ಅಂದು ಚಂದ್ರನೊಂದಿಗೆ ಮದುವೆ. ಗೆಣಕಾತಿ ಗೌರಿಗೆ ಮತ್ತು ಹುಚ್ಚೀರನಿಗೆ ಎಲ್ಲೆಯಿಲ್ಲದ ಆನಂದ. ಶಬರಿಯ ಅಂತರಂಗವನ್ನು ಬಲ್ಲ ಗೌರಿ ಒಂದು ಕಡೆ, ಮೂಕನಾಗಿದ್ದೂ ಮೌನದಲ್ಲೇ ಮಾತು ಮೀಟುವ ಹುಚ್ಚೀರ ಇನ್ನೂಂದು ಕಡೆ. ಹಟ್ಟಿಯಲ್ಲಿ ಹುಚ್ಚೀರನದೊಂದು ಮುರುಕಲು ಗುಡಿಸಲು ಇದೆ- ಅವನ ಬಾಳಿನಂತೆ. ಮೈಮೇಲೆ ಹರಿದ ಅಂಗಿಯಿದೆ- ಅವನ ಹಾದಿಯಂತೆ. ಕೆದರಿದ ಕೂದಲು- ಮನದಾಳದಂತೆ. ಹಿಂದೆ ಮುಂದೆ ಯಾರೂ ಇಲ್ಲದ ಹುಚ್ಚೀರ ಅವರಿವರ ಕೆಲಸ ಮಾಡಿ ಅನ್ನಕ್ಕೆ ಕೈಯ್ಯೊಡ್ಡುವುದನ್ನು ಕಂಡ ಶಬರಿ ತನ್ನ ಮನೇಲೆ ದಿನಾ ಉಂಡು ಹೋಗಲು ಹೇಳಿದ್ದಳು. ಆದರೂ ಈ ಆಹ್ವಾನವನ್ನು ದುರುಪಯೋಗ ಮಾಡಿಕೂಳ್ಳದ ಹುಚ್ಚೀರ ಬೇರೆಯವರ ಕೆಲಸ ಮಾಡೋದು ನಿಲ್ಲಸಲಿಲ್ಲ. ಕಡಗೆ ಶಬರಿ ಗದರಿದಳು. ‘ನೀನು ಅನಾತ ಅಂದ್ಕಾಬ್ಯಾಡ. ನೀನು ಅನಾತ ಅನ್ನಂಗಿದ್ರೆ ನಾನೂ ಅನಾತೇನೆ. ಸುಮ್ಕೆ ನಮ್ಮನೆ ತಾವ್‌ ಬಾ ಉಂಬಾಕೆ” ಎಂದಳು. ಅಂದಿನಿಂದ ಸ್ವಲ್ಪ ಹೆಚ್ಚು ಬರತೂಡಗಿದ್ದ. ಶಬರಿಗೆ ಬಂಗಾವಲಿನಂತೆ ಇದ್ದ. ತಂಗಿಯಂತೆ ಭಾವನೆ ಮಾಡ್ಕೊಂಡು ಅವಳಿಗಾಗಿ ತುಡೀತಾ ಇದ್ದ. ಆದ್ದರಿಂದ ಆತನಿಗೆ ಆನಂದ ಆಗಲೇಬೇಕಲ್ಲವೆ?

ತಿಮ್ಮರಾಯಿ ಗೌರಿಗೆ ಹೇಳಿದ್ದ- ‘ನೋಡಮ್ಮ ನೀನು ಚಿಕ್ಕೋಳಿರಬವ್ದು, ಆದ್ರೆ ನಮ್‌ ಶಬರೀಗೆ, ನೀನೇ ತಂಗಿ, ತಮ್ಮ, ಬಂದು, ಬಳಗ, ಎಲ್ಲಾ ಅಂಬ್ತ ತಿಳ್ಕಂಡು ಮದ್ವೆ ಕೆಲ್ಸ ಮಾಡ್ಬೇಕು ಕಣವ್ವ.”

ಗೌರಿ “ಇದನ್ನೆಲ್ಲ ನಿನ್ತಾವೇಳಿಸ್ಕಬೇಕಾ? ನೀನ್ ಸುಮ್ಮ ನಿಸೂರಾಗ್ ಇದ್‍ಬಿಡು. ನಾನಿವ್ನಿ” ಎಂದು ಹೇಳಿದ್ದನ್ನು ಚಾಚೂ ತಪ್ಪದೆ ನರವೇರಿಸಿದ್ದಳು.

ಇನ್ನು ಪೂಜಾರಪನದು ಒಣದರಬಾರು. ಅದು ಹಂಗೆ, ಇದು ಹಿಂಗೆ ಅಂತ ತಲೆ ಕೆಡಸೋದೇ ಭಾಗ್ಯ ಅಂತ ಭಾವಿಸಿದಂತಿತ್ತು ಆತ. ಚಂದ್ರ ಈತನ ಆದೇಶಗಳಿಗೆ ಸೊಪ್ಪು ಹಾಕೊ ಹಾಗೆ ಕಾಣಲಿಲ್ಲವಾದ್ದರಿಂಂದ ಸಿಡಿಮಿಡಿ ಜಾಸ್ತಿಯಾಗಿತ್ತು.

“ಎಲ್ಡಕ್ಸರ ಕಲ್ತ್ ಬಿಟ್ರೆ ನನ್ನಂಗ್‌ ಮಂತ್ರ ಯೇಳಾಕಾಯ್ತದ” ಎಂದು ಗೂಣಗುವ ಪೂಜಾರಪ್ಪ ಹುಚ್ಚೀರನಿಗೆ ತಮಾಷಯಾಗಿ ಕಾಣ್ತಿದ್ದ.

ಮದುವೆ ಸಮಯ ಬಂದೇ ಬಿಡ್ತು. ಬುಡಕಟ್ಟಿಗೆ ತಕ್ಕಂತೆ ಶಬರಿಗೆ ಅಲಂಕಾರವಾಗಿತ್ತು. ಕುಪ್ಪಸವಿಲ್ಲದ ಸೀರೆ ಉಟ್ಟು ಎದಿ ಮುಚ್ಚಿಕೊಂಡಿದ್ದ ಚೆಲುವೆಗೆ ನಾನಾ ಲೋಹದ ಸರಗಳು; ದಂತದ ಆಭರಣಗಳು. ಕರ್ರನೆ ಕೂದಲಲ್ಲಿ ಕೂತ ಬೆಳ್ಳನೆ ಹೂಗಳು. ಹೊಸ ಓಲೆ, ಮೂಗುತಿ. ಹೊಸ ಆಸೆ ಹೂತ್ತ ಮೂರುತಿ! ಬುಡಕಟ್ಟಿನ ಬೆಳಕಂತೆ ಕಾಣುವ ಚಂದಗಾತಿ!

ಚಂದ್ರ ಸರಳವಾಗಿದ್ದ. ಮದುವೆಯ ಹಿಂದಿನ ರಾತ್ರಿಯೇ ಹೆಣ್ಣಿನ ಹಟ್ಟಿಗೆ ಬಂದು ಹತ್ತಿರದ ಮಂಟಪದಲ್ಲಿ ಬೀಡುಬಿಡಬೇಕು. ಅದರಂತೆ ಬಂದು ಬೀಡು ಬಿಟ್ಟಿದ್ದಾಗಿತ್ತು. ತಾಳಿ ಕಟ್ಟೊ ಸಮಯ ಹತ್ತಿರ ಬರ್ತಾ ಇದ್ದಾಗ ಇವನಿಗೂ ಅದೂ ಇದೂ ಅಲಂಕಾರ ಮಡಲು ಬಂದರು. “ನಂಗೇನೂ ಬೇಡ. ಪಂಚೆ, ಷರಟು ಅಷ್ಟೇ ಸಾಕು” ಎಂದು ಹಟಮಾಡಿ ಗೆದ್ದ. ಕಡೆಗೆ ಹಣೆಗೊಂದು ಬಾಸಿಂಗ ಕಟ್ಟಿಸಿಕೊಳ್ಳಲೇಬೇಕಾಯ್ತು.

ಹೆಣ್ಣಿನ ಮನೆ ಮುಂದಕ್ಕೆ ಕರೆದೊಯ್ಯಲು ವಾಲಗ ಸಮೇತ ಹಣ್ಣಿನ ಕಡೆಯೋರು ಬಂದರು. ಚಂದ್ರ ಹೊರಡಲಿಲ್ಲ. ಸ್ವಲ್ಪ ದೂರ ಹೋಗ್ತಾ ಇದ್ದ; ದಾರಿ ನೋಡಾ ಇದ್ದ; ವಾಪಸ್ ಬರ್‍ತಾ ಇದ್ದ. ಒಟ್ಟಾರ ಚಡಪಡುಸ್ತಾ ಇದ್ದ. ಯಾಕಿಂಗ್ ಮಾಡ್ತಿದ್ದಾನೆ ಅಂತ ಹೆಣ್ಣಿನ ಕಡಯೋರಿಗೆ ಅನುಮಾನ ಬಂತು. ಚಂದ್ರನ ತಾಯಿಗೆ ತಾಕೀತು ಮಾಡಿದರು. ಆಕೆ ಚಂದ್ರನ ಹತ್ತಿರಬಂದು “ಯಾಕೊ ಇಂಗ್ ಮಾಡ್ತಿದ್ದೀಯ? ಏನಾಗೈತೊ ನಿಂಗೆ? ತಾಳಿ ಕಟ್ಟೊವೊತ್ತು ಅತ್ರಕ್ ಬತ್ತಾ ಐತೆ. ಇಂಗೆಲ್ಲ ಮಾಡಿದ್ರೆ ಎಂಗೆ?” ಎಂದು ಗದರಿದಾಗ, “ಬರ್ತೀನ್ ಇರಮ್ಮ. ತಾಳಿ ಕಟ್ಟಾಕ್ ಯಾವ್ ಹೊತ್ತಾದ್ರೇನು. ನಂಗೆ ನನ್ನ ಗಣೆಕಾರ್ರು ಬರ್‍ಬೇಕು. ನಮ್ ಲೀಡರ್ರು ಸೂರ್ಯ ಬರ್‍ಬೇಕು” ಎಂದು ಚಂದ್ರ ಸಮಜಾಯಿಷಿ ನೀಡಿದ. ತಾಯಿ ಬಿಡಲಿಲ್ಲ. “ಹೆಣ್ಣಿನ ಮನಿತಾವ್‌ವೋಗಿ ಅಲ್‌ ಕಾದ್ರಾತು ಬಾ” ಎಂದು ಕರೆದೊಯ್ದರು. ಇದೆಲ್ಲ ಗಮನಿಸಿದ ಹುಚ್ಚೀರ ನಿಟ್ಟುಸಿರುಬಿಟ್ಟ.

ಗಂಡು, ಹೆಣ್ಣಿನ ಮನೆಯ ಹತ್ತಿರ ಬಂದಿದ್ದಾಯಿತು. ಮನೆ ಮುಂದೆಯೇ ತೆರಹಿಡಿದು ತಾಳಿ ಕಟ್ಟಿಸುವ ತಯಾರಿ ನಡೀತು. ಚಂದ್ರ ಚಕ್ಕನೆ ಅಲ್ಲಿಂದ ಹೊರಟ. ಹುಚ್ಚೀರ ಹಿಂದೆಯೇ ಹೋದ. ದೂರದ ದಾರಿ ನೋಡಿದ ಚಂದ್ರನಿಗೆ ನಿರಾಶೆ. ಹುಚ್ಚೀರ ಕೈಹಿಡಿದು ಕರೆತಂದ. ಇಲ್ಲಿ ಪೂಜಾರಪ್ಪ ಸಿಡಿಮಿಡಿಯಾಗಿದ್ದ. “ಇಂಗೆಲ್ಲ ಮಾಡಿದ್ರೆ ನಾನು ಮಂತ್ರ ಯೇಳಾಕೇ ಇಲ್ಲ” ಎಂದ. ಚಂದ್ರ ಸುಮ್ಮನಿರಲಿಲ್ಲ- “ಸದ್ಯ ಅಷ್ಟು ಮಾಡು. ನನ್ನಾರಕ್‌ ನಾನ್‌ ತಾಳಿಕಟ್ತೀನಿ. ನಮ್ಮಿಬ್ರ ಮನಸ್ನಾಗೆ ಆಗ್ಲೆ ಮಂತ್ರ ಹೇಳಿದ್ದಾಗೈತೆ” ಎಂದ. ಪೂಜಾರಪ್ಪ ತಬ್ಬಿಬ್ಬಾದ. ತಿಮ್ಮರಾಯಿ ಕಡೆ ನೋಡಿ “ನಂಗೆ ಇಂಗೆಲ್ಲ ಅವ್ಮಾನ ಮಾಡಿದ್ರೆ ಸರ್ ಕಾಣಾಕಿಲ್ಲ. ಒಸಿ ಬುದ್ದಿಯೇಳು ಈ ಬಡ್ಡೆತ್ಗೆ” ಎಂದ. ತಿಮ್ಮರಾಯಿ ಚಂದ್ರನಿಗೆ “ಯಾಕಪ್ಪ ಅಂಗೆಲ್ಲ ಮಾತಾಡ್ತೀಯ. ಒಳ್ಳೆ ವ್ಯಾಳೇನಾಗೆ ಒಳ್ಳೆ ಮಾತಾಡ್‌ಬೇಕಪ್ಪ” ಎಂದು ಹೇಳಿದಾಗ. “ಅಂಗಲ್ಲ ಮಾಮ, ನಮ್ ಲೀಡರ್ರು ಸೂರ್ಯ ಬರಾತಂಕ ನಾನ್‌ ತಾಳಿಕಟ್ಟಾಕಿಲ್ಲ. ಅದ್ಕೇ ಸ್ವಲ್ಪ ಹೊತ್ತು ಕಾಯ್ದೇಕು” ಎಂದು ಚಂದ್ರ ಒತ್ತಾಯಿಸಿದ. ತಿಮ್ಮರಾಯಿ ಸುಮ್ಮನಾಗಲಿಲ್ಲ. “ತಾಳೀನ ಸರ್‍ಯಾದ್‌ ವ್ಯಾಳೇಗ್‌ ಕಟ್ಬೇಕು ಕಣಪ್ಪ. ಅವ್ರು ತಡವಾಗ್ ಬಂದ್ರೆ, ರಾತ್ರಿ ಹೆಣ್ಣು ಗಂಡು ಕೂಡುಸ್ತೀವಲ್ಲ, ಅವಾಗ ನಿನ್ ಜತ್ಯಾಗಿದ್ದೇ ಇರ್‍ತಾರೆ. ಇವಾಗ್ ಇಂಗೆಲ್ಲ ಆಡ್‌ಬ್ಯಾಡ ಕಣಪ್ಪ” ಎಂದು ಹೇಳಿದಾಗ ಆತ ಅಂಗಲಾಚುತ್ತಿರುವಂತೆ ಕೇಳಿಸಿತು. ಚಂದ್ರ ಸರಿಯೆಂದು ಒಪ್ಪಿದ. ಪೂಜಾರಪನಿಗೆ “ನಿಮ್ ಮಂತ್ರಗಿಂತ್ರ ಜಾಸ್ತಿ ಮಾಡ್‌ ಬ್ಯಾಡ್ರಿ” ಎಂದು ಅವಡುಗಚ್ಚಿ ಹೇಳಿದ. ಪೂಜಾರಪ್ಪ “ಎಲ್ಲಾ ನಂಗೊತ್ತು ಕಣ್ಲಾ” ಎಂಬಂತೆ ನೋಡಿದ.

ಮದುವಯಾಮಯಿತು.

ಚಂದ್ರನ ಚಡಪಡಿಕೆ ನಿಲ್ಲಲಿಲ್ಲ. ತನ್ನ ಗೆಳೆಯರೊಂದಿಗೆ ಬಂದೇ ಬರುವುದಾಗಿ ಹೇಳಿದ್ದ ಸೂರ್ಯ ಬಂದಿರಲಿಲ್ಲ.

ಸೂರ್ಯ, ಚಂದ್ರನಿಗೆ ಮಾರ್ಗದರ್ಶಿಯಾಗಿ ಮಾರ್ಪಟ್ಟಿದ್ದ. ಇವರ ಪರಿಚಯ ಹಳೆಯದೇನೂ ಅಲ್ಲ. ತೀರಾ ಇತ್ತೀಚಿನದು. ಒಮ್ಮೆ ಬೆಟ್ಟ ಗುಡ್ಡಗಳ ನಡುವೆ ಇದ್ದಕ್ಕಿದ್ದಂತ ಕಾಣಿಸಿಕೊಂಡ ಸೂರ್ಯ, ತನ್ನ ಗೆಳೆಯರೊಂದಿಗೆ ಚಂದ್ರನ ಪರಿಚಯ ಮಾಡಿಕೊಂಡ. ಬುಡಕಟ್ಟುಗಳ ಸ್ಥಿತಿಗತಿ ತಿಳಿದುಕೊಂಡ. ತಮ್ಮ ಜೊತೆ ಕೆಲಸ ಮಾಡುವಂತೆ ಚಂದ್ರನ ಮನವೊಲಿಸಿದ. ಅಂದಿನಿಂದ ಚಂದ್ರ ಬೇರೆ ವ್ಯಕ್ತಿಯೇ ಆಗಿದ್ದ. ಆಗಾಗ್ಗೆ ಹಟ್ಟಿ ಬಿಟ್ಟು ಹೋಗುತ್ತಿದ್ದ. ಬಂದವನು ಬುಡಕಟ್ಟಿನೋರು ಹೇಗೆ ಬಾಳಬೇಕು ಅಂತ ಹೇಳ್ತಾ ಇದ್ದ. ಊರ ಒಡೆಯರನ್ನು ಕಂಡ್ರೆ ಸಿಡುಕ್ತಾ ಇದ್ದ. ಇವೆಲ್ಲದರ ಆರಂಭದ ದಿನಗಳಲ್ಲೇ ಈ ಮದುವೆ ಆಗಿತ್ತು.

ರಾತ್ರಿ ವೇಳಗಾದರೂ ಸೂರ್ಯ ಬರಬಹುದೆಂದು ಚಂದ್ರ ನಿರೀಕ್ಷಿಸಿದ. ತಾನು ಚಂದ್ರ-ರಾತ್ರಿಯ ರಾಜ. ಆತ ಸೂರ್ಯ-ಹಗಲಿನ ಒಡೆಯ. ಆದರೆ ಆತ ತನ್ನನ್ನು ಭೇಟಿ ಮಾಡಲು ಬಯಸ್ತಾ ಇದ್ದದ್ದು ಮಾತ್ರ ರಾತ್ರಿ ಹೂತ್ತಿನಲ್ಲೇ. ಇದು ಮೊದಮೊದಲು ಆಶ್ಚರ್ಯ ತಂದಿತ್ತಾದರೂ ಆಮೇಲೆ ಚಂದ್ರನಿಗೆ ಅರಿವಾಯಿತು- ಸೂರ್ಯನ ಭೇಟಿ ರಾತ್ರಿ ಹೊತ್ತೇ ಸರಿ- ಅಂತ.

ರಾತ್ರಿಯಾಯಿತು.

ಹೆಣ್ಣು-ಗಂಡನ್ನು ಕೂಡಿಸಿ ಆರತಿ ಬೆಳಗುವ ಆಚರಣೆ. ಆಗ “ಮುಯ್ಯಿ ಕೊಡೋರೆಲ್ಲ ಕೊಡಬಹುದು. ಕೆಲವರು ಬಟ್ಟೆ ಕೊಡುಗೆ ಕೊಡ್ತಿದ್ದರು. ಇನ್ನು ಕೆಲವರು ಹಣ ತಟ್ಟೇಲಿ ಇಟ್ಟು ಕೊಡೋರು. ತಮಗೆ ಇಷ್ಟವಾದ “ಮುಯ್ಯಿ” ಒಪ್ಪಿಸೋಕೆ ಇದೇ ಸಂದರ್ಭ. ಹಂಡತಿ ಪಕ್ಕದಲ್ಲಿ ಕೂತಿದ್ದರೂ ಚಂದ್ರನಲ್ಲಿ ಚಡಪಡಿಕೆ.

ಬಿಳದಿಂಗಳ ತಂಪಿನ ಬದಲು ಚಂದ್ರನಿಗೆ ಬಿಸಿಲಿನ ಬೇಗೆ.
ಮೇಲ್ನೋಟಕ್ಕೆ ನಗೆಯಿದ್ದರೂ ಒಳಗೆಲ್ಲ ಹೂಗೆ.
ಉಸಿರು ಕಟ್ಟುತ್ತಿರುವ ಮನಸ್ಥಿತಿ.
ಹಗ್ಗದ ಕುಣಿಕೆಯಲ್ಲಿ ಸಿಕ್ಕಿಬಿದ್ದ ನಿರೀಕ್ಷೆಯ ನೋಟ.

ಚಂದ್ರ ಮೇಲೇಳಲು ತವಕಿಸಿದ. ಶಬರಿ ಭದ್ರವಾಗಿ ಕೈಹಿಡಿದುಕೊಂಡಳು. ಚಂದ್ರ ಆಕೆಯ ಮುಖ ನೋಡಿದ. ಏಳುವುದು ಬೇಡ ಎಂಬ ಬೇಡಿಕೆ ಮನೆ ಮಾಡಿತ್ತು. ಚಂದ್ರ ಕೂತಿದ್ದ ಕಟ್ಟೆಯನ್ನು ಬಿಟ್ಟು ಏಳಲಿಲ್ಲ. ಹತ್ತಿರದಲ್ಲೇ ಇದ್ದ ಹುಚ್ಚೀರನನ್ನು ಸನ್ನೆ ಮಾಡಿ ಕರೆದ. ಆ ಕಡೆ ಹೋಗಿ ತನ್ನ ಗೆಳಯರು ಬರುತ್ತಿದ್ದಾರೆಯೆ ನೋಡುವಂತ ಸನ್ನೆಯಲ್ಲೇ ಹೇಳಿದ. ಹುಚ್ಚೀರ ಹೋದ. ನಿಂತ; ನೋಡಿದ; ಚಡಪಡಿಸಿದ- ಚಂದ್ರನಂತೆ. ಯಾರೂ ಬರಲಿಲ್ಲ- ದೂರದಲ್ಲಿ ಯಾರೋ ಲಾಟೀನು ಹಿಡಿದು ಬರುತ್ತಿರುವುದು ಕಾಣಿಸಿತು. ಓಡಿ ಬಂದ. ಚಂದ್ರನಿಗೆ ಸನ್ನೆ ಮಾಡಿ ಹೇಳಿದ.

ಚಂದ್ರ ಸಂತೋಷಗೊಂಡ; ನಿರಾಳವಾದ; ಬೆಳದಿಂಗಳಾದ.
ಶಬರಿಗೆ ತಂಗಾಳಿಯಾದ.
ಲಾಟೀನು ಹಿಡಿದವರು ಬಂದರು.
ಪೂಜಾರಪ್ಪ ಸಂಭ್ರಮಿಸಿದ.
ಚಂದ್ರ ದಿಗ್ಭ್ರಮೆಗೊಂಡ.
ಹುಚ್ಚೀರ ಬೆಪ್ಪಾಗಿ ತಲೆತಗ್ಗಿಸಿದ.
ಎಲ್ಲರೂ ಎದ್ದು ವಿಂತರು.
ಚಂದ್ರ ಕೂತಲ್ಲೇ ಕೂತು ನಿರಾಶೆಯನ್ನು ನುಂಗಿಕೂಂಡ.

ಇವರು ಬರುವ ವೇಳಗಾದರೂ ಸೂರ್ಯ ತನ್ನ ಸಹಾಯಕ್ಕೆ ಬರಬೇಕೆಂದು ನಿರೀಕ್ಷಿಸಿದ್ದ. ಸೂರ್ಯ ಬರಲಿಲ್ಲ. ಆತನ ಬದುಕೇ ಅಡ್ಡಿ ಆತಂಕಗಳ ಗುಡ್ಡೆ. ಏನಾಯಿತೊ ಏನೊ? ಈಗ ಬಂದಿದ್ದಾರೆ- ಊರ ಒಡೆಯರು!

ಚಂದ್ರ ಯಾವುದನ್ನು ಬೇಡವೆಂದುಕೊಂಡಿದ್ದನೊ, ಯಾವುದನ್ನು ವಿರೋಧಿಸಬೇಕೆಂದುಕೊಂಡಿದ್ದನೊ ಆ ಪ್ರಸಂಗಕ್ಕೆ ಮುನ್ನುಡಿ ಬರೆಯಲು ಊರ ಒಡೆಯರು ಬಂದು ನಿಂತಿದ್ದರು. ಒಬ್ಬ- ನರಸಿಂಹರಾಯಪ್ಪ ಇನ್ನೊಬ್ಬ- ರಾಮಾಜೋಯಿಸ. ಜೂತಗೆ ಬಿಂಗಾವಲ ಭಟರು!

ಚಂದ್ರನಿಗೆ ಕಸಿವಿಸಿ. ಆದರೆ ಬುಡಕಟ್ಟಿನ ಜನಕ್ಕೆ ಖುಷಿ!

ಊರ ಒಡೆಯರ ಪಾದ ತಮ್ಮ ಹಟ್ಟಿಗೆ ಬಂದಿದೆ. ಅದೂ ಹೆಣ್ಣನ್ನು ಸಂಪ್ರದಾಯದಂತೆ ದೇವಸ್ಥಾನಕ್ಕೆ ಆಹ್ವಾನಿಸುವುದಕ್ಕೆ. ರೇಷ್ಮ ಸೀರೆ, ಕುಪ್ಪಸದ ಬಟ್ಟೆ, ವೀಳ್ಯದೆಲೆ, ಅರಿಸಿನ ಕುಂಕುಮಗಳನ್ನು ತಟ್ಟೆಯಲ್ಲಟ್ಟು ಹೆಣ್ಣಿಗೆ ಒಪ್ಪಿಸಿ ದೇವಾಲಯಕ್ಕೆ ಬಂದು ಮೊದಲ ರಾತ್ರಿಯನ್ನು ದೇವರ ಜೊತೆ ಕಳೆಯಬೇಕೆಂದು ಕೇಳಿಕೊಳ್ಳುವುದಕ್ಕೆ.

ಹೌದು; ಇದೊಂದು ಸಂಪ್ರದಾಯ. ಲಾಗಾಯ್ತಿಂದ ಈ ಬುಡಕಟ್ಟಿನವರು ನಡೆಸಿಕೊಂಡು ಬಂದ ಪದ್ಧತಿ. ಹಿಂದೆ ರಾಜರ ಕಾಲದಿಂದಲೂ ಈ ಪದ್ಧತಿ ಇದೆಯೆಂದು ಪ್ರತೀತಿ. ಆಗ ಸ್ವತಃ ರಾಜನೇ ಮಂತ್ರಿ ಸಮೇತ ಬಂದು ಬುಡಕಟ್ಟಿನ ಹೆಣ್ಣನ್ನು ಹೀಗೆ ಆಹ್ವಾನಿಸುತ್ತಿದ್ದನಂತೆ. ಮದುವೆಯಾದ ಬುಡಕಟ್ಟಿನ ಹೆಣ್ಣು ತನ್ನ ಮೊದಲ ರಾತ್ರಿಯನ್ನು ದೇವಾಲಯದಲ್ಲಿ ಕಳೆಯಬೇಕು. ಅಲ್ಲಿ ಗರ್ಭಗುಡಿಯಿಂದ ಬರುವ ದೇವರಿಗೆ ತನ್ನನ್ನು ಒಪ್ಪಿಸಿಕೂಳ್ಳಬೇಕು. ಮೊದಲ ರಾತ್ರಿಯನ್ನು ದೇವರೊಂದಿಗೆ ಕಳೆದ ಮೇಲೆ ಗಂಡನೊಂದಿಗೆ ಸಂಸಾರ. ಇದು ಹಿಂದಿನಿಂದ ನಡೆದುಕೂಂಡು ಬಂದ ನಂಬಿಕೆ. ದೇವಾಲಯಕ್ಕೆ ಹೋಗಿ ಬಂದ ಹೆಣ್ಣುಗಳೆಲ್ಲ ಗರ್ಭಗುಡಿಯಿಂದ ದೇವರು ಬಂದಂತಾಯ್ತು; ತನ್ನೊಂದಿಗೆ ಮಲಗಿ ಸುಖ ಕೊಟ್ಟಿದ್ದಾಯ್ತು. ದೇವರ ಕೃಪೆ ತನ್ನ ಮೇಲೆ ಬಿತ್ತು-ಎಂದೇ ಹೇಳುತ್ತಿದ್ದರು. ಹಿಂದಿನ ರಾಜವಂಶದ ಈಗಿನ ಕುಡಿ ಎಂದು ಹೇಳಿಕೊಳ್ಳುವ ನರಸಿಂಹರಾಯಪ್ಪ, ಜೋಯಿಸರ ಸಮೇತ ಬಂದು ಹೆಣ್ಣಿಗೆ ಬಾಗಿನ ಕೂಡುತ್ತಾನೆ. ಇದನ್ನು ಬುಡಕಟ್ಟಿನ ಜನರು ತಮಗೆ ಸಲ್ಲುವ ಗೌರವವೆಂದೇ ಭಾವಿಸಿಕೊಳ್ಳುತ್ತಾರೆ. ಈ ಪದ್ಧತಿಯ ಸತ್ಯಾಸತ್ಯತೆಯ ಶೋಧ ಅವರಿಗೆ ಬೇಕಾಗಿಲ್ಲ. ಯಾಕೆಂದರೆ ಇದು ಅವರಮಟ್ಟಿಗೆ ದೈವಕೃಪೆ! ದೇವರ ಕರುಣೆ!

ದೇವರ ಪ್ರತಿನಿಧಿಯಾಗಿ ಅಂದು ರಾಜ; ಇಂದು ನರಸಿಂಹರಾಯಪ್ಪ!

ಇದಕ್ಕೆ ಸಾಕ್ಷಿಯಾಗಿ ಅಂದು ಮಂತ್ರಿ; ಇಂದು ಜೋಯಿಸ!

ಈ ಪದ್ಧತಿಯನ್ನು ತನ್ನ ಮದುವೆಯ ಸಂದರ್ಭದಲ್ಲಿ ವಿರೋಧಿಸಬೇಕೆಂಬ ಅಭಿಲಾಷೆ ಚಂದ್ರನದು. ಅದಕ್ಕಾಗಿ ಸೂರ್ಯನ ಸಹಾಯ ಕೇಳಿದ್ದ.

ಚಂದ್ರನ ಆಸೆಯಂತೆ ಸೂರ್ಯ ಬರಲಿಲ್ಲ!
ಪದ್ಧತಿಯ ಪ್ರಾರಂಭಕ್ಕೆ ಅಡ್ಡಿಯಾಗಲಿಲ್ಲ.
ಚಂದ್ರ, ಚಡಪಡಿಕಯಲ್ಲಿ ಜರ್ಝರಿತನಾದ.

ನರಸಿಂಹರಾಯಪ್ಪ ಶಬರಿಗೆ ಸೀರೆ ಕೊಡುವಾಗ ತಡೆಯಬೇಕಂದುಕೊಂಡ. ಯಾಕೊ ತಾನೂಬ್ಬ ಒಂಟಿ ಎನ್ನಿಸಿತು. ಉರಿಯುತ್ತಲೇ ಒಳಗೆ ಬೂದಿಯಾಗುವ ಅನುಭವ. ಬೂದಿಯಿಂದ ಎದ್ದು ಬರಬೇಕು ಎಂದು ಕೊಳ್ಳುತ್ತಿರುವಾಗ ಶಬರಿ ಎದ್ದಳು; ನರಸಿಂಹರಾಯಪ್ಪ ಮತ್ತು ಜೋಯಿಸರ ಪಾದಗಳಿಗೆ ನಮಸ್ಕರಿಸಿದಳು. ಚಂದ್ರ ಮುಖ ತಿರುಗಿಸಿಕೊಂಡು ಕೂತ. ಪೂಜಾರಪ್ಪ ಇದನ್ನು ಗಮನಿಸಿ ಹೇಳಿದ- “ಚಂದ್ರ, ಒಡೇರ್ ಕಾಲ್ಗೆ ನೀನೂ ಬೀಳ್‍ಬೇಕು.”

ಚಂದ್ರ ಉರಿದು ಮುಕ್ಕುವಂತೆ ನೋಡಿದ.

“ಎನ್ ಅಂಗ್ ನೋಡ್ತೀಯ? ಲಾಗಾಯ್ತಿಂದ ನಡ್ಕಂಡ್‌ ಬಂದಿರಾದ್ನ ಬಿಡಾಕಾಗಲ್ಲ. ಕಾಲಗ್‌ ಬೀಳು”- ಪೂಜಾರಪ್ಪ ಒತ್ತಾಯಿಸಿದ.

“ಬೀಳಲ್ಲ ಅಂದ್ರೆ ಏನ್ ಮಾಡ್ತೀಯ”
-ಚಂದ್ರ ಸ್ಫೋಟಗೊಂಡ.
ಎಲ್ಲರೂ ಒಂದು ಕ್ಷಣ ತಬ್ಬಿಬ್ಬಾದರು.
ಆದರೆ ಪೂಜಾರಪ್ಪ ಸುಮ್ಮನಿರಲಲ್ಲ. ಸಿಡಿದು ನುಡಿದ-
“ನೀನ್ ಇಂಗೆಲ್ಲ ಮಾತಾಡಿದ್ರೆ ರಕ್ತ ಕಾರ್‍ಕಂಡು ಸತ್ತೋಗ್ತೀಯ”
“ಕಟ್ಕೊಂಡ್ ಹೆಂಡ್ತೀನ ಕಂಡೋರ್‌ ಮಗ್ಗಲಾಗ್‌ ಮಲುಗ್ಸಾ ಬದ್ಲು ಒಟ್ಟಿಗೇ ಸಾಯೋದೆ ವಾಸಿ”- ಚಂದ್ರ ಎದುರಾಡಿದ.

“ದ್ಯಾವ್ರನ್ನೇ, ಕಂಡೋರ್‌ ಗಿಂಡೋರು ಅಂಬ್ತ ಮಾತಾಡ್ತೀಯಲ್ಲ. ನಿನ್ ನಾಲ್ಗೆ ಸೇದೋಗ”- ಪೂಜಾರಪ್ಪ ಅಬ್ಬರಿಸಿದ.

“ಕಂಡೋರ್ ಹಂಡ್ತೀರ ಜತೆ ಮಲ್ಗೋನು ಅದೆಂಥ ದೇವ್ರು? ಇದೆಲ್ಲ ಮೂಢನಂಬಿಕೆ. ನನ್ ಹಂಡ್ತೀನ್ ನಾನು ದೇವಸ್ಥಾನಕ್ಕೆ ಕಳ್ಸೊಲ್ಲ.”

-ಚಂದ್ರನ ಈ ಮಾತಿನಿಂದ ಎಲ್ಲರೂ ಗರಬಡಿದಂತೆ ನಿಂತರು.

ತಿಮ್ಮರಾಯಿ ಮೆಲ್ಲನೆ ಚಂದ್ರನ ಬಳಿ ಬಂದು ಹೇಳಿದ.

“ಸರ್‍ಯೊ ತಪ್ಪೊ ಲಾಗಾಯ್ತಿಂದ ನಡ್ಕಂಡ್ ಬಂದೈತೆ. ಊರು ಒಡೇರ್ ಮುಂದೆ ಇಂಗೆಲ್ಲ ಮಾತಾಡ್‌ಬ್ಯಾಡ ಮಗ.”

ಚಂದ್ರ ಅದೇ ಸಿಟ್ಟಿನಲ್ಲಿದ್ದ. ಈ ಸಿಟ್ಟು ಆಕಸ್ಮಿಕವಾದದ್ದಲ್ಲ. ಸೂರ್ಯನ ಜೊತೆ ಸೇರಿದ ಮೇಲೆ ಬಂದ ತಿಳುವಳಿಕೆಯಿಂದ ಮೂಡಿದ ಸಿಟ್ಟು.

“ಲಾಗಾಯ್ತಿಂದ ಬಂದೈತೆ ಅಂತ ಕಣ್ಮುಚ್ಚಂಡು ಕಂಡೋರ್‌ ಮಗ್ಗಲೀಗೆ ಮಗಳನ್ನ ಕಳುಸ್ತಿಯೀನು?”

ಚಂದ್ರನ ಪ್ರಶ್ನೆಗೆ ತಿಮ್ಮರಾಯಿ ಸಿಡಿಮಿಡಿಗೊಂಡ-

“ಏನಂಬ್ತ ಮಾತಾಡ್ತೀಯ ನೀನು. ದ್ಯಾವ್ರನ್ನೇ ಕಂಡೋರು ಗಿಂಡೋರು ಅಂಬ್ತಿಯೇನು? ನೀನೇನ್ ದ್ಯಾವ್ರಿಗಿಂತ ದೊಡ್ಡೋನ? ನೀನ್ ಈಟೊಂದೆಲ್ಲ ಮಾತಾಡಿದ್ರೆ ನಾನು ನನ್‌ ಮಗಳನ್ನ ಪೂರ್ತ ದ್ಯಾವ್ರಿಗೇ ಬಿಟ್ ಬಿಡ್ತೀನಿ.”

ಈಗ ಶಬರಿ ಬೆಚ್ಚಿದಳು.

ಮೈಮೇಲೆ ಬಂಕಿ ಬಿದ್ದಂಥ ಅನುಭವ!

“ಏನ್ ಮಾತು ಅಂಬ ಆಡ್ತೀಯಪ್ಪ ನೀನು?”

-ಶಬರಿಯ ಬಾಯಲ್ಲಿ ಈ ಮಾತು ಬಂದದ್ದೇ ತಡ ತಿಮ್ಮರಾಯಿ ತಬ್ಬಿಬ್ಬಾದ.

“ದ್ಯಾವ್ರಿಗ್ ಬಿಡಾಕೆ ನನ್ನ ಏನು ಅಂಬ್ತ ತಿಳ್ಳಂಡಿದ್ದೀಯ?”

ಮಗಳ ಪ್ರಶ್ನಗೆ ಸರಿಯಗಿ ಉತ್ತರ ಕೂಡಲಾಗದ ತಿಮ್ಮರಾಯಿ ತಡವರಿಸುತ್ತ ಹೇಳಿದ- “ಅಂಗಲ್ಲ ಕಣವ್ವ, ಲಾಗಾಯ್ತಿಂದ ನಡ್ಕಂಡ್ ಬಂದಿರಾದ್ನ ಕೈಬಿಟ್ರೆ ಒಂದೋಗಿ ಇನ್ನೊಂದಾದ್ರೆ ಏನವ್ವ ಗತಿ? ಕೈಗ್ ಬಂದಿರಾ ನಿನ್ ಕಳ್ಕಂಡು ನಾನ್ ಜೀವ್ ಸಯ್ತಾ ಇರಾಕಾಯ್ತದೇನವ್ವ? ಅದಕ್ಕೇ ಅಂಗಂದ.”

ನರಸಿಂಹರಾಯಪ್ಪ-ಈಗ ಹುತ್ತದೂಳಗಿನ ಹಾವು.
ಹೂರಬಂದು ಹಡಯೆತ್ತುವುದಕ್ಕೆ ಮುಂಚೆ ಜೋಯಿಸರ ಕಡೆ ನೋಡಿದ.
ರಾಮಾಜೋಯಿಸರು ಕಣ್ಣು ಮಿಟುಕಿಸಿ ಮಾತಾಡಿದರು.-

“ಚಂದ್ರ ಪೇಟಿಗೀಟೆ ಸುತ್ತಿ ಬಂದಿರೊ ಮನುಷ್ಯ. ಮೂಢನಂಬಿಕೆ ಬೇಡ ಅಂತ ಆತ ಹೇಳೋದ್ರಲ್ಲಿ ತಪ್ಪೇನೂ ಇಲ್ಲ. ಆದ್ರೆ ನಂಬಿಕೆಗಳೆಲ್ಲ ತಪ್ಪು ಅಂತ ವಾದ ಮಾಡೋದ್ರಲ್ಲಿ ಸುಖ ಇಲ್ಲ. ಇದು ನೀವು-ಬುಡಕಟ್ಟಿನೋರು ನಡಿಸ್ಕೊಂಡು ಬಂದ ಪದ್ಧತಿ. ಇದನ್ನು ಮೀರಿದ್ರೆ ಏನಾಗುತ್ತೇ ಗೊತ್ತ? ಹಿಂದ ರಾಜರ ಕಾಲ್ದಲ್ಲಿ ಹೀಗೆ ಒಬ್ಬರು ಯಾರೊ ತಪ್ಪಿ ನಡದಿದ್ಕೆ ಕುಂತ್ಕಡೇನೆ ರಕ್ತ ಕಾರ್‍ಕೊಂಡು ಸತ್ತೋದ್ರಂತೆ. ಒಬ್ರಲ್ಲ, ಇಬ್ರಲ್ಲ, ನೂರಾರ್‌ ಜನ. ಅದಕ್ಕೆ ನಿಮ್‌ ಬುಡಕಟ್ಟು ಕರಗೀ ಕರಗಿ ಇಷ್ಟು ಕಡಿಮೆ ಆಗಿದೆ. ಇಷ್ಟರಮೇಲೆ ನಿಮ್ಮಿಷ್ಟ.”

ಈಗ ಪೂಜಾರಪ್ಪ ಅಬ್ಬರಿಸಿದ-
“ಜೋಯಿಸರು ಯೇಳಿದ್‌ ಕೇಳಿಸ್ಕಂಡ್ಯ? ಅವ್ರು ಸುತ್ತೇಳಳ್ಳೀಗೆಲ್ಲ ಜೋಯಿಸ್ರು. ನಾನು ಈ ಹಟ್ಟೀಗ್‌ ಜೋಯಿಸ್ರಿದ್ದಂಗೆ. ನಮ್ ಪದ್ಧತಿ ನಾವ್ ಬಿಡಾಕೀಲ್ಲ.”

“ಹಂಗಂದ್ರಾಗಲ್ಲ, ಶಬರೀನೂ ಒಂದ್ ಮಾತ್ ಕೇಳ್ಬೇಕು” ಎಂದ ಚಂದ್ರ. ಈಗ ಶಬರಿಯ ಸರದಿ.

ಅಪ್ಪ ತಿಮ್ಮರಾಯಿ ಕಡೆ ನೋಡಿದಳು. ಎಲ್ಲವನ್ನೂ ಮೂಕನಾಗಿ ನೋಡುತ್ತಿದ್ದ ಹುಚ್ಚೀರ ಗಾಬರಿಗೊಂಡು ಶಬರಿಯ ಹತ್ತಿರ ಬಂದು ನಿಂತ.

ಗೌರಿ ಮೊದಲೇ ಅಲ್ಲಿ ನಿಂತಿದ್ದಳು. ಶಬರಿಯ ಭುಜವನ್ನು ಹಿಡಿದಿದ್ದಳು. ತಳಮಳವೆಲ್ಲ ತಲೆ ತಗ್ಗಿಸಿದಂತೆ ಶಬರಿ ನೆಲದ ಕಡ ನೋಡುತ್ತ ಹೇಳಿದಳು-

“ಹಿರೇರೆಲ್ಲ ಎಂಗಂಬ್ತೀರೊ ನಾನೂ ಅಂಗೇ”
ಚಂದ್ರ ಕುಸಿದು ಕೂತ.
ಆದರೆ ಕೂಡಲೇ ಚೇತರಿಸಿಕೂಂಡ.

“ಅಸಹಾಯಕನಾದಾಗ ಬರೀ ಆಕ್ರೋಶ ತೋರಿಸಿದ್ರೆ ಪ್ರಯೋಜನ ಇಲ್ಲ. ಮೈ ಪರಚಿಕೊಂಡ್ರೆ ಏನೂ ಸಾಧಿಸೋಕಾಗೊಲ್ಲ. ಸತ್ಯಾನ ನಾವೇ ಖುದ್ದು ಸ್ಥಾಪಿಸ್ಬೇಕು”- ಅಂತ ಸೂರ್ಯ ಹಿಂದೊಮ್ಮ ಹೇಳಿದ್ದನ್ನು ಜ್ಞಾಪಿಸಿಕೂಂಡ.

ಸಿಟ್ಟಿನ ಸಿಂಬೆ ಸುತ್ತಿಟ್ಟು ಸದ್ಯಕ್ಕೆ ಸುಮ್ಮನಾದ.

“ಹಾಗಾದ್ರೆ ಎಲ್ಲಾ ಸಾಂಗೋಪಾಂಗವಾಗಿ ನೆರವೇರಲ” ಎಂದು ಜೋಯಿಸರು ಮಂತ್ರಘೋಷಣೆ ಮಾಡಿದರು.

ನರಸಿಂಹರಾಯಪ್ಪನ ಮೀಸೆಯ ಕಳಗೆ ನಗೆ ಚಿಮ್ಮಿತು.

ಶಬರಿ ತಗ್ಗಿಸಿದ ತಲೆಯನ್ನು ಮೇಲೆತ್ತಲಿಲ್ಲ.

ಆಕೆಯ ಕೈ ಚಂದ್ರನ ಕೈಯನ್ನು ಹಿಡಿದುಕೊಂಡಿತು.

ಹುಚ್ಚೀರ ಚಂದ್ರನ ಹಿಂದೆ ಬಂದು ಭುಜನ ಮೇಲೆ ಕೈಯ್ಯಿಟ್ಟ.

ಚಂದ್ರನ ಒಂದು ಕೈ ಶಬರಿಯ ಕೈಯ್ಯನ್ನು ಹಿಡಿದಿತ್ತು. ಇನ್ನೊಂದು ಕೈ ಹುಚ್ಚೀರನ ಕೈಯನ್ನು ಸಾವರಿಸಿತು.
* * *

ಗಂಡು-ಹಣ್ಣಿನ ಮರವಣಿಗೆ ಗುಡಿಯ ಕಡಗೆ ಹೂರಟಿತು. ಮುಂದೆ ವಾದ್ಯಗೋಷ್ಠಿ. ಅದರ ಹಿಂದೆ ಆರತಿ ಹಿಡಿದ ಹೆಂಗಸರು. ಆನಂತರ ಕೈಹಿಡಿದುಕೊಂಡಿರುವ ಗಂಡು-ಹಣ್ಣು, ಪಕ್ಕದಲ್ಲೇ ಹುಚ್ಚೀರ; ಗೌರಿ ಜೊತೆಗೆ ಪೂಜಾರಪ್ಪ-ತಿಮ್ಮರಾಯಿ. ಪೂಜಾರಪ್ಪನಲ್ಲಿ ವಿಜಯದ ಹೆಮ್ಮೆ. ವಿಕೃತ ಉತ್ಸಾಹ. ತಿಮ್ಮರಾಯಿಯಲ್ಲಿ ತುಂಬಿದ ತಳಮಳ. ಮಾತೇ ಇಲ್ಲದ ಖಿನ್ನತೆ. ಹುಚ್ಚೀರನ ಮುಖದಲ್ಲಿ ದಿಕ್ಕಟ್ಟ ಭಾವ.

ಚಂದ್ರನ ಒಳಗೆ ಕೆಂಡದುಂಡೆಗಳ ಚಂಡಿನಾಟ.
ಶಬರಿಯದು ಭಾವ ಬಿತ್ತಿದ ಯಾಂತ್ರಿಕ ನಡಿಗೆ.
ಆಗಾಗ್ಗೆ ಗೌರಿಯತ್ತ ನೋಟ.
ದೇವರಗುಡಿ ಬಂದೇ ಬಿಟ್ಟಿತು.

ಚಂದ್ರ, ತಡಯಲಾರದೆ “ಯಾಕ್ ಜೋಯಿಸ್ರೆ ರಾಜವಂಶಸ್ಥರು ಬಂದಿಲ್ಲ. ನರಸಿಂಹರಾಯಪನೋರ್‍ನ ಎಲ್ ಬಿಟ್ ಬಂದ್ರಿ?” ಎಂದ.

“ದೇವಸ್ಥಾನದ ಉಸ್ತುವಾರಿ ನಮ್ಬು. ಅವ್ರ್‌ ಬಂದಿರೋದ್ಕೆ ಇದೇನು ಅರಮನೆ ಅಲ್ವಲ್ಲ” ಎಂದು ಒರಟಾಗಿ ಉತ್ತರಿಸಿ, ಉಳಿದೋರ ಕಡೆ ನೋಡಿ “ಸುಮ್ನೆ ಮುಂದಿನ ಕಾರ್ಯನಡ್ಸಿ” ಎಂದರು.

ಶಬರಿ ಭಯದಿಂದ ಗೌರಿಯ ಕಡೆ ನೋಡಿದಳು. ಗೌರಿ ಆರತಿ ಹಿಡಿದಿದ್ದಳು.
ಆರತಿ ಗೀರತಿ ಎಲ್ಲವೂ ಯಾಂತ್ರಿಕವಾಗಿ ನಡೀತು.
ಶಬರಿ, ಚಂದ್ರನ ಕೈಬಿಟ್ಟಳು. ಜೋಯಿಸ ಮತ್ತು ಪೂಜಾರಪ್ಪ ಹೇಳಿದ ಹಾಗೆ ಹಜ್ಜೆ ಮುಂದಿಟ್ಟಳು.
“ಬಲಗಾಲಿಟ್ಟು ಒಳ್ಗಡೆ ಹೋಗಮ್ಮ”
ಶಬರಿ ದೇವರಗುಡಿಯ ಒಳಕಹೋದಳು.
ರಾಮಾಜೋಯಿಸರು ಹೂರಗಿನಿಂದ ಬೀಗ ಹಾಕಿದರು.

“ಇದು ಯಾಕೆ ಹೀಗೆ ಎಂದು ಕೇಳಬೇಕನ್ನಿಸಿದರೂ ಚಂದ್ರ ಸುಮ್ಮನಾದ. ಜೋಯಿಸರೇ ಘೋಷಣೆ ಮಾಡಿದರು- “ನಿಮ್ಗೆಲ್ಲ ಹೇಗಿದ್ರೂ ಗೊತ್ತು. ಬೆಳಗ್ಗೆವರಗೂ ಈ ಗುಡಿ ಕಡೆ ಯಾರೂ ಸುಳೀಬಾರ್‍ದು. ಈ ಆಸು-ಪಾಸಿನಲ್ಲೆ ಯಾರು ಸುಳಿದಾಡಿದ್ರು ರಕ್ತ ಕಾರ್‍ಕೊಂಡ್ ಸಾಯ್ತಾರೆ. ಬೆಳಗ್ಗೆ ಸೂರ್ಯ ಹುಟ್ಟಿದ್‌ಮೇಲೆ ನೀವೆಲ್ಲ ಬನ್ನಿ. ನಿಮ್ ಎದ್ರಿಗೇ ಬೀಗ ತೆಗೀತೀನಿ. ಎಂದಿನಂತೆ ನಿಮ್ ಹೆಣ್ ಮಗಳನ್ನ ನೀವ್ ಕರ್ಕೊಂಡ್ ಹೋಗಿ.”

ಸರಿ; ಎಲ್ಲರೂ ವಾದ್ಯಸಮೇತ ವಾಪಸ್ ಹೂರಟರು.
ಚಂದ್ರ, ತಿರುಗಿ ನೋಡಿದ-
ದೇವರಗುಡಿ ಒಂಟಿಯಾಗಿತ್ತು.
ಒಳಗಿರುವ ಶಬರಿ?
ಚಂದ್ರನಿಗೆ ಊಹಿಸಿಕೊಳ್ಳಲು ಸಾಧ್ಯವಾಗಲಿಲ್ಲ
ಅಸ್ಪಷ್ಟ ಆಸ್ಫೋಟ.
*****