ಕನ್ನಡ ಕಥಾಲೋಕಕ್ಕೊಂದು ಸುತ್ತು…

ಕನ್ನಡ ಕಥಾಲೋಕಕ್ಕೊಂದು ಸುತ್ತು…

ಕನ್ನಡದಲ್ಲಿ ಸಣ್ಣ ಕತೆಗಳಿಗೆ ಪ್ರಾಚೀನ ಇತಿಹಾಸವಿಲ್ಲ. ಇದರ ಬೆಳವಣಿಗೆಯನ್ನು ೧೯೦೦ರಿಂದಲೇ ಗುರುತಿಸಬಹುದಾಗಿದೆ. ಕಥೆ ಹೇಳುವ ಪದ್ಧತಿಯನ್ನು ೧೦-೧೨ನೇ ಶತಮಾನದ ‘ವಡ್ಡಾರಾಧನೆ’ ಮತ್ತು ‘ಪಂಚತಂತ್ರ’ದಲ್ಲಿ ನಾವು ಕಂಡರೂ ಅವುಗಳ ಸ್ವರೂಪ ಮತ್ತು ಉದ್ದೇಶ ಬೇರೆಯೇ ಆಗಿತ್ತು. ಜೀವನದ ಒಂದು ಮಹತ್ವದ ಘಟನೆಯನ್ನು ಇನ್ನೊಬ್ಬನಿಗೆ ಹೇಳುವ ಕಲೆಯೇ ಕಥೆ ಎಂದು ಮಹಾಭಾರತದಿಂದ ತಿಳಿಯುತ್ತದೆ. ‘ಕೇಳುಜನಮೇಜಯ’ ಎಂದು ಕಥೆ ಕೇಳುಗನನ್ನು ಉದ್ದೇಶಿಸಿ ಸಂಬೋಧಿಸುವ ಮರ್ಮವೇ ಅದು.

ಪಂಜೆ ಮಂಗೇಶರಾಯರು, ಕೆರೂರು ವಾಸುದೇವಾಚಾರ್ಯರು, ಎಂ.ಎನ್.ಕಾಮತ್ ಆರಂಭದ ಕತೆಗಾರರು. ಅವರು ಸುವಾಸಿನಿ, ಸುಭೋದಿನಿ ಪತ್ರಿಕೆಗಳಿಗೆ ಬರೆಯುತ್ತಿದ್ದರು. ‘ನನ್ನ ಚಿಕ್ಕ-ತಾಯಿ’, ‘ಕಡೆಕಂಜಿ’ ‘ಮಲ್ಲೇಶಿಯ ನಲ್ಲೆಯರು’ ಪತ್ರಿಕೆಯ ಮುಖಾಂತರ ಪ್ರಕಟವಾದ ವ್ಯಕ್ತಿಯ ಸಾಮಾಜಿಕ ಬದುಕಿನ ಒಂದು ಸಾಮಾನ್ಯ ಮಗ್ಗಲನ್ನು ಚಿತ್ರಿಸುವ ಕತೆಗಳು. ಸಣ್ಣಕತೆಗೆ ಶ್ರೀನಿವಾಸ (ಮಾಸ್ತಿ ವೆಂಕಟೇಶ ಅಯ್ಯಂಗಾರ) ಪ್ರವೇಶ ಮಾಡುವವರೆಗೂ ಅದಕ್ಕೊಂದು ಸ್ಪಷ್ಟ ಸ್ವರೂಪ ಬಂದಿರಲಿಲ್ಲ. ಬದುಕಿನ ಅನೇಕ ಸಂಗತಿಗಳನ್ನು ಗಂಭೀರ ಚಿಂತನೆಗೆ ಒಳಪಡಿಸಿ ಹೇಳುವ ಪ್ರಭಾವಶಾಲೀ ಮಾಧ್ಯಮವನ್ನಾಗಿ ಕತೆಯನ್ನು ಶ್ರೀನಿವಾಸರು ಮಾಡಿದರು. ಅದಕ್ಕೆ ತಕ್ಕ ರೀತಿಯಲ್ಲಿ, ಭಾಷೆಯನ್ನು ಸಜ್ಜುಗೊಳಿಸಿದರು. ಕೇರೂರರ ಕತೆಗಳಲ್ಲಿ ಆರಂಭದ ಮರಾಠಿ ಮತ್ತು ಹತ್ತೊಂಬತ್ತನೇ ಶತಮಾನದ ಕೊನೆಯ ಇಂಗ್ಲೀಷ್ ಕತೆಗಳ ಮಾದರಿಯನ್ನು ಕಾಣಬಹುದು. ತಂತ್ರದ ದೃಷ್ಟಿಯಿಂದ ‘ಸಂಪೂರ್ಣ ಕತೆ’ (Complete story)ಯ ಬರವಣಿಗೆ ‘ಮಲ್ಲೇಶಯ ನಲ್ಲೆಯರು’ ‘ತೊಳೆದ ಮುತ್ತು’ ಕತೆಗಳದ್ದಾಗಿದೆ. ಪತ್ರಿಕೆಗಾಗಿ ಕತೆಗಳನ್ನು ೧೯೨೦ರ ತನಕವೂ ಅಗತ್ಯವೆಂದುಕೊಂಡು ಬರೆಯುವ ಪರಿಪಾಠವಿತ್ತು. ಅದೇ ವರ್ಷದ ಶ್ರೀನಿವಾಸರ ‘ಕೆಲವು ಸಣ್ಣ ಕತೆಗಳು’ ಪ್ರಕಟವಾದ ನಂತರ ಸ್ವರೂಪದ ಕಲ್ಪನೆಯನ್ನು ಮಾಡುವುದು ಸಾಧ್ಯವಾಯಿತು.

ಶ್ರೀನಿವಾಸರ ಕತೆಗಳು

ಸಣ್ಣ ಕತೆಯ ಇತಿಹಾಸದಲ್ಲಿ ೧೯೨೦ರಲ್ಲಿ ಹೊರಬಂದ ಶ್ರೀನಿವಾಸರ ‘ಕೆಲವು ಸಣ್ಣ ಕತೆಗಳು’ ಅತ್ಯಂತ ಮಹತ್ವದ ಸಂಗ್ರಹ. ಮಹಾಕಾವ್ಯ, ಪುರಾಣಗಳ ವಸ್ತು ವ್ಯಕ್ತಿಗಳನ್ನು ಕುರಿತು ಕತೆ ಬರೆಯುವ ಸಂಪ್ರದಾಯವನ್ನು ಬಿಟ್ಟು ಜೀವನಾನುಭವವನ್ನು ಸಾಹಿತ್ಯಕ್ಕೆ ಪ್ರಸ್ತುತ ವಿಷಯವನ್ನಾಗಿ ಉಪಯೋಗಿಸಿಕೊಳ್ಳಬಹುದೆಂದು ಆ ಕೃತಿ ತೋರಿಸಿಕೊಟ್ಟಿತು. ನವೋದಯದ ಕನ್ನಡ ಗದ್ಯಕ್ಕೆ ಉಪಯುಕ್ತವಾದ ಸಾಹಿತ್ಯ ಮಾಧ್ಯಮ ಕತೆ ಎಂಬ ಮನವರಿಕೆಯನ್ನು ಮಾಡಿಸಿತು. ಶ್ರೀನಿವಾಸರು ಆ ನಂತರ ಕತೆಯನ್ನು ಜೀವನದೃಷ್ಟಿಯ ಅಭಿವ್ಯಕ್ತಿಯನ್ನಾಗಿ ಉಪಯೋಗಿಸಿಕೊಂಡರು. ಆ ಒಂದೇ ಬಗೆಯನ್ನು ನಿಷ್ಠೆಯಿಂದ ತನ್ನ ಸೃಜನ ಕಲೆಯ ಪ್ರಮುಖ ವ್ಯವಸಾಯವನ್ನಾಗಿ ಮಾಡಿಕೊಂಡರು. ಅವರು ಬರೆದ ನೂರಾರು ಕತೆಗಳು ಕನ್ನಡವಷ್ಟೇ ಅಲ್ಲ ಭಾರತೀಯರ ಉತ್ತಮ ಕಥಾ ಸಾಹಿತ್ಯವಾಗಿ ಎಂದಿಗೂ ಉಳಿಯುತ್ತವೆ. ಅವರ ಕತೆಗಳ ವಸ್ತು ವೈವಿಧ್ಯ ಬೆರಗುಗೊಳಿಸುವಂತಿದೆ. ಆ ಕತೆಗಳಲ್ಲಿ ಬರುವ ವ್ಯಕ್ತಿಗಳು ನೂರಾರು. ಮನುಷ್ಯ ಸಂಬಂಧಗಳ ಅನುಭವ ಹಲವು ಬಗೆಯದು. ಪಾದ್ರಿಗಳು, ಪಾಶ್ಚಾತ್ಯರು, ಕವಿಗಳು, ಪಂಡಿತರು, ಋಷಿಗಳು, ಋಷಿ ಕನ್ಯೆಯರು, ಸೂಳೆಯರು, ಪತಿವೃತೆಯರು, ಹಳ್ಳಿಯವರು, ಪಟ್ಟಣಿಗರು, ವೀರರು, ಅರಸರು, ಕೊಲೆಗಾರರು, ಕಳ್ಳರು, ಸಾಧುಗಳು, ಸಂತರು ಹೀಗೆ ಪಾತ್ರಗಳ ವ್ಯಾಪ್ತಿ. ಮಾನವೀಯ ಕೊರಗುಗಳ ವ್ಯಾಪ್ತಿ ಶ್ರೀನಿವಾಸರು ಕಥಾಸಾಹಿತ್ಯಕ್ಕೆ ಕೊಟ್ಟ ಅಪೂರ್ವ ಸಂಪತ್ತು. ಅವರ ಭಾಷೆಯ ಸರಳತೆ, ಶೈಲಿಯ ಸುಗಮತೆ ಕಥನ ಪದ್ಧತಿಗೆ ಮೋಹಕವಾಗಿ ಅಂಟಿಕೊಳ್ಳುತ್ತದೆ. ಪುರಾಣ, ರಾಜಕೀಯ, ಸಾಮಾಜಿಕ ನೆಲೆಯಲ್ಲಿ ಅವರ ಜೀವನದೃಷ್ಟಿ ವಿಚಾರಶೀಲಗೊಂಡು ಕತೆಯ ಘನತೆಯನ್ನು ಪ್ರಮಾಣಬದ್ಧವಾಗಿ ಹೆಚ್ಚಿಸುತ್ತದೆ. ಗಂಡು ಹೆಣ್ಣಿನ ಸಂಬಂಧದಲ್ಲಿ ಅವರು ಕಂಡುಕೊಂಡ ಆದರ್ಶ, ಪರಿಶುದ್ಧಿ ಹೆಣ್ಣಿನ ಕುರಿತಾದ ಗೌರವ, ಪವಿತ್ರ ಭಾವನೆಗಳನ್ನು ಕೇವಲ ಸನಾತನ ಶ್ರದ್ಧೆ ಎನ್ನಲಾಗುವುದಿಲ್ಲ. ಅದು ಶ್ರೀನಿವಾಸರ ಜೀವನ ಶ್ರದ್ಧೆ, ಅವರ ಸಾಹಿತ್ಯದ ಗುಣಮೌಲ್ಯವಾಗಿದೆ.

ಶ್ರೀನಿವಾಸರ ಸಂಪ್ರದಾಯದಲ್ಲಿ ಬೆಳೆದ ಕತೆಗಾರರಲ್ಲಿ ಅನಂದ, ಆನಂದಕಂದ, ಕೃಷ್ಣಕುಮಾರ ಕಲ್ಲೂರ ಪ್ರಮುಖರು. ಆನಂದರ ‘ಮಾಟಗಾತಿ’ ನಾನು ‘ಕೊಂದ ಹುಡುಗಿ’ ರಮ್ಯ ಕೌತುಕಗಳ ತಂತ್ರದಿಂದ ಓಹೆನ್ರಿ ಕತೆಗಳನ್ನು ನೆನಪಿಗೆ ತರುತ್ತದೆ. ಅವರು ಕತಾ ಬರವಣಿಗೆಯನ್ನು ದುಡಿಸಿಕೊಳ್ಳದೆ ನಿಲ್ಲಿಸಿದ್ದು ದುರ್ದೈವ. ಶ್ರೀನಿವಾಸರ ಪ್ರಭಾವದಿಂದ ಕನ್ನಡದಲ್ಲಿ ಕತೆಗಳು, ಕತೆಗಾರರು ಸಂಖ್ಯೆಯಲ್ಲಿ ಬೆಳೆದರೂ ಈ ಒಂದೇ ಪ್ರಕಾರವನ್ನು ಶ್ರೀನಿವಾಸರು ಮಾತ್ರ ಮುಂದುವರಿಸಿದರು. ಉಳಿದವರು ‘ಕತೆ ಜೀವನಾನುಭೂತಿಯನ್ನು ವ್ಯಕ್ತಪಡಿಸುವ ಸಶಕ್ತ ಮಾಧ್ಯಮ’ವೆಂದು ತಿಳಿದು ಪ್ರಾಮಾಣಿಕವಾಗಿ ಕೃಷಿಯನ್ನು ಮಾಡಲಿಲ್ಲ. ರಂ.ಶ್ರೀ ಮುಗಳಿ, ಗೋಪಾಲ ಕೃಷ್ಣರಾಯರು, ಗೌರಮ್ಮ, ಬೇಂದ್ರೆ, ಪುಟ್ಟಪ್ಪ, ಕಾರಂತರು, ಶ್ರೀನಿವಾಸರ ಜೊತೆ ಜೊತೆಗೆಯೆ ಕತೆಯನ್ನು ಬರೆದರೂ ಅವರ ಒಲವು ಸಾಹಿತ್ಯದ ಬೇರೆ ಪ್ರಕಾರಗಳತ್ತ ಹೊರಳಿ ಅವರು ಪ್ರಸಿದ್ಧ ಕವಿಯೋ, ಕಾದಂಬರಿ ನಾಟಕಕಾರರೂ ಆದರು. ಅವರು ಬರೆದ ಕತೆಗಳು ವ್ಯಕ್ತಿಯ ಸಾಮಾಜಿಕ ಸಮಸ್ಯೆಗಳನ್ನು ಅಭಿವ್ಯಕ್ತಿಸುವಷ್ಟು ಮಾತ್ರ ಉದ್ದೇಶವನ್ನು ಪಡೆದವು.

ಪ್ರಗತಿಶೀಲ-ನವ್ಯಕತೆಗಳು

ಮುಂದೆ ದೇಶಕ್ಕೆ ಸ್ವಾತಂತ್ರದೊಂದಿಗೆ ಪ್ರಜಾಸತ್ತೆ ಬಂದಾಗ ಒಮ್ಮೆ ಲೇಖಕರ ಚಿಂತನೆ ಬೇರೆ ದಿಶೆಯನ್ನು ಅನುಸರಿಸಿತು. ರಶ್ಶಿಯನ್ ಕ್ರಾಂತಿಯ ಫಲಸ್ವರೂಪವಾಗಿ ಪ್ರಚಾರಗೊಂಡ ಮಾರ್ಕ್ಸ್‌ವಾದ ಪ್ರಗತಿಶೀಲ ಚಿಂತನಕ್ಕೆ ಅವರನ್ನು ಒಳಪಡಿಸಿತು. ಇದರಿಂದ ಸ್ವತಂತ್ರ್ಯ ದೇಶದ ತಾತ್ಕಾಲಿಕ ಸಾಮಾಜಿಕ ವ್ಯವಸ್ಥೆಯ ದೋಷಗಳು ಸ್ಫುಟವಾಗಿ ಗೋಚರಗೊಂಡು ಕತೆಗಾರರಿಗೆ ವಿಷಯವನ್ನು ಒದಗಿಸಿದವು. ಪತ್ರಿಕೆಗಳು ಹೊಸ ಬಗೆಯೆ ಕತೆಗಳನ್ನು ಪ್ರಕಟಿಸಿದವು. ಅ.ನ.ಕೃಷ್ಣರಾಯ, ನಿರಂಜನ, ಬಸವರಾಜ ಕಟ್ಟೇಮನಿ, ಕೋ.ಚೆನ್ನಬಸಪ್ಪ, ತ.ರಾ.ಸು. ಮೊದಲಾದವರು ಜನಪರವೆನ್ನಬಹುದಾದ ‘ಪ್ರಗತಿಶೀಲ’ ವಿಚಾರಗಳ ಅನೇಕಾನೇಕ ಕತೆಗಳನ್ನು ಬರೆದರು. ೧೯೫೦ರವರೆಗೂ ಈ ಬಗೆಯ ಸಾಹಿತ್ಯ ಕ್ರಾಂತಿಯು ಸಾಹಿತ್ಯ ಪ್ರಚಾರವನ್ನು ಮಾಡಿತು. ಈ ಸಂದರ್ಭದಲ್ಲಿ ಕಥಾ ಸಾಹಿತ್ಯದ ವೈವಿಧ್ಯ ನಷ್ಟವಾಗದಂತೆ ಮತ್ತೆ ಶ್ರೀನಿವಾಸರೇ ನೋಡಿಕೊಂಡರು. ಅವರ ಪ್ರಭಾವದಿಂದಲೆ ವರ್ಗ ಸಂಘರ್ಷದ ವಿಷಯದಿಂದ ಬದಿಗೆ ಸರಿದು ವ್ಯಕ್ತಿಯ, ಕುಟುಂಬದ ಕುರಿತು ಕತೆಯನ್ನು ಬರೆಯಲು ಲೇಖಕರು ಮುಂದಾದರು. ಈ ಹಿನ್ನೆಲೆಯಲ್ಲಿಯೇ ನವ್ಯ ಕತೆಗಳು ಜನ್ಮ ತಾಳಿದವು. ಜೊತೆಗೆ ಆಂಗ್ಲ ಕತೆ, ಕಾದಂಬರಿಗಳ ಸಹವಾಸವೂ ಉಂಟಾಗಿ ಯು.ಆರ್.ಅನಂತಮೂರ್‍ತಿ, ಪಿ.ಲಂಕೇಶ, ಸದಾಶಿವ, ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿ ಮೊದಲಾದ ಪ್ರತಿಭಾವಂತ ಕತೆಗಾರರು ಕನ್ನಡ ಕೃಷಿಯನ್ನು ಬೆಳೆಸಿದರು. ಮನುಷ್ಯನನ್ನು ವೈಯಕ್ತಿಕ ನೆಲೆಯಲ್ಲಿ ಹುಡುಕುವ, ಮನೋವೈಜ್ಞಾನಿಕ ತಂತ್ರದಿಂದ ವ್ಯಕ್ತಿಗತ ಸಂಬಂಧ-ಸಂವೇದನೆಗಳನ್ನು ಹೊರಪಡಿಸುವ ಮಟ್ಟದ ಕತೆಗಳನ್ನು ಬರೆದರು. ವ್ಯಕ್ತಿ ಕೇಂದ್ರ ಬಿಂದುವಾಗಿ, ಅವನ ಸ್ವಭಾವದ ಹಲವಾರು ಮುಖಗಳು ಕತೆಗಾರನ ಅಧ್ಯಯನದ ವಿಷಯವಾಯಿತು. ಅನಂತಮೂರ್ತಿ, ಚಿತ್ತಾಲ, ಲಂಕೇಶ, ದೇಸಾಯಿ ಕತೆಗಳು ಓದುಗರ ಒಂದು ಹೊಸ ಜಗತ್ತನ್ನು ನಿರ್ಮಿಸಿದವು. ಸಾಮಾನ್ಯ ಓದುಗರಿಂದ ಕಥಾ ಸಾಹಿತ್ಯ ಶಿಕ್ಷಿತರ (Elite Readers) ಕಡೆಗೆ ಸರಿಯಿತು. ಮೊದಲು ಇರದಿದ್ದ ಪತ್ರಿಕಾ ವಿಮರ್ಶೆ ನವ್ಯಕತೆ- ಕಾದಂಬರಿಗಳಿಗೆ ಪ್ರಚಾರದ ಹೊಸ ಆಯಾಮವನ್ನು ಕಲ್ಪಿಸಿಕೊಟ್ಟಿತು. ಫಲಸ್ವರೂಪವಾಗಿ ಇದರಲ್ಲಿ ಅನೇಕ ರೀತಿಯ ಪ್ರಯೋಗಗಳು ನಡೆದವು. ಭಾಷೆಯನ್ನು ಮಾರ್ಮಿಕ, ನವ್ಯಗೊಳಿಸುವ ಪ್ರಯತ್ನ ಸತತ ನಡೆಯಿತು. ಲಂಕೇಶರು ಪತ್ರಿಕಾ ವ್ಯವಸಾಯದಲ್ಲಿ ಬಿದ್ದು ಕತೆ ಬರೆಯುವದನ್ನು ಕಡಿಮೆ ಮಾಡಿದರು. ಅನಂತಮೂರ್ತಿ ಕಾದಂಬರಿ, ವಿಮರ್ಶೆ, ಶಿಕ್ಷಣಗಳಿಗೆ ಹೆಚ್ಚು ಸಮಯವನ್ನು ಕೊಡಹತ್ತಿದರು. ಚಿತ್ತಾಲ ಮಾನವ ವಿಕಾಸವಾದ ಪರಿಶೋಧನೆಯಲ್ಲಿ ಮನುಷ್ಯ ಸಂಬಂಧಗಳ ಆಳ-ವಿಸ್ತಾರ-ಸೂಕ್ಷ್ಮತೆಗಳನ್ನು ಹುಡುಕತೊಡಗಿದರು. ವ್ಯಕ್ತಿಯ ಮನಸ್ಸನ್ನು ಬಗೆಬಗೆಯಾಗಿ ನಿರೂಪಿಸಲು ಭಾಷಾ ಸೃಜನವನ್ನು ಮಾಡಿದರು. ಸಿದ್ಧಾರ್ಥ, ಕತೆಯಾದಳು ಹುಡುಗಿ, ಹುಡುಕಾಟ, ಬೇನ್ಯಾ ಅವರ ಕೆಲವು ಉತ್ಕೃಷ್ಟ ಕತೆಗಳು. ಶಾಂತಿನಾಥ ದೇಸಾಯಿ ಮಂಜುಗಡ್ಡೆ, ದಂಡೆ ಮುಂತಾದ ಕತೆಗಳಲ್ಲಿ ರಮ್ಯ ಸನ್ನಿವೇಶ, ಪಾತ್ರಗಳ ವಿಕ್ಷಿಪ್ತ ಮನೋಸ್ಥಿತಿಗಳನ್ನು ದೇಸೀ ಸೊಗಸಿನ ಭಾಷಾ ಶೈಲಿಯಿಂದ ಮನೋಜ್ಞವಾಗಿ ಚಿತ್ರಿಸಿದರು.

ನಿರ್ಲಿಪ್ತ ಕತೆಗಾರರು

ಯಾವುದೇ ಪಕ್ಷ ಅಥವಾ ಪ್ರಕಾರಗಳ ಮೋಹಕ್ಕೆ ಬೀಳದೆ, ಎಲ್ಲಾ ಕಡೆಯಿಂದ ದೊರಕುವ ಜೀವನಾನುಭವ, ಚಿಂತನಗಳನ್ನು ಕಾಳಜಿ ಪೂರ್ವಕವಾಗಿ ಚಿತ್ರಿಸಿದ ಕೆಲವು ವಿಶಿಷ್ಟ ಕತೆಗಾರರಿದ್ದಾರೆ. ಅವರಲ್ಲಿ ಮುಖ್ಯವಾಗಿ ಅಶ್ವತ್ಥ, ವ್ಯಾಸರಾಯ ಬಲ್ಲಾಳ, ನಾರಂಗಿಭಟ್ಟ, ಶ್ರೀಕೃಷ್ಣ ಆಲನಹಳ್ಳಿ, ತ್ರಿವೇಣಿ, ಪೂರ್ಣಚಂದ್ರ ತೇಜಸ್ವಿ, ಎಂ.ಕೆ.ಇಂದಿರಾ, ಅನುಪಮಾ ನಿರಂಜನ, ಸೀತರಾಮಯ್ಯ ಅವರನ್ನು ಉಲ್ಲೇಖಿಸುವುದು ಅವಶ್ಯ. ಇವರಲ್ಲಿ ಯಾರನ್ನೂ ಪ್ರಗತಿಶೀಲ, ನವ್ಯ, ಅತಿನವ್ಯ ಎಂಬ ಚೀಟಿ ಹಚ್ಚಿ ಕರೆಯುವುದು ಉಚಿತವಲ್ಲ. ಇವರು ತಮ್ಮ ಸುತ್ತಮುತ್ತಲಿನ ಅಗತ್ಯದ ವಿಷಯಗಳಿಗೆ ಅಷ್ಟೇ ಆತುರತೆಯಿಂದ ಸ್ಪಂದಿಸಿದ್ದಾರೆ. ವ್ಯಾಸರಾಯ ಬಲ್ಲಾಳರು ಮುಂಬಯಿ ನಗರದ ವೈಭವಪೂರ್ಣ ವಾತಾವರಣದಿಂದ ಪ್ರೇರಣೆಯನ್ನು ಪಡೆದು ನೌಕರ ವರ್ಗದ ಸಂವೇದನೆಗಳನ್ನು ಪರಿಣಾಮಕಾರಿಯಾಗಿ ತಮ್ಮ ಕತೆಗಳನ್ನು ಮೂಡಿಸಿದ್ದಾರೆ. ಹುಲಿಯೂರಿನ ಸರಹದ್ದು, ತಬರನ ಕತೆ, ಕುಬಿ ಮತ್ತು ಇಯಾಲದಂಥ ಅಪೂರ್ವ ಕತೆಗಳಲ್ಲಿ ತೇಜಸ್ವಿಯವರು ಸಮಾಜವಾದೀ ಸಿದ್ಧಾಂತಗಳನ್ನು ಸಾಂದ್ರತೆಯಿಂದ ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ.

ಕರ್ನಾಟಕ ಮತ್ತು ಮುಂಬಯಿಯ ಎಲ್ಲಡೆಯಲ್ಲಿಯೂ ಹಬ್ಬಿರುವ ಬಗೆಬಗೆಯ ಪತ್ರಿಕೆಗಳಲ್ಲಿ ಸುಧಾ, ಮಲ್ಲಿಗೆ, ತರಂಗ, ಮಯೂರ, ತುಷಾರ, ಪ್ರಜಾಮತ ಮತ್ತೆ ಮತ್ತೆ ಬರೆಯುವ ಒಂದೆರಡು ಸಂಕಲನಗಳನ್ನು ಪ್ರಕಟಿಸಿರುವ ಪ್ರತಿಭೆಯುಳ್ಳ, ಪ್ರತಿಭೆ ಕಡಿಮೆಯಿದ್ದು ಬರೆಯಲು ಆತುರ ಪಡುವ ಅಸಂಖ್ಯ ಕತೆಗಾರರು ಇದ್ದಾರೆ. ಮುಂಬಯಿಯ ಮಟ್ಟಿಗೆ ಬಲ್ಲಾಳ್, ಚಿತ್ತಾಲರಲ್ಲದೆ ಜಯಂತ ಕಾಯ್ಕಿಣಿ, ವಿಶ್ವನಾಥ ಕಾರ್ನಾಡ, ಉಮಾರಾವ್, ಮಿತ್ರಾ ವೆಂಕಟ್ರಾಜ ಒಳ್ಳೆಯ ಕತೆಯನ್ನು ಬರೆಯುತ್ತಾರೆ. ಕಾಯ್ಕಿಣಿಯಲ್ಲಿ ಕಥನ ಕಲೆಯ ವಿಶೇಷ ಪ್ರತಿಭೆ ಇದೆ. ಕೆಲವು ತರುಣ ಬರಹಗಾರರು ಒಳ್ಳೆಯ ಕತೆಗಳನ್ನು ಬರೆಯಬಲ್ಲ ಲಕ್ಷಣವನ್ನು ಪಡಕೊಂಡಿದ್ದಾರೆ.

ದಲಿತ-ಬಂಡಾಯ ಕತೆಗಳು

‘ವರ್ಗ’ ವ್ಯವಸ್ಥೆಯ, ಜಾತಿ ಸಂಘರ್ಷದ ದುಷ್ಪರಿಣಾಮವೆ ದಲಿತ-ಬಂಡಾಯ ಸಾಹಿತ್ಯ, ಮರಾಠಿಯಲ್ಲಿ ದಲಿತ ಸಾಹಿತ್ಯ ಬಂಡಾಯವಾಗಿ ಶಿಷ್ಟ ಸಾಹಿತ್ಯದ ಒಳಹೊಕ್ಕು ಮಲಿನಗೊಳಿಸಿದರೆ ಕನ್ನಡದಲ್ಲಿ ಬಂಡಾರ ದಲಿತ ಮತ್ತು ಉಪೇಕ್ಷಿತ ವರ್ಗದ ರೋಷದ ಕೂಗಾಗಿ ಹೊರಹೊಮ್ಮಿದೆ. ಬಂಡಾಯದ ಕತೆಗಳಿಗೆ ಜನಸಾಮಾನ್ಯರೇ ಮುಖ್ಯ ನಾಯಕರಾಗಿ ಗ್ರಾಮೀಣ ಬದುಕೇ ಕಾಳಜಿಯ ಕ್ಷೇತ್ರವಾಗಿದೆ. ಶತ ಶತಮಾನಗಳಿಂದ ಶೋಷಣೆಗೆ ಒಳಗಾದ, ತಿರಸ್ಕೃತ ದಲಿತರ ಹೆಣ್ಣು, ಗಂಡು, ಬಾಲಕರು ಪಾತ್ರಗಳಾಗಿ ಅವರ ಹೃದಯದ್ರಾವಕ-ಬದುಕು ವಿಷಯವಾಗಿ ದಲಿತ ಕತೆಗಳಿಗೆ ನಿರ್ದಿಷ್ಟ ದಿಶೆಯನ್ನು ತೋರಿಸಿದೆ. ನವ್ಯೋತ್ತರದಲ್ಲಿ ಮೊದಲು ಕಾಣಿಸಿಕೊಂಡ ದಲಿತ ಸಂವೇದನೆಯ ಕಥಾ ಸಂಕಲನ ದೇವನೂರು ಮಹಾದೇವರ ‘ದ್ಯಾವನೂರು’ ಅವರ ‘ಒಡಲಾಳ’ ಒಂದು ಶ್ರೇಷ್ಟ ಕತೆ. ಬಂಡಾಯ ಸಾಹಿತ್ಯ ಸಂಘಟನೆಯ ಪ್ರಮುಖರಲ್ಲಿ ಬರಗೂರ ರಾಮಚಂದ್ರಪ್ಪ ಮೊದಲಿಗರು. ಅವರ ‘ಕ್ಷಾಮ’, ‘ಚೆನ್ನಿ’ ಬಡವರ ಪರವಾಗುತ್ತ ಸಾಗುವ ಆಕ್ರೋಶದ ಕತೆಗಳು. ಡಾ || ಬೆಸಗರಹಳ್ಳಿ ರಾಮಣ್ಣರ ‘ಒಂದು ಹುಡುಗನಿಗೆ ಬಿದ್ದ ಕನಸು’. ಕುಂ. ವೀರಭದ್ರಪ್ಪನವರ ‘ಡೋರ ಮತ್ತು ಇತರ ಕತೆಗಳು’. ಬೋಳುವಾರ ಮಹಮ್ಮದ್ ಕುಂಞರವರ ‘ದೇವರುಗಳ ರಾಜ್ಯದಲ್ಲಿ’, ಚೆನ್ನಣ್ಣ ವಾಲಿಕಾರ ಅವರ ‘ಕಟ್ಟು ಕತೆಗಳು’, ಶಾಂತರಸರ ‘ಬಡೇಸಾಟು ಪುರಾಣ’ ಹಾಗೂ ಕಾಳೇಗೌಡ ನಾಗವಾರರ ‘ಬೆಟ್ಟದ ಸಾಲು ಮಳೆ’ ಮೊದಲಾದ ಮಹತ್ವದ ಕಥಾ ಸಂಗ್ರಹಗಳು ನವ್ಯೋತ್ತರದ ಕನ್ನಡ ಸಾಹಿತ್ಯದ ನಿಲುವನ್ನು ನಿರ್ಧರಿಸಲು ವಿವಶಗೊಳಿಸಿವೆ.

ಆದ್ದರಿಂದ ಕತೆ, ಕಾದಂಬರಿ, ನಾಟಕ, ಕಾವ್ಯ, ಆತ್ಮಕಥನಗಳು ಮರಾಠಿ ಸಾಹಿತ್ಯವನ್ನು ಹಿಗ್ಗಿಸಿದರೆ, ಕನ್ನಡದ ಬಂಡಾಯ ಒಂದು ಪ್ರತೀಕಾರ, ಪ್ರತಿರೋಧವನ್ನು ವ್ಯಕ್ತಪಡಿಸುವ ಸಾಹಿತ್ಯವಾಗಿ ಅಬ್ಬರ ತೋರಿ, ನಿಧಾನವಾಗಿ ಅಬ್ಬರವನ್ನು ಕಳಕೊಳ್ಳುತ್ತದೆ. ಆದರೂ ‘ದ್ಯಾವನೂರು’ ‘ಕಾಂತಾಪುರ’ ‘ಬಂಡಾರ ಕತೆಗಳು’ ಎಂಬ ಸಂಗ್ರಹಗಳಲ್ಲಿ ಕಲೆ ಹಾಕಿದ ಕತೆಗಳು ಕನ್ನಡ ಸಾಹಿತ್ಯದ ಗಡಣವನ್ನು ತುಂಬಲು ಶಕ್ತವಾಗಿದೆ. ದೇವನೂರು ಮಹಾದೇವ, ಬರಗೂರ ರಾಮಚಂದ್ರಪ್ಪ, ಬೆಸಗರಹಳ್ಳಿ ರಾಮಣ್ಣ, ಚೆನ್ನಣ್ಣ ವಾಲೀಕಾರ, ಕುಂ.ವೀರಭದ್ರಪ್ಪ, ನೇಮಿಚಂದ್ರ ಮುಂತಾದವರು ತಮ್ಮ ಬಂಡಾಯದ ಕತೆಗಳಲ್ಲಿ ಕುಶಲ ಕಥನ ಕಲೆಯನ್ನು ಮರೆದಿದ್ದಾರೆ. ಅವರ ಮನೋಧರ್ಮ ಒಂದು ವರ್ಗದ ಕೂಗಿಗೆ ಪ್ರತಿಸ್ಪಂದಿಸುವುದಷ್ಟೆ ಆಗಿರದಿದ್ದರೆ ಅವರ ರಚನೆಗಳು ಚೀಟಿ ಅಂಟಿಸಿಕೊಳ್ಳದೆ ಸಾಹಿತ್ಯದ ಮುಖ್ಯ ಪ್ರವಾಹಕ್ಕೆ ಸೇರಿಕೊಳ್ಳುತ್ತಿದ್ದುವು. ಇದೇ ಅಭಿಪ್ರಾಯವನ್ನು ಸಾರಾ ಅಬೂಬಕ್ಕರ್, ಬೋಳುವಾರು, ಫಕೀರ ಮಹಮ್ಮದ್, ಅಬ್ದುಲ್ ರಶೀದ್ ಮೊದಲಾದ ಮುಸ್ಲಿಂ ಸಂವೇದನೆಯ ಕತೆಗಾರರ ಕುರಿತೂ ಹೇಳಬಹುದಾಗಿದೆ.

ಕನ್ನಡದ ಮೊದಲ ಕತೆಗಳಿಗೆ ಆಂಗ್ಲ ಕತೆಗಾರರಾದ ಮೋಪಾಸ, ಗಾಲ್ಸಿವರ್ದಿ, ಓಹೆನ್ರಿ, ದೊಸ್ತವಿಸ್ಕಿ, ಹಾರ್ಡಿ, ಟಾಲ್‌ಸ್ಟಾಯ್‌ ಮೋ ಅಮ್ ಹಾಗೂ ಮರಾಠಿಯ ಅಪ್ಟೆ, ಸಾವರಕರ ಪ್ರಭಾವ ಬಿದ್ದಿದ್ದರೆ, ಪ್ರಗತಿಶೀಲರನ್ನು ಮಾರ್ಕ್ಸ್‌ವಾದದ ಧೋರಣೆ ಪ್ರಭಾವಿಸಿತು. ಆಧುನಿಕರು ಆಂಗ್ಲರ ವಿಕಾಸವಾದ, ಅಸ್ತಿತ್ವವಾದ, ಮಾನವತಾವಾದ, ಮನಶಾಸ್ತ್ರ ಮುಂತಾದ ವೈಚಾರಿಕ ಚಿಂತನೆಯ ಕಡೆಗೆ ಆಕರ್ಷಿತರಾದರು. ಕಾಫ್ಕ, ಸಾರ್ತೃ, ಕಾಮು ಫ್ಯಾಯೆಡ್, ಮಾನ್‌, ಬೆಕೆಟ್ ಕನ್ನಡ ಕತೆಗಳ ಆತ್ಮವನ್ನು ಹೊಕ್ಕರು. ಪಾಶ್ಚಾಶ್ಯ ನೆಲೆಯಲ್ಲಿ ದೇಶೀ ಪಾತ್ರಗಳು ಸಂವೇದಿಸತೊಡಗಿದವು. ಆಂಗ್ಲ ಭಾಷೆ, ವಿಮರ್ಶನ ಪದ್ಧತಿಗೆ ಕೃತಿಗಳು ಒಳಪಟ್ಟು ‘ಕನ್ನಡ ಕತೆಗಳು ನಿಜ ಮೌಲ್ಯದಲ್ಲಿ ಕನ್ನಡದವೇ’ ಎಂದು ಶಂಕಿಸುವಂತಾಯಿತು. ಇವುಗಳು ಸೂಕ್ಷ್ಮ ಸಂವೇದಿಯಾಗಿ ವ್ಯಕ್ತಿಯ ಒಳತೋಟಿಗಳನ್ನು ಕೆದಕಿ ಕೆದಕಿ ನೋಡಿ ವ್ಯಕ್ತಿತ್ವ ಶೋಧನೆಯನ್ನು ಮಾಡಿದವು. ೧೯೮೦ರ ನಂತರ ಈ ಬಗೆಯ ಸೃಜನ ಕಲೆ ಮುಂದುವರಿಯಲಿಲ್ಲ. ಅವರ ಸ್ಥಾನವನ್ನು ಜಾನಪದ ಪ್ರಪಂಚ ನಿಶ್ಶಬ್ಧವಾಗಿ ಪಡೆಯಲು ಹವಣಿಸುವುದು ಕಂಡು ಬಂದಿದೆ. ಈ ದಶಕದಲ್ಲಿ ಕಥಾ ಸಾಹಿತ್ಯ ಎಲ್ಲ ದಿಕ್ಕುಗಳಿಗೂ ಹರಿದು, ಎಲ್ಲ ಅನುಭವಗಳಿಗೂ ಅಭಿವ್ಯಕ್ತಿ ಕೊಡಲು ಸಿದ್ಧವಾಗಿರುವುದನ್ನು ಕಾಣಬಹುದು. ಕಥಾ ಸಾಹಿತ್ಯ ತನ್ನದೇ ಆದ ಸ್ವತಂತ್ರ ರೀತಿಯಲ್ಲಿ ಸಮೃದ್ಧವಾಗಲು ಇದೇ ಅನುಕೂಲ ಮಾರ್ಗ.

ಕಥಾ ಮಾಧ್ಯಮವನ್ನು ಬದುಕಿನ ವಿವರಗಳನ್ನು ಕೊಡುವ ಏಕೈಕ ಸಾಧನವನ್ನಾಗಿ ಶ್ರೀನಿವಾಸರು ಬಳಸಿಕೊಂಡಂತೆ ಕನ್ನಡ, ಕನ್ನಡೇತರ ಯಾವುದೇ ಭಾಷೆಯ ಕತೆಗಾರರು ಸಮಗ್ರವಾಗಿ ಬಳಸಿಕೊಂಡದ್ದು ಕಾಣುವುದಿಲ್ಲ. ಹಿಂದಿಯ ಪ್ರೇಮಚಂದ್‌ರನ್ನು ಮಾತ್ರ ಶ್ರೀನಿವಾಸರ ತುಲನೆಯಲ್ಲಿಡಬಹುದು. ಶ್ರೀನಿವಾಸರ ನಂತರ ಕನ್ನಡದಲ್ಲಿ ಚಿತ್ತಾಲರೊಬ್ಬರೆ ಕಥಾ ಮಾಧ್ಯಮವನ್ನು ಸಾಹಿತ್ಯ ಸೃಷ್ಟಿಯ ಸಶಕ್ತ ಸಾಧ್ಯತೆ ಎಂದು ತಿಳಿದು ಕೊಂಡಂತೆ ಕಾಣುತ್ತದೆ.

ಇತ್ತೀಚಿನ ಕೆಲವು ಕತೆಗಳು ಕತೆ ಒಂದು ಸುಂದರವಾದ ಸಾಹಿತ್ಯ ಮಾಧ್ಯಮ. ಇದರಲ್ಲಿ ಒಂದು ಮೋಹಕ ಮನಸೆಳೆಯುವ ಕವಿತೆಯ ಸತ್ವವಿರುತ್ತದೆ. ಕತೆ ಹೇಳುವ ವಿಧಾನ ಸಾಹಿತ್ಯ ಪ್ರಕಾರದಲ್ಲಿ ಅತ್ಯಂತ ಪ್ರಾಚೀನವಾದುದು. ಆದರೆ ಇಂದು ಅದು ಮಾರ್ಮಿಕ ಹಾಗೂ ಕಲಾತ್ಮಕವಾಗಿ ಬೆಳೆದಿವೆ. ಕನ್ನಡದಲ್ಲಿ ಕಥಾ ಸಾಹಿತ್ಯ ಉತ್ತುಂಗ ಸ್ಥಾನದಲ್ಲಿದೆ. ಮಾಸ್ತಿ, ಆನಂದ, ಅನಂತಮೂರ್ತಿ, ಲಂಕೇಶ, ಚಿತ್ತಾಲ, ದೇಸಾಯಿ, ಬಲ್ಲಾಳ, ಕೃಷ್ಣ ಆಲನಹಳ್ಳಿ, ತೇಜಸ್ವಿ ಮುಂತಾದವರು ಆಧುನಿಕ ಕನ್ನಡದ ಶ್ರೇಷ್ಠ ಕತೆಗಾರರಾಗಿದ್ದಾರೆ.

ಮನಸ್ಸಿನ ಯಾವುದೇ ಬಗೆಯ ಭಾವನೆಯನ್ನು (ಹೊಸ ಭಾಷೆಯಲ್ಲಿ ಸಂವೇದನೆ) ಯಾವುದೇ ಬಗೆಯ ಶೈಲಿಯಲ್ಲಿ ವ್ಯಕ್ತಪಡಿಸಲು ಕಥಾ ಪ್ರಕಾರವು ಅತ್ಯಂತ ಉಪಯುಕ್ತವಾದುದಾಗಿದೆ. ಈಗೀಗ ಅದು ಜನಪ್ರಿಯವೂ ಆಗಿದೆ. ಎಲ್ಲಾ ಭಾಷೆಗಳಲ್ಲಿಯೂ ಈ ಒಂದೇ ಪ್ರಕಾರವು ಮನುಷ್ಯನ ಅಂತರಂಗವನ್ನು ವ್ಯಕ್ತಪಡಿಸುವಲ್ಲಿ ಸಮರ್ಥ ಕಾರ್ಯವನ್ನು ಮಾಡಿದೆ. ಇದರಲ್ಲಿ ಹೊಸ ಹೊಸ ವಿಧಾನಗಳು ಕತೆಗಾರನ ಪ್ರತಿಭೆಗೆ ಒಳಗಾಗಿ ಕತೆಗಳನ್ನು ನಿರೂಪಿಸುವ ವೈವಿಧ್ಯತೆಗಳು ಈ ಪ್ರಕಾರವನ್ನು ಹೆಚ್ಚು ಅರ್ಥಪೂರ್ಣ ಮಾಡಿವೆ. ಯಾವುದೇ ಒಂದು ಘಟನೆಯನ್ನು, ವಸ್ತುವನ್ನು, ಅನುಭವವನ್ನು ಕಥನದ ನಿಶ್ಚಿತ ಫ್ರೇಮ್‌ನಲ್ಲಿಟ್ಟು ಕತೆ ಬರೆಯುವ ಪದ್ಧತಿ ಇಂದು ಹಳತಾಗಿದೆ. ಆದರೂ ವಸ್ತುವಿನ ಮಾರ್ಮಿಕತೆ ಮತ್ತು ಬರವಣಿಗೆಯ ಸೂಕ್ಷ್ಮತೆಯ ಪ್ರಕಾರ ಇಂತಹ ಕಥೆಗಳು ಇಂದೂ ತಮ್ಮ ಸತ್ವ ಮತ್ತು ಅರ್ಥವತ್ತತೆಯನ್ನು ಉಳಿಸಿಕೊಳ್ಳುತ್ತವೆ. ಹೊಸತನದ ಒಂದು ಕಾಳಜಿಯೇ ನವ್ಯತೆಯನ್ನು ಬಳಸುವ ಹಟವೇ ಇಂದಿನ ಬರವಣಿಗೆಗೆ ಪ್ರೇರಣೆಯಾದರೆ ಕಥನ ಕಲೆಗೆ ಅನ್ಯಾಯವಾಗಬಹುದೆಂದು ನನ್ನ ಮತ. ಕವಿತೆಗಳ ಮೂಲ ಸತ್ವ ಕವಿಯ ಸುಪ್ತ, ಸಶಕ್ತ ಭಾವನೆ ಹೇಗೆಯೋ ಕಥೆಗೂ ಮನಸ್ಸನ್ನು ಜಗ್ಗುವ, ಮನಸ್ಸನ್ನು ಕದಡುವ ವಸ್ತುವಿರಬೇಕಾದುದು ಸಮರ್ಥ ಕತೆಯ ಅಗತ್ಯವಾಗಿದೆ. ಕೇವಲ ವಿಚಾರ, ಅನಿಸಿಕೆ, ಕಮೆಂಟ್ಸ್‌ಗಳೇ ಕತೆಯ ಫ್ರೇಮ್‌ನೊಳಗೆ ಬಂದರೆ ಅದು ಅಪೂರ್‍ಣವಾಗಬಹುದೇನೋ.

ಕಥಾ ಮಾಧ್ಯಮ ದೀರ್ಘಕಾಲದ ಸಾಹಿತ್ಯಿಕ ಪ್ರಭಾವವನ್ನು ಕೊಡುವಷ್ಟು ಅನುಭವದ ಸಮಗ್ರತೆಯನ್ನು ಕಲ್ಪಿಸುವಷ್ಟು ಸಮರ್ಥವಾಗಿದೆ ಎಂಬುದಕ್ಕೆ ಕನ್ನಡದಲ್ಲಿ ದೊರೆಯುವ ಅಸಂಖ್ಯ ಕತೆಗಳೇ ಸಾಕ್ಷಿಯಾಗಿವೆ. ತಂತ್ರ ವೈವಿಧ್ಯವನ್ನು ಕೊಡುವ ಪ್ರಯತ್ನದಲ್ಲಿ ಕಥೆಯನ್ನು ಕಡಗಣಿಸುವುದರಿಂದ ಕತೆಯ ಸಾಹಿತ್ಯಕ ಪ್ರಭಾವ ಧೀರ್ಘಕಾಲದವರೆಗೆ ಉಳಿಯಲಾರದು. ಈಗಿನ ಕತೆಗಳಲ್ಲಿ ಪ್ರಾಯೋಗಿಕ ಅಂಶವೇ ಹೆಚ್ಚಾಗಿ ಕಂಡು ಬಂದು ದೀರ್ಘಕಾಲದ ಸಾಹಿತ್ಯಿಕ ಪ್ರಭಾವವನ್ನು ಉಳಿಸಲು ದುಡಿಯುವ ಕಾಳಜಿ ಕಡಿಮೆಯಾಗಿದೆ. ಇದರಿಂದಾಗಿ ಮಾಸ್ತಿಯವರ ಕತೆಯಂಥಹ ಎಂದೆಂದಿಗೂ ಉಳಿಯುವ ಕತೆಗಳು ಇಂದು ಬೆರಳೆಣಿಕೆಯಲ್ಲಿ ಗುರುತಿಸ ಬೇಕಾಗುತ್ತದೆ.

ಈಚೆಗೆ ಪ್ರಕಟವಾದ ಕೆಲವು ಕಥಾ ಸಂಗ್ರಹಗಳಲ್ಲಿ ಕನ್ನಡದ ಹಲವು ಉತ್ತಮ ಕತೆಗಳು ಸಿಕ್ಕಿವೆ. ಸೃಜನಾತ್ಮಕ ಒಲವುಗಳನ್ನು ಬದಿಗೆ ಸರಿಸಿ ಬದುಕಿಗೆ ಇನ್ನಷ್ಟು ಹತ್ತಿರವಾಗುವ, ನೈಜವಾಗುವ ಕಥನ ಕ್ರಮ ಈ ಕೆಲವು ಕಥೆಗಳಲ್ಲಿ ಬೆಳೆದಿರುವುದನ್ನು ನೋಡಬಹುದು. ಸ್ಯಜನಶೀಲದ ನಾಟಕೀಯ ಗುಣವೆಂಬ ಮೊರೆಯನ್ನು ಜಾರಿಸಿ, ನೇರವಾಗಿ ಬದುಕಿನೊಂದಿಗೆ ಸ್ಪಂದಿಸುವ, ವ್ಯಕ್ತಿಯ ಸಂಸ್ಕೃತಿ, ಒಳತೋಟಿ ಸ್ವಭಾವಗಳನ್ನು ಅವನಾಡುವ ಭಾಷೆಯಲ್ಲಿಯೇ ನಮಗೆ ಮುಟ್ಟಿಸುವ ಕಥನ ಕಲೆಯನ್ನು ಕೆಲವರಾದರೂ ಸಾಧಿಸುತ್ತಿರುವುಮ ಕನ್ನಡ ಕಥಾ ಪ್ರಕಾರಕ್ಕೇನೆ ಒಳಿತು. ಅವುಗಳಲ್ಲಿ ‘ಅನಾಥ ಪಕ್ಷಿಯ ಕಲರವ’ (ವೀರಭದ್ರ) ‘ಪಕ್ಷಿ ಮತ್ತು ಅವಳು’ (ಮಿತ್ರಾ ವೆಂಕಟ್ರಾಜ) ‘ಬಾಜಿರ ಕಂಬದ ಒಳಸುತ್ತು’ (ಮಣಿಮಾಲಿನಿ) ಕನ್ನಡ ಕತೆಗಳ ಮೌಲ್ಯವನ್ನು ಹೆಚ್ಚಿಸುತ್ತವೆ.

ಶಾಂತರಾಮ ಸೋಮಯಾಜಿಯವರ ‘ಜಾಜಿ ಹೂವಿನ ಕಟ್ಟು’ : ಈ ಸಂಗ್ರಹದಲ್ಲಿರುವ ಬಂಗಾರದ ಹೊರೆ, ತಾಯಿ ಮತ್ತು ಮಗ, ಹೂವಿನ ಕಟ್ಟು, ಹುಚ್ಚು ಹಿಡಿದವರು ಮತ್ತು ಹಿಡಿಸುವವರು ಇವು ಮಾನವೀಯ ಅನುಕಂಪವನ್ನು ಹುಟ್ಟಿಸುವಂತಿವೆ.

ಕಪ್ಪು ಗಾಂಧಿ ಬಿಳಿ ಗಾಂಧಿ – ಮೌಲ್ಯಗಳನ್ನು ರಾಜಕೀಯ ಗಲಭೆಗಳಿಗೆ ಮಾರಿಕೊಂಡ ಪರಿಣಾಮಕಾರಿ ನಿರೂಪಣೆಯಿಂದ ಕೂಡಿದ ಕತೆ.

ರಾಘವೇಂದ್ರ ಪಾಟೀಲರ ‘ಮಾಯಿಯ ಮುಖಗಳು’ : ಮೊದಲನೆಯ ಕತೆ – ‘ಮಾಯಿಯ ಮುಖಗಳು’ ವಿಸ್ತಾರವನ್ನು ಬಿಟ್ಟರೆ ಉತ್ತಮ ಕತೆ. ಮೂರು ಹೆಣ್ಣುಗಳು ತಮ್ಮ ಬದುಕಿನ ವಿಘಟನೆಗೆ ಒಳಗಾಗುತ್ತ ಲೇಖಕರ ಕೈಯಲ್ಲಿ ವಿಲಯವಾಗುವುದು ಈ ಕತೆಯ ಪ್ರಧಾನವಸ್ತು. ಅಣಕಾಸುರನ ಸೃಷ್ಟಿ ಕತೆಯಲ್ಲಿ ಮಿಥ್‌ನ್ನು ಒದಗಿಸಲು ಮಾಡಿದ ಪ್ರಯತ್ನ ಹಾಗೆಯೆ ಹಾಡುಗಾರ ಮೊಯಿದೀನ್. ವಾಸ್ತವವಾಗುವ ಸಮಕಾಲೀನ ವ್ಯಕ್ತಿಗಳು, ಕುಮಾರಗಂಧರ್ವ, ಗಂಗೂಬಾಯಿ, ಕೃಷ್ಣಬಾಯಿಯವರು ಕತೆಗಳ ಪಾತ್ರವೇ ಆಗುತ್ತಾರೆ.

ಕೆ. ಸತ್ಯನಾರಾಯಣ ದೇವಲಿಂಗರ ‘ವಿಕ್ಟೋರಿಯಾ ಮಗ’ : ಇಂದಿನ ಮೌಲ್ಯ ಮತ್ತು ಬದುಕಿನ ನೆಲೆಗಳನ್ನು ಶೋಧಿಸಿ ನಿರೂಪಿಸುವಲ್ಲಿ ಇಲ್ಲಿಯ ಕತೆಗಳು ಸಫಲವಾಗಿವೆ. ಸಮಕಾಲೀನ ಪ್ರಸಿದ್ಧ ವ್ಯಕ್ತಿಗಳು ಇಲ್ಲಿಯ ಕೆಲವು ಕತೆಗಳಲ್ಲಿ ಪಾತ್ರವಾಗಿ ಸಂವಾದಿಯಾಗುವುದು ನಿರೂಪಣೆಯ ವೈಶಿಷ್ಟ್ಯವಾಗಿದೆ. ಜಿಡ್ಡು ಕೃಷ್ಣಮೂರ್ತಿ, ಜಯಪ್ರಕಾಶ ನಾರಾಯಣ (ಜೆ.ಪಿ.)ಸರ್.ವಿಶ್ವೇಶ್ವರಯ್ಯ ಮೊದಲಾದ ಲೋಕ ಪ್ರಸಿದ್ಧ ವ್ಯಕ್ತಿಗಳು ಕತೆಗಳಲ್ಲಿ ನುಸುಳಿಕೊಂಡಿದ್ದಾರೆ. ಕಥೆಯ ಅಂಶವೆನ್ನುವ ಹಾಗೆ. ಹೆಚ್ಚಿನ ಕತೆಗಳಲ್ಲಿ ಹೆಣ್ಣು ಮುಖ್ಯ ಪಾತ್ರವಾಗಿ ಅಂತರಂಗ ಶೋಧನೆಯಲ್ಲಿ ತೊಡಗುತ್ತಾಳೆ. ರಾಜಕೀಯವೂ ಕೆಲವು ಕತೆಯ ಮುಖ್ಯ ಅಂಗವಾಗಿ ಚಿತ್ರಿತವಾಗಿದೆ.

ದೇವಲಿಂಗು, ಲೋಕನಾಯಕರ… ಪುರಾಣ. ಡೆತ್ ಅಮ್ಮನ ಸಾವು. ಇನ್ನೊಬ್ಬ ಗಾಂಧಿಯ ಹೆಂಡತಿ. ಪ್ರೇಮದ ಶೈಲಿ ಈ ಕತೆಗಳು ಕಥನ ಶೈಲಿಯ ಖಚಿತತೆಯನ್ನು ಪಡೆದಿವೆ. ನಿರೂಪಣೆಯು ಸಶಕ್ತವಾಗಿದೆ.

ಕೇಶವ ಮಳಗಿಯವರ ‘ಮಾಗಿ ಮೂವತ್ತೈದು’: ‘ಮಾಗಿ ಮೂವತ್ತೈದು’ ಕೆಲವು ಉತ್ತಮ ಕತೆಗಳಿಂದ ಕೂಡಿದ ಸಂಗ್ರಹ. ಹೆಚ್ಚಿನ ಕತೆಗಳು ತುಂಬ ದೀರ್ಘವೆನಿಸಿದರೂ ನಿರೂಪಣೆಯ ವಿಶಿಷ್ಟ ಶೈಲಿ ಲೇಖಕರ ಕಥನಕಲೆಯ ನಿಷ್ಠೆಯನ್ನು ತೋರಿಸುತ್ತದೆ. ಪಾತ್ರಗಳು ತಮ್ಮ ಗತ ಜೀವನದ ಸಂಗತಿ. ವಿಸಂಗತಿಗಳನ್ನು ಬಿಡಿಸಿಕೊಂಡು ಹೋಗುವಾಗ ಬದುಕಿನ ಅನೇಕ ಬಗೆಯ ದರ್ಶನ ಓದುಗನಿಗಾಗುತ್ತದೆ. ನಿರೂಪಣೆಯ ಈ ರೀತಿಯ ಕತೆಗಳು ಉದ್ದಕ್ಕೆ ಚಾಚಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಕನ್ನಡದ ಪ್ರಕೃತಿ, ಸಂಸ್ಕೃತಿ, ಕಲೆ, ಜೀವನ ಕತೆಗಳಲ್ಲಿ ಹಾಸುಹೊಕ್ಕು ಕತೆಗಳ ಒಟ್ಟಿನ ಮೌಲ್ಯವನ್ನು ಹೆಚ್ಚಿಸುತ್ತವೆ.

ಕತೆಗಳ ಭಾಷೆ ಬುಡಕಟ್ಟು ಜನಭಾಷೆಯ ಸೊಬಗಿನಿಂದ ಗಮನಾರ್ಹವಾಗಿದೆ. ಇದುವೇ ಕತೆಗಳ ಶೈಲಿಯೇ ಪುಷ್ಟೀಕರಣವಾಗಿದೆ.

ಕೆಂಪು ಮಣ್ಣಿನ ಒಕ್ಕಲು, ಯಾರಲ್ಲಿಗೆ ಬಂದರು ಕಳೆದಿರುಳು, ಮಾಗಿ, ನಕ್ಷತ್ರ ಯಾತ್ರಿಕರು, ಊರ ಮಧ್ಯದ ಕಣ್ಣ ಕಾಡಿನೊಳಗೆ ಇವು ಕನ್ನಡದ ಶ್ರೇಷ್ಟ ಕತೆಗಳಾಗಬಲ್ಲವು.

ಗುರುರಾಜ ಮಾರ್ಪಳ್ಳಿಯವರ ‘ಬಂಡೆ ಮತ್ತು ಮನುಷ್ಯ’ : ‘ಬಂಡೆ ಮತ್ತು ಮನುಷ್ಯ’ ಕತೆಯ ಗುರೂಜಿಯ ಆತ್ಮವೃತ್ತ ಬದುಕಿನ ವೈಫಲ್ಯಗಳನ್ನು ನಿರೂಪಿಸುತ್ತ ಹೋಗುತ್ತದೆ. ‘ಕೋಮಲ ಸ್ವರಗಳು’ ಕತೆಯ ಪುರಂದರ ಜೋಶಿಯೂ ಬದುಕಿನ ವಿಫಲತೆಯ ಮಾರ್ಗವನ್ನು ಕ್ರಮಿಸುತ್ತಾ ಹೋಗುತ್ತಾನೆ. ಇಬ್ಬರೂ ನಡುವೆ ಸಂಧಿಸುವ ಜೀವನಾಕರ್ಷಣೆಗಳೊಂದಿಗೆ ಸ್ಪಂದಿಸುತ್ತ ಏಕಾಕಿತನದ ಘಟ್ಟವನ್ನು ಮುಟ್ಟುತ್ತಾರೆ. ‘ಕಟ್ಟಕಡೆಯ ದಟ್ಟ ದರಿದ್ರ’ ಸ್ವಾತಂತ್ರ್ಯ ನಂತರದ ಭಾರತದ ಸಾಮಾಜಿಕ ವ್ಯವಸ್ಥೆಯ ದೋಷಗಳನ್ನು ನಿರೂಪಿಸುತ್ತದೆ. ಅಪ್ನಾ ಅಪ್ನಾ ಉತ್ಸವದಲ್ಲೂ ಈ ವಿಷಯವನ್ನೆ ಹೈಲೈಟ್ ಮಾಡುವ ಪ್ರಯತ್ನವಿದೆ. ನಿರೂಪಣೆ ಭಾವೂಕವೂ ಸುಲಲಿತವೂ ಆಗಿದೆ.

ಬಿಳುಮನೆ ರಾಮದಾಸರ ‘ಹತ್ತಿರ ಬಂದು ದೂರ ಸರಿದವರು’ : ಈ ಸಂಗ್ರಹದ ಕತೆಗಳಲ್ಲಿ ಗಂಭೀರ ವಸ್ತು ಇಲ್ಲದಿದ್ದರೂ ಆಯ್ಕೆಯಲ್ಲಿ ಲೇಖಕರ ಕೌಟುಂಬಿಕ ನೋಟ. ಪಾತ್ರ ಚಿತ್ರಣದಲ್ಲಿ ಖಚಿತತೆ ಹಾಗೂ ಸುಂದರ ಭಾಷಾ ಶೈಲಿಗಳು ಮುಖ್ಯಾಂಶಗಳಾಗಿವೆ. ಹೆಚ್ಚಿನ ಕತೆಗಳಲ್ಲಿ ಸ್ತ್ರೀ ಪಾತ್ರಗಳ ವಿವಿಧ ಸ್ವಭಾವ ನಿರೂಪಣೆಯಿದೆ. ‘ವ್ಯವಸ್ಥೆ’ಯ ಮಾಲತಿ. ‘ಹತ್ತಿರ ಬಂದು ದೂರವಾದ’ ಸಾವಿತ್ರಿ ‘ಯಾರು ದೊಡ್ಡವರು’ನ ಸಾವಿತ್ರಿ ಪದ್ಮ : ‘ನ್ಯಾಯಾಂಗದ ಹೊರಗೆ’ ಸರಸ್ವತಿ, ‘ಜಿಪುಣರ ಕಥೆ’ಯ ಪುಟ್ಟಮ್ಮ ಇವರೆಲ್ಲ ಹೆಣ್ಣಿನ ಶಕ್ತಿಯನ್ನು ವಿಶೇಷವಾಗಿ ನಿರೂಪಿಸುತ್ತವೆ.

‘ಅಬ್ಬಾಸರ ಐವತ್ತು ಕಥೆಗಳು’ : ಅಬ್ಬಾಸರ ಐವತ್ತು ಕತೆಗಳಲ್ಲಿ ವಿಶೇಷವಾದ ವೈವಿಧ್ಯವಿಲ್ಲ. ಕಥೆಗಳು ಓದಿಸಿಕೊಂಡು ಹೋಗುತ್ತವೆ. ಜೀವನದಲ್ಲಿ ಕಂಡ ಅನುಭವಿಸಿದ ಅನೇಕ ಘಟನೆಗಳನ್ನು; ಸಂಗತಿಗಳನ್ನು, ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ವಿಡಂಬನೆಗಳನ್ನು ಸಹಜ ಶೈಲಿಯಲ್ಲಿ ಕತೆಗಳು ಬಿತ್ತರಿಸುತ್ತವೆ. ಆದರೆ ಕೊನೆಯಲ್ಲಿ ಓದುಗನಿಗಾಗುವ ಅನುಭವ ಒಂದೇ ಪ್ರಕಾರದ್ದು. ಮಾನವೀಯ ಸಂವೇದನೆಗಳೇ ಕತೆಯ ಪ್ರಧಾನ ಅಂಶವಾಗಿ ಅಭಿವ್ಯಕ್ತಿ ಪಡೆದದ್ದು ಗಮನಕ್ಕೆ ಬರುವುದಿಲ್ಲ. ಮುಸ್ಲಿಂ ಸಮಾಜದ ಧರ್ಮ ಸಂಪ್ರದಾಯ ಮುಸ್ಲಿಂ-ಹಿಂದೂ ದಾಂಪತ್ಯ ಇಲ್ಲವೆ ಪ್ರಣಯ, ಗೆಳೆತನ, ಕಾಮ, ಪ್ರೀತಿ ಮೊದಲಾದ ಮಾನವೀಯ ಸಂಬಂಧಗಳನ್ನು ಹೇಳುವ ಕತೆಗಳೂ ಸೃಜನಾತ್ಮಕ ಗುಣದ ಕೊರತೆಯನ್ನು ತೋರಿಸುತ್ತವೆ. ಉರ್ದು ಭಾಷಿ ಕನ್ನಡಿಗ ಕತೆಗಾರನಾಗಿ ಚೊಕ್ಕ ರೋಚಕವಲ್ಲದಿದ್ದರೂ ಸೊಗಸಾದ ಕನ್ನಡದಲ್ಲಿ ಕಥೆಗಳನ್ನು ನಿರೂಪಿಸಿದ್ದು ಮೆಚ್ಚತಕ್ಕ ವಿಷಯ. ಈ ಸಂಗ್ರಹದಲ್ಲಿ ವಿಪರ್ಯಾಸ, ಪ್ರೀತಿ ಸಾಯೋದಿಲ್ಲ, ರಸಿಕ ಮರದಲ್ಲೊಂದು ಮೌನಕ್ರಾಂತಿ, ಖುಲಾ, ಮೆಹಂದಿ, ಮೊಹರಮ್ ಹುಲಿ, ಅರ್ಥ, ಕಬೂಲ್ ಮೊದಲಾದ ಸುಂದರ ಕತೆಗಳೂ ಇವೆ.

ಪ್ರೇಮಾಭಟ್‌ರ ’ಪ್ರೇಮ ಭಟ್ ೧೦೮ ಕತೆಗಳು’ : ಹೆಚ್ಚು ಕಡಿಮೆ ಎಲ್ಲ ಕತೆಗಳು ಸ್ತ್ರೀ ಪ್ರಧಾನ. ಹೆಣ್ಣಿನ ಬದುಕಿನ ಅನೇಕ ರೀತಿಯ ಸಮಸ್ಯೆಗಳನ್ನು ಕತೆಗಳು ಚಿತ್ರಿಸುತ್ತವೆ. ಬಡತನ; ವೃದ್ಧಾಪ್ಯ, ವೈದವ್ಯ, ದುಡಿಮೆ, ಏಕಾಕಿತನ, ವಿಷಮ ದಾಂಪತ್ಯ, ತಾಯ್ತನ ಮುಂತಾದ ಸಹಜ ಪರಿಸ್ಥಿತಿಗಳಲ್ಲಿ ಹೆಣ್ಣು ಬದುಕುತ್ತ ಬವಣೆಗಳನ್ನು ಅನುಭವಿಸುತ್ತಾಳೆ. ಇಲ್ಲಿ ಹೆಣ್ಣು ತಾಯಿ, ಅತ್ತೆ, ಅಕ್ಕ, ತಂಗಿ, ನಾದಿನಿ, ಸೊಸೆ, ಗೆಳತಿ, ಪ್ರೇಮಿಕೆಯಾಗಿ ಕತೆಗಳಲ್ಲಿ ಮೂಡಿ ಬಂದಿದ್ದಾಳೆ. ಸಾಂಸಾರಿಕ ಜೀವನದ ಅವಳ ಅನುಭವ ಅವಳಲ್ಲಿರುವ ಮಮತೆ, ವಾತ್ಸಲ್ಯ, ಸಹನೆ, ಏಕಾಕಿತನಗಳನ್ನು ಕೆಲವು ಕತೆಗಳು ಮನೋಜ್ಞವಾಗಿ ಬಿತ್ತರಿಸುತ್ತವೆ.

ಸಂವೇದನೆಯ ಕತೆಗಳು : ಮಾನವ್ಯ ಕವಿಯೆಂದು ವಿಮರ್ಶಕರಿಂದ ಕರೆಸಿಕೊಂಡ ಖ್ಯಾತ ಕವಿ ಬಿ.ಎ.ಸನದಿಯವರ ಕತೆಗಳನ್ನು ಓದಿದಾಗ ಒಂದೇ ಬಗೆಯ ಆನಂದಾನುಭವವನ್ನು ಕೊಟ್ಟ ಮೂರು ಕತೆಗಳು ನನಗೆ ತುಂಬ ಮೆಚ್ಚುಗೆಯಾದವು.

ಕಲ್ಲು ಕೋಲು, ಖಾಸ್ ಮೆಹಮಾನ್, ಹಸನ್ ಚಾಚಾ – ಈ ಮೂರು ಕತೆಗಳನ್ನು ಮುಸ್ಲಿಂ ಸಂವೇದನೆಯ ಕತೆಗಳೆಂದು ಪಟ್ಟಿ ಹಚ್ಚುವುದಕ್ಕಿಂತಲೂ ಅವುಗಳನ್ನು ಒಟ್ಟು ಮಾನವ್ಯ ಸಂವೇದನೆಯ ಕತೆಗಳೆಂದು ನಾನು ಸರಳೀಕರಿಸಲು ಇಷ್ಟಪಡುತ್ತೇನೆ. ಮನುಷ್ಯನ ನೋವುಗಳನ್ನೇ ಭಾವಸಂಬಂಧಗಳನ್ನೇ ಜಾತಿ, ಮತ, ಸ್ವಭಾವಗಳ ಆಧಾರದಿಂದ ವರ್ಗೀಕರಿಸಿ ಅವುಗಳಿಗೆ ಸಂಕುಚಿತ ನೆಲೆಯಲ್ಲಿ ದಲಿತ, ಮುಸ್ಲಿಂ, ಸ್ತ್ರೀಸಂವೇದನೆಗಳೆಂದು ಹೆಸರು ಕೊಟ್ಟವರು ಇಂದಿನ ವಿಮರ್ಶಕರೆಂದೇ ಹೇಳಬಹುದು. ಈ ಬಗೆಯ ವರ್ಗೀಕರಣ ಇಂದಿನ ಸಮಾಜ ವ್ಯವಸ್ಥೆಯ ಅಥವಾ ಅವ್ಯವಸ್ಥೆಯ ಪತಿಕ್ರಿಯೆ ಆಗಿ. ಅಗತ್ಯವಾಗಿ ಸಾಹಿತ್ಯದಲಿ ಸೇರಿಸಿಕೊಂಡಿರುವುದು ನಿಜವಾದರೂ ವಿಮರ್ಶಕರು ಇದರ ಅರ್ಥಹೀನ ಪ್ರಮೋಶನ್‌ಗೆ ಕಾರಣವಾಗಿದ್ದಾರೆ. ಕೆಲವು ಲೇಖಕರೂ ಇಂದಿನ ಬರವಣಿಗೆಯಲ್ಲಿ ತಮ್ಮನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳುವ, ತಮ್ಮ ಸಂವೇದನೆಗೆ ಹೆಸರು ಸ್ವರೂಪಗಳನ್ನು ಕೊಡುವ ಪ್ರಯತ್ನವನ್ನೇ ಮಾಡುವುದುಂಟು. ಈ ಪ್ರಯತ್ನ ವಿಮರ್ಶಕರನ್ನೂ ಓದುಗರ ಒಂದು ವರ್ಗವನ್ನೂ ಆಕರ್ಷಿಸುವ ಉದ್ದೇಶದಿಂದಲೂ ಕೂಡಿರುತ್ತದೆ. ಆದರೆ ಸಾಹಿತ್ಯದ ಮುಖ್ಯ ಪ್ರವಾಹದಲ್ಲಿ ಈ ಬಗೆಯ ‘ಸಂವೇದಕ ವರ್ಗೀಕರಣ’ಕ್ಕೆ ಸ್ಥಾನವಿದೆಯೆ ಎಂಬುದು ಶೋಧಿಸಬೇಕಾದ ವಿಷಯ.

‘ಸನದಿಯವರಲ್ಲಿ ಒಬ್ಬ ಒಳ್ಳೆಯ ಕತೆಗಾರನಿಗೆ ಅತ್ಯವಶ್ಯವಾದ ಅನುಭವ ಸಾಮಗ್ರಿ ಮತ್ತು ಆಕರ್ಷಕವಾಗಿ ಕತೆ ಹೇಳುವ ಕಲೆ ಸಮೃದ್ಧವಾಗಿದೆ’ ಎಂದು ಪ್ರಸಿದ್ಧ ವಿಮರ್ಶಕ ಡಾ. ಜಿ.ಎಸ್.ಅಮೂರ ಹೇಳಿದ್ದನ್ನು ನಾನು ಒಪ್ಪುತ್ತೇನೆ. ಅವರ ಸ್ವಾನುಭವ ಮತ್ತು ಸರಳ ಸುಂದರ ಭಾಷೆ ಕತೆಯನ್ನು ತಡೆಯಿಲ್ಲದೆ ಬೆಳೆಸಿಕೊಂಡು ಹೋಗುತ್ತದೆ. ಈ ಎರಡು ಅವಶ್ಯಕತೆಗಳಿಗಾಗಿ ಅವರು ಬರವಣಿಗೆಯನ್ನು ನಿಧಾನಿಸಿ ಯೋಚನೆ ಮಾಡಬೇಕಾಗಿಲ್ಲ ನಿರಾತಂಕವಾಗಿ, ಕತೆ ದ್ರುತಗತಿಯಿಂದ ಮುಂದೆ ಸಾಗುತ್ತದೆ. ಅದು ಬೆಳೆದು ಮುಂದಕ್ಕೆ ನೀಳ್ಗತೆಯ ಅಥವಾ ಕಿರುಕಾದಂಬರಿಯ ಸ್ವರೂಪವನ್ನು ತಾಳುವುದೋ ಎಂಬ ಅನುಮಾನವನ್ನು ಓದುಗರಲ್ಲಿ ಹುಟ್ಟಿಸುವ ರೀತಿಯಲ್ಲಿ. ಈ ಗುಣ ಸಂಪತ್ತನ್ನು ಸನದಿಯವರು ಹೆಚ್ಚು ಕತೆಗಳನ್ನು ಬರೆಯಲು ವಿನಿಯೋಗಿಸಬಹುದಿತ್ತೆಂದು ಕಾಣುತ್ತದೆ. ಅದರೆ ಅವರು ಜನ್ಮ ಜಾತ ಕವಿ. ಒಂದು ಕತೆಯಲ್ಲಿ ಹೇಳುವುದನ್ನು ಹತ್ತು ಕವಿತೆಗಳಲ್ಲಿ ಹೇಳಬಲ್ಲರು. ಅವರ ಕವಿ ಹೃದಯ ಮನುಷ್ಯರಲ್ಲಿ ಹರಡಿಕೊಂಡಿರುವ ಸಂವೇದನೆಯ ತುಣುಕುಗಳನ್ನು ಹೆಕ್ಕಿ ಮಾನವತೆಯ ತಂತುವಿನಲ್ಲಿ ಪೋಣಿಸಬಯಸುತ್ತದೆ. ಈ ಸಂವೇದನೆಗೆ ಜಾತಿಯಿಲ್ಲ. ಮತವಿಲ್ಲ. ಬಣ್ಣವಿಲ್ಲ. ಉದಾ : ಪುಷ್ಕರಿಣಿಯಲ್ಲಿ ಕಾಲು ಜಾರಿ ಬಿದ್ದು ಮುಳುಗುತ್ತಿದ್ದ ಸಯೀದಾಳನ್ನು ಎತ್ತಿದ ಕೈಗಳು ಸಲೀಮನವು. ವೀರೇಂದ್ರನವೂ ಸಹ. ಹಸನ್ಚಾಚಾ-ಶರಣಪ್ಪ ಗೌಡರ ಮೈತ್ರಿ ಆತ್ಮೀಯ ವಿಶ್ವಾಸದ ಬುನಾದಿಯಲ್ಲಿ ನಿಂತದ್ದು. ಮುಸಲ್ಮಾನನೆಂದು ತನ್ನ ಗಂಡ ಒಬ್ಬ ಅಯೋಗ್ಯನಿಗೆ ಎಲ್ಲಿ ಸಹಾಯ ಮಾಡುವನೋ ಎಂಬ ರಶೀದಾಳ ಎಚ್ಚರ ಒಂದೇ ಸಮಾಜದಲ್ಲಿ ಉಸಿರಾಡುವ ವಿವಿಧ ಮನುಷ್ಯರ ಸ್ಪಂದನಗಳು.

ಮುಸ್ಲಿಮ್ ಮಹಿಳೆಯರು ತಮ್ಮ ಪಿತ್ರಾರ್ಜಿತ ಆಸ್ತಿ ಪಾಸ್ತಿಗಳ ವಿಷಯದಲ್ಲಿ ತಮ್ಮ ಒಡಹುಟ್ಟಿದವರಿಂದಲೇ ಹೇಗೆ ವಂಚಿತರಾಗುತ್ತಾರೆಂಬ ಬಗ್ಗೆ ಹಲವೊಂದು ದೃಷ್ಟಾಂತಗಳನ್ನಿತ್ತು ನೆರವಾದ ಮಡದಿಯೊಡನೆ ಪತ್ರಕಾರ ಸಲೀಮ್ ದೂರದ ಪ್ರವಾಸಕ್ಕೆ ಹೊರಟು ತಿರುಗಿ ಬರುವಾಗ ಕಂಡುಂಡ ವಿಶೇಷ ಅನುಭವವೊಂದನ್ನು ಚಿತ್ರಿಸುವ ‘ಖಾಸ್ ಮೆಹಮಾನ್’ ಕತೆಯಲ್ಲಿ ಸನದಿಯವರು ಹೇಳ ಹೊರಟಿರುವ ಸಂಗತಿ ಭಾರತೀಯ ಭಾವೈಕ್ಯತೆಯ ಸಂದರ್ಭದಲ್ಲಿ ತುಂಬಾ ಸೊಗಸಾಗಿದೆ. ಆದರೆ ಸುಂದರ ಸನ್ನಿವೇಶಕ್ಕಾಗಿ ಹಿಂದಿನ ಅನೇಕ ಪುಟಗಳನ್ನು ಓದಬೇಕಾಗುತ್ತದೆ. ದೆಹಲಿಯಿಂದ ತಿರುಗಿ ಹೊರಟಾಗ ಅಜಮೀರದ ಪ್ರಯಾಣದಲ್ಲಿ ಸಯೀದಾ ಮತ್ತು ಸಲೀಮರಿಗೆ ರವೀಂದ್ರನ ಪರಿಚಯವಾಗುತ್ತದೆ. ಅವನು ಅಲ್ಲಿಯ ಸಮಾಜ ಸೇವಕ. ಅವನ ಮತ್ತು ಸ್ನಿಗ್ಧ ಸ್ವಭಾವದ ಅವನ ದೀದಿಯ ಖಾಸ್ ಮೆಹಮಾನರಾಗಿ ಈ ಯುವ ದಂಪತಿಗಳು ಬರುತ್ತಾರೆ. ಖಾಜಾ ಸಾಹೇಬ್ ದರ್ಗಾಕ್ಕೆ ಹೋದ ನಂತರ ರವೀಂದ್ರ ಅವರನ್ನು ಪುಷ್ಕರಣಿಗೂ ಕರಕೊಂಡು ಹೋಗುತ್ತಾನೆ. ಅಲ್ಲಿ ಸಯೀದಾ ಒಂದು ಪಕ್ಕದಲ್ಲಿ ನೀರಿಗೆ ಜಾರಿಬಿದ್ದಾಗ ಇಬ್ಬರೂ ಓಡಿ ಬಂದು ಅವಳನ್ನು ಎತ್ತುತ್ತಾರೆ. ರವೀಂದ್ರ ಮತ್ತು ಅವನ ದೀದಿಯ ಮೆಹಮಾನ್‌ನವಾಜಿ ಅತ್ಯಂತ ಹೃದಯಸ್ವರ್ಶಿಯಾಗಿದೆ. ವಿಶೇಷ ಅತಿಥಿಗಳು ದೇವರೆಂಬ ಭಾವನೆಗಿಂತಲೂ ಈ ಕತೆಯಲ್ಲಿ ಅವರು ಯಾವುದೇ ಜಾತಿ, ಧರ್ಮಗಳ ಭೇದವಿಲ್ಲದ ಆತ್ಮೀಯ ಮನುಷ್ಯರು ಎಂಬ ವಿಚಾರವೇ ಬಂದಿದೆ. ರವೀಂದ್ರ ಅವರನ್ನು ತೀರ್ಥಸ್ಥಾನಗಳಿಗೆ ಕರೆದುಕೊಂಡು ಹೋಗುವಲ್ಲಿ ತೋರಿಸಿದ ಆತ್ಮೀಯತೆ. ಪುಷ್ಕರಣಿಯಲ್ಲಿ ಸಯಿದಾ ಮುಳುಗುವಾಗ ತೋಳು ಹಿಡಿದು ಎತ್ತುವುದರಲ್ಲಿ ಕೋರಿದ ಕಾಳಜಿ ಇವು ಮನುಷ್ಯ ಸಂಬಂಧದ ಎಳೆಗಳು. ಇಂದಿನ ಭಾರತೀಯ ಮನಸ್ಸುಗಳ ಬಿಕ್ಕಟ್ಟನ್ನು ಜೋಡಿಸುವ ಮಂತ್ರ ಇದೇ ಅಲ್ಲವೆ? ಈ ಭಾವನೆಗೆ ಬುದ್ಧಿ ಜೀವಿಗಳು ಬೇರೆ ಬೇರೆ ಬಣ್ಣ ಕೊಡುವುದೇಕೆ? ಅಜಮೀರದ ಅನುಭವಗಳನ್ನು ಹೇಳುತ್ತ “ನಾನಿಂದು ಪುಷ್ಕರಿಣಿಯಲ್ಲಿ ಜಾರಿ ಬಿದ್ದಿದ್ದೆ ದೀದೀ. ಸಲೀಮ್‌ನೊಂದು ಕೈ ರವೀಂದ್ರ ಭಾಯಿ ಒಂದು ಕೈ ಹಿಡಿದೆತ್ತಿ ನನ್ನನ್ನು ಬದುಕಿಸಿದರು. ಎಂದು ಸಯೀದಾ ಪುಷ್ಕರದ ನೀರನ್ನೇ ಕಣ್ಣುಗಳಲ್ಲಿ ತುಂಬಿಕೊಂಡಿದ್ದು ಧನ್ಯತೆಯನ್ನು ವ್ಯಕ್ತಪಡಿಸುವ ಬಗೆಯೇ ಆಗಿದೆ.

‘ಕಪ್ಪು ಕೋಲು’ ಕತೆಯ ಹೆಸರು ನಿವೃತ್ತ ಡಿ.ಐ.ಜಿ.ಸಾಹೇಬರ ಸ್ವಭಾವವನ್ನು ಸಂಕೇತಿಸುತ್ತದೆ. ತನಗಿಂಥ ಅರ್ಧವಯಸ್ಸಿನ ಕಿರಿಯ ಹೆಣ್ಣನ್ನು ಮದುವೆಯಾದಾಗ ಸಂಕೇತಿಸುತ್ತದೆ. ತನಗಿಂತ ಅರ್ಧವಯಸ್ಸು ಕಿರಿಯ ಹೆಣ್ಣನ್ನು ಮದುವೆಯಾದಾಗ ಸಾಲಮಾಡಿದರು. ನಿವೃತ್ತಿ ಜೊತೆಗೆ ಕೆಲವಾರು ಮಕ್ಕಳು ಪಿ.ಎಫ್. ಹಣ ಇನ್ನೂ ಬರಲಿಲ್ಲ. ತಮ್ಮ ಜಾತೀಯ ತರುಣ ತಹಶೀಲದಾರ ಬಂದಾಗ ಸರಕಾರದಿಂದ ಬಾಕೀ ಹಣ ಬರಲು ಅವಕಾಶವಾಯಿತೆಂದು ತಿಳಿದು ವಶೀಲಿ ಹಚ್ಚುವ ಪ್ರಯತ್ನ ಮಾಡುತ್ತಾರೆ. ಬಶೀರನ ಸರಳ ಸ್ವಭಾವದ ಹೆಂಡತಿ ಉಸ್ಮಾನ್ ಸಾಹೇಬರ ಜೀವನದ ಸತ್ಯವನ್ನು ತಿಳಿದು ಕ್ರಮ ತಪ್ಪಿ ನೀವು ನಮ್ಮವರೆಂದು ಸಹಾಯ ಮಾಡಲು ಹೋಗಬೇಡಿ’ ಎಂದು ಎಚ್ಚರಿಕೆ ಕೊಡುವುದರಲ್ಲಿ ಆ ಸಮಾಜದ ಜಾತೀಯ ಪ್ರಜ್ಞೆಗೆ ಪ್ರತಿಯಾಗಿ ನೈತಿಕತೆಯ ಪ್ರಜ್ಞೆ ಸ್ತ್ರೀ ಮನಸ್ಸಿನಲ್ಲಿ ಎಷ್ಟಿದೆ ಎನ್ನುವುದನ್ನು ತಿಳಿಸುತ್ತದೆ. ನಿರೂಪಣೆಯ ಚೌಕಟ್ಟಿನಲ್ಲಿ ಹಳ್ಳಿಗೆ, ಹಳ್ಳಿಯ ವ್ಯಕ್ತಿಗಳ ಸಂಬಂಧಪಟ್ಟ ಅನೇಕ ವಿವರಗಳು ಬರುತ್ತವೆ. ಇಂಥ ವಿವರಗಳು ಮೂರೂ ಕತೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಬರುವುದರಿಂದ ಕತೆಯ ಮುಖ್ಯ ಅಂಶದ ಗಂಭೀರತೆಗೆ ತೊಂದರೆಯಾದಂತಾಗುತ್ತದೆ. ಅಂದರೆ ಕತೆಯಲ್ಲಿ ಒಂದು ಮಹತ್ವದ ಸಂಗತಿಯನ್ನು ಹೇಳಲು ಬಹುದೊಡ್ಡ ಪೀಠಿಕೆಯನ್ನೇ ಕೊಟ್ಟಂತಾಗುತ್ತದೆ. ಕತೆಯ ಹೃದಯಸ್ಪರ್ಶಿ ಗುಣವನ್ನು ಇದು ವಿನಾಕಾರಣ ಕೆಡಿಸುತ್ತದೆನ್ನುವ ಅಭಿಮತ ನನ್ನದು.

‘ಹಸನ್‌ಚಾಚಾ’ದಲ್ಲಿ ಸೊಗಸಾದ ಕಥನ ಹಂದರವಿದೆ. ವಾಚ್ಯವಲ್ಲದ ಉದಾರ ವ್ಯಕ್ತಿತ್ವದಿಂದ ಕೂಡಿದ ಒಬ್ಬ ಹಳ್ಳಿಯ ಮನುಷ್ಯ ಸಮಾಜದ ಮಾನವೀಯ ಸಂಬಂಧಗಳ ವಾತಾವರಣದಲ್ಲಿ ಮತೀಯ ಪಕ್ಷಪಾತದ ಸಣ್ಣತನಕ್ಕೆ ಮಾನವೀಯ ಭಾವನೆಗಳು ಬಲಿಯಾಗುವುದನ್ನು ನೋಡಿ ಸಂಕಟಪಟ್ಟು ಸಾಯುತ್ತಾನೆ. ‘ನಮ್ಮ ಹಸನ್‌ಸಾಬ್ ಈ ಮಸೀದೀ ಕಟ್ಟಡಾ ಕಣ್ಣಾರೆ ನೋಡಿ ಸತ್ತಿದ್ರೆ ನನಗೆ ಸಮಾಧಾನ ಆಗ್ತಿತ್ತು. ಅಂವಾ ಹೋಗಿ ಬಿಟ್ಟ. ಇನ್ನು ನಾನೂ ಹೋಗಾಂವ. ನಾ ಇರೋದರೊಳಗ ಸಮಾಧಿ ಕಟ್ಟಿಸಿ ವರ್ಷಕ್ಕೊಮ್ಮೆ ಅವನ ಪುಣ್ಯತಿಥಿ ಆಚರಿಸೋ ಹಾಂಗ ಮಾಡಬೇಕಪ್ಪ ಲಿಂಗಣ್ಣಾ’ ಎಂದು ಶರಣಪ್ಪ ಗೌಡ ಹೇಳುವುದರಲ್ಲಿ ಹಸನ್‌ ಚಾಚನ ಹಿರಿಮೆಯೇ ಎದ್ದುಕಾಣುತ್ತದೆ. ಮಂದಿರ – ಮಸ್ಜಿದ್‌ಗಳ ವಾದ ಇಲ್ಲಿ ಅಪ್ರಸ್ತುತವಾಗಿ ಕೊನೆಗೆ ‘ಹಸನ್‌ಚಾಚಾ’ನ ಸಾವು ಮನುಷ್ಯರ ಮನಸ್ಸುಗಳನ್ನು ಜೋಡಿಸುವ ಕೆಲಸಮಾಡುತ್ತದೆ. ಉರ್ದು ಪತ್ರಿಕೆಯ ವರದಿ, ಮೌಲಾನಾ ಸಾಹೇಬರ ಪ್ರಚೋದಕ ಮಾತುಗಳು ಹಳ್ಳಿಯ ಪರಿಶುದ್ಧ ಬದುಕನ್ನು ಕೆಡಿಸುವಂಥವು. ಹಸನ್‌ಚಾಚಾ ಮತ್ತು ಗೌಡರ ಮೈತ್ರಿಯೇ ಶಾಶ್ವತವಾಗಿ ಉಳಿಯುವಂಥದ್ದು.

ಈ ಮೂರೂ ಕತೆಗಳಲ್ಲಿ ಸನದಿಯವರು ಭಾರತೀಯ ಭಾವೈಕ್ಯ ಮಾನವೀಯ ಸಂಬಂಧಗಳ ಸತ್ವಬಲದಿಂದ ಸಾಧ್ಯವಾಗಬಹುದೆಂಬುದನ್ನು ವ್ಯಕ್ತಪಡಿಸಿದ್ದಾರೆ. ಮನಸ್ಸು ಮಾಡಿದ್ದರೆ ಸನದಿಯವರು ಪ್ರಮುಖ ಕತೆಗಾರರಾಗಬಹುದಿತ್ತು. ಆದರೆ ಕವಿಯಾದರು. ಜೊತೆಗೆ ಕೆಲವು ಉತ್ತಮ ಕತೆಗಳನ್ನೂ ಕನ್ನಡಕ್ಕೆ ಕೊಟ್ಟರೆಂಬುದೇ ಸಮಾಧಾನ. ‘ವಿಜಯ ಕರ್ನಾಟಕ’ ಮತ್ತು ‘ಅಂಕಿತ ಪುಸ್ತಕ’ ಏರ್ಪಡಿಸಿದ್ದ ‘ಯುಗಾದಿ ಕಥಾ ಸ್ಪರ್ದೆ’ಯಲ್ಲಿ ಬಹುಮಾನಿತ ಮತ್ತು ಮೆಚ್ಚುಗೆ ಪಡೆದ ಕೆಲವು ಸೃಷ್ಟಿಶೀಲವಾದ ತಳಮಳವನ್ನು ಹುಟ್ಟಿಸುವ ಕತೆಗಳನ್ನು ಆಯ್ದ ಪ್ರಕಟಿಸಿದ್ದಾರೆ. ಕಥನ ಕಲೆಯ ಮರ್ಮವನ್ನು ಬಿತ್ತರಿಸುವ, ಹೊಸ ಅನುಭೂತಿಗಳನ್ನು ಸೃಷ್ಟಿಸುವ ‘ಚೌಕಟ್ಟಿನಿಂದ ಹೊರ ಬಂದ ಚಿತ್ರಗಳು’ ಎಂಬ ಹೆಸರಿನ ಪುಸ್ತಕದ ಕತೆಗಳು ನಮಗೆ ಸಿಗುತ್ತವೆ. ದೀಪಾವಳಿ ಮತ್ತು ಯುಗಾದಿಯ ಪತ್ರಿಕಾ ಸ್ಪರ್ಧೆಗಳು ನೂರಾರು ಉತ್ತಮ ಕತೆಗಳನ್ನು ಆಹ್ವಾನಿಸಿ ಕಥಾಪರಂಪರೆಯನ್ನು ಅರ್ಥಪೂರ್ಣವಾಗಿ ಮುಂದುವರಿಸುತ್ತಿವೆ. ಈ ಸಂಗ್ರಹದ ‘ಚೌಕಟ್ಟಿನಿಂದ ಹೊರ ಬಂದ ಚಿತ್ರಗಳು’ (ಸುಮಂಗಲಾ ಚಾದರದಿನ್ನಿ) ‘ಕಾಡನಡುವಿನ ಮಳೆ’ (ಚ.ಹ.ರಘುನಾಥ) ‘ಪ್ರಾಣಪಕ್ಷಿಯ ತೊಟ್ಟಿಲು’ (ಮೊಗಳ್ಳಿ ಗಣೇಶ) ‘ಕಿರೀಟ’ (ಜಯಶ್ರೀ ಕಾಸರವಳ್ಳಿ) ‘ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು’ (ಎಸ್.ದಿವಾಕರ) ಇಂಥಾ ಇನ್ನೂ ಕೆಲವು ಕತೆಗಳು ಕಥನದ ಅನುಭೂತಿಯನ್ನು ಹಾಗೂ ಜೀವಿಯ ತೊಡಕುಗಳನ್ನು ವಿವರಿಸುವಲ್ಲಿ ಸಾರ್ಥಕತೆಯನ್ನು ಪಡೆಯುತ್ತವೆ. ಇಲ್ಲಿಯ ಕೆಲವು ಕತೆಗಳು ‘ಲವಲವಿಕೆಯ ಬಹುಮುಖ ಧ್ವನಿ’ಗಳಿಂದ ಕೂಡಿವೆ.

ಆಕಾಶಕ್ಕೊಂದು ಏಣಿ ಅನುಜಯಾ ಎಸ್. ಕುಮಟಾಕರ್ ತಾನೊಬ್ಬ ಒಳ್ಳೆಯ ಕತೆಗಾರ್ತಿ ಎನ್ನುವುದನ್ನು ಸಿದ್ಧಪಡಿಸಿದ್ದಾರೆ. ಈ ಸಂಕಲನದ ‘ಪೊಕ್ಕಿ’ ‘ಮನಸುಗಳು ಓಡಲಾರೆವು’ ‘ಆಕಾಶಕ್ಕೊಂದು ಏಣಿ’ ‘ಪಾರಿಜಾತದ ಗಿಡದಲ್ಲೊಂದು ಒಂಟಿ ಹಕ್ಕಿ’ ‘ಪ್ರೀತಿಯ ಮುಳ್ಳುಗಳು’ ಉತ್ಕೃಷ್ಟವೆನ್ನಿಸಿಕೊಳ್ಳುವ ಕತೆಗಳು. ಅನುಜಯಾ ಅವರಿಗೆ ಕತೆಗಳನ್ನು ಓದುಗರ ಮನ ಮುಟ್ಟುವಂತೆ ಹೆಣೆವ ಪ್ರತಿಭೆ ಇದೆ. ಭಾಷೆ ಪಾರದರ್ಶಕವಾಗಿದೆ.

ಮುಂಬಯಿಯಲ್ಲಿ ಉತ್ತಮ ಕತೆಗಾರರಿದ್ದಾರೆ. ಸತತ ಕತೆಗಳನ್ನು ಬರೆಯುತ್ತಾರೆ. ಕಥಾ ಸಂಕಲನಗಳು ಎಡೆಬಿಡದೆ ಪ್ರಕಟವಾಗುತ್ತವೆ. ಇವರಲ್ಲಿ ನೈಜ ಪ್ರತಿಭೆ ಉಳ್ಳ, ಸುಂದರ ಮನಸ್ಸಿಗೆ ಮುದವನ್ನು ಕೊಡುವ ಕತೆಗಳನ್ನು ಬರೆಯುವವರೂ ಇದ್ದಾರೆ. ನನ್ನ ಗಮನಕ್ಕೆ ಬಂದ ಈಚಿನ ಮೂರು ಸಂಗ್ರಹಗಳ ಕುರಿತು ಒಂದಿಷ್ಟು ಹೇಳಬೇಕಾಗಿದೆ.

ಕೆ.ಟಿ.ವೇಣುಗೋಪಾಲ ಅವರ ‘ದೇವಕಿಯಮ್ಮನ ತರವಾಡು ಮನೆ’ : ಈ ಸಂಗ್ರಹದ ಕತೆಗಳಲ್ಲಿ ಮಣ್ಣಿನ ಪರಿಮಳವನ್ನು ಹರಡುವುದರ ಜೊತೆಗೆ ತನ್ನ ಕರ್ಮಭೂಮಿಯ ಸಂವೇದನೆಗಳ ಸಂಬಂಧವನ್ನೂ ತುಂಬಾ ಲವಲವಿಕೆಯಿಂದ ಸಮರ್ಥವಾಗಿ ಕೆ.ಟಿ.ಹೇಳಿದ್ದಾರೆ. ವೇಣುಗೋಪಾಲರು ಖ್ಯಾತ ಪತ್ರಕರ್ತರು. ಅಪಾರ ಅನುಭವ, ಪ್ರೀತಿ ಇದ್ದವರು. ಮನಸ್ಸು ಮಾಡಿದರೆ ಕನ್ನಡಕ್ಕೆ ಇನ್ನಷ್ಟು ಒಳ್ಳೆಯ ಕತೆಗಳನ್ನು ಕೊಡಲಿಕ್ಕೆ ಸಾಧ್ಯವಿದೆ.

ಮುಂಬಯಿ ಲೇಖಕರ ರೋಚಕ ಕಥೆಗಳು : ಕನ್ನಡ ಸಾಹಿತ್ಯ ಪರಿಷತ್ತು ಮುಂಬಯಿ ಶಾಖೆಯವರು ಪ್ರಕಟಿಸಿದ ಮುಂಬಯಿ ಕತೆಗಾರರ ರೋಚಕ ಕತೆಗಳ ಸಂಗ್ರಹ. ಈ ಹೊತ್ತಗೆಯಲ್ಲಿ ಆಯ್ದ ಕತೆಗಳು ನಿರ್ಣಾಯಕವಾಗಿಯೂ ಅನುಭವದ ವಿವಿಧ ಮಗ್ಗಲುಗಳನ್ನು ಸೂಕ್ಷ್ಮ ಭಾವಗಳೊಂದಿಗೆ ಮೇಳೈಸಿ ಬರೆದಂಥವು. ಕರ್ನಾಟಕದ ಯಾವ ಕತೆಗಳಿಗೂ ಸಾಟಿಯಾಗಿ ನಿಲ್ಲುವ ಯೋಗ್ಯತೆಯನ್ನು ಪಡೆದವು ಆಗಿವೆ.

ಡಾ. ರಘುನಾಥ ಅವರ ಪ್ರಕಾರ ಪರಿವರ್ತನೆಯ ಮೂರು ನೆಲೆಗಳಿವೆ. ವೈಯಕ್ತಿಕ ನೆಲೆ; ಕೌಟುಂಬಿಕ ಹಾಗೂ ಸಾಮಾಜಿಕ ನೆಲೆ. ವೈಯಕ್ತಿಕ ನೆಲೆಯಲ್ಲಿ ತಲ್ಲಣ, ಕೌಟುಂಬಿಕ ನೆಲೆಯಲ್ಲಿ ಸಂಘರ್ಷ ಮತ್ತು ಪಲ್ಲಟ ಹಾಗೂ ಸಾಮಾಜಿಕ ನೆಲೆಯಲ್ಲಿ ಉಂಟಾಗುವ ಸಾಮಾಜಿಕ ಸ್ಫೋಟ ಇವುಗಳ ವಿಭಿನ್ನ ಆವರಣಗಳನ್ನು ತೆರದಿಡುವ ಈ ಸಂಗ್ರಹದ ಕತೆಗಳು ಅನನ್ಯವಾಗಿವೆ. ನಿಜವಾದ ಅರ್ಥದಲ್ಲಿ ಕನ್ನಡದ ಕಥಾಲೋಕಕ್ಕೆ ಇದೊಂದು ಅಪೂರ್ವ ಕೊಡುಗೆ. ಹೊರನಾಡಾದ ಮುಂಬಯಿಯ ಮಹಿಳಾ ಕಥೆಗಾರರು ತುಂಬಾ ಪ್ರತಿಭಾವಂತರು. ಇದನ್ನು ಸಾಕ್ಷಿಭೂತಗೊಳಿಸುವ ಕಥಾಸಂಗ್ರಹ ‘ಕತೆಹೇಳೇ…’ ಎನ್ನುವ ಕೃತಿ. ‘ಸೃಜನಾ’ ಕನ್ನಡ ಲೇಖಕಿಯರ ಬಳಗ, ಮುಂಬಯಿ ಇವರು ಪ್ರಕಟಿಸಿದ ಒಂದು ಮಹತ್ವದ ಕೃತಿ. ಇಲ್ಲಿ ಕತೆಗಳಲ್ಲಿ ಜೀವನ ಪ್ರೀತಿ, ಲವಲವಿಕೆ, ಅನುಭವಗಳು ಹಾಸು ಹೊಕ್ಕು ನಿರೂಪಣೆಯಲ್ಲಿ ಸುಖ ನೀಡುವ ಅಂಶಗಳು ಸಾಕಷ್ಟು ಇವೆ. ಉತ್ತಮ ಮಟ್ಟದ ಕತೆಗಾರರಾದ ಮಿತ್ರಾ ವೆಂಕಟ್ರಾಜ, ತುಳಸಿ ವೇಣುಗೋಪಾಲ, ಮಣಿಮಾಲಿನಿ., ಸುನೀತಾ ಶೆಟ್ಟಿ ಮೊದಲಾಗಿ ೧೫ ಲೇಖಕಿಯರ ಕತೆಗಳು ಓದುಗರ ಆತುವನ್ನು ಸೆರೆ ಹಿಡಿಯುತ್ತವೆ. ‘ಕನ್ನಡದ ಅತ್ಯುತ್ತಮ ಕತೆಗಳ ಸಾಲಿಗೆ ಸೇರುವ ಯೋಗ್ಯತೆಯುಳ್ಳ ಕತೆಗಳ ಜೊತೆಗೆ ಕತೆ ಬರೆಯುವ ಮೊದಲ ಪ್ರಯತ್ನಗಳಂತೆ ತೋರುವ ಕತೆಗಳೂ ಇಲ್ಲಿ ಸೇರಿವೆ’ ಎನ್ನುವ ಚಿತ್ತಾಲರ ಮಾತಿನಲ್ಲಿ ಸತ್ಯ ಇದೆ. ಕತೆ ಬರೆಯುವ ಇಲ್ಲಿಯ ಪ್ರಯತ್ನದ ಲವಲವಿಕೆಯೇ ಮೆಚ್ಚತಕ್ಕ ಅಂಶ.

ಯಾವ ಭಾಷೆಯ ಕತೆಗಳನ್ನು ಮೀರಿಸುವ ಕತೆಗಳು ಕನ್ನಡದಲ್ಲಿ ಬಂದಿವೆ. ಕನ್ನಡದ ಕಥಾಲೋಕವನ್ನು ಸುತ್ತಿದಂತೆ ಅನರ್ಘ್ಯ ಮುತ್ತು ರತ್ನಗಳು ನಮಗೆ ದೊರೆಯುತ್ತವೆ. ಇವುಗಳನ್ನು ತಮ್ಮ ಮಡಿಲಲ್ಲಿ ಹಾಕಿಕೊಳ್ಳುವ ಮನಸ್ಸು ನಾವು ಓದುಗರಲ್ಲಿರಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಯಕ
Next post ಇರುಳು

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

cheap jordans|wholesale air max|wholesale jordans|wholesale jewelry|wholesale jerseys