ಅಧ್ಯಾಯ – ೧೦

ಎಸ್ಸೆಸ್ಸೆಲ್ಸಿ, ಪಿಯುಸಿ, ಕಾಲೇಜಿಗೆ ಬಂದ ವಿದ್ಯಾರ್ಥಿಗಳಲ್ಲಿ ಶೇಕಡಾ ೫೦ ರಷ್ಟು ಮಂದಿ ಧೂಮಪಾನ ಮಾಡಲು, ಮದ್ಯಪಾನ ಮಾಡಲು ಆಸೆ ಪಡುತ್ತಾರೆ. ಸ್ನೇಹಿತರ ಜೊತೆ ಸೇರಿ ಸಿಗರೇಟು ಸೇದುತ್ತಾರೆ. ಬೀರ್, ಬ್ರಾಂದಿ ಕುಡಿಯುತ್ತಾರೆ. ನಮ್ಮ ಸಮಾಜದಲ್ಲಿ ಹರೆಯದವರಲ್ಲಿ ಸಿಗರೇಟು ಬೀರ್ ಬ್ರಾಂದಿ ಬಗ್ಗೆ ಹಲವಾರು ಜನಪ್ರಿಯ ನಂಬಿಕೆ ನಿರೀಕ್ಷೆಗಳಿವೆ. ಉದಾಹರಣೆಗೆ

* ಸಿಗರೇಟು ಸೇದಿದರೆ ಏಕಾಗ್ರತೆ ಹೆಚ್ಚುತ್ತದೆ. ಟೆನ್ಶನ್ ಕಡಿಮೆಯಾಗುತ್ತದೆ.
* ಬೀರ್ ಬ್ರಾಂದಿ ಕುಡಿದರೆ, ಚರ್ಮದ ಬಣ್ಣ ಕೆಂಪಾಗುತ್ತದೆ. ಸ್ನಾಯುಗಳು ಹುರಿಗೊಳ್ಳುತ್ತವೆ.
* ಸಿಗರೇಟು ಸೇದುವುದು, ಪುರುಷತನದ ಲಕ್ಷಣ, ಸ್ವತಂತ್ರ ಮನಸ್ಸಿನ ಸೂಚಕ.
* ಬೀರ್ ಬ್ರಾಂದಿ ಸೇವನೆಯಿಂದ ಬೇಸರ, ದುಃಖ ನೋವು ಮರೆಯಾಗುತ್ತದೆ. ಖುಷಿ ಸಿಗುತ್ತದೆ.
* ಸಿಗರೇಟು ಸೇವನೆ ಸ್ಫೂರ್ತಿ ನೀಡುತ್ತದೆ. ಉತ್ಸಾಹವನ್ನು ಹೆಚ್ಚಿಸುತ್ತದೆ. ಚುರುಕುತನ ಬರುತ್ತದೆ.
* ಮದ್ಯಪಾನ ‘ರಿಲ್ಯಾಕ್ಸ್’ ಮಾಡುತ್ತೆ, ಟೈಂಪಾಸ್ ಆಗುತ್ತೆ. ಮನೋರಂಜನೆಯನ್ನು ನೀಡುತ್ತದೆ.
* ಸಿಗರೇಟು ಸೇದಿದರೆ ‘ಚಳಿ’ ಕಡಿಮೆಯಾಗುತ್ತದೆ. ಮೈ ಬಿಸಿಯಾಗುತ್ತದೆ. ಒಂಟಿಯಾಗಿದ್ದಾಗ ಇದೊಂದು ಉಪಯುಕ್ತ ಚಟುವಟಿಕೆ.
* ಜಗಳ ಮಾಡಲು ಪ್ರತಿಭಟಿಸಲು ವಿರೋಧವನ್ನು ವ್ಯಕ್ತಪಡಿಸಲು, ಮದ್ಯಪಾನ ಮನಸ್ಸಿಗೆ ಧೈರ್ಯವನ್ನುಂಟು ಮಾಡುತ್ತದೆ.
* ಸಂಪ್ರದಾಯದ ಸಂಕೋಲೆಗಳಿಂದ ಹೊರಬರಲು, ಆಧುನಿಕತೆಯನ್ನು ರೂಢಿಸಿಕೊಳ್ಳಲು ಆಹ್ಲಾದಕರ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಧೂಮಪಾನ, ಮದ್ಯಪಾನ ನೆರವಾಗುತ್ತದೆ.
* ಲೈಂಗಿಕ ಆಸೆ-ಚಟುವಟಿಕೆ ಹೆಚ್ಚಲು ಅದರಿಂದ ಸಂತೋಷಪಡಲು ಮದ್ಯಪಾನ ಬೇಕು ಇತ್ಯಾದಿ.

ಈ ಜನಪ್ರಿಯ ನಂಬಿಕೆಗಳು ವಿದ್ಯಾರ್ಥಿಯನ್ನು ಧೂಮಪಾನ ಮಾಡಲು, ಮದ್ಯ ಸೇವಿಸಲು ಪ್ರೇರೇಪಿಸುತ್ತದೆ. ಸಹಪಾಠಿಗಳೂ, ಸಮ ವಯಸ್ಕರು ಮತ್ತು ಇತರರು ಸೇದುವುದನ್ನು, ಕುಡಿಯುವುದನ್ನೂ ನೋಡಿದಾಗ ತಾನೂ ಏಕೆ ಸೇದಬಾರದು, ಕುಡಿಯಬಾರದೆನಿಸುವುದು ಸಹಜ. ಜೊತೆಗೆ ಸ್ನೇಹಿತರು ‘ಬಾರಯ್ಯ, ಒಂದು ದಂ ಎಳಿ’ ಎಂದಾಗ, ‘ಒಂದು ಗುಟುಕು ಕುಡಿ’ ಎಂದಾಗ, ಒಲ್ಲೆ ಎನ್ನಲು ಆಗುವುದಿಲ್ಲ. ಬೇಡ, ಒಲ್ಲೆ ಎಂದರೆ, ಸಿಗರೇಟು ಸೇದುವುದು, ಕುಡಿಯುವುದು, ಒಳ್ಳೆಯದಲ್ಲ. ದೊಡ್ಡವರಿಗೆ ಗೊತ್ತಾದರೆ ಬೈಯ್ಯುತ್ತಾರೆ. ಶಿಕ್ಷಿಸುತ್ತಾರೆ ಎಂದು ವಿದ್ಯಾರ್ಥಿ ಹೇಳಿದರೆ ಉಳಿದವರು ನಗುತ್ತಾರೆ. ನಿಮ್ಮಪ್ಪ, ನಮ್ಮಪ್ಪನೇ ಸಿಗರೇಟು ಸೇದುತ್ತಾರೆ. ಟೀಚರ್‌ಗಳೇ ಸೇದುತ್ತಾರೆ. ಎಷ್ಟು ಜನ ಕುಡಿಯುತ್ತಾರೆ. ಅವರೆಲ್ಲ ಕೆಟ್ಟವರೇ, ಖಂಡಿತ ಇಲ್ಲ. ನೀನು ಸೇದುವುದು, ಕುಡಿಯುವುದನ್ನು ನಾವು ದೊಡ್ಡವರಿಗೆ ಹೇಳುವುದಿಲ್ಲ ಹೆದರಬೇಡ. ಅಲ್ಲದೆ ನಾವು ಏಕೆ ಹೆದರಬೇಕು. ಸರ್ಕಾರವೇ ಸಿಗರೇಟು ಸೇದಲು ಕುಡಿಯಲು ಪರವಾನಗಿ ಕೊಟ್ಟಿದೆ. ಏಕೆ ಯೋಚಿಸುತ್ತೀಯಾ ಎಂದು ಸೇದಲು, ಕುಡಿಯಲು ಉತ್ತೇಜಿಸುತ್ತಾರೆ. ಆವಾಗಲೂ ಹುಡುಗ ಬೇಡಪ್ಪ ನಾನೊಲ್ಲೆ ಎಂದರೆ, ಅವನನ್ನು ಪರಿಹಾಸ್ಯ ಮಾಡುತ್ತಾರೆ. ನೀನು ಗಂಡಸೇ ಅಲ್ಲ ನಿನಗೆ ಧೈರ್ಯವೇ ಇಲ್ಲ. ಅಂಜುಬುರುಕ ನೀನು, ಹಳೆಯ ಕಾಲದವನಂತೆ ಆಡಬೇಡ. ಸೇದಿ, ಕುಡಿದು ಮಜ ಮಾಡುವುದೇ ಆಧುನಿಕತೆ, ನೀನೊಬ್ಬ ಗೊಷ್ಲು ಎಂದು ಹೀಗಳೆಯುತ್ತಾರೆ. ಗಾಂಧಿ, ಸನ್ಯಾಸಿ, ನಾಲಾಯಕ್ ಎಂದು ರೇಗಿಸುತ್ತಾರೆ. ಸೇದಲು, ಕುಡಿಯಲು ಒತ್ತಾಯ ಮಾಡುತ್ತಾರೆ. ಕಡೆಗೆ ಹುಡುಗ ಸಿಗರೇಟು ಸೇದುವಂತೆ ಬೀರ್ ಬ್ರಾಂದಿ ಕುಡಿಯುವಂತೆ ಮಾಡುವುದರಲ್ಲಿ ಯಶಸ್ವಿಯಾಗುತ್ತಾರೆ. ಆಗೊಮ್ಮೆ ಈಗೊಮ್ಮೆ ಸೇದುವುದು, ಕುಡಿಯುವುದು, ತಪ್ಪಲ್ಲ ಎಂದು ನಂಬಿಸುತ್ತಾರೆ. ಕ್ರಮೇಣ ಹುಡುಗ ಸಿಗರೇಟು, ಬೀರ್ ಬ್ರಾಂದಿಯ ಸೇವನೆಯ ಅಭ್ಯಾಸ ಮಾಡಿಕೊಳ್ಳುತ್ತಾನೆ. ಮನೆಯವರಿಗೆ ಕಾಣದಂತೆ ದುಶ್ಚಟ-ದುರಭ್ಯಾಸಕ್ಕೆ ಒಳಗಾಗುತ್ತಾನೆ.

ಅವಲಂಬನೆ, ಅನಾರೋಗ್ಯ
ಸಿಗರೇಟಿನ ನಿಕೋಟಿನ್, ಮದ್ಯಸಾರದ ‘ಆಲೋಹಾಲ್’ ಮಾನಸಿಕ ಮತ್ತು ದೈಹಿಕ ಅವಲಂಬನೆಯನ್ನುಂಟು ಮಾಡುವ ರಾಸಾಯನಿಕಗಳು. ಪ್ರಾರಂಭದಲ್ಲಿ ನಾನು ಚೆನ್ನಾಗಿದ್ದೇನೆ. ಒತ್ತಡ ಬೇಸರ ಕಡಿಮೆಯಾಗಿ ಖುಷಿಯಾಗಿದ್ದೇನೆ ಎಂಬ ಭ್ರಮೆಯನ್ನುಂಟುಮಾಡುತ್ತವೆ. ಈ ಲಾಭ ಅನುಕೂಲಕ್ಕಾಗಿ ಪದೇ ಪದೇ ಸೇದುವ – ಕುಡಿಯುವ ಆಸೆ ಬಯಕೆಯನ್ನು ಸೃಷ್ಟಿಸುತ್ತವೆ. ಒತ್ತಾಸೆಯನ್ನುಂಟುಮಾಡುತ್ತವೆ. ಚಟ ಬೆಳೆಸುತ್ತವೆ. ಸೇದದೇ ಕುಡಿಯದೇ ಇರಲು ವ್ಯಕ್ತಿಗೆ ಆಗದಂತಹ ಸ್ಥಿತಿಯನ್ನು ತರುತ್ತವೆ. ನಿಕೋಟಿನ್ ಮದ್ಯಸಾರವು ನಮ್ಮ ದೇಹದ ಪ್ರಮುಖ ಅಂಗಗಳಾದ ಮಿದುಳು ನರಮಂಡಲ, ಲಿವರ್, ಜಠರ-ಕರುಳು, ಹೃದಯ, ಶ್ವಾಸಕೋಶ, ಮೂತ್ರಜನಕಾಂಗವನ್ನು ಹಾಳು ಮಾಡುತ್ತವೆ. ಹಲವಾರು ವರ್ಷಗಳ ಧೂಮಪಾನ – ಮದ್ಯಪಾನದಿಂದ ಬರುವ ಕಾಯಿಲೆಗಳ ಪಟ್ಟಿ ದೊಡ್ಡದೇ.

* ಬಾಯಿ-ಶ್ವಾಸನಾಳ – ಶ್ವಾಸಕೋಶಗಳ ಕ್ಯಾನ್ಸರ್‌.
* ಹೃದಯಘಾತ, ಹೃದ್ರೋಗಗಳು.
* ಲಿವರ್ ಹಾನಿ – ಸಿರೋಸಿಸ್
* ಜಠರ – ಕರುಳಿನಲ್ಲಿ ಹುಣ್ಣು (ಪೆಪ್ಟಿಕ್ ಅಲ್ಸರ್)
* ಮರೆವು, ಕಲಿಕೆ ನಿಧಾನವಾಗುವುದು. ಗೊಂದಲ, ಸರಿ-ನಿರ್ಧಾರಗಳನ್ನು ಮಾಡಲಾಗದಿರುವುದು.
* ವಿಪರೀತ ಭಯ, ದುಃಖ-ಕೋಪ, ಭಾವೋದ್ವೇಗ ಉಂಟಾಗುವುದು. ಆತ್ಮಹತ್ಯೆ, ಹಿಂಸಾಚಾರದಲ್ಲಿ ತೊಡಗುವುದು, ಕೋಪ-ದ್ವೇಷವನ್ನು ಸಾಧಿಸುವುದು. ಸಂಬಂಧಗಳು ಹಾಳಾಗುವುದು, ಸ್ಥಾನಮಾನದ ನಷ್ಟ, ಸಾಮಾಜಿಕ ತಿರಸ್ಕಾರ-ಕಳಂಕಕ್ಕೆ ಒಳಗಾಗುವುದು. ಅಪರಾಧ ಮಾಡುವುದು.
* ಮೂತ್ರಪಿಂಡದ ವೈಫಲ್ಯ.
* ಅಪೌಷ್ಟಿಕತೆಯುಂಟಾಗುವುದು. ರಕ್ತ ಕೊರೆಯುಂಟಾಗುವುದು.
* ದೃಷ್ಟಿ, ಶ್ರವಣ ಶಕ್ತಿ ಕುಂದುವುದು.
* ವ್ಯಕ್ತಿಯ ಶಿಸ್ತು, ಪ್ರಾಮಾಣಿಕತೆ, ನೈತಿಕ ಮೌಲ್ಯಗಳು, ಜೀವನೋತ್ಸಾಹಗಳು ತಗ್ಗುತ್ತವೆ.

ಆದ್ದರಿಂದ ಎಷ್ಟೇ ಒತ್ತಾಯ ಬರಲಿ, ಗೆಳೆಯರು ಎಷ್ಟೇ ಪ್ರೇರೇಪಿಸಲಿ, ಟಿವಿ, ಸಿನೆಮಾ ವಿದ್ಯುನ್ಮಾನಗಳಲ್ಲಿ ಆಕರ್ಷಣೀಯ ಜಾಹೀರಾತು ಅಥವಾ ಪ್ರಚೋದನೆಗಳು ಬರಲಿ, ಧೂಮಪಾನವನ್ನು ಶುರುಮಾಡಬೇಡಿ. ಬೀರ್ ಬ್ರಾಂದಿಯ ರುಚಿ ನೋಡಬೇಡಿ. ಬೇಡ, ನಾನು ಸಿಗರೇಟು ಸೇದುವುದಿಲ್ಲ. ನಾನು ಮದ್ಯಪಾನ ಮಾಡುವುದಿಲ್ಲ ಎಂದು ನಿರ್ಧರಿಸಿ, ಗೆಳೆಯರು ಗೇಲಿಗೆ, ಪರಿಹಾಸ್ಯಕ್ಕೆ ಸೊಪ್ಪು ಹಾಕಬೇಡಿ. ಒತ್ತಾಯಕ್ಕೆ ಬ್ಲಾಕ್‌ಮೇಲ್ ತಂತ್ರಕ್ಕೆ ಬಲಿಯಾಗಬೇಡಿ. ದುಶ್ಚಟದ ದುರಂತದ ಹಾದಿಯಲ್ಲಿ ನಡೆಯಬೇಡಿ.
*****

ಡಾ || ಚಂದ್ರಶೇಖರ್‍ ಸಿ ಆರ್‍