ಶಬರಿ – ೧೩

ಶಬರಿ – ೧೩

ಮದುವೆಗೆ ದಿನ ನಿಗದಿಯಾಯಿತು. ವಿಶೇಷ ಸಿದ್ಧತಯೇನೂ ಇರಲಿಲ್ಲ. ಎಲ್ಲ ಸರಳವಾಗಿ ಆಗಬೇಕೆಂಬುದು ಸೂರ್ಯನ ಅಭಿಪ್ರಾಯ. ಅದಕ್ಕೆ ಎಲ್ಲರ ಒಪ್ಪಿಗೆ. ನವಾಬ-ಗೌರಿಯ ಮನದಾಳದಲ್ಲಿ ಹೊಸ ಹೂದೋಟ. ಆದರೆ ಯಾರೂ ರಾತ್ರಿ ಶಾಲೆಗೆ ತಪ್ಪಿಸಿಕೊಳ್ಳಲಿಲ್ಲ-ಮದುವೆಯ ನಪದಲ್ಲಿ. ಈ ಮದುವೆಯ ಪ್ರಕರಣ ಹಟ್ಟಿಯನ್ನು ಗಟ್ಟಿಯಾಗಿಸಿತ್ತು.

ಪೂಜಾರಪ್ಪ ಮಾತ್ರ ಸಂತೋಷ-ಸಂಕಟಗಳ ವ್ಯತ್ಯಾಸ ಗೊತ್ತಾಗದಂಥ ಅನುಭವದಲ್ಲಿ ಬೆಟ್ಟ, ಗುಡ್ಡ, ತೋಪುಗಳಲ್ಲಿ ಅಲೆದಾಡುತ್ತಿದ್ದ. ಈತನ ಸ್ಥಿತಿಯನ್ನು ಅರ್ಥಮಾಡಿಕೂಂಡವನಂತೆ ಕೆಲವೂಮ್ಮೆ ಹುಚ್ಚೀರ ತನ್ನಾರಕ್ಕೆ ತಾನು ಹಿಂಬಾಲಿಸಿದ. ಮೂಕ ಸಹಚರನಾದ.

ಎಲ್ಲವನ್ನೂ ಗಮನಿಸುತ್ತಿದ್ದ ತಿಮ್ಮರಾಯಿ ಪೂಜಾರಪ್ಪನ ಜೊತ ಮಾತಾಡಿ ಸಮಾಧಾನಿಸಲು ಯತ್ನಿಸಿದ. ಪೂಜಾರಪ್ಪ ಮಾತಾಡಲಿಲ್ಲ.

“ಯಾಕಿಂಗಿದ್ದೀಯ? ಏನಾಗ್ತೈತೆ ನಿಂಗೆ? ಎಂದು ತಿಮ್ಮರಾಯಿ ಪ್ರಶ್ನಿಸಿದ.
“ಏನೂ ಆಗಿಲ್ಲ” ಎಂಬುದನ್ನು ಬಿಟ್ಟರೆ ಪೂಜಾರಪ್ಪ ಮತ್ತೇನೂ ಹೇಳಲಿಲ್ಲ.

ಗೌರಿ, ತನ್ನ ಅಪ್ಪನ ಸ್ಥಿತಿಯನ್ನು ನೋಡುತ್ತ ದುಃಖಿತಳಾದಳು. ಒಮ್ಮೆ ನೇರವಾಗಿ ಹೇಳಿದಳು- “ಯಾಕಪ್ಪ ಇಂಗಿದ್ದೀಯ? ನೀನಿಂಗೇ ಇದ್ರೆ ನಾನೆಂಗಪ್ಪ ಮದ್ವೆ ಆಗ್ಲಿ? ನನ್ನ ಬಯ್ಬೇಕು ಅನ್ನಂಗಿದ್ರೆ ನಾಲ್ಗೆ ನಾಚ್ಕೆಪಟ್ಕಳಾವರ್‍ಗೂ ಬಯ್ದ್‍ಬಿಡು. ಬಾರುಸ್ಬೇಕು ಅನ್ನಂಗಿದ್ರೆ ಕೈ ಸೇದೋಗೋವರ್‍ಗು ಬಾರಿಸ್ಬಿಡು.”

ಆಗ ಪೂಜಾರಪ್ಪ ಬಾಯಿಬಿಟ್ಟು- “ಎಲ್ಲಾನ ಉಂಟೇನವ್ವ ಬಿಡ್ತು ಅನ್ನು. ನಿನ್ ಬಯ್ಬೂ, ಬಾರ್‍ಸಿ ಯಾವ್ ಪುಣ್ಣೇವ್ ಕಟ್ಕಮಾನ? ನಾನ್ಯಾಕಿಂಗಿದ್ದೀನಿ ಅಂಬ್ತ ನಂಗೇ ತಿಳ್ಯಾಕಿಲ್ಲ ಮಗಳೆ. ನನ್ ಮನಸ್ನಾಗೆ ಕೊಳ್ಳಿದೆವ್ವ ಕುಣೀತಾ ಐತೊ ದ್ಯಾವ್ರ್ ದೀಪ ಉರಿತಾ ಐತೊ ಒಂದು ತಿಳ್ಯಾಕಿಲ್ಲ. ನಿನ್ ಬಿಟ್‌ಕೊಡಾಕೂ ಆಗಾಕಿಲ್ಲ; ಆ ಒಡೇರ್ ಎದ್ರಿಗ್ ನಿಂತ್ಕಳಾಕೂ ಆಗಾಕಿಲ್ಲ.” ಎಂದು ಒದ್ದಾಡಿ “ಏನೇ ಆದ್ರೂ ನಿನ್ ಮದ್ವೆ ನಿಲ್ಲಾಕಿಲ್ಲ ನಡ್ಬೇನಡೀತೈತೆ” ಎಂದು ಹೇಳಿ ಎದ್ದುಹೋದ.

ಊರೊಳಗೆ ಹೋಗಿ ಒಡೆಯರು ಮತ್ತು ಜೋಯಿಸರಿಗೆ ಮದುವೆಯ ವಿಷಯ ತಿಳಿಸಬೇಕನ್ನಿಸಿದರೂ ಮನಸ್ಸು ಒಪ್ಪಲಿಲ್ಲ; ಸುಮ್ಮನಾದ.

ಮದುವೆಯ ದಿನ ಬಂದೇಬಿಟ್ಟಿತು.

ಹಟ್ಟಯ ಎಲ್ಲ ಗುಡಿಸಲುಗಳ ಮುಂದೆ ತಳಿರುತೋರಣ. ಅಂಗಳವನ್ನು ಸಗಣಿ ನೀರಲ್ಲಿ ಸಾರಿಸಿ ರಂಗೋಲಿಯಲ್ಲಿ ಸಂತೋಷದ ಸಿಂಗಾರ. ಕಟ್ಟೆಯನ್ನು ಗುಡಿಸಿ ಸಾರಿಸಿ ಚೂಕ್ಕಟ ಮಾಡಿದ ಸಡಗರ.

ಎಲ್ಲರೂ ಸೇರಿದರು. ಶಬರಿ ಗೌರಿಯನ್ನೂ, ಸೂರ್ಯ ನವಾಬನನ್ನೂ ಕರೆತಂದರು. ಹಾರ ಬದಲಾವಣೆ, ಮಾಂಗಲ್ಯಧಾರಣೆ, ಸರಳತೆಯ ಮೂಲಕ ಬದಲಾವಣೆ. ಪೂಜಾರಪ್ಪನ ಕಣ್ಣು ತುಂಬಿತ್ತು. ಮನಸ್ಸು ಮಂತ್ರವಾಗಿತ್ತು. ಬಾಯಿ ಮೌನವಾಗಿತ್ತು. ಆದರೆ ಹೆಣ್ಣುಮಕ್ಕಳ ಬಾಯಿಂದ ಹಾಡು ಹರಿದಿತ್ತು. ಹಟ್ಟಿಯವರ ಆನಂದಕ್ಕೆ ಧಕ್ಕೆಯಾಗದಂತೆ ರಾತ್ರಿ ಗಂಡು-ಹೆಣ್ಣನ್ನು ಕೂಡಿಸುವುದೆಂದು ಮೊದಲೇ ತೀರ್ಮಾನವಾಗಿತ್ತು. ಆಗ ಹೂಚೆಂಡಿನಾಟವನ್ನೂ ಒಳಗೊಂಡಂತೆ ಸಂಭ್ರಮದ ನಿರೀಕ್ಷೆ. ಗಂಡು ಹಣ್ಣು ಒಟ್ಟಿಗೆ ಕೂರುವುದು, ಆರತಿ ಬೆಳಗುವುದು; ಗಂಡು ಹೆಣ್ಣು ಹೂಚ್ಚೆಂಡುಗಳನ್ನು ಪರಸ್ಪರ ಎಸೆಯುವುದು. ಎಲ್ಲರೂ ನೋಡುತ್ತ, ಭಾಗವಹಿಸುತ್ತ ಆನಂದಿಸುವುದು. ಆಮೇಲೆ ಒಟ್ಟಿಗೇ ಊಟ. ಮದುವೆಯ ಮೊದಲ ಹಂತ ಮುಗಿಸಿದ ಹಟ್ಟಿ, ಹೊತ್ತು ಮುಳುಗುವುದನ್ನು ಕಾಯುತ್ತಿತ್ತು.

ಕಾಯುವುದರಲ್ಲಿ ಹೆಪ್ಪುಗಟ್ಟುವ ಆನಂದ ಈ ಹಟ್ಟಿಗೆ.
ಕಾಯುವುದರಲ್ಲಿ ಹೆಪ್ಪುಗಟ್ಟಿದ್ದು, ಕರಗಿ ಹರಿಯುವ ಕ್ಷಣ.
ಬಂದೇಬಿಟ್ಟಿತು.

ಸ್ವಲ್ಪ ಹೂತ್ತಿನಲ್ಲೇ-ಒಡೆಯ ಮತ್ತು ಜೋಯಿಸರ ಸವಾರಿಯೂ ಬಂದುಬಿಟ್ಟಿತು. ಆನಂದದ ಹಟ್ಟಿಗೆ ಆಶ್ಚರ್ಯ! ಆತಂಕ!

ಬಂದವನೇ ಒಡೆಯ ರೇಗಿದ- “ಏನ್ಲಾ ಪೂಜಾರಪ್ಪ? ಗುಟ್ಟಾಗ್ ಮಗ್ಳ ಮದ್ವೆಮಾಡ್ತಿದ್ದೀಯೇನ್ಲ? ಯಾವತ್ನಂಗೆ ನನ್ತಾವ್ ಬಂದು ಒಪ್ಗೆ ತಗಾಳಾದ್ ಬಿಟ್ಟು ಬೇಕಾಬಿಟ್ಟಿ ನಡ್ಕಂಡ್ರೆ ಈ ಅಟ್ಟಿ ಉಳಿತೈತೇನ್ಲ?”

ಜೋಯಿಸರೂ ದನಿಗೂಡಿಸಿದರು – “ಸಂಪ್ರದಾಯ, ನಮ್ ಸಂಪ್ರದಾಯ ಎಲ್‌ಹೋಯ್ತಯ್ಯ? ನಮ್ ಧರ್ಮ ಅಂದ್ರೆ ಏನ್ ತಿಳ್ಳಂಡೆ ನೀನು?”

ಪೂಜಾರಪ್ಪ ಉತ್ತರಿಸಲು ಒದ್ದಾಡುತ್ತಿರುವಾಗ ಸೂರ್ಯ ಬಿಗಿದನಿಯಲ್ಲಿ ಹೇಳಿದ- “ಯಾವ್ ಧರ್ಮದ ಬಗ್ಗೆ ಮಾತಾಡ್ತಿದ್ದೀರಿ ನೀವು? ಹಟ್ಟಿನಾಗಿರೊ ಒಂದು ಹೆಣ್ಣು-ಗಂಡು ಮನಸಾರ ಒಪ್ಕೊಂಡ್ರು, ಹಟ್ಟಿನೋರು ಹಾಡು ಹೇಳಿದ್ರು, ಹಸೆ ಹತ್ತಿದ್ರು; ಈ ಹಟ್ಟೀದೆ ಒಂದು ಧರ್ಮ ಇದೆ. ಅದು ನಿಮ್ ಧರ್ಮ ಅಲ್ಲ, ಹಟ್ಟೀಗೆ ಯಾದ್ವ್ ಸರಿ ಅನ್ನಿಸ್ತೋ ಹಾಗ್ ಮಾಡಿದಾರೆ. ಈಗೇನಾಯ್ತು?”

ಒಡೆಯ, ಜೋಯಿಸರ ಕಡೆ ನೋಡಿದ.

“ಹಾಗಾದ್ರೆ ಊರು ಬಿಟ್ಟು ಹಟ್ಟಿ ಇರ್‍ಬೇಕು ಅಂತೀಯೇನು?”- ಜೋಯಿಸರು ಕೇಳಿದರು.

“ಅಲ್ಲ, ಹಟ್ಟಿ ಬಿಟ್ಟು ಊರ್ ಇರ್‍ಬಾರ್ದು ಅಂತೀನಿ. ಹಟ್ಟೀನ್ ಹೊರಗಿಟ್ಟೋರು ನೀವು. ಬುಡಕಟ್ಟಿಗೂ ಒಂದು ಬದುಕು ಅನ್ನೋದ್ ಇರುತ್ತೆ ಅನ್ನೋದನ್ನ ಮರ್‍ತೋರು -ನೀವು. ನಿಮ್ ಧರ್ಮಕ್ಕೆ, ನಿಮ್ ಲಾಭಕ್ಕೆ, ನಿಮಿಗ್ ದುಡ್ಯೋಕೆ, ಈ ನಮ್ ಜನ ಬೇಕು. ಆದ್ರೆ ಇವ್ರಿಗ್ ಬದ್ಕೋಕೆ ಸ್ವಾತಂತ್ರ್ಯ ಬೇಡ- ಇದು ತಾನ ನಿಮ್ಮ ನೀತಿ?”- ಸೂರ್ಯ ಸ್ಫೋಟಗೊಂಡ.

ಒಡೆಯ ನಿಂತಲ್ಲೇ ಪತರುಗುಟ್ಟಿದ- “ಏನ್ ಮಾತಾಡ್ತ ಅವನೆ ಈ ಓಚಯ್ಯ. ಒಸಿ ಬಿಡ್ಸೇಳ್ರಿ ಜೋಯಿಸ್ರೆ” ಎಂದ. “ಅದ್ರಾಗ್ ಬಿಡ್ಸ್ ಹೇಳೋದೇನಿದೆ ಮಣ್ಣು? ಈಗ ನಮಗ್ ಬೇಕಾಗಿರೋದು ಲಾಗಾಯ್ತಿನಿಂದ ನಡ್ಕಂಡ್ ಬಂದಿರೊ ಸಂಪ್ರದಾಯ. ನಮಗೆ ಪೂಜೆ ಸಲ್ಸಿ, ಪಾದಕ್ ಬಿದ್ದು ಹೆಣ್ಣನ್ನ ದೇವಸ್ಥಾನಕ್ಕೆ ಕಳುಸ್ಬೇಕು-ದೇವರ ಜೊತೆ ಮೊದಲ್ನೇ ರಾತ್ರಿ ಕಳ್ಯೋಕೆ.”- ಜೋಯಿಸರು ನೇರ ವಿಷಯಕ್ಕೆ ಬಂದರು. ಒಡೆಯ ಕೂಡಲೇ “ಅಂಗೇ ಆಗ್ಬೇಕು?” ಎಂದ.

ಹಟ್ಟಿಯ ಜನ ಪರಸ್ಪರ ಮುಖನೋಡಿಕೊಂಡರು. ಸೂರ್ಯ ನೇರವಾಗಿ ಜೋಯಿಸ ಮತ್ತು ಒಡೆಯ ಇಬ್ಬರ ಮುಂದೆ ಬಂದು ನಿಂತು ಹೇಳಿದ-

“ಇವತ್ನಿಂದ ಅಂಥ ಕನಸು ಕಾಣ್ಬೇಡಿ. ದೇವರ ಹೆಸರು ಹೇಳ್ಕೊಂಡು ದೇವಸ್ಥಾನದಲ್ಲಿ ಹಣ್‌ಮಕ್ಕಳ ಮಾನ ಕಳೀತಿದ್ದೊರು ನೀವು ಅಂತ ಗೊತ್ತಾಗಿದೆ. ನಿಮ್ ಗುಟ್ಟು ರಟ್ಟಾಗಿದೆ. ಕೇಳಿ, ನಮ್ ಹಣ್‌ಮಕ್ಕಳನ್ನ ಕೇಳಿ. ಅವ್ರೆಲ್ಲ ಆರತಿ ಎತ್ತಿ ಗೌರೀನ ದೇವಸ್ಥಾನದ ಒಳ್ಗಡೆ ತಂದ್‌ಬಿಡ್ತಾರ ಕೇಳಿ.”

ಆಗ ಹೆಂಗಸರು ಸ್ಪರ್ಧೆಗಿಳಿದಂತೆ “ಎಲ್ಲಾನ ಉಂಟಾ? ಬೇಕಾರ್ ನಮ್ ಪಿರಾಣ ಹೋಗ್ಲಿ. ಮಾನ ವೋಗಾಕ್ ನಾವ್ ಬಿಡಾಕಿಲ್ಲ” ಎಂದು ಒಟ್ಟಿಗೇ ಹೇಳತೊಡಗಿದರು. ಆಗ ಗಂಡಸರೂ ಹಿಂದೆ ಬೀಳಲಿಲ್ಲ. “ಈ ವಿಸ್ಯದಾಗ್ ಜುಲ್ಮೆ ಮಾಡ್‌ಬ್ಯಾಡ್ರಿ ಒಡೇರ” ಎಂದ ಒಬ್ಬ. “ಕೂಲಿ ಕಲಸಕ್ ಬಂದಾಗೇನಾರ ಅನ್ರಿ. ನಮ್ ಹಟ್ಟೀನಾಗ್ ನಡ್ಯಾ ವಿಸ್ಯ ನಮ್ಗೇ ಬಿಟ್ ಬಿಡ್ರಿ” ಎಂದ ಇನ್ನೊಬ್ಬ. “ಗೊತ್ತಿದ್ದೂ ಗೊತ್ತಿದ್ದೂ ಗುಡೀಗ್ ಕಳ್ಸಾಕಾಯ್ತದ ಗೌರೀನ” ಎಂದ ಮತ್ತೊಬ್ಬ.

ಒಡಯ ಕಿರುಚಿದ- “ಇದೇನ್ಲ ಪೂಜಾರಪ್ಪ? ನಿಂದೇನ್ ಬೊಗಳೋ.” ಪೂಜಾರಪ್ಪ ಅಧೀರನಾಗದೆ ಆವೇಗ, ಆತಂಕಗಳಿಗೂ ಒಳಗಾಗದೆ ನೆಟ್ಟನೋಟದಲ್ಲಿ ನುಡಿದ- “ಇವ್ರ್ ನಾಲ್ಗೆ ಬ್ಯಾರೆ, ನನ್ ನಾಲ್ಗೆ ಬ್ಯಾರೆ ಆಗಾದುಂಟಾ ಒಡೆಯ!”

“ಅಂಗಾರ್ ಇವಾಗ ನಾವೇನ್ ಮಾಡ್ಬೇಕು ಅಂಬ್ತೀಯಾ?” ಒಡೆಯ ಸಿಟ್ಟಿನಿಂದ ಕೇಳಿದ.

“ಮನ್ಸಿದ್ರೆ, ನನ್ ಮಗಳಿಗೆ ಒಳ್ಳೇದಾಗ್ಲಿ ಅಂಬ್ತ ಯೇಳಿ ಉಂಡೋಗ್ರಿ, ಇಲ್ಲ ಅಂಬಂಗಿದ್ರೆ ಊರ್‍ಕಡೀಕ್ ವೋಗ್ರಿ”- ಪೂಜಾರಪ್ಪ ನಿರ್ಧಾರಕವಾಗಿ ಹೇಳಿದ.

ಒಡೆಯ ಸಿಟ್ಟಿನಿಂದ ನೆಲವನ್ನು ಒದ್ದ.

ತಕ್ಷಣ ಶಬರಿ ಸಿಡಿದಳು- “ಆ ಬೂಮ್‌ತಾಯಿ ಮ್ಯಾಲೆ ಯಾಕ್ ಸಿಟ್ ತೋರುಸ್ತೀರಾ? ತಪ್ಪಾತು ಕಣ್ಗೊತ್ಕೊಂಡು ವೊಲ್ಟೋಗಿ.”

“ವೊಲ್ಟೋಗು ಅಂದ್ರೆ ಅಂಗೇ ವೊಲ್ಟೋಗೋಕೆ ನಾನೇನ್ ಬಳೆ ತೊಟ್ಕಂಡಿಲ್ಲ”- ಒಡೆಯ ಗರ್ಜಿಸಿದ.

ಜೋಯಿಸರು ಹುಷಾರಾದರು. ಒಡೆಯನ ಸಿಟ್ಟಿಗೆ ಮೂಗುದಾರದ ಮಾತಾಡಿದರು- “ಇದ್ರಿಂದ ನಿಮ್ಗೇನ್ ನಷ್ಟ ನರಸಿಂಹರಾಯಪ್ಪ. ಕೆಟ್ಟದ್ದು ನಮಗಾಗಲ್ಲ. ಆಗೋದೆಲ್ಲ ಇವ್ರಿಗೇನೆ. ಅದಕ್ಕೆ ನಮಗ್ಯಾಕ್ ಚಿಂತೆ.”

“ಅಂಗಂದ್ರಾಗ್ತೈತ? ನಾವೇ ಯೆಂಗುಸ್ರುನ್ ಕೆಡ್ಸಾದು ಅಂಬ್ತ ಯೇಳಾಕ್ ಏನೈತೆ ಸಾಕ್ಸಿ ಇವ್ರ್ ತಾವ? ಅದನ್ನಾರ ಕೇಳಾದ್ ಬ್ಯಾಡ್ವ?” ಎನ್ನುತ್ತ ಮತ್ತೂಂದುಪಟ್ಟು ಹಾಕಲು ಶುರುಮಾಡಿದ-ನರಸಿಂಹರಾಯಪ್ಪ.

ಕೂಡಲೇ ಸೂರ್ಯ ಅದಕ್ಕೆಉತ್ತರಿಸಿದ-“ಸಾಕ್ಷಿ ಬೇಕಾ ಸಾಕ್ಷಿ? ಅವತ್ತು ಚಂದ್ರ ಸತ್ತಾಗ ಅದನ್ನೆಲ ನೋಡ್ದೋನು ಈ ಹುಚ್ಚೀರ. ಇಲ್ನೋಡಿ. ಈತ ಏನೇನ್ ನಡೀತು ಅಂತ ಬರ್ದ್‌ಕೊಟ್ಟಿದಾನೆ ಇಲ್ಲ” ಎಂದು ಪುಸ್ತಕದ ಹಾಳೆ ತೋರಿಸಿದ. “ಜೋಯಿಸ್ರೆ ಓದಿ” ಎಂದು ಒತ್ತಾಯಿಸಿದ.

ಜೋಯಿಸರು ಅದನ್ನು ನೋಡಿಯೂ ನೋಡದಂತೆ ಒದುತ್ತಾ “ಅದೆಲ್ಲ ಈಗ್ ಯಾಕೆ? ನಾವ್ ಹೇಳ್ದಂತೆ ಕೇಳಲ್ಲ ಅಂದ್ ಮ್ಯಾಲೆ ನಾವ್ಯಾಕ್ ಇಲ್ಲಿರ್‍ಬೇಕು? ಸಾಕ್ಷೀಗೀಕ್ಷಿ ಕಟ್ಕೊಂಡು ಏನ್ ಮಾಡ್ತೀಯ ನರಸಿಂಹರಾಯ. ಅವ್ರ್‌ಗೇ ಬೇಡ ಸಂಪ್ರದಾಯ ಅಂದ್‌ಮೇಲೆ ನಮ್ಗೇಕೆ? ಸುಮ್ನೆ ನಡ್ಯಪ್ಪ” ಎಂದು ಒತ್ತಾಯಿಸಿ ಕೈಹಿಡಿದೆಳೆದು ಕರೆದೊಯ್ದರು. ನರಸಿಂಹರಾಯಪ್ಪ ಉರಿಯುತ್ತಲೇ ಹೋದ.

ಈ ಘಟನೆಯಿಂದ ಸ್ವಲ್ಪ ವಿಚಲಿತರಾದ ಹಟ್ಟಿಯವರು ಮತ್ತೆ ಮೊದಲಸ್ಥಿತಿಗೆ ಬಂದರು. ಹಾಡು-ಹಬ್ಬದ ಆನಂದ.

ಆದರೆ ಒಡೆಯ-ಜೋಯಿಸ-ಇಬ್ಬರೂ ಮೊದಲಸ್ಥಿತಿಗೆ ಬಂದಿರಲಿಲ್ಲ. ದಾರಿಯುದ್ದಕ್ಕೂ ನರಸಿಂಹರಾಯಪ್ಪ ತುಣಚೆಹೂಕ್ಕ ನಾಯಿಯಂತೆ ಎಗರಾಡುತ್ತಿದ್ದ. ರಾಮಾಜೋಯಿಸರು ಸಮಾಧಾನಿಸುತ್ತಿದ್ದರು. “ಇದು ಇಲ್ಲಿಗೇ ನಿಂತುಹೋಯ್ತು ಅಂತ ನಾವ್ ಸುಮ್ಮನಾಗ್ಬೇಕು. ಆಮೇಲೆ ಈ ವಿಷ್ಯಾನ ಪೇಪರ್‌ನಾಗೇನಾದ್ರೂ ಹಾಕ್ಸಿದ್ರೆ ಏನ್ ಗತಿ? ಅದಕ್ಕೆ ನಾವ್ ಜಾಸ್ತಿ ಗಲಾಟೆ ಮಾಡ್‌ಬಾರ್‍ದು. ಅಷ್ಟು ಬುದ್ಧಿ ಬೇಡ್ವಾ ನಿನಗೆ” ಎಂದು ತಿಳಿಹೇಳಿದರು. ಆಗ ನರಸಿಂಹರಾಯಪ್ಪನಿಗೆ ವಿಷಯದ ವ್ಯಾಪ್ತಿ ಅರ್ಥವಾಯಿತು. ಆದರೂ “ಅಂಗಾರೆ ಇವ್ರ್‌ನ ಸುಮ್ ಸುಮ್ಕೆ ಎದ್ರಾಕ್ಕಳಾದ್ ಬ್ಯಾಡ ಅಂಬ್ತೀರ?” ಎಂದು ಕೇಳಿದ.

“ಮತ್ ಇನ್ನೇನಂತೀಯ? ಅವ್ರಿಗ್ ಕೂಲಿಕೆಲ್ಸ ಕೊಡಲ್ಲ ಹಾಗೆ ಹೀಗೆ ಅಂತ ಆತುರದ ತೀರ್ಮಾನ ತಗೋಬೇಡಪೊಅ. ಆಮೇಲ್ ಆ ಸೂರ್ಯ ಈ ವಿಷ್ಯಾನ ಡಾಣಾ ಡಂಗುರ ಮಾಡ್‌ಬಿಟ್ಟಾನು. ಹುಷಾರಾಗಿ ಒಳ್ಳೇರ್ ಥರಾ ಇರೋಣ” ಎಂದು ಜೋಯಿಸರು ಮತ್ತೆ ಒತ್ತಾಯಪೂರ್ವಕವಾಗಿ ತಿಳಿಹೇಳಿದಾಗ, ನರಸಿಂಹರಾಯಪ್ಪ ನೆಲದಮೇಲೆ ನಿಂತ. “ನೀವ್ ಯೇಳಾದೆ ಸರಿ ಸಾಮೇರ” ಎಂದ.

ಸಾವಿತ್ರಮ್ಮನಿಗೆ ಗೌರಿಯ ಮದುವೆ ವಿಷಯ ಗೊತ್ತಾಗಿದ್ದು ಎರಡು ಮೂರು ದಿನಗಳ ನಂತರ. ಎರಡು ಮೂರು ದಿನಗಳವರೆಗೆ ಹೊಲದ ಕೆಲಸಕ್ಕೆ ಬಾರದ ಗೌರಿಯ ಬಗ್ಗೆ ವಿಚಾರಿಸಿದಾಗ ವಿಷಯ ತಿಳಿದುಬಂತು. ಉಳಿದವರು ತಾವಾಗಿಯೇ ಹೇಳಲು ಹೋಗಿರಲಿಲ್ಲ. ಒಡೆಯರ ವಿರೋಧ ಇದ್ದದ್ದೂ ಒಂದು ಮುಖ್ಯಕಾರಣ. ಗೌರಿಯ ಮದುವೆಯಾದಾಗ ಆಕೆ ಗಂಡಿನೊಂದಿಗೆ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಬರಬೇಕಿತ್ತಲ್ಲ ಎಂಬ ಪ್ರಶ್ನೆಯೊಂದಿಗೆ ನರಸಿಂಹರಾಯಪ್ಪನ ಬಳಿಗೆ ಬಂದಳು. ನರಸಿಂಹರಾಯಪ್ಪ- “ಅವ್ರೆಲ್ಲ ಇದ್ದೆಬುದ್ಧಿ ಕಲ್ತು ಈ ಕಟ್ಟು ಕಟ್ಟಳೆ ಬಿಡ್ತೀವಿ ಅಂಬ್ತ ಅವ್ರೆ, ನಾನು ನಿಮ್ಮಿಷ್ಟ ಅಂದೆ.” ಎಂದು ಹೇಳಿದ್ದಲ್ಲದೆ “ಒಂದ್ ಕೆಲ್ಸ ಮಾಡು ನೀನು. ವೊಸಾ ಸೀರೆ ಗೀರೆ ತಗಂಡು ಗೌರೀಗೆ ಕೊಟ್ ಬಾ. ಏಟಾದ್ರೂ ನಮ್ ಪೂಜಾರಪ್ಪನ ಮಗ್ಳು. ನಮ್ ಮಗಳಿದ್ದಂಗೆ ಅಂಬ್ತ ತಿಳ್ಕಂಡ್ರಾತು. ಏನಂಬ್ತಿಯ?” ಎಂದು ಸಲಹೆ ಕೊಟ್ಟ. ಸಾವಿತ್ರಮ್ಮ ಒಪ್ಪಿ ಹೊರಟೇಬಿಟ್ಟಳು.

ಈ ವಿಷಯವನ್ನು ಕೇಳಿದ ಜೋಯಿಸರು- “ಏನಪ್ಪ ಒಡೆಯ, ನನಗಿಂತ ಬುದ್ಧಿವಂತ ಆಗ್ತಾ ಇದ್ದಂಗಿದೆ ನೀನು” ಎಂದು ಮೆಚ್ಚುಗೆಯಲ್ಲೇ ಚುಚ್ಚಿದರು. “ಎಲ್ಲಾನ ಉಂಟಾ ಸಾಮೇರ. ಸಾವಾಸ್‌ದೋಸ ನೋಡ್ರಿ, ಎಲ್ಲೋ ಒಸಿ ಬುದ್ದಿ ಬಂದೈತೆ ನಿಮ್ ಜತೆ ಓಡಾಡಿದ್ರಿಂದ” ಎಂದು ನರಸಿಂಹರಾಯಪ್ಪ ದೇಶಾವರಿ ನಗೆ ನಕ್ಕ. ಜೋಯಿಸರು ಆಗಲೂ ಸುಮ್ಮನಿರಲಿಲ್ಲ.

“ಎಲಾ ಇವ್ನ. ನನ್ ಥರಾನೇ ನಗ್ರೀಯಲ್ಲಯ್ಯ! ಎಂದು ಛೇಡಿಸಿದರು.
“ಆಗ್ಲೇ ಯೇಳಿದ್ನಲ್ಲ ಸಾಮೇರ, ಎಲ್ಲಾ ಸಾವಾಸ್‌ದೋಸ” ಎಂದು ನರಸಿಂಹರಾಯಪ್ಪ ಮತ್ತೆ ನಕ್ಕಾಗ ಎಧಿಯಿಲ್ಲದೆ ಜೋಯಿಸರು ಆತನಜೊತೆ ನಗತೊಡಗಿದರು.

ಮಾರನೇ ದಿನವೇ ಸಾವಿತ್ರಮ್ಮ ತಟ್ಟೆಯಲ್ಲಿ ರೇಷ್ಮೆ ಸೀರೆ, ಕುಪ್ಪಸದ ಬಟ್ಟೆ. ಅರಿಸಿನ ಕುಂಕುಮ, ಷರಟಿನ ಬಟ್ಟೆ, ಅಕ್ಷತೆ- ಇತ್ಯಾದಿಗಳನ್ನು ಇಟ್ಟುಕೊಂಡು ಕೆಲ ಹೆಂಗಸರೂಂದಿಗೆ ಬುಡಕಟ್ಟಿನ ಹಟ್ಟಿಗೆ ಬಂದಾಗ ಅಲ್ಲಿದ್ದವರಿಗೆಲ್ಲ ಅಚ್ಚರಿಯೋ ಅಚ್ಚರಿ! ಊರಿನ ಒಡೆಯರು ಸೇಡಾಗಿ ಬಂದು ಬಡಿಯಬಹುದೆಂದು ಭಾವಿಸಿದ್ದ ಕೆಲವರಿಗೆ ಇದೊಂದು ಒಗಟು. ಒಗಟಿನಲ್ಲಿ ಒಗಟಾಗಿ ನಿಂತಿದ್ದ ಪೂಜಾರಪ್ಪ.

ಸಾವಿತ್ರಮ್ಮನನ್ನು ನೋಡಿದ ಹೆಂಗಸರು ದಡಬಡನೆ ಬಂದು ಕಟ್ಟೆಯ ಮೇಲಿದ್ದ ಕಸ ಸರಿಸಿ “ಕುಂತ್ಕಳ್ಳವ್ವ” ಎಂದರು. ಶಬರಿ ಹೊರಬಂದು “ಏನ್ರವ್ವ ಈಟ್‌ದೂರ?” ಎಂದು ಪ್ರಶ್ನಾರ್ಥಕವಾಗಿ ಸ್ವಾಗತಿಸಿದಳು.

“ಗೌರಿ ಮದ್ವೇಗಂತೂ ನೀವ್ಯಾರೂ ಕರೀಲಿಲ್ಲ. ವಿಸ್ಯ ಗೊತ್ತಾಗಿ ನಾನೇ ಬಂದೆ” ಎಂದಳು ಸಾವಿತ್ರಮ್ಮ.

“ಊರ್‍ನೊರ್‍ನ ಕರ್‍ಯಾದು ಅಂದ್ರೆ ಒಡೇರ್‍ನ ಕರ್‍ಯಾದು ಅಂಬ್ತ ಕಟ್ಟುಪಾಡಿತ್ತಲ್ಲ; ಈಸಾರಿ ಕಟ್ಟುಪಾಡೆಲ್ಲ ಮುರ್‍ದು ನಮ್‌ಪಾಡಿಗ್ ನಾ ಮದ್ವೆ ಮಾಡಾನ ಅಂದ್ಕಂಡ್ವಿ”- ಎಂದು ಶಬರಿ ವಿವರಿಸಿದಳು.

“ಒಡೇರ್‍ನ, ಕರ್‍ಯೋದು ಕಟ್ಟುಪಾಡು. ಅವ್ರ್‌ನ್ ಬಿಟ್ಟು ನನ್ ಕರೀಬವ್ದಿತ್ತಲ್ಲ?”- ಸಾವಿತ್ರಮ್ಮನ ಪ್ರಶ್ನೆ.

“ಹಂಗಸ್ರುನ್ ಕರ್‍ಯಾದು ಯಾವಾಗ್‌ತಾನೆ ಇತ್ತವ್ವ?”- ಶಬರಿಯ ಮರುಪ್ರಶ್ನೆ.

“ಅದೂ ನಿಜ ಅನ್ನು. ಆದ್ರೇನ್ ಮಾಡಾದು. ಯೆಣ್ ಜೀವ, ನಂಗ್ ತಡೀಲಿಲ್ಲ. ಬಂದ್‌ಬಿಟ್ಟೆ” ಎಂದು ಸಾವಿತ್ರಮ್ಮ ಹೇಳುವ ವೇಳಗೆ ಸೂರ್ಯ ಬಂದ.

ಬಂದವನೆ “ನೀವ್ ಹೀಗ್ ಒಂಟಿ ಬಂದ್ರಿ ಅಂತ ನಿಮ್ಮ ಒಡೆಯರು ವಿರೋಧ ಮಾಡಲ್ಲ ತಾನೆ?” ಎಂದು ಕೇಳಿದ.

“ಅದ್ಯಾಕ್ ಮಾಡ್ತಾರೆ ಇರೋಧವ? ಗೌರೀನೂ ನಮ್ ಮಗಳಿದ್ದಂಗೆ, ವೋಗ್ ಬಾ ಅಂಬ್ತ ಯೇಳಿದ್ದೇ ಅವ್ರು” ಎಂದು ಇದ್ದ ವಿಷಯವನ್ನು ಇದ್ದಂತೆ ಹೇಳಿದಳು- ಸಾವಿತ್ರಮ್ಮ

ಸೂರ್ಯ “ಓ ಹಾಗಾ?” ಎಂದು ರಾಗ ಎಳೆದ. ಅಷ್ಟರಲ್ಲಿ ಶಬರಿಯು ಗೌರಿ ಮತ್ತು ನವಾಬಣ್ಣ ಇಬ್ಬರನ್ನೂ ಕೂಗಿ ಕರೆದಳು. ಅವರಿಬ್ಬರೂ ಗುಡಿಸಲಿನಿಂದ ಬಂದರು. ಸಾವಿತ್ರಮ್ಮನಿಗೆ ಕೈ ಮುಗಿದು ನವಾಬ ಹೇಳಿದ- “ನೀವ್ ಬಂದಿದ್ದು ಒಳ್ಳೇದಾಯ್ತು. ಸಂಬಂಧ ಬೆಸೆದಂತಾಯ್ತು.”

“ಇವ್ರ್‌ನೆಲ್ಲ ಬಿಟ್ ನಾವ್ ಬದ್ಕಕಾಯ್ತದೇನಪ್ಪ? ಇವ್ರೆಲ್ಲ ಬಂದ್ ಕೆಲ್ಸ ಮಾಡಿರಲ್ವ ಬೂಮ್‌ತಾಯಿ ಬೆಳೆ ಕೊಡಾದು.” ಎಂದು ಸಾವಿತ್ರಮ್ಮ ಸಹಜ ದನಿಯಲ್ಲಿ ನುಡಿದು ಗೌರಿಯ ಕಡೆ ತಿರುಗಿ “ತಗಾ ಗೌರಿ, ನಿಂಗೆ, ನಿನ್ ಗಂಡಂಗೆ ಬಟ್ಟೆ ತಂದಿವ್ನಿ” ಎಂದು ಕೊಟ್ಟು ಹಣೆಗೆ ಕುಂಕುಮವಿಟ್ಟು ಕೆನ್ನೆಗೆ ಅರಿಸಿನ ಬಳಿದು ತಲೆಮೇಲೆ ಅಕ್ಷತೆ ಹಾಕಿದಳು.

ಪುನೀತನಾದಂತೆ ನೋಡುತ್ತಿದ್ದ ಪೂಜಾರಪ್ಪ “ಒಡತಿ ಕಾಲಿಗ್ ಬೀಳು ಮಗಾ” ಎಂದು ಗೌರಿಗೆ ಸೂಚಿಸಿದ. ಗೌರಿ ಹಾಗೆಯೇ ಮಾಡಿದಳು. ಸಾವಿತ್ರಮ್ಮ “ಒಳ್ಳೇದಾಗ್ಲವ್ವ” ಎಂದು ಹಾರೈಸಿ, ನವಾಬನಿಗೆ “ನಮ್ ಯಣ್ ಮಗಳು ಧೈರ್‍ಯ ಮಾಡಿ ನಿನ್ ಮದ್ವೆ ಆಗವ್ಳೆ. ಚಂದಾಗ ನೋಡ್ಕಬೇಕಪ್ಪ” ಎಂದು ಸಲಿಗೆಯ ದಾಟಿಯಲ್ಲಿ ಹೇಳಿದಳು. ನವಾಬ್ ನಸುನಕ್ಕ.

ಸಾವಿತ್ರಮ್ಮ ವಾಪಸ್ ಹೋದ ಮೇಲೆ ಎಲ್ಲರ ಬಾಯಲ್ಲೂ ಅದೇ ಮಾತು. ಆಕೆಯ ದೊಡ್ಡತನದ ಬಗ್ಗೆ ಮೆಚ್ಚುಗೆ; ಒಡೆಯ-ಒಡತಿ ನಡುವೆ ಇರೋ ವ್ಯತ್ಯಾಸ ಕುರಿತು ಚರ್ಚೆ. ಎಲ್ಲವನ್ನೂ ಕೇಳಿಸಿಕೊಳ್ಳುತ್ತ ಕೂತಿದ್ದ ಶಬರಿಗೆ ಅದೇನನ್ನಿಸಿತೊ “ಅವ್ರೇನ್ ನಮಿಗ್ ಬೂಮಿ ಬಿಟ್‌ಕೂಡಾಕಿಲ್ಲ ಬಿಡ್ರಿ” ಎಂದು ಗೂಣಗು ಮಾತಾಡಿದಳು. ಆಗ ಸೂರ್ಯ “ಅವ್ರ್ ನಿಮಿಗ್ ಭೂಮೀನೂ ಬಿಟ್ಕೊಡಲ್ಲ; ಕೂಲಿ ಕೆಲಸದಿಂದಾನೂ ನಿಮ್ಮನ್ನು ಬಿಟ್ಕೊಡಲ್ಲ” ಎಂದು ವಾಸ್ತವದ ಒಳ ನುಡಿಯಾಡಿದ. ನವಾಬ “ಮುಂದೊಂದು ದಿನ ಭೂಮೀನೂ ಕೊಡ್‌ಬೇಕಾಗುತ್ತೆ” ಎಂದ. ಆಗ ಒಬ್ಬಾಕೆ “ಮದ್ವೆ ಆಗ್ ಮೂರ್‌ದಿನ ಆಗೈತೆ ನೋಡು- ಆನಂದವಾಗಿದ್ದೀಯ-ಅದ್ಕೆ ಇಂಗೆಲ್ಲ ಮಾತಾಡ್ತೀಯಪ್ಪ” ಎಂದು ನವಾಬನನ್ನು ತಮಾಷೆ ಮಾಡಿದಳು. ಇನ್ನೊಬ್ಬಾಕೆ “ಸರ್‍ಯಾಗ್ ಯೇಳ್ದೆ ಕಣವ್ವ, ನೀನ್ ಏನಂಬ್ತಿಯಾ ಗೌರಿ?” ಎಂದು ಜಿಗುಟಿದಳು. ಗೌರಿ ನಾಚಿಕೆಯಿಂದ “ಯೇ ವೋಗಕ್ಕ ನಗ್ಸಾರಾಟ ಆಡ್‌ಬ್ಯಾಡ” ಎಂದು ಹುಸಿನಗೆ ತೋರಿಸಿ ನವಾಬನ ಕಡೆ ನೋಡಿದಳು.

ವಾತಾವರಣದಲ್ಲಿ ಉಕ್ಕಿದ ನಗೆ. ಉಸಿರುಗಟ್ಟುವ ಹೊಗೆಯೆಲ್ಲ ಹಾರಿಹೋಗಿ ನಿಚ್ಚಳವಾದ ಮನಸ್ಸು. ಎಲ್ಲರ ಎದೆಗೂಡಿನಲ್ಲಿ ಗುಬ್ಬಚ್ಚಿ ಹಾಡು. ಗಿಡುಗನ ಭಯವಿಲ್ಲದ ಕನಸಿನ ಕಣ್ಣು.

ದಿನಕಳೆದಂತೆ ಮತ್ತದೇ ಬದುಕಿನ ಹಾದಿ. ನವಾಬ ರಕ್ತಕಾರಿಕೊಂಡು ಸಾಯಲಿಲ್ಲ; ಗೌರಿಗೆ ಗರ ಬಡಿಯಲಿಲ್ಲ. ಏನಾದರೂ ಆದೀತೇನೊ ಎಂದು ಒಳಗೊಳಗೇ ಆತಂಕದಿಂದ ಇದ್ದ ಜನರು ನಿರಾಳವಾಗತೊಡಗಿದರು. ಅದರಲ್ಲೂ ಪೂಜಾರಪ್ಪ ನಿಟ್ಟುಸಿರುಬಿಟ್ಟು “ಸದ್ಯ ಏನೂ ಆಗ್‌ಬಾರದ್ದಾಗ್ಲಿಲ್ಲ ತಿಮ್ಮರಾಯಿ” ಎಂದು ಸಮಾಧಾನಗೊಂಡ. ಆದರೆ ಇವರೆಲ್ಲ ಸಮಾಧಾನದ ಮನಸ್ಥಿತಿಗೆ ಬರಬೇಕಾದರೆ ಅದೆಂಥಾ ಕೆಂಡಪಯಣ ಕೈಗೊಂಡಿದ್ದರೆಂದು ಅವರಿಗೇ ಗೊತ್ತು.

ಬೆಳಗ್ಗೆಯಾಗುವುದೇ ತಡ, ಗೌರಿಯ ಮನೆ ಬಾಗಿಲಕಡೆ ಭೀತಿಯಿಂದ ನೋಡಿದ್ದರು. ಬಾಗಿಲಲ್ಲಿ ನವಾಬಣ್ಣ ರಕ್ತಕಾರಿ ಬಿದ್ದಿಲ್ಲ; ಸದ್ಯ! ಎಂದು ಪ್ರತಿದಿನ ನಿಟ್ಟುಸಿರುಬಿಟ್ಟಿದ್ದರು. ಗೌರಿ ಸಿಕ್ಕಿದಾಗ “ನಿಂಗೇನಾರ ಆಗ್ತಾ ಐತೇನೆ” ಎಂದು ಕೇಳಿದ್ದರು. ಒಂದಿಬ್ಬರು ತಮಾಷೆಗಾಗಿ “ಗಂಡನ ಜತೆ ಇದ್ರ ಏನಾದ್ರು ಆಗ್ದೆ ಇರ್‍ತೈತ” ಎಂದು ಛೇಡಿಸಿ ತಮಗೆ ತಾವೇ ಹಗುರವಾಗಲು ಪ್ರಯತ್ನಿಸಿದ್ದರು. ಇನ್ನಿಬ್ಬರು “ಮಾರಮ್ಮಂಗೇನಾರ ಅರಕೆವೊತ್ಕಂಡ್ರೆ ಚಂದಾಗಿತ್ತೇನೊ” ಎಂದು ಸಲಹೆ ಕೊಟ್ಟಿದ್ದರು. ಅದಕ್ಕೆ ನವಾಬ ಮತ್ತು ಸೂರ್ಯ ಒಪ್ಪೋದಿಲ್ಲವೆಂದು ಗೂತ್ತಿದ್ದರೂ ಹೀಗೆ ಹೇಳಿದ್ದರು. ಕಡಗೆ ಕೆಲವರು ಶಬರಿಯ ಬಳಿ ಬಂದು “ಮದ್ವೇನ ಇಂಗೆಲ್ಲ ಮಾಡಿದ್ದಕ್ಕೆ ಏನೂ ಆಗಾಕಿಲ್ಲ ಅಲ್ವಾ?” ಎಂದು ಅನುಮಾನದಿಂದ ಕೇಳಿದ್ದರು. ಶಬರಿ “ನೀವೇ ಎಲ್ರೂ ಒಪ್ಪಿದ್‌ಮ್ಯಾಲಲ್ವ ಇಂಗ್ ಮದ್ವೆ ಮಾಡಿದ್ದು?” ಎಂದು ಪ್ರಶ್ನಿಸಿದ್ದಳು. “ಅದೇನೊ ದಿಟ ಕಣವ್ವ. ನಮಿಗ್ ಗೊತ್ತಾಗ್ದಂಗೆ ಮಾನಕಳುದ್ರು ಆ ಒಡೇರು ಅಂಬ್ತ ಅನ್ನಿಸ್ತು ನೋಡು, ವೊಟ್ಟೇಗೆಲ್ಲ ಕೆಂಡ ಬಿದ್ದಂಗಾತು. ಸೂರ್ಯಪ್ಪ ಯೇಳಿದ್ದೇ ಸರಿ ಅನ್ನಿಸ್ತು” ಎಂದಿದ್ದಳು ಒಬ್ಬಾಕೆ.

“ಸೂರ್ಯ ಯೇಳಿದ್ದಲ್ಲ; ನಮ್ ವುಚ್ಚೀರ ಯೀಳಿದ್ದು” ಎಂದು ತಿದ್ದಿದಳು ಶಬರಿ. ಆಗ ಅವರು ಹೌದೆಂದರು. “ಒಂದ್‌ವೇಳೆ ನೀವೆಲ್ಲ ಸೂರ್ಯನ್ನ ಬ್ಯಾರೇನೂ ಅಂದ್ಕಳದಾದ್ರೆ, ನಮ್ಮೋನೇ ವುಚ್ಚೀರ ಯೇಳಿದ್ನ ನಂಬಾಕಿಲ್ವ?” ಎಂದು ಶಬರಿ ಮತ್ತೆ ಪ್ರಶ್ನಿಸಿದಳು. “ನಾವ್ ನಂಬಲ್ಲ ಅಂಬ್ತ ಯೇಳಾಕಿಲ್ಲ. ಯಾವತ್ತೂ ಇಂಗಾಗಿಲ್ಲ ನೋಡು. ಅದ್ಕೆ ಒಂದೊಂದ್ ಕಿತ ಏನೇನೊ ಅನ್ನುಸ್ತೈತೆ” ಎಂದು ಅವರು ಸ್ಪಷ್ಟಪಡಿಸಿದರು. ಶಬರಿ ಅಲ್ಲಿಗೇ ಸುಮ್ಮನಾಗಲಿಲ್ಲ. “ಒಂದ್ ವೇಳೆ ಸೂರ್ಯ ಈ ವಿಸ್ಯ ಯೇಳಿದ್ರೆ ಬ್ಯಾರೇನು ಅಂದ್ಕಂಡು ನೀವ್ ನಂಬ್ತಾ ಇರ್‍ಲಿಲ್ವ?” ಎಂದು ಮತ್ತೆ ಕೇಳಿದಳು. “ಎಲ್ಲಾನ ಉಂಟ? ಸೂರ್ಯಪ್ಪನ್ನ ಬ್ಯಾರೆ ಅಂದ್ಕಳಾದೆಲ್ಲಾನ ಉಂಟ? ಅಂಗೇನೂ ಇಲ್ಲ” ಎಂದರು ಅವರು, ಜೊತೆಗೆ “ವುಚ್ಚೀರ ಕಣ್ಣಾರೆ ಕಂಡಿದ್ನಲ್ಲ ಅದುಕ್ಕೆ ಅವ್ನ್ ಬರ್‍ಕೊಟ್ಟಾಗ ನಂಬ್ಕೆ ಬಂತು” ಎಂದೂ ಹೇಳಿದರು. “ನಂಬ್ಕೆ ಬಂದ್ ಮ್ಯಾಲೆ ಸುಮ್ಕೆ ಇದ್ ಬಿಡ್ರಿ. ಬ್ಯಾರೆ ಏನೂ ಆಗಾಕಿಲ್ಲ. ಸಾವಿತ್ರಕ್ಕ ಬಂದೊದ್ ಮ್ಯಾಲೆ ಒಡೇರ್ ಎದ್ರುಬೀಳಾದೂ ಇಲ್ದಂಗಾತು. ಬ್ಯಾರೆ ಇನ್ನೇನಾಗ್ತೈತೆ. ಸುಮ್ಮೆ ಅದೂ ಇದೂ ತಲ್ಯಾಗ್ ತುಂಬ್ಕಾಬ್ಯಾಡ್ರಿ” ಎಂದು ಶಬರಿ ಸಮಾಧಾನ ಮಾಡಿದಳು.

“ಏನಾರ ಆಗಂಗಿದ್ರೆ ಅಮಾಸೆದಿನ ಆಗ್ತೈತೆ ಕಣ್ರವ್ವ ಅಲ್ಲೀಗಂಟ ಕಾಯಾನ” ಎಂದು ಒಬ್ಬಾಕೆ ಗಡುವು ನಿಗದಿ ಮಾಡಿದ್ದೂ ಆಯಿತು. ಅಮಾವಾಸ್ಯೆಯ ದಿನ ಕೆಲವು ಹಂಗಸರಿಗಾದರೂ ನಿದ್ದೆ ಬರಲಿಲ್ಲ. ಮತ್ತೆ ಕೆಲವರು ‘ಏನಾದ್ರೂ ಆಗಂಗಿದ್ರೆ ಗೌರೀಗೆ, ನವಾಬಣ್ಣಂಗೆ ಆಗ್ತೈತೆ. ನಮ್ಗ್ ಯಾಕ್ ಆಗ್ತೈತೆ’ ಎಂದು ಸಮಾಧಾನಿಸಿ ಕೊಂಡಿದ್ದರು. ಗಂಡಸರಿಗೂ ಅಮಾವಾಸ್ಯೆಯ ಗಡುವು ಕಾಡಿಸ ತೂಡಗಿತ್ತು. ಏನಾದರಾಗಲೆಂದು ಹೂರಗೆ ಇಣುಕದೆ ಹಳೇ ದುಪ್ಪಟಿ ಹೊದ್ದು ಮಲಗಿದರು. ನಾಯಿ ಬೊಗಳಿದಾಗ, ಗೂಬೆ ಗೊಟ ಗೊಟ ಎಂದಾಗ, ಹಂಡತಿಯರು ತಿವಿದು ಎಬ್ಬಿಸಿದಾಗ, ಎದ್ದರು; ಹೂರಗೆ ಬರಲಿಲ್ಲ. ಬೆಳಿಗ್ಗೆಯಾದಾಗ ನೋಡುತ್ತಾರೆ- ಗೌರಿ ರಂಗೋಲಿ ಇಡುತ್ತಿದ್ದಾಳೆ; ನವಾಬಣ್ಣ ನಸುನಗಯಲ್ಲಿ ನಿಂತಿದ್ದಾನೆ!

ಹಟ್ಟಿಯಲ್ಲಿ ಬಿಟ್ಟ ನಿಟ್ಟುಸಿರು ತಂಗಾಳಿಯಾಗಿ ಬೀಸಿತು;
ಹಗಲ ಹುಣ್ಣಿಮೆ ಆವರಿಸಿತು.
* * *

ತೋಪಿನಲ್ಲಿ ಸೂರ್ಯ ಓಡಾಡುತ್ತ ಆಲೋಚಿಸಿದ. ಎಷ್ಟು ದೊಡ್ಡದಾಗಿದೆ ಈ ತೋಪು! ಹೂಂಗೆ ಮರಗಳು ಸಾಕಷ್ಟಿವೆ; ಕೆಲವು ಹುಣಸೆ ಮರಗಳಿವೆ; ಉಳಿದಂತೆ ವಿವಿಧ ರೀತಿಯ ಮರಗಳು, ಸ್ವಲ್ಪ ಬಯಲು; ಹತ್ತಿರದಲ್ಲೆ ಬೆಟ್ಟ ಗುಡ್ಡದ ಸಾಲು. ಅಲ್ಲಲ್ಲೆ ಮತ್ತೆ ಮರಗಿಡಗಳು. ಒಟ್ಟು ವಿಸ್ತಾರವಾದ ಪ್ರದೇಶ. ಇದು ಯಾರಿಗೆ ಸೇರಿದ್ದು? ಅನುಭವಿಸುತ್ತಿರುವುದಂತೂ ಒಡೆಯ ನರಸಿಂಹರಾಯಪ್ಪ. ಹೊಂಗೆ ಸೂಪ್ಪು ಕಿತ್ತು ಸೆಣಬು ಮಾಡುತ್ತಾನೆ. ಸೊಪನ್ನು ಗದ್ದೆಯಲ್ಲಿ ತುಳಿದುಬಿಟ್ಟರಿ ಅದೇ ಬೆಳಗೆ ಪೂರಕವಾದ ಗೊಬ್ಬರ. ಇನ್ನು ಹುಣಿಸಮರಗಳ ಫಸಲನ್ನು ಒಡಯನೇ ಪಡಯುತ್ತಾನೆ. ಅವನು ಅನಧಿಕೃತ ಯಜಮಾನನಾಗಿದ್ದಾನೆ. ಯಾರಿಗೂ ಸೇರದ ಭೂಮಿಯೆಂದರೆ ಅದು ಸರ್ಕಾರಿ ಲೆಕ್ಕಕ್ಕೆ ಬರುತ್ತದೆ. ಇದನ್ನು ಈ ಜನರಿಗೆ ಕೂಡಿಸಬೇಕು. ಇದು ತಮಗೇ ಸಲ್ಲಬೇಕೆಂದು ಇವರು ಹೋರಾಟಕ್ಕಿಳಿಯಬೇಕು. ಕಾಲ ಪಕ್ವವಾಗುತ್ತಿದೆ. ಜನರಿಗೆ ತಿಳುವಳಿಕೆ ಮೂಡುತ್ತಿದೆ. ತಮಗೆ ಯಾರು ಮತ್ತು ಯಾವುದು ವಿರೋಧ ಎಂದು ಈಗ ಜನರಿಗೆ ಅರಿವಾಗತೂಡಗಿದೆ.

ಶಬರಿಮನಸ್ಸುಗಳಲ್ಲ ಮೂಡುತ್ತಿರುವ ಧನುಸ್ಸು;
ಬೆವರ ಭೂಮಿಯಲ್ಲಿ ಬೆಳಕಿನ ಬಾಣ;
ಸೂರ್ಯಕಿರಣ.

ತೋಪಿನಲ್ಲಿ ತೂರಿ ಬರುತ್ತಿರುವ ಕೆಂಪು ಕಿರಣಗಳ ನಡುವೆ ಓಡಾಡುತ್ತ ನೋಡುತ್ತಾನೆ ಸೂರ್ಯ-ನಿಸರ್ಗದ ಸೂರ್ಯ ಕೆಂಪಾಗಿದ್ದಾನೆ. ತೋಪಿನ ತುಂಬ ತನ್ನ ಪ್ರಭಾ ವಲಯವನ್ನು ವಿಸ್ತರಿಸಿದ್ದಾನೆ. ಬೀಸುವ ಗಾಳಿಗೆ ಅಲುಗಾಡುವ ಎಲೆಗಳ ಲಯಕ್ಕೆ ತಕ್ಕಂತೆ ತೋಪಿನಲ್ಲಿ ನೆರಳು ಬೆಳಕಿನ ನಡಿಗೆ. ಇವುಗಳ ನಡುವೆ ಸೂರ್ಯನ ಹೆಜ್ಜೆ.

ಕನಸಿನ ತೋಪು; ಮನಸಿನ ಹುರುಪು;
ಹಟ್ಟಿಯ ಅನುಭವ, ಅಕ್ಷರದ ಅರಿವು;
ಸಂಜೆಗೆಂಪಿನವರೆಗೆ ಬೆಳೆಯುತ್ತಿರುವ ನಿಲುವು.

ಸೂರ್ಯ ತೋಪಿನೊಳಗೊಂದಾಗಿ ಯೋಚಿಸುತ್ತ ಕೂತ. ಹೊಸ ಉತ್ಸಾಹದ ಸಳೆತ.

ಅಷ್ಟರಲ್ಲಿ ಶಬರಿ, ಗೌರಿ ಮತ್ತು ನವಾಬ್ ಆ ಕಡಗೆ ಬಂದರು. ನವಾಬ್ “ಈ ತೋಪು ಎಷ್ಟು ಚೆನ್ನಾಗಿದೆ ಅಲ್ವ ಸೂರ್ಯ?” ಎಂದು ಖುಷಿಯಾಗಿ ಹೇಳಿದ. ಸೂರ್ಯ ತನ್ನ ಆಲೋಚನೆಯನ್ನು ಹೊರಗೆಡಹಿದ- “ಇಷ್ಟು ಚನ್ನಾಗಿರೊ ತೋಪು. ಪಕ್ಕದಲ್ಲಿರೊ ಬಯಲು ನಮ್ ಜನಕ್ ಸೇರ್‍ಬೇಕು.”

ಶಬರಿ ಥಟ್ಟನೆ ಕೇಳಿದಳು- “ನಮ್ಗಾ? ಇದೆಲ್ಲ ನಮಿಗ್ ಸೇರ್‍ಬೇಕಾ?”

“ಹೌದು. ಈ ಹೂಂಗೆ, ಹುಣಿಸೆ ಎಲ್ಲಾನು ಆ ಒಡೆಯ ಬಳುಸ್ತಾ ಇದಾನೆ. ಲಾಭ ಮಾಡ್ಕೋತಾ ಇದಾನೆ. ಇದು ಅವ್ನಿಗ್ ಸೇರಿದ್ದಲ್ಲ. ಇದು ನಮ್ ಹಟ್ಟೀಗ್ ಹತ್ರ ಇರೋ ತೋಪು. ಇದನ್ನು ನಾವೇ ಅನುಭವಿಸ್ಬೇಕು ಅಂತ ಎಲ್ರೂ ಕೇಳ್ಬೇಕು. ನಮ್ ವಶ ಮಾಡ್ಕೊಂಡು ಮತ್ತಷ್ಟು ಬೆಳುಸ್ಬೇಕು. ಆ ಬಯಲನ್ನ ಹೊಲ ಮಾಡ್ಬೇಕು. ಮತ್ತಷ್ಟು ಮರಗಿಡ ಬೆಳೀಬೇಕು?- ಸೂರ್ಯ ಹೇಳುತ್ತ ಹೋದಂತೆ ಶಬರಿ ಅನುಭವಿಸತೂಡಗಿದಳು. ಹೊಂಗೆ ಹುಣಿಸಗಳು ಕೈಬೀಸಿ ಕರೆದಂತೆ. ತಾಯಿಯಾಗಿ ತಲೆನೇವರಿಸಿದಂತೆ. ಕಾದು ತೊಟ್ಟಿಕ್ಕುವ ಕಣ್ಣೀರು ಒರೆಸಿದಂತೆ, -ಹೀಗೆ ಏನೇನೊ ಭಾವನೆ. ಶಬರಿ ಮರಗಳ ಹತ್ತಿರ ಬಂದಳು. ಕಾಂಡಗಳನ್ನು ಮುಟ್ಟಿ ಕಣ್ಣಿಗೆ ಒತ್ತಿಕೊಂಡಳು. ಸೂರ್ಯ ಮಾತು ನಿಲ್ಲಿಸಿದ್ದ; ಗೌರಿ, ನವಾಬ್ ನೋಡುತ್ತಿದ್ದರು.

ಬಯಲಾಗುತ್ತಿರುವ ಭಾವನೆಗಳಿಗೆ ತೋಪು ತಂಗುದಾಣ;
ಗಾಣದ ಬದುಕಿನ ಹಗ್ಗ ಹರಿದು ಹರಡಿದ ಹೊಂಗಿರಣ.

ಸೂರ್ಯನಿಗೆ ಅರ್ಥವಾಯಿತು. “ಶಬರಿ” ಎಂದು ಮೆದುವಾಗಿ ಕರೆದು “ಆ” ಎಂದ ಶಬರಿ ಸೂರ್ಯನ ಕಡೆ ನೋಡಿದಳು.

“ಈ ತೋಪು ಆ ಬಯಲು ಎರಡೂ ನಮ್ಮದಾಗ್‌ಬಿಟ್ರೆ ಏಟ್ ಚಂದಾಗಿರ್‍ತೈತೆ ಎಂದು ಉದ್ಗರಿಸಿದಳು.

ಸೂರ್ಯ ಹೌದೆಂಬಂತೆ ತಲೆಯಾಡಿಸಿ, ನವಾಬನ ಕಡೆ ತಿರುಗಿ, “ಈ ತೋಪು, ಆ ಬಯಲು-ಇದೇ ಬದುಕು! ಅಲ್ವಾ ಗೆಳೆಯ?” ಎಂದು ಕೇಳಿದ. ಹೀಗೆ ಕೇಳಿದವನು ಬಯಲು-ತೋಪುಗಳನ್ನೊಮ್ಮೆ ದಿಟ್ಟಿಸಿದ. ನವಾಬ್‌ಗೆ ಯಾವ ಅರ್ಥದಲ್ಲಿ ಸೂರ್ಯ ಈ ಮಾತು ಹೇಳಿದನೆಂದು ತಕ್ಷಣ ತಿಳಿಯಲಿಲ್ಲ; ಕೇಳಿದ- “ಹಾಗಂದ್ರೆ? ಏನರ್ಥ ನಿನ್ ಮಾತಲ್ಲಿ?”

ಸೂರ್ಯ ನಸುನಗುತ್ತ ಹೇಳಿದ- “ಬೇರೆ ಏನರ್ಥ ಇರುತ್ತೆ ಗೆಳಯ; ನಿಸರ್ಗ ಅನ್ನೋದು, ಈ ಪರಿಸರ ಅನ್ನೋದು ನಮ್ಮ ಬದುಕಿನ ಪ್ರತೀಕ ಅನ್ನುತ್ತೆ ನನಗೆ, ಪರಿಸರ ಅಂತ ಹೇಳಿ ಬರೀ ತೋಪು ಮಾತ್ರ ಬೆಳುದ್ರೆ ಸಾಲದು, ಬಯಲೂ ಬೇಕು; ಬೆಟ್ಟಗುಡ್ಡ ಬೇಕು. ಮರಗಿಡ ಬೇಕು. ಹೊಲಾನೂ ಬೇಕು; ಬರೀ ನೆಲಾನೂ ಬೇಕು. ಯಾವ್ಯಾವುದು ಎಷ್ಟೆಷ್ಟು ಅನ್ನೋ ಹದಕ್ಕೆ ಬರೋದೇ ಬದುಕು.”

ಸೂರ್ಯನ ಗಂಭೀರ ಶೈಲಿಗೆ ಕಚಗುಳಿ ಇಡುವಂತೆ ನವಾಬ್ “ಏನಪ್ಪ ಫಿಲಾಸಫರ್ ಆಗ್ತಾ ಇದ್ದೀಯಾ ಹೇಗೆ?” ಎಂದು ಕೇಳಿದ. ಆಗ ಸೂರ್ಯ “ನೀನು ಇತ್ತೀಚಿಗೆ ಮದ್ವೆ ಆಗಿದ್ದೀಯ ನೋಡು, ಅದಕ್ಕೆ ನಿನಗ ತುಂಟತನ ಜಾಸ್ತಿ ಆಗ್ತಿದೆ” ಎಂದು ನಗುತ್ತಲೇ ಚುರುಕುಮುಟ್ಟಿಸಿದ. ನವಾಬ್ “ಸಾರಿ ಬ್ರದರ್, ನೀನೇನೊ ಸೀರಿಯಸ್ಸಾಗ್ ಹೇಳ್ತಾ ಇದ್ದಾಗ ನಾನ್ ತಮಾಷೆ ಮಾಡ್ದೆ. ಸಾರಿ” ಎಂದು ಪಶ್ಚಾತ್ತಾಪದಿಂದ ನುಡಿದ. “ಪರವಾಗಿಲ್ಲ ಬಿಡು. ನೀನು ಈಗ ತಮಾಷೆ ಮಾಡ್ದೆ ಇದ್ರೆ ಇನ್‌ಯಾವಾಗ ಮಾಡ್ತೀಯ! ಯಾವಾಗ್ಲೂ ಹುಬ್ಬು ಗಂಟಿಟ್ಕಂಡು ಸೀರಿಯಸ್ ಫೋಜು ಕೊಡೋದು ಸರ್‍ಯಲ್ವಲ್ಲ” ಎಂದು ತಾನೇ ಸಮಾಧಾನದ ಮಾತಾಡಿದ ಸೂರ್ಯ “ನಾನು ಯಾಕ್ ಆ ಮಾತು ಹೇಳ್ತಾ ಇದ್ದೆ ಗೊತ್ತಾ?” ಎಂದು ಮೊದಲಿನ ಮಾತಿಗೇ ಹಿಂತಿರುಗಿದ. ನವಾಬ್ “ಹೇಳು ಹೇಳು” ಎಂದ.

“ನೋಡು ನವಾಬ್‌, ನಮಗೆ ಹಸಿರು ಬೇಕು, ತೋಪು ಬೇಕು. ಮರ ಗಿಡ ಬೇಕು. ಹಾಗಂತ ಬಯಲು ಬೇಡ ಅಂತ ತಿಳ್ಕೂಬಾರ್‍ದು. ಬಯಲಿಗೂ ಬದುಕಿನಲ್ಲಿ ಒಂದು ಬೆಲೆ ಇದೆ; ನೆಲೆ ಇದೆ. ಪರಿಸರದ ಸಮತೋಲನ ಕಾಪಾಡೋದೇ ಪರಿಸರ ಪ್ರಜ್ಞ, ಅಂತ ನನ್ನ ಭಾವನೆ. ಪರಿಸರ ಪ್ರಜ್ಞೆಗೆ ಪರಿಸರದ ಸಮಾನತೆ ಮುಖ್ಯ ಆಗ್ಬೇಕು. ಸಮಾಜದ ಸಮತೋಲನ ಮತ್ತು ಸಮಾನತಯಲ್ಲಿ ಹೇಗೆ ಸಾಮಾಜಿಕ ಪ್ರಜ್ಞೆ ಕಾಣ್ತೇವೊ ಹಾಗೆ ಇಲ್ಲೂ ಕಾಣ್ಬೇಕು ಅನ್ಸುತ್ತೆ ನಂಗೆ.”- ಸೂರ್ಯ ತುಂಬ ಗಂಬೀರವಾಗಿ ಹೇಳತೊಡಗಿದ. ಇದೇನೂ ಅರ್ಥವಾಗದ ಶಬರಿ ತೋಪು, ಬಯಲು, ಬೆಟ್ಟಗಳನ್ನು ನೋಡುತ್ತಿದ್ದಳು. ಗೌರಿ, ನವಾಬನ ಮುಖ ನೋಡುತ್ತಿದ್ದಳು.

“ಈ ಪ್ರಶ್ನೆ ಈಗ ಯಾಕ್ ಬಂತು ನಿನಗೆ?”- ನವಾಬ ಕೇಳಿದ.

“ಯಾಕೆ ಬಂತು ಅನ್ನೋದ್ಕಿಂತ. ಇಂಥ ಪ್ರಶ್ನೆ ಕೇಳ್ಕೋಳ್ತಾ ಇರ್‍ಬೇಕು ಅನ್ನೋದ್ ನನಗೆ ಮುಖ್ಯ. ಪ್ರತಿಭಟನೆ ಮತ್ತು ಪ್ರಶ್ನೆ ಎರಡಕ್ಕೂ ಸಂಬಂಧ ಇದೆ ಅಂತ ನಿಂಗೂ ಗೊತ್ತು. ಆದ್ರೆ ಈ ಪ್ರಶ್ನೆಯನ್ನ ಹೊರಗಿನ ವ್ಯವಸ್ಥೆಗೂ ಹಾಕ್ಬೇಕು. ನಮ್ಮ ಒಳಗಿನ ವ್ಯವಸ್ಥೆಗೂ ಹಾಕ್ಕೋಬೇಕು. ಆಗ ಪ್ರಶ್ನೇನೂ ಸಾರ್ಥಕ. ಪ್ರತಿಭಟನೇನೂ ಸಾರ್ಥಕ. ಅದಕ್ಕೆ ನನಗೆ ನಾನೇ ಕೆಲವು ಪ್ರಶ್ನೆಗಳನ್ನು ಹಾಕ್ಕೂಳ್ತಾ ಇರ್‍ತೀನಿ. ಸಾಮಾಜಿಕ-ಆರ್ಥಿಕ ಸಮಾನತೆ ಮತ್ತು ಪರಿಸರ ಸಮಾನತೆ- ಎಲ್ಲವೂ ಒಟ್ಟಿಗೆ ನಮ್ಮೊಳ್ಗಡೆ ಇದ್ರೆ ಎಷ್ಟು ಚೆನ್ನ ಅನ್ಸುತ್ತೆ. ಈಗ ಒಂದೊಂದೂ ಒಂದೊಂದ್ ವಾದ- ಪ್ರತಿವಾದ ಆಗಿಬಿಟ್ಟಿದೆ. ವಾದ-ಪ್ರತಿವಾದಗಳ ಗೊಂದಲದಲ್ಲಿ ಪೂರಕವಾದ ಪ್ರಜ್ಞೆ ಹಿಂದಕ್ ಸರೀತಾ ಇದೆ.”- ಸೂರ್ಯ ಅಂತರಂಗದ ಆಲೋಚನೆಗಳಿಗೆ ಮಾತಿನ ರೂಪ ಕೊಡತೂಡಗಿದ್ದ ಆಗ ನವಾಬ “ಹಾಗಂದ್ರೆ? ಸ್ವಲ್ಪ ಬಿಡ್ಸ್‌ಹೇಳು” ಎಂದ. ಸೂರ್ಯ ಮತ್ತೂ ಸ್ಪಷ್ಟಪಡಿಸಿದ- “ಸಮಾಜ ಬದಲಾವಣೆ ಮತ್ತು ಪರಿಸರ ಪ್ರಜ್ಞೆ ಬೇರೆ ಬೇರೆ ದಾರಿ ಹಿಡ್ದಿವೆ ಅಂತ ನಿನಗನ್ಸೊಲ್ವ? ಪ್ರಗತಿಪರ ವಾದಗಳು ಪರಸ್ಪರ ಪೂರಕವಾಗಿರೊ ಅಂಶಗಳನ್ನು ಗುರುತಿಸಿಕೊಳ್ಳೂ ಬದ್ಲು ವಿರುದ್ಧವಾಗಿರೊ ಸಣ್ಣಪುಟ್ಟ ವಿಷಯಗಳನ್ನು ಹಚ್ಚು ಮುಂದುಮಾಡ್ತಾ ಇಲ್ವೆ?” ತಕ್ಷಣ ನವಾಬ ಕೇಳಿದ- “ಹಾಗಾದ್ರೆ ಹೂಂದಾಣಿಕೆ ಮಾಡ್ಕೂಬೇಕಾ?”

“ಛೆ”- ಸೂರ್ಯ ಬೇಸರದಿಂದಲೇ ಪ್ರತಿಕ್ರಿಯಿಸಿದ. “ಹೂಂದಾಣಿಕ ಅಲ್ಲ. ಆಯಾ ವಾದಗಳ ವ್ಯಾಖ್ಯಾನಗಳ ವೈಪರೀತ್ಯದಲ್ಲಿ ಈ ಸಮಸ್ಯೆ ಇದೆ. ಸಾಮಾಜಿಕ-ಆರ್ಥಿಕ ಬದಲಾವಣೆಯ ಕೇಂದ್ರಪ್ರಜ್ಞೆಗೆ ಎಲ್ಲವೂ ಪೂರಕವಾಗಿರಬೇಕು. ಅದನ್ನೇ ನಾನು ‘ಪೂರಕವಾದ’ ಅಂದದ್ದು.”

ನವಾಬ್ “ಅದ್ಸರಿ” ಎಂದು ಸುಮ್ಮನಾದ. ಅಷ್ಟರಲ್ಲಿ ಗೌರಿಯು ನವಾಬನನ್ನು ಜಿಗುಟಿದಳು. ಇದನ್ನು ಗಮನಿಸಿದ ಸೂರ್ಯ ನಗುತ್ತಾ “ಗೌರೀಗೆ ತಲೆ ಚಿಟ್ ಹಿಡ್ದಿರ್‌ಬೇಕು” ಎಂದ. “ಅಂಗಲ್ಲಣ್ಣ, ವೋಗಿ ಅಡುಗೆ ಮಾಡ್ಬೇಕಲ್ಲ” ಎಂದಳು. ಸೂರ್ಯ ಮತ್ತೆ ನಗುತ್ತ “ವಾಸ್ತವ ಅಂದ್ರೆ ಇದು ನೋಡು” ಎಂದ.

ಎಲ್ಲರೂ ಹೂರಟು ನಿಂತರು. ಶಬರಿ ಮಾತ್ರ ತೋಪಿನಲ್ಲಿ ಓಡಾಡುತ್ತಲೇ ಇದ್ದಳು. “ಏನಪ್ಪ ನಿನ್‌ಕೆಲ್ಸಾನ ಶಬರಿ ಮಾಡ್ತಿರೋ ಹಾಗಿದ” ಎಂದು ನವಾಬ ನಗುತ್ತ ಶಬರಿಯನ್ನು ಕೂಗಿದ. ಶಬರಿ ಬಂದಳು. ಬಂದವಳು ಯಾರ ಮಾತಿಗೂ ಕಾಯದೆ “ಅದೇಟ್ಸರ್‍ತಿ ಬಂದಿವ್ನಿ ಈ ತೋಪಿಗೆ. ಇವತ್ತು ಏನೊ ವೊಸಾತರ ಕಾಣುಸ್ತಾ ಐತೆ” ಎಂದಳು. “ಪರಿಸರದ ಜೊತೆ ನಮ್ಮ ಸಂಬಂಧ ಹೇಗಿರುತ್ತೊ ಹಾಗ್ ಕಾಣ್ಸುತ್ತೆ” ಎಂದ ಸೂರ್ಯ. “ಅಂಗಂದ್ರೆ?” ಎಂದಳು ಶಬರಿ. “ಹಾಗಂದ್ರೆ ಹೀಗೆ” ಎಂದು ಸೂರ್ಯ ಸ್ಪಷ್ಟಡಿಸಿದ- “ಈ ತೋಪು ನಿಮ್ಗೆ ಹತ್ತಿರದಲ್ಲಿದ್ರೂ ಹತ್ರ ಆಗಿರ್‍ಲಿಲ್ಲ. ಯಾಕಂದ್ರೆ ಅದರಿಂದ ನಿಮಗೆ ಏನೂ ಸಿಗ್ತಾ ಇರ್‍ಲಿಲ್ಲ- ಒಂದಿಷ್ಟು ನೆರಳು ಬಿಟ್ಟು. ದುಡಿಯೋಕೆ ಮಾತ್ರ ನೀವು ತೋಪಿಗೆ ಬೇಕು. ಅನುಭವಿಸೋಕೆ ತೋಪು ನಿಮ್ದಲ್ಲ. ಮುಂದೆ ಈ ತೋಪು ನಿಮ್ಮದಾಗ್‌ಬೇಕು ಅನ್ನೋಭಾವನೆ ಬಂದಾಗ ಅದಕ್ಕೂ ನಿಮ್ಗೂ ಸಂಬಂಧ ಬೆಳ್ಯುತ್ತೆ. ನೀವು- ಅದೂ ಬೇರ್‌ಬೇರೆ ಆಗೊಲ್ಲ ಅನ್ಸುತ್ತೆ ಅಲ್ವಾ?”

ಶಬರಿಗೆ ನಿಜವೆನ್ನಿಸಿತು. “ನೀನಂಬಾದ್ ದಿಟ ಅನುಸ್ತೈತೆ” ಎಂದಳು. ಆಗ ಗೌರಿ “ಅಪ್ಪಯ್ಯ ಅಸ್ಕಂಡ್ ಕಾಯ್ತಾ ಇರ್‍ತೈತೆ. ಬಿರ್‌ಬಿರ್‍ನ್ ವೋಗಾನ ಬರ್ರಿ” ಎಂದು ಹೆಜ್ಜೆ ಹಾಕಿದಳು. “ಬರೀ ಪೂಜಾರಪ್ಪಂಗ್ ಊಟಕ್ ಇಟ್ರಾಯ್ತೇನಮ್ಮ- ನಮ್ಮ ಹೊಟ್ಟೆಪಾಡು ಸ್ವಲ್ಪ ನೋಡು ಎಂದು ಛೇಡಿಸಿದ ಸೂರ್ಯ. “ಅದ್ಕೇನಂತಣ್ಣ, ಇವತ್ತು ನಮ್ಮನ್ಯಾಗೇ ಎಲ್ರೂ ಉಂಡ್ರಾತು” ಎಂದು ಸಂತೋಷದಿಂದ ಹೇಳಿದಳು ಗೌರಿ. “ಆಮ್ಯಾಕ್ ನಿಮ್ಮಪ್ಪ ಉರ್‍ದ್ ಉಪ್ಪಾಕಿದ್ರೆ. ನಮ್ ಗತಿ ದ್ಯಾವ್ರೇಗತಿ” ಎಂದು ನಕ್ಕಳು ಶಬರಿ.

“ನಮ್ಮಪ್ಪಯ್ಯ ಅಟಂದ್ ಕೆಟ್ಟಾನಲ್ಲ. ಇವಾಗಂತೂ ಉಂಬಾದು, ಓಡಾಡಾದು, ಕಟ್ಟೆ ಮ್ಯಾಲ್ ಮಲ್ಗಾದು, ಆಟೇಯ” ಎಂದು ಗೌರಿ ತನ್ನ ತಂದೆಯನ್ನು ಸಮರ್ಥಿಸಿಕೊಂಡಳು.

ಶಬರಿಗೆ ತಾನು ಘಾಸಿ ಮಾಡಿದೆ ಎನ್ನಿಸಿತು. “ಸುಮ್ಕೆ ನಗ್ಸಾರಕ್ ಅಂಗಂದೆ ಕಣೇ ಗೌರಿ. ಪೂಜಾರಪ್ಪನ್ ನೋಡಿರೆ ಪುಣ್ಣೇವ್ ಕಂಡಂಗಾಗ್ತೈತೆ ಇವಾಗ ಎಂದು ಮನದಾಳದಿಂದ ಮಾತಾಡಿದಳು. ಗೌರಿ “ಆಟೇಳು ಮತ್ತೆ” ಎಂದು ಹುಸಿಮುನಿಸಿನಲ್ಲೇ ಹೇಳಿ “ಒಸಿ ಬಿರ್‌ಬಿರ್‍ನ ಯೆಜ್ಜೆ ಆಕ್ರಿ” ಎಂದು ಒತ್ತಾಯಿಸಿದಳು.

ಇವರು ಹಟ್ಟಿಗೆ ಬರುವ ವೇಳಗೆ ಕತ್ತಲಾಗಿತ್ತು. ಹೆಂಗಸರು ಅಡುಗೆ ಮಾಡುತ್ತಿದ್ದರೆ ಗಂಡಸರು ಹೂರಗೆ ಕೂತಿದ್ದರು. ಮನೆಯ ಹೆಂಗಸರ ವಿರೋಧ ಹೆಚ್ಚಾದಂತೆ ಗಂಡಸರು ಗಂಡಂಗಿಗೆ ಹೋಗುವುದನ್ನು ಕಡಿಮೆ ಮಾಡಿದ್ದರು. ಗೌರಿ-ನವಾಬರ ಮದುವೆಯ ದಿನವೂ ಕುಡಿತಕ್ಕೆ ಅವಕಾಶವಾಗಿರಲಿಲ್ಲ. ಕೇಳುವ ಧೈರ್ಯವೂ ಇರಲಿಲ್ಲ. ಹಿಂದೆ ಒಡೆಯರೇ ಸಾರಾಯಿಯನ್ನು ಸರಬರಾಜು ಮಾಡುತ್ತಿದ್ದರು. ಗುಡಿಗೆ ಹೆಣ್ಣು ಬಿಟ್ಟು ಬಂದು ಕುಡಿದು, ತಿಂದು, ತೇಗಿ ಮಲಗುತ್ತಿದ್ದರು. ಈಗ ಅದು ತಪಿಹೋಗಿತ್ತು. ಕುಡಿತ ಇಲ್ಲದೆಯೂ ಇರಬಹುದೆಂದು ಅನ್ನಿಸತೊಡಗಿತ್ತು. ಹೆಚ್ಚೆಂದರೆ ತೀರಾ ಶ್ರಮವಾದಾಗ ಒಂದಿಷ್ಟು ಕುಡಿದು ಯಾರಿಗೂ ಪತ್ತೆಯಾಗದಂತೆ ಮಲಗುವವರೂ ಇದ್ದರು.

ಇವತ್ತಂತು ಎಲ್ಲರೂ ಇದ್ದಾರೆ. ಸೂರ್ಯ ಅವರ ಜೊತೆಯೇ ಕೂತುಕೊಂಡ. ಅದೂ ಇದೂ ಮಾತಾಡುತ್ತ ತೋಪು, ಬಯಲುಗಳ ವಿಷಯ ಎತ್ತಿದ. “ಅದು ನಿಮಗೆ ಸೇರಬೇಕು. ಯೋಚ್ನೆ ಮಾಡಿ. ನೀವು ಹ್ಞೂ ಅಂದ್ರೆ ಮುಂದಿನ ದಾರಿ ತಿಳಿಯೋಣ” ಎಂದು ಹುರಿದುಂಬಿಸಿದ. ಜನರು ಯೋಚಿಸತೊಡಗಿದರು. ಒಬ್ಬಾತ “ಮುಂದಿನ ಮನೆ ಅನ್ನ ನಂಬ್ಕಂಡು ಈ ಮನೆ ಮುದ್ದೆ ತಪ್ಪಿಸ್ಕಂಡಂಗಾದಾತು” ಎಂದ. “ಹಾಗಂದ್ರೆ?”- ಸೂರ್ಯ ಸ್ಪಷ್ಟನೆ ಕೇಳಿದ. ಆತ ಹೇಳಿದ- “ಅಂಗಂದ್ರೆ ಬ್ಯಾರೆ ಏನೂ ಇಲ್ಲಪ್ಪ ತೋಪು ನಮ್ಗೇ ಬೇಕು ಅಂಬ್ತಕೇಳಿದ್ ಮ್ಯಾಗೆ ಊರ್‍ನೋರು ನಮಿಗ್ ಕೂಲಿಕೆಲ್ಸಾನೇ ಕೊಡ್ದೆವೋದ್ರೆ? ಆವಾಗ್ ಬಾಳ್ಳೇವ್ ಮಾಡಾದ್ ಎಂಗೆ?”

ಸೂರ್ಯ ಹೇಳಿದ- “ನಿಮಗೆ ಹಿಂಗನ್ಸೋದು ಸರೀನೆ. ಆದ್ರ ಇಡೀ ಊರು ನಿಮ್ಮನ್ನ ದೂರ ಮಾಡಲ್ಲ. ಊರಲ್ಲೂ ನಿಮ್ ಥರಾನೇ ಬದ್ಕೋ ಜನ ಇದಾರೆ. ಭೂಮಿ ಇಲ್ದೆ ಮನೆ ಇಲ್ದೆ ಹೂಟ್ಟೆ ಬಟ್ಟೇಗ್ ಒದ್ದಾಡೊ ಜನ ಊರ್‍ನಲ್ಲೂ ಇದಾರೆ. ಒಡೆಯರ ಬಳಗ ಈ ಜನ್ರನ್ನೂ ದೂರ ಇಟ್ಟಿದೆ; ವಂಚನೆ ಮಾಡ್ತಾ ಇದೆ.”

“ಅದ್ರೂನೂವೆ ಉಸಾರಾಗ್ ಹೆಜ್ಜೆ ಇಡ್ಬೇಕಪ್ಪ” ಎಂದು ಆತ ಮತ್ತೆ ಒತ್ತಿ ಹೇಳಿದ.

“ಅದ್ಸರಿ, ಎಲ್ಲಾ ಇವತ್ತೇ ಆಗ್ಬೇಕಿಲ್ಲ. ಈ ದಿಕ್ಕಿನಲ್ಲಿ ಯೋಚ್ನೆ ಮಾಡೋಣ. ಯಾವಾಗ ಎಲ್ರೂ ಹ್ಞೂ ಅಂತೀರೊ ಅವತ್ತೇ ಕೇಳೋಣ” ಎಂದ ಸೂರ್ಯ. “ಕೇಳಾದಿನಾನೂ ಬಂದೆ ಬರ್‍ತೈತೆ” ಎಂದು ದೃಢವಾಗಿ ಹೇಳಿದಳು ಶಬರಿ. ಜೊತೆಗೆ ಮತ್ತೊಂದು ಮಾತು ಸೇರಿಸಿದಳು- “ನಾವೆಲ್ಲ ಒಂದಾಗಿದ್ರೆ ಯಾರ್ ಏನೂ ಮಾಡಾಕಿಲ್ಲ. ಗೌರಿ ಮದ್ವೆ ವಿಸ್ಯಾನೇ ತಗಳ್ಳಿ. ನವಾಬಣ್ಣನ ಜತೆ ಮದ್ವೇ ಆತು. ದ್ಯಾವ್ರ್ ಗುಡೀಗೆ ವೋಗ್ದೆ ಇಲ್ಲೇ ಗಂಡನ್ ಜತೆ ಇದ್ದದ್ದೂ ಅತು. ಕೆಟ್ಟದ್ದೇನಾತು? ಏನೂ ಆಗ್ಲಿಲ್ಲ. ನಾವೆಲ್ಲ ಒಂದಾಗಿದ್ದೀವಿ ಅಂಬ್ತ ತಿಳುದ್ ಮ್ಯಾಕೆ ಒಡೇರೂ ಉಸ್ತತ್ತಿಲ್ಲ.”

ಈಗ ಸಣ್ಣೀರ “ನೀನಂಬಾದೂ ದಿಟ ಅನ್ನು” ಎಂದು ತಲೆಯಾಡಿಸಿದ. ಹುಚ್ಚೀರ ಸಂತೋಷದಿಂದ ಅರಳಿದ. ಒಳಹೋಗಿ ಪುಸ್ತಕಗಳನ್ನು ಹಿಡಿದುಕೊಂಡು ಬಂದು ನಿಂತ. ಆತ ಶಾಲೆಗೆ ಸಿದ್ಧವಾಗಿ ಬಂದದ್ದನ್ನು ನೋಡಿದ ಸೂರ್ಯ “ಇವತ್ತು ಆ ಶಾಲೆ ಇಲ್ಲ, ಇವತ್ತಿಲ್ಲೇ ಶಾಲೆ” ಎಂದ. ಹುಚ್ಚೀರ ಪುಸ್ತಕಗಳನ್ನು ಸೂರ್ಯನ ಮುಂದಿಟ್ಟ. ಆಗ ಸೂರ್ಯ “ಇವತ್ತು ಪುಸ್ತಕದ ಶಾಲೆ ಅಲ್ಲ. ಭೂಮಿ ಶಾಲೆ. ಇಲ್ಲೇ ಕುಂತ್ಕೊಂಡು ಭೂಮಿ, ಬಯಲು ಅದೂ ಇದೂ ಮಾತಾಡೋಣ, ತಗೋ, ಪುಸ್ತಕ ಒಳ್ಗಡೆ ಇಟ್ ಬಾ” ಎಂದು ಪುಸ್ತಕಗಳನ್ನು ವಾಪಸ್ ಕೊಟ್ಟರೂ ಹುಚ್ಚೀರ ಒಳಗೆ ಇಡಲಿಲ್ಲ. ಅದರ ಬದಲು ಅಲ್ಲೇ ಕಟ್ಟೆಯಮೇಲೆ ದೀಪದ ಬೆಳಕಲ್ಲಿ ಕೂತು ಏನೋ ಬರೆಯತೊಡಗಿದ. ಸೂರ್ಯ “ಇನ್‌ಮೇಲೆ ಹುಚ್ಚೀರ ಮೇಷ್ಟ್ರಾಗ್‌ಬಿಡ್ತಾನೆ” ಎಂದು ತಮಾಷೆ ಮಾಡಿದ. ಆನಂತರ ತುಂಬಾ ಹೊತ್ತು ಭೂಮಿ ಹುಟ್ಟಿದ್ದು, ಭೂ ಒಡೆಯರ ಪಾಲಾದದ್ದು, ಮುಂತಾದ ವಿಷಯಗಳನ್ನು ಕತೆಯೋಪಾದಿಯಲ್ಲಿ ಹೇಳುತ್ತ ಜನರ ಜತೆ ಕಳೆದ. ಕಡೆಗೆ “ಒಂದ್ ಹಾಡು ಹೇಳೋಣವಾ” ಎಂದ. “ಊಂಕಣಪ್ಪ, ಬರೀ ಮಾತ್ ಕೇಳಿ ತಲೆ ಎಲ್ಲಾ ತೊಲೆ ತರಾ ಆಗೈತೆ. ತೊಲೆ ಒಳ್ಗೆ ಗುಂಗರಿ ಸೇರ್‍ಕಂಡ್ ಕೊರೀತಾ ಐತೆ. ಒಂದ್ ಪದ ಯೇಳಿದ್ರೆ ಒಸಿ ಅಗುರ ಆಗ್ತೈತೆ” ಎಂದು ಸಣ್ಣೀರ ಸಣ್ಣದನಿಯಲ್ಲಿ ಹೇಳಿಯೇಬಿಟ್ಟ. ಸೂರ್ಯನಿಗೆ, ಸನ್ನಿವೇಶ ಅರ್ಥವಾಯ್ತು. “ಈಗ್ ಹೇಳ್ಕೂಡ್ತೀನಿ, ಹೇಳಿ” ಎಂದು ಶುರುಮಾದಿದ-

“ಈ ಭೂಮಿ ನಮ್ಮದು ಆಕಾಶ ನಮ್ಮದು
ಗಾಳಿ ನೀರು ಬೆಂಕಿ ಕೂಡಿ ಪಂಚಭೂತ ನಮ್ಮದು ||
ನಮ್ಮ ಭೂಮಿಗರ್‍ಭದಲ್ಲಿ ಭ್ರೂಣಗಳ ಕೊಂದರು
ಆಕಾಶದ ಅನಂತವನ್ನು ಆಪೋಶನಗೊಂಡರು
ಬೀಸೋಗಾಳಿ ಎದುರು ನಿಂತು ಗಾಳಹಾಕಿ ಹಿಡಿದರು.
ಕುಡಿವ ನೀರ ಕಣ್ಣ ಕಳೆದು ಕುರುಡಾಗಿಬಿಟ್ಟರು.
ಬೆಂಕಿ ಹಿಡಿದು ಎಗರಿ ಕುಣಿದು ಕನಸುಗಳ ಸುಟ್ಟರು||”…

– ಹೀಗೆ ಹೇಳಿಕೊಟ್ಟದ್ದನ್ನು ತಪ್ಪು ಸರಿಗಳ ಸಮೇತ ಜನರು ಹಾಡಿದರು. ಮತ್ತೆ ಮತ್ತೆ ಹೇಳಿಕೊಟ್ಟ ಸೂರ್ಯ ಅದರ ಅರ್‍ಥವನ್ನೂ ವಿವರಿಸಿದ. ಅವರು ಉತ್ಸಾಹಿತರಾದರು. ಕೆಲವರಂತು ಎದ್ದು ಕುಣಿಯತೊಡಗಿದರು. ಅಷ್ಟರಲ್ಲಿ ಹೆಂಗಸರು ಹೊರಬಂದು “ಉಂಬಾಕ್ ಬರಾಕಿಲ್ವ” ಎಂದು ಕೇಳಿದರು. ಹುಚ್ಚೀರನ ಹತ್ತಿರ ಕಟ್ಟೆ ಮೇಲೆ ಕೂತಿದ್ದ ತಿಮ್ಮರಾಯಿ “ಎಲ್ಲಾರು ಇಲ್ಲೇ ತರ್ರವ್ವ. ಒಟ್ಗೇ ಉಂಡ್ರಾತು” ಎಂದ. ಪೂಜಾರಪ್ಪ “ಅಂಗೇ ಮಾಡ್ರವ್ವೊ. ಎಲ್ಲಾ ಇಲ್ಲೆ ಕುಂತ್ಕಂಡ್ ಉಂಬಾನ” ಎಂದು ತಿಮ್ಮರಾಯಿಯ ಮಾತಿಗೆ ಪೂರಕವಾದ. ಆಗ ಶಬರಿ ಉತ್ಸಾಹದಿಂದ “ಯಾರ್ ಮನ್ಯಾಗ್ ಏನಾರ ಮಾಡಿರ್‍ಲಿ. ಎಂಗಪ್ಪ ವೂರೀಗ್ ತರಾದು ಅಂದ್ಕೊಬ್ಯಾಡ್ರಿ, ಎಲ್ಲಾರ್ ಮನೇದೂ ವೊಟ್ಟೇಪಾಡೇ. ತಗಂಡ್ ಬರ್ರಿ” ಎಂದು ಹುರಿದುಂಬಿಸಿದಳು. ಹಿಂದಿಮುಂದೆ ನೋಡುತಿದ್ದವರೂ ಆ ಹುರುಪಿನಿಂದ ತಂದರು.

ಮುದ್ದೆ, ಉಳಿಸೂಪ್ಪು, ರೂಟ್ಟಿ, ಚಟ್ನಿ, ಬದನೆಕಾಯಿ ಹುಳಿ, ಅರ್ಧಾಮ್ರ, ಮೆಣಸಿನಕಾಯಿ, ಗೊಜ್ಜು-ಹೀಗೆ ತರಾವರಿ ತಂದಿಟ್ಟರು. ಎಲ್ಲರೂ ತಂದದ್ದು ಹೊಟ್ಟೆಗಾಗಿ. ಯಾವುದೂ ಅಪಥ್ಯವಲ್ಲ. ನವಾಬ ಎಲ್ಲರೂ ಒಂದೊಂದಾಗಿ ತಂದಿಡುವುದನ್ನು ನೋಡುತ್ತಲೇ ಇದ್ದ. ಎಲ್ಲವನ್ನೂ ನೋಡಿ ನಸುನಕ್ಕ. ನವಾಬನ ನಗೆಯನ್ನು ನೋಡಿದ ಸೂರ್ಯ “ಏನ್ ಸಮಾಚಾರ?” ಎಂದು ತಮಾಷೆಯಲ್ಲಿ ತಿವಿದು ಕೇಳಿದ. ನವಾಬ “ಪೂರಕವಾದ!” ಎಂದು ಅಲ್ಲಿದ್ದ ಆಹಾರ ವೈವಿಧ್ಯದ ಕಡೆ ಕಣ್ಣು ಎಗರಿಸಿ ತೋರಿಸಿ ನುಡಿದ. ಸೂರ್ಯನಿಗೆ ನಗು ತಡೆಯಲಾಗಲಿಲ್ಲ. ನಗುತ್ತಾ “ಪೂರಕವಾದ ಅಷ್ಟೇ ಅಲ್ಲ; ಭೂಮಿವಾದ, ಕಣಯ್ಯಾ ಭೂಮಿವಾದ?” ಎಂದು ಹೇಳಿದ್ದಲ್ಲದೆ “ಈಗ ವಾದಾನೆಲ್ಲ ವಾಸ್ತವ್ಯಕ್ಕಿಳ್ಸಿ ಊಟ ಮಾಡೋಣ” ಎಂದು ತಟ್ಟೆಯನ್ನು ಎಳೆದುಕೊಂಡ. “ಈಗ ನಾವೆಲ್ಲ ಭೂಮಿ ಮೇಲಿದೇವೆ. ಅದ್ರಿಂದ ಇದು ಭೂಮಿವಾದಾನೇ ಸರಿ” ಎಂದು ಮುದ್ದೆಗೆ ಕೈ ಹಾಕಿದ ನವಾಬ “ಈ ಭೂಮಿ ನಮ್ಮದು ಈ ಊಟ ನಮ್ಮದು-ಅಂತ ಎಲ್ರೂ ಒಂದೇ ಮನಸ್ಸಿಂದ ಊಟ ಮಾಡಿ” ಎಂದು ನಗುತ್ತಲೇ ಹೇಳಿದ.

ಶಬರಿ “ನೀವು ಎಲ್ಲಾರು ಕುಂತ್ಕಳ್ರವ್ವ. ನಾವ್ ನಾವೇ ಆಕ್ಕಂಡ್ ಉಂಬಾನ” ಎಂದು ಒತ್ತಾಯಿಸಿದಾಗ ಎಲ್ಲ ಹಂಗಸರೂ ಗಂಡಸರೊಂದಿಗೆ ಕೂತರು. ಮಾತುಗಳ ಮಧ್ಯೆ ಊಟ ನಡೆಯಿತು- ಹುರುಪಿನಿಂದ; ಉತ್ಸಾಹದಿಂದ.

ಊಟ ಮಾಡುತ್ತಿರುವಾಗಲೇ ತಿಮ್ಮರಾಯಿ “ಸೂರ್ಯಪ್ಪ, ನಿನ್ನವ್ವ, ಅಪ್ಪ ಎಲ್ಲವ್ರೆ? ಏನ್ ಮಾಡ್ತಾ ಅವ್ರೆ?” ಎಂದು ಕೇಳಿದ.

ಸೂರ್ಯ ಊಟ ಮಾಡುತ್ತಿದ್ದವನು ಹಾಗೇ ಕೂತ. ಮಾತಾಡಲಿಲ್ಲ. ತಿಮ್ಮರಾಯಿಗೆ ತಾನು ಕೇಳಬಾರದಿತ್ತೇನೊ ಎನ್ನಿಸಿತು. “ಬೋದಿನ್ದಿಂದ ಕೇಳಾನ ಅಂದ್ಕಂಡಿದ್ದೆ ಕಣಪ್ಪ. ನೀನ್ ಯಾವಾಗ್ಲೂ ಈ ಕೆಲಸ್ದಾಗಿದ್ರೆ ಅವ್ರಿಗೆ ವೊಟ್ಟಪಾಡೆಂಗೆ ಆಂಬ್ತ ಉಂಬ್ತಾ ಕುಂತಾಗ್ ನಪ್ಪಿಗ್ ಬಂತು. ಕೇಳಿದ್ದೇನಾರ ತಪ್ಪಾತ?” ಎಂದು ಸೂರ್ಯನನ್ನು ಪಶ್ಚಾತ್ತಾಪದ ತುಡಿತದಿಂದ ಕೇಳಿದ. ಸೂರ್ಯ “ಹಾಗೇನಿಲ್ಲ ಕಣಜ್ಜ. ನಂಗೆ ಅಪ್ಪ ಇಲ್ಲ. ಉಳ್ದಿರೋದು ಅಮ್ಮ ಮಾತ್ರ” ಎಂದು ಎಲ್ಲೋ ನೋಡುತ್ತಾ ಕೂತ. ಆಗ ಪೂಜಾರಪ್ಪ ಒಂದು ಕಿತ ಕರ್‍ಕಂಡ್ ಬಾರಪ್ಪ ನಿಮ್ಮವ್ಪನ್ನ” ಎಂದ.

ಸೂರ್ಯನ ಕಣ್ಣಲ್ಲಿ ನೀರು ತುಂಬಿರುವುದನ್ನು ಶಬರಿ ಗಮನಿಸಿದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುರಿದ ವಾದ್ಯದ ರಾಗ
Next post ಗಿಣಿಗೆ ಪಂಜರದ ಹಂಗು ಯಾಕಿಲ್ಲ?

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

cheap jordans|wholesale air max|wholesale jordans|wholesale jewelry|wholesale jerseys