ತೇಜಸ್ವಿ ಸರ್ ಎಂದೇ ಅಭಿಮಾನಿಗಳಲ್ಲಿ ಪ್ರಖ್ಯಾತರಾಗಿರುವ, ಶ್ರೀ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರು, ಕನ್ನಡ ಸಾಹಿತ್ಯದ ಜ್ಞಾನವುಳ್ಳ ಪ್ರತಿಯೊಬ್ಬರಿಗೂ ಚಿರಪರಿಚಿತರು. ಅನೇಕ ಸಾಹಿತ್ಯಾಸಕ್ತರಿಗೆ ಪ್ರವೇಶಿಕೆಯಾಗಿ ತೇಜಸ್ವಿಯವರ ಬರವಣಿಗೆ ಒದಗಿ ಬರುತ್ತದೆ. ಅವರು ಕನ್ನಡ ಸಾಹಿತ್ಯದ ಮೇರು ಶಿಖರ ರಸಋಷಿ ಶ್ರೀ ಕುವೆಂಪುರವರ ಹಿರಿಯ ಮಗನೆಂಬುದೊಂದು ಸುಯೋಗ. ನಾನು ಇಂಜಿನಿಯರಿಂಗ್ ಪದವಿ ಪಡೆಯುವ ವರೆಗೂ ಸಾಹಿತ್ಯದ ಗಂಧವೇ ಇಲ್ಲದಂತಿದ್ದೆ. ಕನ್ನಡ ಭಾಷಾಭಿಮಾನಿಯಾದ ದೆಸೆಯಿಂದ, ರಜಾದಿನಗಳಲ್ಲಿ ನಗರ ಕೇಂದ್ರ ಗ್ರಂಥಾಲಯಗಳ ಪರಾಮರ್ಶನ ವಿಭಾಗಗಳಲ್ಲಿ ಕನ್ನಡ ಭಾಷೆಯ ಇತಿಹಾಸ, ಹಿರಿಮೆಯ ಪುಸ್ತಕಗಳು ಶಂಬಾರ ಕಂನುಡಿಯ ಹುಟ್ಟು ಯಂತವುಗಳನ್ನು ಓದಿ, ಕನ್ನಡದ ಶ್ರೀಮಂತಿಕೆಯ ಬಗ್ಗೆ ತಿಳಿದುಕೊಂಡಿದ್ದೆ. ನನಗೆ ಸರಿಯಾಗಿ ಸಾಹಿತ್ಯ ವಲಯದ ಪರಿಚಯವಾದದ್ದು ಒಂದು ಆಕಸ್ಮಿಕ ಸಂದರ್ಭದಲ್ಲಿ. ೨೦೦೩ರ ಫೆಬ್ರವರಿ ಕಡೆಯ ವಾರದಲ್ಲಿ, ಅಂತರ್ಜಾಲದ ಯಾಹೂ ಗುಂಪೊಂದರಿಂದ ಪರಿಚಯವಾಗಿದ್ದ ಕೆಲ ಸಮಾನಾಸಕ್ತ ಗೆಳೆಯರನ್ನು ಬೆಂಗಳೂರಿನ ಎಂ ಜಿ ರಸ್ತೆಯಲ್ಲಿ ಒಂದು ಶನಿವಾರ ಸಂಜೆ ಭೇಟಿಯಾದೆ. ಮುಖ್ಯವಾಗಿ, ನನ್ನ ಜೀವನದ ದಿಕ್ಕನ್ನೇ ಬದಲಿಸಿದ ವ್ಯಕ್ತಿಯಾದ ಶ್ರೀ ಶೇಖರಪೂರ್ಣರ ಪರಿಚಯವಾಯಿತು. ಅವರು ೨೦೦೦ರ ಸುಮಾರಿನಲ್ಲಿ ಕನ್ನಡಸಾಹಿತ್ಯ.ಕಾಂ ಎಂಬ ಹೆಸರಿನ ಕನ್ನಡ ಸಾಹಿತ್ಯದ ಅಂತರ್ಜಾಲ್ ತಾಣವನ್ನು ಸ್ಥಾಪಿಸಿ ನಿರ್ವಹಿಸಿಕೊಂಡು ಹೋಗುತ್ತಿದ್ದರು. ಆಗಿನ ನನ್ನ ಅಪಕ್ವ ವಿಚಾರಸರಣಿಯಲ್ಲಿ, ಸಾಹಿತಿಗಳೆಲ್ಲ ಅಲೌಕಿಕ ಅನುಭೂತಿಯವರು, ಮತ್ತು ಸಾಹಿತ್ಯವೆಂಬುದು ಸಾಮಾನ್ಯರ ಕೈಗೆಟುಕದ್ದು ಎಂಬ ಕಲ್ಪನೆಯಿತ್ತು. ಆದರೆ, ಶೇಕರ್ ರವರನ್ನು ಸಂಧಿಸಿದ ಬಳಿಕ ಅವರೊಟ್ಟಿಗೆ ನನಗೆ ಪ್ರಿಯವಾಗಿದ್ದ ವಿಚಾರ, ಆಸಕ್ತಿಗಳನ್ನು ಹಂಚಿಕೊಳ್ಳುತ್ತ ಸಾಹಿತ್ಯ ಓದುವ ಕುತೂಹಲ ಬಂತು. ಮೊದಲಿಗೆ ಯಶವಂತ ಚಿತ್ತಾಲರ ‘ಛೇದ’ ಕಾದಂಬರಿಯನ್ನು ಕೀಲಿಸುವ ಸಲುವಾಗಿ ಕೈಗೆತ್ತಿಕೊಂಡಾಗ ಅದರಿಂದ ನನ್ನ ಸಾಹಿತ್ಯಾಧ್ಯಯನ ಮೊದಲುಗೊಂಡಿತು. ತೇಜಸ್ವಿಯವರ ಬಗ್ಗೆ ತಿಳಿವು ಮೂಡಲು ಪ್ರಾರಂಭವಾದದ್ದು ೨೦೦೩ರ ಕೊನೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ, ನಡೆದ ತೇಜಸ್ವಿಯವರ ಛಾಯಾಚಿತ್ರಗಳ ಪ್ರದರ್ಶನ ‘ಹಾರಾಡುವ ಹಾಡುಗಳು'(ಅಂತರ್ಜಾಲದಿಂದ ನೆನಹಿಗೆ ಬಂದದ್ದು)ವಿನ ಉದ್ಘಾಟನಾ ಸಮಾರಂಭದಲ್ಲಿ ನಾನು ಮೊದಲು ತೇಜಸ್ವಿಯನ್ನು ನೋಡಿದ್ದು. ಅಂದು ಬಹುಷಃ ಜಯಂತ ಕಾಯ್ಕಿಣಿಯವರು ಅವರ ಜೊತೆ ಸಂವಾದ ನಡೆಸಿಕೊಟ್ಟರೆಂದು ತೋರುತ್ತದೆ.(ನೆನಪು ಪೂರ್ಣವಾಗಿಲ್ಲ). ಅದಾದ ನಂತರ ತೇಜಸ್ವಿಯವರು ಅದೇ ವರ್ಷ ಕುಪ್ಪಳಿಯಲ್ಲಿ ಡಿಸೆಂಬರ್ ಕಡೆಯ ವಾರದಲ್ಲಿ ಕುವೆಂಪುರವರ ಜನ್ಮಶತಮಾನೋತ್ಸವ ಉದ್ಘಾಟನೆಯ ಸಂದರ್ಭದಲ್ಲಿ ನಡೆದ ಕುವೆಂಪು ಅಧ್ಯಯನ ಶಿಬಿರದಲ್ಲಿ. ಅಲ್ಲಿ ಕೆಲವರಿಂದ ತೇಜಸ್ವಿಯವರ ನಿಷ್ಟುರತೆಯ ಬಗ್ಗೆ ಮಾತನಾಡಿಕೊಳ್ಳುವವರೂ ಉಂಟೆಂದು ಗಮನಕ್ಕೆ ಬಂತು. ಅದಾದ ಒಂದು ವರ್ಷದ ನಂತರ ೨೦೦೪ರಲ್ಲಿ ತೇಜಸ್ವಿಯವರು ಕನ್ನಡ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯ ಬಗ್ಗೆ ನಡೆದ ಸಂವಾದ-ಸಭೆಗಳಲ್ಲಿ ಸಕ್ರಿಯರಾಗಿದ್ದರು. ಅದೇ ವಿಷಯವಾಗಿ, ಮಾಹಿತಿ ತಂತ್ರಜ್ಞಾನವನ್ನು ವೃತ್ತಿಯಾಗಿ ಹೊಂದಿ ಕನ್ನಡ ಸಲಕರಣೆಗಳನ್ನು ಅಭಿವೃದ್ಧಿಪಡಿಸುವ ಉತ್ಸಾಹದಲ್ಲಿರುವವರನ್ನು, ನೇರವಾಗಿ, ಮುಕ್ತವಾಗಿ ಪರಿಚಯಿಸಿಕೊಂಡು, ವಿಚಾರವಿನಿಮಯ ಮಾಡಿಕೊಳ್ಳುವ ಸಲುವಾಗಿ ತಮ್ಮ ಹಿರಿಯ ಮಗಳಾದ ಸುಸ್ಮಿತಾರ ಎಚ್ ಎಸ್ ಆರ್ ಲೇಔಟಿನ ಮನೆಯಲ್ಲಿ, ಅನೌಪಚಾರಿಕ ಮಾತುಕತೆಗಾಗಿ ಆಹ್ವಾನಿಸಿದ್ದರು. ಅಂದು ಆ ಭಾನುವಾರ ಮಧ್ಯಾಹ್ನ ಅಲ್ಲಿಗೆ ಹೋದವರು, ನಾನು ಹಾಗೂ ಮತ್ತೊಬ್ಬ ಐಟಿ ಉದ್ಯೋಗಿ ತೇಜೇಶ್ ರವರು ಮಾತ್ರ. ಆ ಚರ್ಚೆಯಲ್ಲಿ, ಕನ್ನಡ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ತೇಜಸ್ವಿಯವರ ಕಸುವು-ಅರಿವು ತೇಜೇಶ್ ರನ್ನು ಅವಾಕ್ಕಾಗಿಸಿತು. ಅದಾದ ಮೇಲೆ ತೇಜಸ್ವಿಯವರ ಕೃತಿಗಳು ಒಂದೊಂದಾಗಿ ನನ್ನ ಓದಿನ ಮೂಲಕ ನನಗೆ ಹೊಸ ನೋಟವನ್ನು ಅನಾವರಣಗೊಳಿಸುತ್ತಾ ಹೋದವು. ಸಾಹಿತ್ಯ ಓದುವ ಮುನ್ನವೇ, ನನ್ನ ಎಳವೆಯಲ್ಲೇ ‘ತಬರನ ಕಥೆ’ ಹಾಗೂ ‘ಕುಬಿ ಮತ್ತು ಇಯಾಲ’ ಚಿತ್ರಗಳನ್ನು ನೋಡಿದ್ದೆನಾದರೂ ತೇಜಸ್ವಿಯವರ ಬಗ್ಗೆ ಏನನ್ನೂ ತಿಳಿಯದವನಾಗಿದ್ದೆ. ವಾಣಿಜ್ಯ ಚಿತ್ರಗಳಿಂದ ಭಿನ್ನವಾಗಿದ್ದ ಈ ಎರಡು ಚಿತ್ರಗಳು ನೆನಪಿನಲ್ಲುಳಿದವು.

ನಾನು ಕೆಲಸಕ್ಕೆ ಸೇರಿ, ಪುಣೆ ನಂತರ ಥಾಣೆಯಲ್ಲಿ, ಟಾಟಾ ಟೆಕ್ನಾಲಜೀಸ್ ಸಂಸ್ಥೆಯಲ್ಲಿ ಉದ್ಯೋಗಕ್ಕೆ ತೊಡಗಿದ ತದನಂತರ, ನನ್ನ ಜೀವನದ ಅಭಿನ್ನ ಅಂಗವಾದದ್ದು ಸಾಹಿತ್ಯದ ಓದು ಹಾಗು ಕನ್ನಡಸಾಹಿತ್ಯ.ಕಾಂನೊಂದಿಗಿನ ನನ್ನ ಸಾಂಗತ್ಯ. ಇದೇ ನಡುವೆ ಏಪ್ರಿಲ್ ೫, ೨೦೦೭ರ ಮಧ್ಯಾಹ್ನ ದಟ್ಸ್ ಕನ್ನಡ.ಕಾಂ ನಲ್ಲಿ ಪ್ರಕಟವಾದ ತೇಜಸ್ವಿಯವರ ಸಾವಿನ ಸುದ್ದಿ ಸ್ವಲ್ಪ ಕಾಲ ನನ್ನನ್ನು ವಿಚಲಿತಗೊಳಿಸಿತು. ಅಂದಿನಿಂದಲೂ, ಇಂದಿಗೂ ಪ್ರಸ್ತುತವೆನಿಸುವ ಅವರ ವಿಚಾರಗಳನ್ನು ಕಂಡಾಗ, ಸಮಕಾಲೀನ ಕಾಲಘಟ್ಟದಲ್ಲಿ ಅವರಿಲ್ಲದ ಕೊರತೆ ಬಹುವಾಗಿ ಕಾಡುತ್ತದೆ.

*****