ಸಾಹಿತ್ಯದ ಸ್ವಯಂಪ್ರಜ್ಞೆ

ಸಾಹಿತ್ಯದ ಸ್ವಯಂಪ್ರಜ್ಞೆ

ಸಾಹಿತ್ಯ ಸೃಷ್ಟಿ ಒಂದು ಕಾಯಕವೇ ಅಥವಾ ಸ್ಫೂರ್ತಿಯೇ? ಸ್ಫೂರ್ತಿಯಾಗಿದ್ದರೆ ಅದರ ಅರ್ಥವೇನು? ಇಂಥ ಪಶ್ನೆಗಳಿಗೆ ಬಹುಶಃ ಉತ್ತರವಿಲ್ಲ. ಬರೆಯುವ ಮೊದಲು ಹಲವರು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ; ಹಲವರು ಮಾಡಿಕೊಂಡಿರುವುದಿಲ್ಲ. ಶಿವರಾಮಕಾರಂತರು ನಾವು ಯಾವುದನ್ನು ಅನುಭಾವ್ಯ ಪ್ರಪಂಚ ಎನ್ನುತ್ತೇವೆಯೋ ಅದರಲ್ಲಿ ತಮ್ಮನ್ನು ತಾವು ಗಾಢವಾಗಿ ತೊಡಗಿಸಿಕೊಂಡವರು; ಹಾಗೂ ಅವರಿಗಿಲ್ಲದ ಆಸಕ್ತಿಗಳೇ ಇಲ್ಲ: ಯಕ್ಷಗಾನ, ನಾಟಕ, ನೃತ್ಯ, ಸಂಗೀತ, ಚಿತ್ರ, ಸಿನೆಮ, ವಿಜ್ಞಾನ, ಶಿಕ್ಷಣ, ನಿಘಂಟು ರಚನೆ, ಮಕ್ಕಳ ಸಾಹಿತ್ಯ, ಪುಸ್ತಕ ಮುದ್ರಣ, ವ್ಯಾಪಾರ, ಕೃಷಿ, ವನ್ಯಜೀವನ, ಪ್ರಾಣಿಪರಿಸರ, ಪ್ರವಾಸ, ರಾಜಕೀಯ ಮುಂತಾಗಿ ಸಾಗುತ್ತದೆ ಅವರ ಕ್ಷೇತ್ರಗಳು; ವಾಸ್ತವದಲ್ಲಿ ಸಾಹಿತ್ಯ ಹೊರತುಪಡಿಸಿದರೆ ಉಳಿದೆಲ್ಲದರ ಕುರಿತೂ ಅವರು ಎಲ್ಲರ ಜತೆ ಮಾತಾಡುತ್ತಿದ್ದರು. ಹೀಗೆ ಕಂಡು ಕೇಳಿ ಹಾಗೂ ಸ್ವಂತ ಅನುಭವಿಸಿದ ಸಂಗತಿಗಳನ್ನು ಉಪಯೋಗಿಸಿಕೊಂಡೇ ಅವರು ವರ್‍ಷಕ್ಕೆ ಒಂದೆರಡು ಸಾಹಿತ್ಯ ಕೃತಿಗಳನ್ನು ಬರೆಯುತ್ತಿದ್ದುದು (ಅರ್ಥಾತ್ ಉಕ್ತಲೇಖನದ ಮೂಲಕ ಬರೆಸುತ್ತಿದ್ದುದು). ಈ ಬರೆಯುವ ರೀತಿಯನ್ನು ಅವರು ಬಹುಶಃ ಒಂದು ಶಿಸ್ತಿನಂತೆ ಅಭ್ಯಾಸ ಮಾಡಿಕೊಂಡಿರಬಹುದು. ಸುದೀರ್ಘವಾದ ಕಾದಂಬರಿಯನ್ನೋ ಕಾವ್ಯವನ್ನೋ ಬರೆಯುತ್ತಿರುವಾಗ ಇಂಥ ಶಿಸ್ತು ಬಹುಶಃ ಅಗತ್ಯ. ಯಾಕೆಂದರೆ ಇಲ್ಲಿ ತಡೆಯೇನಾದರೂ ಬಂದುಬಿಟ್ಟರೆ ಕೃತಿ ನಿಂತೇ ಹೋಗಬಹುದು. ಕಾದಂಬರಿಕಾರರ ಕುರಿತು ಡಬ್ಲೂ. ಎಚ್. ಆಡೆನ್‌ನ ಒಂದು ಪದ್ಯವೇ ಇದೆ; ಕವಿಗಳ ಜತೆ ಕಾದಂಬರಿಕಾರರನ್ನು ಹೋಲಿಸಿದರೆ ಕಾದಂಬರಿಕಾರರ ಕಾಯಕ ಅದೆಷ್ಟು ಅಧ್ವಾನದ್ದು ಎನ್ನುವುದೇ ಕವಿತೆಯ ವಸ್ತು. ಕರ್ನಾಟಕ ಮಹಾಭಾರತದಂಥ ಕಾವ್ಯವನ್ನು ರಚಿಸಿದ ನಾರಣಪ್ಪನ ಬರವಣಿಗೆಯ ರೀತಿಯನ್ನು ಊಹಿಸಿಕೊಳ್ಳಿ. ಆತ ಪ್ರತಿದಿನ ಕೊಳದಲ್ಲಿ ಮಿಂದು ಉಟ್ಟ ಬಟ್ಟೆ ಆರುವ ತನಕ ವೀರ ನರಸಿಂಹನ ಗುಡಿಯಲ್ಲಿ ಕೂತು ಬರೆಯುತ್ತಿದ್ದ ಎಂಬುದೊಂದು ಐತಿಹ್ಯವಿದೆ. ಗದಗಿನಂಥ ಊರಲ್ಲಿ ಬಟ್ಟೆ ಆರುವುದಕ್ಕೆ ಹೆಚ್ಚಿನ ಸಮಯ ಬೇಡ. ಆದರೂ ಪ್ರತಿ ದಿನ ಅಷ್ಟಿಷ್ಟು ಬರೆದೇ ಈ ಉದ್ಗ್ರಂಥದ ರಚನೆಯಾಯಿತು ಎನ್ನುವುದರಲ್ಲಿ ಆಶ್ಚರ್ಯವೇನೂ ಇರಲಾರದು.

ನಮ್ಮದೇ ಕಾಲದಲ್ಲಿ ಕಾರಂತರು ಮಾತ್ರವಲ್ಲದೆ ಕುವೆಂಪು ಮತ್ತು ಗೋಕಾಕರು ಕೂಡಾ ದೊಡ್ಡ ದೊಡ್ಡ ಕೃತಿಗಳನ್ನು ಸೃಷ್ಟಿಸಿದರು. ಇವರು ತಮ್ಮ ವೃತ್ತಿಜೀವನದಲ್ಲೇ ಸಾಹಿತ್ಯ ಜೀವನವನ್ನೂ ಹೊಂದಿಸಿಕೊಂಡರು ಎನ್ನುವುದು ಅಚ್ಚರಿಯ ಸಂಗತಿಯೇ. ಅನಕೃ, ತರಾಸು ಮುಂತಾದ ಕಾದಂಬರಿಕಾರರಿಗೆ ಸಾಹಿತ್ಯ ಒಂದು ಜೀವನೋಪಾಯ ಕೂಡಾ ಅಗಿದ್ದರಿಂದ ಅವರು ನಿರಂತರವಾಗಿ ಬರೆಯುವುದು ಅನಿವಾರ್ಯವಾಗಿತ್ತು. ಅನಕೃ ಎರಡು ಮೂರು ಕಾದಂಬರಿಗಳನ್ನು ಒಟ್ಟೊಟ್ಟಿಗೇ ಬರೆಯುತ್ತಿದ್ದರು ಎಂಬ ದಂತಕತೆಯಿದೆ. ಯಾಕೆಂದರೆ ಅವರು ಬೇರೆ ಬೇರೆ ಪ್ರಕಾಶಕರಿಂದ ಕಾದಂಬರಿಗಳಿಗೆ ಮುಂಗಡ ಪಡೆದಿರುತ್ತಿದ್ದರು; ಈ ಪ್ರಕಾಶಕರು ಬಂದು ಚಾವಡಿಯಲ್ಲಿ ಕಾಯುತ್ತಿದ್ದಂತೆಯೇ ಓಳಗೆ ಅನಕೃ ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿರುತ್ತಿದ್ದರು. ಹೀಗೆ ಎರಡು ಮೂರು ಕೃತಿಗಳನ್ನು ಒಟ್ಟೊಟ್ಟಿಗೇ ಬರೆದು ಮುಗಿಸಬೇಕಾದ ಅವರ ಮೇಲಣ ಒತ್ತಡವನ್ನು ನಾವು ಊಹಿಸಿಕೊಳ್ಳಬಹುದು. ಈ ನಿಟ್ಟನಲ್ಲಿ ಅನಕೃ ಇಂಗ್ಲಿಷ್‌ನ ಡಿಕೆನ್ಸ್ ಹಾಗೂ ಫ್ರೆಂಚ್‌ನ ಬಾಲ್ಝಾಕ್‌ನ ಸಾಲಿಗೆ ಸೇರುತ್ತಾರೆ. ಇವರಲ್ಲಿ ಡಿಕೆನ್ಸ್‌ನ ಹಲವು ಕಾದಂಬರಿಗಳು ನಿಯತಕಾಲಿಕಗಳಲ್ಲಿ ಧಾರಾವಾಹಿಯಾಗಿ ಪಕಟವಾಗುತ್ತಿದ್ದುವು; ಇವೇನೂ ಇಡೀ ಬರೆದು ಮುಗಿಸಿ ಪ್ರಕಟಣೆ ಸುರುಮಾಡಿದ ಕೃತಿಗಳೂ ಅಲ್ಲ. ಆದ್ದರಿಂದ ಡಿಕೆನ್ಸ್‌ನ ಬರವಣಿಗೆಯ ಒತ್ತಾಯ ಇನ್ನಷ್ಟು ಉತ್ಕಟವಾದುದಾಗಿತ್ತು.

ಬೃಹತ್ತಾದ ಕೃತಿಗಳನ್ನು ಬರೆಯುವುದು ಒಂದು ಕಾಲದ ಜಾಯಮಾನವಾಗಿತ್ತು: ಇಂಗ್ಲೆಂಡ್, ರಶಿಯಾ, ಫ್ರಾನ್ಸ್, ಚೈನಾ, ಜಪಾನ್ ಮುಂತಾದ ದೇಶಗಳಲ್ಲಿ ಕಳೆದ ಶತಮಾನಗಳಲ್ಲಿ ಕಾಣಿಸಿಕೊಂಡ ಪದ್ಧತಿ ಇದು. ಟಾಲ್‌ಸ್ಟಾಯ್‌ಯ ‘ಯುದ್ಧ ಮತ್ತು ಶಾಂತಿ’ (War and Peace) ಎಂಬ ಕಾದಂಬರಿ ಸಾವಿರ ಪುಟಗಳನ್ನು ಮೀರಿದುದು; ಇದಕ್ಕೆ ಸರಿಸಮನಾಗಿ ನಿಲ್ಲುವುದು ದಾಸ್ತೊವ್ಸ್‌ಸ್ಕಿಯ ‘ಕರಮಝೊವ್ ಸಹೋದರರು’ (Karamazov Brothers). ಹರ್ಮನ್ ಮೆಲ್ವಿಲ್‌ನ ‘ಮಾಬಿ ಡಿಕ್’ (Moby Dick) ಇವುಗಳಷ್ಟು ದೀರ್ಘವಲ್ಲದಿದ್ದರೂ ಓದುವುದಕ್ಕೆ ಮಾತ್ರ ಹೆಚ್ಚು ಕಠಿಣವಾದುದು. ಮಾರ್ಸೆಲ್ ಪ್ರೂಸ್ಟ್‌ನ ‘ಕಳೆದ ಕಾಲದ ನೆನಪುಗಳು’ (Remembrance of Things Past) ಸುಮಾರು ನಾಲ್ಕು ಸಾವಿರ ಪುಟಗಳಷ್ಟು ಸುದೀರ್ಘವಾದ ಕಾದಂಬರಿ. ಸುಮಾರು ಅದಕ್ಕೆ ಸರಿಸಮನಾಗಿ ನಿಲ್ಲುವುದು ರಾಬರ್ಟ್ ಮುಸಿಲ್‌ನ ‘ನಿರ್ಗುಣಿ ಮನುಷ್ಯ’ (Man without Qualities)ಇವುಗಳ ಕರ್ತೃಗಳೇನೂ ಇಂಥ ಒಂದೊಂದೇ ಕೃತಿಗಳನ್ನಷ್ಪೇ ಬರೆದು ಸುಮ್ಮನಾದವರೂ ಅಲ್ಲ. ಟಾಲ್‌ಸ್ಟಾಯ್‌ಯ ‘ಅನ್ನಾ ಕರೆನೀನಾ’ (Anna Karenina) ಮತ್ತು ‘ಪುನರುತ್ಥಾನ’ (Resurrection) ಕೂಡಾ ದೀರ್ಘವಾದ ಕಾದಂಬರಿಗಳೇ. ಅದೇ ರೀತಿ, ದಾಸ್ತೋವ್‌ಸ್ಕಿ ‘ಬುದ್ಧಿಹೀನ’ (The idiot), ‘ಪಾಪ ಮತ್ತು ಪ್ರಾಯಶ್ಚಿತ್ತ’ (Crime and Punishment), ‘ಅಧೋಜಗತ್ತಿನ ಟಿಪ್ಪಣಿಗಳು’ (Notes from the underworld) ಮುಂತಾದ ಇನ್ನಿತರ ಮಹತ್ವದ ಕೃತಿಗಳನ್ನು ರಚಿಸಿದ್ದಾನೆ. ಇವೆಲ್ಲರಲ್ಲೂ ದಾಸ್ತೊವ್‌ಸ್ಕಿ ಅತ್ಯಂತ ಅಶಿಸ್ತಿನ ಮನುಷ್ಯನೆಂದು ಲೆಕ್ಕ; ಆದರೆ ಅದು ಅವನ ಜೀವನ ಮತ್ತು ವಿಚಾರಧಾರೆಗೆ ಸಂಬಂಧಿಸಿ ನಿಜವಿರಬಹುದು, ಕೃತಿ ರಚನೆಯ ವಿಷಯಕ್ಕೆ ಸಂಬಂಧಿಸಿ ಅಲ್ಲ; ಯಾಕೆಂದರೆ ಬರವಣಿಗೆಯ ಶಿಸ್ತಿರದ ಮನುಷ್ಯನೊಬ್ಬ ಅಂಥ ಕೃತಿಗಳನ್ನು ರಚಿಸುವುದು ಸಾಧ್ಯವಿಲ್ಲ. ಕಂಪ್ಯೂಟರ್‌ನ ಮಾತಿರಲಿ, ಟೈಪ್‌ರೈಟರ್ ಕೂಡಾ ಇರದ ಅಥವಾ ಹೆಚ್ಚು ಪ್ರಚಲಿತವಿರದ ಕಾಲದಲ್ಲಿ ಇವರು ಕೈಬರಹದಲ್ಲಿ ಇಷ್ಟೊಂದು ದೀರ್ಘವೂ ಮಹತ್ವವೂ ಆದ ಕೃತಿಗಳನ್ನು ರಚಿಸಿದರೆನ್ನುವುದು ಆಶ್ಚರ್‍ಯದ ಸಂಗತಿಯಾಗುತ್ತದೆ.

ಕನ್ನಡದ ಕಾದಂಬರಿಕಾರರೂ ಒಂದು ಕಾಲದಲ್ಲಿ ಸುದೀರ್ಘ ಕೃತಿಗಳನ್ನು ರಚಿಸಿದವರೇ. ಕುವೆಂಪು ಮತ್ತು ಗೋಕಾಕರು ಮಾತ್ರವಲ್ಲದೆ, ಅನಕೃ, ತರಾಸು, ರಾವ್ ಬಹಾದ್ದೂರ್ ಮುಂತಾದವರನ್ನು ಉದಾಹರಿಸಬಹುದು. ಅನಕೃರವರ ‘ನಟಸಾರ್ವಭೌಮ’ ದೊಡ್ಡ ಕಾದಂಬರಿ; ತರಾಸುರವರ ‘ರಕ್ತರಾತ್ರಿ’, ‘ಕಂಬನಿಯ ಕುಯಿಲು,’ ‘ದುರ್ಗಾಸ್ತಮಾನ’ ಮೊದಲಾದ ಚಿತ್ರದುರ್ಗ ಇತಿಹಾಸಕ್ಕೆ ಸಂಬಂಧಿಸಿದ ಕೃತಿಗಳನ್ನು ಒಟ್ಟಾಗಿ ತೆಗೆದುಕೊಂಡರೆ ಅವು ಮಹತ್ವದ ಕಾದಂಬರಿ ಸರಣಿಯಾಗುತ್ತವೆ. ಆದರೆ ಕ್ರಮೇಣ ಎಲ್ಲ ಕಡೆಯೂ ಈ ತರದ ಸುದೀರ್ಘ ಕಾದಂಬರಿ ರಚನೆ ಕಡಿಮೆಯಾಗುತ್ತ ಬರುತ್ತಿದೆ. ಬಹುಶಃ ಕನ್ನಡದಲ್ಲೀಗ ಇಂಥ ಕೃತಿಗಳನ್ನು ಬರೆಯುವವರು ಭೈರಪ್ಪ ಮತ್ತು ಕುಂವೀ ಮಾತ್ರ. ಆಲನಹಳ್ಳಿ ಕೃಷ್ಣ ಇನ್ನೂ ಬದುಕಿದ್ದರೆ ಅವರಂತೆಯೆ ಸುದೀರ್ಘವಾಗಿ ಬರೆಯುತ್ತಿದ್ದರೆಂದು ಕಾಣುತ್ತದೆ. ನಾವು ನೋಡಿದ ಉದಾಹರಣೆಗಳೆಲ್ಲವೂ ಕಾದಂಬರಿಗೆ ಸಂಬಂಧಿಸಿದವಾದರೂ, ಈ ವಿದ್ಯಮಾನಕ್ಕೆ ಕಾವ್ಯವೂ ಹೊರತಾಗಿಲ್ಲ. ಆದರೆ ಕಾದಂಬರಿ ಪ್ರಕಾರದಲ್ಲಿ ಕಾಣಿಸುವಷ್ಟು ಸ್ಪಷ್ಟವಾಗಿ ಇದು ಕಾವ್ಯದಲ್ಲಿ ಕಾಣಿಸುವುದಿಲ್ಲ ಎನ್ನುವುದಷ್ಟೆ ವ್ಯತ್ಯಾಸ.

ಇಂದಿನ ನಮ್ಮ ಜನಜೀವನವೇ ಬದಲಾಗಿದೆ, ಬೃಹತ್ತಾದ ಕೃತಿಗಳನ್ನು ಬರೆಯಲು ಲೇಖಕರಿಗಾಗಲಿ ಓದುವುದಕ್ಕೆ ಜನರಿಗಾಗಲಿ ಸಮಯವೇ ಇಲ್ಲ ಎಂದು ಕಾರಣ ನೀಡಬಹುದು. ಇದನ್ನು ಒಪ್ಪಿಕೊಂಡರೂ ಇದಕ್ಕೆ ಹೊರತಾದ ಸಾಹಿತ್ಯಿಕವಾದ ಕಾರಣವೊಂದಿದೆ ಎನ್ನುವುದು ಸೂಕ್ಷ್ಮ ಅವಲೋಕನಕ್ಕೆ ಗೊತ್ತಾಗುವ ಸಂಗತಿ. ಈ ಕಾರಣವೆಂದರೆ ಆಧುನಿಕತೆಯ ಆಗಮನದೊಂದಿಗೆ ಸಾಹಿತ್ಯಕ್ಕೆ – ಅದರಂತೆಯೇ ಎಲ್ಲಾ ಕಲಾಪ್ರಕಾರಗಳಿಗೂ – ಒದಗಿದಂಥ ಸ್ವಯಂಪ್ರಜ್ಞೆ ಬಹುಶಃ ಮೊತ್ತಮೊದಲಾಗಿ ಇಪತ್ತನೆಯ ಶತಮಾನದಲ್ಲಿ ಸಾಹಿತ್ಯ ಬಹಳ ಗಂಭೀರವಾಗಿ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳತೊಡಗಿತೆಂದು ಕಾಣುತ್ತದೆ. ಅರ್ಥಾತ್ ಸಾಹಿತ್ಯದ ಕುರಿತಾಗಿ ಲೇಖಕ ಕೇಳಿಕೊಳ್ಳಲು ಸುರುಮಾಡಿದ ‘ಸಾಹಿತ್ಯವೆಂದರೆ ಏನು? ಅದರ ಕುರಿತಾಗಿ ತಾನು ಎಷ್ಟನ್ನು ತಿಳಿದುಕೊಳ್ಳಲು ಬಾಧ್ಯ? ಅದರಿಂದ ತಾನೇನು ಮಾಡಬಹುದು? ಎಂಬ ಕಾಂಟಿಯನ್ ಪ್ರಶ್ನೆಗಳ ಮೂಲಕದ ವಿಶ್ಲೇಷಣೆ ಇದು. ಅದುವರೆಗೆ ಸಾಹಿತ್ಯವೆಂದರೆ ಜೀವನಕ್ಕೆ ಹಿಡಿದ ಕನ್ನಡಿ ಎಂಬ ಕಲ್ಪನೆಯಿತ್ತು; ಆಮೇಲೆ ಅದು ಬದಲಾಗಿ ಸಾಹಿತ್ಯ ತನ್ನ ಮುಖವನ್ನು ತಾನೇ ಕನ್ನಡಿಯಲ್ಲಿ ನೋಡಿಕೊಳ್ಳುವಂತಾಯಿತು. ಕಾಫ್ಕಾನಿಂದ ಆರಂಭಗೊಂಡು ಎರಡು ಮಹಾಯುದ್ಧಗಳ ಮಧ್ಯೆ ರೂಪುಗೊಂಡ ಪ್ರಮೇಯ ಇದು. ಆದರೆ ಇದರರ್ಥ ಪ್ರತಿಯೊಬ್ಬ ಆಧುನಿಕ ಸಾಹಿತಿಯೂ ಸಂಪೂರ್ಣ ಬರೆಯುತ್ತಾನೆ ಎಂದಲ್ಲ; ಬರೆಯುವ ಕ್ರಿಯೆಯಲ್ಲೇ ಒಂದು ರೀತಿಯ ತಲ್ಲೀನತೆಯೂ ಇರುವುದರಿಂದ ಅಂಥಾ ಕಠೋರ ಸ್ವಯಂಪ್ರಜ್ಞೆ ಯಾರಿಂದಲೂ ಸಾಧ್ಯವಾಗದು. ಆದರೂ ಸಾಹಿತ್ಯದ ಕುರಿತು ಹಿಂದೆಂದೂ ಇರದಂಥ ವಿಮರ್ಶಾಪ್ರಜ್ಞೆಯೊಂದು ಆಧುನಿಕತೆಯೊಂದಿಗೆ ಸಾಹಿತಿಗಳಲ್ಲಿ ಮೂಡಿತೆನ್ನುವುದನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ. ಯಾಕೆಂದರೆ ಮುಗ್ಧತೆಯ ನಷ್ಟವೇ ಆಧುನಿಕತೆ. ಇದು ಸಾಹಿತಿಗಳಲ್ಲಿ ಉಂಟುಮಾಡಿದ ತಲ್ಲಣ ಸ್ಪಷ್ಟವಾಗಿಯೇ ಇದೆ. ಕಾಫ್ಕಾ ಕೂಡಾ ತನ್ನ ಬರಹಗಳನ್ನೆಲ್ಲ ಸುಟ್ಟುಬಿಡಬೇಕೆಂದು ತನ್ನ ಗೆಳೆಯ ಮ್ಯಾಕ್ಸ್ ಬ್ರಾಡ್‌ಗೆ ಹೇಳಿದ್ದನ್ನು ಈ ಹಿನ್ನೆಲೆಯಿಂದ ನೋಡಿದರೆ ಇದು ಅರ್ಥವಾಗುತ್ತದೆ. ಕುವೆಂಪು, ಗೋಕಾಕ, ಅನಕೃ, ತರಾಸು, ಕಾರಂತ ಮೊದಲಾದ ಯಾರಿಗೂ ತಮ್ಮ ತಮ್ಮ ರಚನೆಗಳ ಕುರಿತಾಗಿ ಇಂಥ ತಲ್ಲಣವೋ ಅನುಮಾನವೋ ಇದ್ದಿತೆಂದು ಹೇಳಲಾಗುವುದಿಲ್ಲ.

ಆಧುನಿಕತೆಯೊಂದಿಗೇ ಸಾಹಿತ್ಯ ವಿಮರ್ಶೆಯೂ ಈ ಹಿಂದೆ ಎಂದೂ ಇರದಷ್ಟು ಪ್ರಮಾಣದಲ್ಲಿ ಮತ್ತು ವ್ಯಾಪ್ತಿಯಲ್ಲಿ ಬೆಳೆದುಬಂದುದೂ ಗಮನಾರ್ಹ. ಹಿಂದೆ ಸಾಹಿತ್ಯವೆಂದರೆ ‘ಸೃಜನಶೀಲ’ ಕೃತಿಗಳಷ್ಟೆ ಆಗಿರುತ್ತಿದ್ದರೆ, ಆಧುನಿಕ ಯುಗದಲ್ಲಿ ವಿಮರ್ಶೆ ಅದರ ಒಂದು ಪ್ರಧಾನ ಅಂಗವಾಗಿದೆ ಮಾತ್ರವಲ್ಲ, ವಿಶ್ವವಿದ್ಯಾಲಯಗಳ ಪಾಠಕ್ರಮದಲ್ಲಿ ಹಾಗೂ ಪುಸ್ತಕ ಮಾರುಕಟ್ಟೆಯಲ್ಲಿ ಅದು ಈ ‘ಸೃಜನಶೀಲ’ ಕೃತಿಗಳನ್ನು ಹಿಮ್ಮೆಟ್ಟಿಸಿದೆ. ಒಂದು ರೀತಿಯಲ್ಲಿ ವಿಮರ್ಶೆ ಸಾಹಿತ್ಯ ಕ್ಷೇತ್ರವನ್ನು ಯಾಜಮಾನ್ಯ ರೀತಿಯಲ್ಲಿ ನಿಯಂತ್ರಿಸುತ್ತಿದೆಯಂದರೂ ಸರಿ. ಸಾಮಾನ್ಯ ಓದುಗರು ಕೂಡಾ ಮೂಲ ಕೃತಿಗಳನ್ನು ಓದುವುದಕ್ಕಿಂತ ಅವುಗಳ ಕುರಿತಾಗಿ ಬಂದ ವಿಮರ್ಶಾಕೃತಿಗಳನ್ನು ಓದುವುದೇ ಹೆಚ್ಚಾಗಿದೆ. ಶಿವರಾಮ ಕಾರಂತರು ಯಾಕೆ ಸಾಹಿತ್ಯದ ಕುರಿತು ಯಾರ ಜತೆಯೂ ಮಾತಾಡಲು ಬಯಸುತ್ತಿರಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಬಹುಶಃ ಇಲ್ಲಿದೆ: ಅವರು ತಮಗೆ ‘ಸಹಜವಾಗಿ’ ಎಂಬಂತೆ ಕಥನ ಕ್ರಮವೊಂದನ್ನು ರೂಢಿಸಿಕೊಂಡವರು; ಈ ತಮ್ಮ ‘ನಿಷ್ಕಲ್ಮಶತೆ’ಯನ್ನು ಕಾಪಾಡಿಕೊಳ್ಳುವುದು ಅವರಿಗೆ ಅಗತ್ಯವೆನಿಸಿತ್ತು. ಆದ್ದರಿಂದ ಅವರು ಇತರ ಲೇಖಕರ (ಅದರಲ್ಲೂ ಸಮಕಾಲೀನ ಕನ್ನಡಿಗರ) ಕೃತಿಗಳನ್ನು ಓದುತ್ತಿದ್ದುದೇ ಕಡಿಮೆ. ಬಹುಶಃ ವಿಮರ್ಶೆಯನ್ನಂತೂ ಅವರು ಮುಟ್ಟಿಯೂ ನೋಡುತ್ತಿರಲಿಲ್ಲ.

ಆದರೆ ಈ ರೀತಿಯ ವಿಮುಖತೆ ಆಧುನಿಕ ಕಾಲದಲ್ಲಿ ಕಷ್ಟಸಾಧ್ಯ. ಆದ್ದರಿಂದಲೇ ಹೆಚ್ಚಿನ ಆಧುನಿಕ ಲೇಖಕರೂ ಹಲವು ವಿಧದ ತೊಡಕುಗಳಲ್ಲಿ ಸಿಕ್ಕಿಬಿದ್ದಿರುವುದು; ಇದನ್ನೊಂದು ತೊಡಕೆಂದು ತೆಗೆದುಕೊಳ್ಳುವ ಅಗತ್ಯವೂ ಇಲ್ಲ-ಇದು ಮುಕ್ತ ಸ್ವಾತಂತ್ರ್ಯದ ಸ್ವಚ್ಛಂದತೆ ತಂದಿರುವ ಸಮಸ್ಯೆಯೂ ಆಗಿರಬಹುದು. ಮುಕ್ತ ಛಂದಸ್ಸನ್ನು ಬಳಕೆಗೆ ತಂದ ಟಿ. ಎಸ್. ಎಲಿಯೆಟ್ ತಾನೇ ನಂತರ ಮುಕ್ತ ಛಂದಸ್ಸೆಂದರೆ ಸ್ವಚ್ಛಂದವಲ್ಲ ಎಂದು ಅಸಮಾಧಾನ ತೋರಿಸಿದ. ಆದರೆ ಅದೇನೆಂದು ಮಾತ್ರ ಅವನು ಸ್ಪಷ್ಟಪಡಿಸಲೂ ಇಲ್ಲ. ಪ್ರಾಯೋಗಿಕತೆ ಸಾಹಿತ್ಯದ ಸ್ವಯಂಪ್ರಜ್ಞೆಯ ಒಂದು ಮಾಪನ. ಆದ್ದರಿಂದ ಇಂದಿನ ಮುಖ್ಯ ಬರಹಗಾರರು ಯಾರೂ ಒಮ್ಮೆ ಬರೆದಂತೆ ಮತ್ತೆ ಬರೆಯಲು ಇಚ್ಛಿಸುವುದಿಲ್ಲ. ಫಾಕ್ನರ್‌ನ ಅನೇಕ ಪ್ರಯೋಗಗಳನ್ನು ನೋಡಿದರೆ ಇದು ಗೊತ್ತಾಗುತ್ತದೆ. ಆದರೆ ಇಲ್ಲಿನ ದೊಡ್ಡ ತೊಡಕೆಂದರೆ ಲೇಖಕನಿಗೆ ಒದಗಬಹುದಾದ ಖಿನ್ನತೆ. ಯಾಕೆಂದರೆ ಅತಿಯಾದ ಸ್ವಯಂಪ್ರಜ್ಞೆ ಸೃಜನಶೀಲತೆಗೆ ತಡೆಯೊಡ್ಡುವಂಥದು. ಸಾಮ್ಯುವಲ್ ಬೆಕೆಟ್‌ನ ಉದಾಹರಣೆಯನ್ನು ತೆಗೆದುಕೊಂಡರೆ, ಈತ ಮೂರು ನಾಲ್ಕು ಪ್ರಾಯೋಗಿಕ (ಹಾಗೂ ಮಹತ್ವದ) ಕಾದಂಬರಿಗಳನ್ನು ಬರೆದು ಮುಂದೇನು ಬರೆಯುವುದೆಂದೇ ಗೊತ್ತಿರದಿದ್ದ ಕಾಲದಲ್ಲಿ ಇಂದು ಎಲ್ಲರೂ ಕೊಂಡಾಡುವ ‘ಗೊದೋವಿನ ಪ್ರತೀಕ್ಷೆಯಲ್ಲಿ’ ಎಂಬ ನಾಟಕವನ್ನು ಬರೆದದ್ದು-ಕೇವಲ ವೇಳೆ ಕಳೆಯಲೆಂದು! ಮುಂದೆ ಅವನು ಇದಕ್ಕಿಂತಲೂ ಜೋರಿನ ನಾಟಕಗಳ ರಚನೆಯಲ್ಲಿ ತೊಡಗಿದ. ಆದರೆ ಅತಿಪ್ರಾಯೋಗಿಕತೆ ಹಲವರಿಗೆ ಸೇರುವುದಿಲ್ಲ. ಬೆಕೆಟ್‌ನ ಗುರುವಾದ ಜೇಮ್ಸ್ ಜಾಯ್ಸ್‌ನ ಮಾತಿನಲ್ಲಂತೂ ಇದು ಕಟು ಸತ್ಯ. ಜಾಯ್ಸ್‌ನ ‘ಯೂಲಿಸಿಸ್’ ಕೇಳಿದವರು ಬಹಳ ಮಂದಿ; ಓದಿದವರು ಕಡಿಮೆ. ಇದನ್ನೂ ನುಂಗಿ ಹಾಕುವ ‘ಫಿನೆಗನ್ಸ್ ವೇಕ್’ನ ಹೆಸರನ್ನೂ ಸಾಮಾನ್ಯ ಓದುಗರು ಕೇಳಿರುವುದಿಲ್ಲ. ಆದರೆ ಎಷ್ಟು ಜನ ಓದದಿರಲಿ, ಎಷ್ಟು ಜನ ಕೇಳದಿರಲಿ, ಇಂಥ ಕೃತಿಗಳು ಸೃಜನಶೀಲತೆಯ ಅಪ್ರತಿಮ ಉದಾಹರಣೆಗಳಾಗಿ ಉಳಿದುಕೊಂಡಿವೆ ಎನ್ನುವುದು ಮಾತ್ರ ಅನುಮಾನಾತೀತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೇಡನೂ ನೊಳವೂ
Next post ತನ್ನಷ್ಟಕ್ಕೆ

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

cheap jordans|wholesale air max|wholesale jordans|wholesale jewelry|wholesale jerseys