಾಕಿ ಉತ್ತರ ಬಿಡಿಸುವ ದೇಸಿ ಮೂಲಕ್ಕೆ ಹತ್ತಿರವಿದೆ.

“ಸೀಮಿತ ಅರ್ಥದ ವೈಯಕ್ತಿಕ ನೆಲೆಯ ಕಾವ್ಯದಿಂದ ಹೊರಟ ಮಹಿಳಾ ಕಾವ್ಯ ವಸ್ತು ವೈಶಾಲ್ಯಕ್ಕೆ ತೆರೆದುಕೊಳ್ಳಲಿಲ್ಲ” ಎನ್ನುವ ಮಾತಿದೆ. ಇದೇ ಒಂದು ದೊಡ್ಡ ಮಿಥ್. ನಾನು ಈಗಾಗಲೇ ಗುರುತಿಸಿರುವಂತೆ ಸ್ತ್ರೀಯ ಸೃಜನಶೀಲ ನೆಲೆಗಳು, ಅವರು ಸೃಷ್ಟಿಸಿಕೊಳ್ಳುವ ಮಾದರಿಗಳೇ ಭಿನ್ನವಾಗಿರುವಾಗ, ಅವರ ರಚನೆಗಳ ಅನನ್ಯತೆಯನ್ನು ಗ್ರಹಿಸದ ಪರಿಣಾಮ ಇಂಥಹ ಅಭಿಪ್ರಾಯಗಳು ಉಂಟಾಗಬಹುದೇನೋ. ಚಳವಳಿಯ ಕಾವಿನಲ್ಲಿ ಹುಟ್ಟುವ ಕಾವ್ಯದಲ್ಲಿ ಬುರುಗು ಹೆಚ್ಚು. ಸ್ತ್ರೀವಾದಿ ಚಳವಳಿಯ ಹಿನ್ನೆಲೆಯಲ್ಲಿ ಹುಟ್ಟಿದ ಕಾವ್ಯದ ಮಿತಿಗಳನ್ನು, ದಾಟಿ ಮುಂದಕ್ಕೆ ಬಂದಿರುವ ಮಹಿಳಾ ಕಾವ್ಯ ಬೇರೆ ರೀತಿಯಲ್ಲಿ ದೇಸಿ ಪರಂಪರೆಗೆ ಹತ್ತಿರವಾಗಿದ್ದು, ಹಿಂದೆ ಇದ್ದು ವಿಸ್ಮೃತಿಗೊಳಗಾಗಿದ್ದ ಪರಂಪರೆಯ ಲಯಕ್ಕೆ ಸಹಜವಾಗಿ ಒಲಿಯುತ್ತಿದೆ. ಈ ನೆಲದಲ್ಲಿ ಹುಟ್ಟುವ ದನಿಗಳಲ್ಲಿ ಕಾವ್ಯದ ಬನಿಯಿದೆ, ಸೃಜನಶೀಲ ಶೋಧಗಳಿವೆ ಎಂಬುದೇ ನನ್ನ ನಂಬಿಕೆ.
(ಮಹಿಳಾ ಅಧ್ಯಯನ)

ಗ್ರಂಥಋಣ
೧. ಪ್ರತಿಭಾ ನಂದಕುಮಾರ್, ಮುನ್ನುಡಿ ಬೆನ್ನುಡಿಗಳ ನಡುವೆ, ಮಹಿಳಾ ಸಾಹಿತ್ಯಿಕ, ನವನಗರ, ಹುಬ್ಬಳ್ಳಿ.
೨. ಸವಿತಾ ನಾಗಭೂಷಣ, ಚಂದ್ರನನ್ನು ಕರೆಯಿರಿ ಭೂಮಿಗೆ, ಸಂವಾದ ಪ್ರಕಾಶನ, ಮಲ್ಲಾಡಿಹಳ್ಳಿ, ಚಿತ್ತದುರ್ಗ ಜಿಲ್ಲೆ.
೩. ಸವಿತಾ ನಾಗಭೂಷಣ, ಹೊಳೆಮಗಳು, ಪರಿಸರ ಸಾಹಿತ್ಯ ಪ್ರಕಾಶನ, ಶಿವಮೊಗ್ಗ.
೪. ಸವಿತಾ ನಾಗಭೂಷಣ, ಆಕಾಶ ಮಲ್ಲಿಗೆ, ನೆಲಮನೆ ಪ್ರಕಾಶನ, ರಂಗನಾಥನಗರ, ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆ.
೫. ಸವಿತಾ ನಾಗಭೂಷಣ, ಜಾತ್ರೆಯಲ್ಲಿ ಶಿವ, ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ.
೬. ಜಾನಕಿ, ಜಾನಕಿ ಕಾಲಂ, ಛಂದ ಪುಸ್ತಕ.
೭. ಶ್ರೀಕಂಠಕೂಡಿಗೆ, ಸಂ., ಜಾನಪದದ ವಿವಿಧ ಮುಖಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು-೮.
೮. ಲೇಖಕಿ-ಬೆಳ್ಳಿಹಬ್ಬದ ಪ್ರಕಟಣೆ, ಕರ್ನಾಟಕ ಲೇಖಕಿಯರ ಸಂಘ, ಚಾಮರಾಜವೇಟೆ, ಬೆಂಗಳೂರು-೮
೯. ಸುಮಿತ್ರಾಬಾಯಿ, ವಿಚಯ, ಇಳಾ ಪ್ರಕಾಶನ, ಬೆಂಗಳೂರು-೧೮.
10.Collected And Editted by Ramanujan, Folktales from India, National Book Trust India
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಮರಸ್ಯ
Next post ವಾಸಗೃಹ

ಸಣ್ಣ ಕತೆ

 • ಸ್ವಯಂಪ್ರಕಾಶ

  ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

 • ಹೃದಯದ ತೀರ್ಪು

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

 • ಮಾದಿತನ

  ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

 • ಸಂಶೋಧನೆ

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

 • ಸ್ನೇಹಲತಾ

  ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

cheap jordans|wholesale air max|wholesale jordans|wholesale jewelry|wholesale jerseys