ಪೇಟೆಯಿಂದ ಒಬ್ಬ ಶಿಷ್ಯ, ಗುರುವಿನಲ್ಲಿ ವಿದ್ಯೆ ಕಲಿಯಲು ಬಂದ. ಬಂದಕೂಡಲೆ ಕೈಜೋಡಿಸಿ ನಿಂತು ತನ್ನ ವಿಳಾಸ, ಹೆಸರು, ಗೋತ್ರ, ಜಾತಿ, ಮತ, ಕುಲ, ತನ್ನ ತಂದೆತಾಯಿ, ತನ್ನ ಬಗ್ಗೆಯೂ ಪ್ರವರ ಹೇಳತೊಡಗಿದ. ತನ್ನ ತಾತ, ಮುತ್ತಾತಂದಿರ ಹಿರಿಮೆ, ವೈಭವವನ್ನು ಗುಣ ಗಾನ ಮಾಡಿ ಹೆಮ್ಮೆ ವ್ಯಕ್ತ ಪಡಿಸಿದ. ತನ್ನ ಕುಲದ ಇತಿಹಾಸವೆಲ್ಲಾ ಪುಟ ಪುಟಗಳು ತೆರೆದಂತೆ ಪಟ ಪಟ ಹೇಳಿಬಿಟ್ಟ. ತನ್ನ ವಯಸ್ಸು, ತೂಕ, ತನ್ನ ಸಾಧನೆ ಬಗ್ಗೆಯೂ ಬಹಳಷ್ಟು ಕೊಚ್ಚಿಕೊಂಡ. ಅಷ್ಟು ಹೇಳಿದ ಮೇಲೂ ಗುರುಗಳ ಮುಖದಲ್ಲಿ ಮೆಚ್ಚಿಗೆ ಕಾಣಲಿಲ್ಲ. ‘ಭೇಷ್’! ಎನ್ನಲಿಲ್ಲ.
ನೇರವಾಗಿ ಗುರುಗಳನ್ನು ಕೇಳಿದ. “ನನ್ನನ್ನು ಶಿಷ್ಯನಾಗಿ ಸ್ವೀಕರಿಸುವಿರಾ?” ಎಂದ.
“ನಿನಗೆ ಕೆಲವು ದಿವಸಗಳನ್ನು ಕೊಡುತ್ತೇನೆ. ನೀನು ಈಗ ಹೇಳಿದ ಎಲ್ಲವನ್ನು ಮರೆತು, ಇಲ್ಲಿಗೆ ಬಾ, ನೀನು, ನಾನು, ಎಂಬ ಎಲ್ಲದನ್ನು ಬಿಟ್ಟು ಬಾ, ಆಗ ನಿನ್ನನ್ನು ನಾನು ಶಿಷ್ಯನಾಗಿ ಸ್ವೀಕರಿಸುತ್ತೇನೆ” ಎಂದರು.
ಇದು ಪ್ರವರದ ಫಲವೆಂದು ಶಿಷ್ಯನಿಗೆ ಚೆನ್ನಾಗಿ ಅರಿವಾಯಿತು.
*****