ಎಷ್ಟಾದರೂ ನಾನು ನಿನ್ನ ಗುಲಾಮ ತಾನೆ ?
ಕಾಯುವೆನು ನಿನ್ನ ಬಿಡುವಿಗೆ, ನಿನ್ನ ಇಚ್ಛೆಗೆ;
ನನ್ನ ಕಾಲ ಅಮೂಲ್ಯವೇನಲ್ಲ ಪ್ರಭು, ನೀನೆ
ಕಾರ್ಯವೊಂದನು ನನಗೆ ಆದೇಶಿಸುವವರೆಗೆ.
ನಿನಗಾಗಿ ಕಾಯುತ್ತೆ ಗಡಿಯಾರ ನೋಡುತ್ತ
ಕೊನೆಯಿರದ – ಗಂಟೆ – ಲೋಕವನು ಹಳಿಯಲಿ ಹೇಗೆ ?
ನೀನು ಪ್ರಭು, ನನ್ನ ನೀನಾಗಿ ಬೀಳ್ಕೊಟ್ಟಿರುತ
ವಿರಹ ಕಹಿಯೆಂದು ನಾ ದೊರಬಹುದೇ ಹೇಗೆ ?
ಅಥವಾ ಅಸೂಯೆಯುಕ್ಕಿ ಎಲ್ಲಿರುವೆ, ಯಾರಲ್ಲಿ
ಏನ ನಡೆಸಿರುವೆ ಎಂದು ಪ್ರಶ್ನಿಸಬಹುದೆ ?
ಯಾರೊಡನೆಯೋ ಇರಲಿ, ಅವರ ಸುಖವಾಗಿಡಲಿ
ಎಂದು ದುಃಖಿ ಗುಲಾಮನಂತೆ ಕಾಯುವೆ ನಿನಗೆ.
ಪ್ರೇಮ ಅದೆಷ್ಟು ಶುದ್ದ ಪೆದ್ದು ಎಂದರೆ, ನೀನು
ಬಯಸಿ ಏನೇ ಮಾಡು ತಪ್ಪು ತಿಳಿಯೆನು ನಾನು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 57
Being your slave what should i do but tend