ಅದೊಂದು ಅಸಂಗತ ಸಂಪರ್ಕ
ಅಸಂಬದ್ಧ
ಯಾರದೋ ಸಂತೃಪ್ತಿ,
ಯಾರಿಗೋ ಸೌಭಾಗ್ಯ
ಬರೆದ ಬ್ರಹ್ಮನಿಗೇನು ಗೊತ್ತು?
ತಾಳತಂತಿಗಳಿಲ್ಲದ ವಾದ್ಯ
ನುಡಿಸಲಾಗದು:
ಆದರೂ ನುಡಿಸಿದವು
ಅರ್ಧಮರ್ಧ, ಅಷ್ಟಕಷ್ಟೆ.
ಮತ್ತೆ ಕಳಚಿ ಬೀಳುವ ಹಂತ
ಸರಿಗೆಗಳು ಸುತ್ತಿಕೊಳ್ಳುತ್ತ
ಗಾಢವಾಗುತ್ತ ನಡೆದವು
ಜಟಿಲ ಬಲೆ ನೆಯ್ದಂತೆ.
ಹೊರಬರಲು ಆಗದ ಇರಲು ಆಗದ
ಚಡಪಡಿಕೆ-ಬಸವಳಿದು
ಒಂದಕ್ಕೊಂದು ಚಚ್ಚಿಕೊಂಡವು
ಕುಟುಕಿಕೊಂಡವು
ಬಾಯ್ತೆರೆದು ವಿಷದ ಕೊಂಡಿಯಿಂದ.
ರೋಮರೋಮಗಳಿಂದ
ಹಾಲಾಹಲ ಉಕ್ಕತೊಡಗಿದರೂ
ಜಗ್ಗದ ಬಗ್ಗದ ಜನ್ಮ
ನೆಕ್ಕಿದವು ಹಠದಿಂದ
ಅರಗಿ ಅಕ್ಕಿತು ಪುಷ್ಟಿಗೊಂಡಿತು
ಮತ್ತೆ ಉಕ್ಕಿತು ನಾದ
ವಿಷವುಂಡ ಕಂಠದಿಂದಲೂ.
*****
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.