ರಾವಣಾಂತರಂಗ – ೨೩

ರಾವಣಾಂತರಂಗ – ೨೩

ಪರಮಪದದತ್ತ

ಎಲ್ಲಾ ಸುದ್ದಿಗಳನ್ನು ಕೇಳಿದ ನಾನು ಬಹಳ ಚಿಂತಾಕ್ರಾಂತನಾಗಿ ಯೋಚಿಸುತ್ತಾ ಕುಳಿತೆನು. ಹೇಗಾದರೂ ಶ್ರೀರಾಮನನ್ನು ಗೆದ್ದೇ ಗೆಲ್ಲಬೇಕೆಂಬ ಹಠ ಹುಟ್ಟಿತು. ಯಾರಿಗೂ ಗೊತ್ತಾಗದಂತೆ ಒಂದು ಗುಪ್ತ ಸ್ಥಳದಲ್ಲಿ ಕುಳಿತು ಪಾತಾಳ ಹೋಮವನ್ನು ಆರಂಭಿಸಿದೆನು. ಎರಡು ದಿನಗಳಾದವು. ಶತ್ರುಗಳಿಗೆ ಸುಳಿವು ಸಿಕ್ಕಲಿಲ್ಲವೆಂದು ಸಂತಸದಲ್ಲಿದ್ದೆ. ಇನ್ನೊಂದೇ ದಿನ ಯಾಗ ಪೂರ್ತಿಯಾದರೇ ನಾನು ಸಮರ ಜಯಿಸಿದಂತೆ, ಆದರೆ ನಾನೆಣಿಸಿದಂತೆ ನಡೆಯಲಿಲ್ಲ. ನಾನೊಂದು ಬಗೆದರೆ ದೈವ ಬೇರೊಂದು ಬಗೆಯಿತು. ನಾವು ಅಂದುಕೊಂಡಿದ್ದೆಲ್ಲಾ ನಡೆಯುವ ಹಾಗಿದ್ದರೆ ನಮ್ಮನ್ನು ಹಿಡಿಯುವವರೇ ಇರುವುದಿಲ್ಲ. ಮಾರನೇ ದಿನ ಅದೆಲ್ಲಿದ್ದರೋ ಶತ್ರು ಪಾಳಯದವರು ಒಮ್ಮೆಲೆ ದಾಳಿ ಮಾಡಿದರು. ವಿಭೀಷಣ, ಅಂಗದ, ಕಪಿವೀರರೆಲ್ಲರೂ ಗುಹೆಯೊಳಗೆ ನುಗ್ಗಿದರು. ಮನಬಂದಂತೆ ಕುಣಿದರು. ಹೋಮಕುಂಡದ ಅಗ್ನಿಯನ್ನು ನಂದಿಸಿದರು. ಹೋಮದ್ರವ್ಯಗಳನ್ನು ನಾಶಮಾಡಿದರು. ಆದರೂ ನಾನು ಕಣ್ಣು ತೆರೆಯಲಿಲ್ಲ. ಅಂತರ್ಧಾನನಾಗಿ ದೇವಿಯ ಜಪ ಮಾಡುತ್ತಿದ್ದೆ ನಾನು ಬಹಿರ್ಮುಖನಾಗದಿರಲು ಕಸಿವಿಸಿಗೊಂಡ ಅಂಗದನು, ಓಡಿ ಹೋಗಿ ಮಂಡೋದರಿಯನ್ನು ಹಿಡಿದು ಎಳೆದು ತಂದು ಕೊಲ್ಲುವುದಾಗಿ ಬೆದರಿಕೆ ಹಾಕಿದನು. ಪ್ರಿಯಪತ್ನಿಯ ಆರ್ತನಾದವನ್ನು ಕೇಳಿ, ಸುಮ್ಮನೆ ಕುಳಿತುಕೊಳ್ಳಲಾಗಲಿಲ್ಲ. ನನ್ನ ಕಣ್ಣೆದುರಿಗೆ ನನ್ನ ಪತ್ನಿಯನ್ನೆಲ್ಲಿ ಸಾಯಿಸಿಬಿಡುತ್ತಾರೆಂದು ಆತಂಕದಿಂದ ಕಣ್ಣು ತೆರೆದೆ. ಚಂದ್ರಹಾಸವನ್ನು ಹಿಡಿದು ಖಡ್ಗಧಾರಿಯಾಗಿ ಅಂಗದನನ್ನು ಕೊಲ್ಲಬೇಕೆಂದು ಬಹಳ ಪ್ರಯತ್ನಿಸಿದೆ. ಮರ್ಗಟ ರೂಪಧಾರಿ ಅಂಗದನು ತಪ್ಪಿಸಿಕೊಂಡು ಶ್ರೀರಾಮನ ಸನ್ನಿಧಿ ಸೇರಿದನು. ಇನ್ನು ಇಲ್ಲಿದ್ದರೆ ಉಳಿಗಾಲವಿಲ್ಲೆಂದು ರಣರಂಗದಲ್ಲಿ ಹೋರಾಡಿ ಮಡಿಯುವೆನೆಂದು ಸಂಕಲ್ಪ ಮಾಡಿ, ಕವಚ ತೊಟ್ಟು ಶಸ್ತ್ರಾಸ್ತ್ರಗಳನ್ನು ಹಿಡಿದು ಮೂರು ಕೋಟಿ ರಾಕ್ಷಸ ಸೇನೆಯೊಡನೆ ರಣರಂಗಕ್ಕೆ ಬಂದೆನು. ಶ್ರೀರಾಮನು ಧನುರ್ಬಾಣಧಾರಿಯಾಗಿ ಎದುರುಬಂದನು. ಉಭಯತರರಿಗೂ ಭಯಂಕರ ಯುದ್ಧವಾಯಿತು. ದೇವತೆಗಳು ಗಗನ ಮಾರ್ಗದಲ್ಲಿ ಕಿಕ್ಕಿರಿದು ಯುದ್ಧವನ್ನು ನೋಡುತ್ತಾ ಆನಂದಿಸುತ್ತಿದ್ದರು. “ರಾಮರಾವಣರ ಯುದ್ಧಕ್ಕೆ ಯಾರ ಹೋಲಿಕೆಯೂ ಇಲ್ಲ. ಅವರ ಯುದ್ಧಕ್ಕೆ ಅವರೇ ಸಾಟಿ” ಎಂದು ಹೊಗಳುತ್ತಿದ್ದರು. ನಾನು ಶ್ರೀರಾಮನ ಮೇಲೆ ಅನೇಕ ಪ್ರಕಾರದ ಅಸ್ತ್ರಗಳನ್ನು ಪ್ರಯೋಗಿಸಿದೆ. ಬಾಣಗಳ ಸಂಚಾರದಿಂದ ಹಗಲು ಕತ್ತಲಾಯಿತು. ಶ್ರೀರಾಮನಿಗೆ ಏನು ಮಾಡುವುದೆಂದು, ದಿಕ್ಕು ತೋಚದೆ ಕ್ಷಣ ನಿಂತನು. ಆಗ ಅಗಸ್ತ್ಯ ಮುನಿಗಳು ಬಂದು ಶ್ರೀರಾಮನಿಗೆ ಆದಿತ್ಯ ಹೃದಯವನ್ನು ಬೋಧಿಸಿದರು. ಶ್ರೀರಾಮನು ಅದನ್ನು ಮೂರು ಸಾರಿ ಜಪಿಸಲು ರಣಭೂಮಿಯಲ್ಲಿ ಕತ್ತಲು ಕರಗಿ ಬೆಳಕು ಮೂಡಿತು. ಆಗ ಶ್ರೀರಾಮನು ಸಾಕಿನ್ನು ಯುದ್ಧವನ್ನು ಪರಿಸಮಾಪ್ತಿಮಾಡಬೇಕೆಂದು ಬ್ರಹ್ಮಾಸ್ತ್ರವನ್ನು ಹೂಡಿದನು. ಬಿಲ್ಲಿನ ಝಂಕಾರಕ್ಕೆ ಗಗನ ನಡುಗಿತು. ಭೂಮಿಕಂಪಿಸಿತು. ಸಾಗರ ಉಕ್ಕಿತು. ಸೂರ್ಯಚಂದ್ರರು ತಮ್ಮ ಗತಿಯನ್ನೇ ಬದಲಾಯಿಸಿದರು. ಬ್ರಹ್ಮಾಸ್ತ್ರವನ್ನು ಹೂಡಿ ಹೊಡೆಯಲು ನನ್ನ ಶಿರಸ್ಸುಗಳು ಕತ್ತರಿಸಿ ನೆಲಕ್ಕೆ ಬಿದ್ದು ಮತ್ತೆ ಹುಟ್ಟಿಕೊಳ್ಳುತ್ತಿದ್ದವು. ರಾಮನಿಗೆ ನನ್ನ ಸಾವಿನ ರಹಸ್ಯ ತಿಳಿದಿರಲಿಲ್ಲ. ಅವನು ಆಶ್ಚರ್ಯ ಚಕಿತನಾಗಿ ಈಗೇನು ಮಾಡಬೇಕೆಂದು ಕಂಗಾಲಾಗಿ ನಿಂತನು. “ಕುಲಕ್ಕೆ ಮೃತ್ಯು ಕೊಡಲಿ ಕಾವು” ಎನ್ನುವಂತೆ ಅಲ್ಲಿಯೇ ಇದ್ದ ವಿಭೀಷಣನು “ಸ್ವಾಮಿ ಅವನ ಹೃದಯದಲ್ಲಿ ಅಮೃತ ಕಲಶವಿದೆ. ಅದನ್ನು ತೆಗೆಯದೆ ಅವನಿಗೆ ಸಾವಿಲ್ಲ ಎಂದು ರಹಸ್ಯವನ್ನು ಬಿಚ್ಚಿಟ್ಟನು. ಶ್ರೀರಾಮನು ಆಗ್ನೇಯಾಸ್ತ್ರದಿಂದ ನನ್ನ ಹೃದಯಕ್ಕೆ ಗುರಿಯಿಡಲು ಅಸ್ತ್ರವು ನನ್ನ ಹೃದಯದಲ್ಲಿದ್ದ ಅಮೃತವನ್ನು ಹೀರಿಕೊಳ್ಳಲು ಅಮೃತಕಲಶ ಬರಿದಾಗಿ ನನ್ನ ಪ್ರಾಣ ಹೋಗುತ್ತಿರುವುದರ ಅರಿವಾಯಿತು. ದೊಪ್ಪನೆ ಕೆಳಗೆ ಬಿದ್ದೆನು. ಬೀಳುವ ಮುನ್ನ ಕಂಗಳಲ್ಲಿ ಶ್ರೀರಾಮನ ಮಂಗಳ ಮೂರ್ತಿಯನ್ನು ತುಂಬಿಕೊಂಡು, ಅಮ್ಮನ ಪಾದಾರವಿಂದಕ್ಕೆ ಮಣಿದು, ಮಂಗಳಾಂಗಿ ಮಂಡೋದರಿಯನ್ನು ನೆನೆಸಿಕೊಂಡು ಕೆಳಗೆ ಬಿದ್ದೆನು. ನನ್ನ ಅವಸಾನವನ್ನು ಕಂಡು ಎಲ್ಲರೂ ಹತ್ತಿರ ಬಂದರು. ಸುತ್ತಲಿದ್ದವರನ್ನು ಕಣ್ತುಂಬ ನೋಡಿದೆ. ಒಂದು ಕಡೆ ರಾಮಲಕ್ಷ್ಮಣ, ಸುಗ್ರೀವ, ಅಂಗದ, ವಿಭೀಷಣ. ವಿಭೀಷಣ ಕಾಲುಗಳ ಹತ್ತಿರ ಬಂದು ಪಾದಗಳನ್ನು ಹಿಡಿದು “ಅಣ್ಣಾ ನನ್ನ ಕ್ಷಮಿಸು, ಗಟ್ಟಿಯಾಗಿ ರೋಧಿಸತೊಡಗಿದನು. “ಬಾ ಇಲ್ಲಿ” ಎಂದು ಕಣ್ಣು ಸನ್ನೆಯಿಂದ ಕರೆದು ಅವನ ತಲೆ ಸವರಿ “ರಾಜ್ಯವನ್ನು ಚೆನ್ನಾಗಿ ಆಳು, ಅಮ್ಮನನ್ನು ಚೆನ್ನಾಗಿ ನೋಡಿಕೊ. ಮಂಡೋದರಿ ನಾನಿಲ್ಲದೆ ಬದುಕುವುದಿಲ್ಲ. ನನ್ನ ಹಿಂದೆಯೇ ಬರುತ್ತಾಳೆ, ಅವಳ ಚಿಂತೆಯಿಲ್ಲ. ನನಗಾಗಿ ದುಃಖಪಡಬೇಡ, ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತವಾಯಿತು. ಇಂದ್ರಜಿತು, ಅತಿಕಾಯರ ಮಕ್ಕಳು ನಿನ್ನ ಮೊಮ್ಮಕ್ಕಳು, ಅವರನ್ನು ವಾತ್ಸಲ್ಯದಿಂದ ಬೆಳೆಸು, ತಪ್ಪು ಮಾಡಿದೆನೆಂದು ಪಾಪ ಪ್ರಜ್ಞೆ ಬೆಳೆಸಿಕೊಳ್ಳೇಡ, ನಿನಗೆ ಮಂಗಳವಾಗಲಿ” ಸುದ್ದಿ ತಿಳಿದ ತಾಯಿ ಕೈಕಸೆ, ಮಂಡೋದರಿ ಓಡಿ ಬಂದರು. ಅಮ್ಮ ಬಂದವಳೇ ನನ್ನ ತಲೆಯನ್ನು ತನ್ನ ತೊಡೆಯ ಮೇಲಿಟ್ಟು ಕಣ್ಣೀರಿನ ಅಭಿಷೇಕ ಮಾಡಿದಳು. ಮಂಡೋದರಿ ಮೌನವಾಗಿ ಎದೆಯ ಮೇಲೆ ತಲೆಯಿಟ್ಟಳು. ಅಳುತ್ತಿರಲಿಲ್ಲ. ನನಗೆ ಗೊತ್ತು ಅವಳ ದುಃಖವೆಲ್ಲಾ ಮಡುಗಟ್ಟಿದೆಯೆಂದು, ಎಷ್ಟು ಜನ್ಮದ ಪುಣ್ಯವೋ! ಅಮ್ಮನ ಕೈಯ ಸ್ಪರ್ಶ ಹಿತವಾಗಿದೆ, ಎಷ್ಟು ಜನರಿಗಿದೆ ಈ ಸೌಭಾಗ್ಯ ಪರಮ ಪುರುಷೋತ್ತಮನ ಕೈಯಲ್ಲಿ ಸಾವು! ಮಾತೆಯ ತೊಡೆಯ ಮೇಲೆ ಅಂತಿಮಕ್ಷಣ ಮಡದಿ, ಮೊಮ್ಮಕ್ಕಳು, ತಮ್ಮ, ಬಂಧುಬಾಂದವರು ಎಲ್ಲರಿಂದ ವಿದಾಯ ಪಡೆದು ಪರಮಪದ ಸೇರುತ್ತಿರುವೆ. “ಪರಮಾತ್ಮ” ನನ್ನ ಜೀವನವೇ ಅವಿವೇಕಿಗಳಿಗೆ, ಅಧರ್ಮದಲ್ಲಿ ನಡೆಯುವವರಿಗೆ ಪಾಠವಾಗಲಿ, ಪರಸ್ತ್ರೀಯರನ್ನು ಅಪಹರಿಸಿದವನಿಗೆ ಎಂತಹ ಘೋರ ಶಿಕ್ಷೆಯಾಗುವುದೆಂದು ಮನವರಿಕೆಯಾಗಲಿ ಪ್ರಭು! ನಿನ್ನ ಆದರ್ಶ, ಪ್ರೇಮ, ತ್ಯಾಗ, ಔದಾರ್‍ಯಗಳು ನಿದರ್ಶನಗಳಾಗಲಿ ಇನ್ನು ನನಗೆ ಅಪ್ಪಣೆಯನ್ನು ಕೊಡು ಸ್ವಾಮಿ ನಿನ್ನ ಹೃದಯಾರವಿಂದವನ್ನು ಸೇರುತ್ತೇನೆ” ಭಕ್ತಿಯಿಂದ ನಿರ್‍ಮ ನೋಟದಿಂದ ರಘುರಾಮನನ್ನು ದಿಟ್ಟಿಸಿದೆ.

“ಭಕ್ತಾ ರಾವಣೇಶ್ವರಾ ಶಿವಭಕ್ತನಾದ ನಿನಗೆ ನನ್ನಿಂದಲೇ ಮುಕ್ತಿ ಸಿಗುವುದೆಂದು ವಿಧಿಲಿಖಿತ. ಜಗತ್ತಿನಲ್ಲಿ ನನ್ನೊಂದಿಗೆ ನಿನ್ನ ಹೆಸರೂ ಅಮರವಾಗಿ ಉಳಿಯುವುದು ಹೋಗಿ ಬಾ, ವೈಕುಂಠದ ಬಾಗಿಲು ನಿನಗಾಗಿ ತೆರೆದಿದೆ. ನಿನ್ನ ದಾರಿ ಕಾಯುತ್ತಿದೆ. ಮುಂದಿನ ಯುಗದಲ್ಲಿ ಅವತಾರದ ನಿರೀಕ್ಷೆಯಲ್ಲಿರು”

ಪರಮಪುರುಷೋತ್ತಮನ ಆಣತಿಯಂತೆ ನಗುತ್ತಾ ಕಣ್ಣು ಮುಚ್ಚಿದೆ. ನನ್ನ ಜೀವ ಜ್ಯೋತಿ ಶ್ರೀರಾಮನ ಹೃದಯಾರವಿಂದವನ್ನು ಸೇರಿತು.

ಸರ್‍ವೇಜನ ಸುಖಿನೋಭವಂತು ಸಮಸ್ತ ಸನ್ಮಾಂಗಳಾನಿಭವಂತು.
*****
ಮುಗಿಯಿತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುರುದೇವ
Next post ಎಲೆ ಕಳ್ಳಿ, ವಾಣಿ, ಮೊದಲಿಲ್ಲಿ ಇಡು ಪರಿಹಾರ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…