ಉತ್ತರಣ – ೬

ಉತ್ತರಣ – ೬

ದೂರವಾದ ಮಗ

ಮಗ ಗುಲ್ಬರ್ಗಕ್ಕೆ ಹೋದ ಮೇಲೆ ಕಳುಹಿಸುತ್ತಿದ್ದುದು ಬರೇ ಐನೂರು ರೂಪಾಯಿ. ರಾಮಕೃಷ್ಣಯ್ಯನವರ ಪಿಂಚಿನಿ ಮತ್ತು ಇದರೊಳಗೆ ಎಷ್ಟು ಎಳೆದಾಡಿದರೂ ಸಂಸಾರ ತೂಗಿಸಲೇ ಸಾಧ್ಯವಾಗ್ತಿರಲಿಲ್ಲ ಸುಶೀಲಮ್ಮನಿಗೆ. ಹೀಗೆ ಹಲವಾರು ತಿಂಗಳು ರಾಮಕೃಷ್ಣಯ್ಯನವರ ಸಂಸಾರ ಒದ್ದಾಡಿತ್ತು.

ಕೊನೆಗೊಮ್ಮೆ ಏನೇನೋ ಪ್ರಯತ್ನ ಮಾಡಿ ಪೂರ್ಣಿಮಾಗೆ ಬೇಂಕೊಂದರಲ್ಲಿ ಕೆಲಸ ಸಿಕ್ಕಿದಾಗ ರಾಮಕೃಷ್ಣಯ್ಯನವರ ತಲೆಯಿಂದ ಅರ್ಧಭಾರ ಇಳಿಸಿದ ಹಾಗಾಗಿತ್ತು. ಆದರೆ ಪೂರ್ಣಿಮ ಕೆಲಸಕ್ಕೆ ಸೇರಿದ ಸುದ್ದಿ ಸಿಗುತ್ತಲೇ ಆನಂದ ಕಳುಹಿಸುತ್ತಿದ್ದ ಮೊತ್ತ ಇನ್ನೂರಕ್ಕೆ ಇಳಿಯಿತು. ಮತ್ತೆ ನಾಲ್ಕೈದು ತಿಂಗಳಲ್ಲಿ ಹಣ ಬರುವುದೇ ನಿಂತುಹೋಗಿ ಎಲ್ಲಾ ಜವಾಬ್ದಾರಿಗಳೂ ಪೂರ್ಣಿಮಾಳ ಹೆಗಲ ಮೇಲೆ ಬೀಳುವಂತಾದಾಗ ಸುಶೀಲಮ್ಮನವರು ಬೇಕಷ್ಟು ಕಣ್ಣೀರಿಳಿಸಿದ್ದರು. ಗಂಡು ಮಗನಿರುವಾಗ ಹೆಣ್ಣು ಹುಡುಗಿಯನ್ನು ದುಡಿಸಿ ತಮ್ಮ ಹೊಟ್ಟೆ ತುಂಬಿಸಬೇಕಾಯ್ತಲ್ಲ ಎಂದು ಇಬ್ಬರೂ ವಿಪರೀತ ವೇದನೆಗೊಳಗಾಗಿದ್ದರು.

ಅಚಲನ ವಿದ್ಯೆಯ ಭಾರವನ್ನೂ ಹೊರಲು ಹಿರಿಯ ಮಗ ನಿರಾಕರಿಸಿದಾಗ ರಾಮಕೃಷ್ಣಯ್ಯನವರಿಗಾದ ಆಘಾತ ತುಂಬಾ ತೀವ್ರವಾದದ್ದು. ಹೀಗಾಗಿ ಅಚಲ ಬರೇ ಡಿಗ್ರಿಯಲ್ಲೇ ಮುಂದುವರಿಯಬೇಕಾಯ್ತು. ಯಾವುದಾದರೂ ಟೆಕ್ನಿಕಲ್ ಕೋರ್ಸಿಗೆ ಸೇರುವ ಆಸೆ ಇದ್ದರೂ, ಅದಕ್ಕೆ ಮಾಡಬೇಕಾದ ಖರ್ಚನ್ನು ನೆನಸಿ ಎಲ್ಲರೂ ಸುಮ್ಮನಾಗಿದ್ದರು.

ಇಲ್ಲಿ ಇಷ್ಟೆಲ್ಲಾ ಅಹಿತಕರ ಘಟನೆಗಳು ನಡೆದರೂ ಅನುರಾಧಳಿಗೆ ಈ ಎಲ್ಲಾ ವಿಚಾರಗಳನ್ನು ಯಾರೂ ತಿಳಿಸಿರಲಿಲ್ಲ. ದೂರದಲ್ಲಿರುವ ಹುಡುಗಿ ಯೋಚಿಸಿ ತಲೆಕೆಡಿಸಿಕೊಳ್ಳುವುದು ಬೇಡವೆಂದು ರಾಮಕೃಷ್ಣಯ್ಯನವರೇ ಎಲ್ಲರಿಗೂ ಕಟ್ಟಪ್ಪಣೆ ಮಾಡಿದ್ದರು. ಯಾವ ವಿಚಾರವನ್ನೂ ಅನುರಾಧಳಿಗೆ ಬರೆಯಬಾರದು ಎಂದು. ಅವಳಿಗೆ ತಿಳಿದರೆ ಕೊರಗಿ ಜೀವ ಹಾಳು ಮಾಡಿಕೊಳ್ಳುವಳೆಂದು ಎಲ್ಲರಿಗೂ ಗೊತ್ತು. ಅವಳಿಗೆ ತಂದೆ ತಾಯಿ ತಮ್ಮ ತಂಗಿಯರೆಂದರೆ ಜೀವ. ಇಲ್ಲಿ ತಮಗೇ ಒದ್ದಾಟ ಸಾಕು, ದೂರದಲ್ಲಿರೋ ಅವಳಾದರೂ ನೆಮ್ಮದಿಯಿಂದಿರಲಿ ಎಂದವರ ಅಪೇಕ್ಷೆ. ಹೆತ್ತಕರುಳು ತಮ್ಮ ನೋವಿನಲ್ಲೂ ಮಕ್ಕಳ ಸಂತಸವನ್ನೇ ಅಪೇಕ್ಷಿಸುವುದಲ್ಲ?

ಈ ರೀತಿಯ ಪರಿಸ್ಥಿತಿಯಿಂದಾಗಿ ರಾಮಕೃಷ್ಣಯ್ಯನವರು ವಿಪರೀತ ನೊಂದು ಹೋದರು. ತನ್ನ ಪಿಂಚನಿ ಯಾವುದಕ್ಕೂ ಸಾಲದು. ಪೂರ್ಣಿಮಾಳ ಸಂಬಳ ರೂ. ೬೦೦/- ಚಿಲ್ಲರೆ ಸಿಕ್ಕಿದರೂ ಈ ಕಾಲದಲ್ಲಿ ಜೀವನ ನಡೆಸುವುದು ಸುಲಭದ ಕೆಲಸವಲ್ಲ, ಅಚಲ, ನಿರುಪಮಾ ಕಾಲೇಜಿಗೆ ಹೋಗುವ ಮಕ್ಕಳು ಬೇರೆ. ಬೆಂಗಳೂರಲ್ಲಿ ಇಷ್ಟೆಲ್ಲಾ ತಾಪತ್ರಯಗಳನ್ನು ಹಿಡಿದುಕೊಂಡು ಇಷ್ಟರಲ್ಲಿ ಜೀವನ ನಡೆಸುವುದು ಎಷ್ಟು ಕಷ್ಟದ ಸಂಗತಿಯೆಂದು ಅನುಭವಿಸಿದವರಿಗೇ ಗೊತ್ತು. ಹಾಲಿಗೆಳೆದರೆ ತರಕಾರಿಗಿಲ್ಲ. ತರಕಾರಿಗೆಳೆದರೆ ಅಕ್ಕಿಗಿಲ್ಲ, ಅಕ್ಕಿಗೆಳೆದರೆ ಬಾಡಿಗೆಗಿಲ್ಲ. ಎನ್ನುವ ಪರಿಸ್ಥಿತಿ. ಮನೋರಂಜನೆಯಂತೂ ಕನಸಿನ ಮಾತು. ರಾಮಕೃಷ್ಣಯ್ಯನವರ ಮನೆ ಸ್ವಂತದಾದುದರಿಂದ ಜೀವನ ಹೇಗಾದರೂ ನಡೆಯುತ್ತಿತ್ತು. ಇಷ್ಟಾದರೂ ಮಗನಿಗೆ ಇಷ್ಟು ಕಳುಹಿಸೆಂದು ಜಬರದಸ್ತು ತೋರಿಸುವವರು ರಾಮಕೃಷ್ಣಯ್ಯನವರಲ್ಲ. ‘ಇಷ್ಟು ದಿನ ತಾನು ದುಡಿಯುತ್ತಿದ್ದೆ. ಯಾವುದೂ ಕಷ್ಟವಾಗಲಿಲ್ಲ. ಈಗ ತಾನೇ ಏನಾದರೂ ಕೆಲಸ ಹಿಡಿದರೆ ಸರಿಹೋಗುವುದೇನೋ? ಆದರೆ ನನಗೆ ಈ ಪ್ರಾಯದಲ್ಲಿ ಕೆಲಸ ಕೊಡುವವರು ಯಾರು? ಒಂದು ವೇಳೆ ಕೆಲಸ ಸಿಕ್ಕಿದರೂ ನಾನೆಷ್ಟು ಪ್ರಾಮಾಣಿಕವಾಗಿ ದುಡಿಯಬಲ್ಲೆ? ಉದುರಲು ತಯಾರಾಗಿ ನಿಂತಿರುವ ಎಲೆ ನಾನು! ಜೋರಾಗಿ ಒಂದು ಗಾಳಿ ಬೀಸಿದರೆ ಬೀಳುವ ಪರಿಸ್ಥಿತಿ. ಏನು ಮಾಡುವುದು? ಈ ಜವಾಬುದಾರಿಗಳನ್ನು ಕಳೆಯುವುದು ಹೇಗೆ? ಪೂರ್ಣಿಮಾಳೊಬ್ಬಳೇ ಇದನ್ನೆಲ್ಲಾ ಹೊತ್ತು ಒಣಗಬೇಕೇ? ಆ ಭಾರಕ್ಕೆ ಕುಗ್ಗಬೇಕೇ?’

ಸುಶೀಲಮ್ಮನವರಂತೂ ಮಗನ ಈ ನಡವಳಿಕೆಯಿಂದ ಸಂಪೂರ್ಣ ನೊಂದು ಪಾತಾಳಕ್ಕಿಳಿದರು. ಮಕ್ಕಳನ್ನು ಹೊತ್ತು ಹೆತ್ತು ಸಾಕಿದರೇನು ಫಲ ತಮಗೆ ಬೇಕಾದಾಗ ಮಕ್ಕಳ ಆಧಾರವಿರದ ಮೇಲೆ? ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳಿಗೆ ಬೇಕಾದುದನ್ನು ಸಾಧ್ಯವಾದಷ್ಟು ಮಟ್ಟಿಗೆ ಒದಗಿಸಲು ನೋಡಿದ್ದರು. ಅದೂ ಆನಂದ ಮೊದಲ ಮಗು. ಅವನು ಯಾವ ಕಷ್ಟಗಳಿಲ್ಲದೇ ಬೆಳೆದವ. ಅವನಿಗೆಂದೂ ಯಾವುದಕ್ಕೂ ಕಮ್ಮಿ ಮಾಡಿಲ್ಲ. ಅವನಿಂದ ಈ ರೀತಿಯ ನಿರಾದರಣೆ ಅವರೆಂದೂ ನಿರೀಕ್ಷಿಸಿರಲಿಲ್ಲ. ತಂದೆ ತಾಯಿಯ ಕಡೆಗೆ ಗಮನ ಕೊಡದ ಮಗನ ಮೇಲೆ ಹರಿಹಾಯವಷ್ಟು ಸಿಟ್ಟು ಬಂದರೂ ಗಂಡನ ಸ್ಥಿತಪ್ರಜ್ಞತೆ ಸುಶೀಲಮ್ಮನವರ ಸಿಟ್ಟಿಗೆ ತಡೆ ಹಾಕಿತ್ತು. ಅಲ್ಲದೆ ಅವರ ವಿವೇಕ ಅವರಿಗೆ ಬುದ್ಧಿ ಹೇಳಿತ್ತು. ‘ಮಕ್ಕಳನ್ನು ಹೊತ್ತು ಹೆತ್ತು ಸಾಕಿದ್ದು ಅವರು ಮುಂದೆ ತಮ್ಮನ್ನು ನೋಡಿಕೊಳ್ಳಲೆಂದೇ ಅಲ್ಲ. ಅದು ನಮ್ಮ ಕರ್ತವ್ಯ. ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ಅವನು ಅವನ ಕರ್ತವ್ಯ ನಿಭಾಯಿಸುತ್ತಾನೋ ಇಲ್ಲವೋ ಎನ್ನುವುದು ಅವನಿಗೇ ಬಿಟ್ಟದ್ದು. ನಾವು ಅದಕ್ಕಾಗಿ ಅವನ ಮೇಲೆ ಸಿಟ್ಟು ಮಾಡಿಕೊಂಡರೆ ಏನು ಪ್ರಯೋಜನ?’ ಎಂದು ಸುಮ್ಮಗಾಗಿದ್ದರು.

ಪೂರ್ಣಿಮಾ, ಯಾವ ಮಾತೂ ಇಲ್ಲದೇ, ಯಾವ ದೊಡ್ಡಸ್ತಿಕೆಯೂ ಇಲ್ಲದೇ ದುಡಿದುದನ್ನು ತಂದು ತಂದೆಯ ಕೈಗೆ ಕೊಡುತ್ತಿದ್ದಳು. ತನಗೆಂದು ಏನನ್ನೂ ಇಟ್ಟುಕೊಳ್ಳುತ್ತಿರಲಿಲ್ಲ. ತನಗೆ ಬೇಕಾದಾಗ ತಂದೆಯೊಡನೆ ಕೇಳಿ ತೆಗೆದುಕೊಳ್ಳುತ್ತಿದ್ದಳು. ಪ್ರತಿ ತಿಂಗಳೂ ಮಗಳು ಹಣ ತಂದು ಕೊಡುವಾಗ ತಂದೆಯ ಹೃದಯ ಹಿಂಡಿದಂತಾಗುತ್ತಿತ್ತು. ನಕ್ಕು ನಲಿಯುತ್ತಾ ಗಂಡನ ಮನೆಗೆ ಹೋಗಬೇಕಾದ ಹುಡುಗಿ! ಅವಳಿಗಿದು ಎಂಥಾ ಜವಾಬುದಾರಿ ಎಂದು ಮರುಗುತ್ತಿದ್ದರು. ಹಾಗೆಂದು ರಾಮಕೃಷ್ಣಯ್ಯಯ್ಯನವರಿಗೆ ಪೂರ್ಣಿಮಾಗೆ ಮದುವೆ ಮಾಡೋ ಯೋಚನೆ ಇಲ್ಲದಿಲ್ಲ. ಆದರೆ ವರದಕ್ಷಿಣೆ ಕೇಳಿದರೆ ಎಲ್ಲಿಂದ ಕೊಡುವುದು ಎನ್ನುವ ಭಯವೇ ಮುಂದುವರಿಯಲೇ ಅವರನ್ನು ತಡೆಯುತ್ತಿತ್ತು. ಮಗಳ ಮೇಲೆ ಎಲ್ಲಾ ಭಾರ ಹಾಕಲು ಅವರಿಗೆ ಸುತರಾಂ ಇಷ್ಟವಿಲ್ಲ. ಈಗ ಅವಳ ದುಡಿತ ಅನಿವಾರ್ಯ! ಆದರೆ ಅವಳ ದುಡಿತ ನಮ್ಮ ಸುಖಕ್ಕಾಗಿಯೇ ವಿನಿಯೋಗ ಆಗಬಾರದು! ಅವಳಿಗೂ ಮನೆ, ಸಂಸಾರ, ಮಗು ಎಂದು ಆಗಬೇಕು, ಎಂದು ರಾಮಕೃಷ್ಣಯ್ಯನವರ ಮನದಲ್ಲೇಳುತ್ತಿದ್ದ ದ್ವಂದ್ವ, ಆದರೆ ಅದನ್ನು ಕಾರ್ಯರೂಪಕ್ಕೆ ತರುವ ದಾರಿಗಳು ಗೋಚರಿಸುತ್ತಿರಲಿಲ್ಲ.

ಸುಶೀಲಮ್ಮ ಬೇಸರವಾದಾಗ ಅನುರಾಧಗೆ ಎಲ್ಲಾ ಬರೆಯೋಣವೆಂದು ಯೋಚಿಸಿದ್ದೂ ಉಂಟು. ಆದರೆ ಕೂಡಲೇ ಅವರ ಹೃದಯ ತಡೆಯುತ್ತಿತ್ತು. ಅವಳಾದರೂ ಹಾಯಾಗಿರಲಿ! ಅವಳ ಜೀವನದ ನೆಮ್ಮದಿಗೇಕೆ ಕಲ್ಲೆಸೆಯಬೇಕು? ಎಂದು ಸುಮ್ಮನಾಗುತ್ತಿದ್ದರು. ಅವಳಿಗೆಲ್ಲಾದರೂ ಇಲ್ಲಿಯ ಪರಿಸ್ಥಿತಿ ತಿಳಿದರೆ ಅವಳು ಅನ್ನ ನೀರು ಬಿಟ್ಟು ಕುಳಿತಾಳು. ಅದೇ ಕೊರಗಿನಿಂದ ಹುಚ್ಚಿಯಂತಾದಾಳು. ಡಿಲ್ಲಿಗೆ ಹೋದ ಮೇಲೆ ಅವಳಿಲ್ಲಿ ಬಂದೂ ಇಲ್ಲ. ಡಿಲ್ಲಿಯಿಂದ ಬರುವುದು ಸುಲಭವಿಲ್ಲ. ಮದುವೆ, ಆಮೇಲಿನ ಸುತ್ತಾಟವೆಂದು ಶಂಕರನ ರಜೆಯೂ ಮುಗಿದಿದೆಯೆಂದು ಬರೆದಿದ್ದಳು. ಹಾಗಾಗಿ ಅವರು ಊರಿಗೆ ಬರುವುದು ಹಿಂದೆ ಬೀಳುತ್ತಿತ್ತು.

ಅಚಲ ಬಿ.ಎಸ್.ಸಿ. ಕೊನೇ ವರುಷಕ್ಕೆ ತಲಪಿದ್ದ. ನಿರುಪಮಾ ಬಿ.ಎ. ಮೊದಲ ವರುಷದಲ್ಲಿದ್ದಳು. ಅಚಲನಿಗೆ ಈಗೀಗ ಜೀವನದ ಬಿಸಿ ತಟ್ಟಲು ಶುರುವಾಗಿತ್ತು. ಕಾಲೇಜಿನ ಫೀಜ್ ತುಂಬಲು ತಂದೆ ಎಷ್ಟೊಂದು ಎಳೆದಾಡಬೇಕೆಂಬ ಅರಿವಾದಾಗಲೆಲ್ಲಾ ವಿಪರೀತ ಖಿನ್ನನಾಗುತ್ತಿದ್ದ. ಜೀವನವೆಂದರೆ ಎಣಿಸಿದಷ್ಟು ಸುಲಭವಲ್ಲ ಎನ್ನುವ ಅರಿವು ಅವನಿಗೀಗ ಮನದಟ್ಟಾಗಿತ್ತು. ಪೂರ್ಣಿಮಾಳ ದುಡಿತ. ತಂದೆ ತಾಯಿಯ ಒದ್ದಾಟ ಅವನ ಹೃದಯವನ್ನು ತಟ್ಟಿ ಎಬ್ಬಿಸಿತ್ತು. ತನ್ನ ಡಿಗ್ರಿಯೊಂದು ಮುಗಿದ ಕೂಡಲೇ ತಾನು ಕೆಲಸಕ್ಕೆ ಸೇರಬೇಕು. ಈ ಒದ್ದಾಟಗಳಿಗೆಲ್ಲಾ ಪೂರ್ಣವಿರಾಮ ಹಾಕಬೇಕು ಎಂದು ಕಾಯುತ್ತಿದ್ದ.

ಈ ಎಲ್ಲಾ ರಗಳೆಗಳ ಮಧ್ಯೆ ಅನುರಾಧ ಗರ್ಭಿಣಿಯೆಂದು ತಿಳಿದಾಗ ಸಂತೋಷವಾದುದಕ್ಕಿಂತಲೂ ಹೆಚ್ಚಾಗಿ ತಲೆಗೆ ಕೈಹೊತ್ತು ಕುಳಿತುಕೊಳ್ಳುವ ಹಾಗಾಗಿತ್ತು. ರಾಮಕೃಷ್ಣಯ್ಯನವರಿಗೆ, ಮುದ್ದಿನ ಮಗಳು ಗರ್ಭಿಣಿ ಅಂದಾಗ ಮೊದಲಾದರೆ ಅವರೆಷ್ಟು ಸಂಭ್ರಮ ಪಡುತ್ತಿದ್ದರೋ! ಆದರೆ ಈಗ? ಮಗಳನ್ನು ಕರೆಸಿ ಬಾಣಂತನ ಮಾಡಬೇಕು ಎನ್ನುವ ಯೋಚನೆಯೇ ಅವರಿಗೆ ಭಾರವೆನಿಸುತ್ತಿದೆ. ಮಗಳಿಗೆ ಇಲ್ಲಿಯ ಪರಿಸ್ಥಿತಿ ಗೊತ್ತೂ ಇಲ್ಲ. ಇಲ್ಲಿ ಬಂದಾಗ ಅವಳಿಗೆಷ್ಟು ನಿರಾಸೆಯಾದೀತು? ಈ ಬಿಸಿ ಅವಳಿಗೆ ಈ ಸ್ಥಿತಿಯಲ್ಲಿರುವಾಗಲೇ ತಟ್ಟುವಂತಾಗಬೇಕೆ? ಪೂರ್ಣಿಮಾಳ ಮೇಲೆ ಈ ಭಾರ ಬೀಳುವಂತಾಗಬಾರದು. ಅನುರಾಧ ಶಂಕರ, ತಮ್ಮಿಂದ ಯಾವ ಖರ್ಚು ಆಗಲೂ ಬಿಡಲಿಕ್ಕಿಲ್ಲ. ಆದರೂ ತಂದೆಯಾಗಿ ನನ್ನ ಕರ್ತವ್ಯ ನಾನು ಮಾಡಬೇಡವೇ? ನಾನಾದರೂ ಏನು ಮಾಡಬಲ್ಲೆ? ಪೂರ್ಣಿಮಾ ಬಾಯಿ ಮುಚ್ಚಿ ಮಗನ ಕರ್ತವ್ಯ ಮಾಡುತ್ತಿದ್ದಾಳೆ. ತನ್ನದೆಂಬ ಯಾವ ಆಸೆಯನ್ನೂ ವ್ಯಕ್ತ ಪಡಿಸೋದಿಲ್ಲ. ಹಾಗಂತ, ಈ ಪ್ರಾಯದಲ್ಲಿ ಅವಳಿಗೆ ಆಸೆಗಳಿರಲಿಕ್ಕಿಲ್ಲವೇ? ಅವಳ ಮೇಲೆ ಇನ್ನೂ ಇನ್ನೂ ಭಾರ ಬೀಳಲು ಬಿಡಬಾರದು. ಏನಾದರೂ ಮಾಡಿ ಎಲ್ಲಾದರೂ ಒಂದು ಕೆಲಸ ಸಿಗುವುದೋ ನೋಡಬೇಕು. ಎಷ್ಟು ದಿನದಿಂದ ಪ್ರಯತ್ನಿಸುತ್ತಿದ್ದೇನೆ, ಹತ್ತಿರದಲ್ಲೆಲ್ಲೂ ಸಿಗುವುದಿಲ್ಲ. ಅದೇ ಕಷ್ಟ. ತಿಂಗಳಿಗೆ ಒಂದು ಮುನ್ನೂರೋ ನಾಲ್ಕೂರೋ ಸಿಗುವಂತಾದರೆ ಅನುಕೂಲವಾದೀತು. ಎಲ್ಲಾದರೂ ಟುಟೋರಿಯಲ್ ಕಾಲೇಜಿನಲ್ಲಿ ಕೆಲಸ ಸಿಗುವುದೋ ನೋಡಬೇಕು. ಒಟ್ಟು ರಿಟೈರು ಆಗುವ ಕೆಲಸವೆಂದಾದರೆ ಹೀಗೇ. ಮುಂದೇನು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಅದಕ್ಕೇ ಇರಬೇಕು, ಈಗಿನ ಕಾಲದಲ್ಲಿ ಯಾವ ಕೆಲಸದಲ್ಲೇ ಇರಲಿ, ಕೆಲಸದಲ್ಲಿರುವಾಗಲೇ ಏನಾದರೂ ಒಂದು ಉಪ ವ್ಯವಹಾರ ಪ್ರಾರಂಭಿಸುವುದು. ಮುಂದಕ್ಕೆ ಅದಾದರೂ ಇರುವುದಲ್ಲ? ನನ್ನ ಹಾಗೆ, ಬೇರಾವುದಕ್ಕೂ ತಲೆ ಹಾಕದೆ ಕುಳಿತರೆ ಇದೇ ಪರಿಸ್ಥಿತಿ. ಕೆಲಸದಲ್ಲಿರುವಾಗ ನನಗೆ ಇದೊಂದೂ ಹೊಳೆಯಲೇ ಇಲ್ಲ. ಭವಿಷ್ಯದ ಚಿಂತೆ ಮಾಡದಿದ್ದರೆ ನನ್ನ ಹಾಗೆಯೇ ಒದ್ದಾಡಬೇಕೇನೋ? ಎಷ್ಟು ತೊಂದರೆಗಳು! ಮಕ್ಕಳು ಆಧಾರವಾಗಿರುವರೆಂದು ನಂಬಿ ಕುಳಿತದ್ದು ಎಷ್ಟು ದೊಡ್ಡ ತಪ್ಪು! ಅವರವರ ತಲೆಗೆ ಅವರವರ ಕೈಯೆನ್ನೋ ಮಾತಂತೂ ಅಕ್ಷರಶಃ ನಿಜ!

ಬೆಂಗಳೂರಲ್ಲಿ ಟುಟೋರಿಯಲ್ ಕಾಲೇಜುಗಳಿಗೇನೂ ಬರವಿರಲಿಲ್ಲ. ಇಲ್ಲಾದರೂ ಹೋಗಿ ಕಲಿಯಲಿ ಎಂದು ಮಕ್ಕಳನ್ನು ಕಳುಹಿಸಿಕೊಡುವ ತಂದೆ ತಾಯಿಯರೂ ಕಡಿಮೆಯಿಲ್ಲ. ಮಕ್ಕಳು ಹುಶಾರಿದ್ದರೂ ಟುಟೋರಿಯಲ್ ಕಾಲೇಜಿಗೆ ಟ್ಯುಶನ್‌ಗೆಂದು ಕಳುಹಿಸಿ ಕೊಡುವುದು ದೊಡ್ಡ ಫ್ಯಾಶನ್ ಎಂದರೆ ತಪ್ಪಾಗಲಾರದು. ಇಂಥ ಒಂದು ಟ್ಯುಟೇರಿಯಲ್‌ ಕಾಲೇಜಿನಲ್ಲಿ ಕೊನೆಗೂ ರಾಮಕೃಷ್ಣಯ್ಯನವರಿಗೆ ಕೆಲಸ ಸಿಕ್ಕಿತು. ಚಾಮರಾಜ ಪೇಟೆಯಲ್ಲಿರುವ ಕಾಲೇಜಿನಲ್ಲಿ ವಾರಕ್ಕೆ ಆರು ಗಂಟೆ ಪಾಠ ಮಾಡುವ ಕೆಲಸ. ಇದರಿಂದಾಗಿ ತಿಂಗಳಿಗೆ ರೂ. ಆರುನೂರೈವತ್ತರಷ್ಟು ಬರುವ ಹಾಗಾದಾಗ ಅವರಿಗೆ ಖುಷಿಯಾದರೂ ಮಲ್ಲೇಶ್ವರದಿಂದ ಚಾಮರಾಜ ಪೇಟೆಯವರೆಗೆ ಹೋಗಿ ಬರುವಾಗ ಸುಸ್ತಾಗುತ್ತಿದ್ದರು. ಬಸ್ಸಿಗೆ ಕಾದು ಬರುವಾಗ ಆ ಕಾಯುವಿಕೆಯಲ್ಲಿ ಅವರು ತುಂಬಾ ದಣಿಯುತ್ತಿದ್ದರು. ಹಣವೇನೋ ಬರುತ್ತಿತ್ತು. ಆದರೆ ರಾಮಕೃಷ್ಣಯ್ಯನವರು ದಿನ ದಿನಕ್ಕೆ ಸವೆಯುತ್ತಿದ್ದರು. ಇದನ್ನು ನೋಡಿ ಸುಶೀಲಮ್ಮ ಮನೆಯಲ್ಲಿ ಕಣ್ಣೊರೆಸಿಕೊಳ್ಳುತ್ತಿದ್ದರು. ಪ್ರಾಯದ ಕಾಲದಲ್ಲಿ ನೋಡಿಕೊಳ್ಳಲಾಗದ ಮಕ್ಕಳು ಇದ್ದರೇನು ಇಲ್ಲದಿದ್ದರೇನು ಎಂದು ಯೋಚಿಸುವ ಮಟ್ಟಕ್ಕೆ ತಲುಪಿದ್ದರು. ಮಕ್ಕಳ ಮೇಲೆ ಸಿಟ್ಟು ವ್ಯಕ್ತಪಡಿಸುತ್ತಿದ್ದರು. ತಪ್ಪು ಮಾಡಿದ್ದು ಒಬ್ಬ. ಆದರೆ ಅವರ ಸಿಟ್ಟು ಎಲ್ಲರ ಮೇಲೆ.

ಪೂರ್ಣಿಮಾ ಇದನ್ನೆಲ್ಲಾ ನೋಡಿಯೂ ನೋಡದಂಥಾ ಮುಖವಾಡ ಹಾಕಿಕೊಂಡು ತಿರುಗುತ್ತಿದ್ದಳು. ಅವಳು ಇದಕ್ಕಿಂತ ಹೆಚ್ಚಿನ ಪವಾಡವನ್ನೇನೂ ಮಾಡಲು ಸಾಧ್ಯವಿರಲಿಲ್ಲ. ತಂದೆ ತಾಯಿಯರ ಒದ್ದಾಟದಿಂದ ಮನಸ್ಸಿಗೆ ಅದಮ್ಯ ನೋವಾದರೂ ಅದಕ್ಕೆ ಪರಿಹಾರ ಸೂಚಿಸುವುದು ಅವಳ ಕೈಯಲ್ಲಿರಲಿಲ್ಲ. ಅಚಲನೊಂದು ವಿದ್ಯೆ ಪೂರ್ತಿಮಾಡಿ ತನ್ನ ಕಾಲಮೇಲೆ ತಾನು ನಿಂತರೆ, ಅವನಾದರೂ ತಂದೆ ತಾಯಿಯರಿಗೆ ಆಧಾರವಾಗಬಹುದೇನೋ ಎನ್ನುವ ಒಂದೇ ಒಂದು ಆಸೆಯಲ್ಲಿ ಅವಳಿದ್ದಳು.

ತನ್ನ ಜೀವನದ ಹಾಯಿ ಯಾವ ಕಡಗಿದೆಯೆಂದು ಅವಳಿಗೆ ಗೊತ್ತಿಲ್ಲ. ತನಗಾಗಲೇ ಇಪ್ಪತ್ತೈದು ವರುಷ ಕಳೆದಿದೆ. ಮದುವೆಯಾಗಿ ತಾಯಿಯಾಗೋ ಕಾಲ. ಆದರೆ ಈ ದಿಕ್ಕಿನಲ್ಲಿ ಯೋಚಿಸಲೂ ಭಯವೆನಿಸುವ ಪರಿಸ್ಥಿತಿಯಲ್ಲಿ ಅವಳು ಸಿಲುಕಿಕೊಂಡಿದ್ದಳು. ಮಗನಂತೆ ಕಣ್ಣುಮುಚ್ಚಿ ಎಲ್ಲಾ ತೊರೆದು ಓಡಿಹೋಗುವ ಕಠಿಣತೆ ಅವಳಲ್ಲಿರಲಿಲ್ಲ. ಹಾಗಾಗಿ ಗಂಡು ಮಗನಂತೆ ದುಡಿದು ತಂದು ಹಾಕುತ್ತಾಳೆ. ತನ್ನೆಲ್ಲಾ ಆಸೆಗಳನ್ನು ಅಡಿಗೊತ್ತಿ ಅದರ ಮೇಲೆ ತನ್ನ ಕರ್ತವ್ಯ ಪ್ರಜ್ಞೆಯನ್ನು ಹೇರಿಸಿ ಸವಾರಿ ಮಾಡುತ್ತಿದ್ದಾಳೆ.

ಒಮ್ಮೊಮ್ಮೆ ನಿರಾಸೆ ಅವಳ ಬೆಂಬತ್ತಿ ಕಾಡಿದಾಗ ಅಕ್ಕನಿಗೆ ಕಾಗದ ಬರೆದೇ ಬಿಡುತ್ತಿದ್ದಳು. ಆದರೆ ಅಂಚೆಗೆ ಹಾಕುವ ಮೊದಲೇ ಹರಿದು ಹಾಕುತ್ತಿದ್ದಳು. ಅಕ್ಕನ ಮೃದು ಮನಸ್ಸು ಅವಳಿಗೆ ಗೊತ್ತು. ಇಲ್ಲಿಯ ಪರಿಸ್ಥಿತಿ ತಿಳಿದರೆ ಅವಳು ಖಂಡಿತಾ ಸಹಿಸಲಾರಳು. ಅದೇ ಯೋಚನೆ ಹತ್ತಿಕೊಂಡರೆ, ಅವಳ ಈಗಿನ ಪರಿಸ್ಥಿತಿಯಲ್ಲಿ ಕಷ್ಟ. ಇರಲಿ, ಹೇಗೂ ಬರುತ್ತಾಳಲ್ಲ? ಆಗ ಅವಳಿಗೆ ಎಲ್ಲಾ ತಿಳಿಯುತ್ತದೆ. ಏನಾದರೂ ಪರಿಹಾರ ಸೂಚಿಸಿಯಾಳು.

ಅಚಲನ ಪರೀಕ್ಷೆಯ ಗಲಾಟೆಯಲ್ಲಿ ಮನೆಯ ಗಡಿಬಿಡಿಗಳು ಮರೆಯಾಗಿದ್ದವು. ಅವನ ಪರೀಕ್ಷೆಯೆಂದರೆ ಮನೆಯವರೆಲ್ಲರಿಗೂ ಶಿಕ್ಷೆಯೆ. ಒಬ್ಬರೂ ಗಟ್ಟಿ ಮಾತಾಡಲಿಕ್ಕಿಲ್ಲ. ರೇಡಿಯೋವಂತೂ ಹಾಕಲಿಕ್ಕೆ ಇಲ್ಲ. ನಿರುಪಮಾ ಎಲ್ಲಾದರೂ ಮಾತಾಡಿ ನಕ್ಕರೆ, ಅಣ್ಣನಿಂದ ಗುದ್ದು ತಿನ್ನಬೇಕಾಗುತ್ತಿತ್ತು. ಬೆಳಿಗ್ಗೆ ಬೇಗ ಎದ್ದಾಗ ತಾಯಿ ಎದ್ದು ಬಿಸಿ ಬಿಸಿ ಟೀ ಮಾಡಿ ಕೊಡಬೇಕು. ರಾತ್ರಿ ಒಂಭತ್ತು ಗಂಟೆಗೇ ಮಲಗುತ್ತಿದ್ದ. ಆಗ ಯಾರೂ ಗಲಾಟೆ ಮಾಡಬಾರದು. ಬೆಳಿಗ್ಗೆ ಎರಡು ಅಥವಾ ಮೂರು ಗಂಟೆಯೊಳಗೇ ಏಳುತ್ತಿದ್ದ. ಅವನಿಡುತ್ತಿದ್ದ ಅಲಾರಾಂನಿಂದ ಇಡೀ ಮನೆಯವರ ನಿದ್ದೆ ಹಾಳು. ಸುಶೀಲಮ್ಮ ಯಾವ ಸಿಟ್ಟಿಗೂ ಒಳಗಾಗದೆ ಮಗನೆದ್ದಾಗ ಎದ್ದು ಮುಂಚಿನ ದಿನ ಎತ್ತಿಟ್ಟ ಹಾಲಿನಲ್ಲಿ ಅವನಿಗೆ ಟೀ ಮಾಡಿಕೊಟ್ಟು ಪುನಃ ಹಾಸಿಗೆಯಲ್ಲಿ ಮೈಚೆಲ್ಲುತ್ತಿದ್ದರು.

ಅವನ ಪರೀಕ್ಷೆ ಮುಗಿದ ಕೂಡಲೇ ಗಟ್ಟಿಯಾಗಿ ಉಸಿರು ಬಿಟ್ಟವಳು ನಿರುಪಮಾ. ಪೂರ್ಣಿಮಾಗೆ ಮೌನವೇನೂ ಅಸಾಧ್ಯದ ಸಂಗತಿಯಲ್ಲ. ರಾಮಕೃಷ್ಣಯ್ಯನವರೂ ಈಗಿನ ದುಡಿತದ ಸುಸ್ತಿನಿಂದಾಗಿ ಬೇಗ ಹಾಸಿಗೆ ಸೇರುತ್ತಿದ್ದರು. ಈ ಮೌನದಿಂದ ಅವರಿಗೇನೂ ತೊಂದರೆಯೆನಿಸಿರಲಿಲ್ಲ.

ಸುಶೀಲಮ್ಮನಿಗೂ ಮೌನವಾಗಿರುವುದೇನೂ ಆಗದ ಕೆಲಸವಲ್ಲ. ಅವರು ಮೊದಲಿನಿಂದಲೂ ವಾಚಾಳಿ ಹೆಂಗಸಲ್ಲ. ಆದರೆ ಈಗೀಗ ಅವರು ಈ ರೀತಿಯ ಮೌನದಲ್ಲಿ ಹೆದರಿಕೆ ಗುರುತಿಸಿದ್ದರು. ಮನದೊಳಗಿನ ಘರ್ಷಣೆಗಳು ಈ ಸಮಯದಲ್ಲಿ ತುಂಬಾ ತಿಕ್ಕಾಟ ನಡೆಸುತ್ತಿದ್ದವು. ಅವರು ಈ ಘರ್ಷಣೆಗೆ ಸಿಕ್ಕಿ ಹಣ್ಣಾಗುತ್ತಿದ್ದರು. ಸುಶೀಲಮ್ಮನ ಮನಸ್ಸಿನಲ್ಲಿ ನಡೆಯುತ್ತಿರುವ, ನಡೆಯುತ್ತಿದ್ದ ತುಮುಲಾಟಗಳು ಯಾರ ಅಳತೆಗೂ ನಿಲುಕದ್ದು. ಬಾಯಿಬಿಟ್ಟು ಗಂಡನೊಡನೆ ಹೇಳಿಕೊಳ್ಳಲೂ ಹಿಂಜರಿಯುತ್ತಿದ್ದರು. ಬಾಯಿಬಿಟ್ಟರೆ ಸಂಯಮ ಕಳೆದುಕೊಳ್ಳಬಹುದೆಂಬ ಭಯ ಬೇರೆ. ಮೂವತ್ತು ಮೂವತ್ತೆರಡು ವರುಷದ ಸಹಜೀವನದಲ್ಲಿ ಅವರಿಬ್ಬರೂ ಎಲ್ಲಾ ಕಷ್ಟ ಸುಖಗಳನ್ನು ಹಂಚಿಯೇ ಬಾಳಿದವರು. ಆದರೆ ಈಗೀಗ ಯಾಕೋ ದೂರ ಸರಿಯುತ್ತಿರುವ ಅನುಭವವಾಗುತ್ತಿತ್ತು. ಹಿಂದೆ ಏನಿದ್ದರೂ ಇಬ್ಬರಲ್ಲೂ ಗುಟ್ಟಿರಲಿಲ್ಲ. ರಾತ್ರಿ ಮಲಗುವಾಗ ತಮ್ಮ ಮನಸ್ಸಿನ ತೊಳಲಾಟಗಳನ್ನು ಹಂಚಿಕೊಂಡೇ ಮಲಗುತ್ತಿದ್ದರು. ಈಗಲೂ ಅದೇ ಮಂಚದಲ್ಲಿ ಇಬ್ಬರೂ ಮಲಗುತ್ತಾರೆ. ಆದರೆ ಬಾಯಿ ಬಿಡಲು ಇಬ್ಬರಿಗೂ ಧೈರ್ಯವಿಲ್ಲ. ಮನಬಿಚ್ಚಿ ಮಾತನಾಡದೇ ಒಂದೆರಡು ವರುಷಗಳು ಕಳೆದಿವೆ. ಈಗ ಇಬ್ಬರೂ ನಿಟ್ಟುಸಿರು ಬಿಡುತ್ತಾ ಆಚೆ ಈಚೆ ಮುಖ ಹಾಕಿ ಮಲಗುತ್ತಾರೆ. ಒಬ್ಬರ ನಿಟ್ಟುಸಿರು ಇನ್ನೊಬ್ಬರ ಹೃದಯ ಕಲಕುತ್ತಲೇ ಇರುತ್ತದೆ. ಆ ನಿಟ್ಟುಸಿರಿನ ಕಾರಣ ಇಬ್ಬರಿಗೂ ಗೊತ್ತು. ಒಬ್ಬರಿಗೊಬ್ಬರು ಹೇಳಿಕೊಳ್ಳಲಾರರು ಮಾತ್ರ.

ಇಂಥಾ ಸಂದರ್ಭಗಳಲ್ಲಿ ಸುಶೀಲಮ್ಮ ಯೋಚಿಸುತ್ತಿದ್ದರು. ‘ಯಾಕೆ ಹೀಗೆ ನಾವು ದೂರಾಗುತ್ತಿದ್ದೇವೆ? ನಾವೇ ಹೆತ್ತು ಆಸೆಯಿಂದ ಬೆಳೆಸಿದ ಮಗನಿಂದ ನಮಗಾವ ಉಪಕಾರವಿಲ್ಲವೆಂದೇ? ಅವನೊಬ್ಬ ಹಾಗಾದನೆಂದು ಎಲ್ಲರೂ ಹಾಗಿರುವರೇ? ಈಗ ಪೂರ್ಣಿಮಾ, ತನ್ನೆಲ್ಲಾ ಆಸೆಗಳನ್ನು ನುಂಗಿಕೊಂಡು ನಮಗಾಗಿಯೇ ಜೀವ ಸವೆಸುತ್ತಿಲ್ಲವೇ? ಅವಳ ಜೀವನ ಹೀಗೇ ಕಳೆಯಬೇಕೇ? ನಮ್ಮಿಂದಾಗಿ ಅವಳ ಜೀವನ ಒಣಗಿದ ಮರವಾಗಬೇಕೇ? ಅವಳೂ ಎಲ್ಲರಂತಿರಬೇಡವೇ? ಹೀಗೇ ಅವಳನ್ನು ದುಡಿಸಿ ನಾವು ತಿನ್ನುತ್ತಿದ್ದರೆ, ನಮ್ಮ ಸ್ವಾರ್ಥವನ್ನು ಯಾವ ದೇವನಾದರೂ ಮೆಚ್ಚಲಿದೆಯೇ? ಹೆತ್ತ ಎಲ್ಲಾ ಮಕ್ಕಳೂ ಕೈಗೆ ಸಿಗಬೇಕೆಂದರೆ ನಾವು ಪುಣ್ಯ ಮಾಡಿರಬೇಕು. ಏನೋ ಐದು ಮಕ್ಕಳಿರುವುದಕ್ಕಾಯಿತು. ಒಬ್ಬ ಹಾಗೇ ಕಣ್ಣು ಮುಚ್ಚಿ ಹೃದಯ ಕಲ್ಲು ಮಾಡಿಹೋದರೂ ಉಳಿದವರಿದ್ದಾರೆ. ಈಗಿನಂತೆ ಒಂದು ಎರಡು ಮಾತ್ರವಿದ್ದರೆ ಒಬ್ಬ ದೂರ ಸರಿದರೆ ಹಿಂದಿನಿಂದ ಬೇರೆ ಯಾರೂ ಇಲ್ಲ. ನಮಗೀಗ ಉಳಿದ ನಾಲ್ಕು ಜನರಿದ್ದಾರೆ ಆಧರಿಸಲು. ಇವರಾದರೂ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಯಾಕೆ ಕೊರಗಬೇಕು? ನಾನಾದರೂ ಅವರಲ್ಲಿ ಧೈರ್ಯ ತುಂಬಿಸಬೇಕು, ಎಂದುಕೊಂಡು ಗಂಡನೆಡೆಗೆ ತಿರುಗಿದರೆ ಅವರಾಗಲೇ ನಿದ್ರಾವಶರಾಗಿರುತ್ತಿದ್ದರು. ಅವರ ಸೋತು ಸುಸ್ತಾದ ಮುಖ ನೋಡುವಾಗ ಸುಶೀಲಮ್ಮನ ಕಣ್ಣಿನಲ್ಲಿ ನೀರು ತುಂಬಿ ಬರುತ್ತಿತ್ತು.

ಒಮ್ಮೆ ಹಾಗೇ ಬಿಕ್ಕಿದಾಗ ರಾಮಕೃಷ್ಣಯ್ಯನವರಿಗೆ ಎಚ್ಚರವಾಗಿಬಿಟ್ಟಿತ್ತು. ಅವರಿಗೂ ಹೆಂಡತಿಯ ಮನದ ನೋವು ಅರ್ಥವಾಗದ್ದಲ್ಲ. ಮದುವೆಯಾದ ಮೊದಲ ಕೆಲವು ಸಂದರ್ಭಗಳಲ್ಲಿ ತನ್ನ ಹಿಡಿತವಿಲ್ಲದ ಕೋಪಕ್ಕೆ ತತ್ತರಿಸಿ ಕಣ್ಣೀರು ಹಾಕಿದ್ದಿರಬಹುದು, ಅದರ ನಂತರ ಮೊನ್ನೆ ಮೊನ್ನೆ ತನಕವೂ ಹೆಂಡತಿಯ ಕಣ್ಣಲ್ಲಿ ನೀರು ತರಿಸುವ ಸಂದರ್ಭ ರಾಮಕೃಷ್ಣಯ್ಯನವರು ತಂದಿರಲಿಲ್ಲ. ಈಗ ಮಗನಿಂದಾಗಿ ಈ ಅವಸ್ಥೆ. ಹೆಂಡತಿಯ ಬಿಕ್ಕುವಿಕೆ ಕಿವಿಗೆ ಬಿದ್ದಾಗ ರಾಮಕೃಷ್ಣಯ್ಯನವರು ತಟ್ಟನೇ ತಿರುಗಿ ಹೆಂಡತಿಯನ್ನು ಬಳಿಗೆಳೆದುಕೊಂಡು ತಲೆ ನೇವರಿಸುತ್ತಾ, “ಸುಶೀ ಇಲ್ಲದ್ದೆಲ್ಲಾ ತಲೆಗೆ ಹಚ್ಚಿಕೊಂಡು ಯಾಕೆ ಕೊರಗುತ್ತೀಯಾ? ನಾವು ಮಕ್ಕಳನ್ನು ಬೆಳೆಸುವಾಗ ನಮಗೆ ಮುಂದಕ್ಕೆ ಆಧಾರವಾಗಿರಬೇಕೆಂದು ಸ್ವಾರ್ಥದಿಂದ ಬೆಳೆಸಿದ್ದರೆ ಅದು ನಮ್ಮದೇ ತಪ್ಪು. ಆನಂದ ಹೀಗೆ ಮಾಡಬಾರದಿತ್ತು. ಮಾಡ್ತಿದ್ದಾನೆ. ಯಾಕೆ? ಅವನನ್ನು ಬೆಳೆಸಿದುದರಲ್ಲಿ ನಮ್ಮದೇ ಏನೋ ಕುಂದಿರಬೇಕು. ಎಲ್ಲೋ ನಾವೇ ತಪ್ಪಿರಬೇಕು. ಇಲ್ಲದಿದ್ದರೆ ಹೀಗೇಕೆ ಆಗುತ್ತಿತ್ತು? ಆದರೆ ನನಗೆ ತೋರುತ್ತದೆ, ನಾನೆಂದೂ ಅವನಿಗೆ ಇಷ್ಟು ಹಣ ಕಳುಹಿಸು ಎಂದು ಬರೆದಿಲ್ಲ. ಬರೆದರೆ ಕಳುಹಿಸಬಹುದೇನೋ? ಬರೆದು ನೋಡಲೇ? ಕಳುಹಿಸಿದರೆ ಕಳುಹಿಸುತ್ತಾನೆ. ಇಲ್ಲದಿದ್ದರೆ ಪೂರ್ಣಿಮಾಗೆ ಮದುವೆ ಮಾಡಿ ನಾವು ನಿನ್ನ ಜತೆಗೆ ಬಂದಿರುತ್ತೇವೆ ಎಂದು ಬರೆಯಲೇ? ಆದರೆ ಸುಶೀ, ಇದನ್ನೆಲ್ಲಾ ಬರೆಯೋದು ಹೇಗೆ? ಅವನೇ ತಿಳಿದುಕೊಂಡು ಹಣ ಕಳುಹಿಸಬೇಕು. ನಾವಾಗಿ ಹೇಳಲು ಆಗುವುದೇ? ನೀನೇನು ಹೇಳ್ತೀಯ? ನೀನು ಕಾಗದ ಬರೆಯಿರಿ ಅಂದರೆ ಇವತ್ತೇ ಬರೆಯುತ್ತೇನೆ.”

ಗಂಡನ ಅಸಹಾಯಕ ಮಾತು ಕೇಳಿದಾಗ ಸುಶೀಲಮ್ಮ ಅವರೆದೆಯಲ್ಲಿ ಮುಖ ಹುದುಗಿಸಿ ಮನದಣಿಯೆ ಅತ್ತಿದ್ದರು. ಅತ್ತು ಸಮಾಧಾನವಾದ ಮೇಲೆ “ನೀವು ಏನಾದರೂ ಹೇಳಿ, ನನಗೆ ಮಾತ್ರ ನೀವು ಈ ಪ್ರಾಯದಲ್ಲಿ ಕೆಲಸ ಮಾಡಿ ಸುಸ್ತಾಗಿ ಬರುವುದನ್ನು ನೋಡುವಾಗ ಆನಂದನಂಥಾ ಮಗನನ್ನು ಹೆತ್ತುದಾದರೂ ಯಾಕೆಂದು ತೋರುತ್ತದೆ. ಪೂರ್ಣಿಮಾಳ ಭವಿಷ್ಯದ ಯೋಚನೆ ಮಾಡಬೇಡವೇ? ನಮ್ಮ ಸುಖಕ್ಕೆ ಅವಳ ಬಲಿಯೇ? ಅಚಲನ ವಿದ್ಯೆ ಮುಗಿಯಿತು. ಅವನಿಗೊಂದು ಕೆಲಸವಾದ ಕೂಡಲೇ ಪೂರ್ಣಿಮಳ ಮದುವೆ ಮುಗಿಸಬೇಕು. ಮತ್ತೆ ನಿರುಪಮಾಳ ಓದು. ಅದೇನೂ ದೊಡ್ಡ ಸಂಗತಿಯಲ್ಲ. ಅಚಲನ ಮದುವೆಯಾಗುವಾಗ ನಿರೂಪಮಾಗೂ ಮಾಡಬಹುದು. ಅವನಿಗೆ ಇಲ್ಲಿಯ ಪರಿಸ್ಥಿತಿ ಗೊತ್ತಿಲ್ಲವೆ? ನಾವೇ ಬರೆದು ಅವನಿಗೆ ತಿಳಿಸುವುದೆಂದರೆ ನಮ್ಮ ಅಭಿಮಾನವನ್ನು ಮಾರಿಕೊಂಡಂತೆ ಹಾಗಾಗೋದೇ ಬೇಡ.”

“ಹಾಗಾದರೆ ಎಲ್ಲಾ ಸರಿಯಾಗುತ್ತದೆ. ನೀನು ಹೀಗೆ ತಲೆಕೆಡಿಸಿಕೊಂಡರೆ ಮಾತ್ರ ನನ್ನ ಧೈರ್ಯವೂ ಉಡುಗುತ್ತದೆ. ನೀನು ಸರಿಯಾಗಿರಬೇಕು. ನಾಳೆ ಮಗಳು ಬಾಣಂತನಕ್ಕೆ ಬರುತ್ತಾಳೆ. ಆಗ ನೀನು ಆರೋಗ್ಯ ಕೆಡಿಸಿಕೊಂಡಿದ್ದರೆ ಅವಳನ್ನು ನೋಡಿಕೊಳ್ಳುವವರಾರು?”

ಗಂಡನ ಸಮಾಧಾನದ ಮಾತು ಕೇಳದೆ ವರುಷಗಳೇ ಕಳೆದಿದ್ದವು. ಈ ಮಾತಿನಿಂದ ಸುಶೀಲಮ್ಮನ ಹೃದಯ ಹೂವಿನಂತೆ ಅರಳುತ್ತದೆ. ಏನಾದರಾಗಲಿ, ಇವರು ನನ್ನ ಕಣ್ಣೆದುರೇ ಇರುವಾಗ ನಾನು ಬೇಜಾರು ಮಾಡಬಾರದು. ಅವರಿರುವಾಗಲೇ ನಾನು ಕಣ್ಣು ಮುಚ್ಚಬೇಕು. ಆದರೆ ನಾನು ಹೋಗಿ ಅವರೊಬ್ಬರೇ ಉಳಿದು ಬಿಟ್ಟರೆ ಅವರನ್ನು ನೋಡಿಕೊಳ್ಳುವವರು ಯಾರು? ಅದೂ ಇಷ್ಟೆಲ್ಲಾ ತಲೆಬಿಸಿಗಳ ಮಧ್ಯೆ? ಇಲ್ಲಪ್ಪಾ ನಾವಿಬ್ಬರೂ ಜತೆಯಾಗಿಯೇ ಸಾಯಬೇಕು. ಸುಶೀಲಮ್ಮನಿಗೆ ಗಂಡನಿಗಿಂತ ಮೊದಲು ತಾನೇ ಸಾಯಬೇಕೆಂಬ ಇಚ್ಛೆ ಇದೆಯಾದರೂ, ಅವರ ಹೃದಯಕ್ಕೆ ಗಂಡನೊಬ್ಬನನ್ನೇ ಈ ಲೋಕದಲ್ಲಿ ಈ ಬವಣೆಗಳ ಮಧ್ಯೆ ಬಿಟ್ಟು ಹೋಗಲು ಮನಸ್ಸಿಲ್ಲ. ತಾನಿಲ್ಲದೇ ಇದ್ದರೆ ರಾಮಕೃಷ್ಣಯ್ಯನವರಿಗೆ ಸಾಧ್ಯವೇ ಇಲ್ಲ. ಅವರ ಬೇಕು ಬೇಡಗಳನ್ನು ಪೂರೈಸುವುದು ಯಾರು? ಅದೂ ಅವರಿಗೆ ಎಲ್ಲಾ ಕ್ರಮವಾಗಿ ಅಚ್ಚುಕಟ್ಟಾಗಿ ಆಗಬೇಕು! ಅವರ ಬಾಳುವೆ ತುಂಬಾ ಕಷ್ಟವಾದೀತು, ನಾನು ಮೊದಲೇ ಸತ್ತು ಹೋದರೆ!

ಮನದಲ್ಲಿ ಮೂಡಿದ ಹುಚ್ಚು ಕಲ್ಪನೆಗೆ ತಾನೇ ನಕ್ಕು ಸುಶೀಲಮ್ಮ ಕಣ್ಣು ಮುಚ್ಚಿಕೊಳ್ಳುತ್ತಾರೆ. ಅಂದಿನ ಮಟ್ಟಿಗೆ ಅವರು ಎಲ್ಲಾ ತಲೆ ನೋವುಗಳನ್ನೂ ಮರೆತು ಸುಖವಾಗಿ ನಿದ್ರಿಸುತ್ತಾರೆ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೌನ
Next post ಎಷ್ಟಾದರೂ ನಾನು ನಿನ್ನ ಗುಲಾಮ ತಾನೆ ?

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

cheap jordans|wholesale air max|wholesale jordans|wholesale jewelry|wholesale jerseys