ಅವ್ವ….
ಹಸಿರು ರೆಕ್ಕೆ ಕೆಂಪು ಕೊಕ್ಕಿನ ಗಿಣಿ
ಮುದ್ದು ಮುದ್ದಾಗಿ ಮಾತಾಡಿ
ಸೂರ್‍ಯಂಗೂ ಚಂದ್ರಂಗೂ ಮಂಕುಬೂದಿಯನೆರಚಿ
ಹೂವು, ಎಲೆ, ಗಂಧ ಗಾಳಿಯ
ಗಮನ ಎತ್ತೆತ್ತಲೋ ಸೆಳೆದು
ಚಿಕ್ಕೆಯ ಬಳಗಕ್ಕೆ ಮಾಯಕಿನ್ನರಿ ನುಡಿಸಿ ಮೈಮರೆಸಿ
ನದಿಯೂ ಬೆಟ್ಟವೂ
ಎವೆ ಮುಚ್ಚಿ ಬಿಚ್ಚುವುದರೊಳಗೆ
ಕೋಟಿ ಕ್ರಿಮಿ ಕೀಟಗಳ ಕಣ್ಣಿಗೆ ಕಪ್ಪನೆಯ ಮುಸುಕೆಳೆದು
ಮುಚ್ಚಿರುವಂತೆಯೆ ಪಂಜರಶಾಲೆಯ ಬಾಗಿಲು,
ಭದ್ರ ಬಿಗಿ ಕಾವಲು-ಮಾಯವಾಯಿತಲ್ಲ….

ಅವ್ವ….
ಹಸಿರು ರೆಕ್ಕೆ ಕೆಂಪು ಕೊಕ್ಕಿನ ಗಿಣಿ
ಮತ್ತೊಂದು ಚಣದಲ್ಲಿ
ಗುಲಾಬಿ ರೆಕ್ಕೆ ಹಳದಿ ಕೊಕ್ಕಿನ ಗಿಣಿ
ಮಗದೊಂದು ಚಣದಲ್ಲಿ
ನೀಲಿ ರೆಕ್ಕೆ ಕಪ್ಪು ಕೊಕ್ಕಿನ ಗಿಣಿ
ಗಳಿಗೆಗೊಂದು ಬಣ್ಣ ಮೆತ್ತಿ
ರಂಗಮಂಟಪದೊಳಗೆ ಸುತ್ತಿ
ಮೊಲವಾಗಿ ಛಂಗನೆ ನೆಗೆದು
ಮೇನಕೆಯಾಗಿ ತಕಧಿಂ ಎಂದು ಕುಣಿದು
ಮಾಟಗಾತಿಯ ದಂಡ ಮೆಟ್ಟಿ
ಮಿಂಚಾಗಿ ಮಿಣಿ ಮಿಣಿಗುಟ್ಟಿ
ಮಾಯವಾಗಿಯತಲ್ಲ….

ಅವ್ವ….
ಹಸಿರು ರೆಕ್ಕೆ ಕೆಂಪು ಕೊಕ್ಕಿನ ಗಿಣಿ
ಮರಿಗುಬ್ಬಿಯ ಹಾಗೆ ಗಳಿಗೆಗಳನ್ನು ಗಬಾಯಿಸಿ
ಗೂಬೆಯ ಹಾಗೆ ಗುಕ್ಕೆಂದು ಕೂಗಿ
ಗುಂಗಿಯ ಹುಳುವಾಗಿ ಗೀಗೀ ಪದ ಹಾಡಿ
ಹಾರಿ ಹೋಯಿತಲ್ಲ….

ಅವ್ವ….
ಜಾಲಿಯ ಮರವನ್ನೇರಿಕುಳಿತಿರಬಹುದೆ ಗಿಣಿ?
ಚಂದನದ ಮರದೊಳಗೆ ಕುಳಿತಿರಬಹುದೆ ಗಿಣಿ?
ವೇದ ಶಾಸ್ತ್ರಾಗಮಗಳನ್ನು ನುಚ್ಚಾಗಿಸಿ-ನುಂಗಿ
ಅಣುಬಾಂಬುಗಳನ್ನು ಅತ್ತಿಯ ಹಣ್ಣಾಗಿಸಿ ಮೆದ್ದು
ಪಂಜರದೊಳಗೆಯೆ ಇದ್ದು, ಇಲ್ಲ ಎನಿಸುವ ಹಾಗೆ ಇದ್ದೂ
ಆಟವಾಡುತ್ತಿದೆಯೆ ಗಿಣಿ?

ಅವ್ವ….
ಅಂಬೆಗಾಲಿನ ಕಂದ ಮೋರೆ ತಿರುವಲು ಬೇಡ
ಕುತೂಹಲದ ಕುಡಿ ಚಿವುಟಿಬಿಸಾಡಲು ಬೇಡ
ನವಿಲುಗಣ್ಣಿಗೆ ಸುಣ್ಣ ಹಚ್ಚಲು ಬೇಡ
ಎದೆಯ ಗುಟ್ಟೇನದು ಹೇಳು…. ನಿನ್ನಾಣೆ
ಪಿಳ್ಳಂಗೋವಿ ಊದಿ ಪುಕಾರು ಹಬ್ಬಿಸುವುದಿಲ್ಲ….

ಹೇಳವ್ವ….
ಜಲಬಿಂದುವಿಗೆ ಪದ್ಮಪತ್ರದ ಹಂಗು ಯಾಕಿಲ್ಲ?
ಕಿಂಚಿತ್ತೂ ಪ್ರೀತಿ, ಕಿಂಚಿತ್ತೂ ಮೈತ್ರಿ ಯಾಕಿಲ್ಲ?
ಗಿಳಿಗೆ ಪಂಜರದ ಹಂಗು ಯಾಕಿಲ್ಲ?
*****

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)