ಜೇಡನೂ ನೊಳವೂ

ಬಾ ನೊಳವೆ, ಬಾ ನೊಳವೆ, ಬಾ ನನ್ನ ಮನೆಗೆ,
ಬಾನೊಳಗೆ ಹಾರಿ ಬಲು ದಣುವಾಯ್ತು ನಿನಗೆ.
ನೀನೊಮ್ಮೆ ಬಾ, ನನ್ನ ಹೊಸ ಮನೆಯ ನೋಡು;
ಈ ನೂಲಿನಾ ಚಾಪೆಯಲಿ ಬಂದು ಕೂಡು.”

ಆ ಮಾತಿಗಾ ನೊಳವು “ಎಲೆ ಜೇಡ, ಜೇಡ!
ಈ ಮನೆಯ ಉಪಚಾರ, ಹಾ! ಬೇಡ ಬೇಡ!
ನೀ ಮಾಡಿದಾ ಚಾಪೆ ನನಗೊಂದು ದೂಪೆ,
ಆ ಮರದ ತೂತು ಮನೆ ಇದೆ, ಅಲ್ಲಿ ಪೋಪೆ!”

“ಎಲೆ ನೊಳವೆ! ನಿನ್ನ ತಿರುಗಾಟವನ್ನು ನೋಡಿ, ತಲೆತಿರುಗುತಿದೆ ನನಗೆ, ಬಾರೊ, ದಯಮಾಡಿ!
ಎಲೆಯ ಹಾಕಿರುವೆ, ನೀನುಂಡು ಸುಖಿಯಾಗು,
ಮಲಗು ಎಳೆಹಾಸಿನಲಿ, ಬಳಿಕೆದ್ದು ಹೋಗು.”

“ನಿನ್ನಲ್ಲಿ ಉಂಡವನು ಬೇರೆ ಬಾಳುವನೆ?
ನಿನ್ನಲ್ಲಿ ಮಲಗಿದವ ಮತ್ತೆ ಏಳುವನೆ?
ನಿನ್ನ ಕಥೆಯಂ ಹಿರಿಯರಿಂ ಕೇಳಿ ಬಲ್ಲೆ,
ನಿನ್ನಲ್ಲಿ ಬರಲೊಲ್ಲೆ, ನಾನು ಬರಲೊಲ್ಲೆ.”

“ಮರಿನೊಳವೆ! ಮರಿನೊಳವೆ! ನಮ್ಮೊಳಗೆ ನಂಟು ಇರುವುದೆಂಬುದು ನಮಗೆ ಕೇಳಿ ಗೊತ್ತುಂಟು.
ಮಿರಮಿರನೆ ಮಿರುಗುವಾ ನೂಲಿಂದ ನೇದು
ಅರಿವೆ ಉಡುಗೊರೆ ಕೊಡಲು ನಾನಿರುವೆ ಕಾದು.”

“ಕಾಡುವವ ನಾ ಅರಿವೆ’ ಎಂಬುದು ಸಹಜವು.
ನೇದ ಹೊಸ ಅರಿವೆ ಹೊದೆದರೆ ಸಾವು ನಿಜವು.
ಆದರವು ಸಾಕು, ಜೇಡನೆ! ಸಾಕೆ”ನುತ್ತ,
ಹಾದಿ ಹಿಡಿದಾ ನೊಳದ ಮರಿ ಹೋದುದತ್ತ.

ಇತ್ತ ಜೇಡನು ಬಳಿಕ ತಿರುಗುತಿರುಗುತ್ತ,
ಕಿತ್ತು ತನ್ನಯ ಮೈಯ ಮಯಣ ಹೊಸೆಯುತ್ತ,
ಹೊತ್ತು ನೋಡಿತು ನೊಳವ ತಿನ್ನುವೆನೆನುತ್ತ,
ಮತ್ತೊಮ್ಮೆ ಕೂಗಿದುದು, ಬರಿದೆ ಹೊಗಳುತ್ತ.

“ಅರೆರೆ ನೊಳಮರಿ! ಬೊಂಬೆ! ಮೈಗಂದ ನಿಂಬೆ!
ಹರಿನೀಲ ಕಣ್ಗೊಂಬೆ ನೋಡಿ ಸೊಗಗೊಂಬೆ!
ಗರಿ ಪಚ್ಚೆಯಲಿ ತುಂಬೆ, ಹಾಹಾ! ಹೊಸತುಂಬೆ!
ಸ್ವರವು ಝೇನ್-ಝೇನೆಂಬೆ, ಮಧುರವಿನಿತಿಂದೆ.”

ಗಾಳಿಯೂದಿದ ಚೆಂಡು ಬಲು ಹಿಗ್ಗುವಂತೆ,
ಬೀಳೆ ಕಿವಿಯಲಿ ಮಾತು ನೊಳ ಉಬ್ಬಿತಂತೆ;
ಆಳನೋಡದ ಮಡುವಿನಲಿ ಧುಮುಕುವಂತೆ.
ಬೋಳು ತಲೆ ನೊಳವು ಬಲೆಯಲಿ ಹಾರಿತಂತೆ.

ಕಳ್ಳ ಜೇಡನ ಮಾರಿ ಬಳಿಕೊಂದು ಬಾರಿ
ಪಿಳ್ಳೆನೊಳ ಮೈಯೇರಿ ಮುಳ್ಳುಗಳನೂರಿ,
ಚಿಳ್ಳೆಂದು ವಿಷಕಾರಿ, ನೆತ್ತರನು ಹೀರಿ,
ಕೊಳ್ಳೆಹೊಡೆಯಲು ನೊಳವು ಸತ್ತಿತೈ ಚೀರಿ.

ಬಲೆ ಹೊಗದ ನೊಳವನ್ನು ಬರಿಹೊಗಳಿ ಕೊಂದಾ.
ಬಲು ಮೋಸದಾ ಜೇಡನೀ ಕಥೆಯಿದೆಂದಾ.
ಕೊಲೆಗಾರರಾಡುವ ಮುಖಸ್ತುತಿಗಳಿಂದಾ
ಬಲಿ ಬೀಳ ಬೇಡೆಂಬುದನು ಕಲಿಯೊ, ಕಂದಾ.
*****
(ಕವಿಶಿಷ್ಯ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾತ್ರಿಯನೇ ಕದ್ದ ಮೇಲಿನ್ನೇನು ಕಾಯುವುದು?
Next post ಸಾಹಿತ್ಯದ ಸ್ವಯಂಪ್ರಜ್ಞೆ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…